“ಲಾಯಿ ದೇ ವೆ ಜುತ್ತಿ ಮೈನು,
ಮುಕ್ತಸರಿ ಕಡಾಯಿ ವಾಲಿ
ಪೈರಾಣ್ ವಿಚ್ ಮೇರಾ ಚನ್ನಾ,
ಜಾಚೂಗಿ ಪಾಯಿ ಬಹಲಿ”
“ಪ್ರಿಯಾ ನನಗೊಂದು ಮುಕ್ತಸರ್ ಕಸೂತಿಯಿರುವ
ಜುತ್ತಿ ಕೊಡಿಸು,
ನನ್ನ ಸುಂದರ ಪಾದ ಇನ್ನಷ್ಟು ಸುಂದರ ಕಾಣುವುದು”
ಮೊದಲಿಗೆ ಹನ್ಸರಾಜ್ ಒರಟಾದ ಹತ್ತಿಯ ದಾರದ ಮೇಲೆ ತನ್ನ ಹಿಡಿತವನ್ನು ಬಿಗಿಗೊಳಿಸುತ್ತಾರೆ. ನಂತರ ಚೂಪಾದ ಸೂಜಿಯ ಮುಂಭಾಗಕ್ಕೆ ಈ ನುರಿತ ಚಮ್ಮಾರ ಕುಶಲಕರ್ಮಿ ಕೌಶಲದಿಂದ ದಾರವನ್ನು ಸೇರಿಸಿ ಚರ್ಮಕ್ಕೆ ಚುಚ್ಚುತ್ತಾರೆ. ಈ ರೀತಿ ಸುಮಾರು 400 ಹೊಲಿಗೆಗಳನ್ನು ಹಾಕಿದ ನಂತರ ಒಂದು ಜೋಡಿ ಪಂಜಾಬಿ ಜುತ್ತಿ ತಯಾರಾಗುತ್ತದೆ (ಮೇಲ್ಭಾಗದಲ್ಲಿ ಮುಚ್ಚಿಕೊಂಡಿರುವ ಚಪ್ಪಲಿ). ಅವರು ಹೀಗೆ ಹೊಲಿಗೆ ಹಾಕುವಾಗ ಪ್ರತಿ ಬಾರಿ ಹೊರಡಿಸುವ ʼಹ್ಮ್ʼ ಎನ್ನುವ ನಿಟ್ಟುಸಿರಿನ ಸದ್ದು ಅಲ್ಲಿನ ಗಾಢ ಮೌನವನ್ನು ಕಲಕುತ್ತದೆ.
ಹನ್ಸ್ ರಾಜ್, ಪಂಜಾಬಿನ ಶ್ರೀ ಮುಕ್ತಸರ್ ಸಾಹಿಬ್ ಜಿಲ್ಲೆಯ ರೂಪನಾ ಗ್ರಾಮದವರು. ಪ್ರಸ್ತುತ ಇಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಜುತ್ತಿಗಳನ್ನು ತಯಾರಿಸಬಲ್ಲ ಕುಶಲಕರ್ಮಿಯೆಂದರೆ ಅವರೊಬ್ಬರೆ.
“ಬಹಳಷ್ಟು ಜನರಿಗೆ ಪಂಜಾಬಿ ಜುತ್ತಿಯನ್ನು ಹೇಗೆ ತಯಾರಿಸಲಾಗುತ್ತದೆ ಮತ್ತು ಯಾರು ತಯಾರಿಸುತ್ತಾರೆ ಎನ್ನುವ ಕುರಿತು ಮಾಹಿತಿಯಿಲ್ಲ. ಇದನ್ನು ಯಂತ್ರಗಳನ್ನು ಬಳಸಿ ತಯಾರಿಸಲಾಗುತ್ತದೆ ಎನ್ನುವ ತಪ್ಪು ಕಲ್ಪನೆ ಅವರಲ್ಲಿದೆ. ಆದರೆ ಸಿದ್ಧತೆಯಿಂದ ಹೊಲಿಗೆಯವರೆಗೆ ಎಲ್ಲವನ್ನೂ ಕೈಯಿಂದಲೇ ಮಾಡಲಾಗುತ್ತದೆ" ಎಂದು ಸುಮಾರು ಅರ್ಧ ಶತಮಾನದಿಂದ ಜುಟ್ಟಿಗಳನ್ನು ತಯಾರಿಸುತ್ತಿರುವ 63 ವರ್ಷದ ಕುಶಲಕರ್ಮಿ ಹೇಳುತ್ತಾರೆ. “ನೀವು ಮುಕ್ತಸರ್, ಮಾಲುಟ್, ಗಿಡ್ಡರ್ ಬಾಹಾ ಅಥವಾ ಪಟಿಯಾಲ ಹೀಗೆ ಎಲ್ಲೇ ಹೋದರೂ ನನ್ನಂತೆ ನಿಖರವಾದ ಜುತ್ತಿಯನ್ನು ತಯಾರಿಸುವ ಇನ್ನೊಬ್ಬರನ್ನು ಕಾಣಲು ಸಾಧ್ಯವಿಲ್ಲ” ಎಂದು ಹನ್ಸರಾಜ್ ವಾಸ್ತವ ಸತ್ಯವೊಂದನ್ನು ಹೇಳುತ್ತಾರೆ.
ಪ್ರತಿದಿನ, ಬೆಳಿಗ್ಗೆ 7 ಗಂಟೆಗೆ, ಅವರು ತಮ್ಮ ಬಾಡಿಗೆ ಅಂಗಡಿಯ ಬಾಗಿಲಿನ ಬಳಿ ಹಾಸಿರುವ ಹತ್ತಿಯ ಹಾಸಿಗೆ ಮೇಲೆ ಕೂರುತ್ತಾರೆ. ಬದಿಯಲ್ಲಿನ ಗೋಡೆಯ ಮೇಲೆ ಹೆಂಗಸರು ಮತ್ತು ಗಂಡಸರ ಪಂಜಾಬಿ ಜುತ್ತಿಗಳನ್ನು ಪ್ರದರ್ಶಿಸಲಾಗಿದೆ. ಒಂದು ಜೋಡಿಯ ಬೆಲೆ 400ರಿಂದ 1,600 ರೂ.ಗಳ ನಡುವೆ ಇರುತ್ತದೆ. ಅವರು ಈ ಕೆಲಸದ ಮೂಲಕ ತಿಂಗಳಿಗೆ ಸುಮಾರು 10,000 ರೂ.ಗಳನ್ನು ಗಳಿಸುವುದಾಗಿ ಹೇಳುತ್ತಾರೆ.


ಎಡ: ಹನ್ಸರಾಜ್ ತಮ್ಮ ಬಾಡಿಗೆ ಅಂಗಡಿಯಲ್ಲಿ ಚರ್ಮದ ಜುತ್ತಿಗಳನ್ನು ಹೊಲಿದು ಅವುಗಳನ್ನು ಸಿಂಗರಿಸುತ್ತಾರೆ. ಅಂಗಡಿಯ ಗೋಡೆಗಳ ಮೇಲೆ ಅವರು ಹೊಲಿದ ಜುತ್ತಿಗಳನ್ನು ಪ್ರದರ್ಶಿಸಲಾಗಿದೆ


ಹನ್ಸ ರಾಜ್ ಸುಮಾರು ಅರ್ಧಶತಮಾನದಿಂದ ಈ ಕರಕುಶಲ ಕಲೆಯನ್ನು ಅಭ್ಯಾಸ ಮಾಡುತ್ತಿದ್ದಾರೆ. ಸೂಜಿಯನ್ನು ಗಟ್ಟಿಯಾದ ಚರ್ಮದೊಳಗೆ ಚುಚ್ಚುವ ಮೊದಲು ಅವರು ಹೆಚ್ಚುವರಿ ದಾರವನ್ನು ಬಾಯಿಯಲ್ಲಿ ಕಚ್ಚಿಕೊಳ್ಳುತ್ತಾರೆ
ಮುಂದಿನ ಹನ್ನೆರಡು ಗಂಟೆಗಳ ಕಾಲ ಅವರು ಶಿಥಿಲಗೊಂಡ ಗೋಡೆಗೆ ಒರಗಿಕೊಂಡು ಜುತ್ತಿ ತಯಾರಿಸುವ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಾರೆ. ಅವರು ಒರಗಿಕೊಳ್ಳುವ ಗೋಡೆಯ ಸಿಮೆಂಟ್ ಕಳಚಿ ಹೋಗಿದ್ದು ಒಳಗಿನ ಇಟ್ಟಿಗೆಗಳು ಕಾಣುವಂತಿವೆ. “ಇಡೀ ದೇಹ ಅದರಲ್ಲೂ ಕಾಲು ನೋವು ಬರುತ್ತದೆ” ಎನ್ನುತ್ತಾ ಹನ್ಸರಾಜ್ ತನ್ನ ಮೊಣಕಾಲುಗಳನ್ನು ತಿಕ್ಕಿಕೊಳ್ಳುತ್ತಾರೆ. ಬೇಸಿಗೆಯಲ್ಲಂತೂ “ಸೆಕೆಗೆ ಮೈ ಬೆವರಿ ಬೆನ್ನಿನ ಮೇಲೆಲ್ಲ ಡೇನ್ ಜೆ (ಬೊಬ್ಬೆ) ಆಗುತ್ತದೆ” ಎಂದು ಅವರು ಹೇಳುತ್ತಾರೆ.
ಹನ್ಸರಾಜ್ ಸುಮಾರು 15 ವರ್ಷದವರಿದ್ದಾಗ ಈ ಕೌಶಲವನ್ನು ಕಲಿತರು. ಅವರಿಗೆ ಈ ಕಲೆಯನ್ನು ಅವರ ತಂದೆ ಕಲಿಸಿದರು. “ನನಗೆ ಹೊರ ಜಗತ್ತು ನೋಡುವುದೆಂದರೆ ಇಷ್ಟವಾಗಿತ್ತು. ಆಗೆಲ್ಲ ಕೆಲವೊಮ್ಮೆ ಒಳಗೆ ಕುಳಿತು ಕೆಲಸ ಕಲಿತರೆ ಕೆಲವು ದಿನ ಹೊರಗೆ ಹೋಗುತ್ತಿದ್ದೆ.” ಆದರೆ ಅವರು ದೊಡ್ಡವರಾಗುತ್ತಿದ್ದಂತೆ ಕೆಲಸ ಮಾಡಲೇಬೇಕಾದ ಒತ್ತಡ ಹೆಚ್ಚಾಯಿತು ಮತ್ತು ಕೆಲಸದ ಮೇಲೆ ಕೂರುವ ಸಮಯವೂ ಹೆಚ್ಚಿತು.
ಹಿಂದಿ ಮತ್ತು ಪಂಜಾಬಿ ಭಾಷೆಗಳನ್ನು ಮಿಶ್ರಣ ಮಾಡಿ ಮಾತನಾಡುವ ಅವರು, “ಈ ಕೆಲಸ ಮಾಡಲು ಹೆಚ್ಚು ಬರಿಕಿ [ನಿಖರತೆ] ಬೇಕು” ಎನ್ನುತ್ತಾರೆ. ಹನ್ಸ್ ರಾಜ್ ಹಲವು ವರ್ಷಗಳಿಂದ ಕನ್ನಡಕವಿಲ್ಲದೆ ಕೆಲಸ ಮಾಡುತ್ತಿದ್ದಾರೆ, “ಆದರೆ ಈಗೀಗ ನನ್ನ ದೃಷ್ಟಿಯಲ್ಲಿ ಬದಲಾವಣೆ ಗಮನಕ್ಕೆ ಬರುತ್ತಿದೆ. ದೀರ್ಘ ಕಾಲ ಕೆಲಸ ಮಾಡಿದರೆ ಕಣ್ಣುಗಳ ಮೇಲೆ ಒತ್ತಡ ಉಂಟಾಗಿ ಎಲ್ಲವೂ ಎರಡೆರಡಾಗಿ ಕಾಣಿಸತೊಡಗುತ್ತವೆ.”
ನಿಯಮಿತ ಕೆಲಸದ ದಿನಗಳಲ್ಲಿ, ಅವರು ಚಹಾ ಕುಡಿಯುತ್ತಾ ಅವರ ರೇಡಿಯೋ ಮೂಲಕ ಸುದ್ದಿ, ಹಾಡುಗಳು ಮತ್ತು ಕ್ರಿಕೆಟ್ ವೀಕ್ಷಕ ವಿವರಣೆಯನ್ನು ಕೇಳುತ್ತಾರೆ. ಅವರ ನೆಚ್ಚಿನ ಕಾರ್ಯಕ್ರಮವೆಂದರೆ "ಫರ್ಮಾಯಿಶಿ ಕಾರ್ಯಕ್ರಮ", ಅದರಲ್ಲಿ ಹಳೆಯ ಹಿಂದಿ ಮತ್ತು ಪಂಜಾಬಿ ಹಾಡುಗಳನ್ನು ಕೇಳುಗರ ವಿನಂತಿಯ ಮೇರೆಗೆ ಪ್ರಸಾರಿಸಲಾಗುತ್ತದೆ. "ನನಗೆ ಸಂಖ್ಯೆಗಳು ಅರ್ಥವಾಗುವುದಿಲ್ಲ ಮತ್ತು ಫೋನ್ ಡಯಲ್ ಮಾಡಲು ತಿಳಿದಿಲ್ಲ" ಎನ್ನುವ ಅವರು ತನಗಾಗಿ ಹಾಡು ಒಂದು ಇಷ್ಟದ ಹಾಡನ್ನು ಪ್ರಸಾರಿಸುವಂತೆ ವಿನಂತಿಸಿ ಎಂದೂ ನಿಲಯಕ್ಕೆ ಫೋನ್ ಮಾಡಿದವರಲ್ಲ.


'ನಾನು ಯಾವಾಗಲೂ ಜುತ್ತಿಯ ಮೇಲಿನ ಭಾಗವನ್ನು ಅಡಿಭಾಗದ ತುದಿಯಿಂದ ಹೊಲಿಯಲು ಪ್ರಾರಂಭಿಸುತ್ತೇನೆ. ಅದನ್ನು ಸರಿಯಾಗಿ ಮಾಡಬಲ್ಲವನು ಕುಶಲಕರ್ಮಿ, ಉಳಿದವರು ಕುಶಲಕರ್ಮಿಗಳಲ್ಲ’ ಎಂದು ಅವರು ಹೇಳುತ್ತಾರೆ
ಹನ್ಸ್ ರಾಜ್ ಶಾಲೆಗೆ ಹೋದವರಲ್ಲ, ಆದರೆ ತನ್ನ ಊರಿನಾಚೆಗಿನ ಹೊಸ ಸ್ಥಳಗಳಿಗೆ ಪ್ರಯಾಣಿಸುವುದರಲ್ಲಿ ಸಂತೋಷವನ್ನು ಕಾಣುತ್ತಾರೆ, ವಿಶೇಷವಾಗಿ ತನ್ನ ಸ್ನೇಹಿತ, ಪಕ್ಕದ ಹಳ್ಳಿಯ ಸ್ವಾಮಿಯೊಬ್ಬರೊಂದಿಗೆ ಪ್ರಯಾಣಿಸುವುದು ಅವರಿಗೆ ಇಷ್ಟ: “ಪ್ರತಿ ವರ್ಷ ನಾವು ಪ್ರವಾಸಕ್ಕೆ ಹೋಗುತ್ತೇವೆ. ಅವರ ಬಳಿ ಸ್ವಂತ ಕಾರಿದೆ. ಕೆಲವೊಮ್ಮೆ ಪ್ರವಾಸ ಹೋಗುವಾಗ ಅವರು ನನ್ನನ್ನೂ ಕರೆಯುತ್ತಾರೆ. ಅವರು ಮತ್ತು ಇನ್ನೂ ಒಂದಿಬ್ಬರೊಂದಿಗೆ, ನಾವು ಹರಿಯಾಣ ಮತ್ತು ರಾಜಸ್ಥಾನದ ಅಲ್ವಾರ್ ಮತ್ತು ಬಿಕಾನೇರ್‌ನಲ್ಲಿರುವ ಸ್ಥಳಗಳಿಗೆ ಭೇಟಿ ನೀಡಿದ್ದೇವೆ."
*****
ಆಗ ಸಂಜೆ 4 ಗಂಟೆಯ ಹೊತ್ತು. ರೂಪನಾ ಗ್ರಾಮವು ನವೆಂಬರ್ ತಿಂಗಳು ಮಧ್ಯ ಕಾಲದ ಸಂಜೆಯ ಬಿಸಿಲಿನಲ್ಲಿ ಮೀಯುತ್ತಿತ್ತು. ಹನ್ಸರಾಜ್ ಅವರ ನಿಷ್ಠ ಗ್ರಾಹಕರೊಬ್ಬರು ಅಂದು ತನ್ನ ಸ್ನೇಹಿತನನ್ನು ಅವರ ಅಂಗಡಿಗೆ ಕರೆದುಕೊಂಡು ಬಂದಿದ್ದರು. ಆ ಗೆಳೆಯನಿಗೆ ಒಂದು ಜೊತೆ ಪಂಜಾಬಿ ಜುತ್ತಿ ಬೇಕಿತ್ತು. “ನಾಳೆ ಒಳಗೆ ಜುತ್ತಿ ತಯಾರಿಸಿ ಕೊಡಬಹುದೇ?” ಎಂದು ಆತ ಹನ್ಸರಾಜ್ ಅವರ ಬಳಿ ಕೇಳಿದರು. ಅವರ ಗ್ರಾಹಕನ ಗೆಳೆಯ ಇಲ್ಲಿಂದ 175 ಕಿಲೋಮೀಟರ್ ದೂರದಲ್ಲಿರುವ ಹರಿಯಾಣದ ತೋಹಾನಾದಿಂದ ಬಂದಿದ್ದರು.
ಹನ್ಸರಾಜ್ ಆತ್ಮೀಯವಾಗಿ ಸಣ್ಣ ನಗೆ ಸೂಸುತ್ತಾ, “ಯಾರ್, ನಾಳೆ ಒಳಗೆ ಸಿಗೋದು ಕಷ್ಟ” ಎಂದು ಉತ್ತರಿಸಿದರು. ಆದರೆ ಗ್ರಾಹಕ ಹಿಡಿದ ಪಟ್ಟು ಬಿಡಲು ತಯಾರಿರಲಿಲ್ಲ: “ಮುಕ್ತಸರ್ ಪಂಜಾಬಿ ಜುತ್ತಿಗಳಿಗೆ ಹೆಸರುವಾಸಿ” ನಂತರ ಅದೇ ಗ್ರಾಹಕ ನಮ್ಮತ್ತ ತಿರುಗಿ “ನಗರದಲ್ಲಿ ಸಾವಿರಾರು ಜುತ್ತಿ ಅಂಗಡಿಗಳಿವೆ. ಆದರೆ ರೂಪನಾದಲ್ಲಿ ಕೈಯಿಂದಲೇ ಜುತ್ತಿ ತಯಾರಿಸಲು ತಿಳಿದಿರುವುದು ಇವರಿಗೆ ಮಾತ್ರ. ಅವರ ಕೆಲಸ ಹೇಗಿರುತ್ತದೆನ್ನುವುದು ನಮಗೆ ಗೊತ್ತು” ಎಂದು ಹೇಳಿದರು.
ದೀಪಾವಳಿಯವರೆಗೆ, ಇಡೀ ಅಂಗಡಿ ಜುತ್ತಿಗಳಿಂದ ತುಂಬಿತ್ತು ಎಂದು ಗ್ರಾಹಕ ನಮಗೆ ಮಾಹಿತಿ ನೀಡಿದರು. ಒಂದು ತಿಂಗಳ ನಂತರ ನವೆಂಬರ್ ತಿಂಗಳಿನಲ್ಲಿ, ಕೇವಲ 14 ಜೋಡಿಗಳಷ್ಟೇ ಮಾತ್ರ ಉಳಿದಿದ್ದವು. ಹಾಗಿದ್ದರೆ ಹನ್ಸ್ ರಾಜ್ ತಯಾರಿಸುವ ಜುತ್ತಿಗಳ ವಿಶೇಷತೆ ಏನು? ಗೋಡೆಯ ಮೇಲೆ ನೇತಾಡುತ್ತಿದ್ದ ಜುತ್ತಿಗಳನ್ನು ತೋರಿಸುತ್ತಾ ಆ ಗ್ರಾಹಕ ಹೇಳುತ್ತಾರೆ, "ಅವರು ತಯಾರಿಸುವ ಚಪ್ಪಲಿಗಳು ಮಧ್ಯದಲ್ಲಿ ಚಪ್ಪಟೆಯಾಗಿರುತ್ತವೆ. ವ್ಯತ್ಯಾಸ ಅವುಗಳನ್ನು ತಯಾರಿಸುವ ಅವರ ಕೈಗಳಲ್ಲಿನ ಕೌಶಲದಲ್ಲಿದೆ.”


ಹನ್ಸರಾಜ್ ಅವರ ಗ್ರಾಹಕರೊಬ್ಬರ ಪ್ರಕಾರ: ʼನಗರದಲ್ಲಿ ಸಾವಿರಾರು ಜುತ್ತಿ ಅಂಗಡಿಗಳಿವೆ. ಆದರೆ ರೂಪನಾದಲ್ಲಿ ಕೈಯಿಂದಲೇ ಜುತ್ತಿ ತಯಾರಿಸಲು ತಿಳಿದಿರುವುದು ಇವರಿಗೆ ಮಾತ್ರʼ
ಈ ಕೆಲಸವನ್ನು ಹನ್ಸರಾಜ್ ಒಬ್ಬರೇ ಮಾಡುವುದಿಲ್ಲ, ಇಲ್ಲಿಂದ 12 ಕಿ.ಮೀ ದೂರದಲ್ಲಿರುವ ಅವರ ಊರಾದ ಖುನಾನ್ ಖುರ್ದ್ ಎನ್ನುವಲ್ಲಿ ಸಂತ ರಾಮ್ ಎನ್ನುವ ನುರಿತ ಕುಶಲಕರ್ಮಿ ಕೂಡಾ ಕೆಲವು ಜುತ್ತಿಗಳನ್ನು ಹೊಲೆಯುತ್ತಾರೆ. ದೀಪಾವಳಿ ಅಥವಾ ಭತ್ತದ ಹಂಗಾಮಿನಲ್ಲಿ, ಬೇಡಿಕೆ ಹೆಚ್ಚಿದ್ದಾಗ, ಅವರು ತಮ್ಮ ಕೆಲಸವನ್ನು ಹೊರಗುತ್ತಿಗೆ ನೀಡುತ್ತಾರೆ, ಒಂದು ಜೋಡಿ ಜುತ್ತಿ ಹೊಲಿಯಲು 80 ರೂ.ಗಳನ್ನು ಪಾವತಿಸುತ್ತಾರೆ.
ಕುಶಲಕರ್ಮಿ ಮತ್ತು ಕೆಲಸಗಾರನ ನಡುವಿನ ವ್ಯತ್ಯಾಸವನ್ನು ಈ ಅನುಭವಿ ಜುತ್ತಿ ತಯಾರಕ ನಮಗೆ ಹೀಗೆ ವಿವರಿಸುತ್ತಾರೆ, “ನಾನು ಜುತ್ತಿಯ ಪನ್ನಾ [ಮೇಲ್ಭಾಗ] ತಯಾರಿಸುವುದರ ಮೂಲಕ ಕೆಲಸ ಆರಂಭಿಸುತ್ತೇನೆ. ಇದು ಜುತ್ತಿಯನ್ನು ತಯಾರಿಸುವ ಪ್ರಕ್ರಿಯೆಯಲ್ಲಿ ಅತ್ಯಂತ ಸವಾಲಿನ ಹಂತ. ಈ ಹಂತವನ್ನು ಸರಿಯಾಗಿ ಪೂರೈಸಬಲ್ಲವನೇ ನಿಜವಾದ ಮಿಸ್ತ್ರಿ [ಕುಶಲಕರ್ಮಿ]. ಉಳಿದವರು ಅಲ್ಲ.”
ಈ ಕೌಶಲ ಅವರಿಗೆ ಸುಲಭವಾಗಿ ಕೈಗೆ ಹತ್ತಿಲ್ಲ. “ಮೊದಲಿಗೆ ಜುತ್ತಿ ಹೊಲಿಯಲು ಸರಿಯಾಗಿ ಬರುತ್ತಿರಲಿಲ್ಲ” ಎಂದು ಹನ್ಸರಾಜ್ ನೆನಪಿಸಿಕೊಳ್ಳುತ್ತಾರೆ. “ಆದರೆ ನಾನು ಅದನ್ನು ಕಲಿಯುವಲ್ಲಿ ಉತ್ಸುಕನಾಗಿದ್ದ ಕಾರಣ ಎರಡೇ ತಿಂಗಳಿನಲ್ಲಿ ಈ ಕಲೆಯನ್ನು ಕರಗತ ಮಾಡಿಕೊಂಡೆ. ನಂತರ ಉಳಿದ ಕೌಶಲವನ್ನು ಮೊದಲಿಗೆ ತಂದೆಯ ಬಳಿ ಕೇಳಿ ಮತ್ತು ನಂತರ ಅವರ ಕೆಲಸವನ್ನು ನೋಡುತ್ತಾ ಕಲಿತುಕೊಂಡೆ” ಎಂದು ಅವರು ಹೇಳುತ್ತಾರೆ.
ಮುಂದೆ ಕೆಲಸ ಕಲಿಯುತ್ತಾ ಅವರು ಜುತ್ತಿಯ ಎರಡೂ ಬದಿಗಳಲ್ಲಿ ಚರ್ಮದ ಸಣ್ಣ ಪಟ್ಟಿಗಳನ್ನು ಹೊಲಿಯುವ ತಂತ್ರವನ್ನು ಆಳವಡಿಸಿಕೊಂಡಿದ್ದಾರೆ. ಎಲ್ಲಾ ಸಂದುಗಳನ್ನು ಒಂದಕ್ಕೊಂದು ಹೊಂದಿಸುತ್ತಾರೆ. “ಈ ಸಣ್ಣ ಪಟ್ಟಿಗಳು ಜುತ್ತಿಗೆ ಹೆಚ್ಚು ಬಲವನ್ನು ನೀಡುತ್ತವೆ. ಅವು ಹರಿಯದಂತೆ ಕಾಪಾಡುತ್ತವೆ” ಎಂದು ಅವರು ಹೇಳುತ್ತಾರೆ.


ಜುತ್ತಿ ತಯಾರಿಕೆಗೆ ನಿಖರತೆ ಬಹಳ ಅವಶ್ಯ. ʼಮೊದಲಿಗೆ ನಾನು ಚಪ್ಪಲಿ ಹೊಲಿಯುವುದರಲ್ಲಿ ಅಷ್ಟೇನೂ ಪರಿಣಿತನಾಗಿರಲಿಲ್ಲʼ ಎಂದು ಅವರು ನೆನಪಿಸಿಕೊಳ್ಳುತ್ತಾರೆ. ಆದರೆ ಅವರು ಒಮ್ಮೆ ಅದನ್ನು ಕಲಿಯಲು ನಿರ್ಧರಿಸಿದ ನಂತರ ಈ ಕಲೆಯನ್ನು ಕೇವಲ ಎರಡೇ ತಿಂಗಳಿನಲ್ಲಿ ಕರಗತ ಮಾಡಿಕೊಂಡರು
*****
ಹನ್ಸ್ ರಾಜ್ ಅವರದು ಅವರ ಪತ್ನಿ ವೀರಪಾಲ್ ಕೌರ್, ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬ ಮಗಳು ಸೇರಿ ಐದು ಜನರ ಕುಟುಂಬ. ಮಕ್ಕಳಿಗೆ ಮದುವೆಯಾಗಿದ್ದು ಅವರೂ ಈ ಪೋಷಕರಾಗಿದ್ದಾರೆ. ಇವರೆಲ್ಲರೂ ಸುಮಾರು 18 ವರ್ಷಗಳ ಹಿಂದೆ ಖುನಾನ್ ಖರ್ದ್ ಎನ್ನುವಲ್ಲಿಂದ ರೂಪನಾಕ್ಕೆ ಸ್ಥಳಾಂತರಗೊಂಡಿದ್ದಾರೆ. ವಲಸೆ ಬಂದ ಸಂದರ್ಭದಲ್ಲೇ ಅವರ ಹಿರಿಯ ಇಲ್ಲಿನ ಹಳ್ಳಿಯ ಕಾಗದ ಕಾರ್ಖಾನೆಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಪ್ರಸ್ತುತ ಅವರಿಗೆ 36 ವರ್ಷ.
“ಖುನಾನ್ ಖುರ್ದ್ ಗ್ರಾಮದಲ್ಲಿನ ಜುತ್ತಿ ತಯಾರಿಸುವ ಬಹುತೇಕ [ದಲಿತ] ಕುಟುಂಬಗಳು ತಮ್ಮ ಮನೆಗಳಲ್ಲೇ ಜುತ್ತಿ ತಯಾರಿಸುತ್ತಿದ್ದವು. ದಿನ ಕಳೆದಂತೆ ಹೊಸ ತಲೆಮಾರು ಈ ಕರಕುಶಲತೆಯನ್ನು ಕಲಿಯಲಿಲ್ಲ. ಮತ್ತು ಕಲಿತಿದ್ದವರು ವಯಸ್ಸಾಗಿ ತೀರಿಕೊಂಡರು” ಎಂದು ಹನ್ಸ್ ರಾಜ್ ಹೇಳುತ್ತಾರೆ.
ಇಂದು, ಹಿಂದಿನ ಊರಿನಲ್ಲಿ, ರಾಮದಾಸಿ ಚಮ್ಮಾರ ಸಮುದಾಯಕ್ಕೆ ಸೇರಿದ (ರಾಜ್ಯದಲ್ಲಿ ಪರಿಶಿಷ್ಟ ಜಾತಿ ಎಂದು ಪಟ್ಟಿ ಮಾಡಲಾಗಿದೆ) ಕೇವಲ ಮೂವರು ಕುಶಲಕರ್ಮಿಗಳು ಮಾತ್ರ ಕೈಯಿಂದಲೇ ಜುತ್ತಿ ಹೊಲಿಯುವ ಕಲೆಯಲ್ಲಿ ತೊಡಗಿಸಿಕೊಂಡಿದ್ದಾರೆ, ಆದರೆ ರೂಪನಾದಲ್ಲಿ ಹನ್ಸ್ ರಾಜ್ ಒಬ್ಬರೇ ಈ ಕಲೆ ತಿಳಿದಿರುವ ವ್ಯಕ್ತಿ.
“ಖುನಾನ್ ಖುರ್ದ್ ಗ್ರಾಮದಲ್ಲಿ ಮಕ್ಕಳ ಭವಿಷ್ಯ ರೂಪಿಸುವುದು ಕಷ್ಟವೆನ್ನಿಸಿದ ಕಾರಣ ನಾವು ನಮ್ಮ ಅಲ್ಲಿನ ಆಸ್ತಿಯನ್ನು ಮಾರಿ ಇಲ್ಲಿ ಖರೀದಿಸಿದೆವು” ಎಂದು ವೀರಪಾಲ್ ಕೌರ್ ಹೇಳುತ್ತಾರೆ. ಅವರು ನಿರರ್ಗಳವಾಗಿ ಹಿಂದಿ ಮಾತನಾಡುತ್ತಾರೆ, ಇದು ಉತ್ತರ ಪ್ರದೇಶ ಮತ್ತು ಬಿಹಾರದ ವಲಸಿಗರು ವಾಸಿಸುವ ನೆರೆಹೊರೆಯ ವೈವಿಧ್ಯತೆಯ ಪರಿಣಾಮವಾಗಿದೆ, ಅವರಲ್ಲಿ ಅನೇಕರು ಕಾಗದದ ಗಿರಣಿಯಲ್ಲಿ ಕೆಲಸ ಮಾಡುತ್ತಾರೆ ಮತ್ತು ಸುತ್ತಮುತ್ತಲಿನ ಬಾಡಿಗೆ ಕೋಣೆಗಳಲ್ಲಿ ವಾಸಿಸುತ್ತಿದ್ದಾರೆ.


ಹನ್ಸ್ ರಾಜ್ ಅವರ ಪತ್ನಿ ವೀರಪಾಲ್ ಕೌರ್ ಅವರು ತಮ್ಮ ಅತ್ತೆಯಿಂದ ಜುತ್ತಿಗಳನ್ನು ಕಸೂತಿ ಮಾಡಲು ಕಲಿತರು. ಅವರು ಕೆಲಸದ ಸಮಯದಲ್ಲಿ ಯಾವುದೇ ಅಡಚಣೆಗಳಿಲ್ಲದೆ ಒಬ್ಬರೇ ಕೂತಿರಲು ಬಯಸುತ್ತಾರೆ


ಒಂದು ಜೋಡಿ ಜುತ್ತಿಯನ್ನು ಕಸೂತಿ ಮಾಡಲು ಅವರಿಗೆ ಸುಮಾರು ಒಂದು ಗಂಟೆ ಬೇಕಾಗುತ್ತದೆ. ಈ ಕೆಲಸದಲ್ಲಿ ಒಂದಷ್ಟು ಎಚ್ಚರಿಕೆ ತಪ್ಪಿದರೂ ಚೂಪಾದ ಸೂಜಿ ಚುಚ್ಚುವುದು ಗ್ಯಾರಂಟಿ ಎನ್ನುತ್ತಾರೆ ವೀರಪಾಲ್ ಕೌರ್
ಹನ್ಸ್ ರಾಜ್ ಕುಟುಂಬ ವಲಸೆ ಹೋಗಿದ್ದು ಇದೇ ಮೊದಲಲ್ಲ. "ನನ್ನ ತಂದೆ ನಾರ್ನಲ್ [ಹರಿಯಾಣದ] ಎನ್ನುವಲ್ಲಿಂದ ಪಂಜಾಬಿಗೆ ಬಂದು ಜುತ್ತಿ ತಯಾರಿಸಲು ಪ್ರಾರಂಭಿಸಿದರು" ಎಂದು ಹನ್ಸ್ ರಾಜ್ ಹೇಳುತ್ತಾರೆ.
ಶ್ರೀ ಮುಕ್ತಸರ್ ಸಾಹಿಬ್ ಜಿಲ್ಲೆಯ ಗುರುನಾನಕ್ ಕಾಲೇಜ್ ಆಫ್ ಗರ್ಲ್ಸ್ ನಡೆಸಿದ 2017ರ ಅಧ್ಯಯನವು 1950ರ ದಶಕದಲ್ಲಿ ಸಾವಿರಾರು ಜುತ್ತಿ ತಯಾರಕ ಕುಟುಂಬಗಳು ರಾಜಸ್ಥಾನದಿಂದ ಪಂಜಾಬಿಗೆ ವಲಸೆ ಬಂದವು ಎಂದು ಹೇಳುತ್ತದೆ. ಹನ್ಸ್ ರಾಜ್ ಅವರ ಪೂರ್ವಜರ ಗ್ರಾಮವಾದ ನಾರ್ನಲ್ ಹರಿಯಾಣ ಮತ್ತು ರಾಜಸ್ಥಾನದ ಗಡಿಯಲ್ಲಿದೆ.
*****
“ನಾನು ಕೆಲಸ ಆರಂಭಿಸಿದ ದಿನಗಳಲ್ಲಿ ಒಂದು ಜೋಡಿಗೆ ಕೇವಲ 30 ರೂ. ಇತ್ತು. ಈಗ ಪೂರ್ಣ ಕಸೂತಿ ಹೊಂದಿರುವ ಜುತ್ತಿಯ ಬೆಲೆ 2,500 ರೂ.ಗಿಂತ ಹೆಚ್ಚು" ಎಂದು ಹನ್ಸ್ ರಾಜ್ ಆ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ.
ಹನ್ಸ್ ರಾಜ್ ತನ್ನ ಕಾರ್ಯಾಗಾರದಲ್ಲಿ ಚದುರಿದ ಸಣ್ಣ ಮತ್ತು ದೊಡ್ಡ ಚರ್ಮದ ತುಂಡುಗಳಿಂದ, ನಮಗೆ ಎರಡು ವಿಧಗಳನ್ನು ತೋರಿಸಿದರು. ಅವು ಹಸುವಿನ ಚರ್ಮ ಮತ್ತು ಎಮ್ಮೆ ಚರ್ಮವಾಗಿದ್ದವು. "ಜುತ್ತಿಯ ಅಡಿ ಭಾಗಕ್ಕೆ ಎಮ್ಮೆಯ ಚರ್ಮವನ್ನು ಮಾತ್ರ ಬಳಸಲಾಗುತ್ತದೆ, ಮತ್ತು ಹಸುವಿನ ಚರ್ಮವನ್ನು ಬೂಟುಗಳ ಮೇಲಿನ ಅರ್ಧಕ್ಕೆ ಬಳಸಲಾಗುತ್ತದೆ" ಎಂದು ಅವರು ವಿವರಿಸುತ್ತಾರೆ. ಅವರ ಕೈಗಳು ಒಂದು ಕಾಲದಲ್ಲಿ ಕರಕುಶಲತೆಯ ಬೆನ್ನೆಲುಬಾಗಿದ್ದ ಕಚ್ಚಾ ವಸ್ತುಗಳನ್ನು ಸವರುತ್ತಿದ್ದವು.
ಅವನು ಟ್ಯಾನ್ ಮಾಡಿದ ಹಸುವಿನ ಚರ್ಮವನ್ನು ಎತ್ತಿ ಹಿಡಿದ ಅವರು ಪ್ರಾಣಿಗಳ ಚರ್ಮವನ್ನು ನಮಗೆ ಆಕ್ಷೇಪವಿದೆಯೇ ಎಂದು ಕೇಳಿದರು. ನಾವು ನಮ್ಮ ಮುಟ್ಟಿ ನೋಡುವ ಇಚ್ಛೆಯನ್ನು ವ್ಯಕ್ತಪಡಿಸಿದಾಗ, ಅವರು ಟ್ಯಾನ್ ಮಾಡಿದ ಚರ್ಮವನ್ನಷ್ಟೇ ಅಲ್ಲದೆ ಅದರ ಕಾಂಟ್ರಾಸ್ಟ್ ಕುರಿತಾಗಿಯೂ ನಮ್ಮ ಗಮನ ಸೆಳೆದರು. ಎಮ್ಮೆ ಚರ್ಮವು 80 ಕಾಗದದ ಹಾಳೆಗಳಷ್ಟು ದಪ್ಪವಾಗಿರುತ್ತದೆ. ಮತ್ತೊಂದೆಡೆ, ಹಸುವಿನ ಚರ್ಮವು ತುಂಬಾ ತೆಳುವಾಗಿರುತ್ತದೆ, ಬಹುಶಃ ಸುಮಾರು 10 ಕಾಗದದ ಹಾಳೆಗಳಷ್ಟಿತ್ತು. ವಿನ್ಯಾಸದ ದೃಷ್ಟಿಯಿಂದ, ಎಮ್ಮೆ ಚರ್ಮವು ನಯವಾದ ಮತ್ತು ಗಟ್ಟಿಯಾದ ಮೇಲ್ಮೈಯನ್ನು ಹೊಂದಿದೆ, ಆದರೆ ಹಸುವಿನ ಚರ್ಮವು ಸ್ವಲ್ಪ ಒರಟಾಗಿದ್ದರೂ, ಹೆಚ್ಚಿನ ನಮ್ಯತೆ ಮತ್ತು ಸುಲಭದ ಬಾಗುವಿಕೆಯನ್ನು ಹೊಂದಿದೆ

ಹನ್ಸರಾಜ್ ದಪ್ಪ ಚರ್ಮದ ತುಂಡುಗಳನ್ನು ಜುತ್ತಿಯ ಅಡಿ ಭಾಗವನ್ನು ತಯಾರಿಸಲು ಬಳಸುತ್ತಾರೆ. ʼಎಮ್ಮೆಯ ಚರ್ಮವನ್ನು ಚಪ್ಪಲಿಯ ಅಡಿ ಭಾಗಕ್ಕೆ ಮತ್ತು ಹಸುವಿನ ಚರ್ಮವನ್ನು ಚಪ್ಪಲಿ ಮೇಲ್ಭಾಗದ ಹೊದಿಕೆಗೆ ಬಳಸಲಾಗುತ್ತದೆʼ ಎಂದು ಅವರು ವಿವರಿಸುತ್ತಾರೆ


ಎಡಕ್ಕೆ: ಅವರು ಟ್ಯಾನ್ ಮಾಡಿದ ಎಮ್ಮೆ ಚರ್ಮವನ್ನು ಬಳಸುವ ಮೊದಲು ನೆನೆಸುತ್ತಾರೆ. ಬಲ: ಹಸುವಿನ ಚರ್ಮದಿಂದ ತಯಾರಿಸಿದ ಜುತ್ತಿಯ ಮೇಲ್ಭಾಗ
ಅವರ ಉದ್ಯೋಗದ ನಿರ್ಣಾಯಕ ನಿರ್ಣಾಯಕ ಕಚ್ಚಾ ವಸ್ತುವಾದ ಚರ್ಮದ ಬೆಲೆಯಲ್ಲಿನ ನಿರಂತರ ಏರಿಕೆಯಿಂದ ಜನರು “ಬೂಟ್ ಮತ್ತು ಚಪ್ಪಲಿ” ತೊಡಲು ಕಾರಣವಾಗಿದೆ. ಮತ್ತು ಈ ಕಸುಬನ್ನು ಹೆಚ್ಚು ಹೆಚ್ಚು ಹೊಸಬರು ತಮ್ಮ ವೃತ್ತಿಯನ್ನಾಗಿ ಮಾಡಿಕೊಳ್ಳದಿರುವುದಕ್ಕೂ ಈ ಬೆಲೆಯೇರಿಕೆ ಕಾರಣವಾಗಿದೆ.
ಹನ್ಸರಾಜ್ ತಮ್ಮ ಉಪಕರಣಗಳನ್ನು ಬಹಳ ಕಾಳಜಿಯಿಂದ ನೋಡಿಕೊಳ್ಳುತ್ತಾರೆ. ಜುತ್ತಿಗೆ ರೂಪ ನೀಡಲು ಅವರು ರಾಂಬಿ (ಕತ್ತರಿಸುವ ಉಪಕರಣ) ಬಳಸುತ್ತಾರೆ. ಚರ್ಮವನ್ನು ಗಟ್ಟಿಗೊಳಿಸಲು ಮತ್ತು ಇತ್ಯಾದಿ ಕೆಲಸಗಳಿಗೆ ಅವರು ಮೋರ್ಗಾ (ಮರದ ಸುತ್ತಿಗೆ) ಎನ್ನುವ ಉಪಕರಣವನ್ನು ಬಳಸುತ್ತಾರೆ. ಈ ಮೋರ್ಗಾ ಅವರ ತಂದೆಗೆ ಸೇರಿದ್ದು.ಇದರಲ್ಲಿ ಜಿಂಕೆಯ ಕೊಂಬೂ ಇದ್ದು ಅದನ್ನು ಅವರು ಜುತ್ತಿಯ ಒಳಭಾಗವನ್ನು ವಿನ್ಯಾಸ ಮಾಡಲು ಬಳಸುತ್ತಾರೆ. ಅದರ ಒಳಭಾಗವನ್ನು ಬರಿಗೈಯಿಂದ ವಿನ್ಯಾಸಗೊಳಿಸುವುದು ಬಹಳ ಕಷ್ಟ.
ಹನ್ಸರಾಜ್ ತನ್ನ ಹಳ್ಳಿಯಿಂದ 170 ಕಿ.ಮೀ ದೂರದಲ್ಲಿರುವ ಜಲಂಧರ್ ನಗರದ ಶೂ ಮಾರುಕಟ್ಟೆಗೆ ಹೋಗಿ ಟ್ಯಾನ್ ಮಾಡಿದ ಚರ್ಮವನ್ನು ಖರೀದಿಸಿ ತರುತ್ತಾರೆ. ಮಂಡಿಯನ್ನು (ಸಗಟು ಮಾರುಕಟ್ಟೆ) ತಲುಪಲು, ಅವರು ಮೊಗಾ ಎನ್ನುವ ಊರಿಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಾರೆ. ಅಲ್ಲಿಂದ ಜಲಂಧರ್ ತಲುಪಲು ಇನ್ನೊಂದು ಬಸ್ ಹಿಡಿಯುತ್ತಾರೆ. ಅವರು ಒಂದು ಬದಿಯ ಪ್ರಯಾಣಕ್ಕೆ 200 ರೂಪಾಯಿಗಿಂತಲೂ ಹೆಚ್ಚು ಖರ್ಚು ಮಾಡಬೇಕು.
ಅವರು ಕೊನೆಯ ಬಾರಿಗೆ ದೀಪಾವಳಿಗೆ ಎರಡು ತಿಂಗಳ ಮೊದಲು 20,000 ರೂ.ಗಳ ಮೌಲ್ಯದ 150 ಕಿಲೋಗ್ರಾಂಗಳಷ್ಟು ಟ್ಯಾನ್ ಮಾಡಿದ ಚರ್ಮವನ್ನು ಖರೀದಿಸಿ ತಂದಿದ್ದರು. ಚರ್ಮವನ್ನು ಸಾಗಿಸುವಾಗ ಅವರಿಗೆ ಎಂದಾದರೂ ತೊಂದರೆಯಾಗಿತ್ತೇ ಎಂದು ನಾವು ಅವರನ್ನು ಕೇಳಿದೆವು. ಆಗ ಅವರು, "ಟ್ಯಾನ್ ಮಾಡಿದ ಚರ್ಮಕ್ಕಿಂತ ಟ್ಯಾನ್ ಮಾಡದ ಚರ್ಮವನ್ನು ಸಾಗಿಸುವ ಬಗ್ಗೆ ಹೆಚ್ಚು ಕಾಳಜಿ ವಹಿಸಲಾಗುತ್ತದೆ" ಎಂದು ಅವರು ಸ್ಪಷ್ಟಪಡಿಸಿದರು.


ಹನ್ಸ ರಾಜ್ ತನ್ನ ಎಲ್ಲಾ ಉಪಕರಣಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ, ಅವುಗಳಲ್ಲಿ ಎರಡು ಅವರಿಗೆ ತಂದೆಯಿಂದ ಆನುವಂಶಿಕವಾಗಿ ಬಂದಿವೆ
![The wooden morga [hammer] he uses to beat the leather with is one of his inheritances](/media/images/12a-DSC05576-1-NM-No_one_can_craft_a_jutti.max-1400x1120.jpg)
![The wooden morga [hammer] he uses to beat the leather with is one of his inheritances](/media/images/12b-DSC05461-1-NM-No_one_can_craft_a_jutti.max-1400x1120.jpg)
ಚರ್ಮವನ್ನು ಹದಗೊಳಿಸಲು ಬಳಸುವ ಮರದ ಮೊರ್ಗಾ [ಸುತ್ತಿಗೆ] ಅವರಿಗೆ ಅನುವಂಶಿಕವಾಗಿ ದೊರೆತ ಸ್ವತ್ತುಗಳಲ್ಲಿ ಒಂದು
ಅಪೇಕ್ಷಿತ ಗುಣಮಟ್ಟದ ಚರ್ಮವನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಲು ಅವರು ಮಂಡಿಗೆ ಭೇಟಿ ನೀಡುತ್ತಾರೆ, ಮತ್ತು ವ್ಯಾಪಾರಿಗಳು ಅದನ್ನು ಹನ್ಸ ರಾಜ್ ಅವರ ಸಂಗ್ರಹಗಾರವಿರುವ ಹತ್ತಿರದ ಮುಕ್ತಸರ್ ನಗರಕ್ಕೆ ಸಾಗಿಸಲು ವ್ಯವಸ್ಥೆ ಮಾಡುತ್ತಾರೆ. "ಅಂತಹ ಭಾರವಾದ ವಸ್ತುಗಳನ್ನು ಬಸ್ಸಿನಲ್ಲಿ ಏಕಾಂಗಿಯಾಗಿ ಸಾಗಿಸುವುದೂ ಸಾಧ್ಯವಿಲ್ಲ" ಎಂದು ಅವರು ಹೇಳುತ್ತಾರೆ.
ಇತ್ತೀಚಿನ ವರ್ಷಗಳಲ್ಲಿ, ಜುತ್ತಿಗಳನ್ನು ತಯಾರಿಸುವ ವಸ್ತುಗಳಲ್ಲೂ ವಿಕಸನ ಕಂಡುಬಂದಿದೆ ಮತ್ತು ಮಾಲುಟ್ ಎನ್ನುವಲ್ಲಿನ ಗುರು ರವಿದಾಸ್ ಕಾಲೋನಿಯ ರಾಜ್ ಕುಮಾರ್ ಮತ್ತು ಮಹಿಂದರ್ ಕುಮಾರ್ ಅವರಂತಹ ಯುವ ಚಪ್ಪಲಿ ತಯಾರಕರು ರೆಕ್ಸಿನ್ ಮತ್ತು ಮೈಕ್ರೋ ಸೆಲ್ಯುಲಾರ್ ಶೀಟುಳಂತಹ ಕೃತಕ ಚರ್ಮವನ್ನು ಈಗ ಹೆಚ್ಚಾಗಿ ಬಳಸಲಾಗುತ್ತಿದೆ ಎಂದು ಹೇಳುತ್ತಾರೆ. ನಲವತ್ತರ ಹರೆಯದ ರಾಜ್ ಮತ್ತು ಮಹಿಂದರ್ ಇಬ್ಬರೂ ದಲಿತ ಜಾತವ್ ಸಮುದಾಯಕ್ಕೆ ಸೇರಿದವರು.
"ಒಂದು ಮೈಕ್ರೋ ಶೀಟ್ ಬೆಲೆ ಕೆ.ಜಿ.ಗೆ 130 ರೂ.ಗಳಷ್ಟಿದ್ದರೆ, ಹಸುವಿನ ಚರ್ಮದ ಬೆಲೆ ಈಗ ಪ್ರತಿ ಕೆ.ಜಿ.ಗೆ 160 ರಿಂದ 200 ರೂ.ಗಳವರೆಗೆ ಇದೆ" ಎಂದು ಮಹಿಂದರ್ ಹೇಳುತ್ತಾರೆ. ಚರ್ಮವು ಈ ಪ್ರದೇಶದಲ್ಲಿ ಅಪರೂಪದ ವಸ್ತುವಾಗಿ ಮಾರ್ಪಟ್ಟಿದೆ ಎಂದು ಅವರು ಹೇಳುತ್ತಾರೆ. "ಈ ಮೊದಲು, ಕಾಲೋನಿ ಚರ್ಮದ ಕಾರ್ಖಾನೆಗಳಿಂದ ತುಂಬಿತ್ತು ಮತ್ತು ಚರ್ಮದ ದುರ್ವಾಸನೆ ಗಾಳಿಯಲ್ಲಿ ತೇಲುತ್ತಿತ್ತು. ಆದರೆ ಬಸ್ತಿ ಬೆಳೆದಂತೆ, ಚರ್ಮದ ಕಾರ್ಖಾನೆಗಳನ್ನು ಮುಚ್ಚಲಾಯಿತು" ಎಂದು ರಾಜ್ ಹೇಳುತ್ತಾರೆ.
ಈಗೀಗ ಯುವಕರು ವೃತ್ತಿಗೆ ಸೇರಲು ಆಸಕ್ತಿ ತೋರಿಸುತ್ತಿಲ್ಲ, ಮತ್ತು ಕಡಿಮೆ ಆದಾಯವೊಂದೇ ಇದಕ್ಕೆ ಇರುವ ಏಕೈಕ ಕಾರಣವಲ್ಲ ಎಂದು ಅವರು ಹೇಳುತ್ತಾರೆ. "ದುರ್ವಾಸನೆ ಬಟ್ಟೆಗಳಿಗೆ ಸೇರುತ್ತದೆ ಮತ್ತು ಕೆಲವೊಮ್ಮೆ ಅವರ ಸ್ನೇಹಿತರು ಕೂಡಾ ಅವರ ಕೈಕುಲುಕುವುದಿಲ್ಲ" ಎಂದು ಮಹಿಂದರ್ ಹೇಳುತ್ತಾರೆ.


ರಾಜ್ ಕುಮಾರ್ (ಎಡ) ಅವರಂತಹ ಯುವ ಶೂ ತಯಾರಕರು ಈಗ ಜುತ್ತಿಗಳನ್ನು ತಯಾರಿಸಲು ಸಾಮಾನ್ಯವಾಗಿ ಕೃತಕ ಚರ್ಮವನ್ನು ಬಳಸಲಾಗುತ್ತದೆ ಎಂದು ಹೇಳುತ್ತಾರೆ. ಅವರು ವಾಸಿಸುವ ಮತ್ತು ಕೆಲಸ ಮಾಡುವ ಮಾಲುಟ್ ಪ್ರದೇಶದ ಗುರು ರವಿದಾಸ್ ಕಾಲೋನಿಯಲ್ಲಿ, ಹಲವು ಚರ್ಮದ ಕಾರ್ಖಾನೆಗಳು ಮುಚ್ಚಲ್ಪಟ್ಟಿವೆ
"ನನ್ನ ಸ್ವಂತ ಮಕ್ಕಳಿಗೆ ಜುತ್ತಿ ತಯಾರಿಸಲು ಬರುವುದಿಲ್ಲ" ಎಂದು ಹನ್ಸ್ ರಾಜ್ ಹೇಳುತ್ತಾರೆ, "ನನ್ನ ಮಕ್ಕಳು ಎಂದೂ ಅಂಗಡಿಗೆ ಕಾಲಿಟ್ಟವರಲ್ಲ, ಅವರು ಈ ಕಲೆಯನ್ನು ಹೇಗೆ ಕಲಿಯಲು ಸಾಧ್ಯ? ಈ ಕೌಶಲವನ್ನು ತಿಳಿದಿರುವ ಕೊನೆಯ ಪೀಳಿಗೆ ನಮ್ಮದು. ನಾನು ಇನ್ನೂ ಐದು ವರ್ಷಗಳವರೆಗೆ ಇದನ್ನು ಮಾಡಲು ಸಾಧ್ಯವಾಗುತ್ತದೆ, ನನ್ನ ನಂತರ ಯಾರು ಮಾಡುತ್ತಾರೆ?" ಎಂದು ಅವರು ಕೇಳುತ್ತಾರೆ.
ರಾತ್ರಿ ಊಟಕ್ಕೆ ತರಕಾರಿಗಳನ್ನು ಕತ್ತರಿಸುತ್ತಿದ್ದ ವೀರಪಾಲ್ ಕೌರ್, "ಕೇವಲ ಜುತ್ತಿಗಳನ್ನು ತಯಾರಿಸುವ ಮೂಲಕ ಮನೆ ಕಟ್ಟಲು ಸಾಧ್ಯವಿಲ್ಲ” ಎಂದು ಹೇಳುತ್ತಾರೆ. ಸುಮಾರು ಎರಡು ವರ್ಷಗಳ ಹಿಂದೆ, ಕುಟುಂಬವು ಕಾಗದದ ಗಿರಣಿಯಲ್ಲಿ ಕೆಲಸ ಮಾಡುವ ತಮ್ಮ ಹಿರಿಯ ಮಗ ಉದ್ಯೋಗದ ಮೂಲಕ ಪಡೆದ ಸಾಲದಲ್ಲಿ ಪಕ್ಕಾ ಮನೆ ನಿರ್ಮಾಣವನ್ನು ಪೂರ್ಣಗೊಳಿಸಿತು.
"ನಾನು ಅವಳಿಗೆ ಕಸೂತಿ ಕಲಿಯಲು ಹೇಳಿದ್ದೆ, ಆದರೆ ಅವಳು ಎಲ್ಲವನ್ನೂ ಕಲಿಯಲಿಲ್ಲ" ಎಂದು ಹನ್ಸ್ ರಾಜ್ ತನ್ನ ಹೆಂಡತಿಯನ್ನು ಗೇಲಿ ಮಾಡುತ್ತಾ ಹೇಳುತ್ತಾರೆ. ಇವರಿಬ್ಬರು ಮದುವೆಯಾಗಿ 38 ವರ್ಷಗಳಾಗಿವೆ. "ನನಗೆ ಆಸಕ್ತಿ ಇರಲಿಲ್ಲ" ಎಂದು ವೀರಪಾಲ್ ಉತ್ತರಿಸುತ್ತಾರೆ. ಅವರು ತನ್ನ ಅತ್ತೆಯಿಂದ ಕಲಿತ ಕೆಲಸದ ಅನುಭವವನ್ನು ಆಧರಿಸಿ, ಮನೆಯಲ್ಲಿ ಕುಳಿತು ಒಂದು ಗಂಟೆಯಲ್ಲಿ ಜರಿ ದಾರದಿಂದ ಒಂದು ಜೋಡಿಯನ್ನು ಕಸೂತಿ ಮಾಡಬಲ್ಲರು.
ಅವರ ಹಿರಿಯ ಮಗನ ಮೂರು ಸದಸ್ಯರ ಕುಟುಂಬದೊಂದಿಗೆ ಹಂಚಿಕೊಂಡಿರುವ ಅವರ ಮನೆಯಲ್ಲಿ ಎರಡು ಕೋಣೆಗಳು, ಅಡುಗೆಮನೆ ಮತ್ತು ಡ್ರಾಯಿಂಗ್ ರೂಮ್, ಹೊರಾಂಗಣ ಶೌಚಾಲಯವಿದೆ. ಕೊಠಡಿಗಳು ಮತ್ತು ಚಾವಡಿಯನ್ನು ಅಲಂಕರಿಸಲಾಗಿದ್ದು, ಅಲ್ಲಿ ಬಿ.ಆರ್.ಅಂಬೇಡ್ಕರ್ ಮತ್ತು ಸಂತ ರವಿದಾಸ್ ಅವರ ಫೋಟೋಗಳಿವೆ. ರವಿದಾಸರ ಇದೇ ರೀತಿಯ ಚಿತ್ರವು ಹನ್ಸ್ ರಾಜ್ ಅವರ ಕಾರ್ಯಾಗಾರದ ಅಂದವನ್ನು ಹೆಚ್ಚಿಸಿದೆ.

ಹನ್ಸ ರಾಜ್ ಅವರ ಕೈಯಿಂದ ತಯಾರಾದ ಜುತ್ತಿಗಳು ತಮ್ಮ ಗ್ರಾಹಕರೊಂದಿಗೆ ಭಾರತದಾದ್ಯಂತ ಪ್ರಯಾಣಿಸಿವೆ. ಸುಮಾರು 15 ವರ್ಷಗಳ ಅಂತರದ ನಂತರ ಇವು ಮತ್ತೆ ಪ್ರಚಲಿತದಲ್ಲಿವೆ. ಈಗ, 'ಪ್ರತಿ ದಿನವೂ ನನಗೆ ದೀಪಾವಳಿಯಂತೆ ಭಾಸವಾಗುತ್ತದೆ' ಎಂದು ಹನ್ಸ್ ರಾಜ್ ಸಂತೋಷದಿಂದ ಹೇಳುತ್ತಾರೆ
"ಕಳೆದ 10-15 ವರ್ಷಗಳಲ್ಲಿ ಜನರು ಮತ್ತೆ ಜುತ್ತಿಗಳನ್ನು ಧರಿಸಲು ಪ್ರಾರಂಭಿಸಿದ್ದಾರೆ" ಎಂದು ವೀರಪಾಲ್ ಹೇಳುತ್ತಾರೆ, "ಅದಕ್ಕೂ ಮೊದಲು, ಬಹಳಷ್ಟು ಜನರು ಇದನ್ನು ಧರಿಸುವುದನ್ನು ನಿಲ್ಲಿಸಿದ್ದರು."
ಆ ಸಮಯದಲ್ಲಿ, ಹನ್ಸ ರಾಜ್ ಕೃಷಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು ಮತ್ತು ಸಾಂದರ್ಭಿಕವಾಗಿ ಗ್ರಾಹಕರು ಬಂದಾಗ ಒಂದೆರಡು ದಿನಗಳಲ್ಲಿ ಜುತ್ತಿಗಳನ್ನು ತಯಾರಿಸುತ್ತಿದ್ದರು.
"ಈಗ, ಹೆಚ್ಚಿನ ಕಾಲೇಜು ಹುಡುಗರು ಮತ್ತು ಹುಡುಗಿಯರು ಈ ಜುತ್ತಿಗಳನ್ನು ಧರಿಸುವ ಆಸಕ್ತಿ ಹೊಂದಿದ್ದಾರೆ" ಎಂದು ವೀರಪಾಲ್ ಹೇಳುತ್ತಾರೆ.
ಗ್ರಾಹಕರು ಲುಧಿಯಾನ, ರಾಜಸ್ಥಾನ, ಗುಜರಾತ್ ಮತ್ತು ಉತ್ತರ ಪ್ರದೇಶ ಸೇರಿದಂತೆ ವಿವಿಧ ಸ್ಥಳಗಳಿಗೆ ಜುತ್ತಿಗಳನ್ನು ಕೊಂಡುಹೋಗಿದ್ದಾರೆ. ಹನ್ಸ ರಾಜ್ ಅವರು ತಮ್ಮ ಕೊನೆಯ ದೊಡ್ಡ ಆರ್ಡರ್ ಆಗಿ ಗಿರಣಿ ಕಾರ್ಮಿಕರೊಬ್ಬರಿಗೆ ಎಂಟು ಜೋಡಿ ಪಂಜಾಬಿ ಜುತ್ತಿಗಳನ್ನು ತಯಾರಿಸಿದ್ದನ್ನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತಾರೆ. ಆ ಗಿರಣಿ ಕಾರ್ಮಿಕ ಅವುಗಳನ್ನು ಉತ್ತರ ಪ್ರದೇಶದಲ್ಲಿರುವ ತನ್ನ ಸಂಬಂಧಿಕರಿಗಾಗಿ ಖರೀದಿಸಿದ್ದ.
ಅವರ ಪ್ರಸ್ತುತ ಸ್ಥಳದಲ್ಲಿ ಅವರ ಕರಕುಶಲ
ಕಸುಬಿಗೆ ಸ್ಥಿರವಾದ ಬೇಡಿಕೆ ಇರುವುದರಿಂದ, "ಪ್ರತಿ ದಿನವೂ ನನಗೆ ದೀಪಾವಳಿಯಂತೆ ಭಾಸವಾಗುತ್ತದೆ" ಎಂದು ಸಂತೋಷದಿಂದ ಹನ್ಸ್ ರಾಜ್ ಹೇಳುತ್ತಾರೆ.
ನವೆಂಬರ್ 2023ರಲ್ಲಿ, ಈ ಕಥೆ ವರದಿಯಾದ ಕೆಲವು ವಾರಗಳ ನಂತರ, ಹನ್ಸ ರಾಜ್ ಭಾಗಶಃ ಪಾರ್ಶ್ವವಾಯುವಿಗೆ ಒಳಗಾದರು. ಪ್ರಸ್ತುತ ಅವರು ಚೇತರಿಸಿಕೊಳ್ಳುತ್ತಿದ್ದಾರೆ.
ಈ ಕಥೆಯನ್ನು ಮೃಣಾಲಿನಿ ಮುಖರ್ಜಿ ಫೌಂಡೇಶನ್ (ಎಂಎಂಎಫ್) ಫೆಲೋಶಿಪ್ ಬೆಂಬಲದೊಂದಿಗೆ ವರದಿ ಮಾಡಲಾಗಿದೆ.
ಅನುವಾದ: ಶಂಕರ. ಎನ್. ಕೆಂಚನೂರು