"ನಮ್ಮಂತಹ ವೃದ್ಧರಿಗೆ ಪಿಂಚಣಿ ನೀಡುವವರು ಯಾರು? ಯಾರೂ ಇಲ್ಲ" ಎಂದು ಚುನಾವಣಾ ಸಭೆಯ ಕುರ್ಚಿಯಲ್ಲಿ ಕುಳಿತಿದ್ದ ವೃದ್ಧರೊಬ್ಬರು ಜೋರಾಗಿ ದೂರಿದರು. ನಂತರ ಅಭ್ಯರ್ಥಿ ಉತ್ತರಿಸಿ, "ತಾವು, ನಿಮಗೆ ಪಿಂಚಣಿ ಸಿಗಲಿದೆ ಮತ್ತು ನಿಮ್ಮ ಪತ್ನಿಗೂ ತಿಂಗಳಿಗೆ 6,000 ರೂಪಾಯಿ ಸಿಗಲಿದೆ" ಎಂದರು. ಆಗ ಭಾಷಣ ಕೇಳುತ್ತಿದ್ದ ವೃದ್ಧರೊಬ್ಬರು ತಮ್ಮ ಪೇಟವನ್ನು ತೆಗೆದು ಅಭ್ಯರ್ಥಿಯ ತಲೆಯ ಮೇಲೆ ಅದನ್ನು ಇರಿಸಿ ಆಶೀರ್ವದಿಸಿದರು. ಈ ಉತ್ತರ ರಾಜ್ಯದಲ್ಲಿ ಹಾಗೆ ಮಾಡುವುದು ಗೌರವದ ಸಂಕೇತ.
ದೀಪೇಂದರ್ ಹೂಡಾ ಅವರು 2024ರ ಲೋಕಸಭಾ ಚುನಾವಣೆಗೆ ತಮ್ಮ ಕ್ಷೇತ್ರವಾದ ರೋಹ್ಟಕ್ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿದ್ದರು. ಅವರ ಮಾತುಗಳನ್ನು ಕಿವಿಗೊಟ್ಟು ಕೇಳಿದ ಜನರು ನಂತರ ತಮ್ಮಲ್ಲಿದ್ದ ಪ್ರಶ್ನೆಗಳನ್ನು ಕೇಳುವುದರ ಜೊತೆಗೆ ತಮ್ಮ ಮನಸ್ಸಿನ ಮಾತುಗಳನ್ನು ಸಹ ಹಂಚಿಕೊಂಡಿದ್ದರು.
(ವಿ.ಸೂ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ದೀಪೇಂದರ್ ಹೂಡಾ ಅವರು 7,83,578 ಮತಗಳನ್ನು ಪಡೆದು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಫಲಿತಾಂಶಗಳನ್ನು ಜೂನ್ 4, 2024ರಂದು ಘೋಷಿಸಲಾಯಿತು.)
*****
"ರೈತರ ಭೂಮಿಯನ್ನು ಕಸಿದುಕೊಳ್ಳಲು ಪ್ರಯತ್ನಿಸಿ ಅದನ್ನು ಸುಧಾರಣೆ ಎಂದು ಕರೆದ ಪಕ್ಷಕ್ಕೆ ಏಕೆ ಮತ ಚಲಾಯಿಸಬೇಕು?" ಎಂದು ಮೇ 25ರ ಮತದಾನದ ದಿನಾಂಕಕ್ಕೂ ಮುನ್ನ ಮೇ ತಿಂಗಳ ಆರಂಭದಲ್ಲಿ ಕೃಷ್ಣ ಪರಿ ವರದಿಗಾರರ ಬಳಿ ಕೇಳಿದರು. ನಾವು ರೋಹ್ಟಕ್ ಜಿಲ್ಲೆಯ ಕಲನೌರ್ ಬ್ಲಾಕಿನ ನಿಗಾನಾ ಎಂಬ ಹಳ್ಳಿಯಲ್ಲಿದ್ದೆವು. ಇದು ಸುಗ್ಗಿಯ ಕಾಲ. ಗೋಧಿ ಬೆಳೆಯನ್ನು ಕೊಯ್ಲು ಮಾಡಿ ಮಳೆಗಾಲಕ್ಕಾಗಿ ಕಾಯುತ್ತಿದ್ದ ರೈತರು, ಮುಂಬರುವ ಭತ್ತದ ಹಂಗಾಮಿಗೆ ತಮ್ಮ ಹೊಲಗಳನ್ನು ಸಿದ್ಧಪಡಿಸುತ್ತಿದ್ದರು. ಮೋಡವೂ ಕಾಣಿಸದ ಆ ದಿನ ರಸ್ತೆಗಳಿಂದ ಏಳುತ್ತಿದ್ದ ಧೂಳು ಮತ್ತು ಸುಟ್ಟ ಹೊಲಗಳಿಂದ ಬರುತ್ತಿದ್ದ ಹೊಗೆ ಗಾಳಿಯೊಂದಿಗೆ ಮುಕ್ತವಾಗಿ ಚಲಿಸುತ್ತಿತ್ತು.
ಇಲ್ಲಿನ ತಾಪಮಾನ 42 ಡಿಗ್ರಿ ಸೆಲ್ಸಿಯಸ್ ತನಕ ಮುಟ್ಟುತ್ತಿದ್ದರೆ; ಅದರೊಂದಿಗೆ ಚುನಾವಣಾ ಕಾವು ಸಹ ಏರುತ್ತಿತ್ತು. ಬದುಕಿನ ನಾಲ್ಕನೇ ದಶಕದ ಆಸುಪಾಸಿನಲ್ಲಿರುವ, ಕೃಷ್ಣ ಎಲೆಕ್ಟ್ರಿಷಿಯನ್ ಆಗಿದ್ದು, ಹತ್ತಿರದ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಒಂದು ವಾರದವರೆಗೆ ನಡೆಯಲಿರುವ ಆ ಕೆಲಸಕ್ಕೆ ಅವರು 500 ರೂ.ಗಳ ದಿನಗೂಲಿಯನ್ನು ಪಡೆಯುತ್ತಾರೆ. ಇದರೊಂದಿಗೆ ಇತರ ಕೂಲಿ ಕೆಲಸಗಳನ್ನು ಸಹ ಮಾಡುವ ಅವರು ಸಣ್ಣ ಅಂಗಡಿಯೊಂದನ್ನೂ ನಡೆಸುತ್ತಿದ್ದಾರೆ. ರೋಹ್ಟಕ್ ಜಿಲ್ಲೆಯ ಈ ಭಾಗದ ಹೆಚ್ಚಿನ ಜನರು ಕೃಷಿ ಕಾರ್ಮಿಕರಾಗಿದ್ದು, ಬದುಕು ನಡೆಸುವ ಸಲುವಾಗಿ ನಿರ್ಮಾಣ ಸ್ಥಳಗಳಲ್ಲಿನ ಕೆಲಸ ಮತ್ತು ಮನರೇಗಾ (ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ) ಯೋಜನೆಯಡಿಯಲ್ಲಿನ ಕೆಲಸವನ್ನು ಅವಲಂಬಿಸಿದ್ದಾರೆ.


ಕೃಷ್ಣ (ಎಡ) ನಿಗಾನಾದ ದಿನಗೂಲಿ ಕಾರ್ಮಿಕ. 'ರೈತರ ಭೂಮಿಯನ್ನು ಕಸಿದುಕೊಳ್ಳಲು ಪ್ರಯತ್ನಿಸಿ ಅದನ್ನು ಸುಧಾರಣೆ ಎಂದು ಕರೆದ ಪಕ್ಷಕ್ಕೆ ಏಕೆ ಮತ ಚಲಾಯಿಸಬೇಕು?' ಎಂದು ಅವರು ಕೇಳುತ್ತಾರೆ. ರೋಹ್ಟಕ್ ಜಿಲ್ಲೆಯ ಈ ಭಾಗದ ಹೆಚ್ಚಿನ ಜನರು ಕೃಷಿ ಕಾರ್ಮಿಕರಾಗಿದ್ದು, ಬದುಕು ನಡೆಸುವ ಸಲುವಾಗಿ ನಿರ್ಮಾಣ ಸ್ಥಳಗಳಲ್ಲಿನ ಕೆಲಸ ಮತ್ತು ಮನರೇಗಾ (ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ) ಯೋಜನೆಯಡಿಯಲ್ಲಿನ ಕೆಲಸವನ್ನು ಅವಲಂಬಿಸಿದ್ದಾರೆ
ಅವರ ಮನೆಗೆ ಹೊರಟ ನಾವು ದಾರಿಯಲ್ಲಿ, ಒಂದು ಜಂಕ್ಷನ್ ತಲುಪಿದೆವು. "ರೈತರು ಮತ್ತು ಕಾರ್ಮಿಕರು ಕಷ್ಟಲ್ಲಿದ್ದಾರೆ. ಸಾಮ್-ದಾಮ್-ದಂಡ್-ಭೇದ್ ಹೀಗೆ ನಾಲ್ಕೂ ಬಗೆಯಲ್ಲೂ ಪೆಟ್ಟು ತಿನ್ನುತ್ತಿದ್ದಾರೆ" ಎಂದು ಅವರು ಹೇಳುತ್ತಾರೆ. (ಕ್ರಿ.ಪೂ. ಮೂರನೇ ಶತಮಾನದಲ್ಲಿ ಬದುಕಿದ್ದ ಭಾರತೀಯ ಗುರು, ತಂತ್ರಜ್ಞ ಮತ್ತು ರಾಜ ಸಲಹೆಗಾರ ಹಾಗೂ ಚಾಣಕ್ಯ ಎಂದೂ ಗುರುತಿಸಲ್ಪಟ್ಟ ಕೌಟಿಲ್ಯನು ಅರ್ಥಶಾಸ್ತ್ರದಲ್ಲಿ ಹೇಳಿದ ಸಾಮ, ದಾನ, ದಂಡ – ಭೇದ ಎನ್ನುವ ನಾಲ್ಕು ನಿಯಮಗಳನ್ನು ಇಲ್ಲಿ ಕೃಷ್ಣ ಉಲ್ಲೇಖಿಸುತ್ತಿದ್ದಾರೆ.)
ಆದರೆ ಕೃಷ್ಣ ಹೆಚ್ಚು ಹೆಚ್ಚು ಆಧುನಿಕ ಚಾಣಕ್ಯನ ಕುರಿತಾಗಿಯೇ ಮಾತನಾಡಿದರು!
"ಆಡಳಿತ ಪಕ್ಷ (ಬಿಜೆಪಿ) ಯಾವುದೇ ರೀತಿಯಲ್ಲಿ ದೆಹಲಿ ಗಡಿಯಲ್ಲಿನ 700ಕ್ಕೂ ಹೆಚ್ಚಿನ ರೈತರ ಸಾವಿನ ವಿಷಯದಲ್ಲಿ ಜವಾಬ್ದಾರಿಯನ್ನು ತೆಗೆದುಕೊಳ್ಳಲಿಲ್ಲ" ಎಂದು ಅವರು 2020ರಲ್ಲಿ ಐತಿಹಾಸಿಕ ರೈತರ ಪ್ರತಿಭಟನೆಯನ್ನು ಉಲ್ಲೇಖಿಸಿ ಹೇಳುತ್ತಾರೆ. ಅಲ್ಲದೆ ಅವರು ಬಹಳಷ್ಟು ಸತಾಯಿಸಿ ಒಂದು ವರ್ಷದ ನಂತರ ಹಿಂತೆಗೆದುಕೊಂಡ ಕೃಷಿ ಕಾಯ್ದೆಯ ವಿಷಯದಲ್ಲೂ ಬಿಜೆಪಿಯನ್ನು ಖಂಡಿಸುತ್ತಾರೆ.
"ಲಖಿಂಪುರ್ ಖೇರಿಯಲ್ಲಿ ತೇನಿ (ಬಿಜೆಪಿ ನಾಯಕನ ಮಗ) ರೈತರನ್ನು ಹೇಗೆ ಕೊಂದ ಎನ್ನುವುದು ನೆನಪಿದೆಯೇ? ಯೇ ಮಾರ್ನೆ ಮೇನ್ ಕಂಜೂಸಿ ನಹೀ ಕರ್ತೇ. (ಕೊಲೆಯ ವಿಷಯಕ್ಕೆ ಬಂದಾಗ ಅವರು ಜಿಪುಣತನ ತೋರಿಸುವವರಲ್ಲ). ಉತ್ತರ ಪ್ರದೇಶದಲ್ಲಿ ನಡೆದ 2021ರ ಈ ಘಟನೆ ಅವರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ.
ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ತನ್ನದೇ ಪಕ್ಷದ ಸಂಸದ ಹಾಗೂ ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್ಐ) ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಬಿಜೆಪಿ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುವ ಅಂಶವು ಇಲ್ಲಿನ ಕೃಷ್ಣ ಅವರಂತಹ ಜನರಿಗೆ ಇಷ್ಟವಾಗಿಲ್ಲ. "ಸಾಕ್ಷಿ ಮಲಿಕ್ ಮತ್ತು ಅನೇಕ ಪ್ರಸಿದ್ಧ ಕುಸ್ತಿಪಟುಗಳು ಕಳೆದ ವರ್ಷ ಹೊಸದೆಹಲಿಯಲ್ಲಿ ತಿಂಗಳುಗಳ ಕಾಲ ಪ್ರತಿಭಟನೆ ನಡೆಸಿದ್ದರು. ಅಪ್ರಾಪ್ತ ಬಾಲಕಿ ಸೇರಿದಂತೆ ಹಲವಾರು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಸಿಂಗ್ ಅವರನ್ನು ಬಂಧಿಸಬೇಕೆಂದು ಅವರು ಒತ್ತಾಯಿಸುತ್ತಿದ್ದರು" ಎಂದು ಅವರು ಹೇಳುತ್ತಾರೆ.
2014ರಲ್ಲಿ ಬಿಜೆಪಿ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಕಡಿವಾಣ ಹಾಕುವುದಾಗಿ ಭರವಸೆ ನೀಡಿ ಅಧಿಕಾರಕ್ಕೆ ಬಂದಿತ್ತು. "ಆ ಎಲ್ಲಾ ಭರವಸೆಗಳು ಏನಾದವು?" ಎಂದು ಕೃಷ್ಣ ಕೇಳುತ್ತಾರೆ. "ಅವರು ಸ್ವಿಟ್ಜರ್ಲೆಂಡ್ ದೇಶದಿಂದ ಕಪ್ಪು ಹಣವನ್ನು ತಂದು ನಮ್ಮ ಖಾತೆಗಳಿಗೆ 15 ಲಕ್ಷ ಹಾಕುವುದಾಗಿ ಭರವಸೆ ನೀಡಿದ್ದರು. ಆದರೆ ಕೊನೆಗೆ ನಮಗೆ ಸಿಕ್ಕಿದ್ದು ಹಸಿವು ಮತ್ತು ರೇಷನ್ ಮಾತ್ರ.


ಬಬ್ಲಿ (ಎಡ) ಹರಿಯಾಣದ ರೋಹ್ಟಕ್ ಜಿಲ್ಲೆಯ ನಿಗಾನಾ ಎನ್ನುವ ಊರಿಗೆ ಸೇರಿದ 42 ವರ್ಷದ ಕಾರ್ಮಿಕ ಮಹಿಳೆ. ಅವರು ಹೇಳುತ್ತಾರೆ, 'ಒಂದು ದಶಕದ ಹಿಂದೆ ಬದುಕು ಸುಲಭವಾಗಿರಲಿಲ್ಲ ಆದರೆ ಆಗ ಅದು ಇಷ್ಟು ಕಠಿಣವಾಗಿಯೂ ಇರಲಿಲ್ಲ.' ವಿಶ್ವ ಚಾಂಪಿಯನ್ ನೀರಜ್ ಚೋಪ್ರಾ 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಮತ ಚಲಾಯಿಸುವಂತೆ ಜನರನ್ನು ವಿನಂತಿಸುತ್ತಿರುವ ಜಾಹೀರಾತು ಫಲಕ (ಬಲ)
ನಾವು ಕೃಷ್ಣ ಅವರ ಮನೆಗೆ ಹೋಗುವ ಹೊತ್ತಿಗೆ ಅವರ ಅತ್ತಿಗೆ ಬಬ್ಲಿ ಚುಲ್ಹಾದಲ್ಲಿ ಬೆಳಗಿನ ತಿಂಡಿ ತಯಾರಿಯ ಕೆಲಸವನ್ನು ಮುಗಿಸಿದ್ದರು. ಅವರ ಪತಿ ಆರು ವರ್ಷಗಳ ಹಿಂದೆ ಯಕೃತ್ತಿನ ಕಾಯಿಲೆಗೆ ಬಲಿಯಾದರು. ಅಂದಿನಿಂದ, 42 ವರ್ಷದ ಬಬ್ಲಿ ಮನರೇಗಾ ಯೋಜನೆ ಕೆಲಸದ ಸ್ಥಳಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
“ಒಂದು ತಿಂಗಳಷ್ಟು ಕೆಲಸ ಕೆಲಸ ಸಿಗುವುದು ಅಪರೂಪ. ಒಂದು ವೇಳೆ ಸಿಕ್ಕರೂ ಸರಿಯಾದ ಸಮಯಕ್ಕೆ ಸಂಬಳ ಬರುವುದಿಲ್ಲ. ಒಂದು ವೇಳೆ ಸಂಬಳ ಸರಿಯಾದ ಸಮಯಕ್ಕೆ ಸಿಕ್ಕರೂ ಅದರಿಂದ ಮನೆ ನಡೆಸುವುದು ಕಷ್ಟ” ಎಂದು ಅವರು ಹೇಳುತ್ತಾರೆ. ಮಾರ್ಚ್ 2024ರಲ್ಲಿ, ಅವರು ಏಳು ದಿನಗಳ ಕಾಲ ಕೆಲಸ ಮಾಡಿದರು ಆದರೆ ಅದರ ಸಂಬಳ 2,345 ರೂ. ಸಂಬಳ ಇನ್ನಷ್ಟೇ ಬರಬೇಕಿದೆ.
ಹರಿಯಾಣದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಮನರೇಗಾ ಯೋಜನೆಯಡಿ ಲಭ್ಯವಿರುವ ಕೆಲಸಗಳಲ್ಲಿ ತೀವ್ರ ಕುಸಿತ ಕಂಡುಬಂದಿದೆ. 2020-21ರಲ್ಲಿ, ರಾಜ್ಯದ 14,000ಕ್ಕೂ ಹೆಚ್ಚು ಕುಟುಂಬಗಳು ಕಾಯ್ದೆಯಡಿಯ ಭರವಸೆಯಂತೆ 100 ದಿನಗಳ ಕೆಲಸವನ್ನು ಪಡೆದಿವೆ. 2023-2024ರಲ್ಲಿ ಈ ಸಂಖ್ಯೆ 3,447ಕ್ಕೆ ಇಳಿದಿದೆ. ರೋಹ್ಟಕ್ ಜಿಲ್ಲೆಯಲ್ಲಿ, 2021-22ರಲ್ಲಿ 1,030 ಕುಟುಂಬಗಳಿಗೆ 100 ದಿನಗಳ ಕೆಲಸ ಕೆಲಸ ಸಿಕ್ಕಿದ್ದರೆ, 2023ರಲ್ಲಿ ಕೇವಲ 479 ಕುಟುಂಬಗಳಿಗೆ ಮಾತ್ರ ಸಿಕ್ಕಿದೆ.
'ಒಂದು ದಶಕದ ಹಿಂದೆ ಬದುಕು ಸುಲಭವಾಗಿರಲಿಲ್ಲ ಆದರೆ ಆಗ ಅದು ಇಷ್ಟು ಕಠಿಣವಾಗಿಯೂ ಇರಲಿಲ್ಲ' ಎನ್ನುತ್ತಾರೆ ಬಬ್ಲಿ


ಈ ಚುನಾವಣೆಯಲ್ಲಿ ಬೆಲೆ ಏರಿಕೆ ಒಂದು ನಿರ್ಣಾಯಕ ವಿಷಯವಾಗಿದೆ ಎಂದು ಕೇಸು ಪ್ರಜಾಪತಿ (ಬಲ) ಹೇಳುತ್ತಾರೆ. ಸರ್ಕಾರಿ ಶಾಲೆಯಲ್ಲಿ ಅಡುಗೆ ಕೆಲಸ ಮಾಡುವ ರಾಮರತಿ (ಬಲ) ನೀಡುತ್ತಿರುವ ಸಂಬಳ ಸಾಕಾಗುವುದಿಲ್ಲ ಎಂದು ಹೇಳುತ್ತಾರೆ
ನಿಗಾನಾದಿಂದ ಕೇವಲ ಆರು ಕಿಲೋಮೀಟರ್ ದೂರದಲ್ಲಿರುವ ಕಹನೌರ್ ಎನ್ನುವ ಊರಿನ ಕೇಸು ಪ್ರಜಾಪತಿ, ಬೆಲೆ ಏರಿಕೆ ಈ ಬಾರಿಯ ಚುನಾವಣೆಯಲ್ಲಿ ಪ್ರಮುಖ ವಿಷಯವಾಗಿ ಉಳಿದಿದೆ ಎನ್ನುತ್ತಾರೆ. 44 ವರ್ಷದ ಕೇಸು ಅವರು ಮನೆಗಳು ಮತ್ತು ಕಟ್ಟಡಗಳಿಗೆ ಟೈಲ್ಸ್ ಹಾಕುವ ಕೆಲಸ ಮಾಡುತ್ತಾರೆ. ಅವರು ಉಪ್ಪು ಮತ್ತು ಸಕ್ಕರೆಯಂತಹ ಮುಖ್ಯ ವಸ್ತುಗಳ ಬೆಲೆಗಳ ಮೂಲಕ ಹಣದುಬ್ಬರವನ್ನು ಅಳೆಯುತ್ತಾರೆ. ದಿನಗೂಲಿ ಕಾರ್ಮಿಕ ಮತ್ತು ರೋಹ್ಟಕ್ ಪ್ರದೇಶದ ಕಾರ್ಮಿಕ ಒಕ್ಕೂಟವಾದ ಭವನ್ ನಿರ್ಮಾಣ್ ಕಾರಿಗರ್ ಮಜ್ದೂರ್ ಯೂನಿಯನ್ ಸದಸ್ಯರಾಗಿರುವ ಕೇಸು, ಒಂದು ದಶಕದ ಹಿಂದೆ ಹಾಲಿನ ಬೆಲೆ ಲೀಟರಿಗೆ 30 - 35 ರೂ. ಇತ್ತು. ಈಗ ಅದು 70 ರೂ. ತಲುಪಿದೆ. ಆಗ ಒಂದು ಕಿಲೋಗ್ರಾಂ ಉಪ್ಪಿನ ಬೆಲೆ 16 ರೂ., ಈಗ ಅದು 27 ರೂಪಾಯಿಗಳಿಗೆ ತಲುಪಿದೆ.
"ಪಡಿತರ ನಮ್ಮ ಹಕ್ಕು. ಈಗ, ಇದು ಸರ್ಕಾರದ ಕೊಡುಗೆಯಂತೆ ಭಾಸವಾಗುತ್ತಿದೆ, ಅದಕ್ಕಾಗಿ ನಾವು ತಲೆಬಾಗಬೇಕಾಗಿದೆ." ಪ್ರಸ್ತುತ, ಹಳದಿ ಕಾರ್ಡ್ ಹೊಂದಿರುವವರಿಗೆ ಐದು ಕಿಲೋ ಗೋಧಿ, ಒಂದು ಕಿಲೋ ಸಕ್ಕರೆ ಮತ್ತು ಅಡುಗೆ ಎಣ್ಣೆ ಸಿಗುತ್ತಿದೆ, ಪಿಂಕ್ ಕಾರ್ಡ್ ಹೊಂದಿರುವವರಿಗೆ ತಿಂಗಳಿಗೆ 35 ಕಿಲೋ ಗೋಧಿ ಸಿಗುತ್ತದೆ. "ಈ ಹಿಂದೆ ಸರ್ಕಾರವು ಪಡಿತರ ಕಾರ್ಡ್ ಇರುವವರಿಗೆ ಸೀಮೆಎಣ್ಣೆ ನೀಡುತ್ತಿತ್ತು. ಅದನ್ನು ನಿಲ್ಲಿಸಲಾಗಿದೆ ಮತ್ತು ಎಲ್ಪಿಜಿ [ಲಿಕ್ವಿಡ್ ಪೆಟ್ರೋಲಿಯಂ ಗ್ಯಾಸ್] ಸಿಲಿಂಡರ್ ಖರೀದಿ ಮಾಡುವುದು ಕಷ್ಟವಾಗುತ್ತಿದೆ. ನಮಗೆ ಕಡಲೆ [ಕಡಲೆಕಾಳು] ಮತ್ತು ಉಪ್ಪು ಸಹ ಸಿಕ್ಕುತ್ತಿತ್ತು" ಎಂದು ಅವರು ಹೇಳುತ್ತಾರೆ. ಪ್ರಸ್ತುತ ಅದರ ಪೂರೈಕೆ ನಿಂತುಹೋಗಿದೆ.
ಉಪ್ಪು ಈಗ ರೇಷನ್ ಕಾರ್ಡಿಗೆ ನೀಡುತ್ತಿಲ್ಲವಾದ್ದರಿಂದ “ಕನಿಷ್ಟ ನಾವೀಗ ʼಹಮ್ನೇ ಸರ್ಕಾರ್ ಕಾ ನಮಕ್ ನಹೀ ಕಾಯಾʼ [ನಾವು ಸರ್ಕಾರದ ಉಪ್ಪಿನ ಋಣದಲ್ಲಿಲ್ಲ]” ಎಂದು ಹೇಳಬಹುದಾಗಿದೆ.
ಕೇಂದ್ರ ಮತ್ತು ರಾಜ್ಯ ಎರಡರಲ್ಲೂ ಬಿಜೆಪಿ ಅಧಿಕಾರದಲ್ಲಿರುವ ಹರಿಯಾಣದ 'ಡಬಲ್ ಇಂಜಿನ್' ಸರ್ಕಾರವು ಕಹನೌರ್ ಸರ್ಕಾರಿ ಶಾಲೆಯಲ್ಲಿ ಅಡುಗೆ ಮಾಡುವ ರಾಮರತಿ ಅವರಂತಹವರಿಗೂ ಅಷ್ಟೇನೂ ಸಹಾಯ ಮಾಡಿಲ್ಲ. 48 ವರ್ಷದ ರಾಮರತಿ ಸರ್ಕಾರಿ ಶಾಲೆಯಲ್ಲಿ ಮಧ್ಯಾಹ್ನದ ಊಟ ತಯಾರಿಸುವ ಕೆಲಸ ಮಾಡುತ್ತಾರೆ. "ಅಂತಹ ಸೆಕೆಯಲ್ಲಿ, ಬೆಂಕಿಯ ಮುಂದೆ ಒಂದು ನಿಮಿಷ ಸಹಿಸಲಾಗದಿರುವಾಗ, ನಾನು ತಿಂಗಳಿಗೆ ಸುಮಾರು 6,000 ರೊಟ್ಟಿಗಳನ್ನು ತಯಾರಿಸುತ್ತೇನೆ." ಈ ಕೆಲಸಕ್ಕೆ ಅವರು ತಿಂಗಳಿಗೆ 7,000 ರೂ.ಗಳನ್ನು ವೇತನವಾಗಿ ಪಡೆಯುತ್ತಾರೆ. ಈ ಸಂಬಳ ತನ್ನ ಅರ್ಧದಷ್ಟು ದುಡಿಮೆಗೂ ಸರಿ ಹೊಂದುವುದಿಲ್ಲ ಎನ್ನುವ ಅಭಿಪ್ರಾಯ ಅವರದು. ಹಣದುಬ್ಬರದ ಕಾರಣದಿಂದಾಗಿ ಆರು ಸದಸ್ಯರ ಕುಟುಂಬವನ್ನು ನಿರ್ವಹಿಸುವುದು ಅವರಿಗೆ ತುಂಬಾ ಕಷ್ಟವಾಗುತ್ತಿದೆ. “ಸೂರ್ಯ ಹುಟ್ಟುವುದರಿಂದ ಹಿಡಿದು ಮುಳುಗುವ ತನಕ ಕೆಲಸ ಮಾಡುತ್ತೇನೆ” ಎನ್ನುವ ಅವರು ಇದರಲ್ಲಿ ತಮ್ಮ ಮನೆ ಕೆಲಸದ ಲೆಕ್ಕವನ್ನು ಸೇರಿಸಿಲ್ಲ.

ಹರಿಯಾಣದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಮನರೇಗಾ ಯೋಜನೆಯಡಿ ಲಭ್ಯವಿರುವ ಕೆಲಸಗಳಲ್ಲಿ ತೀವ್ರ ಕುಸಿತ ಕಂಡುಬಂದಿದೆ. ರೋಹ್ಟಕ್ ಜಿಲ್ಲೆಯಲ್ಲಿ, 2021-22ರಲ್ಲಿ 1,030 ಕುಟುಂಬಗಳಿಗೆ 100 ದಿನಗಳ ಕೆಲಸ ಕೆಲಸ ಸಿಕ್ಕಿದ್ದರೆ, 2023ರಲ್ಲಿ ಕೇವಲ 479 ಕುಟುಂಬಗಳಿಗೆ ಮಾತ್ರ ಸಿಕ್ಕಿದೆ
"ನಾನು ಮಂದಿರದ ವಿಷಯಕ್ಕೆ (ರಾಮ ಮಂದಿರ) ಮತ ಹಾಕುವುದಿಲ್ಲ. ಆ ಕಾಶ್ಮೀರದ ವಿಷಯಕ್ಕೂ ನನಗೂ ಯಾವುದೇ ಸಂಬಂಧವಿಲ್ಲ" ಎಂದು ಹರೀಶ್ ಕುಮಾರ್ ಹೇಳುತ್ತಾರೆ. ಬಿಜೆಪಿ ಹೆಮ್ಮೆ ಪಡುವಂತಹ ಎರಡು ಸಾಧನೆಗಳು - ಅಯೋಧ್ಯೆಯಲ್ಲಿ ದೇವಾಲಯದ ಉದ್ಘಾಟನೆ ಮತ್ತು (ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ) ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿದ್ದು ಈ ದಿನಗೂಲಿ ಕಾರ್ಮಿಕನ ಉತ್ಸಾಹವನ್ನು ಹೆಚ್ಚಿಸಿಲ್ಲ.
ಹರೀಶ್ ಕಹನೌರ್‌ನಿಂದ 30 ಕಿಲೋಮೀಟರ್ ದೂರದಲ್ಲಿರುವ ಮಕ್ರೌಲಿ ಕಲಾನ್ ಎನ್ನುವಲ್ಲಿ ರಸ್ತೆ ನಿರ್ಮಾಣ ಸ್ಥಳದಲ್ಲಿ ಕೆಲಸದಲ್ಲಿ ನಿರತರಾಗಿದ್ದರು. ಅಲ್ಲಿ ಭಾರೀ ವಾಹನಗಳು ಹಾದುಹೋಗುತ್ತಿದ್ದವು, ಹರೀಶ್ ಮತ್ತು ಕೆಲವು ಗಂಡಸರು ಮತ್ತು ಮಹಿಳೆಯರು ಸುಡುವ ಬಿಸಿಲಿನಲ್ಲಿ ಕೆಲಸ ಮಾಡುತ್ತಾರೆ. ಮಹಿಳೆಯರು ಒಂದರ ನಂತರ ಒಂದರಂತೆ ಕಾಂಕ್ರೀಟ್ ಬ್ಲಾಕ್ ಗಳನ್ನು ಎತ್ತಿ ದಾಟಿಸುತ್ತಾರೆ. ಪುರುಷರು ಕೆಂಪು, ಬೂದು ಮತ್ತು ಹಳದಿ ಬಣ್ಣಗಳ ಬ್ಲಾಕ್‌ಗಳನ್ನು ಸೇರಿಸಿ ಸುಸಜ್ಜಿತ ರಸ್ತೆಯನ್ನು ನಿರ್ಮಿಸುತ್ತಾರೆ.
ಹರೀಶ್ ಕಲನೌರ್ ತಹಸಿಲ್ ಸಂಪಾಲ್ ಗ್ರಾಮದವರು. ಈ ಕೆಲಸಕ್ಕಾಗಿ ಅವರು ದಿನಕ್ಕೆ 500 ರೂ.ಗಳನ್ನು ಪಡೆಯುತ್ತಾರೆ. "ನಮ್ಮ ದಿನದ ಸಂಬಳ ಹಣದುಬ್ಬರದ ವೇಗಕ್ಕೆ ಅನುಗುಣವಾಗಿರಲಿಲ್ಲ. ಮಜ್ಬೂರಿ ಮೇ ಮೆಹ್ನತ್ ಬೇಚ್ನೆ ಕೋ ಮಜ್ದೂರಿ ಕೆಹ್ತೆ ಹೈನ್ [ಬಲವಂತಕ್ಕೆ ತಮ್ಮ ದುಡಿಮೆಯನ್ನು ಮಾರಿ ಬದುಕುವವರನ್ನು ಕಾರ್ಮಿಕರು ಎನ್ನಬಹುದು].


ರೋಹ್ಟಕ್ ತಹಸಿಲ್ ಮಕ್ರೌಲಿ ಕಲಾನ್ ಎನ್ನುವಲ್ಲಿ, ಮಹಿಳಾ ದಿನಗೂಲಿ ಕಾರ್ಮಿಕರು ಸುಸಜ್ಜಿತ ರಸ್ತೆ ನಿರ್ಮಾಣಕ್ಕಾಗಿ ಕಾಂಕ್ರೀಟ್ ಬ್ಲಾಕುಗಳನ್ನು ಸಾಗಿಸುತ್ತಿದ್ದಾರೆ. ನಿರ್ಮಲ (ಬಲ), ಇಲ್ಲಿನ ಇತರರಂತೆಯೇ ಸುಡುವ ಬೇಸಿಗೆಯ ಬಿಸಿಲಿನಲ್ಲಿ ಕೆಲಸ ಮಾಡಬೇಕು


ಹರೀಶ್ ಮತ್ತು ಪವನ್ (ಕೆಂಪು ಶರ್ಟ್) ಟ್ರ್ಯಾಕ್ಟರಿನಿಂದ ಸಿಮೆಂಟ್ ಎತ್ತುತ್ತಿದ್ದಾರೆ. ಅವರು ಕಹನೌರ್‌ನಿಂದ 30 ಕಿಲೋಮೀಟರ್ ದೂರದಲ್ಲಿರುವ ಮಕ್ರೂಲಿ ಕಲಾನ್ ಎನ್ನುವಲ್ಲಿ ರಸ್ತೆ ನಿರ್ಮಾಣ ಕೆಲಸ ಮಾಡುತ್ತಿದ್ದಾರೆ
ಅವರು ತನ್ನ ಊಟವನ್ನು ಮುಗಿಸುತ್ತಿದ್ದಂತೆ, ಕಾಂಕ್ರೀಟ್ ಮಿಶ್ರಣ ಮಾಡುವ ಕೆಲಸಕ್ಕೆ ಮರಳಬೇಕಾಗಿರುವುದರಿಂದ ಗಡಿಬಿಡಿಯಲ್ಲಿದ್ದರು. ಭಾರತದಲ್ಲಿನ ಬಹುತೇಕ ಎಲ್ಲಾ ಸಹೋದ್ಯೋಗಿಗಳಂತೆ, ಅವರು ಸಹ ಈ ಕಠಿಣ ವಾತಾವರಣದಲ್ಲಿ ಕಡಿಮೆ ವೇತನಕ್ಕೆ ಅತಿಯಾಗಿ ಕೆಲಸ ಮಾಡುತ್ತಾರೆ. "ಮೊದಲಿಗೆ ಕೆಲಸಕ್ಕೆ ಬರುವಾಗ ನಾನು ಹಣ ಸಂಪಾದಿಸಿದಂತೆ ಜನರು ನನ್ನನ್ನು ಗೌರವಿಸುತ್ತಾರೆ ಎಂದು ಭಾವಿಸಿದ್ದೆ. ಆದರೆ ಆ ಗೌರವವನ್ನೂ ಈಗಲೂ ಹುಡುಕುತ್ತಿದ್ದೇನೆ" ಎಂದು ಅವರು ಹೇಳುತ್ತಾರೆ.
“ಹೆಚ್ಚಿನ ಸಂಬಳವೊಂದೇ ನಮ್ಮ ಬೇಡಿಕೆಯಲ್ಲ. ನಮಗೆ ಸಮಾನತೆಯೂ ಬೇಕು.”
ಒಂದು ಶತಮಾನದ ಹಿಂದೆ, ಕಲನೌರ್ ತಹಸಿಲ್ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮೈಲಿಗಲ್ಲು ಎನ್ನಿಸುವಂತ ಕ್ಷಣವೊಂದಕ್ಕೆ ಸಾಕ್ಷಿಯಾಗಿತ್ತು. ಅಂದು ಮಹಾತ್ಮ ಗಾಂಧಿ ಮತ್ತು ಮೌಲಾನಾ ಅಬುಲ್ ಕಲಾಂ ಆಜಾದ್ ಅವರು ಕಲನೌರ್ ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದರು. ನವೆಂಬರ್ 8, 1920ರಂದು, ರೋಹ್ಟಕ್‌ನಲ್ಲಿ ನಡೆದ ಸಮ್ಮೇಳನದಲ್ಲಿ, ಈ ಪ್ರದೇಶದಲ್ಲಿ ಅಸಹಕಾರ ಚಳುವಳಿಯನ್ನು ಉತ್ತೇಜಿಸುವ ನಿರ್ಣಯವನ್ನು ಅಂಗೀಕರಿಸಲಾಯಿತು. ನಂತರ ಇದು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಒಂದು ಮೈಲಿಗಲ್ಲು ಎಂದು ಸಾಬೀತಾಯಿತು.
ಮತ್ತೆ ಈಗ 2024ರಲ್ಲಿ ರೋಹ್ಟಕ್ ಜನರು ರಾಷ್ಟ್ರದ ಪ್ರಜಾಪ್ರಭುತ್ವವನ್ನು ಉಳಿಸುವ ಮಹತ್ವದ ಹೋರಾಟದಲ್ಲಿ ತಾವೂ ಭಾಗಿಯಾಗಲೂ ಸರ್ವಸನ್ನದ್ದರಾಗಿದ್ದರು.
ಅನುವಾದ: ಶಂಕರ. ಎನ್. ಕೆಂಚನೂರು