ನನ್ನ ಜನರ ಸಾವಿನ ಕತೆಯನ್ನು ಬರೆಯಲು ಆರಂಭಿಸುವಾಗ, ಪ್ರತಿ ಬಾರಿಯೂ ನನ್ನ ಮನಸ್ಸು ಕೊನೆಯುಸಿರು ಬಿಟ್ಟು ಶವವಾಗುವ ಅವರ ದೇಹದಂತೆ ಖಾಲಿಯಾಗುತ್ತದೆ.
ನಮ್ಮ ಸುತ್ತ ಇರುವ ಪ್ರಪಂಚ ತುಂಬಾ ಮುಂದೆ ಹೋಗಿದೆ, ಆದರೆ ನಮ್ಮ ಸಮಾಜ ಮಾತ್ರ ಕೈಯಿಂದ ಮಲ ಎತ್ತುವವರ ಪ್ರಾಣದ ಬಗ್ಗೆ ಇನ್ನೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಇವರ ಸಾವುಗಳನ್ನು ಸರ್ಕಾರ ನಿರ್ಲಕ್ಷಿಸುತ್ತಲೇ ಬಂದಿದೆ. ಈ ವರ್ಷ ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ರಾಮದಾಸ್ ಅಠಾವಳೆಯವರು, 2019-2023ರ ನಡುವೆ ಅಪಾಯಕಾರಿ ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್‌ಗಳನ್ನು ಸ್ವಚ್ಛ ಮಾಡಲು ಹೋಗಿ 377ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ಡೇಟಾ ಸಹಿತ ಉತ್ತರಿಸಿದ್ದರು.
ಕಳೆದ ಏಳು ವರ್ಷಗಳಲ್ಲಿ ಲೆಕ್ಕವಿಲ್ಲದಷ್ಟು ಜನರು ಮ್ಯಾನ್‌ಹೋಲ್‌ಗಳಲ್ಲಿ ಸತ್ತಿರುವುದಕ್ಕೆ ನಾನು ವೈಯಕ್ತಿಕವಾಗಿ ಸಾಕ್ಷಿಯಾಗಿದ್ದೇನೆ. ಚೆನ್ನೈ ಜಿಲ್ಲೆಯ ಆವಡಿ ಒಂದರಲ್ಲಿಯೇ 2022ರಿಂದ 12 ಜನ ಮ್ಯಾನ್‌ಹೋಲ್‌ಗಳಲ್ಲಿ ಮರಣ ಹೊಂದಿದ್ದಾರೆ.
ಆಗಸ್ಟ್ 11 ರಂದು ಗುತ್ತಿಗೆ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ 25 ವರ್ಷ ಪ್ರಾಯದ ಆವಡಿ ನಿವಾಸಿ, ಅರುಂಧತಿಯಾರ್ ಸಮುದಾಯದ ಹರಿ ಎಂಬವರು ಒಳಚರಂಡಿ ಕಾಲುವೆಯನ್ನು ಸ್ವಚ್ಛಗೊಳಿಸಲು ಹೋಗಿ ನೀರಿನಲ್ಲಿ ಮುಳುಗಿ ಮರಣ ಹೊಂದಿದರು.
ಇದಾಗಿ ಹನ್ನೆರಡು ದಿನಗಳ ನಂತರ ನಾನು ಹರಿ ಅಣ್ಣನ ಸಾವಿನ ವರದಿ ಮಾಡಲು ಅವರ ಮನೆಗೆ ಹೋಗಿದ್ದೆ. ಅವರ ಶವ ಮನೆಯ ಫ್ರೀಜರ್ ಬಾಕ್ಸ್‌ನಲ್ಲಿ ಬಿದ್ದಿರುವುದನ್ನು ನಾನು ನೋಡಿದೆ. ವಿಧವೆಯೊಬ್ಬಳು ಮಾಡಬೇಕಾದ ಎಲ್ಲಾ ವಿಧಿವಿಧಾನಗಳನ್ನು ಮಾಡುವಂತೆ ಹರಿಯವರ ಪತ್ನಿ ತಮಿಳ್ ಸೆಲ್ವಿಯವರನ್ನು ಅವರ ಕುಟುಂಬ ಪರಿಪರಿಯಾಗಿ ಕೇಳಿಕೊಳ್ಳುತ್ತಿತ್ತು. ಅವರ ಅಕ್ಕಪಕ್ಕದ ಮನೆಗಳಲ್ಲಿ ವಾಸಿಸುವ ಸಂಬಂಧಿಕರು ತಮಿಳ್ ಸಲ್ವಿಯವರ ಕತ್ತಿನಲ್ಲಿರುವ ತಾಳಿಯನ್ನು ಕಡಿಯುವ ಮೊದಲು ಅವರ ಮೇಲೆ ಅರಿಶಿನವನ್ನು ಹಚ್ಚಿ ಸ್ನಾನ ಮಾಡಿಸಿದರು. ಇಡೀ ಆಚರಣೆಯುದ್ದಕ್ಕೂ ಅವರು ಗಂಭೀರ ಮತ್ತು ಮೌನವಾಗಿದ್ದರು.

ತಾವು ಮಾಡುವ ಕೈಯಿಂದ ಮಲ ಎತ್ತುವ ಉದ್ಯೋಗದಿಂದಾಗಿ ಹರಿಯವರು ಪ್ರಾಣ ಕಳೆದುಕೊಂಡರು. ಅವರು ವಿಶೇಷ ಚೇತನರಾಗಿರುವ ತಮಿಳ್ ಸೆಲ್ವಿಯವರನ್ನು ಪ್ರೀತಿಸಿ ಮದುವೆಯಾಗಿದ್ದರು. ತಮಿಳ್ ಸೆಲ್ವಿ ಮತ್ತು ಅವರ ಮಗಳು ಹರಿಯವರ ಶವದ ಮುಂದೆ ಕಣ್ಣೀರಿಡುತ್ತಿದ್ದಾರೆ


ಎಡ: ದೀಪಾ ಅಕ್ಕನವರ ಪತಿ ಗೋಪಿಯವರೂ ಮರಣ ಹೊಂದಿದ್ದಾರೆ. ದೀಪಾ ಪತಿಯ ಮೇಲಿನ ಪ್ರೀತಿಯನ್ನು ತೋರಿಸಲು ಅವರ ಹೆಸರನ್ನು ಬಲಗೈಯಲ್ಲಿ ಹಚ್ಚೆಹಾಕಿಸಿಕೊಂಡಿದ್ದಾರೆ. ಬಲ: ಆಗಸ್ಟ್ 20 ರಂದು ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಆಚರಿಸುವ ಕೆಲವೇ ದಿನಗಳಿರುವಾಗಲೇ ಗೋಪಿಯವರು 2024 ರ ಆಗಸ್ಟ್ 11 ರಂದು ನಿಧನರಾದರು. ಆಗಸ್ಟ್ 30 ರಂದು ಅವರ ಮಗಳ (ಫೋಟೋದಲ್ಲಿರುವ ಮಗು) ಜನ್ಮದಿನವೂ ಇತ್ತು
ತಮಿಳ್ ಸೆಲ್ವಿಯವರು ತಮ್ಮ ಬಟ್ಟೆ ಬದಲಾಯಿಸಲು ಮತ್ತೊಂದು ಕೋಣೆಗೆ ಹೋದಾಗ, ಇಡೀ ಸ್ಥಳದಲ್ಲಿ ಗಾಢ ಮೌನ ಆವರಿಸಿತ್ತು. ಕೆಂಪು ಇಟ್ಟಿಗೆಗಳಿಂದ ಕಟ್ಟಿದ್ದ ಅವರ ಮನೆಗೆ ಸಿಮೆಂಟ್ ಗಾರೆಯನ್ನೂ ಹಾಕಲಾಗಿಲ್ಲ. ಪ್ರತಿಯೊಂದೂ ಇಟ್ಟಿಗೆಯೂ ಸವೆದು ಉದುರಿ ಹೋಗುವಂತಾಗಿ ಮನೆ ಕುಸಿಯುವ ಹಂತದಲ್ಲಿತ್ತು.
ತಮಿಳ್ ಸೆಲ್ವಿಯಕ್ಕ ತಮ್ಮ ಸೀರೆ ಬದಲಿಸಿ ಜೋರಾಗಿ ಕಿರುಚುತ್ತಾ ಫ್ರೀಜರ್ ಬಾಕ್ಸ್ ಕಡೆ ಓಡಿ ಬಂದು, ಅದರ ಪಕ್ಕ ಕೂತು ಜೋರಾಗಿ ಅಳತೊಡಗಿದರು. ಅವರ ಅಳುವಿಗೆ ನೆರೆದವರೆಲ್ಲಾ ಮೌನವಾದರು, ಅಳು ಕೋಣೆಯ ತುಂಬಾ ತುಂಬಿತು.
“ಅಯ್ಯೋ ಬಂಗಾರ! ಏಳು! ಎದ್ದು ನನ್ನನ್ನೊಮ್ಮೆ ನೋಡು, ಮಾಮಾ [ಪ್ರೀತಿಯಿಂದ ಕರೆಯುವುದು]. ನಂಗೆ ಸೀರೆ ಉಡಿಸ್ತಾ ಇದ್ದಾರೆ. ನಾನು ಸೀರೆ ಉಟ್ಟರೆ ನಿಂಗೆ ಇಷ್ಟ ಆಗಲ್ಲ ಅಲ್ವಾ? ಏಳು, ನಂಗೆ ಒತ್ತಾಯ ಮಾಡಬೇಡಿ ಅಂತ ಅವರಿಗೆ ಹೇಳು.”
ಎದೆ ಬಿರಿಯುವ ಅವರ ಮಾತುಗಳು ಈಗಲೂ ನನ್ನೊಳಗೆ ಗುನುಗುಡುತ್ತಿವೆ. ತಮಿಳ್ ಸೆಲ್ವಿಯಕ್ಕ ತಮ್ಮ ಒಂದು ಕೈಯನ್ನು ಕಳೆದುಕೊಂಡಿದ್ದಾರೆ. ಸೀರೆಯ ಸೆರಗನ್ನು ತಮ್ಮ ಭುಜದ ಮೇಲೆ ಹಾಕಿ ಪಿನ್ ಮಾಡುವುದೂ ಅವರಿಗೆ ಕಷ್ಟದ ಕೆಲಸ. ಹಾಗಾಗಿ ಅವರು ಸೀರೆಯನ್ನು ಉಡುತ್ತಿರಲಿಲ್ಲ. ಅಂತಹ ಸೆಲ್ವಿಯಕ್ಕನ ಅಳು ನನ್ನನ್ನು ದಿನವೂ ಕಾಡುತ್ತಲೇ ಇರುತ್ತದೆ.
ನಾನು ನೋಡಿದ ಪ್ರತಿಯೊಂದು ಸಾವೂ ನನ್ನೊಳಗೆ ಜೀವಂತವಾಗಿ ಉಳಿದಿದೆ.
ಪ್ರತಿಯೊಂದು ಮ್ಯಾನ್‌ಹೋಲ್ ಸಾವಿನ ಹಿಂದೆ ಅನೇಕ ಕಥೆಗಳು ಅಡಗಿವೆ. ಆವಡಿಯಲ್ಲಿ ಇತ್ತೀಚೆಗೆ ಮ್ಯಾನ್‌ಹೋಲ್‌ಗೆ ಇಳಿದು ಕೆಲಸ ಮಾಡುವಾಗ ಸತ್ತಿರುವ ಗೋಪಿಯವರ ಪತ್ನಿ, 22 ವರ್ಷ ಪ್ರಾಯದ ದೀಪಾ, ತಮಗೆ ಸಿಕ್ಕಿದ 10 ಲಕ್ಷ ರೂಪಾಯಿ ಪರಿಹಾರ ಹಣದಿಂದ ತಮ್ಮ ಕುಟುಂಬದ ಸಂತೋಷವನ್ನು ಮತ್ತೆ ತಂದುಕೊಡಲು ಸಾಧ್ಯವೇ ಎಂದು ಕೇಳುತ್ತಾರೆ. "ಆಗಸ್ಟ್ 20 ನಮ್ಮ ಮದುವೆಯ ದಿನ, ಆಗಸ್ಟ್ 30 ರಂದು ನಮ್ಮ ಮಗಳ ಜನ್ಮದಿನ ಇತ್ತು, ಅವರು ಅದೇ ತಿಂಗಳು ನಮ್ಮನ್ನು ಬಿಟ್ಟುಹೋದರು,” ಎಂದು ನೋವಿನಿಂದ ಅವರು ಹೇಳುತ್ತಾರೆ. ಈ ಹಣದಿಂದ ಅವರಿಗೆ ಇರುವ ಹಣದ ಸಮಸ್ಯೆಗಳೂ ತೀರುವುದಿಲ್ಲ.


ಎಡಭಾಗ: ಗೋಪಿಯವರ ಶವವನ್ನು ಸ್ಮಶಾನಕ್ಕೆ ತೆಗೆದುಕೊಂಡು ಹೋಗುವ ಮೊದಲು ಕುಟುಂಬಸ್ಥರು ಬೀದಿಯಲ್ಲಿ ಒಣ ಎಲೆಗೆ ಬೆಂಕಿ ಹಾಕುತ್ತಾರೆ. ಬಲ: ಶವ ಸಂಸ್ಕಾರದ ಸಂದರ್ಭದಲ್ಲಿ ನೆಲದ ಮೇಲೆ ಹೂವುಗಳನ್ನು ಹಾಕುತ್ತಾರೆ

ಗೋಪಿಯವರ ಶವವನ್ನು ಐಸ್ ಬಾಕ್ಸ್ ನಲ್ಲಿ ಇಡಲಾಗುತ್ತಿದೆ. ಮಲಹೊರುವ ಪದ್ಧತಿಯನ್ನು ನಿಷೇಧಿಸುವ 2013 ರ ಕಾನೂನು ಇದ್ದರೂ ಈ ಪಿಡುಗು ಇಂದಿಗೂ ಮುಂದುವರೆದಿದೆ. ಅಧಿಕಾರಿಗಳು ಮ್ಯಾನ್‌ಹೋಲ್‌ಗಳಿಗೆ ಇಳಿಯುವಂತೆ ತಮ್ಮನ್ನು ಒತ್ತಾಯಿಸುತ್ತಾರೆ, ಇದಕ್ಕೆ ಒಪ್ಪದಿದ್ದರೆ ಸಂಬಳ ಕೊಡುವುದಿಲ್ಲ ಎಂದು ಬೆದರಿಕೆ ಹಾಕುತ್ತಾರೆ ಎಂದು ಕಾರ್ಮಿಕರು ಹೇಳುತ್ತಾರೆ

ತಮ್ಮ ಪತಿ ಗೋಪಿಯವರ ಶವವನ್ನು ಹಿಡಿದುಕೊಂಡಿರುವ ದೀಪಾ ಅಕ್ಕ, ಶವವನ್ನು ಹೊತ್ತುಕೊಂಡು ಹೋಗಲೂ ಬಿಡುತ್ತಿರಲಿಲ್ಲ
ಮ್ಯಾನ್‌ಹೋಲ್‌ನಲ್ಲಿ ಸತ್ತವರ ಮನೆಯ ಮಹಿಳೆಯರು ಮತ್ತು ಮಕ್ಕಳನ್ನು ಹೆಚ್ಚಾಗಿ ಬಲಿಪಶುಗಳೆಂದು ಪರಿಗಣಿಸಲಾಗುವುದಿಲ್ಲ. ವಿಲ್ಲುಪುರಂ ಜಿಲ್ಲೆಯ ಮಾಡಂಪಟ್ಟು ಗ್ರಾಮದಲ್ಲಿ, ಅನುಸೂಯ ಅಕ್ಕನ ಗಂಡ ಮಾರಿಯವರು ಮ್ಯಾನ್‌ಹೋಲ್‌ನಲ್ಲಿ ಸಾವನ್ನಪ್ಪಿದಾಗ, ಅವರು ಎಂಟು ತಿಂಗಳ ಗರ್ಭಿಣಿಯಾಗಿದ್ದರಿಂದ ಅವರಿಗೆ ಅಳುವುದಕ್ಕೂ ಸಾಧ್ಯವಾಗಲಿಲ್ಲ. ಈ ದಂಪತಿಗೆ ಆಗಾಗಲೇ ಮೂರು ಹೆಣ್ಣು ಮಕ್ಕಳಿದ್ದರು; ಮೊದಲ ಇಬ್ಬರು ಹೆಣ್ಣುಮಕ್ಕಳು ಅಳುತ್ತಿದ್ದರು, ಮೂರನೇ ಮಗಳು ಪೂರ್ವ ತಮಿಳುನಾಡಿನ ಮೂಲೆಯಲ್ಲಿರುವ ಅವರ ಮನೆಯ ಸುತ್ತಮುತ್ತ ಓಡಾಡುತ್ತಿದ್ದಳು.
ಸರ್ಕಾರದ ಪರಿಹಾರದ ಹಣದಲ್ಲಿ ರಕ್ತದ ಕಲೆಯಿದೆ. "ಈ ಹಣವನ್ನು ಖರ್ಚು ಮಾಡಲು ನಂಗೆ ಆಗುತ್ತಿಲ್ಲ. ಇದನ್ನು ಖರ್ಚು ಮಾಡಿದರೆ ನನ್ನ ಗಂಡನ ರಕ್ತವನ್ನು ಕುಡಿದಂತೆ ನಂಗೆ ಅನ್ನಿಸುತ್ತದೆ,” ಎಂದು ಅನುಸೂಯ ಅಕ್ಕ ಹೇಳುತ್ತಾರೆ.
ತಮಿಳುನಾಡಿನ ಕರೂರ್ ಜಿಲ್ಲೆಯಲ್ಲಿ ಮೃತಪಟ್ಟ ಕೈಯಿಂದ ಮಲ ಎತ್ತುವ ಕಾರ್ಮಿಕ ಬಾಲಕೃಷ್ಣನ್ ಅವರ ಕುಟುಂಬವನ್ನು ನಾನು ಸಂಪರ್ಕಿಸಿದಾಗ, ಅವರ ಪತ್ನಿ ಕೂಡ ತೀವ್ರ ಖಿನ್ನತೆಯಿಂದ ಬಳಲುತ್ತಿರುವುದನ್ನು ನಾನು ಗಮನಿಸಿದೆ. ಕೆಲಸ ಮಾಡುವಾಗ ಆಗಾಗ ತಾವು ತಮ್ಮ ಸುತ್ತಲಿನ ವಾತಾವರಣವನ್ನು ಮರೆತುಬಿಡುವುದಾಗಿ ಅವರು ಹೇಳಿದರು. ತಮ್ಮ ಈ ಪರಿಸ್ಥಿತಿಯನ್ನು ಜೀರ್ಣಿಸಿಕೊಳ್ಳಲು ಸಮಯ ಬೇಕು ಎಂದು ಅವರು ಹೇಳಿದರು.
ಈ ಕುಟುಂಬಗಳ ಬದುಕೇ ತಲೆಕೆಳಗಾಗಿದೆ. ನಮಗೆ ಈ ಸಾವುಗಳೆಲ್ಲಾ ಒಂದು ಸುದ್ದಿ ಮಾತ್ರವಲ್ಲದೇ ಬೇರೇನೂ ಅಲ್ಲ.

ಕೈಯಿಂದ ಮಲ ಎತ್ತುವ ಕೆಲಸ ಮಾಡುವಾಗ ಸಾವನ್ನಪ್ಪಿದ ವಿಲ್ಲುಪುರಂನ ಮಾಡಂಪಟ್ಟು ಗ್ರಾಮದ ಮಾರಿಯವರು, ತಮ್ಮ ಎಂಟು ತಿಂಗಳ ಗರ್ಭಿಣಿ ಪತ್ನಿ ಅನುಸೂಯ ಅವರನ್ನು ಒಂಟಿಯಾಗಿ ಬಿಟ್ಟುಹೋದರು

ಮನೆಯಲ್ಲಿ ಇಡಲಾಗಿದ್ದ ಮಾರಿಯವರ ಶವವನ್ನು ಸಮಾಧಿ ಮಾಡಲು ಇತರ ಜಾತಿಯವರಿಂದ ಪ್ರತ್ಯೇಕವಾಗಿರುವ ಇವರ ಸಮುದಾಯದ ಸ್ಮಶಾನಕ್ಕೆ ತೆಗೆದುಕೊಂಡು ಹೋದರು
2023 ರ ಸೆಪ್ಟೆಂಬರ್ 11 ರಂದು, ಆವಡಿಯ ಭೀಮಾನಗರದ ಪೌರ ಕಾರ್ಮಿಕ ಮೋಸೆಸ್ ನಿಧನರಾದರು. ಅವರಿಗೆಂದು ಇದ್ದಿದ್ದು ಒಂದು ಹೆಂಚಿನ ಮನೆ ಮಾತ್ರ. ಅವರ ಇಬ್ಬರು ಹೆಣ್ಣುಮಕ್ಕಳಿಗೆ ಈ ಆಘಾತವನ್ನು ಸಂಭಾಳಿಸಲು ಸಾಧ್ಯವಾಯಿತು. ಮೋಸೆಸ್ ಅವರ ಮೃತದೇಹ ಬರುವ ಒಂದು ದಿನ ಮೊದಲು ನಾನು ಅವರ ಮನೆಯಲ್ಲಿದ್ದೆ. ಅವರ ಹೆಣ್ಣುಮಕ್ಕಳು 'ಅಪ್ಪ ನನ್ನನ್ನು ಪ್ರೀತಿಸುತ್ತಾರೆ- ಡ್ಯಾಡ್ ಲವ್ಸ್ ಮಿ' ಮತ್ತು 'ಅಪ್ಪನ ಪುಟ್ಟ ರಾಜಕುಮಾರಿ- ಡ್ಯಾಡ್ಸ್ ಲಿಟಲ್ ಪ್ರಿನ್ಸಸ್' ಎಂದು ಬರೆದಿರುವ ಟೀ-ಶರ್ಟ್‌ಗಳನ್ನು ಧರಿಸಿದ್ದರು. ಇದೊಂದು ಕಾಕತಾಳೀಯವೇ ಎಂಬುದು ನನಗೆ ಗೊತ್ತಿಲ್ಲ.
ಅವರಿಬ್ಬರೂ ದಿನವಿಡೀ ಅತ್ತರು. ಇತರರು ಎಷ್ಟೇ ಸಮಧಾನ ಮಾಡಿದರೂ ಅಳು ನಿಲ್ಲಿಸಲಿಲ್ಲ.
ನಾವು ಈ ಸಮಸ್ಯೆಗಳನ್ನು ದಾಖಲಿಸಲು ಪ್ರಯತ್ನಿಸಿ ಮುಖ್ಯವಾಹಿನಿಗೆ ತರಬಹುದು, ಆದರೆ ಈ ಸಾವುಗಳನ್ನು ಕೇವಲ ಒಂದು ಸುದ್ದಿಯಾಗಿ ಮಾತ್ರ ನೋಡುವ ಪ್ರವೃತ್ತಿ ನಮ್ಮಲ್ಲಿದೆ.


ಎಡ: ಚೆನ್ನೈನ ಅವಡಿಯ ಭೀಮಾ ನಗರದಲ್ಲಿ ನಡೆದ ಮೋಸೆಸ್ ಅವರ ಅಂತ್ಯಕ್ರಿಯೆಯಲ್ಲಿ, ಆಘಾತದಿಂದ ಕಂಗೆಟ್ಟಿರುವ ಅವರ ಕುಟುಂಬ ಶವದ ಮೇಲೆ ಹೂವುಗಳನ್ನು ಇಡುತ್ತಿದೆ. ಬಲ: ಅವರ ಶವದ ಮುಂದೆ ಪ್ರಾರ್ಥಿಸುತ್ತಿರುವ ಕುಟುಂಬ


ಎಡ: ಅವಡಿ ಮೋಸೆದ್‌ರವರ ಶವದಿಂದ ದುರ್ವಾಸನೆ ಬರಲು ಆರಂಭವಾದಾಗ, ಸೇರಿದ್ದ ಜನರು ಶವವನ್ನು ಸ್ಮಶಾನಕ್ಕೆ ಸಾಗಿಸಲು ಮುಂದಾದರು. ಬಲ: ಮೃತ ಅವಡಿ ಮೋಸೆಸ್ ಅವರ ಮನೆ
ಎರಡು ವರ್ಷಗಳ ಹಿಂದೆ, ವಿಲ್ಲುಪುರಂ ಜಿಲ್ಲೆಯ ಕಾಂಜಿಪಟ್ಟು ಗ್ರಾಮದ ಬಳಿ - 25 ವರ್ಷದ ನವೀನ್ ಕುಮಾರ್, 20 ವರ್ಷದ ತಿರುಮಲೈ ಮತ್ತು 50 ವರ್ಷದ ರಂಗನಾಥನ್ ಎಂಬ ಮೂವರು ಪೌರ ಕಾರ್ಮಿಕರು ಸಾವನ್ನಪ್ಪಿದರು. ತಿರುಮಲೈಯವರು ನವವಿವಾಹಿತರು, ರಂಗನಾಥನ್ ಅವರಿಗೆ ಇಬ್ಬರು ಮಕ್ಕಳಿದ್ದರು. ಆಗಷ್ಟೇ ಮದುವೆಯಾಗಿರುವ ಹಲವಾರು ಕಾರ್ಮಿಕರು ಮರಣಹೊಂದಿ, ಅವರ ಪತ್ನಿಯರು ವಿಧವೆಯರಾಗಿ ಬದುಕಿನಲ್ಲಿ ಭರವಸೆ ಕಳೆದುಕೊಳ್ಳುವುದನ್ನು ನೋಡುವಾಗ ಎದೆ ಬಿರಿಯುತ್ತದೆ. ಪತಿ ತೀರಿಕೊಂಡ ಕೆಲವು ತಿಂಗಳ ನಂತರ ಕೆಲವರು ಸೇರಿ ಮುತ್ತುಲಕ್ಷ್ಮಿಯವರಿಗೆ ಸೀಮಂತ ಮಾಡಿದರು.
ನಮ್ಮ ದೇಶದಲ್ಲಿ ಮಲ ಹೊರುವುದು ಕಾನೂನುಬಾಹಿರ ಅಪರಾಧ . ಆದರೂ ಮ್ಯಾನ್‌ಹೋಲ್‌ನಲ್ಲಿ ಸಾಯುವವರ ಸಂಖ್ಯೆಯನ್ನು ಕಡಿಮೆ ಮಾಡಲು ನಮಗೆ ಆಗಲೇ ಇಲ್ಲ. ಈ ಸಮಸ್ಯೆಯನ್ನು ಮುಂದೆ ತೆಗೆದುಕೊಂಡು ಹೋಗುವುದು ಹೇಗೆ ಎಂದು ನನಗೆ ಗೊತ್ತಿಲ್ಲ. ನನ್ನ ಬರವಣಿಗೆ ಮತ್ತು ಛಾಯಾಚಿತ್ರಗಳು ಮಾತ್ರ ನನಗೆ ತಿಳಿದಿರುವ ಏಕೈಕ ಮಾರ್ಗ, ಇವುಗಳ ಮೂಲಕ ಈ ಕ್ರೂರ ಕೃತ್ಯವನ್ನು ನಿಲ್ಲಿಸಲು ಸಾಧ್ಯ ಅಂದುಕೊಂಡಿದ್ದೇನೆ.
ಇಂತಹ ಪ್ರತಿಯೊಂದು ಸಾವು ನನ್ನೊಳಗಿನ ಭಾರವನ್ನು ಹೆಚ್ಚಿಸುತ್ತಲೇ ಇದೆ. ಶವಸಂಸ್ಕಾರದ ಸಮಯದಲ್ಲಿ ಅಳಬೇಕೋ, ಬೇಡವೋ ಎಂದು ಆಗಾಗ ನನ್ನನ್ನು ನಾನು ಪ್ರಶ್ನಿಸಿಕೊಳ್ಳುತ್ತೇನೆ. ವೃತ್ತಿಪರ ನೋವೆನ್ನುವುದೇ ಇಲ್ಲ. ಆದರೆ ನನಗೆ ಈ ಸಾವುಗಳು ಎಂದಿಗೂ ವೈಯಕ್ತಿಕ ಸಂಗತಿ. ಈ ಸಾವುಗಳು ಇಲ್ಲದಿದ್ದರೆ ನಾನೊಬ್ಬ ಫೋಟೋಗ್ರಾಫರ್ ಆಗುತ್ತಿರಲಿಲ್ಲ. ಇನ್ನೊಂದು ಮ್ಯಾನ್‌ಹೋಲ್ ಸಾವು ನಡೆಯದಂತೆ ಮಾಡಲು ಇದಕ್ಕಿಂತ ಹೆಚ್ಚು ನಾನೇನು ಮಾಡಬಹುದು? ನಾವೆಲ್ಲರೂ ಏನು ಮಾಡಬೇಕು?

2019 ರ ಆಗಸ್ಟ್ 2ರಂದು, ಚೆನ್ನೈನ ಪುಲಿಯಂತೋಪ್ಪು ಎಂಬಲ್ಲಿ ಕೈಯಿಂದ ಮಲ ಎತ್ತುವ ಕೆಲಸ ಮಾಡುವಾಗ ಪೌರ ಕಾರ್ಮಿಕ ಮೋಸೆಸ್ ಅವರು ಸಾವನ್ನಪ್ಪಿದರು. ನೀಲಿ ಸೀರೆಯಲ್ಲಿರುವವರು ಅವರ ಪತ್ನಿ ಮೇರಿ


ಎಡ: ರಂಗನಾಥನ್ ಅವರ ಶವ ಸಂಸ್ಕಾರದ ಸಂದರ್ಭದಲ್ಲಿ ಶವದ ಮೇಲೆ ಎಸೆಯಲು ಮನೆಯಲ್ಲಿರುವ ಅವರ ಸಂಬಂಧಿಕರು ಎಲ್ಲರಿಗೂ ಅಕ್ಕಿ ಕೊಡುತ್ತಿದ್ದಾರೆ. ತಮಿಳುನಾಡಿನ ಶ್ರೀಪೆರಂಬದೂರು ಸಮೀಪದ ಕಾ ಂಜಿ ಪಟ್ಟು ಗ್ರಾಮದಲ್ಲಿ 2022 ರ ದೀಪಾವಳಿಗೆ ಒಂದು ವಾರ ಮೊದಲು ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸುವಾಗ ರಂಗನಾಥನ್ ಮತ್ತು ನವೀನ್ ಕುಮಾರ್ ಸಾವನ್ನಪ್ಪಿದ್ದರು. ಬಲ: ಶ್ರೀಪೆರಂಬದೂರಿನಲ್ಲಿ ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸುವಾಗ ಮೂವರು ಸಾವನ್ನಪ್ಪಿದಾಗ, ಇಡೀ ಸ್ಮಶಾನ ಜನರಿಂದ ತುಂಬಿ ಹೋಗಿತ್ತು


ಎಡ: ಚೆನ್ನೈ ಮಹಾನಗರ ಪಾಲಿಕೆಯ ಪೌರ ಕಾರ್ಮಿಕರು 2024 ರ ಅಕ್ಟೋಬರ್‌ನಲ್ಲಿ ತಮ್ಮ ವೃತ್ತಿಯನ್ನು ಕಾಯಂಗೊಳಿಸಲು ಮತ್ತು ಸಂಬಳ ಹೆಚ್ಚಿಸಲು ಪ್ರತಿಭಟನೆ ನಡೆಸಿದರು. ಅವರು ದೀನದಯಾಳ್ ಅಂತ್ಯೋದಯ ಯೋಜನೆ-ರಾಷ್ಟ್ರೀಯ ನಗರ ಜೀವನೋಪಾಯ ಮಿಷನ್ (ಡಿಎವೈ-ಎನ್‌ಯುಎಲ್‌ಎಂ) ಅಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಖಾಯಂ ಉದ್ಯೋಗ ಮತ್ತು ವೇತನ ಹೆಚ್ಚಳಕ್ಕೆ ಒತ್ತಾಯಿಸಿ ಲೆಫ್ಟ್ ಟ್ರೇಡ್ ಯೂನಿಯನ್ ಸೆಂಟರ್ (ಎಲ್‌ಟಿಯುಸಿ) ಸದಸ್ಯರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯನ್ನು ಇಲ್ಲಿ ನೋಡಬಹುದು. ಬಲ: ಕೋವಿಡ್ ನಂತರ ಘನ ತ್ಯಾಜ್ಯ ನಿರ್ವಹಣೆಯ ಖಾಸಗೀಕರಣದ ವಿರುದ್ಧ ಪ್ರತಿಭಟಿಸಿದ 5, 6 ಮತ್ತು 7 ವಲಯಗಳ ನೂರಾರು ಪೌರ ಕಾರ್ಮಿಕರನ್ನು ಪೊಲೀಸರು ಬಂಧಿಸಿದರು
ಕನ್ನಡ ಅನುವಾದ: ಚರಣ್ ಐವರ್ನಾಡು