ದುಡಿಯುವ ವರ್ಗದ ಜನರು ಹಾಳಾದ ಚಪ್ಪಲಿಗಳನ್ನು ಸಹ ಅಮೂಲ್ಯ ವಸ್ತುವಿನಂತೆ ಕಾಪಾಡಿಕೊಳ್ಳುತ್ತಾರೆ. ಸರಕು ಲೋಡ್ ಮಾಡುವವರ ಚಪ್ಪಲಿಗಳ ಅವರ ಪಾದ ಹಾಗೇ ಅಚ್ಚು ಬಿದ್ದಿರುತ್ತದೆ, ಆದರೆ ಮರ ಕಡಿಯುವವರ ಚಪ್ಪಲಿಗಳು ಮುಳ್ಳುಗಳಿಂದ ತುಂಬಿರುತ್ತವೆ. ನಾನೂ ನನ್ನ ಚಪ್ಪಲಿಗಳಿಗಳ ಉಂಗುಷ್ಟಕ್ಕೆ ಹಲವು ಬಾರಿ ಪಿನ್ ಬಳಸಿ ಅದನ್ನು ಇನ್ನಷ್ಟು ಹಾಕಲು ಸಾಧ್ಯವಾಗುವಂತೆ ಮಾಡಿಕೊಂಡಿದ್ದೇನೆ.
ಭಾರತದ ಉದ್ದಗಲಕ್ಕೆ ಅಲೆದಾಡುವ ಸಮಯದಲ್ಲಿ ನಾನು ನಿರಂತರವಾಗಿ ಜನರ ಚಪ್ಪಲಿಗಳ ಫೋಟೊಗಳನ್ನು ತೆಗೆದಿದ್ದೇನೆ. ಮತ್ತು ಮೇಲೆ ಹೇಳಿದ ಚಿತ್ರಗಳನ್ನು ಅವುಗಳಲ್ಲಿ ಕಂಡಿದ್ದೇನೆ. ಈ ಚಪ್ಪಲಿಗಳ ಕತೆಯ ಪ್ರಯಾಣದಲ್ಲಿ ನನ್ನ ಸಂತ ಬದುಕಿನ ಪ್ರಯಾಣವೂ ತೆರೆದುಕೊಂಡಿದೆ.
ಇತ್ತೀಚೆಗೆ ಕೆಲಸದ ಮೇಲೆ ಒಡಿಶಾದ ಜಜಪುರ ಎನ್ನುವಲ್ಲಿಗೆ ಹೋಗಿದ್ದೆ. ಅಲ್ಲಿ ಬಾರಾಬಂಕಿ ಮತ್ತು ಪುರಾಣಮಂತಿರಾ ಎನ್ನುವ ಹಳ್ಳಿಗಳ ಶಾಲೆಗೆ ಭೇಟಿ ನೀಡುವ ಅವಕಾಶ ನನಗೆ ಸಿಕ್ಕಿತು. ಅಲ್ಲಿ ನಾವು ಆದಿವಾಸಿ ಜನರ ಬೇಟಿಗೆಂದು ಹೋಗಿದ್ದ ಸಮಯದಲ್ಲಿ ಅಲ್ಲಿನ ಕೋಣೆಯ ಹೊರಗೆ ಸಾಲಾಗಿ ಜೋಡಿಸಿಟ್ಟಿದ್ದ ಚಪ್ಪಲಿಗಳ ಮೇಲೆ ನನ್ನ ಕಣ್ಣು ಹೋಯಿತು. ಸೂಕ್ಷ್ಮವಾಗಿ ಸಾಲಾಗಿ ಜೋಡಿಸಲಾಗಿದ್ದ ಚಪ್ಪಲಿಗಳ ಸಾಲು ನನ್ನ ಗಮನವನ್ನು ತಂತಾನೇ ಸೆಳೆಯಿತು.
ಮೊದಲಿಗೆ ನಾನು ಅವುಗಳ ಕಡೆಗೆ ಅಷ್ಟೇನೂ ಆಳವಾಗಿ ಗಮನವನ್ನು ನೀಡಿರಲಿಲ್ಲ. ಆದರೆ ಪ್ರಯಾಣದ ಮೂರು ದಿನಗಳ ನಂತರ ಅವುಗಳನ್ನು ಗಮನಿಸಲು ಆರಂಭಿಸಿದೆ. ಅವುಗಳಲ್ಲಿ ಕೆಲವು ಚಪ್ಪಲಿಗಳಲ್ಲಿ ಸವೆದು ತೂತು ಮೂಡಿದ್ದವು.


ಚಪ್ಪಲಿಗಳ ಜೊತೆಗಿನ ನನ್ನ ವೈಯಕ್ತಿಕ ಸಂಬಂಧವೂ ನೆನಪಿನಳಾದಲ್ಲಿ ಅಚ್ಚಳಿಯದೆ ಉಳಿದಿದೆ. ನನ್ನ ಊರಿನಲ್ಲಿ, ಎಲ್ಲರೂ ವಿ-ಸ್ಟ್ರಾಪ್ ಚಪ್ಪಲಿಗಳನ್ನು ಧರಿಸುತ್ತಿದ್ದರು. ನನಗೆ ಸುಮಾರು 12 ವರ್ಷವಿರುವಾಗ, ಮಧುರೈಯಲ್ಲಿ, ಇವುಗಳ ಬೆಲೆ ಕೇವಲ 20 ರೂಪಾಯಿ, ಆದರೂ ನಮ್ಮ ಕುಟುಂಬಕ್ಕೆ ಅದನ್ನು ಖರೀದಿಸಲು ಸಾಧ್ಯವಾಗದ ಕಷ್ಟವಿತ್ತು. ಹೀಗಾಗಿ ಚಪ್ಪಲಿಗಳೂ ನಮ್ಮ ಬದುಕಿನಲ್ಲಿ ಪ್ರಮುಖ ನೆನಪಾಗಿ ಉಳಿದಿವೆ.
ಮಾರುಕಟ್ಟೆಗೆ ಹೊಸ ಚಪ್ಪಲಿ ಬಂದಾಗಲೆಲ್ಲ ನಮ್ಮ ಊರಿನ ಹುಡುಗರಲ್ಲಿ ಯಾರಾದರೂ ಒಬ್ಬರು ಅದನ್ನು ಖರೀದಿಸಿರುತ್ತಿದ್ದರು. ಮತ್ತೆ ನಾವು ಉಳಿದವರು ಹಬ್ಬಗಳು, ವಿಶೇಷ ಸಂದರ್ಭಗಳು ಅಥವಾ ಪಟ್ಟಣದಿಂದ ಹೊರಗೆ ಪ್ರವಾಸಕ್ಕೆ ಹೋಗುವಾಗ ಅವರಿಂದ ಅದನ್ನು ಎರವಲು ಪಡೆದುಕೊಂಡು ಧರಿಸುತ್ತಿದ್ದೆವು.
ಒಮ್ಮೆ ಜೈಪುರಕ್ಕೆ ಹೋಗಿ ಬಂದ ನಂತರ ಚಪ್ಪಲಿಗಳನ್ನು ಹೆಚ್ಚು ಹೆಚ್ಚು ಗಮನಿಸುತ್ತಿದ್ದೇನೆ. ಕೆಲವು ಜೋಡಿ ಚಪ್ಪಲಿಗಳು ನನ್ನ ಬದುಕಿನಲ್ಲಿ ನಡೆದ ಒಂದಷ್ಟು ಘಟನೆಗಳೊಂದಿಗೆ ತಳುಕು ಹಾಕಿಕೊಂಡಿವೆ. ಒಮ್ಮೆ ಶೂ ಧರಿಸಿಲ್ಲ ಎನ್ನುವ ಕಾರಣಕ್ಕಾಗಿ ನನ್ನನ್ನು ಮತ್ತು ನನ್ನ ಸಹಪಾಟಿಗಳನ್ನು ನಮ್ಮ ಪಿಟಿ ಟೀಚರ್ ಶಿಕ್ಷಿಸಿದ್ದು ಇನ್ನೂ ನೆನಪಿದೆ.
ಚಪ್ಪಲಿಗಳು ನನ್ನ ಫೋಟೊಗ್ರಫಿಯ ಮೇಲೂ ಪ್ರಭಾವ ಬೀರಿವೆ. ನನ್ನ ಪಾಲಿಗೆ ಅದೊಂದು ಪ್ರಮುಖ ಬದಲಾವಣೆಯ ಸಂಕೇತ. ತುಳಿತಕ್ಕೊಳಗಾದ ಸಮುದಾಯಗಳಿಗೆ ದೀರ್ಘಕಾಲದವರೆಗೆ ಚಪ್ಪಲಿ ತೊಡಲು ಬಿಟ್ಟಿರಲಿಲ್ಲ. ಇದನ್ನು ಯೋಚಿಸಿದಾಗ ಅದರ ಕುರಿತಾಗಿ ಹೆಚ್ಚೆಚ್ಚು ಅಧ್ಯಯನ ಮಾಡುವುದು ನನಗೆ ಇನ್ನಷ್ಟು ಮುಖ್ಯವೆನ್ನಿಸಿತು. ದುಡಿಯುವ ವರ್ಗದ ಜನರ ಹೋರಾಟವನ್ನು ಪ್ರತಿನಿಧಿಸುವ ನನ್ನ ಗುರಿಯನ್ನು ಮತ್ತು ಹಗಲು ರಾತ್ರಿ ಶ್ರಮಿಸುತ್ತಿರುವ ಅವರ ಚಪ್ಪಲಿಗಳ ಕತೆಯನ್ನು ದಾಖಲಿಸುವ ಯೋಚನೆಯನ್ನು ಇದು ನನ್ನ ಮನಸ್ಸಿನಲ್ಲಿ ಬಿತ್ತಿತು.




















ಅನುವಾದ: ಶಂಕರ. ಎನ್. ಕೆಂಚನೂರು