60 ವರ್ಷ ಪ್ರಾಯದ ಸುಬ್ಬಯ್ಯ ಕಳೆದ ಕೆಲವು ವರ್ಷಗಳಿಂದ ಈ ಪ್ರದೇಶದಲ್ಲಿನ ಇತರ ರೈತರು ತಮ್ಮ ಜಮೀನಿನಲ್ಲಿರುವ ಆಲದ ಮರಗಳನ್ನು (ಫಿಕಸ್ ಬೆಂಗಾಲೆನ್ಸಿಸ್) ಮಾರುತ್ತಿರುವುದನ್ನು ಆತಂಕದಿಂದಲೇ ನೋಡುತ್ತಿದ್ದರು. ಎರಡು ದಶಕಗಳ ಹಿಂದೆ ಸುಬ್ಬಯ್ಯ ಕೂಡ ತಮ್ಮ ಎರಡು ಎಕರೆ ಭೂಮಿಯಲ್ಲಿ ಅರಳಿ ಗಿಡವನ್ನು ನೆಟ್ಟು ಬೆಳೆಸಿದ್ದರು. ಈ ಸಸಿ ಬೆಳೆದು ದೊಡ್ಡ ಮರವಾಗಿ ವಿಶಾಲವಾಗಿ ಹರಡಿ ಬಿಸಿಲಿನ ಬೇಗೆಯಲ್ಲಿ ನೆರಳನ್ನು ನೀಡುತ್ತಿತ್ತು.
ಈಗ ಸುಬ್ಬಯ್ಯನವರು ತನ್ನ ಪತ್ನಿಯ ಚಿಕಿತ್ಸೆಯ ಖರ್ಚಿಗಾಗಿ ತಾವು ಬೆಳೆಸಿದ ಆಲದ ಮರವನ್ನು ಕೇವಲ 8,000 ರೂಪಾಯಿಗೆ ಮಾರಬೇಕಾಗಿದೆ. ಎರಡು ವರ್ಷಗಳ ಹಿಂದೆ, ಗೌರಿ-ಗಣೇಶ ಹಬ್ಬದ (ಕರ್ನಾಟಕದ ಹಬ್ಬ) ಹದಿನೈದು ದಿನಗಳ ಮೊದಲು, ಸುಬ್ಬಯ್ಯನವರ ಪತ್ನಿ 56 ವರ್ಷದ ಮಹದೇವಮ್ಮನವರು ಮೇಕೆಗಳನ್ನು ಮೇಯಿಸುವಾಗ ಕಲ್ಲು ಎಡವಿ ಬಿದ್ದು ಆವರ ಸೊಂಟ ಮುರಿದಿತ್ತು.
“ಆಡುಗಳ ಹಿಂಡಿನಿಂದ ದಾರಿ ತಪ್ಪಿದ ಮರಿಯನ್ನು ಬೆನ್ನಟ್ಟಿ ಓಡುತ್ತಿದ್ದೆ. ಆಗ ನನಗೆ ಕಲ್ಲು ಇದ್ದಿದ್ದು ಕಾಣಿಸಲಿಲ್ಲ. ಬಿದ್ದ ಮೇಲೆ ಎದ್ದು ನಿಲ್ಲಲೂ ನನಗೆ ಸಾಧ್ಯವಾಗಲಿಲ್ಲ,” ಎಂದು ಮಹದೇವಮ್ಮ ತಮ್ಮ ದುರಾದೃಷ್ಟದ ದಿನವನ್ನು ನೆನಪಿಸಿಕೊಳ್ಳುತ್ತಾ ಹೇಳುತ್ತಾರೆ. “ನನಗೆ ವಿಪರೀತ ನೋವಿತ್ತು. ಅದೃಷ್ಟವಶಾತ್, ದಾರಿಯಲ್ಲಿ ಹೋಗುತ್ತಿದ್ದವರು ನನಗೆ ಮನೆಗೆ ಹೋಗಲು ನೆರವಾದರು," ಎನ್ನುತ್ತಾರೆ.
ಈ ಘಟನೆ ಈಗಾಗಲೇ ನಲುಗಿರುವ ಈ ದಂಪತಿಗಳ ಪ್ರಪಂಚವನ್ನೇ ತಲೆಕೆಳಗಾಗಿಸಿತ್ತು.


ಎಡ: ಮಹದೇವಮ್ಮ ತಮ್ಮ ಮನೆಯ ಅಂಗಳದಲ್ಲಿ ಓಡಾಡಲು ವಾಕರ್ ಬಳಸುತ್ತಾರೆ. ಬಲ: ಮಹದೇವಮ್ಮನವರ ವೈದ್ಯಕೀಯ ಚಿಕಿತ್ಸೆಯ ವೆಚ್ಚವನ್ನು ಭರಿಸಲು ಸುಬ್ಬಯ್ಯನವರು ತಮ್ಮ ಜಮೀನಿನಲ್ಲಿ ತಾವೇ ನೆಟ್ಟು ಪ್ರೀತಿಯಿಂದ ಬೆಳೆಸಿದ್ದ ಆಲದ ಮರವನ್ನು ಮಾರಬೇಕಾಯಿತು
ಸುಬ್ಬಯ್ಯ ಮತ್ತು ಮಹದೇವಮ್ಮನವರು ಮೈಸೂರು-ಊಟಿ ಹೆದ್ದಾರಿಯ ನಂಜನಗೂಡು ಪಟ್ಟಣದಿಂದ ಸುಮಾರು 12 ಕಿಲೋಮೀಟರ್ ದೂರದಲ್ಲಿರುವ ಹುಣಸನಾಳು ಗ್ರಾಮದ ನಿವಾಸಿಗಳು. ಇವರು ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ ಎಂದು ಪರಿಗಣಿಸಲಾಗಿರುವ ಆದಿ ಕರ್ನಾಟಕ (ಎಕೆ) ಸಮುದಾಯಕ್ಕೆ ಸೇರಿದವರು. ಇವರಿಗೆ 20 ವರ್ಷದ ಮಗಳು ಪವಿತ್ರಾ ಮತ್ತು 18 ವರ್ಷದ ಮಗ ಅಭಿಷೇಕ್ ಎಂಬ ಮಕ್ಕಳಿದ್ದಾರೆ.
ಪವಿತ್ರಾ 8 ನೇ ತರಗತಿಯವರೆಗೆ ಓದಿದ್ದಾರೆ. ಅಭಿಷೇಕ್ ಗೆ ಹುಟ್ಟಿನಿಂದಲೇ ಶ್ರವಣ ದೋಷ ಇರುವುದರಿಂದ ಅವರಿಗೆ ಎರಡು ಕಿವಿಗಳೂ ಕೇಳುವುದಿಲ್ಲ. ಜನರೊಂದಿಗೆ ಮಾತನಾಡುವಾಗ ಅವರಿಗೆ ಬಹುತೇಕ ಏನೂ ಕೇಳುವುದಿಲ್ಲ. ಹೀಗಾಗಿ, ಅವರು ಮಾತನಾಡುವುದನ್ನೂ ಕಲಿತಿಲ್ಲ. ಅಭಿಷೇಕ್ ಸನ್ನೆಗಳ ಮೂಲಕ ಸಂವಹನ ನಡೆಸುತ್ತಾರೆ. ವಾಹನಗಳ ಸದ್ದು ಅಥವಾ ಹಾರ್ನ್‌ಗಳು ಅವರ ಕಿವಿಗೆ ಕೇಳದೇ ಇರುವುದರಿಂದ ಒಬ್ಬನೇ ಹೊರಗೆ ಹೋಗುವಾಗ ತುಂಬಾ ಜಾಗರೂಕತೆಯಿಂದ ಇರಬೇಕಾಗುತ್ತದೆ.
ಸುಬ್ಬಯ್ಯ ಅವರು ತಮ್ಮ ಮಗನನ್ನು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಚಿನಕುರಳಿ ಗ್ರಾಮದಲ್ಲಿರುವ ಜ್ಞಾನ ವಿಕಾಸ ವಾಕ್ ಮತ್ತು ಶ್ರವಣ ವಿಶೇಷ ವಸತಿ ಶಾಲೆಗೆ ಸೇರಿಸಿದರು. ಅಭಿಷೇಕ್ ಇಲ್ಲಿ 12 ನೇ ತರಗತಿಯನ್ನು ತೇರ್ಗಡೆಗೊಳಿಸಿದ್ದಾರೆ.ಈಗ ಮನೆಯಲ್ಲಿ ಹಸುಗಳನ್ನು ನೋಡಿಕೊಳ್ಳುತ್ತಾ ಮನೆಯ ಖರ್ಚನ್ನು ನಿಭಾಯಿಸಲು ಪಕ್ಕದ ನಗರಗಳಲ್ಲಿ ಕೆಲಸ ಹುಡುಕುತ್ತಿದ್ದಾರೆ.
ಮಹದೇವಮ್ಮನವರ ಚಿಕಿತ್ಸಾ ವೆಚ್ಚದಿಂದಾಗಿ ಅವರಲ್ಲಿ ಇದ್ದ ಸಣ್ಣ ಉಳಿತಾಯವೂ ಖಾಲಿಯಾಗುತ್ತಾ ಹೋಯಿತು. ಸುಬ್ಬಯ್ಯನವರು ತಮ್ಮ ಆಲದ ಮರವನ್ನು ಮಾರಿದ ನಂತರವೂ 70,000 ರುಪಾಯಿಗಾಗಿ ತಮ್ಮ ಗ್ರಾಮದ ಮತ್ತೋರ್ವ ರೈತ ಸ್ವಾಮಿ ಎಂಬುವವರಿಗೆ ತಮ್ಮ ಎರಡು ಎಕರೆ ಒಣಭೂಮಿಯನ್ನು ಮೂರು ವರ್ಷಗಳ ಗುತ್ತಿಗೆಗೆ ನೀಡಿದ್ದಾರೆ.


(ಎಡ) ತುಂಡು ಮಾಡಲು ಅರಿಶಿನ ಗೆಡ್ಡೆಗಳನ್ನು ಗುದ್ದುತ್ತಿರುವ ಮಹದೇವಮ್ಮ ಅವರ ಸಂತಸದ ಕ್ಷಣಗಳು. ಸೊಂಟ ಮುರಿಯುವ ಮೊದಲು ಅವರು ನೆರೆಹೊರೆಯ ಹೊಲಗಳಲ್ಲಿ ದಿನಕ್ಕೆ 200 ರುಪಾಯಿ ಕೂಲಿಗೆ ಕೆಲಸ ಮಾಡುತ್ತಿದ್ದರು. ಬಲ: ತಮ್ಮ ಮನೆಯ ಮುಂದೆ (ಎಡದಿಂದ ಬಲಕ್ಕೆ) ಪವಿತ್ರ, ಸುಬ್ಬಯ್ಯ, ಮಹದೇವಮ್ಮ ಮತ್ತು ಅಭಿಷೇಕ್
ವೈದ್ಯಕೀಯ ಪರೀಕ್ಷೆಗಳ ನಂತರ ಮೈಸೂರಿನ ಕೆ.ಆರ್. ಆಸ್ಪತ್ರೆಯ ವೈದ್ಯರು ಮಹದೇವಮ್ಮ ಅವರಿಗೆ ಶಸ್ತ್ರಚಿಕಿತ್ಸೆ ಅಗತ್ಯವಿರುವುದನ್ನು ತಿಳಿಸಿದರು. ಆದರೆ ರಕ್ತಹೀನತೆ ಮತ್ತು ಥೈರಾಯ್ಡ್ ಕಾಯಿಲೆಯಿಂದ ಬಳಲುತ್ತಿರುವ ಅವರಿಗೆ ಇದನ್ನು ನಿಭಾಯಿಸುವುದು ಕಷ್ಟ. 15 ದಿನಗಳ ಕಾಲ ಆಸ್ಪತ್ರೆಯಲ್ಲಿ ಇದ್ದು ಡಿಸ್ಚಾರ್ಜ್ ಆದರು. ಈಗ ಅವರಿಗೆ ಔಷಧಿಗಳ ಕೋರ್ಸನ್ನು ಕೊಡಲಾಗಿತ್ತು ಮತ್ತು ಆರು ವಾರಗಳಲ್ಲಿ ಶಸ್ತ್ರಚಿಕಿತ್ಸೆಗಾಗಿ ಮತ್ತೆ ಬರಲು ತಿಳಿಸಿದ್ದರು. ಅಷ್ಟರೊಳಗೆ ಈ ದಂಪತಿಗೆ ಪ್ರಯಾಣ, ಊಟ-ತಿಂಡಿ, ಎಕ್ಸ್ ರೇ, ರಕ್ತ ಪರೀಕ್ಷೆಗಳು ಮತ್ತು ಔಷಧಿಗಳ ಎಲ್ಲಾ ಸೇರಿ 40,000 ರುಪಾಯಿ ಖರ್ಚಾಗಿತ್ತು.
ಅಸ್ವಸ್ಥೆಯಾಗಿರುವ ಮಹದೇವಮ್ಮ ಅವರಿಗೆ ನೋವನ್ನು ತಡೆದುಕೊಳ್ಳಲು ಸಾಧ್ಯವಾಗಿಲ್ಲ. ಹಾಗಾಗಿ ದಂಪತಿಗಳು ತಮ್ಮ ಮನೆಯಿಂದ ಸುಮಾರು 130 ಕಿಲೋಮೀಟರ್ ದೂರದಲ್ಲಿರುವ, ನೆರೆಯ ತಮಿಳುನಾಡಿನ ಈರೋಡ್ ಜಿಲ್ಲೆಯ ಸಿಂಗ್ರಿಪಾಳ್ಯಂ ಗ್ರಾಮದಲ್ಲಿ ಶಸ್ತ್ರಚಿಕಿತ್ಸೆಯಿಲ್ಲದೆ ನೀಡುವ ಚಿಕಿತ್ಸೆಯ ಮೊರೆ ಹೋಗಿದ್ದಾರೆ. ಸಿಂಗ್ರಿಪಾಳ್ಯಂ ಸಾಂಪ್ರದಾಯಿಕ ವಿಧಾನದಲ್ಲಿ ಮೂಳೆ ಚಿಕಿತ್ಸೆ ನೀಡುವ ಚಿಕಿತ್ಸಾ ಕೇಂದ್ರಗಳಿಗೆ ಹೆಸರುವಾಸಿ. ಇಲ್ಲಿ ಮಾದೇವಮ್ಮನವರ ಕಾಲನ್ನು ಸೊಂಟದಿಂದ ಪಾದದವರೆಗೆ ದಬ್ಬೆ ಕಟ್ಟಿ ಮುರಿದ ಸೊಂಟದ ಮೇಲೆ ಗಿಡಮೂಲಿಕೆ ಎಣ್ಣೆಯನ್ನು ಹಚ್ಚುತ್ತಾರೆ. ಇದಕ್ಕೇನು ಕಮ್ಮಿ ಖರ್ಚುಯಾಗುವುದಿಲ್ಲ. ಸುಬ್ಬಯ್ಯ ಮತ್ತು ಮಹದೇವಮ್ಮ 15 ದಿನಗಳಿಗೊಮ್ಮೆ ಸಿಂಗ್ರಿಪಾಳ್ಯಕ್ಕೆ ಬಾಡಿಗೆ ಕಾರಿನಲ್ಲಿ ನಾಲ್ಕು ಬಾರಿ ಹೋಗಬೇಕಿತ್ತು. ಪ್ರತೀ ಬಾರಿಯ ಚಿಕಿತ್ಸೆಗೂ ಅವರು 6,000 ರುಪಾಯಿ ಕೊಡಬೇಕಿತ್ತು. ಅಲ್ಲದೇ, ಸಿಂಗ್ರಿಪಾಳ್ಯಕ್ಕೆ ಹೋಗಿ ಬರುವ ಒಂದು ಟ್ರಿಪ್ ಗೆ 4,500 ರುಪಾಯಿ ಬಾಡಿಗೆ ಕೊಡಬೇಕಿತ್ತು.
ಈ ಚಿಕಿತ್ಸೆಯಿಂದಾಗಿ ಇತರ ಸಮಸ್ಯೆಗಳೂ ಕಾಣಿಸಿಕೊಂಡವು. ಮಹದೇವಮ್ಮನವರ ಕಾಲಿಗೆ ಕಟ್ಟಿದ್ದ ದಬ್ಬೆಯ ಅಂಚು ಪಾದದಲ್ಲಿ ಗಾಯವುಂಟು ಮಾಡಿತ್ತು ಮತ್ತು ಘರ್ಷಣೆಯಿಂದಾಗಿ ಚರ್ಮ ಕಿತ್ತುಹೋಗಿತ್ತು. ದಬ್ಬೆ ಅವರ ಪಾದಗಳನ್ನು ಕೊರೆದು ಕೊರೆದು ಅವರ ಎಲುಬುಗಳು ಕಾಣಿಸಿಕೊಂಡು ಗಾಯ ಉಲ್ಬಣಗೊಂಡಿತು. ಇದರ ನಂತರ ಸುಬ್ಬಯ್ಯ ಅವರು ಮಹದೇವಮ್ಮನವರನ್ನು ನಂಜನಗೂಡಿನ ಖಾಸಗಿ ಕ್ಲಿನಿಕ್ ಒಂದಕ್ಕೆ ಕರೆದುಕೊಂಡು ಹೋದರು. ಈ ಚಿಕಿತ್ಸೆಯಿಂದಾಗಿ ಅವರು 30,000 ರುಪಾಯಿ ಕಳೆದುಕೊಂಡರೇ ಹೊರತು ಕಾಲು ನೋವು ಗುಣವಾಗಲಿಲ್ಲ.
ಕಾಲಿಗೆ ಪೆಟ್ಟು ಮಾಡಿಕೊಂಡ ಮಹದೇವಮ್ಮ ಮನೆಯಲ್ಲಿ ಓಡಾಡಲು ಹೋಗಿ ಮತ್ತೆರಡು ಬಾರಿ ಬಿದ್ದರು. ಹೀಗೆ ಎರಡು ಬಾರಿ ಬಿದ್ದು ಅವರ ಮೊಣಕಾಲಿಗೆ ಗಾಯವಾಗಿದೆ. ಸಮೀಪದ ಆಸ್ಪತ್ರೆಯಲ್ಲಿ 4,000 ರುಪಾಯಿ ಖರ್ಚು ಮಾಡಿ ಚಿಕಿತ್ಸೆ ನೀಡಿದರೂ ಮೊಣಕಾಲನ್ನು ಸಂಪೂರ್ಣವಾಗಿ ಸರಿಮಾಡಲು ಸಾಧ್ಯವಾಗಿಲ್ಲ.


ಎಡ: ಎಕ್ಸ್ ರೇಯಲ್ಲಿ ತಮ್ಮ ಮುರಿತವನ್ನು ತೋರಿಸುತ್ತಿರುವ ಮಹದೇವಮ್ಮ. ಬಲ: ದಬ್ಬೆ ಒತ್ತಿ ಗಾಯಗೊಂಡಿರುವ ಅವರ ಕಾಲು. ಮಹದೇವಮ್ಮ ಇನ್ನು ಮುಂದೆ ಈ ಪಾದವನ್ನು ಬಳಸಿ ನಡೆಯುವಂತಿಲ್ಲ
ಸುಬ್ಬಯ್ಯನವರು ತಾವು ಮಳೆಯಾಶ್ರಿತ ಬೆಳೆಗಳಾದ ಹತ್ತಿ, ಜೋಳ, ಹುರುಳಿ, ಹೆಸರುಬೇಳೆ, ಉದ್ದಿನಬೇಳೆ, ಅಲಸಂಡೆಯನ್ನು ಬೆಳೆಯುತ್ತಿದ್ದ ಎರಡು ಎಕರೆ ಹೊಲವನ್ನು ಲೀಸ್‌ಗೆ ನೀಡಿದ್ದರಿಂದ ತಾವು ಗಳಿಸುತ್ತಿದ್ದ ಆದಾಯವನ್ನು ಕಳೆದುಕೊಂಡಿದ್ದಾರೆ. ಸ್ಥಳೀಯ ಸ್ವ-ಸಹಾಯ ಗುಂಪಿನಿಂದ ಶೇಕಡಾ 4 ರ ಬಡ್ಡಿಗೆ 100,000 ರುಪಾಯಿ ಸಾಲ ಮಾಡಿದ್ದಾರೆ. ಅಂದಿನಿಂದ ಅವರು ಮುಂದಿನ 14 ತಿಂಗಳ ವರೆಗೆ ಸಾಲದ ಕಂತು 3,000 ರುಪಾಯಿಯನ್ನು ಪ್ರತಿ ತಿಂಗಳು ಪಾವತಿಸಬೇಕು. ಲೀಸ್ ಗೆ ಬಿಟ್ಟಿರುವ ಭೂಮಿಯನ್ನು ಮತ್ತೆ ಪಡೆಯಲು ಅವರು ಇನ್ನೂ 70,000 ರುಪಾಯಿ ಹೊಂದಿಸಬೇಕಾಗಿದೆ.
ಸುಬ್ಬಯ್ಯನವರಿಗೆ ಕೆಲಸ ಸಿಕ್ಕಿದರೆ ದಿನಕ್ಕೆ 500 ರುಪಾಯಿ ಗಳಿಸಬಹುದು, ಅದೂ ತಿಂಗಳ 20 ದಿನಗಳ ವರೆಗೆ ಮಾತ್ರ. ಅವರು ಹೊಲಗಳಲ್ಲಿ ಕೂಲಿಕಾರ್ಮಿಕನಾಗಿ, ಗ್ರಾಮದಲ್ಲಿ ಮನೆ ನಿರ್ಮಾಣ ಸೈಟ್‌ಗಳಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಾರೆ. ಕಬ್ಬು ಕಟಾವಿನ ಸಮಯದಲ್ಲಿ ಸುಬ್ಬಯ್ಯ ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬು ಕಡಿಯುವ ಕೆಲಸ ಮಾಡುತ್ತಾರೆ. ಮಹದೇವಮ್ಮ ಅವರು ಒಂದು ಕಾಲದಲ್ಲಿ ಮನೆಕೆಲಸ ಮಾಡಿ, ಅಕ್ಕಪಕ್ಕದ ಜಮೀನಿನಲ್ಲಿ ಹುಲ್ಲು ಕತ್ತರಿಸುವ ಮತ್ತು ಕಳೆ ಕೀಳುವ ಕೆಲಸ ಮಾಡಿ ದಿನಕ್ಕೆ 200 ರುಪಾಯಿ ಸಂಪಾದಿಸುತ್ತಿದ್ದರು. ಇನ್ನು ಮುಂದೆ ಬೇರೆಯವರ ನೆರವು ಇಲ್ಲದೆ ನಡೆಯಲು ಸಾಧ್ಯವಾಗದ ಇವರಿಗೆ ಹಿಂದಿನಂತೆ ದುಡಿಯಲು ಸಾಧ್ಯವಿಲ್ಲ.
ಪ್ರತಿ ತಿಂಗಳು ಸುಮಾರು 200 ಲೀಟರ್ ಹಾಲನ್ನು ಮಾರಾಟ ಮಾಡುವುದರಿಂದ 6,000 ರುಪಾಯಿ ಸಿಗುತ್ತಿತ್ತು. ಆದರೆ ಹಸು ಕಳೆದ ಎರಡು ವರ್ಷಗಳಿಂದ ಕರು ಹಾಕದೆ ಈ ಆದಾಯವೂ ಇಲ್ಲದಾಗಿದೆ.
ಹುಣಸನಾಳು ಗ್ರಾಮದ ಅಂಚಿನ ಕಿರಿದಾದ ಓಣಿಯಲ್ಲಿರುವ ಒಂದೇ ಕೊಠಡಿಯ ಸುಣ್ಣಬಣ್ಣ ಬಳಿದಿರುವ ಮನೆ ಮಾತ್ರ ಈ ಕುಟುಂಬದ ಪಾಲಿಗೆ ಉಳಿದಿದೆ.
ಈ ದುರ್ಘಟನೆಗಳು ನಡೆಯುವ ಮೊದಲು ಸುಬ್ಬಯ್ಯನವರಿಗೆ ತಮ್ಮ ಮಗನ ಭವಿಷ್ಯದ ಬಗ್ಗೆ ಒಂದು ಭರವಸೆಯಿತ್ತು. ಮಗನನ್ನು ಶ್ರವಣ ದೋಷವುಳ್ಳವರಿಗೆ ಇರುವ ವಿಶೇಷ ಶಾಲೆಗೆ ಸೇರಿಸಿದ್ದರು. “ಅವನು ತುಂಬಾ ಹುಷಾರು ಇದ್ದಾನೆ. ಮಾತನಾಡಲು ಸಾಧ್ಯವಿಲ್ಲವಷ್ಟೇ,” ಎಂದು ತಮ್ಮ ಮಗನ ಬಗ್ಗೆ ಹೆಮ್ಮೆಯಿಂದ ಹೇಳುತ್ತಾರೆ. ಭವಿಷ್ಯದಲ್ಲಿ ಮಗನಿಗೆ ಬೆಂಬಲವಾಗಿ ನಿಲ್ಲಲು ಸಾಧ್ಯವಿಲ್ಲ ಎಂಬ ಬಗ್ಗೆ ಅವರಲ್ಲಿ ವಿಷಾದವಿದೆ.


ಎಡ: ಕೆಲಸ ಮಾಡುತ್ತಿರುವ ಸುಬ್ಬಯ್ಯ. 500 ರುಪಾಯಿ ಸಂಬಳಕ್ಕೆ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯ ವರೆಗೆ ಕೆಲಸ ಮಾಡುತ್ತಾರೆ. ಬಲ: ತಮ್ಮ ಇಬ್ಬರು ಮಕ್ಕಳೊಂದಿಗೆ ವಾಸಿಸುವ ಒಂದೇ ಕೋಣೆಯಿರುವ ತಮ್ಮ ಮನೆಯ ಮುಂದೆ ಸುಬ್ಬಯ್ಯನವರ ಜೊತೆಗೆ ವಾಕರ್‌ನೊಂದಿಗೆ ನಿಂತಿರುವ ಮಹದೇವಮ್ಮ
ಮಗಳು ಪವಿತ್ರಾ ಅಡುಗೆ ಕೆಲಸ ಮಾಡುತ್ತಾ ಮನೆ ಸ್ವಚ್ಛಗೊಳಿಸುತ್ತಾರೆ ಮತ್ತು ಮನೆಯವರನ್ನು ನೋಡಿಕೊಳ್ಳುತ್ತಾರೆ. ಈ ಕುಟುಂಬಕ್ಕೆ ಅವರ ಮದುವೆಯ ವೆಚ್ಚ ಭರಿಸಲು ಸಾಧ್ಯವಿಲ್ಲದ ಕಾರಣ ಅವರ ಮದುವೆಯ ಕನಸು ಕೂಡಾ ಮಸುಕಾಗಿವೆ ಎಂದು ಅವರ ತಂದೆ ಹೇಳುತ್ತಾರೆ.
“ನಾನು ಒಂದು ಬಾರಿ ಆಸ್ಪತ್ರೆಗೆ ಇವಳನ್ನು ಕರೆದುಕೊಂಡು ಹೋಗಲು 500 ರುಪಾಯಿ ಖರ್ಚು ಮಾಡಬೇಕು. ಅಲ್ಲಿ ಹೋದ ಮೇಲೆ ಔಷಧಿ ಮತ್ತು ಎಕ್ಸ್-ರೇ ಎಲ್ಲಾ ಇರುತ್ತದೆ. ನಾನು ಈಗಾಗಲೇ ನನ್ನ ಜೀವನದಲ್ಲಿ ಮಾಡಿದ್ದ ಉಳಿತಾಯದ ಹಣವನ್ನು ಮತ್ತು ಅದಕ್ಕಿಂತ ಹೆಚ್ಚಿನದನ್ನು ಚಿಕಿತ್ಸೆಗಾಗಿ ಖರ್ಚು ಮಾಡಿದ್ದೇನೆ. ಇನ್ನು ಹೆಚ್ಚಿನ ಹಣ ಎಲ್ಲಿ ಸಿಗುತ್ತದೆ’ ಎಂದು ಅಸಹಾಯಕತೆಯಿಂದ ಸುಬ್ಬಯ್ಯ ಹೇಳುತ್ತಾರೆ.
ಮರವನ್ನು ಕಳೆದುಕೊಂಡ ಬಗ್ಗೆ ಅವರಲ್ಲಿ ತುಂಬಾ ನೋವಿದೆ. “ಅದು ನಾನು ನೆಟ್ಟು ಬೆಳೆಸಿದ ಮರ. ನಾನು ಮಾರಬಾರದೆಂದೇ ಅಂದುಕೊಂಡಿದ್ದೆ. ಆದರೆ ನನ್ನಲ್ಲಿ ಬೇರೆ ಯಾವ ಆಯ್ಕೆ ಇತ್ತು?”
ಮಹದೇವಮ್ಮನವರ ದೀರ್ಘಾವಧಿ ಚಿಕಿತ್ಸೆಯ ವೆಚ್ಚವನ್ನು ಈ ಕುಟುಂಬಕ್ಕೆ ಭರಿಸಲು ಸಾಧ್ಯವಿಲ್ಲ. ಗುಣಮಟ್ಟದ ವೈದ್ಯಕೀಯ ಚಿಕಿತ್ಸೆಯನ್ನು ನೀಡಲು ಅವರಿಗೆ ಹಣದ ಅವಶ್ಯಕತೆಯಿದೆ. ಮತ್ತು ತಮ್ಮ ಜಮೀನನ್ನು ಮರಳಿ ಪಡೆಯಲು,ಇಬ್ಬರು ಮಕ್ಕಳು ಅವರ ಕಾಲಿನ ಮೇಲೆ ಅವರು ನಿಲ್ಲುವಂತೆ ಮಾಡಲು ಹೆಚ್ಚಿನ ಹಣದ ಅಗತ್ಯವಿದೆ.
"ನಾನು ಬೇರೆಯವರ ನೆರವಿಲ್ಲದೆ ಮನೆ ಮುಂದಿನ ಅಂಗಳಕ್ಕೆ ಒಂದು ಹೆಜ್ಜೆ ಇಡಲೂ ಸಾಧ್ಯವಿಲ್ಲ" ಎಂದು ಮಹದೇವಮ್ಮ ಹೇಳುತ್ತಾರೆ.
“ನಾಲ್ಕು ಜನ ಇರುವ ಈ ಕುಟುಂಬವನ್ನು ನೋಡಿಕೊಳ್ಳಲು ನಾನು ಒಬ್ಬನೇ ಕೆಲಸ ಮಾಡುತ್ತಿದ್ದೇನೆ. ಅದೂ ಸಾಕಾಗುವುದಿಲ್ಲ. ನನ್ನ ಶತ್ರುವಿಗೂ ಈ ಸ್ಥಿತಿ ಬರಬಾರದು. ನಮ್ಮ ಈ ಸಂಕಷ್ಟಕ್ಕೆ ಕೊನೆಯೇ ಕಾಣುತ್ತಿಲ್ಲ” ಎಂದು ಸುಬ್ಬಯ್ಯ ಹೇಳುತ್ತಾರೆ.
ಅನುವಾದ: ಚರಣ್ ಐವರ್ನಾಡು