ಹೊಲಗಳಲ್ಲಿ ನಡೆಯುವುದು, ಅಥವಾ ಕೆರೆಯಲ್ಲಿ ಈಜುವುದು, ಆಕಾಶದಲ್ಲಿ ಬೆಳಕು ಕಡಿಮೆಯಾಗುವ ಹೊತ್ತು ಬಣ್ಣಗಳು ಚೆಲ್ಲಾಡುವುದನ್ನು ಗಮನಿಸುವುದು, ಕಿವಿಗಳನ್ನು ನೆಲಕ್ಕೆ ಆನಿಸಿ ಅದರ ಸದ್ದು ಕೇಳುವುದು… ಮತ್ತು ಜನರು ತಮ್ಮ ಬದುಕು ಮತ್ತು ಪ್ರೇಮದ ಕುರಿತು ಮಾತನಾಡುವಾಗ ಅವರ ಮಾತಿಗೆ ಕಿವಿಯಾಗುವುದು, ಅವರ ಸಂಭ್ರಮ ಮತ್ತು ಲಾಭ-ನಷ್ಟಗಳಿಗೆ ತಲೆದೂಗುವುದು, ಹೀಗೆ ವರದಿ ಮಾಡುವಾಗ ಇದೆಲ್ಲವನ್ನೂ ಮಾಡುತ್ತಲೇ ಅವುಗಳಲ್ಲಿನ ಕೆಲವು ದೃಶ್ಯಗಳನ್ನು ಸೆರೆ ಹಿಡಿದು ತಂದು ಜನರೆದುರು ತಂದು ತೋರಿಸುವುದು ಬೇರೆಯದೇ ಅನುಭೂತಿ.
ಈ ಆರು ಸಚಿತ್ರ ಪ್ರಬಂಧಗಳು ನಿಮ್ಮನ್ನು ಭಾರತದ ಗ್ರಾಮೀಣ, ನಗರ ಮತ್ತು ಸಣ್ಣ ಪಟ್ಟಣದ ಹೃದಯವನ್ನು ತೆರೆದು ತೋರಲಿವೆ. ಪಶ್ಚಿಮ ಬಂಗಾಳದ ಒಂದು ಅಳಿವಿನಂಚಿನಲ್ಲಿರುವ ಕಲಾ ಪ್ರಕಾರ ಮತ್ತು ಕೊನೆಯಿಲ್ಲದ ಹಸಿವು, ಹಿಮಾಚಲ ಪ್ರದೇಶದ ಕ್ವೀರ್ ಸಂಭ್ರಮ ಮತ್ತು ಪ್ರತಿರೋಧ, ತಮ್ಮ ಸ್ವಂತ ಅನುಭವಗಳನ್ನು ದಾಖಲಿಸುವ ತಮಿಳುನಾಡಿನ ಒಂದು ಅಂಚಿನಲ್ಲಿರುವ ಸಮುದಾಯ ಮತ್ತು ಕರಾವಳಿ ಕರ್ನಾಟಕ ಪ್ರದೇಶದ ಪಿಲಿವೇಷದ ಕೆಲವು ತುಣುಕುಗಳನ್ನು ನೀವು ಈ ಪ್ರಬಂಧಗಳಲ್ಲಿ ಕಾಣಬಹುದು. ಈ ಪ್ರಬಂಧಗಳು ಭಾರತೀಯ ಸಮುದಾಯಗಳ ಕತೆ, ಪ್ರಾದೇಶಿಕತೆ, ಜೀವನೋಪಾಯಗಳ ಕುರಿತಾದ ಅಸಂಖ್ಯ ಕತೆಗಳನ್ನು ಹೇಳುತ್ತವೆ.
ಕೆಮೆರಾ ಎನ್ನುವುದು ಒಂದು ಶಕ್ತಿಶಾಲಿ ಸಾಧನ. ಅದೊಂದು ಸ್ವಯಂ ಪ್ರತಿಬಿಂಬದ ಮೂಲ. ಅದು ಅನ್ಯಾಯವನ್ನು ಸೆರೆ ಹಿಡಿಯುವುದರ ಜೊತೆಗೆ ಪರಿಹಾರ ಒದಗಿಸುವ ದಾರಿಯಾಗಿಯೂ ಒದಗಿಬರುತ್ತದೆ.
ಈ ಕೆಳಗಿನ ಕತೆಗಳು ನಿಮ್ಮ ಹೃದಯವನ್ನು ಸೆಳೆಯುತ್ತವೆ ಮತ್ತು ಕರುಳನ್ನು ಹಿಂಡುತ್ತವೆ.
*****
ʼನನ್ನ ವಿದ್ಯಾರ್ಥಿಗಳು ಫೋಟೊಗಳ ಮೂಲಕ ತಮ್ಮ ಕತೆ ಹೇಳುತ್ತಾರೆʼ - ಎಮ್. ಪಳನಿ ಕುಮಾರ್
ಇದೇ ಮೊದಲ ಬಾರಿಗೆ ನೈರ್ಮಲ್ಯ ಕಾರ್ಮಿಕರು, ಮೀನುಗಾರ ಮಹಿಳೆಯರು ಮತ್ತು ಇತರರ ಮಕ್ಕಳ ಕೈಯಲ್ಲಿ ನಮ್ಮ ಪರಿ ಫೋಟೊಗ್ರಾಫರ್ ಎಂ.ಪಳನಿ ಕುಮಾರ್ ಕೆಮೆರಾ ಕೊಟ್ಟಿದ್ದಾರೆ. ಈ ಮಕ್ಕಳು ತರಗತಿ ಮತ್ತು ಕಾರ್ಯಾಗಾರಗಳಲ್ಲಿ ಫೋಟೊಗ್ರಫಿ ಕುರಿತು ಪಳನಿಯವರ ಮೂಲಕ ಕಲಿಯುತ್ತಿದ್ದಾರೆ.

ʼಮಕ್ಕಳು ಅವರಿಗೆ ತಿಳಿದಿರುವ ಸಣ್ಣ ಪುಟ್ಟ ಕತೆಗಳನ್ನು ಅವರೇ ಹೇಳಬೇಕು ಎನ್ನುವುದು ನನ್ನ ಗುರಿಯಾಗಿತ್ತು. ಈ ಫೋಟೊಗ್ರಫಿ ಕಾರ್ಯಾಗಾರದಲ್ಲಿ ಮಕ್ಕಳು ತಮ್ಮ ಬದುಕಿನ ಸುತ್ತಲಿರುವ ವಸ್ತುಗಳ ಫೋಟೊಗಳನ್ನು ತೆಗೆಯಲಿದ್ದಾರೆʼ ಎನ್ನುತ್ತಾರೆ ಪಳನಿ

ಇಂದಿರಾ ಗಾಂಧಿ (ಫೋಕಸ್ಸಿನಲ್ಲಿರುವವರು) ಸೀಗಡಿ ಬಲೆಯನ್ನು ಎಳೆಯಲು ಸಿದ್ಧಗೊಳ್ಳುತ್ತಿರುವುದು

ಪಿ. ಇಂದ್ರಾಳ ತಂದೆ ಪಾಂಡಿ ತಮ್ಮ 13ನೇ ವಯಸ್ಸಿನಲ್ಲಿ ನೈರ್ಮಲ್ಯ ಕಾರ್ಮಿಕರಾಗಿ ದುಡಿಯತೊಡಗಿದರು. ಅವರ ಪೋಷಕರು ಸಹ ನೈರ್ಮಲ್ಯ ಕಾರ್ಮಿಕರಾಗಿದ್ದು ಮಗನಿಗೆ ವಿದ್ಯೆ ಕೊಡಿಸುವಷ್ಟು ಸಂಪಾದನೆ ಅವರಿಗೆ ಇದ್ದಿರಲಿಲ್ಲ. ಸರಿಯಾದ ಕೈಗವಸುಗಳು ಮತ್ತು ಬೂಟುಗಳ ಕೊರತೆಯಿಂದಾಗಿ ಇಂತಹ ಪೌರ ಕಾರ್ಮಿಕರು ಚರ್ಮರೋಗ ಮತ್ತು ಇತರ ಆರೋಗ್ಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದಾರೆ
*****
'ಮೀನು ನನ್ನನ್ನೊಬ್ಬ ಒಳ್ಳೆಯ ಫೋಟೋಗ್ರಾಫರನ್ನಾಗಿ ರೂಪಿಸಿತು' – ಎಮ್. ಪಳನಿ ಕುಮಾರ್
ಈ ಲೇಖನದಲ್ಲಿ ಪರಿ ಪೋಟೋಗ್ರಾಫರ್ ಒಬ್ಬರು ಕೆರೆಯಲ್ಲಿ ಮೀನು ಹಿಡಿಯುವ ಸಮುದಾಯದ ನಡುವೆ ತಾನು ಬೆಳೆದು ಬಂದ ಬಗ್ಗೆ ಹಾಗೂ ಆ ಮೀನುಗಾರರ ದೈನಂದಿನ ಬದುಕಿನ ಬಗ್ಗೆ ಬರೆದಿದ್ದಾರೆ.

ನಾನು ಕ್ಯಾಮೆರಾ ಕೊಂಡ ಆರಂಭದಲ್ಲಿ, ಪಿಚೈ ಅಣ್ಣ, ಮೊಕ್ಕ ಅಣ್ಣ, ಕಾರ್ತಿಕ್, ಮರುಧು, ಸೆಂಥಿಲ್ ಕಲೈ (ಫೋಟೋದಲ್ಲಿರುವವರು) ಎಂಬ ಮೀನುಗಾರರ ಛಾಯಾಚಿತ್ರಗಳನ್ನು ತೆಗೆಯಲು ಪ್ರಾರಂಭಿಸಿದೆ

ಮಧುರೈಯ ಜವಾಹರಲಾಲ್ ಪುರಂ ಬಳಿಯ ದೊಡ್ಡ ಕೆರೆಯೊಂದರಲ್ಲಿ ಹೆಚ್ಚು ಹೆಚ್ಚು ಮೀನು ಹಿಡಿಯುವ ಸಲುವಾಗಿ ದೂರದವರೆಗೂ ಸಾಗುತ್ತಿರುವ ಮೀನುಗಾರರು

ಜವಾಹರಲಾಲ್ ಪುರಂ ಬಳಿಯ ದೊಡ್ಡ ಕೆರೆಯ ನೀರಿನಿಂದ ಬಲೆಯನ್ನು ಹೊರಗೆಳೆಯುತ್ತಿರುವ ಮೀನುಗಾರರು.ಮೊಕ್ಕ (ಎಡ ತುದಿ) ಕೆರೆಯ ದಡದಲ್ಲಿ ಮುಳ್ಳು ಮತ್ತು ಕಲ್ಲುಗಳು ಇವೆ ಎನ್ನುತ್ತಾರೆ. ʼಒಂದು ವೇಳೆ ಮುಳ್ಳು ಚುಚ್ಚಿದರೆ ನಡೆಯೋದಕ್ಕೆ ಕೂಡಾ ಆಗುವುದಿಲ್ಲ. ಹೀಗಾಗಿ ಇಲ್ಲಿ ನಡೆಯುವಾಗ ಬಹಳ ಎಚ್ಚರಿಕೆವಹಿಸಬೇಕುʼ
*****
ಹಸಿವಿನ ಬಲೆಯಲ್ಲಿ ಸಬರ್ ಸಮುದಾಯ – ರಿತಾಯನ್ ಮುಖರ್ಜಿ
ಆಗಸ್ಟ್ 9ರಂದು, ವಿಶ್ವದ ಸ್ಥಳೀಯ ಜನರ ಅಂತರರಾಷ್ಟ್ರೀಯ ದಿನ, ಪಶ್ಚಿಮ ಬಂಗಾಳದ ಸಬರ್ ಆದಿವಾಸಿ ಸಮುದಾಯದ ಸ್ಥಿತಿಯ ಕುರಿತು ಒಂದು ವರದಿ. ಈ ಸಮುದಾಯವನ್ನು ಡಿನೋಟಿಫೈ ಮಾಡಿ 70 ವರ್ಷಗಳು ಕಳೆದಿವೆ. ಆದರೆ ಅವರು ಇಂದಿಗೂ ಸಮಾಜದ ಅಂಚಿನಲ್ಲಿಯೇ ಉಳಿದುಹೋಗಿದ್ದಾರೆ. ಅತ್ಯಂತ ಬಡ ಜನರ ಗುಂಪಿನಲ್ಲಿ ಅವರೂ ಸೇರಿದ್ದು, ಅವರು ತಮ್ಮ ಆಹಾರ ಮತ್ತು ಜೀವನೋಪಾಯದ ಸಲುವಾಗಿ ದಿನದಿಂದ ದಿನಕ್ಕೆ ಕುಗ್ಗುತ್ತಿರುವ ಕಾಡನ್ನೇ ಅವಲಂಬಿಸಿದ್ದಾರೆ. ವಿಶ್ವ ಆದಿವಾಸಿ ದಿನದ ಸಲುವಾಗಿ ಈ ಸಮುದಾಯದ ಕುರಿತು ಒಂದು ವರದಿ

ಕಡಿಮೆ ಗಳಿಕೆಯ ಅವಕಾಶಗಳೊಂದಿಗೆ, ಪಶ್ಚಿಮ ಮೇದಿನಿಪುರ ಮತ್ತು ಜಾರ್ಗ್ರಾಮ್ ಜಿಲ್ಲೆಗಳ ಸಬರ್ ಸಮುದಾಯದಲ್ಲಿ ಆಹಾರ ಕೊರತೆ ಸ್ಪಷ್ಟವಾಗಿ ಗೋಚರಿಸುತ್ತದೆ

ಕನಕ ಕೊಟಾಲ್ ಅವರಿಗೆ ತಮ್ಮ ಕೈ ಮುರಿದ ಸಂದರ್ಭದಲ್ಲಿ ವೈದ್ಯಕೀಯ ಸಹಾಯ ಪಡೆಯಲು ಸಾಧ್ಯವಾಗದ ಕಾರಣ ಅವರ ಕೈ ಶಾಶ್ವತವಾಗಿ ವಿರೂಪಗೊಂಡಿದೆ. ಅವರ ಊರಾದ ಸಿಂಗ್ಧುಯಿಯಲ್ಲಿ ವೈದ್ಯರು ಮತ್ತು ಆರೋಗ್ಯ ರಕ್ಷಣಾ ಸೌಲಭ್ಯದ ಕೊರತೆಯಿದೆ

ಅಪೌಷ್ಟಿಕತೆಯ ಲಕ್ಷಣಗಳನ್ನು ಪ್ರದರ್ಶಿಸುತ್ತಿರುವ ಮಗು
*****
ಅಳಿವಿನ ಭೀತಿಯಲ್ಲಿ ಮಾ ಬನ್ಬೀಬಿ ಪಾಲ ಗಾನ್ - ರಿತಾಯನ್ ಮುಖರ್ಜಿ
ಸುಂದರಬನ ಪ್ರದೇಶದ ಸ್ಥಳೀಯರು ಪ್ರದರ್ಶಿಸುವ ಅನೇಕ ಸಂಗೀತ ನಾಟಕಗಳಲ್ಲಿ ಬನ್ ಬೀಬಿ ಪಾಲಾ ಗಾನ್ ಕೂಡಾ ಒಂದು. ಆದರೆ ಈ ಪ್ರದೇಶದಲ್ಲಿನ ಕುಸಿಯುತ್ತಿರುವ ಆದಾಯ ಗಳಿಕೆ ಇಲ್ಲಿನ ಜನರನ್ನು ವಲಸೆ ಹೋಗುವಂತೆ ಮಾಡುತ್ತಿದೆ. ಮತ್ತು ಈ ವಲಸೆ ಇಂತಹ ಜಾನಪದ ರಂಗಭೂಮಿಯಲ್ಲಿ ಅಭಿನಯಿಸಬಲ್ಲ ಕಲಾವಿದರ ಕೊರತೆಗೆ ಕಾರಣವಾಗುತ್ತಿದೆ.

ಪರದೆಗಳಿಂದ ನಿರ್ಮಿತವಾಗಿರುವ ಚೌಕಿ ಪ್ರೇಕ್ಷಕರು ಮತ್ತು ನಟರಿಂದ ಗಿಜಿಗುಡುತ್ತಿದೆ, ಇಲ್ಲೇ ನಟರು ಬನ್ ಬೀಬಿ ಪಾಲಾ ಗಾನ್ ಸಂಗೀತ ನಾಟಕಕ್ಕಾಗಿ ತಯಾರಾಗುತ್ತಿದ್ದಾರೆ

ಮಾ ಬನ್ ಬೀಬಿ ಮತ್ತು ಶಿಬ್ ಠಾಕೂರ್ ಎನ್ನುವ ದೇವರುಗಳಿಗೆ ಸಮರ್ಪಿತವಾದ ಪ್ರಾರ್ಥನೆಗಳೊಂದಿಗೆ ಕಲಾವಿದರು ಪಾಲಾ ಗಾನ್ ನಾಟಕವನ್ನು ಆರಂಭಿಸುತ್ತಾರೆ

ಯುವತಿ ಬನ್ ಬೀಬಿ ಮತ್ತು ನಾರಾಯಣಿ ನಡುವಿನ ಯುದ್ಧದ ದೃಶ್ಯವನ್ನು ನಿರ್ವಹಿಸುತ್ತಿರುವ ಕಲಾವಿದರು
*****
ಧರ್ಮಶಾಲಾ: ಆತ್ಮಗೌರವದ ಮೆರವಣಿಗೆ – ಶ್ವೇತಾ ದಾಗಾ
ಹಿಮಾಚಲ ಪ್ರದೇಶದಲ್ಲಿ ಕ್ವೀರ್ ಸಮುದಾಯದ ಹಕ್ಕುಗಳನ್ನು ಪ್ರತಿಪಾದಿಸಿ ಪ್ರೈಡ್ ಮಾರ್ಚ್ ನಡೆಸಲಾಯಿತು, ಈ ಮೆರವಣಿಗೆ ರಾಜ್ಯದ ಹಳ್ಳಿಗಳು ಮತ್ತು ಸಣ್ಣ ಪಟ್ಟಣಗಳ ಅನೇಕರನ್ನು ಸೆಳೆಯಿತು

ಏಪ್ರಿಲ್ 30, 2023ರಂದು, ಹಿಮಾಲಯದ ಧೌಲಾಧರ್ ಶ್ರೇಣಿಯ ಧರ್ಮಶಾಲಾ (ಧರಮ್‌ಶಾಲಾ ಎಂದೂ ಕರೆಯಲಾಗುತ್ತದೆ) ಪಟ್ಟಣವು ತನ್ನ ಮೊದಲ ಪ್ರೈಡ್ ಮೆರವಣಿಗೆಗೆ ಸಾಕ್ಷಿಯಾಯಿತು

ಸಂಘಟಕರಲ್ಲಿ ಒಬ್ಬರಾದ ಅನಂತ್ ದಯಾಳ್ ಟ್ರಾನ್ಸ್ ಹಕ್ಕುಗಳನ್ನು ಸಂಕೇತಿಸುವ ಧ್ವಜವನ್ನು ಹಿಡಿದಿದ್ದಾರೆ

ಮನೀಶ್ ಥಾಪಾ (ಮೈಕ್ ಹಿಡಿದವರು ) ಪ್ರೈಡ್ ಮೆರವಣಿಗೆಯಲ್ಲಿ ಭಾಷಣ ಮಾಡುತ್ತಿರುವುದು
*****
ಪಿಲಿ ವೇಷ: ತಾಸೆಯ ಪೆಟ್ಟಿಗೆ ಕುಣಿತ – ನಿತೇಶ್ ಮಟ್ಟು
ಈ ಜಾನಪದ ಕುಣಿತವನ್ನು ಕರಾವಳಿ ಕರ್ನಾಟಕದ ಯುವಕರು ಮೈಚಳಿ ಬಿಟ್ಟು ಕುಣಿಯುತ್ತಾರೆ. ಸ್ಥಳೀಯರಿಂದ ಚಂದಾ ಎತ್ತಿ ಆಯೋಜಿಸುವ ಈ ಕುಣಿತ, ದಸರಾ ಮತ್ತು ಜನ್ಮಾಷ್ಟಮಿ ಉತ್ಸವಗಳ ಅವಿಭಾಜ್ಯ ಅಂಗವಾಗಿದೆ.

ಪಿಲಿ ವೇಷ (ಹುಲಿ ವೇಷ ಎಂದೂ ಕರೆಯುತ್ತಾರೆ) ದಸರಾ ಮತ್ತು ಜನ್ಮಾಷ್ಟಮಿಯಲ್ಲಿ ಕುಣಿಯುವ ಜಾನಪದ ಕುಣಿತ

(ಎಡದಿಂದ ಬಲಕ್ಕೆ) ತಮ್ಮ ಮೈತುಂಬಾ ಹುಲಿ ಪಟ್ಟೆಗಳನ್ನು ಬಿಡಿಸಿಕೊಳ್ಳುತ್ತಿರುವ ಜಯಕರ್ ಪೂಜಾರಿಯವರ ನಂತರ ತಮ್ಮ ಸರದಿಗಾಗಿ ಕಾಯುತ್ತಿರುವ ನಿಖಿಲ್, ಕೃಷ್ಣ, ಭುವನ್ ಅಮೀನ್ ಮತ್ತು ಸಾಗರ್ ಪೂಜಾರಿ

ಕಪ್ಪು ಹುಲಿಯಂತೆ ಬಣ್ಣ ಹಚ್ಚಿ ಕಸರತ್ತು ಪ್ರದರ್ಶಿಸುತ್ತಿರುವ ಪ್ರಜ್ವಲ್ ಆಚಾರ್ಯ. ಈ ಕುಣಿತದ ಸಾಂಪ್ರದಾಯಿಕ ಹೆಜ್ಜೆಗಾರಿಕೆ ಅಕ್ರೋಬಾಟಿಕ್ ಆಗಿ ಬದಲಾಗಿದ್ದು, ಅನೇಕ ಕಸರತ್ತುಗಳಿಗೆ ಒತ್ತುನೀಡಲಾಗುತ್ತಿದೆ
*****
ನಾವು ಮಾಡುತ್ತಿರುವ ಕೆಲಸಗಳು ನಿಮ್ಮಲ್ಲಿ ಆಸಕ್ತಿಯನ್ನು ಹುಟ್ಟಿಸಿದ್ದಲ್ಲಿ ಮತ್ತು ನೀವೂ ಪರಿಯೊಡನೆ ಕೈ ಜೋಡಿಸಲು ಬಯಸಿದಲ್ಲಿ, ದಯವಿಟ್ಟು mailto:contact@ruralindiaonline.org ಮೂಲಕ ನಮ್ಮನ್ನು ಸಂಪರ್ಕಿಸಿ. ಫ್ರೀಲಾನ್ಸ್ ಮತ್ತು ಸ್ವತಂತ್ರ ಬರಹಗಾರರು, ವರದಿಗಾರರು, ಛಾಯಾಗ್ರಾಹಕರು, ಚಲನಚಿತ್ರ ತಯಾರಕರು, ಅನುವಾದಕರು, ಸಂಪಾದಕರು, ಚಿತ್ರಕಾರರು ಮತ್ತು ಸಂಶೋಧಕರನ್ನು ನಮ್ಮೊಂದಿಗೆ ಕೆಲಸ ಮಾಡಲು ನಾವು ಸ್ವಾಗತಿಸುತ್ತೇವೆ.
ಪರಿ ಒಂದು ಲಾಭೋದ್ದೇಶ ರಹಿತ ಸಂಸ್ಥೆಯಾಗಿದ್ದು, ಇದು ನಮ್ಮ ಬಹುಭಾಷಾ ಆನ್ಲೈನ್ ಜರ್ನಲ್ ಮತ್ತು ಆರ್ಕೈವ್ ಕೆಲಸಗಳನ್ನು ಮೆಚ್ಚುವ ಜನರ ದೇಣಿಗೆಗಳನ್ನು ಅವಲಂಬಿಸಿ ಮುಂದುವರೆಯುತ್ತಿದೆ. ನೀವು ಪರಿಗೆ ಕೊಡುಗೆ ನೀಡಲು ಬಯಸಿದರೆ ದಯವಿಟ್ಟು DONATE ಬಟನ್ ಕ್ಲಿಕ್ ಮಾಡಿ.
ಅನುವಾದ: ಶಂಕರ. ಎನ್. ಕೆಂಚನೂರು