ಅಂಬಾದಾಸ್ ಕಾಕಡೆ ಲೆಕ್ಕಾಚಾರದ ನಡೆಯನ್ನೇ ಇಟ್ಟಿದ್ದರು: ಈ ಬಾರಿಯ ಖಾರಿಫ್ ಋತುವಿನಲ್ಲಿ ಆತ ತನ್ನ ಎರಡನೇ ಬೆಳೆಯನ್ನು ನೆಟ್ಟಾಗಿತ್ತು. ತನ್ನ ಕೃಷಿಯ ಖರ್ಚಿನ ಒಂದು ಭಾಗವನ್ನಾದರೂ ಗಳಿಸಲು ಅವರಿಗಿರುವ ಕೊನೆಯ ಭರವಸೆಯೆಂದರೆ ಇದೊಂದೇ.
ಪರವಾಗಿಲ್ಲ ಎಂಬಂತಹ ಮಳೆಗಾಲದ ಆರಂಭದ ವರ್ಷಧಾರೆಯ ನಂತರ, ಜೂನ್ ತಿಂಗಳ ಮಧ್ಯಭಾಗದ ಆಸುಪಾಸಿನಲ್ಲಿ 83 ರ ಪ್ರಾಯದ ಕೃಷಿಕನೊಬ್ಬರು ಹತ್ತಿ, ಸೋಯಾಬೀನ್, ತೊಗರಿ ಮತ್ತು ಹೆಸರುಗಳನ್ನು ಬೆಳೆದಿದ್ದರು. ಈತ ಪರ್ಭಾನಿ ಜಿಲ್ಲೆಯ ಸೈಲು ತಾಲೂಕಾ ದ ಮೋರೆಗಾಂವ್ ಹಳ್ಳಿಯ ನಿವಾಸಿ. ಆದರೆ ಆಗಸ್ಟ್ ತಿಂಗಳ ಮಧ್ಯದ ಆಸುಪಾಸಿನವರೆಗೂ ಮರಾಠಾವಾಡದಲ್ಲಿ ಕಿಂಚಿತ್ತು ಮಳೆಯೂ ಬಂದಿರಲಿಲ್ಲ. ಪರ್ಭಾನಿ ಸೇರಿದಂತೆ ಈ ಪ್ರದೇಶದ ಬಹುತೇಕ ಭಾಗಗಳಲ್ಲಿ ಬೆಳೆಗಳು ಒಣಗಿಹೋದರೆ, ಉಳಿದವುಗಳ ಬೆಳವಣಿಗೆಯು ಕುಂಠಿತವಾಗಿ ಉಳಿದವು. ಇತ್ತ ಕಾಕಡೆಯವರ ಸೋಯಾ, ತೊಗರಿ ಮತ್ತು ಹೆಸರಿನ ಬೆಳೆಗಳೂ ಕೂಡ ಕುಗ್ಗಿಯೇ ಹೋದವು.
''ನನ್ನ ಬಳಿ 10 ಎಕರೆ ಜಮೀನಿದೆ. ಅದರಲ್ಲಿ ಒಂದು ಎಕರೆಯಷ್ಟಿದ್ದ ಹತ್ತಿಯನ್ನು ನಾನು ಬದಲಾಯಿಸಿ ಆ ಜಾಗದಲ್ಲಿ ಎಲೆಕೋಸನ್ನು ಬೆಳೆದೆ (ಜುಲೈ ತಿಂಗಳ ಕೊನೆಯಲ್ಲಿ). ಇದು ಮೂರು ತಿಂಗಳ ಅವಧಿಯ ಮತ್ತು ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಬೇಡದ ಬೆಳೆ. ಈ ಬಾರಿಯೂ ಮಳೆಯಾಗದಿದ್ದರೆ ನಾನು ಟೊಮ್ಯಾಟೋ (ಇದಕ್ಕೂ ಕೂಡ ಹೆಚ್ಚು ನೀರಿನ ಅವಶ್ಯಕತೆಯಿಲ್ಲ) ಅನ್ನೂ ಕೂಡ ಬೇರ್ಯಾವುದಾದರೂ ಬೆಳೆಯೊಂದಿಗೆ ಬದಲಾಯಿಸುತ್ತೇನೆ'', ಎನ್ನುತ್ತಿದ್ದಾರೆ ಕಾಕಡೆ.
ಒಂದು ಎಕರೆ ಪ್ರದೇಶದಲ್ಲಿ ಈಗಾಗಲೇ ನೆಟ್ಟಿದ್ದ ಹತ್ತಿಯ ಬೆಳೆಯನ್ನು ಬದಲಾಯಿಸಿ ಅಲ್ಲಿ ಎಲೆಕೋಸನ್ನು ನೆಟ್ಟಿದ್ದರಿಂದಾಗಿ ಕಾಕಡೆಯವರಿಗೆ ಈ ಒಂದೆಕರೆ ಪ್ರದೇಶದಲ್ಲಿ ಜೂನ್ ತಿಂಗಳಲ್ಲಿ ಹೂಡಿದ್ದ 15,000 ರೂಪಾಯಿಗಳ ನಷ್ಟವಾಗಿದೆ. ಇನ್ನು ಮಳೆಯ ಸುಳಿವೇ ಇಲ್ಲದೆ ಇಂಥಾ ಒಣಗಿದ ಸ್ಥಿತಿಯೇ ಮುಂದುವರಿದರೆ ಈ ಎಲೆಕೋಸಿಗಾಗಿ ಹಾಕಿದ ಹೆಚ್ಚುವರಿ 15,000 ರೂಪಾಯಿಗಳೂ ಕೂಡ ನಷ್ಟವಾಗುವುದು ಖಚಿತ. ''ಈ ಬಾರಿ ಲಾಭ ಸಿಗುವುದಿಲ್ಲವೆಂದು ನನಗೆ ಗೊತ್ತು'', ಎನ್ನುತ್ತಿದ್ದಾರೆ ಇವರು.

ಈ ಬಾರಿಯ ಖಾರಿಫ್ ಋತುವಿನಲ್ಲಿ ಒಂದು ಎಕರೆ ಹತ್ತಿಯ ಬೆಳೆಯಿದ್ದ ಜಾಗದಲ್ಲಿ ಎಲೆಕೋಸನ್ನು ಬೆಳೆಯುವ ಲೆಕ್ಕಾಚಾರದ ನಡೆಯನ್ನು ಇಟ್ಟ 83 ರ ಪ್ರಾಯದ ಅಂಬಾದಾಸ್ ಕಾಕಡೆ
ಕಾಕಡೆಯವರು ಬ್ಯಾಂಕಿನಿಂದ 3 ಲಕ್ಷಗಳ ಸಾಲವನ್ನು ಮಾಡಿಕೊಂಡಿದ್ದರೆ ಖಾಸಗಿ ಲೇವಾದೇವಿಯವರಿಂದ 5 ಲಕ್ಷಗಳ ಸಾಲವನ್ನು ಹೊಂದಿದ್ದಾರೆ. ''ನನಗೆ ಬಿತ್ತನೆಯ ಖರ್ಚು ಮರಳಿ ಬಂದರೂ ಸಾಕು (ಆ ಒಂದು ಎಕರೆಗೆ ಹಾಕಿದ್ದು). ಪ್ರಕೃತಿಯ ದಯೆಯನ್ನು ನಂಬಿಕೊಂಡು ಬದುಕುತ್ತಿರುವವರು ನಾವು. ಕಳೆದ 10 ವರ್ಷಗಳಿಂದ ಹವಾಮಾನದ ಅನಿಶ್ಚಿತತೆಯು ಗಣನೀಯವಾಗಿ ಹೆಚ್ಚಿದೆ. ಅಕ್ಟೋಬರ್ ನ ರಬಿ ಋತುವು ಬರುವ ಮೊದಲು ಒಂದಿಷ್ಟು ಕಾಸಿಗಾಗಿ ಯಾರಲ್ಲಾದರೂ ಬೇಡುವ ಪರಿಸ್ಥಿತಿಯು ಬರದಿದ್ದರೆ ಅಷ್ಟೇ ಸಾಕು'', ಎಂದು ತಮ್ಮ ಅಳಲನ್ನು ಕಾಕಡೆ ತೋಡಿಕೊಳ್ಳುತ್ತಿದ್ದಾರೆ.
ತನ್ನ ಹತ್ತಿಯ ಬೆಳೆಯ ಕೆಲ ಭಾಗವನ್ನು ಕಾಕಡೆ ಹಾಗೆಯೇ ಕಾಪಿಡುವ ಯೋಚನೆಯಲ್ಲಿದ್ದಾರೆ. ಏಕೆಂದರೆ ತನ್ನ ಎಲ್ಲಾ 10 ಎಕರೆಗಳಲ್ಲಿ ಇತರ ಬೆಳೆಯನ್ನು ಬೆಳೆಯುವ ಸಾಮಥ್ರ್ಯವು ಅವರಿಗಿಲ್ಲ. ಹಾಗೆ ಬೆಳೆಯುವುದೇ ಆದರೆ ಅದಕ್ಕಾಗುವ ಖರ್ಚನ್ನು ಹೊಂದಿಸಲು ಅವರ ಕೈಯಲ್ಲಿ ಕಾಸಿಲ್ಲ. ಆಗಸ್ಟ್ ತಿಂಗಳ ಉತ್ತರಾರ್ಧದಲ್ಲಿ ಮರಾಠಾವಾಡಾದಲ್ಲಾದ ಮಳೆಯ ನಂತರ ಮಳೆಗಾಲವು ಚೆನ್ನಾಗಿಯೇ ಆಗಲಿದೆ ಎಂಬ ಭರವಸೆ ಅವರದ್ದು. ಮಳೆಯು ಮುಂದುವರಿದದ್ದೇ ಆದಲ್ಲಿ ಹತ್ತಿಯ ಬೆಳೆಯನ್ನು ನವೆಂಬರ್ ನಲ್ಲಿ ಕಟಾವು ಮಾಡಿ ತಕ್ಕಮಟ್ಟಿನ ಗಳಿಕೆಯನ್ನು ಪಡೆಯಬಹುದು. ಆದರೆ ಮೊದಲ ಬಿತ್ತನೆಯಲ್ಲಿ ಒಣಗಿಹೋದ ಬೆಳೆಗಳನ್ನಂತೂ ಈಗ ಏನು ಮಾಡಲೂ ಸಾಧ್ಯವಿಲ್ಲ.
ತನ್ನ ಜಮೀನಿನ ಒಂದು ಭಾಗದಲ್ಲಿ 'ದೋಬರ್ ಪೆರ್ನಿ' (ಎರಡನೇ ಸುತ್ತಿನ ಬಿತ್ತನೆ) ಯ ನಿರ್ಧಾರವನ್ನು ಕೈಗೊಂಡು ಕಾಕಡೆಯವರು ತಾನು ಕಟ್ಟಿದ ಬಾಜಿಯನ್ನು ಸೋಲಿನತ್ತ ಕೊಂಡೊಯ್ಯುತ್ತಿದ್ದಾರೆ. ಜೂನ್ ತಿಂಗಳ ಮಧ್ಯಭಾಗದಲ್ಲಿ ಮರಾಠಾವಾಡಾದ ರೈತರು ಖಾರಿಫ್ ಋತುವಿನ ಮೊದಲ ಸುತ್ತಿನ ಬಿತ್ತನೆಯನ್ನು ಮಾಡಿದರೆಂದರೆ ಬೆಳೆಯು ಚೆನ್ನಾಗಿ ಬೆಳೆಯಲು ಒಳ್ಳೆಯ ಮಳೆಯಾಗಲೇಬೇಕು. ಒಂದು ಪಕ್ಷ ಮಳೆಯು ಕಮ್ಮಿಯಾದರೆ ಅಥವಾ ಬರದೇ ಹೋದರೆ ಈ ಬಿತ್ತನೆಯಲ್ಲಿ ಗಳಿಕೆಯು ಚೆನ್ನಾಗಿರುವುದಿಲ್ಲ ಎಂಬುದು ರೈತನಿಗೆ ತಿಳಿದಾಗಿರುತ್ತದೆ. ಇದರ ನಂತರ ಹಿಂಜರಿಕೆಯಿಂದಲೇ ಹೇಗಾದರೂ ಒಂದಿಷ್ಟು ಧೈರ್ಯ ಮತ್ತು ಕಾಸನ್ನು ಒಟ್ಟುಮಾಡಿ ಎರಡನೇ ಸುತ್ತಿನ ಬಿತ್ತನೆಗಾಗಿ ಆಗಸ್ಟ್ ತಿಂಗಳ ಮೊದಲ ವಾರದ ಆಸುಪಾಸಿನಲ್ಲಿ ರೈತ ಹೇಗೋ ತಯಾರಾಗುತ್ತಾನೆ. ಅದೂ ಕೂಡ ಹೂಡಿದ ಅಸಲಾದರೂ ಮರಳಿ ಬರಲಿ ಎಂಬ ಕ್ಷೀಣ ನಿರೀಕ್ಷೆಯೊಂದಿಗೆ. ದೋಬರ್ ಪೆರ್ನಿಯ ನಂತರ ಮಳೆಯಾದರೆ ರೈತ ಈ ಜೂಜನ್ನು ಗೆದ್ದಂತೆ. ಆಗದೇ ಹೋದರೆ ಇದು ರೈತನಿಗೆ ಬೀಳುವ ಎರಡನೇ ದೊಡ್ಡ ಹೊಡೆತವಾಗಿ ಪರಿಣಮಿಸುತ್ತದೆ.
''ನಮ್ಮ ಕುಟುಂಬದಲ್ಲಿ ಒಟ್ಟು 16 ಜನರಿದ್ದೇವೆ. ನನ್ನ ಮೂವರು ಗಂಡುಮಕ್ಕಳಿಗೂ ಮದುವೆಯಾಗಿದೆ. ಒಂದಿಷ್ಟು ಹೆಚ್ಚುವರಿ ಸಂಪಾದನೆಗಾಗಿ ಮೂವರು ಆಸುಪಾಸಿನ ಹಳ್ಳಿಗಳಲ್ಲಿ ಕೃಷಿಕಾರ್ಮಿಕರಾಗಿ ದುಡಿಯುತ್ತಾರೆ. ವಿದ್ಯಾಭ್ಯಾಸ ಮಾಡುವ ನನ್ನ ಮೊಮ್ಮಕ್ಕಳು ಆಗಾಗ ನನಗೆ ಸ್ವಲ್ಪ ನೆರವಾಗುತ್ತಾರೆ. ಅವರು ಎಳೆಯ ವಯಸ್ಸಿನವರು'', ಎನ್ನುವ ಕಾಕಡೆ 80 ರ ಈ ಇಳಿವಯಸ್ಸಿನಲ್ಲೂ ಮೆಲ್ಲನೆ ತನ್ನ ಜಮೀನಿನತ್ತ ನಡೆದುಕೊಂಡು ಹೋಗುತ್ತಾ ಈ ಅನಿಶ್ಚಿತತೆಯು ಅವರನ್ನು ಅದೆಷ್ಟರ ಮಟ್ಟಿಗೆ ಕಂಗಾಲಾಗಿಸುತ್ತದೆ ಎಂಬುದನ್ನು ಹೇಳುತ್ತಿದ್ದಾರೆ.
ಇನ್ನು ಇಲ್ಲಿಂದ 3 ಕಿಲೋಮೀಟರ್ ದೂರಕ್ಕೆ ಹೋದರೆ ಖುಪ್ಸಾ ಎಂಬ ಹೆಸರಿನ ಹಳ್ಳಿಯೊಂದರಲ್ಲಿ 49 ರ ಪ್ರಾಯದ ಸಾಹೇಬರಾವ್ ದಸಾಲ್ಕರ್ ಕಾಕಡೆಯವರ ಹೆಜ್ಜೆಯನ್ನೇ ಅನುಸರಿಸಿದ್ದಾನೆ. ಹತ್ತಿಯನ್ನು ಬೆಳೆಯುತ್ತಿರುವ ತನ್ನ 12 ಎಕರೆ ಭೂಮಿಯಲ್ಲಿ 1.5 ಎಕರೆಯ ಭಾಗವನ್ನು ಆತ ಬದಲಿ ಬೆಳೆಗಾಗಿ ಬದಲಾಯಿಸಿದ್ದಾನೆ; ಈತನಿಗೂ ಕೂಡ ಇತರ ಬೆಳೆಗಳಿಂದ ಏನಾದರೂ ಗಳಿಕೆಯಾಗಬಹುದು ಎಂಬ ನಿರೀಕ್ಷೆ. ''1.5 ಎಕರೆಯ ಭೂಮಿಯಲ್ಲಿ ನನಗೆ 25,000 ರೂಪಾಯಿಗಳ ನಷ್ಟವಾಗಿದೆ. ಈಗ ನಾನು ಆ ಜಾಗದಲ್ಲಿ ಎಲೆಕೋಸನ್ನು ನೆಟ್ಟಿದ್ದೇನೆ. ನಂತರ ಒಳ್ಳೆಯ ಮಳೆಯು ಬಂದಿದ್ದೇ ಆದಲ್ಲಿ ಎಕರೆಯೊಂದಕ್ಕೆ 2-3 ಕ್ವಿಂಟಾಲ್ ಹತ್ತಿಯ ಬೆಳೆಯಾದರೂ ಸಿಗಬಹುದು ಎಂಬ ನಿರೀಕ್ಷೆಯೊಂದಿಗೆ ನಾನು ದೊಡ್ಡ ಪ್ರಮಾಣದಲ್ಲೇನೂ ಹತ್ತಿಯ ಬೆಳೆಯನ್ನು ಎಲೆಕೋಸಿನ ಜೊತೆ ಬದಲಾಯಿಸಿಲ್ಲ (ಮಳೆ ನಿಜಕ್ಕೂ ಚೆನ್ನಾಗಿದ್ದರೆ 6-8 ಕ್ವಿಂಟಾಲ್ ಬೆಳೆಯೂ ಬರಬಹುದು). ಹೀಗಾದರೂ (ಒಂದು ಕ್ವಿಂಟಾಲ್ ಗೆ 4000 ರೂಪಾಯಿಗಳ ದರದಂತೆ) ಕೊಂಚ ಸಂಪಾದನೆಯಾಗಲಿ ಎಂಬ ಲೆಕ್ಕಾಚಾರ ನನ್ನದು'', ಎನ್ನುತ್ತಿದ್ದಾರೆ ಸಾಹೇಬರಾವ್.

ಉತ್ತಮ ಗಳಿಕೆಯ ನಿರೀಕ್ಷೆಯಲ್ಲಿರುವ ಖುಪ್ಸಾ ಹಳ್ಳಿಯ ಸಾಹೇಬರಾವ್ ದಸಾಲ್ಕರ್ 1.5 ಎಕರೆ ಜಾಗದಲ್ಲಿದ್ದ ಹತ್ತಿಯನ್ನು ಬದಲಾಯಿಸಿ ಎಲೆಕೋಸನ್ನು ನೆಟ್ಟಿದ್ದಾನೆ
ಇನ್ನು ಆಹಾರದ ಬೆಳೆಗಳನ್ನು ಬೆಳೆಯುತ್ತಿರುವ ಮರಾಠಾವಾಡಾದ ರೈತರು ಹೆಚ್ಚಿನ ಸಂಕಷ್ಟದಲ್ಲಿರಲು ಕಾರಣವೇನೆಂದರೆ ಈ ಬೆಳೆಗಳನ್ನು ಹೆಚ್ಚು ಕಾಲ ಕೊಳೆಯದಂತೆ ಶೇಖರಿಸಿಡಲಾಗದ ಪರಿಸ್ಥಿತಿ. ಲಾತೂರ್ ಜಿಲ್ಲೆಯ ಜಲ್ಕೋಟ್ ತಾಲೂಕಾ ದ ಮಲಿಹಪ್ಪರ್ಗ ಹಳ್ಳಿಯ ನಿವಾಸಿಯಾಗಿರುವ 35 ರ ಪ್ರಾಯದ ಹರಿ ಕೆಂದ್ರೆ ತನ್ನ ಬೆಳೆಗಳು ಒಣಗಿಹೋದ ಕಾರಣದಿಂದಾಗಿ ಇನ್ಯಾರದ್ದೋ ಜಮೀನಿನಲ್ಲಿ ಕೃಷಿ ಕಾರ್ಮಿಕನಾಗಿ ದುಡಿಯುತ್ತಿದ್ದಾನೆ. ''ದೋಬರ್ ಪೆರ್ನಿಗಾಗಿ ಒಂದಿಷ್ಟು ಕಾಸು ಸಂಪಾದಿಸಲು ಉಳಿದಿರುವ ಒಂದೇ ಮಾರ್ಗವಿದು'', ನೇಗಿಲಿನೊಂದಿಗೆ ಕೆಲಸವನ್ನು ಮಾಡುತ್ತಿರುವಂತೆಯೇ ಆತ ಹೇಳುತ್ತಿದ್ದಾನೆ. ''ನನ್ನ 10 ಎಕರೆ ಭೂಮಿಯಲ್ಲಿ ಬೆಳೆದಿದ್ದ ಸೋಯಾಬೀನ್, ಹೆಸರು, ತೊಗರಿ, ಉದ್ದುಗಳು ಯಾವುದಕ್ಕೂ ಲಾಯಕ್ಕಿಲ್ಲವೆಂಬಂತಾಗಿವೆ. ಇದರಿಂದಾಗಿ ನನಗೆ 60,000 ರೂಪಾಯಿಗಳ ನಷ್ಟವಾಗಿದೆ'', ಎನ್ನುತ್ತಿದ್ದಾನೆ ಆತ.
ಕಡಿಮೆಯಾದ ಮಳೆಯಂತೆಯೇ ಜಲ್ಕೋಟ್ ನಲ್ಲಿರುವ ಜಲಾಶಯಗಳೂ ಕೂಡ ನೀರಪಸೆಯಿಲ್ಲದೆ ಒಣಗಿಹೋಗಿವೆ. ''ಸೂರ್ಯಕಾಂತಿಗೆ ಹೆಚ್ಚಿನ ನೀರಿನ ಅವಶ್ಯಕತೆಯಿಲ್ಲ. ಕಾರ್ಮಿಕನಾಗಿ ದುಡಿದು ದಿನಕೂಲಿಯಾಗಿ ಸಿಗುವ 200 ರೂಪಾಯಿಗಳಿಂದ ನಾನು ಹೇಗೋ ಒಂದಿಷ್ಟು ಹಣವನ್ನು ಹೊಂದಿಸಿಕೊಂಡರೆ ಈ ಬಾರಿ ಸೂರ್ಯಕಾಂತಿಯನ್ನು ನೆಡಲಿದ್ದೇನೆ'', ಎನ್ನುತ್ತಿದ್ದಾನೆ ಕೆಂದ್ರೆ. ಅಕ್ಟೋಬರ್ ನಲ್ಲಿ ಬರುವ ರಬಿ ಋತುವಿನ ಮೊದಲು ಆತನಿಗೆ ಒಂದಿಷ್ಟು ಕಾಸು ಕೈಸೇರಬೇಕೆಂದರೆ ದೋಬರ್ ಪೆರ್ನಿಯನ್ನು ಮಾಡದೆ ಬೇರೆ ವಿಧಿಯಿಲ್ಲ. ''ಈಗಾಗಲೇ ನನ್ನ ತಲೆಯ ಮೇಲೆ 4 ಲಕ್ಷಗಳ ಸಾಲದ ಹೊರೆಯಿದೆ. ಇನ್ನೂ ಹೆಚ್ಚಿನ ಸಾಲವನ್ನು ತೆಗೆದುಕೊಂಡರೆ ನಾನು ಬೀದಿಗೆ ಬೀಳುವುದು ಖಚಿತ. ಹೀಗಾಗಿ ಬೆಳೆಗಳನ್ನು ಬೆಳೆದೇ ನಾನು ಸಾಲವನ್ನು ತೀರಿಸಬೇಕಾಗಿದೆ'', ಎಂದು ಸಮಸ್ಯೆಯ ಗಂಭೀರತೆಯನ್ನು ಕೆಂದ್ರೆ ನಮಗೆ ಮನದಟ್ಟು ಮಾಡುತ್ತಿದ್ದಾರೆ.

ಮಳೆಯ ತೀವ್ರ ಅಭಾವದಿಂದಾಗಿ ಬೆಳೆಗಳು ಒಂದೋ ಸಂಪೂರ್ಣವಾಗಿ ಒಣಗಿಹೋಗಿವೆ ಅಥವಾ ಅವುಗಳ ಬೆಳವಣಿಗೆಯು ಕುಂಠಿತವಾಗಿಬಿಟ್ಟಿವೆ
ಕಳೆದ ವರ್ಷವೂ ಕೂಡ ಮರಾಠಾವಾಡಾದ ರೈತರು ಇಂಥದ್ದೇ ಸಂದಿಗ್ಧದಲ್ಲಿ ಸಿಲುಕಿಕೊಂಡಿದ್ದರು. ಮಳೆಗಾಲದ ಆರಂಭದಲ್ಲಿ ಒಳ್ಳೆಯ ಮಳೆಯಾಗಿ ಭರವಸೆಯನ್ನು ಮೂಡಿಸಿದ್ದು ಹೌದಾದರೂ ನಂತರ ಹಲವು ವಾರಗಳ ಕಾಲ ಒಂದು ತೊಟ್ಟು ಮಳೆಯೂ ಆಗಿರಲಿಲ್ಲ. ಹಲವರು ದೋಬರ್ ಪೆರ್ನಿಯಿಂದಲೂ ತಮ್ಮ ಅದೃಷ್ಟವನ್ನು ಪರೀಕ್ಷಿಸಿಕೊಂಡಿದ್ದರು. ಆದರೆ ಈ ಪ್ರದೇಶವು 2012-2015 ರ ವರೆಗೆ ಸತತ ನಾಲ್ಕು ವರ್ಷಗಳ ಕಾಲ ಬರದಿಂದ ಕಂಗೆಟ್ಟು ಹೈರಾಣಾಗಿದ್ದರಿಂದ ವರ್ಷಗಳು ಕಳೆದಂತೆ ಪ್ರತೀ ಬಿತ್ತನೆಯಲ್ಲೂ ಲಾಭವನ್ನು ಗಳಿಸುವ ರೈತರ ಸಾಮಥ್ರ್ಯಗಳೂ ಕೂಡ ನೆಲಕಚ್ಚಿದ್ದವು. ಹೀಗಾಗಿ 2017 ರಲ್ಲಿ ರೈತರು ತಮ್ಮಲ್ಲಿದ್ದ ಧೈರ್ಯವನ್ನೆಲ್ಲಾ ಒಗ್ಗೂಡಿಸಿಕೊಂಡು ಒಂದು ನಿರ್ಧಾರಕ್ಕೆ ಬಂದಿದ್ದರು. ಬಹಳಷ್ಟು ರೈತರು ಖಾರಿಫ್ ಋತುವಿನಲ್ಲಿ ಲಾಭವಾಗಬಹುದು ಎಂಬ ಆಸೆಯನ್ನೂ ಕೂಡ ಸುಮ್ಮನೆ ಕೈಬಿಟ್ಟರು.
ಬೀದ್ ಜಿಲ್ಲೆಯ ಮಜಲ್ಗಾಂವ್ ನಿವಾಸಿಯಾದ 32 ರ ಪ್ರಾಯದ ಗಣೇಶ್ ಭಾಲೆಕರ್ ಹೇಳುವ ಪ್ರಕಾರ ಖಾರಿಫ್ ಋತುವಿಗಾಗಿ ರೈತರು ಈಗಾಗಲೇ ವಿವಿಧ ಮೂಲಗಳಿಂದ ಸಾಲಗಳನ್ನು ಪಡೆದುಕೊಂಡು ಬಂಡವಾಳವನ್ನು ಹುಟ್ಟಿಸಿರುವುದರಿಂದ ಈ ವರ್ಷ ಎರಡನೇ ಬಿತ್ತನೆಯನ್ನು ಮಾಡುವ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುವ ಗೋಜಿಗೆ ಹೋಗಿರಲಿಲ್ಲ. ''ಮತ್ತಷ್ಟು ಸಾಲ ಮಾಡಿ ಎರಡನೇ ಸುತ್ತಿನ ಬಿತ್ತನೆಯನ್ನೂ ಪ್ರಯತ್ನಿಸುವುದೆಂದರೆ ಅದು ಭಾರೀ ದೊಡ್ಡ ಗಂಡಾಂತರವಾಗಬಹುದು. ಈಗಾಗಲೇ ಸಾಕಷ್ಟು ಸಾಲದ ಹೊರೆಯು ನಮ್ಮ ತಲೆಯ ಮೇಲಿದೆ. ಹೀಗಾಗಿ ಇನ್ನೇನಿದ್ದರೂ ರಬಿ ಋತುವಿಗಾಗಿ ಸಿದ್ಧರಾಗುವುದೇ ಉತ್ತಮ ನಡೆ'', ಎನ್ನುತ್ತಿದ್ದಾನೆ ಭಾಲೆಕರ್.

ಎಡ: ಬೀದ್ ಜಿಲ್ಲೆಯ ಮಜಲ್ಗಾಂವ್ ಹಳ್ಳಿಯಲ್ಲಿ ತನ್ನ ಮಕ್ಕಳೊಂದಿಗೆ ಗಣೇಶ್ ಭಾಲೆಕರ್ ; ಬಲ: ಸುರೇಶ್ ಚೋಲೆ ಮತ್ತು ಆತನ ಪತ್ನಿ ತಮ್ಮ ಜಮೀನಿನಲ್
ಖಾಸಗಿ ಲೇವಾದೇವಿಯವರಿಂದ ಪಡೆದುಕೊಂಡಿರುವ ಸುಮಾರು 1 ಲಕ್ಷದ ಆಸುಪಾಸಿನ ಸಾಲವು ಭಾಲೆಕರ್ ನ ಮೇಲಿದೆ. ಇನ್ನು ಈತ ತನ್ನ ಹೆಸರಿನಲ್ಲಿ ಯಾವುದೇ ಭೂಮಿಯನ್ನು ಹೊಂದಿರದಿದ್ದ ಭೂರಹಿತ ರೈತನಾಗಿದ್ದುದರಿಂದ ಯಾವ ಬ್ಯಾಂಕುಗಳಿಂದಲೂ ಆತನಿಗೆ ಸಾಲ ಸಿಗುವುದಿಲ್ಲ. 18 ಎಕರೆ ಭೂಮಿಯಲ್ಲಿ ವ್ಯವಸಾಯ ಮಾಡುವ ಈತ 13 ಎಕರೆಯಲ್ಲಿ ಕಬ್ಬನ್ನು ಬೆಳೆದರೆ ಉಳಿದ ಐದರಲ್ಲಿ ಸೋಯಾಬೀನ್ ಬೆಳೆಯುತ್ತಾನೆ. ಭೂಮಾಲೀಕರೊಂದಿಗೆ ಮಾಡಿಕೊಂಡಿರುವ ಒಂದು ಒಪ್ಪಂದದಂತಿನ ವ್ಯವಸ್ಥೆಯೊಂದರ ಪ್ರಕಾರ 25% ಖರ್ಚುಗಳನ್ನು ಭಾಲೆಕರ್ ನೋಡಿಕೊಂಡರೆ 75% ಖರ್ಚನ್ನು ಮಾಲೀಕರೇ ನೋಡಿಕೊಳ್ಳುತ್ತಾರೆ. ಇನ್ನು ಲಾಭ-ನಷ್ಟಗಳೂ ಕೂಡ ಇದೇ ಮಾದರಿಯಲ್ಲಿ ಹಂಚಿಕೆಯಾಗುತ್ತವೆ.
''ಐದೆಕರೆ ಸೋಯಾಬೀನ್ ಅಂತೂ ಸಂಪೂರ್ಣವಾಗಿ ಒಣಗಿಯೇ ಹೋಗಿದೆ'', ನಿರ್ಜನ ಬಂಜರಿನಂತೆ ಕಾಣುತ್ತಿರುವ ಜಮೀನಿನತ್ತ ಬೊಟ್ಟು ಮಾಡಿ ತೋರಿಸುತ್ತಿದ್ದಾನೆ ಭಾಲೆಕರ್. ಹೀಗನ್ನುವ ಈತ ತನ್ನ ಮಾತನ್ನು ಮುಂದುವರಿಸುತ್ತಾ ''ಸೋಯಾಬೀನ್ ಗಾಗಿ ಹಾಕಿರುವ 15,000 ಮೊತ್ತವು ಸಂಪೂರ್ಣವಾಗಿ ವ್ಯರ್ಥವಾಗಿದೆ ಎಂದು ನಾನು ಒಪ್ಪಿಕೊಂಡಾಗಿದೆ. ಮಳೆಯ ಕೊರತೆಯು ಕಬ್ಬಿನ ಬೆಳೆಯ ಮೇಲೂ ಕೂಡ ತನ್ನ ಪರಿಣಾಮವನ್ನು ಬೀರಿದೆ. ಈ ಕೋಲಿನ ಮೇಲೆ ಕಾಣುತ್ತಿರುವ ಬಿಳಿಕಲೆಗಳನ್ನು ನೋಡಿ. ಈ ಬಾರಿ ಒಳ್ಳೆಯ ಇಳುವರಿಯು ಸಿಗುವುದು ಕಷ್ಟ'', ಎನ್ನುತ್ತಿದ್ದಾನೆ.
ಇತ್ತ ಜಲ್ಕೋಟ್ ತಾಲೂಕಾದ ಕೊಲ್ನೂರ್ ಹಳ್ಳಿಯ ನಿವಾಸಿಯಾದ ಸುರೇಶ್ ಚೋಲೆಯ ಪರಿಸ್ಥಿತಿಯು ಭಾಲೇಕರ್ ಗಿಂತ ಕೊಂಚ ಭಿನ್ನವಿದೆ. ಒಳ್ಳೆಯ ಮಳೆಯನ್ನವಲಂಬಿಸಿಕೊಂಡು ಲಾಭದ ಲೆಕ್ಕಾಚಾರ ಮಾಡಲು ಆತ ಹತ್ತಿ ಅಥವಾ ಕಬ್ಬಿನಂತಹ ವಾಣಿಜ್ಯ ಬೆಳೆಯನ್ನೇನೂ ಬೆಳೆಯುತ್ತಿಲ್ಲ. ಆತ ತನ್ನ 4.5 ಎಕರೆಯಲ್ಲಿ ಬೆಳೆದ ಸೋಯಾಬೀನ್, ತೊಗರಿ ಮತ್ತು ಜೋಳಗಳು ದಯನೀಯ ಸ್ಥಿತಿಯಲ್ಲಿವೆ. ''ಇವುಗಳನ್ನೊಮ್ಮೆ ನೋಡಿ. ಈ ಹೊತ್ತಿಗೆ (ಆಗಸ್ಟ್ ಮೊದಲ ವಾರಕ್ಕೆ) ಬೆಳೆಯ ಎತ್ತರವು ಸೊಂಟದವರೆಗೆ ಬರಬೇಕಿತ್ತು. ಆದರೆ ಇವುಗಳು ಗುಲ್ಫದವರೆಗೂ ಮೇಲೆ ಬಂದಿಲ್ಲ'', ಎನ್ನುವ ಚೋಲೆಗೆ ಆಗಸ್ಟ್ ನಂತರ ಒಳ್ಳೆಯ ಮಳೆಯಾದರೂ ಕೂಡ ಏನೂ ಪ್ರಯೋಜನವಿಲ್ಲ. ಏಕೆಂದರೆ ಆತ ಬೆಳೆಯುವ ಬೆಳೆಗಳಿಗೆ ಸತತ ಮಳೆಯಾಗುವುದು ಅವಶ್ಯಕ. ''ಬಿತ್ತನೆಯ ಸಮಯದಲ್ಲಿ ಬೀಜಗಳಿಗಾಗಿ, ರಾಸಾಯನಿಕ ಗೊಬ್ಬರಗಳಿಗಾಗಿ, ಕೀಟನಾಶಕಗಳಿಗಾಗಿ ಮತ್ತು ಕಾರ್ಮಿಕರ ಸಂಬಳಗಳಿಗಾಗಿ 45,000 ರೂಪಾಯಿಗಳನ್ನು ವ್ಯಯಿಸಿದ್ದೆ. ಇದರ 10 ಪ್ರತಿಶತವೂ ಮರಳಿ ಬರುವಂತೆ ನನಗೆ ಕಾಣುತ್ತಿಲ್ಲ'', ಎನ್ನುವ ಹತಾಶೆಯಲ್ಲಿದ್ದಾನೆ ಚೋಲೆ.
ಹೀಗಾಗಿಯೇ ಇಲ್ಲಿರುವ ವಿವಿಧ ಸಾಗುವಳಿ ಪ್ರದೇಶಗಳ ರೈತರಂತೆಯೇ ಚೋಲೆಯೂ ಕೂಡ ಗಟ್ಟಿಮನಸ್ಸು ಮಾಡಿ ನಿರ್ಧಾರವನ್ನು ತೆಗೆದುಕೊಳ್ಳಲೇಬೇಕಾದ ಇಕ್ಕಟ್ಟಿಗೆ ಸಿಲುಕಿದ್ದಾನೆ: ಎರಡನೇ ಸುತ್ತಿನ ಬಿತ್ತನೆಯನ್ನು ಮಾಡಬೇಕೇ ಅಥವಾ ನಷ್ಟ ಮಾಡಿಕೊಳ್ಳುವ ಗಂಡಾಂತರಕ್ಕೆ ಬೀಳಬೇಕೇ? ಎಂದು. ''ನನಗೆ ನಿಜಕ್ಕೂ ವಿಶ್ವಾಸವಿಲ್ಲ. ಬರದ ಪರಿಸ್ಥಿತಿಯು ಕೆಟ್ಟದಾಗಿದೆ. ಹೀಗಿರುವಾಗ ಮತ್ತಷ್ಟು ಗಂಡಾಂತರಗಳೊಂದಿಗೆ ಜೂಜಾಡಲು ನನಗೆ ಧೈರ್ಯವಿಲ್ಲ'', ಎನ್ನುತ್ತಿದ್ದಾನೆ ಚೋಲೆ.
ಈ ಸಂಭಾಷಣೆಯು ನಡೆದ ಸುಮಾರು ಎರಡು ವಾರಗಳ ನಂತರ, ಅಂದರೆ ಆಗಸ್ಟ್ ತಿಂಗಳ ಮಧ್ಯದಲ್ಲಿ ಮರಾಠಾವಾಡಾದಲ್ಲಿ ಉತ್ತಮ ಮಳೆಯಾಗಿ ದೋಬರ್ ಪೆರ್ನಿಯನ್ನವಲಂಬಿಸಿದ್ದ ಹಲವು ರೈತರಿಗೆ ನಿರಾಳತೆಯನ್ನು ನೀಡಿತು. ಚೋಲೆಯಂತಹ ಉಳಿದವರು ನಾವೂ ಕೂಡ ಎರಡನೇ ಸುತ್ತಿನ ಬಿತ್ತನೆಯನ್ನು ಮಾಡಬಹುದಾಗಿತ್ತಲ್ಲವೇ ಎಂದು ಈಗ ಯೋಚಿಸುತ್ತಿರಬಹುದು. ಆದರೆ ಪ್ರತೀವರ್ಷವೂ ಇಂಥದ್ದೊಂದು ಜೂಜಿನ ಸನ್ನಿವೇಶದಲ್ಲೇ ಇಲ್ಲಿಯ ರೈತರು ಬದುಕಬೇಕು ಎಂಬುದೇ ವಿಪರ್ಯಾಸ.