ವೇದಿಕೆಯಲ್ಲಿ ಕುಣಿಯುತ್ತಿದ್ದ ಡ್ಯಾನ್ಸರ್‌ಗಳ ನಡುವೆ ಇದ್ದಕ್ಕಿದ್ದಂತೆ ಯುವಕನೊಬ್ಬ ನುಗ್ಗಿ ಅಲ್ಲಿದ್ದ ಮುಸ್ಕಾನ್ ಎನ್ನುವ ಯುವತಿಯ ಕೈ ಹಿಡಿದುಕೊಂಡು ಗನ್ ತೋರಿಸುತ್ತಾ, “ಅಭಿ ಯೇ ಗೋಲಿ ಮಾರ್ ದೇಂಗೇ ತೋ ತೂರಾತ್ ನಾಚ್ನೇ ಲಗೋಗೆ [ಒಂದು ಗುಂಡು ಹಾರಿಸಿದೆ ಅಂದ್ರೆ ಇವತ್ತು ರಾತ್ರಿಯೆಲ್ಲ ಕುಣಿತಾ ಇರ್ತೀಯ” ಎಂದು ಆಕೆಯನ್ನು ಬೆದರಿಸಿದ.
ಬೆದರಿದ ಮುಸ್ಕಾನ್ ಉಳಿದ ಪ್ರೇಕ್ಷಕರ ಕಡೆ ನೋಡಿದರೆ ಅವರು ಅವನನ್ನು ಪ್ರೋತ್ಸಾಹಿಸುತ್ತಾ ಕೇಕೆ ಹಾಕುತ್ತಿದ್ದಾರೆ. ಆ ಕಿರಿಯ ಯುವತಿ ಅಂದು ಮಾಡಿದ್ದ ತಪ್ಪೆಂದರೆ ಬೋಜಪುರಿ ಭಾಷೆಯ ಅಶ್ಲೀಲ ಹಾಡೊಂದಕ್ಕೆ ಕುಣಿಯಲು ನಿರಾಕರಿಸಿದ್ದು. ಸಾವಿರಾರು ಪುರುಷ ಪ್ರೇಕ್ಷಕರೆದುರು ಆ ಹಾಡಿಗೆ ಕುಣಿಯಲು ಅವರಿಗೆ ಇಷ್ಟವಿರಲಿಲ್ಲ,
ರುನಾಲಿ ಆರ್ಕೆಸ್ಟ್ರಾ ಗ್ರೂಪ್ನ ಸದಸ್ಯರಾಗಿದ್ದ ಮುಸ್ಕಾನ್, ಸ್ಥಳೀಯವಾಗಿ "ಆರ್ಕೆಸ್ಟ್ರಾ" ಎಂದು ಕರೆಯಲ್ಪಡುವ ನೃತ್ಯ ಮತ್ತು ಸಂಗೀತ ಪ್ರದರ್ಶನದಲ್ಲಿ ಪ್ರದರ್ಶನ ನೀಡುತ್ತಿದ್ದ ಏಳು ನರ್ತಕಿಯರಲ್ಲಿ ಒಬ್ಬರಾಗಿದ್ದರು. ಚಿರಿಯಾ ಬ್ಲಾಕ್ ಪ್ರದೇಶದಲ್ಲಿ ದುರ್ಗಾ ಪೂಜಾ ಉತ್ಸವದ ಭಾಗವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
“ನಮ್ಮಂತಹ ನರ್ತಕಿಯರಿಗೆ ಇಂತಹ ಬೆದರಿಕೆಗಳು ಸಾಮಾನ್ಯ” ಎನ್ನುತ್ತಾರೆ ಮುಸ್ಕಾನ್. ಅವರು ಕಳೆದ ಮೂರು ವರ್ಷಗಳಿಂದ ಆರ್ಕೆಸ್ಟ್ರಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ.
ಆದರೆ ಈ ಬೆದರಿಕೆಗಳು ಕೆಲವೇ ಕ್ಷಣಗಳಲ್ಲಿ ಲೈಂಗಿಕ ಕಿರುಕುಳವಾಗಿ ಮಾರ್ಪಡುತ್ತವೆ. “ಕಮರ್ ಪರ್ ಹಾತ್ ಎಖ್ನಾ ಯಾ ಬ್ಲೌಸ್ ಮೇ ಹಾತ್ ಘುಸಾನೇ ಕೀ ಕೋಶಿಸ್ ಕರ್ನಾ ಯಂಹಾ ಕಾ ಮರ್ದೋಂ ಕೀ ರೋಜ್ಮಾರಾ ಕೀ ಹರ್ಕತೇ ಹೇ [ಗಂಡಸರು ನಮ್ಮ ಸೊಂಟ ಬಳಸಿ ನಮ್ಮ ರವಿಕೆಯೊಳಗೆ ಕೈ ಹಾಕಲು ಪ್ರಯತ್ನಿಸುವುದು ದಿನ ನಿತ್ಯದ ಅಭ್ಯಾಸ” ಎನ್ನುತ್ತಾರೆ ನರ್ತಕಿ ರಾಧಾ.


ಮುಸ್ಕಾನ್ ತನ್ನ ಮಗಳೊಂದಿಗೆ ಬಾಡಿಗೆ ಕೋಣೆಯಲ್ಲಿ ವಾಸಿಸುತ್ತಿದ್ದಾರೆ. 'ನನಗೆ ಶಾಶ್ವತ ಮನೆಯಿಲ್ಲ, ಹೀಗಾಗಿ ಬಹಳಷ್ಟು ವಸ್ತುಗಳನ್ನು ಖರೀದಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಅನಗತ್ಯ ವಸ್ತುಗಳನ್ನು ಖರೀದಿಸುವ ಬದಲು ನನ್ನ ಮಗಳ ಭವಿಷ್ಯಕ್ಕಾಗಿ ಹಣ ಉಳಿಸಲು ಬಯಸುತ್ತೇನೆʼ ಎಂದು ಅವರು ನೆಲದ ಮೇಲಿನ ಹಾಸಿಗೆಯ ಕಡೆಗೆ ತೋರಿಸುತ್ತಾ ಹೇಳುತ್ತಾರೆ

ಮುಸ್ಕಾನ್ ಬಿಹಾರದ ಸರನ್ ಜಿಲ್ಲೆಯ ಸೋನೆಪುರ್ ಮೇಲಾದಲ್ಲಿ (ಜಾತ್ರೆ) ನೃತ್ಯಗಾರ್ತಿಯಾಗಿ ಕೆಲಸ ಮಾಡಲು ಪ್ರಾರಂಭಿಸಿದರು
ಬಿಹಾರದಲ್ಲಿ ಆರ್ಕೆಸ್ಟ್ರಾ ಕಾರ್ಯಕ್ರಮಗಳು ಸಾಮಾನ್ಯವಾಗಿ ಹಬ್ಬಗಳು, ಖಾಸಗಿ ಪಾರ್ಟಿಗಳು ಮತ್ತು ಮದುವೆಗಳಂತಹ ಸಂದರ್ಭಗಳಲ್ಲಿ ನಡೆಯುತ್ತವೆ. ಡ್ಯಾನ್ಸರ್‌ಗಳಿಗೆ ಅವರ ಪ್ರದರ್ಶನಗಳನ್ನು ಅವಲಂಬಿಸಿ 1,500 ರೂಪಾಯಿಗಳಿಂದ 2,000 ರೂ.ಗಳವರೆಗೆ ನೀಡಲಾಗುತ್ತದೆ. ಅತ್ಯುತ್ತಮ ಡ್ಯಾನ್ಸರ್ಸ್ ಸಹ 5,000 ರೂಪಾಯಿಗಳಿಗಿಂತ ಹೆಚ್ಚು ಸಂಭಾವನೆ ಪಡೆಯುವುದಿಲ್ಲ. ಈ ನೃತ್ಯಗಾರರನ್ನು ಕಾರ್ಯಕ್ರಮಗಳ ಸಂಖ್ಯೆಯನ್ನು ಹೆಚ್ಚಿಸುವ ಸಲುವಾಗಿ ಅವರಿಗೆ ಕಮಿಷನ್ ನೀಡಲಾಗುತ್ತದೆ. ಈ ನರ್ತಕಿಯರು ಒಂದಕ್ಕಿಂತ ಹೆಚ್ಚು ಆರ್ಕೆಸ್ಟ್ರಾ ಕಾರ್ಯಕ್ರಮಗಳ ಸಂಘಟಕರೊಂದಿಗೆ ಸಂಪರ್ಕದಲ್ಲಿರುತ್ತಾರೆ.
"ಭಾರತ ಮತ್ತು ನೇಪಾಳದ ವಿವಿಧ ಭಾಗಗಳಿಂದ ಸುಮಾರು 200 ಹುಡುಗಿಯರು ತಮ್ಮ ನೃತ್ಯವನ್ನು ಪ್ರದರ್ಶಿಸಲು ಸೋನೆಪುರ್ ಮೇಲಾಕ್ಕೆ ಬರುತ್ತಾರೆ" ಎಂದು ಮುಸ್ಕಾನ್ ನಗುತ್ತಾರೆ. ಬಿಹಾರದ ಸರನ್ ಜಿಲ್ಲೆಯಲ್ಲಿ ಪ್ರತಿ ವರ್ಷ ನಡೆಯುವ ಸೋನೆಪುರ್ ಜಾತ್ರೆಯಲ್ಲೇ ಮುಸ್ಕಾನ್ ಅವರನ್ನು ಆರ್ಕೆಸ್ಟ್ರಾ ತಂಡವೊಂದಕ್ಕೆ ಪರಿಚಯಿಸಲಾಯಿತು. ಅಂದಿನಿಂದ ವೃತ್ತಿಯ ಕೌಶಲಗಳನ್ನು ಹಂತ ಹಂತವಾಗಿ ಕಲಿತು ಇಂದು ವೃತ್ತಿಪರ ನೃತ್ಯಗಾರ್ತಿಯಾಗಿ ಪ್ರದರ್ಶನ ನೀಡುತ್ತಿದ್ದಾರೆ.
ಈ ಕಾರ್ಯಕ್ರಮಗಳಿಗೆ, 15ರಿಂದ 35 ವರ್ಷದೊಳಗಿನ ಯುವತಿಯರನ್ನು ನರ್ತಕಿಯರನ್ನಾಗಿ ನೇಮಿಸಿಕೊಳ್ಳಲಾಗುತ್ತದೆ. "ಕೆಲವು ಹುಡುಗಿಯರು ಈ ವೃತ್ತಿಗೆ ಸೇರಿದ ನಂತರವೂ ತಮ್ಮ ಕುಟುಂಬಗಳೊಂದಿಗೆ ಸಂಪರ್ಕದಲ್ಲಿರುತ್ತಾರೆ. ಅವರು ವರ್ಷಕ್ಕೆ ಒಂದು ಅಥವಾ ಎರಡು ಬಾರಿ ತಮ್ಮ ಮನೆಗಳಿಗೆ ಹೋಗುತ್ತಾರೆ" ಎಂದು ಮುಸ್ಕಾನ್ ಹೇಳುತ್ತಾರೆ. "ಅವಳು ಏನು ಕೆಲಸ ಮಾಡುತ್ತಾಳೆಂದು ಅವಳ ಕುಟುಂಬಕ್ಕೆ ತಿಳಿದಿರುತ್ತದೆ" ಎನ್ನುವ ಅವರು, ಅವರುಗಳ ಕುಟುಂಬಗಳು ಇದನ್ನು ಆಕ್ಷೇಪಿಸದಿರುವುದಕ್ಕೆ ಕಾರಣವನ್ನೂ ಹೇಳುತ್ತಾರೆ "ಅವರಿಗೂ ಬದುಕಲು ಹಣ ಬೇಕಿರುತ್ತದೆ. ಹೀಗಾಗಿ ಅವರೂ ಸುಮ್ಮನಿರುತ್ತಾರೆ. ಈ ವೃತ್ತಿ ಅವರೆಲ್ಲರ ಹೊಟ್ಟೆ ತುಂಬಿಸುತ್ತಿರುತ್ತದೆ"
ಇದೆಲ್ಲ ಸಮಸ್ಯೆಗಳ ನಡುವೆಯೂ ಈ ನೃತ್ಯ ಕಾರ್ಯಕ್ರಮಗಳಿಂದಾಗಿ ಜೀವನ ಕಟ್ಟಿಕೊಳ್ಳಲು ಸಾಧ್ಯವಾಗಿದೆ ಎನ್ನುತ್ತಾರೆ ಮುಸ್ಕಾನ್. 13 ವರ್ಷದವರಿರುವಾಗ ಕೋಲ್ಕತ್ತಾದ 29 ವರ್ಷದ ವ್ಯಕ್ತಿಯೊಬ್ಬನನ್ನು ಮದುವೆಯಾಗಿದ್ದ ಮುಸ್ಕಾನ್ ಮದುವೆಯಾದ ಮೂರು ವರ್ಷಗಳ ನಂತರ ಗಂಡನ ಕಾಟ ತಡೆಯಲಾಗದೆ ಗಂಡನ ಮನೆಯಿಂದ ಓಡಿಬಂದರು.
“ನಾನು ಹೆಣ್ಣು ಮಗುವನ್ನು ಹೆತ್ತ ಕಾರಣ ಅವರು [ಗಂಡ] ನನ್ನ ಮೇಲೆ ಸಿಟ್ಟಾಗಿದ್ದರು. ಅವರು ನಮ್ಮ ಮಗುವನ್ನು ಮಾರಬಯಸಿದ್ದರು” ಎಂದು ತಾನು ಬಿಹಾರದ ರೈಲು ಹತ್ತಿದ ದಿನವನ್ನು ನೆನಪಿಸಿಕೊಳ್ಳುತ್ತಾ ಮುಸ್ಕಾನ್ ಹೇಳುತ್ತಾರೆ. ಆ ಸಮಯದಲ್ಲಿ ಅವರ ಮಗಳಿಗೆ ಕೇವಲ ಒಂದು ವರ್ಷವಾಗಿತ್ತು. ನಂತರ ಅವರಿಗೆ ಸೋನೇಪುರ ಮೇಲಾದಲ್ಲಿ ಕೆಲಸ ಸಿಕ್ಕಿತು.


ಆರ್ಕೆಸ್ಟ್ರಾ ಕಾರ್ಯಕ್ರಮಗಳ ಸಂಘಟಕರಾಗಿರುವ ವಿಕ್ಕಿ ಪಾಟ್ನಾದ ಗಾಂಧಿ ಮೈದಾನದ ಬಳಿಯ ಮಾರುಕಟ್ಟೆಯಲ್ಲಿ ಕಚೇರಿಯನ್ನು ಹೊಂದಿದ್ದಾರೆ, ಅಲ್ಲಿ ಅವರು ಕಾರ್ಯಕ್ರಮ ಬಯಸಿ ಬರುವ ಗ್ರಾಹಕರೊಡನೆ ಮಾತುಕತೆ ನಡೆಸುತ್ತಾರೆ


ಇತರ ಆರು ನರ್ತಕಿಯರೊಂದಿಗೆ ಎರಡು ಮಲಗುವ ಕೋಣೆಗಳ ಮನೆಯನ್ನು ಹಂಚಿಕೊಂಡಿರುವ ಮುಸ್ಕಾನ್, 'ನಮಗೆ ವಸತಿ ಸೌಕರ್ಯ ಸಿಗುವುದು ಸಹ ಕಷ್ಟ' ಎಂದು ಹೇಳುತ್ತಾರೆ
ಸಮಾಜವು ಆರ್ಕೆಸ್ಟ್ರಾ ನರ್ತಕಿಯರ ವಿರುದ್ಧ ಸಾಕಷ್ಟು ತಾರತಮ್ಯ ಮಾಡುತ್ತದೆ, ಮತ್ತು ಅವರನ್ನು ತುಂಬಾ ಕೆಟ್ಟದಾಗಿ ನೋಡುತ್ತದೆ, ಅದು ಅವರ ಮೂಲಭೂತ ಅಗತ್ಯಗಳ ಮೇಲೂ ಪರಿಣಾಮ ಬೀರುತ್ತದೆ. ಪಾಟ್ನಾದ ಹೊರವಲಯದಲ್ಲಿರುವ ದಿಘಾದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಮುಸ್ಕಾನ್ ಮತ್ತು ಅವರ ಮಗಳು "ಮನೆ ಹುಡುಕುವುದು ನಮಗೆ ಸುಲಭದ ಕೆಲಸವಲ್ಲ" ಎಂದು ಹೇಳುತ್ತಾರೆ. ಈ ಎರಡು ಕೋಣೆಗಳ ಕಾಂಕ್ರೀಟ್ ಮನೆಯಲ್ಲಿ ಅವರೊಂದಿಗೆ ಇತರ ಆರು ಹುಡುಗಿಯರು ವಾಸಿಸುತ್ತಿದ್ದಾರೆ. ಅವರು ವೃತ್ತಿಯಲ್ಲಿ ನರ್ತಕಿಯರೂ ಹೌದು. "ನನಗೆ ಈ ಹುಡುಗಿಯರೊಂದಿಗೆ ಇರುವುದು ಇಷ್ಟ. ಈ ಮನೆ ತುಂಬಾ ದುಬಾರಿಯಲ್ಲ ಮತ್ತು ಬಾಡಿಗೆ ಮತ್ತು ಇತರ ಖರ್ಚುಗಳನ್ನು ನಮ್ಮ ನಡುವೆ ಹಂಚಿಕೊಳ್ಳುತ್ತೇವೆ" ಎಂದು ಮುಸ್ಕಾನ್ ಹೇಳುತ್ತಾರೆ.
ಇಲ್ಲಿನ ಕಿರುಕುಳಗಳು ಮತ್ತು ತಾರತಮ್ಯದ ನಡುವೆಯೂ ತನ್ನ ಗಂಡನ ಬಳಿ ಮರಳುವುದರ ಬದಲು ಮುಸ್ಕಾನ್ ಇಲ್ಲಿಯೇ ಉಳಿಯಲು ಬಯಸುತ್ತಾರೆ. ”ಯಂಹಾ ತೋ ಸಿರ್ಫ್ ಚೂ ಕೆ ಚೋರ್ ದೇತೇ ಹೈ, ಕಮ್ ಸೆ ಕಮ್ ಪಹ್ಲೇ ಕೀ ತರಹ್ ರೋಜ್ ರಾತ್ ಕೋ ರೇಪ್ ನಹೀ ಹೋತಾ [ಇಲ್ಲಿ [ಕಾರ್ಯಕ್ರಮಗಳಲ್ಲಿ] ಗಂಡಸರು ಬರೀ ಮೈ ಮುಟ್ಟುತ್ತಾರಷ್ಟೇ. ಅಲ್ಲಿನ ಹಾಗೆ ದಿನಾ ರಾತ್ರಿ ಅತ್ಯಾಚಾರಕ್ಕೆ ಒಳಗಾಗಬೇಕಿಲ್ಲ ಇಲ್ಲಿ].”
ಸ್ವತಃ ಆರ್ಕೆಸ್ಟ್ರಾ ಕಾರ್ಯಕ್ರಮಗಳಲ್ಲಿ ಕಿರುಕುಳವನ್ನು ಅನುಭವಿಸಿದ ಮುಸ್ಕಾನ್, ತನ್ನ ಮಗಳು ತನ್ನಂತೆ ಡಾನ್ಸರ್ ಆಗುವುದನ್ನು ಬಯಸುವುದಿಲ್ಲ. ಅವಳು ಓದಬೇಕು ಮತ್ತು "ಯೋಗ್ಯ ಜೀವನ" ನಡೆಸಬೇಕೆಂದು ಅವರು ಬಯಸುತ್ತಾರೆ. ಮುಸ್ಕಾನ್ ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸಿದ್ದರು, ಆದರೆ ನಂತರ ಅವರಿಗೆ ಮದುವೆ ಮಾಡಿಸಲಾಯಿತು.
“ಆದರೆ ಇಲ್ಲಿ ಸಾಕಷ್ಟು ಜನರ ಬಳಿ ಯಾವುದೇ ಐಡಿ [ಗುರುತಿನ ಚೀಟಿ] ಇಲ್ಲ. ಈ ದಾಖಲೆಗಳಿಲ್ಲದೆ ಅವಳನ್ನು ಹೇಗೆ ಶಾಲೆಗೆ ಕಳುಹಿಸುವುದು ಗೊತ್ತಾಗುತ್ತಿಲ್ಲ. ನಮಗೆ ಸಹಾಯ ಬೇಕು, ಆದರೆ ಅದಕ್ಕಾಗಿ ಯಾರನ್ನು ಸಂಪರ್ಕಿಸಬೇಕೆನ್ನುವುದು ತಿಳಿದಿಲ್ಲ” ಎನ್ನುವ ಮುಸ್ಕಾನ್ ಅವರಿಗೆ ಮಗಳನ್ನು ಶಾಲೆಗೆ ಸೇರಿಸಲು ಬೇಕಾಗುವ ದಾಖಲೆಗಳನ್ನು ಹೇಗೆ ಮಾಡಿಸುವುದು ಎನ್ನುವುದೇ ಚಿಂತೆಯಾಗಿದೆ,


ಎಡ: ಆರ್ಕೆಸ್ಟ್ರಾ ಕಾರ್ಯಕ್ರಮಗಳಲ್ಲಿ ತನ್ನ ಪತಿಯೊಂದಿಗೆ ಡ್ಯುಯೆಟ್ ನೃತ್ಯವನ್ನು ಪ್ರದರ್ಶಿಸುವ ಪ್ರಿಯಾ ಪ್ರದರ್ಶನವಿದ್ದಾಗ ಕೋಲ್ಕತ್ತಾದಿಂದ ಬರುತ್ತಾರೆ. ಬಲ: ಮನಿಷಾ ಇನ್ಸ್ಟಾಗ್ರಾಮ್ ರೀಲ್ ಮಾಡಲು ಸಿದ್ಧರಾಗುತ್ತಿದ್ದಾರೆ


ಎಡ: ಆರ್ಕೆಸ್ಟ್ರಾ ನರ್ತಕಿಯರು ನಗರದ ಹೊರವಲಯದಲ್ಲಿರುವ ತಮ್ಮ ಮನೆಗೆ ಬರುವ ಮಹಿಳೆಯಿಂದ ಸೌಂದರ್ಯವರ್ಧಕಗಳು ಮತ್ತು ಪರಿಕರಗಳನ್ನು ಖರೀದಿಸುತ್ತಾರೆ. ಬಲ: ಬಿಹಾರದಲ್ಲಿ ಪ್ರದರ್ಶನ ನೀಡುತ್ತಿರುವ ರುನಾಲಿ ಆರ್ಕೆಸ್ಟ್ರಾ ಗ್ರೂಪ್
ಪಟ್ನಾದಲ್ಲಿ ಕಾರ್ಯಕ್ರಮವಿದ್ದಾಗ ಮುಸ್ಕಾನ್ ಅವರೊಂದಿಗೆ ತಂಗುವ ಪ್ರಿಯಾ ಡ್ಯುಯೆಟ್ ಡ್ಯಾನ್ಸ್ (ಜೋಡಿ ನೃತ್ಯ) ಮಾಡುತ್ತಾರೆ. ಅವರು ಕೇವಲ 16 ವರ್ಷದವರಾಗಿದ್ದಾಗಿನಿಂದಲೂ ತಮ್ಮ ಗಂಡನೊಂದಿಗೆ ಈ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.
“ನಾನು ಇದನ್ನೇ ಮಾಡಿಕೊಂಡಿರಲು ಸಾಧ್ಯವಿಲ್ಲ” ಎನ್ನುತ್ತಾರೆ ಪ್ರಿಯಾ. ಪ್ರಸ್ತುತ ಅವರಿಗೆ 20 ವರ್ಷ. ಅವರು ತಮ್ಮ ಗಂಡನೊಂದಿಗೆ ಸೇರಿ ಕಿರಾಣಿ ಅಂಗಡಿಯೊಂದನ್ನು ತೆರೆಯುವ ಯೋಚನೆಯಲ್ಲಿದ್ದಾರೆ. “ಸದ್ಯದಲ್ಲೇ ನಾವು ಮಗು ಮಾಡಿಕೊಳ್ಳಲಿದ್ದೇವೆ. ನಮ್ಮ ಮಗು ಈ ಅರ್ಕೆಸ್ಟ್ರಾ ವ್ಯವಹಾರದ ಯಾವ ವಿಭಾಗದಲ್ಲಿಯೂ ಭಾಗವಹಿಸುವುದು ನಮಗೆ ಇಷ್ಟವಿಲ್ಲ” ಎಂದು ಅವರು ಹೇಳುತ್ತಾರೆ.
ಮತ್ತೊಬ್ಬ ನರ್ತಕಿ ಮನಿಷಾ 10ನೇ ತರಗತಿ ತೇರ್ಗಡೆಯಾದ ನಂತರ ಆರ್ಕೆಸ್ಟ್ರಾ ಕಾರ್ಯಕ್ರಮಗಳಲ್ಲಿ ನೃತ್ಯ ಮಾಡಲು ಪ್ರಾರಂಭಿಸಿದರು. ಆಕೆಯ ತಂದೆ ಪ್ರಸ್ತುತ ಈ ಜಗತ್ತಿನಲ್ಲಿಲ್ಲ ಮತ್ತು ಮನೆಗೆಲಸ ಮಾಡುವ ಅವರ ತಾಯಿಯ ಸಂಪಾದನೆ ಕುಟುಂಬವನ್ನು ನಡೆಸಲು ಸಾಕಾಗುತ್ತಿರಲಿಲ್ಲ. "ಇದು ತಾತ್ಕಾಲಿಕ ಕೆಲಸ; ನಾನು ಈ ವೃತ್ತಿಯಲ್ಲಿ ಹೆಚ್ಚು ಕಾಲ ಇರುವುದಿಲ್ಲ. ಸ್ವಲ್ಪ ಸಮಯದ ನಂತರ, ಒಂದಷ್ಟು ಹಣ ಸಂಪಾದಿಸಿಕೊಂಡು ಊರಿಗೆ ಹಿಂತಿರುಗಿ ಹೋಗಿ ಒಳ್ಳೆಯ ವ್ಯಕ್ತಿಯನ್ನು ಮದುವೆಯಾಗುತ್ತೇನೆ."
ಆರ್ಕೆಸ್ಟ್ರಾ ಕಾರ್ಯಕ್ರಮಗಳ ಸಂಘಟಕರ ಕಚೇರಿಗಳು ಬಿಹಾರದ ಸರನ್ ಜಿಲ್ಲೆಯ ಛಾಪ್ರಾ ಪಟ್ಟಣದ ಬಳಿಯ ಸ್ಥಳೀಯ ಮಾರುಕಟ್ಟೆಯಾದ ಜನತಾ ಬಜಾರಿನ ಅನೇಕ ಬೀದಿಗಳಲ್ಲಿ ಸಾಲುಗಟ್ಟಿ ನಿಂತಿವೆ. ಆರ್ಕೆಸ್ಟ್ರಾ ಕಾರ್ಯಕ್ರಮಗಳ ಸಂಘಟಕರಲ್ಲಿ ಒಬ್ಬರಾದ ವಿಕ್ಕಿ ಹೇಳುತ್ತಾರೆ, "ಜನತಾ ಬಜಾರ್ ಹೋಲ್ಸೇಲ್ ಬಜಾರ್ ಜೈಸಾ ಹೈ ಆರ್ಕೆಸ್ಟ್ರಾ ಡಾನ್ಸರ್ಸ್ ಕಾ [ಜನತಾ ಬಜಾರ್ ಆರ್ಕೆಸ್ಟ್ರಾ ಡಾನ್ಸರ್‌ಗಳ ಸಗಟು ಮಾರುಕಟ್ಟೆಯಂತಿದೆ]."
ಈ ನೃತ್ಯಗಾರರನ್ನು ಕೆಟ್ಟದಾಗಿ ನಡೆಸಿಕೊಳ್ಳುವುದರ ಕುರಿತಾಗಿ ಮತ್ತು ಅವರ ಇತರ ಸಮಸ್ಯೆಗಳ ಬಗ್ಗೆ ವಿಕ್ಕಿಯವರಿಗೆ ಚೆನ್ನಾಗಿ ತಿಳಿದಿದೆ. "ನರ್ತಕಿಯರ ಬಗ್ಗೆ ಅವರು 'ಕೆಟ್ಟ ಹೆಂಗಸರು' ಎಂಬ ಗ್ರಹಿಕೆಯಿದೆ ಮತ್ತು ಹೀಗೆ ಭಾವಿಸಿ ಜನರು ಅವರಿಗೆ ಕಿರುಕುಳ ನೀಡುತ್ತಾರೆ. ಈ ಮಹಿಳೆಯರ ಪರಿಸ್ಥಿತಿಯ ಲಾಭ ಪಡೆಯಲು ಪ್ರಯತ್ನಿಸುವ ಪುರುಷರ ಬಗ್ಗೆ ಯಾರೂ ಮಾತನಾಡುವುದಿಲ್ಲ" ಎಂದು ಅವರು ಹೇಳಿದರು, "ನಾನು ವಿವಾಹಿತ ವ್ಯಕ್ತಿ ಮತ್ತು ನನಗೆ ಕುಟುಂಬವಿದೆ. ನನ್ನ ದೃಷ್ಟಿಯಲ್ಲಿ, ಡಾನ್ಸರ್‌ಗಳು ನನ್ನ ಕುಟುಂಬದ ಭಾಗವಾಗಿದ್ದಾರೆ" ಎಂದು ಅವರು ಹೇಳುತ್ತಾರೆ, ದೊಡ್ಡ ಆರ್ಕೆಸ್ಟ್ರಾ ಕಾರ್ಯಕ್ರಮಗಳಲ್ಲಿ ಅವರಿಗೆ ಒಮ್ಮೊಮ್ಮೆ ಬಾಡಿಗೆ ಭದ್ರತಾ ಸಿಬ್ಬಂದಿಯ ಅಗತ್ಯವಿರುತ್ತದೆ.
"ಪಿಪಿಯಲ್ಲಿ ಅವರಿಗೆ ಹೆಚ್ಚು ಕಿರುಕುಳ ನೀಡಲಾಗುತ್ತದೆ" ಎಂದು ವಿಕ್ಕಿ ವಿವರಿಸುತ್ತಾರೆ. ಪಿಪಿ ಎಂದರೆ, ಸಾಮಾನ್ಯವಾಗಿ ಪ್ರಭಾವಿ ವ್ಯಕ್ತಿಗಳು ಮಾಡುವ ಖಾಸಗಿ ಪಾರ್ಟಿಗಳು. "ಕೆಲವೊಮ್ಮೆ ಪೊಲೀಸರ ಸಮ್ಮುಖದಲ್ಲೇ ಡಾನ್ಸರ್‌ಗಳನ್ನು ಅಸಭ್ಯವಾಗಿ ನಡೆಸಿಕೊಳ್ಳಲಾಗುತ್ತದೆ!" ಎಂದು ಮತ್ತೊಬ್ಬ ಸಂಘಟಕ ರಾಜು ಹೇಳುತ್ತಾರೆ.
ಈ ವರದಿಯಲ್ಲಿ ಎಲ್ಲಾ ಹೆಸರುಗಳನ್ನು ಬದಲಾಯಿಸಲಾಗಿದೆ.
ಅನುವಾದ: ಶಂಕರ. ಎನ್. ಕೆಂಚನೂರು