"ಹದಿನಾಲ್ಕು, ಹದಿನಾರು, ಹದಿನೆಂಟು ..." ಹದಿನೆಂಟು ಇಟ್ಟಿಗೆಗಳು ಮುಗಿದ ನಂತರ, ಖಂಡೂ ಮಾನೆ ಅಠ್ಠಯ್ಯನ ಬೆನ್ನ ಮೇಲೆ ಪೇರಿಸುತ್ತಿದ್ದ ಇಟ್ಟಿಗೆ ಎಣಿಸುವುದನ್ನು ನಿಲ್ಲಿಸುತ್ತಾರೆ. ನಂತರ ಕತ್ತೆಯ ಬಳಿ ಹೊರಡುವಂತೆ ಹೇಳುತ್ತಾ: “ಚಲಾ,… ಫರ್ರ್… ಫರ್ರ್…” ಎನ್ನುತ್ತಾರೆ. ಅಠ್ಠಯ್ಯ ಮತ್ತು ಇನ್ನೆರಡು ಕತ್ತೆಗಳು ಅಲ್ಲಿಂದ 50 ಮೀಟರ್ ದೂರದಲ್ಲಿರುವ ಇಟ್ಟಿಗೆ ಭಟ್ಟಿ ಕಡೆಗೆ ನಡೆಯತೊಡಗುತ್ತವೆ. ಅಲ್ಲಿ ಇಟ್ಟಿಗೆಗಳನ್ನು ಸುಡುವ ಸಲುವಾಗಿ ಇಳಿಸಿಕೊಳ್ಳಲಾಗುತ್ತದೆ,
"ಇನ್ನೊಂದು ಗಂಟೆ ಕೆಲಸವಿದೆ, ನಂತರ ನಾವು ವಿಶ್ರಾಂತಿ ಪಡೆಯುತ್ತೇವೆ" ಎಂದು ಖಂಡೂ ಹೇಳಿದರು. ಆದರೆ ಆಗ ಬೆಳಗಿನ ಕೇವಲ ಒಂಬತ್ತು ಗಂಟೆ! ನಮ್ಮ ಗಲಿಬಿಲಿಗೊಂಡ ಮುಖಗಳನ್ನು ನೋಡುತ್ತ ಅವನು ವಿವರಿಸಿದರು: "ನಾವು ಒಂದು ಗಂಟೆಗೆ, ರಾತ್ರಿಯ ಕತ್ತಲಿನಲ್ಲಿ ಕೆಲಸ ಆರಂಭಿಸಿದ್ದೆವು. ನಮ್ಮ ಶಿಫ್ಟ್ ಬೆಳಿಗ್ಗೆ 10 ಗಂಟೆಗೆ ಕೊನೆಗೊಳ್ಳುತ್ತದೆ. ರಾತ್ಭರ್ ಹೇ ಅಸಚ್ ಚಾಲೂ ಆಹೆ [ನಾವು ಇಡೀ ರಾತ್ರಿ ಕೆಲಸ ಮಾಡಿದ್ದೇವೆ].
ಖಂಡೂ ಅವರ ನಾಲ್ಕು ಕತ್ತೆಗಳು ಇಟ್ಟಿಗೆ ಇಳಿಸಿ ತಮ್ಮ ಚೀಲಗಳೊಡನೆ ಅವರ ಬಳಿ ಮರಳಿದವು. ಅವರು ಮತ್ತೆ ಆರಂಭಿಸಿದರು: “ಹದಿನಾಲ್ಕು, ಹದಿನಾರು, ಹದಿನೆಂಟು…”
ನಂತರ, ಇದ್ದಕ್ಕಿದ್ದಂತೆ, "ರುಕೊ ..." ಅವರು ತನ್ನ ಕತ್ತೆಗಳಲ್ಲಿ ಒಂದನ್ನು ಹಿಂದಿಯಲ್ಲಿ ಕರೆದರು. "ನಮ್ಮ ಸ್ಥಳೀಯ ಕತ್ತೆಗಳು ಮರಾಠಿಯನ್ನು ಅನುಸರಿಸುತ್ತವೆ, ಆದರೆ ಇದಕ್ಕೆ ಮರಾಠಿ ಅರ್ಥವಾಗುವುದಿಲ್ಲ. ಅದು ರಾಜಸ್ಥಾನದ ಕತ್ತೆ. ನಾವು ಅದಕ್ಕೆ ಹಿಂದಿಯಲ್ಲಿ ಸೂಚನೆ ನೀಡಬೇಕು" ಎಂದು ಅವರು ಹೃತ್ಪೂರ್ವಕ ನಗುವಿನೊಂದಿಗೆ ಹೇಳಿದರು. ಮತ್ತು ನಮಗಾಗಿ ಒಂದು ಡೆಮೋ ನೀಡಿದರು : ರುಕೊ. ಕತ್ತೆ ನಿಂತಿತು. ಚಲೋ. ಕತ್ತೆ ಚಲಿಸತೊಡಗಿತು.
ತನ್ನ ನಾಲ್ಕು ಕಾಲಿನ ಸ್ನೇಹಿತರ ಬಗ್ಗೆ ಖಂಡೂ ಅವರ ಮುಖದಲ್ಲಿ ಹೆಮ್ಮೆ ಎದ್ದು ಕಾಣುತ್ತದೆ. "ಲಿಂಬೂ ಮತ್ತು ಪಂಢರಿಯಾ ಮೇಯಲು ಹೊರಟಿದ್ದಾರೆ, ಮತ್ತು ನನ್ನ ನೆಚ್ಚಿನ ಬುಲೆಟ್ ಕೂಡ. ಅವಳು ಎತ್ತರ ಮತ್ತು ಸೊಗಸಾದ ಮತ್ತು ಸೂಪರ್ ಫಾಸ್ಟ್ ಕತ್ತೆ!"

ಸಾಂಗ್ಲಿ ನಗರದ ಹೊರವಲಯದಲ್ಲಿರುವ ಸಾಂಗ್ಲಿವಾಡಿಯ ಜೋತಿಬಾ ಮಂದಿರ್ ಪ್ರದೇಶದ ಬಳಿಯ ಇಟ್ಟಿಗೆ ಗೂಡೊಂದರಲ್ಲಿ ಖಂಡೂ ಮಾಂಡೆ ಅವರು ತನ್ನ ಕತ್ತೆ ಅಧ್ಯಾ ಬೆನ್ನಿನ ಮೇಲೆ ಇಟ್ಟಿಗೆಗಳನ್ನು ಲೋಡ್ ಮಾಡುತ್ತಿರುವುದು


ಎಡ: ಜ್ಯೋತಿಬಾ ಮಂದಿರದ ಬಳಿಯ ಗೂಡಿನಲ್ಲಿ ಕರ್ನಾಟಕದ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ವಲಸೆ ಕಾರ್ಮಿಕರಾದ ವಿಲಾಸ್ ಕುಡಚಿ ಮತ್ತು ರವಿ ಕುಡಚಿ ಇಟ್ಟಿಗೆಗಳನ್ನು ತಯಾರಿಸಲು ಬಳಸಲಾಗುವ ಕಬ್ಬಿನ ಸಿಪ್ಪೆಯನ್ನು ಎತ್ತುತ್ತಿರುವುದು. ಬಲ: ಕತ್ತೆಗಳು ಒಂದು ಹೊರೆಯನ್ನು ಇಳಿಸಿದ ನಂತರ ಇನ್ನಷ್ಟು ಇಟ್ಟಿಗೆಗಳಿಗಾಗಿ ಹಿಂತಿರುಗುತ್ತವೆ
ಮಹಾರಾಷ್ಟ್ರದ ಸಾಂಗ್ಲಿ ನಗರದ ಹೊರವಲಯದಲ್ಲಿರುವ ಸಾಂಗ್ಲಿವಾಡಿಯ ಬಳಿಯ ಇಟ್ಟಿಗೆಗೂಡಿನಲ್ಲಿ ನಾವು ಅವರನ್ನು ಭೇಟಿಯಾದೆವು. ಜೋತಿಬಾ ಮಂದಿರದ ಸುತ್ತಮುತ್ತಲಿನ ಪ್ರದೇಶವು ಇಟ್ಟಿಗೆ ಗೂಡುಗಳಿಂದ ಕೂಡಿದೆ – ನಾವು ಸುಮಾರು 25 ಗೂಡುಗಳನ್ನು ನೋಡಿದೆವು
ಇಟ್ಟಿಗೆ ಉತ್ಪಾದನೆಯಲ್ಲಿ ಬಳಸಲಾಗುವ ಒಣ ಕಬ್ಬಿನ ಸಿಪ್ಪೆಯ ಸಿಹಿ ವಾಸನೆಯು ಇಟ್ಟಿಗೆ ಗೂಡುಗಳಿಂದ ಹೊರಹೊಮ್ಮುವ ಹೊಗೆಯೊಂದಿಗೆ ಬೆರೆತು ಬೆಳಗಿನ ಗಾಳಿಯಲ್ಲಿ ಸೇರಿಕೊಂಡಿತ್ತು. ಪ್ರತಿ ಗೂಡಿನಲ್ಲಿ, ಪುರುಷರು, ಮಹಿಳೆಯರು, ಮಕ್ಕಳು ಮತ್ತು ಕತ್ತೆಗಳು ಗಡಿಯಾರದಂತೆ ಕೆಲಸ ಮಾಡುವುದನ್ನು ನಾವು ನೋಡಬಹುದು. ಕೆಲವರು ಜೇಡಿಮಣ್ಣನ್ನು ಬೆರೆಸುತ್ತಿದ್ದರೆ, ಇನ್ನು ಕೆಲವರು ಇಟ್ಟಿಗೆಗಳನ್ನು ಅಚ್ಚು ಹಾಕುತ್ತಿದ್ದಾರೆ; ಕೆಲವರು ಅವುಗಳನ್ನು ಲೋಡ್ ಮಾಡುತ್ತಿದ್ದರು ಮತ್ತು ಇತರರು ಇಳಿಸಿಕೊಳ್ಳುವುದು ಮತ್ತು ಜೋಡಿಸುವುದನ್ನು ಮಾಡುತ್ತಿದ್ದರು.
ಕತ್ತೆಗಳು ಬರುತ್ತವೆ ಮತ್ತು ಕತ್ತೆಗಳು ಹೋಗುತ್ತವೆ, ಎರಡು ಜೋಡಿಗಳಲ್ಲಿ... ನಾಲ್ಕು... ಆರು...
"ನಾವು ತಲೆತಲಾಂತರಗಳಿಂದ ಕತ್ತೆಗಳನ್ನು ಸಾಕಿ ಬೆಳೆಸಿದ್ದೇವೆ" ಎಂದು ಖಂಡೂ ಹೇಳುತ್ತಾರೆ. "ನನ್ನ ಹೆತ್ತವರು, ನನ್ನ ಅಜ್ಜ-ಅಜ್ಜಿಯರು ಇದನ್ನೇ ಮಾಡುತ್ತಿದ್ದರು, ಮತ್ತು ಈಗ ನಾನು ಮಾಡುತ್ತಿದ್ದೇನೆ." ಮೂಲತಃ ಸಾಂಗ್ಲಿ ನಗರದಿಂದ ಸುಮಾರು 150 ಕಿಲೋಮೀಟರ್ ದೂರದಲ್ಲಿರುವ ಸೊಲ್ಲಾಪುರ ಜಿಲ್ಲೆಯ ಪಂಢರಪುರ ಬ್ಲಾಕಿನವರಾದ ಖಂಡೂ, ಅವರ ಕುಟುಂಬ ಮತ್ತು ಅವರ ಕತ್ತೆಗಳು ಪ್ರತಿ ವರ್ಷ ಇಟ್ಟಿಗೆ ತಯಾರಿಕೆ ಋತುವಿನಲ್ಲಿ (ನವೆಂಬರ್-ಡಿಸೆಂಬರ್ ತಿಂಗಳಿನಿಂದ ಏಪ್ರಿಲ್-ಮೇ) ತಮ್ಮ ಗ್ರಾಮವಾದ ವೇಲಾಪುರದಿಂದ ಸಾಂಗ್ಲಿಗೆ ವಲಸೆ ಹೋಗುತ್ತವೆ.
ಖಂಡೂ ಅವರ ಪತ್ನಿ ಮಾಧುರಿ, ಕತ್ತೆಗಳು ಹೊತ್ತು ತಂದ ಕಚ್ಚಾ ಇಟ್ಟಿಗೆಗಳನ್ನು ಇಳಿಸಿ, ಜೋಡಿಸುತ್ತಾ ಭಟ್ಟಿಯ ಕೆಲಸದಲ್ಲಿ ನಿರತರಾಗಿದ್ದರು. ದಂಪತಿಯ ಪುತ್ರಿಯರಾದ ಕಲ್ಯಾಣಿ, ಶ್ರದ್ಧಾ ಮತ್ತು ಶ್ರಾವಣಿ, 9 ರಿಂದ 13 ವರ್ಷ ವಯಸ್ಸಿನವರು ಕತ್ತೆಗಳೊಂದಿಗೆ ನಡೆದುಕೊಂಡು ಹೋಗುತ್ತಿದ್ದರು. 4-5 ವರ್ಷದ ಬಾಲಕಿಯ ಸಹೋದರ, ಬಿಸ್ಕತ್ತುಗಳು ಮತ್ತು ಚಹಾದೊಂದಿಗೆ ತನ್ನ ತಂದೆಯ ಹತ್ತಿರ ಕುಳಿತಿದ್ದ.


ಎಡ: ಮಾಧುರಿ ಮಾನೆ ಇಳಿಸಿಕೊಂಡಿರುವ ಇಟ್ಟಿಗೆಗಳನ್ನು ಕೆಲಸಗಾರನ ಕಡೆಗೆ ಎಸೆಯುತ್ತಿರುವುದು, ನಂತರ ಅವರು ಅವುಗಳನ್ನು ಸಾಲಿನಲ್ಲಿ ಜೋಡಿಸುತ್ತಾರೆ. ಬಲ: ಮಾಧುರಿ ಮತ್ತು ಅವರ ಮಕ್ಕಳು ಇಟ್ಟಿಗೆ ಗೂಡಿನ ಬಳಿಯಿರುವ ಇಕ್ಕಟ್ಟಾದ ಮನೆಯಲ್ಲಿ. ಈ ತಾತ್ಕಾಲಿಕ ರಚನೆಯನ್ನು ಸಡಿಲವಾಗಿ ಜೋಡಿಸಲಾದ ಇಟ್ಟಿಗೆಗಳಿಂದ ಮಾಡಲಾಗಿದೆ, ಮೇಲ್ಛಾವಣಿಗೆ ಕಲ್ನಾರಿನ ಶೀಟುಗಳನ್ನು ಹೊದೆಸಲಾಗಿದೆ. ಅಟ್ಯಾಚ್ಡ್ ಟಾಯ್ಲೆಟ್ ಇಲ್ಲ, ಹಗಲಿನಲ್ಲಿ ವಿದ್ಯುತ್ ಇರುವುದಿಲ್ಲ
"ಶ್ರಾವಣಿ ಮತ್ತು ಶ್ರದ್ಧಾ ಸಾಂಗ್ಲಿಯ ವಸತಿ ಶಾಲೆಯಲ್ಲಿ ಓದುತ್ತಾರೆ, ಆದರೆ ನಮಗೆ ಸಹಾಯ ಮಾಡಲು ನಾವು ಈಗ ಅವರನ್ನು ಕರೆಸಿಕೊಳ್ಳಬೇಕಾಯಿತು" ಎಂದು ಮಾಧುರಿ ಹೇಳುತ್ತಾರೆ. ಅವರು ಒಂದೇ ಸಮಯಕ್ಕೆ ಎರಡು ಇಟ್ಟಿಗೆಗಳನ್ನು ಎಸೆಯುತ್ತ ನಮ್ಮೊಡನೆ ಮಾತನಾಡುತ್ತಿದ್ದರು. "ನಮಗೆ ಸಹಾಯ ಮಾಡಲು ನಾವು ದಂಪತಿಗಳನ್ನು (ಗಂಡ ಮತ್ತು ಹೆಂಡತಿ) ನೇಮಿಸಿಕೊಂಡಿದ್ದೆವು. ಅವರು 80,000 ರೂಪಾಯಿಗಳ ಮುಂಗಡವನ್ನು ತೆಗೆದುಕೊಂಡು ಓಡಿಹೋದರು. ಈಗ ನಾವು ಮುಂದಿನ ಎರಡು ತಿಂಗಳಲ್ಲಿ ಇದೆಲ್ಲವನ್ನೂ ಮುಗಿಸಬೇಕಾಗಿದೆ" ಎಂದು ಅವರು ಹೇಳುತ್ತಾ, ಆತುರಾತುರವಾಗಿ ಕೆಲಸಕ್ಕೆ ಮರಳಿದರು.
ಮಾಧುರಿ ಇಳಿಸಿಕೊಳ್ಳುತ್ತಿರುವ ಪ್ರತಿಯೊಂದು ಇಟ್ಟಿಗೆಯು ಕನಿಷ್ಠ ಎರಡು ಕಿಲೋಗಳಷ್ಟು ತೂಕವನ್ನು ಹೊಂದಿರುತ್ತದೆ. ಅವರು ಅವುಗಳನ್ನು ಇಟ್ಟಿಗೆಗಳ ಎತ್ತರದ ರಾಶಿಯ ಮೇಲೆ ನಿಂತಿರುವ ಇನ್ನೊಬ್ಬ ಕೆಲಸಗಾರನತ್ತ ಎಸೆಯುತ್ತಾರೆ.
“"ಹತ್ತು, ಹನ್ನೆರಡು, ಹದಿನಾಲ್ಕು..." ಅವರು ಎಣಿಸುತ್ತಾರೆ, ಅವುಗಳನ್ನು ತ್ವರಿತವಾಗಿ ಹಿಡಿಯಲು ಬಾಗುತ್ತಾರೆ, ಮತ್ತು ಅವುಗಳನ್ನು ಭಟ್ಟಿಯಲ್ಲಿ ಬೇಯಲು ಕಾಯುತ್ತಿರುವ ಇಟ್ಟಿಗೆಗಳ ಸಾಲಿಗೆ ಸೇರಿಸುತ್ತಾರೆ.
*****
ಪ್ರತಿ ದಿನ, ಮಧ್ಯರಾತ್ರಿಯ ನಂತರ ಆರಂಭಿಸಿ ಬೆಳಿಗ್ಗೆ 10 ಗಂಟೆಯವರೆಗೆ, ಖಂಡೂ, ಮಾಧುರಿ ಮತ್ತು ಅವರ ಮಕ್ಕಳು ಒಟ್ಟಿಗೆ ಸುಮಾರು 15,000 ಇಟ್ಟಿಗೆ ತುಂಡುಗಳನ್ನು ಲೋಡ್ ಮಾಡಿ ಇಳಿಸುತ್ತಾರೆ. ಇವುಗಳನ್ನು 13 ಕತ್ತೆಗಳ ಗುಂಪಿನ ಮೂಲಕ ವರ್ಗಾಯಿಸಲಾಗುತ್ತದೆ, ಅವುಗಳಲ್ಲಿ ಪ್ರತಿಯೊಂದೂ ದಿನಕ್ಕೆ ಸುಮಾರು 2,300 ಕಿಲೋಗಳಷ್ಟು ತೂಕವನ್ನು ಹೊರುತ್ತವೆ. ಪ್ರಾಣಿಗಳು ಸಾಕಣೆದಾರರೊಡನೆ ಒಟ್ಟು 12 ಕಿಲೋಮೀಟರ್ ನಡೆಯುತ್ತವೆ.
ಖಂಡೂರವರ ಕುಟುಂಬವು ಭಟ್ಟಿಗೆ ತೆಗೆದುಕೊಂಡು ಹೋಗುವ ಪ್ರತಿ 1,000 ಇಟ್ಟಿಗೆಗಳಿಗೆ 200 ರೂ.ಗಳನ್ನು ಗಳಿಸುತ್ತದೆ. ಇಟ್ಟಿಗೆ ಗೂಡಿನ ಮಾಲೀಕರು ಆರು ತಿಂಗಳವರೆಗೆ ಕೆಲಸ ಮಾಡಲು ಅವರಿಗೆ ಪಾವತಿಸಿದ ಮುಂಗಡಕ್ಕೆ ಇದನ್ನು ಸರಿಹೊಂದಿಸಲಾಗುತ್ತದೆ. ಈ ಹಿಂದಿನ ಋತುವಿನಲ್ಲಿ, ಖಂಡೂ ಮತ್ತು ಮಾಧುರಿ 2.6 ಲಕ್ಷ ರೂ.ಗಳನ್ನು - ಪ್ರತಿ ಕತ್ತೆಗೆ 20,000 ರೂ.ಗಳನ್ನು ಮುಂಗಡವಾಗಿ ಪಡೆದರು.

ಮಾಧುರಿ ಮತ್ತು ಅವರ ಪತಿ ಖಂಡೂ (ಹಳದಿ ಟೀ-ಶರ್ಟ್ ನಲ್ಲಿ) ತಮ್ಮ ಕತ್ತೆಗಳು ಸಾಗಿಸಿದ ಇಟ್ಟಿಗೆಗಳನ್ನು ಇಳಿಸುತ್ತಿರುವುದು ಮತ್ತು ನಂತರ ಅವುಗಳನ್ನು ಜೋಡಿಸುವವರಿಗೆ ರವಾನಿಸುತ್ತಾರೆ
ಸಾಂಗ್ಲಿಯಿಂದ 75 ಕಿಲೋಮೀಟರ್ ದೂರದಲ್ಲಿರುವ ಕೊಲ್ಹಾಪುರ ಜಿಲ್ಲೆಯ ಬಮಾಬವಡೆಯಲ್ಲಿ ಎರಡು ಇಟ್ಟಿಗೆ ಗೂಡುಗಳನ್ನು ಹೊಂದಿರುವ, ತನ್ನ 20 ಹರಯದ ನಡುವಿನಲ್ಲಿರುವ ವಿಕಾಸ್ ಕುಂಬಾರ್, "ನಾವು ಸಾಮಾನ್ಯವಾಗಿ ಪ್ರತಿ ಕತ್ತೆಗೆ 20,000 ರೂಪಾಯಿಗಳನ್ನು ಲೆಕ್ಕ ಹಾಕುತ್ತೇವೆ" ಎಂದು ದೃಢಪಡಿಸಿದರು. "[ಸಾಕಣೆದಾರರಿಗೆ] ಎಲ್ಲಾ ಪಾವತಿಗಳು ಮುಂಗಡವಾಗಿ ನೀಡಲಾಗುತ್ತದೆ" ಎಂದು ಅವರು ಹೇಳುತ್ತಾರೆ. ಕತ್ತೆಗಳ ಸಂಖ್ಯೆ ಹೆಚ್ಚಾದಂತೆ ಮುಂಗಡವೂ ಹೆಚ್ಚಾಗುತ್ತದೆ.
ಅಂತಿಮ ಬಟವಾಡೆಯ ಇತ್ಯರ್ಥವು ಆರು ತಿಂಗಳ ಅವಧಿಯಲ್ಲಿ ನಿರ್ವಹಿಸಲಾದ ಒಟ್ಟು ಇಟ್ಟಿಗೆಗಳನ್ನು ಆಧರಿಸಿರುತ್ತದೆ, ಪಾವತಿಸಿದ ಮುಂಗಡ ಮತ್ತು ಇತರ ಕಡಿತಗಳನ್ನು ಕಳೆಯಲಾಗುತ್ತದೆ. "ಅವರ ಉತ್ಪಾದನೆ, ದಿನಸಿಗಾಗಿ ವಾರದ ಪೇಮೆಂಟುಗಳು [ಪ್ರತಿ ಕುಟುಂಬಕ್ಕೆ 200-250 ರೂ.ಗಳು], ಮತ್ತು ಇತರ ಯಾವುದೇ ವೆಚ್ಚಗಳಿಗಾಗುವಷ್ಟು ನಾವು ಹೊಂದಿಸಿಕೊಳ್ಳುತ್ತೇವೆ" ಎಂದು ವಿಕಾಸ್ ಹೇಳುತ್ತಾರೆ. ಮತ್ತು ಸಾಕಣೆದಾರರು ಆ ಋತುವಿನ ಮುಂಗಡವನ್ನು ಕೆಲಸ ಮಾಡಲು ಸಾಧ್ಯವಾಗದಿದ್ದರೆ, ಅವರು ಸಾಲವನ್ನು ಮುಂದಿನ ಋತುವಿಗೆ ಒಯ್ಯುತ್ತಾರೆ ಎಂದು ಅವರು ವಿವರಿಸುತ್ತಾರೆ. ಖಂಡೂ ಮತ್ತು ಮಾಧುರಿಯಂತಹ ಕೆಲವರು ತಮ್ಮ ಮುಂಗಡದ ಒಂದು ಭಾಗವನ್ನು ಸಹಾಯಕರನ್ನು ನೇಮಿಸಿಕೊಳ್ಳಲು ಮೀಸಲಿಡುತ್ತಾರೆ.
*****
"ಸಾಂಗ್ಲಿ ಜಿಲ್ಲೆಯ ಪಲುಸ್ ಮತ್ತು ಮ್ಹೈಸಾಲ್ ನಡುವೆ ಕೃಷ್ಣಾ ನದಿಯ ದಡದಲ್ಲಿ ಸುಮಾರು 450 ಇಟ್ಟಿಗೆ ಗೂಡುಗಳಿವೆ" ಎಂದು ಈ ಪ್ರದೇಶದಲ್ಲಿ ಕೆಲಸ ಮಾಡುತ್ತಿರುವ ಪ್ರಾಣಿ ಕಲ್ಯಾಣ ಸಂಸ್ಥೆಯಾದ ಅನಿಮಲ್ ರಾಹತ್‌ನ ಕ್ಷೇತ್ರ ಕಾರ್ಯಕರ್ತರೊಬ್ಬರು ಹೇಳುತ್ತಾರೆ. ಸಾಂಗ್ಲಿವಾಡಿಯು 80-85 ಕಿಲೋಮೀಟರ್ ಉದ್ದದ ಈ ನದಿ ದಂಡೆಯ ಮಧ್ಯದಲ್ಲಿದೆ. "4,000 ಕ್ಕೂ ಹೆಚ್ಚು ಕತ್ತೆಗಳು ಭಟ್ಟಿಗಳಲ್ಲಿ ಕೆಲಸ ಮಾಡುತ್ತವೆ" ಎಂದು ಅವರ ಸಹೋದ್ಯೋಗಿ ಹೇಳುತ್ತಾರೆ. ಕತ್ತೆಗಳ ಯೋಗಕ್ಷೇಮವನ್ನು ಪರಿಶೀಲಿಸಲು ಇಬ್ಬರ ತಂಡವು ವಾಡಿಕೆಯ ಭೇಟಿಯಲ್ಲಿರುತ್ತದೆ. ಅವರ ಸಂಸ್ಥೆಯು ತುರ್ತು ಆಂಬ್ಯುಲೆನ್ಸ್ ಸೇವೆಯನ್ನು ಸಹ ನಡೆಸುತ್ತದೆ ಮತ್ತು ಪ್ರಾಣಿಗಳಿಗೆ ನಿರ್ಣಾಯಕ ಆರೋಗ್ಯ ಆರೈಕೆಯನ್ನು ಒದಗಿಸುತ್ತದೆ.
ದಿನದ ಪಾಳಿಯ ಕೊನೆಯಲ್ಲಿ, ಜೋತಿಬಾ ಮಂದಿರದ ಬಳಿ ಅನೇಕ ಕತ್ತೆಗಳು ನದಿಯ ಕಡೆಗೆ ಓಡುವುದನ್ನು ನಾವು ನೋಡಿದೆವು. ಮೋಟರ್‌ಸೈಕಲ್ಗಳು ಮತ್ತು ಸೈಕಲ್ಗಳಲ್ಲಿ ಯುವ ಪುರುಷ ಸಾಕಣೆದಾರರು ಅವುಗಳನ್ನು ಮೇಯಲು ಕರೆದೊಯ್ಯುತ್ತಿದ್ದರು. ಹೆಚ್ಚಿನ ಪ್ರಾಣಿಗಳು ಆ ಪ್ರದೇಶದ ತ್ಯಾಜ್ಯ ರಾಶಿಗಳ ಮೇಲೆ ಕಸವನ್ನು ಹೆಕ್ಕಿ ತಿನ್ನುತ್ತವೆ, ಮತ್ತು ಅವುಗಳ ಮಾಲಕರು ಸಂಜೆ ಅವುಗಳನ್ನು ಮರಳಿ ಕರೆದೊಯ್ಯುತ್ತಾರೆ. ಕತ್ತೆಗಳನ್ನು ಸಾಕುವ ಖಂಡೂ, ಮಾಧುರಿ ಮತ್ತು ಇತರರು ತಮ್ಮ ಜಾನುವಾರುಗಳಿಗೆ ಆಹಾರವನ್ನು ಒದಗಿಸುತ್ತೇವೆ ಎಂದು ಹೇಳಿದರೂ, ಅದು ಎಲ್ಲಿಯೂ ಕಂಡುಬರಲಿಲ್ಲ.


ಎಡ: ಕತ್ತೆಗಳ ಗುಂಪೊಂದನ್ನು ಅವುಗಳ ಸಾಕಣೆದಾರ ಮೇಯಲು ಕರೆದೊಯ್ಯುತ್ತಿರುವುದು, ಅವರು ತನ್ನ ಮೋಟರ್ ಸೈಕಲ್ಲಿನಲ್ಲಿ ಕತ್ತೆಗಳನ್ನು ಹಿಂಬಾಲಿಸುತ್ತಿದ್ದಾರೆ. ಬಲ: ಜಾಗು ಮಾನೆಯವರ ಗುಂಪಿನ ಕತ್ತೆಯೊಂದಕ್ಕೆ ಚುಚ್ಚುಮದ್ದು ನೀಡಲು ಸಹಾಯ ಮಾಡುತ್ತಿರುವ ಎನ್‌ಜಿಒ ಕಾರ್ಯಕರ್ತ
"ನಮ್ಮ ಜಾನುವಾರುಗಳಿಗೆ ಹುಲ್ಲು ಮತ್ತು ಕಡಬ (ಜೋಳದ ಒಣ ಕಾಂಡಗಳು) ತಿನ್ನಿಸಲು ನಾವು ಪ್ರತಿ ವರ್ಷ ಎರಡು ಗುಂಟೆ (ಸುಮಾರು 0.05 ಎಕರೆ) ಕೃಷಿ ಭೂಮಿಯನ್ನು ಬಾಡಿಗೆಗೆ ಪಡೆಯುತ್ತೇವೆ" ಎಂದು 45 ವರ್ಷದ ಜನಾಬಾಯಿ ಮಾನೆ ಹೇಳುತ್ತಾರೆ. ಬಾಡಿಗೆ 2,000 ರೂಪಾಯಿಗಳು (ಆರು ತಿಂಗಳಿಗೆ). "ಆದರೆ, ನೋಡಿ, ನಮ್ಮ ಬದುಕು ಅವುಗಳ ಮೇಲೆ ಅವಲಂಬಿತವಾಗಿದೆ. ಅವುಗಳಿಗೆ ಹೊಟ್ಟೆ ತುಂಬಾ ತಿನ್ನಿಸದಿದ್ದರೆ, ನಾವು ಹೇಗೆ ದಿನದ ಹೊಟ್ಟೆಪಾಡಿಗೆ ಸಂಪಾದಿಸುವುದು?"
ಅವರು ತನ್ನ ಲೋಹದ ಛಾವಣಿಯ ಮನೆಯಲ್ಲಿ ನಮ್ಮೊಂದಿಗೆ ಮಾತನಾಡುತ್ತಲೇ ತನ್ನ ಮಧ್ಯಾಹ್ನದ ಊಟವನ್ನು ಮುಗಿಸಿದರು. ಆ ಗೋಡೆಗಳನ್ನು ಸಡಿಲವಾಗಿ ಜೋಡಿಸಿದ ಇಟ್ಟಿಗೆಗಳಿಂದ ಮಾಡಲಾಗಿದೆ, ಮತ್ತು ಮಣ್ಣಿನ ನೆಲವನ್ನು ತಾಜಾ ಹಸುವಿನ ಸಗಣಿಯಿಂದ ಸಾರಿಸಲಾಗಿತ್ತು. ನಮ್ಮನ್ನು ಪ್ಲಾಸ್ಟಿಕ್ ಚಾಪೆಯ ಮೇಲೆ ಕುಳಿತುಕೊಳ್ಳುವಂತೆ ಒತ್ತಾಯಿಸಿದರು. "ನಾವು ಫಲ್ತಾನ್ (ಸತಾರಾ ಜಿಲ್ಲೆಯ) ಮೂಲದವರು, ಆದರೆ ನನ್ನ ಕತ್ತೆಗಳಿಗೆ ಅಲ್ಲಿ ಯಾವುದೇ ಕೆಲಸವಿಲ್ಲ. ಹೀಗಾಗಿ ನಾವು ಕಳೆದ 10-12 ವರ್ಷಗಳಿಂದ ಸಾಂಗ್ಲಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ಜಿತೆ ತ್ಯನ್ನ ಕಾಮ್, ತಿಥೆ ಅಮ್ಹಿ [ಕೆಲಸ ಇರುವ ಕಡೆ ಹೋಗುತ್ತೇವೆ]" ಎಂದು ಜನಾಬಾಯಿ ಹೇಳುತ್ತಾರೆ, ಅವರ ಏಳು ಜನರ ಕುಟುಂಬವು ವರ್ಷಪೂರ್ತಿ ಸಾಂಗ್ಲಿಯಲ್ಲಿ ವಾಸಿಸುತ್ತದೆ, ಖಂಡೂ ಮತ್ತು ಅವರ ಕುಟುಂಬವು ಹಂಗಾಮು ವಲಸೆ ಕುಟುಂಬಗಳಿಗಿಂತ ಭಿನ್ನವಾದುದು.
ಜನಾಬಾಯಿ ಮತ್ತು ಅವರ ಕುಟುಂಬವು ಇತ್ತೀಚೆಗೆ ಸಾಂಗ್ಲಿ ನಗರದ ಹೊರವಲಯದಲ್ಲಿ 2.5 ಗುಂಟೆ (ಸುಮಾರು 0.6 ಎಕರೆ) ಭೂಮಿಯನ್ನು ಖರೀದಿಸಿದೆ. "ಪುನರಾವರ್ತಿತ ಪ್ರವಾಹಗಳು ನನ್ನ ಜಾನುವಾರುಗಳಿಗೆ ಮಾರಕವಾಗಿವೆ. ಆದ್ದರಿಂದ ನಾವು ಎತ್ತರವಿರುವ ಭೂಮಿಯನ್ನು ಖರೀದಿಸಿದೆವು. ನಾವು ಕತ್ತೆಗಳಿಗಾಗಿ ನೆಲಮಹಡಿ ಇರುವ ಮನೆಯನ್ನು ನಿರ್ಮಿಸುತ್ತೇವೆ ಮತ್ತು ನಾವು ಮೊದಲನೆಯ ಮಹಡಿಯಲ್ಲಿ ಉಳಿದುಕೊಳ್ಳುತ್ತೇವೆ," ಎಂದು ಮೊಮ್ಮಗ ಬಂದು ತನ್ನ ತೊಡೆಯ ಮೇಲೆ ಕುಳಿತು ಸಂತೋಷದಿಂದ ತನ್ನತ್ತ ನೋಡುತ್ತಿರುವಾಗ ಅವರೆ ಹೇಳುತ್ತಾರೆ. ಜನಾಬಾಯಿ ಆಡುಗಳನ್ನು ಸಹ ಸಾಕುತ್ತಾರೆ; ಅವು ಮೇವಿಗಾಗಿ ಕಾಯುತ್ತಾ ಕೂಗುವುವುದು ನಮಗೆ ಕೇಳುತ್ತಿತ್ತು. "ನನ್ನ ತಂಗಿ ನನಗೆ ಒಂದು ಮೇಕೆಯನ್ನು ಉಡುಗೊರೆಯಾಗಿ ಕೊಟ್ಟಳು. ಈಗ ನನ್ನ ಬಳಿ 10 ಮೇಕೆಗಳಿವೆ" ಎಂದು ಜನಾಬಾಯಿ ಸಂತೋಷದ ಸ್ವರದಲ್ಲಿ ಹೇಳುತ್ತಾರೆ.
"ಈಗ ಕತ್ತೆಗಳನ್ನು ಸಾಕುವುದು ಹೆಚ್ಚು ಹೆಚ್ಚು ಕಷ್ಟವಾಗುತ್ತಿದೆ" ಎಂದು ಅವರು ಹೇಳುತ್ತಾರೆ. "ನಮ್ಮಲ್ಲಿ 40 ಮಂದಿ ಇದ್ದರು. ಗುಜರಾತಿನ ಒಂದು ಕತ್ತೆ ಹೃದಯಾಘಾತದಿಂದ ಸತ್ತುಹೋಯಿತು. ನಮಗೆ ಅದನ್ನು ಉಳಿಸಲು ಸಾಧ್ಯವಾಗಲಿಲ್ಲ." ಅವರು ಈಗ 28 ಕತ್ತೆಗಳನ್ನು ಹೊಂದಿದ್ದಾರೆ. ಸಾಂಗ್ಲಿಯ ಪಶುವೈದ್ಯರು ಪ್ರತಿ ಆರು ತಿಂಗಳಿಗೊಮ್ಮೆ ಅಥವಾ ಎರಡು ಬಾರಿ ಈ ಜಾನುವಾರುಗಳನ್ನು ನೋಡಲು ಭೇಟಿ ನೀಡುತ್ತಾರೆ. ಆದರೆ ಕಳೆದ ಮೂರು ತಿಂಗಳಲ್ಲಿ, ಕುಟುಂಬವು ನಾಲ್ಕು ಕತ್ತೆಗಳನ್ನು ಕಳೆದುಕೊಂಡಿದೆ - ಮೂರು ಕತ್ತೆಗಳು ಮೇಯುವಾಗ ತಿಂದ ವಿಷಕಾರಿ ಮೇವಿನಿಂದ ಮತ್ತು ಒಂದು ಅಪಘಾತದಲ್ಲಿ. "ನನ್ನ ಹೆತ್ತವರ ಪೀಳಿಗೆಯು ಗಿಡಮೂಲಿಕೆ ಔಷಧಿಗಳನ್ನು ತಿಳಿದಿತ್ತು. ಆದರೆ ನಮಗೆ ಅದೆಲ್ಲ ಗೊತ್ತಿಲ್ಲ" ಎಂದು ಜನಾಬಾಯಿ ಹೇಳುತ್ತಾರೆ. "ಈಗ ನಾವು ಅಂಗಡಿಗೆ ಹೋಗಿ ಔಷಧಿಗಳ ಬಾಟಲಿಗಳನ್ನು ಖರೀದಿಸುತ್ತೇವೆ."


ಎಡ: ಜನಾಬಾಯಿ ಮಾನೆ ಮತ್ತು ಅವರ ಕುಟುಂಬವು ಸಾಂಗ್ಲಿಯಲ್ಲಿ 28 ಕತ್ತೆಗಳನ್ನು ಹೊಂದಿದೆ. 'ಈಗ ಕತ್ತೆಗಳನ್ನು ಸಾಕುವುದು ಹೆಚ್ಚು ಹೆಚ್ಚು ಕಷ್ಟವಾಗುತ್ತಿದೆ.' ಬಲ: ಅವರ ಮಗ ಸೋಮನಾಥ್ ಮಾನೆ ಕತ್ತೆಗಳು ದಿನದ ಕೆಲಸವನ್ನು ಪ್ರಾರಂಭಿಸುವ ಮೊದಲು ಅವುಗಳನ್ನು ಪರಿಶೀಲಿಸುತ್ತಿರುವುದು
*****
ಮಹಾರಾಷ್ಟ್ರದಲ್ಲಿ, ಕೈಕಾಡಿ, ಬೆಲ್ದಾರ್, ಕುಂಬಾರ್ ಮತ್ತು ವಡಾರ್ ಸೇರಿದಂತೆ ಹಲವಾರು ಗುಂಪುಗಳು ಕತ್ತೆಗಳನ್ನು ಬೆಳೆಸುತ್ತವೆ ಮತ್ತು ಹಿಂಡುಹಿಡಿಯುತ್ತವೆ. ಖಂಡು, ಮಾಧುರಿ ಮತ್ತು ಜನಾಬಾಯಿಗೆ ಸೇರಿದ ಕೈಕಾಡಿ ಸಮುದಾಯವು ಬ್ರಿಟಿಷರಿಂದ 'ಅಪರಾಧಿ' ಎಂದು ಘೋಷಿಸಲ್ಪಟ್ಟ ಅಲೆಮಾರಿ ಬುಡಕಟ್ಟು ಜನಾಂಗಗಳಲ್ಲಿ ಒಂದಾಗಿತ್ತು. 1952 ರಲ್ಲಿ ವಸಾಹತುಶಾಹಿ ಕ್ರಿಮಿನಲ್ ಬುಡಕಟ್ಟುಗಳ ಕಾಯ್ದೆಯನ್ನು ರದ್ದುಗೊಳಿಸಿದ ನಂತರ ಇವುಗಳನ್ನು 'ಡಿನೋಟಿಫೈ' ಮಾಡಲಾಯಿತು, ಆದರೆ ಅವರು ಇಂದಿಗೂ ಕಳಂಕವನ್ನು ಎದುರಿಸುತ್ತಿದ್ದಾರೆ ಮತ್ತು ಸಮಾಜದಲ್ಲಿ ಅನುಮಾನದಿಂದ ನೋಡಲ್ಪಡುತ್ತಾರೆ. ಮಹಾರಾಷ್ಟ್ರದ ಹೆಚ್ಚಿನ ಭಾಗಗಳಲ್ಲಿ, ಕೈಕಾಡಿ ಸಮುದಾಯವನ್ನು ವಿಮುಕ್ತ ಜಾತಿ (ಡಿನೋಟಿಫೈಡ್ ಟ್ರೈಬ್) ಎಂದು ಪಟ್ಟಿ ಮಾಡಲಾಗಿದೆ, ವಿದರ್ಭ ಪ್ರದೇಶದ ಎಂಟು ಜಿಲ್ಲೆಗಳನ್ನು ಹೊರತುಪಡಿಸಿ, ಅಲ್ಲಿʻ ಅದನ್ನು ಪರಿಶಿಷ್ಟ ಜಾತಿ ಎಂದು ವರ್ಗೀಕರಿಸಲಾಗಿದೆ.
ಕತ್ತೆಗಳನ್ನು ಜಾನುವಾರುಗಳಂತೆ ಸಾಕುವ ಕೈಕಾಡಿ ಸಮುದಾಯದಲ್ಲಿ ಅನೇಕರು ತಮ್ಮ ಜಾನುವಾರುಗಳನ್ನು ಪುಣೆ ಜಿಲ್ಲೆಯ ಜೆಜುರಿಯಿಂದ ಅಥವಾ ಅಹ್ಮದ್ ನಗರ ಜಿಲ್ಲೆಯ ಮಾಧಿಯಿಂದ ಖರೀದಿಸುತ್ತಾರೆ. ಕೆಲವರು ಗುಜರಾತ್ ಮತ್ತು ರಾಜಸ್ಥಾನದ ಕತ್ತೆ ಮಾರುಕಟ್ಟೆಗಳಿಗೆ ಭೇಟಿ ನೀಡುತ್ತಾರೆ. "ಒಂದು ಜೋಡಿಯ ಬೆಲೆ 60,000 ದಿಂದ 1,20,000 ರೂಪಾಯಿಗಳು" ಎಂದು ಜನಾಬಾಯಿ ಹೇಳುತ್ತಾರೆ. ಪ್ರಾಣಿಯ ವಯಸ್ಸನ್ನು ಉಲ್ಲೇಖಿಸುತ್ತಾ "ಹಲ್ಲುಗಳಿಲ್ಲದ ಕತ್ತೆಗೆ ಹೆಚ್ಚು ವೆಚ್ಚವಾಗುತ್ತದೆ" ಎಂದು ಅವರು ಹೇಳುತ್ತಾರೆ, ಹಲ್ಲುಗಳನ್ನು ಎಣಿಸುವ ಮೂಲಕ ಕತ್ತೆಯ ವಯಸ್ಸನ್ನು ಲೆಕ್ಕಹಾಕಲಾಗುತ್ತದೆ. ಕತ್ತೆಗಳಿಗೆ ಹಲ್ಲುಗಳ ಮೊದಲ ಸೆಟ್ ಹುಟ್ಟಿದ ಮೊದಲ ಕೆಲವು ವಾರಗಳಲ್ಲಿ ಬೆಳೆಯುತ್ತದೆ, ಆದರೆ ಅವು ನಿಧಾನವಾಗಿ ಉದುರುತ್ತವೆ ಮತ್ತು ಅವುಗಳಿಗೆ ಸುಮಾರು ಐದು ವರ್ಷ ವಯಸ್ಸಾದಾಗ ಶಾಶ್ವತ ವಯಸ್ಕ ಹಲ್ಲುಗಳು ಹುಟ್ಟತೊಡಗುತ್ತದೆ.
ಆದಾಗ್ಯೂ, ಕಳೆದ ದಶಕದಲ್ಲಿ ಭಾರತದ ಕತ್ತೆಗಳ ಸಂಖ್ಯೆ ತೀವ್ರವಾಗಿ ಕುಸಿದಿದೆ ಎಂಬುದು ಕಳವಳಕಾರಿಯಾಗಿದೆ. 2012 ಮತ್ತು 2019ರ ನಡುವೆ, ಅವುಗಳ ಸಂಖ್ಯೆ ಶೇಕಡಾ 61.2 ರಷ್ಟು ಕುಸಿದಿದೆ - 2012ರ ಜಾನುವಾರು ಗಣತಿಯಲ್ಲಿ ದಾಖಲಾದ 3.2 ಲಕ್ಷ ಕತ್ತೆಗಳಿಂದ 2019 ರಲ್ಲಿ ಇದು 1.2 ಲಕ್ಷಕ್ಕೆ ಇಳಿದಿದೆ. 2019ರ ಜಾನುವಾರು ಗಣತಿಯ ಪ್ರಕಾರ 17,572 ಕತ್ತೆಗಳ ಸಂತತಿಯನ್ನು ಹೊಂದಿರುವ ಮಹಾರಾಷ್ಟ್ರದಲ್ಲಿ, ಇದೇ ಅವಧಿಯಲ್ಲಿ ಒಟ್ಟುಸಂಖ್ಯೆಯು ಸುಮಾರು 40 ಪ್ರತಿಶತದಷ್ಟು ಕಡಿಮೆಯಾಗಿದೆ.
ಈ ತೀವ್ರ ಕುಸಿತವು ಲಾಭೋದ್ದೇಶರಹಿತ ಪ್ರಾಣಿ ಕಲ್ಯಾಣ ಸಂಸ್ಥೆಯಾದ ಬ್ರೂಕ್ ಇಂಡಿಯಾವನ್ನು ಪತ್ರಕರ್ತ ಶರತ್ ಕೆ ವರ್ಮಾ ಅವರಿಂದ ಸಂಶೋಧನಾತ್ಮಕ ಅಧ್ಯಯನವನ್ನು ನಡೆಸಲು ಪ್ರೇರೇಪಿಸಿತು. ಅವರ ವರದಿಯು ಈ ಅವನತಿಗೆ ಹಲವಾರು ಕಾರಣಗಳನ್ನು ಗುರುತಿಸುತ್ತದೆ - ಪ್ರಾಣಿಗಳ ಕಡಿಮೆ ಉಪಯುಕ್ತತೆ; ಸಮುದಾಯಗಳು ಅವುಗಳ ಸಾಕಣೆಯನ್ನು ನಿಲ್ಲಿಸಿರುವುದು; ಆಟೋಮೇಷನ್; ಹುಲ್ಲುಗಾವಲು ಭೂಮಿಯ ಇಳಿಕೆ; ಅಕ್ರಮ ವಧೆ; ಮತ್ತು ಕಳ್ಳತನ.


ಎಡ: ಸಾಕಣೆದಾರನೊಬ್ಬ ತನ್ನ ಕತ್ತೆಯನ್ನು ಮುದ್ದಾಡುತ್ತಿರುವುದು. ಬಲ: ಮೀರಜ್ ಪಟ್ಟಣದ ಲಕ್ಷ್ಮಿ ಮಂದಿರ ಪ್ರದೇಶದ ಇಟ್ಟಿಗೆ ಭಟ್ಟಿಯಲ್ಲಿ ಇಟ್ಟಿಗೆಗಳನ್ನು ಇಳಿಸುತ್ತಿರುವ ಕೆಲಸಗಾರ
"ದಕ್ಷಿಣದ ರಾಜ್ಯಗಳಲ್ಲಿ, ವಿಶೇಷವಾಗಿ ಆಂಧ್ರಪ್ರದೇಶದ ಗುಂಟೂರು ಪ್ರದೇಶದಲ್ಲಿ ಕತ್ತೆ ಮಾಂಸಕ್ಕೆ ಬೇಡಿಕೆಯಿದೆ" ಎಂದು ಬ್ರೂಕ್ ಇಂಡಿಯಾದ ಸಾಂಗ್ಲಿ ಮೂಲದ ಕಾರ್ಯಕ್ರಮ ಸಂಯೋಜಕ ಡಾ. ಸುಜಿತ್ ಪವಾರ್ ಹೇಳುತ್ತಾರೆ. ವರ್ಮಾ ಅವರ ಅಧ್ಯಯನವು ಮಾಂಸಕ್ಕಾಗಿ ಕತ್ತೆಗಳನ್ನು ಕಾನೂನುಬಾಹಿರವಾಗಿ ಕೊಲ್ಲುವುದು ಆಂಧ್ರದ ಹಲವಾರು ಜಿಲ್ಲೆಗಳಲ್ಲಿ ವ್ಯಾಪಕವಾಗಿದೆ ಎಂದು ಹೇಳುತ್ತದೆ. ಮಾಂಸವು ಅಗ್ಗವಾಗಿರುವುದರ ಜೊತೆಗೆ, ಔಷಧೀಯ ಮೌಲ್ಯವನ್ನು ಸಹ ಹೊಂದಿದೆ ಮತ್ತು ಪುರುಷರಲ್ಲಿ ವೀರ್ಯವನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ.
ಕತ್ತೆ ಚರ್ಮವನ್ನು ಆವರ್ತಕವಾಗಿ ಚೀನಾಕ್ಕೆ ಕಳ್ಳಸಾಗಣೆ ಮಾಡಲಾಗುತ್ತದೆ ಎಂದು ಪವಾರ್ ಹೇಳುತ್ತಾರೆ. ಇದು 'ಇಜಿಯಾವೋ' ಎಂದು ಕರೆಯಲ್ಪಡುವ ಸಾಂಪ್ರದಾಯಿಕ ಚೀನೀ ಔಷಧಿಗೆ ಅತ್ಯಗತ್ಯ ಘಟಕಾಂಶವಾಗಿದೆ ಮತ್ತು ಆದ್ದರಿಂದ ಹೆಚ್ಚಿನ ಬೇಡಿಕೆಯಲ್ಲಿದೆ. ಬ್ರೂಕ್ ಇಂಡಿಯಾ ಬಿಡುಗಡೆ ಮಾಡಿದ ವರದಿಯು ಕತ್ತೆಗಳ ವಧೆ ಮತ್ತು ಕಳ್ಳತನದ ನಡುವಿನ ಸಂಬಂಧವನ್ನು ಚಿತ್ರಿಸುತ್ತದೆ. ಚೀನಾ ಬೇಡಿಕೆಯಿಂದ ಪೋಷಿಸಲ್ಪಟ್ಟ ಕತ್ತೆ ಚರ್ಮದ ವ್ಯಾಪಾರದಲ್ಲಿನ ಹೆಚ್ಚಳವು ಭಾರತದಲ್ಲಿ ಪ್ರಾಣಿಗಳು ಅಳಿವಿನ ಅಂಚಿಗೆ ಸಾಗಲು ಕಾರಣವಾಗಿದೆ ಎಂದು ಅದು ತೀರ್ಮಾನಿಸುತ್ತದೆ.
*****
45 ವರ್ಷದ ಬಾಬಾಸಾಹೇಬ್ ಬಬನ್ ಮಾನೆ ಆರು ವರ್ಷಗಳ ಹಿಂದೆ ಕಳ್ಳತನದಿಂದಾಗಿ ತನ್ನ ಎಲ್ಲಾ 10 ಕತ್ತೆಗಳನ್ನು ಕಳೆದುಕೊಂಡಿದ್ದರು. "ಅಂದಿನಿಂದ, ನಾನು ಇಟ್ಟಿಗೆಗಳನ್ನು ಜೋಡಿಸುತ್ತಿದ್ದೇನೆ, ಮೊದಲಿಗಿಂತ ಕಡಿಮೆ ಸಂಪಾದನೆ ಮಾಡುತ್ತಿದ್ದೇನೆ." ಕತ್ತೆ ಪಶುಪಾಲಕರಿಗೆ ಪ್ರತಿ 1,000 ಇಟ್ಟಿಗೆಗಳಿಗೆ 200 ರೂ.ಗಳನ್ನು ಸಂಪಾದಿಸಿ ಕೊಟ್ಟರೆ, ಇಟ್ಟಿಗೆ ಜೋಡಿಸುವವರಿಗೆ ಕೇವಲ 180 ರೂ. (ಪಶುಪಾಲಕರಿಗೆ ಹೆಚ್ಚುವರಿ 20 ರೂಪಾಯಿಯನ್ನು ಪಶು ಆಹಾರಕ್ಕಾಗಿ ನೀಡಲಾಗುತ್ತದೆ, ಇದನ್ನು ಮಾಧುರಿ ನಮಗೆ ಹೇಳಿದ್ದರು.) ನಾವು ಬಾಬಾಸಾಹೇಬರನ್ನು ಸಾಂಗ್ಲಿವಾಡಿಯಿಂದ ಸುಮಾರು 12 ಕಿಲೋಮೀಟರ್ ದೂರದಲ್ಲಿರುವ ಮಿರಜ್ ಪಟ್ಟಣದ ಲಕ್ಷ್ಮಿ ಮಂದಿರ ಪ್ರದೇಶದ ಬಳಿ ಇರುವ ಗೂಡಿನಲ್ಲಿ ಭೇಟಿಯಾದೆವು. "ಒಮ್ಮೆ ಒಬ್ಬ ವ್ಯಾಪಾರಿಯು ಮ್ಹೈಸಲ್ ಫಾಟಾ ಬಳಿ 20 ಕತ್ತೆಗಳನ್ನು ಕಳೆದುಕೊಂಡನು" ಎಂದು ಅವರು ಹೇಳುತ್ತಾರೆ, ಈ ಗೂಡಿನಿಂದ 10 ಕಿಲೋಮೀಟರಿಗಿಂತ ಕಡಿಮೆ ದೂರದಲ್ಲಿ ನಡೆದ ಮತ್ತೊಂದು ಕಳ್ಳತನವನ್ನು ನೆನಪಿಸಿಕೊಳ್ಳುತ್ತಾರೆ. "ಅವರು ಪ್ರಾಣಿಗಳಿಗೆ ಮಾದಕವಸ್ತುಗಳನ್ನು ನೀಡಿ ತಮ್ಮ ವಾಹನಗಳಲ್ಲಿ ಏರಿಸುತ್ತಾರೆ ಎಂದು ನನಗನ್ನಿಸುತ್ತದೆ." ಎರಡು ವರ್ಷಗಳ ಹಿಂದೆ, ಜನಾಬಾಯಿಯವರ ಏಳು ಕತ್ತೆಗಳು ಮೇಯುತ್ತಿದ್ದಾಗ ಕಳ್ಳತನವಾಗಿದ್ದವು.
ಮಹಾರಾಷ್ಟ್ರದ ಸಾಂಗ್ಲಿ, ಸೊಲ್ಲಾಪುರ, ಬೀಡ್ ಮತ್ತು ಇತರ ಜಿಲ್ಲೆಗಳಲ್ಲಿ ಕತ್ತೆಗಳ ಕಳ್ಳತನಗಳು ಹೆಚ್ಚುತ್ತಿದ್ದು , ಬಾಬಾಸಾಹೇಬ್ ಮತ್ತು ಜನಾಬಾಯಿಯವರಂತಹ ಪಶುಪಾಲಕರಿಗೆ ಆರ್ಥಿಕ ಸಂಕಷ್ಟವನ್ನು ಉಂಟುಮಾಡುತ್ತಿವೆ, ಅವರ ಆದಾಯವು ಹಿಂಡಿನ ಶಕ್ತಿಯ ಮೇಲೆ ಅವಲಂಬಿತವಾಗಿರುತ್ತದೆ. "ಕಳ್ಳರು ನನ್ನ ಹಿಂಡಿನಿಂದ ಐದು ಕತ್ತೆಗಳನ್ನು ಕದ್ದಿದ್ದಾರೆ" ಎಂದು ಮೀರಜ್‌ನ ಇಟ್ಟಿಗೆಗೂಡಿನಲ್ಲಿ ಕೆಲಸ ಮಾಡುವ ಜಗು ಮಾನೆ ಹೇಳುತ್ತಾರೆ. ಇದು ಸುಮಾರು 2 ಲಕ್ಷ ರೂಪಾಯಿಗಳ ನಷ್ಟಕ್ಕೆ ಸಮಾನ. "ನಾನು ಈ ನಷ್ಟವನ್ನು ಹೇಗೆ ಮೀರಿ ನಿಲ್ಲಬೇಕು?"


ಎಡ: ಬಾಬು ವಿಠ್ಠಲ್ ಜಾಧವ್ (ಹಳದಿ ಅಂಗಿ ಧರಿಸಿರುವವರು) ಮೀರಜ್ ಬಳಿಯ ಇಟ್ಟಿಗೆಗೂಡಿನಲ್ಲಿ ಇಟ್ಟಿಗೆಗಳ ರಾಶಿಯ ಮೇಲೆ ವಿರಾಮ ತೆಗೆದುಕೊಳ್ಳುತ್ತಿರುವುದು. ಬಲ: ಕೈಕಾಡಿ ಸಮುದಾಯದ 13 ವರ್ಷದ ಬಾಲಕ ರಮೇಶ್ ಮಾನೆ, ಹುಲ್ಲು ಮತ್ತು ಒಣ ಕಾಂಡಗಳ ಹೊಲದಲ್ಲಿ ಮೇಯುತ್ತಿರುವ ತನ್ನ ಕತ್ತೆಗಳನ್ನು ಕಾಯುತ್ತಿರುವುದು
ಆದರೆ ಡಾ. ಇದಕ್ಕೆ ಪವಾರ್ ಕತ್ತೆ ಸಾಕುವವರನ್ನೂ ದೂರುತ್ತಾರೆ. ಅವರು ತಮ್ಮ ಕತ್ತೆಗಳ ಬಗ್ಗೆ ಹೆಚ್ಚು ಕಾಳಜಿ ವಹಿಸುವುದಿಲ್ಲ. ಅವುಗಳನ್ನು ಇಡೀ ದಿನ ಮೇಯಲು ಬಿಡುತ್ತಾರೆ. “ಯಾವುದಕ್ಕೂ ಗಮನ ಕೊಡುವುದಿಲ್ಲ. ಕೆಲಸದ ಸಮಯ ಬಂದಾಗ ಹೋಗಿ ಅವುಗಳನ್ನು ಹೊಡೆದುಕೊಂಡು ಬರುತ್ತಾರೆ. ಆದರೆ ಈ ಮಧ್ಯೆ ಏನಾದರೂ ಸಂಭವಿಸಿದರೆ ನೋಡಲು ಯಾರಿದ್ದಾರೆ? ” ಅವರು ಕೇಳುತ್ತಾರೆ.
ಬಾಬಾಸಾಹೇಬರೊಂದಿಗೆ ಮಾತನಾಡುವಾಗ, ಬಾಬು ವಿಠ್ಠಲ್ ಜಾಧವ್ ನಾಲ್ಕು ಕತ್ತೆಗಳ ಬೆನ್ನಿನ ಮೇಲೆ ಇಟ್ಟಿಗೆಗಳನ್ನು ಹೊರಿಸಿಕೊಂಡು ಹೋಗುತ್ತಿರುವುದು ಕಂಡುಬರುತ್ತಿತ್ತು. ಬಾಬಾ ಕೂಡ ಕೈಕಾಡಿಗರಾಗಿದ್ದು, ಕಳೆದ 25 ವರ್ಷಗಳಿಂದ ಇಟ್ಟಿಗೆ ಭಟ್ಟಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸೊಲ್ಲಾಪುರ ಜಿಲ್ಲೆಯ ಮೊಹೋಲ್ ತಾಲೂಕಿನ ಪಟ್ಕುಲ್ ಅವರ ಗ್ರಾಮ. ಅವರು ಪ್ರತಿ ವರ್ಷ ಆರು ತಿಂಗಳ ಕಾಲ ಮೀರಜ್‌ನಲ್ಲಿರುವ ಈ ಭಟ್ಟಿಯಲ್ಲಿ ಕೆಲಸ ಮಾಡುತ್ತಾರೆ. ದಣಿದಂತೆ ಕಾಣುತ್ತಿದ್ದ ಅವರು ಸ್ವಲ್ಪ ಸಮಯದವರೆಗೆ ಇಟ್ಟಿಗೆಗಳ ಮೇಲೆ ಕುಳಿತುಕೊಂಡರು. ಬೆಳಗ್ಗೆ 9 ಗಂಟೆ. ಬಾಬಾಸಾಹೇಬ್, ಇತರ ಇಬ್ಬರು ಮಹಿಳಾ ಕಾರ್ಮಿಕರೊಂದಿಗೆ ತಮಾಷೆ ಮಾಡುತ್ತಾ ಅಂದಿನ ಕೆಲಸದ ದಿನವನ್ನು ಕೊನೆಗೊಳಿಸಿದರು. ಅವರ ಹೆಂಡತಿ ಈಗ ಕೆಲಸ ಆರಂಭಿಸಿದರು. ಅವರ ಬಳಿ ಒಟ್ಟು ಆರು ಕತ್ತೆಗಳಿವೆ. ಎಲ್ಲವೂ ಸಣಕಲಾಗಿದ್ದು ಅವು ದುಡಿದು ದಣಿದಂತೆ ಕಾಣುತ್ತಿದ್ದವು. ಎರಡು ಕತ್ತೆಗಳ ಕಾಲಿಗೆ ಗಾಯಗಳಾಗಿದ್ದವು. ಇನ್ನೆರಡು ಗಂಟೆಗಳಲ್ಲಿ ಮತ್ತೆ ವಿರಾಮ ಬರಲಿದೆ ಎಂದರು ಇಲ್ಲಿನ ಕಾರ್ಮಿಕರು.
ಅಮಾವಾಸ್ಯೆಯಂದು ತಿಂಗಳಲ್ಲಿ ಕೇವಲ ಒಂದು ದಿನ ರಜೆ ಇರುವುದರಿಂದ ಎಲ್ಲರೂ ದಣಿದಿರುತ್ತಾರೆ. "ನಾವು ರಜೆ ತೆಗೆದುಕೊಂಡರೆ, ಭಟ್ಟಿಗೆ ಇಟ್ಟಿಗೆ ಸಾಗಿಸುವವರು ಯಾರು?" ಮಾಧುರಿ ಕೇಳುತ್ತಾರೆ, ಜೋತಿಬಾ ಮಂದಿರದ ಬಳಿ. "ನಾವು ಒಣಗಿದ ಇಟ್ಟಿಗೆಗಳನ್ನು ಒಯ್ಯದಿದ್ದರೆ, ಹೊಸ ಇಟ್ಟಿಗೆಗಳನ್ನು ಇಡಲು ಸ್ಥಳವಿಲ್ಲ. ಆದ್ದರಿಂದ ನಾವು ರಜೆ ತೆಗೆದುಕೊಳ್ಳಲು ಸಾಧ್ಯವಿಲ್ಲ. ಆರು ತಿಂಗಳ ಕಾಲ ಅಮಾವಾಸ್ಯೆಯಂದು ನಮ್ಮ ಏಕೈಕ ರಜಾದಿನವಾಗಿರುತ್ತದೆ" ಎಂದು ಅವರು ಹೇಳಿದರು. ಅಮಾವಾಸ್ಯೆಯಂದು ಭಟ್ಟಿಗಳು ಮುಚ್ಚಲ್ಪಡುತ್ತವೆ ಏಕೆಂದರೆ ಅಮವಾಸ್ಯೆಯ ದಿನವನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಇದನ್ನು ಹೊರತುಪಡಿಸಿ, ಕಾರ್ಮಿಕರು ಮತ್ತು ಕತ್ತೆಗಳಿಗೆ ಮೂರು ರಜಾದಿನಗಳನ್ನು ನೀಡಲಾಗುತ್ತದೆ, ಹಿಂದೂ ಹಬ್ಬಗಳಾದ: ಶಿವರಾತ್ರಿ, ಶಿಂಗಾ (ಬೇರೆಡೆ ಹೋಳಿ ಎಂದು ಆಚರಿಸಲಾಗುತ್ತದೆ) ಮತ್ತು ಗುಡಿ ಪಡವ (ಸಾಂಪ್ರದಾಯಿಕ ಹೊಸ ವರ್ಷ).
ಮಧ್ಯಾಹ್ನದ ಹೊತ್ತಿಗೆ, ಹೆಚ್ಚಿನ ಕಾರ್ಮಿಕರು ಕುಲುಮೆಯ ಬಳಿಯ ತಮ್ಮ ತಾತ್ಕಾಲಿಕ ಮನೆಗಳಿಗೆ ಮರಳುತ್ತಾರೆ. ಶ್ರಾವಣಿ ಮತ್ತು ಶ್ರದ್ಧಾ ಹತ್ತಿರದ ನಲ್ಲಿಯಲ್ಲಿ ಬಟ್ಟೆ ಒಗೆಯಲು ಹೋಗಿದ್ದಾರೆ. ಖಂಡೂ ಮಾನೆ ಕತ್ತೆಗಳನ್ನು ಮೇಯಲು ಹೊರಗೆ ಕರೆದೊಯ್ದಿದ್ದಾರೆ. ಮಾಧುರಿ ಈಗ ಕುಟುಂಬಕ್ಕಾಗಿ ಅಡುಗೆ ಮಾಡುತ್ತಾರೆ ಮತ್ತು ಸುಡುವ ಬಿಸಿಲಿನಲ್ಲಿ ಸ್ವಲ್ಪ ನಿದ್ರೆ ಮಾಡಲು ಪ್ರಯತ್ನಿಸುತ್ತಾರೆ. ಆ ದಿನದ ಮಟ್ಟಿಗೆ ಭಟ್ಟಿಯನ್ನು ಮುಚ್ಚಲಾಗುತ್ತದೆ. "ಹಣವು [ಆದಾಯ] ಉತ್ತಮವಾಗಿದೆ, ಮತ್ತು ನಾವು ಉಣ್ಣಲು-ತಿನ್ನಲು ಸಾಕಷ್ಟು ಹೊಂದಿದ್ದೇವೆ," ಎಂದು ಮಾಧುರಿ ಹೇಳುತ್ತಾರೆ, "ಆದರೆ ನಿದ್ರೆ ಇಲ್ಲ, ನಿಮಗೆ ಗೊತ್ತಿರಬಹುದು."
ರಿತಾಯನ್ ಮುಖರ್ಜಿ ಅವರು ದಿ ಸೆಂಟರ್ ಫಾರ್ ಪ್ಯಾಸ್ಟೊರಲಿಸಮ್ ನೀಡುವ ಸ್ವತಂತ್ರ ಪ್ರಯಾಣ ಅನುದಾನದ ಮೂಲಕ ಗ್ರಾಮೀಣ ಅಲೆಮಾರಿ ಸಮುದಾಯಗಳ ಬಗ್ಗೆ ವರದಿ ಮಾಡುತ್ತಾರೆ. ಈ ವರದಿಯ ವಿಷಯಗಳ ಮೇಲೆ ದಿ ಸೆಂಟರ್ ಫಾರ್ ಪ್ಯಾಸ್ಟೊರಲಿಸಮ್ ಯಾವುದೇ ಸಂಪಾದಕೀಯ ನಿಯಂತ್ರಣವನ್ನು ಚಲಾಯಿಸಿಲ್ಲ.
ಅನುವಾದ: ಶಂಕರ. ಎನ್. ಕೆಂಚನೂರು