ರುಬೆಲ್ ಶೇಖ್ ಮತ್ತು ಅನಿಲ್ ಖಾನ್ ಗಾಡಿ ಓಡಿಸುತ್ತಿದ್ದಾರೆ... ಆದರೆ ಅವರು ಮತ್ತು ಅವರ ಕಾರು ನೆಲದ ಮೇಲಿಲ್ಲ. ನೆಲದಿಂದ 20 ಅಡಿ ಎತ್ತರದಲ್ಲಿ ಮತ್ತು ಅದು ಕೂಡ ಸುಮಾರು 80 ಡಿಗ್ರಿ ಕೋನದಲ್ಲಿ ಅವರ ಕಾರು ವೇಗವಾಗಿ ಚಲಿಸುತ್ತಿದೆ. ಮೇಲಿನಿಂದ, ಜನರು ಚಪ್ಪಾಳೆ ತಟ್ಟಿ ಅವರನ್ನು ಪ್ರೋತ್ಸಾಹಿಸುತ್ತಾರೆ. ರುಬೆಲ್ ಮತ್ತು ಅನಿಲ್ ಸಹ ತಮ್ಮ ಕಾರಿನ ಕಿಟಕಿಯಿಂದ ಹೊರಗೆ ಇಣುಕಿ ಸಂದಣಿಯತ್ತ ಕೈ ಬೀಸುತ್ತಾರೆ.
ಅವರು ಮೌತ್ -ಕಾ – ಕುಂವಾ (ಸಾವಿನ ಬಾವಿ) ಪ್ರದರ್ಶನ ನೀಡುತ್ತಿದ್ದರು - ಈ ಬಾವಿಯ ಗೋಡೆಯ ಮೇಲೆ ಬೈಕ್ ಮತ್ತು ಕಾರುಗಳನ್ನು ಓಡಿಸುತ್ತಾ ಹಲವು ಬಗೆಯ ಸಾಹಸಗಳನ್ನು ಪ್ರದರ್ಶಿಸಲಾಗುತ್ತದೆ.
ಇಲ್ಲಿ ಪ್ರತಿ ಹತ್ತು ನಿಮಿಷಗಳ ಅವಧಿಯಂತೆ ಹಲವು ಗಂಟೆಗಳ ಕಾಲ ಹಲವು ಪ್ರದರ್ಶನಗಳನ್ನು ನೀಡಲಾಗುತ್ತದೆ. ಈ ಪ್ರದರ್ಶನಕ್ಕೆ ಬಳಸಲಾಗುವ ಬಾವಿಯನ್ನು ಮರ ಮತ್ತು ಕಬ್ಬಿಣ ಬಳಸಿ ಕಟ್ಟಲಾಗುತ್ತದೆ. ಈ ಬಾವಿಯನ್ನು ನೆಲಮಟ್ಟದಿಂದ ಕಟ್ಟಲಾಗುತ್ತದೆ. ಜಾತ್ರೆಯೊಂದರಲ್ಲಿ ಈ ಬಾವಿಯ ರಚನೆಯನ್ನು ಸಿದ್ಧಪಡಿಸಲು ಹಲವು ದಿನಗಳು ಬೇಕಾಗುತ್ತವೆ. ಈ ನಿರ್ಮಾಣದಲ್ಲಿ ಸಾಹಸಗಳನ್ನು ಪ್ರದರ್ಶಿಸುವ ಬೈಕ್ ಮತ್ತು ಕಾರು ಚಾಲಕರು ಸಹ ಪಾಲ್ಗೊಳ್ಳುತ್ತಾರೆ. ಈ ಪ್ರದರ್ಶನಕ್ಕೆ ವೇದಿಕೆಯಾಗುವ ಬಾವಿಯು ಅವರ ಸುರಕ್ಷತೆ ಮತ್ತು ಪ್ರದರ್ಶನದ ಗುಣಮಟ್ಟದಲ್ಲಿ ಬಹಳ ಮುಖ್ಯ ಪಾತ್ರವನ್ನು ವಹಿಸುತ್ತದೆ.
ಮೌತ್ - ಕಾ – ಕುಂವಾ ಎನ್ನುವ ಅಶುಭವಾದ ಹೆಸರನ್ನು ಹೊತ್ತಿರುವ ಈ ಸಾಹಸ ಕ್ರೀಡೆಯು ತ್ರಿಪುರಾದ ಅಗರ್ತಲಾದಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ನಡೆಯುವ ದುರ್ಗಾ ಪೂಜಾ ಜಾತ್ರೆಯ ಪ್ರಮುಖ ಆಕರ್ಷಣೆಯ ಒಂದು ಭಾಗವೂ ಹೌದು. ಇದರೊಂದಿಗೆ ಇಲ್ಲಿ ಫೆರ್ರಿ ವ್ಹೀಲ್, ಮೆರ್ರಿ – ಗೋ – ರೌಂಡ್ ಹಾಗೂ ಆಟಿಕೆ ರೈಲಿನಂತಹ ಆಕರ್ಷಣೆಗಳೂ ಇರುತ್ತವೆ.

ಸವಾರರು ಸಹ ಬಾವಿ ರಚನೆಯ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಾರೆ. ಚಿತ್ರದಲ್ಲಿ ಪಂಕಜ್ ಕುಮಾರ್ (ಎಡ) ಮತ್ತು ರುಬೆಲ್ ಶೇಖ್ (ಬಲ) ಅಕ್ಟೋಬರ್ 2023ರಲ್ಲಿ ತ್ರಿಪುರದ ಅಗರ್ತಲಾದಲ್ಲಿ ನಡೆದ ದುರ್ಗಾ ಪೂಜೆಯ ಸಂದರ್ಭದ ಜಾತ್ರೆಗೆ ಬಾವಿಯನ್ನು ಸಿದ್ಧಪಡಿಸುತ್ತಿದ್ದಾರೆ

ಇನ್ನೇನು ಜಾತ್ರೆ ಆರಂಭಗೊಳ್ಳಲಿರುವುದರಿಂದ ಕೊನೆಯ ಕ್ಷಣದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ
“ನಾವು ಈ ಬಾವಿಯೊಳಗೆ ಯಾವ ಕಾರನ್ನು ಬೇಕಿದ್ದರೂ ಓಡಿಸಬಲ್ಲೆವು. ಆದರೆ ನಾವು ಮಾರುತಿ 800 ಕಾರಿಗೆ ಹೆಚ್ಚು ಪ್ರಾಶಸ್ತ್ಯ ನೀಡುತ್ತೇವೆ. ಇದಕ್ಕೆ ಮುಖ್ಯ ಕಾರಣ ಈ ಕಾರುಗಳ ಕಿಟಕಿ ಅಗಲವಿರುತ್ತದೆ. ಇದರಿಂದಾಗಿ [ಪ್ರದರ್ಶನದ ಸಮಯದಲ್ಲಿ] ನಮಗೆ ಹೊರಗೆ ಇಣುಕುವುದು ಸುಲಭವಾಗುತ್ತದೆ” ಎನ್ನುತ್ತಾರೆ ಸಾಹಸಿ ರುಬೆಲ್. ಜೊತೆಗೆ ಅವರು ಯಮಹಾ ಕಂಪನಿಯ ಆರ್ ಎಕ್ಸ್ 135 ಬೈಕ್ ಕೂಡಾ ಬಳಸುವುದಾಗಿ ಅವರು ಹೇಳುತ್ತಾರೆ. “ನಾವು ಹಳೆಯ ಬೈಕುಗಳನ್ನೇ ಬಳಸುತ್ತೇವೆ. ಆದರೆ ಆಗಾಗ ಅದಕ್ಕೆ ಅಗತ್ಯ ರಿಪೇರಿಗಳನ್ನು ಮಾಡಿಸುತ್ತಿರುತ್ತೇವೆ.”
ಪಶ್ಚಿಮ ಬಂಗಾಳದ ಮಾಲ್ಡಾ ಮೂಲದವರಾದ ಅವರು ತಂಡವನ್ನು ಮುನ್ನಡೆಸುವುದರ ಜೊತೆಗೆ ವಾಹನಗಳ ವಾಹನಗಳ ಮಾಲಿಕತ್ವವನ್ನೂ ಹೊಂದಿದ್ದಾರೆ. ಅವರ ಬಳಿಯಿರುವ ಮೋಟಾರುಬೈಕುಗಳಿಗೆ ಈಗಾಗಲೇ ಹತ್ತು ವರ್ಷ ಕಳೆದಿದೆ ಆದರೆ, “ಅವುಗಳಿಗೆ ಆಗಾಗ ಸರ್ವೀಸ್ ಮಾಡಿಸುತ್ತಿರುತ್ತೇವೆ” ಎನ್ನುತ್ತಾರೆ.
ಈ ಕಾರ್ಯಕ್ರಮಗಳು ಗ್ರಾಮೀಣ ಪ್ರದೇಶಗಳ ಯುವಜನರನ್ನು ಆಕರ್ಷಿಸುತ್ತವೆ. ಜಾರ್ಖಂಡ್ ರಾಜ್ಯದ ಮೊಹಮ್ಮದ್ ಜಗ್ಗಾ ಅನ್ಸಾರಿ ತಾನು ಈ ಪ್ರದರ್ಶನಕ ಕಲೆಯನ್ನು ಕಲಿತ ಬಗ್ಗೆ ವಿವರಿಸುತ್ತಾ ಹೀಗೆ ಹೇಳುತ್ತಾರೆ, “ಬಾಲ್ಯದಲ್ಲಿ ಇಂತಹ ಮೇಳಗಳು ಪಟ್ಟಣಕ್ಕೆ ಬಂದಾಗ ನಾನು ಬಹಳ ಆಸಕ್ತಿಯಿಂದ ನೋಡಲು ಹೋಗುತ್ತಿದ್ದೆ” ಎನ್ನುವ ಅವರು “ನಂತರ ನಿಧಾನವಾಗಿ ನಾನು ಈ ಸವಾರಿ ಮಾಡುವುದನ್ನು ಕಲಿಯಲು ಆರಂಭಿಸಿದೆ” ಎನ್ನುತ್ತಾರೆ. “ಈ ಕೆಲಸದಿಂದಾಗಿ ನನಗೆ ಹಲವು ಸ್ಥಳಗಳಿಗೆ ಹೋಗಲು ಸಾಧ್ಯವಾಗುತ್ತಿದೆ. ಇದು ನನ್ನ ಪಾಲಿಗೆ ಬಹಳ ಖುಷಿ ಕೊಡುವ ವಿಷಯ” ಎನ್ನುತ್ತಾರೆ ಈ 29 ವರ್ಷದ ಪ್ರದರ್ಶಕ.
ಬಿಹಾರದ ನವಾಡಾ ಜಿಲ್ಲೆಯ ವಾರಿಸಾಲಿಗಂಜ್ ಗ್ರಾಮದವರಾದ ಪಂಕಜ್ ಕುಮಾರ್, "ನಾನು 10ನೇ ತರಗತಿಯ ನಂತರ ಶಾಲೆ ಬಿಟ್ಟು ಸವಾರಿ ಕಲಿಯಲು ಪ್ರಾರಂಭಿಸಿದೆ" ಎಂದು ಹೇಳಿದರು.
ಅನ್ಸಾರಿ ಮತ್ತು ಪಂಕಜ್ ಅವರಂತಹ ಪ್ರದರ್ಶಕರು ಮತ್ತು ವೇದಿಕೆ ಹಾಗೂ ಬಾವಿ ನಿರ್ಮಿಸುವ ಕಾರ್ಮಿಕರು ಭಾರತದ ವಿವಿಧ ಭಾಗಗಳಿಗೆ ಸೇರಿದವರು. ಅವರು ಗುಂಪಾಗಿ ಕಾರ್ಯಕ್ರಮಗಳಿಗೆ ಹೋಗುತ್ತಾರೆ. ಇವರು ಸಾಮಾನ್ಯವಾಗಿ ಪ್ರದರ್ಶನ ನೀಡುವ ಜಾತ್ರೆಯ ಡೇರೆಯ ಬಳಿಯಲ್ಲೇ ಉಳಿಯುತ್ತಾರೆ. ರೂಬೆಲ್ ಮತ್ತು ಅನ್ಸಾರಿ ತಮ್ಮ ಕುಟುಂಬವನ್ನೂ ತಮ್ಮೊಡನೆ ಕರೆತಂದರೆ, ಪಂಕಜ್ ಕಾರ್ಯಕ್ರಮಗಳಿಲ್ಲದ ಸಮಯದಲ್ಲಿ ಊರಿಗೆ ಹೋಗುತ್ತಾರೆ.

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯವರಾದ 29 ವರ್ಷದ ಮೊಹಮ್ಮದ್ ಅನ್ಸಾರಿ ವಾಹನ ಚಲಾಯಿಸುತ್ತಾ ಪಕ್ಕದಲ್ಲಿದ್ದವರಿಂದ ಹಣ ತೆಗೆದುಕೊಳ್ಳುತ್ತಿದ್ದಾರೆ. ಕೆಲವು ನೋಟುಗಳನ್ನು ಬಾಯಿಗೆ ಸಿಕ್ಕಿಸಿಕೊಂಡಿರುವುದನ್ನು ಚಿತ್ರದಲ್ಲಿ ಕಾಣಬಹುದು. "ಈ ಆಟದಲ್ಲಿ ಜನರು ನಮಗೆ ಏನು ನೀಡುತ್ತಾರೋ ಅದೇ ನಮ್ಮ ಆದಾಯ ಮೂಲ" ಎಂದು ಅವರು ಹೇಳುತ್ತಾರೆ
ಮೌತ್ ಕಾ ಕುಂವಾ ಆಟದ ಕೆಲಸವು ಬಾವಿಯ ನಿರ್ಮಾಣದೊಂದಿಗೆ ಪ್ರಾರಂಭವಾಗುತ್ತದೆ. "ಎಲ್ಲಾ ಕೆಲಸಗಳನ್ನು ಮಾಡಿ ಮುಗಿಸಲು ಮೂರರಿಂದ ಆರು ದಿನಗಳು ಬೇಕಾಗುತ್ತವೆ. ಆದರೆ ಈ ವರ್ಷ ನಮಗೆ ಸಮಯವಿರಲಿಲ್ಲ, ಹೀಗಾಗಿ ನಾವು ಇಡೀ ಅಟ್ಟಣಿಗೆಯನ್ನು ಕೇವಲ ಮೂರು ದಿನಗಳಲ್ಲಿ ನಿರ್ಮಿಸಿದ್ದೇವೆ" ಎಂದು ರುಬೆಲ್ ಹೇಳುತ್ತಾರೆ. ಸಾಕಷ್ಟು ಸಮಯವಿದ್ದ ಸಂದರ್ಭದಲ್ಲಿ ನಿಧಾನವಾಗಿ ಕೆಲಸ ಮಾಡುವುದಾಗಿ ಅವರು ಹೇಳುತ್ತಾರೆ.
ಕೊನೆಗೂ ಅಂದಿನ ಪ್ರದರ್ಶನದ ಸಮಯ ಬಂದಿತ್ತು. ಅಂದು ಸಂಜೆ 7 ಗಂಟೆಗೆ ಅಗರ್ತಲಾದ ಜಾತ್ರೆಯ ಮೈದಾನದಲ್ಲಿ ಜನರು ಟಿಕೆಟ್ಟುಗಳಿಗಾಗಿ ಸಾಲುಗಟ್ಟಿ ನಿಂತಿದ್ದರು. ಟಿಕೆಟ್ ದರ ತಲಾ 70 ರೂಪಾಯಿ. ಮಕ್ಕಳಿಗೆ ಉಚಿತ. ಈ ಸಾವಿನ ಬಾವಿಯೊಳಗೆ ಏಕಕಾಲದಲ್ಲಿ ನಾಲ್ಕು ಜನರು ಎರಡು ಕಾರು ಮತ್ತು ಎರಡು ಬೈಕುಗಳೊಂದಿಗೆ ಪ್ರದರ್ಶನ ಆರಂಭಿಸುತ್ತಾರೆ. ಪ್ರತಿ ಪ್ರದರ್ಶನ ಹತ್ತು ನಿಮಿಷಗಳ ಅವಧಿಯನ್ನು ಹೊಂದಿರುತ್ತದೆ. ಅವರು ಒಂದು ರಾತ್ರಿಗೆ 30 ಪ್ರದರ್ಶನಗಳನ್ನು ನೀಡುತ್ತಾರೆ. ಪ್ರದರ್ಶನದ ನಡುವೆ ಒಮ್ಮೆ ಮಾತ್ರ 15-20 ನಿಮಿಷಗಳ ವಿರಾಮ ಸಿಗುತ್ತದೆ.
ಅಗರ್ತಲಾದಲ್ಲಿ ಈ ಕಾರ್ಯಕ್ರಮ ಎಷ್ಟು ಯಶಸ್ವಿಯಾಗಿತ್ತೆಂದರೆ ಅವರು ತಮ್ಮ ಐದು ದಿನಗಳ ಕಾರ್ಯಕ್ರಮವನ್ನು ಏಳು ದಿನಗಳಿಗೆ ವಿಸ್ತರಿಸಬೇಕಾಯಿತು,
“ನಮಗೆ ದಿನಗೂಲಿಯಾಗಿ 600-700 ರೂಪಾಯಿ ದೊರೆಯುತ್ತದೆ, ಆದರೆ ನಾವು ಸಾಹಸ ಪ್ರದರ್ಶಿಸುವಾಗ ಜನರು ನಮಗೆ ನೀಡುವ ಹಣವೇ ನಮ್ಮ ಆದಾಯದ ಮುಖ್ಯ ಭಾಗ” ಎನ್ನುವ ಅನ್ಸಾರಿ, ಒಳ್ಳೆಯ ಪ್ರದರ್ಶನಗಳಿದ್ದ ತಿಂಗಳುಗಳಲ್ಲಿ 25,000 ರೂ.ಗಳವರೆಗೆ ಗಳಿಸಬಹುದು ಎನ್ನುತ್ತಾರೆ.
“ಮಳೆಗಾಲದಲ್ಲಿ ಈ ಪ್ರದರ್ಶನ ಸಾಧ್ಯವಿಲ್ಲ” ಎನ್ನುವ ರುಬೆಲ್ ಈ ಕೆಲಸವಿಲ್ಲದ ಸಮಯದಲ್ಲಿ ಊರಿಗೆ ಹೋಗಿ ಹೊಲಗಳಲ್ಲಿ ದುಡಿಯುತ್ತಾರೆ.
ಈ ಅಪಾಯಕಾರಿ ಆಟದಲ್ಲಿ ಅಪಾಯವಿದೆಯನ್ನುವ ಮಾತನ್ನು ಪಂಕಜ್ ತಳ್ಳಿಹಾಕುತ್ತಾರೆ. “ನನಗೆ ಅಪಾಯಗಳ ಕುರಿತು ಭಯವಿಲ್ಲ. ನೀವು ಧೈರ್ಯಶಾಲಿಗಳಾಗಿದ್ದರೆ ಹೆದರುವಂತಹದ್ದು ಏನೂ ಇಲ್ಲ.” ತಮ್ಮ ಇಡೀ ಜೀವನಾನುಭವದಲ್ಲಿ ಒಂದೂ ದುರ್ಘಟನೆ ನಡೆದಿಲ್ಲ ಎಂದು ಗುಂಪು ನೆನಪಿಸಿಕೊಳ್ಳುತ್ತದೆ.
“ನಾವು ಪ್ರದರ್ಶನ ನೀಡುವ ಸಂದರ್ಭದಲ್ಲಿ ಜನರು ಅನುಭವಿಸುವ ಸಂಭ್ರಮ ನನಗೆ ಖುಷಿ ಕೊಡುತ್ತದೆ” ಎನ್ನುತ್ತಾರೆ ರುಬೆಲ್.

' ಬಾವಿ ' ಯ ಗೋಡೆಯನ್ನು ನಿರ್ಮಿಸುವ ಮರದ ಹಲಗೆ ಗಳನ್ನು ಜಾತ್ರೆಯ ಮೈದಾನದಲ್ಲಿ ರಾಶಿ ಹಾಕಲಾಗಿದೆ. ಅವುಗಳನ್ನು ಸುಮಾರು 80 ಡಿಗ್ರಿ ಲಂಬವಾಗಿ ಇಳಿಕೆ ಕ್ರಮದಲ್ಲಿ ಜೋಡಿಸಲಾಗುತ್ತದೆ

ಜಗ್ಗಾ ಅನ್ಸಾರಿ (ಬಲ) ಪೂಜಾ ಚಪ್ಪರದ ಹಿಂಭಾಗದಲ್ಲಿ ಟೆಂಟ್ ಸ್ಥಾಪಿಸು ತ್ತಿದ್ದಾರೆ . ಮೇಳದ ಸಮಯದಲ್ಲಿ ಗುಂಪು ಇಲ್ಲಿ ವಾಸಿಸುತ್ತದೆ

ಬಿಹಾರದ ನವಾಡಾ ಜಿಲ್ಲೆಯ ವಾರಿಸಾಲಿಗಂಜ್ ಗ್ರಾಮದ ಪಂಕಜ್ ಕುಮಾರ್ (ಕಪ್ಪು ಟೀಶರ್ಟ್) ಪ್ರೇಕ್ಷಕರ ಗ್ಯಾಲರಿಯನ್ನು ಸ್ಥಾಪಿಸಿದರೆ , ರುಬೆಲ್ ಶೇಖ್ ಅವರಿಗೆ ಸಹಾಯ ಮಾಡುತ್ತಾರೆ

ರಚನೆ ಪೂರ್ಣಗೊಂಡ ನಂತರ ಜನರ ಗುಂಪು ಟೆಂಟ್ ಕವರ್ ಇರುವ ಕಂಬವನ್ನು ಎಳೆಯುತ್ತದೆ

ಈ ಪ್ರದರ್ಶನದಲ್ಲಿ ಬಳಸಲಾ ಗುವ ನಾಲ್ಕು ಯಮಹಾ ಆ ರ್‌ಎ ಕ್ಸ್ -135 ಬೈ ಕುಗ ಳನ್ನು ಮೇಳದ ದಿನಗಳಲ್ಲಿ ಸವಾರರು ವಾಸಿಸುವ ತಾತ್ಕಾಲಿಕ ಶಿಬಿರದ ಪಕ್ಕದಲ್ಲಿ ಇಡಲಾ ಗುತ್ತ ದೆ. ರುಬೆಲ್ ಶೇಖ್ ಅವರು ಇದೇ ಮೋಟಾರ್ ಬೈಕು ಗಳನ್ನು ಈಗ 10 ವರ್ಷಗಳಿಗಿಂತ ಹೆಚ್ಚು ಸಮಯದಿಂದ ಬಳಸುತ್ತಿದ್ದಾರೆ . ಅವುಗಳನ್ನು ಉತ್ತಮ ಸ್ಥಿತಿಯಲ್ಲಿ ಇಟ್ಟುಕೊಂಡಿದ್ದು, ಆಗಾಗ ಸರ್ವೀಸ್ ಕೂಡಾ ಮಾಡಿಸುವುದಾಗಿ ಹೇಳುತ್ತಾರೆ

ಜಗ್ಗಾ ಅನ್ಸಾರಿ (ಎಡ) ಮತ್ತು ಪಂಕಜ್ ಕುಮಾರ್ (ಬಲ) ಅವರು ಪ್ರದರ್ಶನದ ನಡುವೆ ʼ ಸಾವಿನ ಬಾವಿಯೊಳಗಿನಿಂದ ʼ ತಮ್ಮ ಮೋಟಾರ್ ಬೈಕ್ ಮೇಲೆ ಫೋಟೋಗೆ ಪೋಸ್ ನೀಡುತ್ತಿದ್ದಾರೆ

ಮೇಳದ ಮೈದಾನದ ಪ್ರವೇಶದ್ವಾರ ದಲ್ಲಿ ವಿವಿಧ ರೀತಿಯ ಉತ್ಪನ್ನಗಳನ್ನು ಮಾರಾಟ ಮಾಡುವ ಅನೇಕ ತಾತ್ಕಾಲಿಕ ಮಳಿಗೆಗ ಳಿವೆ

ತ್ರಿಪುರಾದ ಅಗರ್ತಲಾದಲ್ಲಿ ಅಕ್ಟೋಬರ್ 2023 ರಲ್ಲಿ ನಡೆದ ದುರ್ಗಾ ಪೂಜಾ ಜಾತ್ರೆಯಲ್ಲಿ ಈ ಸಾವಿನ ಬಾವಿ ಮುಖ್ಯ ಆಕರ್ಷಣೆಯಾಗಿತ್ತು. ಇಲ್ಲಿನ ಇತರ ಆಕರ್ಷಣೆಗಳೆಂದರೆ ಫೆರ್ರಿ ವ್ಹೀಲ್, ಮೆರ್ರಿ- ಗೋ-ರೌಂಡ್ ಹಾಗೂ ಆಟಿಕೆ ರೈಲು

ಈ ಸಾವಿನ ಬಾವಿಯ ಸಾಹನ ಪ್ರದರ್ಶನಕ್ಕೆ ಟಿಕೆಟ್ ದರ 70ರಿಂದ 80 ರೂಪಾಯಿಗಳ ತನಕ ಇರುತ್ತದೆ, ಇದನ್ನು ಅವರು ಜನಸಂದಣಿಯನ್ನು ಅವಲಂಬಿಸಿ ನಿರ್ಧರಿಸುತ್ತಾರೆ , ಆದರೆ ಮಕ್ಕಳಿಗೆ ಪ್ರವೇಶವಿರುತ್ತದೆ

ಸಾವಿನ ಬಾವಿಯ ಪ್ರೇಕ್ಷಕರ ಗ್ಯಾಲರಿಯಿಂದ ಕಾಣುವ ಜಾತ್ರೆಯ ಮೈದಾನದ ನೋಟ

ತಲಾ 10 ನಿಮಿಷಗಳ ಕಾಲ ನಡೆಯುವ ಪ್ರತಿಯೊಂದು ಪ್ರದರ್ಶನದಲ್ಲಿ ಗೋಡೆಯ ಮೇಲೆ ಕನಿಷ್ಠ ಎರಡು ಬೈಕುಗಳು ಮತ್ತು ಕಾರುಗಳನ್ನು ಸವಾರಿ ಮಾಡುವುದನ್ನು ಒಳಗೊಂಡಿರುತ್ತದೆ ; ಕೆಲವೊಮ್ಮೆ ಮೂರು ಬೈಕುಗಳನ್ನು ಸಹ ಬಳಸಲಾಗುತ್ತದೆ

ಪ್ರೇಕ್ಷಕರೊಬ್ಬರು ಪ್ರದರ್ಶನದ ವೀಡಿಯೋ ಮಾಡುತ್ತಿರುವುದು. ಈ ಸಾಹಸ ಪ್ರದರ್ಶನವು ಜಾತ್ರೆಯಲ್ಲಿ ಎಷ್ಟು ಜನಪ್ರಿಯವಾಯಿತೆಂದರೆ ಆಯೋಜಕರು ಪ್ರದರ್ಶನವನ್ನು ಐದು ದಿನಗಳಿಂದ ಏಳು ದಿನಕ್ಕೆ ವಿಸ್ತರಿಸಿದರು

ಪ್ರದರ್ಶನದ ನಂತರ ಒಂದು ಕುಟುಂಬ ವೊಂದು ಪಂಕಜ್ ಕುಮಾರ್ , ಜಗ್ಗಾ ಅನ್ಸಾರಿ ಮತ್ತು ಅನಿಲ್ ಖಾನ್ ಅವರೊಂದಿಗೆ ಫೋಟೋ ತೆಗೆ ಸಿಕೊಳ್ಳುತ್ತಿರುವುದು

ರುಬೆಲ್ ಶೇಖ್ ಆಟದ ನಂತರ ತನ್ನ ಪುಟ್ಟ ಮಗುವಿನೊಂದಿಗೆ ಆಡುತ್ತಿದ್ದಾ ರೆ . ಎರಡು ಆಟಗಳ ನಡುವೆ , ಈ ಚಾಲಕರು 15-20 ನಿಮಿಷಗಳ ವಿರಾಮ ತೆಗೆದುಕೊಳ್ಳುತ್ತಾರೆ. ಅವರು ಒಂದು ರಾತ್ರಿಯಲ್ಲಿ ಕನಿಷ್ಠ 30 ಪ್ರದರ್ಶನಗಳನ್ನು ನೀಡುತ್ತಾರೆ

ಪ್ರದರ್ಶನದ ಸಮಯದಲ್ಲಿ ಪಂಕಜ್ ಕುಮಾರ್. ' ನಾನು 10ನೇ ತರಗತಿಯ ನಂತರ ಶಾಲೆ ಬಿಟ್ಟು ಸವಾರಿ ಕಲಿಯಲು ಪ್ರಾರಂಭಿಸಿದೆ ' ಎಂದು ಅವರು ಹೇಳುತ್ತಾರೆ

ಪ್ರದರ್ಶನದ ಕೊನೆಯಲ್ಲಿ ಪಂಕಜ್ ಕುಮಾರ್ ಸಣ್ಣ ಗೇಟ್ ಮೂಲಕ ಹೊರಗೆ ಬರುತ್ತಾರೆ

ʼ ನಾವು ಪ್ರದರ್ಶನ ನೀಡುವಾಗ ಜನರು ಅನುಭವಿಸುವ ಸಂಭ್ರಮ ನನಗೆ ಖುಷಿ ಕೊಡುತ್ತದೆ ʼ ಎನ್ನುತ್ತಾರೆ ರುಬೆಲ್

ಮಳೆಗಾಲದ ಸಮಯದಲ್ಲಿ ಪ್ರದರ್ಶನ ನೀಡಲು ಸಾಧ್ಯವಿಲ್ಲ ಎನ್ನುತ್ತಾರೆ
ರುಬೆಲ್. ಅವರು ಪ್ರದರ್ಶನಗಳು ಇಲ್ಲದ ಸಮಯದಲ್ಲಿ ಊರಿಗೆ ತೆರಳಿ ಕೃಷಿ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಾರೆ
ಅನುವಾದ : ಶಂಕರ . ಎನ್ . ಕೆಂಚನೂರು