"ಇಲ್ಲಿ ಒಂದು ದೊಡ್ಡ ಸಖುವಾ ಗಾಚ್ [ಮರ] ಇತ್ತು. ಆಗೆಲ್ಲ ಹಿಜ್ಲಾ ಗ್ರಾಮದ ಮತ್ತು ಸುತ್ತಮುತ್ತಲಿನ ಜನರು ಈ ಸ್ಥಳದಲ್ಲಿ ಒಟ್ಟು ಸೇರಿ ಬೈಸಿ [ಸಭೆ] ನಡೆಸುತ್ತಿದ್ದರು. ಈ ದೈನಂದಿನ ಕೂಟಗಳನ್ನು ಗಮನಿಸಿದ ಬ್ರಿಟಿಷರು ಮರವನ್ನು ಕತ್ತರಿಸಲು ನಿರ್ಧರಿಸಿದರು... ಅದರಿಂದ ರಕ್ತ ಸೋರುತ್ತಿತ್ತು. ನಂತರ ಮರದ ತುಂಡು ಕಲ್ಲಾಗಿ ಮಾರ್ಪಟ್ಟಿತು."
ಜಾರ್ಖಂಡ್ ರಾಜ್ಯದ ದುಮ್ಕಾ ಜಿಲ್ಲೆಯಲ್ಲಿ ಈ ಹಿಂದೆ ಮರವು ತಲೆಯೆತ್ತಿ ನಿಂತಿದ್ದ ಸ್ಥಳದಲ್ಲಿ ಕುಳಿತು ರಾಜೇಂದ್ರ ಬಾಸ್ಕಿ ಈ ಶತಮಾನಗಳಷ್ಟು ಹಳೆಯ ಕಥೆಯನ್ನು ವಿವರಿಸುತ್ತಿದ್ದಾರೆ. "ಆ ಮರದ ಕಾಂಡವೇ ಈಗ ಮರಂಗ್ ಬುರು ದೇವರನ್ನು ಪೂಜಿಸುವ ಪವಿತ್ರ ಸ್ಥಳ" ಎಂದು 30 ವರ್ಷದ ಅವರು ಹೇಳುತ್ತಾರೆ. ಸಂತಾಲ್ (ಸಂಥಾಲ್ ಎಂದೂ ಕರೆಯಲಾಗುತ್ತದೆ) ಆದಿವಾಸಿ ಸಮುದಾಯಕ್ಕೆ ಸೇರಿದ ಜನರು ತಮ್ಮ ಪ್ರಾರ್ಥನೆಗಳನ್ನು ಸಲ್ಲಿಸಲು ಜಾರ್ಖಂಡ್, ಬಿಹಾರ ಮತ್ತು ಬಂಗಾಳದಿಂದ ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ. ವೃತ್ತಿಯಿಂದ ರೈತರಾಗಿರುವ ಬಾಸ್ಕಿ, ಮರಂಗ್ ಬುರುವಿನ ಪ್ರಸ್ತುತ ನಾಯಕಿ (ಅರ್ಚಕ) ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಹಿಜ್ಲಾ ಗ್ರಾಮವು ದುಮ್ಕಾ ಪಟ್ಟಣದ ಹೊರವಲಯದ ಸಂತಾಲ್ ಪರಗಣ ವಿಭಾಗದಲ್ಲಿದೆ ಮತ್ತು 2011ರ ಜನಗಣತಿಯ ಪ್ರಕಾರ ಈ ಊರು 640 ಜನಸಂಖ್ಯೆಯನ್ನು ಹೊಂದಿದೆ. ಬ್ರಿಟಿಷ್ ಆಡಳಿತದ ವಿರುದ್ಧ ಸಂತಾಲರು ನಡೆಸಿದ ದಂಗೆಯು ಜೂನ್ 30, 1855ರಂದು ಹಿಜ್ಲಾದಿಂದ ಸುಮಾರು ನೂರು ಕಿ.ಮೀ ದೂರದಲ್ಲಿರುವ ಭಗ್ನಾದಿಹ್ ಗ್ರಾಮದ (ಭೋಗ್ನಾದಿಹ್ ಎಂದೂ ಕರೆಯಲ್ಪಡುತ್ತದೆ) ಸಿಡೋ ಮತ್ತು ಕನ್ಹು ಮುರ್ಮು ಅವರ ನಾಯಕತ್ವದಲ್ಲಿ ಪ್ರಾರಂಭವಾಯಿತು.


ಎಡ: ಈ ಮರದ ಕೊಂಬೆಯ ಬಳಿಯೇ ಈಗ ಸಂತಾಲರು ಮರಂಗ್ ಬುರುವನ್ನು ಪೂಜಿಸುವುದು. ಬಲ: ರಾಜೇಂದ್ರ ಬಾಸ್ಕಿ ಮರಂಗ್ ಬುರುವಿನ ಪ್ರಸ್ತುತ ನಾಯಕಿ (ಅರ್ಚಕ)


ಎಡ: ಆವರಣದ ಸುತ್ತಲೂ 19ನೇ ಶತಮಾನದಲ್ಲಿ ಬ್ರಿಟಿಷರು ನಿರ್ಮಿಸಿದ ಗೇಟ್. ಬಲ: ಜಾತ್ರೆಯಲ್ಲಿ ಪ್ರದರ್ಶನ ನೀಡುವ ಸಂತಾಲ್ ಕಲಾವಿದರು
ಹಿಜ್ಲಾ ಗ್ರಾಮವು ಹಿಜ್ಲಾ ಬೆಟ್ಟದ ತಪ್ಪಲಿನಲ್ಲಿದೆ. ಇದು ರಾಜಮಹಲ್ ಶ್ರೇಣಿಯ ವಿಸ್ತರಣೆ. ಈ ಊರನ್ನು ಸುತ್ತಲು ಹೊರಟರೆ ಒಂದು ವೃತ್ತಾಕಾರದ ಸುತ್ತು ಹಾಕಿ ಹೊರಟಲ್ಲಿಗೇ ಬಂದು ತಲುಪುತ್ತೇವೆ
"ನಮ್ಮ ಪೂರ್ವಜರು ಇಡೀ ವರ್ಷಕ್ಕೆ ನಿಯಮಗಳು ಮತ್ತು ನಿಬಂಧನೆಗಳನ್ನು ಅಲ್ಲಿಯೇ [ಮರದ ಬಳಿ] ರೂಪಿಸುತ್ತಿದ್ದರು" ಎಂದು 2008ರಿಂದ ಗ್ರಾಮದ ಮುಖ್ಯಸ್ಥರಾಗಿರುವ 50 ವರ್ಷದ ಸುನಿಲಾಲ್ ಹನ್ಸ್ಡಾ ಹೇಳುತ್ತಾರೆ. ಮರದ ಬುಡವನ್ನು ಹೊಂದಿರುವ ಸ್ಥಳವು ಸಭೆಗಳಿಗೆ ಜನಪ್ರಿಯ ಸ್ಥಳವಾಗಿ ಮುಂದುವರೆದಿದೆ ಎಂದು ಹನ್ಸ್ಡಾ ಹೇಳುತ್ತಾರೆ.
ಹನ್ಸ್ಡಾ ಹಿಜ್ಲಾದಲ್ಲಿ 12 ಬಿಘಾ ಭೂಮಿಯನ್ನು ಹೊಂದಿದ್ದು ಖಾರಿಫ್ ಹಂಗಾಮಿನಲ್ಲಿ ಅಲ್ಲಿ ಕೃಷಿ ಮಾಡುತ್ತಾರೆ. ಉಳಿದ ತಿಂಗಳುಗಳಲ್ಲಿ, ಅವರು ದುಮ್ಕಾ ಪಟ್ಟಣದಲ್ಲಿ ನಿರ್ಮಾಣ ಸ್ಥಳಗಳಲ್ಲಿ ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ ಮತ್ತು ಕೆಲಸ ಸಿಕ್ಕ ದಿನ 300 ರೂ.ಗಳನ್ನು ಕೂಲಿಯಾಗಿ ಗಳಿಸುತ್ತಾರೆ. ಹಿಜ್ಲಾದಲ್ಲಿ ವಾಸಿಸುವ ಒಟ್ಟು 132 ಕುಟುಂಬಗಳು, ಅವರಲ್ಲಿ ಹೆಚ್ಚಿನವರು ಸಂತಾಲರು, ತಮ್ಮ ಜೀವನೋಪಾಯಕ್ಕಾಗಿ ಕೃಷಿ ಮತ್ತು ಕೂಲಿ ಕೆಲಸವನ್ನು ಅವಲಂಬಿಸಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಮಳೆಯ ಅನಿಶ್ಚಿತತೆಯೂ ಹೆಚ್ಚಾಗಿದೆ, ಇದು ಸಂಕಷ್ಟವನ್ನು ಇನ್ನಷ್ಟು ಹೆಚ್ಚಿಸಿ ಇಲ್ಲಿನ ಜನರು ಹೆಚ್ಚು ಹೆಚ್ಚು ಗುಳೇ ಹೋಗುವಂತೆ ಮಾಡಿದೆ.


ಪ್ರತಿ ವರ್ಷ ಫೆಬ್ರವರಿ ಮತ್ತು ಮಾರ್ಚ್ ನಡುವೆ ನಡೆಯುವ ಹಿಜ್ಲಾ ಜಾತ್ರೆಯಲ್ಲಿ ನೃತ್ಯ ಪ್ರದರ್ಶನಗಳನ್ನು ನಡೆಸಲಾಗುತ್ತದೆ


ಎಡ: ಹಿಜ್ಲಾ ಜಾತ್ರೆಯ ಒಂದು ದೃಶ್ಯ. ಬಲ: ಸೀತಾರಾಮ್ ಸೊರೆನ್, ಮರಂಗ್ ಬುರುವಿನ ಮಾಜಿ ನಾಯಕಿ
ಮರಂಗ್ ಬುರುಗೆ ಸಮರ್ಪಿತವಾದ ಹಿಜ್ಲಾದಲ್ಲಿ ಒಂದು ಪ್ರಮುಖ ಜಾತ್ರೆಯೂ ನಡೆಯುತ್ತದೆ. ಫೆಬ್ರವರಿಯಲ್ಲಿ ಬಸಂತ್ ಪಂಚಮಿಯ ಸಮಯದಲ್ಲಿ ನಡೆಯುವ ಈ ವಾರ್ಷಿಕ ಕಾರ್ಯಕ್ರಮವನ್ನು ಮಯೂರಾಕ್ಷಿ ನದಿಯ ದಡದಲ್ಲಿ ಆಯೋಜಿಸಲಾಗುತ್ತದೆ. ಜಾರ್ಖಂಡ್ ಸರ್ಕಾರದ ಸೂಚನೆ ಪತ್ರವೊಂದು ಈ ಜಾತ್ರೆಯು 1890ರಲ್ಲಿ ಆಗಿನ ಸಂತಾಲ್ ಪರಗಣದ ಡೆಪ್ಯುಟಿ ಕಮಿಷನರ್ ಆರ್. ಕ್ಯಾಸ್ಟೈರ್ಸ್ ಅವರ ಆಡಳಿತದಡಿ ಪ್ರಾರಂಭವಾಯಿತು ಎಂದು ಹೇಳುತ್ತದೆ.
ಕೋವಿಡ್ -19 ಸಾಂಕ್ರಾಮಿಕ ಪಿಡುಗಿನ ಎರಡು ವರ್ಷಗಳನ್ನು ಹೊರತುಪಡಿಸಿ ಪ್ರತಿವರ್ಷ ಹಿಜ್ಲಾ ಮೇಳವನ್ನು ಆಯೋಜಿಸಲಾಗುತ್ತಿದೆ ಎಂದು ದುಮ್ಕಾದ ಸಿಡೋ ಕನ್ಹು ಮುರ್ಮು ವಿಶ್ವವಿದ್ಯಾಲಯದ ಸಂತಾಲಿ ಪ್ರಾಧ್ಯಾಪಕರಾದ ಡಾ.ಶರ್ಮಿಳಾ ಸೊರೆನ್ ಹೇಳುತ್ತಾರೆ. ಭಾಲಾ (ಈಟಿ) ಮತ್ತು ತಲ್ವಾರ್ (ಖಡ್ಗ) ನಿಂದ ಧೋಲ್ (ಡ್ರಮ್) ಮತ್ತು ದೌರಾ (ಬಿದಿರಿನ ಬುಟ್ಟಿ) ತನಕ ವಿವಿಧ ಬಗೆಯ ವಸ್ತುಗಳನ್ನು ಜಾತ್ರೆಯಲ್ಲಿ ಮಾರಾಟಕ್ಕಿಡಲಾಗುತ್ತದೆ. ಜೊತೆಗೆ ಪುರುಷರು ಮತ್ತು ಮಹಿಳೆಯರು ನೃತ್ಯ ಪ್ರದರ್ಶನಗಳನ್ನು ಸಹ ಪ್ರದರ್ಶಿಸುತ್ತಾರೆ.
ಆದರೆ ಸ್ಥಳೀಯರು ವಲಸೆ ಹೋಗುತ್ತಿರುವುದರಿಂದಾಗಿ, "ಈ ಜಾತ್ರೆಯಲ್ಲಿ ಇನ್ನು ಮುಂದೆ ಬುಡಕಟ್ಟು ಸಂಸ್ಕೃತಿಯ ಪ್ರಾಬಲ್ಯವಿರುವುದು ಸಾಧ್ಯವಿಲ್ಲ" ಎಂದು ಮರಂಗ್ ಬುರುವಿನ ಮಾಜಿ ನಾಯಕಿ 60 ವರ್ಷದ ಸೀತಾರಾಮ್ ಸೊರೆನ್ ಹೇಳುತ್ತಾರೆ. "ನಮ್ಮ ಸಂಪ್ರದಾಯಗಳು ಪ್ರಭಾವವನ್ನು ಕಳೆದುಕೊಳ್ಳುತ್ತಿವೆ, ಮತ್ತು ಇತರ [ನಗರಗಳ] ಪ್ರಭಾವಗಳು ಈಗ ಪ್ರಾಬಲ್ಯ ಸಾಧಿಸುತ್ತಿವೆ" ಎಂದು ಅವರು ಹೇಳುತ್ತಾರೆ.
ಅನುವಾದ: ಶಂಕರ. ಎನ್. ಕೆಂಚನೂರು