“
ಈ ಬೇಟಿ ತನಿ ಏಕ್ ಖೋದಾ ಚಿನ್ಹಾ ಲೇ ಲೇ.
ಮರ್ತೋ ಜೀತೋ ಮೇ ಸಾತ್ ಹೋಯೆಲಾ…
ಜೈಸನ್ ಆಯೇಲ್ ಹೈ ತೈಸನ್ ಅಕೇಲೆ ನಾ ಜಾ
[ಹೇ
ಹುಡುಗಿ, ಒಂದು ಹಚ್ಚೆ ಹಾಕಿಸಿಕೋ…
ಸಾವು ಅಥವಾ ಬದುಕು ಎರಡರಲ್ಲೂ ನಿನ್ನೊಂದಿಗಿರುತ್ತದೆ
ಒಬ್ಬಳೇ ಹೋಗಲಾರೆ ನೀನು ಒಬ್ಬಂಟಿ ಬಂದಂತೆ…]”
ರಾಜಪತಿ ದೇವಿ ಮಂದಾರ್ ಬ್ಲಾಕಿಗೆ ಸೇರಿದ ಹಳ್ಳಿಗಳಲ್ಲಿ ಮನೆ ಮನೆಗೂ ಮೇಲಿನ ಸಾಲುಗಳನ್ನು ಹಾಡುತ್ತಾ ಸಾಗುತ್ತಾರೆ. ಬಗಲಿನಲ್ಲೊಂದು ಪ್ಲಾಸ್ಟಿಕ್ ಚೀಲ ನೇತು ಹಾಕಿಕೊಂಡಿರುವ ಅವರು ಅದರಲ್ಲಿ ಕೆಲವು ಪಾತ್ರೆಗಳು ಮತ್ತು ಒಂದು ಸೂಜಿಯ ಡಬ್ಬಿಯನ್ನು ಇಟ್ಟುಕೊಂಡಿರುತ್ತಾರೆ. ರಾಜಪತಿಯವರು ಓರ್ವ ಗೊದ್ನಾ (ಹಚ್ಚೆ) ಕಲಾವಿದೆ. ಅವರು ಹೂವು, ಚಂದ್ರ, ಚೇಳು ಹಾಗೂ ಚುಕ್ಕಿಗಳ ಚಿತ್ರವನ್ನು ಹಚ್ಚೆ ಹಾಕಿ ಹಣ ಪಡೆಯುತ್ತಾರೆ. ಹೀಗೆ ಹಳ್ಳಿ ಹಳ್ಳಿ ತಿರುಗಿ ಹಚ್ಚೆ ಹಾಕುತ್ತಾ ತಿರುಗಾಡುವವರಲ್ಲಿ ಉಳಿದಿರುವ ಕೆಲವೇ ಮಹಿಳೆಯರಲ್ಲಿ ಈ 45 ವರ್ಷದ ಕಲಾವಿದೆಯೂ ಒಬ್ಬರು.
“ಮಾಯಿ ಸಂಗೆ ಜಾತ್ ರಹಿ ತಾ ದೇಖತ್ ರಹಿ ಉಹಾಂ ಗೋದತ್ ರಹಾನ್, ತಾ ಹಮಾಹು ದೇಖ್-ದೇಖ್ ಸಿಖಾತ್ ರಹಿ. ಕರ್ತೆ ಕರ್ತೆ ಹಮಾಹು ಸೀಖ್ ಗಯ್ಲೀ [ಗೊದ್ನಾ ಕಲಾವಿದೆಯಾಗಿದ್ದ ಅಮ್ಮನೊಂದಿಗೆ ನಾನೂ ಸುತ್ತುತ್ತಿದ್ದೆ. ಅವರು ಹಚ್ಚೆ ಬಿಡಿಸುವುದನ್ನು ನೋಡಿ ನಾನೂ ಕಲಿತೆ]” ಎನ್ನುತ್ತಾರೆ ಐದನೇ ತಲೆಮಾರಿನ ಹಚ್ಚೆ ಕಲಾವಿದರಾದ ರಾಜಪತಿ.
ಗೊದ್ನಾ ಎನ್ನುವುದು ಶತಮಾನಗಳಿಗೂ ಹಳೆಯ ಕಲೆ. ಇದನ್ನು ಮಲಾರ್ (ಈ ಸಮುದಾಯವನ್ನು ರಾಜ್ಯದಲ್ಲಿ ಇತರೇ ಹಿಂದುಳಿದ ವರ್ಗಗಳಡಿ ಗುರುತಿಸಲಾಗಿದೆ) ಸಮುದಾಯದ ಜನರು ಅಭ್ಯಾಸ ಮಾಡುತ್ತಾರೆ. ತಲೆಮಾರಿನಿಂದ ತಲೆಮಾರಿಗೆ ಸಾಗುವ ಈ ಕಲೆಯ ಅಭ್ಯಾಸಿಯಾದ ರಾಜಪತಿಯವರೂ ಇದೇ ಸಮುದಾಯಕ್ಕೆ ಸೇರಿದವರು. ಹಚ್ಚೆ ಚಿತ್ರವನ್ನು ದೇಹ ವಿವಿಧ ಭಾಗಗಳ ಮೇಲೆ ಚಿತ್ರಿಸಲಾಗುತ್ತದೆ. ಈ ವಿನ್ಯಾಸಗಳ ಸಂಕೇತ ಮತ್ತು ಅರ್ಥಗಳು ಪ್ರದೇಶಗಳು ಮತ್ತು ಸಮುದಾಯವನ್ನು ಅವಲಂಬಿಸಿ ಬದಲಾಗುತ್ತಿರುತ್ತದೆ. ಗಂಡಸರಿಗಿಂತಲೂ ಹೆಂಗಸರೇ ಹೆಚ್ಚು ಹಚ್ಚೆಯನ್ನು (ಗೊದ್ನಾ) ಹಾಕಿಸಿಕೊಳ್ಳುತ್ತಾರೆ.


ಎಡಕ್ಕೆ: ರಾಜಪತಿ ದೇವಿ ತನ್ನ ಪತಿ ಶಿವನಾಥ್ ಮಲಾರ್, ಮಗ ಸೋನು ಮತ್ತು ಮೊಮ್ಮಗ ಅತುಲ್ ಜೊತೆ ತನ್ನ ಮನೆಯ ಮುಂದೆ ಕುಳಿತಿದ್ದಾರೆ. ಬಲ: ಅವರು ತನ್ನ ತೋಳುಗಳ ಮೇಲಿನ ಎರಡು ಹಚ್ಚೆಗಳನ್ನು ತೋರಿಸುತ್ತಿದ್ದಾರೆ - ಪೋಥಿ (ಮೇಲ್ಭಾಗದಲ್ಲಿ) ಮತ್ತು ಡಂಕಾ ಫೂಲ್ (ಕೆಳಗೆ)
ಆಗ ಮಧ್ಯಾಹ್ನದ ಮೂರು ಗಂಟೆಯಾಗಿತ್ತು, ಅಷ್ಟು ಹೊತ್ತಿಗಾಗಲೇ ರಾಜಪತಿಯವರು ಆರು ಗಂಟೆಗಳಷ್ಟು ಕಾಲವನ್ನು ನಡಿಗೆಯಲ್ಲಿ ಕಳೆದಿದ್ದರು. ಮಂದಾರ್ ಗ್ರಾಮದ ಹೊರವಲಯದಲ್ಲಿರುವ ಮಲಾರ್ ಸಮುದಾಯದ ಸಣ್ಣ ಊರಾದ ಖರ್ಗೆ ಬಸ್ತಿಯಲ್ಲಿರುವ ತನ್ನ ಎರಡು ಕೋಣೆಗಳ ಕಚ್ಚಾ ಮನೆಯ ಕಡೆಗೆ ಅಷ್ಟು ಹೊತ್ತು ನಡೆದು ಹೊರಟ್ಟಿದ್ದರು. ಅವರು ಕೆಲವು ದಿನ 30 ಕಿಲೋಮೀಟರ್ ತನಕ ನಡೆಯುತ್ತಾರೆ. ಗೊದ್ನಾ ಕಲೆಯ ಜೊತೆಗೆ ಅವರು ತಾವೇ ತಯಾರಿಸುವ ಪಾತ್ರೆಗಳನ್ನು ಸಹ ಮಾರುತ್ತಾರೆ.
ಈ ಪಾತ್ರೆಗಳನ್ನು ಅವರ ಗಂಡ ತಯಾರಿಸುತ್ತಾರೆ. 50 ವರ್ಷದ ಶಿವನಾಥ್ ಅವರು ಲೋಹ ತಯಾರಿಕೆಯ ತಂತ್ರವೊಂದನ್ನು ಬಳಸಿ ಈ ಪಾತ್ರೆಗಳನ್ನು ತಯಾರಿಸಲಾಗುತ್ತದೆ. ಮುಖ್ಯವಾಗಿ ಮನೆಯ ಗಂಡಸರು - ಅವರ ಮಕ್ಕಳು ಮತ್ತು ಪತಿ - ಅಲ್ಯೂಮಿನಿಯಂ ಮತ್ತು ಹಿತ್ತಾಳೆ ವಸ್ತುಗಳನ್ನು ತಯಾರಿಸುತ್ತಾರೆ. ಮನೆಯಲ್ಲಿನ ಎಲ್ಲರೂ ಈ ಕೆಲಸದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಕೈ ಜೋಡಿಸುತ್ತಾರೆ. ಅಚ್ಚುಗಳನ್ನು ತಯಾರಿಸುವ ಕೆಲಸವನ್ನು ಮನೆಯ ಮಹಿಳೆಯರಾದ ರಾಜಪತಿ, ಅವರ ಮಗಳು ಮತ್ತು ಸೊಸೆಯಂದಿರು ಮಾಡುತ್ತಾರೆ. ಇತರ ಕೆಲಸಗಳ ನಡುವೆ ಅವುಗಳನ್ನು ಒಣಗಿಸುವ ಕೆಲಸವನ್ನು ಸಹ ಮಾಡುತ್ತಾರೆ. ಅವರು ತಯಾರಿಸುವ ವಸ್ತುಗಳು ದೈನಂದಿನ ಅಗತ್ಯ ವಸ್ತುಗಳು - ಸೀಮೆಎಣ್ಣೆ ದೀಪಗಳು, ಪೂಜೆಯಲ್ಲಿ ಬಳಸುವ ಪಾತ್ರೆಗಳು, ದನದ ಗಂಟೆಗಳು ಮತ್ತು ಅಳತೆ ಪಾತ್ರೆಗಳು.
ನಾಗಪುರಿ ಭಾಷೆಯಲ್ಲಿ ಪಾಯ್ಲಾ ಎಂದು ಕರೆಯಲಾಗುವ ಪಾತ್ರೆಯೊಂದನ್ನು ತೋರಿಸುತ್ತಾ “ಈ ಸಣ್ಣದು 15 ರೂಪಾಯಿಗೆ ಮಾರಾಟವಾಗುತ್ತದೆ” ಎಂದು ರಾಜಪತಿಯವರು ಹೇಳಿದರು. “ಇದನ್ನು ಅಕ್ಕಿ ಅಳೆಯಲು ಬಳಸಲಾಗುತ್ತದೆ. ಇದಕ್ಕೆ ಅಕ್ಕಿ ತುಂಬಿದರೆ ಸರಿಯಾಗಿ ಕಾಲು ಕಿಲೋ ತೂಗುತ್ತದೆ” ಎಂದು ಅವರು ಮಾಹಿತಿ ನೀಡಿದರು. ಈ ಪ್ರದೇಶದಲ್ಲಿ ಪಾಯಿಲಾವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ, ಇದು ಮನೆಯಲ್ಲಿ ಆಹಾರದ ಕೊರತೆ ಬಾರದಂತೆ ಕಾಯುತ್ತದೆ ಎನ್ನುವ ನಂಬಿಕೆಯಿದೆ ಎಂದು ಅವರು ಹೇಳುತ್ತಾರೆ.


ಎಡ: ಶಿವನಾಥ್ ಅವರು ಡೋಕ್ರಾ ಎಂಬ ಸಾಂಪ್ರದಾಯಿಕ ಲೋಹ-ಕೆಲಸದ ತಂತ್ರವನ್ನು ಬಳಸಿಕೊಂಡು ಪಾತ್ರೆಗಳನ್ನು ತಯಾರಿಸುತ್ತಾರೆ. ಬಲ: ಅವರು ಪಾತ್ರೆಗಳನ್ನು ತಯಾರಿಸುವ ಅವರ ಮನೆಯ ಹೊರಗಿನ ವರ್ಕ್ ಶಾಪ್


ಎಡಕ್ಕೆ: ರಾಜಪತಿಯವರು ರಾಂಚಿ ಜಿಲ್ಲೆಯ ಮಂದಾರ್ ಬ್ಲಾಕಿನಲ್ಲಿ ಹಳ್ಳಿಯಿಂದ ಹಳ್ಳಿಗೆ ಪ್ರಯಾಣಿಸುತ್ತಾ ಪಾತ್ರೆಗಳನ್ನು ಮಾರಾಟ ಮಾಡುತ್ತಾರೆ. ಬಲ: ಚಿಪಾಡೋಹರ್ ಗ್ರಾಮದ ನಿವಾಸಿ ಗೋಹಮನಿ ದೇವಿ, ಅಕ್ಕಿಯನ್ನು ಅಳೆಯಲು ಬಳಸುವ ಪಾಯಿಲಾ ಎನ್ನುವ ಪರಿಕರವನ್ನು ತೋರಿಸುತ್ತಿದ್ದಾರೆ
*****
ಅವರು ಒಂದು ಸಣ್ಣ ಹಳದಿ ಡಬ್ಬಿಯನ್ನು ತೋರಿಸುತ್ತಾ, “ಇದರಲ್ಲಿ ಸೂಜಿಯಿದೆ, ಇದರಲ್ಲಿ ಕಾಜರ್[ಕಾಡಿಗೆ] ಇದೆ” ಎಂದು ಹೇಳಿದರು.
ತನ್ನ ಪ್ಲಾಸ್ಟಿಕ್ ಚೀಲದಿಂದ ಕಾಗದದ ಹಾಳೆಯೊಂದನ್ನು ಹೊರ ತೆಗೆದ ರಾಜಪತಿ ತಾನು ಬಿಡಿಸುವ ವಿನ್ಯಾಸಗಳನ್ನು ತೋರಿಸಿದರು.
"ಇಸ್ಕೊ ಪೋಥಿ ಕೆಹ್ತೆ ಹೈ, ಔರ್ ಇಸ್ಕೊ ಡಂಕಾ ಫೂಲ್ [ಇದನ್ನು ಪೋಥಿ ಎಂದು, ಮತ್ತು ಇದನ್ನು ಡಂಕಾ ಫೂಲ್ ಎಂದು ಕರೆಯಲಾಗುತ್ತದೆ]" ಎನ್ನುತ್ತಾ ಅವರು ಕುಂಡದಲ್ಲಿ ಅರಳುವ ಹೂವನ್ನು ಹೋಲುವ ವಿನ್ಯಾಸವನ್ನು ತೋರಿಸುತ್ತಾ ಹೇಳಿದರು. "ಇಸ್ಕೊ ಹಸುಲಿ ಕೆಹ್ತೆ ಹೈ, ಯೇ ಗೇಲ್ ಮೇ ಬನ್ತಾ ಹೈ [ಇದನ್ನು ಹಸುಲಿ ಎಂದು ಕರೆಯಲಾಗುತ್ತದೆ, ಇದನ್ನು ಕುತ್ತಿಗೆಯ ಸುತ್ತ ಬಿಡಿಸಲಾಗುತ್ತದೆ]" ಎಂದು ಅರ್ಧಚಂದ್ರಾಕಾರದ ವಿನ್ಯಾಸವನ್ನು ತೋರಿಸುತ್ತಾ ರಾಜಪತಿ ಹೇಳುತ್ತಾರೆ.
ರಾಜಪತಿ ಸಾಮಾನ್ಯವಾಗಿ ದೇಹದ ಐದು ಭಾಗಗಳ ಮೇಲೆ ಹಚ್ಚೆ ಹಾಕುತ್ತಾರೆ: ಕೈಗಳು, ಪಾದಗಳು, ಪಾದಗಳು, ಕುತ್ತಿಗೆ ಮತ್ತು ಹಣೆ. ಮತ್ತು ಪ್ರತಿಯೊಂದಕ್ಕೂ ವಿಶೇಷ ವಿನ್ಯಾಸವಿದೆ. ಕೈ ಮೇಲೆ ಸಾಮಾನ್ಯವಾಗಿ ಹೂವು, ಪಕ್ಷಿ ಮತ್ತು ಮೀನುಗಳನ್ನು ಬಿಡಿಸಲಾಗುತ್ತದೆ, ಆದರೆ ಕುತ್ತಿಗೆಯ ಬಳಿ ವಕ್ರ ರೇಖೆಗಳು ಮತ್ತು ಚುಕ್ಕೆಗಳ ವೃತ್ತಾಕಾರದ ಮಾದರಿಯನ್ನು ಹಚ್ಚೆ ಹಾಕಲಾಗುತ್ತದೆ. ಹಣೆಯ ಮೇಲಿನ ಹಚ್ಚೆ ಬುಡಕಟ್ಟು ಜನಾಂಗವನ್ನು ಅವಲಂಬಿಸಿ ವಿಶಿಷ್ಟವಾಗಿರುತ್ತದೆ.
“ಒಂದೊಂದು ಬುಡಕಟ್ಟು ಒಂದೊಂದು ಹಚ್ಚೆ ಸಂಪ್ರದಾಯವನ್ನು ಹೊಂದಿರುತ್ತದೆ. ಉರಾಂವ್ ಸಮುದಾಯದವರು ಮಹಾದೇವ್ ಜಟ್ [ಸ್ಥಳೀಯ ಹೂವು], ಇತರ ಹೂಗಳನ್ನು ಹಚ್ಚೆ ಹಾಕಿಕೊಳ್ಳುತ್ತಾರೆ. ಖಾರಿಯಾ ಸಮುದಾಯವು ಮೂರು ರೇಖೆಗಳನ್ನು ಬಿಡಿಸಿಕೊಂಡರೆ, ಮುಂಡಾ ಸಮುದಾಯವು ಚುಕ್ಕೆಯನ್ನು ಹಣೆಯ ಮೇಲೆ ಹಚ್ಚೆಯಾಗಿ ಹಾಕಿಸಿಕೊಳ್ಳುತ್ತಾರೆ.


ರಾಜಪತಿ ಸಾಮಾನ್ಯವಾಗಿ ದೇಹದ ಐದು ಭಾಗಗಳ ಮೇಲೆ ಹಚ್ಚೆ ಹಾಕುತ್ತಾರೆ ಕೈಗಳು, ಪಾದಗಳು, ಪಾದಗಳು, ಕುತ್ತಿಗೆ ಮತ್ತು ಹಣೆ. ಮತ್ತು ಪ್ರತಿಯೊಂದಕ್ಕೂ ವಿಶೇಷ ವಿನ್ಯಾಸವಿದೆ. ಹಣೆಯ ಮೇಲಿನ ಹಚ್ಚೆ ಬುಡಕಟ್ಟು ಜನಾಂಗವನ್ನು ಅವಲಂಬಿಸಿ ವಿಶಿಷ್ಟವಾಗಿರುತ್ತದೆ. ಬಲ: ರಾಜಪತಿ ದೇವಿ ಮತ್ತು ಮೊಹರಿ ದೇವಿ, ಇವರಿಬ್ಬರೂ ಗೊದ್ನಾ ಕಲಾವಿದರು


ಎಡ: ಸುನೀತಾ ದೇವಿ ತನ್ನ ಮಣಿಕಟ್ಟಿ ಹಿಂಭಾಗದಲ್ಲಿ ಸ್ಥಳೀಯವಾಗಿ ಮಹಾದೇವ್ ಜಟ್ ಎಂದು ಕರೆಯಲ್ಪಡುವ ಹೂವಿನ ಹಚ್ಚೆಯನ್ನು ಹಾಕಿಸಿಕೊಂಡಿದ್ದಾರೆ . ಬಲ: ಅವರ ಕಾಲುಗಳ ಮೇಲೆ ಸುಪಾಲಿ (ಬಿದಿರಿನ ಬುಟ್ಟಿ) ಹಚ್ಚೆಗಳಿವೆ, ಇದು ಅವರ ದಲಿತ ಸಮುದಾಯದಲ್ಲಿ ಪರಿಶುದ್ಧತೆಯನ್ನು ಸಂಕೇತಿಸುತ್ತದೆ ಮತ್ತು ಇದು ಮೇಲ್ಜಾತಿಯ ಭೂಮಾಲೀಕರ ಹೊಲಗಳಲ್ಲಿ ಕೆಲಸ ಮಾಡಲು ಅನುವು ಮಾಡಿಕೊಡುತ್ತದೆ
ಸುನೀತಾ ದೇವಿ ತನ್ನ ಕಾಲಿನ ಮೇಲೆ ಸುಪಾಲಿ (ಬಿದಿರಿನ ಬುಟ್ಟಿ) ಗುರುತಿನ ಹಚ್ಚೆ ಹಾಕಿಸಿಕೊಂಡಿದ್ದಾರೆ. ಪಲಾಮು ಜಿಲ್ಲೆಯ ಚೆಚೆರಿಯಾ ಗ್ರಾಮದ ನಿವಾಸಿಯಾಗಿರುವ 49 ವರ್ಷದ ಅವರು ಈ ಹಚ್ಚೆ ಶುದ್ಧತೆಯ ಸಂಕೇತವಾಗಿದೆ ಎನ್ನುತ್ತಾರೆ. "ಈ ಹಿಂದೆ, ಈ ಹಚ್ಚೆ ಇಲ್ಲದೇ ಹೋದರೆ, ಹೊಲಗಳಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ. ನಮ್ಮನ್ನು ಅಶುದ್ಧರೆಂದು ಪರಿಗಣಿಸಲಾಗುತ್ತಿತ್ತು, ಆದರೆ ಹಚ್ಚೆ ಹಾಕಿಸಿಕೊಂಡ ನಂತರ ನಮ್ಮನ್ನು ಪರಿಶುದ್ಧರು ಎಂದು ಪರಿಗಣಿಸಲಾಗುತ್ತಿತ್ತು" ಎಂದು ದಲಿತ ಸಮುದಾಯದ ಈ ಗೇಣಿದಾರ ರೈತಮಹಿಳೆ ಹೇಳುತ್ತಾರೆ.
“ಗೊದ್ನಾ ಕಲೆಯ ಮೂಲವನ್ನು ನಾವು ಹೊಸ ಶಿಲಾಯುಗದ ಗುಹೆಯಲ್ಲಿನ ವರ್ಣಚಿತ್ರಗಳಲ್ಲಿ ಕಾಣಬಹುದು. ನಂತರ ಅದು ಗುಹೆಯಿಂದ ಮನೆಗಳು ಮತ್ತು ದೇಹದ ಮೇಲೆ ಸ್ಥಾನ ಪಡೆಯಿತು” ಎಂದು ರಾಯ್ಪುರದ ಪಂಡಿತ್ ರವಿಶಂಕರ್ ಶುಕ್ಲಾ ವಿಶ್ವವಿದ್ಯಾಲಯದ ಪ್ರಾಚೀನ ಭಾರತೀಯ ಇತಿಹಾಸ, ಸಂಸ್ಕೃತಿ ಮತ್ತು ಪುರಾತತ್ವಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿ ಅನ್ಸು ಟಿರ್ಕಿ ವಿವರಿಸುತ್ತಾರೆ.
ಗೋಹಮುನಿ ದೇವಿಯವರಂತಹ ಅನೇಕರು ಈ ಗೊದ್ನಾ ಚಿತ್ರಗಳಿಗೆ ಕಾಯಿಲೆಗಳನ್ನು ಗುಣಪಡಿಸುವ ಔಷಧೀಯ ಶಕ್ತಿಯಿದೆಯೆಂದೂ ನಂಬುತ್ತಾರೆ. 65 ವರ್ಷದ ಅವರು ಜಾರ್ಖಂಡ್ ರಾಜ್ಯದ ಲಾತೆಹರ್ ಜಿಲ್ಲೆಯ ಚಿಪಾಡೋಹರ್ ಗ್ರಾಮದ ನಿವಾಸಿ. ಇವರು ಕಳೆದ ಐದು ದಶಕಗಳಿಂದ ಗೊದ್ನಾ ಕಲೆಯ ಅಭ್ಯಾಸಿ. ಗೋಹಮುನಿ ದೇವಿ ಜಹರ್ ಗೊದ್ನಾ (ವಿಷದ ಹಚ್ಚೆ) ಎಂದು ಕರೆಯಲ್ಪಡುವ ಹಚ್ಚೆಯ ವಿನ್ಯಾಸಕ್ಕೆ ಹೆಸರುವಾಸಿ.
“ನಾನು ಗೊದ್ನಾ ಮೂಲಕ ಸಾವಿರಾರು ಜನರಿಗೆ ಗಳಗಂಡ ರೋಗವನ್ನು ವಾಸಿ ಮಾಡಿದ್ದೇನೆ” ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ, ತನ್ನ ತಾಯಿ ಹಾಕಿದ ಹಚ್ಚೆಯಿಂದ ಗುಣಮುಖವಾದ ತನ್ನ ಗಳಗಂಡವನ್ನು ಅವರು ಸಾಕ್ಷಿಯಾಗಿ ತೋರಿಸಿದರು. ಛತ್ತೀಸಗಢ, ಬಿಹಾರ ಮತ್ತು ಬಂಗಾಳದಂತಹ ಇತರ ರಾಜ್ಯಗಳಿಂದ ಜನರು ಅವರ ಬಳಿ ಚಿಕಿತ್ಸೆಗಾಗಿ ಹುಡುಕಿಕೊಂಡು ಬರುತ್ತಾರೆ.
ಗಳಗಂಡ ಕಾಯಿಲೆಯ ಜೊತೆಗೆ ಗೋಹಮನಿಯವರು ಮೊಣಕಾಲು ನೋವು, ಮೈಗ್ರೇನ್ ಮತ್ತು ಇತರ ದೀರ್ಘಕಾಲದ ನೋವುಗಳಿಗೆ ಚಿಕಿತ್ಸೆ ನೀಡಿದ್ದಾರೆ. ಆದರೆ ಈ ಹಚ್ಚೆ ಕಲೆ ಹೆಚ್ಚು ದಿನ ಉಳಿಯುವುದು ಕಷ್ಟ ಎನ್ನುವುದು ಅವರ ಆತಂಕ. "ಈಗ, ಯಾರೂ ಹೆಚ್ಚು ಹಚ್ಚೆ ಹಾಕಿಸಿಕೊಳ್ಳುವುದಿಲ್ಲ; ನಾವು ಹಳ್ಳಿಗಳಿಗೆ ಹೋದರೆ ಸಂಪಾದನೆಯೇ ಇರುವುದಿಲ್ಲ [...] ನಮ್ಮ ನಂತರ, ಇನ್ನು ಮುಂದೆ ಯಾರೂ ಇದನ್ನು ಮಾಡುವುದಿಲ್ಲ" ಎಂದು ಗೋಹಮನಿ ಹೇಳುತ್ತಾರೆ.


ಎಡಕ್ಕೆ: ಗೋಹಮನಿ ದೇವಿ ತನ್ನ ಮನೆಯ ಹೊರಗೆ ಗೋದ್ನಾ ಕಲೆಗೆ ಬಳಸುವ ಸೂಜಿಗಳು ಮತ್ತು ಶಾಯಿಯ ಪೆಟ್ಟಿಗೆಯೊಂದಿಗೆ. ಬಲ: ಅವರು ತನ್ನ ಮಣಿಕಟ್ಟಿನ ಮೇಲೆ ಹಾಕಿಸಿಕೊಂಡಿರುವ ಟೀಪಾ ಖೋಡಾ (ಮೇಲ್ಭಾಗದಲ್ಲಿ) ಮತ್ತು ಪೋಥಿ ಹಚ್ಚೆ ತೋರಿಸುತ್ತಾರೆ


ಎಡ: ಬಿಹಾರಿ ಮಲಾರ್ ಗೋಹಮಣಿಯವರ ಮಗ. ಬಿಹಾರಿ ಒಮ್ಮೆ ಹೊಟ್ಟೆ ನೋವು ಗುಣಪಡಿಸಿಕೊಳ್ಳಲು ತನ್ನ ತಾಯಿಯ ಬಳಸಿ ಜಹರ್ ಹಚ್ಚೆಯನ್ನು ಹಾಕಿಸಿಕೊಂಡಿದ್ದರು. ಬಲ: ಗೋಹಮನಿಯವರ ಪತಿ ತನ್ನ ಕಾಲಿನ ಮೇಲೆ ಹಾಕಿಸಿಕೊಂಡಿರುವ ಜಹರ್ ಗೋದ್ನಾವನ್ನು ತೋರಿಸುತ್ತಿದ್ದಾರೆ. ಹಚ್ಚೆಗಳು ಔಷಧೀಯ ಶಕ್ತಿಯನ್ನು ಹೊಂದಿವೆ ಎಂದು ಈ ಪ್ರದೇಶದ ಅನೇಕರು ನಂಬುತ್ತಾರೆ
*****
ಹಚ್ಚೆ ಹಾಕಲು ಗೊದ್ನಾ ಕಲಾವಿದರಿಗೆ ಲಾಲ್ಕೋರಿ ಕೆ ದೂದ್ (ತಾಯಿಯ ಎದೆ ಹಾಲು), ಕಾಜಲ್ (ಕಾಡಿಗೆ), ಅರಿಶಿನ ಮತ್ತು ಸಾಸಿವೆ ಎಣ್ಣೆ ಬೇಕು. ಪೆಟರ್ಮುಹಿ ಸೂಯಿ ಎಂದು ಕರೆಯಲ್ಪಡುವ ಹಿತ್ತಾಳೆ ಸೂಜಿಗಳನ್ನು ಬಳಸಿ ಗೊದ್ನಾವನ್ನು ಹಾಕಲಾಗುತ್ತದೆ, ಇದು ಹಿತ್ತಾಳೆ ತುದಿಯನ್ನು ಹೊಂದಿದೆ, ಇದಕ್ಕೆ ತುಕ್ಕು ಹಿಡಿಯುವುದಿಲ್ಲ ಮತ್ತು ಸೋಂಕಿನ ಅಪಾಯವನ್ನು ಕಡಿಮೆ ಮಾಡುತ್ತದೆ. "ನಾವೇ ಸ್ವತಃ ಕಾಜಲ್ ತಯಾರಿಸುತ್ತಿದ್ದೆವು, ಆದರೆ ಈಗ ಅದನ್ನು ಖರೀದಿಸುತ್ತೇವೆ" ಎಂದು ರಾಜಪತಿ ಹೇಳುತ್ತಾರೆ.
ಹಚ್ಚೆಯ ವಿನ್ಯಾಸವನ್ನು ಅವಲಂಬಿಸಿ, ಅದಕ್ಕೆ ಎರಡರಿಂದ ಹನ್ನೊಂದು ಸೂಜಿಗಳ ತನಕ ಬೇಕಾಗಬಹುದು. ಮೊದಲಿಗೆ, ಹಾಲು ಮತ್ತು ಕಾಡಿಗೆ ಬೆರೆಸಿ ಪೇಸ್ಟ್ ಮಾಡಿ, ಸ್ವಲ್ಪ ಸಾಸಿವೆ ಎಣ್ಣೆಯನ್ನು ಸೇರಿಸಲಾಗುತ್ತದೆ. ನಂತರ ವಿನ್ಯಾಸದ ರೂಪರೇಖೆಯನ್ನು ಪೆನ್ ಅಥವಾ ಪೆನ್ಸಿಲ್ ಬಳಸಿ ತಯಾರಿಸಲಾಗುತ್ತದೆ. ವಿನ್ಯಾಸದ ಆಧಾರದ ಮೇಲೆ ಸೂಜಿಗಳನ್ನು ಆಯ್ಕೆ ಮಾಡಲಾಗುತ್ತದೆ - ಉತ್ತಮ ಮಾದರಿಗೆ ಎರಡು ಅಥವಾ ಮೂರು ಸೂಜಿಗಳು ಮತ್ತು ದಪ್ಪ ಅಂಚಿಗೆ ಐದು ಅಥವಾ ಏಳು ಸೂಜಿಗಳು. "ನಮ್ಮ ಗೊದ್ನಾ ಹೆಚ್ಚು ನೋಯಿಸುವುದಿಲ್ಲ" ಎಂದು ರಾಜಪತಿ ತಮಾಷೆಯಾಗಿ ಹೇಳುತ್ತಾರೆ.
ಹಚ್ಚೆಯ ಗಾತ್ರವನ್ನು ಅವಲಂಬಿಸಿ, "ಸಣ್ಣದಕ್ಕೆ ಕೆಲವು ನಿಮಿಷಗಳು, ದೊಡ್ಡದಕ್ಕೆ ಗಂಟೆಗಳು ಸಹ ತೆಗೆದುಕೊಳ್ಳುತ್ತದೆ" ಎಂದು ರಾಜಪತಿ ಹೇಳುತ್ತಾರೆ. ಹಚ್ಚೆ ಹಾಕಿದ ನಂತರ, ಅದನ್ನು ಮೊದಲು ಹಸುವಿನ ಸಗಣಿಯಿಂದ ಮತ್ತು ನಂತರ ಅರಿಶಿನದಿಂದ ತೊಳೆಯಲಾಗುತ್ತದೆ. ಹಸುವಿನ ಸಗಣಿ ದುಷ್ಟ ಶಕ್ತಿಯನ್ನು ನಿವಾರಿಸುತ್ತದೆ ಎಂದು ನಂಬಲಾಗಿದೆ, ಮತ್ತು ನಂತರ ಸೋಂಕನ್ನು ತಡೆಗಟ್ಟಲು ಅರಿಶಿನ ಮತ್ತು ಸಾಸಿವೆ ಎಣ್ಣೆಯನ್ನು ಬಳಿಯಲಾಗುತ್ತದೆ.
"ಹಿಂದೆ, ಮಹಿಳೆಯರು ಗೊದ್ನಾ ಹಾಕಿಸಿಕೊಳ್ಳುವಾಗ ಹಾಡುತ್ತಿದ್ದರು, ಆದರೆ ಈಗ ಯಾರೂ ಹಾಡುವುದಿಲ್ಲ" ಎಂದು ಛತ್ತೀಸಗಢ ಮತ್ತು ಒಡಿಶಾ ರಾಜ್ಯಗಳಿಗೂ ಗೊದ್ನಾ ಹಾಕಲು ಹೋಗಿರುವ ರಾಜ್ಪತಿ ಹೇಳುತ್ತಾರೆ.


ಎಡ: ಹಚ್ಚೆ ಹಾಕಲು ಗೊದ್ನಾ ಕಲಾವಿದರಿಗೆ ಲಾಲ್ಕೋರಿ ಕೆ ದೂದ್ (ತಾಯಿಯ ಎದೆ ಹಾಲು), ಕಾಜಲ್ (ಕಾಡಿಗೆ), ಅರಿಶಿನ ಮತ್ತು ಸಾಸಿವೆ ಎಣ್ಣೆ ಬೇಕು. ಪೆಟರ್ಮುಹಿ ಸೂಯಿ ಎಂದು ಕರೆಯಲ್ಪಡುವ ಹಿತ್ತಾಳೆ ಸೂಜಿಗಳನ್ನು ಬಳಸಿ ಗೊದ್ನಾವನ್ನು ಹಾಕಲಾಗುತ್ತದೆ, ಇದು ಹಿತ್ತಾಳೆ ತುದಿಯನ್ನು ಹೊಂದಿದೆ, ಇದಕ್ಕೆ ತುಕ್ಕು ಹಿಡಿಯುವುದಿಲ್ಲ ಮತ್ತು ಸೋಂಕಿನ ಅಪಾಯವನ್ನು ಕಡಿಮೆ ಮಾಡುತ್ತದೆ. ಎಡ: ಗೊದ್ನಾ ಕಲೆಗೆ ಬಳಸುವ ಶಾಯಿಯಾದ ಜರ್ಜರಿ ಕಾಜಲ್ ಪೆಟ್ಟಿಗೆ


ಎಡ: ಚಿಂತಾ ದೇವಿ ತನ್ನ ತೋಳಿನ ಮೇಲೆ ಟಿಪಾ ಖೋಡಾ ವಿನ್ಯಾಸದ ಹಚ್ಚೆ ಹಾಕಿಸಿಕೊಂಡಿದ್ದಾರೆ, ಇದನ್ನು ಮೂರು ವಸ್ತುಗಳನ್ನು ಸೇರಿಸಿ ಮಾಡಲಾಗಿರುತ್ತದೆ: ಚುಕ್ಕೆ, ಸರಳ ರೇಖೆ ಮತ್ತು ವಕ್ರ ರೇಖೆ. ಬಲ: ಅವರ ಸ್ನೇಹಿತೆ ಚಂಡಿ ದೇವಿ ತನ್ನ ತೋಳಿನ ಮೇಲಿನ ಹಚ್ಚೆಯನ್ನು ತೋರಿಸುತ್ತಿದ್ದಾರೆ, ಇದು ವಿವಾಹಿತ ಮಹಿಳೆಯ ಗುರುತು
"ಈ ಮೂರು ಚುಕ್ಕೆಗಳ ಹಚ್ಚೆ ಬೆಲೆ 150 ರೂಪಾಯಿಗಳು ಮತ್ತು ಈ ಹೂವಿನ ಮಾದರಿ 500 ರೂಪಾಯಿಗಳು" ಎಂದು ರಾಜಪತಿ ತನ್ನ ಮಣಿಕಟ್ಟಿನ ಮೇಲೆ ಗೊದ್ನಾವನ್ನು ತೋರಿಸುತ್ತಾರೆ. "ಕೆಲವೊಮ್ಮೆ ನಮಗೆ ಹಣ ಸಿಗುತ್ತದೆ, ಕೆಲವೊಮ್ಮೆ ಜನರು ಅಕ್ಕಿ, ಎಣ್ಣೆ ಮತ್ತು ತರಕಾರಿಗಳು ಅಥವಾ ಸೀರೆಯನ್ನು ನೀಡುತ್ತಾರೆ" ಎಂದು ಅವರು ಹೇಳುತ್ತಾರೆ.
ಆಧುನಿಕ ಹಚ್ಚೆ ಯಂತ್ರಗಳು ಸಾಂಪ್ರದಾಯಿಕ ಗೊದ್ನಾ ಕಲಾವಿದರ ಗಳಿಕೆಯ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರಿವೆ. "ಈಗ ಕೆಲವೇ ಜನರು ಗೋದ್ನಾವನ್ನು ಕೇಳುತ್ತಾರೆ" ಎಂದು ರಾಜಪತಿ ಹೇಳುತ್ತಾರೆ, "ಹುಡುಗಿಯರು ಈಗ ಯಂತ್ರದಿಂದ ಹಾಕಲಾಗುವ ಹಚ್ಚೆಗಳನ್ನು ಬಯಸುತ್ತಾರೆ. ಅವರು ತಮ್ಮ ಫೋನುಗಳಲ್ಲಿನ ವಿನ್ಯಾಸಗಳನ್ನು ತೋರಿಸಿ ಅವುಗಳನ್ನು ಹಾಕುವಂತೆ ಕೇಳುತ್ತಾರೆ" ಎಂದು ಅವರು ಹೇಳುತ್ತಾರೆ.
“ಜನರು ಈಗ ಮೊದಲಿನಂತೆ ಮೈತುಂಬಾ ಹಚ್ಚೆ ಹಾಕಿಸಿಕೊಳ್ಳುವುದಿಲ್ಲ. ಹೆಚ್ಚೆಂದರೆ ಒಂದು ಹೂ ಅಥವಾ ಚೇಳಿನ ಚಿತ್ರವನ್ನು ಬಿಡಿಸುವಂತೆ ಕೇಳುತ್ತಾರೆ” ಎನ್ನುತ್ತಾರೆ ರಾಜಪತಿ.
ಈ ಕಲೆಯಿಂದ ಬರುವ ಆದಾಯ ಕುಟುಂಬದ ಪೋಷಣೆಗೆ ಸಾಕಾಗುವುದಿಲ್ಲ ಮತ್ತು ಅವರು ಸಂಪಾದನೆಗಾಗಿ ಹೆಚ್ಚು ಹೆಚ್ಚು ಪಾತ್ರೆಗಳ ಮಾರಾಟವನ್ನು ಅವಲಂಬಿಸಿದ್ದಾರೆ. ಈ ಆದಾಯದ ಹೆಚ್ಚಿನ ಭಾಗವು ರಾಂಚಿಯ ವಾರ್ಷಿಕ ಜಾತ್ರೆಯಲ್ಲಿನ ವ್ಯಾಪಾರದಿಂದ ಬರುತ್ತದೆ. "ಜಾತ್ರೆಯಲ್ಲಿ ನಾವು ಸುಮಾರು 40-50 ಸಾವಿರ [ರೂಪಾಯಿ] ಗಳಿಸಿದರೆ, ಅದೊಂದು ಉತ್ತಮ ಗಳಿಕೆ ಎನ್ನಿಸುತ್ತದೆ. ಉಳಿದಂತೆ ದಿನಕ್ಕೆ ಕೇವಲ 100-200 ರೂಪಾಯಿಗಳ ಸಂಪಾದನೆಯಷ್ಟೇ ಇರುತ್ತದೆ" ಎಂದು ರಾಜಪತಿ ಹೇಳುತ್ತಾರೆ.
"ಹಚ್ಚೆ ಮಂಗಳಕರ ಕಲೆ, ಸಾವಿನ ನಂತರ ದೇಹದೊಂದಿಗೆ ಬರುವ ಏಕೈಕ ವಿಷಯವೆಂದರೆ ಹಚ್ಚೆ. ಉಳಿದೆಲ್ಲವನ್ನೂ ಬಿಚ್ಚಿ ತೆಗೆಯಲಾಗುತ್ತದೆ."
ಈ ವರದಿಗೆ ಮೃಣಾಲಿನಿ ಮುಖರ್ಜಿ ಫೌಂಡೇಶನ್ (ಎಂಎಂಎಫ್) ಫೆಲೋಶಿಪ್ ಬೆಂಬಲ ದೊರಕಿದೆ.
ಅನುವಾದ: ಶಂಕರ. ಎನ್. ಕೆಂಚನೂರು