ನನಗೆ ಸಾಕಾಗಿದೆ. ದೇಹ ಮತ್ತು ಮನಸ್ಸು ಎರಡೂ ಬಳಲಿವೆ. ನನ್ನ ಕಣ್ಣುಗಳಲ್ಲಿ ನೋವು ತುಂಬಿ ತುಳುಕುತ್ತಿದೆ. ನನ್ನ ಸುತ್ತಲಿನ ಶೋಷಿತ ಜನರ ಅನೇಕ ಕತೆಗಳನ್ನು ಬರೆಯಲು ನನಗೆ ಸಾಧ್ಯವಾಗುತ್ತಿಲ್ಲ. ಇದೆಲ್ಲವನ್ನೂ ನೋಡಿ ಮರಗಟ್ಟಿ ಹೋಗಿದ್ದೇನೆ. ನಾನು ಈ ಕಥೆಯನ್ನು ಬರೆಯಲು ಪ್ರಾರಂಭಿಸುವು ಹೊತ್ತಿಗೆ, ಸರ್ಕಾರವು ಚೆನ್ನೈನ ಅನಗಪುತ್ತೂರಿನಲ್ಲಿ ದಲಿತರ ಮನೆಗಳನ್ನು ನೆಲಸಮ ಮಾಡುತ್ತಿದೆ. ಇದು ನನ್ನನ್ನು ಇನ್ನಷ್ಟು ಹತಾಶೆಗೆ ದೂಡಿದೆ.
ಅಕ್ಟೋಬರ್ 7, 2023ರಂದು ತಮಿಳುನಾಡಿನ ಹೊಸೂರಿನಲ್ಲಿ ನಡೆದ ಪಟಾಕಿ ದುರಂತದ ಕಾರ್ಮಿಕರ ಸಾವಿನ ನೆನಪುಗಳಿಂದ ಹೊರಬರಲು ನನಗೆ ಇನ್ನೂ ಸಾಧ್ಯವಾಗಿಲ್ಲ. ನಾನು ಇಲ್ಲಿಯವರೆಗೆ 22 ಸಾವುಗಳನ್ನು ದಾಖಲಿಸಿದ್ದೇನೆ. ಇವರಲ್ಲಿ 8 ಮಂದಿ 17ರಿಂದ 21 ವರ್ಷದೊಳಗಿನ ವಿದ್ಯಾರ್ಥಿಗಳು. ಅವರೆಲ್ಲರೂ ಪಟಾಕಿ ಗೋದಾಮಿನಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಅವರ ನಡುವೆ ಒಳ್ಳೆಯ ಸ್ನೇಹವಿತ್ತು.
ನಾನು ಫೋಟೊಗ್ರಫಿ ಕಲಿಯಲು ಆರಂಭಿಸಿದ ದಿನದಿಂದಲೂ ಪಟಾಕಿ ಕಾರ್ಖಾನೆಗಳು, ಗೋದಾಮುಗಳು ಮತ್ತು ಅಂಗಡಿಗಳಲ್ಲಿ ಕೆಲಸ ಮಾಡುವ ಜನರ ಬಗ್ಗೆ ನನಗೆ ಕುತೂಹಲ. ಅಲ್ಲಿ ಚಿತ್ರಗಳನ್ನು ತೆಗೆಯಲು ಬಹಳಷ್ಟು ಪ್ರಯತ್ನಿಸಿದ್ದೆ. ಆದರೆ ಅನುಮತಿ ದೊರೆತಿರಲಿಲ್ಲ. ಬಹಳಷ್ಟು ಸಲ ವಿಚಾರಿಸಿದ ಬಳಿಕ ಅಲ್ಲಿ ಫೋಟೊ ತೆಗೆಯಲು ಸಾಧ್ಯವಿಲ್ಲವೆನ್ನುವುದು ನನಗೆ ಮನವರಿಕೆಯಾಯಿತು. ಆದರೆ ಒಳಗೆ ಹೋಗಿ ಫೋಟೊ ತೆಗೆಯುವುದನ್ನು ಮರೆಯುವುದು ಸಹ ನನ್ನಿಂದ ಸಾಧ್ಯವಿರಲಿಲ್ಲ.
ನನ್ನ ಪೋಷಕರು ಎಂದೂ ನನಗೆ ದೀಪಾಳಿಗೆ ಹೊಸ ಬಟ್ಟೆ ಅಥವಾ ಪಟಾಕಿ ತಂದುಕೊಟ್ಟವರಲ್ಲ. ಅವರಿಗೆ ಅಷ್ಟು ಖರ್ಚು ಮಾಡುವುದು ಸಾಧ್ಯವಿರಲಿಲ್ಲ. ನಮಗೆ ಬಟ್ಟೆಗಳನ್ನು ಕೊಡಿಸುತ್ತಿದ್ದವರು ನಮ್ಮ ದೊಡ್ಡಪ್ಪ. ಯಾವಾಗಲೂ ನಮ್ಮ ದೀಪಾವಳಿ ಆಚರಣೆ ನಡೆಯುತ್ತಿದ್ದಿದ್ದು ದೊಡ್ಡಪ್ಪನ ಮನೆಯಲ್ಲಿ. ದೊಡ್ಡಪ್ಪ ಪಟಾಕಿಗಳನ್ನು ಸಹ ತರುತ್ತಿದ್ದರು. ನಮ್ಮ ದೊಡ್ಡಪ್ಪನ ಮಕ್ಕಳು ಸೇರಿದಂತೆ, ಎಲ್ಲಾ ಮಕ್ಕಳು ಸೇರಿ ಪಟಾಕಿ ಸುಡುತ್ತಿದ್ದೆವು.
ಪಟಾಕಿ ಸಿಡಿಸುವುದರಲ್ಲಿ ನನಗೆ ಅಂತಹ ಆಸಕ್ತಿಯೇನೂ ಇದ್ದಿರಲಿಲ್ಲ. ದೊಡ್ಡವನಾದಂತೆ ಪಟಾಕಿಯಿಂದ ಪೂರ್ತಿಯಾಗಿ ದೂರವಾದೆ. ನಂತರ ದೀಪಾವಳಿ ಸೇರಿದಂತೆ ಹಬ್ಬಗಳ ಆಚರಣೆಯನ್ನೇ ನಿಲ್ಲಿಸಿದೆ. ನನಗೆ ಶ್ರಮಜೀವಿಗಳ ಬದುಕಿನ ಕುರಿತು ಅರ್ಥವಾಗತೊಡಗಿದ್ದು ಫೋಟೊಗ್ರಫಿಯಲ್ಲಿ ತೊಡಗಿಸಿಕೊಂಡ ನಂತರವೇ.
ನಾನು ಫೋಟೊಗ್ರಫಿ ಮೂಲಕ ಬಹಳಷ್ಟು ವಿಷಯಗಳನ್ನು ಕಲಿತುಕೊಂಡೆ. ಪ್ರತಿ ವರ್ಷ ಪಟಾಕಿ ಗೋದಾಮುಗಳಲ್ಲಿ ಪಟಾಕಿ ದುರಂತ ಸಂಭವಿಸುತ್ತಿತ್ತು. ಆದರೆ ಅಂತಹ ಘಟನೆಗಳು ಯಾರ ಗಮನವನ್ನೂ ಸೆಳೆಯದೆ ಮುಗಿದು ಹೋಗುತ್ತಿದ್ದವು.

ಪಟಾಕಿ ಅಂಗಡಿಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಸಾವನ್ನಪ್ಪಿದ ಎಂಟು ಮಕ್ಕಳು ಧರ್ಮಪುರಿ ಜಿಲ್ಲೆಯ ಅಮ್ಮಪೆಟ್ಟೈ ಗ್ರಾಮಕ್ಕೆ ಸೇರಿದವರು. ಸಾವು ಸಂಭವಿಸಿ ಒಂದು ವಾರ ಕಳೆದರೂ ಊರು ಮೌನವಾಗಿದ್ದು, ಯಾರೂ ದೀಪಾವಳಿ ಆಚರಿಸುತ್ತಿಲ್ಲ
ಅದೇನೇ ಇದ್ದರೂ, ಈ ಬಾರಿ [2023] ನಾನು ಕನಿಷ್ಠ ಈ ಅಪಘಾತಗಳನ್ನು ದಾಖಲಿಸುವ ಕೆಲಸವನ್ನಾದರೂ ಮಾಡಬೇಕು ಎಂದುಕೊಂಡೆ. ತಮಿಳುನಾಡು ಮತ್ತು ಕರ್ನಾಟಕದ ಗಡಿಯಲ್ಲಿರುವ ಕೃಷ್ಣಗಿರಿ ಬಳಿ ಪಟಾಕಿ ಸ್ಫೋಟದಲ್ಲಿ ಒಂದೇ ಗ್ರಾಮದ ಎಂಟು ಮಕ್ಕಳು ಸಾವನ್ನಪ್ಪಿದ್ದಾರೆ ಎನ್ನುವ ಸುದ್ದಿ ನನಗೆ ತಿಳಿಯಿತು. ನನಗೆ ಅನೇಕ ಸಂಗತಿಗಳನ್ನು ಕಲಿಸಿದ ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ ಮಾಧ್ಯಮಗಳ ಮೂಲಕವೇ ಈ ವಿಷಯವೂ ತಿಳಿಯಿತು. ಪ್ರತಿಭಟನೆಗಳ ಕುರಿತಾಗಿಯೂ ನನಗೆ ತಿಳಿದಿದ್ದು ಈ ಸಾಮಾಜಿಕ ಜಾಲತಾಣಗಳ ಮೂಲಕ.
ಹೀಗೆ ಸಿಕ್ಕಿದ ಸುದ್ದಿಯ ಕುರಿತು ನಾನು ಕೆಲವು ಸಂಗಾತಿಗಳನ್ನು ವಿಚಾರಿಸಿದೆ. ಅವರ ಮೂಲಕ ಆ ಯುವಕರೆಲ್ಲರೂ ಒಂದೇ ಪಟ್ಟಣದವರು ಮತ್ತು ಅವರು ದೀಪಾವಳಿ ಹಂಗಾಮಿನ ಕೆಲಸಕ್ಕೆ ತೆರಳಿದ್ದರು ಎನ್ನುವುದು ತಿಳಿದುಬಂತು. ಈ ವಿಷಯ ನನ್ನ ಮೇಲೆ ಗಾಢ ಪರಿಣಾಮ ಬೀರಿತು. ವಿನಾಯಕ ಚತುರ್ಥಿಯ ಸಮಯದಲ್ಲಿ ನಾವು ಅರುಗಂಪುಲ್ [ಗರಿಕೆ] ಮತ್ತು ಎರುಕ್ಕಮ್ ಪುಲ್ [ಎಕ್ಕ] ಮಾಲೆಗಳನ್ನು ಮಾಡಿ ಮಾರುತ್ತಿದ್ದೆವು. ಮದುವೆಯ ಸಮಯದಲ್ಲಿ ಮದುವೆ ಮನೆಗಳಿಗೆ ಬಡಿಸುವ ಕೆಲಸಕ್ಕೆಂದು ಹೋಗುತ್ತಿದ್ದೆವು. ಮನೆಯ [ಆರ್ಥಿಕ] ಪರಿಸ್ಥಿತಿಯ ಕಾರಣಕ್ಕಾಗಿ ಕಾಲೋಚಿತ ಕೆಲಸಕ್ಕೆ ಹೋಗುತ್ತಿದ್ದ ಹುಡುಗರಲ್ಲಿ ನಾನೂ ಒಬ್ಬ.
ನನ್ನಂತವನೇ ಒಬ್ಬ ಹುಡುಗ ಹೊಟ್ಟೆಪಾಡಿಗೆ ಇಂತಹ ಕೆಲಸ ಹುಡುಕಿಕೊಂಡು ಹೋಗಿ ದುರಂತದಲ್ಲಿ ಪ್ರಾಣ ಕಳೆದುಕೊಂಡಿದ್ದಾನೆ. ಅದು ನನ್ನನ್ನು ಬಹಳವಾಗಿ ಭಾದಿಸಿಸಿತ್ತು
ನಾನು ಖಂಡಿತವಾಗಿಯೂ ಇದನ್ನು ದಾಖಲಿಸಬೇಕಾಗಿತ್ತು. ನಾನು ಆ ಕೆಲಸವನ್ನು ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಆಮೂರ್ ತಾಲ್ಲೂಕಿನ ಅಮ್ಮಪೇಟ್ಟೈಯಿಂದ ಆರಂಭಿಸಿದೆ. ಈ ಗ್ರಾಮವು ಧರ್ಮಪುರಿ ಮತ್ತು ತಿರುವಣ್ಣಾಮಲೈ ನಡುವೆ ಹರಿಯುವ ತೆನ್ಪಣ್ಣೈ ನದಿಯ ದಡದಲ್ಲಿದೆ. ನದಿಯನ್ನು ದಾಟಿದರೆ ತಿರುವಣ್ಣಾಮಲೈ ಸಿಗುತ್ತದೆ.
ಈ ಊರನ್ನು ತಲುಪಲು ನಾನು ಮೂರು ಬಸ್ಸುಗಳನ್ನು ಬದಲಾಯಿಸಬೇಕಾಯಿತು. ಬಸ್ ಪ್ರಯಾಣದ ಸಮಯವನ್ನು ಈ ಘಟನೆಯ ಕುರಿತು ಮಾಹಿತಿ ಹೊಂದಿದ್ದ ಸಂಗಾತಿಗಳೊಡನೆ ಮಾತನಾಡುತ್ತ ಕಳೆದೆ. ಬಸ್ ನಿಲ್ದಾಣದಲ್ಲಿ ಇನ್ನಷ್ಟು ಸಂಗಾತಿಗಳು ಜೊತೆಯಾಗುವುದಾಗಿ ಭರವಸೆ ಕೊಟ್ಟು ಆಮೂರ್‌ನ ಕಾಮ್ರೆಡ್ ನನ್ನನ್ನು ಅಮ್ಮಾಪೇಟೈ ಬಸ್ಸಿಗೆ ಹತ್ತಿಸಿದರು. ಬಸ್ಸು ಅಮ್ಮಪೇಟೈ ತಲುಪುತ್ತಿದ್ದಂತೆ ನಾನು ಮೊದಲು ನೋಡಿದ ದೃಶ್ಯ ಪಂಜರದೊಳಗಿದ್ದ ಅಂಬೇಡ್ಕರ್ ಪ್ರತಿಮೆ. ಅದು ಮೌನವಾಗಿ ನಿಂತಿತ್ತು. ಊರೂ ಮೌನವಾಗಿತ್ತು. ಅದೇ ಮೌನ ನನ್ನ ದೇಹವನ್ನು ವ್ಯಾಪಿಸಿ ನನ್ನನ್ನು ನಡುಗಿಸಿತು. ಒಂದೂ ಮನೆಯಿಂದಲೂ ಸದ್ದು ಬರುತ್ತಿಲ್ಲ. ಊರಿಗೇ ಊರೇ ಕತ್ತಲಾವರಿಸಿತ್ತು.
ಈ ಕೆಲಸಕ್ಕೆ ಹೊರಟ ದಿನದಿಂದ ನನಗೆ ಏನನ್ನಾದರೂ ತಿನ್ನಬೇಕೆಂದು ಸಹ ಎನ್ನಿಸುತ್ತಿರಲಿಲ್ಲ. ಅಲ್ಲೇ ಅಂಬೇಡ್ಕರ್ ಪ್ರತಿಮೆಯ ಮುಂಭಾಗದಲ್ಲಿದ್ದ ಚಹಾ ಅಂಗಡಿಯಲ್ಲಿ ಒಂದು ಚಹಾ ಕುಡಿದು ಎರಡು ವಡೆ ತಿಂದು ಸಂಗಾತಿಯ (ಕಾಮ್ರೆಡ್) ಬರವಿಗಾಗಿ ಕಾಯುತ್ತಾ ನಿಂತೆ.
ಕಾಮ್ರೆಡ್ ಬಂದವರೇ ನನ್ನನ್ನು ಮಗನನ್ನು ಕಳೆದುಕೊಂಡಿದ್ದ ಮನೆಯೊಂದಕ್ಕೆ ಕರೆದೊಯ್ದರು. ಮನೆಗೆ ಸಿಮೆಂಟ್ ತಗಡಿನ ಛಾವಣಿಯಿತ್ತು ಹಾಗೂ ಮನೆಯ ಒಂದು ಬದಿಗಷ್ಟೇ ಗಾರೆ ಮಾಡಲಾಗಿತ್ತು.

ವಿ.ಗಿರಿ ಅವರು ತೀರಿಕೊಂಡಾಗ ಅವನಿಗೆ 17 ವರ್ಷ. ಕಿರಿಯ ಮಗನಾದ ಅವನು ಕಡಿಮೆ ಅಂಕಗಳಿಂದಾಗಿ ಅರೆವೈದ್ಯಕೀಯ ಕೋರ್ಸಿಗೆ ಕಾಲೇಜಿನಲ್ಲಿ ಪ್ರವೇಶ ಸಿಗದ ಕಾರಣ ಕೆಲಸ ಮಾಡಲಾರಂಭಿಸಿದ್ದ
ಮಹಿಳೆಯೊಬ್ಬರು ಬಂದು ಬಾಗಿಲು ತೆರೆಯುವ ಹೊತ್ತಿಗೆ ನಾವು ಚಿಲಕ ಹಾಕಿದ ಅದನ್ನು ತಟ್ಟಲು ಆರಂಭಿಸಿ ಬಹಳ ಹೊತ್ತಾಗಿತ್ತು. ಆಕೆಯನ್ನು ನೋಡಿದರೇ ಅವರು ನಿದ್ರೆ ಮಾಡದೆ ಬಹಳ ದಿನಗಳಾಗಿರುವುದು ತಿಳಿಯುತ್ತಿತ್ತು. ಕಾಮ್ರೆಡ್ ಆಕೆಯನ್ನು ವಿ. ಸೆಲ್ವಿ (35) ಎಂದು ಪರಿಚಯಿಸಿದರು. ಅವರು ಪಟಾಕಿ ದುರಂತದಲ್ಲಿ ಮಡಿದ 17 ವರ್ಷದ ಗಿರಿ ಎನ್ನುವ ಬಾಲಕನ ತಾಯಿ. ಆಕೆಯನ್ನು ಎಬ್ಬಿಸಿದ್ದಕ್ಕಾಗಿ ನನಗೆ ಬಹಳ ವ್ಯಥೆಯಾಯಿತು.
ಮನೆಯೊಳಗೆ ಕಾಲಿಡುತ್ತಿದ್ದಂತೆ ಗಾರೆ ಮಾಡಿದ ಗೋಡೆಯ ಮೇಲೆ ಸಮವಸ್ತ್ರ ಧರಿಸಿದ ಹುಡುಗನ ಫೋಟೋಗೆ ಹಾರ ಹಾಕಲಾಗಿತ್ತು. ಅವನನ್ನು ನೋಡುತ್ತಿದ್ದ ಹಾಗೆ ನನಗೆ ನನ್ನ ತಮ್ಮನನ್ನು ಕಂಡಂತಾಯಿತು.
ಲಾಕ್‌ಡೌನ್ ಮುಗಿಯುತ್ತಿದ್ದ ಹಾಗೆ ನನ್ನ ಸ್ವಂತ ತಮ್ಮ ಪಟಾಕಿ ಅಂಗಡಿಯೊಂದರಲ್ಲಿ ಹಂಗಾಮಿ ಕೆಲಸಕ್ಕೆ ಹೋಗಿದ್ದ. ಹೋಗಬೇಡ ಎಂದು ನಾವೆಲ್ಲ ಒತ್ತಾಯ ಮಾಡಿದ್ದರೂಅವನು ಅದನ್ನು ಕಿವಿ ಮೇಲೆ ಹಾಕಿಕೊಂಡಿರಲಿಲ್ಲ. ಅವನು ಕೆಲಸದಿಂದ ಮರಳುವ ತನಕವೂ ಅಮ್ಮ ಆತಂಕದಿಂದ ಕಾಯುತ್ತಿದ್ದರು.
ಗಿರಿಯ ಅಮ್ಮ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ನಾನು ಅವರ ಮಗನ ಕುರಿತು ವಿಚಾರಿಸುತ್ತಿದ್ದಂತೆ, ಆಕೆ ಮನೆಯ ಒಂದು ಮೂಲೆಯಲ್ಲಿ ಕುಳಿತು ಅಳತೊಡಗಿದರು. ಕಾಮ್ರೆಡ್ ಸಂತ್ರಸ್ತನ ಅಣ್ಣ ಬರುವ ತನಕ ಕಾಯೋಣ ಎಂದರು. ನಂತರ ಬಂದ ಗಿರಿಯ ಎರಡನೇ ಅಣ್ಣ ತನ್ನ ತಮ್ಮನ ಸಾವಿನ ಕತೆಯನ್ನು ವಿವರಿಸತೊಡಗಿದರು.
“ನನ್ನ ಹೆಸರು ಸೂರ್ಯ, ನನಗೆ 20 ವರ್ಷ. ನಮ್ಮ ತಂದೆಯ ಹೆಸರು ವೆಡಿಯಪ್ಪನ್. ಅವರು ಹೃದಯಾಘಾತದಿಂದ ನಿಧನರಾಗಿ ಎಂಟು ವರ್ಷಗಳಾಗಿವೆ.
ಅವರು ಮಾತನಾಡಿದ ನಂತರ, ಅವರ ತಾಯಿ ಹಿಂಜರಿಕೆಯಿಂದ ಒಡಕು ದನಿಯಲ್ಲಿ ಮಾತನಾಡತೊಡಗಿದರು. “ಅವರು ತೀರಿಕೊಂಡ ನಂತರ ಜೀವನ ನಡೆಸುವುದು ಕಷ್ಟವಾಗಿತ್ತು. ನನ್ನ ದೊಡ್ಡ ಮಗ 12ನೇ ತರಗತಿಗೆ ಓದು ಮುಗಿಸಿ ನಗರಕ್ಕೆ ಹೋಗಿ ದುಡಿದು ಹಣ ಕಳುಹಿಸಲು ನಿರ್ಧರಿಸಿದ. ನಾವು ಸಾಲ ತೀರಿಸಲು ಆರಂಭಿಸಿದೆವು. ಜೊತೆಗೆ ಅವನ ತಮ್ಮಂದಿರು ಬೆಳೆಯುತ್ತಿದ್ದರು. ನಾವು ದೊಡ್ಡ ಮಗನಿಗೆ ಮದುವೆ ಮಾಡಿಸಲು ತೀರ್ಮಾನಿಸಿದೆವು. ಈಗ ಕೇವಲ ಮೂರು ತಿಂಗಳ ಹಿಂದೆ ಅವನ ಮದುವೆ ಮಾಡಿದೆವು. ನಾನು ಇಂತಹ ಕಷ್ಟದ ಪರಿಸ್ಥಿತಿಯಲ್ಲೂ ಮಕ್ಕಳಿಗೆ ಓದಿಸಿದ್ದೆ. ಇದು ಹೀಗಾಗಬಹುದೆಂದು ನಾನು ಭಾವಿಸಿರಲಿಲ್ಲ” ಎಂದು ಅವರು ಹೇಳುತ್ತಾರೆ.
“ಕಾಲೇಜಿನಲ್ಲಿ ಸೀಟು ಸಿಗಲಿಲ್ಲವೆನ್ನುವ ಒಂದೇ ಕಾರಣಕ್ಕಾಗಿ ಅವನು ಎರಡು ತಿಂಗಳ ಮಟ್ಟಿಗೆ ಬಟ್ಟೆ ಅಂಗಡಿಯೊಂದಕ್ಕೆ ಕೆಲಸಕ್ಕೆ ಸೇರಿದ್ದ. ಅದರ ನಂತರ ಎರಡು ತಿಂಗಳು ಮನೆಯಲ್ಲೇ ಇದ್ದ. ತನ್ನ ಗೆಳೆಯರು ಹೋಗುತ್ತಿದ್ದಾರೆನ್ನುವ ಕಾರಣಕ್ಕೆ ಅವನೂ ಪಟಾಕಿ ಅಂಗಡಿ ಕೆಲಸಕ್ಕೆ ಹೋದ. ನಂತರ ಹೀಗಾಯಿತು.”


ಎಡಕ್ಕೆ: ಗಿರಿಯ ಬಾಲ್ಯದ ಫೋಟೋವನ್ನು ಅವನ ದಿವಂಗತ ತಂದೆ ವೆಡಿಯಪ್ಪನ್ ಅವರ ಫೋಟೋದಲ್ಲಿ ಇರಿಸಲಾಗಿದೆ. ಬಲ: ಅವನ ತಾಯಿ ವಿ. ಸೆಲ್ವಿಯವರಿಗೆ ಮಾತನಾಡಲು ಸಾಧ್ಯವಾಗಲಿಲ್ಲ. ನಾನು ಗಿರಿಯ ಬಗ್ಗೆ ಕೇಳಿದಾಗ ಅವರು ಮನೆಯ ಮೂಲೆಯಲ್ಲಿ ಕುಳಿತು ಅಳಲು ಪ್ರಾರಂಭಿಸಿದರು
“ಈ ಸಮಯದಲ್ಲಿ ತಂಬಿ [ತಮ್ಮ] ಬಟ್ಟೆ ಅಂಗಡಿ ಕೆಲಸಕ್ಕಷ್ಟೇ ಹೋಗುತ್ತಿದ್ದ. ಈ ವರ್ಷ ಅವನು ಈ ಕೆಲಸಕ್ಕೆ [ಪಟಾಕಿ ಅಂಗಡಿ] ಹೋಗಲು ತೀರ್ಮಾನಿಸಿದ್ದ. ಅವನು 12ನೇ ತರಗತಿ ಮುಗಿಸಿ ಪ್ಯಾರಾ ಮೆಡಿಕಲ್ ಕೋರ್ಸಿಗೆ ಅಪ್ಲೈ ಮಾಡಿದ್ದ. ಅಂಕಗಳು ಕಡಿಮೆಯಿದ್ದ ಕಾರಣ ಅವನ ಅರ್ಜಿ ತಿರಸ್ಕೃತಗೊಂಡಿತ್ತು. ಅದಾದ ನಂತರ ಅವನು ಬಟ್ಟೆಯಂಗಡಿ ಕಲಸಕ್ಕೆ ಹೋಗಲು ಶುರು ಮಾಡಿದ್ದ. ಒಮ್ಮೆ ಆಡಿ [ಆಷಾಡ ಮಾಸ, ಈ ಸಮಯದಲ್ಲಿ ಬಟ್ಟಯಂಗಡಿಗಳಲ್ಲಿ ಸೇಲ್ಸ್ ಹಾಕಿರಲಾಗುತ್ತದೆ.] ಮಾಸದಲ್ಲಿ ಅವನು 25,000 [ರೂಪಾಯಿಗಳನ್ನು] ಗಳಿಸಿದ್ದ. ಅದರಲ್ಲಿ 20,000 ರೂ.ಗಳನ್ನು ಮನೆಯ ಸಾಲ ತೀರಿಸಲು ಬಳಸಿದ್ದ.
“ಎಂಟು ವರ್ಷಗಳ ಹಿಂದೆ ನಮ್ಮ ತಂದೆ ತೀರಿಕೊಂಡ ನಂತರ, ನಾವಿಬ್ಬರೂ ಜವಳಿ ಅಂಗಡಿಗಳಿಗೆ ಹೋಗುತ್ತಿದ್ದೆವು, ಮತ್ತು ನಾವು ಸಂಪಾದಿಸಿದ ಹಣದಿಂದ ಸಾಲಗಳನ್ನು ತೀರಿಸುತ್ತಿದ್ದೆವು. ನಮ್ಮ ಅಣ್ಣನಿಗೆ ಮದುವೆಯಾಯಿತು. ಈ ಪ್ರಕ್ರಿಯೆಯಲ್ಲಿ, ನಾವು 30,000 ರೂಪಾಯಿಗಳ ಸಾಲವನ್ನು ತೆಗೆದುಕೊಂಡೆವು.
“ನಾವು ಎಲ್ಲ ಬಗೆಯ ಕೆಲಸಗಳನ್ನೂ ಮಾಡುತ್ತಿದ್ದೆವು. ಹೋದಲ್ಲಿ ಸರಿಯಾಗಲಿಲ್ಲವೆಂದರೆ ಊರಿಗೆ ಮರಳುತ್ತಿದ್ದೆವು. ಇಲ್ಲಿನ ಹುಡುಗರ ಬಳಿ ಪಟಾಕಿ ಅಂಗಡಿ ಮಾಲಿಕರೊಬ್ಬರು ಕೆಲಸ ಇರುವುದಾಗಿ ಹೇಳಿದರು. ಮೊದಲಿಗೆ ಒಂದಷ್ಟು ಹುಡುಗರು ಕೆಲಸಕ್ಕೆಂದು ಹೋದರು. ಎರಡನೇ ತಂಡದಲ್ಲಿ ನನ್ನ ತಮ್ಮನೂ ಹೋಗಿದ್ದ.
“ಆದರೆ ಕೆಲಸಕ್ಕೆ ಹೋದ ಹುಡುಗರ ನಡುವೆ ಏನೋ ಸಮಸ್ಯೆಯಾಗಿತ್ತು. ಹೀಗಾಗಿ ನನ್ನ ತಮ್ಮ ಗಿರಿ ಊರಿಗೆ ಮರಳಿದ್ದ. ಬಂದವನು ಅಣ್ಣನ ಜೊತೆಗಿದ್ದ. ಅಲ್ಲಿ ಅವರೊಂದಿಗೆ ಕೆಲಸದಲ್ಲಿದ್ದ. ನಂತರ ಅಣ್ಣ ದೇವಸ್ಥಾನಕ್ಕೆ ಹೋಗಲೆಂದು ಊರಿಗೆ ಬಂದ.
“ಇದೇ ಸಮಯದಲ್ಲೇ ನನ್ನ ತಮ್ಮನಿಗೆ ಕೆಲಸಕ್ಕೆ ಹೋಗಿದ್ದ ಹುಡುಗರಿಂದ ಫೋನ್ ಬಂದಿತ್ತು. ಅವರು ಅವನನ್ನು ಮತ್ತೆ ಕೆಲಸಕ್ಕೆ ಬರುವಂತೆ ಕರೆದಿದ್ದರು. ಅವನು ಅಕ್ಟೋಬರ್ 7, 2023ರಂದು ಕೆಲಸಕ್ಕೆ ಹೋದ. ಅದೇ ದಿನ ಅಪಘಾತ ಸಂಭವಿಸಿದ್ದು.
ಅವನು ಒಂದೇ ಒಂದು ದಿನ ಕೆಲಸ ಮಾಡಿದ್ದ.
ನನ್ನ ತಮ್ಮ ಹುಟ್ಟಿದ್ದು 2006ನೇ ಇಸವಿಯ ಅಕ್ಟೋಬರ್ ತಿಂಗಳ 3ನೇ ತಾರೀಖಿನಂದು. ಅಕ್ಟೋಬರ್ 17ರಂದು ಹೀಗಾಯಿತು.
ಅಂದು ಏನಾಯಿತೆಂದು ನಮ್ಮಲ್ಲಿ ಯಾರಿಗೂ [ಹಳ್ಳಿಯಲ್ಲಿ] ತಿಳಿದಿರಲಿಲ್ಲ. ಅಪಘಾತದಲ್ಲಿ ಬದುಕುಳಿದ ಊರಿನ ಇಬ್ಬರು ಹುಡುಗರು ನಮಗೆ ಮಾಹಿತಿ ನೀಡಿದರು. ನಂತರ ನಾವು ವಿಚಾರಿಸಲು ಪ್ರಾರಂಭಿಸಿದೆವು. ಆಗ ನಮ್ಮ ಹಳ್ಳಿಯ ಏಳು ಮಕ್ಕಳು ಸಾವನ್ನಪ್ಪಿರುವುದು ತಿಳಿಯಿತು. ನಾವು ಕಾರನ್ನು ಬಾಡಿಗೆಗೆ ಪಡೆದು ಶವವನ್ನು ಗುರುತಿಸಲು ಹೋದೆವು.

19 ವರ್ಷದ ಆಕಾಶ್ ಎಂಬ ಮೃತ ಯುವಕನ ಭಾವಚಿತ್ರಕ್ಕೆ ಹೂಮಾಲೆ ಹಾಕಿ ಮನೆಯ ಮುಂಭಾಗದ ಕುರ್ಚಿಯ ಮೇಲೆ ಇರಿಸಲಾಗಿತ್ತು. ಅವರ ತಂದೆ ಎಂ.ರಾಜಾ ಫೋಟೋ ಬಳಿ ಕುಳಿತಿದ್ದಾರೆ
ಪ್ರಕರಣ ದಾಖಲಾಗಿತ್ತು. ಕರ್ನಾಟಕದ ಮುಖ್ಯಮಂತ್ರಿ, ಸಚಿವ ಕೆ.ಪಿ.ಅನ್ಬಳಗನ್, ಶಾಸಕ, ಸಂಸದ ಮತ್ತು ಇನ್ನೂ ಅನೇಕರು ಬಂದಿದ್ದರು. ಸಂಗ್ರಹಿಸಿದ ಮೂರು ಲಕ್ಷ ರೂಪಾಯಿಗಳ ಚೆಕ್ಕನ್ನು ಹಸ್ತಾಂತರಿಸಲಾಯಿತು. ತಮಿಳುನಾಡು ಮುಖ್ಯಮಂತ್ರಿ ಬರುತ್ತಾರೆ ಎಂದು ಅವರು ಹೇಳಿದರು ಆದರೆ ಅವರು ಬರಲಿಲ್ಲ.
ಪ್ರತಿ ಕುಟುಂಬಕ್ಕೂ ಅವರ ಶೈಕ್ಷಣಿಕ ಮಟ್ಟಕ್ಕೆ ಅನುಗುಣವಾಗಿ ಸರ್ಕಾರಿ ಉದ್ಯೋಗ ನೀಡಬೇಕೆನ್ನುವುದು ನಮ್ಮ ಬೇಡಿಕೆ.
ಗಿರಿಯ ಕುಟುಂಬ ಉಳಿದ ಇಬ್ಬರು ಗಂಡು ಮಕ್ಕಳಲ್ಲಿ ಒಬ್ಬರಿಗೆ ಕೆಲಸ ಸಿಗುವ ನಿರೀಕ್ಷೆಯಲ್ಲಿತ್ತು. “ನಮ್ಮದು ಕೈಗೂ ಬಾಯಿಗೂ ಸರಿ ಹೋಗವ ದುಡಿಮೆಯಿರುವ ಕುಟುಂಬ. ಇಬ್ಬರಲ್ಲಿ ಒಬ್ಬರಿಗೆ ಕೆಲಸ ಸಿಕ್ಕಿದ್ದರೆ ಅವರಿಗೆ ಸಹಾಯವಾಗುತ್ತಿತ್ತು.”
ಗಿರಿಯ ತಾಯಿ ಮಾತು ಮುಗಿಸಿದ ನಂತರ ಅವನ ಫೋಟೊ ಇದೆಯೇ ಎಂದು ಕೇಳಿದೆ. ಗಿರಿಯ ಅಣ್ಣ ತನ್ನ ದಿವಂಗತ ತಂದೆಯ ಫೋಟೊದತ್ತ ಬೆಟ್ಟು ಮಾಡಿದ. ಆ ಫೋಟೊದೊಳಗೆ ಪುಟ್ಟ ಗಿರಿ ನಿಂತುಕೊಂಡಿರುವ ಫೋಟೊವೊಂದನ್ನು ಇರಿಸಲಾಗಿತ್ತು. ಅದೊಂದು ಚಂದದ ಚಿತ್ರವಾಗಿತ್ತು.
“ಕರೂರಿನಲ್ಲಿ ಸಿಪ್‌ಕಾಟ್ ರೀತಿಯದ್ದು ಏನಾದರೂ ಇದ್ದಿದ್ದರೆ ನಮ್ಮ ಹುಡುಗರು ಅಷ್ಟು ದೂರ ಕೆಲಸ ಹುಡುಕಿಕೊಂಡು ಹೋಗುತ್ತಿರಲಿಲ್ಲ. ಕಳೆದ ಬಾರಿ ಹುಡುಗರನ್ನು ಬ್ರೈನ್ ವಾಶ್ ಮಾಡಲಾಗಿತ್ತು. ಅವರು ಹಿಂತಿರುಗಿದಾಗ ಹೊಸ ಫೋನ್ ಸಿಗುತ್ತದೆ ಎಂದು ಅವರಿಗೆ ಆಮಿಷ ಒಡ್ಡಲಾಗಿತ್ತು. ಗೋದಾಮಿನಲ್ಲಿ ಪಟಾಕಿಗಳು ಸ್ಫೋಟಗೊಂಡಿವೆ ಎಂದು ಯಾರಿಗೂ ತಿಳಿದಿರಲಿಲ್ಲ. ಎಲ್ಲಾ ಎಂಟು ಹುಡುಗರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಅಲ್ಲಿ ಹೋಗಿ ನೋಡಿದಾಗ ಎಲ್ಲರೂ ಒಟ್ಟಿಗೆ ಹೊರಬರಲಾದಷ್ಟು ದಾರಿ ಇಕ್ಕಟ್ಟಾಗಿತ್ತು. ಹುಡುಗರು ಪಟಾಕಿ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವುದು ಇದೇ ಮೊದಲು" ಎಂದು ಕಾಮ್ರೇಡ್ ಬಾಲಾ ತಿಳಿಸಿದರು.
ಕಾಮ್ರೇಡ್ ಬಾಲಾ ಹಾಗೆ ಹೇಳಿದಾಗ, ನನಗೆ ನನ್ನ ಸ್ವಂತ ತಮ್ಮ ಬಾಲಾನ ನೆನಪಾಯಿತು. ಅಲ್ಲಿ ನಿಲ್ಲುವುದು ನನಗೆ ಕಷ್ಟವಾಯಿತು. ನನಗೆ ಉಸಿರುಗಟ್ಟಿತು, ಹೃದಯ ಮರಗಟ್ಟಿದಂತಾಯಿತು.
ತೀರಿಕೊಂಡ ಎಲ್ಲಾ ಎಂಟು ಯುವಕರ ಕುಟುಂಬಗಳು ತಮ್ಮ ಪ್ರೀತಿಪಾತ್ರರ ಚಿತ್ರಗಳಿಗೆ ಫ್ರೇಮ್ ಮಾಡಿಸಿದ್ದರು. ಪ್ರತಿಯೊಂದು ಮನೆಯೂ ಸ್ಮಶಾನದಂತಿತ್ತು. ಜನರು ಬರುತ್ತಲೇ ಇದ್ದರು ಮತ್ತು ಹೋಗುತ್ತಿದ್ದರು. ಅಪಘಾತ ಸಂಭವಿಸಿ ಒಂದು ವಾರಕ್ಕೂ ಹೆಚ್ಚು ಸಮಯವಾಗಿದೆ ಆದರೆ ನೋವು ಮತ್ತು ಕಣ್ಣೀರು ಅಲ್ಲಿ ಹಾಗೇ ಉಳಿದಿದೆ. ಸಂಬಂಧಿಕರು ಅಲ್ಲಿಯೇ ನಿಂತಿದ್ದಾರೆ.


'ಇದೇ ಮೊದಲ ಬಾರಿಗೆ ಅವರು ಈ ರೀತಿಯ ಕೆಲಸಕ್ಕೆ ಹೋಗಿದ್ದು' ಎಂದು ಆಕಾಶ್ ಬಗ್ಗೆ ಎಂ. ರಾಜಾ ಹೇಳುತ್ತಾರೆ. ಅವರ ತಾಯಿ (ಬಲ) 12 ವರ್ಷಗಳ ಹಿಂದೆ ನಿಧನರಾದರು
![Raja says Akash was particularly fond of Dr. B.R. Ambedkar. 'He had hung his [Ambedkar’s] portrait [near his bed] so that he would be the first image to see when he woke up'](/media/images/07-PAL_9250-PK-Every_house_is_like_a_grave.max-1400x1120_Ou8b82x.jpg)
ಆಕಾಶನಿಗೆ ಅಂಬೇಡ್ಕರ್ ಎಂದರೆ ಅಭಿಮಾನ ಮತ್ತು ಪ್ರೀತಿ ಎಂದು ರಾಜಾ ಹೇಳುತ್ತಾರೆ. 'ಅವನು ಎದ್ದಾಗ ತಾನು ಮೊದಲು ಅಣಬೇಡ್ಕರ್ ಚಿತ್ರವನ್ನು ನೋಡಬೇಕೆನ್ನುವ ಕಾರಣಕ್ಕೆ ಹಾಸಿಗೆಯ ಎದುರು ಅಂಬೇಡ್ಕರ್ ಫೋಟೊ ನೇತುಹಾಕಿದ್ದ' ಎಂದು ಅವರು ಹೇಳುತ್ತಾರೆ
ಮೃತ 19 ವರ್ಷದ ಆಕಾಶ್ ಎಂಬ ಯುವಕನ ಭಾವಚಿತ್ರಕ್ಕೆ ಹೂಮಾಲೆ ಹಾಕಿ ಮನೆಯ ಮುಂಭಾಗದ ಕುರ್ಚಿಯ ಮೇಲೆ ಇರಿಸಲಾಗಿತ್ತು. ಅವನ ತಂದೆ ಫೋಟೊ ಎದುರು ಮಲಗಿದ್ದರು. ಅವರ ಮನೆಯಲ್ಲಿ ಕೇವಲ ಎರಡು ಕೋಣೆಗಳಿದ್ದವು. ನಾನು ಅವರ ಮನೆಗೆ ಹೋದಾಗ, ಆಕಾಶನ ತಾಯಿಯ ಫೋಟೋವನ್ನು ಮತ್ತೊಂದು ಕುರ್ಚಿಯ ಮೇಲಿರಿಸಲಾಗಿತ್ತು.
ನಾನು ಆಕಾಶನ ತಂದೆಯೊಂದಿಗೆ ಮಾತನಾಡಲು ಪ್ರಾರಂಭಿಸಿದಾಗ, ಅವರು ಅನಿಯಂತ್ರಿತವಾಗಿ ಅಳುತ್ತಿದ್ದರು. ಅಲ್ಲದೆ ಅವರು ಮದ್ಯದ ಅಮಲಿನಲ್ಲಿದ್ದರು. ನನ್ನನ್ನು ಅಲ್ಲಿಗೆ ಕರೆದೊಯ್ದ ಕಾಮ್ರೇಡ್ ಅವರನ್ನು ಸಮಾಧಾನಗೊಳಿಸಿ ಮಾತನಾಡುವಂತೆ ಮಾಡಿದರು.
“ನಾನು ಎಮ್. ರಾಜಾ. ನನಗೆ 47 ವರ್ಷ. ನಾನು ಚಹಾ ಅಂಗಡಿಯೊಂದರಲ್ಲಿ ಲೋಟ ತೊಳೆಯುವ ಕೆಲಸ ಮಾಡುತ್ತೇನೆ. ನನ್ನ ಮಗ ಅವನ ಸ್ನೇಹಿತರು ಹೋದರು ಎನ್ನುವ ಕಾರಣಕ್ಕೆ ಪಟಾಕಿ ಅಂಗಡಿ ಕೆಲಸಕ್ಕೆ ಹೋಗಿದ್ದ. ಅವನು ಒಳ್ಳೆಯ ಹುಡುಗನಾಗಿದ್ದ, ಬುದ್ಧಿವಂತನೂ ಆಗಿದ್ದ. ಅವನು ಕೆಲಸಕ್ಕೆ ಹೊರಡುವ ಮೊದಲು ನನಗೆ ಕುಡಿಯಲೆಂದು 200 ರೂಪಾಯಿ ನೀಡಿದ್ದ. 10 ದಿನಗಳಲ್ಲಿ ವಾಪಸ್ ಬರುವುದಾಗಿಯೂ, ಬಂದ ನಂತರ ನನ್ನನ್ನು ನೋಡಿಕೊಳ್ಳುವುದಾಗಿಯೂ ಹೇಳಿದ್ದ. ಅವನು ಈ ರೀತಿ ಕೆಲಸಕ್ಕೆ ಹೋಗಿದ್ದು ಇದೇ ಮೊದಲು. ನಾನು ಅವನನ್ನು ಈ ಮೊದಲು ಎಂದೂ ಕೆಲಸಕ್ಕೆ ಕಳುಹಿಸಿರಲಿಲ್ಲ.”
ಆಕಾಶನಿಗೆ ಅಂಬೇಡ್ಕರ್ ಎಂದರೆ ಬಹಳ ಪ್ರೀತಿ ಎನ್ನುತ್ತಾರೆ ರಾಜ. “ಅವನು ಹಾಸಿಗೆಯಿಂದ ಎದ್ದ ಕೂಡಲೇ ನೋಡುವ ಮೊದಲ ಮುಖ ಅಂಬೇಡ್ಕರ್ ಅವರದ್ದಾಗಿರಬೇಕು ಎನ್ನುವ ಕಾರಣಕ್ಕೆ ಹಾಸಿಗೆ ಎದುರು ಅಂಬೇಡ್ಕರರ ಫೋಟೊ ನೇತು ಹಾಕಿದ್ದ. ನಮ್ಮ ಮಕ್ಕಳು ನಮ್ಮ ಬದುಕಿನಲ್ಲಿ ಹೇಗೆಲ್ಲ ಬರುತ್ತಾರೆ ಎಂದು ಯೋಚಿಸುತ್ತಿದ್ದೆ. ಅಷ್ಟರಲ್ಲಿ ಇದೆಲ್ಲ ನಡೆಯಿತು. ಆರಂಭದಲ್ಲಿ ಅವನು ಜವಳಿ ಅಂಗಡಿಯೊಂದಕ್ಕೆ ಕೆಲಸಕ್ಕೆ ಹೋಗಿದ್ದ. ಈ ಬಾರಿ ಅವನು ಪಟಾಕಿ ಅಂಗಡಿ ಕೆಲಸಕ್ಕೆ ಹೋಗುತ್ತಾನೆ ಎನ್ನುವುದು ನನಗೆ ತಿಳಿದಿರಲೇ ಇಲ್ಲ. ಎರಡು ವರ್ಷ ಓದಿ ನಂತರ ಅವನು ಕಾಲೇಜು ಓದನ್ನು ನಿಲ್ಲಿಸಿದ್ದ. ಆದರೆ ಅವನನ್ನು ಕೆಲಸಕ್ಕೆ ಕಳುಹಿಸುವ ಯಾವುದೇ ಇರಾದೆ ನಮಗಿರಲಿಲ್ಲ. ನನಗೆ ಒಬ್ಬಳು ಮಗಳು ಮತ್ತು ಇಬ್ಬರು ಗಂಡು ಮಕ್ಕಳು. ನಾನು ಬದುಕುತ್ತಿರುವುದೇ ನನ್ನ ಮಕ್ಕಳಿಗಾಗಿ. ನನ್ನ ಹೆಂಡತಿ ತೀರಿಕೊಂಡು 12 ವರ್ಷ ಕಳೆದಿದೆ.”

21 ವರ್ಷದ ವೇದಪ್ಪನ್ ಸ್ಫೋಟದಲ್ಲಿ ಸಾವನ್ನಪ್ಪಿದವರಲ್ಲಿ ಅತ್ಯಂತ ಹಿರಿಯ. ಸಾಯುವ 21 ದಿನಗಳ ಮೊದಲಷ್ಟೇ ಅವರಿಗೆ ಮದುವೆಯಾಗಿತ್ತು
ನಂತರ ನಾವು 21 ವರ್ಷದ ವೇದಪ್ಪನ್ ಅವರ ಮನೆಗೆ ಭೇಟಿ ನೀಡಿದೆವು. ಅಲ್ಲಿ ಅಂಬೇಡ್ಕರ್ ಅವರ ಚಿತ್ರದ ಪಕ್ಕದಲ್ಲಿ ಕೋಟ್ ಸೂಟ್ ಧರಿಸಿದ ಅವರ ಫೋಟೋ ಗೋಡೆಯ ಮೇಲೆ ನೇತಾಡುತ್ತಿತ್ತು, ಅದು ಅವರ ಸಾವಿನ ಸುದ್ದಿಯ್ನನು ನಮಗೆ ತಿಳಿಸುತ್ತಿತ್ತು. ಮೃತರಾದ ಎಂಟು ಮಂದಿಯಲ್ಲಿ ಅವರೊಬ್ಬರೇ ವಿವಾಹಿತರಾಗಿದ್ದರು. ಅವರು ಮದುವೆಯಾಗಿ ಕೇವಲ 21 ದಿನಗಳಾಗಿತ್ತು. ಅವರ ತಂದೆಯನ್ನು ಹೊರತುಪಡಿಸಿ ಯಾರೂ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ವೇದಪ್ಪನ್ ಅವರ ಪತ್ನಿ ಇನ್ನೂ ಆಘಾತದಿಂದ ಚೇತರಿಸಿಕೊಂಡಿರಲಿಲ್ಲ.
"ನಾವು ಧರ್ಮಪುರಿ ಜಿಲ್ಲೆಯ ಟಿ.ಅಮ್ಮಪಟ್ಟಿ ಗ್ರಾಮದವರು. ನಮ್ಮದು ಶ್ರೀಮಂತ ಕುಟುಂಬವಲ್ಲ. ಕನಿಷ್ಠ ಏಳು ಜನರು ನಮ್ಮ ಹಳ್ಳಿಯಿಂದ ಮತ್ತು 10 ಜನರು ನಮ್ಮ ಜಿಲ್ಲೆಯಿಂದ ಹೋಗಿದ್ದಾರೆ. ಉದ್ಯೋಗದ ಕೊರತೆಯಿಂದಾಗಿ ಅವರು ಈ ಕೆಲಸಗಳಿಗೆ ಹೋಗಿದ್ದರು. ಈ ಘಟನೆ ನಡೆಯು ಎರಡು ಅಥವಾ ಮೂರು ದಿನಗಳ ಮೊದಲಷ್ಟೇ ಅವರು ಕೆಲಸಕ್ಕೆ ಹೋಗಿದ್ದರು.
"ಈ ಅಪಘಾತಕ್ಕೆ ಕಾರಣವೇನೆನ್ನುವುದನ್ನು ಕರ್ನಾಟಕ ಅಥವಾ ತಮಿಳುನಾಡು ಸರ್ಕಾರ ಘೋಷಿಸಿಲ್ಲ. ಇದರಿಂದಾಗಿ ಮರಣ ಪ್ರಮಾಣಪತ್ರವನ್ನು ಪಡೆಯುವುದು ಸಹ ಕಷ್ಟವಾಗಿದೆ. ತಮಿಳುನಾಡು ಸರ್ಕಾರವು ನಮಗೆ ಮರಣ ಪ್ರಮಾಣಪತ್ರ, ಪರಿಹಾರವನ್ನು ನೀಡಬೇಕು ಮತ್ತು ಪ್ರತಿ ಕುಟುಂಬಕ್ಕೆ ಶೈಕ್ಷಣಿಕ ಅರ್ಹತೆಯ ಆಧಾರದ ಮೇಲೆ ಸರ್ಕಾರಿ ಉದ್ಯೋಗವನ್ನು ನೀಡಬೇಕು.”


ಎಡಕ್ಕೆ: ಕೇಶವನ್ (ಗುಲಾಬಿ ಬಣ್ಣದ ಗಿ) ತನ್ನ ತಾಯಿ, ಕೃಷ್ಣವೇಣಿ ಮತ್ತು ಅಣ್ಣನೊಂದಿಗೆ ಇರುವ ಫೋಟೋ. ಬಲ: ಸ್ಫೋಟದಲ್ಲಿ ಅವನು ಸತ್ತ ಸಮಯದಲ್ಲಿ ಅವನು ಪಟಾಕಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾನೆಂದು ಅವನ ತಾಯಿಗೆ ತಿಳಿದಿರಲಿಲ್ಲ


ಎಡ: ಕುಮಾರಿಯವರ ಮಗ ಮುನಿವೇಲ್ ಸ್ಫೋಟದಲ್ಲಿ ಮೃತಪಟ್ಟಾಗ ಅವರಿಗೆ 20 ವರ್ಷ ವಯಸ್ಸಾಗಿತ್ತು. ಇತರ ಎಲ್ಲ ಮೃತರಂತೆ ಅವರ ಫೋಟೋವನ್ನು ಅವರ ಮನೆಯ ಹೊರಗೆ ಇರಿಸಲಾಗಿದೆ. ಬಲ: ಇಲುಂಪರಿಧಿಯ ಹೆತ್ತವರಾದ ಭಾನು ಮತ್ತು ಸೆಂಥಿಲ್ ಕುಮಾರ್ ತಮ್ಮ ಮಗನ ಫೋಟೋದ ಬಳಿ ನಿಂತಿದ್ದಾರೆ
30ರ ವಯಸ್ಸಿನ ಆಸುಪಾಸಿನಲ್ಲಿರುವ ಆರ್. ಕೇಶವನ್ ಅವರ ತಾಯಿ ಕೃಷ್ಣವೇಣಿಯವರಿಗೆ ತಮ್ಮ ಮಗ ಪಟಾಕಿ ಅಂಗಡಿ ಕೆಲಸಕ್ಕೆ ಹೋಗಿರುವುದು ಗೊತ್ತಿರಲಿಲ್ಲ. “ಅವನು ತನ್ನ ಗೆಳೆಯರೊಂದಿಗೆ ಹೋಗಿದ್ದ. ಇದುವರೆಗೆ ಸರ್ಕಾರದಿಂದ ಯಾವುದೇ ಸುದ್ದಿಯಿಲ್ಲ. ಅವರು ನಮಗೆ ಕೆಲಸ ಕೊಡಬಹುದು ಎನ್ನುವ ನಂಬಿಕೆಯಲ್ಲಿದ್ದೇವೆ.”
ಅಪಘಾತದಲ್ಲಿ ತನ್ನ ಮಗನನ್ನು ಕಳೆದುಕೊಂಡ ಮೂವತ್ತೈದು ವರ್ಷದ ಕುಮಾರಿಯವರು ಅಪಘಾತದ ದಿನದಂದು ತನ್ನ ಮಗ ಹಂಚಿಕೊಂಡ ಸೆಲ್ಫಿಗಳ ಬಗ್ಗೆ ಮಾತನಾಡುತ್ತಾರೆ. "ದೀಪಾವಳಿಯ ಸಮಯದಲ್ಲಿ ಮನೆಯಲ್ಲಿ ನಮಗೆಲ್ಲ ಊಟ ಸಿಗಬೇಕು ಎನ್ನುವ ಕಾರಣಕ್ಕಾಗಿ ಅವರು ಇಂತಹ ಅಪಾಯಕಾರಿ ಕೆಲಸಗಳಿಗೆ ಹೋಗುತ್ತಾರೆ. ಅಲ್ಲಿ ಕೆಲಸ ಮಾಡಿ ಹೊಸ ಬಟ್ಟೆ ಹಾಗೂ ಉಡುಗೊರೆಗಳನ್ನು ಖರೀದಿಸಲು ಅವರು ಯೋಚಿಸಿದ್ದರು ಪಟಾಕಿ ಅಂಗಡಿಯಲ್ಲಿ ದಿನಕ್ಕೆ 1,200 ರೂಪಾಯಿ ಸಿಗುತ್ತದೆ, ಆದರೆ ಜವಳಿ ಅಂಗಡಿಯಲ್ಲಿ ಅವರು ಕೇವಲ 700-800 ರೂಪಾಯಿ ಸಿಗುತ್ತದೆ.
“ಆ ಮಕ್ಕಳು ಊಟ ಮಾಡುತ್ತಿರುವ ಸೆಲ್ಫಿಯನ್ನು ನೋಡಿದ ಸ್ವಲ್ಪ ಹೊತ್ತಿನಲ್ಲೇ ಅವರ ಶವಗಳ ಫೋಟೊ ನೋಡಿದ ನನ್ನ ಪರಿಸ್ಥಿತಿ ಹೇಗಿದ್ದಿರಬಹುದೆಂದು ಯೋಚಿಸಿ?”
ನಾವು ಅನುಭವಿಸಿದ ನೋವನ್ನು ಯಾವ ಕುಟುಂಬವೂ ಅನುಭವಿಸಬಾರದು. ಪಟಾಕಿ ಅಂಗಡಿಗಳಲ್ಲಿ ಇಂತಹ ದುರಂತಗಳು ನಡೆಯಬಾರದು. ಒಂದು ವೇಳೆ ನಡೆದರೂ ಅಲ್ಲಿಂದ ತಪ್ಪಿಸಿಕೊಳ್ಳಲು ದಾರಿಯಿರಬೇಕು. ಹಾಗಿಲ್ಲದಿದ್ದಲ್ಲಿ ಅಂಗಡಿ ನಡೆಸಲು ಅವಕಾಶ ಕೊಡಬಾರದು. ನಮ್ಮ ಕುಟುಂಬ ಅನುಭವಿಸಿದ ನೋವನ್ನು ಇನ್ನೊಂದು ಕುಟುಂಭ ಅನುಭವಿಸದಿರಲಿ.


ಎಡ: ದುರಂತ ಸಂಭವಿಸುವ ಮೊದಲು ಟಿ.ವಿಜಯರಾಘವನ್, ಕೇಶವನ್ ಮತ್ತು ಆಕಾಶ್ ತಮ್ಮ ಫೋಟೋಗಳನ್ನು ತಮ್ಮ ಕುಟುಂಬಗಳಿಗೆ ಕಳುಹಿಸಿದ್ದಾರು. ಬಲ: 'ಅವರು ಈಗಾಗಲೇ ಗುರುತಿಸಲಾಗದಷ್ಟು ಸುಟ್ಟುಹೋಗಿದ್ದರು' ಎಂದು ವಿಜಯರಾಘವನ್ ಅವರ ತಂದೆ ಹೇಳುತ್ತಾರೆ


ಸರಿತಾ ತನ್ನ ಫೋನಿನಲ್ಲಿರುವ ವಿಜಯರಾಘವನ್ ಅವರ ಫೋಟೋವನ್ನು ತೋರಿಸುತ್ತಾಳೆ. ತನ್ನ ಮಗನ ಎಲ್ಲಾ ನೆನಪುಗಳು ತನ್ನ ಫೋನಿನಲ್ಲಿರುವ ಫೋಟೋಗಳಲ್ಲಿವೆ ಎಂದು ಅವರು ಹೇಳುತ್ತಾರೆ
ನಾವು 18 ವರ್ಷದ ಟಿ.ವಿಜಯರಾಘವನ್ ಅವರ ಮನೆಗೆ ಭೇಟಿ ನೀಡಿದಾಗ, ಅವರ ತಾಯಿ ತೀವ್ರ ಅನಾರೋಗ್ಯದ ಕಾರಣ ಆಸ್ಪತ್ರೆಗೆ ಹೋಗಿದ್ದರು. ಅವರು ಹಿಂತಿರುಗಿದಾಗ, ಅವರು ಎಷ್ಟು ದಣಿದಿದ್ದಾರೆನ್ನುವುದು ನನಗೆ ಗೊತ್ತಾಗುತ್ತಿತ್ತು. ಆದರೂ ಅವರು ನಮ್ಮೊಂದಿಗೆ ಮಾತನಾಡಲು ಸಿದ್ಧವಾಗಿದ್ದರು. ಅಷ್ಟರಲ್ಲಿ ವಿಜಯರಾಘವನ್ ಅವರ ಸಹೋದರಿ ನಮಗೆ ಮಜ್ಜಿಗೆ ತಂದುಕೊಟ್ಟರು. ಮೊದಲು ಮಜ್ಜಿಗೆ ಕುಡಿಯುವಂತೆ ತಿಳಿಸಿದರು.
“ಅವನು ಜವಳಿ ಅಂಗಡಿ ಕೆಲಸಕ್ಕೆ ಹೋಗುವುದಾಗಿ ಹೇಳಿದ್ದ. ಅದ್ಯಾಕೆ ಮತ್ತೆ ಪಟಾಕಿ ಅಂಗಡಿ ಕೆಲಸಕ್ಕೆ ಹೋದನೋ ಗೊತ್ತಿಲ್ಲ. ಅವನಿಗೆ ಫೀಸ್ ಕಟ್ಟಲಿಕ್ಕಿತ್ತು ಎನ್ನುವುದು ನನಗೆ ಗೊತ್ತಿತ್ತು. ಅದನ್ನು ಅವನು ನಮ್ಮ ಮೇಲೆ ಹಾಕಲು ತಯಾರಿರಲಿಲ್ಲ. ಏಕೆಂದರೆ ನಾವು ದುಡಿದಿದ್ದನ್ನೆಲ್ಲ ಮಗಳ ಆರೋಗ್ಯಕ್ಕಾಗಿ ಖರ್ಚು ಮಾಡುತ್ತಿದ್ದೇವೆ. ಸರ್ಕಾರ ನಮಗೆ ಒಂದು ಕೆಲಸ ಕೊಟ್ಟರೆ ನಾವು ಅದಕ್ಕೆ ಕೃತಜ್ಞರಾಗಿರುತ್ತೇವೆ” ಎನ್ನುತ್ತಾರೆ 55 ವರ್ಷದ ಸರಿತಾ.
ಕೆಲವು ಸಂಗಾತಿಗಳು ಮತ್ತು ವಿಜಯರಾಘವನ್ ಅವರ ತಂದೆಯೊಂದಿಗೆ ಯುವಕರ ಅಂತ್ಯಕ್ರಿಯೆ ನಡೆದ ಸ್ಥಳಕ್ಕೆ ಹೋದೆವು. “ಶವಗಳು ಆಗಲೇ ಗುರುತಿಸಲಾಗದಷ್ಟು ಸುಟ್ಟು ಹೋಗಿದ್ದವು. ನಾವು ಅವರೆಲ್ಲರ ಅಂತ್ಯಕ್ರಿಯೆಯನ್ನು ಒಟ್ಟಿಗೆ ಮಾಡಿದೆವು” ಎಂದು ವಿಜಯರಾಘವನ್ ಅವರ ತಂದೆ ಹೇಳಿದರು.
ಅಲ್ಲೇ ಪಕ್ಕದಲ್ಲಿ ಒಂದು ಕಾಲದಲ್ಲಿ ತಮ್ಮ ಭವಿಷ್ಯದ ಬಗ್ಗೆ ಭರವಸೆ ಮತ್ತು ಪ್ರೀತಿಯನ್ನು ಹೊಂದಿದ್ದ ಎಂಟು ಯುವ ಜೀವಗಳ ಅಂತ್ಯಕ್ರಿಯೆಗೆ ಸಾಕ್ಷಿಯಾಗಿದ್ದ ತೇನ್ ಪನ್ನೈ ನದಿ ನಿಶ್ಚಲವಾಗಿ ಹರಿಯುತ್ತಿತ್ತು.
ನಾನು ಅಲ್ಲಿಂದ ಮರಳಿದೆ. ನನ್ನ ಹೃದಯ ಮರಗಟ್ಟಿ ಹೋಗಿತ್ತು.
ಇದಾಗಿ ಎರಡು ದಿನಗಳ ನಂತರ ಪಟಾಕಿ ತಯಾರಿಕೆಯ ಪ್ರಮುಖ ಕೇಂದ್ರವಾದ ಶಿವಕಾಶಿಯಲ್ಲಿ 14 ಜನರು ಸಾವನ್ನಪ್ಪಿದ ಸುದ್ದಿಯೊಂದಿಗೆ ನನ್ನ ಪಾಲಿಗೆ ಬೆಳಕಾಗಿತ್ತು.

ಎಲ್ಲಾ ಎಂಟು ಹುಡುಗರ ಅಂತ್ಯಕ್ರಿಯೆಯನ್ನು ಒಟ್ಟಿಗೆ ಮಾಡಲಾಯಿತು

ಧರ್ಮಪುರಿ ಮತ್ತು ತಿರುವಣ್ಣಾಮಲೈ ಜಿಲ್ಲೆಗಳ ನಡುವೆ ಹರಿಯುವ ತೇನ್ ಪನ್ನೈ ನದಿ
ಅನುವಾದ: ಶಂಕರ. ಎನ್. ಕೆಂಚನೂರು