"ಇಲ್ಲಿ ಏನು ನಡೆಯುತ್ತಿದೆಯೆಂದು ನನಗೆ ತಿಳಿದಿಲ್ಲ, ಇದು ಬಹುಶಃ ಮೋದಿಯ ಕುರಿತಾದ ಯಾವುದೋ ವಿಷಯಕ್ಕಿರಬಹುದು. ನಾನು ಆಹಾರಕ್ಕಾಗಿ ಇಲ್ಲಿಗೆ ಬರುತ್ತೇನೆ.ಇನ್ನು ಮುಂದೆ ನಾವು ಹಸಿದು ಮಲಗುವ ಕುರಿತು ಚಿಂತಿಸಬೇಕಿಲ್ಲ." ಎಂದು 16 ವರ್ಷದ ರೇಖಾ ಹೇಳುತ್ತಾರೆ. (ಈ ಲೇಖನದಲ್ಲಿ ಉಲ್ಲೇಖಿಸಿರುವ ಹೆಚ್ಚಿನ ಜನರಂತೆ, ಅವರು ತನ್ನ ಮೊದಲ ಹೆಸರನ್ನು ಮಾತ್ರ ಬಳಸಲು ಬಯಸುತ್ತಾರೆ). ಈಕೆತ್ಯಾಜ್ಯ ವಿಂಗಡಿಸುವ ಕೆಲಸ ಮಾಡುತ್ತಿದ್ದು ಕಸದಿಂದ ಮರುಬಳಸಬಹುದಾದ ವಸ್ತುಗಳನ್ನ ವಿಂಗಡಿಸುತ್ತಾರೆ, ಇವರು ಸಿಂಘುವಿನಿಂದ ಎಂಟು ಕಿಲೋಮೀಟರ್ ದೂರದಲ್ಲಿರುವ ಉತ್ತರ ದೆಹಲಿಯ ಅಲಿಪುರದಲ್ಲಿ ವಾಸಿಸುತ್ತಾರೆ.
ಸೆಪ್ಟಂಬರ್‌ನಲ್ಲಿ ಜಾರಿಗೊಳಿಸಲಾದ ಮೂರು ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ನವೆಂಬರ್ 26ರಿಂದ ಕೇಂದ್ರದ ವಿರುದ್ಧ ಪ್ರತಿಭಟಿಸುತ್ತಿರುವ ರೈತರನ್ನು ಹರಿಯಾಣ – ದೆಹಲಿ ಗಡಿಯಲ್ಲಿ ತಡೆಯಲಾಗಿದ್ದು ರೇಖಾ ನಮಗೆ ಅಲ್ಲಿಯೇ ಸಿಕ್ಕಿದರು. ಪ್ರತಿಭಟನೆಯು ಹತ್ತಾರು ಸಾವಿರ ಜನರನ್ನು ಆಕರ್ಷಿಸಿದ್ದು ಅವರೆಲ್ಲರಿಗಾಗಿ ರೈತರು ಮತ್ತು ಗುರುದ್ವಾರಗಳು ಲಂಗರ್ ಎಂದು ಕರೆಯಲಾಗುವ ಸಮುದಾಯ ಅಡುಗೆಮನೆಗಳನ್ನು ಸ್ಥಾಪಿಸಿದ್ದು ಇಲ್ಲಿ ರೈತರು, ಬೆಂಬಲಿಗರು, ಕೇವಲ ಕುತೂಹಲಕ್ಕಾಗಿ ಬಂದವರು, ಹಸಿವಿನಿಂದ ಬಂದವರು ಹೀಗೆ ಎಲ್ಲರಿಗೂ ಈ ಹೃದಯವಂತ ಜನರ ಸಮುದಾಯ ಅಡುಗೆಮನೆಗಳಲ್ಲಿ ಆಹಾರ ನೀಡಲಾಗುತ್ತದೆ.
ಇವರಲ್ಲಿ ಹತ್ತಿರದ ಪಾದಾಚಾರಿ ಮಾರ್ಗದಲ್ಲಿ ವಾಸಿಸುವ ಮತ್ತು ಕೊಳಗೇರಿಗಳಲ್ಲಿ ವಾಸಿಸುವ ಅನೇಕ ಕುಟುಂಬಗಳು ಮುಖ್ಯವಾಗಿ ಇಲ್ಲಿ ದಿನವಿಡೀ ಆಹಾರ ಬಡಿಸಲಾಗುವ ಲಂಗರ್‌ಗಳಲ್ಲಿ ಊಟಕ್ಕಾಗಿ ಬರುತ್ತಾರೆ. ಇಲ್ಲಿ ಬೆಳಿಗ್ಗೆ ಬೆಳಿಗ್ಗೆ 8ರಿಂದ ರಾತ್ರಿ 9ರವರೆಗೆ ಅನ್ನ, ದಾಲ್, ಪಕೋಡಾ, ಲಡ್ಡು, ಸಾಗ್, ಜೋಳದ ರೊಟ್ಟಿ, ನೀರು, ಜ್ಯೂಸ್ ಹೀಗೆ ಇಲ್ಲಿ ಎಲ್ಲವೂ ಲಭ್ಯವಿದೆ. ಸ್ವಯಂಸೇವಕರು ಉಚಿತವಾಗಿ, ಔಷಧಿಗಳು, ಕಂಬಳಿಗಳು, ಸಾಬೂನುಗಳು, ಚಪ್ಪಲಿಗಳು, ಬಟ್ಟೆಗಳು ಮತ್ತು ಇತ್ಯಾದಿ ಉಪಯುಕ್ತ ವಸ್ತುಗಳನ್ನು ಉಚಿತವಾಗಿ ನೀಡುತ್ತಿದ್ದಾರೆ.
ಸ್ವಯಂಸೇವಕರಲ್ಲಿ ಒಬ್ಬರಾಗಿರುವ ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯ ಘುಮನ್ ಕಲಾನ್ ಗ್ರಾಮದ 23 ವರ್ಷದ ಹರ್ಪ್ರೀತ್ ಸಿಂಗ್ ಬಿಎಸ್ಸಿ ಪದವಿ ಓದುತ್ತಿದ್ದಾರೆ. " ಈ ಕಾನೂನುಗಳು ತಪ್ಪು ಎಂದು ನಾವು ನಂಬುತ್ತೇವೆ" ಎಂದು ಅವರು ಹೇಳುತ್ತಾರೆ. "ಈ ಭೂಮಿ ನಮ್ಮ ಪೂರ್ವಜರಿಂದ ನಮಗೆ ಬಂದಿದ್ದು, ಈಗ ಸರಕಾರ ನಮ್ಮನ್ನು ಇಲ್ಲಿಂದ ಹೊರಗೆ ತಳ್ಳಲು ಪ್ರಯತ್ನಿಸುತ್ತಿದೆ. ನಾವು ಈ ಕಾನೂನುಗಳನ್ನು ಬೆಂಬಲಿಸುವುದಿಲ್ಲ. ನಾವು ರೊಟ್ಟಿ ತಿನ್ನಲು ಬಯಸದಿದ್ದರೆ, ಅದನ್ನು ತಿನ್ನುವಂತೆ ಯಾರಾದರೂ ನಮ್ಮನ್ನು ಒತ್ತಾಯಿಸುವುದು ಎಷ್ಟು ಸರಿ? ಈ ಕಾನೂನುಗಳು ಹೋಗಬೇಕಾಗಿದೆ."

"ಲಾಕ್ ಡೌನ್ ಸಮಯದಲ್ಲಿ, ನಮಗೆ ಆಹಾರವೇ ಇದ್ದಿರಲಿಲ್ಲ, ಇನ್ನು ಉತ್ತಮ ಆಹಾರ ತುಂಬಾ ದೂರದ ಮಾತು" ಎಂದು ಸಿಂಘು ಗಡಿಯಿಂದ 8 ಕಿ.ಮೀ ದೂರದಲ್ಲಿರುವ ಉತ್ತರ ದೆಹಲಿಯ ಅಲಿಪುರದ 30 ವರ್ಷದ ಮೀನಾ (ಹಸಿರು ಸೆರಗನ್ನು ತಲೆಗೆ ಹೊದ್ದುಕೊಂಡಿರುವವರು) ಹೇಳುತ್ತಾರೆ. ಅವರು ಜೀವನ ನಿರ್ವಹಣೆಗೆಗಾಗಿ ರಸ್ತೆ ಬದಿಯಲ್ಲಿ ಬಲೂನ್‌ಗಳನ್ನು ಮಾರುತ್ತಾರೆ. "ನಾವು ಇಲ್ಲಿ ತಿನ್ನುತ್ತಿರುವ ಆಹಾರ ನಾವು ಮೊದಲು ತಿನ್ನುತ್ತಿದ್ದ ಆಹಾರಕ್ಕಿಂತ ಉತ್ತಮವಾಗಿದೆ. ರೈತರು ದಿನವಿಡೀ ನಮಗೆ ಉತ್ತಮ ಆಹಾರವನ್ನು ನೀಡುತ್ತಾರೆ. ನಾವು ವಾರದಿಂದ ದಿನಕ್ಕೆ ಎರಡು ಬಾರಿ, ಇಲ್ಲಿಗೆ ಬರುತ್ತಿದ್ದೇವೆ."

ಬಿಎಸ್ಸಿ ಓದುತ್ತಿರುವ ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯ ಘುಮನ್ ಕಲಾನ್ ಗ್ರಾಮದ ರೈತ 23 ವರ್ಷದ ಹರ್ಪ್ರೀತ್ ಸಿಂಗ್ (ನೀಲಿ ಪೇಟ) ಪ್ರತಿಭಟನೆಯಲ್ಲಿ ಸೇರಲು ಕರೆ ನೀಡಿದ ನಂತರ ಮನೆಯಿಂದ ಹೊರಬಂದರು. “ನಾವೆಲ್ಲರೂ ರೈತರು ಮತ್ತು ಈ ಕಾನೂನುಗಳು ತಪ್ಪು ಎಂದು ನಂಬುತ್ತೇವೆ. ನಮ್ಮ ಪೂರ್ವಜರು ಈ ಭೂಮಿಯನ್ನು ಹಲವು ವರ್ಷಗಳಿಂದ ಉಳುಮೆ ಮಾಡಿ ಅದರ ಒಡೆತನ ಹೊಂದಿದ್ದರು ಮತ್ತು ಈಗ ಸರ್ಕಾರ ನಮ್ಮನ್ನು ಅದರಿಂದ ಹೊರಹಾಕಲು ಪ್ರಯತ್ನಿಸುತ್ತಿದೆ. ನಾವು ಈ ಕಾನೂನುಗಳನ್ನು ಬೆಂಬಲಿಸುವುದಿಲ್ಲ. ನಾವು ರೊಟ್ಟಿಯನ್ನು ತಿನ್ನಲು ಬಯಸದಿದ್ದರೆ, ಅದನ್ನು ತಿನ್ನಲು ಬಲವಂತಪಡಿಸುವುದು ಎಷ್ಟು ಸರಿ? ಈ ಕಾನೂನುಗಳನ್ನು ರದ್ದುಪಡಿಸಬೇಕು.” ಎಂದು ಅವರು ಒತ್ತಾಯಿಸುತ್ತಾರೆ.

"ನಾನು ಇಲ್ಲಿ ನನ್ನ ಸಹೋದರರೊಂದಿಗೆ ಸೇವೆ ಸಲ್ಲಿಸುತ್ತೇನೆ" ಎಂದು ಹರ್ಪ್ರೀತ್ ಸಿಂಗ್ ಹೇಳುತ್ತಾರೆ (ಅವರು ಈ ಫೋಟೋದಲ್ಲಿಲ್ಲ). “ಇದು ನಮ್ಮ ಗುರುಗಳ ಲಂಗರ್. ಅದು ಎಂದಿಗೂ ಮುಗಿಯುವುದಿಲ್ಲ. ಇದು ನಮಗೆ ಮತ್ತು ಇತರ ಸಾವಿರಾರು ಜನರಿಗೆ ಆಹಾರವನ್ನು ನೀಡುತ್ತಿದೆ. ಅನೇಕ ಜನರು ನಮಗೆ ಸಹಾಯ ಮಾಡಲು ಬರುತ್ತಾರೆ ಮತ್ತು ಸೇವೆಗಾಗಿ ಕೊಡುಗೆ ನೀಡುತ್ತಾರೆ. ಕಾನೂನುಗಳನ್ನು ತೆಗೆದುಹಾಕುವವರೆಗೂ ನಾವು ಇಲ್ಲಿಯೇ ಇರಲು ಸಿದ್ಧರಿದ್ದೇವೆ. ಇಲ್ಲಿಗೆ ಬರುವ ಪ್ರತಿಯೊಬ್ಬರೂ ಹೊಟ್ಟೆ ತುಂಬಾ ಆಹಾರ ಸೇವಿಸುವುದನ್ನು ಖಚಿತಪಡಿಸಿಕೊಳ್ಳಲು ನಾವು ದಿನವಿಡೀ ಲಂಗರ್‌ಗಳನ್ನು ತೆರೆದಿಟ್ಟಿರುತ್ತೇವೆ.”

50 ವರ್ಷದ ರಾಜವಂತ್ ಕೌರ್ (ತನ್ನ ಜೊತೆಗಿರುವವರೊಂದಿಗೆ ತಲೆಯ ಮೇಲಿನ ಸ್ಕಾರ್ಫ್ ಹಂಚಿಕೊಂಡಿರುವವರು), ವಾಯುವ್ಯ ದೆಹಲಿಯ ರೋಹಿಣಿಯ ನಿವಾಸಿಯಾಗಿರುವ ಗೃಹಿಣಿ. ಸಮುದಾಯ ಅಡುಗೆಮನೆನಯಲ್ಲಿ ಕೆಲಸ ಮಾಡಲು ಅವರ ಮಗನೊಂದಿಗೆ ಪ್ರತಿದಿನ ಇಲ್ಲಿಗೆ ಬರುತ್ತಾರೆ, ಮತ್ತು ಇದು ಅವರನ್ನು ಆಂದೋಲನಕ್ಕೆ ಸೇರಲು ಪ್ರೇರೇಪಿಸಿತು. "ನನ್ನ ಬೆಂಬಲವನ್ನು ತೋರಿಸಲು ನಾನು ಬೇರೆ ಏನನ್ನೂ ಮಾಡಲು ಸಾಧ್ಯವಿಲ್ಲ" ಎಂದು ಅವರು ಹೇಳುತ್ತಾರೆ. “ಹಾಗಾಗಿ ನನ್ನ ಮಗನೊಂದಿಗೆ ಇಲ್ಲಿ ಅಡುಗೆ ಮಾಡಲು ಮತ್ತು ಆಹಾರಕ್ಕಾಗಿ ಇಲ್ಲಿಗೆ ಬರುವ ಸಾವಿರಾರು ಜನರಿಗೆ ಸಹಾಯ ಮಾಡಲು ನಾನು ನಿರ್ಧರಿಸಿದೆ. ನಾನು ಇಲ್ಲಿ ಕೆಲಸ ಮಾಡಲು ಮತ್ತು ನಮ್ಮ ರೈತ ಸಹೋದರರಿಗೆ ಸೇವೆ ಸಲ್ಲಿಸಲು ಸಂತೋಷವೆನ್ನಿಸುತ್ತದೆ."

ಪಂಜಾಬ್‌ನ ಸಂಗ್ರೂರ್ ಜಿಲ್ಲೆಯ ಮಲೆರ್ಕೊಟ್ಲಾ ನಗರದ ಮುಸ್ಲಿಮರ ಗುಂಪೊಂದು ಅವರ ವಿಶೇಷ ಅನ್ನದ ಖಾದ್ಯ ಜರ್ದಾವನ್ನು ಬಡಿಸುತ್ತಿರುವುದು ಮತ್ತು ಪ್ರತಿಭಟನೆಯ ಮೊದಲ ದಿನದಿಂದ ಇವರು ಇಲ್ಲಿದ್ದಾರೆ. ಮುಸ್ಲಿಂ ಮತ್ತು ಸಿಖ್ ಸಹೋದರರು ಶತಮಾನಗಳಿಂದ ಒಬ್ಬರಿಗೊಬ್ಬರು ಪರಸ್ಪರ ಸಹಾಯಕ್ಕೆ ನಿಂತಿದ್ದಾರೆ ಎಂದು ಮಲೆರ್ಕೋಟ್ಲಾದ ಪಂಜಾಬ್ ಮುಸ್ಲಿಂ ಫೆಡರೇಶನ್‌ನ ತಾರಿಖ್ ಮಂಜೂರ್ ಆಲಂ ವಿವರಿಸುತ್ತಾರೆ. ರೈತರ ಹೋರಾಟಕ್ಕೆ ಸಹಾಯವಾಗಿ ಅವರು ತಮ್ಮ ವಿಶಿಷ್ಟ ಆಹಾರವನ್ನು ತಯಾರಿಸಿ ತಂದಿದ್ದಾರೆ. "ಅವರು ಎಲ್ಲಿಯವರೆಗೆ ಹೋರಾಡುತ್ತಿರುತ್ತಾರೋ ಅಲ್ಲಿವಯವರೆಗೆ ನಾವು ಅವರ ಬೆಂಬಲಕ್ಕೆ ನಿಲ್ಲಲಿದ್ದೇವೆ" ಎಂದು ತಾರಿಖ್ ಹೇಳುತ್ತಾರೆ. "ನಾವು ಅವರ ಪಕ್ಕದಲ್ಲಿಯೇ ನಿಂತಿದ್ದೇವೆ"

ಕರಣ್ವೀರ್ ಸಿಂಗ್‌ಗೆ 11 ವರ್ಷ. ಅವನ ತಂದೆ ಸಿಂಘು ಗಡಿಯಲ್ಲಿ ಗಾಡಿಯಲ್ಲಿ ಚೌಮೀನ್ ಮಾರುತ್ತಾರೆ. “ನನ್ನ ಸ್ನೇಹಿತರು ನನ್ನನ್ನು ಇಲ್ಲಿಗೆ ಬರುವಂತೆ ಹೇಳಿದರು. ನಾವು ಗಾಜರ್ ಕಾ ಹಲ್ವಾ ತಿನ್ನಲು ಬಯಸಿದ್ದೆವು,” ಎಂದು ಕರಣ್ವೀರ್ ನಗುತ್ತಾ, ಕೇಸರಿ ಬಣ್ಣದ ಖಾದ್ಯವಾದ ಝರ್ದಾ ತಿನ್ನುತ್ತಾ ಹೇಳುತ್ತಾನೆ.

ಹರಿಯಾಣದ ಸೋನಿಪತ್ ಜಿಲ್ಲೆಯ ಕುಂಡ್ಲಿ ಗ್ರಾಮದ ಮುನ್ನೀ ಅವರು ನಿರ್ಮಾಣ ಸ್ಥಳಗಳಲ್ಲಿ ಕೆಲಸ ಮಾಡುತ್ತಾರೆ. ಆಕೆ ತನ್ನ ಮಕ್ಕಳನ್ನು ಆಹಾರಕ್ಕಾಗಿ ಪ್ರತಿಭಟನಾ ಮೈದಾನಕ್ಕೆ ಕರೆತಂದಿದ್ದಾರೆ. "ಏನನ್ನಾದರೂ ತಿನ್ನಲು ಬಯಸುವ ಸಣ್ಣ ಮಕ್ಕಳಿವೆ ನನಗೆ" ಎಂದು ಅವರು ಹೇಳುತ್ತಾರೆ. "ನಾನು ಅವರನ್ನು ನನ್ನೊಂದಿಗೆ ಇಲ್ಲಿಗೆ ಕರೆತಂದೆ. ಇಲ್ಲಿ ಏನು ನಡೆಯುತ್ತಿದೆಯೆಂದು ನನಗೆ ತಿಳಿದಿಲ್ಲ, ಬಹುಶ ಅವರು ಬೆಳೆಗಳು ಮತ್ತು ಫಸಲಿನ ಬಗ್ಗೆ ಹೋರಾಡುತ್ತಿದ್ದಾರೆ ಎಂದು ಕಾಣುತ್ತದೆ."

ನಿಯಮಿತವಾಗಿ ಊಟ ಸಿಗುವ ಸ್ಥಳವಾಗಿಯಲ್ಲದೆ, ಪ್ರತಿಭಟನಾ ಸ್ಥಳವು ಪೂಜಾರಂತಹ ಅನೇಕ ತ್ಯಾಜ್ಯ ಸಂಗ್ರಾಹಕರಿಗೂ ಜೀವನೋಪಾಯದ ಮೂಲವಾಗಿ ಮಾರ್ಪಟ್ಟಿದೆ, ಅವರು ಅಲ್ಲಿ ವಿವಿಧ ಕಚೇರಿಗಳಿಂದ ಕಸವನ್ನು ಸಂಗ್ರಹಿಸುತ್ತಿದ್ದರು. ಕುಂಡ್ಲಿಯ ಸೆರ್ಸಾ ಬ್ಲಾಕ್‌ನಲ್ಲಿ ವಾಸಿಸುವ ಅವರು ತನ್ನ ಪತಿಯೊಂದಿಗೆ ಬಾಟಲಿಗಳು ಮತ್ತು ರಟ್ಟಿನ ಪೆಟ್ಟಿಗೆಗಳನ್ನು ಸಂಗ್ರಹಿಸಲು ಸಿಂಘುವಿನಲ್ಲಿನ ಪ್ರತಿಭಟನಾ ಮೈದಾನಕ್ಕೆ ಬರುತ್ತಾರೆ.

ಹರಿಯಾಣದ ಕರ್ನಾಲ್‌ನಲ್ಲಿರುವ ಆಶ್ರಮದ ಸ್ವಯಂಸೇವಕರು ರೈತರಿಗೆ ರಾತ್ರಿಯಲ್ಲಿ ಬೆಚ್ಚಗಿರಿಸಲು ಬಿಸಿಯಾದ ಫ್ಲೇವರ್ಡ್ ಹಾಲನ್ನು ತಯಾರಿಸುತ್ತಾರೆ. ಹಾಲಿನಲ್ಲಿ ಡ್ರೈಫ್ರೂಟ್ಸ್, ತುಪ್ಪ, ಕರ್ಜೂರ, ಕೇಸರಿ ಮತ್ತು ಜೇನುತುಪ್ಪ ಹಾಕಲಾಗಿರುತ್ತದೆ. ಪ್ರತಿದಿನ ಇದಕ್ಕಾಗಿ ಬೆಳಿಗ್ಗೆ ಕರ್ನಾಲ್‌ನ ಡೈರಿಗಳಿಂದ ತಾಜಾ ಹಾಲು ಸಂಗ್ರಹಿಸಲಾಗುತ್ತದೆ.

ಪಂಜಾಬ್‌ನ ಕಪುರ್ಥಾಲಾ ಜಿಲ್ಲೆಯ ಕಲ್ಯಾಣ ಸಮಾಜದ ಸ್ವಯಂಸೇವಕರು, ಸಂಜೆ ತಿಂಡಿಗಾಗಿ ಬಿಸಿ ಪಕೋಡಗಳನ್ನು ತಯಾರಿಸುತ್ತಿರುವುದು. ಇದು ಸಾಮಾನ್ಯವಾಗಿ ಪ್ರತಿಭಟನಾ ಮೈದಾನದಲ್ಲಿ ಹೆಚ್ಚು ಜನದಟ್ಟಣೆಯ ಸ್ಟಾಲ್.

ಅಕ್ಷಯ್‌ಗೆ 8 ವರ್ಷ ಮತ್ತು ಸಾಹಿಲ್‌ಗೆ 4 ವರ್ಷ. “ನಮ್ಮ ಪೋಷಕರು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಾರೆ. ನನ್ನ ತಾಯಿ ಮುಂಜಾನೆ ಹೊರಡುತ್ತಾರೆ, ಆದ್ದರಿಂದ ಅವರು ನಮಗಾಗಿ ಉಪಾಹಾರ ತಯಾರಿಸಲು ಸಾಧ್ಯವಿಲ್ಲ. ಅದಕ್ಕಾಗಿಯೇ ನಾವು ಪ್ರತಿದಿನ ತಿನ್ನಲು ಇಲ್ಲಿಗೆ ಬರುತ್ತೇವೆ" ಎಂದು ಅವನು ಹೇಳುತ್ತಾನೆ. "ನನಗೆ ಸ್ಪ್ರೈಟ್ ಎಂದರೆ ಇಷ್ಟ," ಅಕ್ಷಯ್ ಹೇಳುತ್ತಾನೆ, ಮತ್ತು ಅವನು [ಸಾಹಿಲ್] ಬಿಸ್ಕತ್ತುಗಳನ್ನು ಇಷ್ಟಪಡುತ್ತಾನೆ."

9 ಮತ್ತು 7 ವರ್ಷ ವಯಸ್ಸಿನ (ನೆಲದ ಮೇಲೆ ಕುಳಿತಿರುವವರು) ಸ್ನೇಹಿತರಾದ ಆಂಚಲ್ ಮತ್ತು ಸಾಕ್ಷಿ, “ನಮ್ಮ ನೆರೆಹೊರೆಯವರು ಗಡಿಗೆ ಹೋಗಿ, ಅಲ್ಲಿ ಸಾಕಷ್ಟು ಆಹಾರವಿದೆ ಎಂದು ಹೇಳಿದರು.”

ಪ್ರತಿಭಟನಾ ಸ್ಥಳವು ವೈದ್ಯಕೀಯ ಶಿಬಿರ ಮತ್ತು ಉಚಿತ ಔಷಧಿಗಳನ್ನು ರೈತರಿಗೆ ಮಾತ್ರವಲ್ಲದೆ ಸ್ಟಾಲ್‌ಗೆ ಭೇಟಿ ನೀಡುವ ಎಲ್ಲರಿಗೂ ಈ ಸೌಲಭ್ಯಗಳನ್ನು ಒದಗಿಸುತ್ತದೆ. ಪಕ್ಕದ ಪ್ರದೇಶಗಳಲ್ಲಿ ವಾಸಿಸುವ ಅನೇಕ ಜನರು ಈ ಶಿಬಿರಗಳಿಗೆ ಭೇಟಿ ನೀಡುತ್ತಿದ್ದಾರೆ.

ಉತ್ತರ ಪ್ರದೇಶದ ಹರ್ಡೊಯ್ ಜಿಲ್ಲೆಯ 37 ವರ್ಷದ ಕಾಂಚನ್ ಅವರು ಕಾರ್ಖಾನೆಯಲ್ಲಿ 6,500 ರೂಪಾಯಿಗಳನ್ನು ಸಂಪಾದಿಸುತ್ತಾರೆ. “ನನಗೆ ಕೆಲವು ದಿನಗಳಿಂದ ಜ್ವರ ಬಂದಿದೆ. ಚಿಕಿತ್ಸೆಗಾಗಿ ನಾನು ಈಗಾಗಲೇ ತುಂಬಾ ಹಣವನ್ನು ಖರ್ಚು ಮಾಡಿದ್ದೇನೆ. ನನ್ನ ಕಾರ್ಖಾನೆಯಲ್ಲಿ ಒಬ್ಬರು ಅವರು ಸಿಂಘು ಗಡಿಯಲ್ಲಿ ಉಚಿತ ಔಷಧಿಗಳನ್ನು ನೀಡುತ್ತಿದ್ದಾರೆಂದು ಹೇಳಿದ್ದರು. ನಾನು ಇಲ್ಲಿಗೆ ಬಂದು ನನಗೆ ಬೇಕಾದ ಔಷಧಿಗಳನ್ನು ಪಡೆದುಕೊಂಡೆ. ಅಗತ್ಯವಿರುವ ಎಲ್ಲರಿಗೂ ಸಹಾಯ ಮಾಡುತ್ತಿರುವ ನಮ್ಮ ಸಹೋದರರಿಗೆ ನಾನು ನಿಜವಾಗಿಯೂ ಧನ್ಯವಾದ ಹೇಳಲು ಬಯಸುತ್ತೇನೆ. ಅವರು ನಮಗೆ ಆಹಾರ ಮತ್ತು ಔಷಧಿಗಳನ್ನು ನೀಡಿದ್ದಾರೆ. ಅದಕ್ಕಾಗಿ ನಾನು ನೂರಾರು ರೂಪಾಯಿಗಳನ್ನು ಖರ್ಚು ಮಾಡಬೇಕಿತ್ತು"

ಟೂತ್‌ಪೇಸ್ಟ್, ಸೋಪ್ ಮತ್ತು ಬಿಸ್ಕತ್ತುಗಳನ್ನು ವಿತರಿಸುವ ಸುಖ್ಪಾಲ್ ಸಿಂಗ್, 20, ತಾರ್ನ್ ತರಣ್, ಪಂಜಾಬ್. ದೆಹಲಿ-ಹರಿಯಾಣ ಗಡಿಯಲ್ಲಿ ರಸ್ತೆ ತಡೆ ಮುಂದುವರೆದಂತೆ, ಟ್ರಾಕ್ಟರುಗಳ ಒಂದು ಉದ್ದದ ಸಾಲು ಪ್ರತಿಭಟನಾಕಾರ ರೈತರಿಗೆ ಮಾತ್ರವಲ್ಲದೆ ಸುತ್ತಮುತ್ತಲಲ್ಲಿ ವಾಸಿಸುವ ಬಡವರಿಗೂ ಸೇವೆ ಸಲ್ಲಿಸುತ್ತಿದೆ, ಸ್ಯಾನಿಟರಿ ಪ್ಯಾಡ್‌ನಿಂದ ಹಿಡಿದು ಕಂಬಳಿಗಳ ತನಕ, ಔಷಧಿಗಳು, ಆಹಾರ, ಹಲ್ಲುಜ್ಜುವ ಬ್ರಷ್ ಮತ್ತು ಸೋಪ್ ಹೀಗೆ ಎಲ್ಲವನ್ನೂ ಇಲ್ಲಿ ವಿತರಿಸಲಾಗುತ್ತಿದೆ.
ಅನುವಾದ: ಶಂಕರ ಎನ್. ಕೆಂಚನೂರು