“54ರ ವಯಸ್ಸಿನ ದಿನಗೂಲಿ ಕಾರ್ಮಿಕರಾದ ಇವರು, ನನಗೆ ಒಂಬತ್ತು ವರ್ಷಗಳು ತುಂಬುವ ಮೊದಲಿನಿಂದಲೂ ಅಂದರೆ, ನಾನು ಹುಡುಗಿಯಾಗಿದ್ದಾಗಿನಿಂದಲೂ ಈ ಕೆಲಸವನ್ನು (ಕೃಷಿ) ಮಾಡುತ್ತಿದ್ದೇನೆ ಎಂದು ತಿಳಿಸಿದರು. ಸುಮನ್ ಎಂದಿಗೂ ಶಾಲೆಗೆ ಹೋಗಲಿಲ್ಲ. ತಂದೆಯ ಮರಣಾನಂತರ ತನ್ನ ಮಾಮನ (ತಾಯಿಯ ಸೋದರ) ಜಮೀನಿನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು.
“ಇಂದಿರಾ ಗಾಂಧಿಯವರು ನಿಧನರಾದ ವರ್ಷದಲ್ಲಿ [1984] ನನ್ನ ವಿವಾಹವಾಯಿತು. ನನ್ನ ವಯಸ್ಸು ಈಗ ನೆನಪಿಗೆ ಬರುತ್ತಿಲ್ಲ. 16-20 ವರ್ಷದವಳಿರಬಹುದು” ಎಂದರಾಕೆ. ಬಂದು ಸಾಂಬ್ರೆ ಅವರನ್ನು ವಿವಾಹವಾದ ನಂತರ ಅವರೊಂದಿಗೆ ಕಟ್ಟಡ ನಿರ್ಮಾಣ ಕಾರ್ಮಿಕರಾಗಿ ದುಡಿಯತೊಡಗಿದರು. “ನಾನು ಗರ್ಭಿಣಿಯಾಗಿದ್ದಾಗಲೂ ದುಡಿಯುತ್ತಿದ್ದೆ” ಎಂದು ಅವರು ತಿಳಿಸಿದರು.
ಈಕೆಯ ಪತಿಯು ಐದು ವರ್ಷಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಾಗ, ಕಟ್ಟಡ ನಿರ್ಮಾಣದ ಕೆಲಸವನ್ನು ತೊರೆದು, ಕೃಷಿಯ ಕೆಲಸದಲ್ಲಿ ತೊಡಗಿದರು. ಇವರ ಐದು ಮಕ್ಕಳು – 15ರ ವಯಸ್ಸಿನ ನಮ್ರತ, 17ರ ಕವಿತ, 12ರ ಗುರು, 22ರ ತುಲ್ಶ ಹಾಗೂ 27ರ ಸಿಲ್ಮಿನ ಇವರೊಂದಿಗಿದ್ದಾರೆ. ಸುಮನ್ ಅವರ ತಾಯಿ, ನಂದಾ ಸಹ ಪಾಲ್ಘರ್ ಜಿಲ್ಲೆಯ ಉಮೆಲ ಗ್ರಾಮದಲ್ಲಿ ಇವರೊಂದಿಗೆ ವಾಸಿಸುತ್ತಿದ್ದಾರೆ.
“ನನಗೆ ದುಡಿಯದೇ ಬೇರೆ ವಿಧಿಯಿಲ್ಲ. ಹೀಗಾಗಿ ದುಡಿಯುತ್ತಿದ್ದೇನೆ” ಎನ್ನುತ್ತಾರವರು. ಈ ಪರಿವಾರವು ಮಲ್ಹರ್ ಕೋಲಿ ಸುಮುದಾಯಕ್ಕೆ ಸೇರಿದೆ. (ಮಹಾರಾಷ್ಟ್ರದಲ್ಲಿ ಹಿಂದುಳಿದ ಬುಡಕಟ್ಟಿನಡಿಯಲ್ಲಿ ಇದನ್ನು ಪಟ್ಟಿಮಾಡಲಾಗಿದೆ).


ಸುಮನ್, ಉಮೇಲಾದಲ್ಲಿನ ತನ್ನ ಮನೆಗೆ ಹತ್ತಿರವಿರುವ ಜಮೀನಿನಲ್ಲಿ ಅವರೆ ಕಾಯಿಯ ಕಟಾವು ಮಾಡುತ್ತಿದ್ದಾರೆ


ಎಡಕ್ಕೆ: ತನ್ನ ಬದುಕಿನುದ್ದಕ್ಕೂ ಸುಮನ್ ದಿನಗೂಲಿ ಕೆಲಸಗಾರಳಾಗಿ ದುಡಿಯುತ್ತಿದ್ದಾರೆ. ಬಲಕ್ಕೆ: ಮನೆಗೆ ಹೋಗುವ ಮೊದಲು ಸುಮನ್, ಕಟಾವು ಮಾಡಿದ ಅವರೆ ಕಾಯಿಯನ್ನು ಒಡೆಯರಿಗೆ ಒಯ್ಯುತ್ತಿದ್ದಾರೆ
ಮಾರ್ಚ್ ತಿಂಗಳ ಬೇಸಿಗೆಯ ಮಧ್ಯಾಹ್ನದಲ್ಲಿ ಎರಡು ಕಿ. ಮೀ. ದೂರದ ಅವರೆ ಕಾಳಿನ ಹೊಲದಲ್ಲಿ ಈಕೆ ದುಡಿಯುತ್ತಿದ್ದಾರೆ. ನೀರಿನ ಬಾಟಲು ಮತ್ತು ಎರಡು ಕುಡುಗೋಲುಗಳಿರುವ ಟಾರ್ಪಾಲಿನ್ ಬ್ಯಾಗಿನೊಂದಿಗೆ ಇವರು ಬೆಳಿಗ್ಗೆ 8 ಗಂಟೆಗೆ ಮನೆ ಬಿಟ್ಟರು.
ತಲೆಗೆ ಸುತ್ತಿದ ಟವೆಲ್ಲು, ಇವರನ್ನು ಬಿರು ಬಿಸಿಲಿನಿಂದ ರಕ್ಷಿಸುತ್ತದೆ. ಮೃದುವಾದ ಅವರೆ ಕಾಳಿನ ಕಾಯಿಗಳನ್ನು ಎಚ್ಚರಿಕೆಯಿಂದ ಕಿತ್ತು, ಸೊಂಟದ ಸುತ್ತ ಚೀಲದಂತೆ ಬಿಗಿದು ಕಟ್ಟಿದ ದುಪಟ್ಟಾದೊಳಗೆ ಹಾಕುತ್ತಾರೆ.
“ಈ ಚೀಲವು ಭರ್ತಿಯಾದಾಗ, ಅವರೆ ಕಾಯಿಗಳನ್ನು ಬುಟ್ಟಿಗೆ ವರ್ಗಾಯಿಸುತ್ತೇನೆ. ಬುಟ್ಟಿಯು ತುಂಬಿದಾಗ, ಅವನ್ನು ದೊಡ್ಡ ಚೀಲಕ್ಕೆ ಹಾಕುತ್ತೇನೆ” ಎಂದು ಅವರು ವಿವರಿಸಿದರು. ನಂತರ ಒಣಗಿದ ಕಾಯಿಗಳನ್ನು ಎಳೆಯ ಕಾಯಿಗಳಿಂದ ಬೇರ್ಪಡಿಸುತ್ತಾರೆ.
ಸಾಮಾನ್ಯವಾಗಿ, ಮಧ್ಯಾಹ್ನದ ಊಟವೇ ಆಕೆಗೆ ದಿನದ ಮೊದಲ ಊಟ. ಕೆಲವೊಮ್ಮೆ, ಇವರು ಊಟ ತಂದಿಲ್ಲದಾಗ, ಯಜಮಾನಿಯು ಊಟ ನೀಡುತ್ತಾರೆ ಅಥವಾ ಊಟಕ್ಕೆ ವಾಪಸ್ಸು ಮನೆಗೆ ನಡೆದುಕೊಂಡು ಹೋಗುತ್ತಾರಾದರೂ, ಬೇಗನೇ ಹಿಂದಿರುಗಿ, ಸೂರ್ಯ ಮುಳುಗುವವರೆಗೂ ಕೆಲಸದಲ್ಲಿ ತೊಡಗುತ್ತಾರೆ. ಇವರ ಕಿರಿಯ ಮಗಳು ನಮ್ರತ ಕೆಲವೊಮ್ಮೆ ಮಧ್ಯಾಹ್ನದ ಚಹಾ ತರುತ್ತಾಳೆ.
“ಬಿರು ಬಿಸಿಲಿನ ದುಡಿಮೆಯ ನಂತರ ನನಗೆ 300 ರೂ.ಗಳು ದೊರೆಯುತ್ತವೆ. ಅಷ್ಟು ಹಣದಲ್ಲಿ ನಾನು ಏನನ್ನು ತಾನೇ ಒದಗಿಸಬಲ್ಲೆ? ಪ್ರತಿ ದಿನ ನನಗೆ ಕೆಲಸವು ದೊರೆಯುವುದಿಲ್ಲ” ಎಂದರವರು. ಈಕೆಯ ಕೆಲಸವು ಕೃಷಿಯ ಋತು ಹಾಗೂ ಲಭ್ಯವಿರುವ ಕೂಲಿಗಳ ಸಂಖ್ಯೆಯನ್ನು ಅವಲಂಬಿಸಿರುತ್ತದೆ. “ಈ ಹೊಲದ ಕಟಾವನ್ನು ಮುಗಿಸಿದ ಬಳಿಕ ಎಂಟು ದಿನಗಳವರೆಗೆ ನನಗೆ ಕೆಲಸವು ದೊರೆಯುವುದಿಲ್ಲ” ಎಂದು ಅವರು ತಿಳಿಸಿದರು.


ಎಡಕ್ಕೆ: ತನ್ನ ಪುತ್ರಿಯರಾದ ನಮ್ರತ ಬಂದು ಸಾಂಬ್ರೆ (ಎಡಕ್ಕೆ), ಕವಿತ ಬಂದು ಸಾಂಬ್ರೆ (ಬಲಕ್ಕೆ) ಹಾಗೂ ಮನೆಯಲ್ಲಿನ ಬೆಕ್ಕುಗಳೊಂದಿಗಿರುವ ಸುಮನ್. ಬಲಕ್ಕೆ: ಸುಮನ್ ಅವರು ಸಾಮಾನ್ಯವಾಗಿ ದಿನದ ಮೊದಲ ಊಟವೆನಿಸಿದ ಮಧ್ಯಾಹ್ನದ ಊಟಕ್ಕೆ ಹಸಿ ಮಾವಿನಕಾಯಿಗಳನ್ನು ಸುಲಿಯುತ್ತಿದ್ದಾರೆ


ಉಮೆಲ ಗ್ರಾಮದ ತಮ್ಮ ಮನೆಯ ಮುಂದೆ ಸುಮನ್ ಅವರ ತಾಯಿ, ನಂದಾ (ಬಲಕ್ಕೆ) ಒಣಗಿದ ತೆಂಗಿನ ಗರಿಗಳಿಂದ ಪೊರಕೆಯನ್ನು ಮಾಡುತ್ತಿರುವುದು
ಸುಮನ್ ಅವರಿಗೆ ಕೆಲಸವು ದೊರೆಯದ ದಿನಗಳಲ್ಲಿ, ಮನೆಯಲ್ಲಿಯೇ ಉಳಿದು, ಉರುವಲಿನ ಸಂಗ್ರಹಣೆ, ಅಡಿಗೆ ಮತ್ತು ತಮ್ಮ ಕಚ್ಚಾ ಗುಡಿಸಲಿನ ಪುನರ್ ನಿರ್ಮಾಣದ ಕಾರ್ಯಗಳಲ್ಲಿ ತೊಡಗುತ್ತಾರೆ. ಮುಂದಿನ ಕೂಲಿ ಕೆಲಸವನ್ನು ದೊರಕಿಸಿಕೊಳ್ಳುವ ಬಗ್ಗೆಯೂ ಅವರು ಚಿಂತೆಗೀಡಾಗಿತ್ತಾರೆ. “ಎಲ್ಲ ವಸ್ತುಗಳ ಬೆಲೆಯು ಹೆಚ್ಚುತ್ತಿರುವುದನ್ನು ಗಮನಿಸಿ.”
ಸುಮನ್ ಅವರ ಇಬ್ಬರು ಮಕ್ಕಳಾದ ತುಲ್ಶ ಮತ್ತು ಸಿಲ್ವಿನ, ವಸ್ತುಗಳನ್ನು ತಯಾರಿಸುವ ಕಾರ್ಖಾನೆಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ್ದು, ಕುಟುಂಬದ ಆದಾಯಕ್ಕೆ ದಾರಿಯಾಗಿದೆ.
ಈಕೆಯು ತನ್ನ ಪತಿಯನ್ನು ಕಳೆದುಕೊಂಡ ಕೆಲವು ವರ್ಷಗಳ ನಂತರ, ಹಿರಿಯ ಮಗ ಸಂತೋಷ್ ಸಾಂಬ್ರೆ ಅಕ್ಟೋಬರ್ 2022ರಲ್ಲಿ ಆತ್ಮಹತ್ಯೆ ಮಾಡಿಕೊಂಡರು. 30ರ ವಯಸ್ಸಿನ ಸಂತೋಷ್, ವೇದಿಕೆಯನ್ನು ಅಲಂಕರಿಸುವ ಕೆಲಸವನ್ನು ಮಾಡುತ್ತಿದ್ದರು. ಆ ಹಿಂದಿನ ರಾತ್ರಿಯ ಘಟನೆಗಳನ್ನು ಆಕೆ ನೆನಪಿಸಿಕೊಂಡರು: “ನನ್ನ ಇನ್ನೊಬ್ಬ ಮಗ, ತುಲ್ಶ, ನಮ್ಮ ಬೆಕ್ಕುಗಳನ್ನು ಉಪಚರಿಸುತ್ತಿದ್ದ, ಸಿಟ್ಟಿಗೆದ್ದ ಸಂತೋಷ್, ತುಲ್ಶನಿಗೆ, ತನ್ನನ್ನು ರೇಗಿಸುವುದನ್ನು ನಿಲ್ಲಿಸುವಂತೆ ಹೇಳಿ, ದಢಾರನೆ ಎದ್ದು ಹೊರನಡೆದ.
“ಆತನು ತನ್ನ ಗೆಳೆಯರೊಂದಿಗೆ ಇರಬಹುದೆಂದು ನಾನು ಭಾವಿಸಿದ್ದೆ. ಇಡೀ ರಾತ್ರಿ ಅನೇಕ ಬಾರಿ ರಸ್ತೆಗೆ ಹೋಗಿ ಆತನಿಗಾಗಿ ಹುಡುಕಾಡಿದೆ."


ಎಡಕ್ಕೆ: - ನಮ್ರತ, ಕವಿತ ಮತ್ತು ಗುರು ಎಂಬ ಸುಮನ್ ಅವರ ಮಕ್ಕಳ ಅಡ್ಡಹೆಸರುಗಳನ್ನು ಅಡಿಗೆಮನೆಯ ಗೋಡೆಯ ಮೇಲೆ ಬರೆಯಲಾಗಿದೆ. ಬಲಕ್ಕೆ: ಗುರುವು ಗೆದ್ದ ಕ್ರಿಕೆಟ್ ಪಾರಿತೋಷಕ ಮತ್ತು ಇವರು ಆರಾಧಿಸುವ ದೇವರ ಛಾಯಾಚಿತ್ರದೊಂದಿಗೆ ಸಂತೋಷ್ (ಎಡಕ್ಕೆ) ಮತ್ತು ಬಂದು ಅವರುಗಳ ಚೌಕಟ್ಟು ಹಾಕಿದ ಭಾವಚಿತ್ರಗಳು


ಪಾಲ್ಘರ್‌ನ ಉಮೇಲ ಗ್ರಾಮದ ತಮ್ಮ ಮನೆಯ ಹೊರಗಡೆಯಿರುವ ಸುಮನ್
“ಬಾಬಾ [ಅಪ್ಪ] ಆತ್ಮಹತ್ಯೆ ಮಾಡಿಕೊಂಡರು ದಾದಾ [ಸಹೋದರ] ಸಹ ಹಾಗೆಯೇ ಮಾಡಿದ. ನಾನೂ ಹಾಗೇ ಮಾಡುತ್ತೇನೆ” ಎಂದು ನನ್ನ ಮಗ [ಗುರು] ಮತ್ತೆ ಮತ್ತೆ ಹೇಳುತ್ತಿರುತ್ತಾನೆ.” ಹೊಲದಲ್ಲಿ ಕೆಲಸ ಮಾಡುವಾಗಲೆಲ್ಲಾ ನನಗೆ ಇದೇ ಯೋಚನೆ ಎಂದರವರು. ಕುಟುಂಬದಲ್ಲಿನ ಆತ್ಮಹತ್ಯೆಯ ಚರಿತ್ರೆಯು ಆಕೆಯನ್ನು ಚಿಂತೆಗೀಡುಮಾಡಿದೆ.
“ನನಗೆ ಏನು ಯೋಚಿಸಬೇಕೆಂದೇ ತಿಳಿಯುತ್ತಿಲ್ಲ. ಪ್ರತಿ ದಿನ ಇಲ್ಲಿಗೆ ದುಡಿಯಲು ಬರುತ್ತೇನಷ್ಟೇ. ನನಗೆ ದುಃಖಿಸಲು ಸಮಯವೇ ಇಲ್ಲ” ಎಂದರಾಕೆ.
ನೀವು ಆತ್ಮಹತ್ಯಾ ಪ್ರವೃತ್ತಿಯವರಾಗಿದ್ದರೆ ಅಥವಾ ಅತ್ಯಂತ ವೇದನೆಯಲ್ಲಿರುವ ಯಾರಾದರೂ ನಿಮಗೆ ತಿಳಿದಿದ್ದರೆ, ದಯವಿಟ್ಟು, ನ್ಯಾಷನಲ್ ಹೆಲ್ಪ್‌ಲೈನ್‌ನ ಕಿರಣ್ ಸಹಾಯವಾಣಿಗೆ 1800-599-0019 (24/7 ಟೋಲ್ ಫ್ರೀ) ಸಂಖ್ಯೆಯ ಮೂಲಕ ಕರೆ ಮಾಡಿ ಅಥವಾ ನಿಮ್ಮ ಹತ್ತಿರದ ಈ ಯಾವುದೇ ಹೆಲ್ಪ್‌ಲೈನ್‌ಗಳಿಗೆ ಕರೆ ಮಾಡಿ. ಮಾನಸಿಕ ಆರೋಗ್ಯ ಕ್ಷೇತ್ರದ ವೃತ್ತಿನಿರತರು ಮತ್ತು ಆ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರನ್ನು ಸಂಪರ್ಕಿಸುವ ಮಾಹಿತಿಗಾಗಿ ದಯವಿಟ್ಟು SPIF’s mental health directory ಯನ್ನು ಪರಿಶೀಲಿಸಿ.
ಅನುವಾದ: ಶೈಲಜಾ ಜಿ.ಪಿ.