ಗಡ್ಡಮಿಡಿ ರಾಜೇಶ್ವರಿ 2018ರಲ್ಲಿ ಭೂಮಿಯ ಹಕ್ಕು ಪಡೆದೆ ಎಂದುಕೊಂಡರು. “ಆ ದಿನ ನಾನು ಬಹಳ ಸಂಭ್ರಮದಲ್ಲಿದ್ದೆ! ನಾನು ಭೂಮಿಯ ಹಕ್ಕು ಹೊಂದಿರುವ ಮಹಿಳೆಯೆನ್ನುವ ಹೆಮ್ಮೆಯಲ್ಲಿದ್ದೆ.”
ಅವರು ಹಾಗೆ ಭಾವಿಸಲು ಕಾರಣವಾಗಿದ್ದು ಅವರ ಕೈಯಲ್ಲಿದ್ದ ಅಧಿಕೃತ ಹಕ್ಕುಪತ್ರ.
ಇದಾಗಿ ಐದು ವರ್ಷಗಳ ನಂತರವೂ ಅವರು ಎಂಕೆಪಲ್ಲಿಯಲ್ಲಿರುವ ತಮ್ಮ ಮನೆಯಿಂದ 30 ಕಿಲೋಮೀಟರ್ ದೂರದಲ್ಲಿರುವ ಬಾರವಾಡದ ತಮ್ಮ 1.28 ಎಕರೆ ಭೂಮಿಯ ಮಾಲಿಕತ್ವವನ್ನು ಸರ್ಕಾರ ಗುರುತಿಸಬಹುದು ಎನ್ನುವ ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ. ಇದಕ್ಕಾಗಿ ಅವರು ರೂ. 30,000 ಕೂಡಾ ಪಾವತಿಸಿದ್ದಾರೆ.
ಜಮೀನು ಖರೀದಿಸಿದ ಕೆಲವೇ ತಿಂಗಳಿನಲ್ಲಿ ರಾಜೇಶ್ವರಿಯವರ ಬಳಿ ಹಕ್ಕುಪತ್ರ, ಎನ್ಕಂಬರೆನ್ಸ್ ಸ್ಟೇಟ್‌ಮೆಂಟ್ ಮತ್ತು ಪಟ್ಟಾದಾರ್ ಪಾಸ್ ಬುಕ್ ಪಡೆಯಲು ಅಗತ್ಯವಿದ್ದ ಎಲ್ಲಾ ದಾಖಲೆಗಳೂ ಇದ್ದವು. ಆದರೆ ಅವುಗಳು ಅಸ್ಪಷ್ಟವಾಗಿವೆ ಎನ್ನಲಾಯಿತು. “ಈಗ ಐದು ವರ್ಷಗಳು ಕಳೆದಿವೆ ನನಗೆ ಇನ್ನೂ ನನ್ನ ಪಟ್ಟಾದಾರ್ [ಭೂಮಿ ಹಕ್ಕು] ಪಾಸ್ ಬುಕ್ ದೊರೆತಿಲ್ಲ. ಈ ಪಟ್ಟೆದಾರ್ ಪಾಸ್ ಬುಕ್ ಇಲ್ಲದಿರುವಾಗ ಇದು [ಭೂಮಿ] ನಿಜಕ್ಕೂ ನನ್ನದಾಗುತ್ತದೆಯೇ?”
ಭೂಮಿಯ ಮಾಲೀಕತ್ವವು ಹೇಗೆ ವರ್ಗಾವಣೆಯಾಗಿದೆಯೆನ್ನುವುದನ್ನು ಹಕ್ಕುಪತ್ರವು ವಿವರಿಸಿದರೆ, ಪಟ್ಟಾದಾರ್ ಪಾಸ್ ಬುಕ್ ಮಾಲಿಕತ್ವದ ಕುರಿತ ಇನ್ನಿತರ ವಿವರಗಳನ್ನು ನೀಡುತ್ತದೆ. ಇದರಲ್ಲಿ ಪಟ್ಟಾದಾರರ ಹೆಸರು, ಸರ್ವೇ ಸಂಖ್ಯೆ, ಜಮೀನಿನ ಪ್ರಕಾರ ಇತ್ಯಾದಿ ವಿವರಗಳಿರುತ್ತವೆ. ಇದು ಭೂಮಿಯ ಮಾಲಿಕರ ಪಾಸ್‌ಪೋರ್ಟ್ ಸೈಜ್ ಫೋಟೊ ಮತ್ತು ತಹಶೀಲ್ದಾರ್ (ಕಂದಾಯ ಸಂಗ್ರಾಹಕರ) ಸಹಿಯನ್ನು ಸಹ ಹೊಂದಿರುತ್ತದೆ.
![Gaddamidi Rajeshwari holding the title deed for the land she bought in 2018. ' It’s been five years now and I still haven’t received my pattadar [land owner] passbook'](/media/images/02-IMG_101145-AK-Is_this_land_really_mine.max-1400x1120.jpg)
ಗಡ್ಡಮಿಡಿ ರಾಜೇಶ್ವರಿ ಅವರು 2018ರಲ್ಲಿ ಖರೀದಿಸಿದ ಭೂಮಿಗೆ ಹಕ್ಕುಪತ್ರವನ್ನು ಹೊಂದಿದ್ದಾರೆ. 'ಈಗ ಐದು ವರ್ಷಗಳು ಕಳೆದಿವೆ ಆದರೆ ನನಗೆ ಇನ್ನೂ ಪಟ್ಟಾದಾರ್ [ಭೂ ಮಾಲೀಕ] ಪಾಸ್ ಬುಕ್ ಸಿಕ್ಕಿಲ್ಲ'
ತೆಲಂಗಾಣ ಭೂ ಹಕ್ಕುಗಳು ಮತ್ತು ಪಟ್ಟಾದಾರ್ ಪಾಸ್ ಬುಕ್ಸ್ ಕಾಯ್ದೆ, 2020ರ ಅಡಿಯಲ್ಲಿ 2020ರ ಅಕ್ಟೋಬರ್ ತಿಂಗಳಿನಲ್ಲಿ ಆನ್ಲೈನ್ ಭೂ ದಾಖಲೆಗಳ ನಿರ್ವಹಣಾ ವ್ಯವಸ್ಥೆಯಾದ ಧರಣಿ ಪೋರ್ಟಲ್ ಪ್ರಾರಂಭಗೊಂಡಾಗ ರಾಜೇಶ್ವರಿಯವರಿಗೆ ತಮ್ಮ ಭೂ ಹಕ್ಕಿನ ಕುರಿತಾದ ಭರವಸೆಗಳು ಹೆಚ್ಚಾದವು.
ಈ ಪೋರ್ಟಲ್ ಪ್ರಾರಂಭದ ಸಮಯದಲ್ಲಿ, ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಇದನ್ನು ರೈತ ಸ್ನೇಹಿ ಉಪಕ್ರಮ ಎಂದು ಕರೆದರು ಮತ್ತು "ಈ ವೇದಿಕೆಯು ಭೂ ನೋಂದಣಿ ಪ್ರಕ್ರಿಯೆಯನ್ನು ಸರಳಗೊಳಿಸುತ್ತದೆ ಮತ್ತು ವೇಗಗೊಳಿಸುತ್ತದೆ. ಜನರು ಹಲವಾರು ಕಚೇರಿಗಳಿಗೆ ಭೇಟಿ ನೀಡುವ ಅಗತ್ಯವಿಲ್ಲ” ಎಂದಿದ್ದರು.
ರಾಜೇಶ್ವರಿಯವರ ಪತಿ ರಾಮುಲು, "ಧರಣಿ [ಪೋರ್ಟಲ್] ನಮ್ಮ ಸಮಸ್ಯೆಯನ್ನು ಪರಿಹರಿಸುತ್ತದೆ ಮತ್ತು ಕೊನೆಗೂ ನಮಗೆ ಪಾಸ್ ಬುಕ್ ಸಿಗುತ್ತದೆ ಎಂದು ಭಾವಿಸಿದ್ದೆವು" ಎಂದು ಹೇಳುತ್ತಾರೆ. "2019ರ ಅಂತ್ಯದವರೆಗೆ, ನಾವು ತಿಂಗಳಿಗೆ ಕನಿಷ್ಠ ಎರಡು ಬಾರಿ ತಹಶೀಲ್ದಾರ್ ಕಚೇರಿಗೆ ಹೋಗುತ್ತಿದ್ದೆವು."
2020ರಲ್ಲಿ ದಂಪತಿಗಳು ಧರಣಿ ಪೋರ್ಟಲ್ ಚೆಕ್ ಮಾಡಿದಾಗ ಅವರ ಭೂಮಿಯ ಸರ್ವೇ ನಂಬರ್ ಪೂರ್ತಿಯಾಗಿ ಪೋರ್ಟಲ್ಲಿನಿಂದ ಕಾಣೆಯಾಗಿರುವುದು ತಿಳಿಯಿತು. ಮತ್ತು ಇದನ್ನು ಹೊರಗಿನವರು ಮ್ಯಾನುವಲ್ ಆಗಿ ಸೇರಿಸುವುದು ಕೂಡಾ ಸಾಧ್ಯವಿರಲಿಲ್ಲ.
“ಧರಣಿ ಪೋರ್ಟಲ್‌ನ ಒಂದು ಮುಖ್ಯ ಸಮಸ್ಯೆಯೆಂದರೆ, (ಹೆಸರು, ಎಕರೆಗಳು ಅಥವಾ ಕಾಣದಾಗಿರುವ ಸರ್ವೇ ಸಂಖ್ಯೆಯಂತಹ) ಸಂಪಾದಿಸುವ/ಬದಲಾಯಿಸುವ ಆಯ್ಕೆಗಳು ಪ್ರಸ್ತುತ ಸಾಕಷ್ಟು ಸೀಮಿತವಾಗಿವೆ" ಎಂದು ಕಿಸಾನ್ ಮಿತ್ರದ ಜಿಲ್ಲಾ ಸಂಯೋಜಕಿ ಮತ್ತು ವಿಕಾರಾಬಾದ್‌ನ ಸಲಹೆಗಾರರಾದ ಭಾರ್ಗವಿ ವುಪ್ಪಲಾ ಒಪ್ಪಿಕೊಳ್ಳುತ್ತಾರೆ.


ಎಡ: ರಾಮುಲು ಮತ್ತು ರಾಜೇಶ್ವರಿ ಯೆಂಕೆಪಲ್ಲಿ ಗ್ರಾಮದಲ್ಲಿರುವ ತಮ್ಮ ಮನೆಯಿಂದ 30 ಕಿಲೋಮೀಟರ್ ದೂರದಲ್ಲಿರುವ ಬಾರ್ವಾರ್ಡ್ ಎನ್ನುವಲ್ಲಿ 1.28 ಎಕರೆ ಭೂಮಿಯನ್ನು ಖರೀದಿಸಲು 30,000 ರೂ.ಗಳನ್ನು ಖರ್ಚು ಮಾಡಿದರು. ಬಲ: ವಿಕಾರಾಬಾದ್ ಜಿಲ್ಲೆಯ ಗಿರ್ಗೆಟ್‌ಪಲ್ಲಿ ಗ್ರಾಮದಲ್ಲಿರುವ ತನ್ನ ಮನೆಯಲ್ಲಿ ಮುದವತ್ ಬದ್ಯ
ವಿಕಾರಾಬಾದ್ ಜಿಲ್ಲೆಯ ಗಿರ್ಗೆಟ್‌ಪಲ್ಲೆಯಿಂದ ಸುಮಾರು 20 ಕಿಲೋಮೀಟರ್ ದೂರದಲ್ಲಿರುವ ಮುದವತ್ ಬದ್ಯ ಅವರಿಗೆ ತಮ್ಮ ಜಮೀನನ್ನು ಕಾನೂನುಬದ್ಧವಾಗಿ ಹೊಂದಲು ಮಾಲೀಕರ ಹೆಸರಿನಲ್ಲಿರುವ ದೋಷವು ತಡೆಯಾಗಿದೆ. ಪೋರ್ಟಲ್ ಅವರ ಹೆಸರನ್ನು 'ಬದ್ಯ ಲಂಬಾಡಾ' ಎಂದು ದಾಖಲಿಸಿದೆ, ಇಲ್ಲಿ ಲಂಬಡಾ ಎನ್ನುವುದು ಅವರ ಸಮುದಾಯದ ಹೆಸರು, ತೆಲಂಗಾಣದಲ್ಲಿ ಈ ಸಮುದಾಯವನ್ನು ಪರಿಶಿಷ್ಟ ಪಂಗಡದಡಿ ಪಟ್ಟಿಮಾಡಲಾಗಿದೆ. ಅವರ ಹೆಸರು ‘ಮುದವತ್ ಬದ್ಯ’ ಎಂದಿರಬೇಕಿತ್ತು.
ಬದ್ಯ ಅವರು ಎರಡು ಎಕರೆ ಭೂಮಿಯನ್ನು ಹೊಂದಿದ್ದು ಅವರು ಅದನ್ನು 40 ವರ್ಷಗಳ ಹಿಂದೆ ಖರೀದಿಸಿದ್ದರು. “ನಾನು ಸ್ವಂತ ಭೂಮಿ ಕೊಳ್ಳುವ ಮೊದಲು ಬೇರೆಯವ ಹೊಲದಲ್ಲಿ ದುಡಿಯುವುದು, ಗಾರೆ ಕೆಲಸ, ಇಟ್ಟಿಗೆ ಗೂಡಿನ ಕೆಲಸ ಹೀಗೆ ಹಲವು ಕೆಲಸಗಳನ್ನು ಮಾಡಿದ್ದೆ” ಎನ್ನುತ್ತಾರೆ ಈ 80 ವರ್ಷದ ಹಿರಿಯ ವ್ಯಕ್ತಿ. ಅವರು ತನ್ನ ಹೊಲದಲ್ಲಿ ಜೋಳ ಮತ್ತು ಮೆಕ್ಕೆ ಜೋಳ ಬೆಳೆಯುತ್ತಾರೆ. ಆದರೆ ಅವರು ಹೇಳುವಂತೆ, “ಕೃಷಿಯಿಂದ ಬರುವ ಹಣ ಯಾವುದಕ್ಕೂ ಸಾಲುತ್ತಿರಲಿಲ್ಲ. ಭಾರೀ ಮಳೆಯಿಂದಾಗಿ ಬಹುತೇಕ ಬೆಳೆಗಳು ನಾಶವಾಗುತ್ತಿದ್ದವು.”
ಅವರ ಹೆಸರನ್ನು ತಪ್ಪಾಗಿ ನೋಂದಾಯಿಸಿರುವುದರಿಂದಾಗಿ, ತೆಲಂಗಾಣದ ಕಲ್ಯಾಣ ಯೋಜನೆಯಾದ ರೈತ ಬಂಧು ಯೋಜನೆಯ ಪ್ರಯೋಜನವನ್ನು ಪಡೆಯಲು ಅವರಿಗೆ ಸಾಧ್ಯವಾಗಿಲ್ಲ, ಆ ಯೋಜನೆಯಡಿ ಕನಿಷ್ಠ ಒಂದು ಎಕರೆ ಭೂಮಿಯನ್ನು ಹೊಂದಿರುವ ರೈತನಿಗೆ ರಬಿ ಮತ್ತು ಖಾರಿಫ್ ಋತುಗಳಲ್ಲಿ ವರ್ಷಕ್ಕೆ ಎರಡು ಬಾರಿ ಪ್ರತಿ ಎಕರೆಗೆ 5,000 ರೂ. ಸಹಾಯ ಧನ ನೀಡಲಾಗುತ್ತದೆ.
ಹೆಸರು ಹೇಳಲು ಇಚ್ಛಿಸದ ವಿಕಾರಾಬಾದ್ ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಯೊಬ್ಬರ ಪ್ರಕಾರ, ಧರಣಿ ಪೋರ್ಟಲ್ ಸಮಸ್ಯೆಗಳು ರಾಜಕೀಯ ಸಾಧನವಾಗಿ ಮಾರ್ಪಟ್ಟಿವೆ, ಅವರು ಅವುಗಳನ್ನು ಸರಿಪಡಿಸಲು ಪ್ರಯತ್ನಿಸುತ್ತಿದ್ದಾರೆ. ಪ್ರಸ್ತುತ ಹೆಸರು, ಆಧಾರ್, ಫೋಟೋ, ಲಿಂಗ ಅಥವಾ ಜಾತಿಯಂತಹ 'ನಿರ್ದಿಷ್ಟ ಭೂ ವಿಷಯಗಳು' ವಿಭಾಗದ ಅಡಿಯಲ್ಲಿ ತಿದ್ದುಪಡಿ ಮಾಡಬಹುದಾದ 10 ವಿವರಗಳಿವೆ.
ಸುಮಾರು 40 ಕಿ.ಮೀ ದೂರದಲ್ಲಿರುವ ಬೋಪನವರಂ ಗ್ರಾಮದಲ್ಲಿ ರಂಗಯ್ಯನವರಿಗೆ ಧರಣಿ ಪೋರ್ಟಲ್‌ನಲ್ಲಿ ಹೆಸರು ಸರಿಯಿದ್ದರೂ ರೈತ ಬಂಧು ಯೋಜನೆಯ ಹಣ ಬರುತ್ತಿಲ್ಲ. ಬೋಪನವಾರ ಗ್ರಾಮದಲ್ಲಿ ರಂಗಯ್ಯ ಅವರಿಗೆ ಐದು ಎಕರೆ ಜಮೀನಿದೆ. 1989ರಲ್ಲಿ ಅವರಿಗೆ ಜಮೀನು ಮಂಜೂರಾಗಿದ್ದು, ರಂಗಯ್ಯ ಅವರು ರಾಜ್ಯದಲ್ಲಿ ಪರಿಶಿಷ್ಟ ಜಾತಿಯಡಿ ಬರುವ ಬೇಡ ಜಂಗಮ ಸಮುದಾಯಕ್ಕೆ ಸೇರಿದವರು.


ಎಡ: ಧರಣಿ ಪೋರ್ಟಲ್‌ನಲ್ಲಿ ಹೆಸರು ಸರಿಯಾಗಿ ಬರೆದಿದ್ದರೂ ರಂಗಯ್ಯನವರಿಗೆ ರೈತ ಬಂಧು ಯೋಜನೆಯಿಂದ ಹಣ ಬರುವುದು ಇದ್ದಕ್ಕಿದ್ದಂತೆ ನಿಂತುಹೋಗಿದೆ. ಬದ್ಯ ಅವರ ಕಿರಿಯ ಮಗ ಗೋವರ್ಧನ್ (ಕಪ್ಪು ಅಂಗಿ) ಅವರ ಒಂದು ಕೋಣೆಯ ಮನೆಯಲ್ಲಿ
“2019-20ರ ನಡುವೆ ನನಗೆ ಮೂರು ಕಂತುಗಳಲ್ಲಿ ಹಣ ದೊರಕಿದೆ. ನನ್ನ ಭೂಮಿಯ ವಿವರ ಧರಣಿ ಪೋರ್ಟಲ್ಲಿನಲ್ಲಿ ಬಂದ ನಂತರ ಹಣ ಬರುವುದು ನಿಂತುಹೋಯಿತು” ವಿವರಿಸುತ್ತಾರೆ. ಅವರು ಪ್ರತಿ ಕಂತಿನಲ್ಲಿ 25,000 ರೂ.ಗಳನ್ನು (ಪ್ರತಿ ಎಕರೆಗೆ 5,000 ರೂ.) ಪಡೆಯುತ್ತಿದ್ದರು.
“ಯಾವ ಅಧಿಕಾರಿಯಿಂದಲೂ ಇದಕ್ಕೆ ಸರಿಯಾದ ಉತ್ತರ ಸಿಗುತ್ತಿಲ್ಲ. ಇದಕ್ಕೆ ಏನು ಹೇಳಬೇಕೆನ್ನುವುದಾಗಲೀ, ಇದಕ್ಕೆ ಕಾರಣವೇನು ಎನ್ನುವುದಾಗಲಿ ಅವರಿಗೆ ತಿಳಿದಿಲ್ಲ” ಎಂದು ಅವರು ಹೇಳುತ್ತಾರೆ.
ಪೋರ್ಟಲ್ಲಿನಲ್ಲಿನ ದೋಷಗಳನ್ನು ಮ್ಯಾನುವಲ್ ಆಗಿ ಸರಿಪಡಿಸಲು ಅವಕಾಶಗಳಿಲ್ಲ ಎಂದು ಭಾರ್ಗವಿ ಹೇಳುತ್ತಾರೆ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಲಹೆಗಾರರಾಗಿರುವ ಅವರು,"ನಿಯೋಜಿತ ಭೂಮಿಯ ಸಂದರ್ಭದಲ್ಲಿ, ಉತ್ತರಾಧಿಕಾರಿಯ ಹೆಸರನ್ನು ಮಾರ್ಪಡಿಸಲು ಮಾತ್ರ ಪೋರ್ಟಲ್ಲಿನಲ್ಲಿ ಆಯ್ಕೆಗಳಿವೆ" ಎಂದು ಹೇಳುತ್ತಾರೆ. ನಿಯೋಜಿತ ಭೂಮಿಯನ್ನು ಮಾರಾಟ ಮಾಡಲು ಸಾಧ್ಯವಿಲ್ಲ, ಆದರೆ ಆನುವಂಶಿಕವಾಗಿ ಬಂದ ಆಸ್ತಿಗೆ ಸಾಧ್ಯವಿದೆ.
ಬದ್ಯ ಪ್ರಸ್ತುತ ತನ್ನ ಕಿರಿಯ ಮಗ ಗೋವರ್ಧನ ಅವರೊಡನೆ ಒಂದು ಕೋಣೆಯ ಕಚ್ಚಾ ಮನೆಯಲ್ಲಿ ಬದುಕುತ್ತಿದ್ದಾರೆ. ಅವರ ಪತ್ನಿ ಆರು ವರ್ಷಗಳ ಹಿಂದೆ ತೀರಿಕೊಂಡಿದ್ದಾರೆ.
ಅವರಿಗೆ ರೈತಬಂಧು ಯೋಜನೆಯ ಹಣ ಬರುವುದು ನಿಂತುಹೋಗಿರುವುದರ ಜೊತೆಗೆ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎಂಎನ್ಆರ್‌ಇಜಿಎ) ಕೆಲಸದಿಂದ ಬರುತ್ತಿದ್ದ 260 ರೂಪಾಯಿ ಕೂಲಿಯೂ ನಿಂತು ಹೋಗಿದೆ. ಇದು ಗಿರ್ಗೆಟ್ ಪಲ್ಲೆಯನ್ನು ವಿಕಾರಾಬಾದ್ ಮುನ್ಸಿಪಾಲಿಟಿಯೊಡನೆ ವಿಲೀನಗೊಳಿಸಿದಾಗಿನಿಂದ ಹೀಗಾಗಿದೆ.
ಅವರು ತಮ್ಮ ಹೆಸರನ್ನು ಬದಲಾಯಿಸಲು 2021ರಲ್ಲಿ ವಿಕಾರಾಬಾದ್ ಕಂದಾಯ ಇಲಾಖೆಯಲ್ಲಿ ಕುಂದುಕೊರತೆ ವಿಭಾಗದಲ್ಲಿ ವಿನಂತಿಯನ್ನು ನೋಂದಾಯಿಸಿದರು, ಆದರೆ ಅದರಿಂದ ಏನೂ ಬದಲಾಗಿಲ್ಲ.
“ನನ್ನ [ಕಿರಿಯ] ಮಗ ಭೂಮಿಯನ್ನು ಮಾರುವಂತೆ ಒತ್ತಡ ಹೇರುತ್ತಲೇ ಇದ್ದಾನೆ. ಅವನು ಒಂದು ಕಾರು ಕೊಂಡು ಟ್ಯಾಕ್ಸಿ ಡ್ರೈವರ್ ಆಗುವ ಆಲೋಚನೆಯಲ್ಲಿದ್ದಾನೆ. ಆದರೆ ನಾನು ಮಾರಿಲ್ಲ. ಈಗ ಮಾರಿದ್ದರೆ ಒಳ್ಳೆದಿತ್ತೇನೊ ಎನ್ನಿಸುತ್ತದೆ.” ಎಂದು ಬದ್ಯ ಹೇಳುತ್ತಾರೆ.
*****


" ಹಣ ಮತ್ತು ನೀರಿನ ಕೊರತೆಯಿಂದಾಗಿ ಈ ಪ್ರದೇಶದಲ್ಲಿ ನಾವು ಬೆಳೆಯಬಹುದಾದ ಏಕೈಕ ಬೆಳೆ ಹತ್ತಿ" ಎಂದು ರಾಮುಲು ಹೇಳುತ್ತಾರೆ. ಯೆಂಕೆಪಲ್ಲಿ ಗ್ರಾಮದ ತಮ್ಮ ಮನೆಯಲ್ಲಿ ಜೊನ್ನೆ ರೊಟ್ಟಿ ತಯಾರಿಸುತ್ತಿರುವ ರಾಜೇಶ್ವರಿ
ಅಂತಿಮವಾಗಿ, 2022ರ ನವೆಂಬರ್ ತಿಂಗಳಿನಲ್ಲಿ, ರಾಜೇಶ್ವರಿ ಮತ್ತು ರಾಮುಲು ಅವರು ವಿಕಾರಾಬಾದ್ ಕಲೆಕ್ಟರ್ ಕಚೇರಿಯಲ್ಲಿ ಸರ್ವೇ ಸಂಖ್ಯೆಗಳು ಇಲ್ಲವಾಗಿರುವ ಬಗ್ಗೆ ಅರ್ಜಿ ಸಲ್ಲಿಸಿದರು.
ಅಂದಿನಿಂದ, ಅವರು ವಾರಕ್ಕೊಮ್ಮೆ ಕೋಟೆಪಲ್ಲಿ ತಹಶೀಲ್ದಾರ್ ಕಚೇರಿ ಮತ್ತು ವಿಕಾರಾಬಾದ್ ಕಲೆಕ್ಟರ್ ಕಚೇರಿಗೆ ಭೇಟಿ ನೀಡುತ್ತಿದ್ದಾರೆ. ವಿಕಾರಾಬಾದ್ ಕಲೆಕ್ಟರ್ ಕಚೇರಿ ಅವರ ಮನೆಯಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿದೆ. ಅವರು ಅಲ್ಲಿಗೆ ಬಸ್ಸಿನಲ್ಲಿ ಹೋಗುತ್ತಾರೆ. ಹೋಗಿ ಬರುವುದಕ್ಕೆ 45 ರೂ ಬೇಕಾಗುತ್ತದೆ. ಬೆಳಗ್ಗೆ ಹೊರಟರೆ ಬರುವಾಗ ಸಂಜೆಯಾಗುತ್ತದೆ. "ನನ್ನ ಇಬ್ಬರು ಮಕ್ಕಳು ಶಾಲೆಗೆ ಹೋಗುತ್ತಾರೆ ಮತ್ತು ಪಾಸ್‌ಬುಕ್ ಪಡೆಯುವ ಭರವಸೆಯಲ್ಲಿ ನಾವು ಹೊರಡುತ್ತೇವೆ" ಎಂದು ರಾಜೇಶ್ವರಿ ಹೇಳುತ್ತಾರೆ.
2018ರ ಕೊನೆಯಿಂದ ಅವರು ಭಾರ್ವಾಡ್‌ನಲ್ಲಿರುವ ತಮ್ಮ 1.28 ಎಕರೆ ಭೂಮಿಯಲ್ಲಿ ಬೇಸಾಯ ಮಾಡುತ್ತಿದ್ದಾರೆ. “ಜೂನ್ ತಿಂಗಳಿನಲ್ಲಿ [ಹತ್ತಿ] ಹಾಕುತ್ತೇವೆ. ಅದು ಜನವರಿ ತಿಂಗಳಿಗೆ ಹೂ ಬಿಡುತ್ತದೆ. ಈ ಪ್ರದೇಶದಲ್ಲಿನ ನೀರಿನ ಕೊರತೆ ಹಾಗೂ ಹಣದ ಕೊರತೆಯ ಕಾರಣ ಇಲ್ಲಿ ಬೆಳೆಯಲು ಸಾಧ್ಯವಿರುವ ಏಕೈಕ ಬೆಳೆಯಿದು” ಎಂದು ರಾಮುಲು ಹೇಳುತ್ತಾರೆ. ಅವರು ವರ್ಷಕ್ಕೆ ಒಂದು ಕ್ವಿಂಟಾಲ್ ಬೆಳೆ ತೆಗೆಯುತ್ತಾರೆ ಅದನ್ನು 7,750 ರೂ.ಗೆ ಮಾರಾಟ ಮಾಡುತ್ತಾರೆ.
ಪಾಸ್ ಬುಕ್ ಇಲ್ಲದ ಕಾರಣ ಅವರಿಗೆ ರೈತ ಬಂಧು ಅಡಿಯಲ್ಲಿ ಸಿಗುವ ಪ್ರಯೋಜನಗಳು ಸಿಗುತ್ತಿಲ್ಲ. ಸುಮಾರು 40,000 ರೂ.ಗಳ ಮೌಲ್ಯದ ಸುಮಾರು ಎಂಟು ಕಂತುಗಳನ್ನು ಕಳೆದುಕೊಂಡಿದ್ದೇವೆ ಎಂದು ದಂಪತಿಗಳು ಹೇಳುತ್ತಾರೆ.
ಅವರಿಗೆ ಹಿಂದಿನ ಬಾಕಿ ಸಿಗುವ ಸಾಧ್ಯತೆಯಿಲ್ಲ ಎಂದು ಭಾರ್ಗವಿ ಹೇಳುತ್ತಾರೆ.


ರಂಗಯ್ಯನವರಿಗೆ ರೈತ ಬಂಧು ಯೋಜನೆಯಡಿ ಹಣ ಸಿಗದೆ, ಕೇಂದ್ರ ಸರ್ಕಾರದ ಯೋಜನೆಯಡಿ ಹಣ ಬರುತ್ತಿರುವುದು ವಿಚಿತ್ರವಾಗಿ ಕಾಣುತ್ತಿದೆ. ಬಲ: ರಾಜೇಶ್ವರಿ ಮತ್ತು ರಾಮುಲು ಲೇವಾದೇವಿಗಾರರಿಂದ ಸಾಲ ಪಡೆದು ಆಡುಗಳನ್ನು ಸಾಕಲು ಪ್ರಾರಂಭಿಸಿದ್ದಾರೆ
ಬೋಪನವಾರಂ ಗ್ರಾಮದ ರಂಗಯ್ಯನವರಿಗೆ ರೈತ ಬಂಧು ಪ್ರಯೋಜನಗಳು ಸಿಗುತ್ತಿಲ್ಲವಾದ ಕಾರಣ ಹಾಗೂ ಹಣದ ಕೊರತೆಯಿಂದಾಗಿ ಅವರು ಜೂನ್ ತಿಂಗಳಿನಿಂದ ಡಿಸೆಂಬರ್ ವರೆಗೆ ಜೋಳ ಮತ್ತು ಅರಿಶಿನವನ್ನು ಮಾತ್ರ ಬಿತ್ತನೆ ಮಾಡಲು ಸಾಧ್ಯ ಎಂದು ಹೇಳುತ್ತಾರೆ.
ಕೇಂದ್ರ ಸರ್ಕಾರದ ಪೋರ್ಟಲ್ ಅವರನ್ನು ಗುರುತಿಸುತ್ತದೆ - ಅವರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯಿಂದ ( ಪಿಎಂ-ಕಿಸಾನ್ ) ಪಾವತಿಗಳನ್ನು ಸ್ವೀಕರಿಸುತ್ತಿದ್ದಾರೆ. ಈ ಯೋಜನೆಯಡಿ, ಸಣ್ಣ ಮತ್ತು ಅಂಚಿನಲ್ಲಿರುವ ರೈತರಿಗೆ ವರ್ಷಕ್ಕೆ 6,000 ರೂ.ಗಳನ್ನು ಅವರ ಆಧಾರ್ ಲಿಂಕ್ ಮಾಡಿದ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತದೆ.
“ಕೇಂದ್ರ ಸರ್ಕಾರ ನನ್ನನ್ನು ಫಲಾನುಭವಿ ಎಂದು ಗುರುತಿಸಬಹುದಾದರೆ, ರಾಜ್ಯ ಸರ್ಕಾರ ನನ್ನನ್ನು ಫಲಾನುಭವಿಗಳ ಪಟ್ಟಿಯಿಂದ ಏಕೆ ತೆಗೆದುಹಾಕಿದೆ” ಎಂದು ರಂಗಯ್ಯ ಪ್ರಶ್ನಿಸುತ್ತಾರೆ. "ಇದು ಧರಣಿ ಪೋರ್ಟಲ್ ಆರಂಭಗೊಂಡ ನಂತರ ಆಗಿದ್ದು."
*****
ಕಾನೂನುಬದ್ಧವಾಗಿ ತಮ್ಮ ಮಾಲಿಕತ್ವ ಗುರುತಿಸಲ್ಪಡುವುದಕ್ಕೆ ಕಾದು ಬೇಸತ್ತ ಅವರು 2023ರ ಜನವರಿ ತಿಂಗಳಿನಲ್ಲಿ ಪಶುಸಂಗೋಪನೆಯನ್ನು ಕೈಗೆತ್ತಿಕೊಂಡರು. ಅವರು ಸಾಂಪ್ರದಾಯಿಕ ಪಶುಪಾಲಕರಾದ ಗೊಲ್ಲ ಸಮುದಾಯಕ್ಕೆ ಸೇರಿದವರು. ರಾಮುಲು 12 ಆಡುಗಳನ್ನು ಖರೀದಿಸಲು ಖಾಸಗಿ ಲೇವಾದೇವಿದಾರರಿಂದ ತಿಂಗಳಿಗೆ 3% ಬಡ್ಡಿದರದಲ್ಲಿ 1,00,000 ರೂ.ಗಳ ಸಾಲವನ್ನು ಪಡೆದರು. ಇದಕ್ಕೆ ತಿಂಗಳಿಗೆ 3,000 ರೂ.ಗಳನ್ನು ಪಾವತಿಸಬೇಕಾಗುತ್ತದೆ. ಆದರೆ ಇದು ಬಡ್ಡಿ ಮಾತ್ರ.
"ಕೆಲವು ತಿಂಗಳುಗಳ ನಂತರ, ನಾವು ಆಡುಗಳನ್ನು ಮಾರಾಟ ಮಾಡಲು ಪ್ರಾರಂಭಿಸುತ್ತೇವೆ. ಪ್ರತಿ ಮೇಕೆ ಮರಿಯನ್ನು 2,000-3,000 ರೂಪಾಯಿಗಳಿಗೆ ಮಾರಾಟ ಮಾಡಲಾಗುತ್ತದೆ ಮತ್ತು ವಯಸ್ಕ ಆಡುಗಳು ಅವುಗಳ ಆರೋಗ್ಯವನ್ನು ಅವಲಂಬಿಸಿ 5,000-6,000 ರೂ.ಗೆ ಮಾರಾಟವಾಗುತ್ತವೆ" ಎಂದು ರಾಮುಲು ವಿವರಿಸುತ್ತಾರೆ.
ಅವರು ಇನ್ನೂ ಒಂದು ವರ್ಷ ಪಾಸ್ ಬುಕ್ ಪಡೆಯಲು ಓಡಾಡುವುದೆಂದು ನಿರ್ಧರಿಸಿದ್ದಾರೆ. ಆದರೆ ರಾಜೇಶ್ವರಿ ದಣಿದ ದನಿಯಲ್ಲಿ ಹೇಳುತ್ತಾರೆ, “ಬಹುಶಃ ಭೂಮಿಯ ಒಡೆತನ ನಮ್ಮಂತವರಿಗೆ ಹೇಳಿ ಮಾಡಿಸಿದ್ದಲ್ಲ ಅನ್ನಿಸುತ್ತದೆ.”
ಈ ಕಥೆಯನ್ನು ರಂಗ್ ದೇ ಅನುದಾನದ ಸಹಯೋಗದಿಂದ ಮಾಡಲಾಗಿದೆ.
ಅನುವಾದ: ಶಂಕರ. ಎನ್. ಕೆಂಚನೂರು