ಮೂರು ಬೆರಳುಗಳು, ಚೌಕಾಕಾರದ ಬಟ್ಟೆತುಂಡು, ಮೆತ್ತಗಿನ ಸ್ಪರ್ಶ. “ನಾನು ತುಂಬಾ ಜಾಗರೂಕತೆಯಿಂದ ಇರಬೇಕು.”
ವಿಜಯ ಅವರು ಆಂದ್ರ ಪ್ರದೇಶದ ಕರಾವಳಿಯ ಸ್ಥಳೀಯ ಸಿಹಿತಿಂಡಿ ಪೂತರೇಕುಲು ಬಗ್ಗೆ ಮಾತನಾಡುತ್ತಿದ್ದಾರೆ. ಇದು ಅಕ್ಕಿಯ ಹಿಟ್ಟು, ಬೆಲ್ಲ, ಡ್ರೈ ಪ್ರೂಟ್, ತುಪ್ಪದಿಂದ ಮಾಡಿದ ಸಿಹಿತಿಂಡಿಯಾಗಿದ್ದು, ಹಬ್ಬಹರಿದಿನಗಳಲ್ಲಿ ಚೆನ್ನಾಗಿ ಮಾರಾಟವಾಗುತ್ತದೆ. ಇದನ್ನು ತಯಾರಿಸುವ ಕೌಶಲ್ಯವನ್ನು ಹೊಂದಿರುವ ವಿಜಯ ಒಂದು ದಿನಕ್ಕೆ ಸುಮಾರು 200 ರೇಕುಗಳನ್ನು ತಯಾರಿಸುತ್ತಾರೆ ಮತ್ತು ಸ್ಥಳೀಯ ಸಿಹಿತಿಂಡಿಗಳ ಅಂಗಡಿಗಳಿಗೆ ಮಾರುತ್ತಾರೆ. “ಪೂತರೆಕುಲು ತಯಾರಿಸುವಾಗ ನಾನು ಏಕಾಗ್ರತೆಯನ್ನು ಕಾಯ್ದುಕೊಳ್ಳಬೇಕು. ಯಾರ ಜೊತೆಗೆ ಮಾತನಾಡಲು ಸಾಧ್ಯವಿಲ್ಲ,” ಎಂದು ಅವರು ಪರಿಗೆ ಹೇಳುತ್ತಾರೆ.
“ಯಾವ ಹಬ್ಬ ಹರಿದಿನವಿರಲಿ, ಯಾವುದೇ ವಿಶೇಷ ದಿನವಿರಲಿ, ನಮ್ಮ ಮನೆಯಲ್ಲಿ ಪೂತರೇಕುಲು ಇಲ್ಲದೆ ಏನೂ ನಡೆಯದು,” ಎಂದು ಜಿ ರಾಮಕೃಷ್ಣ ಹೇಳುತ್ತಾರೆ. ಅತ್ರೇಯಪುರಂನ ನಿವಾಸಿಯಾಗಿರುವ ಇವರು ಅಲ್ಲಿನ ಕೆಲ ಅಂಗಡಿಗಳಲ್ಲಿ ಪ್ಯಾಕಿಂಗ್ ಕೆಲಸ ಮಾಡುತ್ತಾರೆ ಹಾಗೂ ಬಾಕ್ಸ್‌ಗಳನ್ನು ತಯಾರಿಸುತ್ತಾರೆ. “ಇದೊಂದು ಸಪ್ರೈಸ್ ಸ್ವೀಟ್ ಆಗಿರುವುದರಿಂದ ಇದನ್ನು ಮಾಡುವುದೆಂದರೆ ತುಂಬಾ ಇಷ್ಟ. ಇದನ್ನು ಮೊದಲಬಾರಿಗೆ ನೋಡುವಾಗ ಪೇಪರ್‌ನಂತೆ ಕಾಣುತ್ತದೆ, ಆದರೆ ಇದು ತಿನ್ನುವ ಪೇಪರ್‌ಗಳು. ಆದರೆ ಇವನ್ನು ಬಾಯಲ್ಲಿಟ್ಟು ಕಚ್ಚುವಾಗ ಕರಗಿ ಹೋಗುತ್ತವೆ. ಜಗತ್ತಿನಲ್ಲಿ ಇಂತಹ ಬೇರೆ ತಿಂಡಿ ಇದೆ ಎಂದು ನಾನು ಭಾವಿಸುವುದಿಲ್ಲ,” ಎಂದು ಹೆಮ್ಮೆಯಿಂದ ಅವರು ಹೇಳುತ್ತಾರೆ.
ಆಂದ್ರ ಪ್ರದೇಶದ ಡಾ. ಬಿ ಆರ್ ಅಂಬೇಡ್ಕರ್ ಕೋನಸೀಮ ಜಿಲ್ಲೆಯ ಅಕ್ಕಿಯಿಂದ ತಯಾರಿಸಲ್ಪಡುವ ಇವು ಅತ್ಯಂತ ಸೂಕ್ಷ್ಮವಾದ ತೆಳುವಾದ ಸಿಹಿತಿಂಡಿ. “ಅಂಟಂಟಾದ ಈ ಅಕ್ಕಿಯನ್ನು ರೇಕು (ಹಾಳೆ) ತಯಾರಿಸಲು ಅಲ್ಲದೇ, ಬೇರೆ ಯಾವುದಕ್ಕೂ ಬಳಸುವುದಿಲ್ಲ,” ಎಂದು ಕಾಯೇಲಾ ವಿಜಯ ಕೋಟ ಸರಸ್ವತಿ ಹೇಳುತ್ತಾರೆ. ಇವರು ರಾಮಚಂದ್ರಂ ಮಂಡಲ್‌ನ ಅತ್ರೇಯಪುರಂ ಎಂಬ ಗ್ರಾಮದ ಸಿಹಿತಿಂಡಿ ತಯಾರಕರು. ಅತ್ರೇಯಪುರಂನ ಪೂತರೇಕುಲು 2023ರಲ್ಲಿ ಜಿಯಾಗ್ರಾಫಿಕಲ್ ಇಂಡಿಕೇಟರ್ (ಜಿಐ) ಟ್ಯಾಗನ್ನು ಪಡೆದಿದೆ. ಈ ಟ್ಯಾಗನ್ನು ಜೂನ್ 14, 2023 ರಂದು ವಿಶಾಖಪಟ್ಟಣಂನಲ್ಲಿ ಸರ್ ಆರ್ಥರ್ ಕಾಟನ್ ಅತ್ರೇಯಪುರಂ ಪೂತರೇಕುಲು ತಯಾರಕರ ಕಲ್ಯಾಣ ಸಂಘಕ್ಕೆ ನೀಡಲಾಯಿತು.
ತಿರುಪತಿ ಲಡ್ಡು ಹಾಗೂ ಬಂದರ್ ಲಡ್ಡುಗಳ ನಂತರ ರಾಜ್ಯದಲ್ಲಿ ಜಿಐ ಟ್ಯಾಗ್ ಸಿಕ್ಕಿದ ಮೂರನೇ ಖಾದ್ಯ ಪೂತರೇಕುಲು. ಆಂದ್ರ ಪ್ರದೇಶದಲ್ಲಿ ಕರಕುಶಲ ವಸ್ತುಗಳು, ಆಹಾರ ಖಾದ್ಯ, ಕೃಷಿ ಉತ್ಪನ್ನ ಸೇರಿದಂತೆ ಇತರ ಒಟ್ಟು 21 ಉತ್ಪನ್ನಗಳನ್ನು ಜಿಐ ಪಟ್ಟಿಗೆ ಸೇರಿಸಲಾಗಿದೆ. ಇವುಗಳಲ್ಲಿ ಪೂತರೇಕುಲು ಕೂಡ ಒಂದು. ಕಳೆದ ವರ್ಷ ಪೂತರೇಕುಲು ಜೊತೆಗೆ ಗೋವಾದ ಸಿಹಿತಿಂಡಿ ಬಿಬಿಂಕಾಗೆ ಕೂಡ ಜಿಐ ಟ್ಯಾಗ್ ಸಿಕ್ಕಿತು, ಈ ಹಿಂದೆ ಗಜಕ್‌ನ ಮೊರೇನಾ, ಮುಝಾಫರ್‌ನಗರದ ಗುರ್‌ಗೆ ಕೂಡಾ ಜಿಐ ಟ್ಯಾಗ್ ಸಿಕ್ಕಿತ್ತು.


ಎಡ: ಮನೆಯ ಮೂಲೆಯಲ್ಲಿ ಕೆಲಸ ಮಾಡುತ್ತಿರುವ ವಿಜಯಾ. ಇದನ್ನೇ ಅವರು ತಮ್ಮ ಕೆಲಸ ಮಾಡುವ ಸ್ಥಳ ಎಂದು ಕರೆಯುತ್ತಾರೆ. ಇಲ್ಲಿ ಬೋರಾಲಾಗಿ ಇಟ್ಟಿರುವ ಮಡಕೆ, ಅಕ್ಕಿಯ ಹಿಟ್ಟು, ಒಣಗಿದ ತೆಂಗಿನ ಗರಿಗಳು, ಹಳೇಯ ಉಪ್ಪಿನಕಾಯಿಯ ಜಾರನ್ನು ಇತರ ವಸ್ತುಗಳ ಜೊತೆಗೆ ಇಡಲಾಗಿದೆ. ಬಲ: ಜಯ ಬಿಯ್ಯಂ ಪೂತರೇಕುಲು ತಯಾರಿಸಲು ಬಳಸುವ ವಿಶೇಷ ಪ್ರಬೇಧದ ಅಕ್ಕಿ. ರೇಕುಲು ಎಂಬ ತೆಳುವಾದ ಹಾಳೆಗಳನ್ನು ತಯಾರಿಸಲು ಬೇಕಾದ ಅಕ್ಕಿಯ ಹಿಟ್ಟನ್ನು ಮಾಡುವ ಮೊದಲು ಈ ಅಕ್ಕಿಯನ್ನು ನೀರಿನಲ್ಲಿ 30-45 ನಿಮಿಷ ನೆನೆಹಾಕಲಾಗುತ್ತದೆ
ಅನುಭವಿ ಸಿಹಿತಿಂಡಿ ತಯಾರಕರಾದ ವಿಜಯ ಅವರು 2019ರಿಂದ ರೇಕುಗಳನ್ನು ತಯಾರಿಸುತ್ತಿದ್ದಾರೆ. ಈ ಕೆಲಸ ಮಾಡಲು ಏಕಾಗ್ರತೆ ಬೇಕು ಎಂದು ಅವರು ಯಾವತ್ತೂ ಹೇಳುತ್ತಾರೆ. “ಆದರೆ ಬೇರೆ ಸಿಹಿತಿಂಡಿಗಳನ್ನು ಸುಲಭವಾಗಿ ತಯಾರಿಸಲು ಸಾಧ್ಯವಿರುವುದರಿಂದ ನಾನು ಜನರೊಂದಿಗೆ ಮಾಡನಾಡುತ್ತಾ ಕೆಲಸ ಮಾಡಲು ಸಾಧ್ಯವಿದೆ,” ಎಂದು ತಮ್ಮ ಮನೆ ಬಳಕೆಗೆ ತಯಾರಿಸುವ ಸುನ್ನುಂದಾಲು, ಕೋವ ಹಾಗೂ ಮತ್ತಿತರ ಸಿಹಿತಿಂಡಿಗಳ ಬಗ್ಗೆ ಹೇಳುತ್ತಾರೆ. ಸುನ್ನುಂದಾಲು ಎಂದರೆ ಒಂದು ರೀತಿಯ ಲಡ್ಡು. ಇವನ್ನು ಹುರಿದು ಚೆನ್ನಾಗಿ ಪುಡಿ ಮಾಡಿದ ಉದ್ದಿನ ಬೇಳೆ, ಸಕ್ಕರೆ ಅಥವಾ ಬೆಲ್ಲ ಹಾಗೂ ತುಪ್ಪ ಬಳಸಿ ತಯಾರಿಸಲಾಗುತ್ತದೆ.
“ನನ್ನ ಕುಟುಂಬ ಮತ್ತು ಖುದ್ದು ನನಗೆ ಸಪೋರ್ಟ್ ಆಗಿ ನಿಲ್ಲಲು ಸ್ವಲ್ಪ ಹಣ ಸಂಪಾದಿಸಬೇಕೆಂದಿದ್ದೆ. ಆದಕ್ಕಾಗಿ ಬೇರೆ ಯಾವ ಕೆಲಸವೂ ಇರಲಿಲ್ಲ, ಆದಕ್ಕಾಗಿ ಈ ವೃತ್ತಿ ಶುರು ಮಾಡಿದೆ,” ಎಂದಯ ವಿಜಯಾ ತಾವು ರೇಕುಗಳನ್ನು ಸಿಹಿ ತಿಂಡಿಯ ಅಂಗಡಿಗಳಿಗೆ ಮಾರಲು ಆರಂಭಿಸಿದ ಬಗ್ಗೆ ಮಾತನಾಡುತ್ತಾ ಹೇಳುತ್ತಾರೆ. ಇವರು ಇದನ್ನು ಬಿಟ್ಟು ಬೇರೆ ಯಾವ ಸಿಹಿತಿಂಡಿಗಳನ್ನೂ ತಯಾರಿಸುವುದಿಲ್ಲ.
ತಿಂಗಳ ಆರಂಭದಲ್ಲಿ ಇವರು ಸ್ಥಳೀಯ ಮಾರುಕಟ್ಟೆಯಿಂದ 50 ಕೆಜಿ ಅಕ್ಕಿ ಖರೀದಿಸುತ್ತಾರೆ. ಪೂತರೇಕುಲನ್ನು ತಯಾರಿಸಲು ಜಯಾ ಬಿಯ್ಯಂ ಅಕ್ಕಿಯನ್ನೇ ಬಳಸಬೇಕು. “ಈ ಅಕ್ಕಿ ಬೇಯಿಸಿದಾಗ ತುಂಬಾ ಅಂಟಂಟಾಗುವುದರಿಂದ ರೇಕು ತಯಾರಿಸಲು ಮಾತ್ರ ಇದನ್ನು ಬಳಸಲಾಗುತ್ತದೆ,” ಎಂದು ವಿಜಯಾ ವಿವರಿಸುತ್ತಾರೆ.
ಓರ್ವ ಸಿಹಿತಿಂಡಿ ತಯಾರಕಿಯಾಗಿ ಅವರ ದಿನ ಮುಂಜಾನೆ ಏಳು ಗಂಟೆಗೆ ಆರಂಭವಾಗುತ್ತದೆ. ಅರ್ಧ ಗಂಟೆಯಾದರೂ ನೀರಿನಲ್ಲಿ ನೆನೆಹಾಕಿದ ಅರ್ಧ ಕೆಜಿ ಜಯಾ ಬಿಯ್ಯಂ ಅಕ್ಕಿಯನ್ನು ಕೈಗೆತ್ತಿಕೊಳ್ಳುವ ಮೂಲಕ ಈ ವಿಧಾನ ಅರಂಭವಾಗುತ್ತದೆ.
ಅವರ ಮಕ್ಕಳು ಶಾಲೆಗೆ ಹೋದ ನಂತರ, ವಿಜಯಾ ಈ ನೆನೆದ ಅಕ್ಕಿಯನ್ನು ನುಣ್ಣಗೆ ರುಬ್ಬಿ, ದಪ್ಪದ ಹಿಟ್ಟನ್ನು ತಯಾರಿಸುತ್ತಾರೆ. ಅದನ್ನೊಂದು ಪಾತ್ರೆಗೆ ಹಾಕಿ, ಮನೆಯ ಹೊರಗೆ ಇರುವ ತಮ್ಮ ಸಣ್ಣ ವರ್ಕ್‌ಶಾಪ್‌ನ ಮರದ ಸ್ಟೂಲ್‌ನ ಮೇಲೆ ಇಡುತ್ತಾರೆ.
ಕೊನೆಯಲ್ಲಿ, ಸುಮಾರು ಒಂಬತ್ತು ಗಂಟೆಗೆ, ತಮ್ಮ ವರ್ಕ್‌ಶಾಪ್‌ನ ಒಂದು ಮೂಲೆಯಲ್ಲಿ, ಕವಚಿ ಹಾಕಿದ ಮಡಕೆ ಬಳಸಿ ವಿಜಯಾ ಅವರು ತುಂಬಾ ತೆಳುವಾದ ರೇಕುಲು ತಯಾರಿಸುತ್ತಾರೆ. “ಈ ಮಡಕೆಯನ್ನು ಈ ಪ್ರದೇಶದಲ್ಲಿ ಮಾತ್ರ ಇಲ್ಲಿನ ಮಣ್ಣನ್ನೇ ಬಳಸಿ ತಯಾರಿಸುತ್ತಾರೆ. ಈ ಕೆಲಸಕ್ಕೆ ಬೇರೆ ಮಡಕೆಗಳನ್ನು ಬಳಸಲು ಸಾಧ್ಯವಿಲ್ಲ. ಕವಚಿ ಹಾಕಿರುವ ರೇಕುವಿಗೆ ಈ ಆಕಾರ ಸಿಗುವುದು ಈ ಮಡಕೆಯಿಂದ ಮಾತ್ರ,” ಎಂದು ಅವರು ವಿವರಿಸುತ್ತಾರೆ.


ಎಡ: ಪೂತರೇಕುಲು ತಯಾರಿಸಲು ಬಳಸುವ ಅಕ್ಕಿ ಹಿಟ್ಟು ಮತ್ತು ಬಟ್ಟೆಗಳು. ಬಲ: ಅಕ್ಕಿ ಹಿಟ್ಟಿನಲ್ಲಿ ಬಟ್ಟೆಯನ್ನು ಅದ್ದುವ ಮೂಲಕ ರೇಕು ತಯಾರಿಕೆ ಆರಂಭಿದ ವಿಜಯಾ


ಅನುಭವಿ ಸಿಹಿ ತಯಾರಕರಾದ ವಿಜಯಾ 2019 ರಿಂದ ರೇಕು ತಯಾರಿಸುತ್ತಿದ್ದಾರೆ ಮತ್ತು ಇದನ್ನು ಮಾಡಲು ಅವರು ತಮ್ಮ ಸಂಪೂರ್ಣ ಗಮನವನ್ನು ನೀಡಬೇಕು. ಬಟ್ಟೆಯನ್ನು ಅಕ್ಕಿ ಹಿಟ್ಟಿನಲ್ಲಿ ಅದ್ದಿ ತಲೆ ಕೆಳಗಾಗಿ ಹಾಕಿದ ಮಡಕೆಯ ಮೇಲೆ ಹಾಕಿದಾಗ ಒಂದು ತೆಳುವಾದ ಪದರ ತಯಾರಾಗುತ್ತದೆ (ಬಲ)
ಈ ಮಡಕೆಯನ್ನು ಒಣಗಿದ ತೆಂಗಿನ ಗರಿಗಳನ್ನು ಉರಿಸಿ ಬಿಸಿ ಮಾಡಲಾಗುತ್ತದೆ, “ತೆಂಗಿನ ಗರಿಗಳು (ಬೇರೆಗಿಂತ) ಚೆನ್ನಾಗಿ ಉರಿದು ತುಂಬಾ ಬಿಸಿ ಮಾಡುತ್ತವೆ.ಮಡಕೆ ಸರಿಯಾಗಿ ಬಿಸಿಯಾಗದೆ ರೇಕು ಮಾಡಲು ಸಾಧ್ಯವಿಲ್ಲ,” ಎಂದು ಅವರು ಹೇಳುತ್ತಾರೆ.
“ಈ ಮಡಕೆಗೆ ಸುಮಾರು 300- 400 ರುಪಾಯಿ ನಡುವೆ ಇರುತ್ತದೆ. ನಾನು ಪ್ರತೀ ಎರಡು ಅಥವಾ ಮೂರು ತಿಂಗಳಿಗೊಮ್ಮೆ ಮಡಕೆ ಬದಲಿಸುತ್ತೇನೆ. ಅದಕ್ಕಿಂತ ಹೆಚ್ಚು ಇದು ಬಾಳಿಕೆ ಬರುವುದಿಲ್ಲ,” ಎಂದು ಹೇಳುತ್ತಾರೆ. ವಿಜಯಾ ತೆಂಗಿನ ಗರಿಗಳನ್ನು ಸ್ಥಳೀಯ ಮಾರುಕಟ್ಟೆಯಿಂದ ಪ್ರತೀ ಎರಡು ವಾರಕ್ಕೊಮ್ಮೆ ಖರೀದಿಸುತ್ತಾರೆ. 5-6 ತೆಂಗಿನ ಗರಿಗಳನ್ನು ಒಂದಕ್ಕೆ 20-30 ರುಪಾಯಿ ಕೊಟ್ಟು ಖರೀದಿಸುತ್ತಾರೆ.
ತಲೆ ಕೆಳಗಾಗಿ ಹಾಕಿದ ಮಡಕೆ ಬಿಸಿಯಾಗುತ್ತಿದ್ದಂತೆ, ವಿಜಯಾ ಚೌಕಾಕಾರದ ಬಟ್ಟೆಯೊಂದನ್ನು ನೀರಿನಲ್ಲಿ ಅದ್ದುತ್ತಾರೆ. ಈ ಹತ್ತಿಯ ಬಟ್ಟೆಯನ್ನು (ಸೀರೆ ಇಲ್ಲವೇ ಇತರ ಬಟ್ಟೆಯ ತುಂಡು) ಈ ಕೆಲಸಕ್ಕಾಗಿಯೇ ತೊಳೆದು ಬಳಸುತ್ತಾರೆ. ಒಂದು ದೊಡ್ಡ ಪಾತ್ರೆಗೆ ಅಕ್ಕಿಯ ಹಿಟ್ಟನ್ನು ಹಾಕಿ ಅದಕ್ಕೆ ಈ ಬಟ್ಟೆಯ ತುಂಡನ್ನು ಮುಳುಗಿಸುತ್ತಾರೆ.
ನಂತರ ವಿಜಯಾ ಮೆಲ್ಲಗೆ ಈ ಬಟ್ಟೆಯನ್ನು ಹೊರಗೆ ತೆಗೆಯುತ್ತಾರೆ. ಈ ಬಟ್ಟೆಯ ಮೇಲೆ ಅಂಟಿರುವ ಅಕ್ಕಿಯ ಹಿಟ್ಟಿನ ತೆಳುವಾದ ಪದರವನ್ನು ಕವಚಿ ಹಾಕಿದ ಮಡಕೆಯ ಮೇಲೆ ಹರಡುತ್ತಾರೆ. ಬೂದು-ಬಿಳಿ ಬಣ್ಣದ ತೆಳುವಾದ ಪದರವೊಂದು ಹೊಗೆ ಸೂಸುತ್ತಾ ಮಡಕೆಯ ಮೇಲೆ ಉಂಟಾಗುತ್ತದೆ. ಇದು ಚೆನ್ನಾಗಿ ಬೇಯುವ ವರೆಗೆ ಮಡಕೆಯ ಮೇಲೆ ಕೆಲವು ಸೆಕೆಂಡುಗಳ ಕಾಲ ಇಡಲಾಗುತ್ತದೆ.
ಮುಂದಿನ ವಿಧಾನವೇ ಅತ್ಯಂತ ನಾಚೂಕಿನಿಂದ ಅದನ್ನು ಸ್ಪರ್ಶಿಸುವುದು. ತಮ್ಮ ಮೂರು ಬೆರಳುಗಳನ್ನು ಬಳಸಿ ಮಡಕೆಯ ಮೇಲಿನಿಂದ ಆ ರೇಕುವನ್ನು ತೆಗೆಯುತ್ತಾರೆ. “ಇದನ್ನು ತೆಗೆಯುವುದು ತುಂಬಾ ಕಷ್ಟದ ಕೆಲಸ. ಇದು ಮುರಿದು ಹೋದರೆ, ಹಾಳಾಗಿ ಹೋದಹಾಗೆ. ಹಾಗಾಗಿ ನಾವು ತುಂಬಾ ಜಾಗೃತೆಯಿಂದ ಇರಬೇಕು.” ಎನ್ನುತ್ತಾ ಜಾಗೃತೆಯಿಂದ ಅದನ್ನು ತೆಗೆದು ಪಕ್ಕ ಇರುವ ಪಾತ್ರೆಯ ಮೇಲೆ ಇಡುತ್ತಾರೆ. ಒಂದು ಗಂಟೆಯಲ್ಲಿ ಸುಮಾರು 90-100 ರೇಕುಗಳನ್ನು ತಯಾರಿಸುತ್ತಾರೆ, ಅಂದರೆ ಎರಡು ಮೂರು ಗಂಟೆಯಲ್ಲಿ ಸುಮಾರು 150-200. ಹಬ್ಬಗಳ ಸಂದರ್ಭದಲ್ಲಿ 500 ಮಾಡುವ ಆರ್ಡರ್ ಬರುತ್ತದೆ. ಆಗ ಬೇಡಿಕೆಗೆ ತಕ್ಕಂತೆ ಅಕ್ಕಿ ಹಿಟ್ಟು ತಯಾರಿಸುತ್ತಾರೆ.


ಎಡ: ಅಕ್ಕಿಯ ಈ ತೆಳುವಾದ ಪದರ ಸರಿಯಾಗಿ ಬಂದಿದೆಯೇ ಎಂಬುದನ್ನು ನೋಡಲು ವಿಜಯಾ ತಮ್ಮ ಬೆರಳುಗಳಿಂದ ಮೆಲ್ಲಗೆ ಒತ್ತುತ್ತಾರೆ. ಬಲ: ಕವಚಿ ಹಾಕಿದ ಮಡಕೆಯಿಂದ ಈ ತೆಳು ಪದರವನ್ನು ತೆಗೆಯಲು ವಿಜಯಾ ತಮ್ಮ ಕೆಲವು ಬೆರಳುಗಳನ್ನು ಮಾತ್ರ ಬಳಸುತ್ತಾರೆ


ಅತ್ರೇಯಪುರಂನ ಕೆಕೆ ನೇತಿ ಪೂತರೇಕುಲು ಅಂಗಡಿಯಲ್ಲಿ ಕೆಲಸ ಮಾಡುವ ಶ್ಯಾಮಲಾ ಮತ್ತು ಸತ್ಯ
ಅತ್ರೇಯಪುರಂನ ಅನೇಕ ಮಹಿಳೆಯರು ರೇಕುಲು ತಯಾರಿಸುತ್ತಾರೆ, ಅನೇಕರು ಮನೆಯಲ್ಲಿ ಮಾಡಿದರೆ, ಕೆಲವರು ಅಂಗಡಿಗಳಲ್ಲಿ.
54 ವರ್ಷ ಪ್ರಾಯದ ವಿ ಶ್ಯಾಮಲಾ ಕೆಕೆ ನೇತಿ ಪೂತರೇಕುಲು ಎಂಬ ಅತ್ರೇಯಪುರಂ ಬಸ್ ಸ್ಟಾಪ್ ಬಳಿ ಇರುವ ಅಂಗಡಿಯಲ್ಲಿ ಕೆಲಸ ಮಾಡುತ್ತಾರೆ. ಇವರು ಅಂಗಡಿಯಿಂದ ಸುಮಾರು ನಾಲ್ಕು ಕಿಲೋ ಮೀಟರ್ ದೂರದಲ್ಲಿ ವಾಸಿಸುತ್ತಾರೆ ಮತ್ತು ಕಳೆದ 25-30 ವರ್ಷಗಳಿಂದ ಈ ಸಿಹಿ ತಿಂಡಿಯನ್ನು ತಯಾರಿಸುವುದರಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಶ್ಯಾಮಲಾ ಅವರು ವಿಜಯಾ ಅವರಂತೆ ಮನೆಯಲ್ಲಿಯೇ ರೇಕು ತಯಾರಿಸುವ ಮೂಲಕ ತಮ್ಮ ವೃತ್ತಿ ಬದುಕನ್ನು ಆರಂಭಿಸಿದರು. “ನಾನು ಒಂದು ದಿನಕ್ಕೆ 100 ಹಾಳೆಗಳನ್ನು ತಯಾರಿಸುತ್ತಿದ್ದೆ. ಇದಕ್ಕೆ 25-30 ರುಪಾಯಿ ಸಿಗುತ್ತಿತ್ತು,” ಎಂದು ತಮ್ಮ ಆರಂಭಿಕ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ. ಇವರು ಪೂತರೇಕುಲು ಮಾಡುವ ಕೊನೆಯ ಹಂತ, ಅಂದರೆ ರೇಕುವನ್ನು ಸಕ್ಕರೆ, ಬೆಲ್ಲ, ಒಣ ಹಣ್ಣುಗಳು, ತುಪ್ಪ ಹಾಗೂ ಇತರ ವಸ್ತುಗಳನ್ನು ತುಂಬಿಸಿ ಮಡಚುವ ಕೆಲಸ ಮಾಡುತ್ತಾರೆ. ಅವರ ಮೊಣಕಾಲು ನೋಯುತ್ತಿರುವುದರಿಂದ ಕೆಲಸ ಮಾಡುವ ಸ್ಥಳಕ್ಕೆ ಹೋಗುವುದು ಕಷ್ಟವಾಗುತ್ತಿದೆ. “ನನ್ನ ಮೊಣಕಾಲುಗಳು ನೋಯುತ್ತವೆ,” ಎನ್ನುವ ಇವರನ್ನು ಇವರ ಮಗ ಪ್ರತೀ ದಿನ ಅಂಗಡಿಗೆ ಬಿಡುತ್ತಾರೆ.
ಅಂಗಡಿಗೆ ತಲುಪಿದಂತೆ, ಕೆಕೆ ಪೂತರೇಕುಲು ಅಂಗಡಿಯ ಹಿಂದಿರುವ ಕೋಣೆಯಲ್ಲಿ ಕುಳಿತುಕೊಳ್ಳುತ್ತಾರೆ. ಅಲ್ಲಿರುವ ದೊಡ್ಡ ಮೆಟಲ್ ಕುರ್ಚಿಯನ್ನು ತೆಗೆದುಕೊಂಡು, ಸೀರೆಯನ್ನು ಸರಿಪಡಿಸುತ್ತಾ ಬಿಸಿಲು ಬೀಳದ ಕಡೆ ಕುಳಿತುಕೊಳ್ಳುತ್ತಾರೆ. ರೋಡಿನ ಕಡೆಗೆ ಮುಖಮಾಡಿ ಕುಳಿತುಕೊಳ್ಳುವ ಇವರು, ಪೂತರೇಕುಲು ಕಟ್ಟುವುದನ್ನು ದಾರಿಯಲ್ಲಿ ಹೋಗುವ ಗ್ರಾಹಕರು ನೋಡಬಹುದು.
ಶ್ಯಾಮಲಾ ಜಾಗರೂಕತೆಯಿಂದ ಒಂದು ರೇಕುವನ್ನು ಕೈಗೆತ್ತಿಕೊಂಡು, ಅದಕ್ಕೆ ತುಪ್ಪ ಹಚ್ಚುತ್ತಾರೆ. ಅದರ ಮೇಲೆ ಬೆಲ್ಲದ ಪುಡಿ ಹರಡುತ್ತಾರೆ. “ಪ್ಲೈನ್ ಪೂತರೇಕುಲುಗೆ ಇಷ್ಟು ಮಾತ್ರ ಹಾಕುತ್ತೇವೆ,” ಎನ್ನುತ್ತಾ ಉಳಿದ ಅರ್ಧ ರೇಕುವನ್ನು ಅದರ ಮೇಲೆ ಇಡುತ್ತಾರೆ. ನಂತರ ಅದನ್ನು ಒಳಗಿರುವ ಯಾವುದೂ ಹೊರಗೆ ಬೀಳದಂತೆ ಎಚ್ಚರಿಕೆಯಿಂದ ಮಡಚುತ್ತಾರೆ. ಇದನ್ನು ಮಾಡಲು ಒಂದು ರೇಕುವಿಗೆ ಒಂದು ನಿಮಿಷಕ್ಕಿಂತ ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತಾರೆ. ಅವುಗಳನ್ನು ಸಾಂಪ್ರದಾಯಿಕವಾಗಿ ಆಯತಾಕಾರಕ್ಕೆ ಮಡಚಲಾಗುತ್ತದೆ, ಆದರೆ ಸಮೋಸದಂತೆ ತ್ರಿಕೋನಾಕಾರಕ್ಕೂ ಮಡಚಲಾಗುತ್ತದೆ.
ಸಮೋಸದ ಆಕಾರಕ್ಕೆ ಮಡಚಲಾದ ಪೂತರೇಕುಲು ಒಂದಕ್ಕೆ ಶ್ಯಾಮಲಾ ಅವರಿಗೆ ಮೂರು ರುಪಾಯಿ ಹೆಚ್ಚಿಗೆ ಕೊಡಲಾಗುತ್ತದೆ. “ಸಮೋಸದ ಆಕಾರಕ್ಕೆ ಮಡಚುವುದು ನಂಗೆ ಕಷ್ಟದ ಕೆಲಸ. ರೇಕು ಮುರಿಯುವ ಸಾಧ್ಯತೆ ಇರುವುದರಿಂದ ಎಚ್ಚರಿಕೆಯಿಂದ ಇರಬೇಕು,” ಎಂದು ಅವರು ಹೇಳುತ್ತಾರೆ.


ಶ್ಯಾಮಲಾ ಅಕ್ಕಿಯ ಹಾಳೆಯನ್ನು ಒಣ ಹಣ್ಣುಗಳು, ಬೆಲ್ಲ ಹಾಗೂ ಇತರ ವಸ್ತುಗಳನ್ನು ಇಟ್ಟು ಮಡಚಿ ಪೂತರೇಕುಲು ತಯಾರಿಸುತ್ತಾರೆ. ಅವರು ಮೆಲ್ಲಗೆ ಈ ಹಾಳೆಯನ್ನು ಮಡಚಿ, ಕೆಲ ಹನಿಗಳಷ್ಟು ಸಕ್ಕರೆಯ ಪಾಕವನ್ನು ಹಚ್ಚುತ್ತಾರೆ, ನಂತರ ಬೇಕಾದಷ್ಟು ತುಪ್ಪವನ್ನು ಸವರುತ್ತಾರೆ. ಇದಾದ ನಂತರ ಒಣ ಹಣ್ಣುಗಳನ್ನು ಸೇರಿಸುತ್ತಾರೆ


ಶ್ಯಾಮಲಾ (ಎಡ), 'ರೇಕು ಮುರಿಯುವ ಸಾಧ್ಯತೆ ಇರುವುದರಿಂದ ಎಚ್ಚರಿಕೆಯಿಂದ ಇರಬೇಕು,' ಎಂದು ಹೇಳುತ್ತಾರೆ. ಪ್ಯಾಕ್ ಮಾಡಿದ ಪೂತರೇಕುಲು ಮಾರಾಟಕ್ಕೆ ಸಿದ್ದವಾಗುತ್ತವೆ
“ನನ್ನ ಪ್ರಕಾರ ಸಕ್ಕರೆ ಅಥವಾ ಬೆಲ್ಲದಿಂದ ಮಾಡಿದ ಪ್ಲೈನ್ ನಿಜವಾದ ಪೂತರೇಕುಲು. ಇದನ್ನು ಮಾಡುವ ವಿಧಾನ ಈ ಗ್ರಾಮದಲ್ಲಿ ತಲೆಮಾರಿನಿಂದ ತಲೆಮಾರಿಗೆ ಬಂದಿದೆ,” ಎನ್ನುವ ಶ್ಯಾಮಲಾ ಒಣ ಹಣ್ಣುಗಳನ್ನು ಸೇರಿಸುವ ಕ್ರಮವನ್ನು ಹೊಸ ಪದ್ಧತಿ ಎಂದು ಹೇಳುತ್ತಾರೆ.
ಶ್ಯಾಮಲಾ ಅಂಗಡಿಯ ಮಾಲೀಕರಾದ ಕಸನಿ ನಾಗಸತ್ಯಾವತಿ (36) ಅವರೊಂದಿಗೆ ಆದಿತ್ಯವಾರ ಹೊರತು ಪಡಿಸಿ ಇಡೀ ವಾರ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಕೆಲಸ ಮಾಡುತ್ತಾರೆ. ಅವರ ದಿನದ ಸಂಬಳ 400 ರುಪಾಯಿ. ಕಳೆದ ಮೂರು ವರ್ಷಗಳಿಂದ ಅಥವಾ ಪೂತರೇಕುಗೆ ಜಿಐ ಟ್ಯಾಗ್ ಸಿಕ್ಕಿದ ನಂತರವೂ ಈ ಪಗಾರ ಬದಲಾಗಿಲ್ಲ.
ಆತ್ರೇಯಪುರಂನ ಪೂತರೆಕುಗೆ ಜಿಐ ಟ್ಯಾಗ್ ಸಿಕ್ಕಿದ್ದು ವಿಜಯಾ ಮತ್ತು ಶ್ಯಾಮಲಾ ಅವರಂತಹ ಕಾರ್ಮಿಕರ ಬದುಕಿನ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಜಿಐ ಟ್ಯಾಗ್ ನೀಡಿದ ಮೇಲೆ ಅವರ ದಿನದ ಸಂಬಳವೂ ಹೆಚ್ಚಾಗಿಲ್ಲ, ಆದರೆ ಅಂಗಡಿ ಮಾಲೀಕರು ಮತ್ತು ಇತರ ದೊಡ್ಡ ದೊಡ್ಡ ಮಾರಾಟಗಾರರು ಮಾತ್ರ ಒಳ್ಳೆಯ ಲಾಭವನ್ನು ಗಳಿಸುತ್ತಿದ್ದಾರೆ ಎಂದು ಅವರು ಹೇಳುತ್ತಾರೆ.
ತೆಲುಗು ರಾಜ್ಯಗಳಾದ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಪೂತರೇಕು ಪ್ರಸಿದ್ಧ ಖಾದ್ಯವಾಗಿದೆ ಎಂದು ಸತ್ಯಾ ಹೇಳುತ್ತಾರೆ. "ಆದರೆ ಈಗೀಗ ಹೆಚ್ಚಿನ ಜನರು ಅದರ ಬಗ್ಗೆ ತಿಳಿಯುತ್ತಿದ್ದಾರೆ. ಈ ಹಿಂದೆ ಬೇರೆ ರಾಜ್ಯಗಳಿಂದ ಬಂದವರಿಗೆ ನಾವು ಪೂತರೇಕು ಎಂದರೇನು ಎಂದು ವಿವರಿಸಬೇಕಿತ್ತು. ಈಗ, ಇದಕ್ಕೆ ಯಾವುದೇ ಪರಿಚಯದ ಅಗತ್ಯವಿಲ್ಲ,” ಎಂದು ಅವರು ಹೇಳುತ್ತಾರೆ.
ಸತ್ಯಾ ಅವರು ಸರ್ ಆರ್ಥರ್ ಕಾಟನ್ ಆತ್ರೇಯಪುರಂ ತಯಾರಕರ ಕಲ್ಯಾಣ ಸಂಘದ ಸದಸ್ಯರಲ್ಲಿ ಒಬ್ಬರು. ಈ ಸಂಘ ಕಳೆದ 10 ವರ್ಷಗಳಿಂದ ಪೂತರೇಕುಗೆ ಜಿಐ ಟ್ಯಾಗ್ ಸಿಗಲು ಕೆಲಸ ಮಾಡಿತ್ತು. ಜೂನ್ 2023 ರಲ್ಲಿ ಟ್ಯಾಗ್ ಸಿಕ್ಕಿದಾಗ, "ಇದು ಇಡೀ ಗ್ರಾಮವೇ ಹೆಮ್ಮೆ ಪಡುವ ಕ್ಷಣವಾಗಿತ್ತು," ಎಂದು ಅವರು ಹೇಳುತ್ತಾರೆ.


ಎಡ: ತಲೆಕೆಳಗಾಗಿ ಹಾಕಿದ ಮಡಕೆಯ ಮೇಲೆ ಮೂಡಿರುವ ರೇಕು. ಬಲ: ಸತ್ಯಾ 2018 ರಲ್ಲಿ ತಮ್ಮ ಉದ್ದಿಮೆಯನ್ನು ಪ್ರಾರಂಭಿಸಿದರು


ಆಂದ್ರ ಪ್ರದೇಶದ ಡಾ. ಬಿ.ಆರ್ ಅಂಬೇಡ್ಕರ್ ಕೋನಸೀಮಾ ಜಿಲ್ಲೆಯಲ್ಲಿ ಸಿಗುವ ಈ ಅಕ್ಕಿಯನ್ನು ಬಳಸಿ ತೆಳುವಾದ ಸಿಹಿತಿಂಡಿಯನ್ನು ತಯಾರಿಸಲಾಗುತ್ತದೆ. 'ನನ್ನ ಮನೆಯಲ್ಲಿ ಯಾವುದೇ ಹಬ್ಬ, ಆಚರಣೆ, ಯಾವುದೇ ವಿಶೇಷ ದಿನ ಪೂತರೇಕುಲು ಇಲ್ಲದೆ ಮುಗಿಯುವುದಿಲ್ಲ,' ಎನ್ನುತ್ತಾರೆ ಆತ್ರೇಯಪುರಂ ನಿವಾಸಿ ಜಿ.ರಾಮಕೃಷ್ಣ
ತಮ್ಮ ಅಂಗಡಿ ಸೇರಿದಂತೆ ಎಲ್ಲಾ ಅಂಗಡಿಗಳಲ್ಲಿ ಆರ್ಡರ್ ಬರುವುದು ಹೆಚ್ಚಾಗಿದೆ ಎಂದು ಸತ್ಯಾ ಹೇಳುತ್ತಾರೆ. "ನಮ್ಮ ಹೆಚ್ಚಿನ ಆರ್ಡರ್‌ಗಳು 10 ಬಾಕ್ಸ್‌ಗಳಿಂದ 100 ವರೆಗೆ ದೊಡ್ಡ ಪ್ರಮಾಣದಲ್ಲಿ ಇರುತ್ತವೆ," ಎಂದು ಅವರು ಹೇಳುತ್ತಾರೆ. ಪ್ರತಿ ಬಾಕ್ಸ್‌ನಲ್ಲಿ 10 ಪೂತರೇಕುಲು ಇರುತ್ತವೆ.
"ದೆಹಲಿ, ಮುಂಬೈ ಮತ್ತು ಇತರ ಹಲವು ಕಡೆಗಳಿಂದ ಜನರು ಆರ್ಡರ್ ಮಾಡುತ್ತಾರೆ," ಎಂದು ಅವರು ಹೇಳುತ್ತಾರೆ. “ಗ್ರಾಮದಲ್ಲಿ ನಾವು ಒಂದು ಪೂತರೇಕುಗೆ 10-12 ರುಪಾಯಿಗೆ ಮಾರಿದರೆ, ಅವರು [ಹೊರಗಿನ ದೊಡ್ಡ ಅಂಗಡಿಗಳು] 30 ರುಪಾಯಿಗಿಂತ ಹೆಚ್ಚು ರೇಟಿಗೆ ಮಾರುತ್ತಾರೆ,” ಎಂದು ಸತ್ಯಾ ವಿವರಿಸುತ್ತಾರೆ.
"ಜಿಐ ಟ್ಯಾಗ್ ನೀಡಿದರೂ ಇದರ ಬೆಲೆ ಹೆಚ್ಚು ಬದಲಾಗಿಲ್ಲ," ಎಂದು ಸತ್ಯಾ ವಿವರಿಸುತ್ತಾರೆ. “ಹತ್ತು ವರ್ಷಗಳ ಹಿಂದೆ ಒಂದು ಪೂತರೇಕುಗೆ 7 ರುಪಾಯಿ, ಅದಕ್ಕಿಂತ ಹೆಚ್ಚು ಇತ್ತು,” ಅವರು ಹೇಳುತ್ತಾರೆ.
“ಕಳೆದ ವಾರ ದುಬೈನಿಂದ ಹುಡುಗಿಯೊಬ್ಬಳು ನನ್ನ ಅಂಗಡಿಗೆ ಬಂದಿದ್ದಳು. ನಾನು ಅವಳಿಗೆ ಪೂತರೆಕುಲು ಹೇಗೆ ಮಾಡುವುದೆಂದು ತೋರಿಸಿದೆ. ಅವಳಿಗೆ ಅದು ಇಷ್ಟವಾಯ್ತು. ಅವಳಿಗೆ ತನ್ನ ಬಾಯಿಯಲ್ಲಿ ಸಿಹಿ ಕರಗಿ ಹೋಗಿದ್ದನ್ನು ನಂಬುವುದಕ್ಕೆ ಸಾಧ್ಯವಾಗಲಿಲ್ಲ. ಅವಳು ಇದನ್ನು ತಯಾರಿಸುವುದು ಒಂದು ಕಲೆ ಎಂದಳು. ನಿಜ ಹೇಳಬೇಕೆಂದರೆ, ನಾನು ಯಾವತ್ತೂ ಹಾಗೆ ಯೋಚಿಸಿರಲಿಲ್ಲ. ಆದರೆ ಅದು ನಿಜ - ರೇಕು ತಯಾರಿಸುವ ಮತ್ತು ಅವುಗಳನ್ನು ವರ್ಷಪೂರ್ತಿ ಪರ್ಫೆಕ್ಟ್ ಆಗಿ ಮಡುಚುವ ನಮ್ಮನ್ನು ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ,” ಎಂದು ಅವರು ಹೇಳುತ್ತಾರೆ.
ಈ ವರದಿಯನ್ನು ರಂಗ್ ದೇ ಅನುದಾನದಿಂದ ತಯಾರಿಸಲಾಗಿದೆ.
ಅನುವಾದ: ಚರಣ್ ಐವರ್ನಾಡು