ಈಗಿನೂ ಮೂವತ್ತರ ಪ್ರಾಯಕ್ಕೆ ಸನಿಹದಲ್ಲಿರುವ ಗಣೇಶ್ ಪಂಡಿತ್ ಅವರು ಹೊಸ ದೆಹಲಿಯ ಯಮುನಾ ಸೇತುವೆ ಬಳಿಯ ಲೋಹಾ ಪುಲ್ ಎನ್ನುವ ಪ್ರದೇಶದ ಅತ್ಯಂತ ಕಿರಿಯ ನಿವಾಸಿ ಎನ್ನಬಹುದು. ಅವರು ಇಂದಿನ ಯುವಕರು ಚಾಂದಿನಿ ಚೌಕ್ ಬಳಿ ಈಜು ತರಬೇತಿದಾರರಾಗಿ, ರೀಟೇಲ್ ಅಂಗಡಿಗಳಲ್ಲಿ ಸಹಾಯಕರಾಗಿ ಕೆಲಸ ಮಾಡುವುದು ಮೊದಲಾದ ʼಮುಖ್ಯವಾಹಿನಿಯʼ ಕೆಲಸಗಳಿಗೆ ಪ್ರಾಮುಖ್ಯತೆ ನೀಡುತ್ತಿದ್ದಾರೆ ಎನ್ನುತ್ತಾರೆ.
ದೆಹಲಿ ಮೂಲಕ ಹರಿಯುವ ಯಮುನಾ ನದಿ ಗಂಗಾ ನದಿಯ ಅತಿ ಉದ್ದದ ಉಪನದಿ. ಮತ್ತು ಪರಿಮಾಣದ ದೃಷ್ಟಿಯಿಂದ ಇದು ಎರಡನೆಯ ಅತಿದೊಡ್ಡ ಉಪನದಿ (ಮೊದಲನೆಯದು ಘಾಘಾರಾ).
ಪಂಡಿತ್ ಅವರು ಯಮುನಾ ತೀರದಲ್ಲಿ ಫೋಟೊ ಶೂಟ್ ಏರ್ಪಡಿಸುವುದರ ಜೊತೆಗೆ ನದಿಯ ನಡುವಿನಲ್ಲಿ ಆಚರಣೆಗಳನ್ನು ನಡೆಸಲು ಬಯಸುವ ಜನರನ್ನು ತಮ್ಮ ದೋಣಿಯಲ್ಲಿ ಕರೆದೊಯ್ಯುತ್ತಾರೆ. “ಎಲ್ಲಿ ವಿಜ್ಞಾನ ವಿಫಲವಾಗುತ್ತದೆಯೋ ಅಲ್ಲಿ ನಂಬಿಕೆ ಕೆಲಸ ಮಾಡುತ್ತದೆ” ಎಂದು ಅವರು ವಿವರಿಸುತ್ತಾರೆ. ಅವರ ತಂದೆ ಅಲ್ಲಿ ಪುರೋಹಿತರಾಗಿ ದುಡಿಯುತ್ತಾರೆ. ಅವರ ಇಬ್ಬರು ಸಹೋದರರು “ಯುವಕರಾಗಿದ್ದಾಗ ಜಮುನಾದಲ್ಲಿ [ಯಮುನಾ] ಈಜು ಕಲಿತರು.” ಪ್ರಸ್ತುತ ಅವರಿಬ್ಬರೂ ಪಂಚತಾರ ಹೋಟೆಲ್ಲುಗಳಲ್ಲಿ ಲೈಫ್ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾರೆ.


ಎಡ: ದೆಹಲಿಯ ಲೋಹಾ ಪುಲ್ ಬ್ರಿಡ್ಜ್ ನಿವಾಸಿ, ಯಮುನಾ ನದಿಯ ಲ್ಲಿ ದೋಣಿ ನಡೆಸುವ ಗಣೇಶ್ ಪಂಡಿತ್, 33. ಬಲ: ಸೇತುವೆಯ ಮೇಲಿನ ಸೈನ್ ಬೋರ್ಡ್ ಈ ಸ್ಥಳಕ್ಕೆ ಇತಿಹಾಸದ ಸ್ಪರ್ಶವನ್ನು ನೀಡುತ್ತದೆ


ಎಡ: ಗಣೇಶ್ ಪಂಡಿತ್ ಅವರ ದೋಣಿ ನಿಲ್ಲುವ ಸ್ಥಳದಲ್ಲಿನ ಪರಿಸರ ಮತ್ತು ಕೊಳಕು. ಬಲ: ಜನರು ಜಮುನಾ ತೀರದಲ್ಲಿ ಪೂಜೆಗಾಗಿ ತರುವ ಬಾಟಲಿಯ ಖಾಲಿ ಹೊದಿಕೆ. ಗಣೇಶ್ ಅವರಂತಹವರು ಜನರಿಂದ ಹಣ ಪಡೆದು ದೋಣಿಯಲ್ಲಿ ಕರೆದೊಯ್ಯುತ್ತಾರೆ
ಇದು ಲಾಭದಾಯಕ ಅಥವಾ ಗೌರವಾನ್ವಿತ ವೃತ್ತಿಯಲ್ಲದ ಕಾರಣ ಜನರು ಇಂದು ತಮ್ಮ ಮಗಳನ್ನು ದೋಣಿಯವನಿಗೆ ಮದುವೆ ಮಾಡಿಕೊಡಲು ಬಯಸುವುದಿಲ್ಲ ಎಂದು ಈ ಯುವಕ ಹೇಳುತ್ತಾರೆ. "ನಾನು ಜನರನ್ನು ಸಾಗಿಸುವ ಮೂಲಕ ದಿನಕ್ಕೆ 300-500 ರೂಪಾಯಿಗಳನ್ನು ಸಂಪಾದಿಸುತ್ತೇನೆ" ಎಂದು ಹೇಳುವ ಅವರು ಜನರ ಮನಸ್ಥಿತಿಯನ್ನು ಒಪ್ಪುವುದಿಲ್ಲ. ನದಿಯಲ್ಲಿ ಫೋಟೋ ಮತ್ತು ವೀಡಿಯೊ ಚಿತ್ರೀಕರಣಗಳನ್ನು ಆಯೋಜಿಸಲು ಸಹಾಯ ಮಾಡುವ ಮೂಲಕ ತಾನು ಸಾಕಷ್ಟು ಹಣವನ್ನು ಗಳಿಸುವುದಾಗಿ ಪಂಡಿತ್ ಹೇಳುತ್ತಾರೆ.
ದಶಕಗಳಿಂದ ಇಲ್ಲಿ ದೋಣಿ ನಡೆಸುತ್ತಿರುವ ಅವರು ಈ ನದಿಯ ನೀರಿನ ಮಾಲಿನ್ಯದ ಕುರಿತು ವಿಷಾದದಿಂದ ಮಾತನಾಡುತ್ತಾರೆ. ಸೆಪ್ಟೆಂಬರ್ ತಿಂಗಳ ಮಳೆಗಾಲದ ಪ್ರವಾಹ ಬಂದು ಇಲ್ಲಿನ ನೀರನ್ನು ಪೂರ್ತಿಯಾಗಿ ಹೊರಹಾಕಿದ ಸಂದರ್ಭದಲ್ಲಿ ಮಾತ್ರವೇ ಯಮುನಾ ಸ್ವಚ್ಛವಾಗಿರುತ್ತದೆ ಎಂದು ಅವರು ಹೇಳುತ್ತಾರೆ.
ಯಮುನಾ ನದಿಯ ಕೇವಲ 22 ಕಿಲೋಮೀಟರ್ (ಅಥವಾ ಕೇವಲ 1.6 ಪ್ರತಿಶತ) ರಾಷ್ಟ್ರೀಯ ರಾಜಧಾನಿ ಪ್ರದೇಶದ ವ್ಯಾಪ್ತಿಯಲ್ಲಿ ಹರಿಯುತ್ತದೆ. ಆದರೆ 1,376 ಕಿಲೋಮೀಟರ್ ನದಿಯಲ್ಲಿನ ಎಲ್ಲಾ ಮಾಲಿನ್ಯದ ಶೇಕಡಾ 80ರಷ್ಟು ಆ ಸಣ್ಣ ವಿಸ್ತಾರದಲ್ಲಿ ಸುರಿಯಲ್ಪಡುವ ತ್ಯಾಜ್ಯಗಳು ಕಾರಣವಾಗಿವೆ. ಓದಿರಿ: " ಯಮುನೆಯ ಸತ್ತ ಮೀನುಗಳೇ ತಾಜಾ ಮೀನುಗಳು "
ಅನುವಾದ: ಶಂಕರ. ಎನ್. ಕೆಂಚನೂರು