ಜೂನ್ 16, 2022ರ ರಾತ್ರಿ, ಲಬಾ ದಾಸ್ ಅಸ್ಸಾಂನ ನಗಾಂವ್ ಗ್ರಾಮದ ಇತರರಂತೆ, ನಾನೋಯಿ ನದಿಯ ದಡದಲ್ಲಿ ಹತಾಶವಾಗಿ ಮರಳಿನ ಚೀಲಗಳನ್ನು ಜೋಡಿಸುತ್ತಿದ್ದರು. ಬ್ರಹ್ಮಪುತ್ರ ನದಿಯ ಉಪನದಿಯಾದ ಈ ನದಿಯು ತನ್ನ ದಡವನ್ನು ಭೇದಿಸಲಿದೆ ಎಂದು 48 ಗಂಟೆಗಳ ಹಿಂದೆ ಅವರಿಗೆ ತಿಳಿಸಲಾಗಿತ್ತು. ದರ್ರಾಂಗ್ ಜಿಲ್ಲೆಯ ಈ ಗ್ರಾಮಗಳಿಗೆ ದಡದ ಉದ್ದಕ್ಕೂ ಜೋಡಿಸಲು ಮರಳು ಮೂಟೆಗಳನ್ನು ಜಿಲ್ಲಾಡಳಿತವು ಒದಗಿಸಿತ್ತು.
"ಜೂನ್ 17ರಂದು ಮುಂಜಾನೆ 1 ಗಂಟೆ ಸುಮಾರಿಗೆ ಒಡ್ಡು ಒಡೆದುಹೋಯಿತು", ಎಂದು ಸಿಪಜಾರ್ ಬ್ಲಾಕ್ನ ನಾಗಾವ್ನ ಹಿರಾ ಸುಬುರಿ ಕುಗ್ರಾಮದ ನಿವಾಸಿ ಲಾಬಾ ಹೇಳುತ್ತಾರೆ. "ಅದು ಬೇರೆ ಬೇರೆ ಹಂತಗಳಲ್ಲಿ ಒಡೆಯುತ್ತಿದ್ದುದರಿಂದ ನಾವು ಅಸಹಾಯಕರಾಗಿದ್ದೆವು." ಆ ವೇಳೆಗೆ ಐದು ದಿನಗಳಿಂದ ಎಡೆಬಿಡದೆ ಮಳೆ ಸುರಿಯುತ್ತಿತ್ತು, ಆದರೆ ತಿಂಗಳ ಆರಂಭದಿಂದಲೂ ನೈರುತ್ಯ ಮಾನ್ಸೂನಿನಿಂದ ರಾಜ್ಯವು ತತ್ತರಿಸುತ್ತಿತ್ತು. ಭಾರತೀಯ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದ್ದು, ಜೂನ್ 16ರಿಂದ 18ರವರೆಗೆ ಅಸ್ಸಾಂ ಮತ್ತು ಮೇಘಾಲಯದಲ್ಲಿ 'ಅತ್ಯಂತ ಭಾರಿ ಮಳೆ' (ದಿನಕ್ಕೆ 244.5 ಮಿ.ಮೀ.ಗಿಂತ ಹೆಚ್ಚು ಅಥವಾ ಸಮನಾದ) ಎಂದು ಮುನ್ಸೂಚನೆ ನೀಡಿತ್ತು.
ಜೂನ್ 16ರ ರಾತ್ರಿ 10.30ರ ಸುಮಾರಿಗೆ ನಾನೋಯಿ ನದಿಯು ನಾಗಾವ್‌ನಿಂದ ದಕ್ಷಿಣಕ್ಕೆ ಒಂದು ಕಿಲೋಮೀಟರ್ ದೂರದಲ್ಲಿರುವ ಖಾಸ್ಡಿಪಿಲಾ ಗ್ರಾಮದ ಕಾಲಿತಪಾರ ಕುಗ್ರಾಮಕ್ಕೆ ಅಪಾರ ಶಕ್ತಿಯೊಂದಿಗೆ ನುಗ್ಗಿತು. ಜಯಮತಿ ಕಲಿತಾ ಮತ್ತು ಅವರ ಕುಟುಂಬವು ಪ್ರವಾಹದಲ್ಲಿ ಎಲ್ಲವನ್ನೂ ಕಳೆದುಕೊಂಡಿತು. "ಒಂದು ಚಮಚವೂ ಉಳಿದಿರಲಿಲ್ಲ," ಎಂದು ತಗಡಿನ ಛಾವಣಿಯ ತಾತ್ಕಾಲಿಕ ಟಾರ್ಪಾಲಿನ್ ಚಪ್ಪರದ ಹೊರಗೆ ಕುಳಿತ ಅವರು ಹೇಳುತ್ತಾರೆ. "ಕಣಜ ಮತ್ತು ದನದ ಕೊಟ್ಟಿಗೆ ಸೇರಿದಂತೆ ನಮ್ಮ ಮನೆಗಳು ಬಲವಾದ ಪ್ರವಾಹದಿಂದ ಕೊಚ್ಚಿಹೋದವು" ಎಂದು ಅವರು ಹೇಳುತ್ತಾರೆ.
ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ದೈನಂದಿನ ಪ್ರವಾಹ ವರದಿಯ ಪ್ರಕಾರ, ಜೂನ್ 16ರಂದು, ರಾಜ್ಯದ 28 ಜಿಲ್ಲೆಗಳಲ್ಲಿ ಸುಮಾರು 19 ಲಕ್ಷ ಜನರು (1.9 ಮಿಲಿಯನ್) ಮಳೆಯಿಂದ ಬಾಧಿತರಾಗಿದ್ದಾರೆ. ಸುಮಾರು 3 ಲಕ್ಷ ಜನರು ಬಾಧಿತರಾದ ದರ್ರಾಂಗ್, ಆ ರಾತ್ರಿ ರಾಜ್ಯದ ಮೂರು ಅತಿ ಹೆಚ್ಚು ಬಾಧಿತ ಜಿಲ್ಲೆಗಳಲ್ಲಿ ಒಂದಾಗಿತ್ತು. ನಾನೋಯಿ ನದಿಯು ತನ್ನ ದಡವನ್ನು ಮೀರಿ ಉಕ್ಕಿ ಹರಿದ ರಾತ್ರಿ, ರಾಜ್ಯದ ಇತರ ಆರು ನದಿಗಳಾದ ಬೆಕಿ, ಮಾನಸ್, ಪಗ್ಲಾಡಿಯಾ, ಪುತಿಮರಿ, ಜಿಯಾ-ಭರಾಲಿ ಮತ್ತು ಬ್ರಹ್ಮಪುತ್ರಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದವು.


ಎಡ: ಜೂನ್ 16 ರ ರಾತ್ರಿ ನ್ಯಾನೋಯಿ ನದಿ ತನ್ನ ದಡಗಳನ್ನು ದಾಟಿದ ನಂತರ ದರ್ರಾಂಗ್ ಜಿಲ್ಲೆಯ ಖಾಸ್ಡಿಪಿಲಾ ಗ್ರಾಮದ ಪ್ರವಾಹ ಪೀಡಿತ ಪ್ರದೇಶ. ಬಲ: ನಾಗಾನ್‌ನಲ್ಲಿ ತಂಕೇಶ್ವರ ದೇಕಾ, ಲವ ದಾಸ್ ಮತ್ತು ಲಲಿತ್ ಚಂದ್ರ ದಾಸ್ (ಎಡದಿಂದ ಬಲಕ್ಕೆ). ಅತಿಯಾಗಿ ಬೆಳೆದ ಮರದ ಬೇರುಗಳು, ಬಿಳಿ ಇರುವೆಗಳು ಮತ್ತು ಇಲಿಗಳು ದಡವನ್ನು ಟೊಳ್ಳಾಗಿಸಿದವು ಎಂದು ಟಂಕೇಶ್ವರ ಹೇಳುತ್ತಾರೆ


ಎಡ: ಖಾಸಡಿಪಿಲ ಗ್ರಾಮದಲ್ಲಿ ಪ್ರಬಲವಾದ ಪ್ರವಾಹದ ನೀರು ಜಯಮತಿ ಕಲಿತಾ ಮತ್ತು ಅವರ ಕುಟುಂಬದವರ ಮನೆ, ಕಣಜ, ದನದ ಕೊಟ್ಟಿಗೆ ಕೊಚ್ಚಿಕೊಂಡು ಹೋಗಿದೆ. ಬಲ: 'ಒಂದು ಚಮಚವೂ ಉಳಿದಿಲ್ಲ' ಎಂದು ಹೇಳಿದ ಜಯಮತಿ (ಬಲ) ಹತ್ತಿರದಲ್ಲಿ ತಾತ್ಕಾಲಿಕ ಆಶ್ರಯದಲ್ಲಿ ಕುಳಿತಿದ್ದಾರೆ
"2002, 2004 ಮತ್ತು 2014ರಲ್ಲಿ ನಾವು ಪ್ರವಾಹವನ್ನು ನೋಡಿದ್ದೇವೆ, ಆದರೆ ಈ ಬಾರಿ ಅದು ಭಯಾನಕವಾಗಿತ್ತು" ಎಂದು ತಂಕೇಶ್ವರ್ ದೇಕಾ ಹೇಳುತ್ತಾರೆ, ಅವರು ನಗಾಂವ್‌ನಿಂದ ಮೊಣಕಾಲು ಆಳದ ನೀರಿನಲ್ಲಿ ಎರಡು ಕಿಲೋಮೀಟರ್ ನಡೆದು ಹತ್ತಿರದ ಸಾರ್ವಜನಿಕ ಆರೋಗ್ಯ ಕೇಂದ್ರವಾದ ಹತಿಮಾರಾದಲ್ಲಿರುವ ಸಾರ್ವಜನಿಕ ಆರೋಗ್ಯ ಕೇಂದ್ರವನ್ನು ತಲುಪಿದರು. ಅವರು ತನ್ನ ಸಾಕುಬೆಕ್ಕು ಕಚ್ಚಿದ ಕಾರಣ ಜೂನ್ 18ರಂದು ರೇಬಿಸ್ ಲಸಿಕೆ ತೆಗೆದುಕೊಳ್ಳಲು ಅಲ್ಲಿಗೆ ಹೋಗಿದ್ದರು.
"ಬೆಕ್ಕು ಹಸಿವಿನಿಂದ ಬಳಲುತ್ತಿತ್ತು" ಎಂದು ಟಂಕೇಶ್ವರ್ ವಿವರಿಸುತ್ತಾರೆ. "ಬಹುಶಃ ಅದು ಹಸಿವಿನಿಂದ ಬಳಲುತ್ತಿತ್ತು ಅಥವಾ ಮಳೆಯ ನೀರಿನ ಬಗ್ಗೆ ಹೆದರುತ್ತಿತ್ತು. ಅದರ ಮಾಲೀಕರು ಅದಕ್ಕೆ ಆಹಾರ ನೀಡಿ ಎರಡು ದಿನಗಳಾಗಿದ್ದವು. ಎಲ್ಲೆಡೆ ನೀರು ಇದ್ದುದರಿಂದ [ಮಾಲೀಕರಿಗೆ] ಆಃಆರ ನೀಡಲು ಸಾಧ್ಯವಾಗಲಿಲ್ಲ. ಅಡುಗೆಮನೆ, ಮನೆ, ಇಡೀ ಗ್ರಾಮವು ನೀರಿನಲ್ಲಿ ಮುಳುಗಿತ್ತು" ಎಂದು ಅವರು ಹೇಳುತ್ತಾರೆ. ಜೂನ್ 23ರಂದು ನಾವು ಅವರನ್ನು ಭೇಟಿಯಾದಾಗ ತಂಕೇಶ್ವರ್ ಈಗಾಗಲೇ ಐದು ಲಸಿಕೆ ಪ್ರಮಾಣಗಳಲ್ಲಿ ಎರಡನ್ನು ಪಡೆದಿದ್ದರು. ಮತ್ತು ಪ್ರವಾಹದ ನೀರು ಅಂದಿನಿಂದ ಕೆಳಭಾಗದ ಮಂಗಲ್ದೋಯ್ ಪ್ರದೇಶದ ಕಡೆಗೆ ಇಳಿಯತೊಡಗಿತ್ತು.
ಅತಿಯಾಗಿ ಬೆಳೆದ ಮರದ ಬೇರುಗಳು, ಬಿಳಿ ಇರುವೆಗಳು ಮತ್ತು ಇಲಿಗಳು ಎಲ್ಲವೂ ಒಡ್ಡನ್ನು ಹಾನಿಗೊಳಿಸಿವೆ ಎಂದು ತಂಕೇಶ್ವರ್ ಹೇಳುತ್ತಾರೆ. "ಒಂದು ದಶಕದಿಂದ ಅದನ್ನು ರಿಪೇರಿ ಮಾಡಿರಲಿಲ್ಲ" ಎನ್ನುವ ಅವರು. "ಭತ್ತದ ಗದ್ದೆಗಳು 2-3 ಅಡಿ ಮಣ್ಣಿನಲ್ಲಿ ಮುಳುಗಿವೆ. ಇಲ್ಲಿನ ಜನರು ಮುಖ್ಯವಾಗಿ ಕೃಷಿ ಮತ್ತು ದಿನಗೂಲಿ ಕಾರ್ಮಿಕರನ್ನು ಅವಲಂಬಿಸಿದ್ದಾರೆ. ಅವರು ತಮ್ಮ ಕುಟುಂಬಗಳನ್ನು ಹೇಗೆ ನಡೆಸುತ್ತಾರೆ?" ಎಂದು ಕೇಳುತ್ತಾರೆ.
ಇದು ಲಕ್ಷ್ಯಪತಿ ದಾಸ್ ಕೂಡ ಉತ್ತರ ಕಂಡುಕೊಳ್ಳಲು ಹೆಣಗಾಡುತ್ತಿರುವ ಪ್ರಶ್ನೆಯಾಗಿದೆ. ಅವರ ಮೂರು-ಬಿಘಾ ಭೂಮಿ (ಒಂದು ಎಕರೆಗೆ ಹತ್ತಿರ) ಮಣ್ಣಿನಿಂದ ಆವೃತವಾಗಿದೆ. "ಎರಡು ಕಥಾಗಳಲ್ಲಿ [ಐದು ಕಥಾಗಳು ಒಂದು ಬಿಘಾಕ್ಕೆ ಸಮ] ನನ್ನ ಭತ್ತದ ಸಸಿಗಳು ಈಗ ಕೆಸರುಮಯವಾಗಿವೆ" ಎಂದು ಅವರು ಆತಂಕದಿಂದ ಹೇಳುತ್ತಾರೆ. "ನಾನು ಮತ್ತೆ ಸಸಿಗಳನ್ನು ನಾಟಿ ಮಾಡಲು ಸಾಧ್ಯವಿಲ್ಲ."
ಲಕ್ಷ್ಯಪತಿಯವರ ಮಗಳು ಮತ್ತು ಮಗ ನಾಗೋನ್‌ನಿಂದ 15 ಕಿಲೋಮೀಟರ್ ದೂರದಲ್ಲಿರುವ ಸಿಪಜಾರ್ ಕಾಲೇಜಿನಲ್ಲಿ ಓದುತ್ತಿದ್ದಾರೆ. "ಕಾಲೇಜಿಗೆ ಹೋಗಲು ಅವರಿಗೆ ಪ್ರತಿದಿನ 200 ರೂಪಾಯಿ ಬೇಕು. ಆ ಹಣವನ್ನು ನಾವು ಹೇಗೆ ಹೊಂದಿಸುತ್ತೇವೆ ಎಂದು ನನಗೆ ತಿಳಿದಿಲ್ಲ. [ಪ್ರವಾಹ] ನೀರು ಹೋಗಿದೆ, ಆದರೆ ಅದು ಮತ್ತೆ ಬಂದರೆ ಏನು ಮಾಡುವುದು? ನಾವು ಭಯಭೀತರಾಗಿದ್ದೇವೆ ಮತ್ತು ದುಃಖಿತರಾಗಿದ್ದೇವೆ" ಎಂದು ಅವರು ಹೇಳುತ್ತಾರೆ, ಆದರೆ ಅವರು ಶೀಘ್ರದಲ್ಲೇ ಒಡ್ಡನ್ನು ಸರಿಪಡಿಸಬಹುದು ಎಂದು ನಂಬಿದ್ದಾರೆ.


ಎಡ: ಲಕ್ಷ್ಯಪತಿ ದಾಸ್ ತನ್ನ ಮುಳುಗಿದ ಭೂಮಿಯನ್ನು ನೋಡುತ್ತಿರುವುದು. ಬಲ: ನಾಗಾದಲ್ಲಿ ಪ್ರವಾಹದ ನೀರಿನಲ್ಲಿ ಹಲವು ರೈತರ ಹೊಲಗಳು ಮುಳುಗಡೆಯಾಗಿವೆ


ಎಡಕ್ಕೆ: ಪ್ರವಾಹದ ನೀರಿಗೆ ಸಿಲುಕಿ ಕೊಳೆತ ಆಲೂಗಡ್ಡೆ ಮತ್ತು ಈರುಳ್ಳಿಯನ್ನು ಬೇರ್ಪಡಿಸುತ್ತಿರುವ ಲಲಿತ್ ಚಂದ್ರ ದಾಸ್; ಈರುಳ್ಳಿ ಅವರ ಕಣ್ಣಲ್ಲಿ ನೀರು ತರಿಸುತ್ತಿದೆ. ಬಲ: ಕುಟುಂಬದ ಎಂಟು ಮೇಕೆಗಳಲ್ಲಿ ಒಂದು ಪ್ರವಾಹ ನೀರಿನಿಂದ ತುಂಬಿದ ಮೀನಿನ ಕೊಳದ ಮುಂದೆ. 'ದೊಡ್ಡ ಮೀನುಗಳೆಲ್ಲ ಹೊರಟುಹೋಗಿವೆ '
"ಕುಂಬಳ ಬಳ್ಳಿ ಸತ್ತಿದೆ ಮತ್ತು ಪಪ್ಪಾಯಿ ಮರಗಳು ಬುಡಸಮೇತ ಕಿತ್ತುಹೋಗಿವೆ. ನಾವು ಕುಂಬಳಕಾಯಿ ಮತ್ತು ಪಪ್ಪಾಯಿಗಳನ್ನು ಹಳ್ಳಿಯ ಇತರರಿಗೆ ವಿತರಿಸಿದ್ದೇವೆ" ಎಂದು ಹೀರಾ ಸುಬುರಿಯ ಸುಮಿತ್ರಾ ದಾಸ್ ಹೇಳುತ್ತಾರೆ. ಕುಟುಂಬದ ಮೀನಿನ ಕೊಳವೂ ಸಹ ಮಣ್ಣಿನ ಕೆಳಗೆ ಹೋಗಿದೆ. "ಕೊಳವನ್ನು ಹರಡಲು ನಾನು ಮೀನಿನ ಬೀಜಗಳಿಗಾಗಿ 2,500 ರೂಪಾಯಿಗಳನ್ನು ಖರ್ಚು ಮಾಡಿದ್ದೆ. ಕೊಳವು ಈಗ ಭೂಮಿಯ ಮಟ್ಟಕ್ಕೆ ಬಂದಿದೆ. ದೊಡ್ಡ ಮೀನುಗಳೆಲ್ಲ ಕಳೆದು ಹೋಗಿವೆ" ಎಂದು ಸುಮಿತ್ರಾ ಅವರ ಪತಿ ಲಲಿತ್ ಚಂದ್ರ ಅವರು ಪ್ರವಾಹದ ನೀರಿನಲ್ಲಿ ಕೊಳೆತ ಈರುಳ್ಳಿಯನ್ನು ಬೇರ್ಪಡಿಸುತ್ತಾ ಹೇಳುತ್ತಾರೆ.
ಸುಮಿತ್ರಾ ಮತ್ತು ಲಲಿತ್ ಚಂದ್ರ 'ಬಂಧಕ್' ಪದ್ಧತಿಯಡಿ ಭೂಮಿಯನ್ನು ಸಾಗುವಳಿ ಮಾಡುತ್ತಾರೆ, ಇದರಲ್ಲಿ ಕಟಾವಿನ ಕಾಲು ಭಾಗವನ್ನು ಬಾಡಿಗೆಯ ಬದಲಿಗೆ ಭೂಮಾಲೀಕರಿಗೆ ನೀಡಲಾಗುತ್ತದೆ. ಅವರು ಸ್ವ-ಬಳಕೆಗಾಗಿ ಬೆಳೆಗಳನ್ನು ಬೆಳೆಯುತ್ತಾರೆ ಮತ್ತು ಲಲಿತ್ ಕೆಲವೊಮ್ಮೆ ಹತ್ತಿರದ ಹೊಲಗಳಲ್ಲಿ ದಿನಗೂಲಿ ಕೆಲಸವನ್ನು ಸಹ ಮಾಡುತ್ತಾರೆ. "ಹೊಲಗದ್ದೆಗಳು ಮತ್ತೆ ಬೇಸಾಯಕ್ಕೆ ಸಿದ್ಧವಾಗಲು ಒಂದು ದಶಕ ಬೇಕಾಗುತ್ತದೆ" ಎಂದು ಸುಮಿತ್ರಾ ಹೇಳುತ್ತಾರೆ. ಪ್ರವಾಹದ ನಂತರ ಕುಟುಂಬದ ಎಂಟು ಆಡುಗಳು ಮತ್ತು 26 ಬಾತುಕೋಳಿಗಳಿಗೆ ಮೇವು ಹೊಂದಿಸುವುದು ಸಹ ಒಂದು ಸಮಸ್ಯೆಯಾಗಿದೆ ಎಂದು ಅವರು ಹೇಳುತ್ತಾರೆ.
ಕುಟುಂಬವು ಈಗ ಅವರ ಮಗ ಲವಕುಶ್ ದಾಸ್ ಅವರ ಆದಾಯದ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿದೆ, ಅವರು ನಾಗಾವ್‌ನಿಂದ 7-8 ಕಿಮೀ ದೂರದಲ್ಲಿರುವ ನಾಮ್‌ಖೋಲಾ ಮತ್ತು ಲೋಥಾಪಾರಾ ಮಾರುಕಟ್ಟೆಗಳಲ್ಲಿ ಈರುಳ್ಳಿ ಮತ್ತು ಆಲೂಗಡ್ಡೆಯಂತಹ ದೈನಂದಿನ ಅಗತ್ಯ ವಸ್ತುಗಳನ್ನು ಮತ್ತು ತರಕಾರಿಗಳನ್ನು ಮಾರಾಟ ಮಾಡುತ್ತಾರೆ.
ಆದರೆ ಸೋಲು ಮತ್ತು ಸಂಕಟದ ನಡುವೆ, ಜೂನ್ 27ರಂದು, ಸುಮಿತ್ರಾ ಮತ್ತು ಲಲಿತ್ ಅವರ ಮಗಳು ಅಂಕಿತಾ ಅವರು ಹೈಯರ್ ಸೆಕೆಂಡರಿ (12ನೇ ತರಗತಿ) ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ ಎಂಬ ಸಂತೋಷದ ಸುದ್ದಿಯನ್ನು ಪಡೆದರು. ಮಗಳು ಮತ್ತಷ್ಟು ಓದಲು ಉತ್ಸುಕಳಾಗಿದ್ದರೂ, ಆಕೆಯ ತಾಯಿಗೆ ಈಗ ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ನೋಡಿದರೆ ಓದಿಸುವ ಕುರಿತು ಖಚಿತವಾಗಿ ಹೇಳಲು ಸಾಧ್ಯವಾಗುತ್ತಿಲ್ಲ.
ಅಂಕಿತಾ ಅವರಂತೆ, 18 ವರ್ಷದ ಜುಬ್ಲಿ ಡೆಕಾ ಕೂಡ ಓದನ್ನು ಮುಂದುವರಿಸಲು ಬಯಸುತ್ತಾರೆ. ನಗಾಂವ್‌ನಲ್ಲಿರುವ ತನ್ನ ಮನೆಯಿಂದ ಮೂರು ಕಿಲೋಮೀಟರ್ ದೂರದಲ್ಲಿರುವ ದಿಪಿಲಾ ಚೌಕದಲ್ಲಿರುವ ಎನ್ಆರ್‌ಡಿಎಸ್ ಜೂನಿಯರ್ ಕಾಲೇಜಿನ ವಿದ್ಯಾರ್ಥಿನಿಯಾಗಿರುವ ಅವರು ಇದೇ ಪರೀಕ್ಷೆಯಲ್ಲಿ ಶೇಕಡಾ 75ರಷ್ಟು ಅಂಕಗಳನ್ನು ಗಳಿಸಿದ್ದಾರೆ. ಸುತ್ತಲಿನ ವಿನಾಶವನ್ನು ನೋಡಿದರೆ, ಭವಿಷ್ಯವೂ ಆತಂಕದಲ್ಲಿದೆ.



ಎಡಕ್ಕೆ: ಜುಬ್ಲಿ ದೇಕಾ ತನ್ನ ಮನೆಯ ಬಾಗಿಲ ಬಳಿ ನಿಂತಿದ್ದರು, ಪ್ರವಾಹದ ನೀರು ತಂದ ಮಣ್ಣಿನಿಂದ ತುಂಬಿದ ಅಂಗಳ. ನಡುವೆ: ದೀಪಂಕರ್ ದಾಸ್ ತನ್ನ ಅಂಗಡಿಯಲ್ಲಿ. ಈ ಅಂಗಡಿ 10 ದಿನಗಳಿಂದ ನೀರಿನ ಅಡಿಯಲ್ಲಿತ್ತು. ಬಲಕ್ಕೆ: ಸುಮಿತ್ರಾ ದಾಸ್ ಮಳೆಯಿಂದ ಹಾನಿಗೊಳಗಾದ ಭತ್ತವನ್ನು ತೋರಿಸುತ್ತಿರುವುದು
"ನಾನು ಶಿಬಿರದಲ್ಲಿ ಉಳಿಯಲು ಇಷ್ಟಪಡುವುದಿಲ್ಲ, ಆದ್ದರಿಂದ ನಾನು ಇಂದು ಇಲ್ಲಿಗೆ ಮರಳಿದ್ದೇನೆ" ಎಂದು ಅವಳು ನಾಗೌನಿನಲ್ಲಿ ಪ್ರವಾಹದಿಂದ ಹಾನಿಗೊಳಗಾದ ತನ್ನ ಮನೆಯ ಕಿಟಕಿಯ ಮೂಲಕ ನಮ್ಮೊಂದಿಗೆ ಮಾತನಾಡುತ್ತಾ ಹೇಳುತ್ತಾರೆ. ಅವರ ನಾಲ್ಕು ಜನರ ಕುಟುಂಬದ ಮತ್ತೊಬ್ಬರು ಜಿಲ್ಲಾಡಳಿತ ಆಯೋಜಿಸಿದ ಪರಿಹಾರ ಶಿಬಿರದಲ್ಲಿದ್ದಾರೆ. "ಆ ರಾತ್ರಿ, ಎಲ್ಲಿಗೆ ಹೋಗಬೇಕು, ಏನನ್ನು ತೆಗೆದುಕೊಳ್ಳಬೇಕು ಎಂದು ನಾವು ನಿರ್ಧರಿಸಲು ಸಾಧ್ಯವಾಗಲಿಲ್ಲ" ಎಂದು ಜುಬ್ಲಿ ಹೇಳುತ್ತಾರೆ, ಅವರು ತಮ್ಮ ಮನೆ ಪ್ರವಾಹಕ್ಕೆ ಸಿಲುಕಿದಾಗ ತನ್ನ ಕಾಲೇಜು ಚೀಲವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು.
ಸುಮಾರು 10 ದಿನಗಳ ಕಾಲ ಮಳೆಯಲ್ಲಿ, 23 ವರ್ಷದ ದೀಪಂಕರ್ ದಾಸ್ ಅವರು ನಾಗೌನಿನಲ್ಲಿ ತಮ್ಮ ಚಹಾ ಅಂಗಡಿಯನ್ನು ತೆರೆಯಲು ಸಾಧ್ಯವಾಗಲಿಲ್ಲ. ಅವರು ಸಾಮಾನ್ಯವಾಗಿ ದಿನಕ್ಕೆ 300 ರೂ.ಗಳನ್ನು ಗಳಿಸುತ್ತಿದ್ದರು, ಆದರೆ ಪ್ರವಾಹದ ನಂತರ ವ್ಯಾಪಾರವು ಇನ್ನೂ ಚುರುಕುಗೊಂಡಿಲ್ಲ. ಜೂನ್ 23ರಂದು ನಾವು ಅವರನ್ನು ಭೇಟಿಯಾದಾಗ, ಒಬ್ಬಂಟಿ ಗ್ರಾಹಕ ಅವರ ಅಂಗಡಿಯಲ್ಲಿ ಒಂದು ಕಪ್ ನೆನೆಸಿದ ಹೆಸರುಕಾಳು ಮತ್ತು ಒಂದು ಸಿಗರೇಟಿಗಾಗಿ ಬಂದಿದ್ದರು.
ದೀಪಾಂಕರ್ ಅವರ ಕುಟುಂಬವು ಯಾವುದೇ ಭೂಮಿಯನ್ನು ಹೊಂದಿಲ್ಲ. ಅವರು ಅಂಗಡಿಯಿಂದ ಗಳಿಸಿದ ಸಂಪಾದನೆ ಮತ್ತು ಅವರ 49 ವರ್ಷದ ತಂದೆ ಸತ್ರಾಮ್ ದಾಸ್ ಅವರ ಸಾಂದರ್ಭಿಕ ವೇತನದ ಕೆಲಸವನ್ನು ಅವಲಂಬಿಸಿದ್ದಾರೆ. "ನಮ್ಮ ಮನೆ ಇನ್ನೂ ವಾಸಿಸಲು ಯೋಗ್ಯವಾಗಿಲ್ಲ, ಅದು ಮೊಣಕಾಲು ಆಳದಲ್ಲಿ ಕೆಸರಿನಲ್ಲಿದೆ" ಎಂದು ದೀಪಂಕರ್ ಹೇಳುತ್ತಾರೆ. ಅರೆ-ಪಕ್ಕಾ ಮನೆ ರಚನೆಗೆ ಪ್ರಮುಖ ದುರಸ್ತಿಗಳ ಅಗತ್ಯವಿದೆ, ಇದು ಕುಟುಂಬಕ್ಕೆ 1 ಲಕ್ಷ ರೂ.ಗಳಿಗೂ ಹೆಚ್ಚು ವೆಚ್ಚವನ್ನು ತರುತ್ತದೆ ಎಂದು ಅವರು ಹೇಳುತ್ತಾರೆ.
"ಪ್ರವಾಹಕ್ಕೆ ಮೊದಲು ಸರ್ಕಾರ ಕ್ರಮಗಳನ್ನು ಕೈಗೊಂಡಿದ್ದರೆ ಈ ವಿಪತ್ತನ್ನು ತಪ್ಪಿಸಲು ಸಾಧ್ಯವಾಗುತ್ತಿತ್ತು" ಎಂದು ಕೋವಿಡ್ ಲಾಕ್ಡೌನ್ ಸಮಯದಲ್ಲಿ ಗುವಾಹಟಿಯಿಂದ ಜನಪ್ರಿಯ ಬೇಕರಿ ಸರಪಳಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ದೀಪಾಂಕರ್ ಹೇಳುತ್ತಾರೆ. "ಒಡ್ಡು ಒಡೆಯುವ ಹಂತದಲ್ಲಿದ್ದಾಗ ಅವರು [ಜಿಲ್ಲಾಡಳಿತ] ಏಕೆ ಬಂದರು? ಅವರು ಮಳೆಯಿಲ್ಲದ ಸಮಯದಲ್ಲಿ ಬರಬೇಕಾಗಿತ್ತು."
ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ, ಜೂನ್ 16ರ ಮಳೆಯಿಂದ 28 ಜಿಲ್ಲೆಗಳ ಸುಮಾರು 19 ಲಕ್ಷ ಜನರು ಬಾಧಿತರಾಗಿದ್ದಾರೆ
ಏತನ್ಮಧ್ಯೆ, ಸಾರ್ವಜನಿಕ ಆರೋಗ್ಯ ಎಂಜಿನಿಯರಿಂಗ್ ವಿಭಾಗದ ಖಲಾಸಿ ಕೆಲಸಗಾರ ದಿಲೀಪ್ ಕುಮಾರ್ ದೇಕಾ, ಇಲಾಖೆಯು ಈಗ ಹಳ್ಳಿಯಲ್ಲಿ ಕೊಳವೆ ಬಾವಿಗಳನ್ನು ಎಲ್ಲಿ ಸ್ಥಾಪಿಸುತ್ತದೆ ಎಂಬ ಪಟ್ಟಿಯನ್ನು ನಮಗೆ ತೋರಿಸುತ್ತದೆ. ಪ್ರವಾಹ-ನಿರೋಧಕ ಕ್ರಮ, ಎತ್ತರದ ನೆಲದಲ್ಲಿ ನಿರ್ಮಿಸಲಾದ ಕೊಳವೆ ಬಾವಿಗಳು ಪ್ರವಾಹದ ಸಮಯದಲ್ಲಿ ಜನರಿಗೆ ಕುಡಿಯುವ ನೀರು ಸಿಗುವಂತೆ ಮಾಡುತ್ತವೆ.
ಪ್ರವಾಹದ ನಂತರ ಇಲಾಖೆ ಈ ಪ್ರಕ್ರಿಯೆಯನ್ನು ಏಕೆ ವಿಳಂಬಗೊಳಿಸಿದೆ ಎಂದು ಕೇಳಿದಾಗ, "ನಾವು ಮೇಲಿನಿಂದ ಬಂದ ಆದೇಶಗಳನ್ನು ಅನುಸರಿಸುತ್ತೇವೆ" ಎಂದು ಅವರು ಸರಳವಾಗಿ ಹೇಳಿದರು. ದರ್ರಾಂಗ್ ಜಿಲ್ಲೆಯ ಬಯಾಸ್ಪಾರಾ ಗ್ರಾಮದಲ್ಲಿರುವ ದಿಲೀಪ್ ಅವರ ಮನೆ ಕೂಡ ಜಲಾವೃತವಾಗಿತ್ತು. ಜೂನ್ 22ರ ವೇಳೆಗೆ ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ.79ರಷ್ಟು ಹೆಚ್ಚು ಮಳೆಯಾಗಿದೆ.
"ನಿನ್ನೆ [ಜೂನ್ 22] ಆಡಳಿತವು ನೀರಿನ ಪೊಟ್ಟಣಗಳನ್ನು ವಿತರಿಸಿತು, ಆದರೆ ಇಂದು ನಮ್ಮಲ್ಲಿ ಒಂದು ಹನಿ ನೀರು [ಕುಡಿಯಲು] ಇಲ್ಲ", ಎಂದು ಜಯಮತಿ ಹೇಳುತ್ತಾರೆ, ಅವರ ಪತಿ ಮತ್ತು ಹಿರಿಯ ಮಗ ಇಬ್ಬರೂ ನಾಯಿಯಿಂದ ಕಚ್ಚಲ್ಪಟ್ಟ ನಂತರ ರೇಬಿಸ್ ಚುಚ್ಚುಮದ್ದನ್ನು ಪಡೆಯಲು ಹೋಗಿದ್ದರು.
ನಾವು ನಾಗೌನಿನಿಂದ ಹೊರಡುವಾಗ, ಲಲಿತ್ ಚಂದ್ರ ಮತ್ತು ಸುಮಿತ್ರಾ ನಮ್ಮನ್ನು ಬೀಳ್ಕೊಡಲು ತಮ್ಮ ಪ್ರವಾಹ ಪೀಡಿತ ಮನೆಯಿಂದ ಹೊರಬಂದರು. ಮತ್ತು ಲಲಿತ್ ಚಂದ್ರ ಹೇಳಿದರು: "ಜನರು ಬರುತ್ತಾರೆ, ನಮಗೆ ಪರಿಹಾರ ಪೊಟ್ಟಣಗಳನ್ನು ಕೊಟ್ಟು ಹೊರಟುಬಿಡುತ್ತಾರೆ. ಯಾರೂ ನಮ್ಮೊಂದಿಗೆ ಕುಳಿತು ಮಾತನಾಡುವುದಿಲ್ಲ."


ಎಡ : ಕುಸಿಯುತ್ತಿರುವ ಒಡ್ಡಿಗೆ ಅಧಿಕೃತ ಸ್ಪಂದನೆಯ ಕೊರತೆಯ ಬಗ್ಗೆ ತಂಕೇಶ್ವರ್ ದೇಕಾ ಕಿಡಿಕಾ ರುತ್ತಾರೆ . ' ಈ ಪ್ರದೇಶವನ್ನು ಹಾ ತಿಮಾರ ಎಂದು ಕರೆಯಲಾಗುತ್ತದೆ , ಇದು ಆನೆಗಳು ಸತ್ತ ಸ್ಥಳ . ಒಡ್ಡನ್ನು ರಿಪೇರಿ ಮಾಡದಿದ್ದರೆ , ಇದು ಪ್ರವಾಹದಿಂದ ನಾಶವಾದ ಬಾ ನೇಮಾರವಾಗುತ್ತದೆ .' ಬಲ : ತನ್ನ ಮೇಕೆಗಳಿಗೆ ಆಹಾರ ನೀಡಲು ಮರದ ಎತ್ತರದ ಕೊಂಬೆಗಳನ್ನು ಕತ್ತರಿಸುತ್ತಿರುವುದು

ಮಳೆ ಮತ್ತು ಪ್ರವಾಹದಿಂದ ಬೆಳೆಗಳು ನಾಶವಾದ ನಂತರ ನಾಗೌ ನಿ ನಲ್ಲಿ ತರಕಾರಿಗಳ ಬೆಲೆಗಳು ಏರಿಕೆಯಾಗಿವೆ ಎಂದು ದಂಡಧರ್ ದಾಸ್ ಹೇಳುತ್ತಾರೆ

ನಾ ಗಾಂವ್ ಗ್ರಾಮದ ಒಡ್ಡಿನ ಮೂಲಕ ನ್ಯಾನೊಯಿ ನದಿಯು ಹರಿದುಹೋಗಿದ್ದರಿಂದ ಮರ ಗಳು ಬೇರುಸಹಿತ ಕಿತ್ತು ಬಿದ್ದವು

ಈ ಭತ್ತದ ಗದ್ದೆ ಪ್ರವಾಹಕ್ಕೆ ಮೊದಲು ಸಸಿ ನಾಟಿಗೆ ಸಿದ್ಧವಾಗಿತ್ತು , ಆದರೆ ಅದು ಈಗ ಎರಡು ಅಡಿ ಮಣ್ಣಿನಿಂದ ತುಂಬಿದೆ

ನಾ ಗಾಂವ್ ಗ್ರಾಮದ ಮುಳುಗಿದ ಹೊಲಗಳು

ನಾ ಗಾಂ ವ್ ಬಳಿಯ ದಿಪಿಲಾ ಮೌಜಾದಲ್ಲಿನ ಶಿಬಿರದಲ್ಲಿ ಪ್ರವಾಹ ಪರಿಹಾರವನ್ನು ವಿತರಿಸುತ್ತಿರುವ ಸರ್ಕಾರೇತರ ಸಂಸ್ಥೆ

ಖಾಸ್ಡಿಪಿಲಾ ಗ್ರಾಮದಲ್ಲಿ ನದಿಯ ಒಡ್ಡಿನ ಕುಸಿಯುತ್ತಿರುವ ಭಾಗ

ಕಾಸ್ಡಿಪಿಲಾ ಗ್ರಾಮದ ನಿವಾಸಿಯೊಬ್ಬರು ನದಿಯ ನೀರು ತಲುಪಿದ ಎತ್ತರವನ್ನು ತೋರಿಸು ತ್ತಿರುವುದು

ಜಯಮತಿ ( ಮಧ್ಯ ), ಅವ ರ ಮಗ ಮತ್ತು ಸೊಸೆ , ಪ್ರವಾಹಕ್ಕೆ ಬಲಿಯಾದ ಅವರ ಮನೆಯ ಪಕ್ಕದಲ್ಲಿ

ಜೂನ್ 2022 ರಲ್ಲಿ ಅಸ್ಸಾಂನಲ್ಲಿ ವಾಡಿಕೆಗಿಂತ ಶೇಕಡಾ 62 ರಷ್ಟು ಹೆಚ್ಚು ಮಳೆಯಾಗಿದೆ

ದರ್ರಾಂಗ್ ಜಿಲ್ಲೆಯ ಹಲವಾರು ಗ್ರಾಮಗಳನ್ನು ಸಂಪರ್ಕಿಸುವ ದಿಪಿಲಾ - ಬೋರ್ಬರಿ ರಸ್ತೆ ಈಗ ಹಲವಾರು ಸ್ಥಳಗಳಲ್ಲಿ ಕಿತ್ತುಹೋಗಿದೆ
ಅನುವಾದ : ಶಂಕರ . ಎನ್ . ಕೆಂಚನೂರು