ಭಾರತದ ಬಹುತೇಕ ಎಲ್ಲಾ ರೈತರಿಗೂ ತಿಳಿದಿರುವ ಇಂಗ್ಲಿಷ್ ಭಾಷೆಯ ಕೆಲವೇ ಪದಗಳಲ್ಲಿ ಸ್ವಾಮಿನಾಥನ್ ರಿಪೋರ್ಟ್ ಅಥವಾ ಸ್ವಾಮಿನಾಥನ್ ಕಮಿಷನ್ ರಿಪೋರ್ಟ್ ಕೂಡಾ ಸೇರಿವೆ. ಜೊತೆಗೆ ಕನಿಷ್ಠ ಬೆಂಬಲ ಬೆಲೆ = ಸಮಗ್ರ ಉತ್ಪಾದನಾ ವೆಚ್ಚ + 50 ಪ್ರತಿಶತ (ಸಿ 2 + 50 ಶೇಕಡಾ ಎಂದೂ ಕರೆಯಲಾಗುತ್ತದೆ) ಎಂಬುದು ಅವರಿಗೆ ತಿಳಿದಿದೆ.
ಪ್ರೊಫೆಸರ್ ಎಮ್.ಎಸ್. ಸ್ವಾಮಿನಾಥನ್ ಅವರನ್ನು ಕೇವಲ ಸರ್ಕಾರ ಮತ್ತು ಅದರ ನೌಕರಶಾಹಿ ಅಥವಾ ವಿಜ್ಞಾನ ಸಂಸ್ಥೆಗಳು ಮಾತ್ರವಲ್ಲದೆ, ರಾಷ್ಟ್ರೀಯ ರೈತ ಆಯೋಗದ (ಎನ್‌ಸಿಎಫ್) ವರದಿಯನ್ನು ಜಾರಿಗೆ ತರಬೇಕೆಂದು ಆಗ್ರಹಿಸುತ್ತಿರುವ ರೈತರೂ ಸದಾ ಸ್ಮರಿಸಲಿದ್ದಾರೆ.
ವರದಿಯ ಹೆಸರು ಏನೇ ಇದ್ದರೂ ಭಾರತದ ರೈತರು ಅದನ್ನು ಕರೆಯುವುದು ಸ್ವಾಮಿನಾಥನ್ ವರದಿಯೆಂದೇ. ಏಕೆಂದರೆ ಅವರು ಅಧ್ಯಕ್ಷರಾಗಿದ್ದ ಎನ್‌ಸಿಎಫ್ ವರದಿಗೆ ಅವರು ನೀಡಿರುವ ಕೊಡುಗೆ, ಅದರ ಮೇಳಿನ ಅವರ ಪ್ರಭಾವ ಎಂದಿಗೂ ಅಳಿಸಲಾಗದ್ದು.
ಈ ವರದಿಗಳ ನಿರೂಪಣೆಯೆಂದರೆ ಯುನೈಟೆಡ್ ಪ್ರೋಗ್ರೆಸಿವ್ ಅಲಯನ್ಸ್ (ಯುಪಿಎ) ಮತ್ತು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಎರಡೂ ಸರ್ಕಾರಗಳು ವರದಿಗಳನ್ನು ಹತ್ತಿಕ್ಕಿದವು ಮತ್ತು ಆಯೋಗದ ಉದ್ದೇಶಗಳನ್ನು ಧಿಕ್ಕರಿಸಿದವು. ಮೊದಲ ವರದಿಯನ್ನು 2004ರಲ್ಲಿ ಸಲ್ಲಿಸಲಾಯಿತು ಮತ್ತು ಐದನೇ ಅಥವಾ ಅಂತಿಮ ವರದಿಯನ್ನು ಅಕ್ಟೋಬರ್ 2006ರಲ್ಲಿ ಸಲ್ಲಿಸಲಾಯಿತು. ವಾಸ್ತವದಲ್ಲಿ ಕೃಷಿ ಪಿಡುಗಿನ ಕುರಿತು ಸಂಸತ್ತಿನ ವಿಶೇಷ ಅಧಿವೇಶನ ಕರೆದಾಗ ಒಂದು ಗಂಟೆಯೂ ಕೃಷಿಯ ಬಗ್ಗೆ ವಿಶೇಷ ಚರ್ಚೆ ನಡೆದಿರಲಿಲ್ಲ. ಆಯೋಗದ ಮೊದಲ ವರದಿ ಸಲ್ಲಿಕೆಯಾಗಿ 19 ವರ್ಷಗಳು ಕಳೆದಿವೆ.
2014ರಲ್ಲಿ ಮೋದಿ ಸರಕಾರ ಅಧಿಕಾರಕ್ಕೆ ಬರಲು ಸ್ವಾಮಿನಾಥನ್ ವರದಿ ಜಾರಿ, ಕನಿಷ್ಟ ಬೆಂಬಲ ಬೆಲೆ ಕುರಿತು ಅದು ನೀಡಿದ ಭರವಸೆಗಳೂ ಕಾರಣ ಎಂದರೆ ತಪ್ಪಾಗಲಿಕ್ಕಿಲ್ಲ. ಆದರೆ, ಅಧಿಕಾರಕ್ಕೆ ಬಂದ ಈ ಸರ್ಕಾರ ಅದನ್ನು ಜಾರಿ ಮಾಡಿದರೆ ಮಾರುಕಟ್ಟೆ ಬೆಲೆಯಲ್ಲಿ ಏರಿಳಿತವಾಗುತ್ತದೆ ಮತ್ತು ಹೀಗಾಗಿ ಈ ಸೂತ್ರವನ್ನು ಬಳಸಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಸುಪ್ರೀಂ ಕೋರ್ಟ್‌ನಲ್ಲಿ ಅಫಿಡವಿಟ್ ಸಲ್ಲಿಸಿತು.
ಬಹುಶಃ ಎನ್‌ಡಿಎ ಮತ್ತು ಯುಒಇಎ ಸರ್ಕಾರಗಳು ಈ ವರದಿಗಳು ತುಂಬಾ ರೈತ ಸ್ನೇಹಿ ಎಂದು ಭಾವಿಸುತ್ತವೆ. ಏಕೆಂದರೆ ಎರಡೂ ಸರ್ಕಾರಗಳು ಕೃಷಿಯನ್ನು ಕಾರ್ಪೊರೇಟ್ ವಲಯದ ಮಡಿಲಿನಲ್ಲಿ ಇಡಲು ಆಸಕ್ತಿ ಹೊಂದಿದ್ದವು. ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ, ವರದಿಯು ಕೃಷಿ ಕ್ಷೇತ್ರಕ್ಕೆ ಬಲವಾದ ಮತ್ತು ಸಕಾರಾತ್ಮಕ ಯೋಜನೆಯನ್ನು ಪ್ರಸ್ತುತಪಡಿಸಿದೆ. ಏಕೆಂದರೆ ಈ ಆಯೋಗಕ್ಕೆ ವಿಭಿನ್ನ ಚೌಕಟ್ಟನ್ನು ರಚಿಸಲು ಬಯಸುವ ವ್ಯಕ್ತಿ ಅಧ್ಯಕ್ಷರಾಗಿದ್ದರು. ಕೃಷಿ ಕ್ಷೇತ್ರದ ಬೆಳವಣಿಗೆಯನ್ನು ಅಳೆಯುವ ಸಂದರ್ಭದಲ್ಲಿ ಡಾ. ಸ್ವಾಮಿನಾಥನ್ ಕೇವಲ ಇಳುವರಿಯನ್ನು ನೋಡದೆ ರೈತರ ಆದಾಯ ಕುರಿತೂ ಯೋಚಿಸಬೇಕು ಎಂದು ನಂಬಿದ್ದರು.

ಭಾರತದಲ್ಲಿ ಕೃಷಿಯ ಬೆನ್ನೆಲುಬು ಮಹಿಳೆಯರು. ಬಿತ್ತನೆ, ನಾಟಿ, ಕೊಯ್ಲು, ಒಕ್ಕಲು, ಹೊಲದಿಂದ ಸಾಮಾನುಗಳನ್ನು ಮನೆಗೆ ತರುವುದು, ಡೈರಿ ಪ್ರಾಣಿಗಳ ನಿರ್ವಹಣೆ, ಹಾಲಿನ ವ್ಯಾಪಾರ ಮತ್ತು ಇತರ ಕೆಲಸಗಳನ್ನು ಮಹಿಳೆಯರೇ ಮಾಡುತ್ತಾರೆ. ಕೃಷಿಯಲ್ಲಿ ಇಂತಹ ಕೆಲಸಗಳ ಪಾಲು ಶೇಕಡಾ 65ರಷ್ಟಿದೆ. ಮೋದಿ ಸರಕಾರ ಜಾರಿಗೆ ತಂದ ಕೃಷಿ ಕಾನೂನುಗಳ ವಿರುದ್ಧ ರೈತರು ಪ್ರತಿಭಟನೆ ನಡೆಸಿದಾಗ ಮಹಿಳೆಯರೂ ಮುಂಚೂಣಿಯಲ್ಲಿದ್ದರು. ದಿಲ್ಲಿಯ ಹೆಬ್ಬಾಗಿಲುಗಳ ಬಳಿ ನಿಂತಿರುವ ರೈತ ಮಹಿಳೆಯರನ್ನು ಇಲ್ಲಿ ಕಾಣಬಹುದು


ಬಿಟಿ-ಹತ್ತಿಯು ಭಾರತದ ಹತ್ತಿ ವಿಸ್ತೀರ್ಣದ 90 ಪ್ರತಿಶತವನ್ನು ಆವರಿಸಿದೆ - ಮತ್ತು ಕೀಟ ನಾಶಕಗಳು ಹತ್ತುವುದಿಲ್ಲ ಎಂದು ನೀಡಲಾಗಿದ್ದ ಜಿಎಮ್ ತಳಿಗಳಿಗೆ ಬರುತ್ತಿರುವ ಕೀಟಗಳು ಕೀಟನಾಶಕ ನಿರೋಧಕತೆಯನ್ನು ಬೆಳೆಸಿಕೊಂಡು ರೈತರ ಜೀವವನ್ನು ಹಿಂಡುತ್ತಿವೆ. ಪರಿಣಾಮವಾಗಿ ಬೆಳೆಯೊಂದಿಗೆ ರೈತರೂ ಬಲಿಯಾಗುತ್ತಿದ್ದಾರೆ . ಅಮ್ಗಾಂವ್ (ಖುರ್ದ್) ನ ಗಣೇಶ್ ವದಂದ್ರ ಅವರು ತಮ್ಮ ಹೊಲಗಳಲ್ಲಿ ಹುಳುಗಳಿಂದ ಮುತ್ತಿಕೊಂಡಿರುವ ಗಿಡಗಳನ್ನು ನೋಡುತ್ತಿದ್ದಾರೆ. ಅದರಲ್ಲೂ 2017-18ರ ಹತ್ತಿ ಕೀಳುವ ಸಮಯದಲ್ಲಿ ವಿದರ್ಭದ ಹತ್ತಿ ಬೆಲ್ಟ್‌ನಲ್ಲಿ, ಎಲ್ಲೆಡೆ ಅದೇ ಚಿತ್ರ ಕಂಡುಬಂದಿದೆ. 2017-18ರಲ್ಲಿ ಭಾರತದಲ್ಲಿ 1.3 ಮಿಲಿಯನ್ ಹೆಕ್ಟೇರ್‌ನಲ್ಲಿ ಹತ್ತಿಯನ್ನು ಬೆಳೆಯಲಾಗಿತ್ತು. ಕೆಲವು ವರದಿಗಳ ಪ್ರಕಾರ, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಹುಳುಗಳ ಬಾಧೆ ಕಂಡುಬಂದಿದೆ. ಆದರೆ, ಭಾರತ ಸರ್ಕಾರದ ಕೃಷಿ ಸಚಿವಾಲಯವು ಬಿಟಿ ಹತ್ತಿಯ ಹೆಸರನ್ನು ಪಟ್ಟಿಯಿಂದ ತೆಗೆದುಹಾಕುವ ಬೇಡಿಕೆಯನ್ನು ತಿರಸ್ಕರಿಸಿದೆ
2005ನೇ ಇಸವಿ ಸದಾ ನೆನಪಿನಲ್ಲಿ ಉಳಿಯುತ್ತದೆ. ಅವರು ಆಗ ರಾಷ್ಟ್ರೀಯ ಕೃಷಿ ಆಯೋಗದ ಆಯೋಗದ ಅಧ್ಯಕ್ಷರಾಗಿದ್ದರು. ಆಗ ನಾನು ಅವರನ್ನು ವಿದರ್ಭಕ್ಕೆ ಭೇಟಿ ನೀಡುವಂತೆ ವಿನಂತಿಸಿದೆ. ವಿದರ್ಭದ ಕೆಲವು ಭಾಗಗಳಲ್ಲಿ ದಿನಕ್ಕೆ 6-8 ಆತ್ಮಹತ್ಯೆಗಳು ಸಂಭವಿಸುತ್ತಿದ್ದ ಸಮಯ. ಇದು ತುಂಬಾ ಗಂಭೀರವಾದ ಸನ್ನಿವೇಶವಾಗಿದ್ದರೂ, ಮಾಧ್ಯಮಗಳಲ್ಲಿ ಅದರ ಬಗ್ಗೆ ಹೆಚ್ಚಿನ ಮಾಹಿತಿ ಸಿಗುವುದಿಲ್ಲ. (2006ರಲ್ಲಿ, ವಿದರ್ಭದ ಆರು ಜಿಲ್ಲೆಗಳಲ್ಲಿ ಆತ್ಮಹತ್ಯೆಗಳು ಹಿಂದೆಂದೂ ಕಂಡಿರದಷ್ಟು ಸಂಖ್ಯೆಯಲ್ಲಿದ್ದವು. ಆದಾಗ್ಯೂ, ವಿದರ್ಭಕ್ಕೆ ಆ ಸಮಯದಲ್ಲಿ ಹೊರಗಿನಿಂದ ಬಂದ ಪತ್ರಕರ್ತರ ಸಂಖ್ಯೆ ಸುಮಾರು 6. ಮತ್ತು ಅದೇ ಸಮಯದಲ್ಲಿ, ಮುಂಬೈನಲ್ಲಿ ನಡೆದ ಲ್ಯಾಕ್ಮೆ ಫ್ಯಾಶನ್ ವೀಕ್ ಆಚರಣೆಯನ್ನು ಕವರ್ ಮಾಡಲು 512 ನೋಂದಾಯಿತ ವರದಿಗಾರರು ಮತ್ತು 100 ಪತ್ರಕರ್ತರು ದೈನಂದಿನ ಪಾಸ್ ಮೂಲಕ ಬರಲು ಸಿದ್ಧರಾಗಿದ್ದರು. ತಮಾಷೆಯೆಂದರೆ ಆ ವರ್ಷದ ಲ್ಯಾಕ್ಮೆ ಫ್ಯಾಶನ್ ವೀಕ್‌ನ ಥೀಮ್ - ಹತ್ತಿ ಬಟ್ಟೆಯಾಗಿತ್ತು. ಹತ್ತಿ ಬಟ್ಟೆಯ ವಿವಿಧ ಉಡುಪುಗಳು ವೇದಿಕೆಯಲ್ಲಿ ಜಗಮಗಿಸುತ್ತಿದ್ದರೆ, ಆ ಹತ್ತಿ ಬೆಳೆಯುವ ಮಹಿಳೆಯರು, ಗಂಡಸರು ಮತ್ತು ಮಕ್ಕಳು ತಾವು ಹತ್ತಿ ಬೆಳೆದ ತಪ್ಪಿಗಾಗಿ ಜೀವ ತೆರುತ್ತಿದ್ದರು.)
ಆದರೆ, 2005ರಲ್ಲಿ, ಪ್ರೊ. ಸ್ವಾಮಿನಾಥನ್ ಇದಕ್ಕೆ ಪ್ರತಿಕ್ರಿಯಿಸಿದರು. ನಾವು ಅಂದುಕೊಂಡಿದ್ದಕ್ಕಿಂತಲೂ ಬಹಳ ಬೇಗ ಅವರು ರಾಷ್ಟ್ರೀಯ ಕೃಷಿ ಆಯೋಗದ ತಂಡದೊಂದಿಗೆ ವಿದರ್ಭಕ್ಕೆ ಬಂದರು.
ಅವರು ಭೇಟಿ ನೀಡುತ್ತಾರೆ ಎಂದು ತಿಳಿದ ಅಂದಿನ ವಿಲಾಸರಾವ್ ದೇಶಮುಖ್ ಸರ್ಕಾರ ತಲ್ಲಣಿಸಿತು. ಆಡಳಿತ ಅಧಿಕಾರಿಗಳು ಮತ್ತು ತಂತ್ರಜ್ಞರ ಭೇಟಿಗಳು, ಕೃಷಿ ಕಾಲೇಜುಗಳಲ್ಲಿ ಅಭಿನಂದನೆಗಳು ಹಲವು ಬಗೆಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಡಾ. ಸ್ವಾಮಿನಾಥನ್ ಅವರು ಎಷ್ಟು ವಿನಮ್ರರಾಗಿದ್ದರು ಎಂದರೆ ಅವರು ಎಲ್ಲಾ ಸರ್ಕಾರಿ ಕಾರ್ಯಕ್ರಮಗಳಿಗೆ ಹಾಜರಾಗುವುದಾಗಿ ಮಹಾರಾಷ್ಟ್ರ ಸರ್ಕಾರಕ್ಕೆ ತಿಳಿಸಿದರು. ಆದರೆ ಅದರ ಜೊತೆಗೆ ನಾನು ಮತ್ತು ಜೈದೀಪ್ ಹರ್ಡೀಕರ್ ಅವರಂತಹ ಸಹ ಪತ್ರಕರ್ತರು ಅವರನ್ನು ಕರೆದೊಯ್ಯಲು ಬಯಸಿದ ಸ್ಥಳಕ್ಕೆ ಅವರು ಹೋಗುತ್ತಿದ್ದರು. ಹಾಗೆ ಹೇಳುವುದಾದರೆ ನಾವು ಕರೆದಲ್ಲಿಗೆಲ್ಲ ಅವರು ಬಂದರು.
ಅವರನ್ನು ವಾರ್ಧೆಯಲ್ಲಿರುವ ಶ್ಯಾಮರಾವ್ ಖತಲೆಯವರ ಮನೆಗೆ ಕರೆದುಕೊಂಡು ಹೋದೆವು. ರೈತರಾಗಿದ್ದ ಅವರ ಗಂಡು ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದರು. ನಾವು ಅವರ ಮನೆಗೆ ತಲುಪುವ ಕೆಲವೇ ಗಂಟೆಗಳ ಮೊದಲು ಶ್ಯಾಮ್ ರಾವ್ ನಿಧನರಾದರು. ಹಸಿವು, ಅನಾರೋಗ್ಯ ಮತ್ತು ಮಕ್ಕಳು ಸಾವಿನ ಆಘಾತ ಶ್ಯಾಮ್ ರಾವ್ ಅವರನ್ನು ಬಲಿ ತೆಗೆದುಕೊಂಡಿದ್ದವು. ಸಂಬಂಧಪಟ್ಟ ವ್ಯಕ್ತಿ ಮೃತಪಟ್ಟಿದ್ದರಿಂದ ರಾಜ್ಯ ಸರ್ಕಾರ ಅವರು ಅಲ್ಲಿಗೆ ಭೇಟಿ ನೀಡುವುದನ್ನು ತಪ್ಪಿಸಲು ಯತ್ನಿಸಿತು. ಆದರೆ ಸ್ವಾಮಿನಾಥನ್ ಆ ಮನೆಗೆ ಭೇಟಿ ನೀಡಿ ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸಲಾದರೂ ಹೋಗಬೇಕು ಎಂದು ಹೇಳಿದರು. ಮತ್ತು ಹೇಳಿದಂತೆಯೇ ಮಾಡಿದರು.

ಅಕೋಲಾ ಜಿಲ್ಲೆಯ ಧಾಮ್ ಗ್ರಾಮದ ರೈತನ ಮಗ ವಿಶಾಲ್ ಖುಲೆ 2015ರಲ್ಲಿ ತನ್ನ ಬದುಕನ್ನು ಕೊನೆಗೊಳಿಸಿದರು. ವಿಶಾಲ್ ತಂದೆ ವಿಶ್ವನಾಶ್ ಖುಲೆ, ತಾಯಿ ಶೀಲಾ (ಬಲ), ಅಣ್ಣ ವೈಭವ್ ಮತ್ತು ನೆರೆಯ ಜಾನಕಿರಾಮ್ ಖುಲೆ. ವಿಶಾಲ್ ಅವರ ಸೋದರಸಂಬಂಧಿಗಳ ಜೊತೆಗೆ (ಎಡ). 1,500 ಜನಸಂಖ್ಯೆಯನ್ನು ಹೊಂದಿರುವ ಧಾಮ್, ಪಶ್ಚಿಮ ವಿದರ್ಭದ ಹತ್ತಿ ಮತ್ತು ಸೋಯಾಬೀನ್ ಬೆಲ್ಟ್‌ನಲ್ಲಿ ನೆಲೆಗೊಂಡಿದೆ ಮತ್ತು ಇಲ್ಲಿನ ಜನರು ತುಂಬಾ ಕಳಪೆ ಮಟ್ಟದ ಬದುಕನ್ನು ಬದುಕುತ್ತಿದ್ದಾರೆ. ನಿರಂತರ ರೈತರ ಆತ್ಮಹತ್ಯೆಯಿಂದಾಗಿ ಈ ಕ್ಷೇತ್ರ ನಿರಂತರ ಚರ್ಚೆಯಲ್ಲಿತ್ತು. ಪ್ರಸ್ತುತ ಬರಗಾಲವು ಕೃಷಿ ಬಿಕ್ಕಟ್ಟನ್ನು ಇನ್ನಷ್ಟು ಹೆಚ್ಚಿಸಿದೆ
ನಂತರದ ಭೇಟಿಗಳಲ್ಲಿ, ಜನರು ತಮ್ಮ ಪ್ರೀತಿಪಾತ್ರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲು ಪ್ರಾರಂಭಿಸಿದಾಗ ಸ್ವಾಮಿನಾಥನ್ ಅವರ ಕಣ್ಣುಗಳು ಕಣ್ಣೀರಿನಿಂದ ತುಂಬಿದವು. ಬಳಿಕ ಅವರು ವಾರ್ಡ್‌ನ ವೈಫಡ್‌ನಲ್ಲಿ ಆಯೋಜಿಸಿದ್ದ ದುಂಡುಮೇಜಿನ ಸಮಾವೇಶದಲ್ಲಿ ಪಾಲ್ಗೊಂಡರು. ಈ ಸಮ್ಮೇಳನವನ್ನು ವಿಜಯ್ ಜವಂಧಿಯಾ ಅವರು ಆಯೋಜಿಸಿದ್ದರು, ಕೃಷಿಯನ್ನು ಸ್ಪಷ್ಟವಾಗಿ ಮತ್ತು ನಿಖರವಾಗಿ ವಿಶ್ಲೇಷಿಸಬಲ್ಲ ಕೆಲವೇ ಜನರಲ್ಲಿ ಅವರೂ ಒಬ್ಬರು. ಅಲ್ಲಿ ನೆರೆದಿದ್ದವರಲ್ಲಿ ಹಿರಿಯ ರೈತರೊಬ್ಬರು ಎದ್ದು ನಿಂತು ರೈತರ ಮೇಲೆ ಸರಕಾರಕ್ಕೆ ಯಾಕೆ ಇಷ್ಟೊಂದು ಸಿಟ್ಟು ಎಂದು ಪ್ರಶ್ನಿಸಿದ ಕ್ಷಣ ಬಂತು. ನಮ್ಮ ಮಾತುಗಳನ್ನು ಅದು ಕೇಳಬೇಕೆಂದರೆ ನಾವು ಭಯೋತ್ಪಾದಕರಾಗಬೇಕೆ? ಎಂದು ಆ ಹಿರಿಯ ರೈತ ಕೇಳಿದರು. ಇದನ್ನು ಕೇಳಿದ ಪ್ರೊ. ಸ್ವಾಮಿನಾಥನ್ ತುಂಬಾ ನೊಂದಿದ್ದರು. ಅವರು ಆ ಹಿರಿಯರೊಂದಿಗೆ ಮತ್ತು ಎಲ್ಲರೊಂದಿಗೆ ತುಂಬಾ ಶಾಂತವಾಗಿ, ತಿಳುವಳಿಕೆಯ ಧ್ವನಿಯಲ್ಲಿ ಸಂವಹನ ನಡೆಸಿದರು.
ಆಗ ಸ್ವಾಮಿನಾಥನ್ ಅವರ ವಯಸ್ಸು 80 ದಾಟಿತ್ತು. ಆದರೆ ಅವರು ದಣಿದಿರಲಿಲ್ಲ. ಅವರ ಸ್ವಭಾವವು ಶಾಂತ ಮತ್ತು ದಯಾಪರವಾಗಿತ್ತು. ಅವರು ತಮ್ಮ ಅಭಿಪ್ರಾಯಗಳನ್ನು ಮತ್ತು ಕೆಲಸವನ್ನು ತೀವ್ರವಾಗಿ ಟೀಕಿಸುವವರೊಂದಿಗೆ ಸಹ ತುಂಬಾ ಪ್ರಾಮಾಣಿಕವಾಗಿ ಸಂವಹನ ನಡೆಸುತ್ತಿದ್ದರು. ಅವರ ಟೀಕೆಗಳನ್ನು ಸದ್ದಿಲ್ಲದೆ ಆಲಿಸುತ್ತಿದ್ದರು. ಅದರಲ್ಲಿ ಏನಾದರೂ ಇಷ್ಟವಾದರೆ ಒಪ್ಪಿಕೊಳ್ಳುತ್ತಿದ್ದರು. ಯಾರಾದರೂ ತಮ್ಮ ಆಕ್ಷೇಪಣೆಗಳನ್ನು ಖುದ್ದಾಗಿ ಹೇಳಿದರೂ, ಅಂತಹ ವ್ಯಕ್ತಿಯನ್ನು ಕಾರ್ಯಕ್ರಮಗಳಿಗೆ, ವಿಚಾರ ಸಂಕಿರಣಗಳಿಗೆ ಆಹ್ವಾನಿಸಿ ಎಲ್ಲರ ಮುಂದೆ ಬಹಿರಂಗವಾಗಿ ಮಂಡಿಸುತ್ತಿದ್ದರು. ಇಂತಹ ಇನ್ನೊಬ್ಬ ವ್ಯಕ್ತಿಯನ್ನು ನಾನು ಬದುಕಿನಲ್ಲಿ ನೋಡಿಲ್ಲ.
ಅವರ ಅತ್ಯಂತ ಪ್ರಶಂಸನೀಯ ಗುಣವೆಂದರೆ ಅವರು ತಮ್ಮ ಬದುಕನ್ನು ಹಿಂತಿರುಗಿ ನೋಡಬಲ್ಲವರಾಗಿದ್ದರು ಹಾಗೂ ತಮ್ಮ ಕೆಲಸದಲ್ಲಿನ ವೈಫಲ್ಯಗಳು ಮತ್ತು ದೋಷಗಳನ್ನು ಅರಿತು ಅದನ್ನು ಸರಿಪಡಿಸಿಕೊಳ್ಳಬಲ್ಲವರಾಗಿದ್ದರು. ಹಸಿರು ಕ್ರಾಂತಿಯ ನಂತರ, ರಾಸಾಯನಿಕ ಗೊಬ್ಬರಗಳು ಮತ್ತು ಕೀಟನಾಶಕಗಳ ಬಳಕೆಯಲ್ಲಿ ಅನಿಯಂತ್ರಿತ ಹೆಚ್ಚಳವನ್ನು ಕಂಡು ಅವರು ಆಘಾತಕ್ಕೊಳಗಾದರು. ಹೀಗೊಂದು ಸಂಭವಿಸುತ್ತದೆ ಎಂದು ಅವರು ಅಂದುಕೊಂಡಿರಲಿಲ್ಲ. ಕಾಲ ಕಳೆದಂತೆ ಪರಿಸ್ಥಿತಿ, ಪರಿಸರ, ನೀರಿನ ಸದ್ಬಳಕೆಯ ಬಗ್ಗೆ ಹೆಚ್ಚು ಜಾಗೃತರಾಗಿ, ಸಂವೇದನಾಶೀಲರಾದಂತೆ ಕಾಣುತ್ತಿದ್ದರು. ಕಳೆದ ಕೆಲವು ವರ್ಷಗಳಿಂದ ಅವರು ಬಿಟಿ ಅಥವಾ ತಳೀಯವಾಗಿ ಮಾರ್ಪಡಿಸಿದ ಬೀಜಗಳ ಅನಿಯಂತ್ರಿತ ಬಳಕೆಯನ್ನು ಹೆಚ್ಚು ಟೀಕಿಸುತ್ತಿದ್ದರು.
ಮಾಂಕೊಂಬ್ ಸಾಂಬಶಿವಂ ಸ್ವಾಮಿನಾಥನ್ ಅವರ ನಿಧನದಿಂದ ಈ ದೇಶ ಒಬ್ಬ ಶ್ರೇಷ್ಠ ಕೃಷಿ ವಿಜ್ಞಾನಿಯನ್ನು ಮಾತ್ರವಲ್ಲದೆ ಒಬ್ಬ ಮಹಾನ್ ವ್ಯಕ್ತಿಯನ್ನೂ ಕಳೆದುಕೊಂಡಿದೆ.
ಮೂಲದಲ್ಲಿ ಈ ಲೇಖನವು ದಿ ವೈರ್ ಬಹುಮಾಧ್ಯಮ ತಾಣದಲ್ಲಿ, 29 ಸೆಪ್ಟೆಂಬರ್ 2023ರಂದು ಪ್ರಕಟವಾಗಿತ್ತು.
ಅನುವಾದ: ಶಂಕರ. ಎನ್. ಕೆಂಚನೂರು