ತೂಫಾನಿಯವರು ತಮ್ಮ ನೇಕಾರರ ತಂಡದ ಜೊತೆಗೆ ಬೆಳಗ್ಗೆ ಆರೂವರೆಯಿಂದ ಕೆಲಸ ಮಾಡುತ್ತಿದ್ದಾರೆ. ದಿನಕ್ಕೆ 12 ಇಂಚುಗಳಷ್ಟು ಹೆಣೆಯುವ ಈ ನಾಲ್ವರು, ತಾವು ಕೆಲಸ ಮಾಡುತ್ತಿರುವ 23x6 ಅಡಿಯ ಗಲಿಚಾ (ಕಾರ್ಪೆಟ್) ಮುಗಿಸಲು 40 ದಿನಗಳನ್ನು ತೆಗೆದುಕೊಳ್ಳುತ್ತಾರೆ.
ಮಧ್ಯಾಹ್ನ ಒಂದೂವರೆಯ ಹೊತ್ತಿಗೆ, ತೂಫಾನಿ ಬಿಂದ್‌ರವರು ಉತ್ತರ ಪ್ರದೇಶದ ಪುರ್ಜಗೀರ್ ಮುಜೆಹರಾ ಗ್ರಾಮದಲ್ಲಿರುವ ತಗಡಿನಿಂದ ಮಾಡಲಾಗಿರುವ ತಮ್ಮ ವರ್ಕ್‌ಶಾಪ್‌ನಲ್ಲಿರುವ ಮರದ ಬೆಂಚಿನ ಮೇಲೆ ವಿಶ್ರಾಂತಿ ಪಡೆಯುತ್ತಾರೆ. ಅವರ ಹಿಂದೆ ಮರದ ಚೌಕಟ್ಟಿನಿಂದ ಬಿಳಿ ಹತ್ತಿಯ ಎಳೆಗಳು ನೇತಾಡುತ್ತಿವೆ. ಈ ಪ್ರದೇಶ ರಾಜ್ಯದ ಕಾರ್ಪೆಟ್ ನೇಯ್ಗೆ ಉದ್ಯಮದ ಹೃದಯಭಾಗ. ಈ ಕಲೆಯನ್ನು ಮೊಘಲರು ಮಿರ್ಜಾಪುರಕ್ಕೆ ಪರಿಚಯಿಸಿದರು ಮತ್ತು ಬ್ರಿಟೀಷರು ಇದರ ಕೈಗಾರಿಕೆಯನ್ನು ಆರಂಭಿಸಿದರು. ಹೊದಿಕೆಗಳು, ಮ್ಯಾಟ್‌ಗಳು ಮತ್ತು ಕಾರ್ಪೆಟ್‌ಗಳ ಉತ್ಪಾದನೆಯಲ್ಲಿ ಯುಪಿ ಪ್ರಾಬಲ್ಯವನ್ನು ಪಡೆದಿದೆ. ರಾಷ್ಟ್ರೀಯ ಉತ್ಪಾದನೆಯ ಅರ್ಧದಷ್ಟನ್ನು (ಶೇ. 47) ಯುಪಿ ಉತ್ಪಾದಿಸುತ್ತದೆ ಎಂದು 2020 ರ ಅಖಿಲ ಭಾರತ ಕೈಮಗ್ಗ ಜನಗಣತಿ ಹೇಳುತ್ತದೆ.
ಮಿರ್ಜಾಪುರ ನಗರದ ಹೆದ್ದಾರಿಯಿಂದ ಇಳಿಯುತ್ತಿದ್ದಂತೆ ಪುರ್ಜಗೀರ್ ಮುಜೆಹರಾ ಗ್ರಾಮಕ್ಕೆ ಹೋಗುವ ರಸ್ತೆ ಕಿರಿದಾಗುತ್ತಾ ಹೋಗುತ್ತದೆ. ರಸ್ತೆಯ ಎರಡೂ ಬದಿಯಲ್ಲಿ ಹೆಚ್ಚಾಗಿ ಒಂದು ಅಂತಸ್ತಿನ ಪಕ್ಕಾ ಮನೆಗಳಿವೆ, ಹಾಗೆಯೇ ಹುಲ್ಲು ಹಾಸಿದ ಛಾವಣಿಯ ಕಚ್ಚಾ ಮನೆಗಳಿವೆ. ಬೆರಣಿ ಸುಟ್ಟ ಹೊಗೆ ಗಾಳಿಯಲ್ಲಿ ಮೇಲೇರುತ್ತಿದೆ. ಹಗಲಿನಲ್ಲಿ ಪುರುಷರು ಹೊರಗಡೆ ಅಷ್ಟೇನೂ ಕಾಣಿಸಿಕೊಳ್ಳುವುದಿಲ್ಲ, ಆದರೆ ಮಹಿಳೆಯರು ಕೈ ಪಂಪ್ ಬಳಿ ಬಟ್ಟೆ ಒಗೆಯುವುದು, ತರಕಾರಿ ಅಥವಾ ಫ್ಯಾಷನ್ ವಸ್ತುಗಳನ್ನು ಮಾರುವ ಸ್ಥಳೀಯ ಮಾರಾಟಗಾರರೊಂದಿಗೆ ಮಾತನಾಡುವುದು ಮುಂತಾದ ಮನೆಗೆಲಸಗಳನ್ನು ಮಾಡುವುದನ್ನು ನೋಡಬಹುದು.
ಈ ಪ್ರದೇಶದಲ್ಲಿ ನೇಕಾರರು ವಾಸಿಸುವ ಯಾವುದೇ ಲಕ್ಷಣಗಳಿಲ್ಲ. ಸ್ಥಳೀಯರು ಗಲಿಚಾ ಎಂದು ಕರೆಯುವ ಕಾರ್ಪೆಟ್‌ಗಳನ್ನು ತೂಗು ಹಾಕುವುದನ್ನು ಅಥವಾ ಹೊರಗೆ ಜೋಡಿಸಿರುವುದನ್ನು ನೋಡಲು ಸಾಧ್ಯವಿಲ್ಲ. ಮನೆಗಳು ಕಾರ್ಪೆಟ್ ನೇಯ್ಗೆಯ ಕೆಲಸಕ್ಕಾಗಿ ಪ್ರತ್ಯೇಕ ಸ್ಥಳ ಅಥವಾ ಕೊಠಡಿಯನ್ನು ಹೊಂದಿದ್ದರೂ, ಅವು ಒಮ್ಮೆ ಸಿದ್ಧವಾದ ಮೇಲೆ ಮಧ್ಯವರ್ತಿಗಳು ಅವನ್ನು ತೊಳೆಯಲು ಮತ್ತು ಸ್ವಚ್ಛ ಮಾಡಲು ತೆಗೆದುಕೊಂಡು ಹೋಗುತ್ತಾರೆ.
ವಿರಾಮದ ಸಮಯದಲ್ಲಿ ಪರಿಯೊಂದಿಗೆ ಮಾತನಾಡುತ್ತಾ, ತೂಫಾನಿಯವರು, "ನಾನು ಇದನ್ನು [ಹೆಣೆಯುವ ಕೆಲಸ] ನನ್ನ ತಂದೆಯಿಂದ ಕಲಿತೆ. ನನ್ನ 12-13 ವರ್ಷ ವಯಸ್ಸಿನಿಂದಲೂ ಇದನ್ನು ಮಾಡುತ್ತಿದ್ದೇನೆ," ಎಂದು ಹೇಳುತ್ತಾರೆ. ಅವರ ಕುಟುಂಬವು ಬಿಂದ್ ಸಮುದಾಯಕ್ಕೆ ಸೇರಿದೆ (ರಾಜ್ಯದಲ್ಲಿ ಇತರೆ ಹಿಂದುಳಿದ ವರ್ಗ ಎಂದು ಪರಿಗಣಿಸಲಾಗಿದೆ). ಯುಪಿಯ ಹೆಚ್ಚಿನ ನೇಕಾರರು ಒಬಿಸಿ ಅಡಿಯಲ್ಲಿ ಬರುತ್ತಾರೆ ಎಂದು ಜನಗಣತಿ ಹೇಳುತ್ತದೆ.

ಪುರ್ಜಗೀರ್ ಮುಜೆಹರಾ ಗ್ರಾಮದ ನೇಕಾರ ತೂಫಾನಿ ಬಿಂದ್ ಅವರು ಮಗ್ಗದ ಮುಂದೆ ಇರುವ ಪಾಟಾ (ಮರದ ಬೆಂಚ್) ಮೇಲೆ ಕುಳಿತಿದ್ದಾರೆ


ಎಡ: ಕಾರ್ಪೆಟ್ ವರ್ಕ್‌ಶಾಪ್ ಒಳಗೆ ಕೋಣೆಯ ಎರಡೂ ಬದಿಗಳಲ್ಲಿ ತೋಡಿದ ಗುಂಡಿಗಳಲ್ಲಿ ಮಗ್ಗವನ್ನು ಇರಿಸಲಾಗಿದೆ. ಬಲ: ಪುರ್ಜಗೀರ್ ಗ್ರಾಮದ ಈ ವರ್ಕ್‌ಶಾಪ್‌ಗಳನ್ನು ಇಟ್ಟಿಗೆ ಮತ್ತು ಮಣ್ಣಿನಿಂದ ನಿರ್ಮಿಸಲಾಗಿದೆ
ಅವರ ಮನೆಯಲ್ಲಿರುವ ವರ್ಕ್‌ಶಾಪ್ ಮಣ್ಣಿನ ನೆಲದ ಇಕ್ಕಟ್ಟಾದ ಜಾಗ. ಇರುವ ಒಂದು ಕಿಟಕಿ ಮತ್ತು ಒಂದು ಬಾಗಿಲನ್ನು ಗಾಳಿಯಾಡಲು ತೆರೆದಿಡಲಾಗಿದೆ. ಇಡೀ ಸ್ಥಳದಲ್ಲಿ ಹೆಚ್ಚಿನ ಭಾಗವನ್ನು ಮಗ್ಗವು ಆವರಿಸಿದೆ. ತೂಫಾನಿಯವರ ವರ್ಕ್‌ಶಾಪ್‌ನಂತೆ ಕೆಲವು ವರ್ಕ್‌ಶಾಪ್‌ಗಳು ಉದ್ದ ಮತ್ತು ಕಿರಿದಾದ ಕಬ್ಬಿಣದ ಮಗ್ಗವನ್ನು ಹೊಂದಿದ್ದು, ಅಲ್ಲಿ ಅನೇಕ ನೇಕಾರರು ಏಕಕಾಲದಲ್ಲಿ ಕೆಲಸ ಮಾಡಬಹುದು. ಉಳಿದವರು ಮನೆಯೊಳಗೆ ಇದ್ದು, ಕಬ್ಬಿಣ ಅಥವಾ ಮರದ ರಾಡ್ ಮೇಲೆ ಜೋಡಿಸಲಾಗಿರುವ ಸಣ್ಣ ಗಾತ್ರದ ಮಗ್ಗವನ್ನು ಬಳಸುತ್ತಾರೆ. ಇಡೀ ಕುಟುಂಬ ನೇಯ್ಗೆಯ ಕೆಲಸದಲ್ಲಿ ಕೈ ಜೋಡಿಸುತ್ತದೆ.
ತೂಫಾನಿಯವರು ಹತ್ತಿಯ ಚೌಕಟ್ಟಿನ ಮೇಲೆ ಉಣ್ಣೆಯ ಎಳೆಗಳ ಹೊಲಿಗೆಗಳನ್ನು ಹಾಕುತ್ತಿದ್ದಾರೆ. ಹೆಣೆದ (ಅಥವಾ ಟಪ್ಕಾ) ನೇಯ್ಗೆ ಎಂದು ಕರೆಯಲ್ಪಡುವ ಈ ತಂತ್ರದಲ್ಲಿ, ಕಾರ್ಪೆಟ್‌ನ ಪ್ರತಿ ಚದರ ಇಂಚುಗಳ ಹೊಲಿಗೆಗಳ ಸಂಖ್ಯೆಯನ್ನು ಟಪ್ಕಾ ಎಂದು ಹೇಳುತ್ತಾರೆ. ಕೈಯಿಂದಲೇ ಹೊಲಿಯಬೇಕಾದ ಕಾರಣ ಕುಶಲಕರ್ಮಿಗಳು ನೇಯ್ಗೆಯ ಇತರ ವಿಧಾನಗಳಿಗಿಂತ ಹೆಚ್ಚು ದೈಹಿಕ ಶ್ರಮವನ್ನು ಹಾಕಬೇಕು. ಇದನ್ನು ಮಾಡಲು, ದಂಬ್ (ಬಿದಿರಿನ ಮೀಟುಗೋಲು) ಅನ್ನು ಬಳಸಿಕೊಂಡು ಸಟ್ (ಹತ್ತಿ) ಚೌಕಟ್ಟನ್ನು ಹೊಂದಿಸಲು ತೂಫಾನಿಯವರು ಪ್ರತಿ ಕೆಲವು ನಿಮಿಷಗಳಿಗೊಮ್ಮೆ ಎದ್ದೇಳಬೇಕು. ನಿರಂತರವಾಗಿ ಕುಳಿತುಕೊಳ್ಳುವುದು ಮತ್ತು ಎದ್ದು ನಿಲ್ಲುವುದರಿಂದ ಇವರಿಗೆ ತ್ರಾಸವಾಗುತ್ತದೆ.
ಹೆಣೆದ ನೇಯ್ಗೆಗಿಂತ ಭಿನ್ನವಾಗಿ ಕಾರ್ಪೆಟ್‌ಗಳನ್ನು ತಯಾರಿಸುವ ಹೊಸ ಮಾದರಿಯಾಗಿರುವ ಟಫ್ಟೆಡ್ ನೇಯ್ಗೆಯಲ್ಲಿ ಕಸೂತಿ ಕೆಲಸಕ್ಕೆ ಹಸ್ತಚಾಲಿತ ಯಂತ್ರವನ್ನು ಬಳಸಲಾಗುತ್ತದೆ. ಹೆಣೆದು ಮಾಡುವ ನೇಯ್ಗೆಯ ಕೆಲಸ ಕಠಿಣ, ಕೂಲಿಯೂ ಕಡಿಮೆ. ಆದ್ದರಿಂದ ಕಳೆದ ಎರಡು ದಶಕಗಳಲ್ಲಿ ಅನೇಕ ನೇಕಾರರು ಹೆಣಿಕೆಯ ಕೆಲಸ ಬಿಟ್ಟು ಟಫ್ಟ್ ಕೆಲಸ ಮಾಡಲು ಶುರು ಮಾಡಿದ್ದಾರೆ. ಅನೇಕರು ಇಡೀ ಉದ್ಯೋಗವನ್ನೇ ಬಿಟ್ಟಿದ್ದಾರೆ. ಅದರಲ್ಲಿ ದಿನಕ್ಕೆ ಸಿಗುವ 200-350 ರುಪಾಯಿ ಗಳಿಕೆ ಸಾಕಾಗುವುದಿಲ್ಲ. ಮೇ 2024 ರಲ್ಲಿ, ರಾಜ್ಯದ ಕಾರ್ಮಿಕ ಇಲಾಖೆಯು ಅರೆ-ಕುಶಲ ಕಾರ್ಮಿಕರಿಗೆ ದಿನಕ್ಕೆ 451 ರುಪಾಯಿ ಸಂಬಳವನ್ನು ಘೋಷಿಸಿತ್ತು , ಆದರೆ ಅಷ್ಟು ಪಗಾರ ಕೊಡುತ್ತಿಲ್ಲ ಎನ್ನುತ್ತಾರೆ ಇಲ್ಲಿನ ನೇಕಾರರು.
ಪುರ್ಜಗೀರ್ ನೇಕಾರರೂ ಪೈಪೋಟಿಯನ್ನು ಎದುರಿಸುತ್ತಿದ್ದಾರೆ ಎಂದು ಮಿರ್ಜಾಪುರದ ಕೈಗಾರಿಕಾ ಇಲಾಖೆಯ ಉಪ ಆಯುಕ್ತ ಅಶೋಕ್ ಕುಮಾರ್ ಹೇಳುತ್ತಾರೆ. ಉತ್ತರ ಪ್ರದೇಶದ ಸೀತಾಪುರ, ಭದೋಹಿ ಮತ್ತು ಪಾಣಿಪತ್ ಜಿಲ್ಲೆಗಳಲ್ಲಿಯೂ ಕಾರ್ಪೆಟ್‌ಗಳನ್ನು ನೇಯಲಾಗುತ್ತದೆ. "ಬೇಡಿಕೆಯಲ್ಲಿನ ಕುಸಿತ ಪೂರೈಕೆಯ ಮೇಲೆ ಪರಿಣಾಮ ಬೀರಿದೆ," ಎಂದು ಅವರು ಹೇಳುತ್ತಾರೆ.
ಬೇರೆ ಸಮಸ್ಯೆಗಳೂ ಇದ್ದವು. 2000 ರ ದಶಕದ ಆರಂಭದಲ್ಲಿ, ಕಾರ್ಪೆಟ್ ಉದ್ಯಮದಲ್ಲಿ ಬಾಲ ಕಾರ್ಮಿಕರನ್ನು ಬಳಸಲಾಗುತ್ತಿದೆ ಎಂಬಂತ ಆರೋಪಗಳು ಈ ಉದ್ಯಮದ ಇಮೇಜನ್ನು ಕೆಡಿಸಿದವು. ಯುರೋ ತಯಾರಿತ ಟರ್ಕಿಯ ಯಂತ್ರ-ನಿರ್ಮಿತ ಕಾರ್ಪೆಟ್‌ಗಳಿಗೆ ಒಳ್ಳೆಯ ಬೆಲೆ ಬಂದ ಮೇಲೆ, ನಿಧಾನವಾಗಿ ಯುರೋಪಿಯನ್ ಮಾರುಕಟ್ಟೆಯನ್ನೂ ಕಳೆದುಕೊಳ್ಳಬೇಕಾಯ್ತು ಎಂದು ಮಿರ್ಜಾಪುರ ಮೂಲದ ರಫ್ತುದಾರ ಸಿದ್ಧನಾಥ್ ಸಿಂಗ್ ಹೇಳುತ್ತಾರೆ. ಹಿಂದೆ ಸರ್ಕಾರ ಕೊಡುತ್ತಿದ್ದ ಶೇಕಡಾ 10-20 ರ ಸಹಾಯಧನವನ್ನು ಶೇಕಡಾ 3-5 ಕ್ಕೆ ಇಳಿಸಲಾಗಿದೆ ಎಂದು ಅವರು ಹೇಳುತ್ತಾರೆ.
ಕಾರ್ಪೆಟ್ ರಫ್ತು ಉತ್ತೇಜನಾ ಮಂಡಳಿಯ (ಸಿಇಪಿಸಿ) ಮಾಜಿ ಅಧ್ಯಕ್ಷರಾಗಿರುವ ಸಿಂಗ್ ಅವರು, "10-12 ಗಂಟೆಗಳ ಕಾಲ ಕೆಲಸ ಮಾಡಿ ದಿನಕ್ಕೆ 350 [ರೂಪಾಯಿ] ಸಂಪಾದಿಸುವ ಬದಲು, ದಿನಕ್ಕೆ 550 ರುಪಾಯಿ ಸಂಬಳ ಸಿಗುವ ನಗರದಲ್ಲಿ ಏಕೆ ಕೆಲಸ ಮಾಡಬಾರದು," ಎಂದು ಹೇಳುತ್ತಾರೆ.


ಹತ್ತಿಯ ನೂಲನ್ನು ಮಗ್ಗದ ಕಬ್ಬಿಣದ ಪೈಪ್‌ಗಳ ಮೇಲೆ (ಎಡ) ಜೋಡಿಸಲಾಗಿದೆ ಮತ್ತು ನೂಲಿನ ಚೌಕಟ್ಟನ್ನು ಬದಲಾಯಿಸಲು ಬಿದಿರಿನ ಮೀಟುಗೋಲನ್ನು ಮಗ್ಗಕ್ಕೆ (ಬಲಕ್ಕೆ) ಜೋಡಿಸಲಾಗಿದೆ
ತೂಫಾನಿಯವರು ಒಂದೊಮ್ಮೆ 5-10 ಬಣ್ಣದ ಎಳೆಗಳನ್ನು ಒಂದೇ ಬಾರಿಗೆ ನೇಯ್ಗೆ ಮಾಡುವ ಕಲೆಯನ್ನೂ ಕರಗತ ಮಾಡಿಕೊಂಡಿದ್ದರು. ಆದರೆ ಸಂಬಳ ಕಡಿಮೆಯಾದಾಗ ಅವರ ಉತ್ಸಾಹವೂ ಕುಗ್ಗಿತು. “ಅವರು [ದಲ್ಲಾಳಿಗಳು] ಕೆಲಸ ಕೊಡುವವರು. ನಾವು ಹಗಲಿರುಳು ನೇಯ್ಗೆ ಮಾಡುತ್ತಿದ್ದರೆ, ಅವರು ನಮಗಿಂತಲೂ ಹೆಚ್ಚು ಸಂಪಾದನೆ ಮಾಡುತ್ತಾರೆ,” ಎಂದು ಹತಾಶೆಯಿಂದ ಅವರು ಹೇಳುತ್ತಾರೆ.
ಇಂದು ಅವರಿಗೆ ಎಷ್ಟು ನೇಯ್ಗೆ ಮಾಡಲು ಸಾಧ್ಯವೋ ಅದರ ಮೇಲೆ ಅವರ 10-12 ಗಂಟೆಗಳ ಶಿಫ್ಟ್‌ಗೆ 350 ರುಪಾಯಿ ಗಳಿಸುತ್ತಾರೆ, ತಿಂಗಳ ಕೊನೆಯಲ್ಲಿ ಸಂಬಳ ಸಿಗುತ್ತದೆ. ಆದರೆ ಈ ವ್ಯವಸ್ಥೆಯು ಹೋಗಬೇಕು ಎಂದು ಅವರು ಹೇಳುತ್ತಾರೆ. ಏಕೆಂದರೆ ಇದರಲ್ಲಿ ಅವರು ಎಷ್ಟು ಗಂಟೆಗಳ ಕಾಲ ಕೆಲಸ ಮಾಡಿದ್ದಾರೆ ಎಂಬುದನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಈ ಕೆಲಸಕ್ಕೆ ದಿನಕ್ಕೆ 700 ರುಪಾಯಿ ಪಗಾರ ನೀಡಬೇಕು ಎಂದು ಅವರು ಹೇಳುತ್ತಾರೆ.
ಗುತ್ತಿಗೆಗಳನ್ನು ಪಡೆಯುವ ದಲ್ಲಾಳಿಗೆ ಗಜ್‌ನ ಆಧಾರದ ಮೇಲೆ (ಒಂದು ಗಜ್ ಸುಮಾರು 36 ಇಂಚುಗಳು) ಹಣ ಕೊಡಲಾಗುತ್ತದೆ. ಸಾಮಾನ್ಯವಾಗಿ ಕಾರ್ಪೆಟ್‌ನ ಉದ್ದ ನಾಲ್ಕರಿಂದ ಐದು ಗಜ್. ಇದರಲ್ಲಿ ಗುತ್ತಿಗೆದಾರರು ಸುಮಾರು 2,200 ರುಪಾಯಿ ಸಂಪಾದಿಸಿದರೆ, ನೇಕಾರಿಗೆ ಕೇವಲ 1,200 ರುಪಾಯಿ ಸಿಗುತ್ತದೆ. ಹಾಗಿದ್ದೂ, ಗುತ್ತಿಗೆದಾರರು ಕಟಿ (ಉಣ್ಣೆಯ ದಾರ) ಮತ್ತು ಸಟ್ (ಹತ್ತಿ ನೂಲು) ನಂತಹ ಕಚ್ಚಾ ವಸ್ತುಗಳನ್ನು ಖರೀದಿಸಲು ಹಣ ನೀಡುತ್ತಾರೆ.
ತೂಫಾನ್ ಅವರಿಗೆ ಶಾಲೆಗೆ ಹೋಗುವ ನಾಲ್ವರು ಗಂಡು ಮಕ್ಕಳು ಮತ್ತು ಒಬ್ಬಳು ಮಗಳಿದ್ದಾಳೆ. ಇವರಿಗೆ ತಮ್ಮ ಮಕ್ಕಳು ತಮ್ಮ ದಾರಿಯಲ್ಲಿ ಬರುವುದು ಇಷ್ಟವಿಲ್ಲ. “ಅವರ ತಂದೆ ಮತ್ತು ತಾತ ತಮ್ಮ ಇಡೀ ಜೀವನವನ್ನು ಕಳೆದ ಈ ವೃತ್ತಿಯನ್ನು ಅವರೂ ಏಕೆ ಮಾಡಬೇಕು? ಅವರು ಚೆನ್ನಾಗಿ ಓದಿ ಬೇರೆನಾದರೂ ಒಳ್ಳೆಯ ಉದ್ಯೋಗ ಮಾಡಬಹುದಲ್ಲವೇ?” ಎಂದು ಅವರು ಕೇಳುತ್ತಾರೆ.
*****
ಒಂದು ವರ್ಷಕ್ಕೆ ತೂಫಾನಿ ಮತ್ತು ಅವರ ತಂಡವು 10-12 ಕಾರ್ಪೆಟ್‌ಗಳನ್ನು ನೇಯುತ್ತಾರೆ. ದಿನಕ್ಕೆ 12 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ಅವರೊಂದಿಗೆ ಕೆಲಸ ಮಾಡುವ ರಾಜೇಂದ್ರ ಮೌರ್ಯ ಮತ್ತು ಲಾಲ್ಜಿ ಬಿಂದ್ ಇಬ್ಬರೂ 50 ರ ಹರೆಯದವರು. ಗಾಳಿ ಬೆಳಕು ಬರಲು ಇರುವ ಒಂದು ಕಿಟಕಿ ಮತ್ತು ಒಂದು ಬಾಗಿಲನ್ನು ಹೊಂದಿರುವ ಸಣ್ಣ ಕೋಣೆಯಲ್ಲಿ ಇವರೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಾರೆ. ಬೇಸಿಗೆಯಲ್ಲಿ ತುಂಬಾ ಕಷ್ಟವಾಗುತ್ತದೆ. ತಾಪಮಾನ ಹೆಚ್ಚಿದಾಗ, ತಗಡಿನ ಛಾವಣಿಯ ಈ ಕೋಣೆಯೂ ಬಿಸಿಯಾಗುತ್ತದೆ.
"ಗಲಿಚಾ [ಕಾರ್ಪೆಟ್] ತಯಾರಿಕೆಯ ಮೊದಲ ಹಂತವೆಂದರೆ ತಾನಾ ಅಥವಾ ತಾನನ್ನಾ," ಎಂದು ತೂಫಾನಿ ಹೇಳುತ್ತಾರೆ. ಇದರಲ್ಲಿ ಹತ್ತಿಯ ದಾರದ ಚೌಕಟ್ಟನ್ನು ಮಗ್ಗದ ಮೇಲೆ ಜೋಡಿಸಲಾಗುತ್ತದೆ.


ಎಡ: ತೂಫಾನಿಯವರ ಸಹೋದ್ಯೋಗಿ ಮತ್ತು ಸಹ ನೇಕಾರ ರಾಜೇಂದ್ರ ಮೌರ್ಯರವರು ಉಣ್ಣೆಯ ದಾರವನ್ನು ನೆಟ್ಟಗೆ ಮಾಡುತ್ತಿರುವುದು. ಬಲ: ಅವರ ಸಹೋದ್ಯೋಗಿ ಲಾಲ್ಜಿ ಬಿಂದ್ ಅವರು ತಾವು ದೀರ್ಘ ಗಂಟೆಗಳ ವರೆಗೆ ನೇಯ್ಗೆ ಕೆಲಸ ಮಾಡಿ ತಮ್ಮ ದೃಷ್ಟಿಗೆ ತೊಂದರೆಯಾಗಿದೆ ಎಂದು ಹೇಳುತ್ತಾರೆ


ಎಡಕ್ಕೆ: ಹತ್ತಿಯ ನೂಲಿನ ಚೌಕಟ್ಟು ಜಾರಿಬೀಳುವುದನ್ನು ಮಗ್ಗದ ಕಬ್ಬಿಣದ ತೊಲೆಗೆ ಹಾಕಿರುವ ಕೊಕ್ಕೆಯು ತಡೆಯುತ್ತದೆ. ಬಲ: ನೇಕಾರರು ಹೊಲಿಗೆಗಳನ್ನು ಸರಿಮಾಡಲು ಪಂಜಾವನ್ನು (ಕಬ್ಬಿಣದ ಬಾಚಣಿಗೆ) ಬಳಸುತ್ತಾರೆ
25x11 ಅಡಿಯ ಆಯತಾಕಾರದ ಕೋಣೆಯಲ್ಲಿ ಮಗ್ಗವನ್ನು ಕೂರಿಸಲು ಎರಡೂ ಬದಿಯಲ್ಲಿ ಕಂದಕಗಳನ್ನು ಮಾಡಲಾಗಿದೆ. ಕಾರ್ಪೆಟ್‌ನ ಚೌಕಟ್ಟನ್ನು ಹಿಡಿದಿಡಲು ಒಂದು ಬದಿಯಲ್ಲಿ ಜೋಡಿಸಲಾದ ಹಗ್ಗಗಳೊಂದಿಗೆ ಕಬ್ಬಿಣದಿಂದ ಮಗ್ಗವನ್ನು ತಯಾರಿಸಲಾಗುತ್ತದೆ. ತೂಫಾನಿಯವರು ಐದಾರು ವರ್ಷಗಳ ಹಿಂದೆ ಸಾಲ ಮಾಡಿ ಇದನ್ನು ಖರೀದಿಸಿದರು. 70,000 ರುಪಾಯಿಯ ಸಾಲವನ್ನು ತಿಂಗಳ ಕಂತಿನಲ್ಲಿ ಪಾವತಿಸುತ್ತಾರೆ. "ನನ್ನ ತಂದೆಯ ಕಾಲದಲ್ಲಿ ಕಲ್ಲಿನ ಕಂಬಗಳ ಮೇಲೆ ಮರದ ಮಗ್ಗಗಳನ್ನು ಬಳಸುತ್ತಿದ್ದರು," ಎಂದು ಅವರು ಹೇಳುತ್ತಾರೆ.
ಕಾರ್ಪೆಟ್‌ನಲ್ಲಿರುವ ಪ್ರತಿಯೊಂದು ಹೆಣಿಕೆಯಲ್ಲಿ ಚರ್ರಿ (ಲೈನ್ ಸ್ಟಿಚ್) ಇರುತ್ತದೆ, ಇದನ್ನು ಮಾಡಲು ನೇಕಾರರು ಉಣ್ಣೆಯ ದಾರವನ್ನು ಬಳಸುತ್ತಾರೆ. ಅದನ್ನು ಉಳಿಸಲು, ತೂಫಾನಿಯವರು ಹತ್ತಿಯ ದಾರವನ್ನು ಬಳಸಿ ಲಾಚಿಯ ರೇಖೆಯನ್ನು (ಹತ್ತಿ ನೂಲಿನ ಸುತ್ತಲೂ U-ಆಕಾರದ ಕುಣಿಕೆಗಳು) ಮಾಡುತ್ತಾರೆ. ಅವರು ಅದನ್ನು ಉಣ್ಣೆಯ ದಾರದ ಸಡಿಲವಾದ ತುದಿಯ ಮುಂಭಾಗಕ್ಕೆ ತಂದು ಚುರಾ ಎಂಬ ಸಣ್ಣ ಚಾಕುವಿನಿಂದ ಕತ್ತರಿಸುತ್ತಾರೆ. ನಂತರ, ಪಂಜಾವನ್ನು (ಕಬ್ಬಿಣದ ಬಾಚಣಿಗೆ) ಬಳಸಿ ಹೊಲಿಗೆ ಹಾಕಿದ ಲೈನುಗಳನ್ನು ತಟ್ಟುತ್ತಾರೆ. "ಕಾಟ್ನಾ ಔರ್ ಥೋಕ್ನಾ [ಕತ್ತರಿಸುವುದು ಮತ್ತು ಬಡಿಯುವುದು], ಇದುವೇ ಹೆಣೆದು ಮಾಡುವ ನೇಯ್ಗೆ," ಎಂದು ಅವರು ಸಂಕ್ಷಿಪ್ತವಾಗಿ ಹೇಳುತ್ತಾರೆ.
ನೇಯ್ಗೆಯ ಕೆಲಸ ಕುಶಲಕರ್ಮಿಗಳ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. 35 ವರ್ಷಗಳಿಂದ ಈ ವೃತ್ತಿಯನ್ನು ಮಾಡುತ್ತಿರುವ ಲಾಲ್ಜಿ ಬಿಂದ್ ಅವರು, "ವರ್ಷಗಳಾದಂತೆ ಇದು ನನ್ನ ದೃಷ್ಟಿಯೂ ಹಾನಿಯಾಗಿದೆ," ಎಂದು ಹೇಳುತ್ತಾರೆ. ಅವರು ಕೆಲಸ ಮಾಡಬೇಕಾದರೆ ಕನ್ನಡಕವನ್ನು ಧರಿಸುತ್ತಾರೆ. ಇತರ ನೇಕಾರರು ಬೆನ್ನು ನೋವು ಮತ್ತು ಕಾಲು ನೋವು ಬರುತ್ತದೆ ಎಂದು ಹೇಳುತ್ತಾರೆ. ಈ ಉದ್ಯೋಗವನ್ನು ಮಾಡದೆ ಬೇರೆ ದಾರಿಯಿಲ್ಲ ಎಂದು ಅವರು ನಂಬಿದ್ದಾರೆ. "ನಮ್ಮಲ್ಲಿ ಬೇರೆ ಹೆಚ್ಚು ಆಯ್ಕೆಗಳಿಲ್ಲ," ಎಂದು ತೂಫಾನಿಯವರು ಹೇಳುತ್ತಾರೆ. ಉತ್ತರ ಪ್ರದೇಶದ ಗ್ರಾಮೀಣ ಪ್ರದೇಶದ ಸುಮಾರು ಶೇಕಡಾ 75 ರಷ್ಟು ನೇಕಾರರು ಮುಸಲ್ಮಾನ ಸಮುದಾಯಕ್ಕೆ ಸೇರಿದವರು ಎಂದು ಜನಗಣತಿ ಹೇಳುತ್ತದೆ.
"15 ವರ್ಷಗಳ ಹಿಂದೆ ಸುಮಾರು 800 ಕುಟುಂಬಗಳು ಹೆಣೆದು ಮಾಡುವ ನೇಯ್ಗೆಯ ಕೆಲಸ ಮಾಡುತ್ತಿದ್ದವು. ಇಂದು ಆ ಸಂಖ್ಯೆ 100 ಕ್ಕೆ ಇಳಿದಿದೆ," ಎಂದು ಪುರ್ಜಗೀರ್‌ನ ನೇಕಾರ ಅರವಿಂದ್ ಕುಮಾರ್ ಬಿಂದ್ ನೆನಪಿಸಿಕೊಳ್ಳುತ್ತಾರೆ. ಇದು 1,107 ರಷ್ಟಿರುವ ಪುರ್ಜಗೀರ್ ಮುಜೆಹರಾದ ಜನಸಂಖ್ಯೆಯ ಮೂರನೇ ಒಂದು ಭಾಗಕ್ಕಿಂತಲೂ ಹೆಚ್ಚು (ಜನಗಣತಿ 2011).


ಎಡಕ್ಕೆ: ಮಗ್ಗದ ಉದ್ದಕ್ಕೆ ಸಮಾನಾಂತರವಾಗಿ ಓಡುತ್ತಿರುವ ವಿನ್ಯಾಸದ ನಕ್ಷೆಯೊಂದಿಗೆ, ಹತ್ತಿ ನೂಲು ಮತ್ತು ಉಣ್ಣೆಯ ಎಳೆಗಳಿಂದ ಹೆಣೆದು ಮಾಡುತ್ತಿರುವ ಕಾರ್ಪೆಟ್‌ನ ನೇಯ್ಗೆಯ ಕೆಲಸ ಪ್ರಗತಿಯಲ್ಲಿದೆ. ಬಲ: ನೇಕಾರರು ಚರ್ರಿ ಅಥವಾ ಲೈನ್ ಹೊಲಿಯಲು ಉಣ್ಣೆಯ ದಾರವನ್ನು ಬಳಸುತ್ತಾರೆ


ಎಡಕ್ಕೆ: U-ಆಕಾರದ ಕುಣಿಕೆಗಳು ಅಥವಾ ಲಾಚಿಯನ್ನು ಹೊಲಿಯಲು ಹತ್ತಿ ದಾರವನ್ನು ಬಳಸುತ್ತಾರೆ. ಬಲ: ಸಡಿಲವಾದ ಉಣ್ಣೆಯ ದಾರವನ್ನು ಕತ್ತರಿಸಲು ಚುರಾವನ್ನು (ಕಠಾರಿ) ಬಳಸಲಾಗುತ್ತದೆ, ಇದರಿಂದಾಗಿ ಕಾರ್ಪೆಟ್ ರೋಮದಿಂದ ಕೂಡಿರುವಂತೆ ಕಾಣುತ್ತದೆ
ಹತ್ತಿರದಲ್ಲಿರುವ ಮತ್ತೊಂದು ವರ್ಕ್‌ಶಾಪ್‌ನಲ್ಲಿ ಬಾಲ್‌ಜೀ ಬಿಂದ್ ಮತ್ತು ಅವರ ಪತ್ನಿ ತಾರಾ ದೇವಿ ಅವರು ಸಂಪೂರ್ಣ ಏಕಾಗ್ರತೆಯಿಂದ ಮೌನವಾಗಿ ಹೆಣೆದು ಮಾಡುವ ಕಾರ್ಪೆಟ್ ಸೌಮಕನ್ನು ತಯಾರಿಸುವುದರಲ್ಲಿ ತೊಡಗಿದ್ದಾರೆ. ಚಾಕುವಿನಿಂದ ಆಗಾಗ ಎಳೆಗಳನ್ನು ಕತ್ತರಿಸುವ ಶಬ್ಧ ಮಾತ್ರ ಕೇಳಿಬರುತ್ತಿದೆ. ಸೌಮಕ್ ಒಂದೇ ರೀತಿಯ ವಿನ್ಯಾಸವನ್ನು ಹೊಂದಿರುವ ಒಂದೇ ಬಣ್ಣದಿಂದ ಮಾಡಲಾಗುವ ಗಲಿಚಾ. ಸಣ್ಣ ಮಗ್ಗಗಳನ್ನು ಹೊಂದಿರುವ ನೇಕಾರರು ಇದನ್ನು ಮಾಡುತ್ತಾರೆ. "ನಾನು ಒಂದು ತಿಂಗಳೊಳಗೆ ಇದನ್ನು ಮುಗಿಸಿದರೆ ಈ ಒಂದು ಪೀಸಿಗೆ ನನಗೆ 8,000 ರೂಪಾಯಿ ಸಿಗುತ್ತದೆ,” ಎಂದು ಬಾಲ್‌ಜೀಯವರು ಹೇಳುತ್ತಾರೆ.
ಪುರ್ಜಗೀರ್ ಮತ್ತು ಬಾಗ್ ಕುಂಜಲಗೀರ್ - ಎರಡೂ ನೇಯ್ಗೆ ಘಟಕಗಳಲ್ಲಿ ಬಾಲ್‌ಜೀಯವರ ಹೆಂಡತಿ ತಾರಾ ಅವರಂತಹ ಮಹಿಳೆಯರು ಜೊತೆಯಾಗಿ ಕೆಲಸ ಮಾಡುತ್ತಾರೆ. ಒಟ್ಟು ನೇಕಾರರಲ್ಲಿ ಸುಮಾರು ಮೂರನೇ ಒಂದು ಭಾಗದಷ್ಟು ಮಹಿಳೆಯರು ಇದ್ದಾರೆ. ಅವರ ಶ್ರಮವನ್ನು ಅವರ ಸುತ್ತಲಿರುವವರು ಗುರುತಿಸುವುದಿಲ್ಲ. ಮಕ್ಕಳು ಸಹ ಶಾಲೆಯ ನಡುವೆ ಮತ್ತು ಅವರ ಬೇಸಿಗೆ ರಜೆಯ ಸಮಯದಲ್ಲಿ ನೆರವಾಗುತ್ತಾರೆ, ಇವರಿಂದಾಗಿ ಕೆಲಸವೂ ವೇಗವಾಗುತ್ತದೆ.
ಹಜಾರಿ ಬಿಂದ್ ಮತ್ತು ಅವರ ಪತ್ನಿ ಶ್ಯಾಮ್ ದುಲಾರಿ ಅವರು ಸರಿಯಾದ ಸಮಯಕ್ಕೆ ಕಾರ್ಪೆಟ್ ಮುಗಿಸಲು ಕೆಲಸ ಮಾಡುತ್ತಿದ್ದಾರೆ. ಅವರು ಕೆಲಸದಲ್ಲಿ ನೆರವಾಗುತ್ತಿದ್ದ ತಮ್ಮ ಇಬ್ಬರು ಪುತ್ರರನ್ನು ನೆನಪಿಸಿಕೊಳ್ಳುತ್ತಾರೆ. ಮಕ್ಕಳಿಬ್ಬರೂ ಕೂಲಿ ಕೆಲಸ ಮಾಡಲು ಸೂರತ್‌ಗೆ ವಲಸೆ ಹೋಗಿದ್ದಾರೆ. "ಬಚ್ಚೋ ನೆ ಹಮ್ಸೆ ಬೋಲಾ ಕಿ ಹಮ್ ಲೋಗ್ ಇಸ್ಮೆ ನಹೀ ಫಸೇಂಗೆ, ಪಾಪಾ [ನನ್ನ ಮಕ್ಕಳು ನನಗೆ, ನಾವು ಈ ಕೆಲಸದಲ್ಲಿ ಸಿಕ್ಕಿಬೀಳುವುದಿಲ್ಲ, ಪಾಪಾ.. ಎಂದು ಹೇಳಿದರು]." ಎಂದು ಹಜಾರಿಯವರು ಹೇಳುತ್ತಾರೆ.


ಎಡ: ಬಾಲ್‌ಜೀ ತಮ್ಮ ಪತ್ನಿ ತಾರಾ ದೇವಿಯವರೊಂದಿಗೆ ಸೌಮಕ್ ಎಂದು ಕರೆಯಲ್ಪಡುವ ಹೆಣೆದು ತಯಾರಿಸುವ ಕಾರ್ಪೆಟನ್ನು ನೇಯುತ್ತಿದ್ದಾರೆ. ಇದು ಏಕರೂಪದ ವಿನ್ಯಾಸವಿರುವ ಒಂದೇ ಬಣ್ಣದ ಕಾರ್ಪೆಟ್. ಬಲ: ಸದ್ಯ ಬಳಸದೆ ತುಕ್ಕು ಹಿಡಿಯುತ್ತಿರುವ ತಮ್ಮ ಟಫ್ಟೆಡ್ ಗನ್‌ಗಳ ಸೆಟ್‌ಗಳನ್ನು ತೋರಿಸುತ್ತಿರುವ ಷಾ-ಎ-ಆಲಂ


ಎಡ: ಹಜಾರಿ ಬಿಂದ್ ಅವರ ಮನೆಯಲ್ಲಿ ಒಂದು ಮಗ್ಗವಿದೆ, ಅದರಲ್ಲಿ ಅವರು ಸೌಮಕ್‌ಗಳನ್ನು ನೇಯುತ್ತಾರೆ. ಬಲ: ಹತ್ತಿ ನೂಲಿನ ಪಕ್ಕದಲ್ಲಿ ನಿಂತಿರುವ ಹಜಾರಿಯವರ ಪತ್ನಿ ಶ್ಯಾಮ್ ದುಲಾರಿ. ಪುರ್ಜಗೀರ್‌ನಂತಹ ನೇಯ್ಗೆ ಘಟಕಗಳಲ್ಲಿ ಮಹಿಳೆಯರೂ ನೇಯ್ಗೆಯ ಕೆಲಸ ಮಾಡುತ್ತಾರೆ, ಆದರೆ ಅವರ ಶ್ರಮವನ್ನು ಸುತ್ತಮುತ್ತಲಿನ ಯಾರೂ ಒಪ್ಪಿಕೊಳ್ಳುವುದಿಲ್ಲ
ಕಡಿಮೆಯಾಗುತ್ತಿರುವ ಆದಾಯ ಮತ್ತು ಕಠಿಣ ಪರಿಶ್ರಮದಿಂದಾಗಿ ಯುವಕರನ್ನು ಮಾತ್ರವಲ್ಲ, ಮೂರು ವರ್ಷಗಳ ಹಿಂದೆ ನೇಯ್ಗೆಯನ್ನು ಬಿಟ್ಟು ಈಗ ಇ-ರಿಕ್ಷಾ ಓಡಿಸುತ್ತಿರುವ 39 ವರ್ಷದ ಷಾ-ಎ-ಆಲಂ ಅವರು ಸಹ ಈ ವೃತ್ತಿಯಿಂದ ದೂರ ಉಳಿದಿದ್ದಾರೆ. ಪುರ್ಜಗೀರ್‌ನಿಂದ ಎಂಟು ಕಿಲೋಮೀಟರ್ ದೂರದ ನಟ್ವಾ ನಿವಾಸಿಯಾಗಿರುವ ಇವರು 15 ವರ್ಷದವರಾಗಿದ್ದಾಗ ರತ್ನಗಂಬಳಿಗಳನ್ನು ನೇಯಲು ಆರಂಭಿಸಿದರು. 12 ವರ್ಷಗಳಲ್ಲಿ ಅವರು ಹೆಣೆದು ಮಾಡುವ ನೇಯ್ಗೆಯನ್ನು ತೊರೆದು ಟಫ್ಟೆಡ್ ನೇಯ್ಗೆಯ ದಲ್ಲಾಳಿಯಾದರು. ಮೂರು ವರ್ಷಗಳ ಹಿಂದೆ ತಮ್ಮ ಮಗ್ಗವನ್ನು ಮಾರಿದರು.
"ಪೋಸಾ ನಹಿ ರಹಾ ಥಾ [ನಾವು ಬದುಕಲು ಇದು ಸಾಕಾಗಲಿಲ್ಲ]," ಎಂದು ಹೊಸದಾಗಿ ಕಟ್ಟಲಾಗಿರುವ ತಮ್ಮ ಎರಡು ಕೋಣೆಗಳ ಮನೆಯಲ್ಲಿ ಕುಳಿತು ಹೇಳುತ್ತಾರೆ. 2014 ರಿಂದ 2022 ರ ನಡುವೆ ಅವರು ದುಬೈನಲ್ಲಿ ಟೈಲ್ ತಯಾರಿಸುವ ಕಂಪನಿಯೊಂದರಲ್ಲಿ ಕಾರ್ಮಿಕರಾಗಿ ಕೆಲಸ ಮಾಡಿದರು. ಅಲ್ಲಿ ಅವರಿಗೆ ತಿಂಗಳಿಗೆ 22,000 ರುಪಾಯಿ ವೇತನ ಸಿಗುತ್ತಿತ್ತು. "ಅದು ಕನಿಷ್ಠ ಈ ಗೂಡನ್ನಾದರೂ ಕಟ್ಟಲು ನೆರವಾಯಿತು," ಎಂದು ಟೈಲ್ಸು ಹಾಕಿದ ನೆಲವನ್ನು ತೋರಿಸುತ್ತಾ ಅವರು ಹೇಳುತ್ತಾರೆ. “ನೇಕಾರನಾಗಿ ನನಗೆ ದಿನಕ್ಕೆ 150 ರುಪಾಯಿ ಸಿಗುತ್ತಿತ್ತು, ಚಾಲಕನಾಗಿ ನಾನು ದಿನಕ್ಕೆ ಕನಿಷ್ಠ 250-300 ರುಪಾಯಿ ದುಡಿಯುತ್ತೇನೆ,” ಎನ್ನುತ್ತಾರೆ ಅವರು.
ರಾಜ್ಯ ಸರ್ಕಾರ ಜಾರಿಗೆ ತಂದ ಒಂದು ಜಿಲ್ಲೆ-ಒಂದು ಉತ್ಪನ್ನ ಯೋಜನೆಯಲ್ಲಿ ಕಾರ್ಪೆಟ್-ನೇಕಾರರಿಗೆ ಹಣಕಾಸಿನ ನೆರವನ್ನು ನೀಡಲಾಗುತ್ತದೆ. ಕೇಂದ್ರ ಸರ್ಕಾರದ ಮುದ್ರಾ ಯೋಜನೆಯಲ್ಲಿ ರಿಯಾಯಿತಿ ದರದಲ್ಲಿ ಸಾಲವೂ ಸಿಗುತ್ತದೆ. ಆದರೆ ಬ್ಲಾಕ್ ಮಟ್ಟದಲ್ಲಿ ಇವುಗಳ ಬಗ್ಗೆ ಜಾಗೃತಿ ಅಭಿಯಾನಗಳು ನಡೆಯುತ್ತಿದ್ದರೂ ಷಾ-ಎ-ಆಲಂರಂತಹ ನೇಕಾರರಿಗೆ ಈ ಕುರಿತು ತಿಳಿದಿಲ್ಲ.
ಬಾಗ್ ಕುಂಜಾಲ್ ಗೀರ್‌ನ ಪಕ್ಕದಲ್ಲಿರುವ, ಪುರ್ಜಗೀರ್ ಮುಜೆಹರಾದಿಂದ ಸ್ವಲ್ಪ ದೂರದಲ್ಲಿ ವಾಸಿಸುವ ಜಹಿರುದ್ದೀನ್ ಅವರು ಟಫ್ಟೆಡ್ ಕಾರ್ಪೆಟ್‌ನ ವಿನ್ಯಾಸವಾಗಿರುವ ಗುಲ್ತಾರಾಶ್ ಕರಕುಶಲತೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 80 ವರ್ಷದ ಇವರು ಮುಖ್ಯಮಂತ್ರಿ ಹಸ್ತಶಿಲ್ಪ್ ಪಿಂಚಣಿ ಯೋಜನೆಯಲ್ಲಿ ಹೆಸರು ನೋಂದಾಯಿಸಿದ್ದಾರೆ. 2018 ರಲ್ಲಿ ಆರಂಭವಾದ ರಾಜ್ಯ ಸರ್ಕಾರದ ಈ ಯೋಜನೆಯಡಿ 60 ವರ್ಷ ಮೇಲ್ಪಟ್ಟ ಕುಶಲಕರ್ಮಿಗಳಿಗೆ 500 ರುಪಾಯಿಗಳ ಪಿಂಚಣಿಯನ್ನು ನೀಡಲಾಗುತ್ತದೆ. ಆದರೆ ಮೂರು ತಿಂಗಳು ಹಣ ಬಂದ ಮೇಲೆ ಪಿಂಚಣಿ ದಿಢೀರ್ ನಿಂತುಹೋಯಿತು ಎಂದು ಜಹಿರುದ್ದೀನ್ ಹೇಳುತ್ತಾರೆ.
ಆದರೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (ಪಿಎಂಜಿಕೆಎವೈ) ಅಡಿಯಲ್ಲಿ ಅವರಿಗೆ ಸಿಗುವ ಪಡಿತರದಿಂದಾಗಿ ಅವರು ನೆಮ್ಮದಿಯಾಗಿದ್ದಾರೆ. ಪುರ್ಜಗೀರ್ ಗ್ರಾಮದ ನೇಕಾರರು ಸಹ "ಮೋದಿ ಕಾ ಗಲ್ಲಾ" [ಪ್ರಧಾನಿ ಮೋದಿಯವರ ಯೋಜನೆಯ ಭಾಗವಾಗಿ ಸಿಗುವ ಆಹಾರ ಧಾನ್ಯಗಳನ್ನು] ಸಿಗುತ್ತಿರುವ ಬಗ್ಗೆ ಪರಿಗೆ ತಿಳಿಸಿದರು.


ಎಡ: ಬಾಗ್ ಕುಂಜಾಲ್ ಗೀರ್‌ನ ನಿವಾಸಿಯಾದ ಜಹಿರುದ್ದೀನ್‌ರವರು ಸುಂದರವಾದ ವಿನ್ಯಾಸಗಳಿರುವ ಗುಲ್ತಾರಾಶ್ ಎಂಬ (ಎಡ) ಟಫ್ಟೆಡ್ ಕಾರ್ಪೆಟನ್ನು ತಯಾರಿಸುತ್ತಾರೆ. ತಾವು ತಯಾರಿಸಿರುವ ಬಾಗಿಲ ಬಳಿ ಹಾಸುವ ಮ್ಯಾಟ್‌ನ ಗಾತ್ರದ ಟಫ್ಟೆಡ್ ಕಾರ್ಪೆಟ್‌ನೊಂದಿಗೆ (ಬಲ) ಜಹಿರುದ್ದೀನ್


ಎಡ: ಪದ್ಮಶ್ರೀ-ಪುರಸ್ಕೃತ ಖಲೀಲ್ ಅಹ್ಮದ್‌ರವರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರೊಂದಿಗಿರುವ ತಮ್ಮ ಫೋಟೋವನ್ನು ಪರಿಗೆ ತೋರಿಸಿದರು. ಬಲ: ಇರಾನ್, ಬ್ರೆಜಿಲ್ ಮತ್ತು ಸ್ಕಾಟ್ಲೆಂಡ್‌ನಂತಹ ದೇಶಗಳಿಗೆ ಭೇಟಿ ನೀಡಿದ ಬಳಿಕ ಖಲೀಲ್ ಅವರು ಅಭಿವೃದ್ಧಿಪಡಿಸಿದ ವಿನ್ಯಾಸಗಳು
65 ವರ್ಷ ವಯಸ್ಸಿನ ಶಂಶು-ನಿಸಾರವರು ಕಬ್ಬಿಣದ ನೂಲುವ ಚಕ್ರದ ಮೇಲೆ ನೇರಗೊಳಿಸುವ ಪ್ರತಿ ಕಿಲೋ ಹತ್ತಿ ದಾರಕ್ಕೆ (ಸಟ್) ಏಳು ರೂಪಾಯಿಗಳನ್ನು ಸಂಪಾದಿಸುತ್ತಾರೆ. ದಿನಕ್ಕೆ ಸರಿಸುಮಾರು 200 ರುಪಾಯಿ ಸಿಗುತ್ತದೆ. ಅವರ ಪತಿ ದಿವಂಗತ ಹಸ್ರುದ್ದೀನ್ ಅನ್ಸಾರಿಯವರು 2000 ರ ದಶಕದ ಆರಂಭದಲ್ಲಿ ಟಫ್ಟೆಡ್ ನೇಯ್ಗೆ ಆರಂಭಿಸುವ ಮೊದಲು ಹೆಣೆದು ಮಾಡಿದ ಕಾರ್ಪೆಟ್‌ಗಳನ್ನು ತಯಾರಿಸುತ್ತಿದ್ದರು. ಅವರ ಮಗ ಸಿರಾಜ್ ಅನ್ಸಾರಿಯವರು ಟಫ್ಟೆಡ್ ನೇಯ್ಗೆಯ ಮಾರುಕಟ್ಟೆ ಕುಸಿದಿರುವುದರಿಂದ ನೇಯ್ಗೆಯಲ್ಲಿ ಭವಿಷ್ಯವನ್ನು ನೋಡಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ.
ಜಹಿರುದ್ದೀನ್‌ರವರ ಮನೆಯ ಸಮೀಪದಲ್ಲಿಯೇ ಖಲೀಲ್ ಅಹ್ಮದ್ ತಮ್ಮ ಕುಟುಂಬದೊಂದಿಗೆ ವಾಸವಾಗಿದ್ದಾರೆ. 2024 ರಲ್ಲಿ 75 ವರ್ಷ ವಯಸ್ಸಿನ ಇವರಿಗೆ ತೆಳುವಾದ ಕಾರ್ಪೆಟ್‌ಗಳಾದ ಧುರಿಗಳ ತಯಾರಿಕೆಯಲ್ಲಿ ನೀಡಿದ ಕೊಡುಗೆಗಾಗಿ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. ತಮ್ಮ ವಿನ್ಯಾಸಗಳನ್ನು ಹುಡುಕುತ್ತಾ ಅವರು ಉರ್ದು ಭಾಷೆಯಲ್ಲಿರುವ ಬರಹವೊಂದನ್ನು ಓದುತ್ತಾರೆ: "ಈಸ್ ಪರ್ ಜೋ ಬೈಟ್ಹೇಗಾ, ವೋ ಕಿಸ್ಮತ್ವಾಲಾ ಹೋಗಾ [ಈ ಕಾರ್ಪೆಟ್ ಮೇಲೆ ಕುಳಿತುಕೊಳ್ಳುವವರು ಅದೃಷ್ಟವಂತರು]."
ಆದರೆ ಅವುಗಳನ್ನು ನೇಯುವವರಿಗೆ ಮಾತ್ರ ಯಾವುದೇ ಅದೃಷ್ಟವಿಲ್ಲ.
ಅನುವಾದ: ಚರಣ್ ಐವರ್ನಾಡು