ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಬೀಸುಕಲ್ಲಿನಲ್ಲಿ ಕೆಲಸ ಮಾಡುವ ಮಹಿಳೆಯರು ಹಾಡುವ ಈ ಭಕ್ತಿಗೀತೆಗಳ ಕೇಂದ್ರಬಿಂದುವೆಂದರೆ ಅವರು ಹೆಚ್ಚು ಪ್ರೀತಿಸುವ ಕುರಿಪಾಲಕ
ಕೊಲ್ಹಾಪುರದ ಮೆತಗೆ ಗ್ರಾಮದಲ್ಲಿ ಎರಡು ದಶಕಗಳ ಹಿಂದೆ ಮೂಲ ಗ್ರೈಂಡ್ ಮಿಲ್ ಸಾಂಗ್ಸ್ ಪ್ರಾಜೆಕ್ಟ್ (ಜಿಎಸ್ಪಿ) ತಂಡಕ್ಕಾಗಿ ಹಾಡಿದ ಮಹಿಳೆಯರನ್ನು ಹುಡುಕಲು 19 ಹೆಸರುಗಳ ಪಟ್ಟಿಯೊಂದಿಗೆ ಪರಿ ತಂಡ ತೆರಳಿತು. ಕೈಯಲ್ಲಿ ಕ್ಯಾಮೆರಾಗಳನ್ನು ಹೊಂದಿದ್ದ ತಂಡದ ಉಪಸ್ಥಿತಿ ಇಲ್ಲಿನ ಯುವಕರು ಮತ್ತು ಹಿರಿಯರಲ್ಲಿ ಆಸಕ್ತಿಯನ್ನು ಹುಟ್ಟಿಸಿತು.
ಮನೆಯ ಮೆಟ್ಟಿಲಿನ ಮೇಲೆ ಕುಳಿತಿದ್ದ ಮಹಿಳೆಯೊಬ್ಬರ ಬಳಿ ಪುಣೆಯಿಂದ ಬಂದಿದ್ದ ತಂಡದೆದುರು ಹಾಡಿದವರು ನಿಮಗೆ ಗೊತ್ತೇ ಎಂದು ಕೇಳಿದೆವು. “ಹೌದುʼ ಎಂದ ಆಕೆ, “ನಾವು ಜಾತ್ಯವಾರ್ಚ್ಯ ಓವ್ಯಾ [ಬೀಸುಕಲ್ಲಿನ ಪದ] ಹಾಡಿದ್ದೆವು. ಅಂದು ಹಾಡಿದವರಲ್ಲಿ ನಾನೂ ಒಬ್ಬಳು” ಎಂದರು.
ನಾವು ಪಟ್ಟಮಾಡಿಕೊಂಡಿದ್ದ ಗಾಯಕರಲ್ಲಿ ಒಬ್ಬರಾದ ಸೋನಾ ಭರ್ಮಲ್ ಸಿಕ್ಕಿದ್ದು ನಮ್ಮಲ್ಲಿ ರೋಮಾಂಚನ ಉಂಟುಮಾಡಿತ್ತು. 60 ವರ್ಷದ ಅವರು ಮೆತಗೆಯಲ್ಲಿ ಅಂದು ಹಾಡಿದ ಗಾಯಕರಲ್ಲಿ ಈಗ ಉಳಿದಿರುವ ಇನ್ನೊಬ್ಬರೆಂದರೆ ಲಕ್ಷ್ಮಿ ದವಾರಿ ಎಂದು ಹೇಳಿದರು.


ಎಡ: ಗಾಯಕಿ ಸೋನಾ ಪಾಂಡುರಂಗ ಭರ್ಮಾಲ್ (60). ಬಲ: ಗಾಯಕಿ ಲಕ್ಷ್ಮಿ ಶಾಮರಾವ್ ದವಾರಿ


ಎಡ: ಗಾಯಕಿ ಸುನೀತಾ ಶಂಕರ್ ಜಾಧವ್. ಬಲ: ಗಾಯಕ ಬಯಾನಾ ಕಾಂಬ್ಳೆ, ಅವರು ಎರಡು ದಶಕಗಳ ಹಿಂದೆ ಮೂಲ ಜಿಎಸ್ಪಿ ತಂಡಕ್ಕಾಗಿ ಹಾಡಿದ ಕೆಲವು ವರ್ಷಗಳ ನಂತರ ನಿಧನರಾದರು
ಅದು 2018, ಗಾಯಕರಾದ ಬಯಾನಾ ಕಾಂಬ್ಳೆ ಅವರಂತಹ ಕೆಲವರು ಜಿಎಸ್ಪಿಗಾಗಿ ಹಾಡಿದ ನಂತರದ ವರ್ಷಗಳಲ್ಲಿ ನಿಧನರಾದರು. "ನನ್ನ ತಾಯಿ ಮತ್ತು ಅವರ ಸ್ನೇಹಿತೆ ಸಖೂಬಾಯಿ ಕಾಂಬ್ಳೆ ಪ್ರಸಿದ್ಧ ಗಾಯಕರಾಗಿದ್ದರು" ಎಂದು ಬಯಾನಾ ಅವರ ಮಗ ಅಶೋಕ್ ಕಾಂಬ್ಳೆ ನಮಗೆ ಹೇಳಿದರು. "ಅವರು ಕಬ್ಬಿನ ಹೊಲಗಳಲ್ಲಿ ಕೆಲಸ ಮಾಡುವಾಗ ಒಟ್ಟಿಗೆ ಹಾಡುತ್ತಿದ್ದರು."
ಕಾಗಲ್ ತಾಲ್ಲೂಕಿನ ಈ ಗ್ರಾಮವನ್ನು ಜನಪ್ರಿಯವಾಗಿ ಬಾಳುಮಾಮಾಚೆ ಮೆತಗೆ - ಬಾಳು ಮಾಮನ ಮೆತಗೆ ಎಂದು ಕರೆಯಲಾಗುತ್ತದೆ. ಈ ಬಿರುದು ದಶಕಗಳ ಹಿಂದಿನ ಕುರುಬ ಬಾಳುಮಾಮನಿಗೆ ಸೇರಿದ್ದು, ಇಂದಿಗೂ ಅವರು ಸ್ಥಳೀಯರಿಂದ ಪೂಜಿಸಲ್ಪಡುತ್ತಾರೆ ಮತ್ತು ಅವರ ಹೆಸರಿನಲ್ಲಿ ದೇವಾಲಯವನ್ನು ಸಹ ಕಟ್ಟಲಾಗಿದೆ. ಈ ಕಲ್ಲಿನ ಕಟ್ಟಡವು ಟಗರುಗಳ ಎರಡು ಶಿಲ್ಪಗಳಿಂದ ಸುತ್ತುವರೆದಿದೆ. ಬಾಳುಮಾಮಾ ಅವರ ಪರಂಪರೆ ಈಗಲೂ ಉಳಿದಿದ್ದು, ಅದು ಇಂದಿನ ಯುವಜನರನ್ನೂ ಸೆಳೆಯುತ್ತಿದೆ.
ಬಿತ್ತನೆಗೂ ಮೊದಲು, ಮೆತಗೆಯ ರೈತರು ಬಾಳುಮಾಮಾ ತನ್ನ ಕುರಿಗಳನ್ನು ಮೇಯಿಸಲು ತಮ್ಮ ಜಮೀನಿಗೆ ತರುವವರೆಗೆ ಕಾಯುತ್ತಿದ್ದರು ಎಂದು ಗ್ರಾಮದ ಮಹಿಳೆಯರು ನಮಗೆ ತಿಳಿಸಿದರು. ಕುರಿಗಳ ಸಗಣಿ ಸಾವಯವ ಗೊಬ್ಬರವಾಗಿ ಕೆಲಸ ಮಾಡಿ ಉತ್ತಮ ಫಸಲನ್ನು ನೀಡುತ್ತವೆಯಾದರೂ, ಬಾಳುಮಾಮ ತನ್ನ ಹಿಂಡನ್ನು ಎಲ್ಲಿ ಮೇಯಿಸುತ್ತಾರೋ, ಆ ಹೊಲಗಳಲ್ಲಿ ಆ ಹಂಗಾಮಿನಲ್ಲಿ ಉತ್ತಮ ಬೆಳೆಯಾಗುತ್ತದೆ ಎಂದು ರೈತರು ನಂಬಿದ್ದರು.
ಅಕ್ಟೋಬರ್ 1892ರಲ್ಲಿ ಕರ್ನಾಟಕದಲ್ಲಿ ಬಾಳಪ್ಪನಾಗಿ ಜನಿಸಿದ ಬಾಳುಮಾಮಾ ನಂತರ ಸಂತನ ಸ್ಥಾನಕ್ಕೆ ಏರಿದರು. ಅವರು ಸೆಪ್ಟೆಂಬರ್ 4, 1966ರಂದು ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಆದಮಾಪುರ ಗ್ರಾಮದಲ್ಲಿ ನಿಧನರಾದರು. ಅವರ ಪರಂಪರೆ ಮರಾಠಿ ಪುಸ್ತಕಗಳು ಮತ್ತು ಟಿವಿ ಧಾರಾವಾಹಿಗಳ ಮೂಲಕ ಹಾಗೂ ಕನ್ನಡ ಮತ್ತು ಮರಾಠಿ ಚಲನಚಿತ್ರಗಳ ಮೂಲಕ ಇಂದಿಗೂ ಜೀವಂತವಾಗಿ ಉಳಿದಿದೆ.


ಎಡ: ಕೊಲ್ಹಾಪುರದ ಮೆತಗೆ ಗ್ರಾಮದಲ್ಲಿ ಪೂಜ್ಯ ಕುರುಬ-ಸಂತ ಬಾಳುಮಾಮಾ ಮತ್ತು ಅವರ ಪತ್ನಿ ಸತ್ಯವದೇವಿಗೆ ಸಮರ್ಪಿತವಾದ ದೇವಾಲಯದ ಜಾಹೀರಾತು ಫಲಕ. ಬಲ: ದೇವಾಲಯದ ಪ್ರವೇಶದ್ವಾರದಲ್ಲಿ ಟಗರುಗಳ ಕಲ್ಲಿನ ಶಿಲ್ಪಗಳನ್ನು ನಿಲ್ಲಿಸಲಾಗಿದೆ
*****
2018ರಲ್ಲಿ ಪರಿ ಮತ್ತೆ ಬಾಳುಮಾಮಾಚೆ ಮೆತಗೆಗೆ ಭೇಟಿ ನೀಡಿದಾಗ, 10ಕ್ಕೂ ಹೆಚ್ಚು ಮಹಿಳೆಯರು ನಮಗಾಗಿ ಹಾಡಲು ಒಟ್ಟುಗೂಡಿದರು. ಅವರಲ್ಲಿ ಎರಡು ದಶಕಗಳ ಹಿಂದೆ ಮೂಲ ಜಿಎಸ್ಪಿ ತಂಡಕ್ಕಾಗಿ ಹಾಡಿದ ಮೊದಲ 19 ಮಹಿಳಾ ಪ್ರದರ್ಶಕರಲ್ಲಿ ಕೆಲವರು ಇದ್ದರು.
ಮಹಿಳೆಯರು ಹಲವಾರು ಪ್ರಕಾರಗಳ ಜಾನಪದ ಗೀತೆಗಳನ್ನು ಹಾಡಿದರು ಮತ್ತು ಜೊತೆಗೆ ಬೀಸುಕಲ್ಲಿನ ಪದಗಳನ್ನೂ ಸಂತೋಷದಿಂದ ಹಾಡಿದರು. ಅವರು ಬೀಸುಕಲ್ಲೊಂದನ್ನು ಹುಡುಕಿ, ಅದನ್ನು ಸ್ವಚ್ಛಗೊಳಿಸಿದರು ನಂತರ ಅದಕ್ಕೆ ಮೇಲ್ಭಾಗದಲ್ಲಿ ಗೂಟವೊಂದನ್ನು ಸಿಕ್ಕಿಸಿದರು, ಕೊನೆಗೆ ಕುಂಕುಮ ಮತ್ತು ಅರಿಶಿನ ಹಚ್ಚಿ ಪೂಜಿಸಲಾಯಿತು.
ಆರತಿ ಬೆಳಗಿ, ಕಲ್ಲಿಗೆ ಕೈ ಮುಗಿದ ನಂತರ ಮಹಿಳೆಯರು ಹಾಡತೊಡಗಿದರು.
ಸ್ವಲ್ಪ ಹೊತ್ತಿನಲ್ಲೇ ಅವರ ಹಾಡುಗಾರಿಕೆ ವೇಗವನ್ನು ಪಡೆದುಕೊಂಡಿತು. ಒಬ್ಬರ ದನಿಯೊಂದಿಗೆ ಇನ್ನೊಬ್ಬರ ದನಿ ಸಮ್ಮಿಳಿತಗೊಂಡವು. ಮುಖ್ಯ ಗಾಯಕರಾದ ಸುಲಾಬಾಯಿ ಜಾಧವ್ ಹಾಡಿದರು ಮತ್ತು ಇತರರು ಅವರನ್ನು ಅನುಸರಿಸಿದರು. ಅಂದು ಪರಿ ಒಟ್ಟು ಎಂಟು ಹಾಡುಗಳನ್ನು ಸಂಗ್ರಹಿಸಿತು.


ಗುಂಪಿನ ಪ್ರಮುಖ ಗಾಯಕರಾದ ಸುಲಾಬಾಯಿ ರವಿಶಂಕರ್ ಜಾಧವ್ ಅವರು ಹಾಡುಗಳ ಲಯಗಳನ್ನು ವಿವರಿಸುತ್ತಾರೆ ಮತ್ತು ಇತರ ಗಾಯಕರು ಅವರೊಂದಿಗೆ ತಮ್ಮ ದನಿ ಸೇರಿಸುತ್ತಾರೆ


ಎಡ: ಗಾಯಕರಾದ ಗೀತಾಂಜಲಿ ದಿವಾನ್ ದವಾರಿ. ಬಲ: ಗಾಯಕರಾದ ಹೇಮಲ್ ರಾಮಚಂದರ್ ಭರ್ಮಾಲ್
"ನನ್ನ ಮೊದಲ ಹಾಡು ಓ ತಾಯಿ, ನನ್ನ ದೇವರಾದ ಜ್ಯೋತಿಬಾಗಾಗಿ" ಎಂದು ಗಾಯಕರು ಹಾಡಲು ಪ್ರಾರಂಭಿಸಿದರು. ಈ ಮೊದಲ ದ್ವಿಪದಿಯು ಕೊಲ್ಹಾಪುರದ ದೇವಾಲಯದಲ್ಲಿ ಶಿವನೆಂದು ನಂಬಲಾದ ಜ್ಯೋತಿಬಾ ಎಂಬ ದೇವರನ್ನು ಗೌರವಿಸುತ್ತದೆ. ಗಾಯಕರು ದೇವರಿಗೆ ಎರಡು ಮುತ್ತುಗಳಿರುವ ದಾರವೊಂದನ್ನು ಅರ್ಪಿಸುತ್ತಾರೆ.
ಮುಂದಿನ ಮೂರು ಓವಿಗಳು ದಂತಕಥೆಯಾಗಿರುವ ಬಾಳುಮಾಮನ ಬಗ್ಗೆ, ಅವರು ಸಹ ಇಲ್ಲಿ "ದೇವರಂತೆ."
ಮಧ್ಯರಾತ್ರಿಯಲ್ಲಿ, ಚಂದ್ರನು ಮೋಡಗಳ ಹಿಂದೆ ಅಡಗಿದಾಗ, ಬಾಳುಮಾಮಾ ರೈತರಿಗೆ "ಮುತ್ತುಗಳ ರಾಶಿಯನ್ನು" ನೀಡುತ್ತಾನೆ - ಹೊಲಗಳಲ್ಲಿ ಅದ್ಭುತ ಫಸಲನ್ನು.
ಹಾಡು ಮುಂದುವರಿಯುತ್ತಿದ್ದಂತೆ, ಅಂಬಿಲ್ (ಗಂಜಿ) ತಯಾರಿಸಲು ಜೋಳ ಮತ್ತು ಅಕ್ಕಿಯನ್ನು ಅರೆಯುತ್ತಿರುವುದಾಗಿ ಗಾಯಕರು ಹೇಳುತ್ತಾರೆ. ಬಾಳುಮಾಮಾ ಕಟ್ಟುಮಸ್ತಾದ ಆಳು, ಪೈಲ್ವಾನ್. ಅವನಿಗೆ ಹಾಲೆಂದರೆ ಪ್ರೀತಿ. ಬಾಳುಮಾಮನ ಬಿಳಿ ಚರ್ಮವು ಬಹುಶಃ ಅವನು ಕುಡಿಯುವ ಹಾಲಿನಿಂದ ಬಂದಿರಬಹುದು, ಸಾಮಾನ್ಯವಾಗಿ ಬಿಸಿಲಿನಲ್ಲಿ ಕುರಿ ಕಾಯುವವನ ಚರ್ಮ ಸಾಮಾನ್ಯವಾಗಿ ಕಪ್ಪಿರುತ್ತದೆ ಎಂದು ಹಾಡು ಹೇಳುತ್ತದೆ.


ಎಡ: ಗಾಯಕರಾದ ಡಾರ್ಕುಬಾಯಿ ರಾವಣ ಮಾನೆ. ಬಲ: ಗಾಯಕರಾದ ಮುಕ್ತಾಬಾಯಿ ಅನಂತ್ ತಂಬೇಕರ್


ಎಡ: ಅನುಬಾಯಿ ಗೋವಿಂದ ಮಾನೆ. ಬಲ: ಸುಮನ್ ಶಿವಾಜಿ ಸಾಟ್ವೇಕರ್
ಇವುಗಳಲ್ಲಿ ಬರುವ ನಾಲ್ಕು ಹಾಡುಗಳು ಗಾಯಕರ ಭಕ್ತಿಯನ್ನು ವ್ಯಕ್ತಪಡಿಸುತ್ತವೆ. ಗಾಯಕರು ಅಂಬಿಕಾ ದೇವಿಯನ್ನು ತನ್ನ ಮನೆಯನ್ನು ಅಲಂಕರಿಸಲು ಬಾ ಎಂದು ಕರೆಯುತ್ತಿದ್ದಾರೆ. ಅವರು ವಿಠಲ ಮತ್ತು ರುಕ್ಮಿಣಿಯ ಊರಾದ ಫಂಡರಾಪುರವನ್ನು ಹೊಗಳುತ್ತಿದ್ದಾರೆ. ಅದು ಭಗವಾನ್ ವಿಠಲ ಮತ್ತು ರುಕ್ಮಿಣಿಯ ನೆಲೆ. ಅಲ್ಲಿ ರುಕ್ಮಿಣಿ ವಾಸಿಸುತ್ತಾಳೆ, ಆ ನಗರವನ್ನು ಆಳುತ್ತಾಳೆ, ಅವರ ಕೊನೆಯಿಲ್ಲದ ಆಳ್ವಿಕೆಯಲ್ಲಿ” ಎಂದು ಬೀಸುಕಲ್ಲು ತಿರುಗಿಸುತ್ತಾ ಮಹಿಳೆ ಹಾಡುತ್ತಾಳೆ.
ಪಂಢರಪುರದಲ್ಲಿ ಅನೇಕ ತುಳಸಿ ಗಿಡಗಳಿವೆ, "ನನ್ನ ಭಗವಾನ್ ವಿಠಲನು ತನ್ನ ರಥವನ್ನು ಚಲಿಸಲು ಸಾಧ್ಯವಿಲ್ಲ" ಎಂದು ಗಾಯಕರು ಹೇಳುತ್ತಾರೆ.
ಕೊನೆಯ ಓವಿಯು ಭಗವಾನ್ ವಿಠಲನಿಗೆ ತನ್ನ ಭಕ್ತರ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸುತ್ತದೆ. ವಿಠಲನ ಕಟ್ಟಾ ಭಕ್ತನಾದ ಪ್ರಸಿದ್ಧ ಭಕ್ತಿ ಕವಿ-ಸಂತ ನಾಮದೇವನ ಬಗ್ಗೆ ಗಾಯಕರು ಮಾತನಾಡುತ್ತಾರೆ. ನಾಮದೇವನಿಗೆ ಮಗುವಾದಾಗ, ವಿಠಲನು ಮಗುವಿನ ಜನನದ ಹನ್ನೆರಡನೇ ದಿನದಂದು ಮಗುವಿಗೆ ಸಾಂಪ್ರದಾಯಿಕ ನಾಮಕರಣ ಸಮಾರಂಭವನ್ನು ಆಯೋಜಿಸುತ್ತಾನೆ.
ಮಹಾರಾಷ್ಟ್ರದ ಬಾಳುಮಾಮಾಚೆ ಮೆತಗೆ ಗ್ರಾಮದ ಮಹಿಳೆಯರ ಈ ಹಾಡುಗಳನ್ನು ಕೇಳಿ.
ನನ್ನ ಮೊದಲ ಹಾಡು,
ಓ ಹೆಣ್ಣೇ, ನನ್ನ ಜ್ಯೋತಿಬಾನಿಗಾಗಿ
ಎರಡೆಳೆಯ ಪವಿತ್ರ ಮುತ್ತಿನ
ಹಾರ ಅವನಿಗಾಗಿ
ಓ ಹೆಣ್ಣೇ, ತಡ ರಾತ್ರಿ ಚಂದ್ರ ಮೋಡದ ಮರೆಯಲ್ಲಿ ಅಡಗಿಕೊಂಡಾಗ
ದೇವರಂತೆ ಬರುತ್ತಾನೆ
ಬಾಳು ಮಾಮಾ, ಹೊಲದಲ್ಲಿ ಮುತ್ತು ಚೆಲ್ಲಲೆಂದು (ಒಳ್ಳೆಯ ಫಸಲು)
ಗಂಜಿ ಬೇಯಿಸಲೆಂದು
ಅಕ್ಕಿ, ಜೋಳವಾ ಬೀಸುವೆ
ನಡು ಹಗಲಿನಲ್ಲಿ ನನ್ನ
ಬಾಳು ಮಾಮಾ ಆನಂದ ಹೊಂದುವನು
ಮಲಗಿರುವ ಬೆಳ್ಳನೆ
ಸುಂದರನು ಯಾರದು, ಅದು ನಮ್ಮ ಚಂದದ ಬಾಳು ಮಾಮ
ಅವನೊಬ್ಬ ಪೈಲ್ವಾನ,
ಹಾಲೆಂದರೆ ಮೆಚ್ಚು ಅವಗೆ, ಹೌದು ಹಾಲು ಕುಡಿಯುತ್ತಾನೆ ಸಂತೋಷದಿಂದ
ಓ ಹೆಣ್ಣೇ, ಕಳುಹಿಸು
ಆಹ್ವಾ ಅಂಬಾದೇವಿಗೆ ನೀನು
ನನ್ನ ದೇವಿ ಅಂಬಾ ದೇವಿಗೆ
ಏರುಪೇರಿನ ನೆಲದಲ್ಲಿದೆ
ಪಂಢರಿ
ರುಕ್ಮಿಣಿ ಅಲ್ಲಿ ಮಹಾರಾಣಿ,
ಆಳುವಳು ಆ ನೆಲವನ್ನು, ಎಂದೂ ಕುಸಿಯದ ಸಾಮ್ರಾಜ್ಯವನ್ನು*
ಎಷ್ಟೊಂದು ತುಳಸಿಯ
ಗಿಡಗಳ ನೆಟ್ಟಿಹರು ಪಂಡರಾಪುರದಲ್ಲಿ
ವಿಠಲನ ರಥ ಸಾಗಲು ದಾರಿಯೇ
ಇಲ್ಲ ಅಲ್ಲಿ
ಓ ಹೆಣ್ಣೇ, ಪಂಢರಾಪುರದ
ಬೀದಿಗಳು ಸಿಂಗಾರಗೊಂಡಿವೆ
ನಾಮದೇವನ ಮಗನ ನಾಮಕರಣವಂತೆ
ವಿಠಲ ಅದನು ನೆರವೇರಿಸುವನಂತೆ
ಸೂಚನೆ: * ಈ ಓವಿಯಲ್ಲಿ, ಗಾಯಕರು ಪಂಢರಾಪುರದಲ್ಲಿ ವಿಠ್ಠಲ ಮತ್ತು ರುಕ್ಮಿಣಿಯ ಆಳ್ವಿಕೆಯನ್ನು ವಿವರಿಸಲು ಚೌಡಾ ಚೌಕಾಟಿ / ಚೌಕಾಡಿ ಅಥವಾ ಹದಿನಾಲ್ಕು ಚೌಕಾಡಿ ಎಂಬ ಪದವನ್ನು ಬಳಸುತ್ತಾರೆ. ಇದು ಬಹಳ ದೀರ್ಘಕಾಲ ಉಳಿಯುವ ರಾಜ್ಯವನ್ನು ಸೂಚಿಸುತ್ತದೆ. ಹಿಂದೂ ಧರ್ಮಗ್ರಂಥಗಳ ಪ್ರಕಾರ ಕೃತ, ತ್ರೇತಾ, ದ್ವಾಪರ ಮತ್ತು ಕಲಿಯುಗದ ಯುಗಗಳ ಒಂದು ಚಕ್ರವನ್ನು ಒಳಗೊಂಡಿರುವ ವರ್ಷಗಳ ಸಂಖ್ಯೆಯನ್ನು ಒಂದು ಚೌಕಾಡಿ ಸೂಚಿಸುತ್ತದೆ. ಭಕ್ತಿ ಕವಿ-ಸಂತ ತುಕಾರಾಮನ ಕವಿತೆ ಸೇರಿದಂತೆ ಸಾಹಿತ್ಯ ಪಠ್ಯಗಳಲ್ಲಿ ಈ ಪದವನ್ನು ಬಳಸಲಾಗಿದೆ.
ಪ್ರದರ್ಶಕರು/ಗಾಯಕರು : ಸುನೀತಾ ಜಾಧವ್, ಸೋನಾ ಭರ್ಮಾಲ್, ಲಕ್ಷ್ಮಿ ದವಾರಿ, ಸುಲಾಬಾಯಿ ಜಾಧವ್, ಗೀತಾಂಜಲಿ ದವಾರಿ, ಹೇಮಲ್ ಭರ್ಮಾಲ್, ದರ್ಕುಬಾಯಿ ಮಾನೆ, ಮುಕ್ತಾಬಾಯಿ ತಾಂಬೆಕರ್, ಅನುಬಾಯಿ ಮಾನೆ, ಸುಮನ್ ಸಾಟ್ವೇಕರ್
ಗ್ರಾಮ : ಬಾಳುಮಾಮಾಚೆ ಮೆತಗೆ
ತಾಲ್ಲೂಕು : ಕಾಗಲ್
ಜಿಲ್ಲೆ : ಕೊಲ್ಹಾಪುರ
ದಿನಾಂಕ : ಮೇ 17, 2018ರಂದು ಈ ಹಾಡುಗಳನ್ನು ರೆಕಾರ್ಡ್ ಮಾಡಲಾಗಿದೆ ಮತ್ತು ಅಂದೇ ಛಾಯಾಚಿತ್ರಗಳನ್ನು ತೆಗೆದುಕೊಳ್ಳಲಾಗಿದೆ
ಪೋಸ್ಟರ್: ಸಿಂಚಿತಾ ಮಾಜಿ
ಹೇಮಾ ರಾಯ್ಕರ್ ಮತ್ತು ಗೈ ಪೊಯಿಟೆವಿನ್ ಸ್ಥಾಪಿಸಿದ ಮೂಲ ಗ್ರೈಂಡ್ ಮಿಲ್ ಸಾಂಗ್ಸ್ ಪ್ರಾಜೆಕ್ಟ್ ಬಗ್ಗೆ ಓದಿ .
ಅನುವಾದ: ಶಂಕರ ಎನ್. ಕೆಂಚನೂರು