ಛಾಯಾ ಉಬಾಳೆ ಬೀಸುಕಲ್ಲಿನೆದುರು ಕುಳಿತು ತನ್ನ ತಾಯಿಯ ನೆನಪಿನಲ್ಲಿ ಬೀಸುಕಲ್ಲಿನ ಪದಗಳು ಮತ್ತು ಕುಟುಂಬ ಸಂಬಂಧಗಳಲ್ಲಿನ ಸಂತೋಷ ಮತ್ತು ಸಂಕಷ್ಟಗಳ ಕುರಿತಾದ ಜಾನಪದ ಹಾಡುಗಳನ್ನು ಹಾಡಿದ್ದಾರೆ
“ನನ್ನ ಅಮ್ಮ ಅನೇಕ ಹಾಡುಗಳನ್ನು ಹಾಡಿದ್ದಾರೆ, ಆದರೆ ಈಗ ಅವುಗಳನ್ನು ನೆನಪು ಮಾಡಿಕೊಳ್ಳುವುದು ಕಷ್ಟ” ಎಂದು ಛಾಯಾ ಬಾಯಿ ಉಬಾಳೆ ಪರಿಯೊಂದಿಗೆ ಮಾತನಾಡುತ್ತಾ ತಿಳಿಸಿದರು. ನಾವು ಅವರನ್ನು ಮಹಾರಾಷ್ಟ್ರದ ಪುಣೆ ಜಿಲ್ಲೆಯ ಶಿರೂರ್ ತಾಲ್ಲೂಕಿನಲ್ಲಿ ಭೇಟಿಯಾದೆವು. ನಾವು 2017ರಲ್ಲಿ ನಮ್ಮ ಗ್ರೈಂಡ್ ಮಿಲ್ ಸಾಂಗ್ ಪ್ರಾಜೆಕ್ಟ್ (ಜಿಎಸ್‌ಪಿ) ಯೋಜನೆಗೆ ಹಾಡುಗಳನ್ನು ಹಾಡಿದ್ದ ಗಾಯಕರನ್ನು ಮತ್ತೆ ಭೇಟಿಯಾಗುವ ಉದ್ದೇಶದ ನಮ್ಮ ಹುಡುಕಾಟದ ಪ್ರಯಾಣದಲ್ಲಿದ್ದೆವು. ಹೀಗೆ ಹೊರಟ ನಾವು ಹೋಗಿ ತಟ್ಟಿದ್ದು ಸವಿಂದಾನೆ ಗ್ರಾಮದ ಪವಾರ್ ಕುಟುಂಬದ ಮನೆಯ ಬಾಗಿಲೊಂದನ್ನು. ಅದೊಂದು ಗಂಡು ಮಕ್ಕಳು, ಮಗಳು, ಸೊಸೆ ಮತ್ತು ಮಕ್ಕಳೊಂದಿಗೆ ತುಂಬಿದ ಮನೆಯಾಗಿತ್ತು.
ಆದರೆ ನಮಗೆ ಗೀತಾ ಪವಾರ್ ಅವರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ಅವರು ನಾಲ್ಕು ವರ್ಷಗಳ ಹಿಂದೆಯೇ ತೀರಿಕೊಂಡಿದ್ದರು. ಹೀಗಾಗಿ ತನ್ನ ತಾಯಿ ಹಾಡುತ್ತಿದ್ದ ಹಾಡುಗಳನ್ನು ನೆನಪಿಸಿಕೊಂಡು ಹಾಡುವ ಜವಾಬ್ದಾರಿ ಛಾಯಾ ಉಬಾಳೆಯವರ ಹೆಗಲಿಗೇರಿತು. ಈ 43 ವರ್ಷದ ಮಹಿಳೆ ತನ್ನ ನಮಗೆ ಅವರ ಅಮ್ಮ ಧರಿಸುತ್ತಿದ್ದ ಜೋಡಾವ್ (ಕಾಲುಂಗುರ) ಜೋಡಿಯನ್ನು ಪ್ರೀತಿಯಿಂದ ತೋರಿಸಿ, ನಂತರ ಅವುಗಳನ್ನು ಗೀತಾ ಪವಾರ್ ಅವರ ಫೋಟೊ ಪಕ್ಕದಲ್ಲಿ ಇರಿಸಿದರು.
ತನ್ನ ತಾಯಿ ಹಾಡುತ್ತಿದ್ದ ಓವಿ (ಬೀಸುಕಲ್ಲಿನ ಪದಗಳು) ಸಾಲುಗಳನ್ನು ನೆನಪಿಸಿಕೊಳ್ಳಲು ಪ್ರಯತ್ನಿಸಿದ ಛಾಯಾ ಅವರು ಕಡೆಗೆ ನಾಲ್ಕು ಹಾಡುಗಳನ್ನು ಹಾಡುವಲ್ಲಿ ಸಫಲರಾದರು. ಅದನ್ನು ಅವರು ಎರಡು ಜನಪದ ಗೀತೆ ನಡುವೆ ಹಾಡಿದರು. ಅವರು ಹಾಡಿದ ಜನಪದ ಗೀತೆಗಳಲ್ಲಿ ಒಂದು ಸಂಭ್ರಮದ ಹಾಡಾದರೆ, ಇನ್ನೊಂದು ದುಖಃದ ಗೀತೆಯಾಗಿತ್ತು. ಭದ್ರ ದೇಶದ ರಾಜ ಅಶ್ವಪತಿಯ ಮಗಳು ದಂತಕತೆ ಸಾವಿತ್ರಿಯ ಸದ್ಗುಣಗಳನ್ನು ಹೊಗಳುವ ಎರಡು ಸಾಲುಗಳೊಂದಿಗೆ ಹಾಡನ್ನು ಆರಂಭಿಸಿದರು. ಈ ದ್ವಿಪದಿಯನ್ನು ಅವರು ಗಲಾ (ರಾಗ) ಆಗಿ ಹಾಡಿದರು. ಮುಂದಿನ ಹಾಡುಗಳಿಗೆ ಕಂಠವನ್ನು ಹೊಂದಿಸಿಕೊಳ್ಳುವ ಸಲುವಾಗಿ ಇದನ್ನು ಹಾಡಲಾಗುತ್ತದೆ. ಇಲ್ಲಿ ಇದೊಂದು ಸಾಮಾನ್ಯ ಅಭ್ಯಾಸ.


ಎಡ: ಛಾಯಾ ಉಬಾಳೆಯವರು 2013ರಲ್ಲಿ ನಿಧನರಾದ ತನ್ನ ತಾಯಿ ಗೀತಾಬಾಯಿ ಹರಿಭಾವು ಪವಾರ್ ಅವರ ಫೋಟೊವನ್ನು ತೋರಿಸುತ್ತಿದ್ದಾರೆ. ಬಲ: ಗೀತಾಬಾಯಿಯವರ ಚಿತ್ರ ಮತ್ತು ಕಾಲುಂಗುರವನ್ನು ತೋರಿಸುತ್ತಿದ್ದಾರೆ

ಹಾಡುಗಾರರಾದ ಗೀತಾಬಾಯಿ ಪವಾರ್ ಅವರ ಕುಟುಂಬ: (ಎಡದಿಂದ ಬಲಕ್ಕೆ) ಸೊಸೆ ನಮೃತಾ, ಮಗ ಶಹಾಜಿ, ಮೊಮ್ಮಗ ಯೋಗೇಶ್ ಉಬಾಳೆ, ಮಗಳು ಛಾಯಾ ಉಬಾಳೆ, ಸೋದರಸಂಬಂಧಿ ಅಭಿಷೇಕ್ ಮಾಳವೆ ಮತ್ತು ಕಿರಿಯ ಮಗ ನಾರಾಯಣ್ ಪವಾರ್
ಮೊದಲ ಜನಪದ ಗೀತೆಯಲ್ಲಿ ಅವರು ಹೆಣ್ಣೊಬ್ಬಳು ದೊಡ್ಡ ಮನೆಯೊಂದರ ಎಲ್ಲಾ ಕೆಲಸವನ್ನು ಒಬ್ಬಳೇ ನಿಭಾಯಿಸುವುದನ್ನು ಮಹಾಭಾರತದ ಐದು ಪಾಂಡವರು ತಮ್ಮ ನೂರು ಮಂದಿ ಸೋದರಸಂಬಂಧಿಗಳೊಂದಿಗಿನ ಹೋರಾಟಕ್ಕೆ ಹೋಲಿಸುತ್ತಾರೆ. ಅವರು ತಮ್ಮ ತಂದೆ ತಾಯಿಯನ್ನು ಪಂಢರಪುರದ ವಿಠ್ಠಲ ಮತ್ತು ರುಕ್ಮಿಣಿಗೆ ಹೋಲಿಸುತ್ತಾರೆ. ತಂದೆ-ತಾಯಿಯ ಕುರಿತು ಹಾಡತೊಡಗಿದಂತೆ ಛಾಯ ಅವರ ದನಿಯು ಉಮ್ಮಳಿಸತೊಡಗಿ ಅವರು ಕಣ್ಣೀರನ್ನು ತಡೆಯದಾದರು. ಕಣ್ಣೀರು ಅವರ ಕೆನ್ನೆಯ ಗುಂಟ ಹರಿಯತೊಡಗಿತು. ಆ ಸಂದರ್ಭ ಇದ್ದಕ್ಕಿದ್ದಂತೆ ಮನೆಯ ಛಾವಣಿಯ ತಗಡಿನ ಮೇಲೆ ಟಪ ಟಪನೆ ಸದ್ದು ಮಾಡುತ್ತಾ ಮಳೆ ಸುರಿದಂತೆ ದುಃಖ ಒಂದೇ ಸಮನೇ ಹರಿದು ಬಂದಿತ್ತು.
ಅವರು ಮುಂದಿನ ಚರಣದಲ್ಲಿ ನಾಲ್ಕು ಮಂದಿ ಬಾವಮೈದುನರು ಮತ್ತು ಮತ್ತು ಅವರ ಪತ್ನಿಯರ ಬಯಕೆಗಳನ್ನು ಈಡೇರಿಸುವಲ್ಲಿ ತನ್ನ ಅಣ್ಣ ಎದುರಿಸುತ್ತಿರುವ ಕಷ್ಟಗಳ ಕುರಿತು ಹಾಡಿದರು.
ಜನಪದ ಗೀತೆಯ ನಂತರದ ಮುಂದಿನ ನಾಲ್ಕು ಓವಿಗಳಲ್ಲಿ ಛಾಯಾ ಅವರು ಮಕ್ಕಳು ತನ್ನ ಅತ್ತೆ-ಮಾವಂದಿರು ಹಾಗೂ ಚಿಕ್ಕಪ್ಪ-ಚಿಕ್ಕಮ್ಮಂದಿರಿಂದ ಪಡೆಯುವ ಪ್ರೇಮ ಮತ್ತು ಉಡುಗೊರೆಗಳ ಕುರಿತು ಹಾಡಿದರು. ಮಗುವಿನ ತಾಯಿಯ ಸಹೋದರ ನೀಡುವ ಕೆಂಪು ಉಡುಪು ಮತ್ತು ಟೋಪಿಯ ಕುರಿತು ಈ ಪದ್ಯ ಮಾತನಾಡುತ್ತದೆ. ಮಗು ಅಳತೊಡಗಿದಂತೆ, ಹಾಡುಗಾರ್ತಿ ಅದರ ಹಸಿವನ್ನು ಗ್ರಹಿಸಿ ಮೊಸರನ್ನ ತಿನ್ನಿಸಲು ಹೇಳುತ್ತಾರೆ.
ತನ್ನ ಕಣ್ಣೀರನ್ನು ಒರೆಸಿಕೊಂಡು ನೋವಿನಿಂದ ಹೊರಬಂದ ಛಾಯಾ ಒಂದು ತಮಾಷೆಯಿಂದ ಕೂಡಿದ ಜನಪದ ಗೀತೆಯನ್ನು ಹಾಡಿದರು. ಈ ಗೀತೆಯಲ್ಲಿ ಜಗಳಗಂಟಿ ಅತ್ತೆಯೊಂದಿಗೆ ಸೊಸೆಯ ಹೆಣಗಾಟವನ್ನು ಅವರು ವರ್ಣಿಸಿದರು. ಅವರು ಈ ಹಾಡಿನಲ್ಲಿ ಅತ್ತೆಯನ್ನು ಮೆಚ್ಚಿಸುವುದೆಂದರೆ ಹಾಗಲಕಾಯಿಯನ್ನು ಸಿಹಿ ಮಾಡಲು ಹೊರಟಂತೆ ಎನ್ನುತ್ತಾರೆ. ಅದಕ್ಕೆ ಎಷ್ಟು ಸಿಹಿ ಬೆರೆಸಿ ಅಡುಗೆ ಮಾಡಿದರೂ ಅದರ ರುಚಿ ಕಹಿಯಾಗಿಯೇ ಇರುತ್ತದೆ. ಅದನ್ನು ಸಿಹಿಯಾಗಿಸಲು ಸಾಧ್ಯವೇ ಇಲ್ಲ. ಈ ಕೊನೆಯ ಹಾಡಿನಲ್ಲಿ ಛಾಯಾ ಅವರೊಂದಿಗೆ ನಾವೂ ನಗೆಗಡಲಿನಲ್ಲಿ ತೇಲಿದೆವು.
ಜನಪದ ಗೀತೆ:
गिरीजा आसू गाळिते
भद्र देशाचा अश्वपती राजा पुण्यवान किती
पोटी सावित्री कन्या सती केली जगामध्ये किर्ती
एकशेएक कौरव आणि पाची पांडव
साळीका डाळीका गिरीजा कांडण कांडती
गिरीजा कांडण कांडती, गिरीजा हलक्यानं पुसती
तुमी कोण्या देशीचं? तुमी कोण्या घरचं?
आमी पंढरपूर देशाचं, काय विठ्ठलं घरचं
विठ्ठल माझा पिता, रुक्मिनी माझी माता
एवढा निरोप काय, सांगावा त्या दोघा
पंचमी सणाला काय ये बंधवा न्यायाला
ए बंधवा, ए बंधवा, तुझं पाऊल धुईते
गिरीजा पाऊल धुईते, गिरीजा आसू जी गाळिते
तुला कुणी बाई नि भुलीलं, तुला कुणी बाई गांजिलं
मला कुणी नाही भुलीलं, मला कुणी नाही गांजिलं
मला चौघे जण दीर, चौघे जण जावा
एवढा तरास मी कसा काढू रे बंधवा
ಗಿರಿಜೆಯ ಕಣ್ಣೀರು
ಭದ್ರಾ ದೇಶದ ರಾಜ, ಅಶ್ವಪತಿ, ಎಷ್ಟೊಂದು ಅದೃಷ್ಟವಂತ
ಅವನ ಮಗಳು ಸಾವಿತ್ರಿಯ ಖ್ಯಾತಿ ಲೋಕದ ತುಂಬಾ ಹರಡಿದೆ
ನೂರಾ ಒಂದು ಕೌರವರು ಮತ್ತು ಐದು ಮಂದಿ ಪಾಂಡವರು
ಅಕ್ಕಿ ಅಥವಾ ಬೇಳೆಗಳನ್ನು ಬೀಸುತ್ತಿದ್ದಳು ಸಾವಿತ್ರಿ
ಬೀಸುತ್ತಾ ಕೇಳಿದಳು ಮೆಲ್ಲನೆ
ನೀವು ಯಾವ ದೇಶದವರು? ಯಾರ ಮನೆ ನಿಮ್ಮದು?
ನಾವು ಪಂಢರಾಪುರದವರು, ವಿಠ್ಠಲನ ಮನೆಯವರು
ವಿಠ್ಠಲ ನನ್ನ ತಂದೆ, ರುಕ್ಮಿಣಿ ನನ್ನ ತಾಯಿ
ನನ್ನ ಇದೊಂದು ಮಾತನ್ನು ಅವರಿಬ್ಬರಿಗೂ ತಲುಪಿಸಿ
ಪಂಚಮಿ ಹಬ್ಬಕ್ಕೆ ನನ್ನ ಅಣ್ಣನನ್ನು ಕಳುಹಿಸುವಂತೆ ಹೇಳಿ
ಓ ಅಣ್ಣಾ, ನನ್ನಣ್ಣ, ನಿನ್ನ ಪಾದ ತೊಳೆಯುವೆನು
ಗಿರಿಜಾ ನಿನ್ನ ಪಾದದ ಧ್ಯಾನದಲ್ಲಿದ್ದಾಳೆ, ಗಿರಿಜಾ
ಕಣ್ಣೀರಿಡುತ್ತಿದ್ದಾಳೆ
ಯಾರು ನಿನ್ನ ಮರೆತಿದ್ದಾರೆ, ಯಾರು ನಿನಗೆ ತೊಂದರೆ
ಕೊಡುತ್ತಿದ್ದಾರೆ
ನನ್ನನ್ನು ಯಾರೂ ಮರೆತಿಲ್ಲ, ಯಾರೂ ನೋವು ಕೊಟ್ಟಿಲ್ಲ
ಆದರೆ ನನಗೆ ನಾಲ್ಕು ಮಂದಿ ಬಾವಮೈದುನರು, ನಾಲ್ಕು ನಾದಿನಿಯರು
ನಾನು ಹೇಗೆ ಇವರೆಲ್ಲರನ್ನೂ ಸಂಭಾಳಿಸಲಿ, ಹೇಳಣ್ಣ
ಓವಿಗಳು (ಬೀಸುಕಲ್ಲಿನ ಪದಗಳು):
अंगण-टोपडं सीता घालिती बाळाला
कोणाची लागी दृष्ट, काळं लाविती गालाला
अंगण-टोपडं हे बाळ कुणी नटविलं
माझ्या गं बाळाच्या मामानं पाठविलं
माझ्या गं योगेशच्या मामानं पाठविलं
अंगण-टोपडं गं बाळ दिसं लालं-लालं
माझ्या गं बाळाची मावशी आली कालं
रडतया बाळ त्याला रडू नको देऊ
वाटीत दहीभात त्याला खायला देऊ
ಸೀತಾ ತನ್ನ ಮಗುವಿಗೆ ಕುಲಾವಿ ಮತ್ತು ಟೋಪಿ ತೊಡಿಸುತ್ತಿದ್ದಾಳೆ
ಗಲ್ಲದ ಮೇಲೊಂದು ಕಪ್ಪು ಚುಕ್ಕಿಯಿಡುತ್ತಾಳೆ ಯಾರ ದೃಷ್ಟಿಯೂ
ತಾಕದಿರಲೆಂದು
ಮಗು ತೊಟ್ಟಿರುವ ಈ ಕುಲಾವಿ ಮತ್ತು ಟೊಪ್ಪಿ
ಅವನ ಮಾವ ಕಳುಹಿಸಿಕೊಟ್ಟಿದ್ದಾನೆ
ನನ್ನ ಯೋಗೇಶನ ಮಾವ ಕಳುಹಿಸಿದ್ದಾರೆ ಇದನ್ನು
ಕೆಂಪು ಕುಲಾವಿ, ಟೋಪಿ ತೊಟ್ಟಿದ್ದಾನೆ ನನ್ನ ಮಗ
ಮಗುವಿನ ಅತ್ತೆ ಬಂದಿದ್ದರು ನಿನ್ನೆ
ಮಗು ಅಳುತ್ತಿದೆ, ಹಾಗೇ ಬಿಡಬೇಡ
ತಂದು ತಿನ್ನಿಸು ಬಟ್ಟಲಿನಲ್ಲಿ ಮೊಸರನ್ನ
ಜನಪದ ಗೀತೆ:
सासू खट्याळ लई माझी
सासू खट्याळ लई माझी सदा तिची नाराजी
गोड करू कशी बाई कडू कारल्याची भाजी (२)
शेजारच्या गंगीनं लावली सासूला चुगली
गंगीच्या सांगण्यानं सासूही फुगली
पोरं करी आजी-आजी, नाही बोलायला ती राजी
गोड करू कशी बाई कडू कारल्याची भाजी
सासू खट्याळ लई माझी सदा तिची नाराजी
ನನ್ನ ಜಗಳಗಂಟಿ ಅತ್ತೆ
ನನ್ನ ಅತ್ತೆ ಬಹಳ ಜಗಳಗಂಟಿ, ಸದಾ ಅಸಮಧಾನ ಅವರಿಗೆ
ನಾನಾದರೂ ಹಾಗಲಕಾಯಿಯನ್ನು ಸಿಹಿಯಾಗಿಸಲು ಹೇಗೆ ಸಾಧ್ಯ? (2)
ನೆರೆಮನೆಯ ಗಂಗಿ ನನ್ನ ಕುರಿತು ಅವರಲ್ಲಿ ಚಾಡಿ ಹೇಳಿದಳು
ಅದನ್ನು ಕೇಳಿದ ಅತ್ತೆ ಕೋಪಗೊಂಡಿದ್ದಾರೆ
ಮಕ್ಕಳು ʼಅಜ್ಜಿ-ಅಜ್ಜಿʼ ಎನ್ನುತ್ತಿವೆ, ಆದರೆ ಅವರು ಮಾತನಾಡಲು
ತಯಾರಿಲ್ಲ
ಹೇಗೆ ನಾನು ಹಾಗಲಕಾಯಿಯನ್ನು ಸಿಹಿಯಾಗಿಸಲಿ
ನನ್ನ ಅತ್ತೆ ಬಹಳ ಜಗಳಗಂಟಿ, ಸದಾ ಅಸಮಾಧಾನ ಅವರಿಗೆ
ಪ್ರದರ್ಶಕರು / ಹಾಡುಗಾರರು : ಛಾಯಾ ಉಬಾಳೆ
ಗ್ರಾಮ : ಸವಿಂದಾನೆ
ತಾಲ್ಲೂಕು : ಶಿರೂರು
ಜಿಲ್ಲೆ : ಪುಣೆ
ದಿನಾಂಕ : 2017ರಲ್ಲಿ ಈ ಹಾಡುಗಳನ್ನು ರೆಕಾರ್ಡಿಂಗ್ ಮಾಡಿಕೊಳ್ಳಲಾಯಿತು ಮತ್ತು ಅದೇ ಸಮಯದಲ್ಲಿ ಛಾಯಾಚಿತ್ರಗಳನ್ನು ತೆಗೆದುಕೊಳ್ಳಲಾಯಿತು
ಪೋಸ್ಟರ್: ಸಿಂಚಿತಾ ಪರ್ಬತ್
ಹೇಮಾ ರಾಯ್ಕರ್ ಹಾಗೂ ಗಯ್ ಪೊಯಿಟೆವಿನ್ ಅವರು ಸ್ಥಾಪಿಸಿದ ಮೂಲ ಗ್ರೈಂಡ್ ಮಿಲ್ ಪ್ರಾಜೆಕ್ಟ್ ಕುರಿತು ತಿಳಯಲು ಈ ಲೇಖನವನ್ನು ಓದಿ.
ಅನುವಾದ: ಶಂಕರ. ಎನ್. ಕೆಂಚನೂರು