ಅಳಿದುಳಿದ ಪೇಪರುಗಳನ್ನು ತನ್ನ ಚೀಲದೊಳಗೆ ತುಂಬುತ್ತಿದ್ದ ಕಾಲೂ ದಾಸ್, “ಇಂದು ನಾನು ಸಂಗ್ರಹಿಸಿದ ವಸ್ತುಗಳೆಲ್ಲವನ್ನೂ ವಿಂಗಡಿಸಿದೆ. ಅವರು [ರದ್ದಿಯ ವಿತರಕರು] ಇವನ್ನು ತೆಗೆದುಕೊಂಡು, ತೂಕ ಮಾಡಿ, ನನಗೆ ಹಣವನ್ನು ಪಾವತಿಸುತ್ತಾರೆ, ನಂತರ, ಸಮಯಕ್ಕೆ ಸರಿಯಾಗಿ ಗಾಡಿಯು ದೊರೆತಲ್ಲಿ ಎರಡು ಗಂಟೆಯೊಳಗೆ ಮನೆ ಸೇರುತ್ತೇನೆ” ಎಂದರು.
ಸೆಪ್ಟೆಂಬರ್ ಮೊದಲ ಭಾಗದಲ್ಲಿ, 60ರ ವಯಸ್ಸಿನ ದಾಸ್, ಅನೇಕ ತಿಂಗಳುಗಳ ನಂತರ, ಎರಡನೆಯ ವಾರಾಂತ್ಯದಲ್ಲಿ, ದಕ್ಷಿಣದಲ್ಲಿನ 24 ಪರಗಣಗಳ ಜಿಲ್ಲೆಯಿಂದ ಸುಮಾರು 28 ಕಿ.ಮೀ. ದೂರವಿರುವ ಹಸನ್‌ಪುರ ಎಂಬ ತಮ್ಮ ಹಳ್ಳಿಯಿಂದ ಕೊಲ್ಕತ್ತಕ್ಕೆ ಟೊಟೊವೊಂದರಲ್ಲಿ (ಆಟೊರಿಕ್ಷ) ಸಹಪ್ರಯಾಣಿಕರೊಂದಿಗೆ ಹಾಗೂ ಬಸ್ಸಿನ ಮೂಲಕ ಪ್ರಯಾಣಿಸಿದರು. ಅಳ್ಳಕವಾಗಿದ್ದ ಬಿಳಿಯ ಚೀಲವೊಂದು ಅವರ ಭುಜದಲ್ಲಿ ನೇತಾಡುತ್ತಿತ್ತು.
ದಕ್ಷಿಣ ಹಾಗೂ ಪೂರ್ವ ಕೊಲ್ಕತ್ತದಲ್ಲಿನ ನೆರೆಹೊರೆಯ ಪ್ರದೇಶಗಳಿಂದ ದಾಸ್ ಅವರು 25 ವರ್ಷಗಳಿಂದಲೂ ರದ್ದಿಯನ್ನು ಸಂಗ್ರಹಿಸುತ್ತಿದ್ದಾರೆ. ಕಬಾಡಿವಾಲಾ ಆಗುವ ಮೊದಲು ಇವರು ನಗರದಲ್ಲಿನ ಸಿನಿಮಾ ಸುರುಳಿಗಳ ವಿತರಣಾ ಸಂಸ್ಥೆಯೊಂದರಲ್ಲಿ ಕೆಲಸವನ್ನು ನಿರ್ವಹಿಸುತ್ತಿದ್ದರು. “ನೆಪ್ಚೂನ್ ಪಿಕ್ಚರ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗಾಗಿ ನಾನು ಸಿನಿಮಾದ ಸುರುಳಿಗಳನ್ನು ಸಾಗಿಸುತ್ತಿದ್ದೆ. ದೆಹಲಿ, ಬಾಂಬೆ, ಮದ್ರಾಸುಗಳಿಂದ ಸರಕು ಒದಗಿಸಲು ಕೋರಿಕೆ (35 ಎಂಎಂ ಸುರುಳಿಗಳಿಗಾಗಿ) ಬರುತ್ತಿತ್ತು. ಭಾರಿ ಗಾತ್ರದ ಟ್ರಂಕ್‌ಗಳಲ್ಲಿ ಬರುತ್ತಿದ್ದ ಸುರುಳಿಗಳನ್ನು ಹೌರಾಕ್ಕೆ ತೆಗೆದುಕೊಂಡು ಹೋಗಿ, ಅವುಗಳನ್ನು ತೂಕ ಮಾಡಿ, ವಿತರಣೆಗಾಗಿ ವರ್ಗಾಯಿಸುತ್ತಿದ್ದೆ” ಎಂದು ಅವರು ತಿಳಿಸಿದರು.
ಸಂಸ್ಥೆಯನ್ನು ಮುಚ್ಚಿದಾಗ, ದಾಸ್ ಅವರಿಗೆ ಕೆಲಸವಿಲ್ಲದಂತಾಯಿತು. ಆ ಸಮಯದಲ್ಲಿ, ಅವರು ದಕ್ಷಿಣ ಕೊಲ್ಕತ್ತದಲ್ಲಿನ ಬೋಸ್‌ಪುಕುರ್ ಪ್ರದೇಶದಲ್ಲಿನ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದರು. ಅವರ ನೆರೆಮನೆಯವರು ಅವರನ್ನು ಮರುಬಳಕೆಯ ವಸ್ತುಗಳ ಕಸುಬಿಗೆ ಪರಿಚಯಿಸಿದರು. “ನಾನು ಕೆಲಸವನ್ನು ಕಳೆದುಕೊಂಡಾಗ, ಆತನು ತನ್ನ ಕೆಲಸದಲ್ಲಿ ನಾನೂ ಸಹ ಜೊತೆಗೂಡುವಂತೆ ತಿಳಿಸಿದ. ಪ್ರತಿದಿನ ನನಗೆ 25 ರೂ.ಗಳನ್ನು ನೀಡುವುದಾಗಿ ಹೇಳಿದ ಆತನು, ನಾನು ಮುಂಜಾನೆ 8ಕ್ಕೆ ಕೆಲಸಕ್ಕೆ ಬಂದು ಮಧ್ಯಾಹ್ನ ಮನೆಗೆ ಹಿಂದಿರುಗಬಹುದೆಂದು ತಿಳಿಸಿ, ಸರಕನ್ನು ಹೊತ್ತು ನನ್ನೊಂದಿಗೆ ಸುತ್ತಾಡಬೇಕಾಗುತ್ತದೆ. ನಾವಿಬ್ಬರೂ ಒಟ್ಟಾಗಿ ಚಹಾ ಕುಡಿಯೋಣ” ಎಂತಲೂ ಹೇಳಿದನೆಂದರು.


ದಶಕಗಳ ಹಿಂದೆ, ದಾಸ್, ತಮ್ಮ ಗುರುವಿನ ಕೆಲಸವನ್ನು ಗಮನಿಸುತ್ತಾ, ಪ್ರತಿಯೊಂದು ವಸ್ತುವನ್ನೂ ಅಂದರೆ; ಕಾಗದ, ಪ್ಲಾಸ್ಟಿಕ್, ಗಾಜಿನ ಬಾಟಲಿಗಳು, ಕಬ್ಬಿಣ ಮತ್ತು ಇತರೆ ಲೋಹಗಳನ್ನು ಹೇಗೆ ತೂಕ ಮಾಡಬೇಕೆಂಬುದನ್ನು ಕಲಿತುಕೊಂಡರು.
ತಮ್ಮ ಗುರುವಿನ ಕೆಲಸವನ್ನು ಗಮನಿಸುತ್ತಾ, ಪ್ರತಿಯೊಂದು ವಸ್ತುವನ್ನೂ ಅಂದರೆ; ಕಾಗದ, ಪ್ಲಾಸ್ಟಿಕ್, ಗಾಜಿನ ಬಾಟಲಿಗಳು, ಕಬ್ಬಿಣ ಮತ್ತು ಇತರೆ ಲೋಹಗಳನ್ನು ಹೇಗೆ ತೂಕ ಮಾಡಬೇಕೆಂಬುದನ್ನು ಕಲಿತುಕೊಂಡ ದಾಸ್, “150, 200, 250 ಗ್ರಾಂಗಳ ಬೆಲೆ ಎಷ್ಟು ಎಂಬುದನ್ನು ಹಾಗೂ ವಿವಿಧ ವಸ್ತುಗಳ ವಿಂಗಡನೆಯನ್ನೂ ಕಲಿತೆ” ಎಂಬುದಾಗಿ ತಿಳಿಸಿದರು. ತಾನು ಈ ಕಸುಬನ್ನು ಆರಂಭಿಸಿದ ಎರಡು ದಶಕಗಳ ಹಿಂದೆ ಮಾರುಕಟ್ಟೆಯು ಉತ್ತಮ ಸ್ಥಿತಿಯಲ್ಲಿದ್ದುದನ್ನು ನೆನಪಿಸಿಕೊಂಡರು.
ಬಾಂಗ್ಲಾದೇಶದಲ್ಲಿ ಕೃಷಿಕರಾಗಿದ್ದ ದಾಸ್, 1971ರ ಅವಧಿಯಲ್ಲಿನ ಹಿಂಸಾಚಾರದಿಂದ ತಪ್ಪಿಸಿಕೊಳ್ಳಲು ಭಾರತಕ್ಕೆ ಬಂದರು. “ಅವ್ಯವಸ್ಥೆ ಹಾಗೂ ಹೊಡೆದಾಟಗಳಿಂದಾಗಿ ನಾನು ಆ ಸ್ಥಳವನ್ನು ತೊರೆದೆ” ಎಂದರು. ಆ ಸಮಯದಲ್ಲಿ ಇವರ ಸಹೋದರ ನರೇಂದ್ರ (ಈಗ ವಿಧಿವಶರಾಗಿರುವ ಇವರು; ಸೈಕಲ್ ರಿಕ್ಷಾ ಚಲಾಯಿಸುತ್ತಿದ್ದರು) ಎಂಬುವವರು ಉತ್ತರದ 24 ಪರಗಣಗಳಲ್ಲಿನ ಕಂಛ್ರಪರ ಎಂಬ ಊರಿನಲ್ಲಿ ನೆಲೆಸಿದ್ದರು. ಇವರೊಂದಿಗೆ ವಾಸಿಸತೊಡಗಿದ ಕಾಲೂ ದಾಸ್, ಕಟ್ಟಡಗಳನ್ನು ನಿರ್ಮಿಸುವವರ ಸಹಾಯಕರಾಗಿ ದುಡಿಯತೊಡಗಿದರು. ಕಾಲ ಸರಿದಂತೆ, ಇವರಿಗೆ ಭಾರತ ಸರ್ಕಾರದಿಂದ ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್ ಹಾಗೂ ಪಡಿತರ ಚೀಟಿಯನ್ನೊಳಗೊಂಡಂತೆ ಎಲ್ಲ ಅಂಗೀಕಾರಗಳು ಹಾಗೂ ದಾಖಲೆಗಳು ದೊರೆತವು.
ಲಾಕ್‌ಡೌನ್‌ಗಿಂತಲೂ ಮೊದಲು, ರದ್ದಿ ಹಾಗೂ ಮರುಬಳಕೆಯ ವಸ್ತುಗಳ ಸಂಗ್ರಹಕ್ಕಾಗಿ ಸೊನಾರ್‌ಪುರ್ ತಾಲ್ಲೂಕಿನ ಹಸನ್ಪುರ್ ಹಳ್ಳಿಯಿಂದ ಕೊಲ್ಕತ್ತಕ್ಕೆ ವಾರಕ್ಕೆ ನಾಲ್ಕು ಬಾರಿ ಪ್ರಯಾಣಿಸುತ್ತಿದ್ದ ಇವರು, ಮನೆ ಮನೆಗಳಿಗೆ ತೆರಳಿ, ಕೊಳೆಗೇರಿಗಳಲ್ಲಿ ದಿನನಿತ್ಯ ನಾಲ್ಕರಿಂದ ಐದು ಗಂಟೆಗಳವರೆಗೆ ಸುತ್ತಾಡುತ್ತಾ ತಿಂಗಳಿಗೆ ಸುಮಾರು 3 ಸಾವಿರ ರೂ.ಗಳನ್ನು ಸಂಪಾದಿಸುತ್ತಿದ್ದರು.
ಮಾರ್ಚ್‌ನಲ್ಲಿ ಲಾಕ್‌ಡೌನ್ ಪ್ರಾರಂಭಗೊಂಡಾಗ ಬಸ್ಸು ಹಾಗೂ ರೈಲುಗಳು ತಮ್ಮ ಸಂಚಾರವನ್ನು ನಿಲ್ಲಿಸಿದ್ದರಿಂದಾಗಿ, ದಾಸ್ ಅವರ ಕೆಲಸವು ಸ್ಥಗಿತಗೊಂಡಿತು. “ಹೇಗಾದರೂ ಮಾಡಿ ಕೊಲ್ಕತ್ತಕ್ಕೆ ಬರಬೇಕೆಂದು ಯೋಚಿಸುತ್ತಿದ್ದೆ. ಆದರೆ ಜನರು ನನ್ನನ್ನು ಎಚ್ಚರಿಸಿದರು. ಅಲ್ಲದೆ, ಪೋಲೀಸರು ಲಾಕ್‌ಡೌನ್ ಉಲ್ಲಂಘಿಸಿದ ಜನರನ್ನು ಅಟ್ಟಿಸಿಕೊಂಡು ಹೋಗಿ ಹೊಡೆಯುತ್ತಿದ್ದುದನ್ನು ದೂರದರ್ಶನದಲ್ಲಿ ನೋಡಿದೆ. ಇದಕ್ಕಿಂತಲೂ ಹೆಚ್ಚಾಗಿ, ತಮ್ಮ ನೆರೆಹೊರೆಯಲ್ಲಿ ಕೆಲವು ಕೋವಿಡ್-19 ಪ್ರಕರಣಗಳಿದ್ದ ಕಾರಣ, ನನ್ನ ಮನಸ್ಸನ್ನು ಬದಲಾಯಿಸಿದೆ. ಹಸಿವಿನಿಂದ ಬಾಧೆಪಟ್ಟರೂ ಮನೆಯನ್ನು ಬಿಟ್ಟು ಹೋಗಬಾರದೆಂದು ತೀರ್ಮಾನಿಸಿದೆ” ಎಂದು ಅವರು ತಿಳಿಸಿದರು.


ಅವರ ಹಳ್ಳಿಗೆ ಹೋಗಿಬರಲು ಹಾಗೂ ಸೈಕಲ್ ರಿಕ್ಷಾದಲ್ಲಿ ರದ್ದಿಯ ವಿತರಕರಲ್ಲಿಗೆ ತೆರಳುವ ಒಟ್ಟಾರೆ ಖರ್ಚು ಸುಮಾರು 150 ರೂ.ಗಳು. ಆದರೆ ಅವರು ಗಳಿಸುವ ಲಾಭವು ಹೆಚ್ಚೇನಿಲ್ಲ – ‘ಕೇವಲ 2-4 ರೂ.ಗಳಷ್ಟೇ ’
ದಾಸ್ ಅವರ ಪತ್ನಿ ಮೀರಾ, ದಕ್ಷಿಣ ಕೊಲ್ಕತ್ತದಲ್ಲಿನ ಜಾದವ್‌ಪುರ್ ಪ್ರದೇಶದಲ್ಲಿ ಮನೆ ಕೆಲಸದ ಪೂರ್ಣಾವಧಿ (full-time) ನೌಕರರು. ಹಳ್ಳಿಯನ್ನು ಬಿಡುವ ಮೊದಲು 18, 16 ಹಾಗೂ 12 ವರ್ಷದ ತನ್ನ ಮೊಮ್ಮಕ್ಕಳನ್ನು ತಾತನ ಜೊತೆಗಿರುವಂತೆ ಅವರು ವಿನಂತಿಸಿದ್ದರು. “ನಿಮ್ಮ ದಾದೂಗೆ ವಯಸ್ಸಾಗಿದೆ, ಒಬ್ಬರೇ ಇರುತ್ತಾರೆ” ಎಂದು ಆಕೆ ಹೇಳಿದರೆಂಬುದಾಗಿ ದಾಸ್ ಹೇಳುತ್ತಾರೆ, ಪ್ರತಿ ತಿಂಗಳು ಬ್ಯಾಂಕಿಗೆ ಜಮೆಯಾಗುವ ಈಕೆಯ ಆದಾಯ, 7,000 ರೂ.ಗಳಿಂದ ಲಾಕ್‌ಡೌನ್ ಸಮಯದಲ್ಲಿನ ಖರ್ಚನ್ನು ನಿಭಾಯಿಸುತ್ತಿದ್ದರು.
“ನನ್ನ ಪತ್ನಿಯು ಲಾಕ್‌ಡೌನಿನಾದ್ಯಂತ ದುಡಿಯುತ್ತಲೇ ಇದ್ದಳು. ಇಲ್ಲದಿದ್ದಲ್ಲಿ 1,000 ರೂ.ಗಳ ಮನೆ ಬಾಡಿಗೆ ಇತ್ಯಾದಿ ಖರ್ಚುಗಳನ್ನು ನಾವು ಹೇಗೆ ನಿಭಾಯಿಸಬೇಕಿತ್ತು?” ಎಂದು ದಾಸ್ ಪ್ರಶ್ನಿಸಿದರು. ಪ್ರತಿ ತಿಂಗಳು ಮೂರು, ನಾಲ್ಕು ದಿನಗಳ ಮಟ್ಟಿಗೆ ಮೀರಾ ತಮ್ಮ ಹಳ್ಳಿಗೆ ಭೇಟಿ ನೀಡುತ್ತಾರೆ. “ಅವರಿಗೆ ತಮ್ಮ ಮೊಮ್ಮಕ್ಕಳನ್ನು ನೋಡಲು ಸಾಧ್ಯವಾಗುವುದಿಲ್ಲ. ಅವರನ್ನು ನೋಡಬೇಕೆನಿಸಿದಾಗಲೆಲ್ಲಾ ಆಕೆ ಕಣ್ಣೀರಿಡುತ್ತಾರೆ. ಆಕೆಯು ಮನೆಗೆ ಬಂದಾಗಲೆಲ್ಲಾ ಅವರಿಗೆ ಅಡುಗೆ ಮಾಡಿ ಬಡಿಸುವುದನ್ನು ಇಷ್ಟಪಡುತ್ತಾರೆ” ಎಂಬುದಾಗಿ ದಾಸ್ ತಿಳಿಸಿದರು. ಇವರ ಹಿರಿಯ ಮೊಮ್ಮಗನು, ವಿದ್ಯುತ್ತಿಗೆ ಸಂಬಂಧಿಸಿದ ಕೆಲಸಗಳನ್ನು (ಇಲೆಕ್ಟ್ರಿಶನ್) ನಿರ್ವಹಿಸುತ್ತಾನೆ. ಲಾಕ್‌ಡೌನ್ ಪ್ರಾರಂಭವಾದಾಗಿನಿಂದಲೂ, ಈತನಿಗೆ ಹೆಚ್ಚಿನ ಕೆಲಸಗಳು ದೊರೆಯುತ್ತಿಲ್ಲ. ಕಿರಿಯ ಮೊಮ್ಮಗನು ಶಾಲೆಯಲ್ಲಿ ಓದುತ್ತಿದ್ದಾನೆ. ಎರಡನೆಯ ಮೊಮ್ಮಗನು ನಿರುದ್ಯೋಗಿ.
ಆದರೆ ಮೀರಾ ಸಹ ಇನ್ನೇನು ತನ್ನ ಕೆಲಸವನ್ನು ಕಳೆದುಕೊಳ್ಳುವುದರಲ್ಲಿದ್ದಾರೆ. “ಇನ್ನು ಮೇಲೆ ಅವರು ಆಕೆಯನ್ನು ಕೆಲಸಕ್ಕೆ ಇಟ್ಟುಕೊಳ್ಳಲಾರರು. ಆಕೆಯೀಗ ಮನೆಗೆ ಬರುವುದರಲ್ಲಿದ್ದಾಳೆ. ಮೀರಾಳನ್ನು ಕೆಲಸಕ್ಕೆ ನೇಮಿಸಿಕೊಂಡವರು ಇನ್ನು ಮುಂದೆ ಹಣವನ್ನು ಪಾವತಿಸುವ ಸ್ಥಿತಿಯಲ್ಲಿಲ್ಲ.”
ಆಗಸ್ಟ್ ಕೊನೆಯ ವಾರದಲ್ಲಿ, ದಾಸ್ ಅವರು ತಮ್ಮ ಮರುಬಳಕೆಯ ವಸ್ತುಗಳ ಸಂಗ್ರಹಕ್ಕಾಗಿ ಸುತ್ತಾಡುವ ಕೆಲಸವನ್ನು ಮತ್ತೆ ಪ್ರಾರಂಭಿಸಿದರು. ಆದರೆ ಈ ಕಸುಬು ದುಸ್ಥಿತಿಯಲ್ಲಿದೆ. ರುಬ್ಬುವ ಯಂತ್ರದಿಂದ ಕಳಚಿದ್ದ ಅದರ ತಳಭಾಗವನ್ನು ಮೂಟೆಗೆ ಸೇರಿಸುತ್ತಿದ್ದ ದಾಸ್, “ಕೊರೊನಾ ಸಮಯದಲ್ಲಿ ಜನರು ಮರುಬಳಕೆಯ ವಸ್ತುಗಳನ್ನು ಹೆಚ್ಚಾಗಿ ಇಟ್ಟುಕೊಳ್ಳುತ್ತಿಲ್ಲ. ಅವರು ಅವುಗಳನ್ನು ಎಸೆಯುತ್ತಿದ್ದಾರೆ” ಎಂದರು.


ಆಗಸ್ಟ್ ಕೊನೆಯ ಭಾಗದಲ್ಲಿ ಕಾಲೂ ದಾಸ್, ಮರುಬಳಕೆಯ ವಸ್ತುಗಳನ್ನು ಸಂಗ್ರಹಿಸುವ ತಮ್ಮ ಕೆಲಸವನ್ನು ಮತ್ತೆ ಪ್ರಾರಂಭಿಸಿದರಾದರೂ, ಆ ಉದ್ಯಮವು ದುಸ್ಥಿತಿಯಲ್ಲಿತ್ತು: ‘ಕೊರೊನಾ ಸಮಯದಲ್ಲಿ ಜನರು ಹೆಚ್ಚು ವಸ್ತುಗಳನ್ನು ಇಟ್ಟುಕೊಳ್ಳುತ್ತಿಲ್ಲ. ’
ತಾನು ಭೇಟಿಮಾಡುವ ಮನೆಗಳಿಂದ ದಾಸ್, ದಿನಪತ್ರಿಕೆಗಳನ್ನೊಳಗೊಂಡಂತೆ, ಪೇಪರ್‌ಗಳನ್ನು ಕೆ.ಜಿ.ಯೊಂದಕ್ಕೆ 8 ರೂ.ಗಳಿಗೆ ಖರೀದಿಸಿ, ರದ್ದಿಯ ಅಂಗಡಿಗಳಿಗೆ ಅವನ್ನು 9-9.50 ರೂ.ಗಳಿಗೆ ಮಾರುತ್ತಾರೆ. ಪ್ಲಾಸ್ಟಿಕ್ ಬಾಟಲುಗಳ ಒಂದು ಕಟ್ಟಿಗೆ 2 ಅಥವಾ 4 ರೂ.ಗಳನ್ನು ತೆರುತ್ತಾರೆ. “ಪ್ಲಾಸ್ಟಿಕ್ ಬಾಟಲುಗಳ ಬೆಲೆಯು ಕಡಿಮೆಯಾಗಿದೆ. ನನ್ನನ್ನು ರದ್ದಿ ವಿತರಕನ ಬಳಿಗೆ ಕರೆದೊಯ್ಯಲು ನಾನು ಆಟೋವನ್ನು ಬಾಡಿಗೆ ಪಡೆಯಬೇಕು. ಈ ಕಸುಬಿನಲ್ಲಿರುವ ಕೆಲವರ ಬಳಿ ಸ್ವಂತ ಗಾಡಿಯಿದೆ (ಮರುಬಳಕೆಯ ವಸ್ತುಗಳನ್ನು ಸಾಗಿಸಲು). ಅವರು ಬಾಟಲುಗಳಿಗೆ ಹೆಚ್ಚು ಹಣವನ್ನು ನೀಡುತ್ತಾರೆ” ಎನ್ನುತ್ತಾರವರು.
ದಾಸ್, ತಾವು ಸಂಗ್ರಹಿಸಿದ ಎಲ್ಲವನ್ನೂ ಗೋಳಾಕಾರದ ದೊಡ್ಡ ಬಿದಿರಿನ ಬುಟ್ಟಿಗೆ ತುಂಬುತ್ತಾರೆ. ಇವರು ತಮ್ಮ ತಲೆಯ ಮೇಲೆ 20 ಕೆ.ಜಿ.ಗಳಷ್ಟು ಭಾರವನ್ನು ಹೊರಬಲ್ಲರು. ನಂತರ ಅವರು ಸೈಕಲ್ ರಿಕ್ಷಾದಲ್ಲಿ ಹತ್ತಿರದಲ್ಲಿನ ರಥ್‌ತಲ ಎಂಬಲ್ಲಿನ ರದ್ದಿಯ ವಿತರಕರಲ್ಲಿಗೆ ತೆರಳುತ್ತಾರೆ. ಸೈಕಲ್ ರಿಕ್ಷಾ ಹಾಗೂ ತಮ್ಮ ಹಳ್ಳಿಗೆ ಹೋಗಿ ಬರುವ ಇವರ ಒಟ್ಟಾರೆ ಖರ್ಚು ಸುಮಾರು 150 ರೂ.ಗಳಷ್ಟಿದ್ದು, ರದ್ದಿ ವಸ್ತುಗಳ ಸಂಗ್ರಹ ಹಾಗೂ ಮಾರಾಟಕ್ಕಾಗಿ ಪ್ರತಿಬಾರಿ ಕೊಲ್ಲತ್ತಕ್ಕೆ ತೆರಳಿದಾಗಲೂ ತಮ್ಮ ಪ್ರಯಾಣದ ಖರ್ಚುಗಳನ್ನು ಕಳೆದು, ದೊರೆಯುವ ಲಾಭವು ಕೇವಲ 80ರಿಂದ 200ರೂ.ಗಳಷ್ಟೇ ಎನ್ನುವ ಅವರು, ತಮ್ಮ ಕಿಂಚಿತ್ ಲಾಭವನ್ನು ಸೂಚಿಸಲು, ಆಡುನುಡಿಯ ನುಡಿಗಟ್ಟೊಂದನ್ನು ಉಸುರುತ್ತಾ, ಕೇವಲ “2ರಿಂದ 4 ರೂಪಾಯಿಗಳಷ್ಟೇ ಎನ್ನುತ್ತಾರೆ.”
“ನಾನು ಈ ಕಸುಬನ್ನು ಪ್ರಾರಂಭಿಸಿದಾಗ, ನನ್ನ ಪರಿವಾರದ ಸದಸ್ಯರು ಕೆಲಸಕ್ಕೆ ಹೋಗುತ್ತಿರಲಿಲ್ಲ. ಈ ಕೆಲಸದಿಂದ ನಮ್ಮ ಊಟದ ಖರ್ಚನ್ನು ನಿಭಾಯಿಸಬಹುದಿತ್ತು. ಕೊಲ್ಕೊತ್ತಾದಲ್ಲಿ (ಬೋಸ್‌ಪುಕುರ್‌ನಲ್ಲಿ) ನೆಲೆಸುವುದೆಂದರೆ ಸುಲಭದ ಮಾತಲ್ಲ. ನನಗೆ ಇಬ್ಬರು ಗಂಡು ಮಕ್ಕಳಿದ್ದು, ಒಬ್ಬ ಮಗಳಿದ್ದಾಳೆ. ಅವರು ಆಗ ಶಾಲೆಗೆ ಹೋಗುತ್ತಿದ್ದರು. ನಂತರ ನನ್ನ ಮಗಳಿಗೆ ಮದುವೆ ಮಾಡಬೇಕಾಯಿತು” ಎಂದರು ಕಾಲೂ ದಾಸ್. ಇವರ ಹಿರಿಯ ಮಗ ಬಹಳ ಹಿಂದೆಯೇ ತೀರಿಕೊಂಡಿದ್ದು; ಅವರ ಮಗಳು ಪೂರ್ಣಿಮಾಳಿಗೆ ಸುಮಾರು 30ರ ವಯಸ್ಸು. ಕಿರಿಯ ಮಗ ನಾರೂ, ಸುಮಾರು 27 ವರ್ಷದವರು. ಇವರಿಬ್ಬರೂ “ಸಹಾಯಕರಾಗಿ” ದುಡಿಯುತ್ತಿದ್ದಾರೆ ಎಂದು ಅವರು ತಿಳಿಸಿದರು.
ಇವೆಲ್ಲವುಗಳ ಮಧ್ಯೆ, ಕಾಲೂ ದಾಸ್ ಅವರಿಗೆ, ಬೇರಾವುದೇ ಉದ್ಯೋಗವನ್ನು ಪ್ರಯತ್ನಿಸುವ ಅವಕಾಶವು ದೊರೆಯಲಿಲ್ಲ. “ನಾನು ಇನ್ನೇನು ತಾನೇ ಮಾಡಬಹುದಿತ್ತು? ಈ ವಯಸ್ಸಿನಲ್ಲಿ ನನಗೆ ಯಾರು ಕೆಲಸ ಕೊಡುತ್ತಾರೆ?” ಎನ್ನುತ್ತಾರವರು.
ವಾರದ ದಿನಗಳಲ್ಲಿ ಇವರು ಸಾಮಾನ್ಯವಾಗಿ ಮನೆಯಲ್ಲೇ ಇರುತ್ತಾರೆ ಅಥವಾ ಹತ್ತಿರದ ನಾರೂನ ಮನೆಗೆ ಹೋಗುತ್ತಾರೆ. ತೆಳ್ಳನೆ ಬಟ್ಟೆಯ ಬಿಳಿಯ ಬಣ್ಣದ ತಮ್ಮ ಮಾಸ್ಕ್‌ಅನ್ನು ಸರಿಪಡಿಸಿಕೊಳ್ಳುತ್ತಾ, “ನಾನು ಕೊರೊನಾದ ಬಗ್ಗೆ ಯೋಚಿಸುವುದಿಲ್ಲ. ನಾವು ಕೆಲಸಕ್ಕೆ ತೊಡಗಿದಲ್ಲಿ, ಅದರಲ್ಲೇ ಮಗ್ನರಾಗಿರುತ್ತೇವೆ. ಕೆಲಸಕ್ಕೆ ಹೋಗದೆ, ಮನೆಯಲ್ಲೇ ಕುಳಿತರೆ ರೋಗದ ಬಗ್ಗೆ ಆತಂಕವು ಹೆಚ್ಚಾಗುತ್ತದೆ. ನೀವು ಧೈರ್ಯಶಾಲಿಗಳಾಗತಕ್ಕದ್ದು” ಎಂದರವರು.
ಅನುವಾದ - ಶೈಲಜ ಜಿ. ಪಿ.