"ನಾನು ನಿರ್ಮಿಸುವ ಪ್ರತಿಯೊಂದು ಜೋಪ್ಡಿ ಕನಿಷ್ಠ 70 ವರ್ಷಗಳ ತನಕ ಬಾಳಿಕೆ ಬರುತ್ತದೆ."
ವಿಷ್ಣು ಭೋಸಲೆ ಒಂದು ಅಪರೂಪದ ಕೌಶಲವನ್ನು ಹೊಂದಿದ್ದಾರೆ - ಅವರು ಕೊಲ್ಹಾಪುರ ಜಿಲ್ಲೆಯ ಜಾಂಬಳಿ ಗ್ರಾಮದಲ್ಲಿ ವಾಸಿಸುವ ಜೋಪ್ಡಿ (ಸಾಂಪ್ರದಾಯಿಕ ಗುಡಿಸಲು/ಜೋಪಡಿ) ತಯಾರಕರು.
ಮರದ ಚೌಕಟ್ಟು ಮತ್ತು ಹುಲ್ಲಿನಿಂದ ಗುಡಿಸಲು ನಿರ್ಮಿಸುವ ಈ ಕೌಶಲವನ್ನು 68 ವರ್ಷದ ಅವರು ತಮ್ಮ ತಂದೆ ದಿವಂಗತ ಗುಂಡು ಅವರಿಂದ ಕಲಿತರು. ಅವರು 10ಕ್ಕೂ ಹೆಚ್ಚು ಜೋಪ್ಡಿಗಳನ್ನು ನಿರ್ಮಿಸಿದ್ದಾರೆ ಮತ್ತು ಸರಿಸುಮಾರು ಅದೇ ಸಂಖ್ಯೆಯ ಜೋಪಡಿಗಳ ನಿರ್ಮಾಣದಲ್ಲಿ ಸಹಾಯ ಮಾಡಿದ್ದಾರೆ. "[ಆ ಸಮಯದಲ್ಲಿ] ಹೊಲಗಳಲ್ಲಿ ಹೆಚ್ಚಿನ ಕೆಲಸವಿಲ್ಲದ ಕಾರಣ ನಾವು [ಸಾಮಾನ್ಯವಾಗಿ] ಬೇಸಿಗೆಯಲ್ಲಿ ಮಾತ್ರ ಅವುಗಳನ್ನು ತಯಾರಿಸುತ್ತಿದ್ದೆವು" ಎಂದು ಅವರು ನೆನಪಿಸಿಕೊಳ್ಳುತ್ತಾರೆ ಮತ್ತು "ಜನರು ಜೋಪ್ಡಿಯನ್ನು ನಿರ್ಮಿಸಲು ಉತ್ಸುಕರಾಗಿದ್ದರು."
ಸುಮಾರು 1960ರ ದಶಕದವರೆಗೆ ಜಾಂಬಳಿಯಲ್ಲಿ ಅಂತಹ ನೂರಕ್ಕೂ ಹೆಚ್ಚು ಗುಡಿಸಲುಗಳು ಇದ್ದವು ಎಂದು ವಿಷ್ಣು ನೆನಪಿಸಿಕೊಳ್ಳುತ್ತಾರೆ. ಸ್ನೇಹಿತರು ಪರಸ್ಪರ ಸಹಕಾರದೊಂದಿಗೆ ಸ್ಥಳೀಯ ವಸ್ತುಗಳನ್ನು ಬಳಸಿ ಕಟ್ಟುತ್ತಿದ್ದೆವು ಎನ್ನುತ್ತಾರೆ. "ನಾವು ಜೋಪ್ಡಿ ತಯಾರಿಸಲು ಒಂದು ರೂಪಾಯಿಯನ್ನೂ ಖರ್ಚು ಮಾಡುತ್ತಿರಲಿಲ್ಲ. "ಜನರು ಮೂರು ತಿಂಗಳವರೆಗೆ ಕಾಯಲು ಸಿದ್ಧರಿದ್ದರು, ಆದರೆ ಅವರು ಸರಿಯಾದ ಸಾಹಿತ್ಯವನ್ನು [ವಸ್ತುಗಳನ್ನು] ಒಟ್ಟುಗೂಡಿಸಿದ ನಂತರವೇ ಅವರು ನಿರ್ಮಿಸಲು ಪ್ರಾರಂಭಿಸುತ್ತಿದ್ದರು" ಎಂದು ಅವರು ಹೇಳುತ್ತಾರೆ.
ಶತಮಾನದ ಅಂತ್ಯದ ವೇಳೆಗೆ, 4,963 ಜನರಿರುವ ಈ ಗ್ರಾಮದಲ್ಲಿ (ಜನಗಣತಿ 2011) ಮರದ ಮತ್ತು ಹುಲ್ಲಿನ ರಚನೆಗಳನ್ನು ಇಟ್ಟಿಗೆ, ಸಿಮೆಂಟ್ ಮತ್ತು ಟಿನ್ ಬದಲಿಸಿತು. ಸ್ಥಳೀಯ ಕುಂಬಾರರು ತಯಾರಿಸಿದ ಖಾಪ್ರಿ ಕೌಲು (ಮೇಲ್ಛಾವಣಿಯ ಹೆಂಚುಗಳು) ಅಥವಾ ಕುಂಭಾರಿ ಕೌಲುಗಳ ಆಗಮನದಿಂದ ಜೋಪ್ಡಿಗಳು ಮೊದಲು ಮರೆಗೆ ಹೋದವು, ಮತ್ತು ನಂತರ ಉತ್ತಮ ಶಕ್ತಿ ಮತ್ತು ಬಾಳಿಕೆಯನ್ನು ಹೊಂದಿದ್ದ ಯಂತ್ರದಿಂದ ತಯಾರಿಸಿದ ಬೆಂಗಳೂರು ಕೌಲುಗಳು ಕಳೆದುಹೋದವು.
ಹಂಚುಗಳಿಗೆ ಕಡಿಮೆ ನಿರ್ವಹಣೆಯ ಅಗತ್ಯವಿತ್ತು, ಜೋಪ್ಡಿಗೆ ಹುಲ್ಲು ಹೊದೆಸುವದಕ್ಕೆ ಹೋಲಿಸಿದರೆ ಆಳವಡಿಕೆ ಸುಲಭವಾಗಿತ್ತು ಮತ್ತು ಬೇಗ ಮುಗಿಯುತ್ತಿತ್ತು. ಮತ್ತು ಸಿಮೆಂಟ್ ಮತ್ತು ಇಟ್ಟಿಗೆಯ ಆಗಮನದೊಂದಿಗೆ ಜನರು ಪಕ್ಕಾ ಮನೆಯನ್ನು ನಿರ್ಮಿಸಲು ಆರಂಭಿಸಿದ ನಂತರ ಜೋಪಡಿಗಳ ಕಾಲ ಮುಗಿದೇ ಹೋಯಿತು.ಜಾಂಬಳಿಯಲ್ಲಿನ ಜನರು ಜೋಪಡಿಗಳನ್ನು ಅನಾಥವಾಗಿಸತೊಡಗಿದರು. ಇಂದು ಅಲ್ಲಿ ಕೆಲವೇ ಕೆಲವು ಜೋಪಡಿಗಳು ಉಳಿದಿವೆ.
“ಈಗ ಹಳ್ಳಿಗಳಲ್ಲಿ ಜೋಪ್ಡಿ ಕಾಣುವುದು ಅಪರೂಪ. ಕೆಲವೇ ವರ್ಷಗಳಲ್ಲಿ ನಾವು ಎಲ್ಲಾ ಸಾಂಪ್ರದಾಯಿಕ ವಸ್ತುಗಳನ್ನು ಕಳೆದುಕೊಳ್ಳಲಿದ್ದೇವೆ. ಏಕೆಂದರೆ ಇಂದು ಅವುಗಳನ್ನು ನೋಡಿಕೊಳ್ಳುವುದು ಯಾರಿಗೂ ಬೇಕಾಗಿಲ್ಲ” ಎನ್ನುತ್ತಾರೆ ವಿಷ್ಣು.
*****


ವಿಷ್ಣು ಭೋಸಲೆ ಕತ್ತಾಳೆ ನಾರುಗಳನ್ನು ಬಳಸಿ ಬಿದಿರು ಮತ್ತು ಮರದ ಗಳುಗಳನ್ನು ಕಟ್ಟುತ್ತಿದ್ದಾರೆ. ಅವರು 10ಕ್ಕೂ ಹೆಚ್ಚು ಜೋಪ್ಡಿಗಳನ್ನು ನಿರ್ಮಿಸಿದ್ದಾರೆ ಮತ್ತು ಸರಿಸುಮಾರು ಅದೇ ಸಂಖ್ಯೆಯಲ್ಲಿ ನಿರ್ಮಾಣಕ್ಕೆ ಸಹಾಯ ಮಾಡಿದ್ದಾರೆ
ವಿಷ್ಣು ಭೋಸಲೆಯವರ ಸ್ನೇಹಿತ ಮತ್ತು ನೆರೆಹೊರೆಯವರಾದ ನಾರಾಯಣ್ ಗಾಯಕ್ವಾಡ್ ಗುಡಿಸಲು ನಿರ್ಮಿಸಲು ಯೋಚಿಸಿದಾಗ ವಿಷ್ಣು ಅವರನ್ನು ಸಂಪರ್ಕಿಸಿದರು. ಅವರಿಬ್ಬರೂ ರೈತರು ಮತ್ತು ಭಾರತದಾದ್ಯಂತ ಅನೇಕ ರೈತರ ಪ್ರತಿಭಟನೆಗಳಿಗೆ ಒಟ್ಟಿಗೆ ಪ್ರಯಾಣಿಸಿದ್ದಾರೆ. ಇದನ್ನೂ ಓದಿ: ಜಾಂಬಳಿ ರೈತ: ಮುರಿದ ಕೈ, ಮುರಿಯದ ಉತ್ಸಾಹ
ಜಾಂಬಳಿಯಲ್ಲಿ ವಿಷ್ಣು ಒಂದು ಎಕರೆ ಮತ್ತು ನಾರಾಯಣ್ ಸುಮಾರು 3.25 ಎಕರೆ ಭೂಮಿಯನ್ನು ಹೊಂದಿದ್ದಾರೆ. ಅವರಿಬ್ಬರೂ ಜೋಳ, ಕಪಿಲಿ ಗೋಧಿ, ಸೋಯಾಬೀನ್, ಸಾಮಾನ್ಯ ಬೀನ್ಸ್ ಮತ್ತು ಪಾಲಕ್, ಮೆಂತ್ಯ ಮತ್ತು ಕೊತ್ತಂಬರಿಯಂತಹ ಎಲೆ ಜಾತಿಯ ತರಕಾರಿಗಳೊಂದಿಗೆ ಕಬ್ಬನ್ನು ಬೆಳೆಯುತ್ತಾರೆ.
ಒಂದು ದಶಕದ ಹಿಂದೆ ಔರಂಗಾಬಾದ್ ಜಿಲ್ಲೆಗೆ ಪ್ರಯಾಣಿಸಿ ಕೃಷಿ ಕಾರ್ಮಿಕರೊಂದಿಗೆ ಅವರ ಕೆಲಸದ ಪರಿಸ್ಥಿತಿಗಳ ಬಗ್ಗೆ ಮಾತನಾಡುತ್ತಿದ್ದಾಗ ನಾರಾಯಣ್ ಗುಡಿಸಲು ನಿರ್ಮಿಸುವ ಬಯಕೆಯನ್ನು ತಿಳಿಸಿದರು. ಇಲ್ಲಿಯೇ ಅವರು ವೃತ್ತಾಕಾರದ ಜೋಪ್ಡಿಯನ್ನು ನೋಡಿದರು ಮತ್ತು ಯೋಚಿಸಿದರು, "ಅಗ್ದಿ ಪ್ರೇಕ್ಷಣಿ [ಅತ್ಯಂತ ಸುಂದರ]. ತ್ಯಾಚಾ ಗುರುತ್ವಾಕರ್ಷಣ ಕೇಂದ್ರ ಅಗ್ದಿ ಬರೋಬರ್ ಹೋತಾ [ಗುರುತ್ವಾಕರ್ಷಣೆಯ ಕೇಂದ್ರವು ಉತ್ತಮವಾಗಿ ಸಮತೋಲನವಾಗಿತ್ತು] ಎಂದು ಅವರು ಹೇಳುತ್ತಾರೆ.
ಗುಡಿಸಲನ್ನು ಭತ್ತದ ಹುಲ್ಲಿನಿಂದ ಹೊದೆಸಲಾಯಿತು ಮತ್ತು ಪ್ರತಿಯೊಂದು ಭಾಗವೂ ಕ್ರಮಬದ್ಧವಾಗಿತ್ತು ಎಂದು ನಾರಾಯಣ್ ನೆನಪಿಸಿಕೊಳ್ಳುತ್ತಾರೆ. ಅವರು ಮತ್ತಷ್ಟು ವಿಚಾರಿಸಿದರು ಮತ್ತು ಅದನ್ನು ಕೃಷಿ ಕಾರ್ಮಿಕರೊಬ್ಬರು ನಿರ್ಮಿಸಿದ್ದಾರೆಂದು ಕಂಡುಕೊಂಡರು, ಅವರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. 76 ವರ್ಷ ವಯಸ್ಸಿನ ಅವರು ಅದನ್ನು ಅಕ್ಷರಶಃ ಟಿಪ್ಪಣಿ ಮಾಡಿಕೊಂಡರು. ಈಗ ದಶಕಗಳಿಂದ, ಅವರು ದೈನಂದಿನ ಜೀವನದ ಆಸಕ್ತಿದಾಯಕ ವಿವರಗಳನ್ನು ಹೇರಳವಾಗಿ ಗಮನಿಸುತ್ತಿದ್ದಾರೆ. ಅವರು ಪ್ರಾದೇಶಿಕ ಮರಾಠಿಯಲ್ಲಿ ಸಾವಿರಾರು ಪುಟಗಳ ಕೈಬರಹದ ಟಿಪ್ಪಣಿಗಳನ್ನು ಹೊಂದಿದ್ದಾರೆ, ಇದು ಪಾಕೆಟ್ ಗಾತ್ರದಿಂದ ಎ4ರವರೆಗೆ 40 ವಿವಿಧ ಡೈರಿಗಳಲ್ಲಿ ಹರಡಿದೆ.
ಒಂದು ದಶಕದ ನಂತರ ಅವರು ತಮ್ಮ 3.25 ಎಕರೆ ಜಮೀನಿನಲ್ಲಿ ಆ ಗುಡಿಸಲನ್ನು ಪುನರ್ನಿಮಿಸಲು ಬಯಸಿದ್ದರು, ಆದರೆ ಸವಾಲುಗಳು ಅನೇಕವಾಗಿದ್ದವು, ಅವುಗಳಲ್ಲಿ ಮುಖ್ಯವಾದುದು ಗುಡಿಸಲು ಕಟ್ಟುವವರನ್ನು ಹುಡುಕುವುದು.
ನಂತರ ಅವರು ಗುಡಿಸಲುಗಳನ್ನು ನಿರ್ಮಿಸುವ ಹಿರಿಯರಾದ ವಿಷ್ಣು ಭೋಸಲೆ ಅವರೊಂದಿಗೆ ಮಾತನಾಡಿದರು. ಆ ಪಾಲುದಾರಿಕೆಯ ಫಲಿತಾಂಶವು ಈಗ ಮರ ಮತ್ತು ಹುಲ್ಲಿನ ರೂಪದಲ್ಲಿದೆ, ಇದು ಕೈಯಿಂದ ತಯಾರಿಸಿದ ವಾಸ್ತುಶಿಲ್ಪದ ಕೆಲಸದ ಸಂಕೇತವಾಗಿದೆ.
"ಎಲ್ಲಿಯವರೆಗೆ ಈ ಜೋಪ್ಡಿ ಇರುತ್ತದೆಯೋ ಅಲ್ಲಿಯವರೆಗೆ, ಇದು ಸಾವಿರಾರು ವರ್ಷಗಳಷ್ಟು ಹಳೆಯದಾದ ಕಲೆಯನ್ನು ಯುವ ಪೀಳಿಗೆಗೆ ನೆನಪಿಸುತ್ತದೆ" ಎಂದು ನಾರಾಯಣ್ ಹೇಳುತ್ತಾರೆ. "ನನ್ನ ಕೆಲಸದ ಬಗ್ಗೆ ಜನರಿಗೆ ಬೇರೆ ಹೇಗೆ ತಿಳಿಯುತ್ತದೆ?" ಎಂದು ಅವರ ಕೆಲಸ ಪಾಲುಗಾರ ವಿಷ್ಣು ಹೇಳುತ್ತಾರೆ.
*****

ವಿಷ್ಣು ಭೋಸಲೆ (ಎಡಭಾಗದಲ್ಲಿ ನಿಂತಿರುವವರು) ಮತ್ತು ನಾರಾಯಣ್ ಗಾಯಕ್ವಾಡ್ ನೆರೆಹೊರೆಯವರು ಮತ್ತು ಆಪ್ತ ಸ್ನೇಹಿತರು, ಇಬ್ಬರೂ ಸೇರಿ ಜೋಪಡಿ ನಿರ್ಮಿಸಿದರು
![Narayan Gaikwad is examining an agave plant, an important raw material for building a jhopdi. 'This stem is strong and makes the jhopdi last much longer,' explains Vishnu and cautions, 'Cutting the fadyacha vasa [agave stem] is extremely difficult'](/media/images/_Edited-IMG_0352.max-1400x1120.jpg)
ನಾರಾಯಣ್ ಗಾಯಕ್ವಾಡ್ ಅವರು ಜೋಪ್ಡಿ ನಿರ್ಮಿಸಲು ಪ್ರಮುಖ ಕಚ್ಚಾ ವಸ್ತುವಾದ ಕತ್ತಾಳೆ ಗಿಡವನ್ನು ಪರಿಶೀಲಿಸುತ್ತಿದ್ದಾರೆ. 'ಈ ಕಾಂಡವು ಬಲವಾಗಿದೆ ಮತ್ತು ಜೋಪ್ಡಿ ಹೆಚ್ಚು ಕಾಲ ಉಳಿಯುವಂತೆ ಮಾಡುತ್ತದೆ' ಎಂದು ವಿಷ್ಣು ವಿವರಿಸುತ್ತಾರೆ ಮತ್ತು ಎಚ್ಚರಿಕೆ ನೀಡುತ್ತಾರೆ, 'ಫಡ್ಯಚಾ ವಾಸ [ಕತ್ತಾಳೆ ಕಾಂಡ] ಕತ್ತರಿಸುವುದು ತುಂಬಾ ಕಷ್ಟ'

ನಾರಾಯಣ್ ಗಾಯಕ್ವಾಡ್ (ಎಡಭಾಗದಲ್ಲಿ) ಮತ್ತು ವಿಷ್ಣು ಭೋಸಲೆ ನೆಲದಲ್ಲಿ ಹೊಂಡಗಳನ್ನು ತೋಡುತ್ತಿದ್ದಾರೆ, ಅದರಲ್ಲಿ ಕಂಬಗಳನ್ನು (ಮೆಡ್ಕಾ) ನೆಡಲಾಗುವುದು
ಗುಡಿಸಲು ನಿರ್ಮಿಸುವ ಮೊದಲ ಹಂತವೆಂದರೆ ಅದರ ಬಳಕೆಯನ್ನು ಗುರುತಿಸುವುದು, "ಅದನ್ನು ಅವಲಂಬಿಸಿ, ಗಾತ್ರ ಮತ್ತು ರಚನೆಯು ಬದಲಾಗುತ್ತದೆ" ಎಂದು ವಿಷ್ಣು ಹೇಳುತ್ತಾರೆ. ಉದಾಹರಣೆಗೆ, ಮೇವು ಶೇಖರಣಾ ಗುಡಿಸಲುಗಳು ಸಾಮಾನ್ಯವಾಗಿ ತ್ರಿಕೋನಾಕಾರದಲ್ಲಿರುತ್ತವೆ, ಆದರೆ ಸಣ್ಣ ಕುಟುಂಬಕ್ಕಾಗಿ ಕಟ್ಟುವುದಾದರೆ 12 x 10 ಅಡಿಗಳ ಆಯತಾಕಾರದ ಗುಡಿಸಲು ಕಟ್ಟಲಾಗುತ್ತದೆ.
ನಾರಾಯಣ್ ಓರ್ವ ಉತ್ಸಾಹಿ ಓದುಗರೂ ಹೌದು, ಮತ್ತು ಅವರು ಓದುವ ಕೋಣೆಯಾಗಿ ಬಳಸಲು ಸಣ್ಣ ಕೋಣೆಯ ಗಾತ್ರದ ಗುಡಿಸಲನ್ನು ಬಯಸಿದ್ದರು. ಅವರು ತಮ್ಮ ಪುಸ್ತಕಗಳು, ನಿಯತಕಾಲಿಕೆಗಳು ಮತ್ತು ಪತ್ರಿಕೆಗಳನ್ನು ಇಲ್ಲಿ ಇಡುವುದಾಗಿ ಹೇಳಿದರು.
ಅದು ಯಾವುದಕ್ಕೆ ಬಳಸಲ್ಪಡುತ್ತದೆ ಎಂಬುದು ಸ್ಪಷ್ಟವಾದ ನಂತರ, ವಿಷ್ಣುವವರು ಕೆಲವು ಕೊಂಬೆಗಳನ್ನು ತೆಗೆದುಕೊಂಡು ಗುಡಿಸಲಿನ ಸಣ್ಣ ಮಾದರಿ ಅಥವಾ ಪ್ರತಿಕೃತಿಯನ್ನು ಮಾಡಿದರು. ಕೊನೆಗೆ, ಅವರು ಮತ್ತು ನಾರಾಯಣ್ ಕಾಲು ಗಂಟೆ ಚರ್ಚಿಸಿದ ನಂತರ ಗಾತ್ರ ಮತ್ತು ಇತರ ವಿವರಗಳನ್ನು ಅಂತಿಮಗೊಳಿಸಿದರು. ಅದಾದ ನಂತರ ನಾರಾಯಣ್ ಅವರ ಅವರ ಗದ್ದೆಯಲ್ಲಿ ಗಾಳಿ ಒತ್ತಡ ಕಡಿಮೆ ಇರುವ ಜಾಗವನ್ನು ನಿರ್ಧರಿಸಿದರು.
‘‘ಬೇಸಿಗೆಯೋ ಚಳಿಗಾಲವೋ ಎಂದು ಯೋಚಿಸಿ ಗುಡಿಸಲು ಕಟ್ಟುವುದಿಲ್ಲ. ಮುಂದಿನ ಹಲವು ದಶಕಗಳವರೆಗೆ ಇದು ಹೀಗೆಯೇ ಇರಬೇಕು. ಅನೇಕ ವಿಷಯಗಳ ಬಗ್ಗೆ ಯೋಚಿಸಬೇಕು” ಎನ್ನುತ್ತಾರೆ ನಾರಾಯಣ್.
ಗುಡಿಯ ಆಯತವನ್ನು ನಿರ್ಧರಿಸಿದ ನಂತರ, ತಲಾ ಒಂದೂವರೆ ಅಡಿ ಅಂತರದ ಎರಡು ಅಡಿ ಆಳದ ಹೊಂಡ ತೋಡುವುದರೊಂದಿಗೆ ನಿರ್ಮಾಣವು ಪ್ರಾರಂಭವಾಗುತ್ತದೆ. 12x9 ಅಡಿ ಗಾತ್ರದ ಗುಡಿಸಲಿಗೆ 15 ಹೊಂಡಗಳನ್ನು ತಯಾರಿಸಲಾಗುತ್ತದೆ. ಇದನ್ನು ಮಾಡಲು ಸುಮಾರು ಒಂದು ಗಂಟೆ ತೆಗೆದುಕೊಳ್ಳುತ್ತದೆ. ನಂತರ ಪ್ಲಾಸ್ಟಿಕ್ ಚೀಲವನ್ನು ಈ ಹೊಂಡಗಳಿಗೆ ಹಾಕಲಾಗುತ್ತದೆ. "ಇದು ಮರಕ್ಕೆ ನೀರು ತಾಕದಂತೆ ತಡೆಯುತ್ತದೆ" ಎಂದು ವಿಷ್ಣು ಹೇಳುತ್ತಾರೆ. ಈ ಮರದ ಕಂಬಗಳಿಗೆ ನೀರು ತಾಕಿದರೆ ಗುಡಿಸಲಿನ ಬಲವೇ ಅಪಾಯದಲ್ಲಿದೆಯೆಂದು ಅರ್ಥ.
ಎರಡು ದೂರದ ಗುಳಿಗಳಲ್ಲಿ ಮತ್ತು ಮಧ್ಯದಲ್ಲಿರುವ ಒಂದು ಗುಳಿಯಲ್ಲಿ ವಿಷ್ಣು ಮತ್ತು ಮೇಸ್ತ್ರಿ ಮತ್ತು ಸ್ನೇಹಿತ ಅಶೋಕ್ ಭೋಸಲೆ ಎಚ್ಚರಿಕೆಯಿಂದ ಮೇಡ್ಕಾವನ್ನು ಇರಿಸಿದ್ದಾರೆ. ಮೇಡ್ಕಾ ಎನ್ನುವುದು 12 ಅಡಿ ಎತ್ತರದ ಕವೆಯಿರುವ ಕಹಿಬೇವು ಅಥವಾ ಗಂಧದ ಮರದ ಕಂಬ.
ಎರಡು ಕಡೆಗಳಲ್ಲಿ ಉದ್ದನೆಯ ಕಂಬಗಳನ್ನು ನೆಡಲಾಗುತ್ತಾದೆ. “ಎರಡು ಮೇಡ್ಕಾಗಳನ್ನು ಕೇಂದ್ರ ಕಂಬಗಳನ್ನಾಗಿ ನೆಡಲಾಗುತ್ತದೆ. ಇವುಗಳನ್ನು ಆಡ್ ಎಂದು ಕರೆಯಲಾಗುತ್ತದೆ. ಈ ಎರಡು ಕಂಬಗಳು 12 ಅಡಿ ಎತ್ತರವಿದ್ದರೆ ಉಳಿದವು 10 ಅಡಿಯಿರುತ್ತವೆ” ಎಂದು ನಾರಾಯಣ್ ಹೇಳುತ್ತಾರೆ.


ಎಡ: ನಾರಾಯಣ ಗಾಯಕವಾಡ್ ಅವರು ಗುಡಿಸಲಿನ ಅಡಿಪಾಯವನ್ನು ಸಿದ್ಧಪಡಿಸಲು ಎರಡು ಅಡಿ ಆಳದ ಹೊಂಡಗಳನ್ನು ಅಗೆಯುತ್ತಿರುವುದು. ಬಲ: ಅಶೋಕ್ ಭೋಸ್ಲೆ (ಎಡಭಾಗದಲ್ಲಿ) ಮತ್ತು ವಿಷ್ಣು ಭೋಸ್ಲೆ ಅವರು ಮೇಡ್ಕಾವನ್ನು ಸ್ಥಾಪಿಸಿದ್ದಾರೆ


ನಾರಾಯಣ ಬಾಪು ಮತ್ತು ವಿಷ್ಣು (ನೀಲಿ ಉಡುಪಿನಲ್ಲಿ) ಕೊಲ್ಲಾಪುರದ ಜಾಂಬ್ಲಿಯಲ್ಲಿ ನಾರಾಯಣ್ ಅವರ ಜಮೀನಿನಲ್ಲಿ ಗುಡಿಸಲು ನಿರ್ಮಿಸುತ್ತಿದ್ದಾರೆ
ನಂತರ, ಈ ಮರದ ಮಾಡಿನ ಮೇಲೆ ಹುಲ್ಲು ಬರುತ್ತದೆ; ಎರಡು ಅಡಿ ಎತ್ತರದ ಮೇಡ್ಕಾವನ್ನು ಮಳೆ ನೀರು ಕೆಳಗೆ ಜಾರುವಂತೆ ಮಾಡಲು ಬಳಸಲಾಗುತ್ತದೆ.
ಅಂತಹ ಎಂಟು ಮೇಡ್ಕಾಗಳನ್ನು ನೇರವಾಗಿ ನಿಲ್ಲಿಸಿದ ನಂತರ, ಜೋಪ್ಡಿಯ ತಳವು ಸಿದ್ಧವಾಗುತ್ತದೆ. ಮೇಡ್ಕಾಗಳನ್ನು ನಿಲ್ಲಿಸಲು ಸುಮಾರು ಎರಡು ಗಂಟೆಗಳ ಸಮಯ ತೆಗೆದುಕೊಳ್ಳುತ್ತದೆ. ಈ ಮೇಡ್ಕಾಗಳಿಂದ, ಸ್ಥಳೀಯ ಬಿದಿರಿನಿಂದ ತಯಾರಿಸಿದ ವಿಲು ಎಂದು ಕರೆಯಲ್ಪಡುವ ಜೋಪ್ಡಿಯ ಕೆಳಭಾಗದ ಎರಡೂ ತುದಿಗಳನ್ನು ಸಂಪರ್ಕಿಸಲು ಸಹಾಯ ಮಾಡಲು ಜೋಡಿಸಲಾಗುತ್ತದೆ.
"ಈಗ ಚಂದನ್ ಮತ್ತು ಬಬೂಲ್ ಮರಗಳನ್ನು ಹುಡುಕುವುದು ಕಷ್ಟವಾಗುತ್ತಿದೆ" ಎಂದು ವಿಷ್ಣು ಹೇಳುತ್ತಾರೆ. "ಈ ಎಲ್ಲಾ ಪ್ರಮುಖ [ಸ್ಥಳೀಯ] ಮರಗಳಿದ್ದ ಜಾಗದಲ್ಲಿ ಈಗ ಕಬ್ಬು ಅಥವಾ ಕಟ್ಟಡಗಳಿವೆ."
ಮಾಡು ಸಿದ್ಧವಾದ ನಂತರ ಅದರ ನಡುವಿನ ಗಳುಗಳನ್ನು ಜೊಡಿಸಲಾಗುತ್ತದೆ. ಈ ಗುಡಿಸಲಿಗಾಗಿ ವಿಷ್ಣುವವರು 44 ಗಳುಗಳನ್ನು ಬಳಸಲು ಯೋಜಿಸಿದ್ದಾರೆ. ಮಾಡಿನ ಎರಡು ಬದಿಯಲ್ಲಿ 22 ಗಳು ಇರಲಿವೆ. ಇವುಗಳನ್ನು ಮರಾಠಿಯಲ್ಲಿ ಫಡ್ಯಾಚ ವಾಸ ಎನ್ನಲಾಗುತ್ತದೆ. ಇವುಗಳನ್ನು ಕತ್ತಾಳೆ ಕಾಂಡದಿಂದ ಮಾಡಲಾಗಿದೆ. ಕತ್ತಾಳೆ ಗಿಡವು 25-30 ಅಡಿ ಎತ್ತರ ಬೆಳೆಯುತ್ತದೆ. ಇದು ತನ್ನ ಗಟ್ಟಿತನಕ್ಕಾಗಿ ಹೆಸರುವಾಸಿ.
"ಈ ಕಾಂಡವು ಬಲವಾಗಿರುತ್ತದೆ ಮತ್ತು ಜೋಪ್ಡಿ ಹೆಚ್ಚು ಕಾಲ ಉಳಿಯುವಂತೆ ಮಾಡುತ್ತದೆ" ಎಂದು ವಿಷ್ಣು ವಿವರಿಸುತ್ತಾನೆ. ರಾಫ್ಟರ್ ಗಳು ಹೆಚ್ಚಾದಷ್ಟೂ ಶಕ್ತಿ ಹೆಚ್ಚುತ್ತದೆ. ಆದರೆ ಅವರು ಎಚ್ಚರಿಸುತ್ತಾರೆ, "ಫಡ್ಯಚಾ ವಾಸವನ್ನು ಕತ್ತರಿಸುವುದು ತುಂಬಾ ಕಷ್ಟ."
ಸಮತಲ ಮರದ ಚೌಕಟ್ಟನ್ನು ಕಟ್ಟಲು ಕತ್ತಾಳೆ ನಾರುಗಳನ್ನು ಬಳಸಲಾಗುತ್ತದೆ - ಅವು ಅಸಾಧಾರಣವಾಗಿ ಬಾಳಿಕೆ ಬರುತ್ತವೆ. ಕತ್ತಾಳೆ ಎಲೆಗಳಿಂದ ನಾರನ್ನು ಹೊರತೆಗೆಯುವುದು ಕಷ್ಟದ ಕೆಲಸ. ನಾರಾಯಣ್ ಇದನ್ನು ಕರಗತ ಮಾಡಿಕೊಂಡಿದ್ದಾರೆ, ಮತ್ತು ಕುಡಗೋಲು ಬಳಸಿ ನಾರುಗಳನ್ನು ಹೊರತೆಗೆಯಲು ಅವರಿಗೆ 20 ಸೆಕೆಂಡುಗಳಿಗಿಂತ ಕಡಿಮೆ ಸಮಯ ಸಾಕಾಗುತ್ತದೆ. "ಕತ್ತಾಳೆ ಎಲೆಗಳ ಒಳಗೆ ನಾರುಗಳಿವೆ ಎಂದು ಜನರಿಗೆ ತಿಳಿದಿಲ್ಲ" ಎಂದು ಅವರು ನಗುತ್ತಾ ಹೇಳುತ್ತಾರೆ.
ಈ ನಾರುಗಳನ್ನು ಪರಿಸರ ಸ್ನೇಹಿ ಜೈವಿಕ ವಿಘಟನೀಯ ಹಗ್ಗಗಳನ್ನು ತಯಾರಿಸಲು ಸಹ ಬಳಸಲಾಗುತ್ತದೆ. (ಓದಿ: ಕಣ್ಮರೆಯಾಗುವ ಭಾರತೀಯ ಹಗ್ಗ .)

ಅಶೋಕ್ ಭೋಸಲೆ ಒಣಗಿದ ಕಬ್ಬಿನ ತುಂಡುಗಳನ್ನು ವಿಷ್ಣು ಭೋಸಲೆ ಅವರಿಗೆ ಹಸ್ತಾಂತರಿಸಿದರು. ಇದುಜಾನುವಾರುಗಳಿಗೆ ಒಂದು ಪ್ರಮುಖ ಆಹಾರ, ಕಬ್ಬಿನ ತುದಿಗಳು ಜಲನಿರೋಧಕ ಮತ್ತು ಇವು ಹುಲ್ಲು ಹಾಸಿಗೆ ನಿರ್ಣಾಯಕವಾಗಿವೆ

ಅಗತ್ಯ ಕಚ್ಚಾ ವಸ್ತುಗಳು ಸುಲಭವಾಗಿ ಲಭ್ಯವಿಲ್ಲದ ಕಾರಣ ಜೋಪ್ಡಿಯನ್ನು ನಿರ್ಮಿಸುವುದು ಕಷ್ಟಕರವಾಗಿದೆ. ನಾರಾಯಣ್ ಅತ್ಯುತ್ತಮ ಕಚ್ಚಾ ವಸ್ತುಗಳನ್ನು ಹುಡುಕಲು ಒಂದು ವಾರಕ್ಕೂ ಹೆಚ್ಚು ಸಮಯವನ್ನು ಕಳೆದರು ಮತ್ತು ಮುಳ್ಳುಗಳು ಮತ್ತು ಚೂಪಾದ ಎಲೆಯ ತುದಿಗಳಿಂದ ಚುಚ್ಚಿಸಿಕೊಂಡಿದ್ದರು
ಮರದ ಚೌಕಟ್ಟುಗಳು ತಯಾರಾದ ನಂತರ, ಗೋಡೆಗಳನ್ನು ತೆಂಗಿನ ಗರಿಗಳು ಮತ್ತು ಕಬ್ಬಿನ ಕಾಂಡಗಳಿಂದ ರಚಿಸಲಾಗುತ್ತದೆ, ಇದರಿಂದ ಕುಡಗೋಲನ್ನು ಸಹ ಸುಲಭವಾಗಿ ಅದರೊಳಗೆ ಸಿಲುಕಿಸಿಡಬಹುದು.
ಈಗ ಗುಡಿಸಲಿನ ವಿನ್ಯಾಸವು ಸಾಕಷ್ಟು ಸ್ಪಷ್ಟವಾಗಿದೆ. ಛಾವಣಿಗೆ ಕಬ್ಬಿನ ಕೊಡಿಯ ತುದಿಯ ಎಲೆಗಳನ್ನು ಬಳಸಲಾಗುತ್ತದೆ. “ಹಿಂದೆ ಇದನ್ನು ಜಾನುವಾರುಗಳಿಲ್ಲದ ಮನೆಯ ರೈತರಿಂದ ಉಚಿತವಾಗಿ ಪಡೆಯುತ್ತಿದ್ದೆವು.” ಆದರೆ ಈ ಉಪ ಉತ್ಪನ್ನವೀಗ ಜಾನುವಾರುಗಳಿಗೆ ಮುಖ್ಯ ಆಹಾರವಾಗಿದೆ. ಹೀಗಾಗಿ ಜನರು ಅದನ್ನು ನೀಡುತ್ತಿಲ್ಲ.
ಜೀಳ ಮತ್ತು ಕಪ್ಲಿ ಗೋಧಿಯ ಒಣಗಿದ ಕಾಂಡಗಳನ್ನು ಛಾವಣಿಗೆ ಹೊದೆಸಲು ಸಹ ಬಳಸಲಾಗುತ್ತದೆ. ಇದು ಗುಡಿಸಲಿನ ಅಂದವನ್ನು ಹೆಚ್ಚಿಸುತ್ತದೆ. “ಒಂದು ಜೋಪಡಿಗೆ ಎಂಟು ಬಿಂದಾಗಳಷ್ಟು ಬೇಕಾಗುತ್ತದೆ [ಸರಾಸರಿ 200-250 ಕೆಜಿ ಕಬ್ಬಿನ ಗರಿಗಳು] ಎನ್ನುತ್ತಾರೆ ನಾರಾಯಣ್.
ಛಾವಣಿ ಹಾಕುವುದು ಶ್ರಮದಾಯಕ ಕೆಲಸ. ಇದಕ್ಕೆ ಸುಮಾರು ಮೂರು ದಿನ ಮೂರು ಜನ ದಿನಾಲೂ ಏಳೆಂಟು ಗಂಟೆ ಶ್ರಮ ಹಾಕಬೇಕಾಗುತ್ತದೆ. “ಹುಲ್ಲನ್ನು ಸಮಾನಾಗಿ ಹಾಸಬೇಕಾಗುತ್ತದೆ ಇಲ್ಲವಾದರೆ ನೀರು ಒಳ ಬರುವ ಸಾಧ್ಯತೆಯಿರುತ್ತದೆ.” ಎನ್ನುತ್ತಾರೆ ವಿಷ್ಣು. ಹುಲ್ಲನ್ನು 3ರಿಂದ 4 ವರ್ಷಗಳಿಗೊಮ್ಮೆ ಬದಲಾಯಿಸಲಾಗುತ್ತದೆ. ಈ ಪ್ರಕ್ರಿಯೆಯನ್ನು ಮರಾಠಿಯಲ್ಲಿ ಚಪ್ಪರ್ ಶೇಖರ್ನೆ ಎಂದು ಕರೆಯಲಾಗುತ್ತದೆ.
"ಸಾಂಪ್ರದಾಯಿಕವಾಗಿ, ಜಾಂಬಳಿಯಲ್ಲಿ ಪುರುಷರು ಮಾತ್ರ ಜೋಪ್ಡಿಗಳನ್ನು ತಯಾರಿಸುತ್ತಾರೆ, ಆದರೆ ಕಚ್ಚಾ ವಸ್ತುಗಳನ್ನು ಹುಡುಕಲು ಮತ್ತು ಮಣ್ಣನ್ನು ಸಮತಟ್ಟು ಮಾಡಲು ಸಹಾಯ ಮಾಡುವಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸುತ್ತಾರೆ" ಎಂದು ವಿಷ್ಣು ಅವರ ಪತ್ನಿ ಅಂಜನಾ ಹೇಳುತ್ತಾರೆ.
ಈಗ ರಚನೆಯು ಪೂರ್ಣಗೊಂಡಿರುವುದರಿಂದ, ಬಹಳಷ್ಟು ನೀರನ್ನು ಹಾಕುವ ಮೂಲಕ ಕೆಳಗಿರುವ ಮಣ್ಣನ್ನು ಹದ ಮಾಡಲಾಗುತ್ತದೆ, ನಂತರ ಮುಂದಿನ ಮೂರು ದಿನಗಳಲ್ಲಿ ಒಣಗಲು ಬಿಡಲಾಗುತ್ತದೆ. "ಇದು ಮಣ್ಣಿನ ಜಿಗುಟು ಗುಣಲಕ್ಷಣಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ" ಎಂದು ನಾರಾಯಣ್ ವಿವರಿಸುತ್ತಾರೆ. ಅದು ಮುಗಿದ ನಂತರ, ನಾರಾಯಣ್ ತನ್ನ ರೈತ ಸ್ನೇಹಿತರಿಂದ ತಂದ ಪಂಢರಿ ಮತಿ (ಬಿಳಿ ಮಣ್ಣು) ಯೊಂದಿಗೆ ಅದರ ಮೇಲೆ ಹಾಕುತ್ತಾರೆ. ಕಬ್ಬಿಣ ಮತ್ತು ಮ್ಯಾಂಗನೀಸ್ ಅನ್ನು ಹೊರತೆಗೆಯುವುದರಿಂದ 'ಬಿಳಿ' ಮಣ್ಣು ತಿಳಿ ಬಣ್ಣದಲ್ಲಿರುತ್ತದೆ.


ಜೋಪ್ಡಿಯನ್ನು ನಿರ್ಮಿಸುವ ಮೊದಲು, ವಿಷ್ಣು ಭೋಸಲೆ ಬಹಳ ವಿವರವಾಗಿ ಒಂದು ಸಣ್ಣ ಮಾದರಿಯನ್ನು ಮಾಡಿದರು. ಜೋಪಡಿ ನಿರ್ಮಿಸಲು ಭೂಮಿಯಲ್ಲಿ ಸರಿಯಾದ ಸ್ಥಳವನ್ನು ಕಂಡುಹಿಡಿಯುವುದು ನಿರ್ಣಾಯಕವಾಗಿದೆ


ಏಕರೂಪದ ಆಕಾರವನ್ನು ಕಾಪಾಡಿಕೊಳ್ಳಲು ಅಶೋಕ್ ಭೋಸಲೆ ಹೆಚ್ಚುವರಿ ಮರವನ್ನು ಕತ್ತರಿಸುತ್ತಾರೆ. ಬಲ: Y ಆಕಾರದ ಮೇಡ್ಕಾ, ಅದರ ಮೇಲೆ ಸಮತಲ ಮರದ ಕಾಂಡಗಳನ್ನು ಜೋಡಿಸಲಾಗುತ್ತದೆ
ಈ ಬಿಳಿ ಮಣ್ಣಿಗೆ ಅದರ ಶಕ್ತಿಯನ್ನು ಹೆಚ್ಚಿಸಲು ಕುದುರೆಗಳು, ಹಸುಗಳು ಮತ್ತು ಇತರ ಜಾನುವಾರುಗಳ ಸಗಣಿಯೊಂದಿಗೆ ಬೆರೆಸಲಾಗಿದೆ. ಇದನ್ನು ನೆಲದ ಮೇಲೆ ಹರಡಲಾಗುತ್ತದೆ ಮತ್ತು ಧುಮ್ಮಸ್ ಎಂಬ ಮರದ ಸಾಧನವನ್ನು ಬಳಸಿ ಪುರುಷರು ಹೊಡೆಯುತ್ತಾರೆ - ಕನಿಷ್ಠ 10 ಕಿಲೋ ತೂಕವಿದೆ ಮತ್ತು ಅನುಭವಿ ಬಡಗಿಗಳಿಂದ ತಯಾರಿಸಲ್ಪಟ್ಟಿದೆ.
ಗಂಡಸರು ನೆಲವನ್ನು ಗುದ್ದಿದ ನಂತರ ಅದನ್ನು ಹೆಂಗಸರು ಕ್ರಿಕೆಟ್ ಬ್ಯಾಟಿನಂತಿರುವ ಬಡಾವ್ನದಿಂದ ಸಮತಟ್ಟು ಮಾಡುತ್ತಾರೆ. ಇದು ಬೇವಿನ ಮರದಿಂದ ಮಾಡಲ್ಪಟ್ಟಿದ್ದು ಮೂರು ಕಿಲೋ ತೂಕವಿರುತ್ತದೆ. ನಾರಾಯಣ್ ಅವರ ಬಡಾವ್ನ ಕಳೆದುಹೋಗಿದ್ದು, ಅವರ ಅಣ್ಣ 88 ವರ್ಷದ ಸಖಾರಾಮ್ ಅದನ್ನು ಸುರಕ್ಷಿತವಾಗಿ ಇರಿಸಿಕೊಂಡಿದ್ದಾರೆ.
ಕುಸುಮ್ ನಾರಾಯಣ್ ಅವರ ಪತ್ನಿ ಮತ್ತು ಜೋಪ್ಡಿಯನ್ನು ನಿರ್ಮಿಸುವಲ್ಲಿ ಪಾತ್ರ ವಹಿಸಿದ್ದಾರೆ. "ಕೃಷಿಯಿಂದ ಸಮಯ ಸಿಕ್ಕಾಗಲೆಲ್ಲಾ, ನಾವು ಹೊಲವನ್ನು ಸಮತಟ್ಟುಗೊಳಿಸುತ್ತಿದ್ದೆವು" ಎಂದು 68 ವರ್ಷದ ಅವರು ಹೇಳುತ್ತಾರೆ. ಇದು ತುಂಬಾ ಕಷ್ಟಕರವಾದ ಕೆಲಸವಾಗಿತ್ತು ಆದ್ದರಿಂದ ಕುಟುಂಬದ ಎಲ್ಲಾ ಸದಸ್ಯರು ಮತ್ತು ಸ್ನೇಹಿತರು ಸಹಾಯ ಮಾಡಿದರು ಎಂದು ಅವರು ಹೇಳುತ್ತಾರೆ.
ಸಮತಟ್ಟು ಮಾಡಿದ ನಂತರ, ಮಹಿಳೆಯರು ನೆಲವನ್ನು ಸಗಣಿಯಿಂದ ಸಾರಿಸುತ್ತಾರೆ, ಇದು ಸೊಳ್ಳೆ ಓಡಿಸುವುದಕ್ಕೆ ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ.
ಬಾಗಿಲು ಮನೆಗೆ ಬಹಳ ಮುಖ್ಯ. ಇದು ಇಲ್ಲದಿದ್ದರ್ ಕಳ್ಳ ಕಾಕರು ಬರುತ್ತಾರೆ. ಸಾಮಾನ್ಯವಾಗಿ ಈ ಬಾಗಿಲನ್ನು ಒಣಗಿದ ಜೋಳ, ಕಬ್ಬಿನ ಗರಿ ಅಥವಾ ತೆಂಗಿನ ಗರಿಯಿಂದ ಮಾಡಲಾಗುತ್ತದೆ. ಈಗೀಗ ಜಾಂಬಾಳಿಯಲ್ಲಿ ಯಾರೂ ಸ್ಥಳೀಯ ತಳಿಗಳನ್ನು ಬೆಳೆಯದ ಕಾರಣ ಅದನ್ನು ಹುಡುಕುವುದು ಕಷ್ಟವಾಯಿತು.
“ಈಗ ಎಲ್ಲರೂ ಹೈಬ್ರಿಡ್ ತಳಿ ಬೆಳೆಯತೊಡಗಿದ್ದಾರೆ. ಅದರ ಮೇವು ಪೌಷ್ಟಿಕವಾಗಿಲ್ಲ. ದೇಶಿಯಂತೆ ಬಾಳಿಕೆ ಕೂಡಾ ಬರುವುದಿಲ್ಲ” ಎನ್ನುತ್ತಾರೆ ನಾರಾಯಣ್.


ನಾರಾಯಣ್ ಸುಮಾರು 400 ಮೀಟರ್ ದೂರದಲ್ಲಿರುವ ತಮ್ಮ ಹೊಲದಿಂದ 14 ಅಡಿ ಎತ್ತರದ ಕತ್ತಾಳೆ ಕಾಂಡವನ್ನು ಭುಜದ ಮೇಲೆ (ಎಡಕ್ಕೆ) ಹೊತ್ತಿದ್ದಾರೆ. ಕತ್ತಾಳೆ ಕಾಂಡಗಳು ಎಷ್ಟು ಪ್ರಬಲವಾಗಿವೆಯೆಂದರೆ, ಆಗಾಗ್ಗೆ ಕುಡಗೋಲುಗಳು ಬಾಗುತ್ತವೆ ಮತ್ತು ಕತ್ತಾಳೆ ಕಾಂಡವನ್ನು ಕತ್ತರಿಸುವಾಗ ನಾರಾಯಣ್ ತನ್ನ ಬಲವಾದ ಕುಡಗೋಲುಗಳಲ್ಲಿ ಒಂದನ್ನು (ಬಲಕ್ಕೆ) ಹೇಗೆ ಬಾಗಿತು ಎನ್ನುವುದನ್ನು ತೋರಿಸುತ್ತಿದ್ದಾರೆ
ಕೃಷಿ ಮಾದರಿಗಳು ಬದಲಾದಂತೆ, ಜೋಪ್ಡಿ ತಯಾರಿಕೆಯು ವೇಗವನ್ನು ಕಾಯ್ದುಕೊಳ್ಳಬೇಕಾಗಿದೆ. ಈ ಮೊದಲು ಅವುಗಳನ್ನು ಹೆಚ್ಚು ಕೃಷಿ ಕೆಲಸವಿಲ್ಲದ ಬೇಸಿಗೆಯಲ್ಲಿ ತಯಾರಿಸಲಾಗುತ್ತಿತ್ತು. ಆದರೆ ರೈತರಾದ ವಿಷ್ಣು ಮತ್ತು ನಾರಾಯಣ್ ಹೇಳುವ ಪ್ರಕಾರ, ಈಗ ಹೊಲಗಳು ಬರಿದಾಗುವ ಸಮಯವೇ ಇಲ್ಲ. "ಈ ಮೊದಲು, ನಾವು ವರ್ಷಕ್ಕೊಮ್ಮೆ ಮಾತ್ರ ಕೃಷಿ ಮಾಡುತ್ತಿದ್ದೆವು. ಈಗ, ನಾವು ವರ್ಷಕ್ಕೆ ಎರಡು ಅಥವಾ ಮೂರು ಬಾರಿ ಕೃಷಿ ಮಾಡಿದರೂ ಜೀವನ ಸಾಗಿಸಲು ಸಾಧ್ಯವಿಲ್ಲ" ಎಂದು ವಿಷ್ಣು ಹೇಳುತ್ತಾರೆ.
ನಾರಾಯಣ್, ವಿಷ್ಣು, ಅಶೋಕ್ ಮತ್ತು ಕುಸುಮ್ ಅವರ ಸಾಮೂಹಿಕ ದುಡಿಮೆಯ ನಡುವೆ ಐದು ತಿಂಗಳು ಮತ್ತು 300 ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡಿದೆ. "ಇದು ಅತ್ಯಂತ ದಣಿವಿನ ಪ್ರಕ್ರಿಯೆಯಾಗಿದೆ, ಮತ್ತು ಕಚ್ಚಾ ವಸ್ತುಗಳನ್ನು ಹುಡುಕುವುದು ಈಗ ಕಷ್ಟ" ಎಂದು ಜಾಂಬಳಿಯ ವಿವಿಧ ಭಾಗಗಳಿಂದ ಎಲ್ಲಾ ಕಚ್ಚಾ ವಸ್ತುಗಳನ್ನು ಸಂಗ್ರಹಿಸಲು ಒಂದು ವಾರಕ್ಕೂ ಹೆಚ್ಚು ಸಮಯವನ್ನು ಕಳೆದ ನಾರಾಯಣ್ ಗಮನಸೆಳೆದರು.
ಜೋಪ್ಡಿಯನ್ನು ನಿರ್ಮಿಸುವಾಗ, ವಿಶೇಷವಾಗಿ ಮುಳ್ಳುಗಳು ಮತ್ತು ಚೂರುಗಳಿಂದ ನೋವಿನ ಗಾಯಗಳು ಕಾಣಿಸಿಕೊಂಡವು. "ಈ ನೋವಿಗೆ ನೀವು ಒಗ್ಗಿಕೊಳ್ಳದಿದ್ದರೆ, ನೀವು ರೈತನೇ?" ನಾರಾಯಣ್ ತಮ್ಮ ಗಾಯಗೊಂಡ ಬೆರಳನ್ನು ತೋರಿಸುತ್ತಾ ಕೇಳುತ್ತಾರೆ.
ಜೋಪ್ಡಿ ಅಂತಿಮವಾಗಿ ಸಿದ್ಧವಾಗಿದೆ ಮತ್ತು ಅದರ ತಯಾರಿಯಲ್ಲಿ ಭಾಗವಹಿಸಿದ ಪ್ರತಿಯೊಬ್ಬರೂ ದಣಿದಿದ್ದಾರೆ ಮತ್ತು ಅದು ನಿಂತಿರುವುದನ್ನು ನೋಡಿ ಅವರಿಗೆ ತುಂಬಾ ಸಂತೋಷವಾಗಿದೆ. ಬಹುಶಃ, ಇದು ಜಾಂಬಳಿ ಗ್ರಾಮವು ನೋಡುವ ಕೊನೆಯ ಜೋಪಡಿಯಾಗಿರಬಹುದು. ಏಕೆಂದರೆ ಇದನ್ನು ಈಗ ಯಾರೂ ಕಲಿಯುತ್ತಿಲ್ಲ "ಕೋನ್ ಯುಡೆ ಕಿನ್ವಾ ನಹೀ ಯೆವುಡೆ, ಅಪ್ಲ್ಯಾಲಾ ಕಹಿಹಿ ಫರಕ್ ಪಡತ್ ನಹೀ [ಜನರು ಬರುತ್ತಾರೋ ಇಲ್ಲವೋ ಎಂಬುದು ಮುಖ್ಯವಲ್ಲ]." ಅವರು ನಿರ್ಮಿಸಲು ಸಹಾಯ ಮಾಡಿದ ಜೋಪ್ಡಿಯಲ್ಲಿ ಶಾಂತಿಯುತ ನಿದ್ರೆಯನ್ನು ಹೊಂದಿದ್ದಾರೆ ಮತ್ತು ಅದನ್ನು ಗ್ರಂಥಾಲಯವನ್ನಾಗಿ ಮಾಡಲು ಉದ್ದೇಶಿಸಿದ್ದಾರೆ ಎಂದು ಅವರು ಹೇಳುತ್ತಾರೆ.
"ಯಾವುದೇ ಸ್ನೇಹಿತರು ಅಥವಾ ಅತಿಥಿಗಳು ನನ್ನ ಮನೆಗೆ ಬಂದಾಗಲೆಲ್ಲಾ, ನಾನು ಹೆಮ್ಮೆಯಿಂದ ಈ ಜೋಪ್ಡಿಯನ್ನು ಅವರಿಗೆ ತೋರಿಸುತ್ತೇನೆ ಮತ್ತು ಸಾಂಪ್ರದಾಯಿಕ ಕಲೆಯನ್ನು ಜೀವಂತವಾಗಿರಿಸಿದ್ದಕ್ಕಾಗಿ ಎಲ್ಲರೂ ನಮ್ಮನ್ನು ಶ್ಲಾಘಿಸುತ್ತಾರೆ" ಎಂದು ನಾರಾಯಣ್ ಗಾಯಕ್ವಾಡ್ ಹೇಳುತ್ತಾರೆ.


ವಿಷ್ಣು ಭೋಸಲೆ ಬಿದಿರಿನ ಬೊಂಬುಗಳು ಸರಿಯಾದ ಗಾತ್ರ ಮತ್ತು ಆಕಾರದಲ್ಲಿವೆ ಎಂದು ಖಚಿತಪಡಿಸಿಕೊಳ್ಳಲು ಅವುಗಳನ್ನು ಕತ್ತರಿಸುತ್ತಿದ್ದಾರೆ. ಗಳು ಕಟ್ಟಲು ಬಳಸುವ ಕತ್ತಾಳೆ ಎಲೆಗಳಿಂದ ನಾರನ್ನು ನಾರಾಯಣ್ ಹೊರತೆಗೆಯುತ್ತಿದ್ದಾರೆ


ಕುಟುಂಬದ ಮಹಿಳೆಯರು ಜಮೀನಿನಲ್ಲಿ ತಮ್ಮ ಕೆಲಸದ ನಡುವೆ ಜೋಪ್ಡಿ ನಿರ್ಮಾಣದಲ್ಲಿ ಭಾಗವಹಿಸಿದರು. ಕುಸುಮ್ ಗಾಯಕ್ವಾಡ್ (ಎಡ) ಕೆಲಸ ಮಾಡುವಾಗ ಧಾನ್ಯಗಳನ್ನು ತಿನ್ನುತ್ತಿದ್ದಾರೆ ಮತ್ತು ವಿಷ್ಣು ಅವರೊಡನೆ (ಬಲ) ಮಾತನಾಡುತ್ತಿದ್ದಾರೆ

ಜೋಪ್ಡಿಗಾಗಿ ಗುಂಡಿಗಳನ್ನು ಅಗೆಯುವಾಗ ನಾರಾಯಣ್ ಗಾಯಕ್ವಾಡ್ ತಮ್ಮ ಮೊಬೈಲ್ ಕರೆಗೆ ಸ್ಪಂದಿಸಿದರು

ನಾರಾಯಣ್ ಅವರ ಮೊಮ್ಮಗ, 9 ವರ್ಷದ ವರದ್ ಗಾಯಕ್ವಾಡ್, ತಮ್ಮ ಸೈಕಲ್ನ ಹಿಂಭಾಗದಲ್ಲಿ ಹೊಲದಿಂದ ಕಬ್ಬಿನ ಮೇಲ್ಭಾಗಗಳನ್ನು ತರುತ್ತಿದ್ದಾನೆ

ನಾರಾಯಣ್ ಅವರ ಮೊಮ್ಮಗ ವರದ್ ಜೋಪ್ಡಿಯನ್ನು ಹೇಗೆ ನಿರ್ಮಿಸಲಾಗಿದೆ ಎಂಬುದನ್ನು ನೋಡಲು ಸುತ್ತಾಡುತ್ತಿದ್ದಾನೆ


ನಾರಾಯಣ್ ಗಾಯಕ್ವಾಡ್, ಕುಸುಮ್ ಗಾಯಕ್ವಾಡ್, ವಿಷ್ಣು ಮತ್ತು ಅಶೋಕ್ ಭೋಸಲೆ ಈ ಜೋಪ್ಡಿಯನ್ನು ನಿರ್ಮಿಸಿದ್ದಾರೆ. 'ಈ ಜೋಪ್ಡಿ ಕನಿಷ್ಠ 50 ವರ್ಷಗಳವರೆಗೆ ಇರುತ್ತದೆ' ಎಂದು ನಾರಾಯಣ್ ಹೇಳುತ್ತಾರೆ

ನಾರಾಯಣ್ ಗಾಯಕ್ವಾಡ್ ಸುಮಾರು 3.25 ಎಕರೆ ಭೂಮಿಯನ್ನು ಹೊಂದಿದ್ದು, ಅದರಲ್ಲಿ ಅವರು ಜೋಳ, ಕಪ್ಲಿ ಗೋಧಿ, ಸೋಯಾಬೀನ್, ಸಾಮಾನ್ಯ ಬೀನ್ಸ್ ಮತ್ತು ಪಾಲಕ್, ಮೆಂತ್ಯ ಮತ್ತು ಕೊತ್ತಂಬರಿಯಂತಹ ಎಲೆ ತರಕಾರಿಗಳೊಂದಿಗೆ ಕಬ್ಬನ್ನು ಬೆಳೆಯುತ್ತಾರೆ. ಕಟ್ಟಾ ಓದುಗನಾದ ಅವನು ತನ್ನ ಜೋಪ್ಡಿಯನ್ನು ಓದುವ ಕೋಣೆಯಾಗಿ ಪರಿವರ್ತಿಸಲು ಬಯಸುತ್ತಾರೆ
ಈ ವರದಿಯು ಸಂಕೇತ್ ಜೈನ್ ಅವರ ಗ್ರಾಮೀಣ ಕುಶಲಕರ್ಮಿಗಳ ಸರಣಿಯ ಒಂದು ಭಾಗವಾಗಿದೆ ಮತ್ತು ಮೃಣಾಲಿನಿ ಮುಖರ್ಜಿ ಫೌಂಡೇಶನ್ ಇದನ್ನು ಬೆಂಬಲಿಸುತ್ತದೆ.
ಅನುವಾದ: ಶಂಕರ. ಎನ್. ಕೆಂಚನೂರು