ರಮೇಶ ಜಗತಾಪ್ ನ ಅವತ್ತಿನ ದಿನ ಅಷ್ಟೇನೂ ಚೆನ್ನಾಗಿರಲಿಲ್ಲ. ಬೆಳ್ಳಂಬೆಳಗ್ಗೆ ಆತ ತನ್ನ ಹೆಂಡತಿ ಗಂಗೂಬಾಯಿಯ ಜೊತೆ ಜಗಳವಾಡಿದ್ದ. ಜಗಳದ ನಂತರ ಆಕೆ ಕ್ರಿಮಿನಾಶಕ ಕುಡಿದಿದ್ದಳು. ಈ ಅನಿರೀಕ್ಷಿತ ಘಟನೆಯಿಂದ ಏಕಾಏಕಿ ಕಂಗಾಲಾಗಿಬಿಟ್ಟ ರಮೇಶ ಅವಳನ್ನು ತಾನಿದ್ದ ಸಾತೇಫಲ ಹಳ್ಳಿಯಿಂದ ಸುಮಾರು 30 ಕಿಲೋಮೀಟರು ದೂರದಲ್ಲಿರುವ ಓಸ್ಮಾನಾಬಾದಿನ ಸಿವಿಲ್ ಆಸ್ಪತ್ರೆಗೆ ಆಟೋರಿಕ್ಷಾದಲ್ಲಿ ಕರೆದೊಯ್ದು ಸೇರಿಸಿದ್ದ. “ದಾರಿಯುದ್ದಕ್ಕೂ ನನ್ನ ಎದೆಬಡಿತ ಅದೆಷ್ಟು ಜೋರಾಗಿತ್ತೆಂದರೆ, ನನ್ನ ಎದೆ ಆ ಥರ ಬಡಿದುಕೊಂಡಿದ್ದನ್ನು ನಾನು ಯಾವಾಗಲೂ ಕೇಳೇ ಇಲ್ಲ.” ಎನ್ನುವ ರಮೇಶ “ನಮ್ಮ ಅದೃಷ್ಟ ಚೆನ್ನಾಗಿತ್ತು ಸ್ವಾಮಿ; ಸಮಯಕ್ಕೆ ಸರಿಯಾಗಿ ನಾವು ಅವಳನ್ನು ವೈದ್ಯರ ಬಳಿ ಕರೆದುಕೊಂಡು ಹೋದೆವು”, ಎಂದು ಹೇಳುತ್ತಾನೆ.
ಆದರೆ ಮಧ್ಯಾಹ್ನದ ಹೊತ್ತಿಗೆ ಆತ ಮತ್ತೆ ಸಾತೇಫಲಕ್ಕೆ ಧಾವಿಸಿ ಬಂದಿದ್ದ. ಜಿಲ್ಲಾ ಸಹಕಾರಿ ಬ್ಯಾಂಕಿನ ಸ್ಥಳೀಯ ಶಾಖೆಯು ಸರಕಾರಿ ಬೆಳೆ ವಿಮೆ ಯೋಜನೆಯಡಿಯಲ್ಲಿ ರೈತರು ಮಾಡಿದ್ದ ಬೆಳೆ ವಿಮೆಯ ಕ್ಲೇಮ್ ಗಳನ್ನು ಪಾವತಿಸುತ್ತಿತ್ತು. “ಮರಳಿ ಬಂದು ಸುಮಾರು ಒಂದು ಗಂಟೆ ಕಾಲ ನಾನು ಸಾಲಿನಲ್ಲಿ ನಿಂತಿದ್ದೆ. ವಿಮೆಯಲ್ಲಿನ ಸ್ವಲ್ಪ ಭಾಗವನ್ನು ಮಾತ್ರ ಬ್ಯಾಂಕು ಬಿಡುಗಡೆ ಮಾಡಿದೆ” ಎಂದು ಹೇಳುತ್ತಾನೆ ಆತ. ಆದರೆ ರಮೇಶನ ದುರಾದೃಷ್ಟವೆಂಬಂತೆ ಹಾಗೆ ಬಿಡುಗಡೆಯಾದ ಹಣ ಅವನಿಗಿಂತ ಮುಂಚೆ ಬಂದು ಟೋಕನ್ ತೆಗೆದುಕೊಂಡವರಿಗೆ ಮಾತ್ರ ಸಿಕ್ಕಿತ್ತು.
ತನಗಿರುವ ಐದು ಎಕರೆ ಹೊಲದಲ್ಲಿ ಜೋಳ, ಗೋಧಿ ಮತ್ತು ಸೋಯಾಬೀನ್ ಬೆಳೆಯುವ ಐವತ್ತು ವರ್ಷದ ಜಗತಾಪ್ ನಿಗೆ ನಾಳೆ ತಾನು ಎದುರಿಸಬೇಕಾದ ಕಷ್ಟಗಳು ಎಷ್ಟು ಅನ್ನುವುದು ಊಹೆಗೂ ನಿಲುಕುವುದಿಲ್ಲ. ಈಗಾಗಲೇ ಆತನಿಗೆ 1.20 ಲಕ್ಷ ರೂಪಾಯಿ ಬ್ಯಾಂಕ್ ಸಾಲ ಇದೆ. 50,000 ರೂಪಾಯಿಗಳನ್ನು ಆತ ಖಾಸಗಿ ಸಾಲದಾರರಿಗೆ ಕೊಡಬೇಕು. “ಹಿಂದಿನ ವರ್ಷಗಳಲ್ಲಿನ ಬರಗಾಲ ಮತ್ತು ಮಗಳ ಮದುವೆಯ ಸಲುವಾಗಿ ನಾನು ಸಾಲ ಮಾಡಿದ್ದೆ. ಸಾಲದಾರರು ನಿತ್ಯವೂ ನಮ್ಮನ್ನು ಬಾಯಿಗೆ ಬಂದಂತೆ ಬೈಯ್ಯುತ್ತಾರೆ. ನನ್ನ ಹೆಂಡತಿಯ ಜೊತೆ ಜಗಳ ಶುರುವಾಗಿದ್ದು ಇದೇ ಕಾರಣದಿಂದ. ಈ ಒತ್ತಡ ಮತ್ತು ಅವಮಾನವನ್ನು ಸಹಿಸಲಾರದೆ ಆಕೆ ಆ ಕ್ಷಣದಲ್ಲಿ ವಿಷ ಕುಡಿದಳು. ನಾನಿನ್ನು ಸಾಲ ಚುಕ್ತಾ ಮಾಡಬೇಕು. ಮುಂದಿನ ಮಳೆಗಾಲದ ಒಳಗೆ ಭೂಮಿಯನ್ನು ಬಿತ್ತನೆಗೆ ತಯಾರು ಮಾಡಬೇಕು” ಎಂದು ಪರಿತಪಿಸುತ್ತಾನೆ ರಮೇಶ ಜಗತಾಪ್.
ದುಡ್ಡಿಲ್ಲದೆ ಬೇರೆ ಗತಿ ಇಲ್ಲ ಅನ್ನುವ ಹತಾಶೆಯೇ ಹೆಂಡತಿಯನ್ನು ಆಸ್ಪತ್ರೆಯಲ್ಲಿ ಬಿಟ್ಟು ಆತನನ್ನು ಸಾತೇಫಲಕ್ಕೆ ಹೋಗುವಂತೆ ಮಾಡಿದ್ದು. ಅರ್ಹತೆಯನುಸಾರ ಅವನಿಗೆ ಸರಕಾರದಿಂದ 2014-15 ರ ರಾಬಿ ಸೀಸನ್ ಗಾಗಿ ಬೆಳೆ ವಿಮೆಯಡಿಯಲ್ಲಿ 45,000 ರೂಪಾಯಿ ಸಿಗಬೇಕು. ಮಾರ್ಚ್ 4 ರಂದು ಸರಕಾರವು 159 ಕೋಟಿ ರೂಪಾಯಿಗಳನ್ನು ಓಸ್ಮಾನಾಬಾದ್ ಜಿಲ್ಲಾ ಸಹಕಾರಿ ಬ್ಯಾಂಕ್ (ಓಡಿಸಿಸಿ) ನಲ್ಲಿ ಜಮಾ ಮಾಡಿದೆ. ಈ ಮೊತ್ತವು ರಮೇಶನಂತಹ ಸುಮಾರು 2,68,000 ರೈತರಿಗೆ ಸೇರಬೇಕಾದ ಹಣ. ಹೀಗಿದ್ದೂ ಎರಡು ತಿಂಗಳಲ್ಲಿ ಪಾವತಿಯಾಗಿದ್ದು 42 ಕೋಟಿ ಮಾತ್ರ.

ಸಾತೇಫಾಲ್ ಪ್ರದೇಶದ ರೈತನಾದ ಚಂದ್ರಕಾಂತ ಉಗಲೆಗೆ ಬ್ಯಾಂಕಿನ ಕಡೆಯಿಂದ ಬೆಳೆ ವಿಮೆಯ 18,000 ರೂಪಾಯಿಗಳ ಮೊತ್ತವು ಪಾವತಿಯಾಗುವುದು ಇನ್ನೂ ಬಾಕಿ ಇದೆ.
ಅಂದಹಾಗೆ ಸರಕಾರವು 2016-17 ರ ಖಾರಿಫ್ ಸೀಸನ್ ಗಾಗಿ ಏಪ್ರಿಲ್ 5 ರಂದು ಜಮಾ ಮಾಡಿದ 380 ಕೋಟಿ ರೂಪಾಯಿಗಳ ಬೆಳೆ ವಿಮೆಯೂ ಕೂಡ ರೈತರ ಕೈ ಸೇರಿಲ್ಲ.
ಬ್ಯಾಂಕಿನ ‘ನಿಧಾನವೇ ಪ್ರಧಾನ’ ಅನ್ನೋ ವಿಳಂಬ ನೀತಿಯಿಂದ ಬೇಸತ್ತ ರೈತ ಮುಖಂಡ ಸಂಜಯ ಪಾಟೀಲ್ ದೂಧ್ಗಾಂವ್ಕರ್, ಏಪ್ರಿಲ್ 19 ರಂದು ಮೂರು ದಿನಗಳ ಉಪವಾಸ ಸತ್ಯಾಗ್ರಹ ಮಾಡುತ್ತಾನೆ; ಓಡಿಸಿಸಿ ಬ್ಯಾಂಕ್ ಈ ಎಲ್ಲ ದುಡ್ಡನ್ನು ಬೇರೆಲ್ಲೋ ಹೂಡಿಕೆ ಮಾಡಿ ಅದರಿಂದ ಬಂದ ಬಡ್ಡಿಯನ್ನು ತಿನ್ನುತ್ತಿದೆ ಎಂದು ಆಪಾದಿಸುತ್ತಾನೆ. “ಇದು ತುಂಬಾ ಮಹತ್ವದ ಸಮಯ. ಈ ಸಮಯದಲ್ಲಿ ರೈತ ಉದ್ರಿಗಾಗಿ ಎದುರು ನೋಡುತ್ತಾನೆ. ಈಗಿನ ಹಣ ತುಂಬಾ ಸಮಯದವರೆಗೆ ಉಪಯೋಗಿಸಲ್ಪಡುತ್ತದೆ. ಇಷ್ಟಾಗಿ ತನ್ನದೇ ಹಣವನ್ನು ಪಡೆಯಲು ರೈತ ತಿಂಗಳುಗಟ್ಟಲೆ ಏಕೆ ಕಾಯಬೇಕು?” ಅನ್ನುವುದು ಈತನ ಪ್ರಶ್ನೆ. ಮುಂದೆ 15 ದಿನಗಳಲ್ಲಿ ಎಲ್ಲಾ ಬಾಕಿ ಹಣವನ್ನು ಪಾವತಿಸಲಾಗುತ್ತದೆ ಎಂದು ಬ್ಯಾಂಕು ನೀಡಿದ ಭರವಸೆಯ ಮೇಲೆ ಆತ ತನ್ನ ಉಪವಾಸವನ್ನು ಅಲ್ಲಿಗೇ ಬಿಟ್ಟುಬಿಟ್ಟ. ಆದರೆ ಇತ್ತ ಬ್ಯಾಂಕು ತನ್ನ ಮಾತನ್ನು ಉಳಿಸಿಕೊಳ್ಳಲಿಲ್ಲ ಅನ್ನುವುದು ಬೇರೆ ಮಾತು.
ಪದೇ ಪದೇ ಬ್ಯಾಂಕಿಗೆ ಚಕ್ಕರ್ ಹೊಡೆಯಬೇಕಾಗಿ ಬಂದಿದ್ದರಿಂದ ಭೂಮಿಯನ್ನು ಈ ಸಲದ ಖಾರಿಫ್ ಸೀಸನ್ ಗೆ ಹದ ಮಾಡಲು ಸಮಯ ಸಿಗಲಿಲ್ಲ ಎಂದು ಸಾತೇಫಲದ 59 ರ ಪ್ರಾಯದ ಚಂದ್ರಕಾಂತ ಉಗಲೆ ಹೇಳುತ್ತಾನೆ. “ಬೀಜ ಮತ್ತು ಗೊಬ್ಬರವನ್ನು ಕೊಂಡುಕೊಳ್ಳುವುದು ಅಷ್ಟು ಸುಲಭವಲ್ಲ. ನಮ್ಮ ಆರ್ಥಿಕ ಸ್ಥಿತಿ ಹೇಗಿದೆ ಅಂತ ಎಲ್ಲರಿಗೂ ಗೊತ್ತು ಸ್ವಾಮಿ. ದುಡ್ಡಿರುವ ರೈತನನ್ನು ಯಾರೂ ನಂಬುವುದಿಲ್ಲ”, ಎಂಬುದು ಆತನ ಅಂಬೋಣ. ಅಂದಹಾಗೆ ಈತನಿಗೆ ಬ್ಯಾಂಕಿನ ಕಡೆಯಿಂದ ಬೆಳೆ ವಿಮೆಯ 18,000 ರೂಪಾಯಿಗಳ ಮೊತ್ತವು ಪಾವತಿಯಾಗುವುದು ಇನ್ನೂ ಬಾಕಿ ಇದೆ.
ಭಾರತೀಯ ರಿಸರ್ವ್ ಬ್ಯಾಂಕ್ ಬೇಕಾದಷ್ಟು ನೋಟುಗಳನ್ನು ಬಿಡುಗಡೆ ಮಾಡಿಲ್ಲ. ಹೀಗಾಗಿ ನಮಗೆ ಪಾವತಿ ಮಾಡಲು ಕಷ್ಟವಾಗುತ್ತಿದೆ ಎಂದು ಹೇಳುವ ಓಡಿಸಿಸಿಯ ಮುಖ್ಯಾಧಿಕಾರಿ (ಆಡಳಿತ ಮತ್ತು ಖಾತೆ) ವಿ.ಬಿ. ಚಂದಕ್, “ಎಷ್ಟು ಸಾಧ್ಯವಿದೆಯೋ ಅಷ್ಟು ತ್ವರಿತವಾಗಿ ನಾವು ಹಣ ನೀಡುತ್ತಾ ಇದ್ದೇವೆ. 15 ದಿನಗಳ ಒಳಗೆ ಈ ಮೊತ್ತವನ್ನು ಪಾವತಿಸುವ ಪ್ರಕ್ರಿಯೆಯನ್ನು ಮುಗಿಸಿಬಿಡುತ್ತೇವೆ” ಎನ್ನುತ್ತಾರೆ.
ಚಂದಕ್ ರವರು ತನ್ನ ಬ್ಯಾಂಕನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸುತ್ತಿರುವಾಗಲೇ ಸುಮಾರು 10-15 ಜನ ಬ್ಯಾಂಕಿನ ಕೊಠಡಿಯೊಳಗೆ ಆವೇಶದಿಂದ ನುಗ್ಗುತ್ತಾರೆ. ತಮ್ಮಲ್ಲಿರುವ ಕಾಗದ ಪತ್ರಗಳನ್ನು ಅವರ ಮುಖದ ಮೇಲೆಸೆದು ನಮ್ಮೆಲ್ಲ ಯೋಜನೆಗಳನ್ನು ಬುಡಮೇಲು ಮಾಡಿದ್ದೀರಿ ಎಂದು ಆಪಾದಿಸಿ, ದುಡ್ಡು ಕೊಡಲೇ ಬೇಕು ಅಂತಾ ಪಟ್ಟು ಹಿಡಿಯುತ್ತಾರೆ. ಅವರೆಲ್ಲ ತಮ್ಮ ಅವಧಿ ಮುಕ್ತಾಯಗೊಂಡ ಠೇವಣಿ (ಫಿಕ್ಸೆಡ್ ಡೆಪಾಸಿಟ್) ಗಳನ್ನು ವಾಪಸ್ ಪಡೆಯಲು ಬಂದಿದ್ದಾರೆ. ಅವುಗಳಲ್ಲಿ ಕೆಲವಂತೂ ವರ್ಷಗಳ ಹಿಂದೆಯೇ ತಮ್ಮ ಅವಧಿಯನ್ನು ಪೂರೈಸಿವೆ. ಹೀಗೆ ಬಂದವರಲ್ಲಿ 45 ವರ್ಷದ ವಿಧವೆ ಸುನೀತಾ ಜಾಧವ್ ಸಹ ಒಬ್ಬಳು. ಆಕೆ ತನ್ನ ಠೇವಣಿಯ 30,000 ರೂಪಾಯಿಗಳನ್ನು ತೆಗೆದುಕೊಂಡು ಹೋಗಲು ಬಂದಿದ್ದಾಳೆ. ಅವಳ ಠೇವಣಿಯ ಅವಧಿ ಒಂದು ವರ್ಷದ ಹಿಂದೆಯೇ ಮುಗಿದಿದೆ. “ನನ್ನ ಮಗಳ ಮದುವೆ ಮೇ 7 ಕ್ಕೆ ನಿಗದಿಯಾಗಿದೆ. ಇಂದು ನಾನು ಹಣ ಪಡೆಯದೇ ಮನೆಗೆ ಮರಳಲಾರೆ" ಅನ್ನುವುದು ಅವಳ ದೃಢ ಮಾತು.

“ನನ್ನ ಮಗಳ ಮದುವೆ ಮೇ 7 ಕ್ಕೆ ನಿಗದಿಯಾಗಿದೆ. ಇಂದು ನಾನು ಹಣ ಪಡೆಯದೇ ಮನೆಗೆ ಮರಳಲಾರೆ", ಅನ್ನುತ್ತಿದ್ದಾರೆ ಜಲ್ಕುತ್ ಗ್ರಾಮದ ಸುನೀತಾ ಜಾಧವ್.
ಸುನೀತಾ ಜಾಧವ್ ಓಸ್ಮಾನಾಬಾದ್ ನಗರದಿಂದ ಸುಮಾರು 50 ಕಿಲೋಮೀಟರು ದೂರದಲ್ಲಿರುವ ಜಲ್ಕುತ್ ಗ್ರಾಮಕ್ಕೆ ಸೇರಿದವಳು. ಅವಳು ಬ್ಯಾಂಕಿಗೆ ಬರುವ ಸಲುವಾಗಿ ತನ್ನ ಒಂದು ದಿನದ ದಿನಕೂಲಿಯಾದ ಸುಮಾರು 200 ರೂಪಾಯಿಯನ್ನು ಸಹ ಕಳೆದುಕೊಂಡಿದ್ದಾಳೆ. ಕಳೆದ ಆರು ತಿಂಗಳುಗಳಲ್ಲಿ ಆಕೆ ಓಡಿಸಿಸಿ ಬ್ಯಾಂಕಿಗೆ ಎಷ್ಟೋ ಸಾರಿ ಬಂದು ಹೋಗಿದ್ದಾಳೆ. “ಇಷ್ಟು ದುಡ್ಡು ಕೂಡಿಸಲು ನಾನು ತುಂಬಾ ಕಷ್ಟ ಪಟ್ಟಿದ್ದೇನೆ” ಎಂದು ತನ್ನ ಚೀಲದಿಂದ ಲಗ್ನ ಪತ್ರಿಕೆಯನ್ನು ಹೊರತೆಗೆದು ಅದನ್ನು ತೋರಿಸುತ್ತಾ ಹೇಳುತ್ತಾಳೆ ಸುನೀತಾ. ಇಟ್ಟಿಗೆ ತಯಾರಿಸುವ ಚಿಕ್ಕ ಕಾರ್ಖಾನೆಯಲ್ಲಿ ಈಕೆ ಕೂಲಿ ಕೆಲಸ ಮಾಡುತ್ತಾಳೆ. ಅವಳ ಜೊತೆಯಲ್ಲೇ ಇರುವ ಆಕೆಯ ತಮ್ಮ ಮೊದಲು ಜಲ್ಕುತ್ ನ ಹೋಟೆಲೊಂದರಲ್ಲಿ ಮಾಣಿಯಾಗಿ ಕೆಲಸ ಮಾಡುತ್ತಿದ್ದ, ಈಗ ಕೆಲಸ ಕಳೆದುಕೊಂಡು ಮನೆಯಲ್ಲಿದ್ದಾನೆ. “ನಾನೇ ಬೆವರು ಸುರಿಸಿ ದುಡಿದ ಹಣಕ್ಕಾಗಿ ಭಿಕ್ಷೆ ಬೇಡಲು ಬರುವವರಂತೆ ಇಲ್ಲಿಗೆ ಬರುವುದೆಂದರೆ ನನ್ನಿಡೀ ದಿನದ ಕೂಲಿಯನ್ನು ಕಳೆದುಕೊಂಡಂತೆ. ಹೀಗೆ ಬಂದಾಗಲೆಲ್ಲಾ ಇಲ್ಲಿನ ಬ್ರಾಂಚ್ ಆಫೀಸ್ ನವರು ಹೆಡ್ ಆಫೀಸ್ ಗೆ ಹೋಗು ಅನ್ನುತ್ತಾರೆ, ಅಲ್ಲಿಯವರು ಬ್ರಾಂಚ್ ಆಫೀಸ್ ನಲ್ಲಿ ಹೋಗಿ ಕೇಳಿ ಅಂತ ಹೇಳುತ್ತಾರೆ”, ಸುನೀತಾ ತಮ್ಮ ಮುಗಿಯದ ವ್ಯಥೆಯನ್ನು ಹೇಳುತ್ತಾ ಹೋಗುತ್ತಾರೆ.
ಅವರೆಲ್ಲರೂ ಹೇಳುವ ಮಾತನ್ನು ತಾಳ್ಮೆಯಿಂದ ಕೇಳಿಸಿಕೊಳ್ಳುವ ಚಂದಕ್ ಸದ್ಯ ಬ್ಯಾಂಕಿನಲ್ಲಿ ಹಣ ಇಲ್ಲ ಎಂದು ವಿನಯದಿಂದ ಹೇಳುತ್ತಾರೆ. ಅವರ ಮಾತಿನಲ್ಲೂ ಸತ್ಯಾಂಶವಿದೆ. ಓಡಿಸಿಸಿಯ ಪರಿಸ್ಥಿತಿ ಹದಗೆಟ್ಟು ಹೋಗಿದೆ ಎಂದರೂ ಕಮ್ಮಿಯೇ. ಬ್ಯಾಂಕು ಒಂದು ಕಡೆ ಸುಮಾರು 400 ಕೋಟಿ ರೂಪಾಯಿಗಳಷ್ಟು ಸ್ಥಿರ ಠೇವಣಿಯನ್ನು ಪಾವತಿಸಲು ವಿಫಲವಾಗುತ್ತಿದ್ದರೆ ಅದೇ ಇನ್ನೊಂದು ಕಡೆ 500 ಕೋಟಿ ರೂಪಾಯಿಯ ವ್ಯವಸಾಯೇತರ ಸಾಲವನ್ನು ಬರಬೇಕಾದವರಿಂದ ವಸೂಲಿ ಮಾಡಲಾಗದೆ ಹೆಣಗಾಡುತ್ತಿದೆ. ಇದರಲ್ಲಿ ತೆರಣಾ ಮತ್ತು ತುಳಜಾಭವಾನಿಯಲ್ಲಿನ ಎರಡು ಸಕ್ಕರೆ ಕಾರ್ಖಾನೆಗಳ ಸಾಲವೇ 382 ಕೋಟಿಗಳಷ್ಟಿದೆ.
ಅಷ್ಟಕ್ಕೂ ಓಡಿಸಿಸಿ ಬ್ಯಾಂಕ್ ರೈತರಿಗೆ ನೀಡಿದ ಸಾಲವು (ಇದನ್ನು 467 ವಿವಿಧ ಕಾರ್ಯಕಾರಿ ಸೇವಾ ಸೊಸೈಟಿಗಳ ಮೂಲಕ ನೀಡಲಾಗಿದೆ) ಒಂದು ದೊಡ್ಡ ಮಟ್ಟದ ಹಗರಣದತ್ತ ಬೊಟ್ಟು ಮಾಡುತ್ತಿದೆ. ರೈತರ ಸಾಲಕ್ಕಿಂತಲೂ 200 ಕೋಟಿ ರೂಪಾಯಿ ಅಧಿಕ ಮೊತ್ತವನ್ನು ಈ ಸೊಸೈಟಿಗಳು ಬ್ಯಾಂಕಿಗೆ ಪಾವತಿಸಬೇಕು. ಈ ದುಡ್ಡೆಲ್ಲ ಎಲ್ಲಿಗೆ ಹೋಯಿತು ಅನ್ನುವುದು ಅವರವರ ಊಹೆಗೆ ಬಿಟ್ಟದ್ದು.
ಈ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಬಗೆ ಹೇಗೆ ಅನ್ನುವುದನ್ನು ಯೋಚಿಸುವ ಬದಲು, ಓಡಿಸಿಸಿ ಬ್ಯಾಂಕು ಒಟ್ಟು 180 ಕೋಟಿ ಪಾವತಿಸಬೇಕಾಗಿರುವ ಸುಮಾರು 20,000 ರೈತರನ್ನು ಬೆದರಿಸಿ, ಸಾರ್ವಜನಿಕವಾಗಿ ಅವಮಾನಿಸಿ ನವೆಂಬರ್ ತಿಂಗಳ ಮಧ್ಯದಲ್ಲಿ ಅವರವರ ಮನೆಗಳಿಗೆ ನೋಟೀಸುಗಳನ್ನು ಕಳಿಸಿದೆ. ಮುಂದೆ ಇದು ಮಾಧ್ಯಮಗಳಲ್ಲಿ ಸುದ್ದಿಯಾದ ನಂತರ ಬ್ಯಾಂಕ್ ತನ್ನ ಬೆದರಿಕೆಯನ್ನು ಸದ್ದಿಲ್ಲದೆ ಹಿಂತೆಗೆದುಕೊಂಡಿತು. “ವ್ಯವಸಾಯೇತರ ಸಾಲವೆಲ್ಲಾ ಪ್ರಭಾವಿ (ರಾಜಕೀಯದ ಸಂಪರ್ಕವಿರುವ) ವ್ಯಕ್ತಿಗಳಿಗೆ ಸೇರಿದ್ದು. ''ಇಂಥವರ ಬಳಿ ಸಾಲದ ಬಗ್ಗೆ ನೆನಪಿಸಲು ಹೋದಾಗ `ಇಲ್ಲೇ ಅಕ್ಕಪಕ್ಕದಲ್ಲಿದ್ದೆವು. ಹಾಗೇ ಮಾತಾಡಿಹೋಗೋಣ ಅನ್ನಿಸಿತು' ಎಂದು ನೆಪ ಹೇಳುತ್ತಾ ಸಾಲದ ವಿಷಯವನ್ನು ಮಾತಿನ ಮಧ್ಯದಲ್ಲಿ ಹೇಗೋ ತೂರಿಸಿಬಿಡುತ್ತೇವೆ'', ಎಂದು ಬ್ಯಾಂಕ್ ಅಧಿಕಾರಿಯೊಬ್ಬರು ಹೇಳುತ್ತಾರೆ.

ಓಡಿಸಿಸಿ ಬ್ಯಾಂಕಿನಲ್ಲಿ ತಮ್ಮ ಹಣವನ್ನು ವಾಪಸ್ ಕೇಳುತ್ತಿರುವ ಆವೇಶಭರಿತ ಠೇವಣಿದಾರರು
ಸಾಲವನ್ನು ಪ್ರಭಾವಿ ಡಿಫಾಲ್ಟರುಗಳಿಂದ ವಸೂಲಿ ಮಾಡುವ ಬದಲು, ಓಡಿಸಿಸಿ ಬ್ಯಾಂಕ್ ಬೆಳೆ ವಿಮೆಯ ಮೊತ್ತವನ್ನು ರೈತರ ಸಾಲಕ್ಕೆ ‘ಅಡ್ಜಸ್ಟ್’ ಮಾಡಿಕೊಂಡಿದೆ. ‘ಅಡ್ಜಸ್ಟ್’ ಮಾಡಿಕೊಳ್ಳುವುದು ಅಂದರೆ ಬೆಳೆ ವಿಮೆಯಿಂದ ಬಂದ ಹಣವನ್ನು ಅವರ ಬೆಳೆ ಸಾಲದ ಹಣದ ಭಾಗಶಃ ಮರುಪಾವತಿ ಎಂದು ಬ್ಯಾಂಕ್ ಇರಿಸಿಕೊಂಡಿದೆ. “ಮಾರ್ಚ್ 12 ರಂದು ಕಲೆಕ್ಟರ್ ಸಾಹೇಬರು 50 ಪ್ರತಿಶತದವರೆಗಿನ ಮೊತ್ತವನ್ನು ‘ಅಡ್ಜಸ್ಟ್’ ಮಾಡಿಕೊಳ್ಳಬಹುದು ಅಂತ ಹೇಳಿದ್ದರು. ಆದರೆ ಮಾರ್ಚ್ 31 ರ ವೇಳೆಗೆ ಉನ್ನತ ಮಟ್ಟದ ನಿರ್ಧಾರಗಳೂ ಬದಲಾದವು. ಒಂದು ವೇಳೆ ಸರಕಾರದಿಂದ ಅಧಿಕೃತವಾಗಿ ಏನಾದರೂ ಆದೇಶ ಬಂದಿದ್ದೇ ಆದರೆ ಹಾಗೆ ಅಡ್ಜಸ್ಟ್ ಮಾಡಿಕೊಂಡ ಮೊತ್ತವನ್ನು ಹಿಂದಿರುಗಿಸುತ್ತೇವೆ” ಎನ್ನುತ್ತಾರೆ ಚಂದಕ್.
ಕಳೆದ ಆರು ತಿಂಗಳಲ್ಲಿ ವ್ಯವಸಾಯೇತರ ಸಾಲದಲ್ಲಿ ಕನಿಷ್ಠ 50 ಲಕ್ಷವನ್ನೂ ವಸೂಲಿ ಮಾಡದೆ 22-31 ಮಾರ್ಚ್ ಅವಧಿಯಲ್ಲಿ ವಿಮೆಯ 5 ಕೋಟಿ ರೂಪಾಯಿಯನ್ನು ಸರಕಾರ ಈ ರೀತಿಯಾಗಿ ಬೇರೆ ಕಡೆ ತಿರುಗಿಸಿದ್ದುದರಲ್ಲಿ ಯಾವುದೇ ಆಶ್ಚರ್ಯವಿಲ್ಲ ಎಂದು ಹೇಳುತ್ತಾರೆ ದೂಧ್ಗಾಂವ್ಕರ್.
ಓಡಿಸಿಸಿ ಬೇರೆ ರೀತಿಯಿಂದಲೂ ರೈತರ ಮೇಲಿನ ಒತ್ತಡವನ್ನು ಇನ್ನಷ್ಟು ತೀವ್ರಗೊಳಿಸುತ್ತಿದೆ. ಕೆಲ ವರ್ಷಗಳ ಹಿಂದೆ ರೈತರ ಬೆಳೆ ಸಾಲ ಮತ್ತು ಕಂತಿನ ಸಾಲವನ್ನು ಕ್ರೋಢೀಕರಿಸಿ ರೈತರ ಒಟ್ಟು ಸಾಲವನ್ನು ಬ್ಯಾಂಕ್ ಪುನಾರಚನೆ ಮಾಡಿತ್ತು. ಬೆಳೆ ಸಾಲದ (ಬೀಜ, ರಸಗೊಬ್ಬರ ಕೊಳ್ಳುವಿಕೆಯಂತಹ ಬೇಸಾಯಕ್ಕೆ ಸಂಬಂಧಿಸಿದ ಕೆಲಸಗಳಿಗಾಗಿ) ಮೇಲಿನ ಬಡ್ಡಿದರ 7 ಪ್ರತಿಶತವಾದರೆ ಅದರಲ್ಲಿ 4 ಪ್ರತಿಶತವನ್ನು ರಾಜ್ಯ ಸರಕಾರವು ಭರಿಸುತ್ತದೆ. ನಿರ್ಧಿಷ್ಟ ಅವಧಿಯವರೆಗಿನ ಕಂತಿನ ಸಾಲ (ಬಂಡವಾಳಕ್ಕಾಗಿ ಉಪಯೋಗಿಸುವ) ದ ಬಡ್ಡಿದರವು ಇದರ ದುಪ್ಪಟ್ಟಿದೆ. ಇವೆರಡನ್ನೂ ಕ್ರೋಢೀಕರಿಸಿ ಒಂದೇ ಸಾಲವನ್ನಾಗಿ ಮಾಡುವ ಮೂಲಕ, ಬ್ಯಾಂಕು ರೈತರ ಸಾಲವನ್ನು ಮತ್ತಷ್ಟು ದೊಡ್ಡದಾಗಿಸಿದೆ.
ಶೇಲಗಾಂವ್ ಗ್ರಾಮದ 67 ರ ವೃದ್ಧ ಬಾಬುರಾವ್ ನವಲೆ ಹೇಳುವ ಪ್ರಕಾರ ಆತನ ಸಾಲದ ಅಸಲು 4 ಲಕ್ಷ ರೂಪಾಯಿ. ಆದರೆ ಸಾಲ ಪುನಾರಚನೆ ಆದ ಮೇಲೆ ಅದು 17 ಲಕ್ಷಗಳಷ್ಟಾಗಿದೆಯಂತೆ. ಕ್ರೋಢೀಕರಣಕ್ಕೆ ರೈತರ ಸಮ್ಮತಿ ಇತ್ತು ಅಂತ ಬ್ಯಾಂಕ್ ಹೇಳಿದರೆ ತಮಗೆ ಮೋಸವಾಗಿದೆ ಎಂದು ರೈತರು ಹೇಳುತ್ತಿದ್ದಾರೆ. “ದಾಳಿಯಿಂದ ಮತ್ತು ಮನೆಯನ್ನು ಮುಟ್ಟುಗೋಲು ಹಾಕುವುದರಿಂದ ತಪ್ಪಿಸಿಕೊಳ್ಳಬೇಕೆಂದರೆ ದಸ್ತಾವೇಜಿನ ಮೇಲೆ ಸಹಿ ಮಾಡಿ ಎಂದು ಹೇಳಲಾಗಿತ್ತು.” ಅಂತ ತನ್ನ ನಾಲ್ಕೆಕರೆ ಜಮೀನಿನಲ್ಲಿ ಜೋಳ, ಸಜ್ಜೆ ಮತ್ತು ಗೋಧಿ ಬೆಳೆಯುವ ನವಲೆ ಹೇಳುತ್ತಾರೆ. ಸದ್ಯ ಓಡಿಸಿಸಿಗೆ ಬರಬೇಕಾಗಿರುವ ಈ ಗ್ರಾಮದ ಇಪ್ಪತ್ತೈದು ರೈತರ ಒಟ್ಟು ಸಾಲದ ಬಾಕಿ 2 ಕೋಟಿ ರೂಪಾಯಿ. ಆದರೆ ಕ್ರೋಢೀಕರಣಕ್ಕೂ ಮೊದಲಿದ್ದ ಈ ಮೊತ್ತ ಸುಮಾರು 40 ಲಕ್ಷ ರೂಪಾಯಿಗಳು ಮಾತ್ರ. “ನಮ್ಮ ಸಹಿ ತೆಗೆದುಕೊಳ್ಳುವ ಮೊದಲು ಎಲ್ಲಾ ಮಾಹಿತಿಗಳನ್ನು ನೀಡುವುದು ಬ್ಯಾಂಕಿನ ಜವಾಬ್ದಾರಿಯಲ್ಲವೇ?” ಎಂದು ಕೇಳುತ್ತಾರವರು.

ಶೇಲಗಾಂವ್ ನ ನಿವಾಸಿ ಬಾಬುರಾವ್ ನವಲೆ. ಇವರ ಸಾಲದ 4 ಲಕ್ಷ ರೂಪಾಯಿ ಅಸಲು ಈಗ ಕ್ರೋಢೀಕರಣ, ಸಾಲ ಪುನಾರಚನೆಗಳ ನಂತರ 17 ಲಕ್ಷ ರೂಪಾಯಿಯವರೆಗೆ ಬಂದು ಮುಟ್ಟಿದೆ.
ರೈತರು ಖಾತೆಗಳನ್ನು ಹೊಂದಿರುವ ಮರಾಠಾವಾಡಾದ ಬಹುತೇಕ ಎಲ್ಲಾ ಸಹಕಾರಿ ಬ್ಯಾಂಕುಗಳ ಸ್ಥಿತಿಯೂ ನಾಜೂಕಾಗಿದೆ. ಬಲಿಷ್ಠ ಬಾಕಿದಾರರನ್ನು ಎದುರಿಸಲಾಗದ, ತಮ್ಮ ಆರ್ಥಿಕ ಸಂಕಷ್ಟವನ್ನು ನೀಗಿಸಿಕೊಳ್ಳಲಾಗದ ಸ್ಥಿತಿಯಲ್ಲಿ ಈ ಬ್ಯಾಂಕುಗಳು ನಲುಗುತ್ತಿವೆ. ಯಾವ ರೈತರಿಗೆ ಇವುಗಳು ಬೆನ್ನೆಲುಬಾಗಬೇಕಾಗಿತ್ತೋ, ಅಂತಹ ರೈತರನ್ನು ಖಾಸಗಿಯವರಿಂದ ಸಾಲವನ್ನು ಪಡೆಯುವತ್ತ ಈ ಬ್ಯಾಂಕುಗಳು ನೂಕಿವೆ.
ಇತ್ತ ಸಾತೇಫಲದಲ್ಲಿ ಜಗತಾಪ್ ತನ್ನ ಕಷ್ಟಗಳನ್ನು ಹೇಳಿಕೊಳ್ಳುತ್ತಿರಬೇಕಾದರೆ, ಆಸುಪಾಸಿನಲ್ಲಿ ಸಾಗುತ್ತಿದ್ದ ಕೆಲ ಮೋಟಾರುಬೈಕ್ ಸವಾರರು ಬಂದು ನಮ್ಮನ್ನು ಸೇರಿಕೊಂಡರು. ಅವರಲ್ಲಿ ಪ್ರತಿಯೊಬ್ಬರೂ ಬ್ಯಾಂಕಿನಿಂದ ಮರಳಿ ಬಂದವರೇ. ಕೆಲವರ ಮುಖದಲ್ಲಿ ನಿರಾಳತೆ ಇದ್ದರೆ ಬಹಳಷ್ಟು ಮುಖಗಳು ಮಂಕಾಗಿವೆ. ಅವತ್ತಿನ ದಿನ ಬ್ಯಾಂಕು ಸಾತೇಫಲದ 71 ರೈತರಿಗೆ ಬೆಳೆವಿಮೆಯ ಹಣವನ್ನು ನೀಡಿದೆ. ಜಗತಾಪ್ ಆಸ್ಪತ್ರೆಗೆ ಮರಳಿ ಹೋಗುವ ನಿರ್ಧಾರ ಮಾಡುತ್ತಾನೆ. ಜಗತಾಪ್ ಈಗ ನಮ್ಮಲ್ಲಿ ಕೇಳುತ್ತಿದ್ದಾನೆ, “ವಿಮೆಯ ಹಣ ಬಂತಾ ಅಂತ ನನ್ನ ಹೆಂಡತಿ ಕೇಳುತ್ತಾಳೆ. ಆಕೆಗೆ ನಾನು ಏನು ಹೇಳಲಿ…?”
Translation : Santosh Tamraparni