ಡಿಸೆಂಬರ್ 11ರ ಬೆಳಿಗ್ಗೆ ಅವರು ವಿದ್ಯುತ್ ಕೇಬಲ್ ಗಳನ್ನು ತೆಗೆಯಲು ಆರಂಭಿಸಿದಾಗ, ಹತ್ತಿರದ ಅಂಗಡಿಯವರು ಅಳಲು ಪ್ರಾರಂಭಿಸಿದರು. "ಅವರಿಗೆ ನಮ್ಮ ನೆನಪು ಕಾಡಲಿದೆ. ನಮಗೂ ಅವರ ನೆನಪು ಕಾಡಲಿದೆ. ಆದರೆ ಈ ರೈತರ ಗೆಲುವು ನಿಜಕ್ಕೂ ಸಂಭ್ರಮಿಸುವಂತಹದ್ದು" ಎಂದು ಗುರ್ವಿಂದರ್ ಸಿಂಗ್ ಹೇಳಿದರು.
ಗುರ್ವಿಂದರ್ ಮತ್ತು ಅವರ ಹಳ್ಳಿಯ ಇತರ ರೈತರು ಪಶ್ಚಿಮ ದೆಹಲಿಯ ಟಿಕ್ರಿ ಪ್ರತಿಭಟನಾ ಸ್ಥಳದಲ್ಲಿ ತಮ್ಮ ತಾತ್ಕಾಲಿಕ ಡೇರೆಗಳನ್ನು ತೆಗೆಯಲು ಪ್ರಾರಂಭಿಸಿದಾಗ ಸುಮಾರು ಬೆಳಗಿನ 8:15 ಗಂಟೆಯಾಗಿತ್ತು. ಕೆಲವೊಮ್ಮೆ, ಅವರು ಬಿದಿರಿನ ಕೀಲುಗಳನ್ನು ಮುರಿಯಲು ಮರದ ತುಂಡನ್ನು ಬಳಸುತ್ತಿದ್ದರು, ಕೆಲವೊಮ್ಮೆ ಅವರು ರಚನೆಗಳ ತಳವನ್ನು ಒಡೆಯಲು ಇಟ್ಟಿಗೆಗಳನ್ನು ಬಳಸುತ್ತಿದ್ದರು. 20 ನಿಮಿಷಗಳಲ್ಲಿ ಎಲ್ಲವೂ ರಾಶಿಯಾಗಿ ನಿಂತಿತು, ಮತ್ತು ಅವರು ಚಹಾ ಮತ್ತು ಪಕೋಡಾ ವಿರಾಮಕ್ಕಾಗಿ ಕೆಲಸ ನಿಲ್ಲಿಸಿದರು.
"ನಾವು ಈ ಡೇರೆಗಳನ್ನು ನಮ್ಮ ಕೈಯಾರೆ ನಿರ್ಮಿಸಿದ್ದೇವೆ, ಮತ್ತು ಈಗ ನಮ್ಮ ಕೈಗಳಿಂದಲೇ ಅವುಗಳನ್ನು ಕೀಳುತ್ತಿದ್ದೇವೆ" ಎಂದು 34 ವರ್ಷದ ಗುರ್ವಿಂದರ್ ಹೇಳಿದರು, ಅವರ ಕುಟುಂಬವು ಪಂಜಾಬ್ ನ ಲುಧಿಯಾನ ಜಿಲ್ಲೆಯ ಡಾಂಜಿಯನ್ ಗ್ರಾಮದಲ್ಲಿ ಆರು ಎಕರೆಯಲ್ಲಿ ಗೋಧಿ, ಭತ್ತ ಮತ್ತು ಆಲೂಗಡ್ಡೆಯನ್ನು ಕೃಷಿ ಮಾಡುತ್ತದೆ. "ನಾವು ವಿಜಯಶಾಲಿಗಳಾಗಿ ಮನೆಗೆ ಮರಳುತ್ತಿರುವುದು ಸಂತಸ ತಂದಿದೆ, ಆದರೆ ನಾವು ಇಲ್ಲಿ ಬೆಳೆಸಿಕೊಂಡಿದ್ದ ಸಂಬಂಧಗಳನ್ನು ತೊರೆದು ಹೋಗುತ್ತಿರುವ ಕುರಿತು ದುಃಖವೂ ಇದೆ."
"ಪ್ರತಿಭಟನೆಯ ಆರಂಭದಲ್ಲಿ ಇಲ್ಲಿ ಏನೂ ಇದ್ದಿರಲಿಲ್ಲ. ನಾವೆಲ್ಲರೂ ರಸ್ತೆಗಳಲ್ಲಿ ಮಲಗುತ್ತಿದ್ದೆವು, ನಂತರ ದಿನಗಳಲ್ಲಿ ನಾವು ಈ ಮನೆಗಳನ್ನು ಮಾಡಿದೆವು" ಎಂದು ಲೂಧಿಯಾನ ಜಿಲ್ಲೆಯ ಅದೇ ಗ್ರಾಮದ 35 ವರ್ಷದ ದೀದಾರ್ ಸಿಂಗ್ ಹೇಳಿದರು, ಅಲ್ಲಿ ಅವರು ಗೋಧಿ, ಭತ್ತ, ಆಲೂಗಡ್ಡೆ ಮತ್ತು ಹಸಿರು ತರಕಾರಿಗಳನ್ನು ತಮ್ಮ ಏಳು ಎಕರೆ ಕೃಷಿಭೂಮಿಯಲ್ಲಿ ಬೆಳೆಯುತ್ತಾರೆ. "ನಾವು ಇಲ್ಲಿ ಬಹಳಷ್ಟು ಕಲಿತಿದ್ದೇವೆ, ವಿಶೇಷವಾಗಿ ನಾವು ಇಲ್ಲಿದ್ದಾಗ ನಮ್ಮೆಲ್ಲರ ನಡುವೆ ಸಹೋದರತ್ವದ ಭಾವನೆಯನ್ನು ಹೊಂದಿದ್ದೆವು. ಪಂಜಾಬ್, ಹರಿಯಾಣ, ಉತ್ತರ ಪ್ರದೇಶದ ನಾವೆಲ್ಲರೂ ಇಲ್ಲಿ ಸೇರಿದ ಸಮಯದಲ್ಲಿ ನಾವೆಲ್ಲರೂ ಒಂದೇ ಎನ್ನುವುದನ್ನು ಅರಿತುಕೊಂಡೆವು. ಎಲ್ಲಾ ಸರ್ಕಾರಗಳೂ ನಮ್ಮನ್ನು ಹೋರಾಡುವಂತೆ ಮಾಡುತ್ತವೆ."
"ಸದ್ಯದಲ್ಲೇ ಪಂಜಾಬಿನಲ್ಲಿ ಚುನಾವಣೆಯಿದೆ. ಈ ಬಾರಿ ನಾವು ಸರಿಯಾದ ವ್ಯಕ್ತಿಗೆ ಮತ ಚಲಾಯಿಸುತ್ತೇವೆ" ಎಂದು ಗುರ್ವಿಂದರ್ ಹೇಳಿದರು. "ನಮ್ಮ ಕೈಹಿಡಿದವರಿಗೆ (ನಮ್ಮನ್ನು ಬೆಂಬಲಿಸುವವರಿಗೆ) ನಾವು ಮತ ಚಲಾಯಿಸುತ್ತೇವೆ. ನಮಗೆ ದ್ರೋಹ ಬಗೆಯುವವರನ್ನು ನಾವು ಅಧಿಕಾರಕ್ಕೆ ಬರಲು ಬಿಡುವುದಿಲ್ಲ" ಎಂದು ದೀದಾರ್ ಹೇಳಿದರು.
![It’s difficult for us [to leave]. But the win of the farmers is a bigger celebration', said Gurwinder Singh.](/media/images/02a-Image-33-ST.max-1400x1120.jpg)

ಎಡಕ್ಕೆ: 'ನಮಗೂ (ಇಲ್ಲಿಂದ ಹೊರಡುವುದು) ಕಷ್ಟ. ಆದರೆ ರೈತರ ಗೆಲುವು ದೊಡ್ಡ ಸಂಭ್ರಮದ ವಿಷಯ' ಎಂದು ಗುರ್ವಿಂದರ್ ಸಿಂಗ್ ಹೇಳಿದರು. ಬಲ: ಲುಧಿಯಾನ ಜಿಲ್ಲೆಯ ಅದೇ ಗ್ರಾಮದ ರೈತರೊಬ್ಬರು ಡೇರೆಗಳನ್ನು ಕೀಳುತ್ತಿರುವುದು
ಡಿಸೆಂಬರ್ 9ರಂದು, ಸುಮಾರು 40 ಪ್ರತಿಭಟನಾನಿರತ ಕೃಷಿ ಒಕ್ಕೂಟಗಳನ್ನು ಒಳಗೊಂಡಿರುವ ಸಂಯುಕ್ತ ಕಿಸಾನ್ ಮೋರ್ಚಾ (ಎಸ್ ಕೆಎಂ), ಸರ್ಕಾರವು ಮೂರು ವಿವಾದಾಸ್ಪದ ಕೃಷಿ ಕಾನೂನುಗಳನ್ನು ರದ್ದುಗೊಳಿಸಿ,ಇತರ ಬೇಡಿಕೆಗಳಿಗೆ ಒಪ್ಪಿದ ನಂತರ, ದೆಹಲಿಯ ಗಡಿಗಳಲ್ಲಿ ಒಂದು ವರ್ಷದಿಂದ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಸದ್ಯಕ್ಕೆ ನಿಲ್ಲಿಸುವುದಾಗಿ ಘೋಷಿಸಿತ್ತು.
ಅದಾಗ್ಯೂ ಇತರ ಪ್ರಮುಖ ವಿಷಯಗಳು ಇತ್ಯರ್ಥವಾಗಬೇಕಿದೆ. ಉದಾಹರಣೆಗೆ ಬೆಳೆಗಳಿಗೆ ಖಾತರಿಪಡಿಸಿದ ಕನಿಷ್ಠ ಬೆಂಬಲ ಬೆಲೆ (ಎಂಎಸ್ ಪಿ), ಕೃಷಿಸಾಲದ ಕುರಿತ ಕಳವಳಗಳು, ಮತ್ತು ಇತ್ಯಾದಿ. ಈ ವಿಷಯಗಳ ಕುರಿತು ಎಸ್ ಕೆಎಂ ಕೇಂದ್ರದೊಂದಿಗೆ ಮಾತುಕತೆಯನ್ನು ಮುಂದುವರಿಸಲು ನಿರ್ಧರಿಸಿದೆ.
“ನಾವು ಈ ಪ್ರತಿಭಟನೆಯನ್ನು ಸದ್ಯಕ್ಕೆ ನಿಲ್ಲಿಸಿದ್ದೇವೆ, ಕೊನೆಗೊಳಿಸಿಲ್ಲ. ಸೈನಿಕರು ರಜೆ ಹಾಕುವಂತೆ ನಾವು ರೈತರೂ ರಜೆ ಹಾಕುತ್ತಿದ್ದೇವೆ. ಈ ಸರ್ಕಾರ ನಮ್ಮನ್ನು ಮತ್ತೆ ಇಲ್ಲಿಗೆ ಬರುವಂತೆ ಮಾಡಿದರೆ ನಾವು ಹಿಂತಿರುಗುತ್ತೇವೆ ಎಂದು ದೀದಾರ್ ಹೇಳಿದರು.
"ಈ ಸರ್ಕಾರವು ನಮಗೆ (ಎಂಎಸ್ ಪಿ ಮತ್ತು ಬಾಕಿ ಇರುವ ಇತರ ಕೃಷಿ ಸಮಸ್ಯೆಗಳ ವಿಷಯದಲ್ಲಿ) ತೊಂದರೆ ನೀಡಿದರೆ, ನಾವು ಮೊದಲ ಸಲ ಹೇಗೆ ಬಂದಿದ್ದೆವೋ ಅಷ್ಟೇ ಸಂಖ್ಯೆಯಲ್ಲಿ ಇಲ್ಲಿಗೆ ಬರಲಿದ್ದೇವೆ" ಎಂದು ಗುರ್ವಿಂದರ್ ಹೇಳಿದರು.
ಕೆಲವು ಮೀಟರ್ ದೂರದಲ್ಲಿ ಹರಿಯಾಣದ ಫತೇಹಾಬಾದ್ ಜಿಲ್ಲೆಯ ಡಂಗಿಯಾ ಗ್ರಾಮದ ಪ್ರತಿಭಟನಾಕಾರರ ಗುಂಪು, ಧನಿ ಭೋಜ್ ರಾಜ್ ಗ್ರಾಮದ ಸಾತ್ಬೀರ್ ಗೋದರಾ ಮತ್ತು ಇತರರು ತಮ್ಮ ಡೇರೆಗಳಿಂದ ಎರಡು ಪೋರ್ಟಬಲ್ ಫ್ಯಾನ್ ಗಳು, ವಾಟರ್ ಡ್ರಮ್ ಗಳು, ಎರಡು ಏರ್ ಕೂಲರ್‌ಗಳು, ಟಾರ್ಪಾಲಿನ್ ಮತ್ತು ಕಬ್ಬಿಣದ ರಾಡ್‌ಗಳನ್ನು ಸಣ್ಣ ಟ್ರಕ್ ಒಂದಕ್ಕೆ ಲೋಡ್ ಮಾಡುವುದನ್ನು ಮುಗಿಸಿದ್ದರು.


ಎಡಕ್ಕೆ: “ಎಂಎಸ್‌ಪಿಗಾಗಿ ಹೋರಾಡಬೇಕಾದ ಅನಿವಾರ್ಯತೆ ಸೃಷ್ಟಿಯಾದರೆ ನಾವು ಮತ್ತೆ ಬರುತ್ತೇವೆ. ನಮ್ಮ ಆಂದೋಲನವನ್ನು ಸದ್ಯಕ್ಕಷ್ಟೇ ನಿಲ್ಲಿಸಲಗಿದೆ' ಎಂದು ಸತ್ಬೀರ್ ಗೋದರಾ (ಕಿತ್ತಳೆ ಸ್ಕಾರ್ಫ್ ಕಟ್ಟಿಕೊಂಡಿರುವವರು) ಹೇಳಿದರು. ಬಲ: 'ನಾವು ತ್ಯಾಜ್ಯವನ್ನು ಸಂಗ್ರಹಿಸಲು ಇಲ್ಲಿಗೆ ಬಂದಾಗಲೆಲ್ಲ ಅವರು ದಿನಕ್ಕೆ ಎರಡು ಬಾರಿ ನಮ್ಮಂತಹ ಬಡ ಜನರಿಗೆ ಆಹಾರವನ್ನು ನೀಡುತ್ತಿದ್ದರು' ಎಂದು ಕಲ್ಪನಾ ದಾಸಿ ಹೇಳಿದರು
"ನಾವು ನಮ್ಮ ಹಳ್ಳಿಯ ಇನ್ನೊಬ್ಬ ರೈತನಿಂದ ಈ ಟ್ರಕ್ ಕರೆಸಿದ್ದೇವೆ ಮತ್ತು ಡೀಸೆಲ್ ಗೆ ಮಾತ್ರ ಪಾವತಿಸಿದ್ದೇವೆ" ಎಂದು 44 ವರ್ಷದ ಸತ್ಬೀರ್ ಹೇಳಿದರು. "ಈ ಎಲ್ಲಾ ವಸ್ತುಗಳನ್ನು ನಮ್ಮ ಜಿಲ್ಲೆಯ ಧನಿ ಗೋಪಾಲ್ ಚೌಕ್ ಬಳಿ ಇಳಿಸಲಾಗುವುದು. ಪುನಃ ಇಂತಹದ್ದೇ ಹೋರಾಟ ಮಾಡಬೇಕಾಗಿ ಬಂದರೆ ಏನು ಮಾಡುವುದು? ಅದಕ್ಕೇ ಇದೆಲ್ಲವನ್ನೂ ಒಂದೆಡೆ ಇರಿಸಲಿದ್ದೇವೆ. ಸರ್ಕಾರಕ್ಕೆ ಹೇಗೆ ಪಾಠ ಕಲಿಸಬೇಕು ಎಂಬುದನ್ನು ನಾವು ಈಗ ಕಲಿತಿದ್ದೇವೆ." ಹೀಗೆ ಹೇಳುತ್ತಿದ್ದ ಹಾಗೆ ಸುತ್ತಲಿದ್ದ ಎಲ್ಲರೂ ನಕ್ಕರು.
"ನಾವು ಸರ್ಕಾರಕ್ಕೆ ಗಡುವು ನೀಡಿದ್ದೇವೆ. ಎಂಎಸ್‌ಪಿಗಾಗಿ ಹೋರಾಡಬೇಕಾಗಿ ಬಂದರೆ ನಾವು ಹಿಂತಿರುಗುತ್ತೇವೆ. ನಮ್ಮ ಆಂದೋಲನವನ್ನು ನಿಲ್ಲಿಸಲಾಗಿದೆಯಷ್ಟೇ" ಎಂದು ಸತ್ಬೀರ್ ಹೇಳಿದರು. "ಇದು ನಮಗೆ ಐತಿಹಾಸಿಕ ವರ್ಷವಾಗಿತ್ತು. ನಾವು ಜಲಫಿರಂಗಿಗಳು ಮತ್ತು ಅಶ್ರುವಾಯುವನ್ನು ಎದುರಿಸಿದ್ದೇವೆ, ಬಂಡೆಗಳನ್ನು ನಮ್ಮ ದಾರಿಗಡ್ಡವಾಗಿ ಇರಿಸಲಾಯಿತು ಮತ್ತು ನಮ್ಮನ್ನು ತಡೆಯಲು ರಸ್ತೆಗಳನ್ನು ಒಡೆಯಲಾಯಿತು. ಆದರೆ ನಾವು ಎಲ್ಲವನ್ನೂ ಎದುರಿಸಿ ಟಿಕ್ರಿ ತಲುಪಿದೆವು."
ಡಿಸೆಂಬರ್ 11ರ ಶನಿವಾರ ಬೆಳಿಗ್ಗೆ 9 ಗಂಟೆಯ ಹೊತ್ತಿಗೆ ಅನೇಕ ರೈತರು ಟಿಕ್ರಿಯಲ್ಲಿ ಪ್ರತಿಭಟನಾ ಸ್ಥಳದಿಂದ ಹೊರಡತೊಡಗಿರು. ಪ್ಯಾಕ್ ಮಾಡಿ ರೆಡಿಯಾಗಿದ್ದವರೂ ಹೊರಡತೊಡಗಿದರು. ಚಾಪೆಗಳು, ಚಾರ್ಪಾಯಿಗಳು, ಟಾರ್ಪಾಲಿನ್ ಮತ್ತು ಇತರ ಹಲವಾರು ವಸ್ತುಗಳನ್ನು ತುಂಬಲಾಗಿದ್ದ ಟ್ರ್ಯಾಕ್ಟರ್-ಟ್ರಾಲಿಗಳಲ್ಲಿ ಪುರುಷರು ಮೇಲೆ ಕುಳಿತುಕೊಂಡರು. ಕೆಲವರು ಟ್ರಕ್‌ಗಳಲ್ಲಿ, ಉಳಿದವರು ಕಾರು ಮತ್ತು ಬೊಲೆರೋಗಳಲ್ಲಿ ಹೊರಟರು.
ಅವರಲ್ಲಿ ಹೆಚ್ಚಿನವರು ವೆಸ್ಟರ್ನ್ ಪೆರಿಫೆರಲ್ ಎಕ್ಸ್‌ಪ್ರೆಸ್‌ವೇ ಮೂಲಕ ಹೋಗಲು ನೇರವಾಗಿ ಚಲಿಸುತ್ತಿದ್ದರೆ, ಇತರರು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು, ಏಕತಾ ಉಗ್ರಹಣ್) ನೆಲೆಸಿದ್ದ ದೆಹಲಿ-ರೋಹ್ಟಕ್ ರಸ್ತೆಗೆ (ಹರಿಯಾಣದ ಬಹದ್ದೂರ್‌ಗಢ ನಗರದ ಬಳಿ) ಎಡಕ್ಕೆ ತಿರುಗುತ್ತಿದ್ದರು.
ದಾರಿಯಲ್ಲಿ ಬಹದ್ದೂರ್‌ಗಢದಲ್ಲಿ ಕಸ ಸಂಗ್ರಹಿಸುವ ಕೆಲಸ ಮಾಡುತ್ತಿದ್ದ ಜಾರ್ಖಂಡ್‌ನ 30 ವರ್ಷದ ವಲಸೆ ಮಹಿಳೆ ಕಲ್ಪನಾ ದಾಸಿ ತನ್ನ 10 ವರ್ಷದ ಮಗ ಆಕಾಶ್‌ನೊಂದಿಗೆ ಪ್ರತಿಭಟನಾ ಸ್ಥಳದಿಂದ ಕಸ ಸಂಗ್ರಹಿಸಲು ಬಂದಿದ್ದರು. ಒಂದು ದಿನ ಹೋರಾಟದಲ್ಲಿರುವ ರೈತರು ಮನೆಗೆ ಮರಳಬೇಕು ಎನ್ನುವುದು ನನಗೆ ತಿಳಿದಿತ್ತು, ಆದರೆ ಅವರು ಹೊರಡುತ್ತಿರುವುದು ಬೇಸರ ತಂದಿದೆ ಎಂದು ಅವರು ಹೇಳಿದರು. "ನಾವು ತ್ಯಾಜ್ಯ ಸಂಗ್ರಹಿಸಲು ಇಲ್ಲಿಗೆ ಬಂದಾಗ, ಅವರು ನಮ್ಮಂತಹ ಬಡವರಿಗೆ ದಿನಕ್ಕೆ ಎರಡು ಬಾರಿ ಆಹಾರವನ್ನು ನೀಡುತ್ತಿದ್ದರು"


ಎಡ: 'ನೂರಾರು ಟ್ರ್ಯಾಕ್ಟರ್‌ಗಳು ಮೋಗಾದಲ್ಲಿನ ಬಟ್ಟರಿಗೆ ಮೊದಲು ತಲುಪುತ್ತವೆ, ನಮ್ಮ ಗ್ರಾಮಕ್ಕಿಂತ ಮೊದಲು ಎರಡು-ಮೂರು ಹಳ್ಳಿಗಳು. ಅಲ್ಲಿ ನಮ್ಮನ್ನು ಹೂಹಾರಗಳೊಡನೆ ಸ್ವಾಗತಿಸಲಾಗುತ್ತದೆ, ನಂತರ ನಾವು ನಮ್ಮ ಊರನ್ನು ತಲುಪುತ್ತೇವೆ' ಎಂದು ಸಿರಿಂದರ್ ಕೌರ್ ಹೇಳಿದರು. ಬಲ: ತನ್ನ ಹಳ್ಳಿಯ ಇತರ ರೈತ ಪ್ರತಿಭಟನಾಕಾರರೊಂದಿಗೆ ಟ್ರಾಕ್ಟರ್-ಟ್ರಾಲಿಯಲ್ಲಿ ತುಂಬಿಸಲು ಮಾಡಲು ಪಾತ್ರೆಗಳನ್ನು ತೊಳೆಯುತ್ತಿರುವುದು
ಈ ರಸ್ತೆಯ (ರೋಹ್ಟಕ್ ಕಡೆಗೆ ಹೋಗುವ) ಟ್ರ್ಯಾಕ್ಟರ್‌ಗಳನ್ನು ಪ್ಲಾಸ್ಟಿಕ್ ಮತ್ತು ಕಾಗದದ ಹೂವುಗಳು, ಹೊಳೆಯುವ ಸ್ಕಾರ್ಫ್‌ಗಳು ಮತ್ತು ರಿಬ್ಬನ್‌ಗಳು ಮತ್ತು ಒಕ್ಕೂಟದ ಧ್ವಜಗಳಿಂದ ಅಲಂಕರಿಸಲಾಗಿತ್ತು. "ನಾವು ನಮ್ಮ ಟ್ರಾಕ್ಟರ್‌ಗಳನ್ನು ಅಲಂಕರಿಸಿದ ನಂತರ ತೆಗೆದುಕೊಂಡು ಹೋಗುತ್ತಿದ್ದೇವೆ ಮತ್ತು ಸಂಭ್ರಮದ ಮದುವೆಯ ಮೆರವಣಿಗೆಯಂತೆ ಹೊರಡುತ್ತೇವೆ” ಎಂದು ಪಂಜಾಬ್‌ನ ಮೋಗಾ ಜಿಲ್ಲೆಯ ದಾಲಾ ಗ್ರಾಮದ 50 ವರ್ಷದ ಸಿರಿಂದರ್ ಕೌರ್ ಹೇಳಿದರು. ಒಂದು ಟ್ರಾಕ್ಟರ್-ಟ್ರಾಲಿಯಲ್ಲಿ ತನ್ನ ಕುಟುಂಬದ ಹಾಸಿಗೆಗಳು, ಅಡುಗೆ ಪಾತ್ರೆಗಳು ಮತ್ತು ಇತ್ಯಾದಿಗಳನ್ನು ತುಂಬಿಸಲಾಯಿತು, ಇನ್ನೊಂದು ಟ್ರಾಲಿಯನ್ನು ಪುರುಷರು ಪ್ರಯಾಣಿಸಲು ಬಳಸುತ್ತಿದ್ದರು, ಮಹಿಳೆಯರು ಕ್ಯಾಂಟರ್ ಟ್ರಕ್ ಹತ್ತತೊಡಗಿದರು.
“ನೂರಾರು ಟ್ರ್ಯಾಕ್ಟರ್‌ಗಳು ಮೊದಲು ಮೋಗಾದ ಬಟ್ಟರ್ ಎನ್ನುವ ಊರನ್ನು ತಲುಪುತ್ತವೆ, ಅದು ನಮ್ಮ ಹಳ್ಳಿಗೂ ಎರಡು-ಮೂರು ಹಳ್ಳಿಗಳ ಮೊದಲು ಸಿಗುತ್ತದೆ. ನಮ್ಮನ್ನು ಅಲ್ಲಿರುವವರೆಲ್ಲರೂ ಹೂವಿನೊಂದಿಗೆ ಸ್ವಾಗತಿಸುತ್ತಾರೆ. ನಂತರ ನಾವು ಕೊನೆಯದಾಗಿ ನಮ್ಮ ಊರು ತಲುಪುತ್ತೇವೆ,” ಎಂದು ಸಿರಿಂದರ್ ಹೇಳಿದರು. ದಲಾ ಗ್ರಾಮದಲ್ಲಿನ ಅವರ ನಾಲ್ಕು ಎಕರೆಯ ಭೂಮಿಯಲ್ಲಿ ಅವರ ಕುಟುಂಬ ಭತ್ತ, ಗೋಧಿ, ಕಡಲೆ ಬೆಳೆಯುತ್ತಾರೆ. ಅವರು ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದಿಂದ ಬಂದವರೆಂದು ಹೇಳಿದರು. ಮತ್ತು ಈಗ [ಡಿಸೆಂಬರ್ 11ರವರೆಗೆ], “ನನ್ನ ಸೋದರ ಮಾವರೊಬ್ಬರು ಟಿಕ್ರಿಯಲ್ಲಿ ಪ್ರತಿಭಟಿಸುತ್ತಿದ್ದರು, ಒಬ್ಬರು ಸಿಂಘು ಗಡಿಯಲ್ಲಿ, ಮತ್ತು ನನ್ನ ಕುಟುಂಬವು ಇಲ್ಲಿದೆ [ಬಹದ್ದೂರ್‌ಗಢದ ರೋಹ್ಟಕ್ ರಸ್ತೆಯಲ್ಲಿ]. ನಮ್ಮದು ಹೋರಾಟಗಾರರ ಕುಟುಂಬವಾಗಿದ್ದು, ಈ ಹೋರಾಟವನ್ನೂ ಗೆದ್ದಿದ್ದೇವೆ. ನಮ್ಮ ಬೇಡಿಕೆಗಳನ್ನು [ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸುವುದು] ಈಡೇರಿಸಲಾಗಿದೆ, ಈಗ ನಾವು ನಮ್ಮ ಒಕ್ಕೂಟ [ಬಿಕೆಯು ಏಕತಾ ಉಗ್ರಹಣ್] ಹೇಳಿದಂತೆ ಮಾಡುತ್ತೇವೆ."
ಸಮೀಪದ ಮತ್ತೊಂದು ಟ್ರಾಲಿಯಲ್ಲಿ, ಪಂಜಾಬ್‌ನ ಮೋಗಾ ಜಿಲ್ಲೆಯ ಬಧ್ನಿ ಕಲಾನ್ ಗ್ರಾಮದ ಕಿರಣ್‌ಪ್ರೀತ್ ಕೌರ್ (48) ದಣಿದವರಂತೆ ಕಾಣುತ್ತಿದ್ದರು. “ನಾವು ಕೇವಲ ಒಂದು ಗಂಟೆ ಮಾತ್ರ ಮಲಗಿದ್ದೇವೆ. ನಿನ್ನೆಯಿಂದ ಪ್ಯಾಕಿಂಗ್ ಮಾಡುತ್ತಿದ್ದೇವೆ,” ಎಂದು ಹೇಳಿದರು. "ರೈತರ ವಿಜಯೋತ್ಸವವು 3 ಗಂಟೆಯವರೆಗೆ ಮುಂದುವರೆಯಿತು."
ಊರಿನಲ್ಲಿ, ಅವರ ಕುಟುಂಬವು 15 ಎಕರೆ ಭೂಮಿಯನ್ನು ಹೊಂದಿದ್ದು ಅಲ್ಲಿ ಅವರು ಗೋಧಿ, ಭತ್ತ, ಜೋಳ, ಸಾಸಿವೆ ಮತ್ತು ಆಲೂಗಡ್ಡೆಗಳನ್ನು ಬೆಳೆಯುತ್ತಾರೆ. ಇಲ್ಲಿ, "ಅನೇಕರು ಶಾಂತಿಯುತವಾಗಿ ಹೇಗೆ ಪ್ರತಿಭಟಿಸಬಹುದೆನ್ನುವುದನ್ನು ಕಲಿತರು ಮತ್ತು ತಮ್ಮ ಹಕ್ಕುಗಳಿಗಾಗಿ ಹೋರಾಡಿದಾಗ ಅವರು ಗೆಲ್ಲಬಹುದು ಎನ್ನುವುದನ್ನು ಕಲಿತಿದ್ದಾರೆ" ಎಂದು ಅವರು ಹೇಳಿದರು.
ಹೊರಡುವ ಮೊದಲು, ಕಿರಣ್‌ಪ್ರೀತ್ , ಅವರು ಮತ್ತು ಇತರರು ಇಷ್ಟು ದಿನ ತಂಗಿದ್ದ ರಸ್ತೆಯ ಸುತ್ತಲಿನ ಜಾಗಗಳೆಲ್ಲವನ್ನೂ ಸ್ವಚ್ಛಗೊಳಿಸಿದ್ದೇವೆ ಎಂದರು. “ನಾನು ಇಲ್ಲಿನ ಭೂಮಿಗೆ ನಮಸ್ಕರಿಸಿದ್ದೇನೆ. ಇದು ನಮಗೆ ಪ್ರತಿಭಟಿಸಲು ಜಾಗ ನೀಡಿದೆ. ಭೂಮಿ ಮಾತ್ರವೇ ನೀವು ಯಾವುದಕ್ಕಾಗಿ ಪ್ರಾರ್ಥಿಸುತ್ತೀರೋ ಅದನ್ನು ನೀಡುತ್ತದೆ."


ಎಡ: ಕಿರಣ್‌ಪ್ರೀತ್ ಕೌರ್, ಅಮರ್‌ಜೀತ್ ಕೌರ್ ಮತ್ತು ಗುರ್ಮೀತ್ ಕೌರ್, ಎಲ್ಲರೂ ಬದ್ನಿ ಕಲಾನ್‌ನಿಂದ ಬಂದವರು, ಈಗ ಟ್ರಾಲಿಯಲ್ಲಿ ಹಳ್ಳಿಗೆ ಮರಳಲು ಸಿದ್ಧರಾಗಿದ್ದಾರೆ. 'ನಾವು ಕೇವಲ ಒಂದು ಗಂಟೆ ಮಲಗಿದ್ದೆವು. ನಿನ್ನೆಯಿಂದ ಪ್ಯಾಕಿಂಗ್ ಮಾಡುತ್ತಿದ್ದೇವೆ. ಮುಂಜಾನೆ 3 ಗಂಟೆಯವರೆಗೂ ವಿಜಯೋತ್ಸವ ಆಚರಿಸಲಾಯಿತು’ ಎಂದು ಕಿರಣ್‌ಪ್ರೀತ್ ಹೇಳಿದರು. ಬಲ: 'ನಮ್ಮ ಗ್ರಾಮಸ್ಥರು ನಮ್ಮನ್ನು ಸ್ವಾಗತಿಸುತ್ತಾರೆ' ಎಂದು ಬಟಿಂಡಾದ ಬಿಕೆಯು ನಾಯಕರಾದ ಪರಮ್‌ಜಿತ್ ಕೌರ್ ಹೇಳಿದರು
ಬಹದ್ದೂರ್‌ಗಢ್‌ನಲ್ಲಿರುವ ಬಿಕೆಯು ಮುಖ್ಯ ವೇದಿಕೆಯ ಬಳಿ, ಒಕ್ಕೂಟದ ಬಟಿಂಡಾದ ಜಿಲ್ಲಾ ಮಹಿಳಾ ನಾಯಕಿ ಪರಮ್‌ಜಿತ್ ಕೌರ್ ಅವರು ಎಲ್ಲವನ್ನೂ ಟ್ರಾಲಿಗಳಿಗೆ ತುಂಬಿಸುವ ಪ್ರಯತ್ನದಲ್ಲಿ ನಿರತರಾಗಿದ್ದರು. 60ರ ಆಸುಪಾಸಿನಲ್ಲಿರುವ ಪರಮ್‌ಜಿತ್ ಅವರು ರಸ್ತೆ ವಿಭಜಕದಲ್ಲಿ ಆಲೂಗಡ್ಡೆ, ಟೊಮೆಟೊ, ಸಾಸಿವೆ ಮತ್ತು ಹಸಿರು ತರಕಾರಿಗಳನ್ನು ಬೆಳೆದಿದ್ದ ಜಮೀನನ್ನು ತೆರವುಗೊಳಿಸಿದ್ದರು. (ನೋಡಿ ಟಿಕ್ರಿಯ ರೈತರು: ‘ಇದನ್ನೆಲ್ಲ ನಾವು ಜೀವನಪೂರ್ತಿ ನೆನಪಿಸಿಕೊಳ್ಳುತ್ತೇವೆ’ .) “ನಾನು ಅವುಗಳನ್ನು [ಬೆಳೆಗಳನ್ನು] ಕತ್ತರಿಸಿ ಇಲ್ಲಿನ ಕಾರ್ಮಿಕರಿಗೆ ತರಕಾರಿಗಳನ್ನು ನೀಡಿದೆ,” ಎಂದು ಅವರು ಹೇಳಿದರು. "ನಾವು ನಮ್ಮೊಂದಿಗೆ ಕೆಲವು ವಸ್ತುಗಳನ್ನು ಮಾತ್ರ ಮನೆಗೆ ಕೊಂಡು ಹೋಗುತ್ತಿದ್ದೇವೆ. ಇಲ್ಲಿನ ಬಡವರಿಗೆ ಮನೆ ಕಟ್ಟಿಕೊಳ್ಳಲು ಮರದ ತುಂಡುಗಳು, ಟಾರ್ಪಲ್‌ಗಳನ್ನು ನೀಡಿದ್ದೇವೆ."
ಇಂದು ರಾತ್ರಿ, ನಮ್ಮ ಟ್ರಾಲಿಯು ದಾರಿಯಲ್ಲಿ ಸಿಗುವ ಯಾವುದಾದರೂ ಗುರುದ್ವಾರದಲ್ಲಿ ನಿಲ್ಲುತ್ತದೆ ಮತ್ತು ಮರುದಿನ ಬೆಳಿಗ್ಗೆ ಮತ್ತೆ ಹೊರಡಲಿದೆ. “ನಮ್ಮ ಗ್ರಾಮಸ್ಥರು ನಮ್ಮನ್ನು ಸ್ವಾಗತಿಸುತ್ತಾರೆ. ನಮ್ಮ ಭೂಮಿಯನ್ನು ಉಳಿಸಿಕೊಂಡಿದ್ದೇವೆ ಇದಕ್ಕಾಗಿ ನಾವು ಸಾಕಷ್ಟು ಸಂಭ್ರಮಿಸುತ್ತೇವೆ. ಆದರೂ ನಮ್ಮ ಹೋರಾಟ ಇನ್ನೂ ಮುಗಿದಿಲ್ಲ. ನಾವು ಎರಡು ದಿನಗಳ ಕಾಲ ವಿಶ್ರಾಂತಿ ಪಡೆಯುತ್ತೇವೆ ಮತ್ತು ನಂತರ ಪಂಜಾಬ್‌ನಿಂದ ನಮ್ಮ ಇತರ ಬೇಡಿಕೆಗಳಿಗಾಗಿ ಹೋರಾಡುತ್ತೇವೆ."
ಅವರು ಮಾತನಾಡುವಾಗ, ತಮ್ಮ ಟ್ರ್ಯಾಕ್ಟರ್-ಟ್ರಾಲಿಗಳು, ಟ್ರಕ್‌ಗಳು ಮತ್ತು ವಾಹನಗಳ ಸಾಲು ಮನೆಯ ಹಾದಿ ಹಿಡಿಯುತ್ತಿದ್ದವು. ಸಂಚಾರ ನಿಯಂತ್ರಣಕ್ಕೆ ಹರಿಯಾಣ ಪೊಲೀಸರನ್ನು ನಿಯೋಜಿಸಲಾಗಿತ್ತು. ಪ್ರತಿಭಟನಾ ಸ್ಥಳದ ಆರಂಭದಲ್ಲಿ, ಪಂಜಾಬ್ ಕಿಸಾನ್ ಯೂನಿಯನ್‌ನ ವೇದಿಕೆಯಿಂದ ಸ್ವಲ್ಪ ದೂರದಲ್ಲಿ, ಕೃಷಿ ಪ್ರತಿಭಟನಾಕಾರರನ್ನು ದೆಹಲಿಗೆ ಪ್ರವೇಶಿಸುವುದನ್ನು ತಡೆಯಲು ಕಳೆದ ವರ್ಷ ಹಾಕಲಾಗಿದ್ದ ಬಂಡೆಗಳನ್ನು ಒಡೆಯಲು ಬಂದಿದ್ದ ಜೆಸಿಬಿ ಯಂತ್ರವಿತ್ತು.
ಸುಮಾರು 11 ಗಂಟೆಯ ಹೊತ್ತಿಗೆ, ಟಿಕ್ರಿ ಮೈದಾನದಿಂದ ಎಲ್ಲವನ್ನೂ ತೆರವುಗೊಳಿಸಲಾಯಿತು, ಕೆಲವು ಪ್ರತಿಭಟನಾಕಾರರು ಮಾತ್ರ ಉಳಿದಿದ್ದರು, ಅವರೂ ತೆರಳಲು ಸಿದ್ಧರಾಗಿದ್ದರು. ಒಂದು ವರ್ಷದಿಂದ ‘ಕಿಸಾನ್ ಮಜ್ದೂರ್ ಏಕ್ತಾ ಜಿಂದಾಬಾದ್’ ಘೋಷಣೆಗಳೊಂದಿಗೆ ಪ್ರತಿಧ್ವನಿಸಿದ ಪ್ರತಿಭಟನಾ ಸ್ಥಳವು ಮೌನವಾಗಿತ್ತು. ಸಂಭ್ರಮಾಚರಣೆಗಳು ಮತ್ತು ಘೋಷಣೆಗಳು ರೈತರ ಹಳ್ಳಿಗಳಲ್ಲಿ ಪ್ರತಿಧ್ವನಿಸುತ್ತಲೇ ಇರುತ್ತವೆ - ಅಲ್ಲಿ ಅವರು ಹೋರಾಟವನ್ನು ಮುಂದುವರಿಸಲು ನಿರ್ಧರಿಸಿದ್ದಾರೆ.

ಹರಿಯಾಣದ ಫತೇಹಾಬಾದ್ ಜಿಲ್ಲೆಯ ಧನಿ ಭೋಜ್ ರಾಜ್ ಗ್ರಾಮದ ಕೃಷಿ ಪ್ರತಿಭಟನಾಕಾರರು ಪಶ್ಚಿಮ ದೆಹಲಿ ಬಳಿಯ ಟಿಕ್ರಿ ಪ್ರತಿಭಟನಾ ಸ್ಥಳದಲ್ಲಿ ತಮ್ಮ ಡೇರೆಗಳು ಕೀಳುತ್ತಿರುವುದು ಮತ್ತು ಲಾರಿಗಳಿಗೆ ತುಂಬುತ್ತಿರುವುದು

ಅವರು ಬಿದಿರಿನ ಕೀಲುಗಳನ್ನು ಮುರಿಯಲು ಮರದ ತುಂಡನ್ನು ಬಳಸುತ್ತಿದ್ದರು, ಕೆಲವೊಮ್ಮೆ ಅವರು ರಚನೆಗಳ ತಳವನ್ನು ಒಡೆ ಯಲು ಇಟ್ಟಿಗೆಗಳನ್ನು ಬಳಸುತ್ತಿದ್ದರು

ಹಿಂದಿನ ರಾತ್ರಿ ಪ್ಯಾಕಿಂಗ್ ಪ್ರಾರಂಭವಾಯಿತು ಮತ್ತು ಡಿಸೆಂಬರ್ 11 ರ ಮುಂಜಾನೆ ಯವರೆಗೂ ಮುಂದುವರಿಯಿತು: 'ನಾವು ಈ ಶಿಬಿರ ಗಳನ್ನು ನಮ್ಮ ಕೈ ಯಾರೆ ನಿರ್ಮಿಸಿದ್ದೇವೆ, ಮತ್ತು ಈಗ ನಮ್ಮ ದೇ ಕೈಗಳಿಂದ ನಾವು ಅವುಗಳನ್ನು ಕೀಳುತ್ತಿದ್ದೇವೆ '

ಗುರ್ವಿಂದರ್ ಸಿಂಗ್ ( ಸಮುದ್ರ ನೀಲಿ ರುಮಾಲು, ಮಧ್ಯದಲ್ಲಿ) ಮತ್ತು ಅವರ ಗ್ರಾಮದ ಇತರ ಪ್ರತಿಭಟನಾಕಾರರು ಪಶ್ಚಿಮ ದೆಹಲಿಯ ಬಳಿಯ ಟಿಕ್ರಿ ಪ್ರತಿಭಟನಾ ಸ್ಥಳದಲ್ಲಿ ತಮ್ಮ ಕಳಚಿದ ಡೇರೆಗಳ ಹೊರಗೆ ನಿಂತಿರುವುದು

ಪುರುಷರು ಹಾಸಿಗೆಗಳು, ಚಾ ಪೆ ಗಳು, ಟಾರ್ಪಾಲಿನ್ ಮತ್ತು ಇತರ ವಿವಿಧ ವಸ್ತುಗ ಳನ್ನು ರಾಶಿಹಾಕಲಾದ ಟ್ರ್ಯಾಕ್ಟರ್-ಟ್ರಾಲಿಗಳ ಮೇಲ್ಭಾಗದಲ್ಲಿ ಕುಳಿತರು. ಕೆಲವರು ಟ್ರಕ್ ಗಳಲ್ಲಿ, ಇತರರು ಕಾರುಗಳಲ್ಲಿ ಮತ್ತು ಬೊಲೆರೋ ಗಳ ಲ್ಲಿ ಹೊರಡುತ್ತಿದ್ದರು

ಪಂಜಾ ಬಿ ನ ಫರೀದ್ ಕೋಟ್ ಜಿಲ್ಲೆಯ ಕೃಷಿ ಪ್ರತಿಭಟನಾಕಾರರು ಹರಿಯಾಣದ ಬಹದ್ದೂರ್ ಘರ್ ನಗರದ ಬಳಿ ತಮ್ಮ ಶಿಬಿರದಿಂದ ( 25 ಜನರ ಆಶ್ರಯತಾಣ ) ಫ್ಯಾನ್ ಮತ್ತು ವಿದ್ಯುತ್ ಸಂಪರ್ಕಗಳನ್ನು ತೆಗೆದುಹಾ ಕುತ್ತಿರುವುದು . ಜಸ್ಕರ ಣ್ ಸಿಂಗ್ ( ಫ್ಯಾನ್ ತೆಗೆಯುತ್ತಿರುವವರು ) ಹೇಳಿದರು: 'ನಮ್ಮ ಬೇಡಿಕೆಗಳನ್ನು ಪೂರೈಸಿ ರುವುದರಿಂದಾಗಿ ನಾವು ಸಂತೋಷವಾಗಿದ್ದೇವೆ. ಅಗತ್ಯವಿದ್ದರೆ ನಾವು ಹಿಂತಿರು ಗಿ ಬರು ತ್ತೇವೆ'

ರೋಹ್ಟಕ್ ರಸ್ತೆಯಲ್ಲಿ ತಮ್ಮ ತಾತ್ಕಾಲಿಕ ಶಿಬಿರ ಗಳನ್ನು ತೆರವುಗೊಳಿಸುವಾಗ, ಕೃಷಿ ಪ್ರತಿಭಟನಾಕಾರ ರೊಬ್ಬರು ಸ್ಥಳೀಯ ಮಹಿಳಾ ಕಾರ್ಮಿಕರಿಗೆ ತಮ್ಮ ಬಳಿಯಿದ್ದ ಮರದ ಮೇಜುಗಳು ಮತ್ತು ಇತರ ಮರುಬಳಕೆ ಮಾಡಬಹುದಾದ ವಸ್ತುಗಳನ್ನು ನೀಡಿದ ರು

'ನಾವು ನಮ್ಮ ಟ್ರ್ಯಾಕ್ಟ ರು ಗಳನ್ನು ಅಲಂಕರಿಸಿದ ನಂತರ ಅವುಗಳನ್ನು ತೆಗೆದುಕೊಂಡು ಹೋ ಗಲಿ ದ್ದೇವೆ ಮತ್ತು ಸಂಭ್ರಮ ದ ಮದುವೆಯ ಮೆರವಣಿಗೆಯಂತೆ ಹೊರಡು ತ್ತೇವೆ' ಎಂದು ಸಿರಿಂದರ್ ಕೌರ್ ಹೇಳಿದರು

ಪಂಜಾಬ್ ನ ಫರೀದ್ ಕೋಟ್ ಜಿಲ್ಲೆಯ ಬ ಗಿಂಯಾ ಗ್ರಾಮದ ರೈತರು ಪ್ರತಿಭಟನೆಯ ಮೊದಲ ದಿನ ಮತ್ತು ಪ್ರತಿಭಟನೆಯ ಕೊನೆಯ ದಿನದಂದು ಹಾಜರಿದ್ದವರನ್ನು ಗೌರವಿಸಿದರು

ಪಂಜಾ ಬಿ ನ ಫರೀದ್ ಕೋಟ್ ಜಿಲ್ಲೆಯ ಡೆಮ್ರು ಖುರ್ದ್ ಗ್ರಾಮದ ಹೋರಾಟಗಾರ ರೈತರು ರೋಹ್ಟಕ್ ರಸ್ತೆಯ ಪ್ರತಿಭಟನಾ ಸ್ಥಳದಿಂದ ಹೊರಡಲು ಸಿದ್ಧತೆ ನಡೆಸುತ್ತಿದ್ದಾರೆ

ಫರೀದ್ ಕೋಟ್ ಜಿಲ್ಲೆಯ ಡೆಮ್ರು ಖುರ್ದ್ ಗ್ರಾಮದ ಹೋರಾಟಗಾರ ರೈತರು: ಪ್ಯಾಕಿಂಗ್ ಮುಗಿದಿದೆ, ಟ್ರಕ್‌ಗಳಲ್ಲಿ ಲೋಡ್ ಮಾಡಲಾಗಿದೆ, ಈಗ ಗ್ರೂಪ್ ಫೋಟೋ ಸಮಯ

ಪಂಜಾಬ್ ನ ಮಾನಸ ಜಿಲ್ಲೆಯ ರೈತನೊಬ್ಬ ಟ್ರಕ್ ನಲ್ಲಿ ಮುಗುಳ್ನ ಗೆಯೊಡನೆ ಹೊರಟಿ ರುವುದು

ವಿಜಯಶಾಲಿಗಳಾಗಿ ಮತ್ತು ದೃಢನಿಶ್ಚಯದೊಡನೆ ಪಂಜಾಬ್ ನ ಮಾನ್ಸಾ ಜಿಲ್ಲೆಯ ರೈತರು ಟ್ರಕ್ ನಲ್ಲಿ ಪ್ರತಿಭಟನಾ ಸ್ಥಳದಿಂದ ಹೊರಟರು

ಎಡದಿಂದ ಬಲಕ್ಕೆ: ಮುಖ್ತೇಯಾರ್ ಕೌರ್, ಹರ್ಪಾಲ್ ಕೌರ್, ಬಯಂಟ್ ಕೌರ್ ಮತ್ತು ಹಮೀರ್ ಕೌರ್ ಪ್ರತಿಭಟನಾ ಸ್ಥಳದಿಂದ ಹೊರಡುವ ಮೊದಲು ರೋಹ್ಟಕ್ ರಸ್ತೆಯಲ್ಲಿ ಗಿಡ್ಡಾ (ಸಂಭ್ರಮಾಚರಣೆ ನೃತ್ಯ) ಮಾಡುತ್ತಿದ್ದಾರೆ

ಆಲೂಗಡ್ಡೆ, ಟೊಮೆಟೊ, ಸಾಸಿವೆ ಮತ್ತು ಹಸಿರು ತರಕಾರಿಗಳನ್ನು ಬೆಳೆದಿದ್ದ ರಸ್ತೆ ವಿಭಜಕದ ಮೇಲಿನ ಸ್ಥಳವನ್ನು ತೆರವುಗೊಳಿಸಿದ ಪರಮ್ಜಿತ್ ಕೌರ್, 'ನಾನು ಅವುಗಳನ್ನು ಕತ್ತರಿಸಿ ಇಲ್ಲಿನ ಕಾರ್ಮಿಕರಿಗೆ ತರಕಾರಿಗಳನ್ನು ನೀಡಿ ದೆ ' ಎಂದು ಹೇಳಿದರು

ಡಿಸೆಂಬರ್ 11ರ ಬೆಳಗಿನ 11ರ ಸುಮಾರಿಗೆ ಟಿಕ್ರಿ ಮೈದಾನದಿಂದ ಎಲ್ಲವನ್ನೂ ತೆರವುಗೊಳಿಸಲಾಗಿತ್ತು, ಕೆಲವು ಪ್ರತಿಭಟನಾಕಾರರು ಮಾತ್ರ ವೆ ಹೊರಡಲು ಸಿದ್ಧರಾಗಿ ಅಲ್ಲಿದ್ದರು

ಭಾರತೀಯ ಕಿಸಾನ್ ಯೂನಿಯನ್ (ಏಕ್ತಾ ಉಗ್ರಹ ಣ್ ) ಡಿಸೆಂಬರ್ 11 ರಂದು ಹರಿಯಾಣದ ಬಹದ್ದೂರ್ ಘರ್ ನಗರದ ಬಳಿ ಮುಖ್ಯ ವೇದಿಕೆ: ಒಂದು ವರ್ಷ ಗಿಜಿಗುಡುತ್ತಿ ದ್ದ ಇದು ಈಗ ಮೌನವಾಗಿದೆ

ಯೂನಿಯನ್ ವೇದಿಕೆಯಿಂದ ಅನ ತಿ ದೂರದಲ್ಲಿ, ಕೃಷಿ ಪ್ರತಿಭಟನಾಕಾರರು ದೆಹಲಿ ಪ್ರವೇಶಿಸದಂತೆ ತಡೆಯಲು ಕಳೆದ ವರ್ಷ ಅಲ್ಲಿ ಇರಿಸಲಾದ ಬಂಡೆಗಳನ್ನು ಒಡೆಯುವ ಜೆಸಿಬಿ ಯಂತ್ರವಿತ್ತು

ಪಂಜಾ ಬಿ ನ ಮೋಗಾ ಜಿಲ್ಲೆಯ ಭಲೋರ್ ಗ್ರಾಮದ ಪ್ರತಿಭಟನಾನಿರತ ರೈತರು ತಮ್ಮ ವಿಜಯವನ್ನು ಸಂಭ್ರಮಿಸುತ್ತಿದ್ದಾರೆ

ರೋಹ್ಟಕ್ ರಸ್ತೆಯಲ್ಲಿ ತಮ್ಮ ಟ್ರ್ಯಾಕ್ಟರ್-ಟ್ರಾಲಿಗಳು, ಟ್ರ ಕ್ ಗಳು ಮತ್ತು ಕಾರುಗಳಲ್ಲಿ, ಡಿಸೆಂಬರ್ 11 ರ ಬೆಳಿಗ್ಗೆ ತಮ್ಮ ಹಳ್ಳಿಗಳಿಗೆ ಹಿಂದಿರುಗು ತ್ತಿರುವುದು

ರೈತರ ವಾಹನಗಳು ಮನೆಗೆ ಹೊರಡುತ್ತಿದ್ದಂತೆ , ಸಂಚಾರವನ್ನು ನಿರ್ವಹಿಸಲು ಹರಿಯಾಣ ಪೊಲೀಸರನ್ನು ನಿಯೋಜಿಸಲಾಗಿತ್ತು

ಮಾರ್ಗದಲ್ಲಿ ಸಂಭ್ರಮಾಚರಣೆಯ ಶುಭಾಶಯಗಳ ವಿನಿಮಯ

ಒಂದು ವರ್ಷದಿಂದ ‘ ಕಿಸಾನ್ ಮಜ್ದೂರ್ ಏಕ್ತಾ ಜಿಂದಾಬಾದ್’ ಘೋಷಣೆಗಳೊಂದಿಗೆ ಪ್ರತಿಧ್ವನಿಸಿದ ಪ್ರತಿಭಟನಾ ಸ್ಥಳವು ಮೌನವಾಗಿತ್ತು. ಸಂಭ್ರಮಾಚರಣೆಗಳು ಮತ್ತು ಘೋಷಣೆಗಳು ರೈತರ ಹಳ್ಳಿಗಳಲ್ಲಿ ಪ್ರತಿಧ್ವನಿಸುತ್ತಲೇ ಇರುತ್ತವೆ - ಅಲ್ಲಿ ಅವರು ಹೋರಾಟವನ್ನು ಮುಂದುವರಿಸಲು ನಿರ್ಧರಿಸಿದ್ದಾರೆ
ಅನುವಾದ: ಶಂಕರ. ಎನ್. ಕೆಂಚನೂರು