ಕೆಲಸದಲ್ಲಿ ತಪ್ಪಾದರೆ ಸಂಪಾದನೆ ಇಲ್ಲ.
ಅಮನ್ ತನ್ನ ಬೆರಳಿನಲ್ಲಿ ಗುಗ್ಗೆ ಕಡ್ಡಿ ಹಿಡಿದು ತದೇಕಚಿತ್ತದಿಂದ ಕಣ್ಣನ್ನು ಕಿವಿಯ ಮೇಲೆ ನೆಟ್ಟಿದ್ದಾರೆ. ಗುಗ್ಗೆ ಕಡ್ಡಿಯ ಚೂಪಾದ ತುದಿಗೆ ಹತ್ತಿಯನ್ನು ಸುತ್ತಲಾಗಿದೆ. ಅವರು ಕಿವಿಯ ತಮಟೆಗೆ, ಚರ್ಮಕ್ಕೆ ಹಾನಿಯಾಗದಂತೆ ಕಿವಿಯನ್ನು ಸ್ವಚ್ಛಗೊಳಿಸಲು ಪ್ರಯತ್ನಿಸುತ್ತಿದ್ದಾರೆ. “ಗುಗ್ಗೆಯನ್ನು ಮಾತ್ರ ತೆಗೆಯಬೇಕು” ಎಂದು ನೆನಪಿಸುತ್ತಾರವರು.
ಹರಡಿ ನಿಂತ ಅರಳಿ ಮರವೊಂದರ ಕೆಳಗೆ ಕುಳಿತು ಅವರು ಪರಿಯೊಡನೆ ಮಾತನಾಡುತ್ತಿದ್ದರು. ಕಪ್ಪು ಚೀಲವೊಂದರಲ್ಲಿ ಅವರ ಕೆಲಸದ ಸಲಕರಣೆಗಳಿದ್ದವು – ಸಿಲಾಯಿ (ಸೂಜಿಯಂತಹದ್ದು), ಚಿಮಟಿ (ಚಿಮಟ) ಮತ್ತು ಒಂದಷ್ಟು ಹತ್ತಿ ಅವರ ಪಕ್ಕದಲ್ಲೇ ಇತ್ತು. ಚೀಲದೊಳಗೆ ಜಡಿಬೂಟಿ (ಗಿಡಮೂಲಿಕೆ)ಗಳಿಂದ ಔಷಧೀಯ ತೈಲವಿತ್ತು. ಅದು ಅವರ ಕುಟುಂಬಕ್ಕಷ್ಟೇ ತಿಳಿದಿರುವ ರಹಸ್ಯ ಫಾರ್ಮುಲಾ ಹೊಂದಿರುವ ತೈಲ.
“ಸಿಲಾಯಿ ಸೇ ಮಾಯಿಲ್ ಬಾಹರ್ ನಿಕಲ್ತೇ ಹೈ ಔರ್ ಚಿಮ್ಟಿ ಸೇ ಕೀಚ್ ಲೇತೆ ಹೈ [ಸೂಜಿಯನ್ನು ಕಿವಿ ಸ್ವಚ್ಛ ಮಾಡಲು ಬಳಸಲಾಗುತ್ತದೆ. ಚಿಮಟದಿಂದ ಗುಗ್ಗೆ ಹೊರಗೆ ತೆಗೆಯುತ್ತೇವೆ]” ಯಾರಿಗಾದರೂ ಕಿವಿಯಲ್ಲಿ ಗಡ್ಡೆ ಬೆಳೆದಿದ್ದಲ್ಲಿ ಮಾತ್ರವೇ ತೈಲವನ್ನು ಬಳಸಲಾಗುತ್ತದೆ. “ನಾವು ಸೋಂಕುಗಳಿಗೆ ಚಿಕಿತ್ಸೆ ನೀಡುವುದಿಲ್ಲ. ಗುಗ್ಗೆ ತೆಗಯುವುದು ಮತ್ತು ಕಿವಿಯೊಳಗಿನ ತುರಿಕೆಯನ್ನು ಹೋಗಲಾಡಿಸುವುದನ್ನು ಮಾಡುತ್ತೇವೆ. ಜನರು ತುರಿಕೆಯನ್ನು ಒರಟಾಗಿ ಸ್ವಚ್ಛ ಮಾಡಿಕೊಳ್ಳಲು ಹೊರಟಾಗ ಕಿವಿಯಲ್ಲಿ ನೋವಾಗುತ್ತದೆ ಎಂದು ಅವರು ಹೇಳುತ್ತಾರೆ


ಎಡಕ್ಕೆ: ಅಮನ್ ಸಿಂಗ್ ಅವರ ಉಪಕರಣಗಳು ಸಿಲಾಯ್ (ಸೂಜಿಯಂತಹ ಸಾಧನ), ಚಿಮ್ಟಿ (ಚಿಮಟ), ಹತ್ತಿ ಮತ್ತು ಅವರು ಜಡಿಬೂಟಿ(ಗಿಡಮೂಲಿಕೆಗಳು)ಯಿಂದ ತಯಾರಿಸುವ ಔಷಧೀಯ ತೈಲ, ಮತ್ತು ಅವರು ಅವುಗಳನ್ನು ಕಪ್ಪು ಚೀಲದಲ್ಲಿ ಸಾಗಿಸುತ್ತಾರೆ. ಬಲ: ಔಷಧೀಯ ಎಣ್ಣೆಯನ್ನು ಗಿಡಮೂಲಿಕೆಗಳಿಂದ ತಯಾರಿಸಲಾಗುತ್ತದೆ ಮತ್ತುಅದರ ತಯಾರಿಕೆಯ ಸೂತ್ರವು ಕುಟುಂಬದ ರಹಸ್ಯವಾಗಿದೆ


ಎಡ: ಅಮನ್ ಸಿಂಗ್ ತನ್ನ ಕೆಂಪು ಟೋಪಿಯೇ ತನ್ನ ಗುರುತು ಎಂದು ಹೇಳುತ್ತಾರೆ. 'ನಾವು ಅದನ್ನು ಧರಿಸದಿದ್ದರೆ, ಕಿವಿ ಕ್ಲೀನ್ ಮಾಡುವವರು ಹಾದುಹೋಗುತ್ತಿದ್ದಾರೆ ಎಂದು ಯಾರಿಗೆ ತಿಳಿಯುತ್ತದೆ?' ಬಲ: ಅಂಬಾ ಸಿನೆಮಾದಲ್ಲಿ ಮಧ್ಯಾಹ್ನದ ಸಿನೆಮಾ ನೋಡಲು ಬಂದ ವ್ಯಕ್ತಿ ಅಮನ್ ಅವರ ಆ ದಿನದ ಗ್ರಾಹಕನಾದ
ಅಮನ್ ತನ್ನ 16ನೇ ವಯಸ್ಸಿನಲ್ಲಿ ಈ ಕಿವಿ ಸ್ವಚ್ಛಗೊಳಿಸುವ ಕೆಲಸವನ್ನು ಅವರ ತಂದೆ ವಿಜಯ್ ಸಿಂಗ್ ಅವರಿಂದ ಕಲಿತರು. ಅವರು ಇದು ಹರ್ಯಾಣದ ರೇವಾರಿ ಜಿಲ್ಲೆಯ ರಾಮಪುರದಲ್ಲಿ ನಮ್ಮ ಖಾನ್ದಾನಿ ಕಾಮ್ (ಪಾರಂಪರಿಕ ಉದ್ಯೋಗ) ಎನ್ನುತ್ತಾರೆ. ಅಮನ್ ಮೊದಲು ತಮ್ಮ ಕುಟುಂಬದವರ ಕಿವಿಯ ಗುಗ್ಗೆ ತೆಗೆಯುವ ಮೂಲಕ ತರಬೇತಿ ಪಡೆದರು. “ಮೊದಲ ಆರು ತಿಂಗಳ ಕಾಲ ಸಿಲಾಯಿ ಮತ್ತು ಚಿಮಟಿ ಬಳಸಿ ಮನೆಯವರ ಕಿವಿ ಸ್ವಚ್ಛಗೊಳಿಸುವ ಮೂಲಕ ಈ ಕೆಲಸ ಕಲಿಯುತ್ತೇವೆ. ಒಂದಿಷ್ಟೂ ನೋವು ಮಾಡದೆ ಸ್ವಚ್ಛಗೊಳಿಸುವುದನ್ನು ಕಲಿತ ಬಳಿಕ ಮನೆಯಿಂದ ಹೊರಗೆ ಹೆಜ್ಜೆಯಿಡುತ್ತೇವೆ” ಎನ್ನುತ್ತಾರವರು.
ಅಮನ್ ಈ ಕೆಲಸ ಮಾಡುತ್ತಿರುವ ಕುಟುಂಬದ ಮೂರನೇ ತಲೆಮಾರು. ಶಾಲೆಯ ಕುರಿತು ಕೇಳಿದಾಗ ತಾನು ʼಅಂಗುಟಾ ಛಾಪ್ʼ (ಹೆಬ್ಬೆಟ್ಟು) ಎಂದು ಎಂದು ಹೇಳಿದರು. ಅವರು ಶಾಲೆಯ ಮೆಟ್ಟಿಲನ್ನೇ ಹತ್ತಿಲ್ಲ. “ಪೈಸಾ ಬಡೀ ಬಾತ್ ನಹೀ ಹೈ, ಕಿಸೀ ಕಾ ಕಾನ್ ಖರಾಬ್ ನಹಿ ಹೋನಾ ಚಾಹಿಯೇ [ದುಡ್ಡು ದೊಡ್ಡ ವಿಷಯವಲ್ಲ, ಕಿವಿ ಸ್ವಚ್ಛ ಮಾಡುವಾಗ ಯಾರದೂ ಕಿವಿ ಹಾಳಾಗಬಾರದು]
ಮನೆಯಿಂದ ಹೊರಬಿದ್ದ ನಂತರ ಸಿಕ್ಕ ಅವರ ಮೊದಲ ಗ್ರಾಹಕ ಹರ್ಯಾಣದ ಗುರ್ಗಾಂವ್ ಮೂಲದವರು. ನಂತರ ಅವರು ದೆಹಲಿಗೆ ಬಂದರು. ಒಂದು ಕಾಲದಲ್ಲಿ ತಾನು ದಿನಕ್ಕೆ 500 ರೂಗಳಿಂದ ಹಿಡಿದ 700 ರೂಪಾಯಿಗಳವರೆಗೆ ಗಳಿಸುತ್ತಿದ್ದುದಾಗಿ ಹೇಳುತ್ತಾರೆ. “ಈಗ ದಿನಕ್ಕೆ ಹೆಚ್ಚೆಂದರೆ 200 ರೂ. ಸಂಪಾದಿಸುತ್ತೇನೆ.”
ಅವರು ದೆಹಲಿಯ ಡಾ. ಮುಖರ್ಜಿ ರಸ್ತೆಯಲ್ಲಿರುವ ಮನೆಯಿಂದ ನಾಲ್ಕು ಕಿಲೋಮೀಟರ್ ದೂರವನ್ನು ಕಿಕ್ಕಿರಿದ ಟ್ರಾಫಿಕ್ ನಡುವೆ ನಡೆದು ಸಾಗಿ ಗ್ರಾಂಡ್ ಟಂಕ್ ರಸ್ತೆಯಲ್ಲಿರುವ ಅಂಬಾ ಸಿನೆಮಾವನ್ನು ತಲುಪುತ್ತಾರೆ. ಒಮ್ಮೆ ಅಲ್ಲಿಗೆ ತಲುಪಿದ ನಂತರ ಆ ಸಂದಣಿಯಲ್ಲಿ ತನ್ನ ಸೇವೆ ಅಗತ್ಯವಿರುವ ಗ್ರಾಹಕರನ್ನು ಹುಡುಕತೊಡಗುತ್ತಾರೆ. ವಿಶೇಷವಾಗಿ ಮಾರ್ನಿಂಗ್ ಶೋ ನೋಡಲು ಬಂದ ಜನರ ನಡುವೆ. ತಾನು ಧರಿಸಿರುವ ಕೆಂಪು ಟರ್ಬನ್ನೇ ನಾನು ಕಿವಿ ಸ್ವಚ್ಛಗೊಳಿಸುವವ ಎನ್ನುವುದನ್ನು ಸಾರಿ ಹೇಳುವ ಸಂಕೇತ ಎನ್ನುತ್ತಾರೆ. “ನಾನು ಅದನ್ನು ಧರಿಸದಿದ್ದರೆ ಕಿವಿ ಸ್ವಚ್ಛಗೊಳಿಸುವವರು ಇವರು ಎಂದು ಜನರಿಗೆ ಹೇಗೆ ಗೊತ್ತಾಗುತ್ತದೆ?”


ಅಮನ್ ಸಿಂಗ್ ಪ್ರತಿದಿನ ಬೆಳಿಗ್ಗೆ ಡಾ.ಮುಖರ್ಜಿ ನಗರದ ಬಾಂದಾ ಬಹದ್ದೂರ್ ಮಾರ್ಗ್ ಡಿಪೋ ಬಳಿಯ ತಮ್ಮ ಮನೆಯಿಂದ ದೆಹಲಿಯ ಗ್ರ್ಯಾಂಡ್ ಟ್ರಂಕ್ ರಸ್ತೆಯಲ್ಲಿರುವ ಅಂಬಾ ಸಿನೆಮಾವನ್ನು ತಲುಪಲು ಒಂದು ಗಂಟೆ ನಡೆದುಕೊಂಡು ಹೋಗುತ್ತಾರೆ. ಬಲ: ದೆಹಲಿ ವಿಶ್ವವಿದ್ಯಾಲಯದ ಉತ್ತರ ಕ್ಯಾಂಪಸ್ ಪಕ್ಕದಲ್ಲಿರುವ ಕಮಲಾ ನಗರ ಮಾರುಕಟ್ಟೆಯ ಓಣಿಗಳಲ್ಲಿ ಅಮನ್ ನಡೆಯುತ್ತಿದ್ದಾರೆ
ಸುಮಾರು ಒಂದು ಗಂಟೆ ಕಾಲ ಅಂಬಾ ಸಿನೆಮಾದಲ್ಲಿ ಗ್ರಾಹಕರಿಗಾಗಿ ಕಾಯ್ದು ನಂತರ ಅಮನ್ ದೆಹಲಿ ವಿಶ್ವವಿದ್ಯಾಲಯದ ಉತ್ತರ ಕ್ಯಾಂಪಸ್ ಬಳಿಯ ಸುಮಾರು 10 ನಿಮಿಷಗಳ ದೂರದಲ್ಲಿರುವ ಕಮಲಾ ನಗರದ ಓಣಿಗಳ ಕಡೆ ನಡೆಯತೊಡಗಿದರು. ಮಾರುಕಟ್ಟೆಯು ವಿದ್ಯಾರ್ಥಿಗಳು, ವ್ಯಾಪಾರಿಗಳು ಮತ್ತು ಗ್ರಾಹಕರಿಗಾಗಿ ಕಾಯುತ್ತಿದ್ದ ಕೂಲಿಯವರಿಂದ ಗಿಜಿಗುಡುತ್ತಿತ್ತು. ಅಮನ್ ಪಾಲಿಗೆ ಅಲ್ಲಿರುವ ಪ್ರತಿಯೊಬ್ಬನೂ ಸಂಭಾವ್ಯ ಗಿರಾಕಿ. ಅವರು ಪ್ರತಿಯೊಬ್ಬನ ಬಳಿ ಹೋಗಿ “ಭೈಯ್ಯಾ, ಕಾನ್ ಶಾಫ್ ಕರಾಯೇಂಗೆ ಕ್ಯಾ? ಬಸ್ ದೇಖ್ ಲೇನಾ ದೀಜಿಯೇ [ಅಣ್ಣ ಕಿವಿ ಕ್ಲೀನ್ ಮಾಡಿಸ್ಕೋತೀರಾ? ಸುಮ್ನೆ ಕಿವಿ ನೋಡೋದಕ್ಕೆ ಬಿಡಿ ಸಾಕು]”
ಎಲ್ಲರೂ ಬೇಡ ಎನ್ನುತ್ತಾ ತಲೆಯಾಡಿಸುತ್ತಾರೆ
ಅವರು ಅಲ್ಲಿಂದ ಮತ್ತೆ ಅಂಬಾ ಸಿನೆಮಾದ ಕಡೆ ತೆರಳಲು ನಿರ್ಧರಿಸುತ್ತಾರೆ. ಆಗ ಸಮಯ ಮಧ್ಯಾಹ್ನದ 12:45 ಆಗಿತ್ತು. ಅದು ಸೆಕೆಂಡ್ ಶೋ ಶುರುವಾಗುವ ಸಮಯವಾಗಿತ್ತು. ಅವರಿಗೆ ಕೊನೆಗೂ ಒಬ್ಬ ಗ್ರಾಹಕ ಸಿಕ್ಕ.
*****
ಸಾಂಕ್ರಾಮಿಕ ಪಿಡುಗಿನ ಸಮಯದಲ್ಲಿ ಕೆಲಸ ಸಿಗುವುದು ಕಷ್ಟವಾದಾಗ ಅವರು ಬೆಳ್ಳುಳ್ಳಿ ಮಾರಾಟದಲ್ಲಿ ತೊಡಗಿಕೊಂಡರು. “ನಾನು ಹತ್ತಿರದ ಮಂಡಿಗೆ ಹೋಗಿ 1,000 ರೂ. ನೀಡಿ 35-40 ಕಿಲೋ ಬೆಳ್ಳುಳ್ಳಿ ಖರೀದಿಸುತ್ತಿದ್ದೆ. ಅದನ್ನು ಮಾರಿ ದಿನಕ್ಕೆ ಸುಮಾರು 250-300 ರೂ ಉಳಿಸುತ್ತಿದ್ದೆ.” ಎನ್ನುತ್ತಾರೆ.
ಆದರೆ ಈಗ ಮತ್ತೆ ಬೆಳ್ಳುಳ್ಳಿ ಮಾರಲು ಹೋಗುವುದಕ್ಕೆ ಅಮನ್ ಅವರಿಗೆ ಆಸಕ್ತಿಯಿಲ್ಲ. ಅದು ಬಹಳ ಶ್ರಮ ಬೇಡುವ ಕೆಲಸ. “ಪ್ರತಿದಿನ ಮಾರ್ಕೆಟ್ ಹೋಗಬೇಕು. ಅಲ್ಲಿಂದ ಬೆಳ್ಳುಳ್ಳಿ ತಂದು ಅದನ್ನ ಕ್ಲೀನ್ ಮಾಡಿ ಮತ್ತೆ ಮಾರಿ ಮನೆಗೆ ಬರುವಾಗ ಕೆಲವೊಮ್ಮೆ ರಾತ್ರಿ ಎಂಟು ಗಂಟೆಯಾಗಿರುತ್ತಿತ್ತು. ಆದರೆ ಈ ಕಿವಿ ಸ್ವಚ್ಛಗೊಳಿಸುವ ಕೆಲಸದಲ್ಲಿ ಅವರು ಸಂಜೆ 6 ಗಂಟೆಗೆ ಮನೆಯಲ್ಲಿರುತ್ತಾರೆ.


ಅಮನ್ ತನ್ನ ಸಲಕರಣೆಗಳನ್ನು ಬಳಸಿ ಗ್ರಾಹಕರೊಬ್ಬರ ಕಿವಿ ಸ್ವಚ್ಛಗೊಳಿಸುತ್ತಿರುವುದು
ಐದು ವರ್ಷಗಳ ಹಿಂದೆ, ಅಮನ್ ದೆಹಲಿಗೆ ಸ್ಥಳಾಂತರಗೊಂಡಾಗ, ಡಾ.ಮುಖರ್ಜಿ ನಗರದ ಬಂದಾ ಬಹದ್ದೂರ್ ಮಾರ್ಗ್ ಡಿಪೋ ಬಳಿ 3,500 ರೂ.ಗೆ ಮನೆಯನ್ನು ಬಾಡಿಗೆಗೆ ಪಡೆದಿದ್ದರು. ಅವರು ಈಗಲೂ ತಮ್ಮ ಪತ್ನಿ ಹೀನಾ ಸಿಂಗ್ (31) ಮತ್ತು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅವರ ಮೂವರು ಗಂಡು ಮಕ್ಕಳೊಂದಿಗೆ ಇಲ್ಲಿ ವಾಸಿಸುತ್ತಿದ್ದಾರೆ: ನೇಗಿ, ದಕ್ಷ್ ಮತ್ತು ಸುಹಾನ್. ಅವರ ಹಿರಿಯ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದುತ್ತಾರೆ ಮತ್ತು ಮತ್ತು ಈ ಮಕ್ಕಳ ತಂದೆ ತನ್ನ ಮಕ್ಕಳು ಓದಿ ಪದವಿ ಪಡೆದು ಒಳ್ಳೆಯ ಕೆಲಸ ಹಿಡಿಯುತ್ತಾರೆ. ಅವರು ನನ್ನಂತೆ ಈ ಕೆಲಸ ಮಾಡಲಾರರು ಎನ್ನುವ ನಂಬಿಕೆಯಲ್ಲಿದ್ದಾರೆ, ಏಕೆಂದರೆ "ಕಾಮ್ ಮೇನ್ ಕೋಯಿ ವ್ಯಾಲ್ಯೂ ನಹೀ ಹೈ. ನ ಆದ್ಮಿ ಕಿ, ನಾ ಕಾಮ್ ಕಿ. ಆದಾಯ್ ಭಿ ನಹೀ ಹೈ [ಈ ವೃತ್ತಿಯಲ್ಲಿ ವ್ಯಕ್ತಿಗಾಗಲೀ ಅಥವಾ ಕೆಲಸಕ್ಕಾಗಲೀ ಯಾವುದೇ ಗೌರವ ಸಿಗುವುದಿಲ್ಲ].
"ಕಮಲಾ ನಗರ ಮಾರುಕಟ್ಟೆಯ [ದೆಹಲಿ] ಓಣಿಗಳಲ್ಲಿ, ಎಲ್ಲಾ ವರ್ಗದ ಜನರಿದ್ದಾರೆ. ನಾನು ಅವರನ್ನು ಕೇಳಿದಾಗ (ಕಿವಿಗಳನ್ನು ಸ್ವಚ್ಛಗೊಳಿಸಬೇಕೇ ಎಂದು), ಅವರು ಕೋವಿಡ್ ಬರುತ್ತದೆ ಎಂದು ಪ್ರತಿಕ್ರಿಯಿಸಿದ್ದರು. ನಂತರ ಅವರು ಅಗತ್ಯವಿದ್ದರೆ ವೈದ್ಯರನ್ನು ಭೇಟಿ ಮಾಡುವುದಾಗಿ ಹೇಳುತ್ತಾರೆ" ಎಂದು ಅಮನ್ ಹೇಳುತ್ತಾರೆ.
“ಅವರಿಗೆ ಏನು ಹೇಳಲಿ ನಾನು? ಪರವಾಗಿಲ್ಲ ನಿಮ್ಮ ಕಿವಿಗಳನ್ನು ಸ್ವಚ್ಛಗೊಳಿಸಿಕೊಳ್ಳಬೇಡಿ ಎನ್ನುತ್ತೇನೆ.”
*****
2022ರ ಡಿಸೆಂಬರ್ ತಿಂಗಳಿನಲ್ಲಿ ಅಮನ್ ಬೈಕಿಗೆ ಡಿಕ್ಕಿ ಹೊಡೆದು ಅಪಘಾತಕ್ಕೆ ಈಡಾದರು. ಇದರಿಂದಾಗಿ ಅವರ ಮುಖ ಮತ್ತು ಕೈಗಳ ಮೇಲೆ ಗಾಯವಾಯಿತು. ಬಲ ಹೆಬ್ಬೆರಳಿಗೆ ಗಾಯವಾದ ಕಾರಣ ಅವರಿಗೆ ಕಿವಿ ಸ್ವಚ್ಛಗೊಳಿಸುವುದು ಬಹಳ ಕಷ್ಟವಾಗುತ್ತಿತ್ತು.
ಅದೃಷ್ಟವಶಾತ್ ಔಷಧಿಗಳಿಂದ ಅವರ ಗಾಯಗಳು ಗುಣವಾದವು. ಈಗಲೂ ಅವರು ಕಿವಿ ಸ್ವಚ್ಛಗೊಳಿಸುವ ಕೆಲಸ ಮಾಡುತ್ತಾರಾದರೂ ಸ್ಥಿರ ಆದಾಯ ಗಳಿಸುವ ದೃಷ್ಟಿಯಿಂದ ಪ್ರಸ್ತುತ ದೆಹಲಿಯಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಧೋಲ್ ನುಡಿಸಲು ಹೋಗುತ್ತಾರೆ. ಈ ಕೆಲಸಕ್ಕೆ ಒಂದು ಕಾರ್ಯಕ್ರಮಕ್ಕೆ ಐನೂರು ರೂಪಾಯಿ ಸಿಗುತ್ತದೆ. ಅಮನ್ ಮತ್ತು ಹೀನಾ ಒಂದು ತಿಂಗಳ ಹಿಂದೆ ಒಂದು ಹೆಣ್ಣು ಮಗುವಿನ ತಂದೆ ತಾಯಿಯಾಗಿದ್ದಾರೆ. ಈಗ ಅವರು ತನ್ನ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಲು ಇನ್ನಷ್ಟು ಕೆಲಸ ಹುಡುಕುವ ತರಾತುರಿಯಲ್ಲಿದ್ದಾರೆ.
ಅನುವಾದ: ಶಂಕರ. ಎನ್. ಕೆಂಚನೂರು