“ಒಮ್ಮೆ ಈ ವೃತ್ತಿಯು ಕಣ್ಮರೆಯಾದರೆ, ನನಗೆ ಬೇರೆ ರಾಜ್ಯಕ್ಕೆ ಹೋಗುವುದನ್ನು ಬಿಟ್ಟು ಬೇರೆ ದಾರಿಯಿಲ್ಲ" ಎಂದು ಅಸ್ಸಾಂನ ದರ್ರಾಂಗ್ ಜಿಲ್ಲೆಯ ನಾ-ಮತಿ ಗ್ರಾಮದ ಬಿದಿರಿನ ಬುಟ್ಟಿ ತಯಾರಕರಾದ ಮಜೀದಾ ಬೇಗಂ ಹೇಳುತ್ತಾರೆ.
ಈ 25 ವರ್ಷದ ಕುಶಲಕರ್ಮಿ ಒಂಟಿ ತಾಯಿಯಾಗಿದ್ದು, ತನ್ನ 10 ವರ್ಷದ ಮಗ ಮತ್ತು ಅನಾರೋಗ್ಯದಿಂದ ಬಳಲುತ್ತಿರುವ ತಾಯಿಯನ್ನು ದಿನಗೂಲಿ ಕಾರ್ಮಿಕರಾಗಿ ದುಡಿದು ಪೋಷಿಸುತ್ತಿದ್ದಾರೆ. "ದಿನಕ್ಕೆ 40 ಖಾಸಾಗಳನ್ನು [ಬುಟ್ಟಿಗಳನ್ನು] ತಯಾರಿಸಬಲ್ಲೆ, ಆದರೆ ಈಗ ಕೇವಲ 20 ಖಾಸಾಗಳನ್ನು ಮಾತ್ರ ನೇಯುತ್ತೇನೆ" ಎಂದು ಅವರು ಸ್ಥಳೀಯ ಮಿಯಾ ಉಪಭಾಷೆಯಲ್ಲಿ ಹೇಳುತ್ತಾರೆ. ಮಜೀದಾ ಅವರು ತಾನು ನೇಯ್ಗೆ ಮಾಡುವ ಪ್ರತಿ 20 ಬುಟ್ಟಿಗಳಿಗೆ 160 ರೂ.ಗಳನ್ನು ಗಳಿಸುತ್ತಾರೆ. ಇದು ನಿಗದಿತ ಉದ್ಯೋಗಕ್ಕಾಗಿ ರಾಜ್ಯ ನಿಗದಿಪಡಿಸಿರುವ ಕನಿಷ್ಠ ವೇತನ 241.92 ರೂಪಾಯಿಗಳಿಗಿಂತ ಕಡಿಮೆ ( 2016ರ ಕನಿಷ್ಠ ವೇತನ ಕಾಯ್ದೆ, 1948ರ ವರದಿ ).
ಬಿದಿರು ಬೆಲೆಯೇರಿಕೆ ಮತ್ತು ಇಲ್ಲಿನ ತರಕಾರಿ ಮಂಡಿಗಳಲ್ಲಿ ಬುಟ್ಟಿಗಳಿಗೆ ಬೇಡಿಕೆ ಕುಸಿಯುತ್ತಿರುವುದು ಬಿದಿರಿನ ಬುಟ್ಟಿಗಳ ಮಾರಾಟದಿಂದ ಬರುವ ಆದಾಯದ ಮೇಲೆ ಪರಿಣಾಮ ಬೀರಿದೆ. ದರ್ರಾಂಗ್ ಅಸ್ಸಾಂನ ಎರಡು ದೊಡ್ಡ ಮಂಡಿಗಳನ್ನು ಹೊಂದಿದೆ: ಬೆಚಿಮರಿ ಮತ್ತು ಬಲುಗಾಂವ್. ಕೃಷಿ ಉತ್ಪನ್ನಗಳನ್ನು ಅತ್ತ ಈಶಾನ್ಯ ಭಾಗಗಳಿಗೆ ಮತ್ತು ಇತ್ತ ದೆಹಲಿಯವರೆಗೆ ಸರಬರಾಜು ಮಾಡಲಾಗುತ್ತದೆ.
ಮಜೀದಾ ಅವರ ಗುಳೇ ಹೋಗಬೇಕಾಗಿ ಬರುವ ಆತಂಕ ಸುಮ್ಮನೆ ಹುಟ್ಟಿದ್ದಲ್ಲ. ಇಲ್ಲಿನ ಸುಮಾರು 80ರಿಂದ 100 ಕುಟುಂಬಗಳು ಈಗಾಗಲೇ "ಉತ್ತಮ ಕೆಲಸ"ವನ್ನು ಹುಡುಕಿಕೊಂಡು ದೂರದ ಊರುಗಳಿಗೆ ಹೋಗಿವೆ ಎಂದು ಸ್ಥಳೀಯ ಮದರಸಾದ ಬಳಿಯ ವಾರ್ಡ್ ಎ ಸುತ್ತಲೂ ತೋರಿಸುತ್ತಾ 39 ವರ್ಷದ ಹನೀಫ್ ಅಲಿ ಹೇಳುತ್ತಾರೆ. ಒಂದು ಕಾಲದಲ್ಲಿ ಈ ಊರಿನ ಸರಿಸುಮಾರು 150 ಕುಟುಂಬಗಳು ಬಿದಿರಿನ ಕೆಲಸ ಮಾಡುತ್ತಿದ್ದವು. ಆದರೆ ಈಗ, ಆ ಕುಶಲಕರ್ಮಿಗಳು ಕಾಫಿ ತೋಟಗಳಲ್ಲಿ ಕೆಲಸ ಮಾಡಲು ಕೇರಳ ಮತ್ತು ಕರ್ನಾಟಕದಂತಹ ಇತರ ರಾಜ್ಯಗಳಿಗೆ ವಲಸೆ ಹೋಗಿರುವುದರಿಂದ ಅನೇಕ ಮನೆಗಳು ಖಾಲಿಯಾಗಿವೆ.


ಎಡಕ್ಕೆ: ಅಸ್ಸಾಂನ ದರ್ರಾಂಗ್ ಜಿಲ್ಲೆಯ ನಾ-ಮತಿ ಗ್ರಾಮದ ಮಜೀದಾ ಬೇಗಂ ಬಿದಿರು ಬುಟ್ಟಿ ನೇಕಾರರಾಗಿದ್ದು, ದಿನಕ್ಕೆ 40 ಬುಟ್ಟಿಗಳನ್ನು ತಯಾರಿಸಬಲ್ಲರು ಆದರೆ ಈಗ ಬೇಡಿಕೆ ಕಡಿಮೆಯಾಗುತ್ತಿರುವುದರಿಂದ ಅದರಲ್ಲಿ ಅರ್ಧದಷ್ಟು ತಯಾರಿಸುತ್ತಾರೆ. ಬಲ: ನೇಯ್ಗೆ ಪ್ರಕ್ರಿಯೆಯ ಮೊದಲ ಹೆಜ್ಜೆಯಾದ ಟೋಲಿ ಅಥವಾ ಬುಟ್ಟಿಗಳ ತಳ ಭಾಗವನ್ನು ತಯಾರಿಸುವ ಪ್ರಕ್ರಿಯೆಯನ್ನು ಹನೀಫ್ ಅಲಿ ಪ್ರದರ್ಶಿಸುತ್ತಿದ್ದಾರೆ


ಎಡ: ತಮ್ಮ ಕುಟುಂಬದ ಬಿದಿರಿನ ಬುಟ್ಟಿ ವ್ಯವಹಾರವನ್ನು ನಡೆಸುತ್ತಿರುವ ಸಿರಾಜ್ ಅಲಿ, ಸರಕುಗಳ ಬೇಡಿಕೆ ಕುಸಿಯಲು ಪ್ಲಾಸ್ಟಿಕ್ ಕಂಟೈನರುಗಳು ಕಾರಣ ಎಂದು ಹೇಳುತ್ತಾರೆ. ಬಲ: ಜಮೀಲಾ ಖತುನ್ ಅವರ ಇಬ್ಬರು ಮಕ್ಕಳು ಹಳ್ಳಿಯಲ್ಲಿನ ಶಾಲೆಗೆ ಹೋಗುತ್ತಿರುವುದರಿಂದಾಗಿ ಅವರಿಗೆ ಇತರ ರಾಜ್ಯಗಳಿಗೆ ವಲಸೆ ಹೋಗಲು ಸಾಧ್ಯವಿಲ್ಲ
ಕೋವಿಡ್ - 19 ಲಾಕ್‌ಡೌನ್ ನಂತರ ವ್ಯವಹಾರ ತೀವ್ರವಾಗಿ ನೆಲಕಚ್ಚಿದೆ. "ಈ ಮೊದಲು, ಪ್ರತಿ ವಾರ 400ರಿಂದ 500 ಖಾಸಾಗಳನ್ನು ಮಾರಾಟ ಮಾಡುತ್ತಿದ್ದೆವು, ಆದರೆ ಈಗ 100ರಿಂದ 150 ಖಾಸಾಗಳನ್ನಷ್ಟೇ ಮಾರಲು ಸಾಧ್ಯವಾಗುತ್ತಿದೆ" ಎಂದು ಸಿರಾಜ್ ಅಲಿ ಹೇಳುತ್ತಾರೆ. 28 ವರ್ಷದ ಅವರು ತಮ್ಮ ಕುಟುಂಬದ ಬಿದಿರಿನ ಬುಟ್ಟಿಯ ವ್ಯವಹಾರವನ್ನು ನಡೆಸುತ್ತಿದ್ದಾರೆ. “ಸಾಂಕ್ರಾಮಿಕ ಪಿಡುಗಿನ ಸಮಯದಲ್ಲಿ ತರಕಾರಿ ವ್ಯಾಪಾರಿಗಳು ತಮ್ಮ ಉತ್ಪನ್ನಗಳನ್ನು ಪ್ಯಾಕ್ ಮಾಡಲು ಮತ್ತು ಸಂಗ್ರಹಿಸಲು ಪ್ಲಾಸ್ಟಿಕ್ ಟ್ರೇಗಳು ಮತ್ತು ಚೀಲಗಳನ್ನು ಬಳಸಲು ಪ್ರಾರಂಭಿಸಿದರು. ಆ ಸಮಯದಲ್ಲಿ ನಮಗೆ ಟುಕ್ರಿಗಳನ್ನು [ಸಣ್ಣ ಬಿದಿರಿನ ಬುಟ್ಟಿಗಳನ್ನು] ಮಾರಾಟ ಮಾಡಲು ಸಾಧ್ಯವಾಗಲಿಲ್ಲ" ಎಂದು ಹೇಳುತ್ತಾರೆ.
ಸಿರಾಜ್ ತನ್ನ ಐದು ಸದಸ್ಯರ ಕುಟುಂಬದೊಂದಿಗೆ ವಾರ್ಡ್ ಎ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. "ನಾವೆಲ್ಲರೂ ಕೆಲಸ ಮಾಡುತ್ತಿದ್ದರೂ, ವಾರಕ್ಕೆ ಕೇವಲ 3,000-4,000 ರೂಪಾಯಿಗಳನ್ನಷ್ಟೇ ಗಳಿಸಲು ಸಾಧ್ಯವಾಗುತ್ತಿದೆ" ಎಂದು ಅವರು ಹೇಳುತ್ತಾರೆ. "ಕಾರ್ಮಿಕರ ಕೂಲಿ ಮತ್ತು ಬಿದಿರನ್ನು ಸಂಗ್ರಹಿಸಲು ಮಾಡಿದ ಖರ್ಚುಗಳನ್ನು ಕಳೆದ ನಂತರ, ನನ್ನ ಕುಟುಂಬದ ಗಳಿಕೆಯು ದಿನಕ್ಕೆ 250-300 ರೂ.ಗೆ ಇಳಿಯುತ್ತದೆ." ಇದರ ಪರಿಣಾಮವಾಗಿ, ಅವರ ವಿಸ್ತೃತ ಕುಟುಂಬದ ಅನೇಕ ಸದಸ್ಯರು ಕಾಫಿ ಎಸ್ಟೇಟುಗಳಲ್ಲಿ ಕೆಲಸ ಮಾಡಲು ಕರ್ನಾಟಕಕ್ಕೆ ವಲಸೆ ಹೋಗಿದ್ದಾರೆ. "ಪರಿಸ್ಥಿತಿ ಇದೇ ರೀತಿ ಮುಂದುವರಿದರೆ, ನಾನೂ ಹೋಗಬೇಕಾಗುತ್ತದೆ" ಎಂದು ಅವರು ಹೇಳುತ್ತಾರೆ.
ಹಾಗೆಂದು ಎಲ್ಲರೂ ಹೊರಡಲು ಸಾಧ್ಯವಿಲ್ಲ. "ನನ್ನ ಇಬ್ಬರು ಮಕ್ಕಳು ಇಲ್ಲಿ ಶಾಲೆಗೆ ಹೋಗುತ್ತಿರುವುದರಿಂದ ಕೇರಳಕ್ಕೆ [ವಲಸಿಗನಾಗಿ] ಹೋಗಲು ಸಾಧ್ಯವಿಲ್ಲ" ಎಂದು ಮತ್ತೊಬ್ಬ ಬುಟ್ಟಿ ನೇಯ್ಗೆಗಾರರಾದ 35 ವರ್ಷದ ಜಮೀಲಾ ಖತುನ್ ತನ್ನ ಮನೆಯಲ್ಲಿ ಕುಳಿತು ಹೇಳುತ್ತಾರೆ. ಹಳ್ಳಿಯ ಇತರ ಮನೆಗಳಂತೆ, ಅವರ ಮನೆಗೂ ಶೌಚಾಲಯ ಸೌಲಭ್ಯ ಅಥವಾ ಗ್ಯಾಸ್ ಸಿಲಿಂಡರ್ ಸಂಪರ್ಕವಿಲ್ಲ. "ನಮಗೆ ಖಾಸಗಿ ಶಾಲೆಗಳ ಫೀಸ್ ಭರಿಸಲು ಸಾಧ್ಯವಿಲ್ಲ. ಗುಳೇ ಹೋದರೆ, ಮಕ್ಕಳ ಶಿಕ್ಷಣವು ಹಾಳಾಗುತ್ತದೆ" ಎಂದು ನಾ-ಮತಿಯ ಈ ನಿವಾಸಿ ಹೇಳುತ್ತಾರೆ.
ಈ ಹಳ್ಳಿಯ ಹೆಚ್ಚಿನ ಬುಟ್ಟಿ ನೇಯುವವರು ಇಂದಿನ ಬಾಂಗ್ಲಾ ದೇಶದ ಮೈಮೆನ್ಸಿಂಗ್ ಎನ್ನುವಲ್ಲಿಂದ ವಲಸೆ ಬಂದವರ ವಂಶಸ್ಥರು. ಅವರು ವಸಾಹತುಶಾಹಿ ಆಳ್ವಿಕೆಯಲ್ಲಿ ಬಂಗಾಳ ಅವಿಭಜಿತವಾಗಿದ್ದಾಗ ತಮ್ಮ ಮನೆಗಳನ್ನು ತೊರೆದಿದ್ದರು. 'ಮಿಯಾ' ಎಂಬ ಪದ ಅಕ್ಷರಶಃ 'ಸಂಭಾವಿತ' ಎನ್ನುವ ಅರ್ಥವನ್ನು ಕೊಡುತ್ತದೆ. ಆದರೆ ಅಸ್ಸಾಮಿ ಜನಾಂಗೀಯ-ರಾಷ್ಟ್ರೀಯವಾದಿಗಳು ಬಾಂಗ್ಲಾ ಮಾತನಾಡುವ ಸಮುದಾಯವನ್ನು "ಅಕ್ರಮ ವಲಸಿಗರು" ಎಂದು ಕರೆಯಲು ಇದೇ ಮಿಯಾ ಎನ್ನುವ ಪದವನ್ನು ಬಳಸುತ್ತಾರೆ.


ಎಡ: ನಾ-ಮತಿ ಗ್ರಾಮವು ಬಿದಿರು ಬುಟ್ಟಿ ನೇಕಾರರ ಕೇಂದ್ರ, ಅವರಲ್ಲಿ ಹೆಚ್ಚಿನವರು ಮಿಯಾ ಸಮುದಾಯಕ್ಕೆ ಸೇರಿದವರು. ಬಲ: ಮಿಯಾರುದ್ದೀನ್ ಚಿಕ್ಕ ವಯಸ್ಸಿನಿಂದಲೂ ಬುಟ್ಟಿಗಳನ್ನು ನೇಯುತ್ತಿದ್ದಾರೆ. ಅವರು ಬಿದಿರಿನ ಬುಟ್ಟಿಗಳನ್ನು ಮಾರಾಟ ಮಾಡುವ ಮೂಲಕ ತಮ್ಮ ಐದು ಸದಸ್ಯರ ಕುಟುಂಬವನ್ನು ಪೋಷಿಸುತ್ತಿದ್ದಾರೆ


ತಳ (ಎಡ) ಬುಟ್ಟಿಯ ಗಾತ್ರವನ್ನು ನಿರ್ಧರಿಸುತ್ತದೆ. ತಳವನ್ನು ತಯಾರಿಸಿದ ನಂತರ, ಮಹಿಳೆಯರು ಅದರಲ್ಲಿ (ಬಲ) ತೆಳುವಾದ ಪಟ್ಟಿಗಳನ್ನು ನೇಯಲು ಪ್ರಾರಂಭಿಸುತ್ತಾರೆ
ಗುವಾಹಟಿಯಿಂದ ಸುಮಾರು 110 ಕಿಲೋಮೀಟರ್ ದೂರದಲ್ಲಿರುವ ನಾ-ಮತಿ ಗ್ರಾಮವು ದರ್ರಾಂಗ್ ಜಿಲ್ಲೆಯ ಬಿದಿರಿನ ಕರಕುಶಲ ವಸ್ತುಗಳ ಕೇಂದ್ರವಾಗಿದೆ, ಸಾಂಪ್ರದಾಯಿಕವಾಗಿ, ಸ್ಥಳೀಯವಾಗಿ ಖಾಸಾ ಎಂದು ಕರೆಯಲ್ಪಡುವ ಬಿದಿರಿನ ಬುಟ್ಟಿಗಳನ್ನು ಈ ಹಳ್ಳಿ ನೇಯುತ್ತದೆ. ಮಣ್ಣಿನ ರಸ್ತೆಗಳು ಮತ್ತು ಗಲ್ಲಿಗಳು ಸರಿಸುಮಾರು 50 ಕುಟುಂಬಗಳ ಎರಡು ವಿಭಾಗಗಳಿಗೆ ಕಾರಣವಾಗುತ್ತವೆ, ಅಲ್ಲಿ ಈ ಬಂಗಾಳಿ ಮಾತನಾಡುವ ಮುಸ್ಲಿಮರು ತಂಗ್ನಿ ನದಿಯ ಪ್ರವಾಹ ಬಯಲಿನಲ್ಲಿ ಒತ್ತೊತ್ತಾಗಿರುವ ಬಿದಿರು-ಹುಲ್ಲಿನ ಅಥವಾ ತಗಡಿನ ಗೋಡೆಯ ಮನೆಗಳು ಮತ್ತು ಕೆಲವು ಕಾಂಕ್ರೀಟ್ ಮನೆಗಳಲ್ಲಿ ವಾಸಿಸುತ್ತಿದ್ದಾರೆ.
ಈ ಪ್ರದೇಶದ ಹೆಸರು - ಖಾಸಪಟ್ಟಿ ಎಂದರೆ 'ಬಿದಿರಿನ ಬುಟ್ಟಿಯ ಊರು' ಎಂದರ್ಥ ಮತ್ತು ಇಲ್ಲಿನ ಹೆಚ್ಚಿನ ಮನೆಗಳೆದುರು ಬಿದಿರಿನ ಬುಟ್ಟಿಗಳ ರಾಶಿಯಿರುತ್ತದೆ. "ನಾನು ಹುಟ್ಟುವ ಮೊದಲಿನಿಂದಲೂ, ನಮ್ಮ ಪ್ರದೇಶದ ಜನರು ಲಾಲ್ಪೂಲ್, ಬೆಚಿಮರಿ ಮತ್ತು ಬಾಲುಗಾಂವ್ ಮಂಡಿಗಳ ದೈನಂದಿನ ಮತ್ತು ಸಾಪ್ತಾಹಿಕ ತರಕಾರಿ ಮಾರುಕಟ್ಟೆಗಳಿಗೆ ಬಿದಿರಿನ ಬುಟ್ಟಿಗಳನ್ನು ಪೂರೈಸುತ್ತಿದ್ದಾರೆ" ಎಂದು 30 ವರ್ಷದ ಮುರ್ಷಿದಾ ಬೇಗಂ ಹೇಳುತ್ತಾರೆ.
ಹನೀಫ್ ಅವರ ಕುಟುಂಬದ ಮೂರು ತಲೆಮಾರುಗಳು ಈ ವ್ಯಾಪಾರದಲ್ಲಿ ತೊಡಗಿವೆ. "ಖಾಸಾಪಟ್ಟಿ ಎಂದರೆ ಸಾಕು ನೀವು ಮಾತನಾಡುತ್ತಿರುವುದು ಈ ಹಳ್ಳಿಯ ಬಗ್ಗೆ ಎಂದು ಜನರಿಗೆ ತಿಳಿಯುತ್ತದೆ. ಇಲ್ಲಿ ಎಲ್ಲರೂ ಕರಕುಶಲಕರ್ಮಿಗಳಲ್ಲವಾದರೂ, ಮೊದಲ ತಲೆಮಾರಿನ ಖಾಸಾ ನೇಕಾರರು ತಮ್ಮ ಕೆಲಸವನ್ನು ಪ್ರಾರಂಭಿಸಿದ್ದು ಇಲ್ಲಿಯೇ."
ಬಿದಿರು ಕುಶಲಕರ್ಮಿಗಳ ನೋಂದಾಯಿತ ಸ್ವಸಹಾಯ ಗುಂಪು (ಎಸ್ಎಚ್‌ಜಿಚ್ಜಿ) ರಚಿಸಲು ಹನೀಫ್ ಪ್ರಯತ್ನಿಸುತ್ತಿದ್ದಾರೆ. "ಕಾರ್ಯಾಗಾರವನ್ನು ಸ್ಥಾಪಿಸಲು ಸರ್ಕಾರವು ನಮಗೆ ತಾಂತ್ರಿಕ ಮತ್ತು ಆರ್ಥಿಕ ಸಹಾಯವನ್ನು ನೀಡಿದರೆ, ಈ ಕರಕುಶಲ ಕಲೆ ಉಳಿಯುತ್ತದೆ" ಎಂದು ಅವರು ಆಶಿಸುತ್ತಾರೆ.
ಪ್ರಾಥಮಿಕವಾಗಿ ಈ ಕರಕುಶಲ ವೃತ್ತಿಯಲ್ಲಿ ತೊಡಗಿದ್ದ ಮುಸ್ಲಿಮರು ಭೂರಹಿತರಾಗಿದ್ದರು. ಹೀಗಾಗಿ ಅವರಿಗೆ ಕೃಷಿಯನ್ನು ಅಭ್ಯಾಸ ಮಾಡಲು ಸಾಧ್ಯವಿರಲಿಲ್ಲ. ಇದೇ ಕಾರಣಕ್ಕಾಗಿ ಅವರು ಈ ವೃತ್ತಿಯನ್ನು ಕೈಗೆತ್ತಿಕೊಂಡರು. "ಬಿದಿರಿನ ಬುಟ್ಟಿಗಳು ತರಕಾರಿ ವ್ಯಾಪಾರದ ಸರಪಳಿಯ ಅವಿಭಾಜ್ಯ ಅಂಗವಾಗಿದೆ, ಏಕೆಂದರೆ ಈ ಪ್ರದೇಶವು ಕೃಷಿಯನ್ನು ಅವಲಂಬಿಸಿದೆ" ಎಂದು ವಾರ್ಡ್ ಎ ಪ್ರದೇಶದ ಬುಟ್ಟಿ ನೇಕಾರ ಮತ್ತು ಸಾಮಾಜಿಕ ಕಾರ್ಯಕರ್ತ 61 ವರ್ಷದ ಅಬ್ದುಲ್ ಜಲೀಲ್ ಹೇಳುತ್ತಾರೆ.
"ಸ್ಥಳೀಯರಿಗೆ ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಗೆ ಕೊಂಡೊಯ್ಯಲು ಟುಕ್ರಿಗಳ ಅಗತ್ಯವಿತ್ತು ಮತ್ತು ಮಾರಾಟಗಾರರಿಗೆ ತರಕಾರಿಗಳನ್ನು ಸಾಗಿಸಲು ಪ್ಯಾಕ್ ಮಾಡಲು ಅವುಗಳ ಅಗತ್ಯವಿತ್ತು. ಹೀಗಾಗಿ, ನಾವು ಈ ಬುಟ್ಟಿಗಳನ್ನು ತಲೆಮಾರುಗಳಿಂದ ತಯಾರಿಸುತ್ತಿದ್ದೇವೆ" ಎಂದು ಅವರು ವಿವರಿಸುತ್ತಾರೆ.


ಎಡ: ಮುರ್ಷಿದಾ ಬೇಗಂ ಅವರ ಪ್ರದೇಶದ ಹಲವಾರು ಕುಟುಂಬಗಳು ಕರ್ನಾಟಕ ಮತ್ತು ಕೇರಳದಂತಹ ಇತರ ರಾಜ್ಯಗಳಿಗೆ ವಲಸೆ ಹೋಗಿವೆ. ಬಲ: ಬುಟ್ಟಿ ತಯಾರಕ ಮತ್ತು ಸಮಾಜ ಸೇವಕ ಅಬ್ದುಲ್ ಜಲೀಲ್ ಹೇಳುತ್ತಾರೆ, 'ನಾವು ಈ ಕೆಲಸಕ್ಕೆ ನಮ್ಮ ರಕ್ತ ಮತ್ತು ಬೆವರನ್ನು ಬಸಿಯುತ್ತೇವೆ, ಆದರೆ ನ್ಯಾಯಯುತ ಬೆಲೆ ಸಿಗುವುದಿಲ್ಲ'


ಎಡ: ಮುನ್ಸರ್ ಅಲಿ ಎರಡು ದಶಕಗಳಿಂದ ಬುಟ್ಟಿ ತಯಾರಕರಿಗೆ ಬಿದಿರನ್ನು ಮಾರಾಟ ಮಾಡುತ್ತಿದ್ದಾರೆ ಬಲ: ಮಾರಾಟದಲ್ಲಿನ ಕುಸಿತದಿಂದಾಗಿ ನೇಕಾರರ ಮನೆಯಲ್ಲಿ ಬುಟ್ಟಿಗಳು ರಾಶಿ ಬಿದ್ದಿವೆ
ಕಚ್ಚಾ ವಸ್ತುಗಳ ಸಂಗ್ರಹಕ್ಕೆ ಆಗುತ್ತಿರುವ ಖರ್ಚು ಕೂಡಾ ಬುಟ್ಟಿಯ ಬೆಲೆಯೇರಿಕೆಗೆ ಕಾರಣ ಎಂದು ಕಾರ್ಮಿಕರು ಹೇಳುತ್ತಾರೆ. ಚಪೋರಿ ಕ್ಲಸ್ಟರ್‌ಗೆ 43 ವರ್ಷದ ಬಿದಿರಿನ ಕುಶಲಕರ್ಮಿ ಅಫಾಜ್ ಉದ್ದೀನ್, 50 ರೂ.ಗಳ ಬೆಲೆಯ ಪ್ರತಿ ಬುಟ್ಟಿಗೆ ಬಿದಿರು, ದಾರ, ನೇಕಾರರಿಗೆ ಪಾವತಿಸುವುದು ಮತ್ತು ಸ್ಥಳೀಯ ಸಾರಿಗೆ ವೆಚ್ಚ ಸೇರಿದಂತೆ ಸುಮಾರು 40 ರೂ.ಗಳನ್ನು ಖರ್ಚು ಮಾಡಬೇಕಾಗುತ್ತದೆ ಎಂದು ಹೇಳುತ್ತಾರೆ.
ಮುನ್ಸರ್ ಅಲಿ ಎರಡು ದಶಕಗಳಿಂದ ವಿವಿಧ ಸ್ಥಳಗಳಿಂದ ಬಿದಿರನ್ನು ಖರೀದಿಸಿ ಬೆಚಿಮರಿ ಬಜಾರಿನಲ್ಲಿ ಮಾರಾಟ ಮಾಡುತ್ತಿದ್ದಾರೆ. ಈ ವ್ಯವಹಾರಕ್ಕೆ ಸಾರಿಗೆ ಮುಖ್ಯ ಅಡಚಣೆಯಾಗಿದೆ ಎಂದು 43 ವರ್ಷದ ಅವರು ಹೇಳುತ್ತಾರೆ. ಮೋಟಾರು ವಾಹನ (ತಿದ್ದುಪಡಿ) ಕಾಯ್ದೆ, 2019ರ ಪ್ರಕಾರ, ವಾಹನವನ್ನು ಓವರ್ ಲೋಡ್ ಮಾಡಿದರೆ 20,000 ರೂ., ಮತ್ತು ಪ್ರತಿ ಹೆಚ್ಚುವರಿ ಟನ್ ಲೋಡಿಗೆ 2,000 ರೂ. ದಂಡ ಕಟ್ಟಬೇಕಾಗುತ್ತದೆ.
ಆದಾಗ್ಯೂ, ಅಸ್ಸಾಂನ ಕರಕುಶಲ ನೀತಿ ( 2022 ) ಬಿದಿರನ್ನು ಪೂರೈಕೆ ಮಾಡುವ ಜವಾಬ್ದಾರಿ ರಾಜ್ಯ ಬಿದಿರು ಮಿಷನ್, ಅರಣ್ಯ ಇಲಾಖೆಯ ಇತರ ಏಜೆನ್ಸಿಗಳು ಮತ್ತು ಪಂಚಾಯತುಗಳ ಮೇಲಿದೆ ಎಂದು ಸೂಚಿಸುತ್ತದೆ.
ಬೆಲೆ ಏರಿಕೆ ಕಾರಣದಿಂದಾಗಿ ಮುನ್ಸರ್ ಅಲಿ ತನ್ನ ಪ್ರಮುಖ ಗ್ರಾಹಕರಾದ ಬಿದಿರಿನ ಬುಟ್ಟಿ ತಯಾರಕರನ್ನು ಕಳೆದುಕೊಂಡಿದ್ದಾರೆ. "ಅವರು ಪ್ರತಿ ಬಿದಿರು ಕೋಲನ್ನು 130-150 ರೂ.ಗಳಿಗೆ ಖರೀದಿಸಬೇಕು" ಎಂದು ಅವರು ಹೇಳುತ್ತಾರೆ. "ಅಷ್ಟು ಕೊಟ್ಟು ಖರೀದಿ ಅದನ್ನು ಅವರು 100 ರೂ.ಗಳಿಗೆ ಮಾರಾಟ ಮಾಡುವುದಾದರೆ ಅದರಿಂದ ಏನು ಪ್ರಯೋಜನ?"
*****
ಖಾಸಾಗಳನ್ನು ತಯಾರಿಸುವ ವಿಸ್ತಾರವಾದ ಪ್ರಕ್ರಿಯೆಯು ಬಿದಿರನ್ನು ಸಂಗ್ರಹಿಸುವುದರಿಂದ ಪ್ರಾರಂಭವಾಗುತ್ತದೆ ಎಂದು ಅಬ್ದುಲ್ ಜಲೀಲ್ ಹೇಳುತ್ತಾರೆ. "ಸುಮಾರು 20 ಅಥವಾ 30 ವರ್ಷಗಳ ಹಿಂದೆ, ನಾವು ಬಿದಿರು ಸಂಗ್ರಹಿಸಲು ದರ್ರಾಂಗ್ ಜಿಲ್ಲೆಯ ಹಳ್ಳಿಗಳಿಗೆ ಹೋಗುತ್ತಿದ್ದೆವು. ಆದರೆ ಬಿದಿರು ತೋಟಗಳಲ್ಲಿನ ಕುಸಿತದೊಂದಿಗೆ ಇಲ್ಲಿ ಬಿದಿರು ವಿರಳವಾಗುತ್ತಿದ್ದಂತೆ, ವ್ಯಾಪಾರಿಗಳು ಅದನ್ನು ಕರ್ಬಿ ಆಂಗ್ಲಾಂಗ್ ಮತ್ತು ಲಖಿಂಪುರ ಜಿಲ್ಲೆಗಳಂತಹ ವಿವಿಧ ಸ್ಥಳಗಳಿಂದ ಅಥವಾ ಅರುಣಾಚಲ ಪ್ರದೇಶ ಮತ್ತು ಇತರ ಗುಡ್ಡಗಾಡು ಪ್ರದೇಶಗಳಿಂದ ಪೂರೈಸಲು ಪ್ರಾರಂಭಿಸಿದರು.
ನಾ-ಮತಿಯ ಅನೇಕ ಕುಟುಂಬಗಳು ಬಿದಿರು ಕರಕುಶಲ ಕೆಲಸದಲ್ಲಿ ತೊಡಗಿದ್ದವು. ಈಗ ಅವರೆಲ್ಲ ಕಾಫಿ ತೋಟಗಳಲ್ಲಿ ಕೆಲಸ ಮಾಡಲು ಕೇರಳ ಮತ್ತು ಕರ್ನಾಟಕಕ್ಕೆ ವಲಸೆ ಹೋಗಿರುವುದರಿಂದಾಗಿ ಮನೆಗಳು ಖಾಲಿ ಬಿದ್ದಿವೆ
ಬಿದಿರನ್ನು ನೇಯ್ಗೆಯವರ ಮನೆಗೆ ತಂದ ನಂತರ, ಕುಟುಂಬದ ಪುರುಷರು ಬುಟ್ಟಿಯ ತಳವನ್ನು ತಯಾರಿಸಲು 3.5 ಅಡಿಯಿಂದ 4.5 ಅಡಿಗಳವರೆಗಿನ ವಿವಿಧ ಗಾತ್ರದ ಬೀಟಿಗಳನ್ನು (ಪಟ್ಟಿಗಳು) ಕೆಳಭಾಗದಿಂದ ಕತ್ತರಿಸುತ್ತಾರೆ. ಸಂಪರ್ಕಿಸುವ ಎಳೆಗಳನ್ನು ತಯಾರಿಸಲು ಎಂಟು, 12 ಅಥವಾ 16 ಅಡಿಗಳ ಪಟ್ಟಿಗಳನ್ನು ಮಧ್ಯದಿಂದ ಕತ್ತರಿಸಲಾಗುತ್ತದೆ ಮತ್ತು ಬುಟ್ಟಿಯ ಮೇಲ್ಭಾಗವನ್ನು ಪೂರ್ಣಗೊಳಿಸಲು ಬೇಕಾಗುವ ಪಟ್ಟಿಗಳನ್ನು ತಯಾರಿಸಲು ಮೇಲಿನ ಕುಲ್ಮ್ ಅನ್ನು ಬಳಸಲಾಗುತ್ತದೆ.
ತುಲನಾತ್ಮಕವಾಗಿ ದಪ್ಪವಾದ ಪಟ್ಟಿಗಳನ್ನು ಬುಟ್ಟಿಯ ಟೋಲಿ (ಬೇಸ್ ಅಥವಾ ಫ್ರೇಮ್) ತಯಾರಿಸಲು ಬಳಸಲಾಗುತ್ತದೆ. "ಟೋಲಿ ಬುಟ್ಟಿಯ ಗಾತ್ರವನ್ನು ವ್ಯಾಖ್ಯಾನಿಸುತ್ತದೆ. ತಳವನ್ನು ತಯಾರಿಸಿದ ನಂತರ, ಮಹಿಳೆಯರು ಮತ್ತು ಮಕ್ಕಳು ಮಧ್ಯದಿಂದ ತಿರುಗಿಸುವ ಮೂಲಕ ತೆಳುವಾದ ಪಟ್ಟಿಗಳನ್ನು ನೇಯುತ್ತಾರೆ. ಈ ಪಟ್ಟಿಗಳನ್ನು ಪೆಚ್ನಿ ಬೀಟಿ ಎಂದು ಕರೆಯಲಾಗುತ್ತದೆ" ಎಂದು ಜಲೀಲ್ ವಿವರಿಸುತ್ತಾರೆ.
"ಮೇಲ್ಭಾಗದಲ್ಲಿ, ನೇಯ್ಗೆ ಪ್ರಕ್ರಿಯೆಯನ್ನು ಕೊನೆಗೊಳಿಸಲು ಎರಡು ಅಥವಾ ಮೂರು ಸುತ್ತು ಬಲವಾದ ಪಟ್ಟಿಗಳನ್ನು ಬಳಸಲಾಗುತ್ತದೆ, ಇದನ್ನು ನಾವು ಪೆಚ್ನಿ ಎಂದು ಕರೆಯುತ್ತೇವೆ. ಬುಟ್ಟಿಯನ್ನು ಮುಗಿಸಲು, ತಳದ ಉಳಿದ ತುದಿಗಳನ್ನು ಒಡೆದು ನೇಯ್ದ ಬಿದಿರಿನ ದಾರಗಳಲ್ಲಿ ಸೇರಿಸಲಾಗುತ್ತದೆ. ನಾವು ಈ ಪ್ರಕ್ರಿಯೆಯನ್ನು ಮುರಿ ಭಂಗಾ ಎಂದು ಕರೆಯುತ್ತೇವೆ" ಎಂದು ಅವರು ಹೇಳುತ್ತಾರೆ.
ಇಡೀ ಪ್ರಕ್ರಿಯೆಯನ್ನು ಕೈಗಳಿಂದಲೇ ಮಾಡಲಾಗುತ್ತದೆ ಎಂದು ಮುರ್ಷಿದಾ ಹೇಳುತ್ತಾರೆ: "ಬಿದಿರನ್ನು ಅಗತ್ಯವಿರುವ ಗಾತ್ರಗಳಲ್ಲಿ ಕತ್ತರಿಸಲು, ನಾವು ಕೈ ಗರಗಸ ಬಳಸುತ್ತೇವೆ. ಬಿದಿರಿನ ಕಾಂಡಗಳನ್ನು ಕತ್ತರಿಸಲು ಕುರ್ಹೈಲ್ [ಕೊಡಲಿ] ಅಥವಾ ದಾವೋ [ಮಚ್ಚು] ಬಳಸುತ್ತೇವೆ. ಬಿದಿರಿನ ದಾರಗಳನ್ನು ತಯಾರಿಸಲು, ತುಂಬಾ ಚೂಪಾದ ಮಚ್ಚುಗಳನ್ನು ಬಳಸುತ್ತೇವೆ. ಬುಟ್ಟಿಗಳ ಮೇಲಿನ ತುದಿಗಳನ್ನು ಬಂಧಿಸಲು, ಟೋಲಿರ್ ಬೀಟಿಯ ಉಳಿದ ತುದಿಗಳನ್ನು ಪೆಚ್ನಿ ಬೀಟಿಗೆ ಸೇರಿಸಲು ಬಟಾಲಿ [ಉಳಿ] ತರಹದ ಸಾಧನವನ್ನು ಬಳಸುತ್ತೇವೆ."
ಮುರಿ ಭಂಗಾ ಮತ್ತು ಟೋಲಿ ಭಂಗಾ ಪ್ರಕ್ರಿಯೆಯನ್ನು ಹೊರತುಪಡಿಸಿ, ಒಂದು ಬುಟ್ಟಿಯನ್ನು ನೇಯ್ಗೆ ಮಾಡಲು ಸುಮಾರು 20ರಿಂದ 25 ನಿಮಿಷಗಳನ್ನು ಹಿಡಿಯುತ್ತದೆ. ವಾರದ ಸಂತೆಯ ಹಿಂದಿನ ದಿನ, ಮಹಿಳೆಯರು ಕೆಲವೊಮ್ಮೆ ಸಾಧ್ಯವಾದಷ್ಟು ಬುಟ್ಟಿಗಳನ್ನು ತಯಾರಿಸಲು ರಾತ್ರಿಯವರೆಗೂ ಕೆಲಸ ಮಾಡುತ್ತಾರೆ. ಈ ಕೆಲಸವು ಅವರ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
"ನಮಗೆ ಬೆನ್ನು ನೋವು, ಕೈಗಳಲ್ಲಿ ಕಆಣಿಯಾಗುವುದು, ಬಿದಿರಿನ ಚೂಪಾದ ಭಾಗಗಳಿಂದ ಚುಚ್ಚುವುದು ಇವೆಲ್ಲ ಆಗುತ್ತಿರುತ್ತದೆ" ಎಂದು ಮುರ್ಷಿದಾ ಹೇಳುತ್ತಾರೆ. "ಕೆಲವೊಮ್ಮೆ ಸೂಜಿಯಂತಹ ಬಿದಿರಿನ ತುಂಡುಗಳು ನಮ್ಮ ಚರ್ಮಕ್ಕೆ ಚುಚ್ಚುತ್ತವೆ, ಇದು ತೀವ್ರ ನೋವನ್ನು ಉಂಟುಮಾಡುತ್ತದೆ. ವಾರದ ಸಂತೆಗೂ ಮುಂಚಿತವಾಗಿ, ನಾವು ತಡರಾತ್ರಿಯವರೆಗೆ ಕೆಲಸ ಮಾಡುತ್ತೇವೆ ಮತ್ತು ಮರುದಿನ, ಅಸಾಧ್ಯ ನೋವಿನಿಂದಾಗಿ ನಿದ್ರೆ ಮಾಡಲು ಸಾಧ್ಯವಾಗುವುದಿಲ್ಲ."
ಈ ವರದಿಯನ್ನು ಮೃಣಾಲಿನಿ ಮುಖರ್ಜಿ ಫೌಂಡೇಶನ್ (ಎಂಎಂಎಫ್) ನ ಫೆಲೋಶಿಪ್ ಅಡಿಯಲ್ಲಿ ತಯಾರಿಸಲಾಗಿದೆ.
ಅನುವಾದ: ಶಂಕರ. ಎನ್. ಕೆಂಚನೂರು