“ಪಶ್ಮಿನಾ ಶಾಲುಗಳಿಗೆ ರೇಶಿಮೆಯಂತಹ ನಯವನ್ನು ತರುವವರು ನಾವು.”
ಶ್ರೀನಗರದಲ್ಲಿರುವ ಅಬ್ದುಲ್ ಮಜೀದ್ ಲೋನ್ ಅವರ ಮನೆಯಲ್ಲಿ ಎಲ್ಲೆಡೆ ದಾರದ ಗಂಟುಗಳು ಹರಡಿ ಬಿದ್ದಿದ್ದವು. ಮಜೀದ್ ನೆಲದ ಮೇಲೆ ಕುಳಿತು ಕೈಯಲ್ಲಿ ಒಂದು ವೌಚ್ (ಒಂದು ಬಗೆಯ ಅಗಲವಾದ ಹರಿತವಿರುವ ಕಬ್ಬಿಣದ ಉಪಕರಣ) ಹಿಡಿದು ಅದರ ಮೂಲಕ ಹೊಸದಾಗಿ ನೇಯ್ದ ಪಶ್ಮಿನಾ ಶಾಲಿನಲ್ಲಿದ್ದ ಅನಾವಶ್ಯಕ ದಾರದ ಎಳೆಗಳನ್ನು ಎಚ್ಚರಿಕೆಯಿಂದ ಕತ್ತರಿಸುತ್ತಿದ್ದರು. "ಇಂತಹದ್ದೊಂದು ಕರಕುಶಲತೆ ಅಸ್ತಿತ್ವದಲ್ಲಿದೆ ಎಂದು ಕೆಲವೇ ಜನರಿಗೆ ತಿಳಿದಿದೆ" ಎಂದು ಅವರು ಹೇಳುತ್ತಾರೆ.
ಈ 42 ವರ್ಷದ ಕುಶಲಕರ್ಮಿ ಶ್ರೀನಗರ ಜಿಲ್ಲೆಯ ನವಕಾ ದಾಲ್ ವಾರ್ಡ್ ನಿವಾಸಿ. ಹೆಚ್ಚಿನ ಮೌಲ್ಯದ ಪಶ್ಮಿನಾ ಶಾಲುಗಳಿಂದ ಪರ್ಜ್ (ಜಾಳು ದಾರ) ವನ್ನು ಕೈಯಿಂದ ಕೀಳಲು ವೂಚ್ ಬಳಸುತ್ತಾರೆ. ಈ ಕೆಲಸವನ್ನು ಪುರಸ್ಗಾರಿ ಎಂದು ಕರೆಯಲಾಗುತ್ತದೆ ಮತ್ತು ಶ್ರೀನಗರವೊಂದರಲ್ಲೇ 200ಕ್ಕೂ ಹೆಚ್ಚು ಕುಶಲಕರ್ಮಿಗಳು ಈ ಕೆಲಸ ಮಾಡುತ್ತಿದ್ದಾರೆ. ಅಬ್ದುಲ್ ಎರಡು ದಶಕಗಳಿಂದ ಪುರಸ್ಗಾರ್ ಕುಶಲಕರ್ಮಿಯಾಗಿದ್ದು, ಅವರಿಗೆ ಸರಿಸುಮಾರು ರೂ. ಎಂಟು ಗಂಟೆಗಳ ಕೆಲಸಕ್ಕೆ 200 ರೂ. ಸಂಬಳವಾಗಿ ದೊರೆಯುತ್ತದೆ.
ಎಲ್ಲಾ ಬಗೆಯ ಪಶ್ಮಿನಾ ಶಾಲುಗಳಿಗೆ - ನೇಯ್ದ, ಬಣ್ಣ-ಬಣ್ಣದ ಮತ್ತು ಕಸೂತಿ ಹೊಂದಿರುವ - ಪುರಸ್ಗಾರಿಯನ್ನು ಕೈಯಾರೆ ಮಾಡಲಾಗುತ್ತದೆ. ಇದರ ಬಟ್ಟೆಯ ಸೂಕ್ಷ್ಮ ಸ್ವಭಾವವು ಕುಶಲಕರ್ಮಿಗಳ ಕೌಶಲದ ಬದಲು ಯಂತ್ರವನ್ನು ಬಳಸಲು ಅನುಮತಿಸುವುದಿಲ್ಲ.
ಪುರಸ್ಗಾರರ ಪಾಲಿಗೆ ವೌಚ್ ಬಹಳ ಅಗತ್ಯ ಉಪಕರಣ. . "ನಮ್ಮ ಸಂಪೂರ್ಣ ಗಳಿಕೆಯು ಒಂದು ವೌಚ್ ಮತ್ತು ಅದರ ಗುಣಮಟ್ಟವನ್ನು ಅವಲಂಬಿಸಿರುತ್ತದೆ" ಎಂದು ಅಬ್ದುಲ್ ಹೇಳುತ್ತಾರೆ. ಮರದ ಕೈಮಗ್ಗದಿಂದ ನೇಯಲ್ಪಟ್ಟ ಪಶ್ಮಿನಾ ಶಾಲೊಂದನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಅವರು ಹೇಳುತ್ತಾರೆ, "ಪಶ್ಮಿನಾ ಶಾಲನ್ನು ವೌಚ್ ಇಲ್ಲದೆ ಸಂಸ್ಕರಿಸುವುದು ನಮಗೆ ಕಷ್ಟವಾಗುತ್ತದೆ."

ಅಬ್ದುಲ್ ಮಜೀದ್ ಲೋನ್ ಪಶ್ಮಿನಾ ಶಾಲನ್ನು ಮುಂಭಾಗದಲ್ಲಿ ಮರದ ಮಗ್ಗದ ಮೇಲೆ ಬಿಗಿಯಾಗಿ ಬಿಗಿದಿದ್ದಾರೆ

ಕಬ್ಬಿಣದ ವೌಚ್ ಬಳಸಿ ಅಬ್ದುಲ್ ಶಾಲಿನಲ್ಲಿನ ಅನಗತ್ಯ ದಾರಗಳನ್ನು ತೆಗೆದುಹಾಕುತ್ತಿದ್ದಾರೆ
ಇತ್ತೀಚೆಗೆ, ಶ್ರೀನಗರದ ಪುರಸ್ಗಾರ್ ಕೆಲಸಗಾರರು ವೌಚ್‌ಗಳನ್ನು ತಯಾರಿಸುವ ಅಥವಾ ಅವುಗಳನ್ನು ಸಮರ್ಪಕವಾಗಿ ಹರಿತಗೊಳಿಸುವ ಕಮ್ಮಾರರನ್ನು ಹುಡುಕಲು ಹೆಣಗಾಡುತ್ತಿದ್ದಾರೆ. "ವೌಚ್‌ಗಳ ಕೊರತೆಯಿಂದಾಗಿ ಪುರಸ್ಗಾರಿ ಕರಕುಶಲತೆ ಕಣ್ಮರೆಯಾಗುವ ಸಮಯ ಬರಲಿದೆ" ಎಂದು ಅಬ್ದುಲ್ ಕಳವಳದಿಂದ ಹೇಳುತ್ತಾರೆ. "ನಾನು ನನ್ನ ಸ್ವಂತದ ಕೊನೆಯ ಉಪಕರಣವನ್ನು ಬಳಸುತ್ತಿದ್ದೇನೆ. ಇದು ಹರಿತ ಕಳೆದುಕೊಂಡರೆ ಕೆಲಸವಿಲ್ಲದೆ ಇರಬೇಕಾಗುತ್ತದೆ."
ಅಬ್ದುಲ್ ಅವರ ಮನೆಯಿಂದ 20 ನಿಮಿಷಗಳ ಕಾಲ್ನಡಿಗೆಯಲ್ಲಿ ಕಮ್ಮಾರ ಅಲಿ ಮೊಹಮ್ಮದ್ ಅಹಂಗರ್ ಅವರ ಅಂಗಡಿ ಇದೆ. ಶ್ರೀನಗರ ಜಿಲ್ಲೆಯ ಅಲಿ ಕಡಲ್ ಪ್ರದೇಶದಲ್ಲಿ ಸುಮಾರು ಒಂದು ಡಜನ್ ಕಮ್ಮಾರರ ಸಾಲೆಗಳಿವೆ ಮತ್ತು ಅವುಗಳಲ್ಲಿ ಅಲಿ ಅವರದು ಅತ್ಯಂತ ಹಳೆಯದು. ಅಲಿ ಸೇರಿದಂತೆ ಯಾವುದೇ ಕಮ್ಮಾರ ವೌಚ್ ತಯಾರಿಸುವ ಉತ್ಸಾಹ ಹೊಂದಿಲ್ಲ. ಇದಕ್ಕೆ ಕಾರಣ ಅವರು ವ್ಯಯಿಸುವ ಸಮಯ ಮತ್ತು ಶ್ರಮಕ್ಕೆ ಹೋಲಿಸಿದಲ್ಲಿ ಸಿಗುವ ಪ್ರತಿಫಲವು ಬಹಳ ಕಡಿಮೆ ಎಂದು ಅವರು ಹೇಳುತ್ತಾರೆ.
"ವೌಚ್ ತಯಾರಿಕೆ ಬಹಳ ಕೌಶಲ ಬೇಡುವ ಕೆಲಸ. ವೌಚ್ ಎಷ್ಟು ಚೂಪಾಗಿರಬೇಕು ಎಂದರೆ ಪಶ್ಮಿನಾ ಶಾಲಿನಲ್ಲಿರು ಒಂದು ಸಣ್ಣ ಅನಗತ್ಯ ಎಳೆಯನ್ನೂ ಕಿತ್ತು ತರುವಂತಿರಬೇಕು" ಎಂದು ಗರಗಸಕ್ಕೆ ಸುತ್ತಿಗೆ ಬಳಸಿ ಆಕಾರ ನೀಡುತ್ತಿದ್ದ 50 ವರ್ಷದ ಅಲಿ ಹೇಳಿದರು. "ಒಂದು ವೇಳೆ ನಾನು ವೌಚ್ ತಯಾರಿಸಲು ಹೊರಟರು ಅದು ನನ್ನಿಂದ ಸಾಧ್ಯವಿಲ್ಲವೆಂದು ಖಾತರಿಯಾಗಿ ಹೇಳಬಲ್ಲೆ. ನೂರ್ ಅವರು ವೌಚ್ ತಯಾರಿಸುವುದರಲ್ಲಿ ಪರಿಣತರಾಗಿದ್ದರು."
ವೌಚ್ ತಯಾರಿಕೆಯಲ್ಲಿ ಶ್ರೀನಗರದಲ್ಲಿಖ್ಯಾತರಾಗಿದ್ದ ನೂರ್ ಮೊಹಮ್ಮದ್ ಅವರು 15 ವರ್ಷಗಳ ಹಿಂದೆ ನಿಧನರಾಗಿದ್ದಾರೆ. ಶ್ರೀನಗರದ ಡೌನ್‌ಟೌನ್ ಸುತ್ತಮುತ್ತ ಬಳಕೆಯಲ್ಲಿರು ವೌಚ್‌ಗಳು ಅವರಿಂದಲೇ ತಯಾರಿಸಲ್ಪಟ್ಟಿವೆ. ಪರಸ್ಗಾರರ ಚಿಂತೆಯೆಂದರೆ "ನೂರ್ ಈ ವಿದ್ಯೆಯನ್ನು ತನ್ನ ಮಗನಿಗಷ್ಟೇ ಕಲಿಸಿದ್ದರು. ಮತ್ತು ಆ ಮಗನಿಗೆ ಈಗ ಇದರ ತಯಾರಿಕೆಯಲ್ಲಿ ಆಸಕ್ತಿ ಉಳಿದಿಲ್ಲ. ಅವರು ಇದಕ್ಕಿಂತ ಉತ್ತಮ ವೇತನ ನೀಡುವ ಖಾಸಗಿ ಬ್ಯಾಂಕ್‌ನಲ್ಲಿ ಉದ್ಯೋಗ ಹೊಂದಿದ್ದಾರೆ" ಎನ್ನುತ್ತಾರೆ ಮಿರ್ಜಾನ್‌ಪುರದ ವರ್ಕ್‌ಶಾಪ್‌ನಲ್ಲಿ ಕೆಲಸ ಮಾಡುವ ಯುವ ಪುರಸ್ಗಾರ್ ಫಿರೋಜ್ ಅಹ್ಮದ್ ಹೇಳುತ್ತಾರೆ.
ವರ್ಕ್‌ಶಾಪಿನಲ್ಲಿ ಇತರ ಹನ್ನೆರಡು ಪುರಸ್ಗಾರ್ ಕುಶಲಕರ್ಮಿಗಳೊಡನೆ ಕೆಲಸ ಮಾಡುತ್ತಿರುವ 30 ವರ್ಷದ ಫಿರೋಜ್ ಕಳೆದ ಎರಡು ವರ್ಷಗಳಿಂದ ಸರಿಯಾಗಿ ಹರಿತಗೊಳಿಸದ ವೌಚ್ ಬಳಸುತ್ತಿದ್ದಾರೆ. "ಪುರಸ್ಗಾರಿ ಕೆಲಸದಲ್ಲಿ ಯಾವುದೇ ಬೆಳವಣಿಗೆಯಿಲ್ಲ. ಹತ್ತು ವರ್ಷಗಳ ಹಿಂದೆ ಎಷ್ಟು ಸಂಪಾದಿಸುತ್ತಿದ್ದೆನೋ ಇಂದೂ ಅಷ್ಟೇ ಸಂಪಾದಿಸುತ್ತಿದ್ದೇನೆ" ಎಂದು ಬೇಸರದಿಂದ ಹೇಳುತ್ತಾರೆ.

'ನಾನು ವೌಚ್ ಮಾಡಲು ಪ್ರಯತ್ನಿಸಿದರೂ ಯಶಸ್ವಿಯಾಗುವುದಿಲ್ಲ ಎಂದು ನನಗೆ ಖಾತ್ರಿಯಿದೆ' ಎಂದು ಶ್ರೀನಗರ ಅಲಿ ಕಡಲ್ ಪ್ರದೇಶದ ಕಮ್ಮಾರ ಅಲಿ ಮೊಹಮ್ಮದ್ ಅಹಂಗೇರ್ ಹೇಳುತ್ತಾರೆ


ಮಿರ್ಜಾನ್‌ಪುರದ ವರ್ಕ್ ಶಾಪ್ ಒಂದದರಲ್ಲಿ ಪುರಸ್ಗಾರ್ ಆಗಿರುವ ಫಿರೋಜ್ ಅಹ್ಮದ್, ಕಳೆದ ಎರಡು ವರ್ಷಗಳಲ್ಲಿ ಸರಿಯಾಗಿ ಹರಿತಗೊಳಿಸದ ವೌಚ್ ಬಳಸಿ ಕೆಲಸ ಮಾಡುತ್ತಿದ್ದಾರೆ
"40 ವರ್ಷಗಳಿಂದ ಪುರಸ್ಗಾರ್ ಆಗಿ ಕೆಲಸ ಮಾಡುತ್ತಿದ್ದೇನೆ. ಇದುವರೆಗೆ ಈ ಕೆಲಸದಲ್ಲಿ ಕಷ್ಟದ ಸಮಯವನ್ನು ನೋಡಿಲ್ಲ. ಎಂದು ನಜೀರ್ ಅಹ್ಮದ್ ಭಟ್ ಹೇಳುತ್ತಾರೆ. “ಇಪ್ಪತ್ತು ವರ್ಷಗಳ ಹಿಂದೆ, ನನಗೆ ಒಂದು ಶಾಲಿಗೆ 30 ರೂಪಾಯಿ ನೀಡಲಾಗುತ್ತಿತ್ತು. ಈಗ ಅದೇ ಕೆಲಸಕ್ಕೆ 50 ರೂಪಾಯಿ ಗಳಿಸುತ್ತೇನೆ." ಎನ್ನುವ ನಜೀರ್ ಅವರ ಕುಶಲತೆಯು ವರ್ಷಕ್ಕೆ ಕೇವಲ ಒಂದು ರೂಪಾಯಿ ಹೆಚ್ಚಳವನ್ನು ಕಂಡಿದೆ.
ಕಳೆದ ದಶಕದಲ್ಲಿ ಕಾಶ್ಮೀರಿ ಶಾಲುಗಳ ರಫ್ತು ಅಂಕಿಅಂಶಗಳಲ್ಲಿನ ತೀವ್ರ ಕುಸಿತದಲ್ಲಿ ಪುರಸ್ಗಾರಿ ಕಾರ್ಮಿಕರ ಸಮಸ್ಯೆಗಳು ಪ್ರತಿಫಲಿಸುತ್ತವೆ. ಶ್ರೀನಗರದ ಕರಕುಶಲ ಮತ್ತು ಕೈಮಗ್ಗ ಇಲಾಖೆಯ ಅಧಿಕಾರಿಗಳು ಪರಿಯೊಂದಿಗೆ ಹಂಚಿಕೊಂಡ ವರದಿಯ ಪ್ರಕಾರ 2012-13ರಲ್ಲಿ 620 ಕೋಟಿಗಳಷ್ಟಿದ್ದ ವ್ಯವಹಾರವು 2021-22ರಲ್ಲಿ 165.98 ಕೋಟಿಗಳಿಗೆ ಇಳಿದಿದೆ.
ಎರಡು ತಿಂಗಳ ನಿಯಮಿತ ಬಳಕೆಯ ನಂತರ ವೌಚನ್ನು ಹರಿತಗೊಳಿಸಬೇಕಿರುತ್ತದೆ. ಈ ನಿಧಾನಗತಿಯ ವ್ಯವಹಾರದ ಸಮಯದಲ್ಲಿ, ಕೆಲವು ಕಮ್ಮಾರರು ಈ ಕೌಶಲ್ಯವನ್ನು ಕಲಿಯಲು ಸಿದ್ಧರಿದ್ದಾರೆ.
"ಪುರಸ್ಗಾರ್ ಕಾರ್ಮಿಕರಿಗೆ ವೌಚ್ ತಯಾರಿಸುವುದು ಹೇಗೆನ್ನುವುದಾಗಲೀ, ಅದನ್ನು ಹರಿತಗೊಳಿಸುವುದು ಹೇಗೆನ್ನುವುದಾಗಲೀ ತಿಳಿದಿಲ್ಲ" ಎಂದು ನಜೀರ್ ಹೇಳುತ್ತಾರೆ, ಅವರ ಕುಟುಂಬವು ಈಗ ಮೂರು ತಲೆಮಾರುಗಳಿಂದ ಈ ಕೆಲಸದಲ್ಲಿ ತೊಡಗಿಕೊಂಡಿದೆ. ಕೆಲವರು ಫೈಲ್ ತರಹದ ಉಪಕರಣವನ್ನು ಬಳಸಿ ಚಪ್ಪಟೆ ಮೈ ಮತ್ತು ಹರಿತವಾದ ಅಂಚು ಹೊಂದಿರುವ ವೌಚನ್ನು ಹರಿತಗೊಳಿಸಲು ಪ್ರಯತ್ನಿಸುತ್ತಾರೆ. ಆದರೆ ಫಲಿತಾಂಶವು ತೃಪ್ತಿಕರವಾಗಿರುವುದಿಲ್ಲ ಎಂದು ನಜೀರ್ ಹೇಳುತ್ತಾರೆ.
“ಏನೋ ಒಂದು ಮಾಡಿ ಕೆಲಸ ನಡೆಸುತ್ತಿದ್ದೇವೆ” ಎನ್ನುತ್ತಾರವರು.

'ನಮಗೆ ಸಂಬಳ ಕಡಿಮೆಯಿದೆ, ಉಪಕರಣಗಳ ಕೊರತೆಯಿದೆ ಜೊತೆಗೆ ನಮ್ಮ ಕೆಲಸಕ್ಕೆ ಯಾವುದೇ ಮನ್ನಣೆ ಸಿಗುತ್ತಿಲ್ಲ' ಎಂದು ನಜೀರ್ ಅಹ್ಮದ್ ಭಟ್ ಅವರು ಸರಳವಾದ ಶಾಲಿನಿಂದ ಪರ್ಜ್ - ಹೊರಬಂದ ದಾರಗಳನ್ನು ತೆಗೆಯುವಾಗ ಹೇಳುತ್ತಾರೆ


ಎಡ: ನಜೀರ್ ಫೈಲ್ ಬಳಸಿ ವೌಚನ್ನು ಹರಿತಗೊಳಿಸುತ್ತಾರೆ, ಆದರೆ ಅದು ತೃಪ್ತಿ ನೀಡುವುದಿಲ್ಲ. ಬಲ: ಸೂಕ್ಷ್ಮವಾದ ಪಶ್ಮಿನಾ ಶಾಲುಗಳಿಂದ ನ್ಯೂನತೆಗಳನ್ನು ತೆಗೆದುಹಾಕುವಷ್ಟು ವೌಚ್‌ನ ಅಂಚುಗಳು ಹರಿತವಾಗಿದೆಯೇ ಎಂದು ಪರಿಶೀಲಿಸುತ್ತಿದ್ದಾರೆ
"ನೋಡಿ ಈ ವೌಚ್ ಕೂಡಾ ಹರಿತವಾಗಿಲ್ಲ" ಎನ್ನುತ್ತಾ ವರ್ಕ್‌ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ಆಶಿಕ್ ಅಹ್ಮದ್ ತನ್ನ ಕೈಯಲ್ಲಿದ್ದ ಉಪಕರಣದ ಹಲ್ಲನ್ನು ತೋರಿಸಿದರು. "ಇದರಲ್ಲಿ ದಿನಕ್ಕೆ 2-3 ಶಾಲುಗಳನ್ನು ಮುಗಿಸುವುದು ಕೂಡಾ ಕಷ್ಟ. ಇದರಿಂದ ದಿನಕ್ಕೆ 200 ರೂ. ಗಳಿಸಿದರೆ ಹೆಚ್ಚು. ವೌಚ್ ಮೊಂಡಾಗಿದ್ದರೆ ಕೆಲಸ ನಿಧಾನವಾಗುತ್ತದೆ. ಅದೇ ಉಪಕರಣ ಹರಿತವಿದ್ದರೆ ಅವರ ಕೆಲಸದ ವೇಗ ಮತ್ತು ನಿಖರತೆ ಹೆಚ್ಚುತ್ತದೆ ಮತ್ತು ಈ ಮೂಲಕ ಅವರು ದಿನವೊಂದಕ್ಕೆ 500 ರೂಪಾಯಿಗಳ ತನಕ ಗಳಿಸಬಹುದು.
ಸುಮಾರು 40*80 ಇಂಚು ಅಳತೆಯ ಸಾದಾ ಪಶ್ಮಿನಾ ಶಾಲುಗಳಿಗೆ, ಪುರಸ್ಗಾರ್ ಕಾರ್ಮಿಕರು ಪ್ರತಿ ತುಂಡಿಗೆ 50 ರೂ.ಗಳವರೆಗೆ ಗಳಿಸಬಹುದು. ಸ್ಥಳೀಯವಾಗಿ 'ಕಾನಿ' ಎಂದು ಕರೆಯಲ್ಪಡುವ ಕಸೂತಿ ಮಾಡಿದ ಶಾಲು ಅವರಿಗೆ ಸುಮಾರು 200 ರೂ.ಗಳ ಆದಾಯವನ್ನು ನೀಡುತ್ತದೆ.
ಈ ಕೆಲವು ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನದಲ್ಲಿ, ರಾಜ್ಯ ಸರ್ಕಾರವು ತನ್ನ ಕರಕುಶಲ ಮತ್ತು ಕೈಮಗ್ಗ ಇಲಾಖೆಯ ಅಡಿಯಲ್ಲಿ ಪುರಸ್ಗಾರ್ ಕಾರ್ಮಿಕರನ್ನು ನೋಂದಾಯಿಸುವ ಉಪಕ್ರಮವನ್ನು ಪ್ರಾರಂಭಿಸಿತು. ಈ ವರ್ಷದ ಮಾರ್ಚ್-ಏಪ್ರಿಲ್ ತಿಂಗಳಿನಲ್ಲಿ ನಿಗದಿಯಾಗಿರುವ ಈ ನೋಂದಣಿಯು ಪುರಸ್ಗಾರ್ ಕಾರ್ಮಿಕರಿಗೆ ಸುಲಭವಾಗಿ ಆರ್ಥಿಕ ನೆರವು ಪಡೆಯಲು ಸಹಾಯ ಮಾಡುತ್ತದೆ ಎಂದು ಇಲಾಖೆಯ ನಿರ್ದೇಶಕ ಮಹಮೂದ್ ಅಹ್ಮದ್ ಶಾ ಹೇಳುತ್ತಾರೆ.
ನೋಂದಣಿಯು ಉತ್ತಮ ದಿನಗಳ ಭರವಸೆ ನೀಡಿದ್ದರೂ, ಪುರ ಸ್ಗಾರ್ ಕಾರ್ಮಿಕರು ಪ್ರಸ್ತುತ ಬದುಕು ನಡೆಸಲು ಹೆಣಗಾಡುತ್ತಿದ್ದಾರೆ.


ಎಡ: ಪುರಸ್ಗಾರ್ ಕಾರ್ಮಿಕರೊಬ್ಬರು ಹಾಗಲಕಾಯಿಯ ಒಣಗಿದ ಬುರುಡೆ ಬಳಸಿ ಪಶ್ಮಿನಾ ಶಾಲಿನಲ್ಲಿರುವ ಹೊರ ಬಂದ ನೂಲುಗಳನ್ನು ತೆಗೆಯುತ್ತಿದ್ದಾರೆ. ಬಲ: ಪುರಸ್ಗಾರ್ ಕಾರ್ಮಿಕ ಆಶೀಕ್ ಬೆಳಗ್ಗೆಯಿಂದ ತಾನು ತೆಗೆದ ಪರ್ಜ್ ಅನ್ನು ತೋರಿಸುತ್ತಿದ್ದಾರೆ


ಎಡ: ಖುರ್ಷಿದ್ ಅಹ್ಮದ್ ಭಟ್ ಕಸನಿ ಶಾಲು ಹೊದ್ದು ಕೆಲಸ ಮಾಡುತ್ತಾರೆ. ಬಲ: ಒಂದು ಶಾಲು ಪ್ರಮಾಣಿತ 40 x 80 ಇಂಚುಗಳಿಗಿಂತ ದೊಡ್ಡದಾಗಿದ್ದರೆ, ಮಗ್ಗದ ಮೇಲೆ ಇಬ್ಬರು ಪುರಸ್ಗಾರ್ ಕಾರ್ಮಿಕರು ಒಟ್ಟಿಗೆ ಕೆಲಸ ಮಾಡುತ್ತಾರೆ
ಅನೇಕ ಯುವ ಪುರಸ್ಗಾರ್ ಕಾರ್ಮಿಕರು ತಮ್ಮ ಕಸುಬಿನ ಮೂಲಕ ಸ್ಥಿರವಾದ ಆದಾಯವನ್ನು ಗಳಿಸಲು ಸಾಧ್ಯವಾಗುವುದಿಲ್ಲವೆನ್ನುವ ಚಿಂತೆಯಲ್ಲಿದ್ದಾರೆ. "ಅವಕಾಶ ಸಿಕ್ಕಾಗ ನಾನು ಬೇರೆ ಉದ್ಯೋಗ ಮಾಡುತ್ತೇನೆ" ಎಂದು ಫಿರೋಜ್ ಹೇಳುತ್ತಾರೆ. ಅವರ ಸಹೋದ್ಯೋಗಿಯೊಬ್ಬರು "ನಾನು ಮದುವೆಯಾಗಿದ್ದು 45 ನೇ ವಯಸ್ಸಿನಲ್ಲಿ ಎಂದರೆ ನೀವು ನಂಬುತ್ತೀರಾ? ಕಡಿಮೆ ಸಂಬಳ ಪಡೆಯುವ ಪುರಸ್ಗಾರ್ ಕಾರ್ಮಿಕರನ್ನು ಯಾರೂ ಮದುವೆಯಾಗಲು ಬಯಸುವುದಿಲ್ಲ. ಬೇರೆ ಕೆಲಸ ಮಾಡುವುದೇ ಒಳ್ಳೆಯದು" ಎನ್ನುತ್ತಾರೆ.
"ಇದು ಅಷ್ಟು ಸುಲಭವಲ್ಲ," ಫಯಾಜ್ ಅಹ್ಮದ್ ಶಲ್ಲಾ, 62, ಎಂದು ಕೂಡಲೇ ಘಂಟಾಘೋಷವಾಗಿ ನುಡಿದರು. ಫಯಾಜ್ ಅವರು ಹನ್ನೆರಡು ವರ್ಷದವರಿರುವಾಗಿನಿಂದ ಈ ಕೆಲಸ ಮಾಡುತ್ತಿದ್ದಾರೆ. “ನಾನು ಈ ಕೌಶಲ್ಯವನ್ನು ನನ್ನ ತಂದೆ ಹಬೀಬ್-ಉಲ್ಲಾ ಶಲ್ಲಾ ಅವರಿಂದ ಪಡೆದಿದ್ದೇನೆ. ಹಾಗೆ ನೋಡಿದರೆ, ಶ್ರೀನಗರದ ಡೌನ್‌ಟೌನ್‌ನಲ್ಲಿರುವ ಹೆಚ್ಚಿನವರು ನನ್ನ ತಂದೆಯಿಂದ ಈ ಕಲೆಯನ್ನು ಕಲಿತಿದ್ದಾರೆ."
ಅನಿಶ್ಚಿತತೆಗಳ ಹೊರತಾಗಿಯೂ, ಫಯಾಜ್ ಅವರಿಗೆ ಪುರಸ್ಗಾರಿ ಕೆಲವನ್ನು ತೊರೆಯಲು ಇಷ್ಟವಿರಲಿಲ್ಲ. "ನನಗೆ ಇತರ ಕೆಲಸಗಳ ಬಗ್ಗೆ ಸ್ವಲ್ಪವೂ ಜ್ಞಾನವಿಲ್ಲ," ಎಂದು ಅವರು ಬೇರೆ ಕೆಲಸ ಮಾಡುವ ಕಲ್ಪನೆಯನ್ನು ತಳ್ಳಿ ಹಾಕಿದರು. ತಮ್ಮ ನಿಪುಣ ಕೈಗಳಿಂದ ಪಶ್ಮಿನಾ ಶಾಲಿನ ದಾರಗಳನ್ನು ಕೀಳುತ್ತಾ ಅವರು ಹೇಳಿದರು, "ನನಗೆ ಗೊತ್ತಿರುವುದು ಪುರಸ್ಗಾರಿ ಮಾತ್ರ."
ಅನುವಾದ: ಶಂಕರ. ಎನ್. ಕೆಂಚನೂರು