ಜುಲೈ 2021ರ ಒಂದು ಮಂಜು ಕವಿದ ಮುಂಜಾನೆ ರೈತ ಶಿವರಾಮ್ ಗವಾರಿ ಭೀಮಾಶಂಕರ್ ವನ್ಯಜೀವಿ ಅಭಯಾರಣ್ಯದ ಗಡಿಯಲ್ಲಿರುವ ತಮ್ಮ ಹೊಲಕ್ಕೆ ಬಂದಾಗ ಅವರ ಐದು ಗುಂಟೆ (ಸುಮಾರು 0.125 ಎಕರೆ) ಅಳತೆಯ ಭತ್ತದ ಗದ್ದೆಯಲ್ಲಿ ಅರ್ಧ ಭಾಗವನ್ನು ಯಾವುದೋ ಪ್ರಾಣಿ ತಿಂದುಹೋಗಿರುವುದನ್ನು ಕಂಡರು. ಉಳಿದ ಬೆಳೆಯೂ ನೆಲಕ್ಕೆ ಒರಗಿ ನಜ್ಜುಗುಜ್ಜಾಗಿತ್ತು.
"ನಾನು ಈ ಮೊದಲು ಈ ರೀತಿ ಆಗಿದ್ದನ್ನು ನೋಡಿರಲಿಲ್ಲ" ಎಂದು ಅವರು ಹೇಳುತ್ತಾರೆ, ಅಂದಿನ ಆಘಾತವು ಅವರ ಮನಸ್ಸಿನಲ್ಲಿ ಇನ್ನೂ ತಾಜಾವಾಗಿದೆ. ನಂತರ ಅವರು ಕಾಡಿನತ್ತ ಹೋಗಿದ್ದ ಪ್ರಾಣಿಗಳ ಹೆಜ್ಜೆಗುರುತುಗಳನ್ನು ಅನುಸರಿಸಿದರು, ಮತ್ತು ಸ್ವಲ್ಪ ದೂರದಲ್ಲಿ ಗವಾ (ಕಾಡೆಮ್ಮೆ/ಬಾಸ್ ಗೌರಸ್ ಮತ್ತು ಕೆಲವೊಮ್ಮೆ ಭಾರತೀಯ ಕಾಡೆಮ್ಮೆ ಎಂದು ಕರೆಯಲಾಗುತ್ತದೆ) ಇದ್ದಕ್ಕಿದ್ದಂತೆ ಕಾಣಿಸಿಕೊಂಡಿತು. ಗೋವಿನ ಜಾತಿಯ ಪ್ರಾಣಿಗಳಲ್ಲಿ ಅತಿದೊಡ್ಡದಾದ ಅವು ನೋಡಲು ಭಯ ಹುಟ್ಟಿಸುವಂತಿರುತ್ತವೆ - ಗಂಡುಗಳು ಆರು ಅಡಿಗಳಿಗಿಂತ ಹೆಚ್ಚು ಎತ್ತರ ಮತ್ತು 500ರಿಂದ 1,000 ಕಿಲೋಗ್ರಾಂಗಳಷ್ಟು ತೂಕವನ್ನು ಹೊಂದಿರುತ್ತವೆ.
ಭಾರೀ ತೂಕದ ಕಾಡೆಮ್ಮೆಗಳ ಹಿಂಡು ಹೊಲಗಳನ್ನು ತುಳಿದಾಗ, ಅವು ಗದ್ದೆಯಲ್ಲಿ ದೊಡ್ಡ ಕುಳಿಗಳನ್ನು ಸೃಷ್ಟಿಸುತ್ತವೆ, ಅವು ಬೆಳೆಗಳು ಮತ್ತು ಸಸಿಗಳನ್ನು ಸಂಪೂರ್ಣವಾಗಿ ನಾಶಪಡಿಸುತ್ತವೆ. "ಗವಾ ಈಗ ಮೂರು ವರ್ಷಗಳಿಂದ ಪ್ರತಿ ಬೆಳೆ ಹಂಗಾಮಿನಲ್ಲೂ ನನ್ನ ಬೆಳೆಯನ್ನು ನಾಶಪಡಿಸಿದೆ. ಈಗ ನನಗೆ ಉಳಿದಿರುವ ಏಕೈಕ ಆಯ್ಕೆಯೆಂದರೆ ಕೃಷಿಯನ್ನು ತ್ಯಜಿಸುವುದು" ಎಂದು ಶಿವರಾಂ ಹೇಳುತ್ತಾರೆ. ಅವರು ಡಾನ್ ಎನ್ನುವ ಊರಿನಲ್ಲಿರುವ ತಮ್ಮ ತಗಡಿನ ಛಾವಣಿಯ ಮನೆಯ ಮುಂದೆ ಕುಳಿತು ನಮ್ಮೊಂದಿಗೆ ಮಾತನಾಡುತ್ತಿದ್ದರು, ಅಲ್ಲಿ ಗವಾಗಳ ಹಿಂಡು 2021ರಿಂದ ಕ್ಯಾಂಪ್ ಮಾಡಿದೆ.


ಎಡ: ಗವಾ (ಕಾಡೆಮ್ಮೆ) ದಾಳಿಯಿಂದಾಗಿ ಬೆಳೆ ನಷ್ಟ ಅನುಭವಿಸಿದ ಪುಣೆಯ ಡಾನ್ ಗ್ರಾಮದ ಮೊದಲ ಕೆಲವು ರೈತರಲ್ಲಿ ಶಿವರಾಮ್ ಗವಾರಿ ಒಬ್ಬರು. ಬಲ: ದೊಡ್ಡ ಗಾತ್ರದ ಕಾಡೆಮ್ಮೆಗಳು ಹೊಲಗಳನ್ನು ತುಳಿದು ದೊಡ್ಡ ಕುಳಿಗಳನ್ನು ಸೃಷ್ಟಿಸುತ್ತವೆ, ಅವು ಬೆಳೆಗಳು ಮತ್ತು ಸಸಿಗಳನ್ನು ಸಂಪೂರ್ಣವಾಗಿ ನಾಶಪಡಿಸುತ್ತವೆ


ಎಡ: ತಮ್ಮ ಬೆಳೆಗಳನ್ನು ಕಳೆದುಕೊಳ್ಳುವ ಆತಂಕದಿಂದ, ಅನೇಕ ರೈತರು ಆಯುರ್ವೇದ ಔಷಧಿಗಳಲ್ಲಿ ಬಳಸುವ ಹಿರ್ಡಾ ಎಂಬ ಹಣ್ಣನ್ನು ಸಂಗ್ರಹಿಸಿ ಮಾರಾಟ ಮಾಡಲು ಆರಂಭಿಸಿದ್ದಾರೆ. ಬಲ: ರೈತರು ಉರುವಲು ಮಾರಾಟವನ್ನು ತಮ್ಮ ಪ್ರಾಥಮಿಕ ಆದಾಯದ ಮೂಲವಾಗಿಸಿಕೊಂಡಿದ್ದಾರೆ
ಈ ಗ್ರಾಮವು ಮಹಾರಾಷ್ಟ್ರದ ಭೀಮಾಶಂಕರ್ ವನ್ಯಜೀವಿ ಅಭಯಾರಣ್ಯದ ಸುತ್ತ ಹರಡಿರುವ ಅನೇಕ ಊರುಗಳಲ್ಲಿ ಒಂದಾಗಿದೆ. ಈ ಅಭಯಾರಣ್ಯವು ಜಿಂಕೆ, ಕಾಡುಹಂದಿ, ಸಾಂಬಾರ್, ಚಿರತೆ ಮತ್ತು ಅಪರೂಪದ ಹುಲಿಗಳಿಂದ ತುಂಬಿದೆ. ಈಗ ಅರವತ್ತರ ಪ್ರಾಯದವರಾಗಿರುವ ಶಿವರಾಂ ತಮ್ಮ ಜೀವನದುದ್ದಕ್ಕೂ ಅಂಬೆಗಾಂವದಲ್ಲಿ ವಾಸಿಸುತ್ತಿದ್ದಾರೆ. ಕಾಡು ಪ್ರಾಣಿಗಳು ಕಾಡಿನಿಂದ ಹೊರಗೆ ಬರುವ ಮೂಲಕ ಉಂಟಾಗುವ ಬೆಳೆ ನಷ್ಟವು ಹಿಂದೆಂದೂ ಇಷ್ಟು ವಿನಾಶಕಾರಿಯಾಗಿರಲಿಲ್ಲ ಎಂದು ಅವರು ಹೇಳುತ್ತಾರೆ. "ಪ್ರಾಣಿಗಳನ್ನು ಸೆರೆಹಿಡಿದು ತೆಗೆದುಕೊಂಡು ಹೋಗಬೇಕು" ಎಂದು ಅವರು ಹೇಳುತ್ತಾರೆ.
ಸತತ ಮೂರನೇ ವರ್ಷವೂ ತಮ್ಮ ಬೆಳೆಗಳನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದ ಅವರು ಒಂದು ವರ್ಷದ ಹಿಂದೆ ತಮ್ಮ ಹೊಲಗಳಲ್ಲಿ ಕೃಷಿ ಮಾಡುವುದನ್ನು ನಿಲ್ಲಿಸಿದರು. ಇನ್ನೂ ಅನೇಕ ರೈತರು ತಮ್ಮ ಭೂಮಿಯನ್ನು ಪಾಳು ಬಿಟ್ಟಿದ್ದಾರೆ ಮತ್ತು ಉರುವಲು ಹಾಗೂ ಆಯುರ್ವೇದ ಔಷಧಿಗಳಲ್ಲಿ ಬಳಸುವ ಹಿರ್ಡಾ ಎಂಬ ಹಣ್ಣನ್ನು ಸಂಗ್ರಹಿಸಿ ಮಾರುವ ಮೂಲಕ ಇದನ್ನೇ ತಮ್ಮ ಪ್ರಾಥಮಿಕ ಆದಾಯದ ಮೂಲವಾಗಿ ಮಾಡಿಕೊಂಡಿದ್ದಾರೆ. 2023ರ ಕೇಂದ್ರ ಸರ್ಕಾರದ ವರದಿ , ಗೈಡ್ ಲೈನ್ಸ್ ಫಾರ್ ಹ್ಯೂಮನ್-ಗೌರ್ ಕಾನ್ಪ್ಲಿಕ್ಟ್ ಮಿಟಿಗೇಷನ್, ಕಾಡುಗಳು ಕಡಿಮೆಯಾಗುತ್ತಿರುವುದು ಮತ್ತು ಹವಾಮಾನ ಬದಲಾವಣೆಯಿಂದಾಗಿ ಆಹಾರ ಮತ್ತು ಆವಾಸಸ್ಥಾನಗಳು ನಷ್ಟವಾಗಿರುವುದೇ ಈ ಪ್ರಾಣಿಗಳು ಬೆಳೆಗಳನ್ನು ಹುಡುಕಿಕೊಂಡು ಬರಲು ಕಾರಣ ಎಂದು ಹೇಳುತ್ತದೆ.
*****
2021ರಲ್ಲಿ, ಡಾನ್ ಗ್ರಾಮದ ಬಳಿ ಹಿಂಡು ಚಿಕ್ಕದಾಗಿತ್ತು - ಕೇವಲ ಮೂರರಿಂದ ನಾಲ್ಕು ಪ್ರಾಣಿಗಳಿದ್ದವು. 2024ರಲ್ಲಿ, ಅವುಗಳ ಸಂಖ್ಯೆ ದ್ವಿಗುಣಗೊಂಡಿದೆ ಮತ್ತು ಆಕ್ರಮಣಗಳು ಸಹ ದ್ವಿಗುಣಗೊಂಡಿವೆ. ಖಾಲಿ ಹೊಲಗಳಿಂದಾಗಿ ಈ ಪ್ರಾಣಿಗಳು ಹಳ್ಳಿಗಳ ಒಳಗೆ ಅಲೆದಾಡಲು ಆರಂಭಿಸಿವೆ, ಇದು ಸ್ಥಳೀಯರಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿದೆ.
ಹಳ್ಳಿಯ ಹೆಚ್ಚಿನ ರೈತರು ಜೀವನೋಪಾಯಕ್ಕಾಗಿ ಮಾತ್ರ ಕೃಷಿಯನ್ನೇ ಅವಲಂಬಿಸಿದ್ದಾರೆ. ಅವರು ಬೆಟ್ಟದ ತಪ್ಪಲಿನಲ್ಲಿ ಲಭ್ಯವಿರುವ ಕೆಲವು ಎಕರೆಗಿಂತ ಹೆಚ್ಚು ಇಲ್ಲದ ಬಯಲು ಭೂಮಿಯಲ್ಲಿ ಕೃಷಿ ಮಾಡುತ್ತಾರೆ. ಕೆಲವು ರೈತರು ತಮ್ಮದೇ ಆದ ಬಾವಿಗಳನ್ನು ತೋಡಿದ್ದಾರೆ; ಮತ್ತು ಇಲ್ಲಿ ಕೃಷಿಯು ಮಳೆಯಾಧಾರಿತವಾಗಿರುವುದರಿಂದ ಬೆರಳೆಣಿಕೆಯಷ್ಟು ಜನರು ಮಾತ್ರ ಕೊಳವೆಬಾವಿಗಳನ್ನು ಹೊಂದಿದ್ದಾರೆ. ಕಾಡೆಮ್ಮೆ ದಾಳಿಗಳು ಅವರ ವಾರ್ಷಿಕ ಕೊಯ್ಲು ಮತ್ತು ಆಹಾರ ಭದ್ರತೆಗೆ ಹಾನಿ ಮಾಡಿವೆ.
ಬುದ್ದಾ ಗವಾರಿ ತನ್ನ ಮನೆಯ ಪಕ್ಕದ ಮೂರು ಗುಂಟೆ ಭೂಮಿಯಲ್ಲಿ ಬೇಸಾಯ ಮಾಡುತ್ತಾರೆ. ಹಳ್ಳಿಯ ಇತರರಂತೆ, ಅವರು ಮಳೆಗಾಲದಲ್ಲಿ ರಾಯಭೋಗ್ ಮತ್ತು ಚಳಿಗಾಲದಲ್ಲಿ ಮಸೂರ ಮತ್ತು ಹರ್ಬಾರಾದಂತಹ ಸ್ಥಳೀಯ ಭತ್ತದ ತಳಿಗಳನ್ನು ಬೆಳೆಯುತ್ತಾರೆ. "ನಾನು ನನ್ನ ಗದ್ದೆಯಲ್ಲಿ ಸಸಿ ನಾಟಿಗೆಂದು ಹೋಗುತ್ತಿದ್ದೆ. ಅವು [ಗವಾ] ಈ ಸಸಿಗಳನ್ನು ನಾಶಪಡಿಸಿದವು ಮತ್ತು ಇದರೊಂದಿಗೆ ನನ್ನ ಸಂಪೂರ್ಣ ಫಸಲು ನಾಶವಾಯಿತು. ನಮ್ಮ ಕುಟುಂಬದ ಆಹಾರಕ್ಕೆ ಆಧಾರವಾಗಿದ್ದ ಮುಖ್ಯ ಬೆಳೆಯನ್ನು ಕಳೆದುಕೊಂಡಿದ್ದೇನೆ. ಊಟದ ಅಕ್ಕಿ ಇಲ್ಲದೆ ಹೋದರೆ ನಮಗೆ ಈ ವರ್ಷ ಪೂರ್ತಿ ಕಷ್ಟವಾಗುತ್ತದೆ” ಎಂದು ಈ 54 ವರ್ಷದ ರೈತ ಹೇಳುತ್ತಾರೆ.


ಎಡಕ್ಕೆ : ಬು ದ್ದಾ ಗವಾರಿ ತನ್ನ ಜಮೀನಿನಲ್ಲಿ ಹೊಸದಾಗಿ ಬೆಳೆಸಿದ ಭತ್ತದ ಸಸಿಗಳನ್ನು ನಾಟಿ ಮಾಡಲು ಯೋಜಿಸುತ್ತಿದ್ದರು ಆದರೆ ' ಗವಾ ಅಷ್ಟೂ ಸಸಿಯನ್ನು ನಾಶ ಮಾಡಿದ ಕಾರಣ ನನ್ನ ಈ ವರ್ಷದ ಫಸಲು ನಾಶವಾಯಿತುʼ ಎಂದು ಅವರು ಹೇಳುತ್ತಾರೆ . ಬಲ : ಅವರ ಮಗ ಬಾಲಕೃಷ್ಣ ಹೇಳುತ್ತಾರೆ , ' ಹೆಚ್ಚುವರಿ ಆದಾಯದ ಮೂಲವಾಗಿ , ಮ ನರೇಗಾ ನಮಗೆ ಅತ್ಯಂತ ಪ್ರಯೋಜನಕಾರಿಯಾಗುತ್ತಿತ್ತು . ಅದರ ಮೂಲಕ ಬಾವಿಗಳಂತಹ ನೀ ರು ಸಂಗ್ರಹ ದ ಮೂಲಗಳ ನ್ನು ನಿರ್ಮಿಸಬಹುದಿತ್ತು


ಎಡಕ್ಕೆ: ಬುದ್ದಾ ಅವರ ಮೂರು ಗುಂಟೆ ಹೊಲ. ಬಲ: ಅವರ ಹೊಲದಲ್ಲಿ ಕಾಡೆಮ್ಮೆಗಳು ಸೃಷ್ಟಿಸಿದ ಸಣ್ಣ ಕುಳಿಗಳು
ಬುದ್ದಾ ಕೋಲಿ ಮಹಾದೇವ್ ಸಮುದಾಯಕ್ಕೆ ಸೇರಿದವರು, ಈ ಸಮುದಾಯವನ್ನು ರಾಜ್ಯದಲ್ಲಿ ಪರಿಶಿಷ್ಟ ಪಂಗಡದಡಿ ಪಟ್ಟಿ ಮಾಡಲಾಗಿದೆ. "ನಾನು ನನ್ನ ಯಾವುದೇ ಉತ್ಪನ್ನಗಳನ್ನು ಮಾರಾಟ ಮಾಡುವುದಿಲ್ಲ. ಮಾರಾಟ ಮಾಡಲು ಸಾಕಾಗುವಷ್ಟು ಕೃಷಿ ಮಾಡುವುದಿಲ್ಲ" ಎಂದು ಅವರು ಹೇಳುತ್ತಾರೆ. ಅವರು ತಮ್ಮ ಬೆಳೆಯ ವಾರ್ಷಿಕ ಮೌಲ್ಯವನ್ನು 30,000 - 40,000 ರೂ ಎಂದು ಅಂದಾಜಿಸುತ್ತಾರೆ. ಒಳಸುರಿ ವೆಚ್ಚಗಳು ಸುಮಾರು 10,000 ರಿಂದ 15,000 ರೂ. ತಲುಪುತ್ತದೆ. ಉಳಿದಿದ್ದು ಇಡೀ ವರ್ಷ ಐದು ಜನರಿರುವ ಅವರ ಕುಟುಂಬದ ಪೋಷಣೆಗೆ ಸಾಕಾಗುವುದಿಲ್ಲ. ಅವರಿಗೆ ನಷ್ಟವಾದ ಭತ್ತವು ಕುಟುಂಬದ ಆಹಾರ ಭದ್ರತೆಯನ್ನು ಖಾತ್ರಿಪಡಿಸುತ್ತಿತ್ತು.
ಬೆಳೆ ನಷ್ಟ ಅನುಭವಿಸಿದ ನಂತರ ಶಿವರಾಂ ಮತ್ತು ಬುದ್ದಾ ಇಬ್ಬರೂ ಅರಣ್ಯ ಇಲಾಖೆಯನ್ನು ಸಂಪರ್ಕಿಸಿ ಪಂಚನಾಮೆ (ತನಿಖಾ ವರದಿ) ದಾಖಲಿಸಿದರು. ಆರು ತಿಂಗಳಿಗೂ ಹೆಚ್ಚು ಸಮಯದ ನಂತರ, ಶಿವರಾಂ 5,000 ರೂ.ಗಳನ್ನು ಮತ್ತು ಬುದ್ದಾ 3,000 ರೂ.ಗಳನ್ನು ಪರಿಹಾರವಾಗಿ ಪಡೆದರು - ಇದು ಅವರ ನಷ್ಟದ ಮೊತ್ತದ ಶೇಕಡಾ 10ಕ್ಕಿಂತ ಕಡಿಮೆ. "ನನ್ನ ನಷ್ಟವನ್ನು ಸರಿದೂಗಿಸಲು ನಾನು ಒಂದು ಸರ್ಕಾರಿ ಕಚೇರಿಯಿಂದ ಇನ್ನೊಂದಕ್ಕೆ ಹೋಗಲು ಕನಿಷ್ಠ 1,000 - 1,500 ರೂಪಾಯಿಗಳನ್ನು ಖರ್ಚು ಮಾಡಿದ್ದೇನೆ" ಎಂದು ಬುದ್ದಾ ಹೇಳುತ್ತಾರೆ. ಕೃಷಿ ಸಚಿವಾಲಯವು ನಿಗದಿಪಡಿಸಿದ ನಿಯಮಗಳನ್ನು ಅನುಸರಿಸಲು ಸಾಧ್ಯವಾಗುತ್ತಿಲ್ಲ ಎಂದು ಉಪ ಸರಪಂಚ್ ಸೀತಾರಾಮ್ ಗವಾರಿ ಹೇಳುತ್ತಾರೆ.
ಬುದ್ದಾ ಅವರ ಮಗ ಬಾಲಕೃಷ್ಣ ಗವಾರಿ ಹೇಳುತ್ತಾರೆ, "ಹೆಚ್ಚುವರಿ ಆದಾಯದ ಮೂಲವಾಗಿ ಮನರೇಗಾ ನಮಗೆ ಅತ್ಯಂತ ಪ್ರಯೋಜನಕಾರಿಯಾಗುತ್ತಿತ್ತು. ನಾವು ಬಾವಿಗಳಂತಹ ನೀರಿನ ಸಂಗ್ರಹದ ಮೂಲವನ್ನು ಅದನ್ನು ಬಳಸಿ ನಿರ್ಮಿಸಬಹುದಿತ್ತು." ಮನರೇಗಾ ಕೆಲಸದ ಕೊರತೆ (ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ) ಡಾನ್ ಪ್ರದೇಶದ ರೈತರನ್ನು ಮಂಚಾರ್ ಮತ್ತು ಘೋಡೆಗಾಂವ್ ಪಕ್ಕದ ಪ್ರದೇಶಗಳಲ್ಲಿನ ಇತರರ ಹೊಲಗಳಲ್ಲಿ ಕಾರ್ಮಿಕರಾಗಿ ದುಡಿಯುವಂತೆ ಮಾಡಿದೆ. ಇಲ್ಲಿ ಹೊಲಗಳು ಹೆಚ್ಚು ಫಲವತ್ತಾಗಿರುತ್ತವೆ ಮತ್ತು ಸಹ್ಯಾದ್ರಿ ಬೆಟ್ಟಗಳ ಕೆಳಮುಖ ಹರಿವಿನಿಂದ ಹೇರಳವಾದ ನೀರು ಸಹ ಲಭ್ಯ. ಕಡಿಮೆ ಗಮನ ಅಗತ್ಯವಿರುವ ಸಾಂಪ್ರದಾಯಿಕ ಬೆಳೆಗಳಾದ ವರೈ ಮತ್ತು ಸಾವಾ ಬೆಳೆಗಳ ಇಳುವರಿಯು ಅವರಿಗೆ ಒಂದಷ್ಟು ಜೀವನೋಪಾಯದ ದಾರಿಯನ್ನು ಒದಗಿಸಿದೆ.
*****
ಕುಗ್ಗುತ್ತಿರುವ ಅರಣ್ಯ ಪ್ರದೇಶ, ಹೆಚ್ಚುತ್ತಿರುವ ಪ್ರಾಣಿಗಳ ಸಂಖ್ಯೆ ಮತ್ತು ಅಸ್ವಾಭಾವಿಕ ಹವಾಮಾನ ಸಂಬಂಧಿ ಘಟನೆಗಳು ಬಹಳಷ್ಟು ಪ್ರಾಣಿಗಳಿಗೆ ಆಹಾರದ ಕೊರತೆಯನ್ನು ಉಂಟುಮಾಡುತ್ತಿವೆ ಎಂದು ಸ್ಥಳೀಯ ಕಾರ್ಯಕರ್ತ ಮತ್ತು ಅಖಿಲ ಭಾರತ ಕಿಸಾನ್ ಸಭಾದ ಪುಣೆ ಜಿಲ್ಲಾಧ್ಯಕ್ಷ ಡಾ.ಅಮೋಲ್ ವಾಘ್ಮರೆ ಹೇಳುತ್ತಾರೆ. "ಈ ಪ್ರಾಣಿಗಳು ಆಹಾರ ಮತ್ತು ನೀರನ್ನು ಹುಡುಕಿಕೊಂಡು ಕಾಡಿನ ಇತರ ಭಾಗಗಳಿಂದ ವಲಸೆ ಬಂದಿರಬಹುದು" ಎಂದು ಅವರು ಹೇಳುತ್ತಾರೆ. ಪ್ರಾಸಂಗಿಕವಾಗಿ, 2021ರ ಬೇಸಿಗೆಯ ಆರಂಭಿಕ ತಿಂಗಳುಗಳಲ್ಲಿ ಕಾಡಿನಲ್ಲಿ ಸಾಮಾನ್ಯವಾಗಿ ಆಹಾರದ ಕೊರತೆಯಿದ್ದಾಗ ಗವಾ ಕಂಡುಬಂದಿರುವುದನ್ನು ಗುರುತಿಸಲಾಗಿದೆ ಎಂದು ಡಾನ್ ಜನರು ಹೇಳುತ್ತಾರೆ.


ಡಾನ್ ನ ಉಪ ಸರಪಂಚ್ ಸೀತಾರಾಮ್ ಗವಾರಿ (ಎಡ) ಅನೇಕ ಬಾರಿ ಅರಣ್ಯ ಇಲಾಖೆಯನ್ನು ಸಂಪರ್ಕಿಸಿದ್ದಾರೆ. ಕಾಡೆಮ್ಮೆಗಳ ಚಲನೆಯನ್ನು ನಿರ್ಬಂಧಿಸಲು ಗ್ರಾಮದ ಬಳಿ (ಬಲ) ಬೇಲಿ ನಿರ್ಮಾಣದ ಪ್ರಸ್ತಾಪವನ್ನು ಇಅಲಖೆ ಮುಂದಿಟ್ಟಿತು. ಆದರೆ ಇದು ಸ್ವೀಕಾರಾರ್ಹವಲ್ಲ ಏಕೆಂದರೆ ಜನರ ಜೀವನೋಪಾಯವು ಅರಣ್ಯದೊಂದಿಗೆ ಸಂಪರ್ಕ ಹೊಂದಿದೆ ಎಂದು ಅವರು ಹೇಳುತ್ತಾರೆ


ಎಡ: ಕೆಲವು ರೈತರು ಕಾಡೆಮ್ಮೆ ದಾಳಿಯಿಂದ ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳಲು ತಮ್ಮ ಹೊಲಗಳ ಸುತ್ತಲೂ ಬೇಲಿ ಹಾಕಿದ್ದಾರೆ. ಬಲ: ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ ರೈತರು ತಮ್ಮ ನಷ್ಟದ ಶೇಕಡಾ 10ಕ್ಕಿಂತ ಕಡಿಮೆ ಪರಿಹಾರ ಪಡೆದಿರುವುದಾಗಿ ಹೇಳುತ್ತಾರೆ
ಮುಂದುವರೆದು ಡಾ. ವಾಘ್ಮರೆ ಹೇಳುತ್ತಾರೆ, "ಡಾನ್ ಬಳಿ ಅಥವಾ ಪಕ್ಕದ ಪ್ರದೇಶಗಳಲ್ಲಿ ಅರಣ್ಯ ಇಲಾಖೆಯ ಕೆಲವೇ ಚೌಕಿಗಳಿವೆ. ಅರಣ್ಯ ಇಲಾಖೆಯ ಹೆಚ್ಚಿನ ಅಧಿಕಾರಿಗಳು 60-70 ಕಿಲೋಮೀಟರ್ ದೂರದಲ್ಲಿರುವ ತಾಲ್ಲೂಕಿನಲ್ಲಿ ವಾಸಿಸುತ್ತಿದ್ದಾರೆ" ಎಂದು ಮಾನವ-ಪ್ರಾಣಿ ಸಂಘರ್ಷವನ್ನು ತಗ್ಗಿಸುವಲ್ಲಿ ಅರಣ್ಯ ಇಲಾಖೆಯ ಪಾತ್ರದ ಬಗ್ಗೆ ಮಾತನಾಡುತ್ತಾ ಹೇಳಿದರು. "ಚಿರತೆಗಳು ಜನರ ಮನೆಗಳಿಗೆ ಪ್ರವೇಶಿಸಿದಂತಹ ತುರ್ತು ಸಂದರ್ಭಗಳಲ್ಲಿ, ಅವರು [ಅಧಿಕಾರಿಗಳು] ಬರಲು ಸಾಕಷ್ಟು ಸಮಯ ಹಿಡಿದಿದೆ. ರಾತ್ರಿಯಲ್ಲಿ ಅವರು ಹಳ್ಳಿಗಳಿಗೆ ಬರಲು ಹಿಂಜರಿಯುತ್ತಾರೆ" ಎಂದು ಡಾ. ವಾಘ್ಮರೆ ಹೇಳುತ್ತಾರೆ.
ಗವಾ ದಾಳಿಯಿಂದ ಬೆಳೆ ನಷ್ಟ ಅನುಭವಿಸಿದ ಗ್ರಾಮದ ಉಪ ಸರಪಂಚ್ ಸೀತಾರಾಮ್ ಗವಾರಿ, ಈ ವಿಷಯವನ್ನು ಅರಣ್ಯ ಇಲಾಖೆಯೊಂದಿಗೆ ಅನೇಕ ಬಾರಿ ಚರ್ಚಸಿದ್ದೇನೆ ಎಂದು ಹೇಳುತ್ತಾರೆ. ನಿರಂತರ ಒತ್ತಡದ ನಂತರ, ಗವಾಗಳ ಚಲನೆಯನ್ನು ನಿರ್ಬಂಧಿಸಲು ಗ್ರಾಮದ ಬಳಿ ಬೇಲಿ ನಿರ್ಮಿಸುವ ಪ್ರಸ್ತಾವನೆಯನ್ನು ಇಲಾಖೆ ಇಟ್ಟಿತು. "ಇದು ಸ್ವೀಕಾರಾರ್ಹವಲ್ಲ ಏಕೆಂದರೆ ಜನರ ಜೀವನೋಪಾಯವು ಅರಣ್ಯದೊಂದಿಗೆ ಸಂಪರ್ಕ ಹೊಂದಿದೆ" ಎಂದು ಅವರು ಹೇಳುತ್ತಾರೆ.
ಹಸಿದ ಕಾಡುಕೋಣ/ಕಾಡೆಮ್ಮೆಗಳು ಇನ್ನೂ ಊರಿನ ಸುತ್ತ ಸುತ್ತಾಡುತ್ತಿವೆ, ಹೀಗಾಗಿ ಶಿವರಾಂ ಮತ್ತು ಇತರರು ಮುಂಬರುವ ಬೆಳೆ ಹಂಗಾಮಿನಲ್ಲಿ ತಮ್ಮ ಗದ್ದೆಗಳಲ್ಲಿ ಬೇಸಾಯ ಚಟುವಟಿಕೆ ನಡೆಸದಿರಲು ತೀರ್ಮಾನಿಸಿದ್ದಾರೆ. "ಪ್ರತಿ ವರ್ಷ ಇದೇ ರೀತಿಯ ವಿನಾಶವನ್ನು ಅನುಭವಿಸಲು ನನಗೆ ಯಾವುದೇ ಕಾರಣ ಕಾಣುತ್ತಿಲ್ಲ. ನಾನು ಈಗಾಗಲೇ ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದೇನೆ" ಎಂದು ಅವರು ಹೇಳುತ್ತಾರೆ.
ಅನುವಾದ: ಚರಣ್ ಐವರ್ನಾಡು