“ಹಮೇ ಪತಾ ಹಿ ನಹೀ ಹುಮಾರಾ ಬೇಟಾ ಏಕ್‌ದಮ್ ಕೈಸೆ ಮಾರಾ, ಕಂಪನಿ ನೆ ಹಮೇ ಬತಾಯಾ ಭಿ ನಹೀ [ನಮ್ಮ ಮಗ ಅಚಾನಕಾಗಿ ಹೇಗೆ ಸತ್ತ ಎಂಬುದೇ ನಮಗೆ ತಿಳಿದಿಲ್ಲ. ಈ ಬಗ್ಗೆ ಕಂಪನಿಯೂ ನಮಗೆ ಏನೂ ಹೇಳಲಿಲ್ಲ],” ಎಂದು ನೀಲಂ ಯಾದವ್ ಹೇಳುತ್ತಾರೆ.
ಸೋನಿಪತ್‌ನ ರಾಯ್ ಪಟ್ಟಣದ ಮನೆಯ ಒಳಗೆ ನಿಂತುಕೊಂಡಿರುವ 33 ವರ್ಷ ಪ್ರಾಯದ ಇವರು ಮಾತನಾಡುವಾಗ ಕಣ್ಣಲ್ಲಿ ಕಣ್ಣಿಟ್ಟು ನೋಡಲು ಕಷ್ಟಪಡುತ್ತಿದ್ದರು. ಸುಮಾರು ಆರು ತಿಂಗಳ ಹಿಂದೆ ಇವರ ಬಾವನ ಮಗ ಸ್ಥಳೀಯ ಪುಡ್ ಫ್ಯಾಕ್ಟರಿಯೊಂದರಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. 27 ವರ್ಷ ಪ್ರಾಯದ ಇವರು ಆ ಫ್ಯಾಕ್ಟರಿಯ ಎಸಿ ರಿಪೇರಿ ಯೂನಿಟ್‌ನಲ್ಲಿ ಕೆಲಸ ಮಾಡುತ್ತಿದ್ದರು. 2007 ರಲ್ಲಿ ತಮ್ಮ ಮದುವೆಯಾದ ಮೇಲೆ ನೀಲಂ ಯಾದವ್‌ರವರೇ ಇವರನ್ನು ಬೆಳೆಸಿದ್ದರು.
ಜೂನ್ 29, 2023, ಕಡುಬಿಸಿಲಿನ ಆ ದಿನ ನೀಲಂ ಅವರ ನೆನಪಿನಲ್ಲಿ ಇನ್ನೂ ಹಾಗೆಯೇ ಇದೆ. ಅವರ ಇಬ್ಬರ ಹೆಣ್ಣು ಮಕ್ಕಳು, ಮಗ ಹಾಗೂ ಮಾವ ಶೋಭನಾಥ್ ಆಗಷ್ಟೇ ಮಧ್ಯಾಹ್ನದ ಊಟ ಮುಗಿಸಿದ್ದರು. ಸಾಮಾನ್ಯವಾಗಿ ನೀಲಂ ಮಧ್ಯಾಹ್ನದ ಊಟಕ್ಕೆ ದಾಲ್ ಬಾತ್ (ಬೇಳೆ ಸಾರು ಮತ್ತು ಅನ್ನ) ಮಾಡುತ್ತಾರೆ. ಊಟದ ನಂತರ ಶೋಭನಾಥ್ ಸ್ವಲ್ಪ ನಿದ್ದೆ ಮಾಡೋಣವೆಂದು ಸಿದ್ಧವಾಗುತ್ತಿದ್ದರೆ, ನೀಲಂ ಅಡುಗೆಮನೆ ಶುಚಿಗೊಳಿಸುತ್ತಿದ್ದರು.
ಗಂಟೆ ಸುಮಾರು ಒಂದು ಆಗಿರಬಹುದು, ಡೋರ್ ಬೆಲ್ ರಿಂಗ್ ಆಯ್ತು. ನೀಲಂ ತಮ್ಮ ಕೈಗಳನ್ನು ತೊಳೆದು, ದುಪ್ಪಟದಿಂದ ಒರಸಿಕೊಂಡು ಯಾರು ಬಂದಿದ್ದಾರೆ ಎಂದು ನೋಡಲು ಬಾಗಿಲ ಬಳಿ ಬಂದರು. ಇಬ್ಬರು ನೀಲಿ ಯೂನಿಫಾರ್ಮ್ ಧರಿಸಿದ ವ್ಯಕ್ತಿಗಳು ಬೈಕ್ ಕೀಗಳ ಜೊತೆಗೆ ಆಟವಾಡುತ್ತಾ ನಿಂತಿದ್ದರು. ಅವರನ್ನು ನೋಡಿಯೇ ಅವರು ರಾಮ್ ಕಮಲ್ ಕೆಲಸ ಮಾಡುವ ಕಂಪನಿಯವರು ಎಂಬುದು ನೀಲಂ ಅವರಿಗೆ ತಿಳಿಯಿತು. ಅವರಲ್ಲಿ ಒಬ್ಬ, “ರಾಮ್‌ಗೆ ಕರೆಂಟ್ ಶಾಕ್ ಹೊಡೆದಿದೆ. ಸಿವಿಲ್ ಆಸ್ಪತ್ರೆಗೆ ಈಗಲೇ ಬನ್ನಿ,” ಎಂದ.
“ಅವನು ಹೇಗಿದ್ದಾನೆ. ಏನೂ ಆಗಿಲ್ಲ ತಾನೇ ಎಂದು ಕೇಳುತ್ತಲೇ ಇದ್ದೆ. ಅವರು ಇಲ್ಲ ಎಂದು ಹೇಳಿದರು,” ಎಂದು ಹೇಳುವಾಗ ನೀಲಂ ಅವರ ಗಂಟಲು ಕಟ್ಟಿತು. ಆಗ ಅವರು ಮತ್ತು ಶೋಭನಾಥ್‌ರವರು ಪಬ್ಲಿಕ್ ಟ್ರಾನ್ಸ್‌ಫೋರ್ಟ್‌ಗೆ ಕಾಯದೆ, ಆ ಇಬ್ಬರಿಗೆ ಅವರ ಬೈಕಿನಲ್ಲೇ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಕೇಳಿಕೊಂಡರು. ಆಸ್ಪತ್ರಗೆ ತಲುಪಲು ಸುಮಾರು ಇಪ್ಪತ್ತು ನಿಮಿಷ ಬೇಕಾಯ್ತು.


ಎಡ: ಮೂರು ತಿಂಗಳ ಹಿಂದೆ, 27 ವರ್ಷ ಪ್ರಾಯದ ರಾಮ್ ಕಮಲ್‌ರವರು ತಾವು ಕೆಲಸ ಮಾಡುವ ಫುಡ್ ಫ್ಯಾಕ್ಟರಿಯೊಂದರಲ್ಲಿ ಸಾವನ್ನಪ್ಪಿದರು. ಅವರು ಅಲ್ಲಿನ ಏಸಿ ರಿಪೇರಿ ಯೂನಿಟ್‌ನಲ್ಲಿ ಟೆಕ್ನೀಷಿಯನ್ ಆಗಿ ಕೆಲಸ ಮಾಡುತ್ತಿದ್ದರು. ಬಲ: ಹರ್ಯಾಣದ ಸೋನಿಪತ್‌ನಲ್ಲಿ ಇರುವ ಅವರ ಮನೆಯ ಮುಂದೆ ನಿಂತಿರುವ ರಾಮ್ ಅವರ ಮಾವ ಮೋತಿಲಾಲ್


ಎಡ: ರಾಮ್ ಕಮಲ್ ಅವರ ಸಾವಿಗೆ ಸಂಬಂಧಿಸಿದ ದಾಖಲೆ ಮತ್ತು ಸಾಕ್ಷಿಗಳನ್ನು ತೆಗೆದಿಟ್ಟಿರುವ ಕಬೋರ್ಡು. ಬಲ: 2003ರಿಂದ ರಾಮ್ ಅವರು ತಮ್ಮ ಅತ್ತೆ ಮಾವನೊಂದಿಗೆ ಸೋನಿಪತ್‌ನ ಅವರ ಮನೆಯಲ್ಲಿಯೇ ವಾಸಿಸುತ್ತಿದ್ದರು
ಮೋತಿಲಾಲ್, ನೀಲಂ ಅವರ ಗಂಡ ಮತ್ತು ರಾಮ್ ಅವರಿಗೆ ಮಾವನಾಗಬೇಕು. ಅವರಿಗೆ ಅವರ ಹೆಂಡತಿ ಪೋನ್ ಮಾಡುವಾಗ ಕೆಲಸ ಮಾಡುತ್ತಿದ್ದರು. ಅವರು ರೋಹ್ಟಕ್, ಸಮ್ಚಾನದಲ್ಲಿ ಕಟ್ಟಡ ನಿರ್ಮಾಣದಲ್ಲಿ ಕೆಲಸ ಮಾಡುತ್ತಿದ್ದರು. ಸುಮಾರು ಅರ್ಧ ಗಂಟೆಯಲ್ಲಿ ತಮ್ಮ ಸ್ಕೂಟರಿನಲ್ಲಿ ಇಪ್ಪತ್ತು ಕಿಲೋಮೀಟರ್ ದೂರದಲ್ಲಿರುವ ಆಸ್ಪತ್ರೆಗೆ ನೇರವಾಗಿ ಬಂದರು.
“ಅವರು ಅವನನ್ನು ಪೋಸ್ಟ್‌ಮಾರ್ಟಮ್ ಮಾಡುವಲ್ಲಿ ಮಲಗಿಸಿದ್ದರು,” ಎಂದು ರಾಮ್ ಕಮಲ್ ಅವರ ತಾತ 75 ವರ್ಷ ಪ್ರಾಯದ ಶೋಭನಾಥ್ ಹೇಳುತ್ತಾರೆ. ರಾಮ್ ಅವರ ಅತ್ತೆ ನೀಲಂ ನೆನಪಿಸಿಕೊಳ್ಳುತ್ತಾರೆ: “ನಂಗೆ ಅವನನ್ನು ನೋಡಲೂ ಆಗುತ್ತಿರಲಿಲ್ಲ. ಅವನನ್ನು ಕಪ್ಪು ಬಟ್ಟೆಯಲ್ಲಿ ಸುತ್ತಿದ್ದರು. ನಾನು ಅವನನ್ನು ಕರೆಯುತ್ತಲೇ ಇದ್ದೆ,” ಎಂದು ಹೇಳುವಾಗ ಅವರ ಕಣ್ಣುಗಳು ತುಂಬಿದ್ದವು.
*****
ರಾಮ್ ಕಮಲ್‌ನನ್ನು ಅವರ ಹೆತ್ತವರಾದ ಗುಲಾಬ್ ಹಾಗೂ ಶೈಲಾ ಯಾದವ್ ಅತ್ತೆ ಮಾವನ ಬಳಿ ಕಳಿಸಿದರು. ಏಳು ವರ್ಷದವನಾಗಿದ್ದಾಗ ಮೋತಿಲಾಲ್ ಅವರು ರಾಮ್ ಅವರನ್ನು ಉತ್ತರ ಪ್ರದೇಶದ ಅಝಮಾರ್ಗ್ ಜಿಲ್ಲೆಯ ನಿಜಾಮ್‌ಬಾದ್ ತಹಷಿಲ್‌ನಲ್ಲಿರುವ ಅವರ ಮನೆಯಿಂದ ಕರೆತಂದರು. ”ನಾವೇ ಅವನನ್ನು ಸಾಕಿದ್ದು,” ಎಂದು ಮೋತಿಲಾಲ್ ಹೇಳುತ್ತಾರೆ.
ರಾಮ್ ಕಮಲ್ 2023 ರ ಜನವರಿಯಿಂದ ಆ ಫ್ಯಾಕ್ಟರಿಯಲ್ಲಿ ಕೆಲಸಮಾಡುತ್ತಿದ್ದರು. ತಿಂಗಳಿಗೆ 22,000 ರುಪಾಯಿ ಪಗಾರ ಸಿಗುತ್ತಿತ್ತು. ಅದರಲ್ಲಿ ಅರ್ಧ ಹಣವನ್ನು ತಮ್ಮ ಮನೆಗೆ ಕಳಿಸುತ್ತಿದ್ದರು. ಅವರ ಮನೆಯಲ್ಲಿ ಅವರ ಅಪ್ಪ, ಅಮ್ಮ, ಹೆಂಡತಿ ಹಾಗೂ ಎಂಟು ತಿಂಗಳ ಮಗಳು ಇದ್ದಾರೆ.
“ಅವನ ಮಗಳೇ ಅವನಿಗೆ ಎಲ್ಲಾ ಆಗಿದ್ದಳು, ಈಗ ಅವಳು ಏನು ಮಾಡಬೇಕು? ಕಂಪನಿಯವರು ಅವಳ ಬಗ್ಗೆ ಏನೂ ಕೇಳಲಿಲ್ಲ,” ಎಂದು ಶೋಭನಾಥ್ ಹೇಳುತ್ತಾರೆ. ಕಂಪನಿಯವರು ಇವರ ಕುಟುಂಬವನ್ನು ಇನ್ನೂ ಬೇಟಿ ಮಾಡಿಲ್ಲ.
!['If this tragedy took place at their home [the employers], what would they have done?' asks Shobhnath, Ram's grandfather.](/media/images/04a-5-NA.max-1400x1120.jpg)

'ಇಂತಹ ದುರಂತ ಅವರ ಮನೆಯಲ್ಲಿ (ಉದ್ಯೋಗ ನೀಡಿದವರ) ಆದರೆ, ಅವರು ಏನು ಮಾಡುತ್ತಾರೆ?' ಎಂದು ರಾಮ್ ಅವರ ಅಜ್ಜ ಶೋಭನಾಥ್ ಕೇಳುತ್ತಾರೆ. ಬಲ: ಜೊತೆಗೆ ಕೆಲಸ ಮಾಡುವವರು ರಾಮ್‌ಗೆ ಏನಾಯ್ತು ಎಂದು ನೀಲಂ ಅವರಿಗೆ ಹೇಳಿದರು
ಸಾಯುವ ಹಿಂದಿನ ರಾತ್ರಿ ರಾಮ್ ಮನೆಗೆ ಬಂದಿರಲಿಲ್ಲ ಎಂಬುದನ್ನು ನೀಲಂ ನೆನಪಿಸಿಕೊಳ್ಳುತ್ತಾರೆ, “ಕೆಲಸದಲ್ಲಿ ತುಂಬಾ ಬ್ಯುಸಿ ಇರುವುದಾಗಿ ಎಂದು ಅವನು ಹೇಳಿದ್ದ. ರಾಮ್ ಸೈಟಿನಲ್ಲಿ 24 ಗಂಟೆ ಕೆಲಸ ಮಾಡುತ್ತಿದ್ದ,” ಎಂದು ಹೇಳುತ್ತಾರೆ. ಮನೆಯವರಿಗೆ ಅವರು ಎಷ್ಟು ಹೊತ್ತು ಕೆಲಸ ಮಾಡುತ್ತಾರೆ ಎಂಬುದು ಗೊತ್ತಿರಲಿಲ್ಲ. ಕೆಲವು ದಿನ ಊಟವನ್ನೂ ಮಾಡುತ್ತಿರಲಿಲ್ಲ. ಕೆಲವೊಮ್ಮೆ ಕಂಪನಿಯ ಕೋಣೆಯೊಂದರಲ್ಲೇ ಮಲಗುತ್ತಿದ್ದರು. “ನಮ್ಮ ಮಗ ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಿದ್ದ,” ಎಂದು ನಗುತ್ತಾ ಮೋತಿಲಾಲ್ ಹೇಳುತ್ತಾರೆ. ಫ್ರೀ ಟೈಮಿನಲ್ಲಿ ರಾಮ್ ತಮ್ಮ ಮಗಳು ಕಾವ್ಯಾಳ ಜೊತೆಗೆ ವೀಡಿಯೋ ಕಾಲ್‌ನಲ್ಲಿ ಮಾತನಾಡುತ್ತಿದ್ದರು.
ಯಾವುದೇ ಸುರಕ್ಷತಾ ಸಾಧನಗಳಿಲ್ಲದೆ ರಾಮ್ ಕೂಲಿಂಗ್ ಪೈಪ್‌ಲೈನ್ ರಿಪೇರಿ ಮಾಡುತ್ತಿದ್ದ ಬಗ್ಗೆ ಅವರ ಕುಟುಂಬಕ್ಕೆ ತಿಳಿದದ್ದು ಅವರ ಜೊತೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವವ ಇತರರಿಂದ. “ಅವನು ಎಸಿ-ಪೈಪ್ ಮತ್ತು ಪ್ಲಯರ್ ಜೊತೆ ಆ ಏರಿಯಾಗೆ ಹೋಗುವಾಗ ಚಪ್ಪಲಿಯನ್ನೂ ಧರಿಸಿರಲಿಲ್ಲ ಮತ್ತು ಕೈಗಳು ಒದ್ದೆಯಾಗಿದ್ದವು. ಕಂಪನಿ ಮ್ಯಾನೇಜರ್ ಎಚ್ಚರಿಕೆ ನೀಡಿದ್ದರೆ ನಮ್ಮ ಮಗ ಇವತ್ತು ಬದುಕಿರುತ್ತಿದ್ದ,” ಎಂದು ಅವರ ಮಾ ಮೋತಿಲಾಲ್ ಹೇಳುತ್ತಾರೆ.
ಮಗನ ಮರಣದ ಸುದ್ದಿ ತಿಳಿಯುತ್ತಿದ್ದಂತ, ರಾಮ್ ಅವರ ತಂದೆ ಗುಲಾಬ್ ಯಾದವ್ ಮಗನ ಅಂತಿಮ ಸಂಸ್ಕಾರ ಮಾಡಲು ಸೋನಿಪತ್‌ಗೆ ಬಂದರು. ಕೆಲವು ದಿನಗಳ ನಂತರ ಕಂಪನಿಯ ನಿರ್ಲಕ್ಷ್ಯತೆಯ ವಿರುದ್ಧ ದೂರು ಕೊಡಲು ಹರ್ಯಾಣದ ರಾಯ್ ಪೊಲೀಸ್ ಸ್ಟೇಷನ್‌ಗೆ ಹೋದರು. ಈ ಕೇಸ್‌ನಲ್ಲಿ ಕೆಲಸ ಮಾಡುತ್ತಿದ್ದ ತನಿಖಾಧಿಕಾರಿ ಸುಮಿತ್ ಕುಮಾರ್ ರಾಮ್ ಅವರ ತಮ್ಮ ಜೊತಗೆ ಸೆಟಲ್‌ಮೆಂಟ್ ಮಾತುಕತೆಗೆ ಇಳಿದರು ಎಂದು ಮನೆಯವರು ಹೇಳುತ್ತಾರೆ.
“ಒಂದು ಲಕ್ಷ ರುಪಾಯಿಗೆ ಸೆಟಲ್‌ಮೆಂಟ್ ಮಾಡಿಕೊಳ್ಳಲು ಪೊಲೀಸರು ಹೇಳಿದರು. ಈಗ ಕೋರ್ಟ್‌ನಿಂದ ಮಾತ್ರ ನ್ಯಾಯ ಸಿಗಲು ಸಾಧ್ಯ,” ಎಂದು ಮೋತಿಲಾಲ್ ಹೇಳುತ್ತಾರೆ.

ಸೋನಿಪತ್‌ನ ರಾಯ್ ಸ್ಟೇಷನ್‌ನ ಪೊಲೀಸರು ರಾಮ್ ಅವರ ಮನೆಯವರ ಜೊತೆಗೆ ಸೆಟಲ್‌ಮೆಂಟ್ ಮಾಡಿಕೊಳ್ಳಲು ಹೇಳಿದರು
ಕಳೆದೆರಡು ದಶಕಗಳಲ್ಲಿ ಕೈಗಾರಿಕೆಗಳ ಹಬ್ ಆಗಿ ಬೆಳೆದಿರುವ ಸೋನಿಪತ್‌ನ ಫ್ಯಾಕ್ಟರಿಗಳಲ್ಲಿ ಕೆಲಸಗಾರರು ಅಸಹಜವಾಗಿ ಸಾಯುತ್ತಿರುವುದು ಸಾಮಾನ್ಯವಾಗಿ ಹೋಗಿದೆ. ಇಲ್ಲಿ ಕೆಲಸ ಮಾಡುವ ಅನೇಕ ಕಾರ್ಮಿಕರು ಉತ್ತರ ಪ್ರದೇಶ, ಬಿಹಾರ ಹಾಗೂ ದೆಹಲಿಯಿಂದ ವಲಸೆ ಬಂದವರು
ಪೋಲೀಸರು ತನ್ನ ಜೊತೆಗೆ ರಾಜಿ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂಬುದು ಎಂದು ಮೋತಿಲಾಲ್ ಅವರ ಗಮನಕ್ಕೆ ಬಂದ ಹಾಗೇ, ಘಟನೆ ನಡೆದ ಒಂದು ತಿಂಗಳ ನಂತರ ಅವರು ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲು ನಿರ್ಧರಿಸಿದರು. ರಾಮ್ ಕುಟುಂಬದ ಪರ ರಾಯ್‌ನ ಕಾರ್ಮಿಕ ನ್ಯಾಯಾಲಯದಲ್ಲಿ ವಾದಿಸುತ್ತಿರುವ ವಕೀಲ ಸಂದೀಪ್ ದಹಿಯಾ ಅವರು ಬರೀ ಪೇಪರ್ ವರ್ಕಿಗೇ 10,000 ರುಪಾಯಿ ತೆಗೆದುಕೊಳ್ಳುತ್ತಿದ್ದಾರೆ. ಇಡೀ ಕುಟುಂಬದ ತಿಂಗಳ ಆದಾಯ ಇರುವುದೇ ಸುಮಾರು 35,000 ರುಪಾಯಿ. ಹೀಗಿರುವಾಗ ಇಷ್ಟು ದೊಡ್ಡ ಮೊತ್ತವನ್ನು ಪಾವತಿಸಲು ಸಾಧ್ಯವಿಲ್ಲ. "ನಮಗೆ ಬೇರೆ ಯಾವುದೇ ದಾರಿಯಿಲ್ಲ, ಆದರೆ ನಾವು ಕೋರ್ಟಿನಲ್ಲಿ ಎಷ್ಟು ರೌಂಡ್ ತೆಗೆದುಕೊಳ್ಳಬೇಕು ಎಂಬುದು ನನಗೆ ಗೊತ್ತಿಲ್ಲ," ಎಂದು ಸದ್ಯ ಕುಟುಂಬದಲ್ಲಿ ದುಡಿದು ಆದಾಯ ತರುತ್ತಿರುವ ಮೋತಿಲಾಲ್ ಹೇಳುತ್ತಾರೆ.
ತಮ್ಮ ಮನೆಯಿಂದ ಸುಮಾರು 10 ಕಿಲೋ ಮೀಟರ್ ದೂರದಲ್ಲಿರುವ ಕಾರ್ಖಾನೆಗೆ ಹೋಗಲು ರಾಮ್ ಬಳಸುತ್ತಿದ್ದ ಸ್ಕೂಟಿ ಬೈಕನ್ನು ಮರಳಿ ಗುಲಾಬ್ ಮತ್ತು ಮೋತಿಲಾಲ್ ಅವರಿಗೆ ನೀಡಲು ಪೊಲೀಸ್ ಅಧಿಕಾರಿಗೆ ಸಾಧ್ಯವಾಗಲಿಲ್ಲ. ಬೈಕನ್ನು ಮರಳಿ ಕೇಳಲು ಕಂಪನಿಗೆ ಭೇಟಿ ನೀಡುವ ಮೊದಲು ಮೋತಿಲಾಲ್ ಪೊಲೀಸ್ ಠಾಣೆಗೆ ಕರೆ ಮಾಡಿದ್ದರು. ಸೈಟಿನ ಸೂಪರ್‌ವೈಸರ್ ಜೊತೆಗೆ ಮಾತನಾಡುವಂತೆ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು. ಆದರೂ, ಸೂಪರ್‌ವೈಸರ್ ಮೋತಿಲಾಲ್ ಅವರ ಮನವಿಯನ್ನು ತಿರಸ್ಕರಿಸಿದರು: “ನಾನು ಬೈಕನ್ನು ಕೇಳು ಹೋದಾಗ ಸೂಪರ್‌ವೈಸರ್ ನಾವು ಯಾಕೆ ಸೆಟಲ್‌ಮೆಂಟ್ ಮಾಡಿಕೊಳ್ಳಲಿಲ್ಲ, ಕೇಸು ಯಾಕೆ ಕೊಟ್ಟದ್ದು ಎಂದು ಕೇಳಿದರು.”
ರಾಮ್‌ನ ವರ್ಕರ್ ಐಡಿ ಕಾರ್ಡ್ ಎಲ್ಲಿದೆ ಎಂಬುದೂ ಮೋತಿಲಾಲ್‌ಗೂ ತಿಳಿದಿಲ್ಲ. “ಎಫ್‌ಐಆರ್‌ನಲ್ಲಿ ಅವನನ್ನು ಗುತ್ತಿಗೆ ಕೆಲಸಗಾರ ಎಂದು ಕರೆಯಲಾಗಿದೆ. ಆದರೆ ಅವನಿಗೆ ಸಿಗುವ ಸಂಬಳ ಮುಖ್ಯ ಕಂಪನಿಯಿಂದ ಬರುತ್ತದೆ. ಅವನಿಗೆ ಉದ್ಯೋಗ ಐಡಿಯನ್ನೂ ಕೊಡಲಾಗಿದೆ, ಆದರೆ ಅವರು ಅದನ್ನು ಇನ್ನೂ ನಮಗೆ ಕೊಟ್ಟಿಲ್ಲ. ಕಂಪನಿಯು ಯಾವುದೇ ಸಿಸಿಟಿವಿ ದೃಶ್ಯಾವಳಿಗಳನ್ನು ನಮಗೆ ತೋರಿಸಿಲ್ಲ,” ಎಂದು ಅವರು ಹೇಳುತ್ತಾರೆ.
“ಇದು ಹುಡುಗನ ನಿರ್ಲಕ್ಷ್ಯದ ಕಾರಣದಿಂದ ಆಗಿದೆ. ಅವನು ಆಗಲೇ ಎಸಿ ರಿಪೇರಿ ಮಾಡಿದ್ದ… ಹಾಗಾಗಿ ಅವನ ಕೈ ಮತ್ತು ಕಾಲುಗಳು ಒದ್ದೆಯಾಗಿದ್ದವು, ಇದರಿಂದ ವಿದ್ಯುತ್ ಶಾಕ್ ಆಗಿದೆ,” ಎಂದು ಹೇಳಿರುವ ಸೂಪರ್‌ವೈಸರ್ ತಮ್ಮ ಬೇಜವಾಬ್ದಾರಿಯನ್ನು ತಳ್ಳಿಹಾಕಿದ್ದಾರೆ.


ಎಡ: ರಾಮ್ ಕಮಲ್ ಅವರ ಪೋಸ್ಟ್‌ಮಾರ್ಟಮ್ ವರದಿಯಲ್ಲಿ ಅವರ ಎಡಗೈಯ ಬೆರಳಿನಲ್ಲಿ ಗಾಯವಾಗಿರುವುದನ್ನು ಉಲ್ಲೇಖಿಸಿದೆ, ಆದರೆ ಮನೆಯವರಿಗೆ ಈ ವರದಿಯ ಬಗ್ಗೆ ಸಂಶಯವಿದೆ. ಬಲ: ಅಮರ್ ಉಜಾಲಾ ಪತ್ರಿಕೆಯಲ್ಲಿ ರಾಮ್ ಅವರ ಸಾವಿನ ಬಗ್ಗೆ ಬಂದಿರುವ ವರದಿ
ಪೋಸ್ಟ್‌ಮಾರ್ಟಮ್ ವರದಿಯು ಕಮಲ್ ಅವರ "ಎಡ ಕಿರುಬೆರಳಿನ ಡೋರ್ಸೊಲೇಟರಲ್ ಅಂಶದ ಮೇಲೆ ವಿದ್ಯುತ್ ಪ್ರವೇಶ ಆಗಿರುವ ಗಾಯವಿದೆ" ಎಂದು ಹೇಳುತ್ತದೆ. ಆದರೂ ಮನೆಯವರು ಇದನ್ನು ನಿಜವೆಂದು ನಂಬುವುದಿಲ್ಲ. ರಾಮ್ ಬಲಗೈ ಬಳಸುತ್ತಿದ್ದರು ಎಂದು ಹೇಳುವ ನೀಲಂ, “ವಿದ್ಯುತ್ ಆಘಾತವಾದರೆ ಸುಟ್ಟ ಗುರುತುಗಳಾಗುತ್ತವೆ, ಅವರ ಮುಖವು ಕಪ್ಪಾಗುತ್ತದೆ. ಅವನದು ಎಲ್ಲವೂ ಸರಿ ಇತ್ತು,” ಎಂದು ಹೇಳುತ್ತಾರೆ.
ಕಳೆದೆರಡು ದಶಕಗಳಲ್ಲಿ ಕೈಗಾರಿಕೆಗಳ ಹಬ್ ಆಗಿ ಬೆಳೆದಿರುವ ಸೋನಿಪತ್‌ನ ಫ್ಯಾಕ್ಟರಿಗಳಲ್ಲಿ ಕೆಲಸಗಾರರು ಅಸಹಜವಾಗಿ ಸಾಯುತ್ತಿರುವುದು ಸಾಮಾನ್ಯ ಸಂಗತಿಯಾಗಿ ಹೋಗಿದೆ. ಇಲ್ಲಿ ಕೆಲಸ ಮಾಡುವ ಅನೇಕ ಕಾರ್ಮಿಕರು ಉತ್ತರ ಪ್ರದೇಶ, ಬಿಹಾರ ಹಾಗೂ ದೆಹಲಿಯಿಂದ ವಲಸೆ ಬಂದವರು (ಜನಗಣತಿ 2011). ಪ್ರತಿ ತಿಂಗಳು ಹತ್ತಿರದ ಕಾರ್ಖಾನೆಗಳಲ್ಲಿ ಕನಿಷ್ಠ ಐದು ಕಾರ್ಮಿಕರಾದರೂ ಗಾಯಗೊಳ್ಳುವ ಪ್ರಕರಣಗಳನ್ನು ನೋಡುತ್ತೇವೆ ಎಂದು ಪೊಲೀಸರು ಹೇಳುತ್ತಾರೆ. “ಬೇರೆ ಪ್ರಕರಣಗಳಲ್ಲಿ, ಉದ್ಯೋಗಿಗಳು ಗಾಯಗೊಂಡಾಗ, ಪ್ರಕರಣವು ಪೊಲೀಸ್ ಠಾಣೆಯ ಮೆಟ್ಟಿಲ ತನಕ ಬರುವುದಿಲ್ಲ. ಅದಕ್ಕೆ ಮುನ್ನವೇ ರಾಜಿ ಮಾಡಿಕೊಳ್ಳಲಾಗುತ್ತದೆ, ”ಎಂದು ಅವರು ಹೇಳುತ್ತಾರೆ.
ರಾಮ್ ಸಾವಿನ ಈ ಪ್ರಕರಣ ಈಗ ನ್ಯಾಯಾಲಯದಲ್ಲಿದೆ, ಸೂಕ್ತ ಮಾರ್ಗದಲ್ಲಿ ರಾಜಿ ಮಾಡಿಕೊಳ್ಳಲು ಎಲ್ಲಾ ಅವಕಾಶವಿದೆ ಎಂದು ದಹಿಯಾ ಹೇಳುತ್ತಾರೆ. “ಎಷ್ಟೋ ಜನರು ಸಾಯುತ್ತಾರೆ, ಅವರನ್ನೆಲ್ಲಾ ಯಾರು ಕೇಳುತ್ತಾರೆ? ಇದು ಐಪಿಸಿ 304ರ ಪ್ರಕರಣವಾಗಿದ್ದು, ಬಾಲಕಿಯ ಭವಿಷ್ಯಕ್ಕಾಗಿ ಹೋರಾಟ ನಡೆಸುತ್ತೇನೆ,'' ಎಂದು ಹೇಳುತ್ತಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304 “ಕೊಲೆಯಲ್ಲದ ನರಹತ್ಯೆಯ" ಪ್ರಕರಣಗಳಿಗೆ ಸಂಬಂಧಿಸಿದೆ.
ಆರ್ಥಿಕ ಮತ್ತು ಭಾವನಾತ್ಮಕ ಸಂಕಟದ ಹೊರತಾಗಿಯೂ, ರಾಮ್ ಅವರ ಕುಟುಂಬ ಇನ್ನೂ ಅಚಲವಾಗಿ ನಿಂತಿದೆ. ಶೋಭನಾಥ್, “ಈ ದುರಂತ ಅವರ ಮನೆಯಲ್ಲಿ [ಉದ್ಯೋಗ ನೀಡಿದವರ] ನಡೆದಿದ್ದರೆ, ಅವರು ಏನು ಮಾಡುತ್ತಿದ್ದರು? ನಾವು ಅದನ್ನೇ ಮಾಡುತ್ತಿದ್ದೇವೆ,” ಎಂದು ಹೇಳುತ್ತಾರೆ "ಜೋ ಗಯಾ ವೋ ತೋ ವಾಪಿಸ್ ನಾ ಆಯೇಗಾ. ಪರ್ ಪೈಸಾ ಚಾಹೆ ಕಮ್ ದೇ, ಹಮೇ ನ್ಯಾಯ್ ಮಿಲ್ನಾ ಚಾಹಿಯೇ [ಹೋದವರು ಮತ್ತೆ ಬರುವುದಿಲ್ಲ. ಅವರು ಎನೇ ಪರಿಹಾರ ನೀಡದಿದ್ದರೂ, ನಮಗೆ ಬೇಕಾಗಿರುವುದು ನ್ಯಾಯ ಮಾತ್ರ],” ಎಂದು ಹೇಳುತ್ತಾರೆ.
ಅನುವಾದ: ಚರಣ್ ಐವರ್ನಾಡು