ಕಳೆದ 25 ವರ್ಷಗಳಿಂದ ಚೋಬಿ ಶಾಹಾ ಪೇಪರ್‌ನ ಲಕೋಟೆಗಳನ್ನು ತಯಾರಿಸುತ್ತಿದ್ದಾರೆ. “ಮೊದಲು ಒಂದು ಚಾಕುವಿನಿಂದ ಪೇಪರನ್ನು ಮೂರು ಭಾಗ ಮಾಡುತೇನೆ. ಆಗ ಆರು ಪೀಸುಗಳು ಸಿಗುತ್ತವೆ. ಆನಂತರ ರೌಂಡಾಗಿ ಅಂಟನ್ನು ಹಚ್ಚುತ್ತೇನೆ. ಇದಾದ ಮೇಲೆ ಚೌಕಾಕಾರಕ್ಕೆ ಪೇಪರನ್ನು ಮಡಚಿ, ಅದರ ಇನ್ನೊಂದು ಬದಿಗೆ ಅಂಟು ಹಚ್ಚುತ್ತೇನೆ. ಹೀಗೆ ನಾನು ಲಕೋಟೆಗಳನ್ನು ತಯಾರಿಸುತ್ತೇನೆ,” ಎಂದು ಅವರು ಹೇಳುತ್ತಾರೆ.
75 ವರ್ಷ ಪ್ರಾಯದ ಆದಿತ್ತೋಪುರ್‌ನ ನಿವಾಸಿಯಾದ ಇವರು ತಮ್ಮ ಎರಡು ಅಂತಸ್ತಿನ ಮಣ್ಣಿನ ಮನೆಯ ಜಗಲಿಯ ತುಂಬೆಲ್ಲಾ ಹರಡಿರುವ ಪೇಪರ್‌ಗಳ ಮಧ್ಯೆ ಕುಳಿತು ನಮ್ಮೊಂದಿಗೆ ಮಾತನಾಡುತ್ತಾ ಕೆಲಸ ಮಾಡುತ್ತಿದ್ದರು.
1998ರಲ್ಲಿ ಇವರು ಈ ಕೆಲಸವನ್ನು ಆರಂಭ ಮಾಡುವಾಗ ಅವರ ಗಂಡ ಆನಂದೊಗೋಪಾಲ್ ಶಾಹಾ ಇನ್ನೂ ಬದುಕಿದ್ದರು. ಅವರು ಊರಿನವರ ಹಸುಗಳು – ಆಡುಗಳನ್ನು ಮೇಯಿಸುವ ಕೆಲಸ ಮಾಡುತ್ತಾ ದಿನಕ್ಕೆ 40-50 ರುಪಾಯಿ ಸಂಪಾದನೆ ಮಾಡುತ್ತಿದ್ದರು. “ನಾವು ಬಡವರು,” ಎನ್ನುವ ಶೂನ್ರಿ ಸಮುದಾಯಕ್ಕೆ ಸೇರಿದ ಚೋಬಿ ಶಾಹಾ, “ನಾನು ನಾಲ್ಕು ಕಾಸು ಸಂಪಾದಿಸಿ ಹೊಟ್ಟೆ ತುಂಬಿಸಿಕೊಳ್ಳಲು ಈ ಕೆಲಸವನ್ನು ಮಾಡಲು ತೀರ್ಮಾನಿಸಿದೆ,” ಎಂದು ಹೇಳುತ್ತಾರೆ.
ತನ್ನ ನೆರಹೊರೆಯವರು ಎಸೆದಿರುವ ದಿನಪತ್ರಿಕೆಗಳನ್ನು ಸಂಗ್ರಹಿಸುವ ಮೂಲಕ ಇವರು ತಮ್ಮ ಕೆಲಸವನ್ನು ಶುರುಮಾಡುತ್ತಾರೆ. ಸ್ಥಳೀಯ ದಿನಸಿ ಅಂಗಡಿಗಳಲ್ಲಿ ಸಿಕ್ಕ ಪೇಪರ್‌ನ ಲಕೋಟೆಗಳ ವಿನ್ಯಾಸವನ್ನು ನೋಡಿ ಅವುಗಳನ್ನು ತಯಾರಿಸುವುದನ್ನು ಕಲಿತರು. “ಈ ಎಲ್ಲಾ ಕಚ್ಚಾ ವಸ್ತುಗಳು ಸುಲಭವಾಗಿ ಸಿಕ್ಕಿ, ಮನೆಯಲ್ಲಿಯೇ ಕುಳಿತು ಕೆಲಸ ಮಾಡಲು ಸಾಧ್ಯವಾಗುವುದರಿಂದ ನಾನು ಈ ಕೆಲಸವನ್ನು ಕೈಗೆತ್ತಿಕೊಂಡೆ,” ಎಂದು ಅವರು ವಿವರಿಸುತ್ತಾ, “ಮೊದಮೊದಲು ಕೆಲಸ ನಿಧಾನವಾಗುತ್ತಿತ್ತು, ಒಂದು ಲಕೋಟೆ ಮಾಡಲು 25 ರಿಂದ 30 ನಿಮಿಷ ಹಿಡಿಯುತ್ತಿತ್ತು,” ಎಂದು ಹೇಳುತ್ತಾರೆ.
“ನನಗೆ ದಿನಕ್ಕೆ ಒಂದು ಕೆಜಿ (ಬ್ಯಾಗ್) ಮಾತ್ರ ಮಾಡಲು ಸಾಧ್ಯ,” ಎಂದು ಮಾತನ್ನು ಮುಂದುವರಿಸುತ್ತಾರೆ.
![Chobi Saha getting ready to make paper bags. ‘First, I use a knife to divide a paper into three parts. That makes six pieces. Then I apply glue in circles. After that I fold the paper into a square and apply glue to the other side. This is how I make the packets,’ she says as she works]](/media/images/02a-3-HM-No_newspaper_is_bad_news_for_Chob.max-1400x1120.jpg)

ಪೇಪರ್ ಲಕೋಟೆಗಳನ್ನು ತಯಾರಿಸಲು ಸಜ್ಜಾಗುತ್ತಿರುವ ಚೋಬಿ ಶಾಹಾ. ʼಮೊದಲು ಒಂದು ಚಾಕುವಿನಿಂದ ಪೇಪರನ್ನು ಮೂರು ಭಾಗ ಮಾಡುತೇನೆ. ಆಗ ಆರು ಪೀಸುಗಳು ಸಿಗುತ್ತವೆ. ಆನಂತರ ರೌಂಡಾಗಿ ಅಂಟನ್ನು ಹಚ್ಚುತ್ತೇನೆ. ಇದಾದ ಮೇಲೆ ಚೌಕಾಕಾರಕ್ಕೆ ಪೇಪರನ್ನು ಮಡಚಿ, ಅದರ ಇನ್ನೊಂದು ಬದಿಗೆ ಅಂಟು ಹಚ್ಚುತ್ತೇನೆ. ಹೀಗೆ ನಾನು ಲಕೋಟೆಗಳನ್ನು ತಯಾರಿಸುತ್ತೇನೆ,ʼ ಎಂದು ಕೆಲಸ ಮಾಡುತ್ತಾ ಹೇಳುತ್ತಾರೆ
ಇವರು ಈ ಲಕೋಟೆಗಳನ್ನು ಬೋಲ್ಪುರ್‌ನಲ್ಲಿರುವ ಎಂಟೊಂಬತ್ತು ಕಿರಾಣಿ ಅಂಗಡಿಗಳು ಮತ್ತು ಚಾಪ್ - ಘುಗ್ನಿಯಂತಹ ಸ್ಥಳೀಯ ತಿನಿಸುಗಳನ್ನು ಮಾರುವ ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಾರೆ. ಭಿರ್‌ಭೂಮ್ ಜಿಲ್ಲೆಯ ಬೋಲ್ಪುರ್-ಶ್ರೀನಿಕೇತನ ಬ್ಲಾಕ್‌ನಲ್ಲಿರುವ ತಮ್ಮ ಹಳ್ಳಿಯಿಂದ ಪ್ರತಿ ಹದಿನೈದು ದಿನಗಳಿಗೊಮ್ಮೆ ಅವರು ಬಸ್‌ನಲ್ಲಿ ಪ್ರಯಾಣಿಸಬೇಕು. "ಇನ್ನು ಮುಂದೆ ಬೋಲ್ಪುರ್‌ಗೆ ಹೋಗಲು ನಂಗೆ ಸಾಧ್ಯವಿಲ್ಲ," ಎಂದು ತನ್ನ ಕಾಲು ನೋವಿನ ಬಗ್ಗೆ ಹೇಳುತ್ತಾರೆ. ಇದರ ಬದಲು, ಅವರು ತಮ್ಮದೇ ಹಳ್ಳಿಯಲ್ಲಿರುವ ಬೆರಳೆಣಿಕೆಯ ಅಂಗಡಿಗಳಿಗೆ ಇವುಗಳನ್ನು ಮಾರಾಟ ಮಾಡುತ್ತಾರೆ.
ಎರಡು ದಶಕಗಳ ಹಿಂದೆ, ಆರಂಭದ ದಿನಗಳಲ್ಲಿ ಇವರಿಗೆ ದಿನಪತ್ರಿಕೆಗಳು ಉಚಿತವಾಗಿ ಸಿಗುತ್ತಿದ್ದವು. ಆದರೆ ಆಗ, ದಿನಪತ್ರಿಕೆಗಳು ಹೆಚ್ಚು ದುಬಾರಿಯಲ್ಲದೇ ಇದ್ದ ಕಾರಣ, ಅವುಗಳಿಂದ ತಯಾರಿಸಿದ ಲಕೋಟೆಗಳಿಗೂ ಹೆಚ್ಚು ಹಣ ಸಿಗುತ್ತಿರಲಿಲ್ಲ, “ನಾನು [ಈಗ] ಪೇಪರ್‌ಗಳನ್ನು ಕೆಜಿಗೆ 35 ರುಪಾಯಿ ಕೊಟ್ಟು ಖರೀದಿಸುತ್ತಿದ್ದೇನೆ,” ಎಂದು ಚೋಬಿ ಹೇಳುತ್ತಾರೆ.
2004 ರಲ್ಲಿ, 56 ವರ್ಷ ಪ್ರಾಯದಲ್ಲಿ ಅವರು ತಮ್ಮ ಪತಿಯನ್ನು ಕಳೆದುಕೊಂಡರು. ಮದುವೆಯಾಗಿರುವ ಅವರ ಮೂವರು ಪುತ್ರರು ತಮ್ಮದೇ ಆದ ಸಣ್ಣಪುಟ್ಟ ವ್ಯಾಪಾರ ಮಾಡುತ್ತಿದ್ದಾರೆ. ಮನೆಯ ಒಂದು ಭಾಗದಲ್ಲಿ ಇವರು ವಾಸಿಸಿದರೆ, ಇನ್ನೊಂದು ಭಾಗದಲ್ಲಿ ಕಿರಿಯ ಮಗ ಸುಕುಮಾರ್ ತಮ್ಮ ಕುಟುಂಬದೊಂದಿಗೆ ವಾಸಿಸುತ್ತಾರೆ. ಇವರ ಉಳಿದಿಬ್ಬರು ಹಿರಿಯ ಪುತ್ರರು ಬೋಲ್ಪುರ್ ಪಟ್ಟಣದಲ್ಲಿರುವ ಆರು ಕಿಲೋಮೀಟರ್ ದೂರದ ಪ್ರದೇಶವೊಂದರಲ್ಲಿ ವಾಸಿಸುತ್ತಿದ್ದಾರೆ.
ಚೋಬಿ ಶಾಹಾ ತಮ್ಮ ನೆರೆಹೊರೆಯವರು ಎಸೆದಿರುವ ದಿನ ಪತ್ರಿಕೆಗಳನ್ನು ಸಂಗ್ರಹಿಸುವ ಮೂಲಕ ಈ ವೃತ್ತಿಯನ್ನು ಪ್ರಾರಂಭಿಸಿದರು. ಸ್ಥಳೀಯ ದಿನಸಿ ಅಂಗಡಿಗಳಲ್ಲಿ ಸಿಗುತ್ತಿದ್ದ ಪೇಪರ್ ಲಕೋಟೆಗಳನ್ನು ನೋಡುತ್ತಾ, ಅದನ್ನು ಹೇಗೆ ತಯಾರಿಸಬಹುದು ಎಂಬುದನ್ನು ಸ್ವತಃ ನೋಡಿ ಕಲಿತರು
ಅವರ ದಿನ ಮುಂಜಾನೆ 6 ಗಂಟೆಗೆ ಆರಂಭವಾಗುತ್ತದೆ. "ನಿದ್ದೆಯಿಂದ ಎದ್ದು ನನ್ನ ಸ್ವಂತ ಕೆಲಸವನ್ನು ಮಾಡುತ್ತೇನೆ. ನಂತರ ಸುಮಾರು ಒಂಬತ್ತು ಗಂಟೆಗೆ ಕಾಗದಗಳನ್ನು ಕತ್ತರಿಸಿಲು ಶುರು ಮಾಡುತ್ತೇನೆ,” ಎಂದು ಅವರು ಹೇಳುತ್ತಾರೆ. ಅಡುಗೆ ತಯಾರಿಸಿ ಊಟ ಮಾಡಿದ ನಂತರ ಮಧ್ಯಾಹ್ನ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆಯುತ್ತಾರೆ.
ಸಂಜೆ ಹೊತ್ತು ತಮ್ಮ ಹಳ್ಳಿಯ ಇತರ ಹೆಂಗಸರೊಂದಿಗೆ ಹರಟೆ ಹೊಡೆಯುತ್ತಾರೆ. ಆಮೇಲೆ ಮನೆಗೆ ಬಂದು ಪೇಪರ್‌ಗಳಿಗೆ ಅಂಟು ಹಾಕುತ್ತಾ ಮತ್ತೆ ಲಕೋಟೆಗಳನ್ನು ತಯಾರಿಸಲು ಆರಂಭಿಸುತ್ತಾರೆ. ಈ ಲಕೋಟೆಗಳನ್ನು ತಯಾರಿಸಲು ಅವರ ದಿನದಲ್ಲಿ ನಿಗದಿತ ಸಮಯವೆಂಬುದಿಲ್ಲ. "ನನಗೆ ಸಮಯ ಸಿಕ್ಕಾಗಲೆಲ್ಲಾ ನಾನು ಅದನ್ನು ಮಾಡುತ್ತೇನೆ," ಎಂದು ಅವರು ಹೇಳುತ್ತಾರೆ. ಆಗಾಗ, ಮನೆಕೆಲಸಗಳ ನಡುವೆ ಕೂಡಾ ಮಾಡುತ್ತಾರೆ.
ಉದಾಹರಣೆಗೆ, ಕೆಲವೊಮ್ಮೆ ಅಡುಗೆ ಮಾಡುವಾಗ ಜಗುಲಿ ಮತ್ತು ಅಂಗಳದಲ್ಲಿ ಅಂಟು ಲೇಪಿಸಿದ ಪೇಪರ್‌ಗಳನ್ನು ಒಣಗಲು ಹಾಕುತ್ತಾರೆ. “ಒಮ್ಮೆ ಅಂಟು ಹಾಕುವುದು ಮುಗಿದ ಮೇಲೆ, ನಾನು ಅವುಗಳನ್ನು ಒಣಗಿಸಲು ಬಿಸಿಲಿನಲ್ಲಿ ಹಾಕುತ್ತೇನೆ. ಅವು ಒಣಗಿದ ಮೇಲೆ ಅರ್ಧ ಮಡಚಿ, ಅಳೆದು ತೂಗಿ, ಬಂಡಲ್ ಕಟ್ಟಿ ಅಂಗಡಿಗಳಿಗೆ ಕೊಂಡೊಯ್ಯುತ್ತೇನೆ,” ಎನ್ನುತ್ತಾರೆ ಅವರು.
ಚೋಬಿ ರೇಷನ್ ಅಂಗಡಿಯಲ್ಲಿ ಸಿಗುವ ಹಿಟ್ಟನ್ನು ಬಿಸಿ ಮಾಡಿ ತಮ್ಮದೇ ಆದ ಅಂಟನ್ನು ತಯಾರಿಸುತ್ತಾರೆ.


ಎಡ: ತಮ್ಮ ಮನೆಯ ವರಾಂಡಾದಲ್ಲಿ ಕೆಲಸ ಮಾಡುತ್ತಿರುವ ಚೋಬಿ ಶಾಹಾ. ಬಲ: ಅಂಟು ಹಾಕಿದ ಪೇಪರ್ ಬ್ಯಾಗ್‌ಳನ್ನು ಜಗುಲಿ ಮತ್ತು ಅಂಗಳದಲ್ಲಿ ಒಣಗಲು ಹಾಕಿರುವುದು


ಆದಿತ್ಯಪುರದ ಚೋಬಿ ಶಾಹಾ ತಮ್ಮ ಕಿರಿಯ ಮಗ ಸುಕುಮಾರ್ ಮತ್ತು ಅವರ ಕುಟುಂಬದೊಂದಿಗೆ ಮೂರು ಕೋಣೆಗಳ ಮಣ್ಣಿನ ಮನೆಯಲ್ಲಿ ವಾಸಿಸುತ್ತಾರೆ
"ವಾರಕ್ಕೆ ಎರಡು ಬಾರಿ, ನಾನು ಒಟ್ಟು ಒಂದು ಕೆಜಿ ತೂಕದ ಲಕೋಟೆಗಳನ್ನು ಅಂಗಡಿಗಳಿಗೆ ತಲುಪಿಸಬೇಕು," ಎಂದು ಅವರು ನಮಗೆ ಹೇಳಿದರು. ಈ ಅಂಗಡಿಗಳು ಅವರ ಮನೆಯಿಂದ 600 ಮೀಟರ್ ಒಳಗೆ ಬರುತ್ತವೆ, ನಡೆದುಕೊಂಡೇ ಹೋಗಬಹುದು. "ನಾನು ಒಂದು ಕೆಜಿ ತೂಕದ 220 ಲಕೋಟೆಗಳನ್ನು ತಯಾರಿಸುತ್ತೇನೆ," ಎನ್ನುವ ಅವರು ಪ್ರತಿ ಕೆಜಿಗೆ 60 ರುಪಾಯಿಯಂತೆ ತಿಂಗಳಿಗೆ ಒಟ್ಟು 900–1,000 ರುಪಾಯಿ ಸಂಪಾದಿಸುತ್ತಾರೆ.
ಆದರೆ ಚೋಬಿಯವರ ಲಕೋಟೆ ತಯಾರಿಕೆ ಕೊನೆಯ ಕ್ಷಣಗಳನ್ನು ಎಣಿಸುತ್ತಿದೆ: “ಜನರು ಈಗೀಗ ದಿನಪತ್ರಿಕೆಗಳನ್ನು ಓದುವುದನ್ನು ನಿಲ್ಲಿಸುತ್ತಿದ್ದಾರೆ. ಅವರು ತಮ್ಮ ಟಿವಿ ಮತ್ತು ಮೊಬೈಲ್‌ಗಳಲ್ಲಿ ನ್ಯೂಸ್ ನೋಡುತ್ತಾರೆ. ಹಾಗಾಗಿ, [ಲಕೋಟೆಗಳನ್ನು ತಯಾರಿಸಲು] ಪೇಪರ್‌ಗಳು ಸಿಗುತ್ತಿಲ್ಲ.”
ವೀಡಿಯೋ ಮಾಡಲು ಸಹಕರಿಸಿದ ತಿಶ್ಯಾ ಘೋಷ್ ಅವರಿಗೆ ಲೇಖಕರಿಂದ ಧನ್ಯವಾದಗಳು
ಅನುವಾದ: ಚರಣ್ ಐವರ್ನಾಡು