ಫೆಬ್ರವರಿ 13, 2024 ರಂದು ಪಂಜಾಬ್‌ನ ಸಮಾಜಶಾಸ್ತ್ರದ ವಿದ್ಯಾರ್ಥಿ ದೇವಿಂದರ್ ಸಿಂಗ್ ಭಂಗು ತಮ್ಮ ಸ್ನೇಹಿತರೊಂದಿಗೆ ರೈತರ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಶಂಭು ಗಡಿಗೆ ಹೋದರು. ಅವರು ತಲುಪುವಾಗ ಸುಮಾರು 2 ಗಂಟೆಗೆ ಆಗಿತ್ತು. ರ್ಯಾಪಿಡ್ ಆಕ್ಷನ್ ಫೋರ್ಸ್ (ಆರ್‌ಎಎಫ್) ಮತ್ತು ಪೊಲೀಸರು ಹರಿಯಾಣದ ಗಡಿಯಲ್ಲಿ ಆಗಾಗಲೇ ಕಾರ್ಯಾಚರಣೆ ನಡೆಸುತ್ತಿದ್ದರು.
ದೇವಿಂದರ್ ಅವರ ಸ್ನೇಹಿತ ತರಣ್‌ವೀರ್ ಸಿಂಗ್, “ನಾವು ಶಾಂತಿಯುತವಾಗಿ ಗುಂಪಾಗಿ ನಿಂತಿದ್ದಾಗ ದೇವಿಂದರ್ ಎಡಗಣ್ಣಿಗೆ ರಬ್ಬರ್ ಗುಂಡೊಂದು ಬಂದು ಬಡಿಯಿತು. ತಕ್ಷಣ ಅವನು ಬಿದ್ದ. ನಾವು ಅವನನ್ನು ಎತ್ತಲು ಪ್ರಯತ್ನಿಸುವಾಗ, ಪೊಲೀಸರು ನಮ್ಮ ಮೇಲೆ ಮೂರ್ನಾಲ್ಕು ಅಶ್ರುವಾಯು ಶೆಲ್‌ಗಳನ್ನು ಹಾರಿಸಿದರು,” ಎಂದು ಹೇಳುತ್ತಾರೆ. ಅವರು ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ಬಂದ ಒಂದು ಗಂಟೆಯೊಳಗೆ, ಅಂದರೆ ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಎಲ್ಲವೂ ನಡೆದುಹೋಯ್ತು.
2024 ರ ಫೆಬ್ರವರಿ 13 ರಂದು ಕಾನೂನಾತ್ಮಕವಾಗಿ ಎಂಎಸ್‌ಪಿ (ಕನಿಷ್ಠ ಬೆಂಬಲ ಬೆಲೆ) ಜಾರಿ ಮಾಡುವ ಬೇಡಿಕೆ ಇಟ್ಟು, ತಮ್ಮ ಇತರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ರೈತರು ದೆಹಲಿಗೆ ಕಡೆಗೆ ಶಾಂತಿಯುತ ಮೆರವಣಿಗೆಯನ್ನು ಆರಂಭಿಸಿದರು. ಅವರನ್ನು ಪಂಜಾಬ್ ಮತ್ತು ಹರಿಯಾಣ ನಡುವೆ ಇರುವ ಶಂಭು ಗಡಿಯಲ್ಲಿ ಪೊಲೀಸರು ಮತ್ತು ಆರ್‌ಎಎಫ್ ಸಿಬ್ಬಂದಿ ತಡೆದರು. ಮೆರವಣಿಗೆ ಮುಂದುವರಿಸದಂತೆ ಬ್ಯಾರಿಕೇಡ್‌ಗಳನ್ನು ಹಾಕಿದರು. ರೈತರು ಈ ತಡೆಯನ್ನು ಹತ್ತಿಕ್ಕಿ ಮೆರವಣಿಗೆ ಮುಂದುವರಿಸಲು ಯತ್ನಿಸಿದಾಗ, ಅವರ ಮೇಲೆ ಅಶ್ರುವಾಯು ಶೆಲ್‌ಗಳು ಮತ್ತು ರಬ್ಬರ್ ಪೆಲೆಟ್‌ಗಳಿಂದ ದಾಳಿ ಮಾಡಲಾಯಿತು (ಇದನ್ನೂ ಓದಿ: 'ನಾನು ಶಂಭು ಗಡಿಯಲ್ಲಿ ಬಂಧಿಯಾಗಿದ್ದೇನೆ' ).
ಅಶ್ರುವಾಯು ಶೆಲ್‌ಗಳಿಂದ ಹೊರ ಬರುತ್ತಿದ್ದ ಕಮಟು ಹೊಗೆಯನ್ನು ತಡೆದುಕೊಂಡು ದೇವಿಂದರ್‌ನ ಸ್ನೇಹಿತರು ತೀವ್ರವಾಗಿ ರಕ್ತಸ್ರಾವವಾಗುತ್ತಾ ಬಿದ್ದಿದ್ದ ಅವರನ್ನು ಎತ್ತಿಕೊಂಡರು. 22 ವರ್ಷ ಪ್ರಾಯದ ಯುವಕ ದೇವೀಂದರ್‌ನನ್ನು 20 ಕಿಲೋಮೀಟರ್ ದೂರದಲ್ಲಿರುವ ಬಾಣೂರಿನ ಸರ್ಕಾರಿ ಆಸ್ಪತ್ರೆಗೆ ಆಂಬ್ಯುಲೆನ್ಸ್‌ನಲ್ಲಿ ಕರೆದುಕೊಂಡು ಹೋದರು. ಅಲ್ಲಿಂದ ವೈದ್ಯರು ಅವರನ್ನು ಚಂಡೀಗಢದ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕಳುಹಿಸಿದರು. ಅಲ್ಲಿ ಫೆಬ್ರವರಿ 15 ರಂದು ಅವರ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಲಾಯಿತು. ವೈದ್ಯರು ಅವರ ಎಡಗಣ್ಣಿನ ದೃಷ್ಟಿ ಮತ್ತೆ ಬರುವ ಸಾಧ್ಯತೆ ಕಡಿಮೆ ಇದೆ ಎಂದು ಹೇಳುತ್ತಾರೆ.
ದೇವಿಂದರ್ ತಂದೆ ಮಂಜಿತ್ ಸಿಂಗ್ ಓರ್ವ ರೈತ. ತಮ್ಮ ಮಗ ವಿದೇಶಕ್ಕೆ ಹೋಗದೆ, ಇಲ್ಲೇ ಇದ್ದು ಪೊಲೀಸ್ ಆಗಲು ತಯಾರಿ ನಡೆಸುತ್ತಿದ್ದ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಎಡ: ದವೀಂದರ್ ಸಿಂಗ್ ಭಂಗು ತನ್ನ ಸ್ನೇಹಿತರೊಂದಿಗೆ ಶಂಭು ಗಡಿಯಲ್ಲಿ ನಡೆಯುತ್ತಿದ್ದ ರೈತರ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಹೋಗಿದ್ದರು. ಅವರು ಬಂದು ಒಂದು ಗಂಟೆಯಾಗುವ ಮೊದಲೇ, ಪೊಲೀಸ್ ಪಡೆ ಹಾರಿಸಿದ ಪೆಲ್ಲೆಟ್ ಅವರ ಎಡಗಣ್ಣಿಗೆ ಬಡಿದು ಆಸ್ಪತ್ರೆಗೆ ಸೇರಿಸಬೇಕಾಯಿತು. ಬಲ: ದೇವಿಂದರ್ ವಿದೇಶಕ್ಕೆ ಹೋಗದೇ, ಇಲ್ಲಿಯೇ ಇದ್ದು ಪೊಲೀಸ್ ಪಡೆ ಸೇರಲು ತಯಾರಿ ನಡೆಸಿದ್ದರು ಎಂದು ಅವರ ತಂದೆ ಮಂಜಿತ್ ಸಿಂಗ್ ಹೇಳುತ್ತಾರೆ
ಎಡಭಾಗ: ಶಂಭುವಿನಲ್ಲಿ ಟ್ರ್ಯಾಕ್ಟರ್‌ನಲ್ಲಿ ಮಾಡಲಾಗಿರುವ ಮೇಕ್-ಶಿಫ್ಟ್ ವೇದಿಕೆಯ ಕಡೆಗೆ ನಡೆಯುತ್ತಿರುವ ರೈತರು. ಬಲ: ಪ್ರತಿಭಟನಾನಿರತ ರೈತರು ಹಾಕಿರುವ ಭಿತ್ತಿಪತ್ರ - 'ನಾವು ರೈತರು, ಭಯೋತ್ಪಾದಕರಲ್ಲ'
ಈ ಕುಟುಂಬ ಪಟಿಯಾಲಾ ಜಿಲ್ಲೆಯ ಶೇಖಪುರ್ ಗ್ರಾಮದಲ್ಲಿ ಎಂಟು ಎಕರೆ ಜಮೀನನ್ನು ಹೊಂದಿದೆ. ಇವರು 2020-21ರಲ್ಲಿ ದೆಹಲಿಯ ಗಡಿಯಲ್ಲಿ ನಡೆದ ಮೂರು ಕೃಷಿ ಕಾನೂನುಗಳ ವಿರುದ್ಧದ ರೈತರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಹೋರಾಟದ ಕುರಿತು ಪರಿಯ ವರದಿಗಳನ್ನು ಓದಿ: ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ: ಸಂಪೂರ್ಣ ವರದಿ .
ಪಂಜಾಬ್‌ನ ವ್ಯಾಪ್ತಿಯಲ್ಲಿ ಹರ್ಯಾಣ ಪೊಲೀಸರಿಗೆ ಹೀಗೆ ಗುಂಡುಗಳು ಮತ್ತು ಅಶ್ರುವಾಯು ಶೆಲ್‌ಗಳನ್ನು ಹಾರಿಸಲು ಹೇಗೆ ಸಾಧ್ಯ ಎಂದು ಪ್ರತಿಭಟನಾ ಸ್ಥಳದಲ್ಲಿರುವ ರೈತರು ಕೇಳುತ್ತಿದ್ದಾರೆ. "ನಮ್ಮ ರಾಜ್ಯದಲ್ಲಿ ನಾವು ಸುರಕ್ಷಿತವಾಗಿಲ್ಲದಿದ್ದರೆ, ನಾವು ಎಲ್ಲಿದ್ದೇವೆ?" ಅವರು ಕೇಳುತ್ತಾರೆ. ಪೊಲೀಸರು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಗುರಿಯಾಗಿಸಿಕೊಂಡಿದ್ದಾರೆ, "ಪಂಜಾಬ್ ಸರ್ಕಾರ ಏನಾದರೂ ಮಾಡಬೇಕು" ಎಂದು ಅವರು ಹೇಳುತ್ತಾರೆ.
ಈ ವಿಚಾರವನ್ನು ಅವರು ಪಂಜಾಬ್ ಪೋಲೀಸ್ ಮತ್ತು ಡೆಪ್ಯೂಟಿ ಕಮಿಷನರ್ ಜೊತೆಗೆ ಪ್ರಸ್ತಾಪಿಸಿರುವುದಾಗಿ ರೈತ ಮುಖಂಡ ಗುರಮ್ನೀತ್ ಸಿಂಗ್ ಪರಿಗೆ ತಿಳಿಸಿದ್ದಾರೆ. ಅಂಬಾಲಾದಲ್ಲಿ ಪೊಲೀಸರೊಂದಿಗೆ ಇವರು ಮಾತನಾಡಿರುವುದಾಗಿ ರೈತರಿಗೆ ತಿಳಿಸಿದರು. ಆದರೂ ಅಶ್ರುವಾಯು ಶೆಲ್ ದಾಳಿ ಇನ್ನೂ ನಿಂತಿಲ್ಲ.
ಜಲಫಿರಂಗಿ, ಅಶ್ರುವಾಯು ಶೆಲ್‌ಗಳು ಮತ್ತು ಪೆಲೆಟ್‌ಗಳ ದಾಳಿಗೆ ಪ್ರತಿಭಟನಾ ನಿರತ 100 ಕ್ಕೂ ಹೆಚ್ಚು ರೈತರು ಗಾಯಗೊಂಡಿದ್ದಾರೆ. ಮೂವರು ದೃಷ್ಟಿ ಕಳೆದುಕೊಂಡಿದ್ದಾರೆ. ರೈತರ ಮೇಲೆ ಹರ್ಯಾಣ ಪೊಲೀಸರು ನಡೆಸಿರುವ ಈ ‘ಪ್ರಚೋದಿತ’ದಾಳಿಯನ್ನು ಆರೋಗ್ಯ ಸಚಿವರು ಖಂಡಿಸಿದ್ದಾರೆ.
ಫೆಬ್ರವರಿ 13 ರಂದು ನಡೆದ ಲಾಠಿ ಚಾರ್ಜ್‌ನಲ್ಲಿ ತರ್ನ್ ತರನ್ ಜಿಲ್ಲೆಯ ಧರಿವಾಲ್ ಗ್ರಾಮದ ರೈತ ಜರ್ನೈಲ್ ಸಿಂಗ್ ಅವರ ತಲೆಗೆ ಪೆಟ್ಟಾಯಿತು. 44 ವರ್ಷ ಪ್ರಾಯದ ಇವರ ತಲೆಗೆ ಐದು ಹೊಲಿಗೆಗಳನ್ನು ಹಾಕಲಾಗಿದೆ, ಆದರೆ ಅವರು ಮನೆಗೆ ಹೋಗುವುದಿಲ್ಲ ಎಂದು ತೀರ್ಮಾನಿಸಿದ್ದಾರೆ. "ಎಲ್ಲರೂ ಇಲ್ಲಿ ಪ್ರತಿಭಟನೆ ಮಾಡ್ತಾ ಇದ್ದಾರೆ, ನಾನು ಊರಿಗೆ ಏಕೆ ಹೋಗ್ತೇನೆ," ಎಂದು ಅವರು ಹೇಳುತ್ತಾರೆ.
ಪ್ರತಿಭಟನೆಯ ಸ್ಥಳದಲ್ಲಿ ವೈದ್ಯಕೀಯ ಶಿಬಿರವನ್ನು ನಡೆಸುತ್ತಿರುವ ಡಾ. ಮಂದೀಪ್ ಸಿಂಗ್ ಅವರು ಹೇಳುವಂತೆ ಪ್ರತಿಭಟನೆ ಆರಂಭವಾದಾಗಿನಿಂದ ಅವರು ಗಾಯಗೊಂಡಿರುವ ಮತ್ತು ಕಾಯಿಲೆಗಳಿಂದ ಬಳಲುತ್ತಿರುವ ಹೆಚ್ಚುಕಮ್ಮಿ 400 ಜನರಿಗೆ ಚಿಕಿತ್ಸೆ ನೀಡಿದ್ದಾರೆ.
ಎಡ: ರೈತರು ತಮ್ಮ ಟ್ರಾಲಿ ಗುಡಿಸಲು ಸಮೇತ ಪ್ರತಿಭಟನೆಗೆ ಬಂದಿದ್ದಾರೆ. ಬಲ: ಲಾಠಿ ಚಾರ್ಜ್‌ನಲ್ಲಿ ತಲೆಗೆ ಪೆಟ್ಟುಬಿದ್ದಿರುವ ಜರ್ನೈಲ್ ಸಿಂಗ್ ಅವರ ತಲೆಗೆ ಐದು ಹೊಲಿಗೆಗಳನ್ನು ಹಾಕುತ್ತಿರುವ ಡಾ.ಮಂದೀಪ್ ಸಿಂಗ್
ಎಡ: ಹಲವು ಪತ್ರಕರ್ತರ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿದ ಕಾರಣ ರೈತ ಸಂಘಗಳು ಅವರಿಗೆ ಸಹಿ ಮಾಡಿರುವ ಐಡಿಗಳನ್ನು ನೀಡುತ್ತಿದ್ದಾರೆ. ರೈತ ನಾಯಕ ರಂಜಿತ್ ಸಿಂಗ್ ರಾಜು (ಮಧ್ಯ) ಪತ್ರಕರ್ತರ ವಿವರಗಳನ್ನು ಬರೆದು, ಅವರಿಗೆ ಯಾವುದೇ ಪರಿಸ್ಥಿತಿಯಲ್ಲೂ ಸಹಾಯ ಮಾಡಲು ಬರುವ ಸ್ವಯಂಸೇವಕರ ಬಗ್ಗೆ ತಿಳಿಸುತ್ತಾರೆ. ಬಲ: ನಿಯೋಜನೆಗೊಂಡಿರುವ ಸ್ವಯಂಸೇವಕರು ರೈತ ಸಂಘಗಳಿಗೆ ಕಾವಲುಗಾರರಾಗಿ ಪೆಹರೆ ಕಾಯುತ್ತಾ ದುಷ್ಕರ್ಮಿಗಳ ಮೇಲೆ ಕಣ್ಣಿಟ್ಟಿದ್ದಾರೆ
ಪಂಜಾಬ್‌ನ ಆರೋಗ್ಯ ಸಚಿವ ಡಾ. ಬಲಬೀರ್ ಸಿಂಗ್ ಸ್ವತಃ ಒಬ್ಬ ಕಣ್ಣಿನ ವೈದ್ಯ. ಇವರು ಪ್ರತಿಭಟನೆಯ ಸಂದರ್ಭದಲ್ಲಿ ಗಾಯಗೊಂಡಿರುವ ಜನರನ್ನು ಭೇಟಿ ಮಾಡಿದ್ದಾರೆ. ಫೆಬ್ರವರಿ 14 ರ ಪ್ರತಿಭಟನೆಯಲ್ಲಿ ಗಾಯಗೊಂಡಿರುವ ರೈತರ ಎಲ್ಲಾ ಚಿಕಿತ್ಸಾ ವೆಚ್ಚವನ್ನು ಪಂಜಾಬ್ ಸರ್ಕಾರ ಭರಿಸಲಿದೆ ಎಂದು ಅವರು ಘೋಷಿಸಿದ್ದಾರೆ.
ಪ್ರತಿಭಟನಾ ಸ್ಥಳದಲ್ಲಿ ಮಾಧ್ಯಮದ ಹಲವರ ಮೇಲೂ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಸುದ್ದಿ ಮಾಧ್ಯಮಗಳಿಗೆ ಸಹಾಯ ಮಾಡಲು ಮತ್ತು ಅಂತಹ ದುಷ್ಕರ್ಮಿಗಳಿಂದ ರಕ್ಷಣೆ ನೀಡಲು ರೈತ ಸಂಘಗಳು ಸ್ವಯಂಸೇವಕರನ್ನು ಪೆಹರೆದಾರ್ ಅಥವಾ ಕಾವಲುಗಾರರನ್ನಾಗಿ ನೇಮಿಸಿಕೊಂಡಿವೆ.
ಪ್ರತಿಭಟನೆಯ ವರದಿ ಮಾಡಲು ಬರುವ ಪತ್ರಕರ್ತರಿಗೆ ಸಂಘಗಳು ಅಧಿಕೃತ ಮಾಧ್ಯಮ ಕಾರ್ಡ್‌ಗಳನ್ನು ಕೂಡ ನೀಡುತ್ತಿವೆ. ಇದನ್ನು ಪತ್ರಕರ್ತರ ಸುರಕ್ಷತೆಗಾಗಿ ನೀಡಲಾಗುತ್ತಿದೆ ಎಂದು ರೈತ ಮುಖಂಡ ರಂಜಿತ್ ಸಿಂಗ್ ರಾಜು ಹೇಳುತ್ತಾರೆ. ಕಾರ್ಡ್‌ನಲ್ಲಿ ಪತ್ರಕರ್ತರ ವಿವರಗಳನ್ನು ನೀಡಲಾಗಿದ್ದು, ರಿಜಿಸ್ಟರ್‌ನಲ್ಲಿ ಅವರ ವಿವರಗಳನ್ನು ದಾಖಲಿಸುತ್ತಿರುವ ರೈತ ನಾಯಕರ ಸಹಿಯೂ ಇದೆ.
*****
ದೇವಿಂದರ್ ಅವರಂತೆ ಶಂಭು ಗಡಿಯಲ್ಲಿ ನಡೆಯುತ್ತಿರುವ ಈ ಪ್ರತಿಭಟನೆಯಲ್ಲಿರುವ ಅನೇಕರು 2020-2021 ರ ಪ್ರತಿಭಟನೆಯಲ್ಲೂ ಭಾಗವಹಿಸಿದ್ದರು.
ಕಾರ್ ಸೇವಾ ತಂಡದ ಸದಸ್ಯ ಬಾಬಾ ಲಾಭ್ ಸಿಂಗ್ ಅವರು ದೆಹಲಿ ಗಡಿಯಲ್ಲಿ ನಡೆದ ಪ್ರತಿಭಟನೆಯ ಸಮಯದಲ್ಲಿ ತಮ್ಮ ಸೋದರಸಂಬಂಧಿಯೊಬ್ಬರನ್ನು ಕಳೆದುಕೊಂಡಿದ್ದರು. “ನ್ಯುಮೋನಿಯಾದಿಂದ ಬಳಲುತ್ತಿದ್ದ ನನ್ನ ಸೋದರಸಂಬಂಧಿ ಅಜೈಬ್ ಸಿಂಗ್ ಪ್ರತಿಭಟನಾ ಸ್ಥಳದಲ್ಲಿಯೇ ನಿಧನ ಹೊಂದಿದರು. ಅವರ ಪತ್ನಿ ಈ ಹಿಂದೆಯೇ ತೀರಿಕೊಂಡಿದ್ದರು. ಅವರ ಇಬ್ಬರು ಮಕ್ಕಳು ಈಗ ಅನಾಥರಾಗಿದ್ದಾರೆ,” ಎಂದು ಫೆಬ್ರವರಿ 18ರಂದು ಶಂಭು ಗಡಿಯಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ 62 ವರ್ಷ ವಯಸ್ಸಿನ ಬಾಬಾ ಲಾಭ್ ಸಿಂಗ್ ಹೇಳುತ್ತಾರೆ.
"ಚುನಾವಣೆಗಳ ಸಮಯದಲ್ಲಿ, ಈ ಜನ ನಮ್ಮ ಬಳಿಗೆ ಕೈ ಜೋಡಿಸಿಕೊಂಡು ಬರುತ್ತಾರೆ, ಆದರೆ ನಾವು ನಮ್ಮ ಬೇಡಿಕೆಗಳ ಜೊತೆಗೆ ಅವರ ಬಳಿಗೆ ಹೋದಾಗ ಇವರಿಗೆ ಕಿವಿಯೇ ಕೇಳುವುದಿಲ್ಲ," ಎಂದು ಅವರು ಭಾಷಣದಲ್ಲಿ ಹೇಳುತ್ತಾರೆ. ಸರ್ಕಾರಗಳು ಬರುತ್ತವೆ ಹೋಗುತ್ತವೆ, ಜನರು ಯಾವಾಗಲೂ ತಮಗಾಗಿ ಹೋರಾಡಬೇಕಿದೆ ಎಂದು ಅವರು ಹೇಳುತ್ತಾರೆ.
ಎಡ: 2020-21ರ ಹೋರಾಟದಲ್ಲಿ ತಮ್ಮ ಸೋದರಸಂಬಂಧಿಯನ್ನು ಕಳೆದುಕೊಂಡಿರುವ ಬಾಬಾ ಲಾಭ್ ಸಿಂಗ್ ಶಂಬುವಿನಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ. ಬಲ: ಎರಡು ದಿನಗಳ ಕಾಲ ಪ್ರಯಾಣ ಮಾಡಿ ಹರ್ಭಜನ್ ಕೌರ್ (ಬಲ) ಶಂಭು ತಲುಪಿದ್ದಾರೆ. 'ನನ್ನ ಮಗನಿಗೆ ನಾನು ಇಲ್ಲಿಗೆ ಬರುವುದು ಇಷ್ಟವಿರಲಿಲ್ಲ ಆದರೆ ನಾನು ಪಟ್ಟುಹಿಡಿದು ಬಂದಿದ್ದೇನೆ,' ಎಂದು ಅವರು ಹೇಳುತ್ತಾರೆ
ಎಡ: ಪಂಜಾಬ್‌ನ ವ್ಯಾಪ್ತಿಯಲ್ಲಿ ಹರ್ಯಾಣ ಪೊಲೀಸರು ಬಂದು ಹೀಗೆ ಪೆಲೆಟ್‌ಗಳು ಮತ್ತು ಅಶ್ರುವಾಯು ಶೆಲ್ ದಾಳಿ ನಡೆಸಲು ಹೇಗೆ ಸಾಧ್ಯ ಎಂದು ಪ್ರತಿಭಟನಾ ನಿರತ ರೈತರು ಕೇಳುತ್ತಿದ್ದಾರೆ. 'ನಮ್ಮ ರಾಜ್ಯದಲ್ಲೇ ನಮಗೆ ರಕ್ಷಣೆಯಿಲ್ಲವೆಂದರೆ, ನಾವು ಎಲ್ಲಿಗೆ ಹೋಗಬೇಕು?' ಅವರು ಪ್ರಶ್ನಿಸುತ್ತಿದ್ದಾರೆ. ಪೊಲೀಸರು ಶಾಂತಿಯುತವಾಗಿ ಪ್ರತಿಭಟನೆ ನಡೆಸುವವರನ್ನು ಗುರಿಯಾಗಿಸಿದ್ದಾರೆ ಎಂಬುದು ಅವರ ಅಭಿಪ್ರಾಯ. ಬಲ: ಪ್ರತಿಭಟನಾಕಾರರಂತೆ, ಶಂಭು ಗಡಿಯಲ್ಲಿರುವ ವಾಹನಗಳು ಕೂಡ 2020-21 ಪ್ರತಿಭಟನೆಯ ಭಾಗವಾಗಿದ್ದವು. ಟ್ರಾಕ್ಟರ್ ಒಂದರಲ್ಲಿ ಹೀಗೆ ಬರೆಯಲಾಗಿದೆ: 'ಹಾರ್ ಪಾವಾಂಗೆ, ಹರ್ ಪುವಾವಾಂಗೆ...ಸುನ್ ದಿಲ್ಲಿಯೇ, ಪರ್ ಹಾರ್ ಕೆ ನಹೀ ಜವಾಂಗೆ' [ನಿನಗೆ ಗೌರವ ನೀಡುತ್ತೇವೆ,, ಮುಂದೆಯೂ ಗೌರವಿಸುತ್ತೇವೆ…. ಕೇಳು ದೆಹಲಿ, ನಾವು ಸೋತು/ಅಗೌರವದಿಂದ ಹಿಂತಿರುಗುವುದಿಲ್ಲ]
ಗುರುದಾಸ್‌ಪುರದ ದುಗ್ರಿಯಿಂದ ಬಂದಿರುವ ರೈತ ಮಹಿಳೆಯರ ಗುಂಪಿನಲ್ಲಿ ಹರ್ಭಜನ್ ಕೌರ್ ಕೂಡ ಇದ್ದಾರೆ. ಅವರು ಶಂಭು ಗಡಿಯನ್ನು ತಲುಪಲು ಎರಡು ದಿನ ತೆಗೆದುಕೊಂಡರು. "ನನ್ನ ಮಗನಿಗೆ ನನ್ನನ್ನು ಇಲ್ಲಿಗೆ ಕರೆತರಲು ಇಷ್ಟವಿರಲಿಲ್ಲ," ಎಂದು 78 ವರ್ಷ ವಯಸ್ಸಿನ ಇವರು ಹೇಳುತ್ತಾರೆ, "ನಾನು ಊರಿನಲ್ಲಿ ಒಬ್ಬಂಟಿಯಾಗಿ ಏನು ಮಾಡಲಿ ಎಂದು ಕೇಳಿದೆ. ಏನಾದರೂ ಆದರೆ ಎಲ್ಲರಿಗಿಂತ ಮೊದಲು ನಾನು ಸಾಯುತ್ತೇನೆ,” ಎಂದು ಹರ್ಭಜನ್ ಕೌರ್ ಹೇಳುತ್ತಾರೆ.
2020-21 ರ ಪ್ರತಿಭಟನೆಯ ಸಂದರ್ಭದಲ್ಲಿ ಅವರು ತಮ್ಮ ಊರಿನ ಇತರ ಮಹಿಳೆಯರೊಂದಿಗೆ ದೆಹಲಿಯ ಗಡಿಗೆ ಬಂದಿದ್ದರು.
ಜನರಷ್ಟೇ ಅಲ್ಲ, ಹಿಂದಿನ ಪ್ರತಿಭಟನೆಯಲ್ಲಿ ಇದ್ದ ವಾಹನಗಳೂ ಈಗ ಇಲ್ಲಿವೆ. ಶಂಭು ಗಡಿಯಲ್ಲಿರುವ ಟ್ರಾಕ್ಟರೊಂದರ ಮೇಲೆ ಮೂರು ವರ್ಷಗಳ ಹಿಂದೆ ಬರೆದ: “ಹಾರ್ ಪಾವಾಂಗೆ, ಹರ್ ಪುವಾವಾಂಗೆ...ಸುನ್ ದಿಲ್ಲಿಯೇ, ಪರ್ ಹರ್ ಕೆ ನಹಿ ಜವಾಂಗೆ [ನಿನಗೆ ಗೌರವ ನೀಡುತ್ತೇವೆ,, ಮುಂದೆಯೂ ಗೌರವಿಸುತ್ತೇವೆ…. ಕೇಳು ದೆಹಲಿ, ಆದರೆ ನಾವು ಸೋತು/ಅಗೌರವದಿಂದ ಹಿಂತಿರುಗುವುದಿಲ್ಲ]" ಎಂಬ ವಾಕ್ಯಗಳು ಈಗಲೂ ಇವೆ.
ಒಂದು ಕಾರಿನ ಮೇಲೆ ಹೀಗೆ ಬರೆಯಲಾಗಿದೆ: “ ಜಡೋನ್ ಪಟಾ ಹೋವೇ
ಸೀನೇಯನ್ ಚ್ ಚೆಕ್ ಹೋಂಗೆ, ಓಡೋನ್ ಜಂಗ್ ಜಾನ್ ವಾಲೆ ಬಂದೇ ಆಮ್ ನಹಿಯೋನ್ ಹುಂಡೆ [ಎದೆಯ ಮೇಲೆ ಗುಂಡು
ಬೀಳಲಿದೆ ಎಂಬುದು ತಿಳಿದರೂ ಯುದ್ಧಕ್ಕೆ ಹೋಗುವ ಪುರುಷರು ಸಾಮಾನ್ಯರಲ್ಲ]."
ಕೇಂದ್ರ ಸಚಿವರು ಹೊಸ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಪ್ರಸ್ತಾವನೆಯನ್ನು ಮಂಡಿಸಿದ ನಂತರ ರೈತ ಮುಖಂಡರು ಫೆಬ್ರವರಿ 18, ಭಾನುವಾರ ಸಂಜೆ ದಿಲ್ಲಿ ಚಲೋವನ್ನು ತಾತ್ಕಾಲಿಕವಾಗಿ ನಿಲ್ಲಿಸಿದರು. ಪ್ರಸ್ತಾವನೆಯನ್ನು ಪರಿಶೀಲಿಸಿರುವ ರೈತರು ಅದನ್ನು ತಿರಸ್ಕರಿಸಿದ್ದು, ಫೆ.21ರಂದು ಪಾದಯಾತ್ರೆಯನ್ನು ಮುಂದುವರಿಸಲಿದ್ದಾರೆ.
ಕಾಂಕ್ರೀಟ್ ಬ್ಯಾರಿಕೇಡ್‌ಗಳ ಮೇಲೆ ಹರ್ಯಾಣದ ಕಡೆಗೆ ಮುಖಮಾಡಿ ಕುಳಿತಿರುವ ಪ್ರತಿಭಟನಾಕಾರರು
ಬ್ಯಾರಿಕೇಡ್‌ಗಳಿಂದ 100 ಮೀಟರ್ ದೂರದಲ್ಲಿ ಗುರ್ಬಾನಿ (ಸಿಖ್ ಶ್ಲೋಕಗಳು) ಪಠಿಸುತ್ತಿರುವ ಪ್ರತಿಭಟನಾಕಾರ ರೈತ
ಬ್ಯಾರಿಕೇಡ್‌ಗಳ ಮುಂದೆ ಸತ್ನಾಮ್ ವಾಹೆಗುರು ಪಠಿಸುತ್ತಿರುವ ಪ್ರತಿಭಟನಕಾರರು
ತನ್ನ ಸಂಘದ ಧ್ವಜದೊಂದಿಗೆ ಕುಳಿತಿರುವ ಹಿರಿಯ ರೈತ
ಧ್ವಜದ ಕೋಲನ್ನು ನೆಲಕ್ಕೆ ಊರಿ ಭಾಷಣಕಾರರ ಮಾತುಗಳನ್ನು ಆಲಿಸುತ್ತಿರುವ ಹಿರಿಯ ರೈತರು
ರಸ್ತೆಯ ಇನ್ನೊಂದು ಬದಿಯಲ್ಲಿರುವ ಘಗ್ಗರ್ ನದಿಯ ಎರಡೂ ಬದಿಗಳಲ್ಲಿ ಮುಖಾಮುಖಿಯಾಗಿ ಕುಳಿತಿರುವ ಪ್ರತಿಭಟನಾಕಾರರು ಮತ್ತು ರಕ್ಷಣಾ ಪಡೆ
ಶಂಭು ಗಡಿಯಲ್ಲಿ ಹರ್ಯಾಣ ಪೊಲೀಸರು ಮತ್ತು ಆರ್‌ಎಎಫ್‌ನ್ನು ಎದುರಿಸುತ್ತಿರುವ ರೈತರು
ಬ್ಯಾರಿಕೇಡ್‌ಗಳ ಮುಂದೆ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಕಲ್ಲುಮುಳ್ಳು
ಅನುವಾದಕರು: ಚರಣ್ ಐವರ್ನಾಡು