ಹಸಿವೆಯೇ ಜಲಾಲ್ ಅಲಿಯವರಿಗೆ ಬಿದಿರಿನ ಮೀನು ಹಿಡಿಯುವ ಬಲೆಗಳನ್ನು ತಯಾರಿಸುವುದನ್ನು ಕಲಿಸಿದ್ದು.
ಯುವಕನಾಗಿದ್ದಾಗ ದಿನಗೂಲಿಗೆ ಕೆಲಸ ಮಾಡಿ ಬದುಕುತ್ತಿದ್ದರು. ಮಳೆಗಾಲ ಬಂದಾಗ ಆ ಕೆಲಸವೂ ಇರುತ್ತಿರಲಿಲ್ಲ: "ಮಳೆಗಾಲ ಬಂದರೆ ಭತ್ತದ ಸಸಿಗಳನ್ನು ನಾಟಿ ಮಾಡುವುದನ್ನು ಬಿಟ್ಟು ಬೇರೆ ಯಾವುದೇ ಕೆಲಸ ಸಿಗುತ್ತಿರಲಿಲ್ಲ," ಎಂದು ಅವರು ಹೇಳುತ್ತಾರೆ.
ಆದರೆ ಮಳೆಗಾಲದಲ್ಲಿ ದರ್ರಾಂಗ್ ಜಿಲ್ಲೆಯ ಮೂವ್‌ಸಿತಾ-ಬಲಬರಿಯ ಕಾಲುವೆಗಳು ಮತ್ತು ಜೌಗು ಪ್ರದೇಶಗಳಿಗೆ ಮೀನುಗಳು ಬರುತ್ತವೆ. ಆಗ ಅವುಗಳನ್ನು ಹಿಡಿಯಲು ಈ ಬಿದಿರಿನ ಬಲೆಗಳಿಗೆ ಹೆಚ್ಚಿನ ಬೇಡಿಕೆಯಿರುತ್ತದೆ. "ನಾನು ಬಿದಿರಿನ ಮೀನು ಹಿಡಿಯುವ ಬಲೆಗಳನ್ನು ತಯಾರಿಸುವುದು ಹೇಗೆ ಎಂಬುದನ್ನು ಕಲಿತಿದ್ದೇನೆ, ಈ ಕೆಲಸ ಮಾಡಿಯಾದರೂ ನನ್ನ ಮನೆಯನ್ನು ನಾನು ನೋಡಿಕೊಳ್ಳಬಹುದು. ನಿಮಗೆ ಹಸಿವಾದಾಗ ಹೊಟ್ಟೆ ತುಂಬಿಸಿಕೊಳ್ಳಲು ಸುಲಭವಾದ ದಾರಿಯೇನಾದರೂ ಇದೆಯೇ ಎಂದು ನೀವು ಯೋಚಿಸುತ್ತೀರಿ ಅಲ್ವೇ?’ ಎನ್ನುತ್ತಾ 60ರ ಪ್ರಾಯದ ಈ ವ್ಯಕ್ತಿ ತಮ್ಮ ಯವ್ವನದ ದಿನಗಳನ್ನು ನೆನೆದು ನಗುತ್ತಾರೆ.
ಸದ್ಯ ಜಲಾಲ್ ಅವರು ಜಲಮೂಲಗಳಲ್ಲಿರುವ ಬೇರೆ ಬೇರೆ ಜಾತಿಯ ಮೀನುಗಳನ್ನು ಹಿಡಿಯಲು ಬಳಸುವ ಸೆಪ್ಪ, ಬೊಸ್ನಾ ಮತ್ತು ಬೈರ್ ಎಂದು ಕರೆಯುವ ಸ್ಥಳೀಯ ಬಿದಿರಿನ ಬಲೆಗಳನ್ನು ತಯಾರಿಸುವ ಮಾಸ್ಟರ್ ಕುಶಲಕರ್ಮಿ. ಈ ಕೆಲಸವನ್ನು ಅವರು ಅಸ್ಸಾಂನ ಮೂವ್‌ಸಿತಾ-ಬಲಬರಿ ಜೌಗುಪ್ರದೇಶದಲ್ಲಿರುವ ಪಬ್-ಪದೊಖಾಟ್ ಎಂಬ ಗ್ರಾಮದಲ್ಲಿರುವ ತಮ್ಮ ಮನೆಯಲ್ಲಿ ಮಾಡುತ್ತಾರೆ.
"ಎರಡೇ ಎರಡು ದಶಕಗಳ ಹಿಂದೆ ನನ್ನ ಹಳ್ಳಿಯ ಮತ್ತು ಹತ್ತಿರದ ಹಳ್ಳಿಗಳ ಬಹುತೇಕ ಪ್ರತಿಯೊಂದು ಮನೆಯಲ್ಲಿ ಮೀನು ಹಿಡಿಯಲು [ಬಿದಿರು] ಬಲೆಯನ್ನು ಬಳಸುತ್ತಿದ್ದರು. ಒಂದೋ ಬಿದಿರಿನ ಬಲೆಗಳು ಇಲ್ಲವೇ, ಕೈಯಿಂದ ತಯಾರಿಸಿದ ಶಿವ್ ಜಾಲ್,” ಎಂದು ಜಲಾಲ್ ನೆನಪಿಸಿಕೊಳ್ಳುತ್ತಾರೆ. ಈ ಬಲೆಗಳನ್ನು ಸ್ಥಳೀಯರು ಟೊಂಗಿ ಜಾಲ್ ಅಥವಾ ಝೆಟ್ಕಾ ಜಾಲ್ ಎಂದೂ ಕರೆಯುತ್ತಾರೆ. ಇದು ಬಿದಿನ ಕೋಲುಗಳು ಅಥವಾ ಕಡ್ಡಿಗಳನ್ನು ನಾಲ್ಕು ಮೂಲೆಗಳಲ್ಲಿ ಕಟ್ಟಲಾಗಿರುವ ಚೌಕಾಕಾರದ ಒಂದು ಬಲೆ.
ಸ್ಥಳೀಯರು ಮೀನು ಹಿಡಿಯುವ ಬಿದಿರಿನ ಬಲೆಗಳಿಗೆ ಅವುಗಳ ಆಕಾರಕ್ಕೆ ಅನುಗುಣವಾಗಿ ಹೆಸರು ಕೊಟ್ಟಿದ್ದಾರೆ: “ಸೆಪ್ಪ ಎಂಬುದು ಡ್ರಮ್‌ನಂತಿರುವ ಉದ್ದನೆಯ ಬಲೆ. ಬೈರ್ ಕೂಡ ಆಯತಾಕಾರದಲ್ಲಿರುತ್ತದೆ, ಆದರೆ ಇದು ತುಂಬಾ ಎತ್ತರ ಮತ್ತು ಅಗಲವಾಗಿರುತ್ತದೆ. ದರ್ಕಿ ಒಂದು ಆಯತಾಕಾರದ ಪೆಟ್ಟಿಗೆಯಂತಿರುವ ಬಲೆ,” ಎಂದು ಅವುಗಳ ಬಗ್ಗೆ ಜಲಾಲ್ ವಿವರಿಸುತ್ತಾರೆ. ಡೂಯರ್, ಡಯಾರ್ ಮತ್ತು ಬೋಯಿಷ್ನೋ ಎಂಬ ಬಲೆಗಳನ್ನು ಹರಿಯುವ ನೀರಿನಲ್ಲಿ, ಹೆಚ್ಚಾಗಿ ನೀರಿನಿಂದ ತುಂಬಿದ ಭತ್ತ ಮತ್ತು ಸೆಣಬಿನ ಗದ್ದೆಗಳಲ್ಲಿ, ಸಣ್ಣ ಕಾಲುವೆಗಳಲ್ಲಿ, ನೀರು ಸೇರಿದ ಜಾಗಗಳಲ್ಲಿ, ಜೌಗು ಪ್ರದೇಶಗಳು ಅಥವಾ ನದಿ ಸೇರುವ ಜಾಗಗಳಲ್ಲಿ ಬಳಸಲಾಗುತ್ತದೆ.


ಎಡ: ಅಸ್ಸಾಂನ ಮೂವ್‌ಸಿತಾ-ಬಲಬರಿ ಜೌಗುಪ್ರದೇಶದಲ್ಲಿರುವ ಪಬ್-ಪದೊಖಾಟ್ ಎಂಬ ಗ್ರಾಮದಲ್ಲಿರುವ ತಮ್ಮ ಮನೆಯ ಅಂಗಳದಲ್ಲಿ ಮೀನಿನ ಬಲೆಗಳನ್ನು ಪರಿಶೀಲಿಸುತ್ತಿರುವ ಜಲಾಲ್. ಉದ್ದನೆಯ ಆಕಾರದ ನಿಂತಿರುವ ಬಲೆಯನ್ನು ಸೆಪ್ಪ ಎಂದು ಕರೆಯುತ್ತಾರೆ. ಬಲ: ಅವರ ಕೈಯಲ್ಲಿರುವ ಬಲೆಯನ್ನು ಬೈರ್ ಎಂದು ಕರೆಯಲಾಗುತ್ತದೆ. ಬಲ: ಮೀನುಗಳು ಬಲೆಯ ಒಳಗೆ ಬರಲು ಇರುವ ಸಂಕೀರ್ಣವಾದ ಗಂಟುಗಳ ಕವಾಟನ್ನು ತೋರಿಸುತ್ತಿರುವ ಜಲಾಲ್. ಸಾಂಪ್ರದಾಯಿಕ ಬಿದಿರಿನ ಮೀನಿನ ಬಲೆಗಳಲ್ಲಿ ಇರುವ ಈ ದ್ವಾರವನ್ನು ಪರ ಅಥವಾ ಫರಾ ಎಂದು ಕರೆಯುತ್ತಾರೆ
ಅಸ್ಸಾಂನ ಪೂರ್ವದ ಸಾದಿಯಾದಿಂದ ಪಶ್ಚಿಮದ ಧುಬ್ರಿಯವರೆಗೆ ಇರುವ ಬ್ರಹ್ಮಪುತ್ರ ಕಣಿವೆ ನದಿಗಳು, ಕಾಲುವೆಗಳು, ನದಿಗಳೊಂದಿಗೆ ಜೌಗು ಪ್ರದೇಶಗಳನ್ನು ಕೂಡುವ ತೊರೆಗಳು, ಸರೋವರಗಳು ಮತ್ತು ಅಸಂಖ್ಯಾತ ನೈಸರ್ಗಿಕ ಕೆರೆಗಳನ್ನು ಹೊಂದಿದೆ. ಈ ಜಲಮೂಲಗಳೇ ಸ್ಥಳೀಯ ಸಮುದಾಯಗಳಿಗೆ ಮೀನುಗಾರಿಕೆಯ ಮೂಲಕ ಬದುಕು ಕಟ್ಟಿಕೊಳ್ಳಲು ದಾರಿಯನ್ನು ಮಾಡಿಕೊಟ್ಟಿವೆ. ಅಸ್ಸಾಂನಲ್ಲಿ ಮೀನುಗಾರಿಕೋದ್ಯಮಯಲ್ಲಿ 35 ಲಕ್ಷ ರುಪಾಯಿಗಳ ವ್ಯವಹಾರ ನಡೆಯುತ್ತದೆ ಎಂದು ಹ್ಯಾಂಡ್‌ಬುಕ್ ಆನ್ ಫಿಶರೀಸ್ ಸ್ಟ್ಯಾಟಿಸ್ಟಿಕ್ಸ್ 2022 ಹೇಳುತ್ತದೆ.
ಮೂಸುರಿ ಜಾಲ್ (ಸಣ್ಣ ಜಾಲರಿಯ ಬಲೆ) ಮತ್ತು ಯಂತ್ರ ಬಳಸಿ ಎಳೆಯುವ ಬಲೆಗಳಂತಹ ವಾಣಿಜ್ಯ ಬಲೆಗಳು ದುಬಾರಿ ಮಾತ್ರವಲ್ಲ, ಜಲಚರಗಳಿಗೆ ಅಪಾಯವನ್ನುಂಟು ಮಾಡುತ್ತವೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಈ ಬಲೆಗಳು ಚಿಕ್ಕ ಮೀನುಗಳನ್ನೂ ಹೊರತೆಗೆಯುತ್ತವೆ ಮತ್ತು ನೀರಿನಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಸುರಿಯುತ್ತವೆ. ಸ್ಥಳೀಯರು ಬಳಸುವ ಬಿದಿರು, ಕಬ್ಬು ಮತ್ತು ಸೆಣಬುಗಳಿಂದ ತಯಾರಿಸಿದ ಮೀನು ಹಿಡಿಯುವ ಬಲೆಗಳು ಚೆನ್ನಾಗಿ ಬಾಳಿಕೆ ಬರುತ್ತವೆ ಮತ್ತು ಪರಿಸರ ವ್ಯವಸ್ಥೆಯ ಮೇಲೆ ಯಾವುದೇ ದುಷ್ಪರಿಣಾಮ ಬೀರುವುದಿಲ್ಲ. ಅಲ್ಲದೇ, ಅವುಗಳು ನಿರ್ದಿಷ್ಟ ಗಾತ್ರದ ಮೀನುಗಳನ್ನು ಮಾತ್ರ ಹಿಡಿಯುತ್ತವೆ, ಆದ್ದರಿಂದ ಯಾವುದೇ ಮೀನೂ ವ್ಯರ್ಥವಾಗುವುದಿಲ್ಲ.
ಮಿತಿಮೀರಿದ ಮೀನುಗಾರಿಕೆ ನಡೆಯಲು ವಾಣಿಜ್ಯ ಬಲೆಗಳೂ ಕಾರಣ ಮತ್ತು ಅವು ಮೊಟ್ಟೆಯಿಡುವ ಪರಿಸರ ವ್ಯವಸ್ಥೆಯನ್ನೇ ನಾಶ ಮಾಡುತ್ತದೆ ಎಂದು ಹೆಸರು ಹೇಳಲು ಬಯಸದ ಐಸಿಎಆರ್-ಸೆಂಟ್ರಲ್ ಇನ್‌ಲ್ಯಾಂಡ್ ಫಿಶರೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ ತಜ್ಞರೊಬ್ಬರು ಹೇಳುತ್ತಾರೆ.
ಪ್ರವಾಹ ಬಂದು ಹೂಳು ತುಂಬಿಕೊಳ್ಳುವುದರಿಂದ ನೈಸರ್ಗಿಕ ಕೆರೆಗಳು ಮತ್ತು ಜೌಗು ಪ್ರದೇಶಗಳ ಗಾತ್ರವನ್ನು ಕಡಿಮೆಯಾಗುತ್ತಿದೆ ಎಂದು ಅವರು ಹೇಳುತ್ತಾರೆ. ಇವುಗಳಲ್ಲಿ ನೀರು ಕಡಿಮೆಯಾಗುತ್ತದೆ ಮತ್ತು ಒಳನಾಡಿನಲ್ಲಿ ಮೀನುಗಳ ಸಂಖ್ಯೆಯೂ ಇಳಿಮುಖವಾಗುತ್ತದೆ. ಮೀನುಗಾರ ಮುಕ್ಸೆದ್ ಅಲಿ ನೋವಿನಿಂದ ತಮಗೆ ತಿಳಿದಿರುವ ಸತ್ಯವನ್ನು ಹೀಗೆ ಹೇಳುತ್ತಾರೆ: “ಹಿಂದೆಲ್ಲಾ ನೀವು ನನ್ನ ಮನೆಯಿಂದ ಸುಮಾರು ನಾಲ್ಕು ಕಿಲೋಮೀಟರ್ ದೂರದಲ್ಲಿರುವ ಬ್ರಹ್ಮಪುತ್ರಕ್ಕೆ ನೀರು ಹರಿಯುವುದನ್ನು ನೋಡಬಹುದಿತ್ತು. ಆಗೆಲ್ಲಾ ಹೊಲಗಳ ಬದುಗಳಲ್ಲಿ ಮಣ್ಣು ಹಾಕಿ ಕಿರಿದಾದ ತೊರೆಗಳನ್ನು ಮಾಡಿ ಮೀನಿನ ಬಲೆಗಳನ್ನು ಹಾಕುತ್ತಿದ್ದೆವು.” ಆಧುನಿಕ ನೆಟ್‌ಗಳನ್ನು ಖರೀದಿಸಲು ಸಾಧ್ಯವಾಗದ ಕಾರಣ ತಾವು ಬೈರ್‌ಗಳನ್ನು ಬಳಸುತ್ತಿರುವುದಾಗಿ ಅರವತ್ತರ ಹರೆಯದ ಈ ವ್ಯಕ್ತಿ ಹೇಳುತ್ತಾರೆ.
"ನಾವು ಆರೇಳು ವರ್ಷಗಳ ಹಿಂದೆ ಸಾಕಷ್ಟು ಮೀನು ಹಿಡಿಯುತ್ತಿದ್ದೆವು. ಆದರೆ ಈಗ ನನ್ನ ನಾಲ್ಕು ಬೇರ್‌ಗಳನ್ನು ಬಳಸಿಯೂ ಅರ್ಧ ಕೆಜಿ ಮೀನು ಸಿಗುತ್ತಿಲ್ಲ,” ಎಂದು ದರ್ರಾಂಗ್ ಜಿಲ್ಲೆಯ ನಂ. 4 ಅರಿಮರಿ ಗ್ರಾಮದಲ್ಲಿ ತಮ್ಮ ಪತ್ನಿಯೊಂದಿಗೆ ವಾಸಿಸುತ್ತಿರುವ ಮುಕ್ಸೆದ್ ಅಲಿಯವರು ಹೇಳುತ್ತಾರೆ.


ಎಡ: ನಂ 4 ಅರಿಮರಿ ಗ್ರಾಮದ ತಮ್ಮ ಮನೆಯಲ್ಲಿ ದರ್ಕಿ ಎಂಬ ಬಲೆಯನ್ನು ತೋರಿಸುತ್ತಿರುವ ಮುಕ್ಸೆದ್ ಅಲಿ . ಪಕ್ಕದ ಶಾಲೆಯೊಂದರಲ್ಲಿ ಸ್ವಚ್ಛತಾ ಕೆಲಸ ಮಾಡುವ ತಮ್ಮ ಪತ್ನಿಯೊಂದಿಗೆ ಇವರು ಮೀನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಬಲ: ಹಿಂದಿನ ರಾತ್ರಿ ಹಾಕಿದ ಬಿದಿರಿನ ಬಲೆಗಳಲ್ಲಿ ಒಂದನ್ನು ಪರಿಶೀಲಿಸುತ್ತಿರುವ ಮುಕ್ಸೆದ್ ಅಲಿ. ಕಳೆದ ಮೂರು ವರ್ಷಗಳಿಂದ ಸಿಗುತ್ತಿರುವ ಮೀನಿನ ಸಂಖ್ಯೆ ಕಡಿಮೆಯಾಗಿದೆ, ತಮ್ಮ ನಾಲ್ಕು ಬಲೆಗಳನ್ನು ಬಳಸಿಯೂ ಇವರಿಗೆ ಕೆಲವೊಮ್ಮೆ ಅರ್ಧ ಕೆಜಿ ಮೀನುಗಳು ಮಾತ್ರ ಸಿಗುತ್ತವೆ
*****
ಅಸ್ಸಾಂನಲ್ಲಿ ಚೆನ್ನಾಗಿ ಮಳೆ ಯಾಗುತ್ತದೆ. ಬ್ರಹ್ಮಪುತ್ರ ಕಣಿವೆಯಲ್ಲಿ 166 ಸೆಂ.ಮೀ ಮತ್ತು ಬರಾಕ್ ಕಣಿವೆಯಲ್ಲಿ 183 ಸೆಂ.ಮೀ ಮಳೆ ಬೀಳುತ್ತದೆ. ನೈಋತ್ಯ ಮಾನ್ಸೂನ್ ಏಪ್ರಿಲ್ ತಿಂಗಳ ಕೊನೆಯಲ್ಲಿ ಆರಂಭವಾಗಿ ಅಕ್ಟೋಬರ್ ವರೆಗೆ ಇರುತ್ತದೆ. ಜಲಾಲ್ ಈ ಹವಾಮಾನಕ್ಕೆ ತಕ್ಕಂತೆ ತಮ್ಮ ಕೆಲಸವನ್ನು ಮಾಡುತ್ತಾರೆ. “ನಾನು ಜೋಷ್ಟಿ ಮಾಸ್‌ನಲ್ಲಿ [ಜ್ಯೇಷ್ಠ ಮಾಸ - ಮೇ ಮಧ್ಯದಲ್ಲಿ] ಮೀನು ಹಿಡಿಯುವ ಬಲೆಗಳನ್ನು ತಯಾರಿಸಲು ಅರಂಭಿಸುತ್ತಿದ್ದೆ. ಜನರು ಆಷಾರ್ ಮಾಸ್‌ನಿಂದ [ಆಷಾಡ ಮಾಸ - ಜೂನ್ ಮಧ್ಯದಲ್ಲಿ] ಬಲೆಗಳನ್ನು ಖರೀದಿಸಲು ಶುರುಮಾಡುತ್ತಾರೆ. ಆದರೆ ಕಳೆದ ಮೂರು ವರ್ಷಗಳಿಂದ ಮಳೆ ಕಡಿಮೆಯಾದ ಕಾರಣ ಯಾವತ್ತಿನಂತೆ ಜನರು ಖರೀದಿಸಲು ಬರುತ್ತಿಲ್ಲ,” ಎಂದು ಅವರು ಹೇಳುತ್ತಾರೆ.
2023 ರಲ್ಲಿ ಪ್ರಕಟವಾದ ವಿಶ್ವಬ್ಯಾಂಕ್ ವರದಿ ಯು ಅಸ್ಸಾಂನಲ್ಲಿ ಹೆಚ್ಚುತ್ತಿರುವ ತಾಪಮಾನ, ವಾರ್ಷಿಕ ಮಳೆಯ ಪ್ರಮಾಣದಲ್ಲಿ ಆಗಿರುವ ಇಳಿಕೆ ಮತ್ತು ವಿಪರೀತ ಪ್ರವಾಹದ ಘಟನೆಗಳ ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದು ಹೇಳುತ್ತದೆ. ಹವಾಮಾನ ಬದಲಾವಣೆಯಿಂದಾಗಿ ಜಲಮೂಲಗಳಲ್ಲಿ ಹೂಳುತುಂಬುತ್ತಿದೆ. ಇದರಿಂದ ನೀರಿನ ಮಟ್ಟ ಕುಸಿದು, ಮೀನುಗಳ ಸಂಖ್ಯೆಯೂ ಕಡಿಮೆಯಾಗಿದೆ.
1990 ರಿಂದ 2019 ರವರೆಗೆ ವಾರ್ಷಿಕ ಸರಾಸರಿ ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 0.049 ಮತ್ತು 0.013 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ ಎಂದು ರಾಜ್ಯ ವಿಧಾನಸಭೆಯಲ್ಲಿ ಮಂಡಿಸಲಾದ ಸರ್ಕಾರದ ಪ್ರಕಟಣೆ ಹೇಳುತ್ತದೆ. ದೈನಂದಿನ ಸರಾಸರಿ ತಾಪಮಾನದ ಶ್ರೇಣಿಯು 0.037 ಡಿಗ್ರಿ ಸೆಲ್ಸಿಯಸ್‌ನಷ್ಟು ಏರುತ್ತಿತ್ತು. ಈ ಅವಧಿಯಲ್ಲಿ ಪ್ರತಿ ವರ್ಷ 10 ಮಿಮೀ ಕಡಿಮೆ ಮಳೆ ಬೀಳುತ್ತಿತ್ತು.
"ಹಿಂದೆಲ್ಲಾ ಮಳೆ ಯಾವಾಗ ಬರುತ್ತದೆ ಎಂದು ನಮಗೆ ಮೊದಲೇ ತಿಳಿಯುತ್ತಿತ್ತು. ಆದರೆ ಈಗ ಎಲ್ಲಾ ಬದಲಾಗಿದೆ. ಕೆಲವೊಮ್ಮೆ ಕಡಿಮೆ ಅವಧಿಯಲ್ಲಿ ಹೆಚ್ಚು ಮಳೆಯಾಗುತ್ತದೆ ಮತ್ತು ಕೆಲವೊಮ್ಮೆ ಮಳೆಯೇ ಬರುವುದಿಲ್ಲ,” ಎಂದು ಜಲಾಲ್ ಹೇಳುತ್ತಾರೆ. ಮೂರು ವರ್ಷಗಳ ಹಿಂದೆ ತಮ್ಮಂತ ಅನೇಕ ಕುಶಲಕರ್ಮಿಗಳು ಮುಂಗಾರು ಹಂಗಾಮಿನಲ್ಲಿ 20,000 ರಿಂದ 30,000 ರುಪಾಯಿಗಳ ಆದಾಯವನ್ನು ನಿರೀಕ್ಷಿಸಬಹುದಿತ್ತು ಎನ್ನುತ್ತಾರೆ ಅವರು.
ಕಳೆದ ವರ್ಷ ಇವರು ಸುಮಾರು 15 ಬೇರ್‌ಗಳನ್ನು ಮಾರಿದ್ದರು. ಆದರೆ ಈ ವರ್ಷ ಅವರು ಜೂನ್‌ನ ಮಧ್ಯದಿಂದ ಜುಲೈ ಮಧ್ಯದವರೆಗೆ ಕೇವಲ ಐದು ಬೈರ್‌ಗಳನ್ನು ಮಾತ್ರ ಮಾರಲು ಸಾಧ್ಯವಾಗಿದೆ. ಈ ಅವಧಿಯಲ್ಲಿ ಸಾಮಾನ್ಯವಾಗಿ ಜನರು ಸ್ಥಳೀಯ ಮೀನು ಹಿಡಿಯುವ ಬಿದಿರಿನ ಬಲೆಗಳನ್ನು ಖರೀದಿಸಲು ಬರುತ್ತಾರೆ ಎಂದು ಈ ನುರಿತ ಕುಶಲಕರ್ಮಿ ಹೇಳುತ್ತಾರೆ.
ಕೇವಲ ಇವರೊಬ್ಬರ ಆದಾಯ ಕುಸಿದಿಲ್ಲ. ಜೋಬ್ಲಾ ದೈಮರಿಯವರು ಉದಲ್ಗುರಿ ಜಿಲ್ಲೆಯ 79 ವರ್ಷದ ಸೆಪ್ಪ ಎಂಬ ಬಲೆಯನ್ನು ತಯಾರಿಸುವ ಕುಶಲಕರ್ಮಿ. “ಹಲಸಿನ ಮರಗಳ ಸಂಖ್ಯೆ ಕಡಿಮೆಯಾಗಿದೆ, ವಾತಾವರಣದ ಬಿಸಿ ವಿಪರೀತವಾಗಿದೆ ಮತ್ತು ಇದುವರೆಗೆ ಮಳೆಯೂ ಆಗಿಲ್ಲ. ಈ ವರ್ಷ ಯಾವಾಗ ಮಳೆಯಾಗಬಹುದು ಎಂದು ಹೇಳಲೂ ಸಾಧ್ಯವಿಲ್ಲ. ಆದ್ದರಿಂದ ಯಾರಾದರೂ ಆರ್ಡರ್ ಕೊಟ್ಟರೆ ಮಾತ್ರ ನಾನು ಮಾಡುತ್ತೇನೆ,” ಎಂದು ಅವರು ಹೇಳುತ್ತಾರೆ. ದೈಮರಿಯವರು ತಾವು ತಯಾರಿಸುತ್ತಿರುವ ಸೆಪ್ಪಗೆ ಕೊನೆಯ ಟಚ್ ಕೊಡುತ್ತಾ ಪರಿಯೊಂದಿಗೆ ಮಾತನಾಡುತ್ತಿದ್ದಾರೆ. ಮಾರಾಟಗಾರರು ಇವುಗಳನ್ನು ಖರೀದಿಸಲು ಇವರ ಮನೆಗೆ ಬರುವುದನ್ನು ಬಹುತೇಕ ನಿಲ್ಲಿಸಿದ್ದಾರೆ. 2024 ರ ಮೇ ತಿಂಗಳ ಒಂದು ಬಿಸಿಲಿನ ದಿನದಂದು ನಾವು ಅವರ ಮನೆಗೆ ಬೇಟಿ ನೀಡಿದಾಗ ತಾವು ಕೇವಲ ಐದು ಬಲೆಗಳನ್ನು ಮಾತ್ರ ತಯಾರಿಸಿರುವುದಾಗಿ ನಮಗೆ ಹೇಳಿದರು.
ಅಸ್ಸಾಂನ ಅತಿದೊಡ್ಡ ಮಾರುಕಟ್ಟೆಗಳಲ್ಲಿ ಒಂದಾದ ಬಲುಗಾಂವ್‌ನ ವಾರದ ಮಾರುಕಟ್ಟೆಯಲ್ಲಿ ಸುರ್ಹಾಬ್ ಅಲಿಯವರು ದಶಕಗಳಿಂದ ಬಿದಿರಿನ ವಸ್ತುಗಳ ವ್ಯವಹಾರ ನಡೆಸುತ್ತಿದ್ದಾರೆ. "ಇದು ಜುಲೈ ತಿಂಗಳ ಮೊದಲ ವಾರ, ನಾನು ಈ ವರ್ಷ ಒಂದೇ ಒಂದು ಬೇರ್ ಅನ್ನೂ ಸಹ ಮಾರಾಟ ಮಾಡಿಲ್ಲ," ಎಂದು ಅವರು ಹೇಳುತ್ತಾರೆ.
ಜಲಾಲ್ ಅವರು ಈ ಕರಕುಶಲತೆಯು ನಿಧಾನವಾಗಿ ಕಣ್ಮರೆಯಾಗುತ್ತಿರುವುದಕ್ಕೆ ಸಾಕ್ಷಿಯಾಗಿದ್ದಾರೆ: “ಈ ಕೆಲಸವನ್ನು ಕಲಿಯಲು ಯಾರೂ ನನ್ನ ಬಳಿಗೆ ಬರುವುದಿಲ್ಲ. ಮೀನೇ ಇಲ್ಲವೆಂದರೆ ಈ ಕಲೆಯನ್ನು ಕಲಿತು ಪ್ರಯೋಜನವಾದರೂ ಏನು?” ಎಂದು ಕೇಳುತ್ತಾರೆ. ನಮ್ಮೊಂದಿಗೆ ಮಾತನಾಡುತ್ತಾ ಮೊವ್‌ಸಿತಾ-ಬಲಬರಿಯ ಬೀಲ್ (ನೀರು ನಿಂತ ಜಾಗ) ಉದ್ದಕ್ಕೂ ಇರುವ ಮಣ್ಣಿನ ರಸ್ತೆಯಾಗಿರುವ ತನ್ನ ಮನೆಯ ಹಿತ್ತಲಿನಲ್ಲಿ ದರ್ಕಿಯನ್ನು ಬಳಸಿ ಮೀನು ಹಿಡಿಯಲು ಹೋಗುತ್ತಾರೆ.


ಎಡ: ತಮ್ಮ ಮನೆಯ ಅಂಗಳದಲ್ಲಿ ಸೆಪ್ಪದ ಕೆಲಸ ಮಾಡುತ್ತಿರುವ ಜೋಬ್ಲಾ ದೈಮರಿಯವರು. ಉದಲಗುರಿ ಜಿಲ್ಲೆಯ 79 ವರ್ಷದ ಈ ವೃದ್ಧ, 'ತಾಪಮಾನ ವಿಪರೀತವಾಗಿದೆ ಮತ್ತು ಇದುವರೆಗೆ ಮಳೆಯಾಗಿಲ್ಲ. ಈ ವರ್ಷ ಮಳೆ ಬರುವ ನಿರೀಕ್ಷೆಯೂ ಇಲ್ಲ, ಆದ್ದರಿಂದ ನಾನು ಆರ್ಡರ್ ಸಿಕ್ಕಿದರೆ ಮಾತ್ರ ಕೆಲಸ ಮಾಡುತ್ತೇನೆ,” ಹೇಳುತ್ತಾರೆ


ಎಡ: ಸುರ್ಹಾಬ್ ಅಲಿ ಅವರು ಬಲುಗಾಂವ್‌ನ ವಾರದ ಮಾರುಕಟ್ಟೆಯಲ್ಲಿ ಬಿದಿರಿನ ಉತ್ಪನ್ನಗಳನ್ನು ಮಾರಾಟ ಮಾಡುತ್ತಾರೆ. ಗ್ರಾಹಕರು ಬರುತಿಲ್ಲ ಎನ್ನುತ್ತಾರೆ ಇವರು. ಬಲ: ಸುರ್ಹಾಬ್ ಅಲಿಯವರ ಅಂಗಡಿಯಲ್ಲಿರುವ ಸ್ಥಳೀಯ ಬಿದಿರಿನ ಮೀನಿನ ಬಲೆ. ಬಲೆಯ ಒಳಗಿನಿಂದ ಮೀನುಗಳನ್ನು ತೆಗೆಯಲು ಇರುವ ಕವಾಟನ್ನು ನೀವು ನೋಡಬಹುದು
*****
"ನೀವು ಕೆಲಸ ಮಾಡುವಾಗ ಬೇಸರ ಮಾಡಿಕೊಳ್ಳಬಾರದು, ಆ ಸಮಯದಲ್ಲಿ ನೀವು ಈ ಬಲೆಗಳನ್ನು ತಯಾರಿಸುವಾಗ ಸಂಪೂರ್ಣ ಗಮನವನ್ನು ಅದಕ್ಕೆ ನೀಡಬೇಕು,” ಎಂದು ಜಲಾಲ್ ಹೇಳುತ್ತಾರೆ. ಅವರು ಕೆಲಸಕ್ಕೆ ಅಗತ್ಯವಿರುವ ಸಂಪೂರ್ಣ ಏಕಾಗ್ರತೆಗೆ ಒತ್ತನ್ನು ನೀಡುತ್ತಾರೆ. "ನೀವು ಬೇರೆಯವರು ಮಾತನಾಡುವಾಗ ಕೇಳಬಹುದು, ಆದರೆ ನೀವು ಮಾತನಾಡಲು ಹೊರಟರೆ ಬೈರ್‌ಗೆ ಗಂಟುಗಳನ್ನು ಕಟ್ಟುವುದನ್ನು ನಿಲ್ಲಿಸಬೇಕಾಗುತ್ತದೆ," ಎಂದು ಹೇಳುತ್ತಾರೆ. ನಿರಂತರವಾಗಿ ಕೆಲಸ ಮಾಡಿದರೆ ಎರಡು ದಿನದಲ್ಲಿ ಒಂದು ಬಲೆಯನ್ನು ನೇಯಬಹುದು. "ನಾನು ಮಧ್ಯೆ ಮಧ್ಯೆ ಕೆಲಸ ನಿಲ್ಲಿಸಿದರೆ, ಪೂರ್ತಿ ಬಲೆ ತಯಾರಿಸಲು ನಾಲ್ಕರಿಂದ ಐದು ದಿನಗಳು ಬೇಕಾಗುತ್ತವೆ,” ಎಂದು ಮಾತನ್ನು ಮುಂದುವರಿಸುತ್ತಾರೆ.
ಈ ಬಲೆಗಳ ತಯಾರಿಕೆಯ ಪ್ರಕ್ರಿಯೆಯು ಬಿದಿರನ್ನು ಆರಿಸುವುದರೊಂದಿಗೆ ಆರಂಭವಾಗುತ್ತದೆ. ಮೀನು ಹಿಡಿಯುವ ಬಲೆಗಳನ್ನು ಮಾಡಲು ಕುಶಲಕರ್ಮಿಗಳು ಸ್ಥಳೀಯವಾಗಿ ಸಿಗುವ ಬಿದಿರಿನ ಎರಡು ಗಂಟುಗಳ ನಡುವಿನ ಉದ್ದವಾದ ಭಾಗವನ್ನು ಬಳಸುತ್ತಾರೆ. ಬೈರ್ ಮತ್ತು ಸೆಪ್ಪ ಮೂರು ಅಥವಾ ಮೂರೂವರೆ ಅಡಿ ಉದ್ದವಿರುತ್ತವೆ. ತೊಲ್ಲಾ ಬಾಷ್ ಅಥವಾ ಜಾತಿ ಬಾಹ್ (ಬಂಬುಸಾ ಟುಲ್ಡಾ) ಎಂಬ ಬಿದಿರು ತುಂಬಾ ಮೃದುವಾಗಿರುವುದರಿಂದ ಅವುಗಳನ್ನು ಹೆಚ್ಚು ಬಳಸಲಾಗುತ್ತದೆ.
"ಸಾಮಾನ್ಯವಾಗಿ ಮೂರು ಅಥವಾ ನಾಲ್ಕು ವರ್ಷಗಳ ಸಂಪೂರ್ಣವಾಗಿ ಬೆಳೆದ ಬಿದಿರು ಇದಕ್ಕೆ ಬೇಕು, ಇಲ್ಲದಿದ್ದರೆ ಬಲೆ ಹೆಚ್ಚು ಕಾಲ ಬಾಳಿಕೆ ಬರುವುದಿಲ್ಲ. ಕನಿಷ್ಠ 18 ರಿಂದ 27 ಇಂಚುಗಳಷ್ಟು ಇರಬೇಕು. ಬಿದಿರಿನ ಎರಡು ಗಂಟುಗಳ ನಡುವಿನ ಉದ್ದವಾದ ಭಾಗವನ್ನು ಆರಿಸುವಾಗ ಕಣ್ಣುಗಳಿಂದಲೇ ನಾನು ಅವುಗಳನ್ನು ಸರಿಯಾಗಿ ಅಳೆಯಬೇಕು,” ಎಂದು ಅವರು ಹೇಳುತ್ತಾರೆ. "ನಾನು ಅವುಗಳನ್ನು ಒಂದು ಗಂಟಿನಿಂದ ಇನ್ನೊಂದು ಗಂಟಿಗೆ ತುಂಡುಗಳಾಗಿ ಕತ್ತರಿಸುತ್ತೇನೆ," ಎಂದು ಜಲಾಲ್ ತಮ್ಮ ಕೈಯಿಂದ ತೆಳುವಾದ ಚೌಕಾಕಾರದ ಬಿದಿರಿನ ಕೋಲನ್ನು ಅಳೆಯುತ್ತಾರೆ.
ಬಿದಿರನ್ನು ತುಂಡುಗಳಾಗಿ ಕತ್ತರಿಸಿದ ನಂತರ, ಜಲಾಲ್ ಅವರು ಮೀನಿನ ಬಲೆಗೆ ಹೊದಿಕೆಯನ್ನು ಮಾಡಲು ಆಯತಾಕಾರದ ಸ್ಲಿಪ್‌ಗಳನ್ನು ನೇಯುತ್ತಾರೆ. "ಹಿಂದೆಲ್ಲಾ ನಾನು ಕಾತಿ [ತೆಳುವಾದ ಬಿದಿರಿನ ಸ್ಲಿಪ್‌ಗಳನ್ನು] ನೇಯಲು ಸೆಣಬಿನ ದಾರಗಳನ್ನು ಬಳಸುತ್ತಿದ್ದೆವು. ಆದರೆ ಈಗ ನಮ್ಮ ಪ್ರದೇಶದಲ್ಲಿ ಸೆಣಬನ್ನು ಬೆಳೆಯದೇ ಇರುವುದರಿಂದ ನಾನು ಪ್ಲಾಸ್ಟಿಕ್ ನೂಲುಗಳನ್ನು ಬಳಸುತ್ತೇನೆ," ಎನ್ನುತ್ತಾರೆ ಜಲಾಲ್.


ಎಡಕ್ಕೆ: ಬಿದಿರನ್ನು ಮನೆಗೆ ತಂದ ನಂತರ, ಜಲಾಲ್ ಅವರು ಎಚ್ಚರಿಕೆಯಿಂದ 18 ರಿಂದ 28 ಇಂಚುಗಳಷ್ಟು ಉದ್ದವಿರುವ ಗಂಟುಗಳ ಮಧ್ಯದ ಭಾಗವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇದರಿಂದ ತೆಳ್ಳಗಿನ ಆಯತಾಕಾರದ ಸ್ಲಿಪ್‌ಗಳ ಮೃದುವಾದ ಹೊದಿಕೆಯನ್ನು ಹೆಣೆಯಲು ಸುಲಭವಾಗುತ್ತದೆ. ಅಲ್ಲದೇ, ಇದರಿಂದ ಬಿದಿರಿನ ಬಲೆ ಸುಂದರವಾಗಿ ಕಾಣುತ್ತದೆ. ಬಲ: 'ನಾನು ನನ್ನ ಬೆರಳುಗಳಿಂದಲೇ ಕಾತಿಗಳನ್ನು ಒಂದೊಂದಾಗಿ ಎಣಿಸುತ್ತೇನೆ. ಉದ್ದವಾದ ಬದಿಗಳು ಬೇಕಾದರೆ 280 ಬಿದಿರಿನ ಸ್ಲಿಪ್‌ಗಳು ಆಗಬೇಕು. 6 ರಿಂದ 9 ಇಂಚು ಅಗಲದ ದರ್ಕಿಗಾಗಿ ನಾನು 15 ರಿಂದ 20 ದಪ್ಪನಾದ ಆಯತಾಕಾರದ ಸ್ಲಿಪ್‌ಗಳನ್ನು ಬಳಸುತ್ತೇನೆ. ಇದರಿಂದ ಬಲೆ ಮಣ್ಣಿನ ಒತ್ತಡವನ್ನು ತಡೆದುಕೊಳ್ಳುತ್ತದೆ,' ಎಂದು ಜಲಾಲ್ ಹೇಳುತ್ತಾರೆ


ಎಡ: 'ಬಲೆಯ ಬದಿಗಳನ್ನು ಟೋಲಿಯಿಂದ ಕಟ್ಟಿದ ನಂತರ, ನಾನು ಪಕ್ಕದ ಬದಿಗಳಿಂದ ಚಾಲ್ ಅನ್ನು ಹೆಣೆಯಲು ಆರಂಭಿಸುತ್ತೇನೆ,' ಎಂದು ಜಲಾಲ್ ಹೇಳುತ್ತಾರೆ. ʼನಂತರ ನಾನು ಪರಾಗಳನ್ನು ಮಾಡಬೇಕು [ಮೀನುಗಳು ಬಲೆ ಒಳಗೆ ಬರಲು ಇರುವ ಕವಾಟಗಳು]. ದರ್ಕಿಗಳಲ್ಲಿ ಸಾಮಾನ್ಯವಾಗಿ ಮೂರು ಪರಾಗಳಿರುತ್ತವೆ ಮತ್ತು ಸೆಪ್ಪದಲ್ಲಿ ಎರಡು.ʼ ಎನ್ನುತ್ತಾರೆ ಅವರು. ಬಲ: ದರ್ಕಿ ಗಾತ್ರ 36 ಇಂಚು ಉದ್ದ, 9 ಇಂಚು ಅಗಲ ಮತ್ತು 18 ಇಂಚು ಎತ್ತರ ಇರಬೇಕು. ಸೆಪ್ಪ ಬಲೆಯಲ್ಲಿ ಮಧ್ಯ ಭಾಗ 12 ರಿಂದ 18 ಇಂಚು ಎತ್ತರ ಇರುತ್ತದೆ
ಜಲಾಲ್ ಅವರು 18 ಇಂಚು ಅಥವಾ 27 ಇಂಚು ಎತ್ತರವಿರುವ ಚದರಾಕಾರದ 480 ಬಿದಿರಿನ ಸ್ಲಿಪ್‌ಗಳನ್ನು ಮಾಡಬೇಕು. "ಇದು ತುಂಬಾ ಬೇಸರ ತರುವ ಕೆಲಸ," ಎಂದು ಅವರು ಹೇಳುತ್ತಾರೆ. "ಕಾತಿಗಳು ಗಾತ್ರ ಮತ್ತು ಆಕಾರದಲ್ಲಿ ಸಮಾನವಾಗಿರಬೇಕು ಹಾಗೂ ತುಂಬಾ ನಯವಾಗಿರಬೇಕು. ಇಲ್ಲದೇ ಇದ್ದರೆ ನೇಯ್ದ ಬದಿಗಳು ಏಕರೂಪವಾಗಿರುವುದಿಲ್ಲ," ಎನ್ನುತ್ತಾರೆ ಜಲಾಲ್. ಇದನ್ನು ಮಾಡಲು ಅವರು ಅರ್ಧ ದಿನ ತೆಗೆದುಕೊಳ್ಳುತ್ತಾರೆ.
ಬಲೆ ತಯಾರಿಕೆಯ ಅತ್ಯಂತ ಪ್ರಮುಖ ಹಂತವೆಂದರೆ ಮೀನುಗಳು ಒಳಗೆ ಬಂದು ಸಿಕ್ಕಿಹಾಕಿಕೊಳ್ಳಲು ಬೇಕಾದ ಕವಾಟಗಳನ್ನು ಮಾಡುವುದು. "ನಾನು ಒಂದೇ ಬಿದಿರಿನಿಂದ ನಾಲ್ಕು ಬೈರ್‌ಗಳನ್ನು ತಯಾರಿಸಬಲ್ಲೆ, ಇದರ ಬೆಲೆ ಸುಮಾರು 80 ರೂಪಾಯಿ. ಪ್ಲಾಸ್ಟಿಕ್ ದಾರದ ಬೆಲೆ ಸುಮಾರು 30 ರೂಪಾಯಿ ಅಗುತ್ತದೆ," ಎಂದು ಜಲಾಲ್ ಹೇಳುತ್ತಾರೆ. ಅವರು ತಯಾರಿಸುತ್ತಿರುವ ದರ್ಕಿಯ ಮೇಲಿನ ತುದಿಗಳನ್ನು ಗಂಟು ಹಾಕಲು ತಮ್ಮ ಹಲ್ಲುಗಳ ನಡುವೆ ಅಲ್ಯೂಮಿನಿಯಂ ತಂತಿಯನ್ನು ಹಿಡಿದಿಟ್ಟುಕೊಳ್ಳುತ್ತಾರೆ.
ಬಿದಿರಿನ ಸ್ಲಿಪ್‌ಗಳನ್ನು ಹೆಣೆಯುವುದು ಮತ್ತು ಗಂಟು ಕಟ್ಟುವುದು ನಾಲ್ಕು ದಿನಗಳವರೆಗೆ ನಡೆಯುವ ಶ್ರಮದ ಕೆಲಸ. "ನಿಮ್ಮ ಕಣ್ಣುಗಳು ದಾರ ಮತ್ತು ಬಿದಿರಿನ ಸ್ಲಿಪ್‌ಗಳ ಮೇಲೆಯೇ ಇರಬೇಕು. ನೀವು ರಾಡ್ ಅನ್ನು ಸೇರಿಸಿ ಹೆಣೆಯುವುದನ್ನು ಮರೆತರೆ, ಎರಡು ಬಿದಿರಿನ ಸ್ಲಿಪ್‌ಗಳು ಒಂದೇ ಗಂಟಿನ ಒಳಗೆ ಬರಬಹುದು. ಆಗ ಮತ್ತೆ ನೀವು ಎಲ್ಲವನ್ನೂ ಬಿಚ್ಚಿ ಮತ್ತು ಶುರುವಿನಿಂದಲೇ ಹೆಣೆಯುವ ಕೆಲಸವನ್ನು ಮಾಡಬೇಕಾಗುತ್ತದೆ,” ಎಂದು ಅವರು ವಿವರಿಸುತ್ತಾರೆ. "ನಿಮ್ಮ ಸಾಮರ್ಥ್ಯದ ಬಗ್ಗೆ ಮಾತನಾಡುತ್ತಿಲ್ಲ, ಆದರೆ ನಿರ್ದಿಷ್ಟ ಹಂತಗಳಲ್ಲಿ ಬಹಳ ಸೂಕ್ಷ್ಮವಾಗಿ ಹೆಣೆಯುವುದು ಮತ್ತು ಗಂಟು ಹಾಕುವುದು ತುಂಬಾ ಮುಖ್ಯ. ಗಮನ ಕೊಟ್ಟು ಕೆಲಸದಲ್ಲಿ ತಲ್ಲೀನಗೊಳ್ಳುವಾಗ ತಲೆಯಿಂದ ಕಾಲ್ಬೆರಳ ವರೆಗೆ ಬೆವರು ಹರಿಯುತ್ತದೆ,” ಎಂದು ಅವರು ಕೆಲಸದಲ್ಲಿ ವಹಿಸಬೇಕಾದ ಏಕಾಗ್ರತೆಯ ಬಗ್ಗೆ ಹೇಳುತ್ತಾರೆ.
ಮಳೆಯೂ ಕಡಿಮೆ, ಮೀನೂ ಕಡಿಮೆ ಎಂದು ಜಲಾಲ್ ತಮ್ಮ ಕಸುಬಿನ ಭವಿಷ್ಯದ ಬಗ್ಗೆ ಚಿಂತೆಗೆ ಒಳಗಾಗಿದ್ದಾರೆ. "ಇಷ್ಟು ತಾಳ್ಮೆ ಮತ್ತು ಪರಿಶ್ರಮ ಬೇಕಾಗಿರುವ ಈ ಕೌಶಲ್ಯವನ್ನು ನೋಡಲು ಮತ್ತು ಕಲಿಯಲು ಯಾರು ತಾನೆ ಬರುತ್ತಾರೆ? ಹೇಳಿ,” ಎಂದು ಅವರು ಪ್ರಶ್ನಿಸುತ್ತಾರೆ.
ಈ ವರದಿಯನ್ನು ಮೃಣಾಲಿನಿ ಮುಖರ್ಜಿ ಫೌಂಡೇಶನ್ (ಎಂಎಂಎಫ್) ನ ಫೆಲೋಶಿಪ್ ಅಡಿಯಲ್ಲಿ ಮಾಡಲಾಗಿದೆ.
ಅನುವಾದ: ಚರಣ್ ಐವರ್ನಾಡು