"ಮೊದಲ ದಿನ ಮಜಿದಾನ್ ನನ್ನ ಕೈಗೆ ಹೀಗೆ ಹೊಡೆದರು," ಎಂದು 65 ವರ್ಷ ಪ್ರಾಯದ ಖರ್ಸೇದ್ ಬೇಗಮ್ ತಮಾಷೆಯಿಂದ ಆ ಕ್ಷಣವನ್ನು ಅಭಿನಯಿಸುತ್ತಾ ಹೇಳುತ್ತಾರೆ. ಅವರ ಪಕ್ಕದಲ್ಲಿಯೇ ಕುಳಿತಿದ್ದ ಮಜಿದಾನ್ ಬೇಗಮ್, ತಾವು ಮಾಡಿದ್ದನ್ನು ಸಮರ್ಥಿಸಿಕೊಳ್ಳುತ್ತಾ ಹಳೆಯ ನೆನಪುಗಳನ್ನು ನೆನೆದು ಸಂತಸ ಪಡುತ್ತಾರೆ. “ಆರಂಭದಲ್ಲಿ ಖರ್ಸೇದ್‌ಗೆ ನೂಲಿನಲ್ಲಿ ಕೆಲಸ ಮಾಡುವುದು ಹೇಗೆಂದೇ ತಿಳಿದಿರಲಿಲ್ಲ. ಒಮ್ಮೆ ಮಾತ್ರ ನಾನು ಅವಳ ಕೈಗೆ ತಟ್ಟಿದೆ,” ಎಂದು ಅವರು ಹೇಳುತ್ತಾ, "ಆಮೇಲೆ ಅವಳು ಬೇಗ ಬೇಗನೆ ಕಲಿತಳು," ಎಂದು ಮಾತನ್ನು ಮುಂದುವರಿಸಿದರು.
ಪಂಜಾಬ್‌ನ ಭಟಿಂಡಾ ಜಿಲ್ಲೆಯ ಘಂಡಾ ಬನಾ ಎಂಬ ಹಳ್ಳಿಯ ವಯಸ್ಸಾಗಿರುವ ಮಹಿಳೆಯರಾದ ಮಜಿದಾನ್ ಮತ್ತು ಖರ್ಸೇದ್ ಅವರು ಹತ್ತಿ, ಸೆಣಬು ಮತ್ತು ಹಳೆಯ ಬಟ್ಟೆಗಳನ್ನು ನೇಯ್ಗೆ ಮಾಡಿ ತಯಾರಿಸುವ ಸಂಕೀರ್ಣವಾದ ಮತ್ತು ಸುಂದರವಾದ ಧುರ್ರಿಗಳಿಗೆ [ರಗ್ಗುಗಳಿಗೆ] ಖ್ಯಾತಿಯನ್ನು ಪಡೆದಿದ್ದಾರೆ.
"ನಾನು ನನ್ನ 35 ನೇ ವಯಸ್ಸಿನಲ್ಲಿ ಮಜಿದಾನ್‌ನಿಂದ ಧುರ್ರಿಗಳನ್ನು ನೇಯುವುದು ಹೇಗೆಂದು ಕಲಿತೆ," ಎಂದು ಖರ್ಸೇದ್ ಹೇಳುತ್ತಾರೆ. "ಅಂದಿನಿಂದ, ನಾವು ಇಬ್ಬರು ಒಟ್ಟಿಗೆ ಧುರ್ರಿಗಳನ್ನು ನೇಯುತ್ತಾ ಬಂದಿದ್ದೇವೆ," ಎಂದು 71 ವರ್ಷ ಪ್ರಾಯದ ಮಜಿದಾನ್ ಹೇಳುತ್ತಾರೆ. "ಇದು ಕೇವಲ ಒಬ್ಬಳೇ ಮಾಡುವ ಕೆಲಸವಲ್ಲ, ಇಬ್ಬರ ಕೆಲಸ ಇದರಲ್ಲಿದೆ," ಎಂದು ಅವರು ಹೇಳುತ್ತಾರೆ.
ಇಬ್ಬರು ಸಹೋದರರನ್ನು ಮದುವೆಯಾಗಿರುವ ಇವರು ಪರಸ್ಪರ ತಮ್ಮನ್ನು ಸಹೋದರಿಯರು, ಒಂದೇ ಕುಟುಂಬದ ಸದಸ್ಯರು ಎಂದು ಕರೆದುಕೊಳ್ಳುತ್ತಾರೆ. "ನಮಗೂ ನಿಜವಾದ ಸಹೋದರಿಯರಿಗೂ ವ್ಯತ್ಯಾಸವೇನು ಇಲ್ಲ," ಎಂದು ಖರ್ಸೇದ್‌ರವರು ಹೇಳುವಾಗ, "ನಮ್ಮ ಸ್ವಭಾವಗಳು ಸಂಪೂರ್ಣವಾಗಿ ತದ್ವಿರುದ್ಧವಾಗಿದ್ದರೂ ಕೂಡ," ಎಂದು ಮಜಿದಾನ್ ಮಧ್ಯೆ ಬಾಯಿ ಹಾಕುತ್ತಾರೆ. ಇದಕ್ಕೆ ತಕ್ಷಣ ಪ್ರತಿಕ್ರಿಯಿಸುತ್ತಾ ಖರ್ಸೇದ್, "ಅವಳು ತುಂಬಾ ಮಾತನಾಡುತ್ತಾಳೆ, ನಾನು ಮೌನವಾಗಿರುತ್ತೇನೆ,” ಎಂದು ಹೇಳುತ್ತಾರೆ.
ಗಂಟೆಗಳ ಕಾಲ ಈ ಧುರ್ರಿಗಳನ್ನು ನೇಯುವ ಕೆಲಸ ಮಾತ್ರವಲ್ಲದೇ, ಮಜಿದಾನ್ ಮತ್ತು ಖರ್ಸೇದ್‌ರವರು ಮನೆ ಸಹಾಯಕರಾಗಿ ಕೆಲಸ ಮಾಡಿ ತಿಂಗಳಿಗೆ ಕೆಲವು ಸಾವಿರ ರೂಪಾಯಿಗಳಷ್ಟು ಸಂಪಾದನೆ ಮಾಡಿ ತಮ್ಮ ಮನೆಯನ್ನು ನೋಡಿಕೊಳ್ಳುತ್ತಾರೆ. ಈ ಎರಡೂ ಕೆಲಸಗಳಿಗೆ ಹೆಚ್ಚಿನ ದೈಹಿಕ ಶ್ರಮವನ್ನು, ಅದರಲ್ಲೂ ಈ ವಯಸ್ಸಾದ ಹೆಂಗಸರು ಹೆಚ್ಚಿನ ಶ್ರಮವನ್ನು ಹಾಕಬೇಕು.


ಭಟಿಂಡಾದ ಘಂಡಾ ಬನಾ ಗ್ರಾಮದ ಮಜಿದಾನ್ ಬೇಗಮ್ (ಎಡ) ಮತ್ತು ಅವರ ಅತ್ತಿಗೆ ಖರ್ಸೇದ್ ಬೇಗಮ್ (ಬಲ) ಹತ್ತಿ, ಸೆಣಬು ಮತ್ತು ಹಳೆಯ ಬಟ್ಟೆಗಳಿಂದ ಸುಂದರವಾಗಿ, ಸಂಕೀರ್ಣವಾಗಿ ನೇಯುವ ಧುರ್ರಿಗಳನ್ನು [ರಗ್ಗುಗಳನ್ನು] ತಯಾರಿಸುವುದಕ್ಕೆ ಹೆಸರುವಾಸಿಯಾಗಿದ್ದಾರೆ. 65 ವರ್ಷ ಪ್ರಾಯದ ಖರ್ಸೇದ್, 'ನಾನು 35 ನೇ ವಯಸ್ಸಿನಲ್ಲಿ ಮಜಿದಾನ್‌ರಿಂದ ಧುರ್ರಿಗಳನ್ನು ನೇಯುವುದನ್ನು ಕಲಿತೆ. ಅಂದಿನಿಂದ ನಾವು ಇಬ್ಬರು ಒಟ್ಟಿಗೆ ಧುರ್ರಿಗಳನ್ನು ನೇಯುತ್ತಿದ್ದೇವೆ,ʼ ಎಂದು ಹೇಳುತ್ತಾರೆ. 71 ವರ್ಷ ಪ್ರಾಯದ ಮಜಿದಾನ್, 'ಇದು ಕೇವಲ ಒಬ್ಬಳೇ ಮಾಡುವ ಕೆಲಸವಲ್ಲ, ಇಬ್ಬರ ಕೆಲಸ ಇದರಲ್ಲಿದೆ,' ಎಂದು ಹೇಳುತ್ತಾರೆ
ಈದ್‌ನ ಮಂಜುಕವಿದ ಬೆಳಿಗ್ಗೆ, ಮಜಿದಾನ್‌ರವರು ಘಂಡಾ ಬನಾದ ಕಿರಿದಾದ ರಸ್ತೆಗಳಲ್ಲಿ ನಡೆಯುತ್ತಾ ಖರ್ಸೇದ್‌ರವರ ಮನೆಯ ಕಡೆಗೆ ಹೋಗುತ್ತಾರೆ. "ಈ ಹಳ್ಳಿಯ ಪ್ರತಿಯೊಂದು ಮನೆಯವರು ನನ್ನನ್ನು ಬಾಗಿಲು ತೆರೆದು ಸ್ವಾಗತಿಸುತ್ತಾರೆ. ಇಷ್ಟು ವರ್ಷಗಳಲ್ಲಿ ಅಷ್ಟೊಂದು ಕೆಲಸಗಳನ್ನು ನಾನು ಮಾಡಿದ್ದೇನೆ," ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ.
ಇಬ್ಬರ ಖ್ಯಾತಿ ಇವರ ಹಳ್ಳಿಯ ಆಚೆಗೂ ವ್ಯಾಪಿಸಿದೆ. ಇವರು ರಗ್ಗುಗಳನ್ನು ತಯಾರಿಸುತ್ತಾರೋ ಎಂಬುದನ್ನು ಮಜಿದಾನ್‌ರವರಲ್ಲಿ ವಿಚಾರಿಸಿಕೊಂಡು ಬರಲು ದೂರ ದೂರದ ಸ್ಥಳಗಳ ಮಂದಿ ತಮ್ಮ ಕಡೆಯ ಜನರನ್ನು ಕಳುಹಿಸುತ್ತಾರೆ. "ಆದರೆ, ನಾನು ಧುರ್ರಿಗಳನ್ನು ನೇಯುವ ಬಗ್ಗೆ ಚೆನ್ನಾಗಿ ತಿಳಿದಿರುವ ಹತ್ತಿರದ ಹಳ್ಳಿಗಳ ಅಥವಾ ಫುಲ್, ಧಪಾಲಿ ಮತ್ತು ರಾಂಪುರ ಫುಲ್ದಂತಹ ಪಟ್ಟಣಗಳ ಜನರು ನೇರವಾಗಿ ನನ್ನ ಮನೆಗೆ ಬರುತ್ತಾರೆ," ಎಂದು ಮಜಿದಾನ್ ಹೇಳುತ್ತಾರೆ.
ಕೆಲವು ತಿಂಗಳುಗಳ ಹಿಂದೆ (ಏಪ್ರಿಲ್ 2024) ಪರಿ ಈ ಈರ್ವರು ಕುಶಲಕರ್ಮಿಗಳನ್ನು ಭೇಟಿಯಾದಾಗ, ಇವರು ಘಂಡಾ ಬನಾದ ನಿವಾಸಿಯೊಬ್ಬರಿಗಾಗಿ ಫೂಲ್ಕಾರಿ ಧುರ್ರಿ ಎಂಬ ಹೂವಿನ ಕಸೂತಿ ಇರುವ ಕಂಬಳಿಯನ್ನು ನೇಯುತ್ತಿದ್ದರು. ಆ ಗ್ರಾಹಕರು ಸದ್ಯದಲ್ಲೇ ಮದುವೆಯಾಗಲಿರುವ ತಮ್ಮ ಮಗಳಿಗೆ ಈ ಕಂಬಳವನ್ನು ಉಡುಗೊರೆಯಾಗಿ ನೀಡಲು ಬಯಸಿದ್ದರು. "ಧುರ್ರಿ ಅವಳ ದಾಜ್ [ಮದುಮಗಳಿಗೆ ಕೊಡುವ ಬಟ್ಟೆ] ಗಾಗಿ," ಮಜಿದಾನ್ ಹೇಳಿದರು.
ಈ ಕಂಬಳಿಯ ಮೇಲೆ ಗ್ರಾಹಕರೇ ಕೊಟ್ಟಿರುವ ಎರಡು ಬೇರೆ ಬೇರೆ ಬಣ್ಣಗಳ ನೂಲುಗಳನ್ನು ಬಳಸಿ ಹೂವುಗಳನ್ನು ಚಿತ್ರಿಸಲಾಗಿದೆ. "ಎರಡು ಬೇರೆ ಬೇರೆ ಬಣ್ಣಗಳ ನೂಲುಗಳನ್ನು ಸಂಯೋಜಿಸಿ ಹೂವಿನ ಚಿತ್ರವನ್ನು ನೇಯುತ್ತೇವೆ,” ಎಂದು ಮಜಿದಾನ್ ವಿವರಿಸುತ್ತಾ, ಹಳದಿ ಬಣ್ಣದ ನೇಯ್ಗೆಯ (ಸಮತಲ) ನೂಲನ್ನು ತುರುಕಲು 10 ಬಿಳಿ ಬಣ್ಣದ (ಲಂಬ) ನೂಲುಗಳನ್ನು ಎತ್ತುತ್ತಾರೆ. ನಂತರ ಈ ಪ್ರಕ್ರಿಯೆಯನ್ನು ನೀಲಿ ಬಣ್ಣದಲ್ಲೂ ಪುನರಾವರ್ತಿಸುತ್ತಾರೆ. ಸ್ವಲ್ಪ ಸಮಯದ ನಂತರ ಪ್ರಕ್ರಿಯೆಯನ್ನು ಮುಂದುವರಿಸುತ್ತಾ, ಹಸಿರು ಮತ್ತು ಕಪ್ಪು ಹೂವನ್ನು ಬಿಡಿಸುತ್ತಾರೆ.
"ಹೂಗಳನ್ನು ಬಿಡಿಸುವ ಕೆಲಸ ಮುಗಿದ ಮೇಲೆ, ನಾವು ಕೇವಲ ಕೆಂಪು ಬಣ್ಣದ ನೂಲುಗಳನ್ನು ಬಳಸಿ ಸುಮಾರು ಒಂದು ಅಡಿ ಧುರಿಯ ನೇಯ್ಗೆ ಮಾಡುತ್ತೇವೆ," ಎಂದು ಮಜಿದಾನ್ ಹೇಳುತ್ತಾರೆ. ಬಟ್ಟೆಯನ್ನು ಅಳೆಯಲು ಅವರ ಬಳಿ ಯಾವುದೇ ಟೇಪ್ ಇಲ್ಲ, ಬದಲಿಗೆ ಮಜಿದಾನ್ ತಮ್ಮ ಕೈಗಳನ್ನೇ ಬಳಸುತ್ತಾರೆ. ಅವರು ಮತ್ತು ಖರ್ಸೇದ್ ಇಬ್ಬರೂ ಶಾಲೆಗೆ ಹೋಗದ ಕಾರಣ ಹೀಗೆ ಮಾಡುತ್ತಾರೆ.
ಇಬ್ಬರು ಹಠಾಸ್ [ಬಾಚಣಿಗೆ] ಬಳಸಿ ನೇಯ್ದ ನೂಲುಗಳನ್ನು ತಳ್ಳುತ್ತಿದ್ದಂತೆ, ಮಜಿದಾನ್‌ರವರು, "ಡಿಸೈನ್ ನನ್ನ ತಲೆಯಲ್ಲಿದೆ," ಎಂದು ಹೇಳುತ್ತಾರೆ. ಇವರು ತಾವು ಇಲ್ಲಿಯವರೆಗೆ ನೇಯ್ದ ಧುರ್ರಿಗಳಲ್ಲಿ ನವಿಲು ಮತ್ತು 12 ಪರಿಯಾನ್‌ಗಳ [ಯಕ್ಷಿಣಿ] ಚಿತ್ರಗಳಿರುವ ಧುರ್ರಿಗಳ ಬಗ್ಗೆ ಹೆಮ್ಮೆ ಪಡುತ್ತಾರೆ. ಇವುಗಳನ್ನು ಅವರು ತಮ್ಮ ಇಬ್ಬರು ಹೆಣ್ಣುಮಕ್ಕಳಿಗೆ ಅವರ ದಾಜ್ ಆಗಿ ನೀಡಿದ್ದರು.


ತಮ್ಮ ಗ್ರಾಹಕರಿಗಾಗಿ ಹೂವಿನ ಕಸೂತಿ ಇರುವ ಕಂಬಳಿ ಫೂಲ್ಕಾರಿ ಧುರ್ರಿಯನ್ನು ನೇಯುತ್ತಿರುವ ಮಜಿದಾನ್. 'ಹೂವಿನ ಡಿಸೈನನ್ನು ನೇಯುವಾಗ ನಾವು ಬೇರೆ ಬೇರೆ ಬಣ್ಣಗಳ ನೂಲುಗಳನ್ನು ನಡುವೆ ಸೇರಿಸುತ್ತೇವೆ,' ಎಂದು ವಿವರಿಸುತ್ತಾ ಮಜಿದಾನ್‌ರವರು ಹಳದಿ ಬಣ್ಣದ ನೇಯ್ಗೆಯ (ಸಮತಲ) ನೂಲನ್ನು ತುರುಕಲು 10 ಬಿಳಿ ಬಣ್ಣದ (ಲಂಬ) ನೂಲುಗಳನ್ನು ಎತ್ತುತ್ತಾರೆ. ನಂತರ ಈ ಪ್ರಕ್ರಿಯೆಯನ್ನು ನೀಲಿ ಬಣ್ಣದಲ್ಲೂ ಪುನರಾವರ್ತಿಸುತ್ತಾರೆ


ಎಡಕ್ಕೆ: ಈ ಇಬ್ಬರು ಕುಶಲಕರ್ಮಿಗಳು ಹಠಾಸ್ [ಬಾಚಣಿಗೆ] ಬಳಸಿ ನೇಯ್ಗೆ ನೂಲುಗಳನ್ನು ತಳ್ಳುತ್ತಿದ್ದಾರೆ. ಬಲ: ನೇಯ್ಗೆಗೆ ದಾರವಾಗಿ ಬಳಸಲು ಕೆಂಪು ನೂಲನ್ನು ಮರದ ಕೋಲಿಗೆ ಸುತ್ತುತ್ತಿರುವ ಮಜಿದಾನ್. ಖರ್ಸೇದ್‌ರವರು ಧುರ್ರಿ ನೇಯುವಲ್ಲಿ ತನ್ನ ಮೊಮ್ಮಗಳು ಮನ್ನತ್ ಜೊತೆಗೆ 10-ಅಡಿ ಲೋಹದ ಫ್ರೇಮ್‌ನಲ್ಲಿ ಕೆಲಸ ಮಾಡುತ್ತಿದ್ದಳು
*****
ಮಜಿದಾನ್‌ರವರ ಪಕ್ಕಾ ಮನೆಯಲ್ಲಿರುವ ಅವರು ಕೆಲಸ ಮಾಡುವ ಸ್ಥಳದಲ್ಲಿ ಪ್ರತಿಯೊಂದು ಅಂಶವನ್ನೂ ಎಚ್ಚರಿಕೆಯಿಂದ ಗಮನಿಸುವುದನ್ನು ಕಾಣಬಹುದು. ಅವರು ಕೆಲಸ ಮಾಡುವ ಈ ಕೋಣೆಯನ್ನು ತಮ್ಮ 10 ವರ್ಷದ ಮೊಮ್ಮಗ ಇಮ್ರಾನ್ ಖಾನ್ ಜೊತೆ ಹಂಚಿಕೊಂಡಿದ್ದಾರೆ. 14 x 14-ಅಡಿ ಜಾಗದಲ್ಲಿ ಹೆಚ್ಚಿನ ಸ್ಥಳವನ್ನು 10 ಅಡಿ ಉದ್ದದ ಲೋಹದ ಚೌಕಟ್ಟು ಆವರಿಸಿಕೊಂಡಿದೆ. ಬಟ್ಟೆಯನ್ನು ನೇಯಲು ಬಳಸುವ ಈ ಜಾಗವನ್ನು ಸ್ಥಳೀಯರು 'ಅಡ್ಡಾ' ಎಂದು ಕರೆಯುತ್ತಾರೆ. ಕೋಣೆಯ ಉಳಿದ ಭಾಗದಲ್ಲಿ ಕೆಲವು ಚಾರ್ಪಾಯಿಗಳು (ಹಗ್ಗದ ಮಂಚ) ಇವೆ. ಕೆಲವು ಮಂಚಗಳನ್ನು ಗೋಡೆಗೆ ಮತ್ತು ಒಂದನ್ನು ಫ್ರೇಮಿನ ಪಕ್ಕದಲ್ಲಿ ಒರಗಿಸಿ ಇಡಲಾಗಿದೆ. ಬಟ್ಟೆ ಮತ್ತು ಸಾಮಾನುಗಳಿಂದ ತುಂಬಿರುವ ದೊಡ್ಡದಾದ ಕಬ್ಬಿಣದ ಟ್ರಂಕೊಂದು ಬದಿಯಲ್ಲಿದೆ. ಒಂದೇ ಬಲ್ಬ್ ಇಡೀ ಕೋಣೆಗೆ ಬೆಳಕನ್ನು ನೀಡುತ್ತದೆ, ಆದರೆ ಮಜಿದಾನ್ ಮತ್ತು ಖರ್ಸೇದ್ ಅವರಿಗೆ ಬೇಕಾದ ಸೂರ್ಯನ ಬೆಳಕು ಬಾಗಿಲಿನ ಮೂಲಕ ಒಳಗೆ ಬರುತ್ತದೆ.
ಅವರು ಸುಮಾರು 10-ಅಡಿಯ ಲೋಹದ ಫ್ರೇಮಿಗೆ ವಾರ್ಪ್-ಲಂಬವಾಗಿ ನೂಲುಗಳನ್ನು ಸುತ್ತುವ ಮೂಲಕ ತಮ್ಮ ಕೆಲಸವನ್ನು ಆರಂಭಿಸುತ್ತಾರೆ. "ಧುರ್ರಿಗಳನ್ನು ನೇಯುವಾಗ ವಾರ್ಪ್ ನೂಲುಗಳನ್ನು ಸುತ್ತುವುದು ಅತ್ಯಂತ ಕಷ್ಟದ ಕೆಲಸ," ಎಂದು ಮಜಿದಾನ್ ಹೇಳುತ್ತಾರೆ. ನೂಲನ್ನು ಫ್ರೇಮಿನ ಕಂಬಗಳಿಗೆ ಎಳೆದು ಬಿಗಿಯಾಗಿ ಸುತ್ತಲಾಗುತ್ತದೆ.
ಈ ಈರ್ವರೂ ನೇಕಾರರು ನೇಯುತ್ತಿರುವ ಬಟ್ಟೆಗೆ ಸಪೋರ್ಟ್ ಆಗಿ ಲೋಹದ ಫ್ರೇಮಿನ ಮೇಲೆ ಇಡಲಾಗಿರುವ ಹಲಗೆಯ ಮೇಲೆ ಕುಳಿತುಕೊಳ್ಳುತ್ತಾರೆ. ಮಗ್ಗದ ಶೆಡ್ ಅನ್ನು ತೆರೆಯಲು ಮತ್ತು ಮುಚ್ಚಲು, ವೇಗವಾಗಿ ಹಾಗೂ ಸರಳವಾಗಿ ನೇಯಲು ಬಳಸುವ ಮರದ ಕೋಲು ಹೆಡಲ್ ಮೇಲೆ ಕೈಯಾಡಿಸುವ ಮೂಲಕ ಕೆಲಸ ಆರಂಭಿಸುತ್ತಾರೆ. ಶೆಡ್ ಎಂಬುದು ವಾರ್ಪ್ ನೂಲುಗಳನ್ನು ಪ್ರತ್ಯೇಕಿಸುತ್ತದೆ. ಇದು ಕಂಬಳಿ ಅಂತಿಮವಾಗಿ ಪಡೆಯುವ ಮಾದರಿಗಳನ್ನು ರಚಿಸುತ್ತದೆ.
ಒಬ್ಬರಾದ ಮೇಲೆ ಒಬ್ಬರಂತೆ, ಇಬ್ಬರೂ ಕುಶಲಕರ್ಮಿಗಳು ಸಮತಲವಾದ ನೇಯ್ಗೆಯ ವೆಫ್ಟ್ ನೂಲುಗಳನ್ನು [ಬಾನಾ] ಮರದ ಕೋಲನ್ನು ಬಳಸಿ ತಿರುವು ಮುರುವಾಗಿ ವಾರ್ಪ್ ನೂಲಿನ (ಟಾನಾ) ಮೂಲಕ ತುರುಕುತ್ತಾರೆ. ಹೀಗೆ ಸಂಕೀರ್ಣವಾದ ವಿನ್ಯಾಸಗಳನ್ನು ರಚಿಸುತ್ತಾರೆ. ಮಜಿದಾನ್ ಅವರು "ಅವಳ ತಲೆಯಲ್ಲಿ ಇರುವ ಕಲ್ಪನೆಯನ್ನು ಆಧರಿಸಿ ಇದನ್ನು ಮಾಡಲಾಗುತ್ತದೆ," ಎಂದು ಹೇಳುತ್ತಾ ಬೇರೆ ಬೇರೆ ವಿನ್ಯಾಸಗಳನ್ನು ರಚಿಸಲು ನೂಲನ್ನು ಸುತ್ತುತ್ತಾರೆ. ಈ ವಿನ್ಯಾಸವನ್ನು ಮತ್ತೆ ರಚಿಸಲು ಅವರಲ್ಲಿ ಯಾವುದೇ ಮಾದರಿ ಅಥವಾ ಕೊರೆಯಚ್ಚು ಇಲ್ಲ.


ಈ ಇಬ್ಬರೂ ನೇಕಾರರು ಲೋಹದ ಫ್ರೇಮಿನ ಮೇಲೆ ತಾವು ತಯಾರಿಸುತ್ತಿರುವ ಬಟ್ಟೆಗೆ ಸಪೋರ್ಟ್ ಆಗಿ ಇರಿಸಲಾದ ಹಲಗೆಯ ಮೇಲೆ ಕುಳಿತುಕೊಳ್ಳುತ್ತಾರೆ. ಅವರು ವಾರ್ಪ್ - ಲಂಬ ನೂಲನ್ನು ಸ್ಥಳೀಯವಾಗಿ ಅಡ್ಡಾ ಎಂದು ಕರೆಯುವ, ನೇಯಲು ಬಳಸುವ ಸುಮಾರು 10- ಅಡಿ ಲೋಹದ ಫ್ರೇಮಿಗೆ ಸುತ್ತುವ ಮೂಲಕ ಕೆಲಸವನ್ನು ಆರಂಭಿಸುತ್ತಾರೆ. 'ಧುರ್ರಿಗಳನ್ನು ನೇಯಲು ವಾರ್ಪ್ ನೂಲುಗಳನ್ನು ಸುತ್ತುವುದು ಅತ್ಯಂತ ಕಷ್ಟದ ಕೆಲಸ,' ಎಂದು ಮಜಿದಾನ್ ಹೇಳುತ್ತಾರೆ
ನೋಡಲು ಕಷ್ಟವೆಂಬಂತೆ ತೋರುವ ಈ ಕೆಲಸ ಈಗ ತುಂಬಾ ಸುಲಭವಾಗಿದೆ. “ಇದಕ್ಕೂ ಮೊದಲು ನಾವು ನಾಲ್ಕು ಮೂಲೆಗಳಲ್ಲಿ ನಾಲ್ಕು ದೊಡ್ಡ ಕಬ್ಬಿಣದ ಕೈಲ್ [ಮೊಳೆಗಳನ್ನು] ನೆಲಕ್ಕೆ ಹೊಡೆಯುತ್ತಿದ್ದೆವು. ಅವುಗಳ ಮೇಲೆ ಮರದ ತೊಲೆಗಳನ್ನು ಇಟ್ಟು ಫ್ರೇಮನ್ನು ಮಾಡಿ, ನಂತರ ನೇಯ್ಗೆ ಮಾಡಲು ಅವುಗಳ ಸುತ್ತಲೂ ನೂಲನ್ನು ಸುತ್ತುತ್ತಿದ್ದೆವು,” ಎಂದು ಖರ್ಸೇದ್ ಹೇಳುತ್ತಾರೆ. "ಆ ಅಡ್ಡಾ ಇದಕ್ಕಿಂತ ಬೇರೆ ರೀತಿ," ಎಂದು ಮಜಿದಾನ್ ಹೇಳುತ್ತಾರೆ. ಆದ್ದರಿಂದ ಅವರು ಸೆಟ್ಟಿಂಗನ್ನು ಬದಲಿಸುವಾಗೆಲ್ಲಾ, "ನಾವು ಅದನ್ನು ಅಂಗಳಕ್ಕೆ ಎಳೆದುಕೊಂಡು ಹೋಗುತ್ತೇವೆ," ಎನ್ನುತ್ತಾರೆ ಅವರು.
ಇಬ್ಬರು ಮಹಿಳೆಯರಿಗೂ ಅವರ ಕುಟುಂಬದಿಂದ ಹೆಚ್ಚಿನ ಆರ್ಥಿಕ ಸಹಾಯ ಸಿಗುವುದಿಲ್ಲ. ಮಜಿದಾನ್ ಅವರ ಸಣ್ಣ ಮಗ ರಿಯಾಸತ್ ಅಲಿ ಟ್ರಕ್ ಡ್ರೈವರ್ ಆಗಿದ್ದರು. ಸದ್ಯ ಅವರು ಗೋಶಾಲೆಯೊಂದರಲ್ಲಿ ದಿನಕ್ಕೆ 500 ರುಪಾಯಿಗೆ ಕೆಲಸ ಮಾಡುತ್ತಿದ್ದಾರೆ. ಅವರ ಹಿರಿಯ ಮಗ ಬರ್ನಾಲಾದಲ್ಲಿ ಸ್ಥಳೀಯ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಖರ್ಸೇದ್ ಅವರ ಇಬ್ಬರು ಗಂಡು ಮಕ್ಕಳು ವೆಲ್ಡರ್‌ಗಳಾಗಿ ಕೆಲಸ ಮಾಡುತ್ತಿದ್ದರೆ, ಅವರ ಮೂರನೇ ಮಗ ದಿನಗೂಲಿ ಕೆಲಸ ಮಾಡುತ್ತಿದ್ದಾರೆ.
ಮಜಿದಾನ್ ಅವರು ಖರ್ಸೇದ್ ಅವರಿಗಿಂತ ಮುಂಚೆಯೇ ನೇಯ್ಗೆಯ ಕೆಲಸ ಆರಂಭಿಸಿದ್ದರು. ಅವರ ಮೇಲೆ ಹೇರಲಾಗಿದ್ದ ಶಿಸ್ತಿನಲ್ಲಿ ತುಂಬಾ ವ್ಯತ್ಯಾಸವೇನು ಇರಲಿಲ್ಲ. "ನನ್ನ ಪರ್ಜಾಯಿ [ಅತ್ತಿಗೆ] ನನಗೆ ಕಲಿಸುವಾಗ ನನ್ನ ತುಯಿಗೆ [ಕುಂಡೆ] ಭಾರಿಸುತ್ತಿದ್ದರು," ಎಂದು ತಮಗೆ ನೇಯ್ಗೆಯನ್ನು ಕಲಿಸಿದ ತಮ್ಮ ಇನ್ನೊಬ್ಬ ಅತ್ತಿಗೆಯ ಬಗ್ಗೆ ಮಾತನಾಡುತ್ತಾ ಮಜಿದಾನ್ ಹೇಳುತ್ತಾರೆ.
"ಆರಂಭದಲ್ಲಿ ನಾನು ಕೋಪಿಷ್ಠ ಸ್ವಭಾವದ ಹುಡುಗಿಯಾಗಿದ್ದರೂ ಕಲಿಯಲು ಉತ್ಸಾಹ ಇದ್ದರಿಂದ ನಾನು ಸುಮ್ಮನಿರುತ್ತಿದ್ದೆ," ಎಂದು ಅವರು ಹೇಳುತ್ತಾರೆ. "ಹತಾಶೆ ಮತ್ತು ಕಣ್ಣೀರಿನ ಹೊರತಾಗಿಯೂ," ಒಂದು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಅವರು ಕೆಲಸ ಕಲಿತರು.
ತಮ್ಮ ತಂದೆಯ ಮರಣದ ನಂತರ ಇವರ ತಾಯಿ ಒಬ್ಬರೇ ಮನೆಯಲ್ಲಿ ಸಂಪಾದನೆ ತರುತ್ತಿದ್ದರು. ಆ ಸಂದರ್ಭದಲ್ಲಿ ಮಜಿದಾನ್ ಒಂದು ದೃಢವಾದ ನಿರ್ಧಾರವನ್ನು ತೆಗೆದುಕೊಂಡರು. ಅವರ ತಾಯಿಗೆ ಆರಂಭದಲ್ಲಿ ಒಪ್ಪಿಗೆ ಇಲ್ಲದಿದ್ದರೂ 14 ವರ್ಷ ಪ್ರಾಯದ ಮಜಿದಾನ್ ತನ್ನ ತಾಯಿಗೆ ನೆರವಾಗಲು ನಿಂತರು. "ಬೆಬೆ [ತಾಯಿ] ನಿರಾಕರಿಸಿದರು, [ನನಗೆ ಇದು ಸಾಧ್ಯವಿಲ್ಲ ಏಕೆಂದರೆ] 'ನಾನು ಸಣ್ಣ ಹುಡುಗಿ' ಎಂದು ಹೇಳುತ್ತಿದ್ದರು," ಎಂದು ಮಜಿದಾನ್ ನೆನಪಿಸಿಕೊಳ್ಳುತ್ತಾರೆ. "ಆದರೆ ಹುಡುಗಿ ಎಂಬ ಕಾರಣಕ್ಕೆ ಕುಟುಂಬಕ್ಕೆ ಸಹಾಯ ಮಾಡುವುದನ್ನು ಯಾಕೆ ತಡೆಯುತ್ತೀರಿ ಎಂದು ಪ್ರಶ್ನಿಸುತ್ತಿದ್ದೆ," ಎಂದು ಅವರು ನೆನಪು ಮಾಡಿಕೊಳ್ಳುತ್ತಾರೆ.


ಒಬ್ಬರಾದ ಮೇಲೆ ಒಬ್ಬರಂತೆ, ಇಬ್ಬರೂ ಕುಶಲಕರ್ಮಿಗಳು ಸಮತಲವಾದ ನೇಯ್ಗೆಯ ನೂಲುಗಳನ್ನು [ಬಾನಾ] ಮರದ ಕೋಲನ್ನು ಬಳಸಿ ತಿರುವು ಮುರುವಾಗಿ ವಾರ್ಪ್ ನೂಲಿನ (ಟಾನಾ) ಮೂಲಕ ತುರುಕುತ್ತಾರೆ. ಹೀಗೆ ಸಂಕೀರ್ಣವಾದ ವಿನ್ಯಾಸಗಳನ್ನು ರಚಿಸುತ್ತಾರೆ. ಮಜಿದಾನ್ ಅವರು "ಅವಳ ತಲೆಯಲ್ಲಿ ಇರುವ ಕಲ್ಪನೆಯನ್ನು ಆಧರಿಸಿ ಇದನ್ನು ಮಾಡಲಾಗುತ್ತದೆ," ಎಂದು ಹೇಳುತ್ತಾ ಬೇರೆ ಬೇರೆ ವಿನ್ಯಾಸಗಳನ್ನು ರಚಿಸಲು ನೂಲನ್ನು ಸುತ್ತುತ್ತಾರೆ. ಈ ವಿನ್ಯಾಸವನ್ನು ಮತ್ತೆ ರಚಿಸಲು ಅವರಲ್ಲಿ ಯಾವುದೇ ಮಾದರಿ ಅಥವಾ ಕೊರೆಯಚ್ಚು ಇಲ್ಲ


ಮಜಿದಾನ್ ಮತ್ತು ಖರ್ಸೇದ್ ಹಳದಿ ಹಾಗೂ ನೀಲಿ ಬಣ್ಣಗಳ ನೂಲನ್ನು ಬಳಸಿ ಎರಡು ಹೂವಿನ ಮಾದರಿಗಳ ಸಂಯೋಜನೆಯನ್ನು ನೇಯುತ್ತಾರೆ. ಸ್ವಲ್ಪ ವಿರಾಮದ ನಂತರ ಹಸಿರು ಮತ್ತು ಕಪ್ಪು ಹೂವುಗಳನ್ನು ನೇಯಲು ಶುರುಮಾಡುತ್ತಾರೆ. 'ಹೂಗಳ ಕೆಲಸ ಮುಗಿದ ಮೇಲೆ ನಾವು ಕೆಂಪು ನೇಯ್ಗೆ ದಾರಗಳನ್ನು ಬಳಸಿ ಸುಮಾರು ಒಂದು ಅಡಿಯ ಧುರಿಯನ್ನು ನೇಯುತ್ತೇವೆ,' ಎಂದು ಮಜಿದಾನ್ ಹೇಳುತ್ತಾರೆ. ಯಾವತ್ತೂ ಶಾಲೆಯ ಮುಖ ನೋಡದ ಅವರು ಬಟ್ಟೆಯನ್ನು ಅಳೆಯಲು ತನ್ನ ಕೈಗಳನ್ನೇ ಬಳಸುತ್ತಾರೆ
ದೇಶ ವಿಭಜನೆ ಈ ಕುಟುಂಬದ ಮೇಲೆ ಗಾಢ ಪ್ರಭಾವವನ್ನು ಬೇರಿದೆ. ಅವರ ತಾಯಿಯ ಅಜ್ಜ-ಅಜ್ಜಿಯ ಕುಟುಂಬ ಪಾಕಿಸ್ತಾನದಲ್ಲಿ ವಾಸಿಸುತ್ತಿದೆ. ಅವರನ್ನು ಭೇಟಿ ಮಾಡುವ ಹಂಬಲ ಮಜಿದಾನ್‌ರವರಲ್ಲಿ ಇನ್ನೂ ತುಂಬಿದೆ. 1980 ರ ದಶಕದಲ್ಲಿ ಅವರನ್ನು ಭೇಟಿಯಾದಾಗ ಅವರಿಗಾಗಿ ಉಡುಗೊರೆಗಳನ್ನು ತೆಗೆದುಕೊಂಡು ಹೋಗಿದ್ದರು. ಇಬ್ಬರು ಸೇರಿ ಕೈಗಳಿಂದ ನೇಯ್ದ ಧುರ್ರಿಗಳು. "ಅವರು ಅವನ್ನು ತುಂಬಾ ಇಷ್ಟಪಟ್ಟರು," ಎಂದು ನೆನಪಿಸಿಕೊಳ್ಳುತ್ತಾರೆ.
*****
ಎಷ್ಟು ಗಂಟೆ ದುಡಿದರೂ ಈ ಮಹಿಳೆಯರಿಗೆ ಒಂದು ಧುರ್ರಿಗೆ ಸಿಗುವುದು ಕೇವಲ ತಲಾ 250 ರುಪಾಯಿ. “ನಾವು ಸಾಮಾನ್ಯವಾಗಿ ಒಂದು ಧುರ್ರಿಗೆ 1,100 ರೂಪಾಯಿ ಹೇಳುತ್ತೇವೆ. ಗ್ರಾಹಕರೇ ಸೂಟ್ [ನೂಲು] ತಂದು ಕೊಟ್ಟರೆ, ನಮ್ಮ ಕೆಲಸಕ್ಕೆ ನಾವು ಕೇವಲ 500 ರೂಪಾಯಿಗಳನ್ನು ತೆಗೆದುಕೊಳ್ಳುತ್ತೇವೆ,” ಎಂದು ಮಜಿದಾನ್ ವಿವರಿಸುತ್ತಾರೆ. “ನಾನು ನೇಯ್ಗೆಯ ವೃತ್ತಿಯನ್ನು ಆರಂಭಿಸಿದಾಗ ಒಂದು ಸಂಪೂರ್ಣ ಧುರ್ರಿಗೆ 20 ರೂಪಾಯಿ. ಈಗೆಲ್ಲಾ ಸಂಪಾದನೆ ಕಡಿಮೆಯಾಗುತ್ತಿದೆ,”ಎಂದು ಮಜಿದಾನ್ ನೆನಪಿಸಿಕೊಳ್ಳುತ್ತಾರೆ. ''ಊರಿನಲ್ಲಿ ಒಂದು ಲೀಟರ್ ಹಾಲಿಗೆ 60 ರುಪಾಯಿ ಆಗಿದೆ. ಒಂದು ತಿಂಗಳಲ್ಲಿ ಆಗುವ ನನ್ನ ಖರ್ಚುಗಳನ್ನು ಒಮ್ಮೆ ಯೋಚಿಸಿ,” ಎಂದು ಖರ್ಸೇದ್ ವಿಷಾದದಿಂದ ಹೇಳುತ್ತಾರೆ.
ತಮ್ಮ ಗಂಡಂದಿರಿಬ್ಬರಿಗೂ ಉದ್ಯೋಗ ಇಲ್ಲದೇ ಇದ್ದರಿಂದ ಮಜಿದಾನ್ ಮತ್ತು ಖರ್ಸೇದ್ ತಮ್ಮ ಮಕ್ಕಳನ್ನು ತಾವೇ ಕಷ್ಟಪಟ್ಟು ಬೆಳೆಸಿದರು. "ನಾನು ಜಾಟ್ ಸಿಖ್ ಮನೆಗಳಿಗೆ ಮನೆ ಕೆಲಸ ಮಾಡಲು ಹೋಗುತ್ತಿದ್ದೆ. ಅವರು ಮನೆಗೆ ತೆಗೆದುಕೊಂಡು ಹೋಗಲು ನಮಗೆ ಬೇಕಾದ ಸಾಮಾನುಗಳನ್ನು ಕೊಡುತ್ತಿದ್ದರು. ನಾನು ನನ್ನ ಮಕ್ಕಳಿಗೆ ಅದರಲ್ಲೇ ಊಟ ಮಾಡಿಕೊಡುತ್ತಿದ್ದೆ,” ಎಂದು ಖರ್ಸೇದ್ ಹೇಳುತ್ತಾರೆ. ತಮ್ಮ ಕಿರಿಯ ಮಗನ ಕುಟುಂಬದೊಂದಿಗೆ ವಾಸಿಸುವ ಮಜಿದಾನ್ ಮತ್ತು ಎಂಟು ಜನರು ಇರುವ ಕುಟುಂಬದೊಂದಿಗೆ ವಾಸಿಸುವ ಖರ್ಸೇದ್ ತಮ್ಮ ಆ ಕಷ್ಟದ ದಿನಗಳ ಬಗ್ಗೆ ಆಗಾಗ ಯೋಚಿಸುತ್ತಾರೆ.
ಮೂರು ವರ್ಷಗಳ ಹಿಂದೆ, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳ ನಡುವಿನ ಹತ್ತಿ ಕೊಯ್ಲು ಮಾಡುವ ಸಮಯದಲ್ಲಿ ಬಿಡುವಿಲ್ಲದೆ ಹತ್ತಿ ಕೊಯ್ಯುವ ಕೆಲಸ ಮಾಡುತ್ತಿದ್ದರು. ಹತ್ತಿಯನ್ನು ನೂಲುಗಳನ್ನಾಗಿ ಮಾಡಿ 40 ಕಿಲೋ ಹತ್ತಿಗೆ ದಿನಕ್ಕೆ 200 ರುಪಾಯಿ ಸಂಪಾದನೆ ಮಾಡುತ್ತಿದ್ದರು. ಇದು ಅವರಿಗೆ ಹೆಚ್ಚುವರಿ ಆದಾಯವನ್ನು ಕೊಡುತ್ತಿತ್ತು. "ಇತ್ತೀಚಿಗೆ ಹೆಚ್ಚಿನ ರೈತರು ಇದರ ಬದಲಿಗೆ ಭತ್ತದ ಕೃಷಿ ಮಾಡಲು ಶುರುಮಾಡಿದ್ದಾರೆ," ಎನ್ನುತ್ತಾರೆ ಮಜಿದಾನ್. ಈ ಬದಲಾವಣೆ ಅವರ ಜೀವನದ ಮೇಲೆ ಗಮನಾರ್ಹವಾದ ಪರಿಣಾಮ ಬೀರಿದೆ. ಸರ್ಕಾರಿ ದಾಖಲೆಗಳು ಪಂಜಾಬ್‌ನಲ್ಲಿ ಆಗಿರುವ ಹತ್ತಿ ಕೃಷಿಯ ತೀವ್ರ ಕುಸಿತವನ್ನು ತೋರಿಸುತ್ತವೆ . 2014-15 ರಲ್ಲಿ 420,000 ಹೆಕ್ಟೇರ್ ಇದ್ದ ಹತ್ತಿ ಉತ್ಪಾದನೆ 2022-23 ರಲ್ಲಿ 240,000 ಹೆಕ್ಟೇರ್‌ಗಳಿಗೆ ಇಳಿದಿದೆ.
ಮಾರ್ಚ್‌ನಲ್ಲಿ, ಮಜಿದಾನ್ ದಾರ ಮತ್ತು ನೂಲುಗಳನ್ನು ಸುತ್ತುವ ತಮ್ಮ ಚರಕಕ್ಕೆ ಮನಸಿಲ್ಲದ ಮನಸ್ಸಿನಲ್ಲಿ ಪೂರ್ಣ ವಿರಾಮವನ್ನು ನೀಡಿದರು. ಅದನ್ನುಈಗ ಶೆಡ್‌ನಲ್ಲಿ ಬಿಡಲಾಗಿದೆ. ಧುರ್ರಿಗಳಿಗಿದ್ದ ಬೇಡಿಕೆಯು ತೀವ್ರವಾಗಿ ಕುಸಿದಿದೆ. ಹಿಂದೆ ತಿಂಗಳಿಗೆ 10 ರಿಂದ 12 ತಯಾರಿಸುತ್ತಿದ್ದ ಇವರು, ಈಗ ಕೇವಲ ಎರಡು ಧುರ್ರಿಗಳನ್ನು ಮಾತ್ರ ಮಾಡುವಂತಾಗಿದೆ. ಅವರಿಗಿರುವ ಏಕೈಕ ಸ್ಥಿರ ತಿಂಗಳ ಆದಾಯವೆಂದರೆ ರಾಜ್ಯ ಸರ್ಕಾರದಿಂದ ಸಿಗುವ 1,500 ರೂಪಾಯಿ ವಿಧವಾ ಪಿಂಚಣಿ.


ಸಡಿಲವಾದ ನೂಲುಗಳಿಗೆ ಗಂಟುಗಳನ್ನು ಕಟ್ಟುವ ಮೂಲಕ ತಾವು ಕೈಯಿಂದ ನೇಯ್ದ ಧುರ್ರಿಗೆ ಅಂತಿಮ ಸ್ಪರ್ಶ ನೀಡುತ್ತಿರುವ ಮಜಿದಾನ್


ತಾವು ಮತ್ತು ಖರ್ಸೇದ್ ತಯಾರಿಸಿದ ಧುರ್ರಿಯನ್ನು (ಎಡ) ತೋರಿಸುತ್ತಿರುವ ಮಜಿದಾನ್. ತಮ್ಮ 10 ವರ್ಷ ಪ್ರಾಯದ ಮೊಮ್ಮಗ ಇಮ್ರಾನ್ ಖಾನ್ (ಬಲ) ಸಹಾಯದಿಂದ ಇವರು ಸೂಜಿಗೆ ದಾರವನ್ನು ತೂರಿಸುತ್ತಾರೆ. ಒಂದು ಗಂಟೆಗೂ ಹೆಚ್ಚು ಸಮಯ ಕೆಲಸ ಮಾಡಿ, ಖರ್ಸೇದ್ ಮತ್ತು ಮಜಿದಾನ್ ಸ್ವಲ್ಪ ಹೊತ್ತು ವಿರಾಮ ತೆಗೆದುಕೊಳ್ಳಲು ತಮ್ಮ ಕಾಲುಗಳನ್ನು ಚಾಚುತ್ತಾರೆ. ದೃಷ್ಟಿಯ ಸಮಸ್ಯೆ ಮತ್ತು ಕೀಲುಗಳು ನೋವು ಇದೆ ಎಂದು ಇಬ್ಬರೂ ಹೇಳುತ್ತಾರೆ
ಒಂದು ಗಂಟೆಗೂ ಹೆಚ್ಚು ಸಮಯ ಕೆಲಸ ಮಾಡಿ, ಖರ್ಸೇದ್ ಮತ್ತು ಮಜಿದಾನ್ ಸ್ವಲ್ಪ ಹೊತ್ತು ವಿರಾಮ ತೆಗೆದುಕೊಂಡು ತಮ್ಮ ಕಾಲುಗಳನ್ನು ಚಾಚುತ್ತಾರೆ. ಖರ್ಸೇದ್ ತಮ್ಮ ಬೆನ್ನು ನೋವಿನ ಬಗ್ಗೆ ಹೇಳುತ್ತಾರೆ. ಮಜಿದಾನ್ ತಮ್ಮ ಮೊಣಕಾಲುಗಳನ್ನು ಒತ್ತುತ್ತಾ, "ನನಗೆ ಇವತ್ತು ನಡೆಯಲು ಕಷ್ಟವಾಗಲಿದೆ. ನನ್ನ ಕೀಲುಗಳು ನೋಯುತ್ತಿವೆ," ಎಂದು ಹೇಳಿದರು. ಇಬ್ಬರೂ ತಮ್ಮ ದೃಷ್ಟಿ ದುರ್ಬಲವಾಗಿದೆ ಎಂದು ಹೇಳುತ್ತಾರೆ.
"ಬಂದಾ ಬನ್ ಕೆ ಕಾಮ್ ಕಿತಾ ಹೈ [ನಾನು ಗಂಡಸರಂತೆ ಕೆಲಸ ಮಾಡಿದ್ದೇನೆ] ಮತ್ತು ನನ್ನ ಈ ವಯಸ್ಸಿನಲ್ಲಿಯೂ ಅದನ್ನು ಮಾಡುತ್ತಿದ್ದೇನೆ," ಎಂದು ಹೇಳುವ ಮಜಿದಾನ್ ತಮ್ಮ ಸಣ್ಣ ಗಳಿಕೆಯಲ್ಲಿಯೇ ಇಡೀ ಕುಟುಂಬವನ್ನು ನಡೆಸುತ್ತಿದ್ದಾರೆ.
ಅವರ ವಯಸ್ಸು ಮತ್ತು ಆರೋಗ್ಯದ ಸಮಸ್ಯೆಗಳ ಹೊರತಾಗಿಯೂ, ಮಜಿದಾನ್ ತನ್ನ ಪಿಂಚಣಿ ಹಣ ಮತ್ತು ಧುರ್ರಿಗಳನ್ನು ತಯಾರಿಸಿ ಸಿಗುವ ಹಣದಿಂದ ಜೀವನ ನಡೆಸಬೇಕು. ಪ್ರತಿದಿನ ಬೆಳಿಗ್ಗೆ 7 ಗಂಟೆಗೆ ಎದ್ದು ಒಂದು ಮನೆಯಲ್ಲಿ ಅಡುಗೆ ಮಾಡಲು ಕೆಲವು ಕಿಲೋಮೀಟರ್ ನಡೆದುಕೊಂಡು ಹೋಗಿ ತಿಂಗಳಿಗೆ 2,000 ರುಪಾಯಿ ಸಂಪಾದನೆ ಮಾಡುತ್ತಾರೆ. ಮನೆ ಸಹಾಯಕರಾಗಿ ಕೆಲಸ ಮಾಡುವ ಇವರು ಮತ್ತು ಖರ್ಸೇದ್ ಗಂಟೆಗೆ 70 ರುಪಾಯಿ ಸಂಪಾದಿಸುತ್ತಾರೆ.
ತಮ್ಮ ಒತ್ತಡದ ದಿನಗಳ ಹೊರತಾಗಿಯೂ, ಅವರು ಧುರ್ರಿ ನೇಯುವ ಕೆಲಸಕ್ಕೆ ಸಮಯ ಮಾಡಿಕೊಳ್ಳುತ್ತಾರೆ. "ಪ್ರತಿದಿನ ನೇಯ್ಗೆ ಮಾಡಿದರೆ, ಒಂದು ವಾರದಲ್ಲಿ ಧುರ್ರಿಯನ್ನು ಮುಗಿಸಬಹುದು," ಎಂದು ಖರ್ಸೇದ್ ಹೇಳುತ್ತಾರೆ.
ಮಜಿದಾನ್ ನೇಯ್ಗೆ ಕೆಲಸವನ್ನು ಬಿಡಲು ಯೋಚಿಸುತ್ತಿದ್ದಾರೆ. “ಬಹುಶಃ ಇದನ್ನು ಮತ್ತು ಇನ್ನೊಂದು ದುರ್ರಿಯ ಕೆಲಸ ಮುಗಿದ ಮೇಲೆ ನಾನು ನಿಲ್ಲಿಸುತ್ತೇನೆ. ತುಂಬಾ ಗಂಟೆಗಳ ಕಾಲ ಕುಳಿತುಕೊಳ್ಳುವುದು ಕಷ್ಟವಾಗಿದೆ. ಇದರಿಂದ ನನಗೆ ಇಲ್ಲಿ ನೋವು ಶುರುವಾಗಿದೆ,” ಎಂದು ಕಳೆದ ವರ್ಷ ಮಾಡಿಸಿಕೊಂಡ ಪಿತ್ತಕೋಶದ ಶಸ್ತ್ರಚಿಕಿತ್ಸೆಯ ಹೊಲಿಗೆಗಳನ್ನು ತೋರಿಸುತ್ತಾ ಹೇಳುತ್ತಾರೆ. "ಎಷ್ಟು ವರ್ಷ ಬದುಕಬಹುದು - ಬಹುಶಃ ಒಂದೋ ಎರಡೋ - ನಾನು ಅದನ್ನು ಚೆನ್ನಾಗಿ ಬದುಕಲು ಬಯಸುತ್ತೇನೆ," ಎನ್ನುತ್ತಾರೆ ಅವರು.
ಮರುದಿನ ಅವರಿಗೆ ಕೆಲಸ ಬಿಡುವ ಆಲೋಚನೆಯೂ ಮರೆತುಹೋಗಿರುತ್ತದೆ. ಬಲ್ಬೀರ್ ಕೌರ್ ಎಂಬ ಎಂಬತ್ತರ ಪ್ರಾಯದ ಮಹಿಳೆ ಬೇರೆ ಊರಿನಿಂದ ಬಂದು ದುರ್ರಿ ತಯಾರಿಸಲು ಆರ್ಡರ್ ಕೊಡುತ್ತಾರೆ. “ಮಾಯ್ [ತಾಯಿ], ಧುರ್ರಿ ಅವರ ಮನೆಯಲ್ಲಿ ಬಳಸಲೇ ಅಥವಾ ಅವರ ಮಗಳಿಗೆ ಮದುವೆಯಲ್ಲಿ ಕೊಡಲೇ ಎಂದು ಆ ಮನೆಯವರನ್ನು ಕೇಳಿ,” ಎಂದು ಮಜಿದಾನ್ ಅವರು ಆ ವೃದ್ಧ ಮಹಿಳೆಗೆ ನೂರು ರೂಪಾಯಿಗಳನ್ನು ಕೊಡುತ್ತಾ ಹೇಳುತ್ತಾರೆ.
ಈ ವರದಿಯನ್ನು ಮೃಣಾಲಿನಿ ಮುಖರ್ಜಿ ಫೌಂಡೇಶನ್ (ಎಂಎಂಎಫ್) ನ ಫೆಲೋಶಿಪ್ ಅಡಿಯಲ್ಲಿ ತಯಾರಿಸಲಾಗಿದೆ.
ಅನುವಾದ: ಚರಣ್ ಐವರ್ನಾಡು