ಬಾತುಕೋಳಿ ಗರಿಗಳು ನಬಾ ಕುಮಾರ್ ಮೈಟಿಯವರ ಕಾರ್ಖಾನದ (ವರ್ಕ್‌ಶಾಪ್) ಅಲ್ಲಲ್ಲಿ ಹರಡಿಕೊಂಡಿವೆ. ಸ್ವಚ್ಛವಾದ ಗರಿಗಳು, ಕೊಳಕು ಗರಿಗಳು, ಟ್ರಿಮ್ ಮಾಡಿದ ಗರಿಗಳು ಮತ್ತು ವಿವಿಧ ಆಕಾರಗಳ ಗರಿಗಳು ಮತ್ತು ಬಿಳಿಬಣ್ಣದ ಗರಿಗಳು, ಹೀಗೆ ಎಲ್ಲವೂ ಅಲ್ಲಿವೆ. ತೆರೆದ ಕಿಟಕಿಗಳ ಮೂಲಕ ಬರುವ ಗಾಳಿಗೆ ಗರಿಗಳು ಮೆತ್ತಗೆ ಹಾರುತ್ತವೆ, ಗಾಳಿಯಲ್ಲಿ ಸುತ್ತುತ್ತಾ ಬೀಳುತ್ತವೆ.
ಉಲುಬೇರಿಯಾದಲ್ಲಿರುವ ನಬಾ ಕುಮಾರ್ ಅವರ ಮೂರು ಅಂತಸ್ತಿನ ಮನೆಯ ನೆಲ ಮಹಡಿಯಲ್ಲಿ ನಾವಿದ್ದೇವೆ. ವರ್ಕ್‌ಶಾಪ್ ಒಳಗೆ ಬೀಸುವ ಗಾಳಿಯ ತುಂಬೆಲ್ಲಾ ಕತ್ತರಿಯಿಂದ ತುಂಡು ಮಾಡುವ ಮತ್ತು ಕಬ್ಬಿಣದ ಕತ್ತರಿಗಳಿಂದ ಕತ್ತರಿಸುವ ಶಬ್ದ ತುಂಬಿದೆ. ಇಲ್ಲಿ ಭಾರತದ ಬ್ಯಾಡ್ಮಿಂಟನ್ ಶಟಲ್ ಕಾಕ್ಗಳನ್ನು ತಯಾರಿಸಲಾಗುತ್ತದೆ. "ಬಿಳಿ ಬಾತುಕೋಳಿ ಗರಿಗಳು, ಸಿಂಥೆಟಿಕ್ ಅಥವಾ ಮರದ ಅರ್ಧಗೋಳದ ಕಾರ್ಕ್ ಬೇಸ್, ಹತ್ತಿ ದಾರ ಮತ್ತು ಅಂಟಿನ ಜೊತೆ ನೈಲಾನ್ ಮಿಶ್ರಣವನ್ನು ಬಳಸಿ ಶಟಲನ್ನು ತಯಾರಿಸಲಾಗುತ್ತದೆ," ಎಂದು ಸಾಗಿಸಲು ಸಿದ್ಧವಾಗಿರುವ ಬ್ಯಾರೆಲ್‌ನಿಂದ ಕಾಕ್ ಒಂದನ್ನು ತೆಗೆದುಕೊಂಡು ಅವರು ಹೇಳುತ್ತಾರೆ.
ಅದು 2023ರ ಅಗಸ್ಟ್ ತಿಂಗಳ ಕೊನೆಯ ಬಿಸಿಲಿನ ಆರ್ದ್ರತೆಯ ಸೋಮವಾರ ಬೆಳಿಗ್ಗೆ 8 ಗಂಟೆ. ಐದು ವಾರಗಳ ನಂತರ ಭಾರತೀಯ ಶಟ್ಲರ್‌ಗಳು ದಕ್ಷಿಣ ಕೊರಿಯನ್ನರನ್ನು 21-18; 21-16 ರಿಂದ ಸೋಲಿಸಿ ದೇಶದ ಮೊದಲ ಏಷ್ಯನ್ ಚಿನ್ನವನ್ನು ಗೆಲ್ಲುತ್ತಾರೆ ಎಂಬುದು ನಮಗೆ ತಿಳಿದಿರಲಿಲ್ಲ.
ಉಲುಬೇರಿಯಾದ ಪ್ರೊಡಕ್ಷನ್ ಯೂನಿಟ್‌ನ ಬಾಗಿಲಲ್ಲಿ ಈಗಾಗಲೇ ಕರಿಗಾರರ (ಕುಶಲಕರ್ಮಿಗಳು) ಚಪ್ಪಲಿಗಳು ಮತ್ತು ಸೈಕಲ್‌ಗಳು ಸಾಲಾಗಿ ನಿಂತಿದ್ದವು. ಇಸ್ತ್ರಿ ಮಾಡಿದ, ಫುಲ್ ತೋಳಿನ ಮೆರೂನ್ ಶರ್ಟ್ ಮತ್ತು ಫಾರ್ಮಲ್ ಪ್ಯಾಂಟ್ ಧರಿಸಿರುವ ನಬಾ ಕುಮಾರ್ ಆ ದಿನದ ಕೆಲಸಕ್ಕೆ ಸಿದ್ಧವಾಗುತ್ತಿದ್ದರು.
"ನಾನು ನನ್ನ ಹಳ್ಳಿಯಲ್ಲಿರುವ ಬನಿಬನ್‌ನ ಕಾರ್ಖಾನಾದಲ್ಲಿ 12 ವರ್ಷದವನಾಗಿದ್ದಾಗ ಹ್ಯಾನ್ಸ್-ಎರ್ ಪಾಲಕ್ [ಡಕ್‌ಗಳ ಗರಿಗಳಿಂದ] ಬ್ಯಾಡ್ಮಿಂಟನ್ ಬಾಲ್‌ಗಳನ್ನು ತಯಾರಿಸಲು ಶುರು ಮಾಡಿದೆ," ಎಂದು ಗರಿಗಳಿಗೆ ಶೇಪ್ ನೀಡುವ ಕೆಲಸದ ಮೂಲಕ ಈ ಉದ್ಯಮದಲ್ಲಿ ತನ್ನ ಪಯಣವನ್ನು ಪ್ರಾರಂಭಿಸಿದ 61 ವರ್ಷ ವಯಸ್ಸಿ ನಬ್ ಕುಮಾರ್ ಹೇಳುತ್ತಾರೆ. ಕೈಯಲ್ಲಿ ಹಿಡಿದ ಕಬ್ಬಿಣದ ಕತ್ತರಿಗಳನ್ನು ಬಳಸಿ ಮೂರು ಇಂಚು ಉದ್ದದ ಗರಿಗಳನ್ನು ಕತ್ತರಿಸಿ ಆಕಾರ ನೀಡುತ್ತಿದ್ದರು. ಕರಿಗಾರರು ಶಟಲ್ ಕಾಕ್‌ಗಳನ್ನು 'ಬಾಲ್‌ಗಳು' ಎಂದು ಕರೆಯುತ್ತಾರೆ.
"ಬಂಗಾಳದ ಮೊದಲ ಕಾಕ್ ಕಾರ್ಖಾನೆ ಜೆ. ಬೋಸ್ ಆಂಡ್ ಕಂಪನಿ 1920ರ ದಶಕದಲ್ಲಿ ಪೀರ್ಪುರ್ ಗ್ರಾಮದಲ್ಲಿ ಆರಂಭವಾಯಿತು. ಕ್ರಮೇಣ ಜೆ.ಬೋಸ್‌ನ ಕೆಲಸಗಾರರು ಹತ್ತಿರದ ಹಳ್ಳಿಗಳಲ್ಲಿ ತಮ್ಮದೇ ಆದ ಘಟಕಗಳನ್ನು ತೆರೆದರು. ಅಂತಹ ಒಂದು ಘಟಕದಲ್ಲಿ ನಾನು ಈ ಕೌಶಲವನ್ನು ಕಲಿತಿದ್ದು,” ಎಂದು ಅವರು ಹೇಳುತ್ತಾರೆ.


ನಬಾ ಕುಮಾರ್ ಅವರು ಹೌರಾ ಜಿಲ್ಲೆಯ ಜದುರ್ಬೇರಿಯಾ ಪಕ್ಕವೇ ಶಟಲ್ ಕಾಕ್‌ಗಳನ್ನು ತಯಾರಿಸುವ ವರ್ಕ್‌ಶಾಪನ್ನು ಹೊಂದಿದ್ದಾರೆ. 3 ಇಂಚುಗಳಷ್ಟು ಅಂತರದಲ್ಲಿ ಬೋಲ್ಟ್ ಮಾಡಿದ ಕಬ್ಬಿಣದ ಕತ್ತರಿಗಳನ್ನು ಬಳಸಿ ಗರಿಗಳನ್ನು ಹೇಗೆ ಕತ್ತರಿಸುತ್ತಾರೆ ಎಂಬುದನ್ನು ಅವರು ತೋರಿಸುತ್ತಾರೆ. ಶಟಲ್‌ಗಳನ್ನು ಬಿಳಿ ಬಾತುಕೋಳಿ ಗರಿಗಳು, ಸಿಂಥೆಟಿಕ್ ಅಥವಾ ಮರದ ಅರ್ಧಗೋಳದ ಕಾರ್ಕ್ ಬೇಸ್, ಹತ್ತಿ ದಾರ ಮತ್ತು ಅಂಟಿನ ಜೊತೆ ಅದ್ದಿದ ನೈಲಾನ್ ಬಳಸಿ ತಯಾರಿಸಲಾಗುತ್ತದೆ
1986ರಲ್ಲಿ, ನಬಾ ಕುಮಾರ್ ಅವರು ಉಲುಬೇರಿಯಾದ ಬನಿಬನ್ ಗ್ರಾಮದಲ್ಲಿ ಮನೆಯ ಜೊತೆಗೆ ತಮ್ಮದೇ ಆದ ಯೂನಿಟ್ ಒಂದನ್ನು ಪ್ರಾರಂಭಿಸಿದರು. ನಂತರ, 1997ರಲ್ಲಿ ಜದುರ್ಬೇರಿಯಾದ ಪಕ್ಕದಲ್ಲಿಯೇ ಈಗ ಇರುವ ಕಾರ್ಖಾನಾ-ಮನೆಯನ್ನು ಕಟ್ಟಿ, ಇಲ್ಲಿಗೆ ತಮ್ಮ ಘಟಕವನ್ನು ಸ್ಥಳಾಂತರಿಸಿದರು. ಇಲ್ಲಿ ಅವರು ಉತ್ಪಾದನೆಯನ್ನು ನೋಡಿಕೊಳ್ಳುವುದು ಕಚ್ಚಾ ವಸ್ತುಗಳ ಪೂರೈಕೆಯನ್ನು ನಿರ್ವಹಿಸುವುದು ಮತ್ತು ಮಾರಾಟಕ್ಕೆ ಸಿದ್ದಪಡಿಸುವುದು, ಮಾತ್ರವಲ್ಲ, ಗರಿಗಳನ್ನು ವಿಂಗಡಿಸುವ ಕೆಲಸವನ್ನು ಸಹ ಮಾಡುತ್ತಾರೆ.
ಬನಿಬನ್ ಜಗದೀಶ್‌ಪುರ್, ಬೃಂದಾಬಾನ್‌ಪುರ್, ಉತ್ತರ ಪಿರ್‌ಪುರ್ ಮತ್ತು ಬನಿಬನ್, ಮತ್ತು ಹೌರಾ ಜಿಲ್ಲೆಯ ಉಲುಬೇರಿಯಾ ಮುನ್ಸಿಪಾಲಿಟಿ ಮತ್ತು ಔಟ್‌ಗ್ರೋತ್ ಏರಿಯಾಗಳಲ್ಲಿ ತಯಾರಿಸಲಾಗುವ ಮೂರು ಪ್ರಮುಖ ಉತ್ಪನ್ನಗಳಲ್ಲಿ ಶಟಲ್ ಕಾಕ್‌ಗಳು ಸರಕುಗಳೂ ಸೇರಿವೆ. (ಜನಗಣತಿ 2011)
"2000 ರ ದಶಕದ ಆರಂಭದಲ್ಲಿ ಉಲುಬೇರಿಯಾದಲ್ಲಿ ಸುಮಾರು 100 ಘಟಕಗಳು ಇದ್ದವು, ಆದರೆ ಇಂದು 50 ಕ್ಕಿಂತಲೂ ಕಡಿಮೆ ಘಟಕಗಳು ಮಾತ್ರ ಉಳಿದುಕೊಂಡಿವೆ. ಅವುಗಳಲ್ಲಿ 10–12 ಕರಿಗಾರರಿರುವ ನನ್ನ ಕಾರ್ಖಾನೆಯಂತ ಸುಮಾರು 10 ಘಟಕಗಳಿವೆ” ಎಂದು ನಬಾ ಕುಮಾರ್ ಹೇಳುತ್ತಾರೆ.
*****
ನಬಾ ಕುಮಾರರ ಕಾರ್ಖಾನದ ಮುಂಭಾಗದಲ್ಲಿ ಸಿಮೆಂಟಿನ ಅಂಗಳವಿದೆ; ಒಂದು ಕೈ ಪಂಪ್, ಉನಾನ್ (ತೆರೆದ ಜೇಡಿಮಣ್ಣಿನ ಇಟ್ಟಿಗೆ ಒಲೆ) ಮತ್ತು ನೆಲಕ್ಕೆ ಜೋಡಿಸಲಾದ ಎರಡು ಮಡಕೆಗಳು ಅಲ್ಲಿವೆ. "ಇದನ್ನು ಗರಿಗಳನ್ನು ತೊಳೆಯಲು ಈ ವ್ಯವಸ್ಥೆ ಮಾಡಲಾಗಿದೆ, ಇದು ಶಟಲ್ ತಯಾರಿಸುವ ಮೊದಲ ಹಂತ" ಎಂದು ಅವರು ಹೇಳುತ್ತಾರೆ.
ಇಲ್ಲಿ ಕೆಲಸ ಮಾಡುವ ಕರಿಗಾರ್ ರಂಜಿತ್ ಮಂಡಲ್ 10,000 ಬಾತುಕೋಳಿ ಗರಿಗಳ ಬ್ಯಾಚನ್ನು ಸಿದ್ಧಪಡಿಸುತ್ತಾರೆ. 32 ವರ್ಷ ವಯಸ್ಸಿನ ರಂಚಿತ್, “ಗರಿಗಳ ಪೂರೈಕೆ ಮಾಡುವವರು ಉತ್ತರ ಬಂಗಾಳದ ಕೂಚ್ ಬೆಹಾರ್, ಮುರ್ಷಿದಾಬಾದ್ ಮತ್ತು ಮಾಲ್ಡಾ ಹಾಗೂ ಮಧ್ಯ ಬಂಗಾಳದ ಬಿರ್ಭೂಮ್‌ನಲ್ಲಿ ವಾಸಿಸುತ್ತಾರೆ. ಕೆಲವು ಸ್ಥಳೀಯ ವ್ಯಾಪಾರಿಗಳೂ ಇದ್ದಾರೆ, ಆದರೆ ಅವರು ಹೇಳುವ ಬೆಲೆ ದುಬಾರಿ,” ಎಂದು ಹೇಳುತ್ತಾರೆ. ಇವರು15 ವರ್ಷಗಳಿಂದ ಕಾರ್ಖಾನೆಯಲ್ಲಿ ಇವರು ಕೆಲಸ ಮಾಡುತ್ತಿದ್ದು, ಉತ್ಪಾದನಾ ಮೇಲ್ವಿಚಾರಕರಾಗಿದ್ದಾರೆ.
ಗರಿಗಳನ್ನು 1,000 ಸಂಖ್ಯೆಯ ಕಟ್ಟುಗಳಲ್ಲಿ ಮಾರಾಟ ಮಾಡಲಾಗುತ್ತದೆ. ಅವುಗಳ ಗುಣಮಟ್ಟಕ್ಕೆ ಅನುಗುಣವಾಗಿ ಬೆಲೆಗಳೂ ಬದಲಾಗುತ್ತವೆ. “ಉತ್ತಮ ಗುಣಮಟ್ಟದ ಗರಿಗಳ ಬೆಲೆ ಇಂದು 1,200 ರುಪಾಯಿಗೂ ಹಚ್ಚು, ಅಂದರೆ ಒಂದು ಗರಿಗೆ ಒಂದು ರೂಪಾಯಿ 20 ಪೈಸೆಯಿರುತ್ತದೆ,” ಎಂದು ರಂಜಿತ್ ಪಾತ್ರೆಯಲ್ಲಿರುವ ಬೆಚ್ಚಗಿನ ನೀರಿನಲ್ಲಿ ತೊಳೆಯಲು ನೆನೆಸಿದ ಒಂದು ಹಿಡಿ ಗರಿಗಳನ್ನು ಆರಿಸುತ್ತಾ ಹೇಳುತ್ತಾರೆ.

ರಂಜಿತ್ ಮಂಡಲ್ ಅವರು ಶಟಲ್ ಕಾಕ್ ತಯಾರಿಕೆಯ ಮೊದಲ ಹಂತವಾದ ಬಿಳಿ ಬಾತುಕೋಳಿ ಗರಿಗಳನ್ನು ತೊಳೆಯುತ್ತಿರುವುದು


ರಂಜಿತ್ ಬೆಚ್ಚಗಿನ ಸಾಬೂನು ನೀರಿನಲ್ಲಿ ಗರಿಗಳ ಕಟ್ಟುಗಳನ್ನು ಉಜ್ಜುತ್ತಾರೆ. 'ಶಟಲ್‌ಗಳ ಮೇಲಿನ ಗರಿಗಳು ಅಚ್ಚ ಬಿಳಿ ಬಣ್ಣದಲ್ಲಿರಬೇಕು' ಎಂದು ಅವರು ಹೇಳುತ್ತಾರೆ. ಟೆರೇಸ್‌ನಲ್ಲಿ ಕಪ್ಪು ಬಣ್ಣದ ಟಾರ್ಪಾಲಿನ್ ಹಾಳೆಯನ್ನು ಹಾಸಿ ತೊಳೆದ ಗರಿಗಳನ್ನು ಸಮವಾಗಿ ಹರಡುತ್ತಾರೆ. ಒಣಗಿದ ನಂತರ ಅವು ಶಟಲ್ ಕಾಕ್‌ಗಳನ್ನು ತಯಾರಿಸಲು ಸಿದ್ಧವಾಗುತ್ತವೆ
ಅವರು ಸರ್ಫ್ ಎಕ್ಸೆಲ್ ಡಿಟರ್ಜೆಂಟ್ ಪೌಡರನ್ನು ಮಧ್ಯಮ ಗಾತ್ರದ ಡೆಗ್ಚಿ (ಮಡಿಕೆ) ನಲ್ಲಿ ನೀರಿನೊಂದಿಗೆ ಬೆರೆಸುತ್ತಾರೆ. ನಂತರ ಕಟ್ಟಿಗೆ ಉರಿಸಿ ಒಲೆಯ ಮೇಲೆ ಬಿಸಿ ಮಾಡುತ್ತಾರೆ. “ಶಟಲ್‌ಗಳ ಮೇಲಿನ ಗರಿಗಳು ಅಚ್ಚ ಬಿಳಿ ಬಣ್ಣದಲ್ಲಿರಬೇಕು. ಬಿಸಿಯಾದ ಸೋಪಿನ ನೀರಿನಲ್ಲಿ ಅವುಗಳನ್ನು ತೊಳೆಯುವುದರಿಂದ ಎಲ್ಲಾ ಕೊಳಕುಗಳೂ ಹೋಗುತ್ತವೆ. ಅವುಗಳನ್ನು ಹೆಚ್ಚು ಕಾಲ ಸಂಗ್ರಹಿಸಲಾಗುವುದಿಲ್ಲ, ಏಕೆಂದರೆ ಕೊಳೆಯಲು ಶುರುವಾಗುತ್ತವೆ,"ಎಂದು ಅವರು ಹೇಳುತ್ತಾರೆ.
ಗರಿಗಳನ್ನು ಉಜ್ಜಿದ ನಂತರ ಪ್ರತಿ ಕಟ್ಟನ್ನೂ ಓರೆಯಾದ ಬಿದಿರಿನ ಬುಟ್ಟಿಯ ಮೇಲೆ ಅಂದವಾಗಿ ಜೋಡಿಸುತ್ತಾರೆ. ಸಾಬೂನಿನ ನೀರು ಚೆಲ್ಲಿ, ಅಂಗಳದಲ್ಲಿರುವ ಇನ್ನೊಂದು ಪಾತ್ರೆಗೆ ಹಾಕಿ ಕೊನೆಯ ಬಾರಿಗೆ ನೆನೆಸುತ್ತಾರೆ. "ತೊಳೆಯುವ ಈ ಕೆಲಸ ಎರಡು ಗಂಟೆಗಳ ಕಾಲ ನಡೆಯುತ್ತದೆ" ಎಂದು ರಂಜಿತ್ ಅವರು 10,000 ಗರಿಗಳ ಬುಟ್ಟಿಯನ್ನು ಬಿಸಿಲಿನಲ್ಲಿ ಒಣಗಿಸಲು ತಾರಸಿಗೆ ತೆಗೆದುಕೊಂಡು ಹೋಗುವಾಗ ಹೇಳುತ್ತಾರೆ.
"ಹೆಚ್ಚಿನ ಗರಿಗಳು ಮಾಂಸಕ್ಕಾಗಿ ಬಾತುಕೋಳಿಗಳನ್ನು ಕೊಲ್ಲುವವರಿಂದ ಮತ್ತು ಸಾಕಣೆ ಮಾಡುವವರಿಂದ ಕೊಳ್ಳಲಾಗುತ್ತದೆ. ಆದರೆ ಗ್ರಾಮದ ಹಲವಾರು ಮನೆಗಳು ತಾವು ಸಾಕಿರುವ ಬಾತುಕೋಳಿಗಳು ಉದುರಿಸಿದ ಗರಿಗಳನ್ನು ಸಂಗ್ರಹಿಸಿ ವ್ಯಾಪಾರಿಗಳಿಗೆ ಮಾರಾಟ ಮಾಡುತ್ತವೆ,” ಎಂದು ಅವರು ಹೇಳುತ್ತಾರೆ.
ಟೆರೇಸ್‌ನ ಮೇಲೆ ರಂಜಿತ್ ಕಪ್ಪು ಬಣ್ಣದ ಚೌಕಾಕಾರದ ಟಾರ್ಪಾಲಿನ್ ಹಾಳೆಯನ್ನು ಹಾಸಿ, ಅದು ಹಾರದಂತೆ ಅದರ ಅಂಚುಗಳಲ್ಲಿ ಇಟ್ಟಿಗೆಗಳ ತುಂಡುಗಳನ್ನು ಇಡುತ್ತಾರೆ. ಹಾಳೆಯ ಉದ್ದಕ್ಕೂ ಗರಿಗಳನ್ನು ಸಮವಾಗಿ ಹರಡುತ್ತಾರೆ. "ಸೂರ್ಯನ ಬಿಸಿಲು ತುಂಬಾ ಖಾರವಾಗಿದೆ ಇಂದು. ಗರಿಗಳು ಒಂದು ಗಂಟೆಯಲ್ಲಿ ಒಣಗುತ್ತವೆ. ಆಮೇಲೆ ಬ್ಯಾಡ್ಮಿಂಟನ್ ಬಾಲ್‌ಗಳನ್ನು ತಯಾರಿಸಲು ಸಿದ್ಧವಾಗುತ್ತವೆ,” ಎನ್ನುತ್ತಾರೆ.
ಗರಿಗಳು ಒಣಗಿದ ನಂತರ ಅವುಗಳನ್ನು ಪ್ರತ್ಯೇಕವಾಗಿ ಪರಿಶೀಲಿಸಲಾಗುತ್ತದೆ. "ಬಾತುಕೋಳಿಯ ಎಡ ಅಥವಾ ಬಲ ರೆಕ್ಕೆಯ ಮತ್ತು ಅವು ಮೂಲತಃ ಬಂದ ರೆಕ್ಕೆಯ ಭಾಗವನ್ನು ಆಧರಿಸಿ ನಾವು ಅವುಗಳನ್ನು ಒಂದರಿಂದ ಆರು ಗ್ರೇಡ್‌ಗಳನ್ನಾಗಿ ವಿಂಗಡಿಸುತ್ತೇವೆ. ಪ್ರತಿ ರೆಕ್ಕೆಯಿಂದ ಐದಾರು ಗರಿಗಳು ಮಾತ್ರ ನಮ್ಮ ಬಳಕೆಗೆ ಸಿಗುತ್ತವೆ,” ಎಂದು ರಂಜಿತ್ ಹೇಳುತ್ತಾರೆ.
"ಒಂದು ಶಟಲನ್ನು 16 ಗರಿಗಳಿಂದ ಮಾಡಲಾಗುತ್ತದೆ. ಇವೆಲ್ಲವೂ ಒಂದೇ ರೆಕ್ಕೆಯ ಗರಿಗಳಾಗಿರಬೇಕು ಮತ್ತು ಒಂದೇ ರೀತಿಯ ಶಾಫ್ಟ್ (ಹಕ್ಕಿಯ ಗರಿಕಾಂಡ) ಸಾಮರ್ಥ್ಯ, ಎರಡೂ ಬದಿಗಳಲ್ಲಿ ವೇನ್‌ಗಳ (ಫಲಕಗಳ) ದಪ್ಪ ಮತ್ತು ಬಾಗುವಿಕೆಯನ್ನು ಹೊಂದಿರಬೇಕು. ಇಲ್ಲದಿದ್ದರೆ ಅದು ಗಾಳಿಯಲ್ಲಿ ಕಂಪಿಸುತ್ತದೆ," ಎಂದು ನಬಾ ಕುಮಾರ್ ಹೇಳುತ್ತಾರೆ.
“ಸಾಮಾನ್ಯರಿಗೆ ಎಲ್ಲಾ ಗರಿಗಳು ಒಂದೇ ರೀತಿ ಕಾಣುತ್ತವೆ. ಆದರೆ ಸ್ಪರ್ಶದ ಮೂಲಕ ನಾವು ವ್ಯತ್ಯಾಸವನ್ನು ತಿಳಿಯಬಹುದು,” ಎನ್ನುತ್ತಾರೆ.


ಎಡ: ಶಂಕರ್ ಬೇರಾ ಒಂದರಿಂದ ಆರನೇ ಗ್ರೇಡ್‌ನ ವರೆಗೆ ಗರಿಗಳನ್ನು ವಿಂಗಡಿಸುತ್ತಿದ್ದಾರೆ. ಒಂದು ಶಟಲ್ 16 ಗರಿಗಳಿಂದ ಮಾಡಲ್ಪಟ್ಟಿದೆ. ಇವೆಲ್ಲವೂ ಬಾತುಕೋಳಿಗಳ ಒಂದೇ ರೆಕ್ಕೆಯ ಗರಿಗಳಾಗಿರಬೇಕು. ಒಂದೇ ರೀತಿಯ ಶಾಫ್ಟ್ ಸಾಮರ್ಥ್ಯ, ವೇನ್‌ಗಳ ದಪ್ಪ ಮತ್ತು ಕರ್ವೇಚರನ್ನು ಹೊಂದಿರಬೇಕು. ಬಲ: ಎರಡು ಶಟಲ್‌ಗಳನ್ನು ಹಿಡಿದಿರುವ ಸಂಜಿಬ್ ಬೋಡಕ್. ಅವರ ಎಡಗೈಯಲ್ಲಿರುವ ಕಾಕ್ ಬಾತುಕೋಳಿಗಳ ಎಡ ರೆಕ್ಕೆಯ ಗರಿಗಳಿಂದಲೂ, ಬಲಗೈಯಲ್ಲಿ ಬಲ ರೆಕ್ಕೆಯ ಗರಿಗಳಿಂದಲೂ ಮಾಡಲ್ಪಟ್ಟಿವೆ
ಇಲ್ಲಿ ತಯಾರಾಗುವ ಶಟಲ್ ಕಾಕ್‌ಗಳನ್ನು ಹೆಚ್ಚಾಗಿ ಕೋಲ್ಕತ್ತಾದ ಸ್ಥಳೀಯ ಬ್ಯಾಡ್ಮಿಂಟನ್ ಕ್ಲಬ್‌ಗಳಿಗೆ ಮತ್ತು ಪಶ್ಚಿಮ ಬಂಗಾಳ, ಮಿಜೋರಾಂ, ನಾಗಾಲ್ಯಾಂಡ್ ಮತ್ತು ಪಾಂಡಿಚೇರಿಯ ಸಗಟು ವ್ಯಾಪಾರಿಗಳಿಗೆ ಮಾರಾಟ ಮಾಡಲಾಗುತ್ತದೆ. "ಉನ್ನತ ಮಟ್ಟದ ಪಂದ್ಯಗಳಿಗೆ ಬಳಕೆಯಾಗುವ ಶಟಲ್‌ಗಳನ್ನು ಹೆಬ್ಬಾತುಗಳ ಗರಿಗಳನ್ನು ಬಳಸಿ ಜಪಾನಿನ ಕಂಪನಿ ಯೋನೆಕ್ಸ್ ತಯಾರಿಸುತ್ತದೆ. ಇಂದು ಇದು ಸಂಪೂರ್ಣ ಮಾರುಕಟ್ಟೆಯನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ. ನಾವು ಆ ಮಟ್ಟದಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ," ನಬಾ ಕುಮಾರ್ ಹೇಳುತ್ತಾರೆ, "ನಮ್ಮ ಶಟಲ್ ಕಾಕ್‌ಗಳನ್ನು ಕೆಳ ಮಟ್ಟದಲ್ಲಿ ಆಟಗಳಲ್ಲಿ, ಇಲ್ಲವೇ ಅಭ್ಯಾಸ ಮಾಡುವವರು ಬಳಸುತ್ತಾರೆ," ಎನ್ನುತ್ತಾರೆ.
ಭಾರತವು ಚೀನಾ, ಹಾಂಗ್ ಕಾಂಗ್, ಜಪಾನ್, ಸಿಂಗಾಪುರ, ತೈವಾನ್ ಮತ್ತು ಯುಕೆಯಿಂದ ಶಟಲ್ ಕಾಕ್‌ಗಳನ್ನು ಆಮದು ಮಾಡಿಕೊಳ್ಳುತ್ತದೆ. ಏಪ್ರಿಲ್ 2019 ರಿಂದ ಮಾರ್ಚ್ 2021 ರವರೆಗೆ 122 ಕೋಟಿ ರುಪಾಯಿ ಮೌಲ್ಯದ ಶಟಲ್ ಕಾಕ್‌ಗಳನ್ನು ಆಮದು ಮಾಡಿಕೊಳ್ಳಲಾಗಿದೆ ಎಂದು ಭಾರತ ಸರ್ಕಾರದ ವಾಣಿಜ್ಯ ಗುಪ್ತಚರ ಮತ್ತು ಅಂಕಿಅಂಶಗಳ ಮಹಾನಿರ್ದೇಶನಾಲಯದ ವರದಿ ಹೇಳಿದೆ. "ಆಟವನ್ನು ಹೆಚ್ಚಾಗಿ ಒಳಾಂಗಣದಲ್ಲಿ ಆಡುವುದರಿಂದ ಚಳಿಗಾಲದಲ್ಲಿ ಬೇಡಿಕೆ ಹೆಚ್ಚಾಗುತ್ತದೆ" ಎಂದು ನಬಾ ಕುಮಾರ್ ಹೇಳುತ್ತಾರೆ. ಅವರ ಘಟಕದಲ್ಲಿ ಉತ್ಪಾದನೆಯು ವರ್ಷಪೂರ್ತಿ ನಡೆದರೂ, ಸೆಪ್ಟೆಂಬರ್‌ನಿಂದ ಗಮನಾರ್ಹವಾಗಿ ಹೆಚ್ಚಾಗುತ್ತದೆ.
*****
ಎರಡು ಕೋಣೆಗಳಲ್ಲಿ ಮ್ಯಾಟ್ ಹಾಸಲಾದ ನೆಲದ ಮೇಲೆ ಕಾಲು ಚಾಚಿ ಕುಳಿತು ಕರಿಗಾರರು ಕೆಲಸ ಮಾಡುತ್ತಿದ್ದಾರೆ. ಅವರು ಕಾಕ್ ತಯಾರಿಸುವ ವಿವಿಧ ಹಂತಗಳ ಕೆಲಸಗಳನ್ನು ಮಾಡುತ್ತಾರೆ. ಅವರ ಚತುರ ಕೈಬೆರಳುಗಳು ಮತ್ತು ಸ್ಥಿರವಾದ ನೋಟವು ಗಾಳಿ ಬೀಸಿದಾಗ ಗರಿಗಳು ಮೇಲಕ್ಕೆದ್ದು ಹಾರಿದಾಗ ಮಾತ್ರ ಒಮ್ಮೆ ಕೆಲಸ ನಿಲ್ಲಿಸುತ್ತವೆ.
ಪ್ರತಿದಿನ ಬೆಳಿಗ್ಗೆ, ನಬಾ ಕುಮಾರ್ ಅವರ 51 ವರ್ಷ ವಯಸ್ಸಿನ ಪತ್ನಿ ಕೃಷ್ಣ ಮೈಟಿಯವರು ತಮ್ಮ ಬೆಳಗಿನ ಪ್ರಾರ್ಥನೆ ಪೂಜೆಗಳನ್ನು ಮಾಡುವಾಗ ಮೆಟ್ಟಿಲುಗಳನ್ನು ಇಳಿದು ಕೆಳಗೆ ಕಾರ್ಖಾನಕ್ಕೆ ಬರುತ್ತಾರೆ. ಮೌನವಾಗಿ ಜಪಿಸುತ್ತಾ ಎರಡು ಕೋಣೆಗಳ ಬೇರೆ ಬೇರೆ ಭಾಗಗಳಲ್ಲಿ ಧೂಪ ಹಚ್ಚಿ ಗಾಳಿಯ ತುಂಬೆಲ್ಲಾ ಪರಿಮಳವನ್ನು ತುಂಬುತ್ತಾರೆ.
ಕೋಣೆಯಲ್ಲಿ ಈ ಘಟಕದಲ್ಲಿ ಒಂದು ವರ್ಷದಿಂದ ಕೆಲಸ ಮಾಡುತ್ತಿರುವ 63 ವರ್ಷದ ಶಂಕರ್ ಬೇರಾರಿಂದ ಶಟಲ್ ತಯಾರಿಕೆಯ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ. ಅವರು ಒಮ್ಮೆಗೆ ಒಂದು ಗರಿಯನ್ನು ತೆಗೆದುಕೊಂಡು ಅದನ್ನು ಮೂರು ಇಂಚುಗಳಷ್ಟು ಬೋಲ್ಟ್ ಮಾಡಿದ ಕಬ್ಬಿಣದ ಕತ್ತರಿಗಳ ನಡುವೆ ಇಡುತ್ತಾರೆ. "ಸರಿಸುಮಾರು ಆರರಿಂದ ಹತ್ತು ಇಂಚುಗಳಿರುವ ಗರಿಗಳನ್ನು ಏಕರೂಪದಲ್ಲಿ ಉದ್ದಕ್ಕೆ ಕತ್ತರಿಸಬೇಕು," ಎಂದು ಅವರು ಹೇಳುತ್ತಾರೆ.


ಎಡ: ಕರಿಗಾರರು ತುಂಬಾ ಮುಖ್ಯವಾದ ಕೆಲಸವನ್ನು ಮಾಡುತ್ತಿರುವುದು. ಬಲ: 'ಸರಿಸುಮಾರು ಆರರಿಂದ ಹತ್ತು ಇಂಚು ಉದ್ದವಿರುವ ಗರಿಗಳನ್ನು ಏಕರೂಪದಲ್ಲಿ ಉದ್ದಕ್ಕೆ ಕತ್ತರಿಸಬೇಕು' ಎಂದು ಶಂಕರ್ ಬೇರಾ ಹೇಳುತ್ತಾರೆ
"ಗರಿಗಳ ಕೋಲಿನ ಮಧ್ಯ ಭಾಗವು ತುಂಬಾ ಗಟ್ಟಿಯಾಗಿರುತ್ತದೆ. ಅದನ್ನು ಟ್ರಿಮ್ ಮಾಡಲಾಗಿದೆ. ಇಂತಹ 16 ಭಾಗಗಳಿಂದ ಶಟಲ್ ಆಗುತ್ತದೆ," ಎಂದು ಶಂಕರ್ ಅವುಗಳನ್ನು ಕತ್ತರಿಸಿ ಸಣ್ಣ ಪ್ಲಾಸ್ಟಿಕ್ ಬುಟ್ಟಿಗಳಲ್ಲಿ ಹಾಕುತ್ತಾ ವಿವರಿಸುತ್ತಾರೆ. ನಂತರ ಅದನ್ನು ನಾಲ್ಕು ಕರಿಗಾರರು ಕೆಲಸ ಮಾಡುವ ಎರಡನೇ ಹಂತಕ್ಕೆ ರವಾನಿಸಲಾಗುತ್ತದೆ.
ಪ್ರಹ್ಲಾದ್ ಪಾಲ್, 35, ಮೊಂಟು ಪಾರ್ಥ, 42, ಭಬಾನಿ ಅಧಿಕಾರಿ, 50 ಮತ್ತು ಲಿಖಾನ್ ಮಾಝಿ, 60 ಮೂರು ಇಂಚಿನ ಗರಿಗಳನ್ನು ಬೇಕಾದ ಆಕಾರಕ್ಕೆ ಕತ್ತರಿಸುವ ಎರಡನೇ ಹಂತದ ಕೆಲಸವನ್ನು ಮಾಡುತ್ತಾರೆ. ಅವರು ತಮ್ಮ ತೊಡೆಯಲ್ಲಿ ಇಟ್ಟಿರುವ ಮರದ ತಟ್ಟೆಯಲ್ಲಿ ಗರಿಗಳನ್ನು ಇಡುತ್ತಾರೆ.
"ಶಾಫ್ಟ್‌ನ ಕೆಳಗಿನ ಭಾಗವನ್ನು ಸಂಪೂರ್ಣವಾಗಿ ತೆಗೆಯಲಾಗುತ್ತದೆ. ಮೇಲಿನ ಭಾಗವನ್ನು ಶಾಫ್ಟ್‌ನ ಒಂದು ಬದಿಯಲ್ಲಿ ಬಾಗಿದ ಅಂಚಿಗೆ ಮತ್ತು ಇನ್ನೊಂದು ಬದಿಯಲ್ಲಿ ನೇರವಾದ ಅಂಚಿಗೆ ಕತ್ತರಿಸಲಾಗುತ್ತದೆ," ಎಂದು ಪ್ರಹ್ಲಾದ್ ಒಂದು ಜೋಡಿ ಹ್ಯಾಂಡ್‌ಹೆಲ್ಡ್ ಕಬ್ಬಿಣದ ಕತ್ತರಿಗಳನ್ನು ಬಳಸಿ ವಿವರಿಸುತ್ತಾರೆ. ಒಂದು ಗರಿಗೆ ಈ ವಿನ್ಯಾಸ ನೀಡಲು ಅವರು ಸುಮಾರು ಆರು ಸೆಕೆಂಡುಗಳನ್ನು ತೆಗೆದುಕೊಳ್ಳುತ್ತಾರೆ. ಗರಿಗಳನ್ನು ಕತ್ತರಿಸುವವರು ಮತ್ತು ಆಕಾರ ಮಾಡುವವರು ಪ್ರತಿ 1000 ಗರಿಗಳಿಗೆ 155 ರುಪಾಯಿ ಸಂಪಾದಿಸುತ್ತಾರೆ, ಅಂದರೆ ಪ್ರತಿ ಶಟಲ್ ಕಾಕ್‌ಗೆ 2:45 ರುಪಾಯಿ ಪಡೆಯುತ್ತಾರೆ.
“ಗರಿಗಳು ತೂಕವಿಲ್ಲದಿರಬಹುದು, ಆದರೆ ಅವುಗಳ ದಂಡಗಳು ಗಟ್ಟಿಯಾಗಿರುತ್ತವೆ. ಪ್ರತಿ 10-15 ದಿನಗಳಿಗೊಮ್ಮೆ ನಾವು ಬಳಸುವ ಕತ್ತರಿಗಳನ್ನು ಹರಿತಗೊಳಿಸಲು ಸ್ಥಳೀಯ ಕಮ್ಮಾರರ ಬಳಿಗೆ ಹೋಗಬೇಕು,” ಎಂದು ನಬಾ ಕುಮಾರ್ ಹೇಳುತ್ತಾರೆ.


ಎಡಕ್ಕೆ : ಟ್ರಿಮ್ ಮಾಡಿದ ಗರಿಗಳನ್ನು ಶೇಪ್ ನೀಡುವ ಕೆಲಸಗಾರರಿಗೆ ಕೊಡಲಾಗುತ್ತದೆ. ಬಲ: ಪ್ರಹ್ಲಾದ್ ಪಾಲ್ ಅವರು ಕೈಯಲ್ಲಿ ಹಿಡಿಯುವ ಕಬ್ಬಿಣದ ಕತ್ತರಿಗಳೊಂದಿಗೆ ಗರಿಗಳನ್ನು ಕತ್ತರಿಸುತ್ತಿರುವುದು


ಮೋಂತು ಪಾರ್ಥ (ಎಡ) ಜೊತೆಗೆ ಭಬಾನಿ ಅಧಿಕಾರಿ ಮತ್ತು ಲಿಖಾನ್ ಮಾಝಿ (ಬಲ) ಟ್ರಿಮ್ ಮಾಡಿದ ಗರಿಗಳಿಗೆ ಶೇಪ್ ನೀಡುತ್ತಿರುವುದು
ಈ ಮಧ್ಯೆ 47 ವರ್ಷದ ಸಂಜಿಬ್ ಬೋಡಾಕ್ ಅವರು ಇಡೀ ಉತ್ಪಾದನಾ ಪ್ರಕ್ರಿಯೆಯಲ್ಲಿ ಬಳಸುವ ಏಕೈಕ ಕರಚಾಲಿತ ಯಂತ್ರವನ್ನು ಬಳಸಿ ಅರ್ಧಗೋಳದ ಕಾರ್ಕ್ ಬೇಸ್‌ಗಳನ್ನು ಕೊರೆಯುತ್ತಾರೆ. ತನ್ನ ಕೈಯ ಸ್ಥಿರತೆ ಮತ್ತು ಆಪ್ಟಿಕಲ್ ನಿಖರತೆಯನ್ನು ಅವಲಂಬಿಸಿ ಅವರು ಪ್ರತಿ ಬೇಸ್‌ಗೆ 16 ಸಮಾನ ದೂರದಲ್ಲಿ ರಂಧ್ರಗಳನ್ನು ಕೊರೆಯುತ್ತಾರೆ. ಅವರು ಕೊರೆಯುವ ಪ್ರತೀ ಕಾರ್ಕ್‌ಗೆ 3.20 ರುಪಾಯಿ ಪಡೆಯುತ್ತಾರೆ.
“ಎರಡು ವಿಧದ ಕಾರ್ಕ್ ಬೇಸ್‌ಗಳಿವೆ. ನಾವು ಸಿಂಥೆಟಿಕ್ ಕಾರ್ಕನ್ನು ಮೀರತ್ ಮತ್ತು ಜಲಂಧರ್‌ನಿಂದಲೂ, ನೈಸರ್ಗಿಕವಾದದನ್ನು ಚೀನಾದಿಂದ ತರಿಸುತ್ತೇವೆ,” ಎಂದು ಸಂಜೀಬ್ ಹೇಳುತ್ತಾರೆ. "ನೈಸರ್ಗಿಕ ಕಾರ್ಕನ್ನು ಉತ್ತಮ ಗುಣಮಟ್ಟದ ಗರಿಗಳಿಗೆ ಬಳಸುತ್ತೇವೆ," ಎನ್ನುತ್ತಾರೆ ಅವರು. ಗುಣಮಟ್ಟದಲ್ಲಿನ ವ್ಯತ್ಯಾಸವು ಅವುಗಳ ಬೆಲೆಯಲ್ಲಿ ಸ್ಪಷ್ಟವಾಗಿ ಕಂಡುಬರುತ್ತದೆ. "ಸಿಂಥೆಟಿಕ್ ಕಾರ್ಕ್‌ಗಳ ಬೆಲೆ ಸುಮಾರು ಒಂದು ರೂಪಾಯಿಯಾದರೆ, ನೈಸರ್ಗಿಕವಾಗಿ ತಯಾರಿಸಿದ ಒಂದು ಕಾರ್ಕ್‌ಗೆ ಸುಮಾರು ಐದು ರೂಪಾಯಿ," ಎಂದು ಸಂಜೀಬ್ ಹೇಳುತ್ತಾರೆ.
ಕಾರ್ಕ್ ಬೇಸ್‌ಗಳನ್ನು ಕೊರೆದ ನಂತರ ಆಕಾರ ನೀಡಲಾಗಿರುವ ಗರಿಗಳ ಜೊತೆಗೆ ಅವುಗಳನ್ನು ಹಿರಿಯ ಗ್ರಾಫ್ಟಿಂಗ್ ಪರಿಣಿತರಾದ 52 ವರ್ಷ ಪ್ರಾಯದ ತಪಸ್ ಪಂಡಿತ್, ಮತ್ತು 60 ವರ್ಷ ಪ್ರಾಯದ ಶ್ಯಾಮಸುಂದರ್ ಘೋರೋಯ್‌ಯವರಿಗೆ ರವಾನಿಸಲಾಗುತ್ತದೆ. ಅವರು ಆಕಾರ ನೀಡಲಾಗಿರುವ ಗರಿಗಳನ್ನು ಕಾರ್ಕ್ ರಂಧ್ರಗಳಲ್ಲಿ ತೂರಿಸುವ ಅತ್ಯಂತ ಪ್ರಮುಖ ಕೆಲಸವನ್ನು ಮಾಡುತ್ತಾರೆ.
ಪ್ರತಿ ಗರಿಯ ಮೇಲ್ಭಾಗವನ್ನು ಹಿಡಿದುಕೊಂಡು ಅದರ ಕೆಳಭಾಗಕ್ಕೆ ಸ್ವಲ್ಪ ನೈಸರ್ಗಿಕ ಅಂಟುಗಳನ್ನು ಸವರುತ್ತಾರೆ ಮತ್ತು ಅವುಗಳನ್ನು ಒಂದರ ನಂತರ ಒಂದು ರಂಧ್ರಕ್ಕೆ ಸೇರಿಸುತ್ತಾರೆ. “ಪ್ರತಿಯೊಂದು ಗರಿಯ ಕೆಲಸವೂ ವೈಜ್ಞಾನಿಕವಾದದ್ದು. ಯಾವುದೇ ಹಂತದಲ್ಲಿ ಏನಾದರೂ ತಪ್ಪಾದರೆ, ಶಟಲ್‌ನ ಹಾರಾಟ, ತಿರುಗುವಿಕೆ ಮತ್ತು ಹಾರುವ ದಿಕ್ಕಿನ ಮೇಲೆ ಪರಿಣಾಮ ಬೀರುತ್ತದೆ,” ಎಂದು ನಬಾ ಕುಮಾರ್ ವಿವರಿಸುತ್ತಾರೆ.
“ಗರಿಗಳು ಒಂದು ನಿರ್ದಿಷ್ಟ ಕೋನದಲ್ಲಿ ಒಂದರಮೇಲೊಂದು ಸಮಾನವಾಗಿ ಓವರ್‌ಲ್ಯಾಪ್ ಆಗಬೇಕು. ಈ ಜೋಡಣೆಯನ್ನು ಶೊನ್ನಾ [ಟ್ವೀಜರ್] ಬಳಸಿ ಮಾಡಲಾಗುತ್ತದೆ,” ಎಂದು ತಪಸ್ ಅವರು 30 ವರ್ಷಗಳ ತಮ್ಮ ಪರಿಪೂರ್ಣ ಪರಿಣತಿಯನ್ನು ತೋರಿಸುತ್ತಾ ಹೇಳುತ್ತಾರೆ. ಅವರ ಮತ್ತು ಶ್ಯಾಮಸುಂದರ್ ಅವರಿಗೆ ಅವರು ತುಂಬುವ ಶಟಲ್ ಬ್ಯಾರೆಲ್‌ಗಳ ಸಂಖ್ಯೆಯ ಆಧಾರದಲ್ಲಿ ವೇತನ ನೀಡಲಾಗುತ್ತದೆ. ಒಂದು ಬ್ಯಾರೆಲ್‌ನಲ್ಲಿ 10 ತುಂಡುಗಳಿರುತ್ತವೆ. ಅವರು ಪ್ರತಿ ಬ್ಯಾರೆಲ್‌ಗೆ 15 ರುಪಾಯಿ ಪಡೆಯುತ್ತಾರೆ.


ಎಡ: ಇದು ಇಡೀ ಪ್ರಕ್ರಿಯೆಯಲ್ಲಿ ಕೈಯಿಂದ ನಿರ್ವಹಿಸುವ ಏಕೈಕ ಕೊರೆಯುವ ಯಂತ್ರ. ರೆಡಿಮೇಡ್ ಕಾರ್ಕ್ ಬೇಸ್‌ಗಳಲ್ಲಿ 16 ರಂಧ್ರಗಳನ್ನು ಮಾಡಲು ಸಂಜೀಬ್ ಇದನ್ನು ಬಳಸುತ್ತಾರೆ. ಬಲ: ಬಿಳಿ ಕಾರ್ಕ್ ಬೇಸ್‌ಗಳು ಸಿಂಥೆಟಿಕ್ ಮತ್ತು ಸ್ವಲ್ಪ ಕಂದು ಬಣ್ಣದವು ನೈಸರ್ಗಿಕವಾಗಿ ತಯಾರಿಸಲ್ಪಟ್ಟ ಕಾರ್ಕ್‌ಗಳು


ಗ್ರಾಫ್ಟಿಂಗ್ ಪರಿಣತರಾದ ತಪಸ್ ಪಂಡಿತ್ ಪ್ರತಿ ಗರಿಯ ಕ್ವಿಲ್‌ನಿಂದ ಹಿಡಿದು ಕೆಳಭಾಗಕ್ಕೆ ಸ್ವಲ್ಪ ನೈಸರ್ಗಿಕ ಅಂಟುಗಳನ್ನು ಸವರುತ್ತಾರೆ. ಶೊನ್ನಾ (ಟ್ವೀಜರ್) ಅನ್ನು ಬಳಸಿ ಅವರು ಪ್ರತಿ ಗರಿಯನ್ನು ಒಂದೊಂದಾಗಿ ಕೊರೆಯಲಾದ ರಂಧ್ರಗಳಲ್ಲಿ ತೂರಿಸಿ ಓವರ್‌ಲ್ಯಾಪ್ ಮಾಡುತ್ತಾರೆ
ಗರಿಗಳನ್ನು ಕಾರ್ಕ್ ಮೇಲೆ ತೂರಿಸಿದ ನಂತರ ಶಟಲ್‌ಗೆ ಅದರ ಪ್ರಾಥಮಿಕ ಆಕಾರ ಬರುತ್ತದೆ. ಥ್ರೆಡ್ ಬೈಂಡಿಂಗ್‌ನ ಮೊದಲ ಪದರ ಕಟ್ಟಲು ಶಟಲ್‌ಗಳನ್ನು 42 ವರ್ಷದ ಪ್ರಾಯದ ತಾರಖ್ ಕೋಯಲ್‌ರವರಿಗೆ ನೀಡಲಾಗುತ್ತದೆ. “ಈ ನೂಲುಗಳನ್ನು ಸ್ಥಳೀಯರಿಂದ ಖರೀದಿಸಲಾಗಿದೆ. ಹತ್ತಿಯೊಂದಿಗೆ ನೈಲಾನ್ ಮಿಶ್ರಣವು ಇರುವುದರಿಂದ ಇವು ಹೆಚ್ಚು ಗಟ್ಟಿ ಇರುತ್ತವೆ,” ಎಂದು ಒಂದು ಕೈಯಲ್ಲಿ ಹತ್ತು ಇಂಚು ಉದ್ದದ ದಾರವನ್ನು ಗಂಟು ಹಾಕಿದ ಅದರ ತುದಿಗಳನ್ನು ಮತ್ತು ಇನ್ನೊಂದು ಕೈಯಲ್ಲಿ ಕಾರ್ಕ್-ಫೆದರ್ ಕಾಂಬೊವನ್ನು ಹಿಡಿದು ತಾರಖ್ ವಿವರಿಸುತ್ತಾರೆ.
ಒಂದರ ಮೇಲೊಂದು ಇರುವ 16 ಗರಿಗಳನ್ನು ಒಟ್ಟಿಗೆ ಕಟ್ಟಲು ಅವರು ಕೇವಲ 35 ಸೆಕೆಂಡುಗಳನ್ನು ತೆಗೆದುಕೊಳ್ಳುತ್ತಾರೆ. "ಪ್ರತಿ ಗರಿಗಳ ಕೋಲನ್ನು ಗಂಟುಗಳಿಂದ ಹಿಡಿದಿಡಲು ನೂಲನ್ನು ಬಳಸಲಾಗುತ್ತದೆ. ನಂತರ ಶಾಫ್ಟ್‌ಗಳ ನಡುವೆ ಬಿಗಿಯಾಗಿ ನೇಯ್ದ ಡಬಲ್ ಟ್ವಿಸ್ಟ್‌ಗಳನ್ನು ಹಾಕಲಾಗುತ್ತದೆ," ಎಂದು ತಾರಖ್ ವಿವರಿಸುತ್ತಾರೆ.
ಅವರ ಮಣಿಕಟ್ಟುಗಳು ಎಷ್ಟು ವೇಗವಾಗಿ ಚಲಿಸುತ್ತವೆ ಎಂದರೆ ಅವು ಬಹುತೇಕ ಮಸುಕಾಗುತ್ತವೆ. 16 ಗಂಟುಗಳು ಮತ್ತು 32 ಟ್ವಿಸ್ಟ್‌ಗಳು ತಾರಖ್ ಕೊನೆಯಲ್ಲಿ ಗಂಟು ಕಟ್ಟಿ, ಹೆಚ್ಚಿನ ದಾರವನ್ನು ಕತ್ತರಿಗಳಿಂದ ಟ್ರಿಮ್ ಮಾಡಿದ ಮೇಲೆ ಮಾತ್ರ ಕಾಣಬಹುದು. ಅವರು ಕಟ್ಟುವ ಪ್ರತಿ 10 ಶಟಲ್‌ಗಳಿಗೆ 11ರುಪಾಯಿ ತೆಗೆದುಕೊಳ್ಳುತ್ತಾರೆ.
50 ವರ್ಷದ ಪ್ರಭಾಶ್ ಶ್ಯಾಶ್ಮಲ್ ಪ್ರತಿ ಶಟಲ್ ಕಾಕ್ ಮತ್ತು ಅದರ ಗರಿಗಳ ಜೋಡಣೆ ಹಾಗೂ ಥ್ರೆಡ್ ಪ್ಲೇಸ್‌ಮೆಂಟನ್ನು ಕೊನೆಯ ಬಾರಿ ಪರಿಶೀಲಿಸುತ್ತಾರೆ. ಅಗತ್ಯವಿರುವಲ್ಲಿ ಅವುಗಳನ್ನು ಸರಿಪಡಿಸಿ ಬ್ಯಾರೆಲ್‌ಗಳಿಗೆ ಶಟಲ್‌ಗಳನ್ನು ತುಂಬುತ್ತಾರೆ. ನಂತರ ಅವುಗಳನ್ನು ಮತ್ತೆ ಸಂಜಿಬ್‌ಗೆ ರವಾನಿಸುತ್ತಾರೆ. ಅವರು ಶಟಲ್‌ನ ಬಲವನ್ನು ಹೆಚ್ಚಿಸಲು ಶಾಫ್ಟ್ ಮತ್ತು ಥ್ರೆಡ್‌ಗಳ ಮೇಲೆ ಸಿಂಥೆಟಿಕ್ ರಾಳ ಮತ್ತು ಹಾರ್ಡನರ್ ಮಿಶ್ರಣವನ್ನು ಹಚ್ಚುತ್ತಾರೆ.


ಎಡಕ್ಕೆ: ಗರಿಗಳನ್ನು ಕಾರ್ಕ್ ಬೇಸ್‌ಗಳ ಮೇಲೆ ಕೂರಿಸಿದ ನಂತರ ಶಟಲ್ ತನ್ನ ಪ್ರಾಥಮಿಕ ಆಕಾರವನ್ನು ಪಡೆಯುತ್ತದೆ. ನಂತರ ತಾರಖ್ ಕೋಯಲ್ ಓವರ್‌ಲ್ಯಾಪ್ ಆಗಿರುವ ಪ್ರತಿ ಗರಿಗಳನ್ನು ದಾರದಿಂದ ಗಂಟು ಹಾಕುತ್ತಾರೆ. ಅದನ್ನು ಕಟ್ಟಲು ಶಾಫ್ಟ್‌ಗಳ ನಡುವೆ ಎರಡು ಟ್ವಿಸ್ಟ್‌ಗಳನ್ನು ಹಾಕುತ್ತಾರೆ. ಬಲ: ಪ್ರಭಾಶ್ ಶ್ಯಾಶ್ಮಲ್ ಪ್ರತಿ ಶಟಲ್ ಕಾಕ್‌ನ ಗರಿಗಳ ಜೋಡಣೆ ಮತ್ತು ಥ್ರೆಡ್ ಪ್ಲೇಸ್‌ಮೆಂಟನ್ನು ಪರಿಶೀಲಿಸುತ್ತಾರೆ

ಪ್ರತಿ ಶಟಲ್‌ನ ಕಾರ್ಕ್‌ನ ರಿಮ್‌ನಲ್ಲಿ ಸಂಜೀಬ್ ಬ್ರ್ಯಾಂಡ್ ಹೆಸರನ್ನು ಅಂಟಿಸುತ್ತಾರೆ
ಒಣಗಿದ ನಂತರ ಶಟಲ್‌ಗಳು ಬ್ರ್ಯಾಂಡಿಂಗ್‌ಗೆ ಸಿದ್ಧವಾಗುತ್ತವೆ. ಇದು ಕೊನೆಯ ಹಂತ. "ನಾವು ಕಾರ್ಕ್‌ನ ರಿಮ್‌ನಲ್ಲಿ ಬ್ರ್ಯಾಂಡ್ ಹೆಸರಿನೊಂದಿಗೆ 2.5 ಇಂಚಿನ ಉದ್ದದ ನೀಲಿ ಗೆರೆಯನ್ನು ಅಂಟಿಸುತ್ತೇವೆ ಮತ್ತು ಗರಿಗಳ ದಂಡದ ತಳದಲ್ಲಿ ವೃತ್ತಾಕಾರದ ಸ್ಟಿಕ್ಕರನ್ನು ಅಂಟಿಸುತ್ತೇವೆ" ಎಂದು ಸಂಜಿಬ್ ಹೇಳುತ್ತಾರೆ. "ನಂತರ ಪ್ರತಿ ಶಟಲ್ ಕಾಕ್ ಅನ್ನು ಏಕರೂಪವಾಗಿ ಪ್ರತ್ಯೇಕವಾಗಿ ತೂಕ ಮಾಡಿ, ಬ್ಯಾರೆಲ್ ಮಾಡಲಾಗುತ್ತದೆ," ಎಂದು ಅವರು ಹೇಳುತ್ತಾರೆ.
*****
“ನಾವು ಸೈನಾ ನೆಹ್ವಾಲ್ ಮತ್ತು ಪಿವಿ ಸಿಂಧು ಅವರ ಮೂಲಕ ಮೂರು ಒಲಿಂಪಿಕ್ ಪದಕಗಳನ್ನು ಗೆದ್ದಿದ್ದೇವೆ. ಬ್ಯಾಡ್ಮಿಂಟನ್ ಬಹಳ ಜನಪ್ರಿಯವಾಗುತ್ತಿದೆ," ಎಂದು ನಬಾ ಕುಮಾರ್ 2023 ರ ಆಗಸ್ಟ್‌ನಲ್ಲಿ ಪರಿಯೊಂದಿಗೆ ಮಾತನಾಡುತ್ತಾ ಹೇಳುತ್ತಾರೆ. "ಆದರೆ ಉಲುಬೇರಿಯಾದ ಯುವಕರು ಗರಿಗಳ ಕಾಕ್ ಮಾಡಲು ಕಲಿತರೂ, ಅವರ ಭವಿಷ್ಯವು ಈ ಆಟಗಾರರಂತೆ ಸುರಕ್ಷಿತವಾಗಿರುತ್ತದೆ ಎಂಬ ಯಾವುದೇ ಗ್ಯಾರಂಟಿ ಇಲ್ಲ," ಎಂದು ಖೇದದಿಂದ ಹೇಳುತ್ತಾರೆ.
ಪಶ್ಚಿಮ ಬಂಗಾಳ ಸರ್ಕಾರದ ಮೈಕ್ರೋ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ನಿರ್ದೇಶನಾಲಯ ಉಲುಬೇರಿಯಾ ಪುರಸಭೆಯನ್ನು ಶಟಲ್ ಕಾಕ್ ಉತ್ಪಾದನಾ ಕ್ಲಸ್ಟರ್ ಎಂದು ವರ್ಗೀಕರಿಸಿದೆ. ಆದರೆ ನಬಾ ಕುಮಾರ್ ಹೇಳುವಂತೆ “ಈ ಪ್ರದೇಶವನ್ನು ಕ್ಲಸ್ಟರ್‌ಗೆ ವರ್ಗೀಕರಿಸಿದಾಗಿನಿಂದ ಏನೂ ಬದಲಾಗಿಲ್ಲ. ಇದು ಪ್ರದರ್ಶನಕ್ಕೆ ಅಷ್ಟೇ. ನಾವೆಲ್ಲರೂ ಸ್ವಂತವಾಗಿ ಕೆಲಸ ಮಾಡುತ್ತಿದ್ದೇವೆ.”
ಜನವರಿ 2020ರಲ್ಲಿ ಗರಿಗಳ ಶಟಲ್ ಉದ್ಯಮದ ಮೇಲೆ ದೊಡ್ಡ ಹೊಡೆತ ಬಿತ್ತು. ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್, ಅಂತರಾಷ್ಟ್ರೀಯ ಆಡಳಿತ ಮಂಡಳಿ, ಬಾಳಿಕೆ ಮತ್ತು "ಆರ್ಥಿಕ ಮತ್ತು ಪರಿಸರದ" ಕಾರಣಗಳು ಮತ್ತು ಕ್ರೀಡೆ "ದೀರ್ಘಾವಧಿಯವರೆಗೆ ಉಳಿಯಲು" ಆಟದ ಎಲ್ಲಾ ಹಂತಗಳಲ್ಲಿ ಸಿಂಥೆಟಿಕ್ ಫೆದರ್ ಶಟಲ್‌ಗಳ ಬಳಕೆಯನ್ನು ಅನುಮೋದಿಸಿತು . ನಂತರ ಇದನ್ನು ಕ್ಲಾಸ್ (ಷರತ್ತು) 2.1 ನಲ್ಲಿ ಬ್ಯಾಡ್ಮಿಂಟನ್ ಕಾನೂನುಗಳ ಅಧಿಕೃತ ಭಾಗವಾಗಿ ಸೇರಿಸಲಾಯಿತು, ಅದು ಈಗ "ಶಟಲ್ ನೈಸರ್ಗಿಕ ಮತ್ತು/ಅಥವಾ ಸಿಂಥೆಟಿಕ್ ವಸ್ತುಗಳಿಂದ ತಯಾರಿಲ್ಪಟ್ಟಿದೆ" ಎಂದು ಹೇಳುತ್ತದೆ.


ಎಡ: ರಂಜಿತ್ ಮತ್ತು ಸಂಜಿಬ್ ಬ್ರಾಂಡ್ ಹೆಸರಿನ ಕವರ್‌ಗಳನ್ನು ಶಟಲ್ ಬ್ಯಾರೆಲ್‌ಗಳಲ್ಲಿ ಪೇಸ್ಟ್ ಮಾಡುತ್ತಿರುವುದು. ಬಲ: ಶಟಲ್‌ಗಳನ್ನು ತೂಕ ಮಾಡಿದ ನಂತರ, ರಂಜಿತ್ ಪ್ರತಿ ಬ್ಯಾರೆಲ್‌ಗೆ 10 ಪೀಸ್‌ಗಳನ್ನು ತುಂಬುತ್ತಾರೆ
“ಪ್ಲಾಸ್ಟಿಕ್ ಅಥವಾ ನೈಲಾನ್ ಗರಿಗಳ ಜೊತೆಗೆ ಸ್ಪರ್ಧೆಗೆ ನಿಲ್ಲಬಹುದೇ? ಆಟದ ಮೇಲೆ ಏನು ಪರಿಣಾಮವಾಗುತ್ತದೆ ಎಂಬುದು ನನಗೆ ತಿಳಿದಿಲ್ಲ, ಆದರೆ ಜಾಗತಿಕ ಮಟ್ಟದಲ್ಲಿ ಈ ನಿರ್ಧಾರವನ್ನು ತೆಗೆದುಕೊಂಡರೆ, ನಾವು ಎಷ್ಟು ದಿನ ಬದುಕಬಹುದು ಎಂದು ನೀವೇ ಹೇಳಿ? ನಬಾ ಕುಮಾರ್ ಕೇಳುತ್ತಾರೆ. "ಸಿಂಥೆಟಿಕ್ ಶಟಲ್‌ಗಳನ್ನು ತಯಾರಿಸಲು ನಮ್ಮಲ್ಲಿ ಯಾವುದೇ ತಂತ್ರಜ್ಞಾನ ಅಥವಾ ಕೌಶಲ್ಯವಿಲ್ಲ," ಎಂದು ನೋವಿನಿಂದ ಹೇಳುತ್ತಾರೆ.
“ಇಂದು ಹೆಚ್ಚಿನ ಕರಿಗಾರರಲ್ಲಿ 30 ಅಥವಾ ಅದಕ್ಕಿಂತ ಹೆಚ್ಚು ವರ್ಷಗಳ ಅನುಭವ ಹೊಂದಿರುವ ಮಧ್ಯವಯಸ್ಕ ಅಥವಾ ಹಿರಿಯ ನಾಗರಿಕರಿದ್ದಾರೆ. ಮುಂದಿನ ಪೀಳಿಗೆ ಇದನ್ನು ಜೀವನೋಪಾಯದ ಕೆಲಸವಾಗಿ ಆಯ್ಕೆ ಮಾಡಿಕೊಳ್ಳಲು ಸಾಧ್ಯವಿಲ್ಲ,” ಎಂದು ಅವರು ಹೇಳುತ್ತಾರೆ. ಕಡಿಮೆ ವೇತನಗಳು ಮತ್ತು ಗರಿ-ಕೆಲಸದ ಈ ವಿಶೇಷ ಕೌಶಲ್ಯಗಳನ್ನು ಪಡೆಯಲು ತುಂಬಾ ಅವಧಿ ಬೇಕಾಗಿರುವುದು ಹೊಸಬರಿಗೆ ತಕ್ಷಣದ ತೊಡಕಾಗಿ ಕಾಣುತ್ತದೆ.
"ಗುಣಮಟ್ಟದ ಗರಿಗಳ ಪೂರೈಕೆಯನ್ನು ಸರಾಗಗೊಳಿಸುವ, ಗರಿಗಳ ಬೆಲೆಗಳ ಮೇಲೆ ಮಿತಿಯನ್ನು ಹಾಕಲು ಮತ್ತು ಇತ್ತೀಚಿನ ಯಂತ್ರ ತಂತ್ರಜ್ಞಾನವನ್ನು ಒದಗಿಸಲು ಸರ್ಕಾರವು ಒಂದು ಹೆಜ್ಜೆಯೂ ಇಡದಿದ್ದರೆ ಈ ಉದ್ಯಮವು ಸಂಪೂರ್ಣವಾಗಿ ಕಣ್ಮರೆಯಾಗಲು ಹೆಚ್ಚು ಸಮಯ ಬೇಕಾಗಿಲ್ಲ" ಎಂದು ನಬಾ ಕುಮಾರ್ ಹೇಳುತ್ತಾರೆ.
ಈ ಕಥೆಗಾಗಿ ತಮ್ಮ ಅಮೂಲ್ಯವಾದ ಸಹಾಯವನ್ನು ನೀಡಿದ ಅದ್ರೀಷ್ ಮೈಟಿಯವರಿಗೆ ವರದಿಗಾರ ಧನ್ಯವಾದಗಳನ್ನು ಅರ್ಪಿಸುತ್ತಾರೆ.
ಈ ಕಥೆಯನ್ನು ಮೃಣಾಲಿನಿ ಮುಖರ್ಜಿ ಫೌಂಡೇಶನ್ (ಎಂಎಂಎಫ್) ನ ಫೆಲೋಶಿಪ್ ಬೆಂಬಲದೊಂದಿಗೆ ಮಾಡಲಾಗಿದೆ.
ಅನುವಾದ: ಚರಣ್ ಐವರ್ನಾಡು