ದಾಕ್ ಸದ್ದು ಈ ಅಗರ್ತಲಾವನ್ನು ಆವರಿಸಲಾರಂಭಿಸಿದೆ. ಅಕ್ಟೋಬರ್ 11ರಂದು ದುರ್ಗಾಪೂಜೆ ಆರಂಭಗೊಳ್ಳಲಿದೆ. ಮತ್ತು ಪ್ರತಿ ವರ್ಷವೂ ಹಬ್ಬದ ಸಿದ್ಧತೆಗಳು ವಾರಕ್ಕೂ ಮೊದಲೇ ಪ್ರಾರಂಭಗೊಳ್ಳುತ್ತವೆ. ಈಗಾಗಲೇ ಚಪ್ಪರಗಳಿಗಾಗಿ ಕಂಬಗಳನ್ನು ನೆಡಲಾಗಿದೆ, ವಿಗ್ರಹ ತಯಾರಕರು ವಿಗ್ರಹಗಳಿಗೆ ಅಂತಿಮ ಸ್ಪರ್ಶ ನೀಡುತ್ತಿದ್ದಾರೆ, ಕುಟುಂಬಗಳು ಹೊಸ ಬಟ್ಟೆಗಳನ್ನು ಖರೀದಿಸುತ್ತಿವೆ.
ದಾಕ್ ಎನ್ನುವುದು ಡೊಳ್ಳಿನ ಮಾದರಿಯ ವಾದ್ಯ. ಅದನ್ನು ಕುತ್ತಿಗೆಗೆ ನೇತು ಹಾಕಿಕೊಂಡು ಕೋಲಿನಿಂದ ಬಾರಿಸಲಾಗುತ್ತದೆ. ಅಥವಾ ಯಾವುದಾದರೂ ಗಟ್ಟಿಯಾದ ಸ್ಥಳದ ಮೇಲಿಟ್ಟು ಬಾರಿಸಲಾಗುತ್ತದೆ. ಈ ವಾದ್ಯವು ಇಂತಹ ಆಚರಣೆಗಳ ಅವಿಭಾಜ್ಯ ಅಂಗವಾಗಿದೆ.
ಈ ದಾಕ್ ಬಾರಿಸುವ ಕೆಲಸ ಪೂರ್ಣಾವಧಿಯದ್ದಲ್ಲ. ಪ್ರತಿ ವರ್ಷ ಪೂಜೆಯ ಐದು ದಿನಗಳ ಕಾಲ ಈ ಕೆಲಸವಿರುತ್ತದೆ. ಲಕ್ಷ್ಮಿ ಪೂಜೆಯ ದಿನದ ದಾಕ್‌ನ ಅಂತಿಮ ಸದ್ದು ಕೇಳುತ್ತದೆ. ಈ ವರ್ಷ ಇದು ಅಕ್ಟೋಬರ್ 20ಕ್ಕೆ ಮುಗಿಯಲಿದೆ. ಕೆಲವೊಮ್ಮೆ ದಾಕಿಗಳನ್ನು ದೀಪಾವಳಿಯಲ್ಲೂ ಬಾರಿಸಲು ಕರೆಸುತ್ತಾರೆ. ಆದರೆ ದುರ್ಗಾ ಪೂಜೆಯ ಸಮಯದಲ್ಲಿ ದಾಕ್ ಕಲಾವಿದರಿಗೆ ಅಗರ್ತಲಾ ಮತ್ತು ತ್ರಿಪುರಾ ರಾಜ್ಯದ ಇತರ ಭಾಗಗಳಲ್ಲಿ ಹೆಚ್ಚಿನ ಬೇಡಿಕೆಯಿರುತ್ತದೆ.
ದಾಕಿ ಕಲಾವಿದರನ್ನು ಪೆಂಡಾಲ್ ಸಮಿತಿಗಳು ಕರೆಸುತ್ತವೆ. ಕೆಲವೊಮ್ಮೆ ಕುಟುಂಬಗಳು ಕೂಡಾ ಕರೆಸುತ್ತವೆ. ಕೆಲವೊಮ್ಮೆ ಅವರನ್ನು ನೇಮಿಸಿಕೊಳ್ಳುವ ಮೊದಲು ಪ್ರದರ್ಶನ ನೀಡುವಂತೆ ಕೇಳಲಾಗುತ್ತದೆ. ಅವರಲ್ಲಿ ಬಹುತೇಕರು ಕಲಾ ನೈಪುಣ್ಯವನ್ನು ಹೊಂದಿರುತ್ತಾರೆ ಮತ್ತು ಅವರು ಇದನ್ನು ತಮ್ಮ ಕುಟುಂಬದ ಹಿರಿಯರಿಂದಲೇ ಕಲಿತಿರುತ್ತಾರೆ. “ನಾನು ನನ್ನ ಸೋದರ ಸಂಬಂಧಿಗಳ ಜೊತೆ ತಂಡವಾಗಿ ಹೋಗುತ್ತಿದ್ದೆ.” ಎನ್ನುತ್ತಾರೆ 45 ವರ್ಷದ ರಿಶಿ ದಾಸ್. “ಮೊದಲಿಗೆ ನಾನು ಜಾಗಟೆ ಬಾರಿಸುತ್ತಿದ್ದೆ ನಂತರ ಧೋಲ್, ಹಾಗೂ ಅದರ ನಂತರ ದಾಕ್ ಬಾರಿಸಲು ಆರಂಭಿಸಿದೆ.” (ಅವರು ಮತ್ತು ಇನ್ನೊಬ್ಬ ರಿಶಿದಾಸ್,ರೋಹಿದಾಸ್, ರವಿದಾಸ್ ಕುಟುಂಬಗಳು ಮೂಚಿ ಸಮುದಾಯಕ್ಕೆ ಸೇರಿವೆ. ಇವರನ್ನು ತ್ರಿಪುರಾದಲ್ಲಿ ಪರಿಶಿಷ್ಟ ಜಾತಿಯೆಂದು ಪಟ್ಟಿ ಮಾಡಲಾಗಿದೆ.)
ಅಗರ್ತಲಾದಲ್ಲಿನ ಅನೇಕ ದಾಕ್ ಕಲಾವಿದರಂತೆ ಇಂದ್ರಜಿತ್ ಕೂಡಾ ವರ್ಷದ ಉಳಿದ ಸಮಯದಲ್ಲಿ ರಿಕ್ಷಾ ಓಡಿಸುತ್ತಾರೆ. ಕೆಲವೊಮ್ಮೆ ಮದುವೆಗಳು ಮತ್ತು ಇತರ ಕಾರ್ಯಕ್ರಮಗಳಲ್ಲಿ ಬ್ಯಾಂಡ್ ನುಡಿಸುತ್ತಾರೆ, ಸ್ಥಳೀಯವಾಗಿ ಇದನ್ನು 'ಬ್ಯಾಂಡ್-ಪಾರ್ಟಿ' ಎಂದು ಕರೆಯಲಾಗುತ್ತದೆ. ದಾಕಿ ಕಲಾವಿದರು ಪ್ರತಿದಿನ ಎಲೆಕ್ಟ್ರಿಷಿಯನ್ ಅಥವಾ ಪ್ಲಂಬರ್ ಆಗಿ ಕೆಲಸ ಮಾಡುತ್ತಾರೆ, ಆದರೆ ಕೆಲವರು ತರಕಾರಿಗಳನ್ನು ಮಾರುತ್ತಾರೆ ಮತ್ತು ಇನ್ನೂ ಕೆಲವರು ಹತ್ತಿರದ ಹಳ್ಳಿಗಳಲ್ಲಿ ಕೃಷಿ ಮಾಡುತ್ತಾರೆ. ಸಮಾರಂಭಗಳು ಅಥವಾ ಪ್ರದರ್ಶನಗಳಿದ್ದಾಗ ಅಗರ್ತಲಾಕ್ಕೆ ಬರುತ್ತಾರೆ.

ಇಂದ್ರಜಿತ್ ರಿಷಿದಾಸ್ ಅವರು ಅಗರ್ತಲಾದ ಭಾತಿ ಅಭಯನಗರ ಪ್ರದೇಶದಲ್ಲಿ ಅವರ ಮನೆಯ ಬಳಿ ಕೆಲಸಕ್ಕೆ ಹೊರಟಿದ್ದಾರೆ. ದುರ್ಗಾ ಪೂಜಾ ಸಮಾರಂಭ ಆರಂಭವಾಗುವವರೆಗೂ ಅನೇಕ ದಾಕಿ ಕಲಾವಿದರು ರಿಕ್ಷಾ ಓಡಿಸುವುದನ್ನು ಮುಂದುವರಿಸುತ್ತಾರೆ
ರಿಕ್ಷಾ ಚಾಲಕನಾಗಿ ಇಂದ್ರಜಿತ್ ದಿನಕ್ಕೆ 500 ರೂ. ಗಳಿಸುತ್ತಾರೆ. ಅವರು ಹೇಳುತ್ತಾರೆ, "ಸಂಪಾದನೆಗಾಗಿ ಏನಾದರೂ ಮಾಡಲೇಬೇಕು. ರಿಕ್ಷಾ ಓಡಿಸುವುದು ಸುಲಭ. ಒಳ್ಳೆಯ ಕೆಲಸಕ್ಕಾಗಿ ಕಾಯುವುದರಲ್ಲಿ ಅರ್ಥವಿಲ್ಲ." ದುರ್ಗಾ ಪೂಜೆಯ ಸಮಯದಲ್ಲಿ ದಾಕಿಯಾಗಿ ವಾರದಲ್ಲಿ ಗಳಿಸುವಷ್ಟು ರಿಕ್ಷಾ ಓಡಿಸುವ ಮೂಲಕ ಅವರು ಒಂದು ತಿಂಗಳಲ್ಲಿ ಗಳಿಸುತ್ತಾರೆ. ಈ ವರ್ಷ 2021ರಲ್ಲಿ, ಪೆಂಡಾಲ್ ಸಮಿತಿಯು 15,000 ರೂ.ಗಳಿಗೆ ಒಪ್ಪಿಕೊಂಡು ಅವರನ್ನು ಕರೆಸಿಕೊಂಡಿದೆ. ಕೆಲವರು ಇನ್ನೂ ಕಡಿಮೆ ಮೊತ್ತಕ್ಕೂ ಒಪ್ಪಿಕೊಳ್ಳುತ್ತಾರೆ.
ಇಂದ್ರಜಿತ್ ವಿವರಿಸುತ್ತಾರೆ, ದಾಕಿ ಕಲಾವಿದರನ್ನು (ಅಗರ್ತಲಾದಲ್ಲಿ ಸಾಮಾನ್ಯವಾಗಿ ಪುರುಷರು ಮಾತ್ರ ಈ ವಾದ್ಯವನ್ನು ಬಾರಿಸುತ್ತಾರೆ) ಪೆಂಡಾಲ್‌ಗಳಲ್ಲಿ ಐದು ದಿನಗಳ ಪೂಜೆಗೆ ಕರೆಯಲಾಗುತ್ತದೆ. "ಪುರೋಹಿತರು ನಮ್ಮನ್ನು ಅಲ್ಲಿಗೆ ಕರೆದಾಗ, ನಾವು ಅಲ್ಲಿರಬೇಕು. ಬೆಳಗಿನ ಪೂಜೆಯ ಸಮಯದಲ್ಲಿ ನಾವು ಸುಮಾರು ಮೂರು ಗಂಟೆಗಳ ಕಾಲ ದಾಕ್ ಬಾರಿಸುತ್ತೇವೆ ಮತ್ತು ನಂತರ ಸಂಜೆ ಮೂರರಿಂದ ನಾಲ್ಕು ಗಂಟೆಗಳ ಕಾಲ ಬಾರಿಸುತ್ತೇವೆ."
ಬ್ಯಾಂಡ್-ಪಾರ್ಟಿ ಕೆಲಸವು ಸಾಂದರ್ಭಿಕವಾಗಿ ದೊರೆಯುತ್ತದೆ. ಇಂದ್ರಜಿತ್ ಹೇಳುತ್ತಾರೆ, "ಸಾಮಾನ್ಯವಾಗಿ ನಾವು ಆರು ಜನರ ತಂಡವಾಗಿ ಕೆಲಸ ಮಾಡುತ್ತೇವೆ, ಹೆಚ್ಚಾಗಿ ಮದುವೆ ಸಮಯದಲ್ಲಿ ನಾವು ಪ್ರದರ್ಶನ ನೀಡುತ್ತೇವೆ ಮತ್ತು ಕಾರ್ಯಕ್ರಮದ ದಿನಗಳನ್ನು ಅವಲಂಬಿಸಿ ನಾವು ಹಣವನ್ನು ಪಡೆಯುತ್ತೇವೆ. ಕೆಲವರು ನಮಗೆ ಒಂದರಿಂದ ಎರಡು ದಿನಗಳ ಕೆಲಸ ನೀಡುತ್ತಾರೆ. ಇನ್ನೂ ಕೆಲವರು 6-7 ದಿನಗಳ ಕಾಲ ಕಾರ್ಯಕ್ರಮ ಆಯೋಜಿಸಿರುತ್ತಾರೆ. ಒಟ್ಟಾರೆಯಾಗಿ, ತಂಡವು ಒಂದು ದಿನಕ್ಕೆ 5 ರಿಂದ 6 ಸಾವಿರ ರೂಪಾಯಿಗಳನ್ನು ಗಳಿಸುತ್ತದೆ.
ಕಳೆದ ವರ್ಷ ಕರೋನಾದಿಂದಾಗಿ, ಅನೇಕ ಜನರು ಪೂಜಾ ಸಮಾರಂಭಗಳನ್ನು ರದ್ದುಗೊಳಿಸಿದರು, ದಾಕಿ ಕಲಾವಿದರು ರಿಕ್ಷಾ ಎಳೆಯುವ ಅಥವಾ ಇತರ ಸಣ್ಣ ಉದ್ಯೋಗಗಳಿಂದ ಸಿಗುವ ಆದಾಯ ಮತ್ತು ಉಳಿತಾಯವನ್ನು ಅವಲಂಬಿಸುವ ಅನಿವಾರ್ಯತೆಗೊಳಗಾದರು. ಆದಾಗ್ಯೂ, ಕೆಲವು ಜನರಿಗೆ ಕೊನೆಯ ಕ್ಷಣದಲ್ಲಿ ದಾಕಿ ಬಾರಿಸುವ ಅವಕಾಶ ಸಿಕ್ಕಿತು (ಈ ಲೇಖನಲ್ಲಿನ ಎಲ್ಲಾ ಫೋಟೋಗಳನ್ನು ಕಳೆದ ವರ್ಷ ಅಕ್ಟೋಬರ್‌ನಲ್ಲಿ ತೆಗೆದುಕೊಳ್ಳಲಾಗಿದೆ).
ದುರ್ಗಾ ಪೂಜೆ ಆರಂಭವಾದ ಒಂದು ವಾರದ ನಂತರ, ಲಕ್ಷ್ಮಿ ಪೂಜೆ ನಡೆಯುತ್ತದೆ, ಇದು ಅನೇಕ ದಾಕಿ ಕಲಾವಿದರಿಗೆ ಅವರ 'ಉದ್ಯೋಗ'ದ ಕೊನೆಯ ದಿನ. ಆ ಸಂಜೆ ಅವರು ಒಬ್ಬರೇ ಅಥವಾ ಜೊತೆಗಾರರೊಡನೆ ಅಗರ್ತಲಕ್ಕೆ ಹೋಗುವ ರಸ್ತೆಯಲ್ಲಿ ತನ್ನ ಡೋಲುಗಳೊಂದಿಗೆ ಹೊರಡುತ್ತಾರೆ. ಕುಟುಂಬಗಳು ಶುಭ ದಿನವನ್ನು ಸ್ಮರಣೀಯವಾಗಿಸಲು ಅವರನ್ನು ತಮ್ಮ ಮನೆಯಲ್ಲಿ 5-10 ನಿಮಿಷಗಳ ಕಾಲ ಬಾರಿಸುವಂತೆ ಆಹ್ವಾನಿಸುತ್ತವೆ, ಪ್ರತಿಯಾಗಿ, ದಾಕಿ ಕಲಾವಿದರು ಪ್ರತಿ ಮನೆಗೆ ಕೇವಲ 20ರಿಂದ 50 ರೂಪಾಯಿಗಳ ತನಕ ಪಡೆಯುತ್ತಾರೆ, ಮತ್ತು ಅವರಲ್ಲಿ ಅನೇಕರು ಸಂಪ್ರದಾಯವನ್ನು ಮುಂದುವರಿಸುವ ಸಲುವಾಗಿಯಷ್ಟೇ ಈ ಕೆಲಸವನ್ನು ಮಾಡುತ್ತಿರುವುದಾಗಿ ಹೇಳುತ್ತಾರೆ.

ದುರ್ಗಾ ಪೂಜೆಗೆ ಸುಮಾರು 10 ದಿನಗಳಿರುವಾಗ ಸಿದ್ಧತೆಗಳು ಆರಂಭವಾಗುತ್ತವೆ. ಎತ್ತಿಟ್ಟಿದ್ದ ದಾಕ್ ಅನ್ನು ಹೊರತೆಗೆದು ಅದರ ಹಗ್ಗಗಳನ್ನು ಸ್ವಚ್ಛಗೊಳಿಸಿ ಅದನ್ನು ಬಿಗಿಗೊಳಿಸಲಾಗುತ್ತದೆ, ಹೀಗೆ ಮಾಡಿದಾಗ ಧ್ವನಿ ಸರಿಯಾಗಿ ಹೊರಹೊಮ್ಮುತ್ತದೆ. ಇದೆಲ್ಲವೂ ದೈಹಿಕವಾಗಿ ದಣಿವಿನ ಕೆಲಸ, ಏಕೆಂದರೆ ಅದರ ಹಗ್ಗಗಳು ಪ್ರಾಣಿಗಳ ಚರ್ಮದಿಂದ ಮಾಡಲ್ಪಟ್ಟಿರುತ್ತದೆ, ಅದು ಕಾಲಾನಂತರದಲ್ಲಿ ಗಟ್ಟಿಯಾಗುತ್ತದೆ. ಈ ಕೆಲಸಕ್ಕೆ ಇಬ್ಬರ ಶ್ರಮ ಬೇಕಾಗುತ್ತದೆ. ಇಂದ್ರಜಿತ್ ರಿಷಿದಾಸ್ ವಿವರಿಸುತ್ತಾರೆ, "ಇದಕ್ಕೆ ಹೆಚ್ಚಿನ ಶಕ್ತಿಯ ಅಗತ್ಯವಿರುತ್ತದೆ ಮತ್ತು ಅದನ್ನು ಒಬ್ಬರೇ ಮಾಡುವುದು ತುಂಬಾ ಕಷ್ಟ. ಈ ಕೆಲಸವು ಬಹಳ ಮುಖ್ಯವಾದು, ಯಾಕೆಂದರೆ ದಾಕ್ ಶಬ್ದದ ಗುಣಮಟ್ಟವು ಅದರ ಮೇಲೆ ಅವಲಂಬಿತವಾಗಿರುತ್ತದೆ"

ಸ್ವಚ್ಛಗೊಳಿಸಿ ಧ್ವನಿಯನ್ನು ಪರಿಶೀಲಿಸಿದ ನಂತರ, ದಾಕ್ ಅನ್ನು ಸ್ವಚ್ಛವಾದ ಬಟ್ಟೆಯಿಂದ ಮುಚ್ಚಲಾಗುತ್ತದೆ ಮತ್ತು ಸ್ವಲ್ಪ ಸಮಯದವರೆಗೆ ಮತ್ತೆ ಒಳಗೆ ಇಡಲಾಗುತ್ತದೆ ಮತ್ತು ನಂತರ ಪೂಜೆಯ ಸಮಯದಲ್ಲಿ ಮಾತ್ರ ಹೊರತೆಗೆಯಲಾಗುತ್ತದೆ

ನಗರದ ನಗರದ ಕರ್ನಲ್ ಚೌಮುಹಾನಿ (ಅಡ್ಡರಸ್ತೆ) ಬಳಿ ಹಲವರು ಸಂಭ್ರಮಿಸಲು ತಯಾರಿ ನಡೆಸುತ್ತಿರುವಾಗ, ಇಬ್ಬರು ದಾಕ್ ಕಲಾವಿದರು ದುರ್ಗಾ ಮೂರ್ತಿಯನ್ನು ತರಲು ಅಂಗಡಿಗೆ ಹೋಗುವ ದಾರಿಯಲ್ಲಿ ದಾಕ್ ನುಡಿಸುತ್ತಿದ್ದಾರೆ. ವಿವಿಧ ಪೂಜಾವಿಧಿಗಳ ಸಮಯದಲ್ಲಿ ದಾಕ್ ಬಾರಿಸಲಾಗುತ್ತದೆ - ವಿಗ್ರಹವನ್ನು ತರುವಾಗ, ಅದನ್ನು ಚಪ್ಪರದಲ್ಲಿ ಇಡುವಾಗ, ಪೂಜೆಯ ಸಮಯದಲ್ಲಿ ಮತ್ತು ವಿಸರ್ಜನಾ ಮೆರವಣಿಗೆಲ್ಲಿ

ಮಧ್ಯ ಅಗರ್ತಲಾದ ಕಮಾನ್ ಚೌಮುಹಾನಿ ಜಂಕ್ಷನ್‌ನಲ್ಲಿ ದಾಕ್ ಕಲಾವಿದ ಕೆಲಸಕ್ಕಾಗಿ ಕಾಯುತ್ತಿರುವುವುದು. ಪ್ರತಿ ವರ್ಷ ಹತ್ತಿರದ ಗ್ರಾಮಗಳು ಮತ್ತು ನಗರಗಳಿಂದ ಕಲಾವಿದರು ದುರ್ಗಾ ಪೂಜೆ ಆರಂಭಕ್ಕೆ ಎರಡು ದಿನ ಮೊದಲು ತ್ರಿಪುರದ ರಾಜಧಾನಿಯ ಕೆಲವು ಪ್ರದೇಶಗಳಲ್ಲಿ ಒಟ್ಟುಗೂಡಿ ದಾಕಿಯೊಡನೆ ದಿನವಿಡೀ ಕಾಯುತ್ತಾರೆ. 2020ರಲ್ಲಿ, ಕೊರೋನಾ ಪಿಡುಗಿನಿಂದಾಗಿ, ಕೆಲವೇ ಕೆಲವು ದಾಕ್ ಕಲಾವಿದರಷ್ಟೇ ಕೆಲಸ ಪಡೆದರು.

ಬಬೂಲ್ ರವಿದಾಸ್ ದಾಕ್ ಕಲಾವಿದರಾಗಿದ್ದು, ಅಗರ್ತಲಾದಿಂದ 20 ಕಿಮೀ ದೂರದಲ್ಲಿರುವ ತನ್ನ ಹಳ್ಳಿಯಿಂದ ಬಂದಿದ್ದಾರೆ. ಇಡೀ ದಿನ ಕಾಯುತ್ತಾ ಕಳೆದ ನಂತರ, ದಣಿವುಉ ಮತ್ತು ಬೇಸರ ಓಡಿಸಲು ಬೀಡಿ ಸೇದುತ್ತಿದ್ದಾರೆ

ಮಧ್ಯ ಅಗರ್ತಲಾದ ಬಟಾಲ ಬಸ್ ನಿಲ್ದಾಣದ ಬಳಿ ದಾಕಿಯೊಬ್ಬರು ಆಟೋರಿಕ್ಷಾದಲ್ಲಿ ತನ್ನ ಹಳ್ಳಿಗೆ ಹಿಂತಿರುಗುತ್ತಿರುವುದು. ದುರ್ಗಾ ಪೂಜೆಗೆ ಎರಡು ದಿನಗಳ ಮೊದಲು ಕೆಲಸ ಪಡೆಯಲು ವಿವಿಧ ಹಳ್ಳಿಗಳು ಮತ್ತು ನಗರಗಳಿಂದ ದಾಕ್ ಕಲಾವಿದರು ಒಂದೆಡೆ ಸೇರುವ ಕೆಲವೇ ಸ್ಥಳಗಳಲ್ಲಿ ಇದೂ ಒಂದು. ಈ ಗುಂಪು ದಿನವಿಡೀ ಕಾದು ರಾತ್ರಿ 9 ಗಂಟೆಗೆ ಮನೆಗೆ ಮರಳುತ್ತಿದೆ

ಚೌಮುಹಾನಿ ಪ್ರದೇಶದಲ್ಲಿ ಬಿಜಯಕುಮಾರ್ ಖಾಲಿ ಪೆಂಡಾಲಿನಲ್ಲಿ ಪೂಜಾ ಸಮಯದಲ್ಲಿ ಪ್ರದರ್ಶನ ನೀಡುತ್ತಿರುವುದು - ಮಹಾಮಾರಿಗೂ ಮೊದಲು ಪರಿಸ್ಥಿತಿ ಹೀಗಿದ್ದಿರಲಿಲ್ಲ. ಆದರೆ ಅಗರ್ತಲಾದ ಎಲ್ಲಾ ಚಪ್ಪರಗಳೂ ಕಳೆದ ವರ್ಷವೂ ಅಷ್ಟೊಂದು ಖಾಲಿಯಿದ್ದಿರಲಿಲ್ಲ

ಕಳೆದ ವರ್ಷ ದುರ್ಗಾ ಪೂಜೆಗೆ ಒಂದು ವಾರದ ಮೊದಲು, ಕೃಷ್ಣ ನಗರದ ಒಂದು ಉಪಕರಣಗಳ ಅಂಗಡಿಯಲ್ಲಿ ದಾಕಿಯೊಬ್ಬರು ದಾಕ್ ಸರಿಪಡಿಸುತ್ತಿರುವುದು

ಸಂಪ್ರದಾಯ ಮತ್ತು ತಂತ್ರಜ್ಞಾನದ ಮಿಲನ. ಮೈಕ್ರೊಫೋನ್ ಬಳಸಿ ರಾಮನಗರದ ರಸ್ತೆ ಸಂಖ್ಯೆ 4ರಲ್ಲಿ ದಾಕ್ ನ ಧ್ವನಿಯನ್ನು ವರ್ಧಿಸುವ ಪ್ರಯತ್ನ ಮಾಡಲಾಗುತ್ತಿದೆ.ದಾಕ್ ಅತಿ ಎತ್ತರದ ದನಿಯನ್ನು ಹೊಂದಿದೆ, ಸಾಮಾನ್ಯವಾಗಿ ಅದಕ್ಕೆ ಯಾವುದೇ ಆಂಪ್ಲಿಫೈಯರ್ ಅಗತ್ಯವಿಲ್ಲ ಮತ್ತು ಅದರ ಶಬ್ದವು ತುಂಬಾ ದೂರವನ್ನು ತಲುಪಬಲ್ಲದು. 40 ವರ್ಷಗಳಿಗಿಂತ ಹೆಚ್ಚು ಕಾಲದಿಂದ ದಾಕ್ ನುಡಿಸುತ್ತಿರುವ ಮೋಂಟು ರಿಷಿದಾಸ್ (ಈ ಫೋಟೋದಲ್ಲಿಲ್ಲ), ಹೊಸ ತಂತ್ರಜ್ಞಾನಗಳ ಆಗಮನದೊಂದಿಗೆ, ದಾಕ್ ಕಲಾವಿದರಿಗೆ ಕೆಲಸ ಸಿಗುವ ಸಾಧ್ಯತೆ ಕಡಿಮೆ ಎಂದು ಹೇಳುತ್ತಾರೆ: "ಈ ದಿನಗಳಲ್ಲಿ ದಾಕ್ ಸಂಗೀತವನ್ನು ಕೇಳಲು, ಫೋನಿನಲ್ಲಿರುವ ಒಂದು ಬಟನ್ ಒತ್ತಿದರೆ ಸಾಕು"

ಒಬ್ಬ ವ್ಯಕ್ತಿ, ಕ್ಲಬ್ ಅಥವಾ ಕುಟುಂಬದೊಂದಿಗಿನ ದೀರ್ಘಾವಧಿಯ ಒಡನಾಟದಿಂದಾಗಿ 2020ರಲ್ಲಿ ಕೆಲವರು ಕೆಲಸಗಳನ್ನು ಪಡೆದರು. ಇಲ್ಲಿ, ರಾಮನಗರ ರಸ್ತೆ ಸಂಖ್ಯೆ 1ರಲ್ಲಿ, ಕೇಶಬ್ ರಿಷಿದಾಸ್, ಇತರ ಸಮಯದಲ್ಲಿ ಸೈಕಲ್ ರಿಕ್ಷಾ ಚಾಲಕನಾಗಿ ಕೆಲಸ ಮಾಡುವ, ಸ್ಥಳೀಯ ಕ್ಲಬ್‌ನ ಚಪ್ಪರದಲ್ಲಿ ತನ್ನ ತನ್ನ ದಾಕ್ ಜೊತೆ ಕುಣಿಯುತ್ತಿರುವುದು. ಅವರಿಗೆ ಕ್ಲಬ್ ಸದಸ್ಯರೊಬ್ಬರ ಪರಿಚಯವಿದೆ. ಅವರ ಮೂಲಕವೇ ಅವರಿಗೆ ಕೆಲಸ ದೊರೆಯಿತು

ಕೇಶಬ್ ರಿಷಿದಾಸ್ ವರ್ಷವಿಡೀ ಸೈಕಲ್ ರಿಕ್ಷಾ ಓಡಿಸುತ್ತಾರೆ ಮತ್ತು ಪೂಜೆಯ ದಿನಗಳಲ್ಲಿ ಅಥವಾ ಇತರ ಸಂದರ್ಭಗಳಲ್ಲಿ, ತನ್ನ ಮಗನನ್ನು ತನ್ನೊಂದಿಗೆ ಧೋಲ್ ನುಡಿಸಲು ಕರೆದುಕೊಂಡು ಹೋಗುತ್ತಾರೆ, ಇದು ಕೆಲವೊಮ್ಮೆ ದನಿಗೂಡಿಸಲು ದಾಕ್ ಜೊತೆಗೂಡುತ್ತದೆ. ಅವರು ತನ್ನದೇ ಸೈಕಲ್ ರಿಕ್ಷಾದಲ್ಲಿ ಕೆಲಸಕ್ಕೆ ಹೋಗುತ್ತಾರೆ

ಅಖೌರಾ ರಸ್ತೆಯಲ್ಲಿ ಪೂಜೆಯ ಕೊನೆಯ ದಿನದಂದು ದುರ್ಗಾದೇವಿಯ ಮೂರ್ತಿಯನ್ನು ವಿಸರ್ಜನೆಗಾಗಿ ಕೊಂಡುಹೋಗುತ್ತಿರುವುದು - ಇದು ದಾಕ್ ಸಂಗೀತ ಬಳಕೆಯಾಗುವ ಪ್ರಮುಖ ಘಟ್ಟವಾಗಿದೆ

ಪರಿಮಳ್ ರಿಷಿದಾಸ್ ಅವರು ಕೇರ್ ಚೌಮುಹಾನಿ ಪ್ರದೇಶದ ಸ್ಥಳೀಯ ಕಾಳಿ ದೇವಸ್ಥಾನದಲ್ಲಿ ಪೂಜೆಯ ನಂತರ ಮಂಗಳಾರತಿಗೆ ನಮಸ್ಕರಿಸುತ್ತಿರುವುದು . 'ಈ ವರ್ಷ [2021] ಅವರು ನನಗೆ 11,000 ರೂಪಾಯಿಗಳನ್ನು ಪಾವತಿಸುತ್ತಿದ್ದಾರೆ, ಕಳೆದ ವರ್ಷಕ್ಕಿಂತ 500 ಹೆಚ್ಚು" ಎಂದು ಅವರು ಹೇಳುತ್ತಾರೆ. "ನನ್ನ 58ನೇ ವರ್ಷ ನಡೆಯುತ್ತಿದೆ, ನಾನು 18 ಅಥವಾ 19ನೇ ವಯಸ್ಸಿನಲ್ಲಿ ನುಡಿಸಲು ಆರಂಭಿಸಿದೆ"

ಕೆಲವು ದಾಕಿ ಕಲಾವಿದರು ಲಕ್ಷ್ಮಿ ಪೂಜೆಯ ಸಂಜೆ ಬೀದಿಗಿಳಿದು ದಾಕ್ ಬಾರಿಸಲಾರಂಭಿಸುತ್ತಾರೆ. ಜನರು ತಮ್ಮ ಮನೆಗಳಲ್ಲಿ ದಾಕ್ ನುಡಿಸಲು ಕರೆಯುತ್ತಾರೆ. ಇದು ಸಾಮಾನ್ಯವಾಗಿ ದಾಕ್ಕಲಾವಿದರ ಸಂಪಾದನೆಯ ಕೊನೆಯ ದಿನವಾಗಿದೆ

ದಾಕ್ ಕಲಾವಿದರು ಮನೆ ಮನೆಯಲ್ಲಿ ಸುಮಾರು 5-10 ನಿಮಿಷಗಳ ಪ್ರದರ್ಶನ ನೀಡುವ ಮೂಲಕ ಸುಮಾರು 20ರಿಂದ 50 ರೂಪಾಯಿಗಳ ತನಕ ಮನೆಯೊಂದರಿಂದ ಸಂಪಾದಿಸುತ್ತಾರೆ

ರಾಜೀವ್ ರಿಷಿದಾಸ್ ಲಕ್ಷ್ಮಿ ಪೂಜೆಯ ನಂತರ ರಾತ್ರಿ 9 ಗಂಟೆಗೆ ತನ್ನ ಮನೆಗೆ ಹಿಂತಿರುಗುತ್ತಿರುವುದು. ಅವರು ಹೇಳುತ್ತಾರೆ, "ನನಗೆ ಇದು ಇಷ್ಟವಿಲ್ಲ [ಮನೆ ಬಾಗಿಲಿಗೆ ದಾಕ್ ದಾಕ್ ಬಾರಿಸುತ್ತಾ ಹೋಗುವುದು] ಆದರೆ ಒಂದಿಷ್ಟು ಹೆಚ್ಚುವರಿ ಸಂಪಾದನೆಯಾಗುವುದರಿಂದಾಗಿ ಕುಟುಂಬದವರು ಹೋಗುವಂತೆ ಒತ್ತಾಯಿಸುತ್ತಾರೆ"

ಪೂಜೆಯ ಕಾಲ ಮುಗಿ ನಂತರ, ಹೆಚ್ಚಿನ ದಾಕ್ ಕಲಾವಿದರು ತಮ್ಮ ಸಾಮಾನ್ಯ ಕೆಲಸಗಳಿಗೆ ಮರಳುತ್ತಾರೆ. ದುರ್ಗಾ ಚೌಮುಹನಿ ಜಂಕ್ಷನ್ ವರ್ಷಪೂರ್ತಿ ಪ್ರಯಾಣಿಕರಿಗಾಗಿ ಚಾಲಕರು ತಮ್ಮ ರಿಕ್ಷಾಗಳೊಂದಿಗೆ ಕಾಯುವ ಸ್ಥಳಗಳಲ್ಲಿ ಒಂದಾಗಿದೆ
ಅನುವಾದ: ಶಂಕರ. ಎನ್. ಕೆಂಚನೂರು