ತಮ್ಮ ಮನೆಯೊಳಗೆ ಕುರ್ಚಿಯೊಂದರ ಮೇಲೆ ಕುಳಿತಿರುವ ಗೋಮಾ ರಾಮ ಹಜಾರೆಯವರು ಶಾಂತವಾಗಿ ತಮ್ಮ ಹಳ್ಳಿಯ ಖಾಲಿ ಮುಖ್ಯ ರಸ್ತೆಯನ್ನು ನಿರಾಸಕ್ತಿಯಿಂದ ನೋಡುತ್ತಾ ಸಮಯ ಕಳೆಯುತ್ತಿದ್ದಾರೆ.
ಒಮ್ಮೊಮ್ಮೆ ತಮ್ಮ ಯೋಗಕ್ಷೇಮವನ್ನು ವಿಚಾರಿಸುವ ದಾರಿಹೋಕರೊಂದಿಗೆ ಮಾತಿಗಿಳಿಯುತ್ತಾರೆ. ಒಂದು ವಾರದ ಹಿಂದೆ ಇವರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ತಮ್ಮ ಪತ್ನಿಯನ್ನು ಕಳೆದುಕೊಂಡರು.
ಸಂಜೆ 5 ಗಂಟೆ, 2024ರ ಏಪ್ರಿಲ್ ತಿಂಗಳ ಮಧ್ಯೆ, ವಾತಾವರಣ ತುಂಬಾ ಬಿಸಿಯಾಗಿದೆ. ಬಿದಿರು ಮತ್ತು ತೇಗದ ಮರಗಳು ಹೇರಳವಾಗಿರುವ ಕಾಡುಗಳ ಮಡಿಲಲ್ಲಿರುವ ಉತ್ತರ ಗಡ್ಚಿರೋಲಿಯ ಅರ್ಮೋರಿ ತೆಹಸಿಲ್‌ನ ಪಲಾಸ್‌ಗಾಂವ್ ಹಳ್ಳಿ ಶಾಂತವಾಗಿದೆ. ಗಡ್ಚಿರೋಲಿ-ಚಿಮೂರ್ ಲೋಕಸಭಾ ಕ್ಷೇತ್ರದ ಮತದಾನ ಕೆಲವೇ ದಿನಗಳಲ್ಲಿ ನಡೆಯಲಿದೆ. ಬಿಜೆಪಿಯ ಹಾಲಿ ಸಂಸದ ಅಶೋಕ್ ನೇತೆ ಮತ್ತೆ ಸ್ಪರ್ಧಿಸಿದ್ದಾರೆ. ಆದರೆ ಈ ಕ್ಷೇತ್ರದಲ್ಲಿ ಯಾವುದೇ ಉತ್ಸಾಹವಿಲ್ಲ. ನಿಜ ಹೇಳಬೇಕೆಂದರೆ, ಕೇವಲ ಚಿಂತೆಯೇ ತುಂಬಿದೆ.
ಕಳೆದ ಎರಡು ತಿಂಗಳಿಂದ ಗೋಮಾ ಅವರಿಗೆ ಕೆಲಸವಿಲ್ಲ. ಇಂತಹ ಸಮಯದಲ್ಲಿ ಸಾಮಾನ್ಯವಾಗಿ, ಅರವತ್ತರ ಹರೆಯದ ಭೂರಹಿತ ಕಾರ್ಮಿಕರಾಗಿರುವ ಇವರು ಇತರರಂತೆ ಮಹುವ ಅಥವಾ ಟೆಂಡುಗಳನ್ನು ಸಂಗ್ರಹಿಸುತ್ತಾರೆ, ಇಲ್ಲವೇ ಕಾಡಿನಲ್ಲಿ ಬಿದಿರು ಕಡಿಯುವ ಅಥವಾ ಕೃಷಿ ಕೆಲಸ ಮಾಡುತ್ತಾರೆ.
"ಈ ವರ್ಷ ಅದು ಆಗಲಿಲ್ಲ. ಯಾರು ಅಪಾಯವನ್ನು ಮೈಗೆಳೆದುಕೊಳ್ಳುತ್ತಾರೆ?” ಎಂದು ಗೋಮಾ ಹೇಳುತ್ತಾರೆ.
"ಜನರು ಮನೆಯಲ್ಲಿಯೇ ಇರುತ್ತಾರೆ," ಎಂದು ಗೋಮಾ ಹೇಳುತ್ತಾರೆ. ಹಗಲು ಬಿಸಿಲಿನ ಉರಿ ಜಾಸ್ತಿ. ನಿಮಗೆ ಹೊರಗೆ ಹೋಗಲೂ ಸಾಧ್ಯವಿಲ್ಲ. ಗಡ್ಚಿರೋಲಿ ನಾಲ್ಕು ದಶಕಗಳಿಂದ ಸಶಸ್ತ್ರ ಸಂಘರ್ಷದಲ್ಲಿ ಸಿಲುಕಿ ತೊಂದರೆಗೀಡಾಗಿದೆ ಮತ್ತು ಭದ್ರತಾ ಪಡೆಗಳು ಹಾಗೂ ಶಸ್ತ್ರಸಜ್ಜಿತ ಮಾವೋವಾದಿಗಳ ಗುಂಪಿನ ನಡುವಿನ ರಕ್ತಸಿಕ್ತ ಕಲಹದಿಂದ ನಲುಗಿರುವ ಇಂತಹ ಅನೇಕ ಹಳ್ಳಿಗಳಲ್ಲಿ ಕರ್ಫ್ಯೂ ಹಾಕಲಾಗುತ್ತದೆ. ಆದರೆ ಈ ಬಾರಿ ಬಂದಿರುವವರೇ ಬೇರೆ. ಅವರು ನಮ್ಮ ಬದುಕು ಮತ್ತು ಜೀವನೋಪಾಯಕ್ಕೆ ನೇರ ಬೆದರಿಕೆಯನ್ನುಂಟುಮಾಡಿದ್ದಾರೆ.
ಅದೊಂದು 23 ಕಾಡು ಆನೆಗಳ ಹಿಂಡು. ಇವು ಹೆಣ್ಣು ಮರಿ ಆನೆಗಳ ಜೊತೆಗೆ, ಪಲಾಸ್‌ಗಾಂವ್ ಸುತ್ತಮುತ್ತಲ ಪ್ರದೇಶದಲ್ಲಿ ಬೀಡುಬಿಟ್ಟಿವೆ.


ಮಹಾರಾಷ್ಟ್ರದ ಪಲಾಸ್‌ಗಾಂವ್‌ನ ಭೂರಹಿತ ರೈತ ಗೋಮಾ ರಾಮ ಹಜಾರೆ (ಎಡ) ಅವರು ಲೋಕಸಭಾ ಚುನಾವಣೆಯ ಸಂದರ್ಭದಲ್ಲೇ, ಈ ಬೇಸಿಗೆಯಲ್ಲಿ ತಮ್ಮ ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಕಾಡಾನೆ ಹಿಂಡು ಬಂದಿರುವುದರಿಂದ ತಮ್ಮ ಜೀವನೋಪಾಯದ ಕೆಲಸಗಳನ್ನು ಬಿಟ್ಟುಬಿಟ್ಟಿದ್ದಾರೆ. ಈ ಹಳ್ಳಿಗರು ಚುನಾವಣೆಯಲ್ಲಿ ಯಾರಿಗೆ ಮತ ಹಾಕಬೇಕು ಎಂಬುದಕ್ಕಿಂತ ಹೆಚ್ಚಾಗಿ ಕಾಡು ಆನೆಗಳ ಬಗ್ಗೆ ಚಿಂತೆಗೆ ಒಳಗಾಗಿದ್ದಾರೆ. ಇವರು ಮತ್ತು ಇವರ ಕುಟುಂಬಕ್ಕೆ ಮಹುವಾ ಮತ್ತು ಟೆಂಡು ಸಂಗ್ರಹಿಸಲು ಸಾಧ್ಯವಾಗದ ಕಾರಣ ಎರಡು ತಿಂಗಳಲ್ಲಿ ಸರಾಸರಿ ತಲಾ 25,000 ರುಪಾಯಿ ನಷ್ಟವಾಗಿದೆ


ಎಡ: ಪಲಾಸ್‌ಗಾಂವ್‌ನ ಖಾಲಿ ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿರುವ ಹಜಾರೆ. ಬಲ: ಏಪ್ರಿಲ್ ಮಧ್ಯದಲ್ಲಿ ಬಿಸಿಲಿನ ಉರಿ ಹೆಚ್ಚಾಗಿ ಇಡೀ ಗ್ರಾಮವೇ ನಿರ್ಜನವಾಗಿ ಕಾಣುತ್ತಿದೆ. ಕೆಲವು ಮನೆಗಳಲ್ಲಿ ಮಹುವಾ ಹೂವುಗಳನ್ನು ಬಿಸಿಲಿಗೆ ಹಾಕಿ ಒಣಗಿಸಲಾಗುತ್ತದೆ; ಈ ಹೂವುಗಳನ್ನು ಹತ್ತಿರದ ಹೊಲಗಳಿಂದ ಆರಿಸಲಾಗುತ್ತದೆ. ಸಾಮಾನ್ಯವಾಗಿ, ಈ ಸಮಯದಲ್ಲಿ ಗ್ರಾಮ ಮಹುವ ಮತ್ತು ತೆಂಡು ಎಲೆಗಳಿಂದ ತುಂಬಿರುತ್ತದೆ, ಆದರೆ ಈ ವರ್ಷ ಪರಿಸ್ಥಿತಿ ಹಾಗಿಲ್ಲ
ಉತ್ತರ ಛತ್ತೀಸ್‌ಗಢದಿಂದ ಬಂದಿರುವ ಈ ಆನೆಗಳ ಹಿಂಡು, ಸುಮಾರು ಒಂದು ತಿಂಗಳಿನಿಂದ ಇಲ್ಲಿನ ಪೊದೆ ಮತ್ತು ಬಿದಿರು ಕಾಡುಗಳು ಹಾಗೂ ಭತ್ತದ ಬೆಳೆಗಳನ್ನು ತಿನ್ನುತ್ತಿದೆ. ಗ್ರಾಮಸ್ಥರು ಮತ್ತು ಜಿಲ್ಲಾ ಅರಣ್ಯ ಅಧಿಕಾರಿಗಳನ್ನು ಸಂಕಷ್ಟಕ್ಕೆ ತಳ್ಳಿದೆ. ಸುಮಾರು ನಾಲ್ಕು ವರ್ಷಗಳ ಹಿಂದೆ, ಗಣಿಗಾರಿಕೆ ಮತ್ತು ಅರಣ್ಯನಾಶ ಆನೆಗಳ ನೈಸರ್ಗಿಕ ಆವಾಸಸ್ಥಾನ ಮತ್ತು ಉತ್ತರದ ಕಾರಿಡಾರ್‌ಗಳ ಮೇಲೆ ಪರಿಣಾಮ ಬೀರಿದಾಗ, ಆನೆಗಳು ಮಹಾರಾಷ್ಟ್ರದ ಪೂರ್ವ ವಿದರ್ಭ ಪ್ರದೇಶವನ್ನು ಹೊಕ್ಕಿದ್ದವು.
ಮಹಾರಾಷ್ಟ್ರದ ಗೊಂಡಿಯಾ, ಗಡ್‌ಚಿರೋಲಿ ಮತ್ತು ಚಂದ್ರಾಪುರ ಮತ್ತು ಛತ್ತೀಸ್‌ಗಢದ ಬಸ್ತಾರ್, ಹಿಂದಿನ 'ದಂಡಕಾರಣ್ಯ'ದ ಭಾಗವಾದ ಮೂರು ಜಿಲ್ಲೆಗಳಲ್ಲಿ ಓಡಾಡುವ ಆನೆಗಳು - ಛತ್ತೀಸ್‌ಗಢದ ಆನೆಗಳ ದೊಡ್ಡ ಹಿಂಡಿನ ಸದಸ್ಯರು, ಬಹುಶಃ ಆ ಗುಂಪಿನಿಂದ ಪ್ರತ್ಯೇಕಗೊಂಡಿವೆ ಎಂದು ತಜ್ಞರು ಹೇಳುತ್ತಾರೆ. ಇವು ರಾಜ್ಯದ ವನ್ಯಜೀವಕ್ಕೆ ಹೊಸ ಸೇರ್ಪಡೆಯಾಗಿವೆ.
ಗಡ್ಚಿರೋಲಿ ಜಿಲ್ಲೆಯಲ್ಲಿರುವ ಕೆಲವು ತರಬೇತಿ ಪಡೆದ ಆನೆಗಳು ದಕ್ಷಿಣ ಭಾಗಗಳಲ್ಲಿ ಅರಣ್ಯ ಇಲಾಖೆಗೆ ಸಾಗಾಟ ಕೆಲಸದಲ್ಲಿ ಸಹಾಯ ಮಾಡುತ್ತಿವೆ. ಆದರೆ ಒಂದೂವರೆ ಶತಮಾನಗಳ ನಂತರ ಅಥವಾ ಬಹುಶಃ ಅದಕ್ಕಿಂತ ಹೆಚ್ಚು ಕಾಲದ ನಂತರ ಮಹಾರಾಷ್ಟ್ರದ ಪೂರ್ವ ಭಾಗಗಳಿಗೆ ಕಾಡು ಆನೆಗಳು ಮರಳುತ್ತಿವೆ. ಪಶ್ಚಿಮ ಘಟ್ಟಗಳಲ್ಲಿ ಕಾಡು ಆನೆಗಳ ಉಪಟಳ ಸಾಮಾನ್ಯವಾಗಿದೆ.
ಈ ಹೊಸ ಅತಿಥಿಗಳು ಬೇರೆ ಸ್ಥಳಕ್ಕೆ ವಲಸೆ ಹೋಗುವವರೆಗೆ ಮನೆಯಲ್ಲೇ ಇರುವಂತೆ ಪಲಾಸ್‌ಗಾಂವ್ ಗ್ರಾಮಸ್ಥರಿಗೆ, ಅದರಲ್ಲೂ ಬುಡಕಟ್ಟು ಕುಟುಂಬಗಳಿಗೆ ಅರಣ್ಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಹಾಗಾಗಿ, 1400 ಜನರಿರುವ ಈ ಗ್ರಾಮದ (2011ರ ಜನಗಣತಿ) ಭೂರಹಿತರು ಮತ್ತು ಸಣ್ಣ ರೈತರು ಹಾಗೂ ವಿಹಿರ್‌ಗಾಂವ್‌ನಂತಹ ನೆರೆಯ ಹಳ್ಳಿಗಳ ಜನರು ತಮ್ಮ ಅರಣ್ಯ ಆಧಾರಿತ ಜೀವನೋಪಾಯವನ್ನು ಕೈಬಿಡಬೇಕಾಯಿತು.
ರಾಜ್ಯ ಅರಣ್ಯ ಇಲಾಖೆ ಬೆಳೆ ಹಾನಿಗೆ ತಕ್ಷಣವೇ ಪರಿಹಾರ ಕೊಡುತ್ತದೆ, ಆದರೆ ಅರಣ್ಯ ಉತ್ಪನ್ನದಿಂದ ಆದ ಆದಾಯ ನಷ್ಟಕ್ಕೆ ಯಾವುದೇ ಪರಿಹಾರವಿಲ್ಲ.
"ನನ್ನ ಕುಟುಂಬವು ಮಹುವಾ ಮತ್ತು ಟೆಂಡುವನ್ನು ನಂಬಿ ಇಡೀ ಬೇಸಿಗೆಯಲ್ಲಿ ಬದುಕುತ್ತದೆ," ಎಂದು ಗೋಮಾ ಹೇಳುತ್ತಾರೆ.
ಆ ಆದಾಯದ ಮಾರ್ಗವೂ ಇಲ್ಲದಾಗಿರುವ ಈ ಗ್ರಾಮದ ಜನರು, ಪಾಲಸ್‌ಗಾಂವ್‌ನಿಂದ ಈ ಕಾಡು ಆನೆಗಳು ಹೋಗಿ, ಮತ್ತೆ ಕೆಲಸಕ್ಕೆ ಮರಳುವುದನ್ನು ಎದುರು ನೋಡುತ್ತಿದ್ದಾರೆ.


ಎಡ: ಪಲಾಸ್‌ಗಾಂವ್‌ನ ನಿವಾಸಿಗಳು ಕೆಲಸವನ್ನು ಆರಂಭಿಸಲು ಆನೆಗಳು ಬೇರೆ ಪ್ರದೇಶಕ್ಕೆ ವಲಸೆ ಹೋಗುವವರೆಗೆ ಕಾಯುವಂತೆ ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಬಲ: ಪಲಾಸ್‌ಗಾಂವ್‌ನ ರೈತ ಫೂಲ್‌ಚಂದ್ ವಾಘಡೆ ಕಳೆದ ಸೀಸನಿನಲ್ಲಿ ನಷ್ಟ ಅನುಭವಿಸಿದ್ದರು. ಅವರ ಮೂರು ಎಕರೆ ಕೃಷಿ ಭೂಮಿಯನ್ನು ಆನೆಗಳು ನೆಲಸಮ ಮಾಡಿದ್ದವು ಎನ್ನುತ್ತಾರೆ ಅವರು
"ಕಳೆದ ಮೂರು ಬೇಸಿಗೆಯಂತೆ ಈ ಬಾರಿಯೂ ಆನೆಗಳ ಹಿಂಡು ಛತ್ತೀಸ್‌ಗಢಕ್ಕೆ ಹೋಗಿಲ್ಲ. ಬಹುಶಃ ಕೆಲವು ದಿನಗಳ ಹಿಂದೆ ಹೆಣ್ಣು ಆನೆಯೊಂದು ಮರಿ ಹಾಕಿದ ಕಾರಣದಿಂದಾಗಿ ಇರಬೇಕು," ಎಂದು ಗಡ್‌ಚಿರೋಲಿಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಸಿಸಿಎಫ್) ಎಸ್ ರಮೇಶ್‌ಕುಮಾರ್ ಹೇಳುತ್ತಾರೆ.
ಹಿಂಡಿನಲ್ಲಿ ಒಂದೆರಡು ಮರಿಗಳಿವೆ ಎನ್ನುತ್ತಾರೆ ಅವರು. ಆನೆಗಳು ಮಾತೃಪ್ರಧಾನ ವ್ಯವಸ್ಥೆಯಲ್ಲಿ ಜೀವಿಸುತ್ತವೆ.
ಕಳೆದ ವರ್ಷ (2023), ಅದೇ ಹಿಂಡು ಪಲಾಸ್‌ಗಾಂವ್‌ನಿಂದ ಸುಮಾರು 100 ಕಿಲೋ ಮೀಟರ್ ದೂರದಲ್ಲಿರುವ ಗೊಂಡಿಯಾ ಜಿಲ್ಲೆಯ ಹತ್ತಿರ ಇರುವ ಅರ್ಜುನಿ ಮೋರ್ಗಾಂವ್ ತೆಹಸಿಲ್‌ನಲ್ಲಿರುವ ನಂಗಲ್-ದೋಹ್‌ನ 11ಮನೆಗಳ ಕುಗ್ರಾಮಕ್ಕೆ ನುಗ್ಗಿತ್ತು, ಅಲ್ಲಿನ ದಟ್ಟವಾದ ಕಾಡುಗಳಲ್ಲಿ ಕೆಲವು ತಿಂಗಳುಗಳ ಕಾಲ ಉಳಿದುಕೊಂಡಿತ್ತು.
"ಆ ರಾತ್ರಿ ಆನೆಗಳ ಕೋಪಕ್ಕೆ ಒಂದೇ ಒಂದು ಗುಡಿಸಲೂ ಉಳಿಯಲಿಲ್ಲ. ಅವು ಮಧ್ಯರಾತ್ರಿ ಬಂದವು," ಎಂದು ವಿಜಯ್ ಮಡವಿ ನೆನಪಿಸಿಕೊಳ್ಳುತ್ತಾರೆ. ಇವರು ಭರ್ನೋಲಿ ಗ್ರಾಮದ ಬಳಿ ಅತಿಕ್ರಮಿತ ಭೂಮಿಯಲ್ಲಿ ವಾಸಿಸುವ ಜನರಲ್ಲಿ ಒಬ್ಬರು.
ಆ ರಾತ್ರಿ ಇಡೀ ನಂಗಲ್-ದೋಹ್ ಅನ್ನು ಖಾಲಿ ಮಾಡಲಾಯಿತು. ಅಲ್ಲಿನ ಜನರನ್ನು ಭರ್ನೋಲಿಯ ಜಿಲ್ಲಾ ಪರಿಷತ್ ಶಾಲೆಗೆ ಸ್ಥಳಾಂತರಿಸಲಾಯಿತು, 2023 ರ ಬೇಸಿಗೆಯಲ್ಲಿ ಅವರು ಅಲ್ಲಿಯೇ ಉಳಿದುಕೊಂಡರು. ಬೇಸಿಗೆ ರಜೆಯ ನಂತರ ಶಾಲೆಯು ಮತ್ತೆ ಆರಂಭವಾದಾಗ, ಅವರು ಗ್ರಾಮದ ಹೊರವಲಯದಲ್ಲಿರುವ ಅರಣ್ಯ ಭೂಮಿಯ ಒಂದು ಭಾಗದಲ್ಲಿ ವಿದ್ಯುತ್ - ನೀರು ಇಲ್ಲದ ತಾತ್ಕಾಲಿಕ ಗುಡಿಸಲುಗಳನ್ನು ನಿರ್ಮಿಸಿಕೊಂಡರು. ಕೃಷಿ ಭೂಮಿಯಲ್ಲಿರುವ ಬಾವಿಯಿಂದ ನೀರು ತರಲು ಮಹಿಳೆಯರು ಕೆಲವು ಮೈಲುಗಳಷ್ಟು ದೂರ ನಡೆದುಕೊಂಡು ಹೋಗುತ್ತಾರೆ. ಆದರೆ ಹಿಂದೆ ಅಲ್ಲಿನ ಕುರುಚಲು ಕಾಡುಗಳನ್ನು ಕಡಿದು ಉಳುಮೆ ಮಾಡಿದ ತಮ್ಮ ಕೃಷಿ ಭೂಮಿಯನ್ನು ಇಂದು ಎಲ್ಲಾ ಹಳ್ಳಿಗರು ಕಳೆದುಕೊಂಡಿದ್ದಾರೆ.
"ನಮ್ಮ ಮನೆ ನಮಗೆ ಯಾವಾಗ ಸಿಗುತ್ತದೆ?" ಎಂದು ಪುನರ್ವಸತಿ ಪ್ಯಾಕೇಜ್ ಮತ್ತು ಶಾಶ್ವತ ಮನೆಗಾಗಿ ಕಾಯುತ್ತಿರುವ ಉಷಾ ಹೋಳಿ ಕೇಳುತ್ತಾರೆ.
ಈ ಮೂರು ಜಿಲ್ಲೆಗಳಾದ್ಯಂತ, ಆನೆಗಳು ತಮ್ಮ ಸ್ಥಳವನ್ನು ಬದಲಾಯಿಸುತ್ತಿದ್ದಂತೆ, ರೈತರು ಬೆಳೆ ನಷ್ಟದಿಂದ ತತ್ತರಿಸಿ ಹೋಗುತ್ತಾರೆ, ಹಿಂದೆ ಇಂತಹ ಒಂದು ಸಮಸ್ಯೆಯಿರಲಿಲ್ಲ.


ಕಳೆದ ಬೇಸಿಗೆಯಲ್ಲಿ (2023) ಗೊಂಡಿಯಾ ಜಿಲ್ಲೆಯ ಅರ್ಜುನಿ ಮೋರ್ಗಾಂವ್ ತಹಸಿಲ್‌ನಲ್ಲಿರುವ ನಂಗಲ್-ದೋಹ್ ಹಳ್ಳಿಯ ಎಲ್ಲಾ ನಿವಾಸಿಗಳ ಗುಡಿಸಲುಗಳನ್ನು ಕಾಡು ಆನೆಗಳು ನಾಶಪಡಿಸಿದವು. 11 ಕುಟುಂಬಗಳು ಸಮೀಪದ ಭರ್ನೋಳಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ತಾತ್ಕಾಲಿಕ ಗುಡಿಸಲುಗಳನ್ನು ಕಟ್ಟಿಕೊಂಡಿವೆ. ಇವರು ರಾಜ್ಯ ಸರ್ಕಾರದ ಪುನರ್ವಸತಿ ಮತ್ತು ಪರಿಹಾರ ಪ್ಯಾಕೇಜ್‌ಗಾಗಿ ಕಾಯುತ್ತಿದ್ದಾರೆ
ಉತ್ತರ ಗಡ್ಚಿರೋಲಿ ಪ್ರದೇಶದಲ್ಲಿ ಕಾಡು ಆನೆ ಹಿಂಡನ್ನು ನಿರ್ವಹಿಸುವ ಕಷ್ಟವನ್ನು ಒತ್ತಿಹೇಳುತ್ತಾ, ರಮೇಶಕುಮಾರ್ ಅವರು ದಕ್ಷಿಣ ಭಾರತದ ಉತ್ತರವು ಹೆಚ್ಚು ಜನನಿಬಿಡವಾಗಿದೆ ಎಂದು ಹೇಳುತ್ತಾರೆ. ದೊಡ್ಡ ಸಮಸ್ಯೆ ಎಂದರೆ ಬೆಳೆ ನಾಶ. ಆನೆಗಳು ಸಾಯಂಕಾಲ ತಮ್ಮ ವಲಯದಿಂದ ಹೊರಬರುತ್ತವೆ. ಬೆಳೆದ ಬೆಳೆಯನ್ನು ಅವು ತಿನ್ನದಿದ್ದರೂ, ತುಳಿದು ನಾಶ ಮಾಡಿಬಿಡುತ್ತವೆ.
ಅರಣ್ಯ ಅಧಿಕಾರಿಗಳು ಡ್ರೋನ್ ಮತ್ತು ಥರ್ಮಲ್ ಇಮೇಜಿಂಗ್ ಸಹಾಯದಿಂದ 24 ಗಂಟೆಗಳ ಕಾಲ ಹಿಂಡನ್ನು ಹಿಂಬಾಲಿಸುವ ಟ್ರ್ಯಾಕಿಂಗ್ ತಂಡ ಮತ್ತು ಆರಂಭಿಕ ಎಚ್ಚರಿಕೆ ನೀಡುವ ತಂಡಗಳನ್ನು ಹೊಂದಿದ್ದಾರೆ. ಯಾವುದೇ ಘರ್ಷಣೆ ಅಥವಾ ಆಕಸ್ಮಿಕ ಅವಘಡವಾಗದಂತೆ ತಡೆಯಲು ಆನೆಗಳು ಸಂಚಾರಕ್ಕೆ ಹೋಗುವಾಗ ಇವರು ಗ್ರಾಮಸ್ಥರಿಗೆ ಎಚ್ಚರಿಕೆಯನ್ನು ನೀಡುತ್ತಾರೆ.
ಸಂಜೆ, ಪಲಾಸ್‌ಗಾಂವ್‌ನಲ್ಲಿ ಏಳು ಎಕರೆ ಜಮೀನು ಹೊಂದಿರುವ ರೈತ ನಿತಿನ್ ಮಾನೆಯವರು ಐದು ಗ್ರಾಮಸ್ಥರ ಗುಂಪಿನೊಂದಿಗೆ ರಾತ್ರಿ ಜಾಗರಣೆ ಕೂರಲು ಹುಲ್ಲಾ ಗ್ಯಾಂಗನ್ನು ಸೇರುತ್ತಾರೆ. ಅರಣ್ಯ ಸಂರಕ್ಷಕ ಯೋಗೇಶ್ ಪಂಡಾರಂ ನೇತೃತ್ವದಲ್ಲಿ ಕಾಡಾನೆಗಳ ಜಾಡು ಹಿಡಿಯುತ್ತಾರೆ. ಸ್ಥಳೀಯ ಅಧಿಕಾರಿಗಳಿಗೆ ಸಹಾಯ ಮಾಡಲು ಮತ್ತು ಈ ಹಿಂಡನ್ನು ನಿರ್ವಹಣೆ ಮಾಡುವ ಬಗ್ಗೆ ಗ್ರಾಮದ ಯುವಕರಿಗೆ ತರಬೇತಿ ನೀಡಲು ಪಶ್ಚಿಮ ಬಂಗಾಳದಿಂದ ಕಾಡು ಆನೆಗಳ ನಿರ್ವಹಣೆಯಲ್ಲಿ ಪರಿಣಿತರಾಗಿರುವ ಹುಲ್ಲಾ ಗ್ಯಾಂಗ್‌ಗಳನ್ನು ನೇಮಿಸಲಾಗಿದೆ. ಆನೆಗಳ ಮೇಲೆ ವೈಮಾನಿಕ ಕಣ್ಣಿಡಲು ಅವರು ಆ ಪ್ರದೇಶದಲ್ಲಿ ಎರಡು ಡ್ರೋನ್‌ಗಳನ್ನು ಬಳಸುತ್ತಾರೆ ಮತ್ತು ಆನೆಗಳು ಇರುವ ಸ್ಥಳವನ್ನು ಗುರುತಿಸಿದ ನಂತರ ಆನೆಗಳ ಸುತ್ತಲೂ ನಡೆದಾಡುತ್ತಾರೆ ಎಂದು ನಿತಿನ್ ಹೇಳುತ್ತಾರೆ.
"ಆನೆಗಳು ಗ್ರಾಮಕ್ಕೆ ಪ್ರವೇಶಿಸಲು ಪ್ರಯತ್ನಿಸಿದರೆ ಅವುಗಳನ್ನು ಓಡಿಸಲು ಕೆಲವು ಗ್ರಾಮಸ್ಥರನ್ನು ಹುಲ್ಲಾ ಗ್ಯಾಂಗ್ ಜೊತೆಗೆ ಸೇರಿಸಲಾಗಿದೆ," ಎಂದು ಮನ ಆದಿವಾಸಿಯಾದ ಪಲಾಸ್‌ಗಾಂವ್‌ನಲ್ಲಿ ಮೊದಲ ಬಾರಿಗೆ ಮಹಿಳಾ ಸರಪಂಚ್ ಆಗಿರುವ ಜಯಶ್ರೀ ದಧಮಾಲ್ ಹೇಳುತ್ತಾರೆ. “ಆದರೆ ಅದು ನನಗೆ ತಲೆನೋವಾಗಿ ಪರಿಣಮಿಸಿದೆ; ಜನರು ನನ್ನ ಬಳಿ ಆನೆಗಳ ಬಗ್ಗೆ ದೂರು ಕೊಡಲು ಬರುತ್ತಾರೆ ಮತ್ತು ನನ್ನ ಮೇಲೆ ಹತಾಶೆಯನ್ನು ಹೊರಹಾಕುತ್ತಾರೆ. ಆನೆಗಳ ಉಪಟಳಕ್ಕೆ ನಾನು ಹೇಗೆ ಜವಾಬ್ದಾರಳು?”ಎಂದು ಅವರು ಕೇಳುತ್ತಾರೆ.


ಎಡ: ಪಲಾಸ್‌ಗಾಂವ್‌ನ ಯುವ ರೈತ ನಿತಿನ್ ಮಾನೆ ಹುಲ್ಲಾ ಗ್ಯಾಂಗ್‌ನ ಭಾಗವಾಗಿದ್ದಾರೆ. ತ್ವರಿತ ಪ್ರತಿಕ್ರಿಯೆ ತಂಡ, ಅರಣ್ಯ ಇಲಾಖೆಯು ಡ್ರೋನ್‌ಗಳ ಸಹಾಯದಿಂದ ಕಾಡಾನೆಗಳನ್ನು ಪತ್ತೆಹಚ್ಚಲು ಮತ್ತು ಗ್ರಾಮದೊಳಗೆ ನುಗ್ಗುವ ಹಿಂಡನ್ನು ಓಡಿಸಲು ಇವರನ್ನು ಸೇರಿಸಿಕೊಳ್ಳಲಾಗಿದೆ. ಬಲ: ರಾತ್ರಿ ಜಾಗರಣೆಗೆ ಸಜ್ಜಾಗುತ್ತಿರುವ ಅರಣ್ಯಾಧಿಕಾರಿಗಳು ಮತ್ತು ಹುಲ್ಲಾ ಗ್ಯಾಂಗ್ ಸದಸ್ಯರ ತಂಡ


ಪಲಾಸ್‌ಗಾಂವ್‌ನ ಸರಪಂಚ್ ಜಯಶ್ರೀ ದಧಮಾಲ್ ಅವರು ತಮ್ಮ ಜಮೀನಿನಿಂದ ಬುಟ್ಟಿ ತುಂಬ ಮಹುವಾವನ್ನು ಸಂಗ್ರಹಿಸಿ ತರುತ್ತಾರೆ, ಆದರೆ ಕಾಡು ಆನೆಗಳ ಉಪಟಳದಿಂದಾಗಿ ಅವರಿಗೆ ಯಾವುದೇ ಕಾಡುತ್ಪನ್ನವನ್ನು ಸಂಗ್ರಹಿಸಲು ಕಾಡಿಗೆ ಹೋಗಲು ಸಾಧ್ಯವಿಲ್ಲ
ಕಾಡು ಆನೆಗಳು ಪಲಾಸ್‌ಗಾಂವ್‌ಗೆ ಸಹಜ ಸ್ಥಿತಿ ಮರಳಿದಾಗ, ಕಾಡು ಆನೆಗಳು ಮನೆ ಕಂಡುಕೊಳ್ಳುವ ಸುತ್ತಮುತ್ತಲಿನ ಹಳ್ಳಿಗಳು ಬಂಧಿಯಾಗುತ್ತವೆ. ಈ ಪ್ರದೇಶದ ಜನರು ತಮ್ಮ ಬದುಕಿನ ಹೊಸ ಮಾರ್ಗವಾಗಿ ಮತ್ತು ಜೀವನ ವಿಧಾನವಾಗಿ ಕಾಡು ಆನೆಗಳನ್ನು ಎದುರಿಸಲು ಕಲಿಯಬೇಕಾಗಿದೆ ಎಂದು ಅರಣ್ಯ ಅಧಿಕಾರಿಗಳು ಹೇಳುತ್ತಾರೆ.
ಜಯಶ್ರೀ ಅವರು ಈ ವರ್ಷ ಕಾಡಿನಿಂದ ಮಹುವಾ ಹೂಗಳನ್ನು ಸಂಗ್ರಹಿಸುವುದನ್ನು ಕೈಬಿಡಬೇಕಾಯಿತು ಎಂದು ಗ್ರಾಮಸ್ಥರೊಂದಿಗೆ ಸಹಾನುಭೂತಿ ವ್ಯಕ್ತಪಡಿಸುತ್ತಾರೆ. "ಆನೆಗಳಿಂದಾಗಿ ನಮಗೆ ಟೆಂಡು ಎಲೆಗಳನ್ನು ಸಂಗ್ರಹಿಸಲು ಸಾಧ್ಯವಾಗದು," ಎಂದು ಅವರು ಹೇಳುತ್ತಾರೆ. ಪ್ರತಿ ಕುಟುಂಬವು ಎರಡು ತಿಂಗಳುಗಳಲ್ಲಿ ಕನಿಷ್ಠ 25,000 ರುಪಾಯಿ ನಷ್ಟವನ್ನು ಹೊಂದಿದೆ ಎಂದು ಅವರು ಅಂದಾಜು ಮಾಡುತ್ತಾರೆ.
“ಪಹಿಲೆಚ್ ಮಹಾಗೈ ದೋಕ್ಯಾವರ್ ಆಹೆ, ಆತಾ ಹತ್ತಿ ಆಲೆ, ಕಾ ಕರವೇ ಆಮ್ಹಿ?” ಎಂದು ಗೋಮಾ ಕೇಳುತ್ತಾಳೆ. "ಹಣದುಬ್ಬರದಿಂದ ಈಗಾಗಲೇ ಸಮಸ್ಯೆಯಾಗಿದೆ, ಈಗ ಆನೆಗಳದ್ದು, ನಾವು ಏನು ಮಾಡಬೇಕು?"
ಯಾವುದಕ್ಕೂ ಸುಲಭವಾದ ಉತ್ತರಗಳಿಲ್ಲ, ಪ್ರಶ್ನೆಗಳು ಮಾತ್ರ ಹೆಚ್ಚುತ್ತಲೇ ಇವೆ.
ಯಾರು ಸಂಸತ್ತನ್ನು ಪ್ರವೇಶಿಸುತ್ತಾರೆ ಎಂಬುದು ಇವರಿಗೆ ಮುಖ್ಯವೇ ಅಲ್ಲ, ಯಾರು ಬೇಗ ಕಾಡುಗಳನ್ನು ಬಿಟ್ಟು ಹೋಗುತ್ತಾರೆ ಎಂಬುದು ಇವರಿಗೆ ಮುಖ್ಯವಾಗಿದೆ.
(ಪರಿಶಿಷ್ಟ ಪಂಗಡಗಳಿಗೆ (ಎಸ್‌ಟಿ) ಮೀಸಲಾದ ಗಡ್‌ಚಿರೋಲಿ-ಚಿಮೂರ್ ಲೋಕಸಭಾ ಕ್ಷೇತ್ರದಲ್ಲಿ ಏಪ್ರಿಲ್ 19 ರಂದು ಮೊದಲ ಹಂತದಲ್ಲಿ ಮತದಾನ ನಡೆದಿದ್ದು, ಶೇಕಡಾ 71.88 ರಷ್ಟು ಮತದಾನವಾಗಿದೆ).
ಅನುವಾದ: ಚರಣ್ ಐವರ್ನಾಡು