ದಿನಪೂರ್ತಿ ಜೇಡಿಮಣ್ಣಿನ ಕಲಾಕೃತಿಗಳ ತಯಾರಿಕೆಯಲ್ಲಿ ಮಗ್ನರಾಗಿದ್ದ ಮಾಯಾ ಪ್ರಜಾಪತಿಯು ಜೀರ್ಣಾವಸ್ಥೆಯಲ್ಲಿರುವ ಇಟ್ಟಿಗೆಯ ಜೋಪಡಿಯ ಹೊರಗೆ ಚಾಪೆಯೊಂದರ ಮೇಲೆ ಕುಳಿತು ವಿಶ್ರಾಂತಿ ಪಡೆಯುತ್ತಿದ್ದಾರೆ.
ಕೋಣೆಯ ಒಳಗೆ ಹೆಮ್ಮೆಯಿಂದ ಕೈತೋರಿಸುತ್ತ, “ಇದೆಲ್ಲವನ್ನು ಮಾಡಿದ್ದು ನಾನೇ” ಎಂದರವರು. ಮಬ್ಬು ಬೆಳಕಿದ್ದ ಕೋಣೆಯ ಮೂಲೆಯಲ್ಲಿ ವಿವಿಧ ಅಳತೆಯ ನೂರಾರು ದೀಪಗಳು ಮತ್ತು ಮಡಕೆಗಳಿದ್ದು, ಗೊಂಬೆಗಳು ಹಾಗೂ ವಿಗ್ರಹಗಳು ನೆಲದ ಮೇಲೆ ಸಾಲುಗಟ್ಟಿದ್ದವು.
ನಲವತ್ತರ ಆರಂಭದಲ್ಲಿರುವ ಮಾಯಾ ಹೀಗೆಂದರು: “ಇದೆಲ್ಲವೂ ದೀಪಾವಳಿಗಾಗಿ ನಡೆಸಿರುವ ಸಿದ್ಧತೆಗಳು. ಆ ಹಬ್ಬಕ್ಕಾಗಿ ಇಡೀ ವರ್ಷ ನಾವು ಶ್ರಮವಹಿಸಿ ದುಡಿಯುತ್ತೇವೆ.”
ಉತ್ತರ ಪ್ರದೇಶದ ಲಕ್ನೋ ಜಿಲ್ಲೆಯ ಹೊರವಲಯದ ಚಿನ್‌ಹಟ್‌ನ ಕುಂಬಾರರ ಮೊಹಲ್ಲಾದ ಕೆಲವು ಮಹಿಳಾ ಕುಶಲಕರ್ಮಿಗಳಲ್ಲಿ ಮಾಯಾ ಕೂಡ ಒಬ್ಬರು. “ಇಲ್ಲಿ, ಕುಂಬಾರಿಕೆಯು ಪುರುಷರ ಪ್ರಮುಖ ಜೀವನೋಪಾಯವಾಗಿದ್ದು, ಮಹಿಳೆಯರು ಇದಕ್ಕೆ ನೆರವು ನೀಡುತ್ತಾರಾದರೂ, ಅವರಿಗೆ ಮನೆವಾರ್ತೆಯ ಇತರೆ ಕೆಲಸಗಳಿರುತ್ತವೆ. ನನ್ನ ವಿಷಯದಲ್ಲಿ, ಇದರ ಕಥೆಯೇ ಬೇರೆ” ಎಂದರಾಕೆ.


ಎಡಕ್ಕೆ: ಮಾಯಾ ಪ್ರಜಾಪತಿ ಮತ್ತು ಆಕೆಯ ಇಬ್ಬರು ಮಕ್ಕಳೊಂದಿಗೆ ಕುಳಿತಿರುವ ಶಿವ ಬನ್ಸಾಲ್ (ಹಳದಿ ಟಿ-ಷರ್ಟ್). ಇವರಿಬ್ಬರೂ ಲಕ್ನೋ ಚಿನ್‌ಹಟ್ ವಲಯದಲ್ಲಿ ಕುಂಬಾರಿಕೆಯ ಕೆಲಸದಲ್ಲಿ ತೊಡಗಿದ್ದಾರೆ. ಬಲಕ್ಕೆ: ಮಾಯಾ ಅವರು ತಮ್ಮ ಕರಕುಶಲ ವಸ್ತುಗಳನ್ನು ಇಟ್ಟಿರುವ ಕೊಠಡಿ
ಕೆಲವೇ ವರ್ಷಗಳ ಹಿಂದೆ ಮಾಯಾ ಪ್ರಜಾಪತಿಯವರ ಪತಿಯ ನಿಧನರಾದ ಬಳಿಕ, ತನ್ನ ಹಾಗೂ ಇಬ್ಬರು ಮಕ್ಕಳ ಹೊಟ್ಟೆಪಾಡಿಗಾಗಿ ಆಕೆ, ಪತಿಯ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕಾಯಿತು. “ಇತ್ತೀಚೆಗೆ ನನ್ನ ಪತಿಯು ನಿಧನರಾದರು. ಈಗ ನಾನು ಮನೆಯ ಅನ್ನದಾತಳಾಗಿದ್ದು, ನಮ್ಮ ಹೊಟ್ಟೆಯನ್ನು ತುಂಬಿಸಿಕೊಳ್ಳುತ್ತಿದ್ದೇನೆ; ಇದರ ನಿರ್ವಹಣೆಯು ನನಗೆ ತಿಳಿದಿರುವ ಕಾರಣ, ಕುಟುಂಬದ ಪೋಷಣೆಯು ಸಾಧ್ಯವಾಗುತ್ತಿದೆ” ಎಂದರವರು.
ಈಕೆಯ ಇತ್ತೀಚೆಗಷ್ಟೇ ಕುಂಬಾರಿಕೆಯ ವಸ್ತುಗಳ ತಯಾರಿಕೆಯನ್ನು ಪ್ರಾರಂಭಿಸಿದ್ದಾಗ್ಯೂ, ತನ್ನ ಬಾಲ್ಯದಿಂದಲೂ ಜೇಡಿಮಣ್ಣಿನ ಅಚ್ಚುಗಳ ತಯಾರಿಕೆಯಲ್ಲಿ ನಿರತರಾಗಿದ್ದ ಬಗ್ಗೆ ಮಾಹಿತಿ ನೀಡಿದರು: “ನಮ್ಮ ಮನೆಯಲ್ಲಿ ಪ್ರತಿಯೊಬ್ಬರೂ ಇದೇ ಕೆಲಸದಲ್ಲಿ ತೊಡಗಿದ್ದ ಕಾರಣ, ಬಹುಶಃ ನನ್ನ ಆರು ಅಥವಾ ಏಳನೇ ವರ್ಷದಿಂದಲೇ ಗೊಂಬೆ, ವಿಗ್ರಹಗಳು ಮತ್ತು ಜೇಡಿಮಣ್ಣಿನ ಇತರೆ ಅನೇಕ ಅಲಂಕಾರಿಕ ವಸ್ತುಗಳನ್ನು ತಯಾರಿಸಲು ಪ್ರಾರಂಭಿಸಿದ್ದೆ.” ಇಪ್ಪತ್ತು ವರ್ಷಗಳ ಹಿಂದೆ, ವಿವಾಹದ ನಂತರ ಇವರು ಚಿನ್‌ಹಟ್‌ಗೆ ಬಂದು ನೆಲೆಸಿದರು. “ಇಂದು ನಾನು ಮಡಕೆ, ಲೋಟ, ದೀಪ ಮುಂತಾದ ಕುಂಬಾರಿಕೆಯ ಎಂದಿನ ವಸ್ತುಗಳನ್ನು ತಯಾರಿಸಬಲ್ಲೆನಾದರೂ, ಗೊಂಬೆಗಳು ಮತ್ತು ಮೂರ್ತಿಗಳನ್ನು (ದೇವರ ವಿಗ್ರಹಗಳು) ಮಾಡುವುದು ನನಗೆ ಪ್ರಿಯವಾದ ಕೆಲಸ” ಎಂದರವರು.
“ಇವುಗಳ ತಯಾರಿಕೆಗೆ ಹೆಚ್ಚಿನ ತಾಳ್ಮೆಯು ಅವಶ್ಯ. ವರ್ಷಗಳಿಂದಲೂ ನಾನು ಇದನ್ನು ರೂಢಿಸಿಕೊಂಡಿದ್ದೇನೆ. ನನ್ನ ಬಳಿ ವಿವಿಧ ವಸ್ತುಗಳ ಅಚ್ಚುಗಳಿವೆ. ಅವುಗಳಲ್ಲಿ ಜೇಡಿಮಣ್ಣನ್ನು ಇಟ್ಟು, ಅದು ಒಣಗಿದ ನಂತರ, ಬಣ್ಣ ಹಚ್ಚುತ್ತೇನೆ. ಬಣ್ಣ ಹಾಕುವ ಕೆಲಸ ಹೆಚ್ಚು ಕಷ್ಟಕರವಾದುದು. ಅದಕ್ಕೂ ಸಹ ಸಮಯ ಹಿಡಿಯುತ್ತದೆ.”
“ದೀಪಾವಳಿಯಲ್ಲಿ ಹೆಚ್ಚಿನ ಮಾರಾಟವಾಗುತ್ತದೆ; ಈ ಹಬ್ಬಕ್ಕಾಗಿ ವರ್ಷವಿಡೀ ಜೇಡಿಮಣ್ಣಿನ ವಸ್ತುಗಳ ತಯಾರಿಕೆಯಲ್ಲಿ ತೊಡಗಿರುತ್ತೇನೆ” ಎಂದ ಮಾಯಾ, “ಈ ಅಲಂಕಾರಿಕ ವಸ್ತುಗಳ ಮಾರಾಟಕ್ಕೆ ದೀಪಾವಳಿಯು ಅತ್ಯಂತ ಸೂಕ್ತ ಸಮಯ; ಚಿನ್‌ಹಟ್ ಬಜಾರಿನಲ್ಲಿ ನೂರಾರು ವಸ್ತುಗಳನ್ನು ನಾವು ಮಾರುತ್ತೇವೆ. ಕೆಲವೊಮ್ಮೆ ವ್ಯಾಪಾರಿಗಳು (ವರ್ತಕರು) ಖರೀದಿಗಾಗಿ ನಮ್ಮ ಮನೆಗಳಿಗೆ ಬರುತ್ತಾರೆ. ವರ್ಷದ ಇತರೆ ಅವಧಿಯಲ್ಲಿ ವ್ಯಾಪಾರವನ್ನು ನಿರೀಕ್ಷಿಸಲಾಗದು. ಆದ್ದರಿಂದ ದೀಪಾವಳಿಯಲ್ಲಿನ ನಮ್ಮ ಸಂಪಾದನೆಯಲ್ಲಿ ನಾವು ಉಳಿತಾಯ ಮಾಡಬೇಕು” ಎಂದು ತಿಳಿಸಿದರು.
ಕುಂಬಾರಿಕೆಯಿಂದ ಸಿಗುವ ಹಣವು ಶ್ರಮಕ್ಕೆ ತಕ್ಕ ಪ್ರತಿಫಲವಲ್ಲವಾದರೂ, ಕಷ್ಟಕಾಲದಲ್ಲಿ ತನ್ನನ್ನು ರಕ್ಷಿಸಿದ ಮನೆತನದ ಕೌಶಲ್ಯಕ್ಕೆ ಆಭಾರಿಯಾಗಿದ್ದೇನೆ ಎನ್ನುತ್ತಾರೆ ಮಾಯಾ.

ಮನೆಯಲ್ಲಿ ತಾನು ಮಾಡಿದ ಗೊಂಬೆಗಳನ್ನು ತೋರಿಸುತ್ತಿರುವ ಮಾಯಾ ಪ್ರಜಾಪತಿ
ಮೊಹಲ್ಲಾದ ಮತ್ತೊಂದು ಭಾಗದಲ್ಲಿ, ಹಳೆಯ ಸ್ಪೀಕರ್‌ನಿಂದ ಹೊರಹೊಮ್ಮುತ್ತಿದ್ದ ಪಂಜಾಬಿ ತಾಳದ ಲಯವು ಚರಪರಗುಟ್ಟುವ ಬೆಂಕಿ ಹಾಗೂ ಕುಂಬಾರರ ಚಕ್ರದ ತಿರುಗುವ ಸದ್ದನ್ನು ಅಡಗಿಸುತ್ತಿತ್ತು.
ದೆಶ್‌ರಾಜ್, ನಗುತ್ತಾ, “ನಾವು ಕೆಲಸ ಮಾಡುವಾಗ ನನ್ನ ಪುತ್ರರು ಏನನ್ನಾದರೂ ಆಲಿಸುವುದನ್ನು ಇಷ್ಟಪಡುತ್ತಾರೆ” ಎಂದರು. ಕಳೆದ 40 ವರ್ಷಗಳಿಂದಲೂ, ಜೇಡಿಮಣ್ಣಿನ ಅತ್ಯುತ್ತಮ ಕಲಾಕೃತಿಗಳ ಸೃಜನೆಯು ದೆಶ್‌ರಾಜ್‌ರವರ ಕೆಲಸವಾಗಿದೆ. ಏಕತಾನತೆಯ ದಿನಗಳಲ್ಲಿ ಸಂಗೀತವು ಸ್ವಲ್ಪಮಟ್ಟಿನ ಉತ್ತೇಜನವನ್ನು ನೀಡುತ್ತದೆ ಎನ್ನುತ್ತಾರವರು.
ಒಂದರ ನಂತರ ಮತ್ತೊಂದರಂತೆ ಮಡಕೆಗಳನ್ನು ಮಾಡಲು ಜೇಡಿಮಣ್ಣಿಗೆ ಆಕಾರವನ್ನು ನೀಡುತ್ತ, ಈ ನುರಿತ ಕುಶಲಕರ್ಮಿಯು ತಮ್ಮ ಬಳಲಿದ, ನಿಪುಣ ಬೆರಳುಗಳನ್ನು ತಿರುಗುವ ಚಕ್ರದ ಮೇಲೆ ಕ್ರಮಬದ್ಧವಾಗಿ ಚಲಿಸುತ್ತಾರೆ. ಪ್ರತಿಯೊಂದು ಮಡಕೆಯು ಪೂರ್ಣಗೊಂಡ ನಂತರ, ಭಾಗಶಃ ನಿರ್ಮಿಸಲಾದ ತಮ್ಮ ಮನೆಯ ಮಾಳಿಗೆಯ ಮೇಲೆ ಅದನ್ನು ಅವರು ನಲವತ್ತು ಸಾಲುಗಳಲ್ಲಿ ಅಚ್ಚುಕಟ್ಟಾಗಿ ಜೋಡಿಸುತ್ತಾರೆ.
ಏತನ್ಮಧ್ಯೆ, ಹಿಂದಿನ ರಾತ್ರಿಯ ಮಡಕೆಗಳನ್ನು ಸುಡಲು ವ್ಯವಸ್ಥೆಗೊಳಿಸಿದ್ದ ಕುಲುಮೆಯಿಂದ ಹೊಗೆಯ ದೊಡ್ಡ ಅಲೆಯೆದ್ದಿತು. ಹೊಗೆಯ ಕಾರ್ಮೋಡವು ಅವರ ಮನೆಯ ತುಂಬ ಆವರಿಸಿತಾದರೂ ಆ ಮಧ್ಯಾಹ್ನ ಮನೆಯಲ್ಲಿದ್ದ ಕುಟುಂಬದ ಸದಸ್ಯರಿಗೆ (ಇಬ್ಬರು ಪುತ್ರರು, ಪುತ್ರರೊಬ್ಬರ ಪತ್ನಿ ಮತ್ತು ಇಬ್ಬರು ಚಿಕ್ಕ ಮಕ್ಕಳು) ಹೊಗೆಯ ಅತಿಕ್ರಮಣದಿಂದ ಅಡಚಣೆ ಮತ್ತು ತೊಂದರೆಯಾದಂತೆ ಕಾಣಲಿಲ್ಲ. ಅವರು ಎಂದಿನ ತಮ್ಮ ಮಾಮೂಲಿ ಕೆಲಸಗಳನ್ನು ಮುಂದುವರಿಸಿದರು.
“ಮಡಕೆ, ಲೋಟ, ದೀಪ, ತಟ್ಟೆ ಹಾಗೂ ಇತರೆ ಅಲಂಕಾರಿಕ ವಸ್ತುಗಳನ್ನು ನಾನು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ತಯಾರಿಸಬಲ್ಲೆ. ಈ ದಿನಗಳಲ್ಲಿ ನಾನು ಪೂಜೆಯಲ್ಲಿ ಬಳಸುವ ಚಿಕ್ಕ ಕುಡಿಕೆಗಳನ್ನು ತಯಾರಿಸುತ್ತಿದ್ದೇನೆ. ಅವನ್ನು ಛತ್ ಪೂಜಾದಲ್ಲಿ ಉಪಯೋಗಿಸುತ್ತಾರೆ” ಎಂದರವರು. ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಆಚರಿಸುವ ಹಿಂದೂಗಳ ಹಬ್ಬ, ಛತ್ ಪೂಜಾದಲ್ಲಿ ಸೂರ್ಯ ದೇವನನ್ನು ಆರಾಧಿಸಲಾಗುತ್ತದೆ.
“ನಾನು ದಿನವೊಂದಕ್ಕೆ ಸುಮಾರು ಒಂದು ಸಾವಿರದಿಂದ ಸಾವಿರದ ಇನ್ನೂರು ಸಾಮಗ್ರಿಗಳನ್ನು ತಯಾರಿಸಿ, ಅವನ್ನು ಒಂದು ಡಜ಼ನ್ನಿಗೆ ಹದಿನೈದು ರೂ.ಗಳಂತೆ ಮಾರುತ್ತೇನೆ. ಖರೀದಿದಾರರು ಚೌಕಾಸಿ ಮಾಡಿದರೆ ಡಜ಼ನ್ನಿಗೆ ಹತ್ತು ರೂ.ಗಳಂತೆ ಸಹ ಮಾರುತ್ತೇವೆ” ಎಂದು ಅವರು ತಿಳಿಸಿದರು.

ತಮ್ಮ ಮಾಳಿಗೆ ಮೇಲೆ ಮಡಕೆಗಳನ್ನು ಮಾಡುತ್ತಿರುವ ದೇಶ್‌ರಾಜ್
ಕೇವಲ ಒಂದು ರೂ.ಗಳಿಗಿಂತ ಸ್ವಲ್ಪ ಹೆಚ್ಚಿನ ಬೆಲೆಗೆ ಮಾರಾಟವಾಗುವ ಮಣ್ಣಿನ ಚಿಕ್ಕ ಕಲಾಕೃತಿಗಳು ದೀರ್ಘ ಹಾಗೂ ಶ್ರಮದಾಯಕ ಪ್ರಕ್ರಿಯೆಗಳ ನಂತರ ತಮ್ಮ ಅಂತಿಮ ಆಕಾರವನ್ನು ಪಡೆಯುತ್ತವೆ. ತಮ್ಮ ಮಗನು ಕೊಳವೊಂದರಿಂದ ಜೇಡಿಮಣ್ಣನ್ನು ಅಗೆಯಲು ಕೆಲವು ಕಿ.ಮೀ. ದೂರದಲ್ಲಿರುವ ಲೊಲಯ್ ಹಳ್ಳಿಗೆ ತೆರಳಿದಾಗ, ಮುಂಜಾನೆ ನಾಲ್ಕಕ್ಕೆ ಇದು ಆರಂಭವಾಗುತ್ತದೆ ಎಂದು ದೆಶ್‌ರಾಜ್ ತಿಳಿಸುತ್ತಾರೆ. ಅವರು ಹೇಳುವಂತೆ, ಅವರ ಕುಟುಂಬದ ಪುರುಷರು ಮಾತ್ರ ಈ ಕೆಲಸವನ್ನು ಮಾಡುತ್ತಾರೆ. ಹೆಚ್ಚೆಂದರೆ, ಏಳು ಗಂಟೆಯ ಹೊತ್ತಿಗೆ ಇವರ ಮಗನು ಈ ಜೇಡಿಮಣ್ಣನ್ನು ಇ-ರಿಕ್ಷಾದಲ್ಲಿ ಮನೆಗೆ ತರುತ್ತಾನೆ.
ಜೇಡಿಮಣ್ಣನ್ನು ಬಿಸಿಲಿನಲ್ಲಿ ಹರಡಿ ಒಣಗಿಸಲಾಗುತ್ತದೆ. ನಂತರ ಒಣಗಿದ ಜೇಡಿಮಣ್ಣಿನ ರಾಶಿಯನ್ನು ಜಜ್ಜಿ, ಜರಡಿಹಿಡಿದು, ಕಲ್ಲುಗಳನ್ನು ಬೇರ್ಪಡಿಸಿ, ನಾದಿದ ಹಿಟ್ಟಿನ ಹದಕ್ಕೆ ತರುತ್ತಾರೆ. ಮಧ್ಯಾಹ್ನದ ಹೊತ್ತಿಗೆ ದೆಶ್‌ರಾಜ್ ಅವರು ಚಕ್ರದಲ್ಲಿ ಮಡಕೆಗಳನ್ನು ಮಾಡಲು ಪ್ರಾರಂಭಿಸುತ್ತಾರೆ. ಅದನ್ನು ಮುಗಿಸಿದ ನಂತರ, ಎಲ್ಲವನ್ನೂ ರಾತ್ರಿಯಿಡೀ ಕುಲುಮೆಯಲ್ಲಿಡುತ್ತಾರೆ.
ತಮ್ಮ ಹಸ್ತದ ಹಿಂಭಾಗದಿಂದ ಹಣೆಯ ಬೆವರನ್ನು ಒರೆಸಿಕೊಂಡ ದೆಶ್‌ರಾಜ್, “ಕುಂಬಾರಿಕೆಯ ಇಡೀ ಪ್ರಕ್ರಿಯೆಯು ಕಾಲ ಸರಿದಂತೆ, ಸುಲಭವಾಗಿದ್ದಾಗ್ಯೂ, ಖರ್ಚುಗಳು ಸಹ ಹೆಚ್ಚಾಗಿವೆ” ಎನ್ನುತ್ತಾ, ಚಕ್ಕಳ ಬಕ್ಕಳ ಹಾಕಿ ಕುಳಿತ ತಮ್ಮ ಭಂಗಿಯನ್ನು ಬದಲಿಸಿ, ನೋಯುತ್ತಿದ್ದ ಕಾಲುಗಳನ್ನು ಚಾಚಿ ಕುಳಿತರು.
“ಈಗ ನಾನು ಮೋಟಾರ್ ಚಾಲಿತ ಕುಂಬಾರರ ಚಕ್ರವನ್ನು ಬಳಸುತ್ತೇನೆ, ನನ್ನ ಬಳಿ ಹಸ್ತಚಾಲಿತ ಚಕ್ರವಿತ್ತು. ಅದನ್ನು ನಾನು ನಿರಂತರವಾಗಿ ಕೈಯಿಂದ ಚಲಾಯಿಸುತ್ತಿದ್ದೆ. ಕೊಳದಿಂದ ಜೇಡಿಮಣ್ಣನ್ನು ತಲೆಯ ಮೇಲೆ ಹೊತ್ತು ಸಾಗಿಸುತ್ತಿದ್ದೆವು. ಆದರೀಗ ನಾವು ಲೊಲಯ್ ಹಳ್ಳಿಯಿಂದ ಜೇಡಿಮಣ್ಣನ್ನು ತರಲು ಇ-ರಿಕ್ಷಾವನ್ನು ಬಳಸುತ್ತೇವೆ (ಸುಮಾರು 5 ಕಿ.ಮೀ. ದೂರದಲ್ಲಿರುವ).”


ಎಡಕ್ಕೆ: ಹಳ್ಳಿಯಲ್ಲಿನ ಕುಂಬಾರರ ಮೊಹಲ್ಲಾದ ಹೊರಭಾಗದಲ್ಲಿನ ಕುಲುಮೆ. ಬಲಕ್ಕೆ: ದೆಶ್‌ರಾಜ್ ಅವರ ಮನೆಯ ಒಳಭಾಗದಲ್ಲಿನ ಕುಲುಮೆ
ಇದಕ್ಕೆ ಸಾಕಷ್ಟು ವೆಚ್ಚವಾಗುತ್ತದೆ. ಕುಟುಂಬದ ತಿಂಗಳ ವಿದ್ಯುಚ್ಛಕ್ತಿ ಬಿಲ್ಲು ಸುಮಾರು 2500 ರೂ.ಗಳು. ಇ-ರಿಕ್ಷಾದಲ್ಲಿ ಒಂದು ಬಾರಿಯ ಪ್ರಯಾಣಕ್ಕೆ 500 ರೂ.ಗಳು. “ನಮ್ಮ ಊಟ, ಗ್ಯಾಸು ಮತ್ತು ಇತರೆ ವೆಚ್ಚಗಳು. ಕೊನೆಗೆ ನಮ್ಮಲ್ಲಿ ಏನೂ ಉಳಿಯುವುದಿಲ್ಲ”ವೆಂದು ದೆಶ್‌ರಾಜ್ ಹತಾಶರಾಗಿ ನುಡಿದರು.
ಇತರೆ ಉದ್ಯೋಗವನ್ನು ಮಾಡುವ ಬಗ್ಗೆ ದೆಶ್‌ರಾಜ್‌ರನ್ನು ಕೇಳಿದಾಗ, ಅವರು ಹೆಗಲುಹಾರಿಸಿ, “ನನಗೆ ತಿಳಿದಿರುವುದು ಇದು ಮಾತ್ರ; ನಾನಿರುವುದೇ ಹೀಗೆ. ನಾನೊಬ್ಬ ಕುಂಬಾರ; ಬೇರೆಯದರ ಬಗ್ಗೆ ನನಗೆ ತಿಳಿದಿಲ್ಲ” ಎಂದರು. ಆ ಪ್ರದೇಶದ ಇತರೆ ಕುಂಬಾರರತ್ತ (ಇವರ ಮಾಳಿಗೆಯಿಂದ ಕುಂಬಾರರ ಶಿರಭಾಗವು ಕಾಣಿಸುತ್ತಿತ್ತು) ಬೊಟ್ಟು ಮಾಡಿ ತೋರಿಸುತ್ತ, “ನಾವೆಲ್ಲರೂ ಪರಸ್ಪರ ಸಂಬಂಧಿಗಳಾಗಿದ್ದು, ಒಂದೇ ಕುಟುಂಬದಿಂದ ಬಂದಿದ್ದೇವೆ. ನಮ್ಮ ಪೂರ್ವಿಕರೊಬ್ಬರು ಮೂಲ ಕುಂಬಾರರಾಗಿದ್ದು, ನಾವೆಲ್ಲರೂ ಆತನ ಸಂತತಿಯವರು” ಎಂದು ಸಹ ತಿಳಿಸಿದರು.
“ಆ ಪ್ರದೇಶದಲ್ಲಿ ಸುಮಾರು 30 ಕುಟುಂಬಗಳು ನೆಲೆಸಿವೆ. “ನಾವು ಒಂದು ದೊಡ್ಡ ಕುಟುಂಬದವರಂತೆ ಬದುಕುತ್ತಿದ್ದೇವೆ. ನನ್ನ 55 ವರ್ಷಗಳ ಜೀವನದಲ್ಲಿ, ನನ್ನ ತಾತ ಹಾಗೂ ನಂತರದಲ್ಲಿ ನನ್ನ ತಂದೆ ಮಡಕೆಗಳನ್ನು ತಯಾರಿಸುತ್ತಿದ್ದುದನ್ನು ನೋಡಿದ್ದೇನೆ. ಇವರ ತರುವಾಯ ನಾನು ಅದನ್ನು ಮಾಡತೊಡಗಿದೆ. ಈಗ ನನ್ನ ಮಗನು ಅದನ್ನೇ ಮಾಡುತ್ತಿದ್ದಾನೆ” ಎಂದರು ದೇಶ್‌ರಾಜ್
ಕೆಲವು ವರ್ಷಗಳ ಹಿಂದೆ, 14 ವರ್ಷದ ಶಿವ ಬನ್ಸಾಲ್‌ನ ತಂದೆ ಮರಣಹೊಂದಿದಾಗ, ಆತನ ತಾಯಿ ಹೆಚ್ಚಿನ ಮದ್ಯಪಾನಕ್ಕೆ ತೊಡಗಿದರು. ಹೀಗಾಗಿ ಈ ಹುಡುಗನ ಹೊಟ್ಟೆಪಾಡಿನ ಜವಾಬ್ದಾರಿ ಈತನ ಮೇಲೆಯೇ ಬಿತ್ತು. “ಕುಂಬಾರಿಕೆಯು ನನಗೆ ಭರವಸೆ ನೀಡಿತು” ಎಂದನವನು.
ದುಡಿಮೆಗಾಗಿ ಈತನು ಈ ವರ್ಷದ ಆರಂಭದಲ್ಲಿ ಶಾಲೆಯನ್ನು ತೊರೆಯಬೇಕಾಯಿತು. ತನ್ನ ತಂದೆಯ ಮನೆಯಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿರುವ ಶಿವ ಹೀಗೆಂದನು: “ಈ ಹಳ್ಳಿಯ ಎಲ್ಲರೂ ನನಗೆ ನೆರವಾದರು. ನಾನು ಪ್ರತಿಯೊಬ್ಬರಿಂದಲೂ ಕಲಿತಿದ್ದೇನೆ. ನನಗಿನ್ನೂ ನೈಪುಣ್ಯವಿಲ್ಲವಾದರೂ, ಬಹುತೇಕ ವಸ್ತುಗಳನ್ನು ನಾನು ಮಾಡಬಲ್ಲೆ. ವಸ್ತುಗಳ ತಯಾರಿಕೆಗಷ್ಟೇ ಅಲ್ಲದೆ, ಕೊಳದಿಂದ ಜೇಡಿಮಣ್ಣನ್ನು ತರಲು ಮತ್ತು ಕುಲುಮೆಯನ್ನು ತುಂಬಿಸಲು ಕುಂಬಾರರಿಗೆ ನೆರವಾಗುತ್ತೇನೆ; ತಮಗೆ ಸಾಧ್ಯವಿದ್ದಷ್ಟು ಹಣವನ್ನು ಅವರು ನನಗೆ ಪಾವತಿಸುತ್ತಾರೆ”


ಎಡಕ್ಕೆ: ದೆಶ್‌ರಾಜ್ ಅವರ ಮಾಳಿಗೆಯಿಂದ ಕಾಣಬಹುದಾದ, ಮಹಲ್ಲಾದಲ್ಲಿನ ಇತರೆ ಮನೆಗಳ ಮಾಳಿಗೆಗಳ ಮೇಲೆ ಜೇಡಿಮಣ್ಣಿನ ಕಲಾಕೃತಿಗಳನ್ನು ಒಣಗಿಸುತ್ತಿರುವ ನೋಟ, ಬಲಕ್ಕೆ: ಹೀರಾಲಾಲ್ ಪ್ರಜಾಪತಿಯವರು ತಯಾರಿಸಿರುವ ಕುಡಿಕೆಗಳು
ತನ್ನ ಕುಟುಂಬದಲ್ಲಿನ ಸಮಸ್ಯೆಯ ಹೊರತಾಗಿಯೂ ಶಿವ ಹೀಗೆಂದನು: ತನಗೆಂದಿಗೂ ಕುಂಬಾರರ ಹಳ್ಳಿಯಲ್ಲಿ ಒಬ್ಬಂಟಿಯೆನಿಸಲಿಲ್ಲ. ನಮ್ಮ ನಡುವೆ ಸಾಕಷ್ಟು ಪ್ರೀತಿಯಿದೆ. ಪ್ರತಿಯೊಬ್ಬರಿಗೂ ನಾನು ಗೊತ್ತು. ಅವರು ನನ್ನ ಕಾಳಜಿ ವಹಿಸುತ್ತಾರೆ. ಕೆಲವರು ಊಟವನ್ನು, ಮತ್ತೆ ಕೆಲವರು ಕೆಲಸವನ್ನು ಒದಗಿಸುತ್ತಾರೆ.
ತನ್ನ ಮಾರ್ಗದರ್ಶಿ, ಹೀರಾಲಾಲ್ ಪ್ರಜಾಪತಿಯವರ ಮನೆಗೆ ತೆರಳಿದ ಆತ, “ಚಾಚಾ ಈ ಕೆಲಸವನ್ನು ಬಹಳ ಚೆನ್ನಾಗಿ ಮಾಡುತ್ತಾರೆ. ಬಹುಶಃ ಅವರು ಇಲ್ಲಿನ ಅತ್ಯುತ್ತಮ ಕಸುಬುದಾರರು. ಅವರಿಂದ ಕಲಿಯುವುದೆಂದರೆ ನನಗೆ ಬಹಳ ಇಷ್ಟ” ಎಂದನು. ನಕ್ಕ ಹೀರಾಲಾಲ್, ಶಿವನ ಬೆನ್ನು ತಟ್ಟಿ, “ಬಹಳ ಹಿಂದಿನಿಂದಲೂ ಇದನ್ನು ಮಾಡುತ್ತಿದ್ದೇನೆ. ನಾವು ವಿದ್ಯಾವಂತರಲ್ಲ. ಚಿಕ್ಕವರಿದ್ದಾಗಿನಿಂದ ನಾವೆಲ್ಲರೂ ಇದನ್ನು ಮಾಡಿದ್ದೇವೆ” ಎಂದರು.
“ನನ್ನ ಎಂದಿನ ಕೆಲಸದ ಜೊತೆಗೆ, ಲಕ್ನೋದಲ್ಲಿನ ಶಾಲೆಯೊಂದಕ್ಕೆ ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ಕುಂಬಾರಿಕೆಯ ತರಗತಿಯಲ್ಲಿ ಬೋಧಿಸುತ್ತೇನೆ. ಅಲ್ಲಿ ನನ್ನ ಸೃಜನಾತ್ಮಕತೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಬೇಕು. ಅವರ ವಾರ್ಷಿಕ ವಸ್ತುಪ್ರದರ್ಶನದಲ್ಲಿ, ನಾವು ಈ ಹಿಂದೆ ಮಾಡಿಲ್ಲದಂತಹ ವಸ್ತುಗಳನ್ನು ತಯಾರಿಸುತ್ತೇವೆ. ಈ ವರ್ಷ, ಇತರೆ ವಸ್ತುಗಳ ಜೊತೆಗೆ ಕಾರಂಜಿಯನ್ನು ರೂಪಿಸಿದ್ದೆವು! ವಿದ್ಯಾರ್ಥಿಗಳೊಂದಿಗೆ ನನ್ನ ಕಲೆಯನ್ನು ಹಂಚಿಕೊಳ್ಳುವುದೆಂದರೆ ನನಗೆ ಇಷ್ಟ” ಎಂದರು ಹೀರಾಲಾಲ್.
ನಾನು ಹೆಚ್ಚಿನ ಸ್ಥಳಗಳಿಗೆ ಹೋಗಿಲ್ಲ. ವಸ್ತುಪ್ರದರ್ಶನದಲ್ಲಿನ ನನ್ನ ಕೆಲವು ಕಲಾಕೃತಿಗಳನ್ನು ಆಸ್ಟ್ರೇಲಿಯಾದ ನಿವಾಸಿಗಳು ಖರೀದಿಸಿದರೆಂಬುದಾಗಿ ಶಾಲೆಯ ಸಿಬ್ಬಂದಿಗಳು ತಿಳಿಸಿದರು” ಎಂದರವರು. “ನನ್ನ ಕಲೆ ಆಸ್ಟ್ರೇಲಿಯಾದಲ್ಲಿದೆ… ಎಂಬ ಅವರ ಮಾತಿನಲ್ಲಿ ಕೊಂಚ ಅಪನಂಬಿಕೆಯಿತ್ತಾದರೂ, ಹೆಮ್ಮೆಯ ಹೊಳಪಿತ್ತು.
ಅನುವಾದ: ಶೈಲಜಾ ಜಿ.ಪಿ