ಏಪ್ರಿಲ್ 30, 2023ರಂದು, ಹಿಮಾಲಯದ ಧೌಲಾಧರ್ ಶ್ರೇಣಿಯ ಧರ್ಮಶಾಲಾ (ಧರಮ್‌ಶಾಲಾ ಎಂದೂ ಕರೆಯಲಾಗುತ್ತದೆ) ಪಟ್ಟಣವು ತನ್ನ ಮೊದಲ ಪ್ರೈಡ್ ಮೆರವಣಿಗೆಗೆ ಸಾಕ್ಷಿಯಾಯಿತು.
‘ಈ ಮನೆ ನಿನಗೆ, ನನಗೆ, ಅವನಿಗೆ, ಅವಳಿಗೆ, ಇವರಿಗೆ, ಅವರಿಗೆ ಹೀಗೆ ಎಲ್ಲರಿಗೂ ಸೇರಿದ್ದು’ ಎಂಬ ಘೋಷಣೆಗಳುಳ್ಳ ಫಲಕಗಳನ್ನು ಹಿಡಿದುಕೊಂಡು ಜನರು ಮುಖ್ಯ ಮಾರುಕಟ್ಟೆಯಿಂದ ಧರ್ಮಶಾಲಾದ ಟಿಬೆಟಿಯನ್ ನೆಲೆಯಾದ ಮೆಕ್‌ಲಿಯೋಡ್‌ಗಂಜ್‌ನಲ್ಲಿರುವ ದಲೈಲಾಮಾ ದೇವಸ್ಥಾನದ ಕಡೆಗೆ ನಡೆದರು. ನಂತರ ಪಟ್ಟಣದ ಜನನಿಬಿಡ ಮಾರುಕಟ್ಟೆ ಪ್ರದೇಶವಾದ ಕೊತ್ವಾಲಿ ಬಜಾರ್ ಕಡೆಗೆ ಮೆರವಣಿಗೆ ಮುಂದುವರೆಯಿತು. ಇದು ಧರ್ಮಶಾಲಾದಲ್ಲಿ LGBTQIA+ ಸಮುದಾಯಕ್ಕೆ ಬೆಂಬಲ ವ್ಯಕ್ತಪಡಿಸಿ ನಡೆಸಲಾದ ಮೊದಲ ಸಾರ್ವಜನಿಕ ಸಭೆಯಾಗಿತ್ತು, ಮತ್ತು ಭಾಗವಹಿಸಿದವರಲ್ಲಿ ಹೆಚ್ಚಿನವರು ರಾಜ್ಯದ ಹಳ್ಳಿಗಳು ಮತ್ತು ಸಣ್ಣ ಪಟ್ಟಣಗಳಿಂದ ಬಂದವರಾಗಿದ್ದರು.
"ನಾವು ಅಜೀಬ್ ಎಂಬ ಪದವನ್ನು ಹೆಮ್ಮೆಯಿಂದ ಬಳಸುತ್ತಿದ್ದೇವೆ " ಎಂದು ಸಂಘಟಕರಲ್ಲಿ ಒಬ್ಬರಾದ ಮತ್ತು ಹಿಮಾಚಲ್ ಕ್ವೀರ್ ಫೌಂಡೇಶನ್ ಇದರ ಸಹ-ಸಂಸ್ಥಾಪಕ ಡಾನ್ ಹಸರ್ ಹೇಳುತ್ತಾರೆ. ತಮ್ಮ ಆಯ್ಕೆಯನ್ನು ವಿವರಿಸುತ್ತಾ, 30 ವರ್ಷದ ಅವರು ಹೇಳುತ್ತಾರೆ, "ನಾವು ವಿಲಕ್ಷಣತೆಯನ್ನು (queerness) ವಿವರಿಸಲು ಇಂಗ್ಲಿಷ್ ಪದಗಳನ್ನು ಬಳಸುತ್ತೇವೆ, ಆದರೆ ಹಿಂದಿ ಮತ್ತು ಪ್ರಾದೇಶಿಕ ಉಪಭಾಷೆಗಳಲ್ಲಿ ಯಾವ ಪದ ಬಳಸುವುದು? ವಿಲಕ್ಷಣತೆ ಮತ್ತು ದ್ರವ್ಯಗುಣದ (fluidity) ಬಗ್ಗೆ ಮಾತನಾಡಲು ನಾವು ಪ್ರಾದೇಶಿಕ ಉಪಭಾಷೆಗಳಲ್ಲಿ ಹಾಡುಗಳು ಮತ್ತು ಕಥೆಗಳನ್ನು ಬಳಸುತ್ತಿದ್ದೇವೆ.
ದೆಹಲಿ, ಚಂಡೀಗಢ, ಕೋಲ್ಕತಾ, ಮುಂಬೈ ಮತ್ತು ರಾಜ್ಯದ ಸಣ್ಣ ಪಟ್ಟಣಗಳಿಂದ 300 ಜನರು ಈ ಮೆರವಣಿಗೆಯ ಭಾಗವಾಗಲು ಬಂದಿದ್ದರು. ಈ ಪ್ರೈಡ್ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಶಿಮ್ಲಾದ 20 ವರ್ಷದ ವಿಶ್ವವಿದ್ಯಾಲಯದ ವಿದ್ಯಾರ್ಥಿ ಆಯುಷ್, "ಇಲ್ಲಿ [ಹಿಮಾಚಲ ಪ್ರದೇಶದಲ್ಲಿ] ಯಾರೂ ಇದರ ಬಗ್ಗೆ ಮಾತನಾಡುವುದಿಲ್ಲ" ಎಂದು ಹೇಳುತ್ತಾರೆ. ಶಾಲಾ ಸಮಯದಲ್ಲಿ ಶೌಚಾಲಯಕ್ಕೆ ಹೋಗುವುದು ಆಯುಷ್ ಪಾಲಿಗೆ ಕಷ್ಟಕರವಾಗಿತ್ತು. "ನನ್ನ ತರಗತಿಯಲ್ಲಿ ಹುಡುಗರು ನನ್ನನ್ನು ಗೇಲಿ ಮಾಡುತ್ತಿದ್ದರು ಮತ್ತು ಬೆದರಿಸುತ್ತಿದ್ದರು. ಆನ್‌ಲೈನ್ ಮೂಲಕ ಈ ಸಮುದಾಯದ ಸಂಪರ್ಕಕ್ಕೆ ಬಂದ ಮೇಲೆ ನನ್ನಲ್ಲಿ ಸುರಕ್ಷತೆಯ ಭಾವ ಮೂಡಿತು. ಇದು ನನ್ನನ್ನು ಅರ್ಥಮಾಡಿಕೊಳ್ಳುವ ಜನರೊಂದಿಗಿರಲು ನನಗೆ ಅವಕಾಶವನ್ನು ನೀಡಿತು.”
ಆಯುಷ್ ಅವರು ಸಲಹೆಗಾರರಾಗಿ ಪ್ರಾಧ್ಯಾಪಕರೊಂದಿಗೆ ಮುಕ್ತ ಸಂವಾದ ವಲಯಗಳನ್ನು ಆಯೋಜಿಸುವ ಮೂಲಕ ಈ ಚರ್ಚೆಗಳನ್ನು ಕಾಲೇಜಿನಲ್ಲಿಯೂ ಸಾಧ್ಯವಾಗಿಸಲು ಪ್ರಯತ್ನಿಸುತ್ತಿದ್ದಾರೆ. ಜನರು ಲಿಂಗ ಮತ್ತು ಲೈಂಗಿಕತೆಯ ಬಗ್ಗೆ ಇಲ್ಲಿ ಕಲಿಯುತ್ತಾರೆ ಮತ್ತು ಪ್ರಶ್ನೆಗಳನ್ನು ಹಂಚಿಕೊಳ್ಳುತ್ತಾರೆ.

ಏಪ್ರಿಲ್ 30, 2023ರಂದು ಧರ್ಮಶಾಲಾದಲ್ಲಿ ನಡೆದ ಮೊದಲ ಪ್ರೈಡ್ ಮೆರವಣಿಗೆಯಲ್ಲಿ ಭಾಗವಹಿಸಿದ ಜನರು ಎಲ್‌ಜಿಬಿಟಿಕ್ಯೂಐಎ + (LGBTQIA+) ಸಮುದಾಯವನ್ನು ಬೆಂಬಲಿಸುವ ಫಲಕವನ್ನು ಹಿಡಿದಿದ್ದಾರೆ
![Ayush is a 20-year-old student from Shimla. They say, ' No one talks about this [being queer] here [in Himachal Pradesh]'](/media/images/03-DSC_0171-SD.max-1400x1120.jpg)
ಆಯುಷ್ ಶಿಮ್ಲಾ ಮೂಲದ 20 ವರ್ಷದ ವಿದ್ಯಾರ್ಥಿ. ಅವರು ಹೇಳುತ್ತಾರೆ, 'ಇಲ್ಲಿ [ಹಿಮಾಚಲ ಪ್ರದೇಶದಲ್ಲಿ] ಯಾರೂ ಇದರ [ಕ್ವೀರ್ ಆಗಿರುವುದರ] ಬಗ್ಗೆ ಮಾತನಾಡುವುದಿಲ್ಲ'
ಶಶಾಂಕ್ ಹಿಮಾಚಲ್ ಕ್ವೀರ್ ಫೌಂಡೇಶನ್ನಿನ ಸಹ ಸಂಸ್ಥಾಪಕರಾಗಿದ್ದಾರೆ ಮತ್ತು ಕಾಂಗ್ರಾ ಜಿಲ್ಲೆಯ ಪಾಲಂಪುರ್ ತಹಸಿ ಲ್‌ನ ಒಂದು ಊರಿನವರು . "ನನಗೆ ಸದಾ ನಾನು ಅಸಮರ್ಥ ಎನ್ನುವ ಭಾವನೆ ಮೂಡುತ್ತಿತ್ತು. ಸಾಮಾಜಿಕ ಮಾಧ್ಯಮದ ಮೂಲಕ ನಾನು ಅದೇ ಸವಾಲುಗಳನ್ನು ಎದುರಿಸುತ್ತಿರುವ ಇತರರನ್ನು ಭೇಟಿಯಾದೆ. ಈ ಸಮುದಾಯದ ಅನೇಕರು ಜನರು ನಾಚಿಕೆ ಅಥವಾ ತಪ್ಪಿತಸ್ಥ ಭಾವನೆಯನ್ನು ಅನುಭವಿಸುತ್ತಾರೆ. ನಾನು ಡೇಟಿಂಗ್ ಹೋದಾಗಲೂ ನಾವೆಲ್ಲ ಹೇಗೆ ದ್ವೀಪವಾಗಿದ್ದೇವೆ ಎನ್ನುವುದರ ಕುರಿತಾಗಿಯೇ ಚರ್ಚೆ ಮಾಡುತ್ತಿದ್ದೆವು” ಎನ್ನುತ್ತಾರೆ ಶಶಾಂಕ್. ಈ ಅನುಭವಗಳು 2020ರಲ್ಲಿ ಇದಕ್ಕಾಗಿಯೇ ಮೀಸಲಾದ ಸಂಖ್ಯೆಯನ್ನು ಹೊಂದಿರುವ ಸಹಾಯವಾಣಿಯನ್ನು ಆರಂಭಿಸಿಲು ಶಶಾಂಕ್ ಅವರನ್ನು ಪ್ರೇರೇಪಿಸಿತು.
ಒಂದು ಪ್ರಮುಖ ಅಂಶವನ್ನು ಪ್ರಸ್ತಾಪಿಸಿದ ಶಶಾಂಕ್, "ಗ್ರಾಮೀಣ ಕ್ವೀರ್ ಧ್ವನಿಗಳು ಎಲ್ಲಿವೆ?" ಎಂದು ಕೇಳಿದರು. ತೃತೀಯ ಲಿಂಗಿ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯ್ದೆ, 2019ರ ಅಡಿಯಲ್ಲಿ ಕೆಲವು ನಿಬಂಧನೆಗಳನ್ನು ಹಿಮಾಚಲ ಪ್ರದೇಶದಲ್ಲಿ ಜಾರಿಗೆ ತರಲಾಗಿಲ್ಲ ಎಂದು ಅವರು ಶಿಮ್ಲಾ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಲಿದ್ದಾರೆ.
ಡಾನ್ ಹಸರ್ ಅವರು ಈ ಮೆರವಣಿಗೆಯ ಸಂಘಟಕರಲ್ಲಿ ಒಬ್ಬರು ಮತ್ತು ಹಿಮಾಚಲ್ ಕ್ವೀರ್ ಫೌಂಡೇಶನ್ (ಎಚ್‌ಕ್ಯೂಎಫ್) ನ ಸಹ-ಸಂಸ್ಥಾಪಕರು. ಹಿಮಾಚಲ ಪ್ರದೇಶದ ವಿವಿಧ ಭಾಗಗಳ 13 ಜನರು ಒಗ್ಗೂಡಿ ಸಂಘಟನಾ ಸಮಿತಿಯನ್ನು ರಚಿಸಿದೆವು ಎಂದು ಅವರು ಹೇಳುತ್ತಾರೆ. "ನಾವು ಎರಡು ವಾರಗಳಲ್ಲಿ ಎಲ್ಲವನ್ನೂ ಒಟ್ಟುಗೂಡಿಸಿದ್ದೇವೆ" ಎಂದು ಕೋಲ್ಕತಾ ಮೂಲದ ಡಾನ್ ಹೇಳುತ್ತಾರೆ. ಧರ್ಮಶಾಲಾದಲ್ಲಿನ ಟಿಬೆಟಿಯನ್ ನೆಲೆ ಮೆಕ್‌ಲಿಯೋಡ್‌ಗಂಜ್ ಸ್ಥಳೀಯ ಜಿಲ್ಲಾ ಮ್ಯಾಜಿಸ್ಟ್ರೇಟ್ ಅನುಮತಿ ಪಡೆಯುವ ಮೂಲಕ ಸಂಘಟಕರು ಮೆರವಣಿಗೆಯ ತಯಾರಿ ಪ್ರಾರಂಭಿಸಿದರು.
ನಂತರ ಎಚ್‌ಕ್ಯೂಎಫ್ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟುಗಳನ್ನು ಹಾಕಿತು, ಇದು ಉತ್ಸಾಹಭರಿತ ಪ್ರತಿಕ್ರಿಯೆಯನ್ನು ಪಡೆಯಿತು. "ಹೆಮ್ಮೆಯಲ್ಲಿ ಮುನ್ನಡೆಯಲು ಧೈರ್ಯ ಬೇಕು. ನಾವು ಇಲ್ಲಿ [ಸಣ್ಣ ಪಟ್ಟಣಗಳಲ್ಲಿ] ಈ ವಿಷಯದ ಕುರಿತು ಚರ್ಚೆ ಪ್ರಾರಂಭಿಸಲು ಬಯಸಿದ್ದೇವೆ" ಎಂದು ಸಂಘಟಕರಲ್ಲಿ ಒಬ್ಬರಾದ ಮನೀಶ್ ಥಾಪಾ ಹೇಳುತ್ತಾರೆ.
ತಾವೆಲ್ಲರೂ ಜಾತಿ, ವರ್ಗ, ಭೂರಹಿತತೆ ಮತ್ತು ರಾಜ್ಯರಹಿತತೆಗಾಗಿ ಒಗ್ಗಟ್ಟಿನಿಂದ ನಡೆದುದಾಗಿ ಡಾನ್ ಹೇಳುತ್ತಾರೆ. ಒಂದು ಭಿತ್ತಿಪತ್ರವು ಹೇಳುವಂತೆ, 'ಜಾತಿ ವಿನಾಶವಿಲ್ಲದೆ ಕ್ವೀರ್ ವಿಮೋಚನೆ ಸಾಧ್ಯವಿಲ್ಲ. ಜೈ ಭೀಮ್!'

ಕ್ವೀರ್ ಸಮುದಾಯಕ್ಕೆ ಬೆಂಬಲವನ್ನು ವ್ಯಕ್ತಪಡಿಸುವುದರ ಜೊತೆಗೆ, ಜಾತಿ, ವರ್ಗ, ಭೂರಹಿತತೆ ಮತ್ತು ರಾಜ್ಯರಹಿತತೆಗಾಗಿ ಒಗ್ಗಟ್ಟಿನಿಂದ ಮೆರವಣಿಗೆ ನಡೆಸಿದೆವು ಎಂದು ಸಂಘಟಕರು ಹೇಳುತ್ತಾರೆ

ಅನಂತ್ ದಯಾಳ್, ಸಾನ್ಯಾ ಜೈನ್, ಮನೀಶ್ ಥಾಪಾ, ಡಾನ್ ಹಸರ್ ಮತ್ತು ಶಶಾಂಕ್ (ಎಡದಿಂದ ಬಲಕ್ಕೆ) ಪ್ರೈಡ್ ಮೆರವಣಿಗೆಯನ್ನು ಆಯೋಜಿಸಲು ಸಹಾಯ ಮಾಡಿದರು
ಭಾನುವಾರದಂದು ಆಯೋಜಿಸಲಾಗಿದ್ದ ಪ್ರೈಡ್ ಮೆರವಣಿಗೆಯು 90 ನಿಮಿಷಗಳಲ್ಲಿ 1.2 ಕಿಲೋಮೀಟರ್ ದೂರವನ್ನು ಕ್ರಮಿಸಿ, ಪಟ್ಟಣದ ವಾಣಿಜ್ಯ ಪ್ರದೇಶದ ಮೂಲಕ ಚಲಿಸಿದ ಈ ಮೆರವಣಿಗೆಯು ನೃತ್ಯ ಹಾಗೂ ಭಾಷಣಗಳ ಸಲುವಾಗಿ ಅಲ್ಲಲ್ಲಿ ನಿಲ್ಲುತ್ತಿತ್ತು. ಈ ಸ್ಥಳವನ್ನೇ ಏಕೆ ಆರಿಸಿಕೊಳ್ಳಲಾಯಿತು ಎಂದು ಕೇಳಿದಾಗ "ಮಾರುಕಟ್ಟೆಯಲ್ಲಿ ಸುಮಾರು 300 ಸಣ್ಣ ಅಂಗಡಿಗಳಿವೆ. ಜನರು ನಮ್ಮನ್ನು ನೋಡಲು ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ಮಾಡುವುದು ನಮ್ಮ ಪಾಲಿಗೆ ಮುಖ್ಯವಾಗಿದೆ" ಎಂದು ಮನೀಶ್ ಥಾಪಾ ಹೇಳಿದರು.
2019ರಲ್ಲಿ ಪ್ರಾರಂಭವಾದ ತೃತೀಯ ಲಿಂಗಿಗಳ ರಾಷ್ಟ್ರೀಯ ಪೋರ್ಟಲ್ ಹಿಮಾಚಲ ಪ್ರದೇಶವು ಕೇವಲ 17 ಟ್ರಾನ್ಸ್ ಗುರುತಿನ ಚೀಟಿಗಳನ್ನು ನೀಡಿದೆ ಎಂದು ತೋರಿಸುತ್ತದೆ.
"ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯಲ್ಲಿ ಟ್ರಾನ್ಸ್ ಐಡೆಂಟಿಟಿ ಕಾರ್ಡ್ ಪಡೆದ ಮೊದಲ ವ್ಯಕ್ತಿ ನಾನು" ಎಂದು ಡಾನ್ ಹೇಳುತ್ತಾರೆ. "ಅದನ್ನು ಪಡೆಯಲು ತುಂಬಾ ಕಷ್ಟಪಡಬೇಕಾಯಿತು. ನನಗೇ ಹೀಗಾಗಿರುವಾಗ ತಮ್ಮ ಹಕ್ಕುಗಳನ್ನು ಹೇಗೆ ಪಡೆಯುವುದು ಎಂದು ತಿಳಿದಿಲ್ಲದವರ ಕತೆ ಏನಾಗಿರಬಹುದು? ಇಲ್ಲಿ ರಾಜ್ಯ ಕಲ್ಯಾಣ ಮಂಡಳಿಯಿಲ್ಲ; ಆಶ್ರಯ ಮನೆಗಳು ಮತ್ತು ಕಲ್ಯಾಣ ಯೋಜನೆಗಳು ಎಲ್ಲಿವೆ? ಸರ್ಕಾರಿ ಅಧಿಕಾರಿಗಳು ಏಕೆ ಸಂವೇದನಾಶೀಲರಾಗಿಲ್ಲ?”
ಪ್ರೈಡ್ ಮೆರವಣಿಗೆಯನ್ನು ವೀಕ್ಷಿಸುತ್ತಿದ್ದ ಅನೇಕ ಸ್ಥಳೀಯರಲ್ಲಿ ಅರಿವಿನ ಕೊರತೆಯೂ ಕಂಡುಬಂದಿದೆ. ಆಕಾಶ್ ಭಾರದ್ವಾಜ್ ಅವರು ಕೊತ್ವಾಲಿ ಬಜಾರಿನಲ್ಲಿ ಅಂಗಡಿಯೊಂದನ್ನು ಬಾಡಿಗೆಗೆ ಪಡೆದಿದ್ದಾರೆ, ಅಲ್ಲಿ ಅವರು ಎಲೆಕ್ಟ್ರಾನಿಕ್ಸ್ ಮತ್ತು ಲೇಖನ ಸಾಮಗ್ರಿಗಳನ್ನು ಮಾರಾಟ ಮಾಡುತ್ತಾರೆ. ಅಂಗಡಿಯಿಂದಲೇ ಮೆರವಣಿಗೆ ನೋಡುತ್ತಿದ್ದ ಅವರು. "ನಾನು ಇದನ್ನು ಮೊದಲ ಬಾರಿಗೆ ನೋಡುತ್ತಿದ್ದೇನೆ ಮತ್ತು ಅವರು ಏನು ಮಾಡುತ್ತಿದ್ದಾರೆನ್ನುವುದರ ಕುರಿತು ನನಗೆ ನಿಜವಾಗಿಯೂ ಖಚಿತವಿಲ್ಲ, ಆದರೆ ಅವರು ನೃತ್ಯ ಮಾಡುವುದನ್ನು ನೋಡುವುದಕ್ಕೆ ಖುಷಿಯಾಗುತ್ತದೆ. ನಾನು ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ" ಎಂದು ಅವರು ಹೇಳುತ್ತಾರೆ.


ಎಡ: ಟಿಬೆಟ್ ನ ಮೊದಲ ಟ್ರಾನ್ಸ್ ವುಮನ್ ಟೆಂನ್ಜಿನ್ ಮಾರಿಕೊ ಈ ಪ್ರೈಡ್ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಬಲ: ಮೆರವಣಿಗೆಯಲ್ಲಿ ಭಾಗವಹಿಸಿದವರೊಡನೆ ಭಗತ್ ಸಿಂಗ್ ಪ್ರತಿಮೆ
56 ವರ್ಷಗಳಿಂದ ಧರ್ಮಶಾಲಾದಲ್ಲಿ ವಾಸಿಸುತ್ತಿರುವ ನವನೀತ್ ಕೋಠಿವಾಲಾ ನೃತ್ಯವನ್ನು ನೋಡಿ ಆನಂದಿಸುತ್ತಿದ್ದರು. "ನಾನು ಇದನ್ನು ನೋಡುತ್ತಿರುವುದು ಇದೇ ಮೊದಲು, ಮತ್ತು ಅದನ್ನು ನೋಡಲು ಖುಷಿಯೆನ್ನಿಸುತ್ತದೆ" ಎಂದು ಅವರು ಹೇಳುತ್ತಾರೆ.
ಆದರೆ ಮೆರವಣಿಗೆ ಯಾವ ಕಾರಣಕ್ಕಾಗಿ ನಡೆಯುತ್ತಿದೆ ಎನ್ನುವುದು ತಿಳಿದಾಗ, ಅವರು ತಮ್ಮ ಮನಸ್ಸನ್ನು ಬದಲಾಯಿಸಿದರು. "ಇದು ಸರಿ ಎಂದು ನಾನು ಭಾವಿಸುವುದಿಲ್ಲ, ಇದಕ್ಕಾಗಿ ಅವರು ಹೋರಾಡಬಾರದು ಏಕೆಂದರೆ ಅವರು ಕೇಳುತ್ತಿರುವುದು ಸ್ವಾಭಾವಿಕವಾದುದಲ್ಲ - ಅವರು ಮಕ್ಕಳನ್ನು ಹೇಗೆ ಪಡೆಯುತ್ತಾರೆ?" ಎಂದು ಅವರು ಕೇಳುತ್ತಾರೆ.
"ಈ ಮೆರವಣಿಗೆಯಲ್ಲಿ ಮಾರಿಕೊ [ಟಿಬೆಟಿನ ಮೊದಲ ಟ್ರಾನ್ಸ್ ವುಮನ್] ವರು ಭಾಗವಹಿಸಿದ್ದು ನಮಗೆ ತುಂಬಾ ಸಂತೋಷ ತಂದಿತು" ಎಂದು ಡಾನ್ ಹೇಳುತ್ತಾರೆ.
ಟಿಬೆಟಿಯನ್ ಸನ್ಯಾಸಿ ತ್ಸೆರಿಂಗ್ ಅವರು ಮೆರವಣಿಗೆ ದಲೈ ಲಾಮಾ ದೇವಸ್ಥಾನ ತಲುಪುವುದನ್ನು ವೀಕ್ಷಿಸುತ್ತಿದ್ದರು. "ಅವರು ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ ಮತ್ತು ಇತರ ಅನೇಕ ದೇಶಗಳು ತಮ್ಮ ಜನರಿಗೆ ಈ [ಮದುವೆಯ] ಹಕ್ಕುಗಳನ್ನು ನೀಡಿವೆ, ಬಹುಶಃ ಇದು ಭಾರತವು ಇದನ್ನು ಅನುಸರಿಸುವ ಸಮಯವಾಗಿದೆ" ಎಂದು ಅವರು ಹೇಳುತ್ತಾರೆ.
ಸೆಕ್ಷನ್ 377 ವಿಧಿಯನ್ನು 2018ರಲ್ಲಿ ರದ್ದುಪಡಿಸಲಾಗಿದ್ದರೂ, ಸಲಿಂಗ ದಂಪತಿಗಳು ಮದುವೆಯಾಗುವುದು ಕಾನೂನುಬದ್ಧವಲ್ಲ. ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸುವ ಬಗ್ಗೆ ಭಾರತದ ಸುಪ್ರೀಂ ಕೋರ್ಟ್ ಈ ತಿಂಗಳ ಆರಂಭದಲ್ಲಿ ಅರ್ಜಿಗಳ ವಿಚಾರಣೆಯನ್ನು ಪೂರ್ಣಗೊಳಿಸಿದೆ ಮತ್ತು ಇನ್ನೂ ತೀರ್ಪು ನೀಡಿಲ್ಲ.
ನೀಲಂ ಕಪೂರ್ ಎಂಬ ಮಹಿಳಾ ಪೊಲೀಸ್ ಈ ಕಾರ್ಯಕ್ರಮದ ಸಮಯದಲ್ಲಿ ಸಂಚಾರವನ್ನು ನಿರ್ವಹಿಸುತ್ತಿದ್ದರು. "ಹಕ್ಕುಗಳಿಗಾಗಿ ಹೋರಾಡುವುದು ಒಳ್ಳೆಯದು. ಪ್ರತಿಯೊಬ್ಬರೂ ತಮ್ಮ ಸಲುವಾಗಿ ಯೋಚಿಸಬೇಕು" ಎಂದು ಅವರು ಹೇಳುತ್ತಾರೆ. "ಇದು ಎಲ್ಲಿಯಾದರೂ ಆರಂಭಗೊಳ್ಳಬೇಕಿತ್ತು. ಅದು ಇಲ್ಲಿಯೇ ಯಾಕಾಗಿರಬಾರದು?"

ಸಂಘಟಕರಲ್ಲಿ ಒಬ್ಬರಾದ ಅನಂತ್ ದಯಾಳ್ ಅವರು ಟ್ರಾನ್ಸ್ ಹಕ್ಕುಗಳನ್ನು ಸಂಕೇತಿಸುವ ಧ್ವಜವನ್ನು ಹಿಡಿದಿದ್ದಾರೆ

'ನಾವು ಎಲ್ಲವನ್ನೂ ಎರಡು ವಾರಗಳಲ್ಲಿ ಒಟ್ಟುಗೂಡಿಸಿದ್ದೇವೆ' ಎಂದು ಡಾನ್ ಹಸರ್ (ಬಿಳಿ ಸೀರೆಯಲ್ಲಿ) ಹೇಳುತ್ತಾರೆ.

ಜನರು ಮುಖ್ಯ ಮಾರುಕಟ್ಟೆಯಿಂದ ಧರ್ಮಶಾಲಾದ ಟಿಬೆಟಿಯನ್ ನೆಲೆ ಮೆ ಕ್‌ಲಿಯೋಡ್‌ಗಂಜ್‌ನಲ್ಲಿರುವ ದಲೈ ಲಾಮಾ ದೇವಾಲಯದ ಕಡೆಗೆ ನಡೆದರು

ಮೆರವಣಿಗೆಯು ನಂತರ ಧರ್ಮಶಾಲಾ ಪಟ್ಟಣದ ಕೊ ತ್ವಾ ಲಿ ಬಜಾರ್, ಜನನಿಬಿಡ ಮಾರುಕಟ್ಟೆ ಪ್ರದೇಶ ದತ್ತ ಮುಂದುವರಿಯಿತು

ಪ್ರೈಡ್ ಮೆರವಣಿಗೆಯ ನೋಡುಗರು ಏನಾಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. "ಜನರು ನಮ್ಮನ್ನು ನೋಡುವಂತೆ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ಮಾಡುವುದು ನಮಗೆ ಮುಖ್ಯ" ಎಂದು ಸಂಘಟಕರಲ್ಲಿ ಒಬ್ಬರಾದ ಮನೀಶ್ ಥಾಪಾ ಹೇಳುತ್ತಾರೆ

ಮನೀಶ್ ಥಾಪಾ (ಮೈಕ್ ಹಿಡಿದವರು ) ಪ್ರೈಡ್ ಮೆರವಣಿಗೆಯಲ್ಲಿ ಭಾಷಣ ಮಾಡು ತ್ತಿರುವುದು

ಪ್ರೈಡ್ ಮೆರವಣಿಗೆಯಲ್ಲಿ ಭಾಗವಹಿಸಿದವರು ನೃತ್ಯಕ್ಕಾಗಿ ನಿಂತಿರುವುದು

ಪ್ರೈಡ್ ಮಾರ್ಚ್ 90 ನಿಮಿಷಗಳಲ್ಲಿ 1.2 ಕಿಲೋಮೀಟರ್ ದೂರವನ್ನು ಕ್ರಮಿಸಿತು
![Monk Tsering looking at the parade. 'They are fighting for their rights and many other countries have given these rights [to marriage] to their people, maybe it's time for India to follow,' he says](/media/images/15-DSC_0088-SD.max-1400x1120.jpg)
ಸನ್ಯಾಸಿ ತ್ಸೆರಿಂಗ್ ಮೆರವಣಿಗೆಯನ್ನು ನೋಡುತ್ತಿದ್ದಾರೆ. 'ಅವರು ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ ಮತ್ತು ಇತರ ಅನೇಕ ದೇಶಗಳು ತಮ್ಮ ಜನರಿಗೆ ಈ [ಮದುವೆಯ] ಹಕ್ಕುಗಳನ್ನು ನೀಡಿವೆ, ಬಹುಶಃ ಭಾರತವು ಇದನ್ನು ಅನುಸರಿಸುವ ಸಮಯ ಬಂದಿದೆ' ಎಂದು ಅವರು ಹೇಳುತ್ತಾರೆ

ಶಶಾಂಕ್ ಅವರು ಸಂಚಾರವನ್ನು ನಿರ್ದೇಶಿಸುತ್ತಿದ್ದ ಮಹಿಳಾ ಪೊಲೀಸ್ ನೀಲಂ ಕಪೂರ್ ಅವರೊಂದಿಗೆ ಮಾತನಾಡುತ್ತಿರು ವುದು . ನೀಲಂ ಹೇಳುತ್ತಾರೆ, 'ಹಕ್ಕುಗಳಿಗಾಗಿ ಹೋರಾಡುವುದು ಒಳ್ಳೆಯದು. ಪ್ರತಿಯೊಬ್ಬರೂ ತಮ್ಮ ಬಗ್ಗೆ ತಾವೇ ಯೋಚಿಸಬೇಕು ʼ

ಡಾನ್ ಹಸರ್ (ನಿಂತಿರುವ ವರು ) ಮತ್ತು ಶಶಾಂಕ್ (ಕುಳಿತಿರುವ) ಹಿಮಾಚಲ್ ಕ್ವೀರ್ ಫೌಂಡೇಶನ್ (ಎ ಚ್‌ಕ್ಯೂ ಎಫ್) ನ ಸಹ-ಸಂಸ್ಥಾಪಕರಾಗಿದ್ದಾರೆ

ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯಲ್ಲಿ ಟ್ರಾನ್ಸ್ ಗುರುತಿನ ಚೀಟಿಯನ್ನು ಹೊಂದಿದ್ದ ಮೊದಲ ವ್ಯಕ್ತಿ ಡಾನ್ ಹಸಾರ್. ಅದನ್ನು ಪಡೆಯಲು ನಾನು ತುಂಬಾ ಕಷ್ಟಪಡಬೇಕಾಯಿತು. ನನ್ನ ಕತೆಯೇ ಹೀಗಿರುವಾಗ ತಮ್ಮ ಹಕ್ಕುಗಳನ್ನು ಹೇಗೆ ಪಡೆಯುವುದು ಎಂದು ತಿಳಿದಿಲ್ಲದವರ ಕತೆಯೇನು ?' ಎಂದು ಅವರು ಕೇಳುತ್ತಾರೆ

ಮೆರವಣಿಗೆಯಲ್ಲಿ ಹಾರುತ್ತಿರುವ ಪ್ರೈಡ್ ಬಾವುಟ

ದೆಹಲಿ, ಚಂಡೀಗಢ, ಕೋಲ್ಕತಾ, ಮುಂಬೈ ಮತ್ತು ರಾಜ್ಯದ ಸಣ್ಣ ಪಟ್ಟಣಗಳಿಂದ 300 ಜನರು ಈ ಮೆರವಣಿಗೆಯ ಭಾಗವಾಗಲು ಬಂದಿದ್ದರು

ಮೆರವಣಿಗೆಯಲ್ಲಿ ಕ್ವೀರ್ ಸಮುದಾಯವನ್ನು ಬೆಂಬಲಿಸುವ ಕೆಲವು ಪೋಸ್ಟ ರ್ ಗಳನ್ನು ಪ್ರದರ್ಶಿಸಲಾಯಿತು

ಮೆರವಣಿಗೆಯ
ಭಾಗವಾಗಿದ್ದ ಕೆಲವು ಜನರೊಂದಿಗೆ ಗ್ರೂಪ್ ಫೋಟೋ
ಅನುವಾದ: ಶಂಕರ. ಎನ್. ಕೆಂಚನೂರು