“ಮುಂದೆ ಎಡಕ್ಕೆ ತಿರುಗಿ. ಅಲ್ಲಿಂದ ಸ್ವಲ್ಪ ಕೆಳಗೆ ಹೋದರೆ, ಕಪ್ಪು ಕಂಬವೊಂದರ ಮೇಲೆ ಫೌಜಿಯೊಬ್ಬರ ಚಿತ್ರ ಕಾಣುತ್ತೀರಿ. ಅದೇ ಅವರ ಮನೆ.” ರಾಮಗಢ ಸರ್ದಾರಾ ಪ್ರದೇಶದ ವೃದ್ಧ ಸೈಕಲ್‌ ಮೆಕಾನಿಕ್‌ ಒಬ್ಬರು ಹೀಗೆ ದಾರಿ ತೋರಿಸಿದರು. ಹಳ್ಳಿಯ ಜನರು ಅಜಯ್‌ ಕುಮಾರ್‌ ಅವರನ್ನು ಸೈನಿಕ ಅಥವಾ ಹುತಾತ್ಮ ಎಂದು ಕರೆಯುತ್ತಾರೆ.

ಆದರೆ ಸರ್ಕಾರದ ದೃಷ್ಟಿಯಲ್ಲಿ ಅವರು ಎರಡೂ ಅಲ್ಲ.

ಈ 23 ವರ್ಷದ ಯುವಕ ನುಸುಳುಕೋರರ ವಿರುದ್ಧದ ಹೋರಾಟದಲ್ಲಿ ಜಮ್ಮು-ಕಾಶ್ಮೀರದ ಗಡಿಯಲ್ಲಿ ಬಡಿದಾಡಿ ತನ್ನ ನೆತ್ತರಿನ ಕೊನೆ ಹನಿ ಬಸಿಯುವ ತನಕವೂ ಬಡಿದಾಡಿದ್ದರು. ಆದರೆ ಈಗ ಅದ್ಯಾವುದೂ ಲೆಕ್ಕಕ್ಕಿಲ್ಲ. ಈಗ ಅವರ ವಯಸ್ಸಾದ ದಲಿತ, ಭೂರಹಿತ ತಂದೆ-ತಾಯಿ ಕನಿಷ್ಟ ಪಿಂಚಣಿಯ ಕನಸನ್ನೂ ಕಾಣುವಂತಿಲ್ಲ. ಇನ್ನು ಹುತಾತ್ಮ ಪದವಿ ದೂರದ ಮಾತು. ಅವರಿಗೆ ಮಾಜಿ ಸೈನಿಕರಿಗೆ ಸಿಗುವ ಸೌಲಭ್ಯಗಳಾದ ಆರೋಗ್ಯ ಸೌಲಭ್ಯ, ಪಡಿತರ ರಿಯಾಯಿತಿ ಮೊದಲಾದ ಸೌಲಭ್ಯಗಳು ಸಿಗುವುದಿಲ್ಲ. ಏಕೆಂದರೆ ಅಧಿಕೃತ ದಾಖಲೆಗಳಲ್ಲಿ ಅಜಯ್‌ ಕುಮಾರ್‌ ಅವರು ಸೈನಿಕನೂ ಅಲ್ಲ, ಹುತಾತ್ಮನೂ ಅಲ್ಲ.

ಅವರು ಕೇವಲ ಒಬ್ಬ ಅಗ್ನಿವೀರನಾಗಿದ್ದರು

ಲುಧಿಯಾಣಾ ಜಿಲ್ಲೆಯೊಳಗೆ ನೆಲೆಗೊಂಡಿರುವ ಈ ಹಳ್ಳಿಯಲ್ಲಿ, ಸರ್ಕಾರಿ ದಾಖಲೆಗಳು ಕನಿಷ್ಠ ಪ್ರಾಮುಖ್ಯತೆಯನ್ನು ಹೊಂದಿವೆ. ಗ್ರ್ಯಾಂಡ್ ಟ್ರಂಕ್ ರಸ್ತೆಯ ಮೂಲಕ 45 ನಿಮಿಷಗಳ ಕಾಲ ಪ್ರಯಾಣಿಸಿದರೆ ರಾಮಗಢ ಸರ್ದಾರಾ ಸಿಗುತ್ತದೆ, ಈ ಊರಿನ ದಾರಿಯಲ್ಲಿ ಅರಳುತ್ತಿರುವ ಸಾಸಿವೆ ಹೂವುಗಳಿಂದ ಅಲಂಕರಿಸಲ್ಪಟ್ಟ ಸುಂದರ ಹೊಲಗಳು ಕಣ್ಮನಗಳನ್ನು ತಣಿಸುತ್ತವೆ. ಈ ಗ್ರಾಮದ ಗೋಡೆಗಳು ತಮ್ಮದೇ ಆದ ಇತಿಹಾಸವನ್ನು ವಿವರಿಸುವಂತೆ ತೋರುತ್ತವೆ, ಆಲಿವ್ ಹಸಿರು ಬಣ್ಣದಲ್ಲಿ ಅಜಯ್‌ ಅವರ ಚಿತ್ರವನ್ನು ಒಳಗೊಂಡ ಹೋರ್ಡಿಂಗ್‌ಗಳು ಎಲ್ಲೆಡೆ ಕಾಣುತ್ತವೆ. ಈ ಚಿತ್ರಗಳು ಒಂದಲ್ಲ ಒಂದು ಬಗೆಯಲ್ಲಿ ಹುತಾತ್ಮ ಭಗತ್ ಸಿಂಗ್‌ ಅವರನ್ನು ನೆನಪಿಗೆ ತರುತ್ತವೆ. ಭಗತ್‌ ಸಿಂಗ್‌ ಸಹ  ತೊಂಬತ್ತು ವರ್ಷಗಳ ಹಿಂದೆ ತಮ್ಮ ಕ್ರಾಂತಿಕಾರಿ ಸಂಗಾತಿಗಳೊಂದಿಗೆ ಗಲ್ಲಗಂಬಕ್ಕೆ ಕೊರಳು ಒಡ್ಡಿದವರು. ಆದರೆ ನಂತರದ ಆಡಳಿಗಳು ಅವರನ್ನು ಅಧಿಕೃತವಾಗಿ ಹುತಾತ್ಮನೆಂದು ಗುರುತಿಸಿಲ್ಲ.

ಊರಿನಲ್ಲಿದ್ದ ಒಂದು ಹೋರ್ಡಿಂಗ್‌ ಈ ಘೋಷಣೆಯನ್ನು ಹೊಂದಿತ್ತು:

ನವ್‌ ಜವಾನ್‌ ಜದ್‌ ಉಟದೇ ನೇ
ತಾನ್‌ ನಿಜಾಮ್‌ ಬದಲ್‌ ಜಾಂದೇ ನೇ
ಭಗತ್‌ ಸಿಂಗ್‌ ಆಜ್‌ ವಿ ಪೈದಾ ಹುಂದೇ ನೇ
ಬಸ್‌ ನಾಮ್‌ ಬದಲ್‌ ಜಾಂದೇ ನೇ

[ಯುವ ಜನರು ಎದ್ದು ನಿಂತ ದಿನವೇ
ಅರಸೊತ್ತಿಗೆಗಳು ಉರುಳಿ ಬೀಳುತ್ತವೆ
ಭಗತ್‌ ಸಿಂಗ್‌ ಇಲ್ಲಿ ಪ್ರತಿ ದಿನ ಜನಿಸುತ್ತಾರೆ
ಜನರು ಅವರನ್ನು ಬೇರೆ ಬೇರೆ ಹೆಸರಿನಿಂದ ಗುರುತಿಸುತ್ತಾರೆ]

PHOTO • Vishav Bharti
PHOTO • Vishav Bharti

ಎಡಕ್ಕೆ : ಅಜಯ್ ಕುಮಾರ್ ಅವರ ಮನೆಯ ಪ್ರವೇಶದ್ವಾರದಲ್ಲಿ ರುವ ಕಪ್ಪು ಕಂಬವು ಅವರ ಫೋಟೋವನ್ನು ಹೊಂದಿದೆ . ಬಲ : ರಾಮಗಢ ಸರ್ದಾರ ನ್ ಊರಿನಲ್ಲಿನ ಮೇಲಿನ ಪದ್ಯವಿರುವ ಹೋರ್ಡಿಂಗ್

ಅಜಯ್ ಕುಮಾರ್ 2024ರ ಜನವರಿಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಾಣ ತ್ಯಾಗ ಮಾಡಿದರು. ತನ್ನ ಅಜ್ಜ (ಅಮ್ಮನ ಅಪ್ಪ) ಹವಾಲ್ದಾರ್ ಪಿಯಾರಾ ಲಾಲ್ ಅವರಿಂದ ಸ್ಫೂರ್ತಿ ಪಡೆದ ಅಜಯ್ ಬಾಲ್ಯದಿಂದಲೂ ಭಾರತೀಯ ಸೇನೆಗೆ ಸೇರುವ ಕನಸನ್ನು ಕಂಡಿದ್ದರು. "ಅವನು ಹತ್ತನೇ ತರಗತಿ ಪೂರ್ಣಗೊಳಿಸಿದ ನಂತರ ತಯಾರಿಯನ್ನು ಪ್ರಾರಂಭಿಸಿದನು" ಎಂದು ಅವರ ತಂದೆ ಚರಣ್ಜಿತ್ ಸಿಂಗ್ ಹೇಳುತ್ತಾರೆ.

ನೇಮಕಾತಿಯ ಸಮಯದಲ್ಲಿ, ಅಗ್ನಿವೀರ್ ಮತ್ತು ಸೈನಿಕನ ನಡುವಿನ ವ್ಯತ್ಯಾಸದ ಬಗ್ಗೆ ಅವನಿಗೆ ತಿಳಿದಿರಲಿಲ್ಲ ಎಂದು ಅವರು ಹೇಳುತ್ತಾರೆ. ಅವರು ಹುತಾತ್ಮರಾದ ನಂತರ, ಅವರ ಕುಟುಂಬವು ಈ ಕುರಿತು ತಿಳಿದುಕೊಂಡಿದೆ, ಆದರೆ ಸುತ್ತಮುತ್ತಲಿನ ಹಳ್ಳಿಗಳ ಯುವಕರಿಗೆ ಈಗ 'ಗುತ್ತಿಗೆ ಆಧಾರದ ಸೈನಿಕ' ಆಗುವುದು ಎಂದರೆ ಏನೆಂದು ಅರ್ಥವಾಗಿದೆ.

ಅಜಯ್ ಅವರ ಆರು ಸಹೋದರಿಯರಲ್ಲಿ ಕಿರಿಯವರಾದ 22 ವರ್ಷದ ಅಂಜಲಿ ದೇವಿ, “ಈಗ ಯುವಕರಿಗೆ ಸಿಗುತ್ತಿರುವ ಭರವಸೆಯು, ಅವರಲ್ಲಿನ ನೈತಿಕ ಸ್ಥೈರ್ಯ ಕುಸಿಯುವಂತೆ ಮಾಡಿದೆ. ಇದರಿಂದಾಗಿ ಯುವ ಪೀಳಿಗೆ ನಿರಾಶೆಗೆ ಒಳಗಾಗಿದೆ. ತಾವು ಹುತಾತ್ಮರಾದರೂ ತಮ್ಮ ಕುಟುಂಬಕ್ಕೆ ಇತರ ಸೈನಿಕರಿಗೆ ಸಿಗುವಂತಹ ಸೌಲಭ್ಯಗಳು ಸಿಗುವುದಿಲ್ಲ ಎನ್ನುವುದು ಅವರಿಗೆ ಗೊತ್ತಾಗಿದೆ” ಎನ್ನುತ್ತಾರೆ.

“ಅವರು ಅಗ್ನಿವೀರರನ್ನು ಗುರಾಣಿಯಾಗಿ ಬಳಸುತ್ತಾರೆ. ಏಕೆಂದರೆ ಅಗ್ನಿವೀರ ಸತ್ತರೂ ಸರ್ಕಾರದ ಮೇಲೆ ಯಾವುದೇ ಹೊಣೆಗಾರಿಕೆ ಬೀಳುವುದಿಲ್ಲ. ಅವರನ್ನು ಇತರ ಮನುಷ್ಯರಂತೆ ನೋಡಲಾಗುವುದಿಲ್ಲ” ಎಂದು ಅವರು ನೋವು ಮತ್ತು ಕೋಪ ಬೆರೆತ ದನಿಯಲ್ಲಿ ಹೇಳುತ್ತಾರೆ.

ಬ್ರಿಟಿಷರ ಕಾಲದಿಂದಲೂ ಸೈನ್ಯಕ್ಕೆ ತನ್ನ ಮಕ್ಕಳನ್ನು ಕಳುಹಿಸುತ್ತಿದ್ದ ರಾಜ್ಯ ಪಂಜಾಬ್.‌ ಆದರೆ ಇಂದು ಅಗ್ನಿವೀರರನ್ನು ನಡೆಸಿಕೊಳ್ಳಲಾಗುತ್ತಿರುವ ರೀತಿಯನ್ನು ನೋಡಿ ಇಲ್ಲಿನ ಸೈನ್ಯ ಸೇರುವ ಬಯಕೆಯುಳ್ಳ ಯುವಜನರು ನಿರಾಶೆಗೆ ಒಳಗಾಗಿದ್ದಾರೆ. 103 ವರ್ಷಗಳ ಹಿಂದೆ 1918 ರಲ್ಲಿ ಮುಕ್ತಾಯಗೊಂಡ ಮೊದಲನೇ ಮಹಾಯುದ್ಧದ ಸಮಯದಲ್ಲಿ, ಬ್ರಿಟಿಷ್ ಭಾರತೀಯ ಸೇನೆಯ ಪ್ರತಿ ಇಬ್ಬರು ಸೈನಿಕರಲ್ಲಿ ಒಬ್ಬ ಪಂಜಾಬ್ ಮೂಲದವನಾಗಿದ್ದನು, ಅದು ಆ ಸಮಯದಲ್ಲಿ ಇಂದಿನ ಹರಿಯಾಣ ಮತ್ತು ಪಶ್ಚಿಮ ಪಂಜಾಬ್ ಅನ್ನು ಒಳಗೊಂಡಿತ್ತು - ಈಗ ಪಾಕಿಸ್ತಾನದಲ್ಲಿದೆ. 1929ರಲ್ಲಿ ಒಟ್ಟು ಸೇನಾ ಬಲ1,39,200 ಇದ್ದರೆ, ಅದರಲ್ಲಿ 86,000 ಮಂದಿ ಪಂಜಾಬಿ ಸೈನಿಕರಿದ್ದರು.

ಇದೇ ಪ್ರವೃತ್ತಿ ಮುಂದಿನ ಕೆಲವು ವರ್ಷಗಳವರೆಗೂ ಮುಂದುವರೆದಿತ್ತು. ಮಾರ್ಚ್ 15, 2021ರಂದು ಸಂಸತ್ತಿನ ಮುಂದೆ ಇರಿಸಲಾದ ರಕ್ಷಣಾ ಸಚಿವಾಲಯದ ದತ್ತಾಂಶದ ಪ್ರಕಾರ 89,000 ನೇಮಕಾತಿಗಳೊಂದಿಗೆ, ಭಾರತೀಯ ಸೇನೆಗೆ ಸೈನಿಕರನ್ನು ಕಳುಹಿಸುವ ರಾಜ್ಯಗಳಲ್ಲಿ ಪಂಜಾಬ್ ಎರಡನೇ ಸ್ಥಾನದಲ್ಲಿತ್ತು. [ಪಂಜಾಬ್ ನ ಏಳೂವರೆ ಪಟ್ಟು ಜನಸಂಖ್ಯೆ ಹೊಂದಿರುವ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದೆ]. ಭಾರತದ ಒಟ್ಟು ಜನಸಂಖ್ಯೆಯಲ್ಲಿ ಕೇವಲ 2.3 ಪ್ರತಿಶತದಷ್ಟು ಜನಸಂಖ್ಯೆಯನ್ನು ಹೊಂದಿದ್ದರೂ, ಪಂಜಾಬ್‌ ಒಟ್ಟಾರೆ ಸೇನೆಯ ಎಲ್ಲಾ ವಿಭಾಗಗಳಿಗೆ ಸೇರಿ ಶೇಕಡಾ 7.7 ರಷ್ಟು ಕೊಡುಗೆ ನೀಡುತ್ತದೆ. ಉತ್ತರ ಪ್ರದೇಶವು ಭಾರತದ ಜನಸಂಖ್ಯೆಯ ಶೇಕಡಾ 16.5 ರಷ್ಟಿದ್ದರೂ ಆ ದೇಶದ ಕೊಡುಗೆ ಶೇಕಡಾ 14.5ರಷ್ಟಿದೆ.

PHOTO • Courtesy: Surinder Singh

ಎರಡು ವರ್ಷಗಳ ಹಿಂದೆ ಸಂಗ್ರೂರ್ ಜಿಲ್ಲೆಯ ಫಿಸಿಕಲ್ ಅಕಾಡೆಮಿ ಲೆಹ್ರಾಗಾದಲ್ಲಿ ಸಾಲುಗಟ್ಟಿ ನಿಂತಿರುವ ಸಶಸ್ತ್ರ ಪಡೆಗಳ ಆಕಾಂಕ್ಷಿಗ ಳು (2022ರ ಫೋಟೊ). ಅಗ್ನಿವೀರ್‌ ಯೋಜನೆ ಘೋಷಣೆಯಾದ ನಂತರ ಇದನ್ನು ಮುಚ್ಚಲಾಯಿತು

ಆದರೆ ಅಗ್ನಿವೀರ್‌ ಯೋಜನೆ ಆರಂಭದ ನಂತರ ಪರಿಸ್ಥಿತಿ ನಾಟಕೀಯವಾಗಿ ಬದಲಾಗಿರುವಂತೆ ತೋರುತ್ತದೆ. ಸೇನಾ ನೇಮಕಾತಿ ತರಬೇತಿ ಕೇಂದ್ರಗಳು ಸಾಮಾನ್ಯವಾಗಿ ರಾಜ್ಯದಾದ್ಯಂತ ಸಣ್ಣ ಮತ್ತು ದೊಡ್ಡ ಪಟ್ಟಣಗಳಲ್ಲಿ ಕಂಡುಬರುತ್ತಿದ್ದವು. ಆದರೆ ಸಶಸ್ತ್ರ ಪಡೆಗಳ ಆಕಾಂಕ್ಷಿಗಳ ಸಂಖ್ಯೆಯಲ್ಲಿ ಹಠಾತ್ ಕುಸಿತ ಕಂಡುಬಂದಿದ್ದರಿಂದ ಅವುಗಳಲ್ಲಿ ಹೆಚ್ಚಿನವು ಕಳೆದ ಎರಡು ವರ್ಷಗಳಲ್ಲಿ ಮುಚ್ಚಲ್ಪಟ್ಟಿವೆ.

ಸಂಗ್ರೂರ್ ಜಿಲ್ಲೆಯ ಲೆಹ್ರಾಗಾ ಪಟ್ಟಣದಲ್ಲಿ ಸುಮಾರು ಒಂದು ದಶಕದಿಂದ ನಡೆಸುತ್ತಿದ್ದ ಸಶಸ್ತ್ರ ಪಡೆಗಳ ನೇಮಕಾತಿ ತರಬೇತಿ ಕೇಂದ್ರವಾದ 'ಫಿಸಿಕಲ್ ಅಕಾಡೆಮಿ'ಯನ್ನು ಸುರೀಂದರ್ ಸಿಂಗ್ ಮುಚ್ಚಿದ್ದಾರೆ. ಪ್ರತಿ ವರ್ಷ ಪಟಿಯಾಲ, ಸಂಗ್ರೂರ್, ಬರ್ನಾಲಾ, ಫತೇಘರ್ ಸಾಹಿಬ್ ಮತ್ತು ಮಾನ್ಸಾ ಜಿಲ್ಲೆಗಳ ಸುಮಾರು ಒಂದು ಸಾವಿರ ಯುವಕರಿಗೆ ಅಕಾಡೆಮಿ ಹಲವಾರು ಬ್ಯಾಚುಗಳಲ್ಲಿ ದೈಹಿಕ ತರಬೇತಿ ನೀಡುತ್ತಿತ್ತು ಎಂದು ಅವರು ಹೇಳುತ್ತಾರೆ. ಆದರೆ ಅಗ್ನಿವೀರ್‌ ಯೋಜನೆ ಆರಂಭವಾದ ನಂತರ ಅಕಾಡೆಮಿಯ ಕುರಿತು ವಿಚಾರಿಸುವವರ ಸಂಖ್ಯೆ ಕೇವಲ 50ಕ್ಕೆ ಇಳಿದಿದೆ. “ನಮಗೆ ಖರ್ಚುಗಳನ್ನು ಸಹ ನಿಭಾಯಿಸಲು ಸಾಧ್ಯವಾಗದ ಕಾರಣ ಕೇಂದ್ರವನ್ನು ಮುಚ್ಚುವ ನಿರ್ಧಾರ ಮಾಡಿದೆವು” ಎಂದು ಅವರು ವಿಷಾದದಿಂದ ಹೇಳುತ್ತಾರೆ.

2011ರಲ್ಲಿ ಅವರ ಅಕಾಡೆಮಿ ಆರಂಭವಾಗಿತ್ತು. 2022ರಲ್ಲಿ ಅವರು ಅಕಾಡೆಮಿಯನ್ನು ಮುಚ್ಚಿದರು. ಈ ಅವಧಿಯಲ್ಲಿ “ಇಲ್ಲಿ ತರಬೇತಿ ಪಡೆದ ಸುಮಾರು 1,400ರಿಂದ 1,500 ಯುವಕರು ಭಾರತೀಯ ಸಶಸ್ತ್ರ ಪಡೆಗಳಿಗೆ ಸೇರಿದರು" ಎಂದು ಅವರು ಹೇಳುತ್ತಾರೆ.

ಪಂಜಾಬ್, ರಾಜಸ್ಥಾನ ಮತ್ತು ಹರಿಯಾಣಗಳಲ್ಲಿರುವ ಇತರ ದೈಹಿಕ ತರಬೇತಿ ಕೇಂದ್ರಗಳ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ ಎಂದು ಸುರೀಂದರ್ ಸಿಂಗ್ ಹೇಳುತ್ತಾರೆ. "ಅವುಗಳಲ್ಲಿ ಸುಮಾರು 80 ಪ್ರತಿಶತದಷ್ಟು ಮುಚ್ಚಲ್ಪಟ್ಟಿವೆ" ಎಂದು ಅವರು ಹೇಳುತ್ತಾರೆ. ಮತ್ತು ಈಗಲೂ ಕಾರ್ಯನಿರ್ವಹಿಸುತ್ತಿರುವ ಶೇಕಡಾ 20ರಷ್ಟು ಸಂಸ್ಥೆಗಳು ತಮ್ಮ ಗಮನವನ್ನು ಪೊಲೀಸ್ ಮತ್ತು ಅರೆಸೈನಿಕ ಪಡೆಗಳ ನೇಮಕಾತಿಯತ್ತ ತಿರುಗಿಸಿವೆ.

“ಈ ಹಿಂದೆ ಒಂದು ಹಳ್ಳಿಯಲ್ಲಿ ಸಶಸ್ತ್ರ ಪಡೆಗಳಿಗೆ ಸೇರಲು ಆಸಕ್ತಿ ಹೊಂದಿದ್ದ 50ರಿಂದ 100ಯುವಕರನ್ನು ನೋಡಬಹುದಿತ್ತು, ಆದರೆ ಇಂದು ಆ ಸಂಖ್ಯೆ ಎರಡರಿಂದ ಐದಕ್ಕೆ ತಲುಪಿದೆ. ಅಗ್ನಿವೀರ್‌ ಯೋಜನೆ ಈ ಮಟ್ಟಿಗೆ ಪರಿಣಾಮ ಬೀರಿದೆ” ಎಂದು ಅವರು ಹೇಳುತ್ತಾರೆ.

ಪಟಿಯಾಲ ಜಿಲ್ಲೆಯ ನಭಾ ಪಟ್ಟಣದಲ್ಲಿ ನ್ಯೂ ಸೈನಿಕ್ ಪಬ್ಲಿಕ್ ಅಕಾಡೆಮಿಯನ್ನು ನಡೆಸುತ್ತಿದ್ದ ಕರಮ್ಜಿತ್ ಸಿಂಗ್, 2023ರಲ್ಲಿ 60 ವಿದ್ಯಾರ್ಥಿಗಳು ಸಶಸ್ತ್ರ ಪಡೆಗಳ ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಹೇಳುತ್ತಾರೆ. ಆದರೆ ಅವರಲ್ಲಿ ಕೆಲವರಷ್ಟೇ ದೈಹಿಕ ತರಬೇತಿಗೆ ಬಂದರು. ಏಕೆಂದರೆ ಅವರಿಗೆಲ್ಲ ಅಗ್ನಿವೀರ್‌ ಯೋಜನೆ ಪರಿಣಾಮ ಸ್ಪಷ್ಟವಾಗಿ ತಿಳಿದಿತ್ತು. ಕೊನೆಗೆ ಅವರೂ ಅಕಾಡೆಮಿಯನ್ನು ಮುಚ್ಚಿದರು.

PHOTO • Courtesy: Surinder Singh
PHOTO • Courtesy: Surinder Singh

ಸಶಸ್ತ್ರ ಪಡೆಗಳ ಆಕಾಂಕ್ಷಿಗಳ ಸಂಖ್ಯೆಯಲ್ಲಿ ಹಠಾತ್ ಕುಸಿತದಿಂದಾಗಿ ಸಂಗ್ರೂ ರ್‌ ಭಾಗದ ರೀತಿಯ ಸೇನಾ ನೇಮಕಾತಿ ತರಬೇತಿ ಕೇಂದ್ರಗಳು ಕಳೆದ ಎರಡು ವರ್ಷಗಳಲ್ಲಿ ಮುಚ್ಚಲ್ಪಟ್ಟಿವೆ

ಸಂಗ್ರೂರ್ ಜಿಲ್ಲೆಯ ಅಲಿಪುರ್ ಖಾಲ್ಸಾ ಗ್ರಾಮದ ಜಗಸೀರ್ ಗಾರ್ಗ್ ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರೂ ದೈಹಿಕ ಪರೀಕ್ಷೆಗೆ ಹೋಗದ ವಿದ್ಯಾರ್ಥಿಗಳಲ್ಲಿ ಒಬ್ಬರು. ಕಾರಣ? “ಕೇವಲ ನಾಲ್ಕು ವರ್ಷಗಳ ಉದ್ಯೋಗಕ್ಕಾಗಿ ಪ್ರಾಣವನ್ನು ಪಣಕ್ಕಿಡುವ ಅಗತ್ಯವಿಲ್ಲ ಎಂದು ನನ್ನ ಪೋಷಕರು ಹೇಳಿದರು. ಏನಾದರೂ ಅವಘಡ ಸಂಭವಿಸಿದರೆ ಕುಟುಂಬಕ್ಕೆ ಏನೂ ಸಿಗುವುದಿಲ್ಲ. ನನ್ನ ಬ್ಯಾಚಿನ ಅನೇಕರು ಲಿಖಿತ ಪರೀಕ್ಷೆಯಲ್ಲಿ ಪಾಸಾಗಿದ್ದರೂ ದೈಹಿಕ ಪರೀಕ್ಷೆಗೆ ಹೋಗಲಿಲ್ಲ” ಎಂದು ಅವರು ಹೇಳುತ್ತಾರೆ. ಜಗಸೀರ್‌ ಈಗ ಸೆಕೆಂಡ್‌ ಹ್ಯಾಂಢ್ ಮೋಟಾರು ಬೈಕುಗಳನ್ನು ಖರೀದಿಸುವ ಮತ್ತು ಮಾರಾಟ ಮಾಡುವ ವ್ಯವಹಾರದಲ್ಲಿದ್ದಾರೆ.

ಮಕ್ಕಳನ್ನು ಮಿಲಿಟರಿಗೆ ಸೇರಿಸುವ ದೀರ್ಘಕಾಲದ ಪದ್ಧತಿಯಿಂದಾಗಿ, ನೇಮಕಾತಿ ಅಕಾಡೆಮಿಗಳನ್ನು ಪಂಜಾಬ್‌ ರಾಜ್ಯಾದ್ಯಂತ ಪ್ರಮುಖ ನಗರಗಳು ಮತ್ತು ಸಣ್ಣ ಪಟ್ಟಣಗಳಲ್ಲಿ ಕಾಣಬಹುದು. ಸುರೀಂದರ್ ಸಿಂಗ್ ಗಮನಿಸಿದಂತೆ, ಈ ಸಂಸ್ಥೆಗಳಲ್ಲಿ ಹೆಚ್ಚಿನವು ತಮ್ಮ ಕಾರ್ಯಾಚರಣೆಯನ್ನು ನಿಲ್ಲಿಸಿವೆ ಅಥವಾ ಪೊಲೀಸ್ ನೇಮಕಾತಿ ತರಬೇತಿಯತ್ತ ತಮ್ಮ ಗಮನವನ್ನು ಹರಿಸಿವೆ. ಆರಂಭದಲ್ಲಿ, ಈ ಕೇಂದ್ರಗಳು ಮಾರ್ಚ್ 2020ರಿಂದ ಮಾರ್ಚ್ 2022ರವರೆಗೆ ನಡೆದ ನೇಮಕಾತಿ ನಿಷೇಧದಿಂದ ಸವಾಲುಗಳನ್ನು ಎದುರಿಸಿದವು, ಇದಕ್ಕೆ ಮುಖ್ಯ ಕಾರಣ ಕೋವಿಡ್ ಸಾಂಕ್ರಾಮಿಕ ರೋಗ, ಆದರೆ ನಂತರ ಪರೀಕ್ಷಾ ಪ್ರಶ್ನೆಪತ್ರಿಕೆಗಳ ಸೋರಿಕೆಯಿಂದಲೂ ಪರೀಕ್ಷೆಗಳನ್ನು ನಿಲ್ಲಿಸಲಾಗಿತ್ತು.

ನಂತರ ಸರ್ಕಾರವು ಅಗ್ನಿಪಥ್ ಯೋಜನೆಯನ್ನು ತಂದಿತು. ಇದನ್ನು ಜೂನ್ 14, 2022ರಂದು ಕೇಂದ್ರ ಸಚಿವ ಸಂಪುಟವು 'ಆಕರ್ಷಕ' ನೇಮಕಾತಿ ಯೋಜನೆಯಾಗಿ ಘೋಷಿಸಿತು. ಇದರ ಅಡಿಯಲ್ಲಿ, 15 ವರ್ಷಗಳ ಕನಿಷ್ಠ ಸೇವೆಯ ಸಾಮಾನ್ಯ ಕೇಡರ್ ಬದಲಿಗೆ ಯುವಕರನ್ನು ಕೇವಲ ನಾಲ್ಕು ವರ್ಷಗಳ ಕಾಲಕ್ಕೆ ಸೈನ್ಯಕ್ಕೆ ನೇಮಕ ಮಾಡಿಕೊಳ್ಳಲಾಗುತ್ತದೆ.

ಸರ್ಕಾರವು ಈ ಉಪಕ್ರಮವನ್ನು "ಮೂರು ಸೇವೆಗಳ ಮಾನವ ಸಂಪನ್ಮೂಲ ನೀತಿಯಲ್ಲಿ ಹೊಸ ಯುಗವನ್ನು ಪ್ರಾರಂಭಿಸುತ್ತದೆ" ಎಂದು ಘೋಷಿಸಿತ್ತು. ಪರಿ ವರದಿಗಾರರು ಹಿಂದಿನ ಲೇಖನಗಳಲ್ಲಿ ಗಮನಿಸಿದಂತೆ, 2020 ರವರೆಗೆ ಸಶಸ್ತ್ರ ಪಡೆಗಳಿಗೆ ಸರಾಸರಿ ವಾರ್ಷಿಕ ನೇಮಕಾತಿ ಸುಮಾರು 61,000 ಆಗಿತ್ತು. ಅಗ್ನಿಪಥ್ ಯೋಜನೆಯ ಅನುಷ್ಠಾನದೊಂದಿಗೆ, ಈ ಸಂಖ್ಯೆ ಸುಮಾರು 46,000 ನೇಮಕಾತಿಗಳಿಗೆ ಇಳಿಯುವ ನಿರೀಕ್ಷೆಯಿದೆ.

ಈ ಪತನವು ಜೀವಮಾನದ ಮಿಲಿಟರಿ ವೃತ್ತಿಜೀವನದ ಆಕಾಂಕ್ಷೆಯ ಅಂತ್ಯವನ್ನು ಸೂಚಿಸುತ್ತದೆ, ಇದು ಗ್ರಾಮೀಣ ಪ್ರದೇಶದ ಹಲವಾರು ಯುವಜನರ ಪಾಲಿಗೆ ಗಮನಾರ್ಹ ಮೌಲ್ಯವನ್ನು ಹೊಂದಿದ್ದ ಗುರಿಯಾಗಿತ್ತು. ಆದರೆ ಈ ಯೋಜನೆಯಡಿ ಆಯ್ಕೆಯಾದವರು ಕೇವಲ ನಾಲ್ಕು ವರ್ಷಗಳ ಕಾಲ ಸೇವೆ ಸಲ್ಲಿಸಬಹುದು, ಒಟ್ಟಾರೆ ಆಯ್ಕೆಯಾದವರಲ್ಲಿ ಕೇವಲ ಕಾಲು ಭಾಗದಷ್ಟು ಜನರು ಮಾತ್ರವೇ ಸೈನ್ಯದ ಶಾಶ್ವತ ಶ್ರೇಣಿಯಲ್ಲಿ ಸಂಯೋಜಿಸಲ್ಪಡುತ್ತಾರೆ.

ಪಟಿಯಾಲದ ಪಂಜಾಬಿ ವಿಶ್ವವಿದ್ಯಾಲಯದ ರಕ್ಷಣಾ ಮತ್ತು ಕಾರ್ಯತಂತ್ರದ ಅಧ್ಯಯನ ವಿಭಾಗದ ಮಾಜಿ ಮುಖ್ಯಸ್ಥ ಡಾ. ಉಮ್ರಾವ್ ಸಿಂಗ್ ಅವರ ಪ್ರಕಾರ, ಗ್ರಾಮೀಣ ಸಮುದಾಯಗಳಲ್ಲಿ ಸಶಸ್ತ್ರ ಪಡೆಗಳು ಹೊಂದಿರುವ ಗೌರವದ ಜೊತೆಗೆ, ಅನುಕೂಲಕರ ಉದ್ಯೋಗಾವಕಾಶಗಳು ಪಂಜಾಬಿ ಜನರಿಗೆ ಸೇನೆ ಸೇರಲು ಪ್ರಾಥಮಿಕ ಪ್ರೇರಣೆಯಾಗಿದ್ದವು.

PHOTO • Courtesy: Surinder Singh
PHOTO • Courtesy: Surinder Singh

ಮಕ್ಕಳನ್ನು ಮಿಲಿಟರಿಗೆ ಸೇರಿಸುವ ದೀರ್ಘಕಾಲದ ಪದ್ಧತಿಯಿಂದಾಗಿ , ನೇಮಕಾತಿ ಅಕಾಡೆಮಿಗಳನ್ನು ಪಂಜಾ ಬ್‌ ರಾಜ್ಯಾದ್ಯಂತ ಪ್ರಮುಖ ನಗರಗಳು ಮತ್ತು ಸಣ್ಣ ಪಟ್ಟಣಗಳಲ್ಲಿ ಕಾಣಬಹುದು

“ಅಗ್ನಿವೀರ್ ಯೋಜನೆಯ ಅನುಷ್ಠಾನವು ಈ ವೃತ್ತಿಗೆ ಒಂದು ಕಾಲದಲ್ಲಿ ಇದ್ದ ಗೌರವವನ್ನು ಗಣನೀಯವಾಗಿ ಕಡಿಮೆ ಮಾಡಿದೆ. ಸೈನಿಕರನ್ನು ಈಗ "ಠೇಕೆ ವಾಲೆ ಫೌಜಿ" ಅಥವಾ ಗುತ್ತಿಗೆ ಸೈನಿಕರು ಎಂದು ಕರೆಯಲಾಗುತ್ತದೆ. ಈ ಗೌರವದ ಕುಸಿತ ಸೇನೆಗೆ ಸೇರಲು ಬಯಸುವ ವ್ಯಕ್ತಿಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆಗೆ ಕಾರಣವಾಗಿದೆ. ಅಗ್ನಿವೀರ್ ಪರಿಚಯದ ನಂತರ, ವಿದೇಶಗಳಲ್ಲಿ ಅವಕಾಶಗಳನ್ನು ಹುಡುಕುತ್ತಿರುವ ಯುವಜನರ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಆದರೆ ಕೆನಡಾದೊಂದಿಗಿನ ಸಂಬಂಧಗಳು ಹದಗೆಡುತ್ತಿರುವುದರಿಂದ ಈ ಮಾರ್ಗವೂ ಈಗ ಮುಚ್ಚಿದೆ. ಈಗಾಗಲೇ ಕೃಷಿ ಬಿಕ್ಕಟ್ಟಿನೊಂದಿಗೆ ಹೋರಾಡುತ್ತಿರುವ ಪಂಜಾಬಿನ ಗ್ರಾಮೀಣ ಸಮುದಾಯಗಳು ವಿಪತ್ತಿನ ಅಂಚಿನಲ್ಲಿವೆ” ಎಂದು ಡಾ. ಸಿಂಗ್ ಹೇಳುತ್ತಾರೆ.

ನೇಮಕಗೊಂಡವರಲ್ಲಿ ಹೆಚ್ಚಿನವರು ಕೃಷಿ ಕುಟುಂಬಗಳಿಂದ ಬಂದವರು ಅಥವಾ ಭೂರಹಿತ ದಲಿತರು. ಮಾನ್ಸಾ ಜಿಲ್ಲೆಯ ರಂಗ್ರಿಯಾಲ್ ಗ್ರಾಮದಲ್ಲಿ ಲಿಖಿತ ಪರೀಕ್ಷೆಗೆ ಸೇನಾ ಆಕಾಂಕ್ಷಿಗಳನ್ನು ಸಿದ್ಧಪಡಿಸುವ ಯದ್ವಿಂದರ್ ಸಿಂಗ್ ಹೇಳುವಂತೆ: "ಹಿಂದೆ, ಐದರಿಂದ ಏಳು ಎಕರೆ ಭೂಮಿಯನ್ನು ಹೊಂದಿರುವ ಕುಟುಂಬಗಳ ಹುಡುಗರಲ್ಲಿಯೂ ಸಾಕಷ್ಟು ಉತ್ಸಾಹವಿತ್ತು, ಆದರೆ ಈಗ ಕೃಷಿ ಹಿನ್ನೆಲೆಯ ಕುಟುಂಬಗಳಿಂದ ಯಾವುದೇ ಆಕಾಂಕ್ಷಿಗಳು ಸಿಗುವುದಿಲ್ಲ. ಈಗ ಬೇರೆ ಆಯ್ಕೆಗಳಿಲ್ಲದ ಮುಖ್ಯವಾಗಿ ದಲಿತ ಕುಟುಂಬಗಳ ಯುವಕರು ಮಾತ್ರ ಆಸಕ್ತಿ ತೋರಿಸುತ್ತಿದ್ದಾರೆ.”

ಅಜಯ್‌ ಕುಮಾರ್‌ ಕೂಡಾ ಅಂತಹ ಒಂದು ದಲಿತ ಕುಟುಂಬಕ್ಕೆ ಸೇರಿದವರು. “ಅವರು ತನ್ನ ಈ ಕನಸನ್ನು ಈಡೇರಿಸಿಕೊಳ್ಳುವ ಸಲುವಾಗಿ ಹಲವು ವರ್ಷಗಳ ಕಾಲ ದಿನಗೂಲಿಯಾಗಿ ದುಡಿದಿದ್ದರು. ಜೊತೆಗೆ ಅವರ ತಾಯಿ ಭೂಮಾಲಿಕರ ಮನೆಯ ದನದ ಕೊಟ್ಟಿಗೆ ಸ್ವಚ್ಛಗೊಳಿಸುವುದರಿಂದ ಹಿಡಿದು ಮನರೇಗಾದ ತನಕ ಹತ್ತು ಹಲವು ಸಣ್ಣಪುಟ್ಟ ಕೆಲಸಗಳನ್ನು ಮಾಡಿದ್ದರು” ಎನ್ನುತ್ತಾರೆ ಅಜಯ್‌ ಅವರ ತಂದೆ ಚರಣ್‌ಜೀತ್‌ ಸಿಂಗ್.‌ “ನಮಗೆ ಬದಲಿಗೆ ಸಿಕ್ಕಿದ್ದೇನು? ಹಣ? ಅದು ಗಾಳಿಯಲ್ಲಿ ತೇಲಿ ಹೋಗಿಬಿಡುತ್ತದೆ. [ಅವರು ವಿಮೆಯಿಂದ ಬಂದ ಹಣದ ಕುರಿತು ಹೇಳುತ್ತಿದ್ದಾರೆ, ಅಜಯ್‌ ಯಾವುದೇ ಪರಿಹಾರಗಳಿಗೆ ಅರ್ಹರಲ್ಲದ ಕಾರಣ ಅವರಿಗೆ ಯಾವುದೇ ಪರಿಹಾರ ದೊರಕಿಲ್ಲ].

ಚರಣಜೀತ್‌ ತನ್ನ ಮಗನ ನೆನಪಾಗಿ ಉಳಿದಿರುವ ವಸ್ತುಗಳನ್ನು ತೋರಿಸಿದರು.‌ ಸೇನೆಯ ಕಪ್ಪು ಬಣ್ಣದ ಟ್ರಂಕ್ ಮೇಲೆ ಬಿಳಿ ಅಕ್ಷರಗಳಲ್ಲಿ ʼಅಗ್ನಿವೀರ್‌ ಅಜಯ್‌ ಕುಮಾರ್‌ʼ ಎಂದು ಬರೆಯಲಾಗಿತ್ತು. ಈ ಮೂರು ಪದಗಳು ಕೇವಲ ಅಜಯ್‌ ಕುಮಾರ್‌ ಅವರ ಕತೆಯನ್ನಷ್ಟೇ ಅಲ್ಲ ಇಡೀ ಪಂಜಾಬಿನ ಯುವಕರ ಕನಸುಗಳನ್ನು ಸಾರಿ ಹೇಳುತ್ತಿದ್ದವು.

PHOTO • Vishav Bharti
PHOTO • Vishav Bharti

ಎಡಕ್ಕೆ : ಅಗ್ನಿವೀರ್ ಅಜಯ್ ಕುಮಾರ್ ಮನೆಯಲ್ಲಿ ರುವ ಅವರ ಭಾವಚಿತ್ರ . ಬಲ : ಅಜಯ್ ಹೋರಾಡಿದ 25 ನೇ ಇನ್ಫೆಂಟ್ರಿ ವಿಭಾಗದ ಜನರಲ್ ಆಫೀಸರ್ ಕಮಾಂಡಿಂಗ್ ಮೇಜರ್ ಜನರಲ್ ಗೌರವ್ ರಿಷಿ ಅವರು ಕುಟುಂಬಕ್ಕೆ ಕಳುಹಿಸಿದ ಸಂತಾಪ ಸಂದೇಶ

PHOTO • Vishav Bharti
PHOTO • Vishav Bharti

ಅಗ್ನಿವೀರ್‌ ಅಜಯ್ ಕುಮಾರ್‌ ಅವರ ಟ್ರಂಕನ್ನು ಅವರ ಕೋಣೆಯಲ್ಲಿ ಇರಿಸಲಾಗಿದೆ. ಬಲ: ಅಗ್ನಿವೀರ್ ಅಜಯ್ ಕುಮಾರ್ ಅವರ ಪೋಷಕರಾದ ಚರಣ ಜೀ ತ್ ಸಿಂಗ್ ಮತ್ತು ನಜೀ ತ್ ಕೌರ್ . ಅವರ ಹಿಂಬಾಗದಲ್ಲಿನ ಫ್ಲೆಕ್ಸ್‌ ಬೋರ್ಡಿನಲ್ಲಿ ತಾಯ್ನಾಡು ಮತ್ತು ತ್ಯಾಗದ ಕುರಿತಾದ ಪದ್ಯವನ್ನು ಬರೆಯಲಾಗಿದೆ ( ಕೆಳಗಿನ ಪಠ್ಯವನ್ನು ನೋಡಿ )

ಅಜಯ್‌ ಅವರ ಮನೆಯಲ್ಲಿ ಹೊಸದಾಗಿ ಕಟ್ಟಲಾಗಿರುವ ಕೋಣೆಯು ಈಗಾಗಲೇ ಗತಕಾಲದೊಂದಿಗೆ ಸೇರಿದಂತೆ ಕಾಣುತ್ತದೆ. ಅಜಯ್‌ ಆರು ಹೆಣ್ಣುಮಕ್ಕಳ ನಡುವೆ ಒಬ್ಬನೇ ಮಗ. ಅವರಲ್ಲಿ ಇಬ್ಬರು ಹೆಣ್ಣುಮಕ್ಕಳಿಗೆ ಇನ್ನಷ್ಟೇ ಮದುವೆಯಾಗಬೇಕಿದೆ.  ಅಜಯ್‌ ಅವರ ಇಸ್ತ್ರಿ ಮಾಡಲಾದ ಸಮವಸ್ತ್ರ, ಎಚ್ಚರಿಕೆಯಿಂದ ಇರಿಸಲಾಗಿರುವ ಅವರ ಟರ್ಬನ್‌, ಪಾಲಿಷ್‌ ಮಾಡಲಾದ ಶೂ ಮತ್ತು ಅವರ ಚೌಕಟ್ಟು ಕಟ್ಟಿದ ಫೋಟೋ ಈಗ ಆ ಕೋಣೆಯಲ್ಲಿವೆ.

ಮೌನವೇ ಹೆಚ್ಚು ಕಾಲ ನೆಲೆಸಿದ್ದ ನಮ್ಮ ಸಂಭಾಷಣೆಯ ನಡುವೆ ಅಜಯ್‌ ಅವರ ತಂದೆಯ ಬಳಿ ʼನೀವು ಈಗಲೂ ಊರಿನ ಯುವಕರ ಬಳಿ ಸೈನ್ಯ ಸೇರುವಂತೆ ಹೇಳುತ್ತೀರಾ?ʼ ಎಂದು ಕೇಳಿದ್ದಕ್ಕೆ ಅವರು, “ನಾನ್ಯಾಕೆ ಹೇಳಲಿ? ನನ್ನ ಮಗನ ಜೀವ ಅರ್ಥವಿಲ್ಲದೆ ಹೋಗಿದ್ದು ಸಾಲದೆ? ಉಳಿದವರ ಮಕ್ಕಳ ಜೀವವೂ ಹೋಗಬೇಕೆ?” ಎಂದು ಅವರು ಕೇಳಿದರು.

ಅವರ ಹಿಂದಿದ್ದ ಗೋಡೆಯ ಮೇಲಿನ ಅಜಯ್‌ ಫೋಟೊ ಕೆಳಗಡೆ ಹೀಗೆ ಬರೆಯಲಾಗಿತ್ತು:

ಲಿಖ್‌ ದ್ಯೋ ಲಹು ನಾಲ್‌ ಅಮರ್‌ ಕಹಾನಿ, ವತನ್‌ ದಿ ಖಾತಿರ್‌
ಕರ್‌ ದ್ಯೋ ಖುರ್ಬಾನ್‌ ಯೇ ಜವಾನಿ, ವತನ್‌ ದಿ ಖಾತಿರ್‌

[ತಾಯ್ನಾಡಿನ ಮೇಲಿನ ಪ್ರೀತಿಗಾಗಿ ನಿನ್ನ ರಕ್ತದಿಂದ ಅಮರ ಕತೆಗಳನ್ನು ರಚಿಸು
ತಾಯ್ನಾಡಿನ ಮೇಲಿನ ಪ್ರೀತಿಗಾಗಿ ನಿನ್ನ ಯೌವನವನ್ನು ಮುಡಿಪಾಗಿಸು…]

ನೆನಪುಗಳ ಸಾಗರದಲ್ಲಿ ಮುಳುಗಿರುವ ಚರಣಜೀತ್‌ ಅವರ ಕಣ್ಣುಗಳು ʼತಾಯ್ನಾಡು ಪ್ರತಿಯಾಗಿ ಅವರಿಗೆ ಏನನ್ನು ನೀಡುತ್ತದೆ?ʼ ಎಂದು ಪ್ರಶ್ನಿಸುತ್ತಿರುವಂತೆ ಭಾಸವಾಗುತ್ತಿತ್ತು.

ಮೇಲು ಬರಹ

ಬರಹ ಪ್ರಕಟವಾದ ನಂತರ 2025 ಜನವರಿ 24 ರಂದು ತ್ರಿವರ್ಣ ಧ್ವಜ ಹೊತ್ತ ಇನ್ನೊಂದು ಕಳೇಬರವು ಪಂಜಾಬ್‌ ರಾಜ್ಯದ ಮಾನ್ಸಾ ಜಿಲ್ಲೆಯ ಅಕ್ಲಿಯಾ ಗ್ರಾಮದ ಸಣ್ಣ ರೈತನ ಮನೆಯನ್ನು ತಲುಪಿತು. ಅದು ಊರಿನ ಲವಪ್ರೀತ್‌ ಎನ್ನುವ ಯುವಕನದು. ಅವರು ಕಳೆದ 15 ತಿಂಗಳಿನಿಂದ ತನ್ನ ದೇಶದ ಗಡಿ ಕಾಯುತ್ತಾ ಪ್ರಾಣ ತ್ಯಾಗ ಮಾಡಿದ ಪಂಜಾಬಿನ ಮೂರನೇ ಅಗ್ನಿವೀರ್.‌

ಮೂರೂ ಜನ ಕಾಶ್ಮೀರದಲ್ಲೇ ಮರಣ ಹೊಂದಿದರು. ಅವರಲ್ಲಿ ಮೊದಲಿಗರೆಂದರೆ ಅಗ್ನಿವೀರ್‌ ಅಮೃತಪಾಲ್ ಸಿಂಗ್. ಇವರು 2023 ಅಕ್ಟೋಬರ್‌ ತಿಂಗಳಿನಲ್ಲಿ ತನ್ನ ಪ್ರಾಣಾರ್ಪಣೆ ಮಾಡಿದರು. ಅವರ ನಂತರ 2024 ಜನವರಿಯಲ್ಲಿ ಅಜಯ್‌ ಕುಮಾರ್‌ ಬಲಿದಾನಗೈದರು. ಮೇಲಿನ ಬರಹ ಅವರ ಬದುಕಿನ ಕತೆಯನ್ನು ಹೇಳುತ್ತದೆ. ಅಜಯ್‌ ಕುಮಾರ್‌ ಕುಟುಂಬದಂತೆಯೇ, ಲವಪ್ರೀತ್‌ ಅವರ ತಂದೆ ಬಿಯಾಂತ್‌ ಸಿಂಗ್‌ ಅವರ ಬಳಿಯೂ ಈಗ ಮಗನ ನೆನಪು ಬಿಟ್ಟರೆ ಇನ್ನೇನೂ ಉಳಿದಿಲ್ಲ.

ಲವಪ್ರೀತ್‌ ಮನೆಗೆ ಹೊಸ ಕೈಗಡಿಯಾರವೊಂದನ್ನು ಕಳುಹಿಸಿದ್ದರು; ಊರಿಗೆ ಬಂದ ನಂತರ ಅವರು ಅದನ್ನು ತೊಡುವ ಕನಸು ಕಂಡಿದ್ದರು. ಆದರೆ ಅದು ಕನಸಾಗಿಯೇ ಉಳಿಯಲಿದೆ” ಎಂದು ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಲವಪ್ರೀತ್‌ ತಂದೆ ಬಿಯಾಂತ್‌ ಸಿಂಗ್‌ ಅಳಲು ತೋಡಿಕೊಂಡರು. ಮಗನ ಸಾವಿನೊಂದಿಗೆ ಈಗ ಕುಟುಂಬದ ಸಮಯವೂ ನಿಂತಂತೆ ತೋರುತ್ತಿದೆ. ಇಂತಹ ಪ್ರತಿ ಸಾವಿನೊಂದಿಗೆ ಅಗ್ನಿವೀರರಿಗೆ ಹುತಾತ್ಮರ ಸ್ಥಾನವನ್ನು ನೀಡಬೇಕೆನ್ನುವ ಪಂಜಾಬಿಗರ ಕೂಗು ಇನ್ನಷ್ಟು ಬಲವಾಗುತ್ತಿದೆ.

ಅನುವಾದ: ಶಂಕರ. ಎನ್. ಕೆಂಚನೂರು

Vishav Bharti

Vishav Bharti is a journalist based in Chandigarh who has been covering Punjab’s agrarian crisis and resistance movements for the past two decades.

Other stories by Vishav Bharti
Editor : P. Sainath
psainath@gmail.com

P. Sainath is Founder Editor, People's Archive of Rural India. He has been a rural reporter for decades and is the author of 'Everybody Loves a Good Drought' and 'The Last Heroes: Foot Soldiers of Indian Freedom'.

Other stories by P. Sainath
Translator : Shankar N. Kenchanuru
shankarkenchanur@gmail.com

Shankar N. Kenchanur is a poet and freelance translator. He can be reached at shankarkenchanur@gmail.com.

Other stories by Shankar N. Kenchanuru