``ಬಂಕಾದಲ್ಲಿ ಪ್ರಖ್ಯಾತಿಯನ್ನು ಪಡೆದಿರುವ ಸಂಗತಿಗಳೆಂದರೆ ಎರಡೇ: ಅಮರಪುರದ ಬೆಲ್ಲ ಮತ್ತು ಕಟೋರಿಯಾದ ತುಸ್ಸಾರ್ ರೇಷ್ಮೆ'', ಕಟೋರಿಯಾ ಹಳ್ಳಿಯ ನೇಕಾರರಲ್ಲೊಬ್ಬನಾದ ಅಬ್ದುಲ್ ಸತ್ತಾರ್ ಅನ್ಸಾರಿ ಹೇಳುತ್ತಲಿದ್ದಾನೆ. ಆದರೆ ಇವೆರಡೂ ಕೂಡ ದಿನಕಳೆದಂತೆ ಕಮ್ಮಿಯಾಗುತ್ತಾ ಹೋಗುತ್ತಿವೆಯಂತೆ.
ಅಮರಪುರ ಬ್ಲಾಕ್ ನಲ್ಲಿರುವ ಬಲ್ಲಿಕಿಟಾ ಹಳ್ಳಿಯು ಕಟೋರಿಯಾದಿಂದ 3 ಕಿಲೋಮೀಟರುಗಳ ದೂರದಲ್ಲಿದೆ. ಹಳ್ಳಿಯ ಹೊರಭಾಗದಲ್ಲಿ ನೆಲೆಯೂರಿರುವ ಬೆಲ್ಲದ ಗಿರಣಿಗಳನ್ನು ಪತ್ತೆಹಚ್ಚುವುದು ಇಲ್ಲಿ ಪ್ರಯಾಸದ ಕೆಲಸವೇನೂ ಅಲ್ಲ. ಸಕ್ಕರೆ-ಸಿರಪ್ ಗಳಿಂದ ಮಿಂದೆದ್ದ ಕಬ್ಬಿನ ಸುಗಂಧವೇ ಸಾಕು ನಕಾಶೆಯಂತೆ ಇಲ್ಲಿಯ ದಾರಿಯನ್ನು ತೋರಿಸಲು.
ರಾಜೇಶ್ ಕುಮಾರ್ ಹೇಳುವಂತೆ ಆತನ ತಂದೆ ಸಾಧು ಸರನ್ ಕಪ್ರಿ ಬಿಹಾರದ ಬಂಕಾ ಜಿಲ್ಲೆಯಲ್ಲಿರುವ ಈ ಗಿರಣಿಯನ್ನು ನಲವತ್ತು ವರ್ಷಗಳ ಹಿಂದೆ ಆರಂಭಿಸಿದ್ದನಂತೆ. 12-15 ಕಾರ್ಮಿಕರಿರುವ ಈ ಗಿರಣಿಯು ಗಾತ್ರದಲ್ಲಿ ಬಹಳ ಚಿಕ್ಕದು. ಮುಂಜಾನೆಯ 10 ರಿಂದ ಸಂಜೆ 6 ರವರೆಗೆ ದುಡಿದರೆ ದಿನಗೂಲಿಯಾಗಿ ಈ ಕಾರ್ಮಿಕರಿಗೆ 200 ರೂಪಾಯಿಗಳು ಸಿಗುತ್ತವೆ. ಪ್ರತೀವರ್ಷವೂ ಅಕ್ಟೋಬರ್ ನಿಂದ ಫೆಬ್ರವರಿಯ ಕಾಲದಲ್ಲಿ ಈ ಗಿರಣಿಯು ಕಾರ್ಯನಿರತವಾಗಿರುತ್ತದೆ. ಅಂದಹಾಗೆ ಡಿಸೆಂಬರ್ ಮತ್ತು ಜನವರಿ ಮಾಸಗಳು ಇಲ್ಲಿ ಒಳ್ಳೆಯ ವ್ಯಾಪಾರದ ದಿನಗಳಂತೆ.

``ಸದ್ಯ ಅಮರಪುರದಲ್ಲಿ 10-12 ಬೆಲ್ಲದ ಗಿರಣಿಗಳಿವೆ. ಆದರೆ ಹದಿನೈದು ವರ್ಷಗಳ ಹಿಂದೆ ಇಲ್ಲಿ ನೂರಕ್ಕೂ ಹೆಚ್ಚು ಗಿರಣಿಗಳಿದ್ದವಂತೆ. ಇಲ್ಲಿಯ ಬಹಳಷ್ಟು ಕಾರ್ಮಿಕರು ಅಕ್ಕಪಕ್ಕದ ಹಳ್ಳಿಗಳಾದ ಬಲ್ಲಿಕಿಟಾ, ಬಾಜಾ, ಭರ್ಕೋ, ಬೈಡಾಚಕ್ ಮತ್ತು ಗೊರಾಮಾಗಳಿಂದ ಬರುವವರು'', ಎಂದು ಗಿರಣಿಯ ಮಾಲೀಕ ರಾಜೇಶ್ ಕುಮಾರ್ ಹೇಳುತ್ತಿದ್ದಾನೆ.

ರಸವನ್ನು ತೆಗೆಯಲು ಬೇಕಿರುವ ಸಮಯವನ್ನು ಗಮನದಲ್ಲಿಟ್ಟುಕೊಂಡು ಕಬ್ಬನ್ನು ಜಲ್ಲೆಗಳಾಗಿ ಪರಿವರ್ತಿಸುವ ಗಿರಣಿಯಲ್ಲಿರುವ ಏಕೈಕ ಯಂತ್ರವನ್ನು ಸಂಜೆ 4 ರ ನಂತರ ನಿಲ್ಲಿಸಲಾಗುತ್ತದೆ. ಕುಮಾರ್ ಹೇಳುವಂತೆ ಗಿರಣಿಯಷ್ಟೇ ಹಳೆಯದು ಈ ಯಂತ್ರವೂ ಕೂಡ. ಯಂತ್ರದ ವಿರುದ್ಧ ದಿಕ್ಕಿನಲ್ಲಿ ತಳಭಾಗದಲ್ಲಿರುವ ದೊಡ್ಡ ಗುಂಡಿಗಳಲ್ಲಿ ರಸವನ್ನು ಸಂಗ್ರಹಿಸಲಾಗುತ್ತದೆ.

ಅರವತ್ತರ ವೃದ್ಧರಾದ ಅಕ್ಷಯ ಲಾಲ್ ಮಂಡಲ್ ತಳದಲ್ಲಿ ಉಳಿದಿರುವ ಕಬ್ಬಿನ ರಸದ ಅಂಶಗಳನ್ನು ತೆಗೆಯಲು ನಾಲ್ಕಡಿ ಆಳವಿರುವ ದೊಡ್ಡ ಗುಂಡಿಯಲ್ಲಿ ಇಳಿಯುತ್ತಾರೆ. ಹೀಗೆ ಸಂಗ್ರಹಿತವಾದವುಗಳನ್ನು ಟಿನ್ನುಗಳಲ್ಲಿ ತುಂಬಿಸಿ ಗಿರಣಿಯ ಮತ್ತೊಂದು ಭಾಗದಲ್ಲಿರುವ ಕುದಿಯುವ ಗುಂಡಿಯತ್ತ ತೆಗೆದುಕೊಂಡು ಹೋಗುತ್ತಾರೆ. ``ಹಿಂದೆ ನಾನು ಕೋಲ್ಕತ್ತಾದಲ್ಲಿ ಅಕ್ಕಸಾಲಿಗನಾಗಿದ್ದೆ. ಈಗ ವೃದ್ಧಾಪ್ಯ ಬಂದಿರುವುದರಿಂದಾಗಿ ನನ್ನೂರಿಗೆ ಮರಳಿ ಬಂದು ಈ ಕೆಲಸದಲ್ಲಿ ಕಳೆದ 3 ವರ್ಷಗಳಿಂದ ತೊಡಗಿಸಿಕೊಂಡಿದ್ದೇನೆ. ನನ್ನಂತೆಯೇ ಮುಪ್ಪಿನ ವಯಸ್ಸೆಂದು ಮರಳಿ ಊರಿಗೆ ಬಂದು ಇಲ್ಲಿ ಕೆಲಸ ಮಾಡುತ್ತಿರುವ ವೃದ್ಧರು ಸಾಕಷ್ಟಿದ್ದಾರೆ'', ಎನ್ನುತ್ತಾರೆ ಮಂಡಲ್.

``ರಸದ ಗುಂಡಿ ಮತ್ತು ಕುದಿಸುವ ಗುಂಡಿಯ ನಡುವಿನ ನನ್ನ ಇಂದಿನ ಕೊನೆಯ ನಡಿಗೆಯು ಇದಾಗಿತ್ತು'', ಎಂದು ಹೇಳುವ ಮಂಡಲ್ ರವರ ದನಿಯಲ್ಲಿ ಸಾಕಷ್ಟು ಆಯಾಸದ ಕಳೆಯಿದೆ. ``ನಾವು ಆಗಾಗ ನಮ್ಮ ಕೆಲಸಗಳನ್ನು ಬದಲಿಸಿಕೊಳ್ಳುತ್ತಿರುತ್ತೇವೆ. ಇಂದು ಮುಂಜಾನೆಯಿಂದ ಮಧ್ಯಾಹ್ನದವರೆಗೆ ನಾನು ಕಬ್ಬಿನ ರಾಶಿಗಳನ್ನು ಇಳಿಸುತ್ತಿದ್ದೆ'', ಎಂದು ಮುಂದುವರಿಸುತ್ತಾರೆ ಮಂಡಲ್.

ಯಾವುದಕ್ಕೂ ಬಳಸಲು ಲಾಯಕ್ಕಲ್ಲದ ಕಬ್ಬಿನ ಉಳಿದ ಒಣಗಿದ ಭಾಗಗಳನ್ನು ಸೌದೆಯಂತೆ ಬಳಸಲಾಗುತ್ತದೆ. 45 ರ ಪ್ರಾಯದ ರಾಜೇಂದ್ರ ಪಾಸ್ವಾನ್ ನ ಕೆಲಸವೇ ಇಂತಹ ಉಳಿದ ಅಂಶಗಳನ್ನು ದಿನವಿಡೀ ಒಲೆಗೆ ತಳ್ಳುತ್ತಾ ಉರಿಸುವುದು. ``ಈ ಗಿರಣಿಯ ಮಾಲೀಕನ ಬಳಿ ಕಬ್ಬಿನ ಜಮೀನಿದೆ. ಹೀಗಾಗಿಯೇ ಈ ಗಿರಣಿ ಇನ್ನೂ ನಡೆಯುತ್ತಿದೆ'', ಎನ್ನುತ್ತಿದ್ದಾನೆ ಪಾಸ್ವಾನ್. ಗಿರಣಿಯ ಮಾಲೀಕನಾದ ರಾಜೇಶ್ ಕುಮಾರ್ ಹೇಳುವಂತೆ ಉಳಿದ ಹಲವರು ಕಬ್ಬಿನ ಬೆಳೆಯಲ್ಲಿರುವ ನಷ್ಟವನ್ನು ತಡೆದುಕೊಳ್ಳಲಾಗದೆ ಗಿರಣಿಗಳನ್ನು ಮುಚ್ಚಿಬಿಟ್ಟರಂತೆ.

ಈ ಗಿರಣಿಯಲ್ಲಿ ಕುದಿಸುವುದಕ್ಕಾಗಿ ಮೂರು ಗುಂಡಿಗಳಿವೆ. ಮೊದಲು ಕಬ್ಬಿನ ರಸವನ್ನು ಚೆನ್ನಾಗಿ ಕುದಿಸಲಾಗುತ್ತದೆ. ರಸವು ತನ್ನ ಸಕ್ಕರೆಯ ಅಂಶವನ್ನು ಬಿಡತೊಡಗಿದಂತೆಯೇ ಈ ರಸವನ್ನು ಮತ್ತೊಂದು ಗುಂಡಿಗೆ ಸುರಿಯಲಾಗುತ್ತದೆ. ಈ ಹೊಸ ಗುಂಡಿಯಲ್ಲಿ ರಸವನ್ನು ಮತ್ತಷ್ಟು ಕುದಿಸಲಾಗುವುದಲ್ಲದೆ ಮೇಲ್ಭಾಗದಲ್ಲಿ ತೇಲುತ್ತಿರುವ ಕಸದಂತಹ ಅಂಶಗಳನ್ನು ಕಬ್ಬಿಣದ ಸಟ್ಟುಗವೊಂದರ ಸಹಾಯದಿಂದ ನಾಜೂಕಾಗಿ ತೆಗೆದು ಪಕ್ಕದಲ್ಲೇ ಇರುವ ಕಸದ ಗುಂಡಿಗೆ ಎಸೆಯಲಾಗುತ್ತದೆ. ಹೀಗೆ ಕುದಿಯುತ್ತಿರುವ ರಸವನ್ನು ಮೂರನೇ ಗುಂಡಿಗೆ ಸಾಗಿಸಲು ತಯಾರಾಗುವಷ್ಟರಲ್ಲಿ ಬೆಲ್ಲವೂ ಕೂಡ ನಿಧಾನವಾಗಿ ಸಿದ್ಧವಾಗುವ ಹಂತಕ್ಕೆ ಬಂದಿರುತ್ತದೆ.

ಉದ್ದನೆಯ ಮರದ ಕೋಲು ಮತ್ತು ಹಗ್ಗದಿಂದ ಭದ್ರವಾಗಿ ಸಿಕ್ಕಿಸಿದ ಲೋಹದ ಪಾತ್ರೆಯೊಂದರಿಂದ ದಪ್ಪನೆಯ ಬೆಲ್ಲದ ದ್ರಾವಣವನ್ನು ಒಂದು ಗುಂಡಿಯಿಂದ ಮತ್ತೊಂದು ಗುಂಡಿಗೆ ಸುರಿಯುತ್ತಿರುವ ಕಾರ್ಮಿಕ.

ಕೊನೆಯ ಹಂತದ ಕುದಿಸುವಿಕೆಯು ಮುಗಿದ ನಂತರ ನಿಧಾನವಾಗಿ ಘನರೂಪಕ್ಕೆ ಮರಳುತ್ತಿರುವ ದ್ರಾವಣವನ್ನು ತಣ್ಣಗಾಗಿಸಲು ಪುಟ್ಟ ಮಣ್ಣಿನ ಗುಂಡಿಗಳಲ್ಲಿ ಸುರಿಯಲಾಗುತ್ತದೆ. ಸುಬೋಧ್ ಪೊದ್ದಾರ್ (ಬಲಭಾಗ) ಬೆಲ್ಲದ ದಪ್ಪನೆಯ ದ್ರಾವಣವನ್ನು ಲೋಹದ ಡಬ್ಬಿಗಳಲ್ಲಿ ತುಂಬಿಸಿಡುತ್ತಿದ್ದಾನೆ. ``ನಾನೊಬ್ಬ ರೈತ. ಆದರೆ ಈ ಗಿರಣಿಯ ಮಾಲೀಕ ನನ್ನದೇ ಹಳ್ಳಿಯವನು (ಬಲ್ಲಿಕಿಟಾ). ಸದ್ಯ ಕಾರ್ಮಿಕರ ಕೊರತೆಯಿದೆ ಎಂದು ಹೇಳಿ ನನ್ನನ್ನಿಲ್ಲಿ ಕೆಲಸ ಮಾಡಲು ಕರೆದಿದ್ದಾನೆ'', ಎನ್ನುತ್ತಿದ್ದಾನೆ ಪೊದ್ದರ್.

ಈ ಬೆಲ್ಲದ ದ್ರಾವಣದ ದಪ್ಪವನ್ನು ನಾನೀಗ ಪರೀಕ್ಷಿಸುತ್ತಿದ್ದೇನೆ. ದ್ರಾವಣದ ಸ್ಥಿರತೆಯು ಸಮರ್ಪಕವಾಗಿದೆ ಎಂದು ಖಾತ್ರಿಯಾದ ನಂತರ ಡಬ್ಬಿಯ ಮುಚ್ಚಳವನ್ನು ಮುಚ್ಚುತ್ತೇನೆ'', ಎನ್ನುತ್ತಿದ್ದಾನೆ ರಾಮಚಂದರ್ ಯಾದವ್. ಗಿರಣಿಯಿಂದ ಎರಡು ಕಿಲೋಮೀಟರ್ ದೂರದಲ್ಲಿರುವ ಬಾಜಾ ಹಳ್ಳಿಯಿಂದ ಈತ ಇಲ್ಲಿ ಕೆಲಸಕ್ಕಾಗಿ ಬರುತ್ತಾನೆ. ಈ ಹಿಂದೆಯೂ ಕೂಡ ಕೆಲ ಬೆಲ್ಲದ ಗಿರಣಿಗಳಲ್ಲಿ ಕೆಲಸ ಮಾಡಿದ ಅನುಭವವು ಈತನಿಗಿದೆಯಂತೆ. ಆದರೆ ಅವುಗಳಲ್ಲಿ ಬಹಳಷ್ಟು ಗಿರಣಿಗಳಿಂದು ಮುಚ್ಚಿಹೋಗಿವೆ. ``ಕಬ್ಬುಗಳು ಇಲ್ಲವೇ ಇಲ್ಲ ಎಂಬಂತಾಗಿದೆ. ಹೀಗಾಗಿಯೇ ಗಿರಣಿಗಳು ಮುಚ್ಚಿಹೋಗಿವೆ'', ಅನ್ನುತ್ತಾನೆ ಯಾದವ್.

ಬಂದ ಕಬ್ಬಿನ ರಾಶಿಯನ್ನು ಲಗುಬಗೆಯಿಂದ ಇಳಿಸಲು ಕಾಯುತ್ತಿರುವ ಗಿರಣಿಯ ಕಾರ್ಮಿಕರು. ಹೀಗೆ ಕಬ್ಬಿನ ರಾಶಿಯನ್ನು ಇಳಿಸಿದ ನಂತರ ಅವರು ತಮ್ಮ ತಮ್ಮ ಹಳ್ಳಿಗಳಿಗೆ ಮರಳುತ್ತಾರೆ.

ಈ ನಡುವೆ ಎರಡು ದನಗಳು ಕಬ್ಬಿನ ರಸವನ್ನು ಆನಂದತುಲಿತವಾಗಿ ಹೀರುವುದರಲ್ಲೇ ವ್ಯಸ್ತವಾಗಿವೆ. ಈ ದನಗಳು ಗಿರಣಿಯ ಮಾಲೀಕನಿಗೆ ಸೇರಿದವಾದ್ದರಿಂದ ಇಂಥಾ ಸ್ವಾತಂತ್ರ್ಯಗಳನ್ನು ಈ ಸಾಕಿದ ದನಗಳಿಗೆ ನೀಡಲಾಗಿದೆ.

ಲೇಖಕಿಯ ಕಿರುಪರಿಚಯ : ಪರಿಯ ತಂಡದಲ್ಲಿ ವೀಡಿಯೋ ಸಂಯೋಜಕರಾಗಿರುವ ಶ್ರೇಯಾ ಕಾತ್ಯಾಯಿನಿಯವರು ಛಾಯಾಚಿತ್ರಗ್ರಾಹಕರು ಮತ್ತು ಚಿತ್ರನಿರ್ದೇಶಕರೂ ಹೌದು . ಇವರು ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ ಮುಂಬೈನಲ್ಲಿ ಮೀಡಿಯಾ ಆಂಡ್ ಕಲ್ಚರಲ್ ಸ್ಟಡೀಸ್ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ (2016 ರ ಮೊದಲ ಭಾಗದಲ್ಲಿ ).
ಅನುವಾದ: ಪ್ರಸಾದ್ ನಾಯ್ಕ