“ಮಿರ್ಚಿ ಮೇ ಆಗ್ ಲಗ್ ಗಯೀ [ಮೆಣಸು ಸುಟ್ಟಿದ್ದಾರೆ].”
1984ರ ಡಿಸೆಂಬರ್ 2 ರ ರಾತ್ರಿ, ಭೋಪಾಲ್‌ನ ನುಸ್ರತ್ ಜಹಾನ್ ಅವರಿಗೆ ಉಸಿರಾಡಲಾಗದೆ ನಿದ್ರೆಯಿಂದ ಎಚ್ಚರಗೊಂಡರು, ನೋವಿನಿಂದ ಉರಿಯುತ್ತಿದ್ದ ಅವರ ಕಣ್ಣುಗಳಲ್ಲಿ ನೀರು ತುಂಬಿತ್ತು. ಸ್ವಲ್ಪ ಹೊತ್ತಿನಲ್ಲಿಯೇ ಅವರ ಆರು ವರ್ಷದ ಮಗ ಅಳುತ್ತಿರುವುದು ಕೇಳಿಸಿತು. ಈ ಸದ್ದಿನಿಂದ ಅವರ ಪತಿ ಮುಹಮ್ಮದ್ ಶಫೀಕ್‌ರಿಗೆ ಎಚ್ಚರವಾಯಿತು.
“ಖಯಾಮತ್ ಕಾ ಮಂಜರ್ ಥಾ” [ಅದೊಂದು ಪ್ರಳಯದ ದೃಶ್ಯವಾಗಿತ್ತು],” ಎಂದು ನವಾಬ್ ಕಾಲೋನಿಯಲ್ಲಿರುವ ತಮ್ಮ ಮನೆಯಲ್ಲಿ ಕುಳಿತುಕೊಂಡು ಹೇಳುವ 70 ವರ್ಷ ಪ್ರಾಯದ ಶಫೀಕ್, ಇಂದಿಗೆ ಸರಿಯಾಗಿ ನಲ್ವತ್ತು ವರ್ಷಗಳ ಹಿಂದೆ ಮಧ್ಯ ಪ್ರದೇಶದ ರಾಜಧಾನಿ ನಗರದಲ್ಲಿ ನಡೆದ ಭೋಪಾಲ್ ಗ್ಯಾಸ್ ದುರಂತ (ಬಿಜಿಡಿ) ಎಂದು ಕರೆಯಲ್ಪಡುವ ಆ ಭಯಾನಕ ಘಟನೆಯ ನೆನಪು ಮಾಡಿಕೊಳ್ಳುತ್ತಾರೆ.
ಪೇಪರ್ ಮಿಲ್‌ನಲ್ಲಿ ದಿನಗೂಲಿ ನೌಕರನಾಗಿ ಕೆಲಸ ಮಾಡುವ ಶಫೀಕ್, ಈ ವಿಷಾನಿಲದಿಂದ ಬಾಧಿಸಲ್ಪಟ್ಟ ತಮ್ಮ ಮನೆಮಂದಿಗೆ ಚಿಕಿತ್ಸೆ ನೀಡುವುದರಲ್ಲೇ ಕೆಲವು ವರ್ಷಗಳನ್ನು ಹತಾಶವಾಗಿ ಕಳೆದಿದ್ದರು. ಅವರ ಮನೆಯ ನೀರಿನ ಏಕೈಕ ಮೂಲವಾಗಿದ್ದ ಬಾವಿಯೂ 18 ವರ್ಷಗಳ ಕಾಲ ಕಲುಷಿತವಾಗಿಯೇ ಇದ್ದರಿಂದ, ಆ ನೀರನ್ನು ಬಳಸಿ ಅವರೆಲ್ಲರ ಆರೋಗ್ಯ ಇನ್ನಷ್ಟು ಹದಗೆಟ್ಟಿತು. ಆ ನೀರಿನಿಂದಾಗಿ ಅವರಿಗೆ ಕಣ್ಣುಗಳಲ್ಲಿ ಉರಿಯೂತವಾಗಿತ್ತು, ಆದರೆ ಅವರ ಬಳಿ ಬೇರೆ ಯಾವುದೇ ನೀರಿನ ಮೂಲವಿರಲಿಲ್ಲ ಎಂದು ಅವರು ಹೇಳುತ್ತಾರೆ. 2012ರಲ್ಲಿಯೇ ಸಂಭವ ಟ್ರಸ್ಟ್ ಕ್ಲಿನಿಕ್ ಎಂಬ ಸಂಸ್ಥೆ ಈ ನೀರನ್ನು ಪರೀಕ್ಷಿಸಿ, ಅದರಲ್ಲಿ ಸೇರಿದ್ದ ವಿಷಕಾರಿ ಅಂಶಗಳನ್ನು ಪತ್ತೆ ಮಾಡಿತ್ತು. ನಂತರ ಈ ಪ್ರದೇಶದಲ್ಲಿದ್ದ ಬೋರ್‌ವೆಲ್‌ಗಳನ್ನು ರಾಜ್ಯ ಸರ್ಕಾರ ಮುಚ್ಚಿತು.
1984 ರ ರಾತ್ರಿ, ಶಫೀಕ್ ಅವರ ಮನೆಯಲ್ಲಿ ನೋವಿನ ಕೋಡಿಯನ್ನು ಹರಿಸಿದ ಆ ವಿಷಕಾರಿ ಅನಿಲ ಯೂನಿಯನ್ ಕಾರ್ಬೈಡ್ ಕಾರ್ಪೊರೇಷನ್ (ಯುಸಿಸಿ) ಎಂಬ ಬಹುರಾಷ್ಟ್ರೀಯ ಕಂಪನಿಯ ಒಡೆತನದ ಯೂನಿಯನ್ ಕಾರ್ಬೈಡ್ ಇಂಡಿಯಾ ಲಿಮಿಟೆಡ್ (ಯುಸಿಐಎಲ್) ಎಂಬ ಕಾರ್ಖಾನೆಯಿಂದ ಬಂದಿತ್ತು. ಡಿಸೆಂಬರ್ 2 ರ ರಾತ್ರಿ ಯುಸಿಐಎಲ್ ಕಾರ್ಖಾನೆಯಿಂದ ವಿಷಕಾರಿ ಮೀಥೈಲ್ ಐಸೊಸೈನೇಟ್ ಸೋರಿಕೆಯಾಗಿದ್ದು, ಇಡೀ ವಿಶ್ವದಲ್ಲಿಯೇ ನಡೆದ ಅತ್ಯಂತ ಭೀಕರ ಕೈಗಾರಿಕಾ ದುರಂತ.

ಸಂಭಾವನಾ ಟ್ರಸ್ಟ್ ಕ್ಲಿನಿಕ್‌ನ ಸದಸ್ಯರು ಮತ್ತು ಭೋಪಾಲ್‌ನ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ ನವಾಬ್ ಕಾಲೋನಿಯಲ್ಲಿರುವ ತಮ್ಮ ಮನೆಯಲ್ಲಿ ಮಹಮ್ಮದ್ ಶಫೀಕ್ (ಬಿಳಿ ಕುರ್ತಾ ಪೈಜಾಮ). ಶಫೀಕ್ ಅವರ ಕುಟುಂಬವು ಯೂನಿಯನ್ ಕಾರ್ಬೈಡ್ ಇಂಡಿಯಾ ಲಿಮಿಟೆಡ್ ಫ್ಯಾಕ್ಟರಿಯ ಸಮೀಪವೇ ವಾಸಿಸುತ್ತಿತ್ತು ಮತ್ತು ಡಿಸೆಂಬರ್ 1984 ರಲ್ಲಿ ನಡೆದ ವಿಷಾನಿಲ ಸೋರಿಕೆ ಅವರ ಮಗನ ಮೇಲೆ ಹೆಚ್ಚು ಪರಿಣಾಮ ಬೀರಿತ್ತು
"ಸತ್ತ ಮನುಷ್ಯರ ಸಂಖ್ಯೆ ಸುಮಾರು 2,500 ಎಂದು ಅಧಿಕೃತ ಮೂಲಗಳು ಹೇಳಿವೆ, ಆದರೆ ಬೇರೆ ಮೂಲಗಳು (ದೆಹಲಿ ಸೈನ್ಸ್ ಫೋರಂನ ವರದಿ) ಸಾವಿನ ಪ್ರಮಾಣ ಇದಕ್ಕಿಂತ ಕನಿಷ್ಠ ಎರಡು ಪಟ್ಟು ಹೆಚ್ಚಿರಬಹುದು ಎಂದು ಹೇಳುತ್ತದೆ" ಎಂದು ದಿ ಲೀಫ್ಲೆಟ್‌ನ ವರದಿ ಹೇಳುತ್ತದೆ.
ವಿಷಾನಿಲವು ಭೋಪಾಲ್ ನಗರದಾದ್ಯಂತ ಹರಡಿ, ಕಾರ್ಖಾನೆಯ ಸುತ್ತಮುತ್ತ ವಾಸಿಸುತ್ತಿದ್ದ ಶಫೀಕ್ ಅವರ ಮನೆಯವರಂತೆ ಅನೇಕರು ತೀವ್ರ ಹಾನಿಗೆ ಒಳಗಾದವರು. ನಗರದ 36 ವಾರ್ಡ್‌ಗಳಲ್ಲಿ ಸುಮಾರು ಆರು ಲಕ್ಷ ಜನರು ಈ ವಿಷಾನಿಲದಿಂದ ಕಂಗೆಟ್ಟಿದ್ದರು.
ಈ ಸಂದರ್ಭದಲ್ಲಿ ಆತಂಕಗೊಂಡಿದ್ದ ಶಫೀಕ್ ಅವರು ತಮ್ಮ ಮಗುವಿಗೆ ಚಿಕಿತ್ಸೆ ನೀಡಲು ಮೊದಲು ಮನೆಯಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿರುವ ಹಮೀದಿಯಾ ಆಸ್ಪತ್ರೆಗೆ ಹೋದರು.
"ಲಾಶೇ ಪಡಿ ಹುಯಿ ಥಿ ವಹಾನ್ ಪೆ [ಎಲ್ಲೆಲ್ಲೂ ಶವಗಳು ಬಿದ್ದಿದ್ದವು]," ಎಂದು ಅವರು ನೆನಪಿಸಿಕೊಳ್ಳುತ್ತಾರೆ. ನೂರಾರು ಜನರು ಚಿಕಿತ್ಸೆ ಪಡೆಯಲು ಧಾವಿಸಿ ಬಂದಾಗ, ವೈದ್ಯಕೀಯ ಸಿಬ್ಬಂದಿ ಏನು ಮಾಡಬೇಕೆಂದು ತೋಚದೆ ಪರದಾಡುತ್ತಿದ್ದರು.
“ಮಾಥೆ ಪೆ ನಾಮ್ ಲಿಖ್ ದೇತೆ ಥೆ [ಹಣೆಯ ಮೇಲೆ ಸತ್ತವರ ಹೆಸರು ಬರೆಯುತ್ತಿದ್ದರು],” ಎಂದು ಆಸ್ಪತ್ರೆಯಲ್ಲಿ ರಾಶಿ ಬೀಳುತ್ತಿದ್ದ ಶವಗಳನ್ನು ನೆನಪಿಸಿಕೊಳ್ಳುತ್ತಾ ಹೇಳುತ್ತಾರೆ.


ಎಡ: ಭೋಪಾಲ್‌ನಲ್ಲಿರುವ ಯೂನಿಯನ್ ಕಾರ್ಬೈಡ್ ಇಂಡಿಯಾ ಲಿಮಿಟೆಡ್ (ಯುಸಿಐಎಲ್) ಕಾರ್ಖಾನೆ. ಬಲ: ಸಮೀಪದಲ್ಲಿಯೇ ಇರುವ ಶಕ್ತಿ ನಗರದಿಂದ ಕಾಣುತ್ತಿರುವ ಕಾರ್ಖಾನೆ
ಆಸ್ಪತ್ರೆಯಲ್ಲಿದ್ದ ಶಫೀಕ್ ಅವರು ಊಟ ಮಾಡಲು ಇಮಾಮಿ ಗೇಟ್ ಬಳಿ ಹೋದಾಗ, ಅವನ ಕಣ್ಣಿಗೆ ವಿಚಿತ್ರವೊಂದು ಕಂಡುಬಂತು: ಅವರು ತಿನ್ನಲು ಆರ್ಡರ್ ಮಾಡಿದ್ದ ಅನ್ನ-ಬೇಳೆ ಸಾರು ಬಂತು, ಆದರೆ ಅದು ನೀಲಿ ಬಣ್ಣಕ್ಕೆ ತಿರುಗಿತ್ತು. "ರಾತ್ ಕಿ ದಾಲ್ ಹೈ, ಭಯ್ಯಾ [ಇದು ರಾತ್ರೆಯ ಬೇಳೆ ಸಾರು, ಅಣ್ಣಾ]." ಆ ವಿಷಾನಿಲ ಊಟದ ಬಣ್ಣವನ್ನೇ ಬದಲಿಸಿತ್ತು, ರುಚಿಯೂ ಹುಳಿ ಹುಳಿಯಾಗಿತ್ತು.
"ಯುಸಿಸಿ [ಯುನಿಯನ್ ಕಾರ್ಬೈಡ್ ಕಂಪನಿ] ಅಧಿಕಾರಿಗಳು ಮತ್ತು ಸರ್ಕಾರಿ ಅಧಿಕಾರಿಗಳು ಯುಸಿಐಎಲ್‌ನಲ್ಲಿ ಅತ್ಯಂತ ಅಪಾಯಕಾರಿಯಾದ ವಿಷಕಾರಿ ರಾಸಾಯನಿಕಗಳನ್ನು ಒಟ್ಟಾಗಿ ಶೇಖರಣೆ ಮಾಡಿ ಭೋಪಾಲ್‌ನಲ್ಲಿ ನಡೆಯಬಹುದಾದ ಸಂಭಾವ್ಯ ಅನಾಹುತದ ಬಗ್ಗೆ ಇದ್ದ ಮುನ್ನೆಚ್ಚೆರಿಕೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ ರೀತಿ ನಿಜಕ್ಕೂ ಆಘಾತಕಾರಿ,” ಎಂದು ಎನ್ ಡಿ ಜಯಪ್ರಕಾಶ್ ದಿ ಲೀಫ್ಲೆಟ್ ನಲ್ಲಿ ಬರೆಯುತ್ತಾರೆ. ಜಯಪ್ರಕಾಶ್ ಅವರು ದೆಹಲಿ ವಿಜ್ಞಾನ ವೇದಿಕೆಯ ಜಂಟಿ ಕಾರ್ಯದರ್ಶಿಯಾಗಿದ್ದು, ಆರಂಭದ ದಿನಗಳಿಂದಲೂ ಈ ಪ್ರಕರಣದ ಬೆನ್ನು ಹತ್ತಿದವರು.
ಭೋಪಾಲ್ ಅನಿಲ ದುರಂತದ ನಂತರ ದಶಕಗಳ ವರೆಗೆ ಕಾನೂನು ಹೋರಾಟಗಳು ಮುಂದುವರಿದವು. ಮುಖ್ಯವಾಗಿ ದುರಂತಕ್ಕೆ ಬಲಿಯಾದ ಸಂತ್ರಸ್ತರ ಕುಟುಂಬಗಳಿಗೆ ಪರಿಹಾರವನ್ನು ನೀಡುವಂತೆ ಕೋರಿ ಮತ್ತು ಪೀಡಿತರ ವೈದ್ಯಕೀಯ ದಾಖಲೆಗಳನ್ನು ಡಿಜಿಟಲೀಕರಣ ಮಾಡುವಂತೆ ಹೋರಾಟಗಳು ನಡೆಯುತ್ತಿವೆ. ಸದ್ಯ ಸಂಪೂರ್ಣವಾಗಿ ಯುಸಿಸಿಯ ಒಡೆತನವನ್ನು ಹೊಂದಿರುವ ಡೌ ಕೆಮಿಕಲ್ ಕಂಪನಿಯ ವಿರುದ್ಧ 1992 ರಲ್ಲಿ, ಮತ್ತು 2010 ರಲ್ಲಿ ಯುಸಿಐಎಲ್ ಹಾಗೂ ಅದರ ಅಧಿಕಾರಿಗಳ ವಿರುದ್ಧ - ಎರಡೂ ಪ್ರಕರಣಗಳು ಭೋಪಾಲ್ ಜಿಲ್ಲಾ ನ್ಯಾಯಾಲಯದಲ್ಲಿ ಇನ್ನೂ ವಿಚಾರಣೆಯಲ್ಲಿ ಬಾಕಿ ಇವೆ ಎಂದು ಜಯಪ್ರಕಾಶ್ ಹೇಳುತ್ತಾರೆ.


ಎಡ ಮತ್ತು ಬಲ: ಜರ್ಮನ್ ಹತ್ಯಾಕಾಂಡದಲ್ಲಿ ಬದುಕುಳಿದ, ಡಚ್ ಶಿಲ್ಪಿ ರುತ್ ವಾಟರ್‌ಮ್ಯಾನ್ 1985 ರಲ್ಲಿ ಕಾರ್ಖಾನೆಯ ಆವರಣದ ಹೊರಗೆ ರಚಿಸಿದ ತಾಯಿ ಮತ್ತು ಮಗುವಿನ ಪ್ರತಿಮೆ. ಇದು ಯೂನಿಯನ್ ಕಾರ್ಬೈಡ್ ಕಾರ್ಖಾನೆಯ ಹೊರಗೆ ಸ್ಥಾಪಿಸಲ್ಪಟ್ಟ ಮೊದಲ ಸಾರ್ವಜನಿಕ ಸ್ಮಾರಕ. ಪ್ರತಿಮೆಯಲ್ಲಿ 'ನೋ ಮೋರ್ ಭೋಪಾಲ್, ನೋ ಮೋರ್ ಹಿರೋಷಿಮಾ' ಎಂದು ಬರೆಯಲಾಗಿದೆ


ಎಡ: ಕಾರ್ಖಾನೆಯ ಬಳಿ ರಚಿಸಲಾಗಿರುವ ಭಿತ್ತಿಚಿತ್ರ. ಬಲ: ಈ ಪ್ರತಿಮೆಯು ಕಾರ್ಖಾನೆಯ ಗಡಿ ಗೋಡೆಗಳಿಗೆ ಅಡ್ಡಲಾಗಿ ಸ್ಥಾಪಿಸಲಾಗಿದೆ
2010ರಲ್ಲಿ ಈ ದುರಂತದಲ್ಲಿ ಬದುಕುಳಿದವರು ಭೋಪಾಲ್‌ನಿಂದ ದೆಹಲಿ ವರೆಗೆ ನಡೆಸಿದ ದಿಲ್ಲಿ ಚಲೋ ಆಂದೋಲನದ ಪಾದಯಾತ್ರೆಯಲ್ಲಿ ಶಫೀಕ್ ಕೂಡ ಭಾಗವಹಿಸಿದ್ದರು.
"ಇಲಾಜ್ [ಚಿಕಿತ್ಸೆ], ಮುಫ್ಜಾ [ಪರಿಹಾರ] ಔರ್ ಸಾಫ್ ಪಾನಿ ಕೇ ಲಿಯೇ ಥಾ [ಮತ್ತು ಶುದ್ಧ ನೀರಿಗಾಗಿ]," ಈ ಪಾದಯಾತ್ರೆ ನಡೆಸಿದ್ದಾಗಿ ಅವರು ಹೇಳುತ್ತಾರೆ. ಇವರೆಲ್ಲರೂ ರಾಷ್ಟ್ರ ರಾಜಧಾನಿಯ ಜಂತರ್ ಮಂತರ್‌ನಲ್ಲಿ 38 ದಿನಗಳ ಕಾಲ ಧರಣಿ ಕೂತು, ಪ್ರಧಾನಿ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿ ಪೊಲೀಸರಿಂದ ಬಂಧಿತರಾದರು.
“ಸಂತ್ರಸ್ತರು ಮತ್ತು ಅವರ ಕುಟುಂಬಗಳು ಮುಖ್ಯವಾಗಿ ಎರಡು ಪ್ರಕರಣಗಳಲ್ಲಿ ಹೋರಾಟ ನಡೆಸುತ್ತಿದ್ದಾರೆ. ಇದರಲ್ಲಿ ಒಂದು ಪ್ರಕರಣ ಭಾರತದ ಸುಪ್ರೀಂ ಕೋರ್ಟ್‌ನಲ್ಲಿ (ಎಸ್‌ಸಿ) ಮತ್ತು ಇನ್ನೊಂದು ಜಬಲ್‌ಪುರದ ಮಧ್ಯಪ್ರದೇಶ ಹೈಕೋರ್ಟ್‌ನಲ್ಲಿದೆ," ಎಂದು ಭೋಪಾಲ್ ಗ್ಯಾಸ್ ಪೀಡಿತ್ ಸಂಘರ್ಷ್ ಸಹಯೋಗ್ ಸಮಿತಿಯ (ಭೋಪಾಲ್ ಗ್ಯಾಸ್ ದುರಂತ ಸಂತ್ರಸ್ತರಿಗೆ ಬೆಂಬಲವಾಗಿ ನಿಲ್ಲುವ ಒಕ್ಕೂಟ) ಸಹ-ಸಂಚಾಲಕ ಎನ್.ಡಿ. ಜಯಪ್ರಕಾಶ್ ಹೇಳುತ್ತಾರೆ.
*****
"ಪೇಡ್ ಕಾಲೇ ಹೋ ಗಯೇ ಥೇ, ಪತ್ತೇ ಜೋ ಹರೇ ಥೇ, ನೀಲೇ ಹೋ ಗಯೇ, ಧೂವಾ ಥಾ ಹರ್ ತರಫ್ [ಮರಗಳು ಕಪ್ಪಾಗಿದ್ದವು, ಹಸಿರು ಎಲೆಗಳು ನೀಲಿ ಬಣ್ಣಕ್ಕೆ ತಿರುಗಿದ್ದವು, ಎಲ್ಲೆಡೆ ಹೊಗೆ ತುಂಬಿತ್ತು]," ಎಂದು ಇಡೀ ನಗರ ಮಸಣವಾಗಿ ಬದಲಾದುದನ್ನು ನೆನಪಿಸಿಕೊಳ್ಳುತ್ತಾರೆ ತಾಹಿರಾ ಬೇಗಂ.
"ಅವರು [ನನ್ನ ತಂದೆ] ಮನೆಯ ಜಗುಲಿಯಲ್ಲಿ ಮಲಗಿದ್ದರು. ಖರಾಬ್ ಹವಾ [ಕೆಟ್ಟ ಗಾಳಿ] ಬೀಸಲು ಆರಂಭವಾಗಿ, ಕೆಮ್ಮುತ್ತಾ ನಿದ್ದೆಯಿಂದ ಎಚ್ಚರಗೊಂಡರು. ಆಮೇಲೆ ಅವರನ್ನು ಹಮೀದಿಯಾ ಆಸ್ಪತ್ರೆಗೆ ಕರೆದುಕೊಂಡು ಹೋದೆವು," ಎಂದು ಅವರು ಆ ಕರಾಳ ರಾತ್ರಿಯ ನೆನಪು ಮಾಡಿಕೊಳ್ಳುತ್ತಾರೆ. ಮೂರು ದಿನಗಳ ನಂತರ ಅವರನ್ನು ಡಿಸ್ಚಾರ್ಜ್ ಮಾಡಿದರೂ, "ಉಸಿರಾಟದ ಸಮಸ್ಯೆ ಮಾತ್ರ ಸ್ವಲ್ಪವೂ ಹೋಗಲಿಲ್ಲ, ಮೂರು ತಿಂಗಳೊಳಗೆ ಅವರು ನಿಧನರಾದರು," ಎಂದು ತಾಹಿರಾ ತಮ್ಮ ಮಾತನ್ನು ಮುಂದುವರಿಸುತ್ತಾರೆ. ಇವರ ಕುಟುಂಬಕ್ಕೆ 50,000 ರುಪಾಯಿ ಪರಿಹಾರ ಸಿಕ್ಕಿದರೂ, ನ್ಯಾಯಾಲಯದಲ್ಲಿ ನಡೆಯುತ್ತಿರುವ ಕಾನೂನು ಹೋರಾಟದ ಬಗ್ಗೆ ಇವರಿಗೆ ತಿಳಿದಿಲ್ಲ.


ಎಡ: ತಾಹಿರಾ ಬೇಗಂ (ತಲೆಗೆ ಹಸಿರು ನೀಲಿ ಬಣ್ಣದ ಬಟ್ಟೆ ಧರಿಸಿರುವವರು) ಭೋಪಾಲ್ ಅನಿಲ ದುರಂತದಲ್ಲಿ ತಮ್ಮ ತಂದೆಯನ್ನು ಕಳೆದುಕೊಂಡರು. ಇವರು 1985 ರಿಂದ ಶಕ್ತಿ ನಗರದ ಅಂಗನವಾಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಬಲ: ಭೋಪಾಲ್‌ನ ಎಪಿಯು ವಿದ್ಯಾರ್ಥಿಗಳು ತಯಾರಿಸಿರುವ ಕಾಲೋನಿಯ ನಕ್ಷೆ ಈ ಪ್ರದೇಶದ ನಿವಾಸಿಗಳ ಮೇಲೆ ಅನಿಲ ದುರಂತ ಬೀರಿದ ಪ್ರಭಾವವನ್ನು ಎತ್ತಿ ತೋರಿಸುತ್ತದೆ
ಈ ದುರಂತದಲ್ಲಿ ಮಡಿದವರನ್ನು ಭೋಪಾಲ್‌ನ ಜನರು ಸಾಮೂಹಿಕವಾಗಿ ಸಮಾಧಿ ಮಾಡಿದರು. ಅಂತ ಒಂದು ಸಮಾಧಿಯಲ್ಲಿ ತಾಹಿರಾ ಅವರ ತಂದೆಯ ಚಿಕ್ಕಮ್ಮ ಇನ್ನೂ ಜೀವಂತವಾಗಿರುವುದು ಕಂಡುಬಂದಿತ್ತು. ಆಗ "ನಮ್ಮ ಸಂಬಂಧಿಕರೊಬ್ಬರು ಅವರನ್ನು ಹೊರಗೆಳೆದು ತೆಗೆದರು," ಎಂದು ಆ ಘಟನೆಯನ್ನು ಅವರು ನೆನಪಿಸಿಕೊಳ್ಳುತ್ತಾರೆ.
ತಾಹಿರಾ ಯುಸಿಐಎಲ್ ಕಾರ್ಖಾನೆಯಿಂದ ಸ್ವಲ್ಪ ದೂರದಲ್ಲಿರುವ ಶಕ್ತಿನಗರದ ಅಂಗನವಾಡಿ ಕೇಂದ್ರದಲ್ಲಿ ಸುಮಾರು 40 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ತಮ್ಮ ತಂದೆಯನ್ನು ಕಳೆದುಕೊಂಡ ಒಂದು ವರ್ಷದ ಬಳಿಕ ಅವರು ಇಲ್ಲಿ ಕೆಲಸಕ್ಕೆ ಸೇರಿಕೊಂಡರು.
ಅವರ ತಂದೆಯ ಅಂತಿಮ ಸಂಸ್ಕಾರದ ನಂತರ ಅವರ ಕುಟುಂಬ ಝಾನ್ಸಿಗೆ ತೆರಳಿತು. 25 ದಿನಗಳ ನಂತರ ವಾಪಾಸ್ ಬಂದಾಗ, ತಾಹಿರಾ ಹೇಳುತ್ತಾರೆ, "ಸಿರ್ಫ್ ಮುರ್ಗಿಯಾ ಬಾಕಿ ಥಿ, ಬಾಕಿ ಜಾನ್ವರ್ ಸಬ್ ಮರ್ ಗಯೇ ಥೆ [ಕೋಳಿ ಮಾತ್ರ ಬದುಕುಳಿದಿತ್ತು, ಬೇರೆ ಎಲ್ಲಾ ಪ್ರಾಣಿಗಳು ಸತ್ತುಹೋಗಿದ್ದವು]."
ಕವರ್ ಫೋಟೋ ವಿನ್ಯಾಸ: ಸ್ಮಿತಾ ಖಾಟೊರ್
ಈ ವರದಿಗೆ ಸಹಕಾರವನ್ನು ನೀಡಿದ ಭೋಪಾಲ್‌ನ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಪ್ರೊ. ಸೀಮಾ ಶರ್ಮಾ ಮತ್ತು ಪ್ರೊ. ಮೋಹಿತ್ ಗಾಂಧಿ ಅವರಿಗೆ ಪರಿಯ ವತಿಯಿಂದ ಧನ್ಯವಾದಗಳು.
ಕನ್ನಡ ಅನುವಾದ: ಚರಣ್ ಐವರ್ನಾಡು