"ಈ ಕಾನೂನುಗಳನ್ನು ಹಿಂತೆಗೆದುಕೊಳ್ಳಬೇಕೆಂದು ನಾವು ಆಗ್ರಹಿಸುತ್ತೇವೆ" ಎಂದು ಹರಿಯಾಣ-ದೆಹಲಿ ಗಡಿಯಲ್ಲಿರುವ ಸಿಂಘುವಿನಲ್ಲಿ ಪ್ರತಿಭಟನೆ ನಡೆಸುತ್ತಿರುವ ವಿಶ್ವಜೋತ್ ಗೆರೆವಾಲ್ ಹೇಳುತ್ತಾರೆ. "ನಾವು ನಮ್ಮ ಜಮೀನುಗಳೊಂದಿಗೆ ಭಾವುಕ ಸಂಬಂಧವನ್ನು ಹೊಂದಿದ್ದೇವೆ ಮತ್ತು ಯಾರಾದರೂ ನಮ್ಮ ಭೂಮಿಯನ್ನು ನಮ್ಮಿಂದ ಕಸಿದುಕೊಳ್ಳುವುದನ್ನು ನಾವು ಸಹಿಸಲಾರೆವು.." ಲುಧಿಯಾನ ಜಿಲ್ಲೆಯ ಪಮಾಲ್ ಎಂಬ ಊರಿನ ರೈತರ ಕುಟುಂಬಕ್ಕೆ ಸೇರಿದ 23 ವರ್ಷದ ಗೆರೆವಾಲ್, ಅವರು ತನ್ನ ಊರಿನಲ್ಲಿ ಮೂರು ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸಲು ಸಹಾಯ ಮಾಡಿದ್ದಾರೆ. ಈ ಕೃಷಿ ಕಾನೂನುಗಳನ್ನು ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಸಂಸತ್ತಿನಲ್ಲಿ ಅಂಗೀಕರಿಸಲಾಗಿತ್ತು.
ಅವರ ಕುಟುಂಬದ ಮಹಿಳೆಯರು, ಗ್ರಾಮೀಣ ಭಾರತದಲ್ಲಿ ಕನಿಷ್ಠ 65 ಪ್ರತಿಶತದಷ್ಟು ಮಹಿಳೆಯರಂತೆ (ಜನಗಣತಿ 2011ರ ಹೇಳುವಂತೆ) ನೇರವಾಗಿ ಅಥವಾ ಪರೋಕ್ಷವಾಗಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರಲ್ಲಿ ಹಲವರು ಭೂಮಿಯನ್ನು ಹೊಂದಿಲ್ಲ, ಆದರೆ ಅವರು ಕೃಷಿಯ ಕೇಂದ್ರಬಿಂದುವಾಗಿದ್ದಾರೆ, ಅಲ್ಲಿ ಅವರು ಬಿತ್ತನೆ, ಕಸಿ, ಕೊಯ್ಲು, ಹೊಲದಿಂದ ಮನೆಗೆ ಬೆಳೆ ಸಾಗಣೆ, ಆಹಾರ ಸಂಸ್ಕರಣೆ, ಹೈನುಗಾರಿಕೆ ಹೀಗೆ ಹೆಚ್ಚಿನ ಕೃಷಿ ಸಂಬಂಧಿ ಕೆಲಸವನ್ನು ಮಾಡುತ್ತಾರೆ.
ಜನವರಿ 11ರಂದು, ಭಾರತದ ಸುಪ್ರೀಂ ಕೋರ್ಟ್ ಮೂರು ಕೃಷಿ ಕಾನೂನುಗಳಿಗೆ ತಡೆ ಆದೇಶವನ್ನು ಜಾರಿಗೊಳಿಸಿದಾಗ, ಮುಖ್ಯ ನ್ಯಾಯಮೂರ್ತಿ ಮಹಿಳೆಯರು ಮತ್ತು ವೃದ್ಧರನ್ನು ಪ್ರತಿಭಟನಾ ಸ್ಥಳಗಳಿಂದ ಹಿಂತಿರುಗುವಂತೆ ‘ಮನವೊಲಿಸಬೇಕು’ ಎಂದು ಹೇಳಿದ್ದಾರೆಂದು ವರದಿಯಾಗಿದೆ. ಆದರೆ ಈ ಕಾನೂನುಗಳ ಜಾರಿಗೊಳಿಸುವಿಕೆಯು ಮಹಿಳೆಯರಿಗೆ (ಮತ್ತು ವಯಸ್ಸಾದವರಿಗೆ) ಸಂಬಂಧಿಸಿದೆ ಮತ್ತು ಅದರ ಪರಿಣಾಮ ಅವರ ಮೇಲೂ ಆಗುತ್ತದೆ.
ರೈತರು ವಿರೋಧಿಸುತ್ತಿರುವ ಮೂರು ಕಾನೂನುಗಳೆಂದರೆ: ರೈತ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರೋತ್ಸಾಹ ಮತ್ತು ನೆರವು) ಕಾಯ್ದೆ, 2020 ; ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ 2020ರ ಒಪ್ಪಂದ ಮಸೂದೆ ; ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ, 2020. ಈ ಕಾನೂನುಗಳು ಪ್ರತಿ ಭಾರತೀಯರ ಮೇಲೆ ಪರಿಣಾಮ ಬೀರಲಿರುವುದರಿಂದ ಸಹ ಅವುಗಳನ್ನು ಟೀಕಿಸಲಾಗುತ್ತಿದೆ. ದೇಶದ ಎಲ್ಲಾ ನಾಗರಿಕರ ಕಾನೂನು ನೆರವು ಪಡೆಯುವ ಹಕ್ಕನ್ನು ಈ ಕಾನೂನುಗಳು ಕಸಿದುಕೊಳ್ಳುತ್ತವೆ, ಇದು ಭಾರತದ ಸಂವಿಧಾನದ 32ನೇ ವಿಧಿಯನ್ನು ದುರ್ಬಲಗೊಳಿಸುತ್ತದೆ.
ಈ ಮಸೂದೆಗಳನ್ನು ಮೊದಲು 2020ರ ಜೂನ್ 5ರಂದು ಸುಗ್ರೀವಾಜ್ಞೆಯಾಗಿ ಅಂಗೀಕರಿಸಲಾಯಿತು, ನಂತರ ಸೆಪ್ಟೆಂಬರ್ 14ರಂದು ಕೃಷಿ ಮಸೂದೆಗಳ ಹೆಸರಿನಲ್ಲಿ ಸಂಸತ್ತಿನಲ್ಲಿ ಪರಿಚಯಿಸಲಾಯಿತು ಮತ್ತು ಅದೇ ತಿಂಗಳ 20ರೊಳಗೆ ಕಾನೂನನ್ನು ಅಂಗೀಕರಿಸಲಾಯಿತು. ರೈತರು ಈ ಕಾನೂನುಗಳನ್ನು (ಕೇಂದ್ರ ಸರ್ಕಾರದಿಂದ) ದೊಡ್ಡ ಕಾರ್ಪೊರೇಟ್‌ಗಳು ತಮ್ಮ ಗರಿಷ್ಠ ಶಕ್ತಿಯನ್ನು ರೈತರು ಮತ್ತು ಕೃಷಿಯ ಕಡೆಗೆ ಬಳಸಿಕೊಳ್ಳುವ ವೇದಿಕೆಯಾಗಿ ನೋಡುತ್ತಾರೆ. ಈ ಕಾನೂನುಗಳು ಕನಿಷ್ಟ ಬೆಂಬಲ ಬೆಲೆ (ಎಂಎಸ್‌ಪಿ), ಕೃಷಿ ಉತ್ಪಾದನೆ (ಇಳುವರಿ) ಮಾರುಕಟ್ಟೆ ಸಮಿತಿಗಳು (ಎಪಿಎಂಸಿ), ಮತ್ತು ಸರ್ಕಾರಿ ಖರೀದಿ ಸೇರಿದಂತೆ ರೈತರಿಗೆ ನೀಡುವ ಪ್ರಮುಖ ಬೆಂಬಲ ರೂಪಗಳನ್ನು ಹಾಳುಮಾಡುತ್ತವೆ.
"ಹೊಸ ಕೃಷಿ ಕಾನೂನುಗಳಿಂದ ಮಹಿಳೆಯರು ಹೆಚ್ಚು ತೊಂದರೆಗೀಡಾಗುತ್ತಾರೆ. ಕೃಷಿ ಕೆಲಸದಲ್ಲಿ ಅಷ್ಟೊಂದು ತೊಡಗಿಸಿಕೊಂಡ ನಂತರವೂ ಅವರಿಗೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವಿಲ್ಲ. [ಉದಾಹರಣೆಗೆ] ಅಗತ್ಯ ಸರಕುಗಳ ಕಾಯ್ದೆಯಲ್ಲಿನ ಬದಲಾವಣೆಯು ಆಹಾರದ ಕೊರತೆಯನ್ನು ಉಂಟುಮಾಡುತ್ತದೆ ಮತ್ತು ಮಹಿಳೆಯರು ಅದರ ಭಾರವನ್ನು ಭರಿಸಬೇಕಾಗುತ್ತದೆ” ಎಂದು ಅಖಿಲ ಭಾರತ ಪ್ರಜಾಪ್ರಭುತ್ವ ಮಹಿಳಾ ಸಂಘದ ಪ್ರಧಾನ ಕಾರ್ಯದರ್ಶಿ ಮರಿಯಮ್ ಧವಾಲೆ ಹೇಳುತ್ತಾರೆ.
ಮತ್ತು ಅವರಲ್ಲಿ ಅನೇಕರು - ಯುವತಿಯರು ಮತ್ತು ಹಿರಿಯರು ದೆಹಲಿಯ ಸುತ್ತಮುತ್ತಲಿನ ಆಂದೋಲನ ನಡೆಯುತ್ತಿರುವ ಸ್ಥಳಗಳಲ್ಲಿ ದೃಢವಾಗಿ ನಿಂತಿದ್ದಾರೆ ಮತ್ತು ರೈತರಲ್ಲದ ಇನ್ನೂ ಅನೇಕರು ತಮ್ಮ ಬೆಂಬಲವನ್ನು ತೋರಿಸಲು ಇಲ್ಲಿಗೆ ಬರುತ್ತಿದ್ದಾರೆ. ಮತ್ತು ಕೆಲವರು ವಸ್ತುಗಳನ್ನು ಮಾರಾಟ ಮಾಡಲು, ಒಂದು ದಿನದ ವೇತನವನ್ನು ಗಳಿಸಲು ಅಥವಾ ಲಂಗರ್‌ಗಳಲ್ಲಿ ನೀಡಲಾಗುವ ಹೇರಳವಾದ ಊಟಕ್ಕಾಗಿಯೂ ಅನೇಕರು ಬರುತ್ತಾರೆ.

62 ವರ್ಷದ ಬಿಮಾಲಾ ದೇವಿ (ಕೆಂಪು ಶಾಲು ಹೊದ್ದುಕೊಂಡಿರುವವರು) ಅವರ ಪ್ರತಿಭಟನಾ ನಿರತ ಸಹೋದರರು ಮತ್ತು ಮಕ್ಕಳು ಭಯೋತ್ಪಾದಕರಲ್ಲ ಎಂದು ಮಾಧ್ಯಮಗಳಿಗೆ ತಿಳಿಸುವ ಸಲುವಾಗಿ ಡಿಸೆಂಬರ್ 20ರಂದು ಸಿಂಘು ಗಡಿಗೆ ಬಂದಿದ್ದಾರೆ. ಹರಿಯಾಣದ ಸೋನಿಪತ್‌ನ ಖಾರ್ಖೋಡಾ ತಾಲ್ಲೂಕಿನ ಸೆಹ್ರಿ ಗ್ರಾಮದಲ್ಲಿರುವ ಅವರ ಎರಡು ಎಕರೆ ಜಮೀನಿನಲ್ಲಿ ಅವರ ಕುಟುಂಬ ಭತ್ತ, ಗೋಧಿ ಮತ್ತು ಕಬ್ಬು ಬೆಳೆಯುತ್ತದೆ. "ನಮ್ಮ ಮಕ್ಕಳನ್ನು ಗೂಂಡಾ ಎಂದು ಕರೆಯಲಾಗುತ್ತಿದೆ. ರೈತರು ಭಯೋತ್ಪಾದಕರಲ್ಲ. ಮಾಧ್ಯಮಗಳು ನನ್ನ ಮಕ್ಕಳ ಬಗ್ಗೆ ಮಾತನಾಡುವ ರೀತಿ ನೋಡಿ ನಾನು ಕಣ್ಣೀರು ಹಾಕಿದೆ. ಒಬ್ಬ ಕೃಷಿಕನಂತಹ ಹೃದಯವಂತ ಮನುಷ್ಯನನ್ನು ನೀವು ಎಲ್ಲಿಯೂ ನೋಡಲು ಸಾಧ್ಯವಿಲ್ಲ” ಎಂದು ಬಿಮಲಾ ದೇವಿ ಹೇಳುತ್ತಾರೆ. ಅವರ ಸಹೋದರಿ, 60 ವರ್ಷದ ಸಾವಿತ್ರಿ ಕೂಡ (ನೀಲಿ ಶಾಲು ಹೊದ್ದುಕೊಂಡಿರುವವರು) ಸಿಂಘು ಗಡಿಯಲ್ಲಿ ಅವರೊಂದಿಗೆ ಇದ್ದಾರೆ.

"ನನ್ನ ಹಕ್ಕುಗಳಿಗಾಗಿ, ನನ್ನ ಭವಿಷ್ಯಕ್ಕಾಗಿ ಹೋರಾಡಲು ನಾನಿಲ್ಲಿದ್ದೇನೆ" ಎಂದು 14 ವರ್ಷದ 9ನೇ ತರಗತಿಯ ವಿದ್ಯಾರ್ಥಿ ಆಲಂಜೀತ್ ಕೌರ್ ಹೇಳುತ್ತಾಳೆ. ಅವಳು ತನ್ನ ತಂಗಿ, ಅಜ್ಜಿ ಮತ್ತು ಹೆತ್ತವರೊಂದಿಗೆ ಸಿಂಘು ಪ್ರತಿಭಟನಾ ಸ್ಥಳದಲ್ಲಿದ್ದಾಳೆ. ಅವರು ಪಂಜಾಬ್‌ನ ಫರೀದ್‌ಕೋಟ್ ತಾಲ್ಲೂಕಿನ ಪಿಪ್ಲಿ ಗ್ರಾಮದವರು. ತಾಯಿ ನರ್ಸ್ ಮತ್ತು ತಂದೆ ಶಾಲಾ ಶಿಕ್ಷಕಿಯಾಗಿದ್ದು ಈ ಕುಟುಂಬಗಳು ತಮ್ಮ ಏಳು ಎಕರೆ ಭೂಮಿಯಲ್ಲಿ ಗೋಧಿ ಮತ್ತು ಭತ್ತವನ್ನು ಬೆಳೆಯುತ್ತವೆ. "ನಾನು ಚಿಕ್ಕವಳಿದ್ದಾಗಿನಿಂದಲೂ, ನನ್ನ ಹೆತ್ತವರಿಗೆ ಹೊಲಗಳಲ್ಲಿ ಸಹಾಯ ಮಾಡುತ್ತಿದ್ದೇನೆ" ಎಂದು ಆಲಂಜಿತ್ ಹೇಳುತ್ತಾಳೆ. "ಅವರು ನಮ್ಮ ರೈತರ ಹಕ್ಕುಗಳ ಬಗ್ಗೆ ನನಗೆ ಶಿಕ್ಷಣ ನೀಡಿದ್ದಾರೆ ಮತ್ತು ನಮ್ಮ ಹಕ್ಕುಗಳನ್ನು ಮರಳಿ ಪಡೆಯುವವರೆಗೆ ನಾವು ಹಿಂತಿರುಗುವುದಿಲ್ಲ. ಈ ಬಾರಿ ನಾವು ರೈತರು ಗೆಲ್ಲುತ್ತೇವೆ. ”

ವಿಶ್ವಜೋತ್ ಗೆರೆವಾಲ್ ಅವರ ಕುಟುಂಬವು ಲುಧಿಯಾನ ಜಿಲ್ಲೆಯ ಪಮಾಲ್ ಗ್ರಾಮದಲ್ಲಿ 30 ಎಕರೆ ಭೂಮಿಯನ್ನು ಹೊಂದಿದೆ, ಅಲ್ಲಿ ಅವರು ಮುಖ್ಯವಾಗಿ ಗೋಧಿ, ಭತ್ತ ಮತ್ತು ಆಲೂಗಡ್ಡೆಗಳನ್ನು ಬೆಳೆಯುತ್ತಾರೆ. ಡಿಸೆಂಬರ್ 22ರಂದು ಮಿನಿ ವ್ಯಾನ್‌ನಲ್ಲಿ ಸಿಂಘುವಿಗೆ ಸಂಬಂಧಿಕರೊಂದಿಗೆ ಬಂದ ಈ 23 ವರ್ಷದ ಯುವತಿ "ಈ ಕೃಷಿ ಕ್ಷೇತ್ರದ ಕಾನೂನುಗಳನ್ನು ಹಿಮ್ಮೆಟ್ಟಿಸಲು ನಾವು ಬಯಸುತ್ತೇವೆ." ಎನ್ನುತ್ತಾರೆ “ನಾವು ನಮ್ಮ ಭೂಮಿಯೊಂದಿಗೆ ಬಹಳ ಭಾವನಾತ್ಮಕ ಸಂಬಂಧವನ್ನು ಹೊಂದಿದ್ದೇವೆ ಮತ್ತು ಅದನ್ನು ನಮ್ಮಿಂದ ಯಾರಾದರೂ ಕಿತ್ತುಕೊಳ್ಳುವುದನ್ನು ನಾವು ಸಹಿಸುವುದಿಲ್ಲ. ನಮ್ಮ ಸಂವಿಧಾನದಲ್ಲಿ ಪ್ರತಿಭಟಿಸುವ ಹಕ್ಕಿದೆ ಎಂದು ಬರೆಯಲಾಗಿದೆ. ಇದು ಅತ್ಯಂತ ಶಾಂತಿಯುತ ಪ್ರತಿಭಟನೆ. ಲಂಗರ್‌ನಿಂದ ವೈದ್ಯಕೀಯ ನೆರವಿನವರೆಗೆ ಎಲ್ಲವನ್ನೂ ಇಲ್ಲಿ ಒದಗಿಸಲಾಗಿದೆ. ”

“ನನ್ನ ರೈತರನ್ನು ಬೆಂಬಲಿಸಲು ನಾನು ಇಲ್ಲಿಗೆ ಬಂದಿದ್ದೇನೆ.ಈ ಕಾನೂನುಗಳು ಎಲ್ಲರ ಮೇಲೂ ಹಾನಿಯನ್ನುಂಟುಮಾಡುತ್ತವೆಯಾದರೂ ಈ ಕಾನೂನುಗಳು ರೈತರ ಮೇಲೆ ಮಾತ್ರ ಪರಿಣಾಮ ಬೀರುತ್ತವೆ ಎಂದು ಜನರು ಭಾವಿಸುತ್ತಾರೆ” ಎಂದು ಪಂಜಾಬ್‌ನ ಫರೀದ್‌ಕೋಟ್ ಜಿಲ್ಲೆಯ ಫರೀದ್‌ಕೋಟ್ ತಹಸಿಲ್‌ನ ಕೋಟ್ ಕಪುರಾ ಗ್ರಾಮದ 28 ವರ್ಷದ ಮಣಿ ಗಿಲ್ ಹೇಳುತ್ತಾರೆ. ಮಣಿ ಎಂಬಿಎ ಪದವಿ ಹೊಂದಿದ್ದು, ಕಾರ್ಪೊರೇಟ್ ವಲಯದಲ್ಲಿ ಕೆಲಸ ಮಾಡುತ್ತಿದ್ದಾರೆ. "ನಾವು ಗೆಲ್ಲುತ್ತೇವೆ ಎಂದು ನನಗೆ ಖಾತ್ರಿಯಿದೆ" ಎಂದು ಅವರು ಹೇಳುತ್ತಾರೆ. "ದೆಹಲಿಯಲ್ಲಿ ಸಣ್ಣ ಪಂಜಾಬ್ ರಚನೆಯಾಗಿರುವುದು ಹೃದಯಸ್ಪರ್ಶಿಯಾಗಿದೆ. ಇಲ್ಲಿ ನೀವು ಪಂಜಾಬ್‌ನ ಎಲ್ಲಾ ಹಳ್ಳಿಗಳ ಜನರನ್ನು ಕಾಣಬಹುದು." ಯುವಕರು ನಡೆಸುತ್ತಿರುವ ವೇದಿಕೆಯಲ್ಲಿ ಮಣಿ ಸ್ವಯಂಸೇವಕಗಾಗಿದ್ದು, ಇದು ಸಾಮಾಜಿಕ ಮಾಧ್ಯಮದಲ್ಲಿ ರೈತರ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಸಹಾಯ ಮಾಡುತ್ತದೆ. "ಮೂರು ಹೊಸ ಕೃಷಿ ಕಾನೂನುಗಳ ಹೊರತಾಗಿ, ನಾವು ರೈತರ ಇತರ ಪ್ರಮುಖ ಸಮಸ್ಯೆಗಳು ಮತ್ತು ಅವುಗಳ ಪರಿಹಾರಗಳ ಬಗ್ಗೆ ಮಾತನಾಡಲು ಪ್ರಯತ್ನಿಸುತ್ತೇವೆ. ರೈತರು ಪ್ರತಿದಿನ ಎದುರಿಸಬೇಕಾದ ಸಮಸ್ಯೆಗಳನ್ನು ನಾವು ಬೆಳಕಿಗೆ ತರಲು ಪ್ರಯತ್ನಿಸುತ್ತೇವೆ,” ಎಂದು ಅವರು ಹೇಳುತ್ತಾರೆ. ಮಣಿಯ ಪೋಷಕರು ಸಿಂಘುವಿಗೆ ಬರಲು ಸಾಧ್ಯವಾಗಲಿಲ್ಲ, ಆದರೆ, "ಅವರು ಅಷ್ಟೇ ಮುಖ್ಯವಾದ ಕೆಲಸವನ್ನು ಮಾಡುತ್ತಿದ್ದಾರೆಂದು ನಾನು ಭಾವಿಸುತ್ತೇನೆ. ನಾವು ಇಲ್ಲಿದ್ದೇವೆ, ಆದ್ದರಿಂದ [ಹಳ್ಳಿಯಲ್ಲಿ] ಅವರು ಎರಡೆರಡು ಕೆಲಸಗಳನ್ನು ಮಾಡಬೇಕಾಗಿದೆ, ಅವರು ನಮ್ಮ ಜಾನುವಾರು ಮತ್ತು ಹೊಲಗಳನ್ನು ನೋಡಿಕೊಳ್ಳುತ್ತಿದ್ದಾರೆ. ”

ಡಿಸೆಂಬರ್ 15 ರಿಂದ ಸಹಜ್ಮೀತ್ (ಬಲ) ಮತ್ತು ಗುರ್ಲೀನ್ (ಪೂರ್ಣ ಹೆಸರನ್ನು ಉಲ್ಲೇಖಿಸಲಾಗಿಲ್ಲ) ರೈತರ ವಿವಿಧ ಪ್ರತಿಭಟನಾ ಸ್ಥಳಗಳಲ್ಲಿ ಹೋರಾಟದಲ್ಲಿ ಭಾಗವಹಿಸುತ್ತಿದ್ದಾರೆ. "ಪ್ರತಿಭಟನೆಯಲ್ಲಿ ರೈತರಿಗೆ ಹೆಚ್ಚಿನ ಜನರ ಬೆಂಬಲ ಬೇಕು ಎಂದು ತಿಳಿದಿದ್ದರಿಂದ, ಮನೆಯಲ್ಲಿಯೇ ಇರುವುದು ತುಂಬಾ ಕಷ್ಟಕರವಾಗಿತ್ತು" ಎಂದು ಪಂಜಾಬ್‌ನ ಪಟಿಯಾಲದಿಂದ ವಿವಿಧ ಕಾರುಗಳು ಮತ್ತು ಟೆಂಪೋಗಳಲ್ಲಿ ಲಿಫ್ಟ್ ಪಡೆದು ಇಲ್ಲಿಗೆ ಬಂದ 28 ವರ್ಷದ ಸಹಜ್ಮೀತ್ ಹೇಳುತ್ತಾರೆ. ಅವರು ಕೆಲವು ದಿನಗಳ ಕಾಲ ಪಶ್ಚಿಮ ದೆಹಲಿಯ ಟಿಕ್ರಿ ಪ್ರತಿಭಟನಾ ಸ್ಥಳದಲ್ಲಿದ್ದರು, ಅಲ್ಲಿ ಅವರು ಸಮುದಾಯ ಅಡುಗೆಮನೆಯಲ್ಲಿ ಸ್ವಯಂಸೇವಕರಾಗಿ ಕೆಲಸ ಮಾಡುತ್ತಿದ್ದರು. "ನಾವು ಸಹಾಯ ಅಗತ್ಯವಿರುವಲ್ಲೆಲ್ಲ ಹೋಗುತ್ತೇವೆ" ಎಂದು ಅವರು ಹೇಳುತ್ತಾರೆ.
ಪ್ರತಿಭಟನಾ ಸ್ಥಳಗಳಲ್ಲಿ ಮಹಿಳೆಯರಿಗೆ ಶೌಚಾಲಯ ಸಮಸ್ಯೆಯಿದೆಯೆಂದು ಅವರು ಗಮನಸೆಳೆದಿದ್ದಾರೆ. “ಪೋರ್ಟಬಲ್ ಶೌಚಾಲಯಗಳು ಮತ್ತು [ಪೆಟ್ರೋಲ್] ಬಂಕ್‌ಗಳಲ್ಲಿರುವವು ಬಹಳ ಕೊಳಕಾಗಿವೆ. ಇದಲ್ಲದೆ, ಅವು ಮಹಿಳೆಯರು ವಾಸಿಸುವ ಸ್ಥಳದಿಂದ ದೂರವಿದೆ [ಪ್ರತಿಭಟನಾ ಗುಡಾರಗಳು ಮತ್ತು ಟ್ರಾಕ್ಟರ್-ಟ್ರಾಲಿಗಳು]. ನಾವು ತುಲನಾತ್ಮಕವಾಗಿ ಕಡಿಮೆ ಸಂಖ್ಯೆಯಲ್ಲಿರುವುದರಿಂದ, ನಾವು ಉಳಿದುಕೊಂಡಿರುವ ಸ್ಥಳಕ್ಕೆ ಹತ್ತಿರದ ವಾಶ್ ರೂಂ ಅನ್ನು ಬಳಸುವುದು ಸುರಕ್ಷಿತ ಆಯ್ಕೆಯಾಗಿದೆ” ಎಂದು ಪಟಿಯಾಲಾದ ಪಂಜಾಬಿ ವಿಶ್ವವಿದ್ಯಾಲಯದ ಇಂಗ್ಲಿಷ್ ಸಾಹಿತ್ಯದ ಪಿಎಚ್‌ಡಿ ವಿದ್ಯಾರ್ಥಿ ಸಹಜ್ಮೀತ್ ಹೇಳುತ್ತಾರೆ. "ವಾಶ್ ರೂಂ ಬಳಸಲು ಪ್ರಯತ್ನಿಸುತ್ತಿರುವಾಗ, ಒಬ್ಬ ಹಿರಿಯ ವ್ಯಕ್ತಿಯು ನನಗೆ ಹೀಗೆ ಹೇಳಿದರು: "ಮಹಿಳೆಯರು ಇಲ್ಲಿಗೆ ಏಕೆ ಬಂದಿದ್ದಾರೆ? ಈ ಪ್ರತಿಭಟನೆ ಪುರುಷರ ಕೆಲಸ ' ಎಂದು. ಕೆಲವೊಮ್ಮೆ [ರಾತ್ರಿಯಲ್ಲಿ] ನನಗೆ ಅಸುರಕ್ಷಿತ ಭಾವನೆ ಬರುತ್ತದೆ, ಆದರೆ ಇಲ್ಲಿನ ಇತರ ಮಹಿಳೆಯರನ್ನು ನೋಡಿದಾಗ ಧೈರ್ಯ ಬರುತ್ತಿದೆ. ”
ಗುರುದಾಸ್‌ಪುರ ಜಿಲ್ಲೆಯ ಬಟಾಲಾ ತಹಸಿಲ್‌ನ ಮೀಕೆ ಗ್ರಾಮದಲ್ಲಿ ವಾಸಿಸುವ ಆಕೆಯ ಸ್ನೇಹಿತ 22 ವರ್ಷದ ಗುರ್ಲೀನ್ - ಅಲ್ಲಿ ಅವರ ಕುಟುಂಬವು ಎರಡು ಎಕರೆ ಜಮೀನಿನಲ್ಲಿ ಗೋಧಿ ಮತ್ತು ಭತ್ತವನ್ನು ಬೆಳೆಯುತ್ತದೆ - "ನನ್ನ ಎಲ್ಲಾ ಶಿಕ್ಷಣ ವೆಚ್ಚಗಳು ಕೃಷಿಯಿಂದ ಬಂದವು" ಎಂದು ಹೇಳುತ್ತಾರೆ. ನನ್ನ ಕುಟುಂಬ ಕೃಷಿಯ ಮೇಲೆ ಅವಲಂಬಿತವಾಗಿದೆ. ನನ್ನ ಭವಿಷ್ಯ ಮತ್ತು ಏಕೈಕ ಭರವಸೆ ಕೃಷಿ. ಇದು ನನಗೆ ಆಹಾರ ಮತ್ತು ಸುರಕ್ಷತೆ ಎರಡನ್ನೂ ಒದಗಿಸುತ್ತದೆ ಎಂದು ನನಗೆ ತಿಳಿದಿದೆ. ಶಿಕ್ಷಣದ ಕಾರಣದಿಂದಾಗಿ ಸರ್ಕಾರದ ವಿಭಿನ್ನ ನೀತಿಗಳು ನಮ್ಮ ಮೇಲೆ, ವಿಶೇಷವಾಗಿ ಮಹಿಳೆಯರ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ತಿಳಿಯಲು ನನಗೆ ಸಾಧ್ಯವಾಗಿದೆ, ಆದ್ದರಿಂದ ಪ್ರತಿಭಟಿಸುವುದು ಮತ್ತು ಜೊತೆಯಾಗಿ ನಿಲ್ಲುವುದು ಮುಖ್ಯವಾಗಿದೆ. ”

ಹರ್ಷ ಕೌರ್ (ಬಲಗಡೆ) ಸಿಂಘು ಗಡಿಗೆ ಬಂದಿದ್ದು, ಇಲ್ಲಿಂದ ಸುಮಾರು 300 ಕಿ.ಮೀ ದೂರದಲ್ಲಿರುವ ಪಂಜಾಬ್‌ನ ಲುಧಿಯಾನ ನಗರದಿಂದ. 20 ವರ್ಷದ ಕೌರ್ ಯುವ ಸಂಘಟನೆಯೊಂದನ್ನು ಸಂಪರ್ಕಿಸಿದ್ದರು, ಅವರು ತನ್ನ ಸಹೋದರಿಯೊಂದಿಗೆ ಪ್ರತಿಭಟನಾ ಸ್ಥಳದಲ್ಲಿ ತಮ್ಮ ಉಚಿತ ವೈದ್ಯಕೀಯ ಶಿಬಿರದಲ್ಲಿ ಸ್ವಯಂಸೇವಕರಾಗಿ ಸಹಾಯ ಮಾಡಲು ಬಯಸಿದ್ದರು. ವೈದ್ಯಕೀಯ ನೆರವಿನ ಡೇರೆಗಳು ತರಬೇತಿ ಪಡೆದ ದಾದಿಯರನ್ನು ಹೊಂದಿದ್ದು, ಸ್ವಯಂಸೇವಕರಿಗೆ ಔಷಧವನ್ನು ವಿತರಿಸಲು ಸಲಹೆ ನೀಡುತ್ತಾರೆ. ಪತ್ರಿಕೋದ್ಯಮದಲ್ಲಿ ಬಿಎ ವಿದ್ಯಾರ್ಥಿಯಾಗಿರುವ ಹರ್ಷ್ ಹೇಳುತ್ತಾರೆ, “ಈ ಕಾನೂನುಗಳು ರೈತರಿಗೆ ಒಳ್ಳೆಯದೆಂದು ಹೇಳುತ್ತಾ ಸರ್ಕಾರ ನಟಿಸುತ್ತಿದೆ, ಆದರೆ ಅವುಗಳು ಹಾಗಿಲ್ಲ. ಬೇಸಾಯ ಮಾಡುವುದು ರೈತರು, ಅವರಿಗೆ ಯಾವುದು ಒಳ್ಳೆಯದೆಂದು ಅವರಿಗೆ ತಿಳಿದಿದೆ. ಕಾನೂನುಗಳು ಕಾರ್ಪೊರೇಟ್‌ಗಳ ಪರವಾಗಿ ಮಾತ್ರವಿವೆ. ಸರ್ಕಾರ ನಮ್ಮನ್ನು ಬಳಸಿಕೊಳ್ಳುತ್ತಿದೆ, ಇಲ್ಲದಿದ್ದರೆ, ಅವರು ನಮಗೆ ಎಂಎಸ್ಪಿ [ಕನಿಷ್ಠ ಬೆಂಬಲ ಬೆಲೆ]ಯ ಕುರಿತು ಲಿಖಿತವಾಗಿ ಭರವಸೆ ನೀಡುತ್ತಿದ್ದರು. ನಮ್ಮ ಸರ್ಕಾರವನ್ನು ನಂಬಲು ಸಾಧ್ಯವಿಲ್ಲ. "

ಲೈಲಾ (ಪೂರ್ಣ ಹೆಸರು ಲಭ್ಯವಿಲ್ಲ) ಸಿಂಘುವಿನಲ್ಲಿ ಪ್ಲೈಯರ್, ಎಲೆಕ್ಟ್ರಿಕ್ ಲೈಟರ್‌ಗಳು ಮತ್ತು ಎರಡು ರೀತಿಯ ಸ್ಕ್ರೂಡ್ರೈವರ್‌ಗಳನ್ನು ಒಳಗೊಂಡಿರುವ ಟೂಲ್ ಕಿಟ್‌ಗಳನ್ನು ಮಾರಾಟ ಮಾಡುತ್ತಾರೆ. ಪ್ರತಿ ಸೆಟ್‌ಗೆ 100 ರೂಪಾಯಿ ವೆಚ್ಚವಾಗುತ್ತದೆ. ಅವರು ಅದೇ ಬೆಲೆಗೆ ಮೂರು ಜೋಡಿ ಸಾಕ್ಸ್‌ಗಳನ್ನೂ ಮಾರುತ್ತಾರೆ. ಉತ್ತರ ದೆಹಲಿಯ ಸದರ್ ಬಜಾರ್‌ನಿಂದ ವಾರಕ್ಕೊಮ್ಮೆ ಲೈಲಾ ಈ ವಸ್ತುಗಳನ್ನು ಖರೀದಿಸುತ್ತಾರೆ; ಪತಿ ಕೂಡ ಮಮಾರಾಟಗಾನಾಗಿದ್ದು ಲೈಲಾ ತನ್ನ ಪುತ್ರರಾದ 9 ವರ್ಷದ ಮೈಕೆಲ್ (ಕೆನ್ನೇರಳೆ ಜಾಕೆಟ್) ಮತ್ತು 5 ವರ್ಷದ ವಿಜಯ್ (ನೀಲಿ ಜಾಕೆಟ್) ಜೊತೆ ಇಲ್ಲಿದ್ದಾರೆ ಮತ್ತು “ನಾವು ಈ ವಸ್ತುಗಳನ್ನು ಮಾರಾಟ ಮಾಡಲು ಈ ಸಭೆಗೆ ಬಂದಿದ್ದೇವೆ. ಈ [ಪ್ರತಿಭಟನೆ] ಪ್ರಾರಂಭವಾದಾಗಿನಿಂದ ನಾವು ಬೆಳಿಗ್ಗೆ 9ರಿಂದ ಸಂಜೆ 6ರವರೆಗೆ ಇಲ್ಲಿಗೆ ಬರುತ್ತೇವೆ ಮತ್ತು ಪ್ರತಿದಿನ 10-15 ಸೆಟ್‌ಗಳನ್ನು ಮಾರಾಟ ಮಾಡುತ್ತೇವೆ. ”

"ನನ್ನ ಕುಟುಂಬದಲ್ಲಿ ಒಬ್ಬರೂ ರೈತರಿಲ್ಲ. ಈ ವಸ್ತುಗಳನ್ನು ಮಾರಾಟ ಮಾಡುವ ಮೂಲಕ ನಾನು ನನ್ನ ಹೊಟ್ಟೆಹೊರೆದುಕೊಳ್ಳುತ್ತೇನೆ”ಎಂದು ಸಿಂಘು ನಿವಾಸಿ ಗುಲಾಬಿಯಾ (35) ಹೇಳುತ್ತಾರೆ. ಈ ಪ್ರತಿಭಟನಾ ಸ್ಥಳದಲ್ಲಿ ಅನೇಕ ವ್ಯಾಪಾರಿಗಳು ವಿವಿಧ ರೀತಿಯ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ. ಗುಲಾಬಿಯಾ (ಪೂರ್ಣ ಹೆಸರು ಲಭ್ಯವಿಲ್ಲ) ಸಣ್ಣ ಡೋಲುಗಳನ್ನು ಮಾರುತ್ತಾರೆ ಮತ್ತು ಅದರ ಬೆಲೆ ತಲಾ 100 ರೂ. ಅವರ ಇಬ್ಬರು ಗಂಡು ಮಕ್ಕಳು ಕೂಲಿ ಕೆಲಸ ಮಾಡುತ್ತಾರೆ. "ನಾನು [ದಿನಕ್ಕೆ] 100-200 ರೂಪಾಯಿಗಳನ್ನು ಗಳಿಸುತ್ತೇನೆ" ಎಂದು ಅವರು ಹೇಳುತ್ತಾರೆ. "ಯಾರೂ ಈ ಡ್ರಮ್‌ಗಳನ್ನು 100 ರೂಪಾಯಿಗೆ ಖರೀದಿಸುವುದಿಲ್ಲ, ಜನರು ಚೌಕಾಶಿ ಮಾಡುತ್ತಾರೆ, ಹಾಗಾಗಿ ನಾನು 50 ಮತ್ತು ಕೆಲವೊಮ್ಮೆ 40 ರೂಪಾಯಿಗಳಿಗೆ ಮಾರಾಟ ಮಾಡಬೇಕಾಗುತ್ತದೆ."

"ನಾನು ರೊಟ್ಟಿ ತಿನ್ನುವ ಸಲುವಾಗಿ ಇಲ್ಲಿಗೆ ಬಂದಿದ್ದೇನೆ" ಎಂದು ಉತ್ತರ ದೆಹಲಿಯ ನರೇಲಾ ಪ್ರದೇಶದ ಚಿಂದಿ ಆಯುವ ಕೆಲಸ ಮಾಡುವ ಕವಿತಾ (ಪೂರ್ಣ ಹೆಸರು ಲಭ್ಯವಿಲ್ಲ) ಹೇಳುತ್ತಾರೆ. ಅವರು ಸಿಂಘು ಗಡಿಯಲ್ಲಿ ಪ್ಲಾಸ್ಟಿಕ್ ಬಾಟಲಿಗಳನ್ನು ಆಯಲು ಬರುತ್ತಾರೆ. ದಿನದ ಕೊನೆಯಲ್ಲಿ, 60 ವರ್ಷದ ಕವಿತಾ ಈ ಬಾಟಲಿಗಳು ಮತ್ತು ಇತರ ತ್ಯಾಜ್ಯ ವಸ್ತುಗಳನ್ನು ಪ್ರತಿಭಟನಾ ಸ್ಥಳದಿಂದ ಸಂಗ್ರಹಿಸಿ ತನ್ನ ಪ್ರದೇಶದ ಗುಜರಿ ವ್ಯಾಪಾರಿಗಳಿಗೆ 50-100 ರೂಪಾಯಿಗಳಿಗೆ ಮಾರಾಟ ಮಾಡುತ್ತಾರೆ. "ಆದರೆ ಇಲ್ಲಿ ಕೆಲವರು ನನ್ನ ಮೇಲೆ ಕಿರುಚಾಡುತ್ತಾರೆ, ನೀನ್ಯಾಕೆ ಇಲ್ಲಿಗೆ ಬಂದಿರುವೆ ಎಂದು ಕೇಳುತ್ತಾರೆ" ಎಂದು ಅವರು ಹೇಳುತ್ತಾರೆ.

“ಪ್ರತಿಭಟನೆಯಲ್ಲಿ ಭಾಗವಹಿಸುವುದು ನನಗೆ ತುಂಬಾ ಕಷ್ಟಕರವಾಗಿತ್ತು ಏಕೆಂದರೆ ನನ್ನ ಪೋಷಕರು ನಾನು ಇಲ್ಲಿಗೆ ಬರುವುದನ್ನು ಬೆಂಬಲಿಸಲಿಲ್ಲ. ಆದರೆ ನಾನು ಬಂದಿದ್ದೇನೆ ಅದಕ್ಕಾ ಕಾರಣ ರೈತರಿಗೆ ಯುವಕರ ಬೆಂಬಲ ಬೇಕಾಗಿದೆ” ಎಂದು ಪಂಜಾಬ್‌ನ ಫರೀದ್‌ಕೋಟ್ ಜಿಲ್ಲೆಯ ಫರೀದ್‌ಕೋಟ್ ತಹಸಿಲ್‌ನ ಕೋಟ್ ಕಪುರಾ ಗ್ರಾಮದ 24 ವರ್ಷದ ಕೋಮಲ್ ಪ್ರೀತ್ (ಪೂರ್ಣ ಹೆಸರು ಹೇಳಿಲ್ಲ) ಹೇಳುತ್ತಾರೆ. ಅವರು ಡಿಸೆಂಬರ್ 24ರಂದು ಸಿಂಘು ಗಡಿಗೆ ಬಂದರು, ಮತ್ತು ಯುವಕರು ನಡೆಸುವ ವೇದಿಕೆಯೊಂದಿಗೆ ಸ್ವಯಂಸೇವಕರಾಗಿ ಕೆಲಸ ಮಾಡುತ್ತಾರೆ. ಈ ವೇದಿಕೆಯು ಸೋಷಿಯಲ್ ಮೀಡಿಯಾದಲ್ಲಿ ರೈತರ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಸಹಾಯ ಮಾಡುತ್ತದೆ. "ನಾವು ಇಲ್ಲಿ ಇತಿಹಾಸವನ್ನು ಪುನರ್ರಚಿಸುತ್ತಿದ್ದೇವೆ" ಎಂದು ಅವರು ಹೇಳುತ್ತಾರೆ. “ಜನರು ತಮ್ಮ ಜಾತಿ, ವರ್ಗ ಮತ್ತು ಸಂಸ್ಕೃತಿಯನ್ನು ಲೆಕ್ಕಿಸದೆ ಇಲ್ಲಿ ಹಾಜರಿದ್ದಾರೆ. ನಮ್ಮ ಗುರುಗಳು ನ್ಯಾಯಕ್ಕಾಗಿ ಹೋರಾಡಲು ಮತ್ತು ಶೋಷಣೆಗೆ ಒಳಗಾದವರೊಂದಿಗೆ ನಿಲ್ಲಲು ನಮಗೆ ಕಲಿಸಿದ್ದಾರೆ. ”
ಅನುವಾದ - ಶಂಕರ ಎನ್. ಕೆಂಚನೂರು