"ಬಿಜು [ಹೊಸ ವರ್ಷದ ಹಬ್ಬ] ಸಮಯದಲ್ಲಿ, ನಾವೆಲ್ಲರೂ ಬೇಗನೆ ಎದ್ದು ಹೂವುಗಳನ್ನು ಕೀಳಲು ಹೊರಗೆ ಹೋಗುತ್ತಿದ್ದೆವು. ಕಿತ್ತು ತಂದ ಹೂವುಗಳನ್ನು ನದಿಯಲ್ಲಿ ತೇಲಿಸಿ ಸ್ನಾನ ಮಾಡಿದ ನಂತರ ಹಳ್ಳಿಯ ಪ್ರತಿಯೊಂದು ಮನೆಗೂ ಭೇಟಿ ನೀಡಿ, ಅವರನ್ನು ಭೇಟಿಯಾಗಿ ನಮಸ್ಕರಿಸುತ್ತಿದ್ದೆವು" ಎಂದು ಜಯಾ ನೆನಪಿಸಿಕೊಳ್ಳುತ್ತಾರೆ. ಇದೆಲ್ಲ ಆಗಿ ಅರ್ಧ ಶತಮಾನಕ್ಕೂ ಹೆಚ್ಚು ಸಮಯ ಕಳೆದಿದೆ, ಆದರೆ ಆ ದಿನದ ನೆನಪು ಮಾಸಿಲ್ಲ.
“ಹೋದ ಪ್ರತಿ ಮನೆಗೂ ನಾವು ಅದೃಷ್‌ಟದ ಸಂಕೇತವಾಗಿ ಒಂದಷ್ಟು ಅಕ್ಕಿ ಕಾಳುಗಳನ್ನು ನೀಡುತ್ತಿದ್ದೆವು. ಪ್ರತಿಯಾಗಿ ಅವರು ನಮಗೆ ಅಕ್ಕಿಯಿಂದ ತಯಾರಿಸಿದ ಲಾಂಗಿ [ಅಕ್ಕಿಯಿಂದ ತಯಾರಿಸಿದ ಬಿಯರ್] ಕೊಡುತ್ತಿದ್ದರು. ಒಂದೊಂದು ಮನೆಯಲ್ಲಿ ಕೆಲವೇ ಗುಟುಕು ಕುಡಿಯುತ್ತಿದ್ದೆವಾದರೂ ಹಲವು ಮನೆಗೆ ಹೋಗುತ್ತಿದ್ದ ಕಾರಣ ಕೊನೆಗೆ ಬಹಳ ದೊಡ್ಡ ಮಟ್ಟದಲ್ಲೇ ಸೇವಿಸಿರುತ್ತಿದ್ದೆವು” ಎಂದು ಅವರು ಹೇಳುತ್ತಾರೆ. “ಜೊತೆಗೆ ಊರಿನ ಯುವಜನರು ತಮ್ಮ ಮನೆಯ ಹಿರಿಯರನ್ನು ಹೊಳೆಗೆ ಕರೆದುಕೊಂಡು ಹೋಗಿ ಗೌರವದ ಪ್ರತೀಕವಾಗಿ ಅವರಿಗೆ ಸ್ನಾನ ಮಾಡಿಸುತ್ತಿದ್ದರು.” ಎನ್ನುವಾಗ ಜಯಾ ಅವರ ಮುಖವು ನೆನಪಿನ ಲೋಕದಲ್ಲಿ ಹೊಳೆಯುತ್ತಿತ್ತು.
ಈಗ, ಅಂತರರಾಷ್ಟ್ರೀಯ ಗಡಿಯುದ್ದಕ್ಕೂ ಮತ್ತು ಆ ಮನೆಯಿಂದ ನೂರಾರು ಕಿಲೋಮೀಟರ್ ದೂರದಲ್ಲಿ, ಉಳಿದಿರುವುದು ಲಾಂಗಿ ಮಾತ್ರ - ಇದು ಅನೇಕ ನಿರಾಶ್ರಿತರನ್ನು ಅವರ ಚಕ್ಮಾ ಸಮುದಾಯದ ಆಚರಣೆಗಳು ಮತ್ತು ಪದ್ಧತಿಗಳೊಂದಿಗೆ ಬಂಧಿಸುವ ಎಳೆಯಾಗಿದೆ. "ಇದು ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗ" ಎಂದು ಬಾಂಗ್ಲಾದೇಶದ ರಂಗಮತಿಯಲ್ಲಿ ಬೆಳೆದ ಜಯಾ ಹೇಳುತ್ತಾರೆ. ಈ ಪ್ರದೇಶದ ಇತರ ಬುಡಕಟ್ಟು ಜನಾಂಗದವರು ಸಹ ಆಚರಣೆಗಳು ಮತ್ತು ನೈವೇದ್ಯಗಳಲ್ಲಿ ಲಾಂಗಿಯನ್ನು ಬಳಸುತ್ತಾರೆ.
"ನಾನು ಇದನ್ನು [ಲಾಂಗಿ] ತಯಾರಿಸಲು ಹೆತ್ತವರಿಂದ ಕಲಿತಿದ್ದು. ಮದುವೆಯಾದ ನಂತರ, ಪತಿ ಸುರೇನ್ ಮತ್ತು ನಾನು ಒಟ್ಟಿಗೆ ತಯಾರಿಸಲು ಪ್ರಾರಂಭಿಸಿದೆವು" ಎಂದು ಅವರು ಹೇಳುತ್ತಾರೆ. ದಂಪತಿಗೆ ಇತರ ಮೂರು ರೀತಿಯ ಬಿಯರ್ ತಯಾರಿಸಲು ಬರುತ್ತದೆ - ಲಾಂಗಿ, ಮೋಡ್ ಮತ್ತು ಜೋಗೊರಾ.
ಅಕ್ಕಿಯಿಂದ ತಯಾರಿಸಿದ ಜೋಗೊರಾದ ಸಿದ್ಧತೆಗಳು ಚೈತ್ರದ ಮೊದಲ ದಿನದಂದು (ಬಂಗಾಳಿ ಕ್ಯಾಲೆಂಡರ್ ವರ್ಷದಲ್ಲಿ ವರ್ಷದ ಕೊನೆಯ ತಿಂಗಳು) ಪ್ರಾರಂಭವಾಗುತ್ತವೆ. "ನಾವು ಬಿರೋಯಿನ್ ಚಾಲ್ [ಉತ್ತಮ ಗುಣಮಟ್ಟದ ಅಂಟು ಅಂಟಾದ ಅಕ್ಕಿ] ಬಳಸುತ್ತೇವೆ ಮತ್ತು ಅದನ್ನು ಬಟ್ಟಿ ಇಳಿಸುವ ಮೊದಲು ವಾರಗಳವರೆಗೆ ಬಿದಿರಿನಲ್ಲಿ ಹುದುಗಿಸಿ ಇಡುತ್ತೇವೆ. ನಾವು ಈಗ ಹೆಚ್ಚು ಜೋಗೊರಾ ತಯಾರಿಸುವುದಿಲ್ಲ" ಎಂದು ಜಯಾ ಹೇಳುತ್ತಾರೆ, ಏಕೆಂದರೆ ಇದನ್ನು ತಯಾರಿಸಲು ಕನಿಷ್ಠ ಒಂದು ತಿಂಗಳು ತೆಗೆದುಕೊಳ್ಳುತ್ತದೆ ಮತ್ತು ಅಕ್ಕಿ ಕೂಡ ಈಗ ತುಂಬಾ ದುಬಾರಿ. "ಈ ಮೊದಲು ನಾವು ಈ ಭತ್ತವನ್ನು ಜುಮ್ [ಗುಡ್ಡಗಾಡು ಕೃಷಿ] ನಲ್ಲಿ ಬೆಳೆಯುತ್ತಿದ್ದೆವು, ಆದರೆ ಈಗ ಹೆಚ್ಚಿನ ಭೂಮಿ ಉಳಿದಿಲ್ಲ."


ಎಡಕ್ಕೆ: ಜಯಾ ಬಿಯರ್ ತಯಾರಿಕೆಗೆ ಬೇಕಾದ ಅಗತ್ಯ ವಸ್ತುಗಳನ್ನು ಇಲ್ಲಿ ಇಡಲಾಗಿದೆ – ಪಾತ್ರೆಗಳು, ಮತ್ತು ಲಾಂಗಿ ತಯಾರಿಸಲು ಬಳಸುವ ಒಲೆ ಮತ್ತುಸ್ಟ್ಯಾಂಡ್. ಬಲ: ತ್ರಿಪುರಾದ ಬಿದಿರಿನ ಗೋಡೆಯ ಮನೆಗಳು ಮತ್ತು ಅಂಗಡಿಗಳು
ದಂಪತಿಯ ಮನೆ ತ್ರಿಪುರಾದ ಉನಕೋಟಿ ಜಿಲ್ಲೆಯಲ್ಲಿದೆ. ದೇಶದ ಎರಡನೇ ಅತಿ ಚಿಕ್ಕ ರಾಜ್ಯವಾದ ಈ ರಾಜ್ಯವು ಸುಮಾರು ಮೂರನೇ ಎರಡರಷ್ಟು ಅರಣ್ಯವನ್ನು ಹೊಂದಿದೆ. ಇಲ್ಲಿ ಕೃಷಿಯು ಮುಖ್ಯ ಉದ್ಯೋಗವಾಗಿದೆ ಮತ್ತು ಅನೇಕರು ಹೆಚ್ಚುವರಿ ಆದಾಯಕ್ಕಾಗಿ ಕಾಡುತ್ಪತ್ತಿಯನ್ನು (ಎನ್‌ಟಿಎಫ್‌ಟಿ) ಅವಲಂಬಿಸಿದ್ದಾರೆ.
“ನಾನು ಸ್ಥಳಾಂತರಗೊಂಡ ಸಮಯದಲ್ಲಿ ಸಣ್ಣ ಹುಡುಗಿ. ಇಡೀ ಸಮುದಾಯವನ್ನು ಸ್ಥಳಾಂತರಿಸಲಾಗಿತ್ತು” ಎಂದು ಜಯಾ ಹೇಳುತ್ತಾರೆ. ಹಿಂದಿನ ಪೂರ್ವ ಪಾಕಿಸ್ತಾನದ (ಈಗ ಬಾಂಗ್ಲಾದೇಶ) ಚಿತ್ತಗಾಂಗ್ ಎನ್ನುವಲ್ಲಿ ಕರ್ನಾಫುಲಿ ನದಿಗೆ ಅಣೆಕಟ್ಟು ನಿರ್ಮಿಸಲು ಅವರನ್ನು ಒಕ್ಕಲೆಬ್ಬಿಸಲಾಗಿತ್ತು. "ನಮ್ಮ ಬಳಿ ಆಹಾರವೂ ಇರಲಿಲ್ಲ, ಹಣವೂ ಇರಲಿಲ್ಲ. ನಾವು ಅರುಣಾಚಲ ಪ್ರದೇಶದ ಶಿಬಿರದಲ್ಲಿ ಆಶ್ರಯ ಪಡೆದೆವು... ಕೆಲವು ವರ್ಷಗಳ ನಂತರ ತ್ರಿಪುರಾಕ್ಕೆ ಸ್ಥಳಾಂತರಗೊಂಡೆವು" ಎಂದು ಜಯಾ ಹೇಳುತ್ತಾರೆ. ನಂತರ ಅವರು ತ್ರಿಪುರಾ ನಿವಾಸಿ ಸುರೇನ್ ಅವರನ್ನು ವಿವಾಹವಾದರು.
*****
ಲಾಂಗಿ ಎನ್ನುವುದು ಸ್ಥಳೀಯವಾಗಿ ಜನಪ್ರಿಯ ಪಾನೀಯ ಮತ್ತು ನೂರಾರು ಬುಡಕಟ್ಟು ಮಹಿಳೆಯರು ಇದರ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಪಾನೀಯವು ಬುಡಕಟ್ಟು ಜನಾಂಗದವರ ಎಲ್ಲಾ ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳ ಅತ್ಯಗತ್ಯ. ಆದರೆ ಇದರ ಉತ್ಪಾದನೆ ಮತ್ತು ಮಾರಾಟದಲ್ಲಿ ತೊಡಗಿರುವವರನ್ನು 'ಅಕ್ರಮ' ಮದ್ಯ ಎನ್ನುವ ಹೆಸರಿನಲ್ಲಿ ಕಾನೂನು ಪಾಲಕರು ಕಾಡುತ್ತಾರೆ. ಮಹಿಳೆಯರೇ ತೊಡಗಿಸಿಕೊಂಡಿರುವ ಈ ಉದ್ಯಮದಲ್ಲಿ ಅವರು ಆಗಾಗ ಕಿರುಕುಳ ಮತ್ತು ಅಪಮಾನಕ್ಕೆ ಒಳಗಾಗುತ್ತಾರೆ.
ಒಂದು ಬ್ಯಾಚ್ ಲಾಂಗಿ ತಯಾರಿಸಲು ಎರಡು-ಮೂರು ದಿನಗಳು ಬೇಕಾಗುತ್ತದೆ ಎಂದು ಜಯಾ ಹೇಳುತ್ತಾರೆ. "ಇದು ಸುಲಭದ ಕೆಲಸವಲ್ಲ. ದೈನಂದಿನ ಮನೆಗೆಲಸಗಳನ್ನು ಮಾಡಲು ಸಹ ನನಗೆ ಸಮಯ ಸಿಗುವುದಿಲ್ಲ" ಎಂದು ಅವರು ತಮ್ಮ ಅಂಗಡಿಯಲ್ಲಿ ಕುಳಿತು ಹೇಳುತ್ತಾರೆ. ಅವರ ಅಂಗಡಿಯೆಂದರೆ ಬಿಸಿಲಿನಿಂದ ಕನಿಷ್ಠ ರಕ್ಷಣೆ ನೀಡುವ ಒಂದು ರಚನೆ. ಅವರು ಸಾಂದರ್ಭಿಕವಾಗಿ ಹುಕ್ಕಾ ಸೇದುತ್ತಿರುತ್ತಾರೆ.
ಲಾಂಗಿ ತಯಾರಿಸಲು ಬಳಸುವ ಪದಾರ್ಥಗಳು ವೈವಿಧ್ಯಮಯವಾಗಿರುತ್ತವೆ, ಇದರ ಪರಿಣಾಮವಾಗಿ ಸಮುದಾಯವನ್ನು ಆಧರಿಸಿ ಅಂತಿಮ ಉತ್ಪನ್ನದಲ್ಲಿ ರುಚಿಯೂ ಭಿನ್ನವಾಗಿರುತ್ತದೆ ಎಂದು ಜರ್ನಲ್ ಆಫ್ ಎಥ್ನಿಕ್ ಫುಡ್ಸ್ ಪತ್ರಿಕೆಯ 2016ರ ಸಂಚಿಕೆ ಹೇಳುತ್ತದೆ. "ಪ್ರತಿಯೊಂದು ಸಮುದಾಯವು ಲಾಂಗ್ ಪಾನೀಯಕ್ಕೆ ತಮ್ಮದೇ ಆದ ತಯಾರಿಕಾ ವಿಧಾನವನ್ನು ಹೊಂದಿದೆ. ರಿಯಾಂಗ್ ಸಮುದಾಯಕ್ಕಿಂತ ನಾವು ತಯಾರಿಸುವ ಆಹಾರವು ಹೆಚ್ಚು ತೀಕ್ಷ್ಣವಾಗಿರುತ್ತದೆ [ಹೆಚ್ಚಿನ ಆಲ್ಕೋಹಾಲ್ ಅಂಶ]" ಎಂದು ಸುರೇನ್ ಹೇಳುತ್ತಾರೆ. ರಿಯಾಂಗ್ ತ್ರಿಪುರಾದ ಎರಡನೇ ಅತಿದೊಡ್ಡ ಬುಡಕಟ್ಟು ಸಮುದಾಯವಾಗಿದೆ.
ದಂಪತಿ ಒರಟಾಗಿ ಪುಡಿಮಾಡಿದ ಅಕ್ಕಿಯನ್ನು ಕುದಿಸುವ ಮೂಲಕ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತಾರೆ. "ಪ್ರತಿ ಬ್ಯಾಚಿಗೆ, ನಾವು 8-10 ಕಿಲೋ ಸಿದ್ಧೋ ಚಾಲ್ [ಸಣ್ಣ ಅಂಟು ಅಕ್ಕಿ] ಅನ್ನು ದೆಗ್ಚಿಯಲ್ಲಿ [ದೊಡ್ಡ ಲೋಹದ ಅಡುಗೆ ಪಾತ್ರೆ] ಕುದಿಸುತ್ತೇವೆ. ಇದನ್ನು ಅತಿಯಾಗಿ ಬೇಯಿಸಬಾರದು" ಎಂದು ಜಯಾ ಹೇಳುತ್ತಾರೆ.


ಎಡ: ಅಕ್ಕಿಯನ್ನು ಕುದಿಸುವುದು ಲಾಂಗಿ ತಯಾರಿಕೆಯ ಮೊದಲ ಹಂತವಾಗಿದೆ. ಉರುವಲು ಬಳಸಿ ಮಣ್ಣಿನ ಒಲೆಯ ಮೇಲೆ ಅಕ್ಕಿಯನ್ನು ಕುದಿಸಲು ಜಯಾ ದೊಡ್ಡ ಅಲ್ಯೂಮಿನಿಯಂ ಪಾತ್ರೆಯನ್ನು ಬಳಸುತ್ತಾರೆ


ಅಕ್ಕಿಯ ತರಿಯನ್ನು ಹುದುಗಲು ಇಡುವ ಮೊದಲು ಅದನ್ನು ಒಣಗಿಸುವ ಸಲುವಾಗಿ ಟಾರ್ಪಾಲಿನ್ ಮೇಲೆ ಹರಡಲಾಗುತ್ತದೆ
ಅವರು ಐದು ಕಿಲೋ ಅಕ್ಕಿಯ ಚೀಲದಿಂದ ಎರಡು ಲೀಟರ್ ಲಾಂಗಿ ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚು ಮೋಡ್ ತಯಾರಿಸಬಹುದು. ಅವು 350 ಮಿಲಿ ಬಾಟಲಿಗಳಲ್ಲಿ ಅಥವಾ ಗ್ಲಾಸ್ (ಲೋಟ) ಮೂಲಕ (90 ಮಿಲಿ) ಮಾರಾಟವಾಗುತ್ತವೆ. ಒಂದು ಲೋಟ ಲಾಂಗಿ ರೂ.10ರಂತೆ ಮಾರಾಟವಾದರೆ, ಮೋಡ್ ಒಂದು ಲೋಟ ರೂ. 20ಕ್ಕೆ ಮಾರಾಟವಾಗುತ್ತದೆ.
ಸುರೇನ್ ಹೇಳುತ್ತಾರೆ, "ಎಲ್ಲದಕ್ಕೂ ಬೆಲೆಗಳು ಏರಿವೆ. 10 ವರ್ಷಗಳ ಹಿಂದೆ ಒಂದು ಕ್ವಿಂಟಾಲ್ [100 ಕಿಲೋ] ಅಕ್ಕಿಯ ಬೆಲೆ ಸುಮಾರು 1,600 ರೂಪಾಯಿಗಳಷ್ಟಿತ್ತು. ಈಗ ಅದು 3,300 ರೂಪಾಯಿಗೆ ಏರಿದೆ. ಅಕ್ಕಿ ಮಾತ್ರವಲ್ಲ, ಮೂಲಭೂತ ವಸ್ತುಗಳ ಬೆಲೆಗಳು ಸಹ ವರ್ಷಗಳಲ್ಲಿ ಏರಿವೆ” ಎಂದು ಅವರು ಹೇಳುತ್ತಾರೆ.
ಜಯಾ ತಮ್ಮ ಅಮೂಲ್ಯವಾದ ಪಾನೀಯವನ್ನು ತಯಾರಿಸುವ ಪ್ರಕ್ರಿಯೆಯನ್ನು ವಿವರವಾಗಿ ವಿವರಿಸಲು ಪ್ರಾರಂಭಿಸುತ್ತಿದ್ದಂತೆ ನಾವು ಅಲ್ಲಲ್ಲೇ ಕುಳಿತುಕೊಂಡೆವು. ಬೇಯಿಸಿದ ಅಕ್ಕಿಯನ್ನು ಹರಡಲಾಗುತ್ತದೆ (ಒಣಗಿಸಲು ಚಾಪೆಯ ಮೇಲೆ), ಅದು ತಣ್ಣಗಾದ ನಂತರ, ಅದಕ್ಕೆ ಮೂಲಿಯನ್ನು ಸೇರಿಸಲಾಗುತ್ತದೆ ಮತ್ತು ಹವಾಮಾನವನ್ನು ಅವಲಂಬಿಸಿ ಈ ಮಿಶ್ರಣವನ್ನು ಎರಡು-ಮೂರು ದಿನಗಳವರೆಗೆ ಹುದುಗಲು ಬಿಡಲಾಗುತ್ತದೆ. "ಬೇಸಿಗೆಯಲ್ಲಿ, ರಾತ್ರಿಯಿಡೀ ಹುದುಗಿಸುವುದು ಒಳ್ಳೆಯದು. ಆದರೆ ಚಳಿಗಾಲದಲ್ಲಿ ಈ ಪ್ರಕ್ರಿಯೆ ಕೆಲವು ದಿನಗಳನ್ನು ತೆಗೆದುಕೊಳ್ಳಬಹುದು" ಎಂದು ಅವರು ಹೇಳುತ್ತಾರೆ.
ಹುದುಗಿಸಿದ ನಂತರ, "ಅದಕ್ಕೆ ನೀರನ್ನು ಸೇರಿಸಿ ಮತ್ತು ಕೊನೆಯದಾಗಿ ಕುದಿಸುತ್ತೇವೆ. ನಂತರ ನೀರನ್ನು ಹೊರಹಾಕುತ್ತೇವೆ. ಅಲ್ಲಿಗೆ ಲಾಂಗಿ ಸಿದ್ಧವಾಗುತ್ತದೆ" ಎಂದು ಅವರು ಹೇಳುತ್ತಾರೆ. ಮತ್ತೊಂದೆಡೆ ಮೋಡ್ ಪಾನೀಯವನ್ನು ಬಟ್ಟಿ ಇಳಿಸಬೇಕು . ಇಲ್ಲಿ ಹಬೆ ಮೂಲಕ ಬಟ್ಟಿ ಇಳಿಸಲು ಒಂದರ ಮೇಲೊಂದರಂತೆ ಪಾತ್ರೆಗಳನ್ನು ಇರಿಸಲಾಗುತ್ತದೆ. ಹುದುಗುವಿಕೆಯನ್ನು ಸುಲಭಗೊಳಿಸಲು ಯಾವುದೇ ಕೃತಕ ಫರ್ಮೆಂಟಿಂಗ್ ಏಜೆಂಟ್ ಅಥವಾ ಯೀಸ್ಟ್ ಬಳಸುವುದಿಲ್ಲ.
ಎರಡಕ್ಕೂ, ಅವರು ಸಾಮಾನ್ಯವಾಗಿ ಎತ್ತರದಲ್ಲಿ ಪ್ರದೇಶಗಳಲ್ಲಿ ಕಂಡುಬರುವ ಹೂಬಿಡುವ ಸಸ್ಯವಾದ ಪಥರ್ ದಾಗರ್ ( ಪರ್ಮೋಟ್ರೆಮಾ ಪೆರ್ಲಾಟಮ್ ), ಆಗ್ಚಿ ಎಲೆಗಳು, ಜಿನ್ ಜಿನ್ ಎಂಬ ಹಸಿರು ಸಸ್ಯದ ಹೂವುಗಳು, ಗೋಧಿ ಹಿಟ್ಟು, ಬೆಳ್ಳುಳ್ಳಿ ಮತ್ತು ಹಸಿ ಮೆಣಸಿನಂತಹ ಹಲವಾರು ಗಿಡಮೂಲಿಕೆಗಳನ್ನು ಸೇರಿಸುತ್ತಾರೆ. "ಇವೆಲ್ಲವನ್ನೂ ಸಣ್ಣ ಮೂಲಿಗಳನ್ನು ತಯಾರಿಸಲು ಬೆರೆಸಲಾಗುತ್ತದೆ - ಸಾಮಾನ್ಯವಾಗಿ ಮುಂಚಿತವಾಗಿ ತಯಾರಿಸಲಾಗುತ್ತದೆ ಮತ್ತು ಸಂಗ್ರಹಿಸಡಲಾಗುತ್ತದೆ" ಎಂದು ಜಯಾ ಹೇಳುತ್ತಾರೆ.


ಬೇಯಿಸಿದ ಅಕ್ಕಿಯ ಹುದುಗುವಿಕೆಗೆ ಅನುಕೂಲವಾಗುವಂತೆ ಜಯಾ ರುಬ್ಬಿದ ಮೂಲಿ (ಗಿಡಮೂಲಿಕೆಗಳು ಮತ್ತು ಧಾನ್ಯಗಳ ಮಿಶ್ರಣ) ಗೆ ಸೇರಿಸುತ್ತಾರೆ. ಬಲ: 48 ಗಂಟೆಗಳ ಕಾಲ ಹುಳಿ ಬರಿಸಿದ ನಂತರದ ಮಿಶ್ರಣ


ಹುದುಗುವಿಕೆಯನ್ನು ಸುಲಭಗೊಳಿಸಲು ಯಾವುದೇ ಕೃತಕ ಫರ್ಮೆಂಟಿಂಗ್ ಏಜೆಂಟ್ ಅಥವಾ ಯೀಸ್ಟ್ ಬಳಸುವುದಿಲ್ಲ, ಬದಲಿಗೆ ಹಲವಾರು ಗಿಡಮೂಲಿಕೆಗಳು, ಹೂಬಿಡುವ ಸಸ್ಯ, ಎಲೆಗಳು, ಹೂವುಗಳು, ಗೋಧಿ ಹಿಟ್ಟು, ಬೆಳ್ಳುಳ್ಳಿ ಮತ್ತು ಹಸಿಮೆಣಸನ್ನು ಬಳಸಲಾಗುತ್ತದೆ
“ಇತರ ಮದ್ಯಸಾರವುಳ್ಳ ಪಾನೀಯಗಳಂತೆ ಇದನ್ನು ಕುಡಿಯುವಾಗ ಉರಿಯುವ ಅನುಭವ ಆಗುವುದಿಲ್ಲ. ಇದು ಒಂದು ರೀತಿಯ ಹುಳಿಯಾದ ರುಚಿಯನ್ನು ಹೊಂದಿರುತ್ತದೆ. ಬೇಸಿಗೆಯಲ್ಲಿ ಇದು ತುಂಬಾ ಹಿತಕರವಾಗಿರುತ್ತದೆ ಮತ್ತು ಆಹ್ಲಾದಕರ ಸುವಾಸನೆಯನ್ನು ಹೊಂದಿರುತ್ತದೆ" ಎಂದು ಹೆಸರು ಹೇಳಲಿಚ್ಛಿಸದ ಸಂತೃಪ್ತ ಗ್ರಾಹಕರೊಬ್ಬರು ಹೇಳುತ್ತಾರೆ. ಪರಿ ಭೇಟಿಯಾದ ಎಲ್ಲಾ ಗ್ರಾಹಕರು ಛಾಯಾಚಿತ್ರ ತೆಗೆಸಿಕೊಳ್ಳಲು ಅಥವಾ ಮುಕ್ತವಾಗಿ ಸಂವಹನ ನಡೆಸಲು ಸಿದ್ಧರಿರಲಿಲ್ಲ, ಬಹುಶಃ ಕಾನೂನಿಗೆ ಹೆದರುತ್ತಿದ್ದರು.
*****
ಈ ಪಾನೀಯವನ್ನು ತಯಾರಿಸುವುದು ಹೆಚ್ಚು ಹೆಚ್ಚು ಕಷ್ಟಕರವಾಗುತ್ತಿದೆ ಎಂದು ಲಾಂಗಿ ತಯಾರಕರು ಹೇಳುತ್ತಾರೆ. ಹುದುಗಿಸಿದ ಅಕ್ಕಿಯಿಂದ ತಯಾರಿಸಲಾಗುವ ಪಾನೀಯವನ್ನು 1987ರ ತ್ರಿಪುರಾ ಅಬಕಾರಿ ಕಾಯ್ದೆಯಡಿ ನಿಷೇಧಿಸಲಾಗಿದೆ.
"ಇಲ್ಲಿ ಬದುಕುವುದು ಹೇಗೆ? ಯಾವುದೇ ಉದ್ಯಮ ಅಥವಾ ಅವಕಾಶವಿಲ್ಲ. …ನಾವು ಏನು ಮಾಡಬೇಕು? ಇಲ್ಲಿ ಜನರು ಹೇಗೆ ಬದುಕುತ್ತಿದ್ದಾರೆಂದು ನೋಡಿ.”
ಹೆಚ್ಚಿನ ಪ್ರಮಾಣದಲ್ಲಿ ಪಾನೀಯವನ್ನು ತಯಾರಿಸುವುದು ಸಾಧ್ಯವಿಲ್ಲ. ಕೇವಲ ಐದು ಪಾತ್ರೆಗಳನ್ನು ಹೊಂದಿರುವುದರಿಂದ ಪ್ರತಿ ಬಾರಿಯೂ 8-10 ಕಿಲೋ ಅಕ್ಕಿಯಿಂದಷ್ಟೇ ತಯಾರಿಸಬಹುದು ಎಂದು ಜಯಾ ಹೇಳುತ್ತಾರೆ, ನಂತರ ನೀರಿನ ಲಭ್ಯತೆ ಸೀಮಿತವಾಗಿದೆ ಮತ್ತು ಬೇಸಿಗೆಯಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ. ಇದಲ್ಲದೆ, "ನಾವು ಅದನ್ನು ತಯಾರಿಸಲು ಉರುವಲನ್ನು ಮಾತ್ರ ಬಳಸುತ್ತೇವೆ ಮತ್ತು ಅದಕ್ಕೆ ಸಾಕಷ್ಟು ಸೌದೆ ಬೇಕಾಗುತ್ತದೆ - ಇದಕ್ಕೆ ಪ್ರತಿ ತಿಂಗಳು ನಾವು 5,000 ರೂಪಾಯಿಗಳನ್ನು ಖರ್ಚು ಮಾಡುತ್ತೇವೆ" ಎಂದು ಅವರು ಹೇಳುತ್ತಾರೆ. ಗ್ಯಾಸ್ ಸಿಲಿಂಡರುಗಳ ಬೆಲೆಯಲ್ಲಿನ ತೀವ್ರ ಏರಿಕೆಯು ಅದನ್ನೊಂದು ಆಯ್ಕೆಯಾಗಿ ಪರಿಗಣಿಸಲು ಸಾಧ್ಯವಿಲ್ಲದ ಹಾಗೆ ಮಾಡಿದೆ.
"ನಾವು ಸುಮಾರು 10 ವರ್ಷಗಳ ಹಿಂದೆ [ಲಾಂಗಿ] ಅಂಗಡಿಯನ್ನು ತೆರೆದೆವು. ಇಲ್ಲದಿದ್ದರೆ ನಮ್ಮ ಮಕ್ಕಳ ಶಿಕ್ಷಣ ಸಾಧ್ಯವಾಗುತ್ತಿರಲಿಲ್ಲ" ಎಂದು ಜಯಾ ಹೇಳುತ್ತಾರೆ. "ನಮ್ಮದು ಹೋಟೆಲ್ ಸಹ ಇತ್ತು, ಆದರೆ ಗಿರಾಕಿಗಳು ತಿಂದ ಹಣವನ್ನೇ ಕೊಡುತ್ತಿರಲಿಲ್ಲ. ಕೊನೆಗೆ ಅದನ್ನು ಮುಚ್ಚಬೇಕಾಯಿತು."


ʼನಾವು ಅದನ್ನು ತಯಾರಿಸಲು ಉರುವಲನ್ನು ಮಾತ್ರ ಬಳಸುತ್ತೇವೆ ಮತ್ತು ಅದಕ್ಕೆ ಸಾಕಷ್ಟು ಸೌದೆ ಬೇಕಾಗುತ್ತದೆ - ಇದಕ್ಕೆ ಪ್ರತಿ ತಿಂಗಳು ನಾವು 5,000 ರೂಪಾಯಿಗಳನ್ನು ಖರ್ಚು ಮಾಡುತ್ತೇವೆʼ


ಎಡ: ಬಟ್ಟಿ ಇಳಿಸುವ ಪ್ರಕ್ರಿಯೆಯನ್ನು ಒಂದರ ಮೇಲೊಂದರಂತೆ ಪಾತ್ರೆಗಳನ್ನು ಜೋಡಿಸಿಟ್ಟು ಮಾಡಲಾಗುತ್ತದೆ, ಇವುಗಳ ನಡುವೆ ಸಂಪರ್ಕವಿರುತ್ತದೆ, ಆದರೆ ಪಾತ್ರೆಗಳನ್ನು ಗಾಳಿಯಾಡದಂತೆ ಮುಚ್ಚಿರಲಾಗುತ್ತದೆ. ಪೈಪ್ ಭಟ್ಟಿಯಿಳಿಸಿದ ಮದ್ಯವನ್ನು ಸಂಗ್ರಹಿಸುತ್ತದೆ. ಬಲ: ಬಾಟಲಿಯಲ್ಲಿ ಲ್ಯಾಂಗಿ, ಕುಡಿಯಲು ಸಿದ್ಧವಾಗಿದೆ
ಸುತ್ತಮುತ್ತಲಿನ ಎಲ್ಲರೂ ಬೌದ್ಧರು ಮತ್ತು "ನಾವು ಪೂಜೆ [ಹಬ್ಬ] ಮತ್ತು ಹೊಸ ವರ್ಷದ ಸಮಯದಲ್ಲಿ ಲಾಂಗಿಯನ್ನು ಹೆಚ್ಚು ಬಳಸುತ್ತೇವೆ" ಎಂದು ಮತ್ತೊಬ್ಬ ಮದ್ಯ ವ್ಯಾಪಾರಿ ಲತಾ (ಹೆಸರು ಬದಲಾಯಿಸಲಾಗಿದೆ) ಹೇಳುತ್ತಾರೆ. ಕೆಲವು ಆಚರಣೆಗಳಲ್ಲಿ ಕುದಿಸಿದ ಮದ್ಯವನ್ನು ದೇವರಿಗೆ ಅರ್ಪಿಸಬೇಕಾಗುತ್ತದೆ. ಕಳೆದ ಕೆಲವು ವರ್ಷಗಳಲ್ಲಿ, ಕಡಿಮೆ ಲಾಭಾಂಶದ ಕಾರಣ ಲತಾ ಲಾಂಗಿ ತಯಾರಿಸುವುದನ್ನು ನಿಲ್ಲಿಸಿದ್ದಾರೆ.
ಕಡಿಮೆ ಆದಾಯವು ಜಯಾ ಮತ್ತು ಸುರೇನ್ ಅವರನ್ನು ಸಹ ಚಿಂತೆಗೀಡುಮಾಡುತ್ತಿದೆ, ಅವರು ವಯಸ್ಸಾದಂತೆ, ತಮ್ಮ ಬೆಳೆಯುತ್ತಿರುವ ಆರೋಗ್ಯ ಸಂಬಂಧಿತ ಸಮಸ್ಯೆಗಳಿಗೆ ಹಣಕಾಸು ಒದಗಿಸಬೇಕಾಗುತ್ತದೆ. "ನನಗೆ ದೃಷ್ಟಿಹೀನತೆ ಇದೆ ಮತ್ತು ಸಾಂದರ್ಭಿಕವಾಗಿ ಕೀಲು ನೋವಿನಿಂದ ಬಳಲುತ್ತಿದ್ದೇನೆ. ಪಾದಗಳು ಆಗಾಗ ಊದಿಕೊಳ್ಳುತ್ತವೆ."
ಈ ಆರೋಗ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಅವರು ಸ್ಸಾಂನ ಆಸ್ಪತ್ರೆಗಳಿಗೆ ಪ್ರಯಾಣಿಸುತ್ತಾರೆ. ಏಕೆಂದರೆ ತ್ರಿಪುರಾದಲ್ಲಿ ರಾಜ್ಯ ಆರೋಗ್ಯ ರಕ್ಷಣೆಯನ್ನು ಪಡೆಯಲು ದೀರ್ಘಕಾಲ ಕಾಯಬೇಕಾಗುತ್ತದೆ. ಧಾನ ಮಂತ್ರಿ ಜನ ಆರೋಗ್ಯ ಯೋಜನೆ (ಪಿಎಂ-ಜೆಎವೈ) ಯೋಜನೆಯು ಅವರಂತಹ ಬಡ ಕುಟುಂಬಗಳಿಗೆ 5 ಲಕ್ಷ ರೂ.ಗಳ ರಕ್ಷಣೆಯನ್ನು ನೀಡುತ್ತದೆಯಾದರೂ, ಸರ್ಕಾರಿ ಆರೋಗ್ಯ ವ್ಯವಸ್ಥೆಯ ಬಗ್ಗೆ ನಂಬಿಕೆಯಿಲ್ಲದ ಕಾರಣ ಅವರು ಅಸ್ಸಾಮಿಗೆ ಹೋಗಲು ತೀರ್ಮಾನಿಸಿದರು. “ಹೋಗಿ ಬರುವ ಪ್ರಯಾಣಕ್ಕೆ 5,000 ರೂಪಾಯಿ ಖರ್ಚಾಗುತ್ತದೆ” ಎಂದು ಜಯಾ ಹೇಳಿದರು. ವೈದ್ಯಕೀಯ ಪರೀಕ್ಷೆಗಳು ಸಹ ಅವರ ಉಳಿತಾಯವನ್ನು ತಿನ್ನುತ್ತವೆ.
ಜಯಾ ಅಡುಗೆಮನೆ ಸ್ವಚ್ಛಗೊಳಿಸಲು ಸಿದ್ಧರಾದಂತೆ ನಾವು ಅಲ್ಲಿಂದ ಹೊರಡಲು ತಯಾರಾದೆವು. ಸುರೇನ್ ಮರುದಿನ ಬೆಳಗ್ಗೆ ಲಾಂಗಿ ತಯಾರಿಸಲು ಬೇಕಾಗುವ ಸೌದೆಯನ್ನು ರಾಶಿ ಮಾಡತೊಡಗಿದರು.
ಈ ವರದಿಗೆ ಮೃಣಾಲಿನಿ ಮುಖರ್ಜಿ ಫೌಂಡೇಶನ್ (ಎಂಎಂಎಫ್) ಫೆಲೋಶಿಪ್ ಬೆಂಬಲ ದೊರಕಿದೆ.
ಅನುವಾದ: ಶಂಕರ. ಎನ್. ಕೆಂಚನೂರು