ಕೊನೆಯ ಬಾರಿ ಪಾರ್ವತಿಯವರು ಮನರೇಗಾ ಅಡಿಯಲ್ಲಿ ಕೆಲಸ ಮಾಡಿ ಒಂದು ವರ್ಷವಾಗಿದೆ. 2023ರ ಜೂನಿನಲ್ಲಿ ಕೇವಲ ಐದು ದಿನಗಳ ಕಾಲ ಕೆಲಸ ಸಿಕ್ಕಿತ್ತು.
ಪಾರ್ವತಿಯವರು (ಈ ಹೆಸರನ್ನು ಮಾತ್ರ ಬಳಸುತ್ತಾರೆ) ತಮ್ಮ ಗ್ರಾಮ ಗೌರ್ ಮಧುಕರ್ ಶಹಾಪುರದಲ್ಲಿ ರಸ್ತೆ ಸಮತಟ್ಟು ಮಾಡುವ ಕೆಲಸವನ್ನು ಮಾಡಿದ್ದರು. ಮನರೇಗಾ(ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯಿದೆ) ಅಡಿಯಲ್ಲಿ ಸರ್ಕಾರ ನೂರು ದಿನಗಳ ಉದ್ಯೋಗ ಖಾತ್ರಿಯ ಭರವಸೆಯನ್ನು ನೀಡುತ್ತದೆ. ಆದರೆ ಜಾತವ್ (ಪರಿಶಿಷ್ಟ ಜಾತಿ) ಸಮುದಾಯಕ್ಕೆ ಸೇರಿರುವ 45 ವರ್ಷ ಪ್ರಾಯದ ಈ ದಿನಗೂಲಿ ಕಾರ್ಮಿಕೆಗೆ ಆ ಉದ್ಯೋಗ ಎಂದಿಗೂ ಸಿಗಲಿಲ್ಲ. "ನಾವು ನಮ್ಮ ಅರ್ಧ ಹೊಟ್ಟೆಯನ್ನು ತುಂಬಿಸಿಕೊಂಡು ಬದುಕುತ್ತಿದ್ದೇವೆ," ಎಂದು ಅವರು ಹೇಳುತ್ತಾರೆ.
2020 ರಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಈ ದಂಪತಿಗಳು ಹೊಸ ಮನೆಗಾಗಿ ಸಲ್ಲಿಸಿದ ಅರ್ಜಿ ತಿರಸ್ಕಾರಗೊಂಡಿತು. ಮುಂದೆ ಇದಕ್ಕಾಗಿ ಕಾಯದೆ, ಪಾರ್ವತಿ ಮತ್ತು ಅವರ ಪತಿ ಚೋಟೆ ಲಾಲ್ ಅವರು ತಮ್ಮ ಸಂಬಂಧಿಕರಿಂದ 90,000 ರುಪಾಯಿ ಸಾಲ ತೆಗೆದುಕೊಂಡು ಎರಡು ಕೋಣೆಗಳ ಸಣ್ಣ ಮನೆಯನ್ನು ಕಟ್ಟಿಕೊಂಡರು.
"ಯಾರಾದರೂ ಮೋಟು ಕೇಳಿಕೊಂಡು ಮನೆಗೆ ಬಂದರೆ, ಹೊಸ ಮನೆ ಫಲಾನುಭವಿಗಳ ಪಟ್ಟಿಯಿಂದ ನನ್ನ ಹೆಸರು ಹೇಗೆ ಕಾಣೆಯಾಯ್ತು, ಆದರೆ ಮತದಾರರ ಪಟ್ಟಿಯಲ್ಲಿ ಮಾತ್ರ ಹೇಗೆ ನನ್ನ ಹೆಸರಿದೆ ಎಂದು ಕೇಳುತ್ತೇನೆ,” ಎನ್ನುತ್ತಾರೆ ಪಾರ್ವತಿ. ಮನರೇಗಾ ಅಡಿಯಲ್ಲಿ ಕೆಲಸ ಮಾಡುತ್ತಿದ್ದ ಪಾರ್ವತಿಯವರ ಪತಿಗೆ ಐದು ವರ್ಷಗಳ ಹಿಂದೆ ಪಾರ್ಶ್ವವಾಯು ಬಂದು ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಸದ್ಯ ಆಗಾಗ ಅವರು ವಾರಣಾಸಿ ನಗರದ ಕಾರ್ಮಿಕ ಮಂಡಿಗೆ ಹೋಗಿ, ಅಲ್ಲಿ 400-500 ರುಪಾಯಿ ದಿನಗೂಲಿಗೆ ಕೆಲಸ ಮಾಡುತ್ತಾರೆ.
ಮನರೇಗಾ ಗ್ರಾಮೀಣ ಭಾಗದ ಕೌಶಲ್ಯರಹಿತ ಕಾರ್ಮಿಕರಿಗೆ 100 ದಿನಗಳ ಉದ್ಯೋಗವನ್ನು ನೀಡುತ್ತದೆ. ಆದರೆ ವಾರಣಾಸಿ ಜಿಲ್ಲೆಯಲ್ಲಿರುವ ಗ್ರಾಮಗಳ ಸಾಮಾನ್ಯಜನರು, "ಕಳೆದ ಎರಡು ಪ್ರಧಾನಿ" ಯಿಂದ ವರ್ಷಕ್ಕೆ ಕೇವಲ 20-25 ದಿನಗಳ ಕೆಲಸ ಸಿಗುತ್ತಿದೆ ಎಂದು ದೂರುತ್ತಾರೆ. ಇಲ್ಲಿ ಸರಪಂಚ್‌ನ ಕೊನೆಯ ಎರಡು ಅವಧಿಗಳನ್ನು ಅಥವಾ ಸರಿಸುಮಾರು 10 ವರ್ಷಗಳನ್ನು ಎರಡು ಪ್ರಧಾನಿ ಎಂದು ಉಲ್ಲೇಖಿಸುತ್ತಾರೆ.
ಪಾರ್ವತಿಯವರು ಹಿಂದೆಂದಿಗಿಂತಲೂ ದೊಡ್ಡ ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ. ಸರ್ಕಾರದಿಂದ ಯಾವುದೇ ನೆರವಿಲ್ಲದೆ, ಅವರು ಠಾಕೂರ್ ಸಮುದಾಯದವರ ಹೊಲಗಳಲ್ಲಿ ಕೂಲಿ ಕೆಲಸ ಮಾಡಿ ಮನೆ ನಡೆಸುತ್ತಿದ್ದಾರೆ. ಸುಗ್ಗಿಯ ಮತ್ತು ಬಿತ್ತನೆಯ ಸೀಸನ್‌ಗಳಲ್ಲಿ ಸುಮಾರು 15 ದಿನಗಳ ಕೆಲಸಕ್ಕೆ ಅವರಿಗೆ 10 ಕಿಲೋಗ್ರಾಂಗಳಷ್ಟು ಆಹಾರ ಧಾನ್ಯ ಸಿಗುತ್ತದೆ.


ಉತ್ತರ ಪ್ರದೇಶದ ವಾರಣಾಸಿ ಜಿಲ್ಲೆಯ ಗೌರ್ ಮಧುಕರ್ ಶಹಾಪುರ್ ನಿವಾಸಿ ಪಾರ್ವತಿ (ಎಡ). ಮನರೇಗಾ (ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ) ಅಡಿಯಲ್ಲಿ ನೀಡುವ 100 ದಿನಗಳ ಉದ್ಯೋಗ ತಮಗೆ ಯಾವತ್ತೂ ಸಿಕ್ಕಿಲ್ಲ ಎಂದು ಅವರು ಹೇಳುತ್ತಾರೆ. ಮನೆಯ ಮುಂದೆ ಇರುವ ಅವರ ಪತಿ ಚೋಟೆ ಲಾಲ್ (ಬಲ)
ರಾಜಾ ತಲಾಬ್ ತೆಹಸಿಲ್‌ನ ಗೌರ್ ಮಧುಕರ್ ಶಹಾಪುರ್ ಗ್ರಾಮದ ಸುಮಾರು 1,200 ಕುಟುಂಬಗಳಲ್ಲಿ ಹೆಚ್ಚಿನವರು ಪರಿಶಿಷ್ಟ ಜಾತಿ ಮತ್ತು ಇತರ ಹಿಂದುಳಿದ ಜಾತಿ ಸಮುದಾಯಗಳಿಗೆ ಸೇರಿದವರು. ಮನೆ ಬಳಕೆಗಾಗಿ ತಮ್ಮ ಸಣ್ಣ ಸಣ್ಣ ಹೊಲಗಳಲ್ಲಿ ಕೃಷಿ ಮಾಡುವ ಇವರು, ಜೀವನೋಪಾಯಕ್ಕೆ ಕೂಲಿ ಕೆಲಸವನ್ನೇ ನಂಬಿದ್ದಾರೆ.
ವಾರಣಾಸಿ ನಗರದಿಂದ 20 ಕಿಲೋಮೀಟರ್ ದೂರದಲ್ಲಿರುವ ಈ ಗ್ರಾಮವು ವಾರಣಾಸಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಪ್ರಧಾನಿ ನರೇಂದ್ರ ಮೋದಿಯವರು ಈ ಕ್ಷೇತ್ರದಲ್ಲಿ ಮೂರನೇ ಬಾರಿಗೆ ಸ್ಪರ್ಧಿಸುತ್ತಿದ್ದಾರೆ. 2014 ಮತ್ತು 2019ರಲ್ಲಿ ಇಲ್ಲಿಂದಲೇ ಅವರು ಗೆದ್ದಿದ್ದರು.
ಅತ್ಯಂತ ಕೌತುಕದ ಕ್ಷೇತ್ರಗಳಲ್ಲಿ ಒಂದಾಗಿರುವ ವಾರಣಾಸಿಯಲ್ಲಿ ಜೂನ್ 1ರಂದು ಚುನಾವಣೆ ನಡೆಯಲಿದೆ. 'ಹರ್ ದಿಲ್ ಮೆ ಮೋದಿ (ಪ್ರತಿಯೊಬ್ಬನ ಹೃದಯದಲ್ಲಿ ಮೋದಿ)' ಎಂದು ಬರೆಯಲಾಗಿರುವ ಕೇಸರಿ ಪೋಸ್ಟರ್‌ಗಳು ಇ-ರಿಕ್ಷಾಗಳ ಹಿಂಬಾಗದಲ್ಲಿ ಮತ್ತು ಬೀದಿ ದೀಪದ ಕಂಬಗಳು ಸೇರಿದಂತೆ ಮೂಲೆ ಮೂಲೆಗಳಲ್ಲಿ ತುಂಬಿಹೋಗಿವೆ. ಹೈ-ಪ್ರೊಫೈಲ್ ಅಭ್ಯರ್ಥಿಯ ಬಗ್ಗೆ ಮತ್ತು ಹೊಸ ರಾಮಮಂದಿರ ನಿರ್ಮಾಣದಲ್ಲಿ ಅವರ ಪಾತ್ರವನ್ನು ಹೊಗಳುವ ಭಾಷಣಗಳನ್ನು ಸ್ಪೀಕರ್‌ಗಳ ಮೂಲಕ ಪ್ರಚಾರ ಮಾಡುವ ಆಟೋಗಳು ಎಲ್ಲೆಡೆ ಕಂಡುಬರುತ್ತವೆ.
ಆದರೆ ಇಲ್ಲಿ, ಗೌರ್ ಮಧುಕರ್ ಶಹಾಪುರದಲ್ಲಿ ಮಾತ್ರ ಯಾವುದೇ ಚುನಾವಣಾ ಪ್ರಚಾರದ ಪೋಸ್ಟರ್‌ಗಳು ಕಂಡುಬರುವುದಿಲ್ಲ. ಅಯೋಧ್ಯೆಯ ರಾಮಮಂದಿರದ ಪ್ರತಿಷ್ಠಾಪನೆ ಕಾರ್ಯಕ್ರಮದ ಮೋದಿಯವರ ಫೋಟೋವೊಂದನ್ನು ಈ ಬಸ್ತಿಯಲ್ಲಿರುವ (ಕಾಲೋನಿ) ಹನುಮಾನ್ ದೇವಾಲಯದ ಹೊರಗೆ ಹಾಕಲಾಗಿದೆ.
ಆದರೆ ಈ ಗ್ರಾಮದ ನಿವಾಸಿ ಪಾರ್ವತಿಯವರು, ಬಿಎಸ್‌ಪಿ (ಬಹುಜನ್ ಸಮಾಜ್ ಪಾರ್ಟಿ)ಯ ನೀಲಿ ಬಾವುಟವನ್ನು ಹಾರಿಸಲು ಬಯಸುತ್ತಾರೆ. ಏಕೆಂದರೆ ಅವರಿಗೆ ತಮ್ಮ ಐದು ಮಂದಿ ಸದಸ್ಯರು ಇರುವ ಕುಟುಂಬದ ಹೊಟ್ಟೆತುಂಬಿಸುವುದು ಕಷ್ಟವಾಗಿದೆ ಎನ್ನುತ್ತಾರೆ ಅವರು. ಸರ್ಕಾರ ತಮಗೆ ನೆರವು ನೀಡಲು ಯಾಕೆ ಮುಂದೆ ಬರುತ್ತಿಲ್ಲ ಎನ್ನುತ್ತಾ, “ಸರ್ಕಾರ ಆಧಾರ್ ಕಾರ್ಡ್‌ಗಳನ್ನು ಕೊಟ್ಟಿದೆ ಮತ್ತು ಪ್ರತಿಯೊಬ್ಬರ ಮಾಹಿತಿಯೂ ಅವರ ಬಳಿಯಿದೆ, ಹೀಗಿರುವಾಗ ಅವರಿಗೆ ಬಡವರು ಯಾರು ಎಂದು ಕಂಡುಹಿಡಿಯಲು ಸಾಧ್ಯವಿಲ್ಲವೇ?” ಎಂದು ಪ್ರಶ್ನಿಸುತ್ತಾರೆ.


ಗೌರ್ ಗ್ರಾಮದ ಹರಿಜನ ಕಾಲೊನಿಯ ಹನುಮಾನ್ ದೇವಸ್ಥಾನದ ಹೊರಗೆ ಹಾಕಲಾಗಿರುವ ಪ್ರಧಾನಿ ನರೇಂದ್ರ ಮೋದಿಯವರ ಪೋಸ್ಟರ್ (ಎಡ). ಮುಖ್ಯವಾಗಿ ಪರಿಶಿಷ್ಟ ಜಾತಿ ಮತ್ತು ಇತರ ಹಿಂದುಳಿದ ಸಮುದಾಯಗಳ ಸುಮಾರು 1,200 ಕುಟುಂಬಗಳು ಇಲ್ಲಿ ವಾಸಿಸುತ್ತಿವೆ. ಪಾರ್ವತಿಯವರ ಮನೆಯ ಮೇಲಿರುವ ಬಹುಜನ್ ಸಮಾಜ್ ಪಾರ್ಟಿಯ (ಬಲ) ಧ್ವಜ


ಎಡ: ರೇಣು ದೇವಿಯವರು ಮನರೇಗಾ ಮಜ್ದೂರ್ ಯೂನಿಯನ್‌ನ ಸಂಯೋಜಕಿ. ಇವರು ಮನರೇಗಾದಲ್ಲಿ ಉದ್ಯೋಗ ಕಡಿಮೆಯಾಗುತ್ತಿದೆ ಎಂದು ಹೇಳುತ್ತಾರೆ. ಪ್ರಧಾನ ಮಂತ್ರಿ ಮೂರನೇ ಬಾರಿಗೆ ಸ್ಪರ್ಧಿಸುತ್ತಿರುವ ಈ ಕ್ಷೇತ್ರದ ನಗರ ಮತ್ತು ಜಿಲ್ಲೆಯಾದ್ಯಂತ ರಾರಾಜಿಸುತ್ತಿರುವ ಮೋದಿ ಪೋಸ್ಟರ್‌ಗಳು
ಗ್ರಾಮೀಣ ಖಾತ್ರಿ ಯೋಜನೆಯಲ್ಲಿ ಉದ್ಯೋಗದ ಸಂಖ್ಯೆ ಕುಸಿತಯುತ್ತಿದೆ ಎಂದು ಮನರೇಗಾ ಮಜ್ದೂರ್ ಯೂನಿಯನ್‌ನ ರೇಣು ದೇವಿ ಅವರು ಪರಿಗೆ ಹೇಳುತ್ತಾರೆ. "ಮನರೇಗಾದ ಪರಿಸ್ಥಿತಿಯು 2019 ರಿಂದ ಹದಗೆಡುತ್ತಿದೆ. ಈ ಹಿಂದೆಲ್ಲಾ ನಾವು ಗ್ರಾಮಸ್ಥರ ಪರವಾಗಿ ಅರ್ಜಿಗಳನ್ನು ಬರೆಯುತ್ತಿದ್ದಾಗ, ಒಂದು ವಾರದ ಟಾಸ್ಕ್ ಹಾಕಿಕೊಳ್ಳುತ್ತಿದ್ದೆವು. ಆದರೆ ಈಗ ಒಂದು ವರ್ಷದಲ್ಲಿ ಏಳು ದಿನ ಕೆಲಸ ಸಿಗುವುದೂ ಕಷ್ಟವಾಗಿದೆ,” ಎಂದು ಅವರು ಹೇಳುತ್ತಾರೆ.
ಬರೀ 2021 ರಲ್ಲಿಯೇ, ಮನರೇಗಾ ಮಜ್ದೂರ್ ಯೂನಿಯನ್‌ನ ಸ್ಥಳೀಯ ಸ್ವಯಂಸೇವಕರು ಬೇರೆ ಬೇರೆ ಗ್ರಾಮಗಳಲ್ಲಿ ಕೆಲಸ ಕೊಡುವಂತೆ ವಿನಂತಿಸಿ ವಾರಣಾಸಿಯ ಬ್ಲಾಕ್ ಮಟ್ಟದ ಅಧಿಕಾರಿಗಳಿಗೆ 24 ಪತ್ರಗಳನ್ನು ಬರೆದಿದ್ದರು.
ಅದೇ ವರ್ಷ ಜೀರಾ ದೇವಿ ಕೊನೆಯ ಬಾರಿಗೆ ಮನರೇಗಾದ ಕೆಲಸವನ್ನು ಮಾಡಿದ್ದು - ಜೂನ್ 2021.
ಜೀರಾರವರು ಕೂಡ ಗೌರ್ ಮಧುಕರ್ ಶಹಾಪುರ್ ಗ್ರಾಮದ ಅದೇ ಬಸ್ತಿಯ ನಿವಾಸಿ. 45 ವರ್ಷ ಪ್ರಾಯದ ಈ ಕೂಲಿ ಕಾರ್ಮಿಕೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಲ್ಲಿ ಸಿಕ್ಕಿದ ಜೋಲಾ (ಬಟ್ಟೆ ಚೀಲ) ವನ್ನು ಹೊರತೆಗೆದರು. ಅದರ ಮೇಲೆ ಪ್ರಧಾನಿ ಮೋದಿಯವರ ಭಾವಚಿತ್ರವಿದೆ. ವಿಪರ್ಯಾಸವೆಂದರೆ, ಆ ಚೀಲದಲ್ಲಿ ಅವರ ಅರಿವಿಗೇ ಬಾರದ ಯೋಜನೆಗಳ ಪ್ರಮುಖ ದಾಖಲೆಗಳಿವೆ. "ಮೋದಿಯವರಿಗೆ ಈ ಚಿಂತೆಯೇ ಇಲ್ಲದಿರುವಾಗ, ನಾವು ಮೊದಲು ಅವರು ಸವಾರಿ ಮಾಡುವ ಹೆಲಿಕಾಪ್ಟರನ್ನು ಹಿಡಿಯಬೇಕು," ಎಂದು ಅವರು ನಗುತ್ತಾ ಹೇಳುತ್ತಾರೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆ-ಗ್ರಾಮೀಣ್ ಅಡಿಯಲ್ಲಿ ಮನೆ ಕಟ್ಟಿಕೊಡಲು ಕೇಳಿಕೊಂಡಾಗ, ಸ್ಥಳೀಯ ಪ್ರಧಾನ್ (ಮುಖ್ಯಸ್ಥರು) 10,000 ರುಪಾಯಿ ಲಂಚ ಕೇಳಿದರು ಎಂದು ಜೀರಾ ಹೇಳುತ್ತಾರೆ. ಈ ಬಗ್ಗೆ ವಾರಣಾಸಿಯ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಪತ್ರ ಬರೆದರೂ ಯಾವುದೇ ಉಪಯೋಗವಾಗಲಿಲ್ಲ. "ನನ್ನ ಮನೆಯ ಗೋಡೆಗಳನ್ನು ಒಮ್ಮೆ ನೋಡಿ, ಗೋಣಿ ಚೀಲಗಳು, ಪೋಸ್ಟರ್‌ಗಳಿಂದ ಮಾಡಿದ್ದೇವೆ!" ಎಂದು ಹುಲ್ಲಿನ ಛಾವಣಿ ಹಾಕಿರುವ ತಮ್ಮ ಮನೆಯಲ್ಲಿ ಕುಳಿತುಕೊಂಡು ಅವರು ಹೇಳುತ್ತಾರೆ.
ದಿನಗೂಲಿಗೆ ದುಡಿಯುವ ಇವರಿಗೆ ಮನರೇಗಾದ ಕೆಲಸ ಸಿಗದೆ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ಇವರ ಕುಟುಂಬದ ಬಳಿ ಒಂದು ಎಕರೆಯ ಹತ್ತನೇ ಒಂದು ಭಾಗಕ್ಕಿಂತಲೂ ಕಡಿಮೆ ಜಮೀನಿದೆ. ಅವರ ಮಗ ಶಿವಂ ಮತ್ತು ಅವರ ಪತಿ ರಾಮ್ ಲಾಲ್ ಇಬ್ಬರೂ ಜೀರಾ ಅವರ ಸಂಬಳವನ್ನೇ ನಂಬಿದ್ದಾರೆ. ಹೀಗಾಗಿ ತಮ್ಮ ನಲವತ್ತರ ವಯಸ್ಸಿನಲ್ಲಿಯೂ ಕಷ್ಟಪಡಬೇಕಾದ ಪರಿಸ್ಥಿತಿ ಇವರದ್ದು. “ನನಗೆ ವಿಪರೀತ ತಲೆನೋವು ಮತ್ತು ಮೈಕೈ ನೋವು ಬರುತ್ತದೆ. ಆದ್ದರಿಂದ ಇನ್ನು ಮುಂದೆ ಮಣ್ಣು ಹೊರಲು ಸಾಧ್ಯವಿಲ್ಲ [ಮನರೇಗಾದ ಕೆಲಸ ]," ಎಂದು ಅವರು ನೋವನ್ನು ಹಂಚಿಕೊಳ್ಳುತ್ತಾರೆ.


ಮನರೇಗಾದ ಕೆಲಸವಿಲ್ಲದೆ, ಜೀರಾ ದೇವಿ ತಮ್ಮ ಕುಟುಂಬವನ್ನು ಸಾಕಲು ಹೆಣಗಾಡುತ್ತಿದ್ದಾರೆ. ತಮ್ಮ ಕಡು ಬಡತನದ ಹೊರತಾಗಿಯೂ, ಮನೆ ಕಟ್ಟಿಕೊಡುವ ಸರ್ಕಾರದ ಯೋಜನೆಯಿಂದ ಹೊರಗಿಡಲಾಗಿದೆ ಎಂದು ಅವರು ಹೇಳುತ್ತಾರೆ. ಅದಕ್ಕೆ ಸಂಬಂಧಿಸಿ ಚೀಲವೊಂದು ಅವರ ಬಳಿಯಿದೆ (ಬಲ)


ತನ್ನ ಮಗ ಶಿವಂ (ಎಡ) ಜೊತೆಗೆ ಇರುವ ಜೀರಾ ದೇವಿ. ಗೌರ್ ಮಧುಕರ್ ಶಹಾಪುರ್ ಗ್ರಾಮದ ಹರಿಜನ ಕಾಲೊನಿಯಲ್ಲಿರುವ ಅವರ ಮನೆ ಮತ್ತು ಅಡಿಗೆ ಮನೆ (ಬಲ)
ಇವರ ಕುಟುಂಬವು ಉತ್ತರ ಪ್ರದೇಶದಲ್ಲಿ ಇತರೆ ಹಿಂದುಳಿದ ವರ್ಗವೆಂದು ಪರಿಗಣಿಸಲ್ಪಟ್ಟಿರುವ ಬಿಂದ್ / ಮಲ್ಲಾ ಸಮುದಾಯಕ್ಕೆ ಸೇರಿದೆ. ಇವರ ಪತಿಗೆ ಕೆಲಸ ಮಾಡಲು ಸಾಧ್ಯವಿಲ್ಲ. ದೃಷ್ಟಿಯ ಸಮಸ್ಯೆ ಇರುವ ಇವರ ಮಗನಿಗೆ ವಿಶೇಷಚೇತನರ ಪಿಂಚಣಿ ಸಿಗುತ್ತಿತ್ತು, ಆದರೆ ಕಳೆದ ವರ್ಷ ಅದೂ ನಿಂತುಹೋಯಿತು. ಇದನ್ನು ಮತ್ತೆ ಬರುವಂತೆ ಮಾಡಲು ಇವರಿಗೆ ಸಾಧ್ಯವಾಗಲಿಲ್ಲ.
ಕೃಷಿ ಕೂಲಿ ಕೆಲಸ ಮಾಡುವ ಇವರು ಆ ದಿನ ದುಡಿದಿದ್ದಕ್ಕೆ ಸಂಭಾವನೆಯಾಗಿ ಸಿಕ್ಕಿದ ಬೆಳ್ಳುಳ್ಳಿಯ ತೆನೆಯನ್ನು ಹಿಡಿದುಕೊಂಡು ಜೀರಾ ದೇವಿ, “ನಮ್ಮಂತಹವರನ್ನು ಬೆಂಬಲಿಸುವ ಮಹಿಳೆಗೆ ನಾನು ಮೋಟು ಹಾಕುತ್ತೇನೆ – ಮಾಯಾವತಿ!” ಎಂದು ವರದಿಗಾರರಿಗೆ ಮತ್ತು ನಮ್ಮ ಸುತ್ತ ಮುತ್ತಲಿರುವವರಿಗೆ ಹೇಳುತ್ತಾರೆ.
ಹೈ-ಪ್ರೊಫೈಲ್ ಕ್ಷೇತ್ರದಲ್ಲಿ ಇದೊಂದು ಕಠಿಣ ನಿಲುವು.
ಇದು ಕೇವಲ ಜೀರಾ ಮತ್ತು ಪಾರ್ವತಿಯವರ ಕಥೆಯಲ್ಲ. “ನಾನು ಇನ್ನೂ ಯೋಚಿಸಿಲ್ಲ [ಯಾರಿಗೆ ಮತ ಹಾಕಬೇಕೆಂದು]. ಆದರೆ ಮೋದಿಯವರ ಕೆಲಸದಿಂದ ನಮಗೆ ಏನೂ ಸಮಧಾನವಾಗಿಲ್ಲ,” ಎಂದು ಅದೇ ಗ್ರಾಮದಲ್ಲಿ ದಿನಗೂಲಿ ಕೆಲಸ ಮಾಡುವ ಅಶೋಕ್ ಹೇಳುತ್ತಾರೆ.
ಇವರ ಪತ್ನಿ ಸುನೀತಾರವರಿಗೆ ಇತ್ತೀಚೆಗೆ ಮನರೇಗಾ ಅಡಿಯಲ್ಲಿ ಮೂರು ದಿನಗಳ ಕೆಲಸ ಸಿಕ್ಕಿತ್ತು. ಕಳೆದ ವರ್ಷ (2023) ಐದು ದಿನಗಳ ಕೆಲಸ ಸಿಕ್ಕಿತ್ತು. ದಂಪತಿಗಳು ತಮ್ಮ ಮೂವರು ಮಕ್ಕಳಾದ 14 ವರ್ಷದ ಸಂಜನಾ, 12 ವರ್ಷದ ರಂಜನಾ ಮತ್ತು 10 ವರ್ಷದ ರಾಜನ್‌ನೊಂದಿಗೆ ಗೌರ್ ಮಧುಕರ್ ಶಹಾಪುರದಲ್ಲಿ ವಾಸಿಸುತ್ತಾರೆ.
ಅಶೋಕ್ (ಈ ಹೆಸರನ್ನು ಮಾತ್ರ ಬಳಸುತ್ತಾರೆ) ಒಂದು ಕಾಲದಲ್ಲಿ ಅತ್ಯಂತ ಬೆಲೆಬಾಳುವ ಬನಾರಸಿ ಸೀರೆಗಳನ್ನು ನೇಯುತ್ತಿದ್ದರು. ಆದರೆ ಕುಟುಂಬ ಬೆಳೆದಂತೆ ಇದರಿಂದ ಬರುವ ಆದಾಯ ಸಾಕಾಗಲಿಲ್ಲ. ಅವರು ನೇಯ್ಗೆಯನ್ನು ಬಿಟ್ಟು ವಾರಣಾಸಿ ನಗರದ ಕಟ್ಟಡ ನಿರ್ಮಾಣ ಕೆಲಸಗಳಲ್ಲಿ ಮತ್ತು ಕಾರ್ಮಿಕರ ಮಂಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ತಿಂಗಳಿಗೆ ಸುಮಾರು 20-25 ದಿನಗಳ ಕೆಲಸ ಸಿಗುತ್ತದೆ. ದಿನಕ್ಕೆ ಸುಮಾರು 500 ರುಪಾಯಿ ಸಂಪಾದನೆಯಾಗುತ್ತದೆ. "ಹೇಗೋ ನಾವು ಜೀವನ ನಡೆಸಿಕೊಂಡು ಹೋಗುತ್ತಿದ್ದೇವೆ,” ಎಂದು 45 ವರ್ಷ ಪ್ರಾಯದ ಇವರು ಹರಿಜನ ಕಾಲೋನಿಯಲ್ಲಿರುವ ತಮ್ಮ ಮನೆಯಿಂದ ಹೊರಡುತ್ತಾ ಹೇಳುತ್ತಾರೆ. ಮಣ್ಣಿನ ಮಡಕೆಗಳು ಮತ್ತು ಕೆಂಪು ಧ್ವಜಗಳನ್ನು ದಾಟಿಕೊಂಡು ಹೆಜ್ಜೆ ಹಾಕುತ್ತಾ ಕಾರ್ಮಿಕ ಮಂಡಿಗೆ ಹೋಗುತ್ತಾರೆ.


ಅಶೋಕ್ ಕೆಲವು ವರ್ಷಗಳ ಹಿಂದೆ ಮನರೇಗಾ ಅಡಿಯಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸಿದರು. ಒಂದು ಕಾಲದಲ್ಲಿ ಬನಾರಸಿ ಸೀರೆಗಳನ್ನು ನೇಯುತ್ತಿದ್ದ ಇವರು ಈಗ ಕೂಲಿ ಕೆಲಸ ಮಾಡುತ್ತಿದ್ದಾರೆ. ರಖೌನಾ ಗ್ರಾಮದಲ್ಲಿರುವ ಮೋದಿಯವರ ಪೋಸ್ಟರ್‌ಗಳು


ರಖೌನಾ ಗ್ರಾಮದ ಸಂತಾರಾ ದೇವಿಯವರಿಗೆ ಮನರೇಗಾ ಅಡಿಯಲ್ಲಿ ಕೆಲಸ ಸಿಕ್ಕಿಲ್ಲ. ಅವರು ಈಗ ಮನೆಯಲ್ಲಿಯೇ ಇದ್ದು ರುದ್ರಾಕ್ಷಿ ಮಣಿಗಳ ಮಾಲೆ ಕಟ್ಟುತ್ತಿದ್ದಾರೆ. ಇವರಿಗೆ ಪ್ರತಿ ತಿಂಗಳಿಗೊಮ್ಮೆ ಸುಮಾರು 2,000-5,000 ಸಂಪಾದನೆಯಾಗುತ್ತದೆ
ವಾರಣಾಸಿ ಜಿಲ್ಲೆಯ ರಖೌನಾ ಗ್ರಾಮದ ಮನೆಗಳ ಗೇಟ್‌ಗಳ ಮೇಲೆ ‘ಮೇ ಹೂಂ ಮೋದಿ ಕಾ ಪರಿವಾರ್ [ನಾವೂ ಮೋದಿಯವರ ಪರಿವಾರದವರು]’ ಎಂಬ ನೀಲಿ ಬಣ್ಣದ ಸ್ಟಿಕ್ಕರ್‌ಗಳನ್ನು ಅಂಟಿಸಲಾಗಿದೆ. ಸಂತಾರಾ ದೇವಿ ಅವರ ಮನೆಯಲ್ಲಿ, ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ "ಡಬಲ್ ಇಂಜಿನ್ ಕಿ ಸರ್ಕಾರ್"ನ ಸಾಧನೆಯನ್ನು ಹೇಳುವ ಪೋಸ್ಟರೊಂದನ್ನು ಹಾಸಿಗೆಯ ಮೇಲೆ ಹಾಸಲಾಗಿದೆ.
ಇವರು ಮಣ್ಣಿನ ನೆಲದ ಮೇಲೆ ಕುಳಿತುಕೊಂಡು ರುದ್ರಾಕ್ಷಿ ಮಣಿಗಳ ಮಾಲೆ (ಹಾರ) ಕಟ್ಟುತ್ತಿದ್ದಾರೆ. ನೊಣಗಳು ಗುಂಪು ಗುಂಪಾಗಿ ಅವರ ಸುತ್ತ ಹಾರಾಡುತ್ತಿವೆ. ಹುಲ್ಲಿನ ಛಾವಣಿಯ ಆ ಮನೆ ಆರು ಮಂದಿ ಇರುವ ಕುಟುಂಬವನ್ನು ಬೇಸಿಗೆಯ ಉರಿ ಬಿಸಿಲಿನಿಂದ ಕಾಪಾಡುತ್ತದೆ. “ನಮಗೆ ಕೃಷಿ ಭೂಮಿಯಾಗಲೀ, ತೋಟವಾಗಲಿ ಇಲ್ಲ. ಕೆಲಸ ಮಾಡದಿದ್ದರೆ ಹೊಟ್ಟೆ ತುಂಬಿಸಿಕೊಳ್ಳುವುದು ಹೇಗೆ?” ಎಂದು ವರದಿಗಾರರಲ್ಲಿ ಕೇಳುತ್ತಾರೆ.
ಮನರೇಗಾದಲ್ಲಿ ನೋಂದಾಯಿಸಲ್ಪಟ್ಟ ನಂತರ ಇವರಿಗೆ ಕಳೆದ ಆಗಸ್ಟ್‌ನಲ್ಲಿ (2023) ಎಂಟು ದಿನಗಳ ಕೆಲಸ ಸಿಕ್ಕಿತ್ತು. ಆಗ ಪೋಖಾರಿ (ಕೆರೆ) ತೋಡುವ ಕೆಲಸ ಮಾಡಿದ್ದರು. ಮನರೇಗಾದ ಕೆಲಸ ಇಲ್ಲದೆ ಆಗಿರುವ ನಷ್ಟವನ್ನು ಸರಿದೂಗಿಸಲು, ಸಂತಾರಾ ಅವರಂತಹ ಮಹಿಳೆಯರು ಕಡಿಮೆ ಸಂಬಳದ ಬೇರೆ ಉದ್ಯೋಗಗಳನ್ನು ಮಾಡುತ್ತಿದ್ದಾರೆ. ರುದ್ರಾಕ್ಷಿ ಮಾಲೆಗಳನ್ನು ತಯಾರಿಸುವುದರಿಂದ ಅವರಿಗೆ ಪ್ರತಿ ತಿಂಗಳಿಗೊಮ್ಮೆ 2,000-5,000 ರುಪಾಯಿ ಸಿಗುತ್ತದೆ. “ನಮಗೆ ಒಂದು ಡಜನ್‌ಗೆ 25 ರುಪಾಯಿ ಕೊಡುತ್ತಾರೆ. ಸಗಟು ವ್ಯಾಪಾರಿ ನಮಗೆ ಒಮ್ಮೆಗೇ 20-25 ಕಿಲೋ ರುದ್ರಾಕ್ಷಿ ಮಣಿಗಳನ್ನು ಕೊಡುತ್ತಾನೆ,” ಎಂದು ಅವರು ಹೇಳುತ್ತಾರೆ.
ಸಂತಾರಾ ಅವರ ನೆರೆಮನೆಯ 50 ವರ್ಷದ ಮುಂಕಾ ದೇವಿಯವರು ಕಳೆದ ವರ್ಷದ ಮನರೇಗಾ ಕೆಲಸದ ಬಗ್ಗೆ ರೋಝ್‌ಗರ್ ಸಹಾಯಕರು (ದಾಖಲೆಗಳನ್ನು ಸಲ್ಲಿಸಲು ಸಹಕರಿಸಿದವರು) ಏನು ಹೇಳುತ್ತಾರೆ ಎಂಬುದನ್ನು ಕೇಳಲು ಕಾಯುತ್ತಿದ್ದಾರೆ. ಮುಂಕಾ ಅವರ ಗಂಡನ ಹೆಸರಿನಲ್ಲಿ 1.5 ಬಿಘಾ ಜಮೀನು ಇದೆ. ಇದರಲ್ಲಿ ಅವರು ಮಾರಾಟ ಮಾಡಲು ತರಕಾರಿಗಳನ್ನು ಬೆಳೆಯುತ್ತಾರೆ, ಆದರೂ ಬೇರೆಯವರ ಹೊಲಗಳಲ್ಲಿ ಕೆಲಸ ಮಾಡುತ್ತಾರೆ. "ಇದು ಕನಿಷ್ಟ ನನ್ನ ಮನೆಯ ನಮಕ್-ತೇಲ್ [ಉಪ್ಪು - ಎಣ್ಣೆ] ಖರ್ಚಿಗಾದರೂ ಆಗುತ್ತದೆ,” ಎಂದು ಅವರು ಮನೆಗೆ ಅಗತ್ಯವಾಗಿ ಬೇಕಾದ ಆಹಾರ ಪದಾರ್ಥಗಳನ್ನು ಉಲ್ಲೇಖಿಸುತ್ತಾರೆ.


ಮನರೇಗಾ ಜಾಬ್ ಕಾರ್ಡ್ (ಎಡ). ಮನರೇಗಾದ ಪಟ್ಟಿಯಿಂದ ತಮ್ಮ ಹೆಸರನ್ನು ಆಕಸ್ಮಿಕ ತಪ್ಪಿನಿಂದ ತೆಗೆದು ಹಾಕಿರುವುದು ಶಕುಂತಲಾ ದೇವಿಯವರಿಗೆ ತಿಳಿದಿದೆ. ಸದ್ಯ ಕಲ್ಲಿನ ವಿಗ್ರಹಗಳಿಗೆ ಪಾಲಿಶ್ ಮಾಡುವ ಇವರ ಕೈಗಳಲ್ಲಿ ಯಾವಾಗಲೂ ಗಾಯದ ಗುರುತುಗಳಿರುತ್ತವೆ


ತಮ್ಮ ಹೊಸ ಮನೆಯ ಹೊರಗೆ ಇರುವ ಮುಂಕಾ ದೇವಿ (ಎಡ). 'ಮೋದಿ ನಮ್ಮ ನರೇಗಾ ಕೆಲಸವನ್ನು ಕಿತ್ತುಕೊಂಡರು,' ಶೀಲಾ (ಬಲ) ಹೇಳುತ್ತಾರೆ
ಖೇವಾಲಿ ಗ್ರಾಮದ ಶಕುಂತಲಾ ಅವರು ಈ ಬಾರಿ ಮತದಾನ ಮಾಡದಿರಲು ನಿರ್ಧರಿಸಿದ್ದಾರೆ. "ಸರ್ಕಾರ ನನಗೆ ಯಾವುದೇ ಉದ್ಯೋಗವನ್ನು ನೀಡಿಲ್ಲ, ನಾನು ಯಾರಿಗೂ ವೋಟು ಹಾಕುವುದಿಲ್ಲ," ಎಂದು ಅವರು ಘಂಟಾಘೋಷವಾಗಿ ಹೇಳುತ್ತಾರೆ. ಸಕ್ರಿಯ ಜಾಬ್ ಕಾರ್ಡ್ ಹೊಂದಿರುವವರ ಹೆಸರಿನ ಪಟ್ಟಿಯಿಂದ ತೆಗೆದುಹಾಕಲಾಗಿರುವ ಈ ಗ್ರಾಮದ 12 ಮಹಿಳೆಯರಲ್ಲಿ ಶಕುಂತಲಾ ಕೂಡ ಒಬ್ಬರು. ಇದು ನಕಲಿ ಮನರೇಗಾ ಕಾರ್ಮಿಕರ ಹೆಸರನ್ನು ತೆಗೆದುಹಾಕುವಾಗ ಆದ ಕ್ಲೆರಿಕಲ್ ತಪ್ಪು.
“ಮೋದಿ ನಮ್ಮ ನರೇಗಾ ಕೆಲಸವನ್ನು ಕಿತ್ತುಕೊಂಡರು. ನಮಗೆ ಕನಿಷ್ಠ ಎರಡು ತಿಂಗಳ ಕಾಲ ನಿಯಮಿತವಾಗಿ ಕೆಲಸ ಬೇಕು, 800 ರೂಪಾಯಿ ದಿನಗೂಲಿ ಕೊಡಬೇಕು,” ಎಂದು ಖೇವಾಲಿಯ ಇನ್ನೊಬ್ಬ ನಿವಾಸಿ ಶೀಲಾ ಹೇಳುತ್ತಾರೆ. "ಉಚಿತ ಪಡಿತರ ಯೋಜನೆಯಲ್ಲಿ ಗೋಧಿ ಮತ್ತು ಅಕ್ಕಿಯ ಜೊತೆಗೆ ಬೇಳೆಕಾಳುಗಳು, ಉಪ್ಪು ಮತ್ತು ಎಣ್ಣೆಯನ್ನೂ ಕೊಡಬೇಕು,” ಎಂದು ಮಧ್ಯದಲ್ಲಿ ಶಕುಂತಲಾ ಹೇಳುತ್ತಾರೆ.
ಅವರ ಮನೆಯ ತೆರೆದ ಜಾಗದ ತುಂಬಾ ನಂದಿಯ ಕಲ್ಲಿನ ವಿಗ್ರಹಗಳಿವೆ. "ಇವುಗಳನ್ನು ಪಾಲಿಶ್ ಮಾಡಿ ಮಾಡಿ ನನ್ನ ಕೈಗಳಲ್ಲಿ ಗಾಯಗಳಾಗಿವೆ, ಆದರೆ ಒಂದು ಪೀಸ್‌ಗೆ 150-200 ರೂಪಾಯಿ ಸಿಗುತ್ತದೆ," ಎನ್ನುತ್ತಾರೆ ಅವರು. ಅವರ ಬೆರಳುಗಳು ಊದಿಕೊಂಡಿವೆ. ಆದರೆ ಮನರೇಗಾ ಅಡಿಯಲ್ಲಿ ಕೆಲಸ ಸಿಗದ ಇವರಂತಹ ಮಹಿಳೆಯರಿಗೆ ಬೇರೆ ಆಯ್ಕೆಗಳೂ ಕಡಿಮೆ.
ಅನುವಾದ: ಚರಣ್ ಐವರ್ನಾಡು