“ಮೊದಲು ಕಾಗದದಲ್ಲಿ ಮತ ಹಾಕುತ್ತಿದ್ದ ಕಾಲ ಚೆನ್ನಾಗಿತ್ತು. ಈಗಿನ ಮಿಷಿನ್ ವೋಟಿಂಗಿನಲ್ಲಿ ಯಾವ ಗುಂಡಿ ಒತ್ತಲಾಗುತ್ತಿದೆ, ಮತ ಯಾರಿಗೆ ಹೋಗುತ್ತಿದೆಯೆನ್ನುವುದು ತಿಳಿಯುವುದಿಲ್ಲ!”
ಕಲ್ಮುದೀನ್ ಅನ್ಸಾರಿ ಅವರು ಖಂಡಿತವಾಗಿಯೂ ಇವಿಎಂಗಳಿಗಿಂತ (ಎಲೆಕ್ಟ್ರಾನಿಕ್ ಮತದಾನ ಯಂತ್ರಗಳು) ಕಾಗದದ ಮತಪತ್ರಗಳಿಗೆ ಆದ್ಯತೆ ನೀಡುವುದಾಗಿ ಹೇಳುತ್ತಾರೆ. ಪಲಾಮುವಿನ ಕುಮ್ನಿ ಗ್ರಾಮದ ನಿವಾಸಿಯಾದ 52 ವರ್ಷದ ಅವರು ಜಾರ್ಖಂಡ್ ರಾಜ್ಯದ ಏಪ್ರಿಲ್ ತಿಂಗಳ ಸುಡುವ ಬಿಸಿಲಿನಿಂದ ರಕ್ಷಣೆಗಾಗಿ ತಲೆಗೆ ಬಿಳಿ ಗಮ್ಚಾ ಸುತ್ತಿ ಸ್ಥಳೀಯ ಮಾವೇಶಿ (ಜಾನುವಾರು) ಜಾತ್ರೆಯಲ್ಲಿ ತಿರುಗಾಡುತ್ತಿದ್ದರು. ತೆಳುವಾದ, ಒರಟು ಹತ್ತಿ ಬಟ್ಟೆ, ಸಾಂಪ್ರದಾಯಿಕವಾಗಿ ಟವೆಲ್, ಸ್ಕಾರ್ಫ್ ಅಥವಾ ಪೇಟವಾಗಿ ಬಳಸಲಾಗುತ್ತದೆ. ಗಮ್ಚಾ ಹೊಂದಾಣಿಕೆಯ ಗುಣಗಳನ್ನು ಹೊಂದಿರುವ ಉಡುಪು ಕೂಡ ಆಗಿದೆ. ಅವರು ತಮ್ಮ ಎತ್ತುಗಳನ್ನು ಮಾರಾಟ ಮಾಡಲು ಪಥರ್ ಎನ್ನುವಲ್ಲಿ ನಡೆಯುವ ವಾರದ ಜಾನುವಾರು ಜಾತ್ರೆಗೆ 13 ಕಿಲೋಮೀಟರ್ ನಡೆದುಕೊಂಡು ಬಂದಿದ್ದಾರೆ. "ನಮಗೆ ಹಣ ಬೇಕು" ಎಂದು ಅವರು ಹೇಳುತ್ತಾರೆ.
ಕಳೆದ ವರ್ಷ (2023), ಅವರ ಭತ್ತದ ಬೆಳೆ ಇಡಿಯಾಗಿ ನಾಶವಾಯಿತು. ನಂತರ ಅವರು ರಬಿ ಹಂಗಾಮಿನಲ್ಲಿ ಸಾಸಿವೆ ಬಿತ್ತನೆ ಮಾಡಿದರು, ಆದರೆ ಅದರ ಮೂರನೇ ಒಂದು ಭಾಗ ಕೀಟಗಳ ಪಾಲಾಯಿತು. "ಸುಮಾರು 2.5 ಕ್ವಿಂಟಾಲ್ ಕೊಯ್ಲು ಮಾಡಿದ್ದೆವು. ಅದೆಲ್ಲವೂ ಸಾಲ ತೀರಿಸಲು ಖರ್ಚಾಯಿತು" ಎಂದು ಕಲ್ಮುದೀನ್ ಹೇಳುತ್ತಾರೆ.
ರೈತನಾದ ಕಲ್ಮುದಿನ್ ನಾಲ್ಕು ಬಿಘಾ (ಸುಮಾರು ಮೂರು ಎಕರೆ) ಭೂಮಿಯಲ್ಲಿ ಕೃಷಿ ಮಾಡುತ್ತಾರೆ ಮತ್ತು ಸ್ಥಳೀಯ ಲೇವಾದೇವಿಗಾರರಿಂದ ಬಹಳಷ್ಟು ಹಣವನ್ನು ಸಾಲವಾಗಿ ಪಡೆದಿದ್ದಾರೆ. "ಬಹುತ್ ಪೈಸಾ ಲೇ ಲೇವಾ ಲೇ [ಅವರು ಸಾಕಷ್ಟು ಹಣವನ್ನು ತೆಗೆದುಕೊಂಡಿದ್ದಾರೆ]" ಎಂದು ಅವರು ಹೇಳುತ್ತಾರೆ ಮತ್ತು ಸಾಲ ಪಡೆದ ಪ್ರತಿ ನೂರು ರೂಪಾಯಿಗಳಿಗೆ ಐದು ರೂಪಾಯಿಗಳ ಮಾಸಿಕ ಬಡ್ಡಿ ವಿಧಿಸಲಾಗುತ್ತಿದೆ, "ನಾನು 16,000 ರೂಪಾಯಿ ಸಾಲ ಪಡೆದಿದ್ದೆ, ಈಗ ಅದು 20,000 ಆಗಿದೆ, ಆದರೆ ನಾನು ಅದರಲ್ಲಿ ಕೇವಲ 5,000 ಮಾತ್ರ ಪಾವತಿಸಿದ್ದೇನೆ" ಎಂದು ಅವರು ಹೇಳುತ್ತಾರೆ.
ಈಗ ಅವರಿಗೆ ಉಳಿದಿರುವ ಏಕೈಕ ಆಯ್ಕೆಯೆಂದರೆ ತನ್ನ ಎತ್ತನ್ನು ಮಾರಾಟ ಮಾಡುವುದು. "ಇಸಿಲಿಯೇ ಕಿಸಾನ್ ಚುರ್ಮುರಾ ಜಾತಾ ಹೈ. ಖೇತಿ ಕಿಯೇ ಕಿ ಬೈಲ್ ಬೇಚಾ ಗಯಾ [ಇದಕ್ಕಾಗಿಯೇ ರೈತ ಕಷ್ಟಗಳನ್ನು ಎದುರಿಸುತ್ತಾನೆ. ಬೇಸಾಯ ಮಾಡುವ ನಾನು ಎತ್ತುಗಳನ್ನೇ ಮಾರುವ ಸ್ಥಿತಿಯಲ್ಲಿದ್ದೇನೆ]" ಎಂದು 2023ರಲ್ಲಿ ಮಳೆಯ ನಿರೀಕ್ಷೆಯಲ್ಲಿದ್ದ ಕಲ್ಮುದಿನ್ ಹೇಳುತ್ತಾರೆ.

ಪಲಾಮುವಿನ ಕುಮ್ನಿ ಗ್ರಾಮದ ರೈತ ಕಲ್ಮುದೀನ್ ಅನ್ಸಾರಿ ತನ್ನ ಎತ್ತುಗಳನ್ನು ಮಾರಾಟ ಮಾಡಲು ಪಥರ್ ಎನ್ನುವಲ್ಲಿ ನಡೆಯುವ ವಾರದ ದನಗಳ ಸಂತೆಗೆ 13 ಕಿಲೋಮೀಟರ್ ನಡೆದುಕೊಂಡು ಹೋಗಿದ್ದಾರೆ. ಮಳೆಯ ಕೊರತೆ ಮತ್ತು ಕೀಟಗಳ ದಾಳಿಯು ಕಳೆದ ವರ್ಷ ಅವರ ಭತ್ತದ ಬೆಳೆಯನ್ನು ನಾಶಪಡಿಸಿತು. ಪ್ರಸ್ತುತ ಅವರು ದೊಡ್ಡ ಸಾಲದಲ್ಲಿ ಮುಳುಗಿದ್ದಾರೆ
ಜಾರ್ಖಂಡ್ ರಾಜ್ಯದಲ್ಲಿ, ಶೇಕಡಾ 70ರಷ್ಟು ರೈತರು ಒಂದು ಹೆಕ್ಟೇರಿಗಿಂತಲೂ ಕಡಿಮೆ ಭೂಮಿಯನ್ನು ಹೊಂದಿದ್ದಾರೆ. ಬಹುತೇಕ ಎಲ್ಲಾ ( 92 ಪ್ರತಿಶತ ) ಕೃಷಿ ಭೂಮಿ ಮಳೆಯನ್ನು ಅವಲಂಬಿಸಿವೆ, ಬಾವಿಗಳು ನೀರಾವರಿ ಅಗತ್ಯಗಳಲ್ಲಿ ಮೂರನೇ ಒಂದು ಭಾಗವನ್ನು ( 33 ಪ್ರತಿಶತ ) ಮಾತ್ರ ಪೂರೈಸುತ್ತವೆ. ಕಲ್ಮುದೀನ್ ಅವರಂತಹ ಸಣ್ಣ ರೈತರು ಉತ್ತಮ ಫಸಲಿಗಾಗಿ ಬೀಜ ಮತ್ತು ರಸಗೊಬ್ಬರಗಳಿಗಾಗಿ ಸಾಲ ಮಾಡುತ್ತಿದ್ದಾರೆ.
ಪ್ರಸ್ತುತ ಅವರು ಮುಂಬರುವ 2024ರ ಸಾರ್ವತ್ರಿಕ ಚುನಾವಣೆಯಲ್ಲಿ, ತಮ್ಮ ಹಳ್ಳಿಯಲ್ಲಿ ನೀರಾವರಿ ವ್ಯವಸ್ಥೆ ಮಾಡುವವರಿಗೆ ತಮ್ಮ ಮತ ಎಂದು ನಿರ್ಧರಿಸಿದ್ದಾರೆ. ಹೊಸದೆಹಲಿಯಿಂದ 1,000 ಕಿಲೋಮೀಟರ್ ದೂರದಲ್ಲಿ ಟಿವಿ ಮತ್ತು ಮೊಬೈಲ್ ಫೋನುಗಳಿಲ್ಲದೆ ಬದುಕುವ ಅವರು ತಮಗೆ ಚುನಾವಣಾ ಬಾಂಡ್ ಕುರಿತು ತಿಳಿದಿಲ್ಲ ಎನ್ನುತ್ತಾರೆ.
ಸಂತೆಯಲ್ಲಿ ವಿವಿಧ ಗ್ರಾಹಕರೊಂದಿಗೆ ಸುಮಾರು ಮೂರು ಗಂಟೆಗಳ ಮಾತುಕತೆಯ ನಂತರ, ಕಲ್ಮುದೀನ್ ಅಂತಿಮವಾಗಿ ತನ್ನ ಎತ್ತನ್ನು 5,000 ರೂ.ಗಳಿಗೆ ಮಾರಾಟ ಮಾಡಿದರು; ಅವರು 7,000 ರೂ.ಗಳನ್ನು ಗಳಿಸುವ ನಿರೀಕ್ಷೆಯಲ್ಲಿದ್ದರು.
ಎತ್ತನ್ನು ಮಾರಿದ ನಂತರ, ಕಲ್ಮುದೀನ್ ಎರಡು ಹಸುಗಳು ಮತ್ತು ಒಂದು ಕರುವನ್ನು ಹೊಂದಿದ್ದಾರೆ, ಮತ್ತು ಅವರು ತಮ್ಮ ಏಳು ಸದಸ್ಯರ ಕುಟುಂಬವನ್ನು ನೋಡಿಕೊಳ್ಳುವುದರ ಜೊತೆಗೆ, ಅವುಗಳನ್ನು ಸಹ ಉಳಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ. "ರೈತರಿಗಾಗಿ ಏನಾದರೂ ಮಾಡುವವರಿಗೆ ನಾವು ಮತ ಹಾಕುತ್ತೇವೆ" ಎಂದು ಅವರು ದೃಢವಾಗಿ ಹೇಳುತ್ತಾರೆ.
ರಾಜ್ಯವು ಸತತವಾಗಿ ತೀವ್ರ ಬರಗಾಲದಿಂದ ಬಾಧಿತವಾಗಿದೆ: 2022ರಲ್ಲಿ, ಬಹುತೇಕ ಇಡೀ ರಾಜ್ಯವನ್ನು - 226 ಬ್ಲಾಕ್‌ಗಳನ್ನು - ಬರ ಪೀಡಿತ ಎಂದು ಘೋಷಿಸಲಾಯಿತು. ಮುಂದಿನ ವರ್ಷ (2023) 158 ಬ್ಲಾಕ್‌ಗಳು ಬರವನ್ನು ಎದುರಿಸಿದವು.

ಬಹುತೇಕ ಎಲ್ಲಾ ಕೃಷಿಯೋಗ್ಯ ಭೂಮಿಗೂ ಮಳೆಯನ್ನೇ ಅವಲಂಬಿಸಿರುವ ಜಾರ್ಖಂಡ್, 2022 ಮತ್ತು 2023ರಲ್ಲಿ ಸತತ ಬರಗಾಲಕ್ಕೆ ತುತ್ತಾಗಿದೆ. ಬಾವಿಗಳು ನೀರಾವರಿ ಅಗತ್ಯಗಳಲ್ಲಿ ಮೂರನೇ ಒಂದು ಭಾಗವನ್ನು ಮಾತ್ರ ಪೂರೈಸುತ್ತವೆ. ಆದ್ದರಿಂದ, ತಮ್ಮ ಹಳ್ಳಿಯಲ್ಲಿ ನೀರಾವರಿ ವ್ಯವಸ್ಥೆ ಮಾಡುವವರು ತಮ್ಮ ಮತವನ್ನು ಪಡೆಯುತ್ತಾರೆ ಎಂದು ಕಲ್ಮುದೀನ್ ಹೇಳುತ್ತಾರೆ
ಪಲಾಮು ಜಿಲ್ಲೆಯ ಎಲ್ಲಾ 20 ಬ್ಲಾಕ್‌ಗಳಲ್ಲೂ ಕಳೆದ ವರ್ಷ ಮಳೆಯ ಕೊರತೆ ಕಾಡಿತ್ತು. ಹೀಗಾಗಿ ಈ ವರ್ಷ ಸರ್ಕಾರವು ಬರ ಪರಿಹಾರವಾಗಿ ಒಂದು ರೈತ ಕುಟುಂಬಕ್ಕೆ 3,500 ರೂಪಾಯಿಗಳನ್ನು ಘೋಷಿಸಿತ್ತು. ಆದರೆ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ ಇನ್ನೂ ಅನೇಕರಿಗೆ ಈ ಪರಿಹಾರ ಮೊತ್ತ ಸಿಕ್ಕಿಲ್ಲ. “ನಾನು ಬರ ಪರಿಹಾರ ಅರ್ಜಿ ತುಂಬಿಸಲು ಹಣ ನೀಡಿದ್ದೆ. ಮೊದಲ ಸಲ [2022ರಲ್ಲಿ] 200 ರೂಪಾಯಿ ಕೊಟ್ಟಿದ್ದೆ, ಅದರ ನಂತರ [2023ರಲ್ಲಿ] 500 ರೂಪಾಯಿ ಕೊಟ್ಟಿದ್ದೆ. ಆದರೆ ಇದುವರೆಗೂ ಪರಿಹಾರವಾಗಿ ಒಂದು ರೂಪಾಯಿ ಕೂಡಾ ಸಿಕ್ಕಿಲ್ಲ” ಎನ್ನುತ್ತಾರೆ ಸೋನಾ ದೇವಿ.
ಜಾರ್ಖಂಡ್ ಬಾರಾಂವ್ ಗ್ರಾಮದಲ್ಲಿ ತಾಪಮಾನ 37 ಡಿಗ್ರಿ ಸೆಲ್ಸಿಯಸ್ ಇತ್ತು. 50 ವರ್ಷದ ಸೋನಾ ದೇವಿ ಅಡುಗೆಗೆ ಬೇಕಾಗುವ ಉರುವಲಿಗಾಗಿ ಉಳಿ ಮತ್ತು ಸುತ್ತಿಗೆಯಿಂದ ಸೌದೆ ಒಡೆಯುತ್ತಿದ್ದರು. ಕಳೆದ ವರ್ಷ ಪತಿ ಕಾಮೇಶ್ ಭುಯಿಯಾ ಪಾರ್ಶ್ವವಾಯುವಿಗೆ ಒಳಗಾದ ನಂತರ, ಸೋನಾ ದೇವಿ ಈ ಕೆಲಸವನ್ನು ಕೈಗೆತ್ತಿಕೊಂಡಿದ್ದಾರೆ. ದಂಪತಿ ಭುಯಿಯಾ ದಲಿತ ಸಮುದಾಯಕ್ಕೆ ಸೇರಿದವರಾಗಿದ್ದು ತಮ್ಮ ಜೀವನೋಪಾಯಕ್ಕಾಗಿ ಕೃಷಿಯನ್ನು ಅವಲಂಬಿಸಿದ್ದಾರೆ.
2014ರಲ್ಲಿ ಹಾಲಿ ಶಾಸಕ ಅಲೋಕ್ ಚೌರಾಸಿಯಾ ಅವರ ಪರವಾಗಿ ಪ್ರಚಾರ ನಡೆಸಿದ್ದೆ, ಚುನಾವಣಾ ಪ್ರಚಾರಕ್ಕಾಗಿ 6,000 ರೂ.ಗಳನ್ನು ಸಂಗ್ರಹಿಸಿದ್ದೆ, ಆದರೆ ಅವರು ಕಳೆದ 10 ವರ್ಷಗಳಲ್ಲಿ ಒಮ್ಮೆಯೂ ನಮ್ಮ ಪ್ರದೇಶಕ್ಕೆ ಭೇಟಿ ನೀಡಿಲ್ಲ ಎಂದು ಕಾಮೇಶ್ ಹೇಳುತ್ತಾರೆ.
ಅವರ ಎರಡು ಕೋಣೆಗಳ ಮಣ್ಣಿನ ಮನೆ ಅವರು ಹೊಂದಿರುವ 15 ಕಥಾ (ಸರಿಸುಮಾರು ಅರ್ಧ ಎಕರೆ) ಭೂಮಿಯಲ್ಲಿದೆ. "ಎರಡು ವರ್ಷಗಳಿಂದ ಬೇಸಾಯ ಮಾಡಿಲ್ಲ. ಕಳೆದ ವರ್ಷ [2022] ನೀರೇ ಇರಲಿಲ್ಲ. ಈ ವರ್ಷ [2023] ಸ್ವಲ್ಪ ಮಳೆಯಾಯಿತು, ಆದರೆ ಭತ್ತದ ಸಸಿ ಸರಿಯಾಗಿ ಬೆಳೆಯಲಿಲ್ಲ" ಎಂದು ಸೋನಾ ದೇವಿ ಹೇಳುತ್ತಾರೆ.
ಈ ವರದಿಗಾರ ಸಾರ್ವತ್ರಿಕ ಚುನಾವಣೆಯ ಬಗ್ಗೆ ಪ್ರಶ್ನೆ ಕೇಳಿದಾಗ, ಅವಳು ಅವರನ್ನು ತರಾಟೆಗೆ ತೆಗೆದುಕೊಂಡರು: "ನಮ್ಮನ್ನು ಯಾರು ಕೇಳುತ್ತಾರೆ? ಮತದಾನದ ಸಮಯದಲ್ಲಿ ಮಾತ್ರ, ಅವರು [ರಾಜಕಾರಣಿಗಳು] ನಮ್ಮನ್ನು 'ದೀದಿ [ಸಹೋದರಿ], ಭೈಯಾ [ಸಹೋದರ] ಮತ್ತು ಚಾಚಾ [ಚಿಕ್ಕಪ್ಪ] ಎಂದು ಕರೆಯುತ್ತಾರೆ. ಗೆದ್ದ ನಂತರ, ಅವರು ನಮ್ಮನ್ನು ಗುರುತಿಸುವುದಿಲ್ಲ. ಸತತ ಎರಡು ಬರಗಾಲಗಳು ಮತ್ತು ಪತಿಯ ಪಾರ್ಶ್ವವಾಯುವಿನ ಚಿಕಿತ್ಸೆಯ ಖರ್ಚುಗಳ ನಂತರ ಸೋನಾ ದೇವಿ ಈಗ 30,000 ರೂ.ಗಳ ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ. “ನಮಗೆ ಸಹಾಯ ಮಾಡುವ ಪಕ್ಷಕ್ಕೆ ನಾವು ಮತ ಹಾಕುತ್ತೇವೆ.”
ಈ ವರದಿಗಾರನನ್ನು ನೋಡುತ್ತಾ ಅವರು ಹೇಳುತ್ತಾರೆ, "ನೀವು [ರಾಜಕಾರಣಿಗಳನ್ನು ಭೇಟಿಯಾಗಲು] ಹೋದರೆ, ಅವರು ನಿಮ್ಮನ್ನು ಕುರ್ಚಿಯ ಮೇಲೆ ಕೂರಿಸುತ್ತಾರೆ. ಆದರೆ ನಮಗೆ ಹೊರಗೆ ಕಾಯಲು ಹೇಳುತ್ತಾರೆ."


ಪಲಾಮುವಿನ ಚಿಯಾಂಕಿ ಗ್ರಾಮದ (ಎಡ) ಹೊಲಗಳು ನೀರಿನ ಕೊರತೆಯಿಂದಾಗಿ ಬೆಳೆಯಿಲ್ಲದೆ ಖಾಲಿ ಉಳಿದಿವೆ. ರೈತರು ಹಿಂಗಾರು ಋತುವಿನಲ್ಲಿ ಗೋಧಿಯನ್ನು ಬೆಳೆಯುತ್ತಿದ್ದರು, ಆದರೆ ಈಗ, ಬಾವಿಗಳು ಒಣಗುತ್ತಿರುವುದರಿಂದ, ಅವರಿಗೆ ಕುಡಿಯುವ ನೀರಿನ ಕೊರತೆಯೂ ಎದುರಾಗಿದೆ. ಸುಮಾರು ಮೂರು ವರ್ಷಗಳ ಹಿಂದೆ ನಿರ್ಮಿಸಲಾದ ಕಾಲುವೆ (ಬಲ) ಅಂದಿನಿಂದಲೂ ಒಣಗಿದೆ


ಎಡ: ಪಲಾಮುವಿನ ಬಾರಾಂವ್ ಗ್ರಾಮ, ಸೋನಾ ದೇವಿ 2023ರಲ್ಲಿ ಬರ ಪರಿಹಾರ ಅರ್ಜಿಯನ್ನು ಭರ್ತಿ ಮಾಡಿದ್ದರು, ಅದಕ್ಕಾಗಿ ಅವರು ಹಣವನ್ನೂ ನಿಡಿದ್ದರು. ಆದರೆ ಅವರಿಗೆ ಇದುವರೆಗೂ ಒಂದು ರೂಪಾಯಿಯೂ ಪರಿಹಾರವಾಗಿ ದೊರಕಿಲ್ಲ. "ಕಳೆದ ವರ್ಷ (2022) ನೀರೇ ಇರಲಿಲ್ಲ" ಎಂದು ಅವರು ಹೇಳುತ್ತಾರೆ. ಬಲ: ಅವರ ಮನೆಯ ಹತ್ತಿರದವರಾದ ಮಾಲತಿ ದೇವಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮನೆ ಪಡೆದರು. "ನಾವು ಹಳ್ಳಿಯ ಇತರ ಮಹಿಳೆಯರೊಂದಿಗೆ ಸಮಸ್ಯೆಗಳನ್ನು ಚರ್ಚಿಸುತ್ತೇವೆ ಮತ್ತು ನಂತರ ಯಾರಿಗೆ ಮತ ಚಲಾಯಿಸಬೇಕೆಂದು [ಸಾಮೂಹಿಕವಾಗಿ] ನಿರ್ಧರಿಸುತ್ತೇವೆ" ಎಂದು ಅವರು ಹೇಳುತ್ತಾರೆ
ಸೋನಾ ದೇವಿಯವರ ಪಕ್ಕದ ಮನೆಯವರಾದ 45 ವರ್ಷದ ಮಾಲತಿ ದೇವಿ ವೃತ್ತಿಯಿಂದ ಕೃಷಿಕರು. ಅವರು ಒಂದು ಬಿಘಾ (ಒಂದು ಎಕರೆಗಿಂತ ಕಡಿಮೆ ಭೂಮಿ) ಭೂಮಿಯಲ್ಲಿ ಬೇಸಾಯ ಮಾಡುತ್ತಾರೆ. ಜೊತೆಗೆ ಕೃಷಿ ಕೂಲಿ ಕಾರ್ಮಿಕರಾಗಿಯೂ ದುಡಿಯುತ್ತಾರೆ. “ನಮಗೆ ಬಟಾಯಿಯ (ಗೇಣಿ ಬೇಸಾಯ) ವಿಧಾನದಲ್ಲಿ ಮಾಡುವ ಕೃಷಿಯಿಂದಲೇ ಕನಿಷ್ಠ 15 ಕ್ವಿಂಟಾಲ್ ಅಕ್ಕಿ ಸಿಗುತ್ತಿತ್ತು. ಈ ವರ್ಷ ನಾವು ಅಲೂಗಡ್ಡೆ ಬೆಳೆದಿದ್ದೇವಾದರೂ ಮಾರುಕಟ್ಟೆಯಲ್ಲಿ ಮಾರಬಹುದಾದಷ್ಟು ಇಳುವರಿ ಸಿಗಲಿಲ್ಲ” ಎಂದು ಅವರು ಹೇಳುತ್ತಾರೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಮನೆ ಪಡೆದ ಸಂತೋಷದಿಂದ, ಈ ಹಂಚಿಕೆಯು ಕಾಂಗ್ರೆಸ್ ಪಕ್ಷದ ಚುನಾವಣಾ ಚಿಹ್ನೆಯಾದ ಪಂಜಾ ಚಾಪ್ ಬದಲು ಮೋದಿಗೆ ಮತ ಚಲಾಯಿಸಲು ಕಾರಣವಾಗಿದೆ ಎಂದು ಅವರು ಹೇಳುತ್ತಾರೆ. "ನಾವು ಹಳ್ಳಿಯ ಇತರ ಮಹಿಳೆಯರೊಂದಿಗೆ ಸಮಸ್ಯೆಗಳನ್ನು ಚರ್ಚಿಸುತ್ತೇವೆ ಮತ್ತು ನಂತರ ಯಾರಿಗೆ ಮತ ಚಲಾಯಿಸಬೇಕೆಂದು [ಸಾಮೂಹಿಕವಾಗಿ] ನಿರ್ಧರಿಸುತ್ತೇವೆ. ನಮ್ಮಲ್ಲಿ ಕೆಲವರಿಗೆ ಹ್ಯಾಂಡ್ ಪಂಪ್ ಬೇಕು, ಕೆಲವರಿಗೆ ಬಾವಿ ಬೇಕು, ಕೆಲವರಿಗೆ ಕಾಲೋನಿ ಬೇಕು. ಇವುಗಳನ್ನು ಯಾರು ಪೂರೈಸುತ್ತಾರೋ, ನಾವು ಅವರಿಗೆ ಮತ ಹಾಕುತ್ತೇವೆ" ಎಂದು ಅವರು ಹೇಳುತ್ತಾರೆ.
*****
"ಬೇಳೆಕಾಳುಗಳು, ಗೋಧಿ, ಅಕ್ಕಿ, ಎಲ್ಲವೂ ದುಬಾರಿಯಾಗಿದೆ" ಎಂದು ಪಲಾಮುವಿನ ಚಿಯಾಂಕಿ ಗ್ರಾಮದ ನಿವಾಸಿ ಆಶಾ ದೇವಿ ಹೇಳುತ್ತಾರೆ. ಮೂವತ್ತರ ಹರೆಯದ ಈ ದಂಪತಿ ಆರು ಮಕ್ಕಳನ್ನು ಹೊಂದಿದ್ದಾರೆ; 35 ವರ್ಷದ ಪತಿ ಸಂಜಯ್ ಸಿಂಗ್ ಕೂಲಿ ಕೆಲಸ ಮಾಡುತ್ತಿದ್ದಾರೆ. ಈ ಕುಟುಂಬವು ಜಾರ್ಖಂಡ್ ರಾಜ್ಯದ 32 ಪರಿಶಿಷ್ಟ ಪಂಗಡಗಳಲ್ಲಿ ಒಂದಾದ ಚೆರೊ ಬುಡಕಟ್ಟು ಜನಾಂಗಕ್ಕೆ ಸೇರಿದೆ. "ಉತ್ತಮ ಕೃಷಿ ಹಂಗಾಮಿನಲ್ಲಿ, ನಮಗೆ ಎರಡು ವರ್ಷಗಳವರೆಗೆ ಸಾಕಾಗುವಷ್ಟು ಆಹಾರವಿರುತ್ತದೆ. ಈಗ, ನಾವು ಅದೇ ವಸ್ತುವನ್ನು ಖರೀದಿಸಿ ತರುತ್ತಿದ್ದೇವೆ" ಎಂದು ಅವರು ಹೇಳುತ್ತಾರೆ.
ಅದೇನೇ ಇದ್ದರೂ ಹಣದುಬ್ಬರ ಮತ್ತು ಬರದಂತಹ ವಿಷಯಗಳ ಮೇಲೆ ಮತ ಚಲಾಯಿಸುತ್ತೀರಾ ಎಂದು ಕೇಳಿದಾಗ, ಆಶಾ ದೇವಿ ಪ್ರತಿಕ್ರಿಯಿಸುತ್ತಾರೆ, "ಲೋಗ್ ಕಹಾತಾ ಹೈ ಕಿ ಬಡಿ ಮಹಾಂಗಯಿ ಹೈ ಕುಚ್ ನಹೀ ಕರ್ ರಹೇ ಹೈ ಮೋದಿ ಜೀ. ಜೆನರಲ್ ಹಮ್ ಲೋಗ್ ತೋ ಉಸೀ ಕೋ ಅಭಿ ಭಿ ಚುನ್ ರಹೇ ಹೈ. [ಹಣದುಬ್ಬರ ಹೆಚ್ಚಾಗಿದೆ ಮೋದಿ ಏನೂ ಮಾಡುತ್ತಿಲ್ಲ ಎಂದು ಜನರು ಹೇಳುತ್ತಾರೆ. ಆದರೂ ನಾವು ಅವರನ್ನೇ ಆಯ್ಕೆ ಮಾಡಲಿದ್ದೇವೆ" ಎಂದು ಅವರು ಈ ವರದಿಗಾರರಿಗೆ ದೃಢವಾಗಿ ಹೇಳಿದರು. 1,600 ರೂ.ಗಳ ಶುಲ್ಕವನ್ನು ಪಾವತಿಸಿ ಒಂದು ಮಗುವನ್ನಷ್ಟೇ ಖಾಸಗಿ ಶಾಲೆಗೆ ಕಳುಹಿಸಲು ಸಾಧ್ಯವಾಗುತ್ತಿದೆ ಎಂದೂ ಅವರು ಹೇಳಿದರು.
2019ರ ಸಾರ್ವತ್ರಿಕ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ವಿಷ್ಣು ದಯಾಳ್ ರಾಮ್ ಅವರು ಶೇ.62ರಷ್ಟು ಮತಗಳ ಭಾರೀ ಅಂತರದಿಂದ ಗೆದ್ದಿದ್ದರು. ಅವರು ರಾಷ್ಟ್ರೀಯ ಜನತಾ ದಳದ ಘುರಾನ್ ರಾಮ್ ವಿರುದ್ಧ ಆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಈ ಬಾರಿ ವಿಷ್ಣು ದಯಾಳ್ ರಾಮ್ ಮತ್ತೊಮ್ಮೆ ಬಿಜೆಪಿ ಅಭ್ಯರ್ಥಿಯಾಗಿದ್ದು, ರಾಷ್ಟ್ರೀಯ ಜನತಾ ದಳ ಇನ್ನೂ ತಮ್ಮ ಅಭ್ಯರ್ಥಿಯನ್ನು ಘೋಷಿಸಿಲ್ಲ. ಈ ಕ್ಷೇತ್ರದಲ್ಲಿ 18 ಲಕ್ಷಕ್ಕೂ ಹೆಚ್ಚು ಮತದಾರರಿದ್ದಾರೆ.
ಹಣದುಬ್ಬರದ ಜೊತೆಗೆ, ಬರ ಇಲ್ಲಿನ ನಿಜವಾದ ಸಮಸ್ಯೆ. "ಇಲ್ಲಿನ ಜನರು ನೀರು ಕುಡಿಯಲು ಸಹ ಯೋಚಿಸಬೇಕಾಗಿದೆ. ಹಳ್ಳಿಗಳಲ್ಲಿನ ಅನೇಕ ಬಾವಿಗಳು ಒಣಗಿವೆ. ಹ್ಯಾಂಡ್ ಪಂಪ್ ಬಹಳ ತಡವಾಗಿ ನೀರನ್ನು ಬಿಡುಗಡೆ ಮಾಡುತ್ತದೆ" ಎಂದು ಆಶಾ ದೇವಿ ಹೇಳುತ್ತಾರೆ ಮತ್ತು "ಕಾಲುವೆಯನ್ನು ನಿರ್ಮಿಸಿದಾಗಿನಿಂದ, ಅದರಲ್ಲಿ ಒಂದು ದಿನವೂ ನೀರು ಹರಿದಿಲ್ಲ"


ಎಡ: ಚಿಯಾಂಕಿ ನಿವಾಸಿ ಆಶಾ ದೇವಿ ಗ್ರಾಮದಲ್ಲಿ ಜನರಲ್ ಸ್ಟೋರ್ ನಡೆಸುತ್ತಿದ್ದರೆ, ಅವರ ಪತಿ ದಿನಗೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದಾರೆ. 'ಬೇಳೆಕಾಳುಗಳು, ಗೋಧಿ, ಅಕ್ಕಿ, ಎಲ್ಲವೂ ದುಬಾರಿಯಾಗಿದೆ' ಎಂದು ಅವರು ಹೇಳುತ್ತಾರೆ. ಬಲ: ಬಾರಾಂವ್ ಗ್ರಾಮದ ರೈತ ಸುರೇಂದ್ರ ಚೌಧರಿ ತನ್ನ ಹಸುವನ್ನು ಮಾರಾಲು ಜಾನುವಾರು ಮಾರುಕಟ್ಟೆಗೆ ಬಂದಿದ್ದಾರೆ


ಚಿಯಾಂಕಿ ಗ್ರಾಮದ ನಿವಾಸಿ ಅಮ್ರಿಕಾ ಸಿಂಗ್ ಕಳೆದ ಎರಡು ವರ್ಷಗಳಲ್ಲಿ ಮೂರು ಲಕ್ಷ ರೂಪಾಯಿಗಳ ನಷ್ಟವನ್ನು ಅನುಭವಿಸಿದ್ದಾರೆ. ಅವರ ಬಾವಿ (ಬಲ) ಈ ವರ್ಷ ಒಣಗಿಹೋಯಿತು. 'ರೈತನ ಬಗ್ಗೆ ಯಾರಿಗೆ ಕಾಳಜಿ ಇದೆ? ನ್ಯಾಯಯುತ ಬೆಲೆಗೆ ಒತ್ತಾಯಿಸಿ ರೈತರು ಎಷ್ಟು ಪ್ರತಿಭಟನೆ ಮಾಡಿದ್ದಾರೆಂದು ನೋಡಿ, ಆದರೂ ಏನೂ ಬದಲಾಗಿಲ್ಲ' ಎಂದು ಅವರು ಹೇಳುತ್ತಾರೆ
ಆಶಾ ದೇವಿಯವರ ನೆರೆಮನೆಯವರಾದ ಮತ್ತು ಅವರದೇ ಸಮುದಾಯದವರಾದ ಅಮ್ರಿಕಾ ಸಿಂಗ್ ಕಳೆದ ಎರಡು ವರ್ಷಗಳಲ್ಲಿ ಮೂರು ಲಕ್ಷ ರೂಪಾಯಿಗಳ ನಷ್ಟವನ್ನು ಅನುಭವಿಸಿದ್ದಾರೆ. ಅವರು ಹೇಳುತ್ತಾರೆ, "ಮೊದಲು, ಬೇರೆ ಏನೂ ಇಲ್ಲದಿದ್ದರೂ, ಒಂದಷ್ಟು ತರಕಾರಿಗಳನ್ನಾದರೂ ಬೆಳೆಯಬಹುದಿತ್ತು. ಆದರೆ ಈ ವರ್ಷ ನನ್ನ ಬಾವಿ ಬತ್ತಿಹೋಗಿದೆ."
ಪಲಾಮು ಜಿಲ್ಲೆಯ ಇತರ ರೈತರಂತೆ ಅಮ್ರಿಕಾ ಅವರನ್ನು ಸಹ ಮುಖ್ಯವಾಗಿ ಕಾಡುತ್ತಿರುವುದು ನೀರಿನ ಸಮಸ್ಯೆ. "ನೀರಿಲ್ಲದೆ ಕೃಷಿಗೆ ಅರ್ಥವಿಲ್ಲ. ಬಾವಿಯ ನೀರು ಬಳಸಿ ನಾವು ಎಷ್ಟು ಕೃಷಿ ಮಾಡಲು ಸಾಧ್ಯ?”
ಉತ್ತರ ಕೊಯೆಲ್ ನದಿಯಲ್ಲಿರುವ ಮಂಡಲ್ ಅಣೆಕಟ್ಟು ಇವರಿಗೆ ಅನುಕೂಲ ನೀಡಬೇಕಾಗಿತ್ತು. "ನಾಯಕರು ಕೇವಲ ಪೊಳ್ಳು ಭರವಸೆಗಳನ್ನು ನೀಡುತ್ತಾರೆ. ಮಂಡಲ್ ಅಣೆಕಟ್ಟಿನಲ್ಲಿ ಗೇಟ್ ಸ್ಥಾಪಿಸಲಾಗುವುದು ಎಂದು ಮೋದಿ 2019ರಲ್ಲಿ ಹೇಳಿದ್ದರು. ಅದನ್ನು ಸ್ಥಾಪಿಸಿದ್ದರೆ, ನೀರು ಸರಬರಾಜು ಇರುತ್ತಿತ್ತು" ಎಂದು ಅಮ್ರಿಕಾ ಸಿಂಗ್ ಹೇಳುತ್ತಾರೆ. "ರೈತನ ಬಗ್ಗೆ ಯಾರು ಕಾಳಜಿ ವಹಿಸುತ್ತಾರೆ? ನ್ಯಾಯಯುತ ಬೆಲೆಗೆ ಒತ್ತಾಯಿಸಿ ರೈತರು ಎಷ್ಟು ಪ್ರತಿಭಟಿಸಿದ್ದಾರೆಂದು ನೋಡಿ, ಆದರೂ ಪರಿಸ್ಥಿತಿ ಏನೂ ಬದಲಾಗಿಲ್ಲ. ಸರ್ಕಾರವು ಅದಾನಿ ಮತ್ತು ಅಂಬಾನಿಗೆ ಅನುಕೂಲಕರವಾಗಿ ಕೆಲಸ ಮಾಡುತ್ತಿದೆ, ಅವರ ಸಾಲಗಳನ್ನು ಮನ್ನಾ ಮಾಡಿದೆ. ಆದರೆ ರೈತನ ಪಾಡೇನು?"
“ಈಗಿರುವುದು ಬಿಜೆಪಿ ಸರ್ಕಾರ. ಇವತ್ತು ನಾವು ಸಣ್ಣ ಮಟ್ಟದಲ್ಲಿ ಏನಾದರೂ ಪಡೆಯುತ್ತಿದ್ದರೆ ಅದಕ್ಕೆ ಅವರೇ ಕಾರಣ. ಈ ಪಕ್ಷ ಏನೂ ಮಾಡಿಲ್ಲವಾದರೆ ಇನ್ನೊಂದು ಪಕ್ಷ ಕೂಡಾ ಏನೂ ಮಾಡಿಲ್ಲ” ಎನ್ನುತ್ತಾರೆ ರೈತರಾದ ಸುರೇಂದರ್. ಚುನಾವಣಾ ಬಾಂಡ್ ಮತ್ತು ನಿರುದ್ಯೋಗದ ಸಮಸ್ಯೆಗಳನ್ನು ತಳ್ಳಿಹಾಕಿದ ಅವರು “ಅವು ದೊಡ್ಡ ಜನರ ಸಮಸ್ಯೆಗಳು. ನಾವು ಅಷ್ಟು ವಿದ್ಯಾವಂತರಲ್ಲ... ಪಲಾಮು ಜಿಲ್ಲೆಯ ಅತಿದೊಡ್ಡ ಸಮಸ್ಯೆಯೆಂದರೆ ನೀರಾವರಿ. ಇಲ್ಲಿನ ರೈತರು ನೀರಿಗಾಗಿ ಹಾತೊರೆಯುತ್ತಿದ್ದಾರೆ.”
ಸುರೇಂದರ್ ಪಲಾಮುವಿನ ಬಾರಾಂವ್ ಗ್ರಾಮದಲ್ಲಿ ಐದು ಬಿಘಾ (3.5 ಎಕರೆ) ಭೂಮಿಯನ್ನು ಹೊಂದಿದ್ದಾರೆ. ಮತ್ತು ಕೃಷಿಗಾಗಿ ಮಳೆಯ ಮೇಲೆ ಅವಲಂಬಿತರಾಗಿದ್ದಾರೆ. "ಜನರು ಕುಳಿತು ಜೂಜಾಡುತ್ತಾರೆ. ನಾವು ಕೃಷಿಯಲ್ಲಿ ಜೂಜಾಡುತ್ತೇವೆ."
ಅನುವಾದ: ಶಂಕರ. ಎನ್. ಕೆಂಚನೂರು