“ಅಲ್ಲಿ, ಇಲ್ಲಿ ಎಲ್ಲ ಕಡೆ ಇತ್ತು” ಎಂದು ಸಣ್ಣಗೆ ನಕ್ಕು ದೂರದವರೆಗೂ ಕೈ ತೋರಿಸುತ್ತಾ ಸುರೇಂದ್ರ ನಾಥ ಅವಸ್ಥಿ ತಮ್ಮ ನೆನಪಿನಲ್ಲಿರುವ ಚಿತ್ರವನ್ನು ತೋರಿಸಲು ಪ್ರಯತ್ನಿಸುತ್ತಿದ್ದರು.
“ನಾವು ಅವಳನ್ನು ಬಹಳ ಪ್ರೀತಿಸುತ್ತಿದ್ದೆವು. ಅವಳಿಂದಾಗಿಯೇ ನಮ್ಮೂರಿನಲ್ಲಿ ಹತ್ತು ಅಡಿ ತೋಡಿದರೂ ಬಾವಿಯಲ್ಲಿ ಸಿಹಿ ನೀರು ಸಿಗುತ್ತಿತ್ತು. ಮಳೆಗಾಲದಲ್ಲಿ ಅವಳು ಮನೆಗೇ ನುಗ್ಗಿ ಬರುತ್ತಿದ್ದಳು. ಪ್ರತೀ ಮೂರು ವರ್ಷಕ್ಕೊಮ್ಮೆ ಅವಳು ಸಣ್ಣ ಪುಟ್ಟ ಪ್ರಾಣಿಗಳನ್ನು ಬಲಿ ಪಡೆಯುತ್ತಿದ್ದಳು. ಒಮ್ಮೆ ನನ್ನ ಸಹೋದರ ಸಂಬಂಧಿಯೊಬ್ಬನನ್ನು ಕೊಂಡೊಯ್ದಾಗ ನನಗೆ ಅವಳ ಮೇಲೆ ಬಹಳ ದಿನಗಳವರೆಗೆ ಸಿಟ್ಟಿತ್ತು” ಎನ್ನುತ್ತಾರವರು. “ಆದರೆ ಈಗ ಅವಳು ಹಲವು ವರ್ಷಗಳಿಂದ ನಮ್ಮ ಮೇಲೆ ಮುನಿಸಿಕೊಂಡಿದ್ದಾಳೆ… ಬಹುಶಃ ಇದಕ್ಕೆ ಈ ಸೇತುವೆ ಕಾರಣ” ಅವರು ವಿಷಾದದ ದನಿಯಲ್ಲಿ ಹೇಳಿದರು.
ಅವಸ್ಥಿಯವರು 67 ಮೀಟರ ಉದ್ದದ ಸೇತುವೆಯ ಮೇಲೆ ನಿಂತು ಮಾತನಾಡುತ್ತಿದ್ದರು. ಇದೇ ಸೇತುವೆಯ ಕೆಳಗೆ ಸಈ ನದಿ ಹರಿಯುತ್ತದೆ. ಈಗ ಈ ಊರಿನ ಮೇಲೆ ಮುನಿಸಿಕೊಂಡಿರುವ ʼಅವಳುʼ ಇದೇ ಸಈ ನದಿ. ಸೇತುವೆಯ ಕೆಳಗೆ ಕೃಷಿ ಭೂಮಿಯಿದ್ದು ಅಲ್ಲಿ ಗೋಧಿ ಬೆಳೆದ ಕುರುಹುಗಳಿದ್ದ ಹೊಲಗಳಿದ್ದವು. ಅವುಗಳ ಬದಿಯಲ್ಲಿ ನೀಲಗಿರಿ ಮರಗಳು ತೂಗಾಡುತ್ತಿದ್ದವು.
ಅವಸ್ಥಿಯವರ ಸ್ನೇಹಿತ ಮತ್ತು ಸಹವರ್ತಿ ನಿವೃತ್ತ ಶಾಲಾ ಶಿಕ್ಷಕ ಜಗದೀಶ್ ಪ್ರಸಾದ್ ತ್ಯಾಗಿ ಒಂದು ಕಾಲದಲ್ಲಿ ಸಈ “ಸುಂದರ ನದಿ”ಯಾಗಿತ್ತು ಎಂದು ನೆನಪಿಸಿಕೊಳ್ಳುತ್ತಾರೆ.
ಅವರು ಆ ದಿನಗಳಲ್ಲಿ ಆ ನೀರಿನಲ್ಲಿ ಆಡುತ್ತಾ ನೆಗೆಯುತ್ತಿದ್ದ ಮೀನುಗಳ ಕುರಿತು ಮಾತನಾಡುತ್ತಿದ್ದಾರೆ. ಆ ಹೊಳೆಯಲ್ಲಿ ದೊಡ್ಡ ದೊಡ್ಡ ಮೀನುಗಳು ಚಿನ್ನಾಟವಾಡುತ್ತಿದ್ದವು. ರೋಹು, ಈಲ್ ಇತ್ಯಾದಿ ಮೀನುಗಳಿದ್ದವು ಅಲ್ಲಿ. “ನೀರು ಒಣಗತೊಡಗಿದಂತೆ ಮೀನುಗಳು ಕಾಣೆಯಾದವು” ಎನ್ನುತ್ತಾರವರು.
2007-12ರವರೆಗೆ ಗ್ರಾಮದ ಸರಪಂಚ್ ಆಗಿದ್ದ 74 ವರ್ಷದ ಮಾಲತಿ ಅವಸ್ಥಿಯವರೂ ಈ ಹೊಳೆಯ ಒಂದಷ್ಟು ಸುಂದರ ನೆನಪುಗಳನ್ನು ತಮ್ಮೊಡನೆ ಕಾಪಿಟ್ಟುಕೊಂಡಿದ್ದಾರೆ. ನದಿಯ ದಡದಿಂದ ಸುಮಾರು 100 ಮೀಟರ್ ದೂರದಲ್ಲಿರುವ ತನ್ನ ಮನೆಯ ಅಂಗಳಕ್ಕೆ ಸಈ ಹರಿದು ಬಂದ ದಿನವನ್ನು ಅವರು ನೆನಪಿಸಿಕೊಳ್ಳುತ್ತಾರೆ. ಅದೇ ಅಂಗಳದಲ್ಲಿ ಅವರು ಪ್ರತಿ ವರ್ಷ ನದಿ ಕೋಪಕ್ಕೆ ತಮ್ಮ ಬೆಳೆಗಳನ್ನು ಕಳೆದುಕೊಂಡ ಊರ ಜನರಿಗಾಗಿ “ಅನ್ನ್ ಪರ್ವತ್ ದಾನ್ ಎನ್ನುವ ಸಾಮಾಜಿಕ ಧಾನ್ಯವಿತರಣೆ ಕಾರ್ಯಕ್ರಮ ನಡೆಸುತ್ತಿದ್ದರು.
“ಈಗ ಸೌಹಾರ್ದ ಭಾವನೆ ಇಲ್ಲವಾಗಿದೆ. ಕಾಳುಗಳಿದ್ದ ಆ ರುಚಿಯೂ ಹೋಗಿದೆ. ಬಾವಿಗಳಲ್ಲಿನ ನೀರು ಬತ್ತಿದೆ. ಜಾನುವಾರುಗಳು ಸಹ ನಮ್ಮಂತೆ ಬಳಲುತ್ತಿವೆ. ಒಟ್ಟಾರೆ ಬದುಕು ರುಚಿ ಕಳೆದುಕೊಂಡಿದೆ” ಎಂದು ಅವರು ನೋವಿನಿಂದ ನುಡಿಯುತ್ತಾರೆ.


ಎಡ: ಸಈ ನದಿಯ ಸೇತುವೆಯ ಮೇಲೆ ಸುರೇಂದ್ರ ನಾಥ್ ಅವಸ್ಥಿ. ಬಲ: ಆಜಾದ್ ನಗರದಲ್ಲಿರುವ ತಮ್ಮ ಮನೆಯಲ್ಲಿ ಜಗದೀಶ್ ಪ್ರಸಾದ್ ತ್ಯಾಗಿ


ಜಗದೀಶ್ ಪ್ರಸಾದ್ ತ್ಯಾಗಿ (ಎಡ) ಮತ್ತು ಸುರೇಂದ್ರ ನಾಥ್ ಅವಸ್ಥಿ (ಬಲ) ಸಈ ನದಿಗೆ ಸೇತುವೆಗಾಗಿ ನಡೆದ ಹೋರಾಟವನ್ನು ನೆನಪಿಸಿಕೊಳ್ಳುತ್ತಾರೆ. ಬಲ: ನದಿಪಾತ್ರದಿಂದ ಸುಮಾರು 100 ಮೀಟರ್ ದೂರದಲ್ಲಿರುವ ತನ್ನ ಮನೆಯ ಅಂಗಳಕ್ಕೆ ಸಈ ನದೀ ಹೇಗೆ ಧುಮುಗುಡುತ್ತಾ ಬಂದಿತ್ತು ಎಂಬುದನ್ನು ಮಾಲತಿ ಅವಸ್ಥಿ ನೆನಪಿಸಿಕೊಳ್ಳುತ್ತಾರೆ
ಸಈ ನದಿಯು ಗೋಮತಿ ನದಿಯ ಉಪನದಿಯಾಗಿದ್ದು, ಇದಕ್ಕೆ ಭಾರತದ ಪುರಾಣಗಳಲ್ಲಿ ಉನ್ನತ ಸ್ಥಾನವಿದೆ. ಗೋಸ್ವಾಮಿ ತುಳಸೀದಾಸರು ಬರೆದ ರಾಮಚರಿತಮಾನಸದಲ್ಲಿ (16 ನೇ ಶತಮಾನದ ಮಹಾಕಾವ್ಯ. ಇದರ ಅರ್ಥ ಭಗವಾನ್ ರಾಮನ ಕಾರ್ಯಗಳ ಸರೋವರ ಎಂದು) ಇದನ್ನು ಆದಿ ಗಂಗಾ ಎಂದು ಉಲ್ಲೇಖಿಸಲಾಗಿದೆ.
ಉತ್ತರ ಪ್ರದೇಶದ ಹರ್ದೋಯ್ ಜಿಲ್ಲೆಯ ಪಿಹಾನಿ ಬ್ಲಾಕ್ ಬಿಜ್ಗವಾನ್ ಗ್ರಾಮದ ಕೊಳದಿಂದ ಈ ನದಿ ಉಗಮವಾಗುತ್ತದೆ. ಅದರ ಆರಂಭಿಕ 10 ಕಿಲೋಮೀಟರುಗಳಲ್ಲಿ ಇದನ್ನು ಜಬರ್ (ಕೊಳ) ಎಂದು ಕರೆಯಲಾಗುತ್ತದೆ. ಇದು ಲಕ್ನೋ ಮತ್ತು ಉನ್ನಾವೊ ಜಿಲ್ಲೆಗಳ ನಡುವೆ ಗಡಿಯನ್ನು ರೂಪಿಸಲು ಸುಮಾರು 600 ಕಿ.ಮೀ ಪ್ರಯಾಣಿಸುತ್ತದೆ. ರಾಜ್ಯದ ರಾಜಧಾನಿ ಲಕ್ನೋ ಹರ್ದೋಯಿಯಿಂದ ಉತ್ತರಕ್ಕೆ ಸುಮಾರು 110 ಕಿಲೋಮೀಟರ್ ದೂರದಲ್ಲಿದೆ ಮತ್ತು ಉನ್ನಾವೊ ಜಿಲ್ಲೆಯು 122 ಕಿಲೋಮೀಟರ್ ದೂರದಲ್ಲಿದೆ.
ಜೌನಪುರ ಜಿಲ್ಲೆಯ ರಾಜೇಪುರ್ ಗ್ರಾಮದಲ್ಲಿ ಗೋಮತಿ (ಗಂಗಾ ನದಿಯ ಉಪನದಿ) ಯೊಂದಿಗೆ ಸಂಗಮವಾಗುವವರೆಗೆ, ಸಈ ನದಿಯು ಸುಮಾರು 750 ಕಿಲೋಮೀಟರುಗಳಳಷ್ಟು ದೂರವನ್ನು ಕ್ರಮಿಸುತ್ತದೆ. ಈ ದೀರ್ಘ ಪ್ರಯಾಣದಲ್ಲಿ ಅದು ಓರೆಕೋರೆಯಾಗಿ ಹರಿಯುತ್ತದೆ.
ಸರಿಸುಮಾರು 126 ಕಿಲೋಮೀಟರ್ ಉದ್ದ ಮತ್ತು 75 ಕಿಲೋಮೀಟರ್ ಅಗಲವಿರುವ ಹರ್ದೋಯ್ ಜಿಲ್ಲೆಯು ಅಸಮ ಅಳತೆಯ ಚತುರ್ಭುಜದ ಆಕಾರದಲ್ಲಿದೆ. ಇದು 41 ಲಕ್ಷ ಜನರಿಗೆ ನೆಲೆಯಾಗಿದೆ. ಜಿಲ್ಲೆಯ ಹೆಚ್ಚಿನ ಕಾರ್ಮಿಕರು ಕೃಷಿ ಕೂಲಿ ಮಾಡುತ್ತಾರೆ, ಉಳಿದವರು ಕೃಷಿಕರು ಮತ್ತು ಗೃಹೋದ್ಯಮದ ಕೆಲಸಗಾರರು.
1904ರಲ್ಲಿ ಪ್ರಕಟವಾದ ಆಗ್ರಾ ಮತ್ತು ಔಧ್ ಪ್ರಾಂತ್ಯಗಳ ಜಿಲ್ಲಾ ಗೆಜೆಟಿಯರುಗಳ ಸಂಪುಟ XlI ಪ್ರಕಾರ, ಸಈ ಕಣಿವೆಯು "ಜಿಲ್ಲೆಯ ಮಧ್ಯ ಭಾಗವನ್ನು ಆವರಿಸಿದೆ."
ಗೆಜೆಟ್ ಹೀಗೆ ಹೇಳುತ್ತದೆ: "ಹರ್ದೋಯಿಯಲ್ಲಿ ಕೃಷಿ ಮಾಡುತ್ತಿರುವ ಪ್ರದೇಶವು ಫಲವತ್ತಾಗಿದೆ ಆದರೆ ... ಅನೇಕ ಆಳವಿಲ್ಲದ ತಗ್ಗುಗಳು, ಅಲ್ಲಲ್ಲಿ ಇರುವ ಬಂಜರು ಟಿಸಾರ್‌ಗಳಿಂದ ಬೇರೆಯಾಗಿದೆ ... ಧಕ್ ಮತ್ತು ಕುರುಚಲು ಕಾಡಿನ ಚದುರಿದ ತುಣುಕುಗಳ ಸಈ ಕಣಿವೆಯನ್ನು ರೂಪಿಸುತ್ತವೆ."
78 ವರ್ಷದ ಅವಸ್ಥಿಯವರು ಮಧೋಗಂಜ್ ಬ್ಲಾಕ್ ಕುರ್ಸಾತ್ ಬುಜುರ್ಗ್ ಗ್ರಾಮದ ಪರೌಲಿ ಎಂಬ ಕುಗ್ರಾಮದಲ್ಲಿ ಜನಿಸಿದರು. ಈ ಕುಗ್ರಾಮವು ಸೇತುವೆಯಿಂದ ಸುಮಾರು 500 ಮೀಟರ್ ದೂರದಲ್ಲಿದೆ. ಅವರೀಗ ನಮ್ಮೊಡನೆ ಅದೇ ಸೇತುವೆಯ ಮೇಲೆ ನಿಂತು ಮಾತನಾಡುತ್ತಿದ್ದಾರೆ.


ಎಡ: ಓರೆ ಕೋರೆಯಾಗಿ ಹರಿಯುವ ಸಈ ನದಿಯ ಗುಣವೇ ಅದರ ದೀರ್ಘ ಉದ್ದಕ್ಕೆ ಕಾರಣವಾಗಿದೆ. ಬಲ: ಸಈ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಸೇತುವೆಯ ಮೇಲೆ ನಿಂತಿರುವ ಸುರೇಂದ್ರ ನಾಥ್ ಅವಸ್ಥಿ. ಈ ಸೇತುವೆಯು ಪರೌಲಿ ಮತ್ತು ಬಾಂಡ್ ಗ್ರಾಮಗಳನ್ನು ಒಂದುಗೂಡಿಸುತ್ತದೆ
2011ರ ಜನಗಣತಿಯ ಪ್ರಕಾರ ಕುರ್ಸಾತ್ ಬುಜುರ್ಗ್ ಗ್ರಾಮದ ಜನಸಂಖ್ಯೆ 1,919. ಪರೌಲಿ 130 ಜನಸಂಖ್ಯೆಯನ್ನು ಹೊಂದಿದೆ, ಇದರಲ್ಲಿ ಮುಖ್ಯವಾಗಿ ಬ್ರಾಹ್ಮಣರು ಮತ್ತು ಚಮ್ಮಾರರು (ಪರಿಶಿಷ್ಟ ಜಾತಿಗಳು) ಮತ್ತು ವಿಶ್ವಕರ್ಮರು (ಇತರ ಹಿಂದುಳಿದ ಜಾತಿಗಳು) ಇದ್ದಾರೆ.
ಅವಸ್ಥಿಯವರು ನಿಂತಿರುವ ಸೇತುವೆಯು ಪರೌಲಿ ಮತ್ತು ಬಾಂಡ್ ಎನ್ನುವ ಊರುಗಳ ನಡುವೆಯಿದ್ದು, ಅದರಲ್ಲಿ ಬಾಂಡ್ ಎನ್ನುವ ಊರು ಕಚೌನಾ ಬ್ಲಾಕಿಗೆ ಸೇರಿದೆ. ಕಚೌನಾ ಮೊದಲಿನಿಂದಲೂ ದೊಡ್ಡ ಮಾರುಕಟ್ಟೆ ಪ್ರದೇಶವಾಗಿತ್ತು. ಅಲ್ಲಿಗೆ ಈ ಪ್ರದೇಶದ ರೈತರು ತಮ್ಮ ಉತ್ಪನ್ನ ಮಾರಲು ಹಾಗೂ ರಸಗೊಬ್ಬರ ಖರೀದಿಸಲೆಂದು ಹೋಗುತ್ತಿದ್ದರು. ಆಗ ಈ ಹೊಳೆಗೆ ಸೇತುವೆಯಿದ್ದಿರಲಿಲ್ಲ. ಸೇತುವೆಯಿಲ್ಲದ ಸಮಯದಲ್ಲಿ ಕುರ್ಸಾತ್ ಬುಜುರ್ಗ್ ಮತ್ತು ಕಚೌನಾ ನಡುವಿನ ಅಂತರವು 25 ಕಿಲೋಮೀಟರ್ ಆಗಿತ್ತು. ಈ ಸೇತುವೆ ಆ ಅಂತರವನ್ನು 13 ಕಿಲೋಮೀಟರುಗಳಿಗೆ ಇಳಿಸಿತು.
ಕುರ್ಸಾತ್ ಮತ್ತು ಕಚೌನಾ ರೈಲು ನಿಲ್ದಾಣಗಳ ನಡುವೆ (ಈಗ ಬಲಮೌ ಜಂಕ್ಷನ್ ಎಂದು ಕರೆಯಲಾಗುತ್ತದೆ) ರೈಲ್ವೆ ಸೇತುವೆಯಿತ್ತು, ಅದನ್ನು ಜನರು ಸಹ ಬಳಸುತ್ತಿದ್ದರು. ಹಿಂದಿನ ಕಾಲದವರು ಈ ಸೇತುವೆಯ ಮೇಲೆ ಧಾನ್ಯಗಳನ್ನು ಹೊತ್ತ ಒಂಟೆಗಳು ನಡೆಯುತ್ತಿದ್ದ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ. ಆದರೆ 1960ರಲ್ಲಿ ಸುರಿದ ಅಸಾಧಾರಣ ಮಳೆಗೆ ಈ ಸೇತುವೆ ಕುಸಿದು ಬಿದ್ದಿತು. ಇದು ಎರಡೂ ಊರುಗಳ ನಡುವಿನ 10 ಕಿಲೋಮೀಟರರುಗಳ ಹತ್ತಿರದ ದಾರಿಯನ್ನು ಇಲ್ಲವಾಗಿಸಿತು.
ಹೊಸ ಸೇತುವೆಯ ಪರಿಕಲ್ಪನೆ ಮೊದಲು ಹುಟ್ಟಿದ್ದು ಅವಸ್ಥಿಯವರ ಮನಸ್ಸಿನಲ್ಲಿ. ಆಗ ಅವರು ಮಧೋಗಂಜ್ ಬ್ಲಾಕ್ ಸರ್ದಾರ್ ನಗರ ಗ್ರಾಮದಲ್ಲಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಅಂದು ಅವರು ಪರೌಲಿಯಿಂದ ಸುಮಾರು ಮೂರೂವರೆ ಕಿಲೋಮೀಟರ್ ದೂರದಲ್ಲಿರುವ ಆಜಾದ್ ನಗರ್ ಪಟ್ಟಣದಲ್ಲಿ ವಾಸಿಸುತ್ತಿದ್ದರು.
1945ರಲ್ಲಿ ಹುಟ್ಟಿದ ಈ ಮಾಜಿ ಮೇಷ್ಟ್ರ ನಿಜ ಉಪನಾಮ ಸಿಂಗ್ ಎಂದಿತ್ತು. ಅವರಿಗೆ ತ್ಯಾಗಿ ಎನ್ನುವ ಹೆಸರು ಅವರ ಜನೋಪಕಾರಿ ಮನೋಭಾವದ ಕಾರಣದಿಂದ ಬಂದಿದ್ದು. ಅವರು ಜನರಿಗೆ ಒಳಿತನ್ನು ಮಾಡುವ ಸಲುವಾಗಿ ಎಂತಹ ತ್ಯಾಗಕ್ಕೂ ಸಿದ್ಧರಿರುತ್ತಿದ್ದರು. 2008ರಲ್ಲಿ ಶಿಕ್ಷಕ ವೃತ್ತಿಯಿಂದ ನಿವೃತ್ತರಾಗುವ ಸಮಯದಲ್ಲಿ ಅವರು ವೃತ್ತಿ ಜೀವನ ಆರಂಭಿಸಿದ ಕಿರಿಯ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾಗಿದ್ದರು.
“ನಾನು ಬಡ ಕುಟುಂಬವೊಂದರಲ್ಲಿ ಹುಟ್ಟಿ ಬೆಳೆದವನಾದರೂ ಬಡತನ ಜನರಿಗೆ ಒಳಿತು ಮಾಡುವ ನನ್ನ ಇಚ್ಛಾಶಕ್ತಿಯನ್ನು ಕುಂದಿಸಲಿಲ್ಲ” ಎನ್ನುವ ತ್ಯಾಗಿಯವರು ಈಗ ವಯಸ್ಸಿನ ಕಾರಣದಿಂದಾಗಿ ದುರ್ಬಲರಾಗಿದ್ದು, ನಡೆಯವುದು ಕಷ್ಟವಾಗುತ್ತಿದೆ. ಒಮ್ಮೆ ಅವರ ಕುಟುಂಬದ ಎರಡು ಎಮ್ಮೆಗಳು ಆಜಾದ್ ನಗರದ ಮುಖ್ಯ ರಸ್ತೆಯಲ್ಲಿ ಆಳವಾದ ಹಳ್ಳಕ್ಕೆ ಬಿದ್ದವು. ಅವುಗಳನ್ನು ತಳ್ಳುವಿಕೆ ಮತ್ತು ಎಳೆಯುವಿಕೆಯ ಮೂಲಕ ಮೇಲಕ್ಕೆ ತಂದರಾದರೂ, ತನ್ನ ತಂದೆ ಈ ಕುರಿತು ನೊಂದುಕೊಂಡಿದ್ದನ್ನು ನೋಡಿ ತ್ಯಾಗಿಯವರ ಮನಸ್ಸು ಕದಡಿ ಹೋಗಿತ್ತು. “ಈ ದಾರಿಯಲ್ಲಿ ಸುರಕ್ಷಿತವಾಗಿ ನಡೆದು ಹೋಗಬಹುದಾಗಿದ್ದ ಸಮಯವಾದರೂ ಯಾವುದು?”
“ಇದು ನನ್ನನ್ನು ಈ ಕುರಿತು ಏನಾದರೂ ಮಾಡುವಂತೆ ಪ್ರಚೋದಿಸಿತು. ಅಂದೇ ನಾನು ಆ ಗುಂಡಿಯನ್ನು ಮುಚ್ಚಲು ಶುರುಮಾಡಿದೆ. ಆ ಗುಂಡಿ ಸುಮಾರು ಆರು ಅಡಿ ಆಳ ಮತ್ತು ಅದರ ಎರಡರಷ್ಟು ಉದ್ದವನ್ನು ಹೊಂದಿತ್ತು. ದಿನಾಲೂ ಶಾಲೆಗೆ ಹೋಗುವ ಮೊದಲು ಮತ್ತು ಶಾಲೆ ಮುಗಿದ ನಂತರ ಹತ್ತಿರದ ಕೊಳದ ದಡದಲ್ಲಿದ್ದ ಮಣ್ಣನ್ನು ತಂದು ಈ ಗುಂಡಿಯಲ್ಲಿ ತುಂಬುತ್ತಿದ್ದೆ. ಒಂದು ಗುಂಡಿ ಮುಚ್ಚಿದ ನಂತರ ಇನ್ನೊಂದು ಗುಂಡಿ ಮುಚ್ಚತೊಡಗಿದೆ. ಆಗ ಜನರೂ ನನ್ನೊಡನೆ ಸೇರಿಕೊಂಡರು” ಎಂದು ತ್ಯಾಗಿ ಹೇಳುತ್ತಾರೆ.


ಎಡ: ಜಗದೀಶ್ ಪ್ರಸಾದ್ ತ್ಯಾಗಿ 2008ರಲ್ಲಿ ಕಿರಿಯ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾಗಿ ನಿವೃತ್ತರಾದರು. ಅವರು ತಮ್ಮ ವೃತ್ತಿಜೀವನವನ್ನು ಇದೇ ಶಾಲೆಯಲ್ಲಿ ಪ್ರಾರಂಭಿಸಿದ್ದರು. ಬಲ: ಹರ್ದೋಯಿಯ ಆಜಾದ್ ನಗರದಲ್ಲಿರುವ ತ್ಯಾಗಿ ಅವರ ಮನೆಯಲ್ಲಿ ಸುರೇಂದ್ರ ನಾಥ್ ಅವಸ್ಥಿ ಮತ್ತು ಜಗದೀಶ್ ಪ್ರಸಾದ್ ತ್ಯಾಗಿ ಮಾತನಾಡುತ್ತಿದ್ದಾರೆ
ಅವರು ತನ್ನ ಊರಿನ ಜನರಿಗಾಗಿ ಹಲವು ಕೆಲಸಗಳನ್ನು ಮಾಡುತ್ತಿದ್ದರು. ಶಿಕ್ಷಕರಾಗಿ ಅವರ ಕುರಿತು ಎಲ್ಲರಿಗೂ ಗೌರವ ಇದ್ದ ಕಾರಣ ಅವರಿಗೆ ಇಂತಹ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು ಸುಲಭವಾಯಿತು. ಆರೋಗ್ಯ ತಪಾಸಣೆಗಾಗಿ ಹತ್ತಿರದ ಆರೋಗ್ಯ ಕೇಂದ್ರದಿಂದ ವೈದ್ಯರನ್ನು ಕರೆಸುವುದು, ಸೋಂಕು ಹರಡದ ಹಾಗೆ ಬ್ಲೀಚಿಂಗ್ ಪೌಡರ್ ಸಿಂಪಡಿಸುವುದು, ಗ್ರಾಮದ ಮಕ್ಕಳಿಗೆ ಲಸಿಕೆ ಹಾಕಿಸುವುದು ಮತ್ತು ಅವರ ಗ್ರಾಮವನ್ನು ಪಟ್ಟಣದ ವ್ಯಾಪ್ತಿಗೆ ಸೇರಿಸಿದ್ದು ಅವರ ಉತ್ತಮ ಕಾರ್ಯಗಳಲ್ಲಿ ಕೆಲವು. ನಂತರದ ಹಂತದಲ್ಲಿ ಲೋಕೋಪಯೋಗಿ ಇಲಾಖೆಯಿಂದ ನಡೆಯುತ್ತಿರುವ ಕೆಲಸಗಳ ಲೆಕ್ಕಪರಿಶೋಧನೆಯನ್ನು ನಡೆಸುವ ಜವಾಬ್ದಾರಿಯನ್ನು ಅವರು ವಹಿಸಿಕೊಂಡರು.
1994ರ ತನಕ ತ್ಯಾಗಿ ಮತ್ತು ಅವಸ್ಥಿಯವರು ಪರಸ್ಪರ ಪರಿಚಿತರಾಗಿರಲಿಲ್ಲ. ಆದರೆ ಒಬ್ಬರ ಕುರಿತು ಒಬ್ಬರಿಗೆ ತಿಳಿದಿತ್ತು. ಅವರ ಹಳ್ಳಿಯ ಮೊದಲ ವೈದ್ಯರಾದ ಅವಸ್ತಿ, ಅಲ್ಲಿಯವರೆಗೆ ಹೆಚ್ಚಾಗಿ ವಿದೇಶದಲ್ಲಿ (ನೈಜೀರಿಯಾ, ಯುನೈಟೆಡ್ ಕಿಂಗ್ಡಮ್ ಮತ್ತು ಮಲೇಷ್ಯಾದಲ್ಲಿ) ಕೆಲಸ ಮಾಡಿದ್ದರು. ಉನ್ನತ ಶಿಕ್ಷಣ ಮತ್ತು ವಿದ್ಯಾರ್ಥಿಗಳ ನಡುವೆ ಅದರಲ್ಲ್ ಹೆಣ್ಣು ಮಕ್ಕಳಿಗೆ ಕಂದಕವಾಗಿ ನಿಂತಿದ್ದ ಈ ಹೊಳೆ ಅವರನ್ನು ಯೋಚನೆಗೀಡುಮಾಡಿತ್ತು. ಹೀಗಾಗಿ ಅವರು ಇಲೆಕ್ಟ್ರಿಕ್ ಎಂಜಿನಿಯರ್ ಆಗಿರುವ ತನ್ನ ತಮ್ಮ ನರೇಂದ್ರರ ಬಳಿ ಒಂದು ದೋಣಿ ವ್ಯವಸ್ಥೆ ಮಾಡುವಂತೆ ಕೇಳಿಕೊಂಡರು. ಈ ದೋಣಿ ಮಕ್ಕಳನ್ನು ಮಳೆಗಾಲದಲ್ಲಿ ಹೊಳೆ ದಾಟಿಸುತ್ತಿತ್ತು. ಈ ದೋಣಿಗೆ ಅವಸ್ಥಿಯವರೇ 4,000 ರೂಪಾಯಿಗಳನ್ನು ಪಾವತಿಸಿದ್ದರು.
ಶಾಲಾ ಮಕ್ಕಳನ್ನು ದಾಟಿಸಿದ ನಂತರ ಅಂಬಿಗ ಛೋಟೆ ದಿನದ ಉಳಿದ ಸಮಯದಲ್ಲಿ ಜನರನ್ನು ಹೊಳೆ ದಾಟಿಸಲು ಹಣ ವಸೂಲಿ ಮಾಡಬಹುದು. ಆದರೆ ಶಾಲಾ ದಿನಗಳಂದು ರಜೆ ಮಾಡುವಂತಿಲ್ಲ ಎನ್ನುವ ಶರತ್ತಿನ ಮೇಲೆ ಅವರನ್ನು ನೇಮಿಸಿಕೊಳ್ಳಲಾಗಿತ್ತು. 1980ರ ಹೊತ್ತಿಗೆ ಅವಸ್ಥಿ ಊರಿನಲ್ಲೇ ಎಂಟನೆ ತರಗತಿಯ ತನಕ ಲಭ್ಯವಿರುವ ಶಾಲೆಯನ್ನು ನಿರ್ಮಿಸಿದ್ದರು. ಅದಕ್ಕೆ ಅವರ ಅಜ್ಜಿಯವರ ಹೆಸರನ್ನು ಇಡಲಾಗಿತ್ತು. ಗಂಗಾ ಸುಗ್ರಹಿ ಸ್ಮೃತಿ ಶಿಕ್ಷಣ ಕೇಂದ್ರ ಎನ್ನುವುದು ಶಾಲೆಯ ಹೆಸರಾಗಿತ್ತು. 1987 ರಲ್ಲಿ, ಈ ಶಾಲೆಯನ್ನು ಉತ್ತರ ಪ್ರದೇಶ ರಾಜ್ಯ ಪ್ರೌಢ ಶಾಲೆ ಮತ್ತು ಮಧ್ಯಂತರ ಶಿಕ್ಷಣ ಮಂಡಳಿಯಿಂದ ಗುರುತಿಸಲಾಯಿತು. ಆದರೆ ಉಳಿದವರು ಪರೌಲಿಗೆ ಹೇಗೆ ಬರುವುದೆನ್ನುವ ಪ್ರಶ್ನೆ ಹಾಗೇ ಉಳಿದು ಹೋಗಿತ್ತು.
ಕೊನೆಗೆ ಅವಸ್ಥಿ ಮತ್ತು ತ್ಯಾಗಿ ಭೇಟಿಯಾದಾಗ ಅವರಿಬ್ಬರಿಗೂ ಸೇತುವೆ ಹೊರತಾದ ಪರಿಹಾರ ಈ ಸಮಸ್ಯೆಗೆ ಇಲ್ಲವೆನ್ನುವುದನ್ನು ಕಂಡುಕೊಂಡರು. ಅವರಿಬ್ಬರಲ್ಲಿ ಅವಸ್ಥಿ ಒಮ್ಮೆ ಯಾರಿಂದಲೋ ನೀರಿಗೆ ತಳ್ಳಲ್ಪಟ್ಟ ಕಾರಣ ಈಜು ಕಲಿತಿದ್ದರು. ಆದರೆ ತ್ಯಾಗಿ ಎಂದಿಗೂ ನೀರಿಗೆ ಕಾಲಿಟ್ಟವರಲ್ಲ. ಅವಸ್ಥಿ ಸರ್ಕಾರಿ ನೌಕರಿಯಲ್ಲಿದ್ದ ಕಾರಣ ಹೋರಾಟ ಮುನ್ನಡೆಸುವಂತಿರಲಿಲ್ಲ. ಆದರೆ ತ್ಯಾಗಿಯವರಿಗೆ ಇದನ್ನು ಹೇಗೆ ಮುಂದಕ್ಕೆ ಕೊಂಡೊಯ್ಯಬೇಕೆನ್ನುವುದು ತಿಳಿದಿತ್ತು. ಈ ಇಬ್ಬರ ಭೇಟಿಯು 'ಕ್ಷೇತ್ರೀಯ ವಿಕಾಸ್ ಜನ ಆಂದೋಲನ್' (ಕೆವಿಜೆಎ - ಪ್ರಾದೇಶಿಕ ಅಭಿವೃದ್ಧಿಗಾಗಿ ಜನರ ಹೋರಾಟ) ಎನ್ನುವ ಸಂಘಟನೆಯ ಹುಟ್ಟಿಗೆ ಕಾರಣವಾಯಿತು.
ಕೆವಿಜೆಎಯ ಸದಸ್ಯರ ನಿಖರ ಸಂಖ್ಯೆ ಲಭ್ಯವಿಲ್ಲವಾದರೂ, ಅದಕ್ಕೆ ಸೇರುತ್ತಿದ್ದವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿತ್ತು. ತ್ಯಾಗಿಯವರು ತಾನು ಚುನಾವಣೆಗೆ ನಿಲ್ಲಲು ಸಾಧ್ಯವಿಲ್ಲದ ಕಾರಣ ಉತ್ತಮ ಗುಣಮಟ್ಟದ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಹೆಚ್ಚಿನ ಪ್ರಭಾವವನ್ನು ನಿರೀಕ್ಷಿಸಿ ಪುರಸಭೆ ಚುನಾವಣೆಯಲ್ಲಿ ನಿಲ್ಲಲು ಅವರು ತಮ್ಮ ತಾಯಿ ಭಗವತಿ ದೇವಿ ಅವರನ್ನು ಮನವೊಲಿಸಿದರು. ಭಗವತಿ ದೇವಿ ಐದು ಮತಗಳಿಂದ ಸೋತರು, ಆದರೆ ಸಬ್ ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದರು. ಅಲ್ಲಿ ತೀರ್ಪು ಅವರ ಪರವಾಗಿ ಬಂತು. 1997ರಿಂದ 2007ರವರೆಗೆ, ಅವರು ಟೌನ್ ಏರಿಯಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.
ಮೊದಲಿಗೆ, ಕೆವಿಜೆಎ ಸಂಘಟನೆಯನ್ನು ನೋಂದಾಯಿಸಬೇಕಾಗಿತ್ತು. ಆದರೆ, ಲಕ್ನೋದಲ್ಲಿ ಅವಸ್ಥಿಯವರ ಪ್ರಭಾವಶಾಲಿ ಸ್ಥಾನದ ಹೊರತಾಗಿಯೂ ಅದು ಸಾಧ್ಯವಾಗಲಿಲ್ಲ. ಕೊನೆಗೆ ಆಂದೋಲನವು ರಾಜಕಾರಣಿಗಳು ಮತ್ತು ಶಾಸಕರನ್ನು ಗುರಿಯಾಗಿಟ್ಟುಕೊಂಡು 'ವಿಕಾಸ್ ನಹೀಂ, ತೋ ವೋಟ್ ನಹೀಂ' (ಅಭಿವೃದ್ಧಿ ಇಲ್ಲದಿದ್ದರೆ, ಮತವಿಲ್ಲ) ಮತ್ತು 'ವಿಕಾಸ್ ಕರೋ ಯಾ ಗದ್ದಿ ಚೋಡೋ' (ಅಭಿವೃದ್ಧಿಯನ್ನು ಕೈಗೊಳ್ಳಿ ಅಥವಾ ನಿಮ್ಮ ಕುರ್ಚಿಗಳನ್ನು ಬಿಟ್ಟುಬಿಡಿ) ಎಂಬ ಘೋಷಣೆಯೊಂದಿಗೆ ತಿರುಗಿತು.
'ನಾವು ಅವಳನ್ನು [ಸಈ ನದಿ] ಪ್ರೀತಿಸಿದೆವು. ಅವಳಿಂದಾಗಿಯೇ ನಮ್ಮ ಬಾವಿಗಳಲ್ಲಿ ಕೇವಲ 10 ಅಡಿಗಳಲ್ಲೇ ಸಿಹಿ ನೀರು ಇರುತ್ತಿತ್ತು. ಪ್ರತಿ ಮಳೆಗಾಲದಲ್ಲಿ, ಅವಳು ನಮ್ಮ ಮನೆಗಳಿಗೆ ಹರಿದು ಬರುತ್ತಿದ್ದಳು'
ಇನ್ನೂ ನೋಂದಣಿಯಾಗದ ಸಂಘಟನೆಯ ಮೊದಲ ಸಭೆಯಲ್ಲಿ, 17 ಪೀಡಿತ ಹಳ್ಳಿಗಳಿಂದ ಸುಮಾರು 3,000 ಜನರು ಭಗವತಿ ದೇವಿಯವರ ಮಾತು ಕೇಳಲು ಪರೌಲಿಗೆ ತಲುಪಿದರು. ಕರಪತ್ರಗಳನ್ನು ಹಂಚಲಾಯಿತು. "ನಮ್ಮ ದೇಹ ಮತ್ತು ಹೃದಯದಿಂದ ನಾವು ಈ ಆಂದೋಲನಕ್ಕೆ ಬದ್ಧರಾಗಿದ್ದೇವೆ. ನಾವು ಹಿಂದೆ ಸರಿಯುವುದಿಲ್ಲ. ನಾವು ಈ ಪ್ರತಿಜ್ಞೆ ಪತ್ರಗಳಿಗೆ ನಮ್ಮ ರಕ್ತದಿಂದ ಸಹಿ ಹಾಕುತ್ತೇವೆ. ಬಾಂಡ್ ಮತ್ತು ಪರೌಲಿ ನಡುವೆ ಸೇತುವೆ ನಿರ್ಮಿಸುವವರೆಗೂ ನಾವು ವಿರಮಿಸುವುದಿಲ್ಲ.' ಇವುಗಳಿಗೆ 'ಲಾಲ್ ಹೋಗಾ ಹಮಾರಾ ಝಂಡಾ, ಕ್ರಾಂತಿ ಹೋಗಾ ಕಾಮ್' (ನಮ್ಮ ಧ್ವಜ ಕೆಂಪು ಬಣ್ಣದ್ದಾಗಿರುತ್ತದೆ, ದಂಗೆ ನಮ್ಮ ಕೆಲಸವಾಗಿರುತ್ತದೆ) ಎಂದು ಸಹಿ ಹಾಕಲಾಯಿತು.
ಅಂತಹ 1,000ಕ್ಕೂ ಹೆಚ್ಚು ಕರಪತ್ರಗಳನ್ನು ವಿತರಿಸಲಾಯಿತು ಮತ್ತು ಪ್ರತಿಯೊಂದರ ಮೇಲೆ ಜನರು ತಮ್ಮ ಸಹಿ ಮಾಡಿದರು ಅಥವಾ ರಕ್ತದಿಂದ ಹೆಬ್ಬೆರಳಿನ ಗುರುತನ್ನು ಅಂಟಿಸಿದರು.
ನಂತರ ಸೇತುವೆ ಅಗತ್ಯವಿರುವ 17 ಗ್ರಾಮಗಳಿಗೆ ಭೇಟಿ ನೀಡುವ ಕೆಲಸ ಆರಂಭವಾಯಿತು. “ಜನರು ತಮ್ಮ ಸೈಕಲ್ ಮತ್ತು ಹಾಸಿಗೆಗಳೊಡನೆ ಹೊರಟುಬಿಟ್ಟರು. ಬೇರೆ ಯಾವುದೇ ತಯಾರಿಯ ಅಗತ್ಯ ಅವರಿಗಿರಲಿಲ್ಲ” ಎಂದು ತ್ಯಾಗಿ ನೆನಪಿಸಿಕೊಳ್ಳುತ್ತಾರೆ. ಭೇಟಿ ನಡೆಯಲಿರುವ ಗ್ರಾಮಕ್ಕೆ ಸುದ್ದಿಯನ್ನು ತಲುಪಿಸಲಾಗುತ್ತಿತ್ತು. ಮತ್ತು ಅದನ್ನು ಗ್ರಾಮಸ್ಥರಿಗೆ ತಲುಪಿಸಲು ಡುಗ್ಡುಗಿ ಎನ್ನುವ ಡೋಲಿನೊಡನೆ ಡಂಗುರ ಸಾರಲಾಗುತ್ತಿತ್ತು.
ಮುಂದಿನ ಹಂತವಾಗಿ ನದಿಯ ತೀರದಲ್ಲಿ ಧರಣಿ ಕೂರುವುದು. ಇದನ್ನು ಅಲ್ಲಿ ಸಾಕಷ್ಟು ಗೌರವ ಹೊಂದಿದ್ದ ತ್ಯಾಗಿಯವರ ತಾಯಿಯ ನೇತ್ರತ್ವದಲ್ಲಿ ನಡೆಸಲಾಯಿತು. ಬಿದಿರಿನ ಕೋಲು ಹಿಡಿದು ಪ್ರತಿಭಟನೆ ನಡೆಸಲು ಅವಸ್ಥಿ ತಮ್ಮ ಭೂಮಿಯನ್ನು ನೀಡಿದರು. ರಾತ್ರಿ ಧರಣಿ ಸ್ಥಳದಲ್ಲಿ ಉಳಿಯುವ ಗ್ರಾಮಸ್ಥರಿಗಾಗಿ ಹುಲ್ಲಿನ ಬಿಡಾರವೊಂದನ್ನು ಮಾಡಲಾಯಿತು. ಏಳು ಜನರ ತಂಡವೊಂದು ಪಾಳಿಯಲ್ಲಿ ಹಗಲು ರಾತ್ರಿ ಧರಣಿ ನಡೆಸತೊಡಗಿತು. ದಿನವಿಡೀ ಅವರು ಕ್ರಾಂತಿ ಗೀತೆಗಳನ್ನು ಹಾಡುತ್ತಿದ್ದರು. ಮಹಿಳೆಯರು ಧರಣಿ ಕುಳಿತಿದ್ದಾಗ ಗಂಡಸರು ಅವರಿಗೆ ಭದ್ರತೆ ಒದಗಿಸುವ ಸಲುವಾಗಿ ಸುತ್ತಲು ಕೋಟೆಯಂತೆ ಕೂರುತ್ತಿದ್ದರು. ಸಾಮಾನ್ಯವಾಗಿ ಹೆಂಗಸರು ಭಜನೆ ಹಾಡುತ್ತಿದ್ದರು. ಅವಸ್ಥಿ ಸ್ಥಳದಲ್ಲೇ ಒಂದು ಹ್ಯಾಂಡ್ ಪಂಪ್ ಹಾಕಿ ಧರಣಿ ಕುಳಿತವರಿಗೆ ನೀರಿನ ವ್ಯವಸ್ಥೆ ಮಾಡಿದ್ದರು. ಅಲ್ಲಿ ನೀರು ಹಾವುಗಳು ಕಚ್ಚುವ ಭಯವಿತ್ತಾದರೂ ಅಂತಹ ಒಂದು ಘಟನೆಯೂ ನಡೆಯಲಿಲ್ಲ. ಜಿಲ್ಲಾ ಪೊಲೀಸರ ಸ್ಥಳೀಯ ಗುಪ್ತಚರ ಘಟಕವು ಪ್ರತಿಭಟನೆಯನ್ನು ಆಗಾಗ ಬಂದು ಗಮನಿಸುತ್ತಿದ್ದಾರೂ, ಯಾವುದೇ ಅಧಿಕಾರಿಯಾಗಲೀ ರಾಜಕಾರಣಿಯಾಗಲೀ ಪ್ರತಿಭಟನಾ ಸ್ಥಳಕ್ಕೆ ಬಂದಿರಲಿಲ್ಲ.
ಈ ಪ್ರತಿಭಟನೆಯ ಮಧ್ಯೆ, 1996 ರ ವಿಧಾನಸಭಾ ಚುನಾವಣೆ ಬಂದಿತು, ಅದನ್ನು ಗ್ರಾಮಸ್ಥರು ಬಹಿಷ್ಕರಿಸಿದರು. ಮತದಾನದಿಂದ ದೂರ ಉಳಿಯುವಂತೆ ಅವರು ಮತದಾರರಿಗೆ ಕರೆ ನೀಡಿದ್ದಲ್ಲದೆ, ಮತ ಚಲಾಯಿಸುವಂತೆ ನಟಿಸುತ್ತಾ ಮತಪೆಟ್ಟಿಗೆಗಳಲ್ಲಿ ನೀರನ್ನು ಸುರಿದರು. ಶಾಲಾ ಮಕ್ಕಳು ರಾಜ್ಯಪಾಲ ಮೋತಿಲಾಲ್ ವೋರಾ ಅವರಿಗೆ 11,000 ಪತ್ರಗಳನ್ನು ಚೀಲಗಳಲ್ಲಿ ತಲುಪಿಸಿದರು.
ಅವಸ್ಥಿ ಮತ್ತು ತ್ಯಾಗಿ ನಂತರ ಹೋರಾಟವನ್ನು ಲಕ್ನೋಗೆ ಕೊಂಡೊಯ್ಯಲು ನಿರ್ಧರಿಸಿದರು. ಅದಕ್ಕೂ ಮೊದಲು, ತ್ಯಾಗಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಎಸ್ಡಿಎಂಗೆ ಪತ್ರಗಳನ್ನು ಬರೆದು, ಇನ್ನು ಮುಂದೆ ನಿರ್ಲಕ್ಷಿಸಿದರೆ ಜನರು ತಮ್ಮ ಶಕ್ತಿಯನ್ನು ಪ್ರದರ್ಶಿಸಲು ಸಿದ್ಧರಿದ್ದಾರೆ ಎಂದು ಎಚ್ಚರಿಕೆ ನೀಡಿದರು. ಅವರು ಲಕ್ನೋಗೆ ಹೊರಡುವ ಮೊದಲು, ಎಂಟು ಕಿಲೋಮೀಟರ್ ದೂರದಲ್ಲಿರುವ ಮಾಧೋಗಂಜ್ ಪಟ್ಟಣಕ್ಕೆ ಸೈಕಲ್ ಮೆರವಣಿಗೆ ಮಾಡುವ ಮೂಲಕ ಅಂತಿಮ ಪ್ರಯತ್ನ ಮಾಡಲಾಯಿತು. ಪೋಸ್ಟರುಗಳು, ಬ್ಯಾನರುಗಳು ಮತ್ತು ಧ್ವಜಗಳೊಂದಿಗೆ ಸುಮಾರು 4,000 ಸೈಕಲ್ಲುಳು ಕಾಣಿಸಿಕೊಂಡಾಗ, ಮಾಧ್ಯಮಗಳು ಎದ್ದು ಕುಳಿತು ಗಮನಿಸುತ್ತಿದ್ದವು. ಅನೇಕ ಸ್ಥಳೀಯ ವರದಿಗಳು ಈ ವಿಷಯವನ್ನು ಎತ್ತಿ ತೋರಿಸಿದವು. ಸೇತುವೆಯ ಬೇಡಿಕೆಯನ್ನು ಒಪ್ಪಿಕೊಳ್ಳದಿದ್ದರೆ, ಡಿಎಂ ಅವರ ಜೀಪನ್ನು ನದಿಗೆ ತಳ್ಳುವುದಾಗಿ ಹೇಳಿದ ಕೆಲವು ಪ್ರತಿಭಟನಾಕಾರರ ಧೈರ್ಯಶಾಲಿ ಘೋಷಣೆಯೂ ವರದಿಯಾಯಿತು.
ಕೆಲವು ವಾರಗಳ ನಂತರ, 51 ಟ್ರಾಕ್ಟರುಗಳು ಡಿಎಂ ಕಚೇರಿಗೆ ಮುತ್ತಿಗೆ ಹಾಕಿದವು. ಆದರೆ ಆ ಅಧಿಕಾರಿ ಪ್ರತಿಭಟನಾಕಾರರನ್ನು ಭೇಟಿಯಾಗಲು ಹೊರಗೆ ಬರಲು ನಿರಾಕರಿಸಿದರು.


ಎಡ: ಏಪ್ರಿಲ್ 1996ರ ಹಳೆಯ ಫೋಟೋದಲ್ಲಿ ಸುರೇಂದ್ರ ಅವಸ್ಥಿ (ಕನ್ನಡಕದಲ್ಲಿ) ಪಕ್ಕದಲ್ಲಿ ಕುಳಿತಿರುವ ಜಗದೀಶ್ ತ್ಯಾಗಿ (ಬಿಳಿ ಕುರ್ತಾ). ಇವು ಅವಸ್ಥಿಯವರ ಮೂಲಕ ಪಡೆದ ಸ್ಕ್ಯಾನ್ ಕಾಪಿಗಳಾಗಿವೆ. ಬಲ: ತಾತ್ಕಾಲಿಕ ಬಿದಿರಿನ ಸೇತುವೆಯ ಮೇಲೆ ನಿಂತಿರುವ ಗ್ರಾಮಸ್ಥರು

ಸಈ ನದಿಯ ಪಕ್ಕದಲ್ಲಿ ಗ್ರಾಮಸ್ಥರೊಂದಿಗೆ ನಿಂತಿರುವ ಸುರೇಂದ್ರ ನಾಥ್ ಅವಸ್ತಿ
ಕೊನೆಗೆ ಉಳಿದ ದಾರಿಯೆಂದರೆ ಲಕ್ನೋದಲ್ಲಿನ ರಾಜ್ಯಪಾಲರ ನಿವಾಸದತ್ತ ಹೋಗುವುದು. ಬೇಡಿಕೆ ಪತ್ರಗಳನ್ನು ಮುದ್ರಿಸಿ, ರಕ್ತದಲ್ಲಿ ಸಹಿ ಹಾಕಲಾಯಿತು ಮತ್ತು ಪ್ರಯಾಣಕ್ಕಾಗಿ ಜನರನ್ನು ಸಿದ್ಧಪಡಿಸಲು ಪ್ರತಿ ಹಳ್ಳಿಯನ್ನು ಉಸ್ತುವಾರಿಗಳಿಗೆ ಹಸ್ತಾಂತರಿಸಲಾಯಿತು. ಮಹಿಳೆಯರನ್ನು ದೂರವಿಡಬೇಕಾಗಿತ್ತು, ಆದರೆ ತ್ಯಾಗಿಯವರ ತಾಯಿಗೆ ಅದ್ಯಾವುದೂ ಇರಲಿಲ್ಲ. ತನ್ನ ಮಗ ಎಲ್ಲಿಗೆ ಹೋದರೂ ಅಲ್ಲಿಗೆ ಹೋಗುತ್ತೇನೆ ಎಂದು ಒತ್ತಾಯಿಸಿದರು.
ಏಪ್ರಿಲ್ 1995ರಲ್ಲಿ, ಪರೌಲಿಯಿಂದ ಸುಮಾರು 20 ಕಿಲೋಮೀಟರ್ ದೂರದಲ್ಲಿರುವ ಸ್ಯಾಂಡಿಲಾದಲ್ಲಿ 14 ಬಸ್ಸುಗಳನ್ನು ನಿಲ್ಲಿಸಲಾಯಿತು. ಅವುಗಳನ್ನು ರಾಜ್ಯ ರಸ್ತೆ ಸಾರಿಗೆ ನಿಗಮದ ಅಧಿಕಾರಿಯೊಬ್ಬರು ಅನಾಮಧೇಯವಾಗಿ ಪ್ರಾಯೋಜಿಸಿದರು. ಬೆಳಿಗ್ಗೆ 5 ಗಂಟೆಗೆ ಅವರು ಲಕ್ನೋ ತಲುಪಿದರು. ಯಾವುದೇ ಪ್ರತಿಭಟನಾಕಾರರಿಗೆ ನಗರದ ಸುತ್ತಲೂ ದಾರಿ ತಿಳಿದಿಲ್ಲದ ಕಾರಣ, ಬೆಳಿಗ್ಗೆ 11ರ ಸುಮಾರಿಗೆ ಮಹಾತ್ಮ ಗಾಂಧಿ ಮಾರ್ಗದಲ್ಲಿರುವ ಗವರ್ನರ್ ಹೌಸ್ ತಲುಪುವ ಮೊದಲು ಸಾಕಷ್ಟು ಸುತ್ತಾಡಿದರು.
"ಅದೊಂದು ವಿಧ್ವಂಸಕ ಕೃತ್ಯವಾಗಿತ್ತು. ಸ್ವಲ್ಪ ಸಮಯದಲ್ಲೇ, 15 ಪೊಲೀಸ್ ಜೀಪುಗಳು ನಮ್ಮನ್ನು ಸುತ್ತುವರೆದವು. ಕೆಲವು ಪೋಲಿಸರು ಕುದುರೆಗಳ ಮೇಲೆ ಬಂದರು. ಜಲಫಿರಂಗಿಗಳು ಹೊರಬಂದವು. ನನ್ನ ತಾಯಿ ಅವರ ಮುಂದೆ ಬಿದ್ದು ಮಗನಿಗಿಂತ ಮೊದಲು ನಾನು ಜೈಲಿಗೆ ಹೋಗುತ್ತೇನೆ ಎಂದು ಕೂಗುವವರೆಗೂ ನನ್ನನ್ನು ನಾಲ್ಕು ಪೊಲೀಸರು ಎಳೆದಾಡಿದರು" ಎಂದು ತ್ಯಾಗಿ ಹೇಳುತ್ತಾರೆ. ಕೆಲವು ಪ್ರತಿಭಟನಾಕಾರರು ಓಡಿಹೋದರು. ಸ್ಥಳಕ್ಕೆ ತಲುಪಿದ ಹರ್ದೋಯ್ ನ ರಾಜಕೀಯ ಪ್ರತಿನಿಧಿಗಳು ಇತರರನ್ನು ರಕ್ಷಿಸಿದರು. ದೈಹಿಕವಾಗಿ ದಣಿದಿದ್ದ, ಆದರೆ ಭಾವನಾತ್ಮಕವಾಗಿ ವಿಜಯಶಾಲಿಯಾದ ಗುಂಪು ಆ ರಾತ್ರಿ 12 ಗಂಟೆಗೆ ಹರ್ದೋಯ್ ಗೆ ಮರಳಿತು. ಅವರನ್ನು ಚೆಂಡು ಹೂವಿನ ಮಾಲೆಗಳೊಂದಿಗೆ ಸ್ವಾಗತಿಸಲಾಯಿತು.
ಅಷ್ಟೊತ್ತಿಗಾಗಲೇ ಸೇತುವೆ ಹೋರಾಟಕ್ಕೆ ಸುಮಾರು ಒಂದೂವರೆ ವರ್ಷವಾಗಿತ್ತು. ಲಕ್ನೋದಲ್ಲಿ ನಡೆದ ಮುತ್ತಿಗೆ ಭಾರಿ ಕೋಲಾಹಲವನ್ನು ಸೃಷ್ಟಿಸಿತ್ತು.
ನಂತರ ಪ್ರತಿಭಟನಾಕಾರರನ್ನು ತಲುಪಿದ ಮೊದಲ ವ್ಯಕ್ತಿ ಸಹಕಾರಿ ಸಚಿವ ರಾಮ್ ಪ್ರಕಾಶ್ ತ್ರಿಪಾಠಿ. ಅವರು ಜನರ ಮಾತುಗಳನ್ನು ಕೇಳಿದರು; ಲೋಕೋಪಯೋಗಿ ಇಲಾಖೆಯ ಸಚಿವ ಕಲ್ರಾಜ್ ಮಿಶ್ರಾ ಅವರ ಬಳಿಗೆ ತೆರಳಿ ಬೇಡಿಕೆಯ ಬಗ್ಗೆ ಮಾತ್ರವಲ್ಲದೆ, ಆಂದೋಲನ ಮುಂದುವರಿದರೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಈ ಪ್ರದೇಶದಲ್ಲಿ ಬೆಂಬಲವನ್ನು ಕಳೆದುಕೊಳ್ಳುತ್ತದೆ ಎಂಬ ಅಂಶವನ್ನು ಅವರಿಗೆ ತಿಳಿಸಲಾಯಿತು.
ಮಿಶ್ರಾ ಮಧ್ಯಪ್ರವೇಶಿಸುವ ಮೊದಲು, ಪ್ರತಿಭಟನಾಕಾರರು ತಾವು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಘೋಷಿಸಿದ್ದರು ಮತ್ತು ಆ ಅದನ್ನು ಮಾಧ್ಯಮಗಳಿಗೆ ತಿಳಿಸಿದ್ದರು. ಪೊಲೀಸರು ಬಂದು ತ್ಯಾಗಿ ಅವರ ಸಹೋದರ ಹೃದಯ್ ನಾಥ್ ಸೇರಿದಂತೆ ಅನೇಕ ಪ್ರತಿಭಟನಾಕಾರರನ್ನು ಬಂಧಿಸಿದರು.
ಆಗಸ್ಟ್ 13, 1997ರಂದು, ಹರ್ದೋಯ್ ಡಿಎಂ ನೇತೃತ್ವದ ತಂಡವು ಅಂತಿಮವಾಗಿ ಪ್ರತಿಭಟನಾಕಾರರನ್ನು ಭೇಟಿ ಮಾಡಲು ನಿರ್ಧರಿಸಿತು. ತ್ಯಾಗಿಯವರನ್ನು ಹೀರೋ ಎಂದು ಹೊಗಳಲಾಯಿತು. ಲಖನೌದಲ್ಲಿ, ಆಂದೋಲನಕ್ಕೆ ಧನಸಹಾಯ ಮಾಡುತ್ತಿದ್ದ ಅವಸ್ಥಿ ಅವರನ್ನು ಬಿಡುಗಡೆ ಮಾಡಲಾಯಿತು. ಕೆಲವು ತಿಂಗಳುಗಳ ನಂತರ, ಸೇತುವೆಯನ್ನು ಮಂಜೂರು ಮಾಡಲಾಯಿತು. ಆದಾಗ್ಯೂ, ನಿರ್ಮಾಣಕ್ಕಾಗಿ ಪಾವತಿಸಬೇಕಿದ್ದ ಎರಡು ಕಂತುಗಳು ಮತ್ತೊಂದು ವರ್ಷದ ಪ್ರತಿಭಟನೆಯ ನಂತರವೇ ಬಂದವು.


ಎಡಭಾಗ: ವೆಂಕಟೇಶ್ ದತ್ತಾ ತನ್ನ ಪ್ರಯೋಗಾಲಯದಲ್ಲಿ ಕಂಪ್ಯೂಟರ್ ಮುಂದೆ ಕುಳಿತಿದ್ದಾರೆ. ಬಲ: 1901-2021 ವರ್ಷಗಳಿಂದ ಹರ್ದೋಯಿಯ ಸರಾಸರಿ ವಾರ್ಷಿಕ ಮಳೆಯನ್ನು ತೋರಿಸುವ ಗ್ರಾಫ್
ಜುಲೈ 14, 1998 ರಂದು, ಪಿಡಬ್ಲ್ಯೂಡಿ ಸಚಿವರು ಸೇತುವೆಯನ್ನು ಉದ್ಘಾಟಿಸಲು ಸಿದ್ಧರಾಗಿದ್ದರು. ಕೃತಜ್ಞತೆಯ ಸಂಕೇತವಾಗಿ ಗ್ರಾಮಸ್ಥರು ಅವರಿಗೆ ನಾಣ್ಯದ ತುಲಾಭಾರ ಮಾಡಿಸುವುದಾಗಿ ಹೇಳಲಾಗಿತ್ತು. ಆದರೆ ಅದು ನಡೆಯದ ಕಾರಣ, ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಊರಿನ ಜನರನ್ನು ಈ ವಿಷಯದಲ್ಲಿ ತಮಾಷೆ ಮಾಡಲು ಮರೆಯಲಿಲ್ಲ.
ಸೇತುವೆಗಾಗಿ ಹೋರಾಡಲು ಒಗ್ಗೂಡಿದ ಎಲ್ಲಾ 17 ಹಳ್ಳಿಗಳಲ್ಲಿ, ಅದು ಸಂಭ್ರಮದ ದಿನವಾಗಿತ್ತು. "ಅಂದು ದೀಪಾವಳಿಗಿಂತ ಹೆಚ್ಚು ಬೆಳಕಿತ್ತು, ಹೋಳಿಗಿಂತ ಹೆಚ್ಚು ವರ್ಣರಂಜಿತವಾಗಿತ್ತು" ಎಂದು ಅವಸ್ಥಿ ನೆನಪಿಸಿಕೊಳ್ಳುತ್ತಾರೆ.
ಅದರ ನಂತರ, ಸಈ ಕುಗ್ಗಲು ಪ್ರಾರಂಭಿಸಿತು. ವರ್ಷವಿಡೀ ಭವ್ಯವಾಗಿ ಹರಿಯುತ್ತಿದ್ದ ಮಳೆಯಾಶ್ರಿತ ನದಿಯು ಮಳೆಗಾಲದಲ್ಲಿ ಭಯಭೀತವಾಗುತ್ತಿತ್ತು, ವರ್ಷಗಳು ಕಳೆದಂತೆ ದುರ್ಬಲಗೊಳ್ಳುತ್ತಾ ಹೋಯಿತು.
ಆದರೆ ಇದು ಸಈ ನದಿಯ ಹಣೆಬರಹ ಮಾತ್ರವಲ್ಲ- ಲಕ್ನೋದ ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್ ವಿಶ್ವವಿದ್ಯಾಲಯದ ಸ್ಕೂಲ್ ಫಾರ್ ಎನ್ವಿರಾನ್ಮೆಂಟಲ್ ಸೈನ್ಸಸ್ ಇದರ ಪ್ರೊಫೆಸರ್ ವೆಂಕಟೇಶ್ ದತ್ತಾ ಹೇಳುತ್ತಾರೆ: "ಇಂತಹ ಅಂತರ್ಗತತೆಯ ಜಾಗತಿಕ ಪ್ರವೃತ್ತಿಯಿದೆ. ಒಂದು ಕಾಲದ ಬಹುವಾರ್ಷಿಕ ನದಿಗಳ ಹರಿವು ಇಂದು (ಸಈಯಂತಹ) ಮಾನ್ಸೂನ್ ಅವಲಂಬಿತಗೊಂಡಿವೆ ಮತ್ತು ನಿಧಾನಗತಿಯನ್ನು ಆರಂಬಿಸಿವೆ. 1984ರಿಂದ 2016ರವರೆಗಿನ ದತ್ತಾಂಶವು ಅಂತರ್ಜಲ ಮತ್ತು ಬೇಸ್ ಫ್ಲೋ ಎರಡೂ ಕುಸಿಯುತ್ತಿದೆ ಎಂದು ದೃಢಪಡಿಸುತ್ತದೆ.
ಬೇಸ್ ಫ್ಲೋ ಎಂದರೆ ಕೊನೆಯ ಮಳೆಯ ನಂತರವೂ ದೀರ್ಘಕಾಲದವರೆಗೆ ನೆಲದಿಂದ ಜಲಮೂಲಕ್ಕೆ ಹರಿಯುವ ನೀರು; ಅಂತರ್ಜಲವು ನದಿಯು ಒಣಗುವ ಸಮಯದಲ್ಲಿ ಅಗೆಯಬಹುದಾದ ಸಂಗ್ರಹವಾಗಿದೆ. ಈ ಅರ್ಥದಲ್ಲಿ ಮೂಲ ಹರಿವು ಇಂದಿನ ನದಿಯಾದರೆ ಮತ್ತು ಅಂತರ್ಜಲ - ಭವಿಷ್ಯದ ನದಿ. 1996 ರಿಂದ 20 ವರ್ಷಗಳ ಅವಧಿಯಲ್ಲಿ, ಉತ್ತರ ಪ್ರದೇಶದಲ್ಲಿ ಮಳೆಯು ಶೇಕಡಾ 5ರಷ್ಟು ಕಡಿಮೆಯಾಗಿದೆ.
2021ರ ಜುಲೈಯಲ್ಲಿ ಬಿಡುಗಡೆಯಾದ ಉತ್ತರ ಪ್ರದೇಶದ ಅಂತರ್ಜಲದ ಸ್ಥಿತಿಯ ಬಗ್ಗೆ ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್ವಿರಾನ್ಮೆಂಟ್ ವರದಿ ಯು ಹೀಗೆ ಹೇಳುತ್ತದೆ, "… ನೀರಿನ ಮಟ್ಟದ ಕ್ಷಿಪ್ರ ಕುಸಿತವು ರಾಜ್ಯದ ಅಂತರ್ಜಲ ಆಧಾರಿತ ನದಿಗಳ ಮೇಲೆ ತೀವ್ರವಾಗಿ ಪರಿಣಾಮ ಬೀರಿದೆ, ಏಕೆಂದರೆ ನೈಸರ್ಗಿಕ ವಿಸರ್ಜನೆಗಳು / ಅಂತರ್ಜಲ ವ್ಯವಸ್ಥೆಯಿಂದ ನದಿಗಳಿಗೆ ಹರಿಯುತ್ತದೆ, ಮತ್ತು ಗದ್ದೆಗಳು ಗಮನಾರ್ಹವಾಗಿ ಕಡಿಮೆಯಾಗಿವೆ ಅಥವಾ ಬಹುತೇಕ ಕಣ್ಮರೆಯಾಗಿವೆ. ಜಲಮೂಲಗಳು ಮತ್ತು ಅವುಗಳ ಜಲಾನಯನ ಪ್ರದೇಶಗಳ ದೊಡ್ಡ ಪ್ರಮಾಣದ ಅತಿಕ್ರಮಣವು ಸಂಕಟಗಳನ್ನು ಹೆಚ್ಚಿಸಿದೆ.... ಕಡಿಮೆಯಾದ ಮೂಲ ಹರಿವು ಅಂತರ್ಜಲ-ಅವಲಂಬಿತ ನದಿಗಳು ಮತ್ತು ಅವುಗಳ ಪರಿಸರ ಹರಿವು ಮತ್ತು ಮೇಲ್ಮೈ ಸಂಗ್ರಹಣೆಗಳ ಮೇಲೆ ಪರಿಣಾಮ ಬೀರುತ್ತಿದೆ. ಗೋಮತಿ ನದಿ ಮತ್ತು ಅದರ ಉಪನದಿಗಳು ಮತ್ತು ರಾಜ್ಯದ ಹಲವಾರು ಇತರ ನದಿಗಳು ಅಂತರ್ಜಲದಿಂದ ತುಂಬಿವೆ, ಆದರೆ ನದಿ ಜಲಾನಯನ ಪ್ರದೇಶದಲ್ಲಿ ಭಾರಿ ಅಗೆಯುವಿಕೆ ಮತ್ತು ನಂತರದ ಅಂತರ್ಜಲ ಮಟ್ಟದ ಕುಸಿತವು ನದಿಗಳ ಹರಿವಿನಲ್ಲಿ ಗಮನಾರ್ಹ ಇಳಿಕೆಯೊಂದಿಗೆ ತೀವ್ರವಾಗಿ ಪರಿಣಾಮ ಬೀರಿದೆ.
ಈ ವಿಪತ್ತುಗಳ ಜೊತೆಗೆ, ಜಿಲ್ಲೆಯು ಮೂರನೇ ಸಮಸ್ಯೆಯನ್ನು ಎದುರಿಸಿತು. 1997 ಮತ್ತು 2003ರ ನಡುವೆ ಹರ್ದೋಯ್ ತನ್ನ 85 ಪ್ರತಿಶತದಷ್ಟು ಗದ್ದೆಗಳನ್ನು ಕಳೆದುಕೊಂಡಿದೆ ಎಂದು ಅಧ್ಯಯನವೊಂದು ಹೇಳಿದೆ.


ಎಡ: ಶಿವರಾಂ ಸಕ್ಸೇನಾ ಸಈ ನದಿಯ ಮೊಣಕಾಲು ಆಳದ ನೀರಿನಲ್ಲಿ ನಿಂತಿದ್ದಾರೆ. ಬಲ: ನದಿಯ ದಡದಲ್ಲಿರುವ ಕೃಷಿ ನೀರಾವರಿ ಪಂಪ್
ಪರೌಲಿಯಲ್ಲಿ, ವಿಜ್ಞಾನದ ಕುರಿತು ತಲೆ ಕೆಡಿಸಿಕೊಳ್ಳದವರಿಗೂ ಸಹ, ಬದಲಾವಣೆಗಳು ಗೋಚರಿಸುತ್ತವೆ. ಉದಾಹರಣೆಗೆ, ಕೇವಲ ಎರಡು ದಶಕಗಳಲ್ಲಿ, ಹಳ್ಳಿಯ ಎಲ್ಲಾ ಆರು ಬಾವಿಗಳು ಒಣಗಿಹೋಗಿವೆ. ಬಾವಿಗಳ ಬಳಿಯಲ್ಲಿ ನಡೆಸುವ ಎಲ್ಲಾ ಆಚರಣೆಗಳನ್ನು (ಮದುಮಗಳ ಪ್ರಾರ್ಥನೆಯಂತಹ) ಕೈಬಿಡಲಾಗಿದೆ. ಬೇಸಿಗೆಯ ತಿಂಗಳುಗಳಲ್ಲಿ, ನದಿಯು ದುರ್ಬಲವಾಗಿ ಹರಿಯುತ್ತದೆ.
ಈ ನದಿಯಲ್ಲಿ ಈಜಿ ಸಂಭ್ರಮಿಸುತ್ತಿದ್ದ 47 ವರ್ಷದ ಶಿವರಾಮ್ ಸಕ್ಸೇನಾ ಅವರಂತಹ ರೈತರು ಇಂದು ಫೋಟೊ ಸಲುವಾಗಿ ಸಹ ಅದರಲ್ಲಿ ಹೆಜ್ಜೆ ಹಾಕಲು ಹಿಂಜರಿಯುತ್ತಿದ್ದಾರೆ. “ಇದು ನಾನು ಆಡಿ ಬೆಳೆದ ಅಂದಿನ ಸ್ವಚ್ಛ, ಸುಂದರ ನದಿಯಲ್ಲ" ಎಂದು ಅವರು ಮೊಣಕಾಲು ಆಳದ ನೀರಿನಲ್ಲಿ ನಿಂತು ಹೇಳುತ್ತಾರೆ.
ಅವಸ್ಥಿಯವರ ತಂದೆ ದೇವಿ ಚರಣ್ ಪತ್ರೌಲ್ (ನೀರಾವರಿ ಇಲಾಖೆಗೆ ಭೂಮಿಯನ್ನು ಅಳೆಯುವ ಸರ್ಕಾರ ನೇಮಿಸಿದ ಕೆಲಸಗಾರ) ಆಗಿ ಕೆಲಸ ಮಾಡುತ್ತಿದ್ದರು. ಆಗ ಸಈಯ ನೀರನ್ನು ನೀರಾವರಿಗಾಗಿ ಪರೌಲಿಗೆ ತಿರುಗಿಸಲು ಅವರು ಒಂದು ಸಣ್ಣ ಕಾಲುವೆಯನ್ನು ನಿರ್ಮಿಸಿದ್ದರು. ಈಗ ಆ ಕಾಲುವೆ ಒಣಗಿದೆ.
ಈಗ ನದಿಯ ದಡದಲ್ಲಿ, ಹೊಲಗಳಿಗೆ ನೀರುಣಿಸಲು ಡೀಸೆಲ್ ಚಾಲಿತ ನೀರಿನ ಪಂಪುಗಳನ್ನು ಸ್ಥಾಪಿಸಲಾಗಿದೆ.
ಸಈ ತನ್ನದೇ ಆದ ಯೋಧರ ಗುಂಪನ್ನು ಹೊಂದಿತ್ತು. ಇವರಲ್ಲಿ ಒಬ್ಬರಾದ 74 ವರ್ಷದ ವಿಂಧ್ಯವಾಸನಿ ಕುಮಾರ್, 1996-2002ರ ಅವಧಿಯಲ್ಲಿ ರಾಜ್ಯ ವಿಧಾನ ಪರಿಷತ್ತಿನ ಮಾಜಿ ಸದಸ್ಯರಾಗಿದ್ದರು. ಅವರು 82 ಸಾರ್ವಜನಿಕ ಸಭೆಗಳನ್ನು ನಡೆಸಿದ್ದರು ಸಾವಿರಾರು ಮರಗಳನ್ನು ನೆಟ್ಟಿದ್ದಾರೆ. ಗಂಗಾ ನದಿಯ ಉಪನದಿಗಳನ್ನು ರಕ್ಷಿಸದೆ ಅದನ್ನು ಉಳಿಸುವುದು ಸಾಧ್ಯವಿಲ್ಲ ಎಂಬುದು ಅವರ ಸಂದೇಶವಾಗಿತ್ತು.
ಪ್ರತಾಪಗಢ್ ಜಿಲ್ಲೆಯ ಕುಮಾರ್ ಹೇಳುವಂತೆ “ನಾನು ನನ್ನ ಬದುಕಿನಲ್ಲಿ ನದಿಗಳ ನಿಧಾನ ಗತಿಯ ಸಾವಿಗೆ ಸಾಕ್ಷಿಯಾಗಿದ್ದೇನೆ. ಅವುಗಳ ಗಾತ್ರ ಕುಗ್ಗಿವೆ, ನೀರಿನ ಮೂಲಗಳು ಬತ್ತಿ ಹೋಗಿವೆ, ಕೈಗಾರಿಕಾ ತ್ಯಾಜ್ಯ ಮತ್ತು ಅವಶೇಷಗಳನ್ನು ಅವುಗಳಲ್ಲಿ ವಿವೇಚನೆಯಿಲ್ಲದೆ ಎಸೆಯಲಾಗುತ್ತಿದೆ, ನದಿಪಾತ್ರಗಳನ್ನು ಕೃಷಿಗಾಗಿ ಅತಿಕ್ರಮಿಸಲಾಗಿದೆ, ಅಂತರ್ಜಲವನ್ನು ಅತಿಯಾಗಿ ಬಳಸಿಕೊಳ್ಳಲಾಗಿದೆ... ನಮ್ಮ ನೀತಿ ನಿರೂಪಕರು ಗಮನ ಹರಿಸಲು ಬಯಸದ ದುರಂತವಿದು." ಸಈ ನದಿ ಪ್ರತಾಪಗಢ ಜಿಲ್ಲೆಯ ಮೂಲಕವೂ ಹರಿಯುತ್ತದೆ.
ಕಣ್ಮರೆಯಾಗುತ್ತಿರುವ ನಮ್ಮ ನದಿಗಳ ದುರಂತದ ಬಗ್ಗೆ ನೀತಿ ನಿರೂಪಕರು ಗಮನ ಹರಿಸದಿದ್ದರೂ, ಅವರು ತಮ್ಮ ಸಾಧನೆಗಳನ್ನು ನೆನಪಿಸಿಕೊಳ್ಳುತ್ತಾರೆ.


ವಿಂಧ್ಯಾವಾಸನಿ ಕುಮಾರ್ ಅವರಿಂದ ಪಡೆದ ಪ್ರತಿಭಟನಾ ಮೆರವಣಿಗೆಯ ಹಳೆಯ ಫೋಟೋಗಳು. ಕುಮಾರ್ 2013ರಲ್ಲಿ ನದಿಯ ದಡದಲ್ಲಿ 725 ಕಿಲೋಮೀಟರ್ ಪ್ರಯಾಣವನ್ನು ಕೈಗೊಂಡರು


"ಮಕ್ಕಳು ತಮ್ಮ ಸುತ್ತಲಿನ ಮರಗಳು, ಭೂಮಿ ಮತ್ತು ನದಿಗಳ ಕುರಿತು ತಿಳಿದುಕೊಳ್ಳದೆ ದೊಡ್ಡವರಾದ ನಂತರ ಅವರಲ್ಲಿ ಆ ಕುರಿತು ಕಾಳಜಿ ಹೇಗೆ ಬೆಳೆಯಲು ಸಾಧ್ಯ?" ಎಂದು ವಿಂಧ್ಯಾವಾಸನಿ ಕುಮಾರ್ (ಬಲ) ಕೇಳುತ್ತಾರೆ
ನವೆಂಬರ್ 1, 2022ರಂದು; ಇಂಡಿಯಾ ವಾಟರ್ ವೀಕ್ ಸಂದರ್ಭದಲ್ಲಿ ಮಾತನಾಡಿದ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕಳೆದ ಕೆಲವು ವರ್ಷಗಳಲ್ಲಿ ರಾಜ್ಯದ 60ಕ್ಕೂ ಹೆಚ್ಚು ನದಿಗಳನ್ನು ಪುನರುಜ್ಜೀವನಗೊಳಿಸಲಾಗಿದೆ ಎಂದು ಹೇಳಿದ್ದಾರೆ .
ಪ್ರೊಫೆಸರ್ ವೆಂಕಟೇಶ್ ದತ್ತಾ ಅವರು ನದಿ ಪುನರುಜ್ಜೀವನವು ಕೆಲವೇ ವರ್ಷಗಳಲ್ಲಿ ಸಾಧಿಸಬಹುದಾದ 'ಮ್ಯಾಜಿಕ್' ಅಲ್ಲ ಎಂದು ಹೇಳುತ್ತಾರೆ. "ದೊಡ್ಡ ಜಲಮೂಲಗಳು, ಸರೋವರಗಳು, ಕೊಳಗಳು ಮತ್ತು ತೊರೆಗಳ ಮೂಲಕ ನಡೆಸಲಾಗುವ ನೈಸರ್ಗಿಕ ಮರುಪೂರಣ ಮಾತ್ರ ನಮ್ಮ ನದಿಗಳಿಗೆ ನೀರನ್ನು ಮರಳಿ ತರಬಹುದು. ಬೆಳೆ ಆಯ್ಕೆಯನ್ನು ಬದಲಾಯಿಸಬೇಕು. ನಿಖರ ನೀರಾವರಿಯ ಮೂಲಕ ನೀರಿನ ಬಳಕೆಯನ್ನು ಭಾರಿ ಪ್ರಮಾಣದಲ್ಲಿ ಕಡಿಮೆ ಮಾಡಬೇಕು. ಆಗಲೂ, ನದಿಯನ್ನು ಪುನರುಜ್ಜೀವನಗೊಳಿಸಲು 15-20 ವರ್ಷಗಳು ಬೇಕಾಗುತ್ತದೆ. ನದಿಗಳ ಬಗ್ಗೆ ರಾಷ್ಟ್ರೀಯ ನೀತಿಯ ಕೊರತೆಯ ಬಗ್ಗೆಯೂ ಅವರು ವಿಷಾದಿಸುತ್ತಾರೆ.
ಶಾಲಾ ಮಟ್ಟದಲ್ಲಿ ಸ್ಥಳೀಯ ಭೌಗೋಳಿಕ ಅಧ್ಯಯನವನ್ನು ಕಡ್ಡಾಯಗೊಳಿಸುವುದು ದೀರ್ಘಕಾಲೀನ ಪರಿಹಾರ ಎಂದು ವಿಂಧ್ಯಾವಾಸನಿ ಕುಮಾರ್ ಹೇಳುತ್ತಾರೆ. "ಮಕ್ಕಳು ತಮ್ಮ ಸುತ್ತಲಿನ ಮರಗಳು, ಭೂಮಿ ಮತ್ತು ನದಿಗಳ ಕುರಿತು ತಿಳಿದುಕೊಳ್ಳದೆ ದೊಡ್ಡವರಾದ ನಂತರ ಅವರಲ್ಲಿ ಆ ಕುರಿತು ಕಾಳಜಿ ಹೇಗೆ ಬೆಳೆಯಲು ಸಾಧ್ಯ?" ಎಂದು ಅವರು ಕೇಳುತ್ತಾರೆ.
ನದಿಗಳನ್ನು ಪುನರುಜ್ಜೀವನಗೊಳಿಸಲು 'ಸಮಗ್ರ ವಿಧಾನ'ವೊಂದರ ಅಗತ್ಯವಿದೆ ಎಂದು ರಾಜ್ಯದ ಅಂತರ್ಜಲ ಇಲಾಖೆಯ ಹಿರಿಯ ಜಲವಿಜ್ಞಾನಿ ಮತ್ತು ಅಂತರ್ಜಲ ಕ್ರಿಯಾ ಗುಂಪಿನ ಸಂಚಾಲಕ ರವೀಂದ್ರ ಸ್ವರೂಪ್ ಸಿನ್ಹಾ ಹೇಳುತ್ತಾರೆ.
"ಗಂಗೆಯಂತಹ ದೊಡ್ಡ ನದಿಗಳಿಗೆ ನೀರುಣಿಸುವ ಸಣ್ಣ ತೊರೆಗಳನ್ನು ಪುನರುಜ್ಜೀವನಗೊಳಿಸದೆ ಅವುಗಳನ್ನು ಪುನರುಜ್ಜೀವನಗೊಳಿಸಲು ಸಾಧ್ಯವಿಲ್ಲ. ಸಮಗ್ರ ವಿಧಾನವು ವಿವರ ಕ್ರೋಢೀಕರಣ, ವಿಶ್ಲೇಷಣೆ ಮತ್ತು ನಿರ್ವಹಣೆಯನ್ನು ಒಳಗೊಂಡಿರುತ್ತದೆ; ಸುಸ್ಥಿರ ನೀರು ಹೊರತೆಗೆಯುವ ಮಿತಿಗಳನ್ನು ನಿಗದಿಪಡಿಸುವುದು; ಬೇಡಿಕೆಯನ್ನು ಕಡಿಮೆ ಮಾಡಲು, ನೀರು ಹೊರತೆಗೆಯುವಿಕೆಯನ್ನು ಕಡಿಮೆ ಮಾಡಲು ಮತ್ತು ಅಂತರ್ಜಲವನ್ನು ಮರುಪೂರಣ ಮಾಡಲು ಸಂಯೋಜಿತ ಕ್ರಮಗಳ ಗುಂಪು; ನೆಲ ಮತ್ತು ಮೇಲ್ಮೈ ನೀರಿನ ಸಮತೋಲಿತ ಬಳಕೆ."
"ನದಿಯ ಹೂಳೆತ್ತುವುದು ಮತ್ತು ಕಳೆಗಿಡಗಳನ್ನು (ಅಂತರಗಂಗೆ ಸಸ್ಯ) ತೆಗೆದುಹಾಕುವುದು ತಾತ್ಕಾಲಿಕ ಕ್ರಮಗಳಾಗಿವೆ, ಇದು ಸ್ವಲ್ಪ ಸಮಯದವರೆಗೆ ನೀರಿನ ಹರಿವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ" ಎಂದು ರಾಮ್ ಸ್ವರೂಪ್ ಸಿನ್ಹಾ ಹೇಳುತ್ತಾರೆ.
"ಅಂತರ್ಜಲ, ಮಳೆ ಮತ್ತು ನದಿಗಳ ನಡುವೆ ಆವರ್ತಕ ಸಂಬಂಧವಿತ್ತು, ಅದು ಛಿದ್ರಗೊಂಡಿದೆ" ಎಂದು ಅವರು ಹೇಳುತ್ತಾರೆ.


ಎಡಭಾಗ: ನದಿಯಲ್ಲಿ ಪಾಚಿ, ನೀರು ಮತ್ತು ತ್ಯಾಜ್ಯ ತುಂಬಿಕೊಂಡಿದೆ. ಬಲ: ಶಿವರಾಂ ಸಕ್ಸೇನಾ ಅವರು ಸಈ ನದಿಯಲ್ಲಿನ ಕಳೆ ಗಿಡವನ್ನು ಮುಟ್ಟುತ್ತಿರುವುದು
ಮಾನವಜನ್ಯ ಚಟುವಟಿಕೆಗಳು ಮತ್ತು ಮಾನವ ನಿಯಂತ್ರಣವನ್ನು ಮೀರಿದ ಕಾರಣಗಳ ಪರಿಣಾಮವು ಈ ಛಿದ್ರತೆಗೆ ಕಾರಣವಾಗಿವೆ.
"ಹಸಿರು ಕ್ರಾಂತಿಯು ಅಂತರ್ಜಲದ ಮೇಲಿನ ನಮ್ಮ ಅವಲಂಬನೆಯನ್ನು ಹೆಚ್ಚಿಸಿತು. ಮರಗಳು ಕಡಿಮೆಯಾದವು. ಮಳೆಯ ಮಾದರಿಗಳು ಬದಲಾದವು – ಮಳೆ ಮಾದರಿಗಳಲ್ಲಿ ಹೆಚ್ಚಿನವು ಹರಡುವ ಬದಲು ಕೆಲವೇ ದಿನಗಳ ನಡುವೆ ಕೇಂದ್ರೀಕೃತವಾದವು. ಇದರರ್ಥ ಹೆಚ್ಚಿನ ಮಳೆನೀರು ಹರಿದುಹೋಗುವುದು, ಏಕೆಂದರೆ ಅದಕ್ಕೆ ನೆಲಕ್ಕೆ ಇಳಿಯಲು ಸಮಯ ಸಿಗುವುದಿಲ್ಲ. ಭೂಮಿಯೊಳಗೆ ಅಂತರ್ಜಲ ವಿರಳವಾಗಿ ನಮ್ಮ ನದಿಗಳನ್ನು ಪೋಷಿಸಲು ಅಶಕ್ತವಾಗುತ್ತದೆ" ಎಂದು ಸಿನ್ಹಾ ಹೇಳುತ್ತಾರೆ.
ಆದರೂ, ಅಭಿವೃದ್ಧಿ ನೀತಿಗಳು ಅಂತರ್ಜಲವನ್ನು ಒಂದು ಅಂಶವಾಗಿ ವಿರಳವಾಗಿ ಪರಿಗಣಿಸುತ್ತವೆ. ಸಿನ್ಹಾ ಎರಡು ಉದಾಹರಣೆಗಳನ್ನು ಉಲ್ಲೇಖಿಸುತ್ತಾರೆ - ಒಂದು, ಪ್ರಸ್ತುತ ಸರ್ಕಾರದ ಅಡಿಯಲ್ಲಿ ರಾಜ್ಯದಲ್ಲಿ ಕೊಳವೆ ಬಾವಿಗಳ ಸಂಖ್ಯೆಯನ್ನು 10,000ದಿಂದ 30,000ಕ್ಕೆ ಹೆಚ್ಚಿಸಲಾಗಿದೆ. ಮತ್ತು ಇನ್ನೊಂದು, ಹರ್ ಘರ್ ಜಲ ಯೋಜನೆ, ಇದು ಪ್ರತಿ ಮನೆಗೂ ನೀರನ್ನು ಕೊಂಡೊಯ್ಯುವ ಗುರಿಯನ್ನು ಹೊಂದಿದೆ.
ನದಿಗಳ ನಕ್ಷೆ, ಅಂತರ್ಜಲ ಪರಿಸ್ಥಿತಿ ಮತ್ತು ಸ್ಥಿರ ನೀರು (ox bow lakes) ಸರೋವರಗಳ , ರೂಪವಿಜ್ಞಾನ (ಉಪಗ್ರಹ ನಕ್ಷೆಯ ಮೂಲಕ) ಸೇರಿದಂತೆ ಹಲವಾರು ಅಗತ್ಯ ಕ್ರಮಗಳನ್ನು ಸಿನ್ಹಾ ಪಟ್ಟಿ ಮಾಡುತ್ತಾರೆ.
ಆದರೂ, ಸರ್ಕಾರವು ಹೆಚ್ಚು ಪೂರ್ಣ ವಿಧಾನ ಆಳವಡಿಸಿಕೊಳ್ಳುವ ಬದಲು ಅಂಕಿಅಂಶಗಳ ಅಸ್ಪಷ್ಟತೆಯನ್ನ ಆಯ್ಕೆ ಮಾಡಿಕೊಂಡಿದೆ. ಉದಾಹರಣೆಗೆ, 2015ರ ಡಾರ್ಕ್ ಜೋನ್ (dark zones) ಲೆಕ್ಕಾಚಾರದಲ್ಲಿ (ಅಂತರ್ಜಲ ಮಟ್ಟವು ಅಪಾಯಕಾರಿ ಮಟ್ಟಕ್ಕೆ ಕುಸಿದಿದೆ), ಹೊರತೆಗೆಯಲಾದ ಅಂತರ್ಜಲದ ಅಳತೆಯನ್ನು ಲೆಕ್ಕ ಹಾಕದಿರಲು ಸರ್ಕಾರ ನಿರ್ಧರಿಸಿತು. ಅಂದಿನಿಂದ ಇದು ನೆಲದಿಂದ ಹೀರಲ್ಪಡುವ ನೀರಿನ ಅಂದಾಜುಗಳನ್ನು ಮಾತ್ರ ಅವಲಂಬಿಸಿದೆ.
ಆಜಾದ್ ನಗರದಲ್ಲಿ, ಅನಾರೋಗ್ಯದಿಂದ ಬಳಲುತ್ತಿರುವ ತ್ಯಾಗಿಯವರು ಇನ್ನು ಸಈ ಬಳಿಗೆ ಹೋಗಲು ಸಾಧ್ಯವಿಲ್ಲವೆಂದು ಸಂತೋಷದಲ್ಲಿದ್ದಾರೆ. "ಅದರ ಕುಳಿತು ಕೇಳುವುದು, ಅದನ್ನು ನೋಡುವುದು ನನ್ನಲ್ಲಿ ನೋವು ತರುತ್ತದೆ" ಎಂದು ಅವರು ಹೇಳುತ್ತಾರೆ.
ನದಿಯನ್ನು ವಂಚಿಸುವ [ಸೇತುವೆ ಮತ್ತು ಕಾಲುವೆ ಸೇರಿದಂತೆ] ಮಾನವ ಪ್ರಯತ್ನವು ಬಹುಶಃ ಆಕಸ್ಮಿಕವಾದುದು ಎಂದು ಅವಸ್ಥಿ ಹೇಳುತ್ತಾರೆ. “ಈಗ ನಮ್ಮೂರಿಗೆ ಸೇತುವೆಯಿದೆ. ಆದರೆ ಅದರಡಿಯ ಹೊಳೆಯಲ್ಲಿ ನೀರಿಲ್ಲ. ಇದಕ್ಕಿಂತ ದೊಡ್ಡ ದುರಂತ ಯಾವುದಿರಲು ಸಾಧ್ಯ?” ಎಂದು ಅವರು ಪ್ರಶ್ನಿಸುತ್ತಾರೆ.
ಅನುವಾದ: ಶಂಕರ. ಎನ್. ಕೆಂಚನೂರು