ಗ್ರೈಂಡ್ ಮಿಲ್ ಸಾಂಗ್ಸ್ ಪ್ರಾಜೆಕ್ಟಿನ ಈ ಆವೃತ್ತಿಯು ನಿಮಗೆ ಮಳೆ ಮತ್ತು ಗದ್ದೆಗಳು, ಉಳುಮೆ ಮತ್ತು ಬಿತ್ತನೆಯ ಮಾಧುರ್ಯವನ್ನು ಉಣಬಡಿಸುತ್ತವೆ. ಇದರಲ್ಲಿ ಜೈ ಸಖಾಲೆ ಅವರ ದನಿಯಲ್ಲಿರುವ ಎಂಟು ಆಡಿಯೊ ದ್ವಿಪದಿಗಳು ಮತ್ತು ಪುಣೆ ಜಿಲ್ಲೆಯ ಮುಲ್ಶಿ ತಾಲ್ಲೂಕಿನ ಲಾವರ್ಡೆ ಗ್ರಾಮದ ಚಾಬಾಬಾಯಿ ಮಾಪ್ಸೆಕರ್ / ಸುತಾರ್ ಅವರ ಮೂರು ವೀಡಿಯೊ ದಾಖಲೆಗಳು ಇವೆ.
ಹಿಂದೂ ಖಗೋಳಶಾಸ್ತ್ರವು 27 ನಕ್ಷತ್ರ ಮಳೆ ನಕ್ಷತ್ರಗಳನ್ನು ಪರಿಗಣಿಸುತ್ತದೆ, ಅದರಲ್ಲಿ ರೋಹಿಣಿ ಮೃಗಶಿರಕ್ಕೆ ಮೊದಲು ಬರುತ್ತದೆ ಮತ್ತು ಎರಡೂ ಮಳೆ ನಕ್ಷತ್ರಗಳಾಗಿವೆ. ರೋಹಿಣಿಯು ಪೂರ್ವ ಮುಂಗಾರು ಅಂದರೆ ಹನಿ ಮಳೆಯನ್ನು ತರುತ್ತದೆ ಆದರೆ ಮೃಗಶಿರ ಮುಂಗಾರು ಮಳೆಯನ್ನು ತರುತ್ತದೆ. ಕೃಷಿ ಮತ್ತು ಕೃಷಿಕರು ಪ್ರಮುಖ ಮಳೆ ನಕ್ಷತ್ರಗಳ ಲೆಕ್ಕವನ್ನು ಹೊಂದಿದ್ದಾರೆ. ಮಳೆ ಬಂದರೆ ರೈತರು ಉಳುಮೆ ಮಾಡಿ ಬಿತ್ತನೆ ಮಾಡುತ್ತಾರೆ. ಮುಂಗಾರು ಪೂರ್ವ ಮಳೆಯು ಬೇಸಿಗೆಯಲ್ಲಿ ಬಿಸಿಯಾದ ಮಣ್ಣನ್ನು ತೇವಗೊಳಿಸುತ್ತದೆ ಮತ್ತು ತಂಪಾಗಿಸುತ್ತದೆ.
ಮಹಾರಾಷ್ಟ್ರದ ಕೆಲವು ಭಾಗಗಳ ಗ್ರಾಮೀಣ ಜಾನಪದದಲ್ಲಿ, ಈ ಎರಡು ಮಳೆ ನಕ್ಷತ್ರಗಳನ್ನು ಸಹೋದರ ಸಹೋದರಿಯರೆಂದು ಪರಿಗಣಿಸಲಾಗುತ್ತದೆ. ಸಂಪ್ರದಾಯದ ಪ್ರಕಾರ, ಸಹೋದರಿ (ರೋಹಿಣಿ) ಚಿಕ್ಕ ವಯಸ್ಸಿನಲ್ಲೇ, ಸಹೋದರನಿಂತ (ಮೃಗಶಿರ) ಮೊದಲು ಮದುವೆಯಾಗುತ್ತಾಳೆ. ಸ್ವಾಭಾವಿಕವಾಗಿ, ಸಹೋದರಿಗಿಂತ ಮೊದಲು ಸಹೋದರಿ ಮಗುವನ್ನು ಹೊಂದಿದ್ದಳು. ಎಂಟು ಲಾವಣಿಗಳ ಈ ಸಂಕಲನದ ಒಂದು ಪ್ರಮುಖ ಲಾವಣಿಯು ಈ ಹೋಲಿಕೆಯನ್ನು ಆಧರಿಸಿದೆ.
ಗ್ರೈಂಡ್ ಮಿಲ್ ಸಾಂಗ್ಸ್ ಪ್ರಾಜೆಕ್ಟ್ ಸಲುವಾಗಿ ಮಹಾರಾಷ್ಟ್ರದ ವಿವಿಧ ಹಳ್ಳಿಗಳ ಸುಮಾರು 97 ಮಹಿಳೆಯರು ಈ ಓವಿಯನ್ನು ಹಾಡಿದರು. ಈ ಆಡಿಯೋಗಳನ್ನು ಜನವರಿ 1996 ಮತ್ತು ಅಕ್ಟೋಬರ್ 1999ರ ನಡುವೆ ರೆಕಾರ್ಡ್ ಮಾಡಲಾಗಿದೆ.
ಗಾಯಕರಲ್ಲಿ ಒಬ್ಬರಾದ ಜೈ ಸಖಾಲೆ 2012ರಲ್ಲಿ ನಿಧನರಾದರು. ಬರ್ನಾರ್ಡ್ ಬೆಲ್ ಮತ್ತು ಗ್ರೈಂಡ್ ಮಿಲ್ ಸಾಂಗ್ಸ್ ಪ್ರಾಜೆಕ್ಟ್ ತಂಡದ ಇತರರು ಅಕ್ಟೋಬರ್ 5, 1999ರಂದು ಅವರು ಹಾಡಿದ ಬೀಸುಕಲ್ಲಿನ ಪದಗಳನ್ನು ರೆಕಾರ್ಡ್ ಮಾಡಿದ್ದರು. ಅದನ್ನು ಈ ಸಂಚಿಕೆಯಲ್ಲಿ ಪ್ರಸ್ತುತಪಡಿಸಲಾಗಿದೆ. ಏಪ್ರಿಲ್ 20, 2017ರಂದು ಪುಣೆ ಜಿಲ್ಲೆಯ ಮುಲ್ಶಿ ತಾಲ್ಲೂಕಿನ ಲಾವರ್ಡೆ ಗ್ರಾಮಕ್ಕೆ ನಾವು ಮತ್ತೆ ಭೇಟಿ ನೀಡಿದಾಗ, ನಾವು ಅವರ ಮಗಳು ಲೀಲಾ ಶಿಂಧೆ ಅವರನ್ನು ಭೇಟಿಯಾದೆವು, ಅವರು ಅವರ ತಾಯಿ ಜೈ ಅವರ ಫ್ರೇಮ್ ಮಾಡಿದ ಛಾಯಾಚಿತ್ರವನ್ನು ನಮಗೆ ತೋರಿಸಿದರು.

ದಿವಂಗತ ಜೈ ಸಖಾಲೆ ಮತ್ತು (ಬಲಕ್ಕೆ) ಅವರ ಮಗಳು ಲೀಲಾ ಶಿಂಧೆ ತನ್ನ ತಾಯಿಯ ಫೋಟೋದೊಂದಿಗೆ
ಅದೇ ಊರಿನಲ್ಲಿ, ನಾವು ಈಗ 74 ವರ್ಷದ ಚಾಬಾಬಾಯಿ ಮಾಪ್ಸೆಕರ್ / ಸುತಾರ್ ಅವರನ್ನು ಭೇಟಿಯಾದೆವು ಮತ್ತು ಅವರು ನಮ್ಮ ಗ್ರೈಂಡ್ ಮಿಲ್ ಹಾಡುಗಳ ಸಂಗ್ರಹದಲ್ಲಿರುವ ಈ ಹಳ್ಳಿಯ11 ಗಾಯಕರಲ್ಲಿ ಒಬ್ಬರು. "ಹಾಡುಗಳು ನನಗೆ ನೆನಪಿಲ್ಲ" ಎಂದು ಅವರು ಮೊದಲಿಗೆ ಹೇಳಿದರು. ನಂತರ ಬೇಸಿಗೆ ಮಳೆಯ ಬಗ್ಗೆ ಅವರಿಗೆ ಯಾವುದಾದರೂ ಹಾಡು ನೆನಪಿದೆಯೇ ಎಂದು ನಾವು ಕೇಳಿದಾಗ, ಕೆಲವು ಹಾಡುಗಳು ಸರಾಗವಾಗಿ ಹರಿದವು.
ಇಲ್ಲಿ ಪ್ರಸ್ತುತಪಡಿಸಲಾಗಿರುವ ವೀಡಿಯೊ - ನಮ್ಮ ಏಪ್ರಿಲ್ 2017 ರ ಭೇಟಿಯ ಸಮಯದಲ್ಲಿ ರೆಕಾರ್ಡ್ ಮಾಡಲಾಗಿದೆ - ಚಬಾಬಾಯಿ ಬಹಳ ಸಮಯದ ನಂತರ ಬೀಸುಕಲ್ಲಿನ ಪದಗಳನ್ನು ಹಾಡಿದ ಉತ್ಸಾಹ ಮತ್ತು ಸಂತೋಷವನ್ನು ತೋರಿಸುತ್ತದೆ.
ನಾವು ಚಬಾಬಾಯಿ ಮತ್ತು ಯುವಕರಿದ್ದಾಗ ಬಡಗಿಯಾಗಿ ಕೆಲಸ ಮಾಡುತ್ತಿದ್ದ ಅವರ ಪತಿ ಗೋಪಾಲ್ ಸುತಾರ್ ಅವರಿಗೆ ವಿದಾಯ ಹೇಳಿ, ಹಳ್ಳಿಯ ಇನ್ನೊಬ್ಬ ಗಾಯಕರನ್ನು ಹುಡುಕಿಕೊಂಡು ಹೊರಟೆವು.

ಚಾಬಾಬಾಯಿ ಮ್ಹಾಪ್ಸೆಕರ್/ಸುತಾರ್ ಮತ್ತು ಆಕೆಯ ಪತಿ ಗೋಪಾಲ್ ಲಾವರ್ಡೆ ಊರಿನ ತಮ್ಮ ಮನೆಯ ಹೊರಗೆ
ಪರಿ ಗ್ರೈಂಡ್ ಮಿಲ್ ಸಾಂಗ್ಸ್ ಸರಣಿಯ ಈ ಆವೃತ್ತಿಯು ಜೈ ಸಖಾಲೆಯವರ ಎಂಟು ಓವಿಗಳನ್ನು ಒಳಗೊಂಡಿದೆ
"ಬಹಳ ಸಮಯದಿಂದ ಮಳೆಯಾಗುತ್ತಿದೆ ಮತ್ತು ನನ್ನ ಮಗ ಹೊಲಗಳಿಗೆ ಹೋಗಿ, ನೇಗಿಲು ಬಳಸಿ ಗೋಧಿಯನ್ನು ಬಿತ್ತುತ್ತಿದ್ದಾನೆ" ಎಂದು ಗಾಯಕಿ ಮೊದಲ ಹಾಡಿನಲ್ಲಿ ಹೇಳುತ್ತಾರೆ. ಎರಡನೆಯದರಲ್ಲಿ ಮೊದಲನೆಯ ಹಾಡಿನಲ್ಲಿ ಒಂದು ಸಣ್ಣ ಬದಲಾವಣೆ ಮಾಡಲಾಗಿದೆ: ಅದು ಮಳೆಯಾಗುತ್ತಿದೆ ಮತ್ತು ಮಗ ಹೊಲದಲ್ಲಿ ಭತ್ತವನ್ನು ಬಿತ್ತುತ್ತಿದ್ದಾನೆ.
ಮೂರನೇ ಪದ್ಯದಲ್ಲೂ ಗಾಯಕಿ ತನ್ನ ಮಕ್ಕಳು ಬೀಜ ಬಿತ್ತನೆಗಾಗಿ ಹೊಲಕ್ಕೆ ಹೋಗಿರುವುದಾಗಿ ಹಾಡುತ್ತಾರೆ.
ನಾಲ್ಕನೇ ಓವಿಯಲ್ಲಿ (ಬೀಸುಕಲ್ಲಿನ ಪದ) , ಜನಪ್ರಿಯ ಮಳೆಹಾಡೊಂದರಲ್ಲಿ, ಮೃಗಶಿರಕ್ಕಿಂತಲೂ ಮೊದಲು ರೋಹಿಣಿ ಮಳೆ ಬರುವುದು ಅಣ್ಣನ ಮನೆಗಿಂತಲೂ ಮೊದಲು ತಂಗಿಯ ಮನೆಯಲ್ಲಿ ತೊಟ್ಟಿಲು ತೂಗುವುದನ್ನು ಸೂಚಿಸುತ್ತದೆ ಎನ್ನುತ್ತಾರೆ ಗಾಯಕಿ. (ಮುಂಗಾರಿಗೂ ಮೊದಲಿನ ಮಳೆ ರೋಹಿಣಿಗೂ, ಮುಂಗಾರು ಮಳೆ ಮೃಗಶಿರಕ್ಕೂ ಸಂಬಂಧ ಕಲ್ಪಿಸಲಾಗಿದೆ.)
ಐದನೇ ಪದ್ಯ ಹೊಲದ ಮೇಲೆ ಬೀಳುತ್ತಿರುವ ಮಳೆ, ಮತ್ತು ಪಾರಿಜಾತ ಮರದ ಕೆಳಗೆ ಉಳುತ್ತಿರುವ ರೈತನ ಕುರಿತು ಮಾತನಾಡುತ್ತದೆ.
ಆರನೇ ಪದ್ಯದಲ್ಲಿ, ಗಾಯಕಿ ಅಲ್ಲಿ ಹಲವಾರು ಹೊಲಗಳಿರುವುದರಿಂದಾಗಿ ತನ್ನ ಹೊಲವನ್ನು ಗುರುತಿಸುವುದು ಸಾಧ್ಯವಾಗುತ್ತಿಲ್ಲ, ಎತ್ತ ಹೋಗಬೇಕೆಂದು ತಿಳಿಯುತ್ತಿಲ್ಲ ಎನ್ನುತ್ತಾರೆ. ಜೊತೆಗೆ ಮಗನ ಬಳಿ ಹೊಲ ಗುರುತಿಸಲು ಸುಲಭವಾಗುವಂತೆ ತಮ್ಮ ಹೊಲದ ಏರಿಯಲ್ಲಿ ಪಾರಿಜಾತದ ಗಿಡವೊಂದನ್ನು ನೆಡೋಣವೆಂದು ಹೇಳುತ್ತಿದ್ದಾರೆ.
ಏಳನೇ ದ್ವಿಪದಿಯಲ್ಲಿ ಗಾಯಕಿ ತನ್ನ ಮಗನ ಹೊಲವನ್ನು ತಲುಪಿದಾಗ, ಅಲ್ಲಿ ನಿಂತು ಅವನು ಎಲ್ಲಾ ಕೆಲಸಗಳನ್ನು ಯಾವಾಗ ಮಾಡಿದನೆಂದು ಕೇಳುತ್ತಾರೆ (ಮಗ ಕಠಿಣ ಪರಿಶ್ರಮಿ ಎಂದು ಸೂಚಿಸುತ್ತದೆ).
ಎಂಟನೇ ಪದ್ಯದಲ್ಲಿ, ಹಾಡುಗಾರ್ತಿ ಒಂದು ಬಿಂದಿಗೆ ನೀರಿನೊಡನೆ ಹೊಲಕ್ಕೆ ಹೋಗಿ ಎತ್ತುಗಳೆದುರು, ಈ ನೀರು ತಂದಿರುವುದು ಹೊಲ ಉಳುಮೆ ಮಾಡುವವನಿಗಾಗಿ ಎನ್ನುತ್ತಾರೆ.
ಮಳೆಯಾಗಿದೆ,
ಮಳೆ ಸುರಿಯುತ್ತಲೇ ಇದೆ
ನನ್ನ ಮಗ ಬೇಸಾಯಗಾರ,
ಗೋಧಿ ಬಿತ್ತುತ್ತಾನೆ ಕೂರಿಗೆಯ ಬಳಸಿ
ಮೇಲಿನಿಂದ ಮಳೆ
ಸುರಿಯುತ್ತಲೇ ಇದೆ
ಓ ಹೆಣ್ಣೇ, ನನ್ನ
ಮಕ್ಕಳು ಬಿತ್ತನೆಗೆ ಹೊರಟರು
ಮೃಗಶಿರಕ್ಕೂ
ಮೊದಲೇ ಬಂತು ರೋಹಿಣಿ ಮಳೆ
ಅಣ್ಣನ ಮನೆಗಿಂತಲೂ
ತಂಗಿಯ ಮನೆಯಲ್ಲೇ ಮೊದಲು ತೊಟ್ಟಿಲು ಕಟ್ಟಿದಂತೆ
ಬೇಸಿಗೆ ಕೊನೆಯ
ಮಳೆ ಸುರಿಯಿತು
ನೇಗಿಲು ಹೊತ್ತು
ಹೊರಟನು ರೈತ ತನ್ನ ಹೊಲದತ್ತ
ಒಂದರ ನಂತರ ಇನ್ನೊಂದು
ಹೊಲವಿಲ್ಲಿ, ನಮ್ಮ ಹೊಲವೆಲ್ಲಿಹುದು ಹೇಗೆ ತಿಳಿಯಲಿ
ಮಾತು ಕೇಳು ಮಗೂ,
ನಾವು ಪಾರಿಜಾತ ನೆಟ್ಟು ಬೆಳೆಸೋಣ ನಮ್ಮ ಹೊಲದ ಅಂಚಿನಲ್ಲಿ
ಹೊಲವನ್ನು ನೋಡಿ
ಬೆರಾಗದೆ ನಾನು, ಕಂದನ್ನ ಕೇಳಿದೆ
ಇಷ್ಟೆಲ್ಲ ಕೆಲಸ
ಯಾವ ಕ್ಷಣದಲಿ ಮುಗಿಸಿದೆ ನೀನೆಂದು
ಬಿಂದಿಗೆ ಹಿಡಿದು
ಹೊಲಕೆ ಹೋಗಬೇಕು ನಾನು
ಎತ್ತುಗಳೊಡನೆ
ದುಡಿದು ದಣಿದಿರುವ ನನ್ನ ಕಂದ

ಪ್ರದರ್ಶಕಿ/ಗಾಯಕಿ : ಜೈ ಸಖಾಲೆ
ಗ್ರಾಮ : ಲಾವರ್ಡೆ
ತಾಲೂಕು : ಮುಲ್ಶಿ
ಜಿಲ್ಲೆ : ಪುಣೆ
ಜಾತಿ : ನವ ಬೌದ್ಧ
ವಯಸ್ಸು : 2012ರಲ್ಲಿ ನಿಧನರಾದರು
ಶಿಕ್ಷಣ : ಶಾಲೆಗೆ ಹೋಗಿಲ್ಲ
ಮಕ್ಕಳು : 1 ಮಗಳು
ದಿನಾಂಕ : ಅವರ ಹಾಡುಗಳನ್ನು ಅಕ್ಟೋಬರ್ 5, 1999ರಂದು ರೆಕಾರ್ಡ್ ಮಾಡಲಾಯಿತು

ಪ್ರದರ್ಶಕರು/ಗಾಯಕಿ : ಚಾಬಾಬಾಯಿ ಮಾಪ್ಸೆಕರ್/ ಸುತಾರ್
ಗ್ರಾಮ : ಲಾವರ್ಡೆ
ತಾಲೂಕು : ಮುಲ್ಶಿ
ಜಿಲ್ಲೆ : ಪುಣೆ
ಜಾತಿ : ಸುತಾರ್
ವಯಸ್ಸು : 74
ಶಿಕ್ಷಣ : ಶಾಲೆಗೆ ಹೋಗಿಲ್ಲ
ಮಕ್ಕಳು : 1 ಮಗಳು, 2 ಮೊಮ್ಮಕ್ಕಳು
ವೃತ್ತಿ : ಆಕೆಯ ಪತಿ ಧಾನ್ಯ (ಬಲೂತ) ಪಡೆದು ಹಳ್ಳಿಯಲ್ಲಿ ಬಡಗಿಯಾಗಿ ಕೆಲಸ ಮಾಡುತ್ತಿದ್ದರು. ಅವರು ಎರಡು ಎಕರೆ ಜಮೀನಿನಲ್ಲಿ ಭತ್ತವನ್ನು ಬೆಳೆಯುತ್ತಾರೆ, ಮತ್ತು ಕೋಳಿಗಳ ಸಣ್ಣ ಹಿಂಡಿನಿಂದ ಹೆಚ್ಚುವರಿ ಆದಾಯವನ್ನು ಗಳಿಸುತ್ತಾರೆ.
ದಿನಾಂಕ : ಈ ವೀಡಿಯೊವನ್ನು ಏಪ್ರಿಲ್ 30, 2017ರಂದು ರೆಕಾರ್ಡ್ ಮಾಡಲಾಗಿದೆ
ಪೋಸ್ಟರ್: ಶ್ರೇಯಾ ಕಾತ್ಯಾಯಿನಿ
ಅನುವಾದ: ಶಂಕರ ಎನ್. ಕೆಂಚನೂರು